ಅನ್ ಕಂಡೀಶನಲ್ ಲವ್ ಅಂದ್ರೆ ಇದೇನಾ?
ಆಗ ಕಾಲೇಜಿನಲ್ಲಿದ್ದೆ. ಶೇಕ್ಸ್ ಪಿಯರ್ ನ ಪುಸ್ತಕ ಹಿಡಿದು, ಅದರ ಸಂಕೀರ್ಣತೆಯನ್ನು, ಭಾವಪರವಶತೆಯನ್ನೂ ಅರಗಿಸಿಕೊಳ್ಳಲು ಸಾಧ್ಯವಾಗದೆ, ಸುಖಾಸುಮ್ಮನೆ ಮುಖಪುಟ ನೋಡುತ್ತಾ, ಶೇಕ್ಸ್ ಪಿಯರ್ ನ ಬೋಳು ತಲೆಯ ಚಿತ್ರ ಬಿಡಿಸುತ್ತಿದ್ದೆ. ತಟ್ಟನೆ ಪಕ್ಕದ ರೂಮಿನಲ್ಲಿದ್ದ ಅಪ್ಪನ ಧ್ವನಿಯಲ್ಲಿ ಕೇಳಿಸಿದ ಶಬ್ದ, “ನಾಯಿಮರಿ”!
ಅದ್ಯಾಕೋ ನಾಯೀಮರಿ ಅಂದ್ರೆ ತುಂಬ ಇಷ್ಟ ಆಗ್ತಿತ್ತು. ಅಲ್ಲಿ ಇಲ್ಲಿ ನೋಡಿದ್ದೆ. “ಹೀ ಈಸ್ ಎ ಜೆಮ್ ಯು ನೋ” ಎಂದು ನನ್ನ ಸ್ನೇಹಿತೆ ತನ್ನ ನಾಯಿಯ ಬಗ್ಗೆ ಹೊಗಳಿದಾಗ, ನನ್ನ ಬಳಿಯೂ ನಾಯಿಯೊಂದಿರಬಾರದಿತ್ತೇ ಎನಿಸಿತ್ತು. ಅಂಥಾ ವಿಶೇಷ ಏನೂ ಗೊತ್ತಿಲ್ಲ, ಆದರೂ ಒಂದು ನಾಯಿ ಬೇಕೆನಿಸಿತ್ತು. “ಲೇ ಎಲ್ಲಾರೂ ಬಾಯ್ ಫ಼್ರೆಂಡ್ ಬೇಕು ಅಂದ್ರೆ ನೀನು ನಾಯಿ ಬೇಕು ಅಂತೀಯಲ್ಲೇ ಅಂತ ನನ್ನ ಸ್ನೇಹಿತ ರೇಗಿಸುತ್ತಿದ್ದ.
ಅಪ್ಪನ ಬಳಿ ಕೂಡಲೇ ಬಂದು ವಿಚಾರ ತಿಳಿದ ನನಗೆ ಗೊತ್ತಾದದ್ದು, ಅಪ್ಪನ ಸ್ನೇಹಿತರೊಬ್ಬರ ಮನೆಯಲ್ಲಿ ನಾಯಿ ಮರಿ ಹಾಕಿದೆಯಂತೆ, ಯಾರಿಗಾದರೂ ಬೇಕಾದರೆ ಹೇಳಬೇಕಂತೆ ಅಂತ! ನನ್ನ ತಂಗಿ ಇನ್ನೂ ಸಣ್ಣವಳು, ನಾಯಿ ಅಂದ್ರೆ ಸ್ವಲ್ಪ ಹೆದರಿಕೆ, ಆದರೂ ನಾಯಿಮರಿ ಅಂದ್ರೆ ಇಷ್ಟ, ಎಕ್ಸೈಟ್ ಮೆಂಟು! ಇಬ್ಬರೂ ಕೂಡಿ ತರಾವರಿ ಪ್ಲಾನ್ ಮಾಡಿ, ಅಪ್ಪನ ಮನ ಒಲಿಸಿ, ಅಂತೂ ಇಂತೂ ನಾಯಿಮರಿ ಮನೆಗೆ ಬರಲು ಸಮ್ಮತಿ ದೊರೆಯಿತು!
ನಾಯಿಮರಿಯ ವಾರಸುದಾರರ ಮನೆಗೆ ಹೋಗುವಾಗ, ಎಲ್ಲಿಲ್ಲದ ಉತ್ಸಾಹ! ಕೊನೆಗೂ ಕಾಣಿಸಿತ್ತು, ಇನ್ನು ಮುಂದೆ ನಮ್ಮ ಮನೆ ಸೇರುವ ನಾಯಿ. ಅಲ್ಲ ಮರಿ, ಹದಿನಾಲ್ಕೇ ದಿನದ ಮರಿ! ನಿರ್ಜೀವ ಜಡ ವಸ್ತುವನ್ನು ಶೇಖರಿಸುವ ರೀಬಾಕ್ ಶೂ ಪೆಟ್ಟಿಗೆಯಲ್ಲಿ ಒಂದು ಮುದ್ದಾದ, ಪುಟಾಣಿ ಜೀವವನ್ನು ಕಂಡು ಪುಳಕಗೊಂಡಿದ್ದೆ! “ನಿನಗೆ ಪುಟ್ಟ ತಂಗೀ ಹುಟ್ಟಿದಾಳೆ ಕಣೇ, ಎಂದಾಗ ನನ್ನದಾಗಬಹುದಾದ, ಇನ್ನೂ ಕಾಣದ ಆ ತಂಗಿಯನ್ನು ಕಾಣುವಾಗ ಇದ್ದ ಕಾಳಜಿ, ತನ್ಮಯತೆ, ಮತ್ತು ಆಸ್ಪತ್ರೆಯ ಆ ಹಾಸಿಗೆಯಲ್ಲಿ ಇನ್ನೂ ಕಣ್ಣೂ ಬಿಡದ ಆ ಮುದ್ದಾದ ಸಣ್ಣ ಜೀವ, ಅದನ್ನು ನೋಡಿ ನನಗಾದ ರೋಮಾಂಚನ, ಎಲ್ಲವೂ ಪುನರ್ಭವಿಸಿದ ಹಾಗೆ ಅನಿಸಿತು.
ಹಿಡಿದರೆ ಅಂಗೈಯೇ ದೊಡ್ಡದಾಗಿದೆಯೇನೋ ಎನ್ನುವಷ್ಟು ಚಿಕ್ಕ ಜೀವ. ಈ ಸಣ್ಣ ಮರಿಯಲ್ಲೊಂದು ಜೀವ, ಮಿದುಳು, ಹೃದಯ, ಉಸಿರಾಟ, ಭಾವನೆ, ಎಲ್ಲವೂ ಇದೆಯೇ ಎನಿಸಿ ಬೆರಗಾದೆ. “ಏನೇನೋ ಅರ್ಥವಿರದ ಹೆಸರಿಡಬೇಡಿ” ಎಂದು ಅಪ್ಪ ಹೇಳಿದಾಗ ರಾತ್ರಿಯೆಲ್ಲ ತಲೆ ಕೆಡಿಸಿಕೊಂಡು, ಕೊನೆಗೂ ಅದನ್ನು ’ಚೂಟಿ’ ಎಂದು ಕರೆದೆವು. ಮನೆಗೆ ತಂದ ತಕ್ಷಣ ಏನು ಮಾಡಲೂ ತೋಚದೆ, ಅದಕ್ಕೆ ಇಂಕ್ ಫ಼ಿಲ್ಲರಿನಲ್ಲಿ ಹಾಲು ಕುಡಿಸಲು ಪ್ರಯತ್ನಿಸಿದ್ದು ನೆನಪು. ಹಗಲೂ ರಾತ್ರಿ, ನಾಯಿಮರಿ ಚಿಂತೆ. ಅದಿನ್ನೂ ಕಣ್ಣೂ ಬಿಡದಲ್ಲ ಎಂಬ ಆತಂಕ. ನಿಮಗೆ ಇದೆಲ್ಲಾ ಬೇಕಿತ್ತೇ ಎಂದು ನಮ್ಮ ಅಜ್ಜಿಯ ಚಿಂತೆ.
ಸಣ್ಣ ಹೂ-ಬುಟ್ಟಿಯಿಂದ ಹೊರಬರಲೂ ಸಾಧ್ಯವಾಗದಷ್ಟು ಚಿಕ್ಕ ಚೂಟಿ, ಅಂದು ನೀಡಿತ್ತು ನಮ್ಮೆಲ್ಲರಿಗೂ ಅನಿರೀಕ್ಷಿತ ಶಾಕ್. ಬುಟ್ಟಿಯಿಂದ ಜಿಗಿದು ಹೊರಬಂದಿತ್ತು. ಅಂದು ನನಗೂ ನನ್ನ ತಂಗಿಗೂ ಆದ ಆನಂದ ಹೇಳತೀರದು. ಅದರ ಕುಂಟು ನಡೆಯನ್ನು ಕಾಣಲು, ಇಡೀ ರಾತ್ರಿ ಎದ್ದಿದ್ದೆವು ಎಂದರೆ ನಗುತ್ತೀರಾ?
ಹೀಗೆ ಬೆಳೆಯುತ್ತಾ ಬೆಳೆಯುತ್ತಾ ಅದು ಎಂದು ಮನೆಯ ಎಲ್ಲಾ ಕಾರ್ಯಗಳಲ್ಲೂ, ಎಲ್ಲರ ಮನದಾಳದಲ್ಲೂ ಒಂದು ಭಾಗಿಯಾಗಿ ಹೋಯಿತೋ ತಿಳಿಯದು. ಮನೆಗೆ ಬಂದೊಡನೆ, ಅತ್ಯಂತ ಪ್ರೀತಿಯಿಂದ, ಬಾಲವಲ್ಲಾಡಿಸುತ್ತಾ ಬರಮಾಡಿಕೊಳ್ಳುವ ಅದರ ಪರಿ ಅನುಭವಿಸಿಯೇ ಸವಿಯಬೇಕು. ದಿನ ಕಳೆದಂತೆ ಚೂಟಿ ಭಾಷಾ ಪ್ರವೀಣೆಯಾಗ ತೊಡಗಿತು. ಬನ್ನು, ಬ್ರೆಡ್ಡು, ಅದಕ್ಕೆ ಪ್ರಿಯವಾದ ಪೆಡಿಗ್ರೀ ಪದಗಳನ್ನು ಬೇಗ ಕಲಿಯಿತು. ಚೂಟಿ ವಾಕಿಂಗ್ ಹೋಗೋಣ ನಡಿ ಅಂದರೆ ಅದಕ್ಕೆ ಎಲ್ಲಿಲ್ಲದ ಸಡಗರ. ಅದು ಮೊದಮೊದಲು ಕಲಿತದ್ದು, ಚೂಟಿ ಎಂದರೆ ತಾನೇ ಎಂಬ ಅಂಶ! “ಚೂಟಿ….” ಎಂದರೆ ಥಟ್ ಅಂತ ತಿರುಗಿ ನೋಡಿ ನಮಗೆ ಆಶ್ಚರ್ಯವನ್ನುಂಟು ಮಾಡುತ್ತಿತ್ತು. ಸುಮ್ಮನೇ ಅದರ ಹೆಸರು ಕರೆದೂ ಕರೆದೂ ನಗುತ್ತಿದ್ದೆವು. ನೆರೆ ಹೊರೆಯ ಮಕ್ಕಳಿಗಂತೂ ಚೂಟಿ ಒಬ್ಬ ಬೆಸ್ಟ್ ಫ಼್ರೆಂಡ್ ಆಗಿತ್ತು. “ಚೂಟಿ ನನ್ನ ದೋಸ್ತು ಗೊತ್ತಾ” ಎಂದು ಹೆಚ್ಚುಗಾರಿಕೆ ತೋರಿಸಿಕೊಳ್ಳುತ್ತಿದ್ದರು. ಸ್ವಲ್ಪವೇ ಸಮಯದಲ್ಲಿ ನಮ್ಮ ಮನೆ “ಚೂಟಿ ಮನೆ”ಯಾಯಿತು. ಅವರೆಲ್ಲರೂ ಸೇರಿ ಅದಕ್ಕೆ “ಶೇಕ್ ಹ್ಯಾಂಡ್ಸ್” ಮಾಡೋದ ಕಲಿಸಿದ್ದರು.
ಹೇಳಿ ಕೇಳಿ ಚೂಟಿ ಜನ ಪ್ರೇಮಿ. ಮನೆಗೆ ಜನ ಬಂದರೆ ಸಾಕು, ಯಾರೇ ಆಗಲಿ, ಅದಕ್ಕೆ ಅತ್ಯಂತ ಸಂತೋಷ. “ಅಯ್ಯೊ ಇವರ್ಯಾಕಪ್ಪ ಬಂದರು” ಅನ್ನೋ ನಮ್ಮ ಸಂಕುಚಿತ ಬುದ್ದಿಗೆ ಚೋಕ್ ನೀಡುವಂತೆ, ಚೂಟಿ ನಮಗೆ ಪಾಠವನ್ನು ಕಲಿಸುತ್ತಿತ್ತು. ಎಲ್ಲರನ್ನೂ ಪ್ರೀತಿಸುವ ಬಗೆಯನ್ನು ಚೂಟಿಯಿಂದ ಕಲಿಯ ಬೇಕು ಎನ್ನುವಷ್ಟು ನಿಸ್ವಾರ್ಥ ಪ್ರೇಮವನ್ನು ನೀಡುತ್ತದೆ ಈ ಚೂಟಿ. ಹೆಸರಿಗೆ ತಕ್ಕ ಚುರುಕುತನ ಅದರಲ್ಲಿ ಮೈಗೂಡಿ ನಮ್ಮೆಲ್ಲರ ಮೊನಾಟನಸ್ ಜೀವನಗಳ ಬ್ರೇಕ್ ಎಂಬಂತೆ, ನಮ್ಮಲ್ಲಿ ಲವಲವಿಕೆಯನ್ನು ತುಂಬುತ್ತದೆ. “ಬೇಜಾರಾಗ್ತಿದೆ” ಅಂದರೆ, ಅಮ್ಮ “ಚೂಟಿ ಜೊತೆ ಮಾತಾಡು, ಎಲ್ಲಾ ಸರಿ ಹೋಗತ್ತೆ” ಅನ್ನುತ್ತಿದ್ದಳು. ಸ್ವಲ್ಪ ಹುರುಪಿಗಾಗಿ, ನಗೆಗಾಗಿ ಚೂಟಿಯ ಬಳಿ ಬರುವವರು ಸಾಕಷ್ಟಿದ್ದಾರೆ.
ಹೀಗೆ, ಚೂಟಿ ನಮ್ಮೆಲ್ಲರ ಮನೋವೈದ್ಯೆ, ಮೆಂಟರ್, ಸ್ನೇಹಿತೆ ಮತ್ತು ಪ್ರೀತಿಯ ಆಕರವಾಗಿದೆ. ನನಗಿನ್ನೂ ಸೋಜಿಗವೆನಿಸುವುದು, ಚೂಟಿಯ ಸಮಯ ಪ್ರಜ್ನೆ! ಮನೆಯ ಸದಸ್ಯರೆಲ್ಲರೂ ಅವರವರ ಸಮಯಕ್ಕೆ ಸರಿಯಾಗಿ ಮನೆ ತಲುಪಲಿಲ್ಲ ಎಂದರೆ, ಅತ್ಯಂತ ಕಸಿವಿಸಿಗೊಳ್ಳುವುದು ಚೂಟಿ. ತನಗೆ ನೆಮ್ಮದಿಯೇ ಕಳೆದು ಹೋಗಿದೆಯೇನೋ ಎಂಬಂತೆ, ಗಾಬರಿಯಾಗಿರುತ್ತದೆ. ಎಲ್ಲರೂ ಮನೆ ಸೇರಿದ ನಂತರ ಅದಕ್ಕೆ ನೆಮ್ಮದಿ, ನಿರುಮ್ಮಳ ನಿದ್ರೆ!
ಚೂಟಿ ಒಂದು ರಾಜಕಾರಣಿಯಾಗಬೇಕಿತ್ತು ಎಂದು ತಮಾಷೆಗೆ ನಾವು ಮಾತನಾಡುವುದುಂಟು. ಅದಕ್ಕೆ ಅಷ್ಟು ಮನವೊಲಿಕೆಯ ಪವರ್ ಇದೆ! ಎಂಥವರನ್ನೇ ಆಗಲಿ ತನ್ನ ಪ್ರೇಮದ ಬಲೆಗೆ ಸೆಳೆದು, ಅವರ ಹೃದಯಗಳಲ್ಲಿ ಮನೆಮಾಡಿಕೊಳ್ಳುವುದು ಖಂಡಿತ. ಕೆಲವರು, ಇಸ್ಸಿ ಇದೆಲ್ಲಾ ರಂಪ ರಾಮಾಯಣ, ಮನೆಯೆಲ್ಲಾ ಹಾಳು ಎಂದು ಮೂಗು ಮುರಿದವರೂ ಸಹ ನಂತರದ ದಿನಗಳಲ್ಲಿ, “ಚೂಟಿ ಚೆನ್ನಾಗಿದೀಯಾ? ತೊಗೋ ನಿಂಗೆ ಬ್ರೆಡ್ಡು” ಅಂತ ಮಾತಾಡಿಸಿದ್ದಾರೆ. ಕೊನೆಗೆ ನಮ್ಮ ಅತ್ಯಂತ ಸಾಂಪ್ರದಾಯಿಕ ಅಜ್ಜಿ ಕೂಡ “ಚೂಟಿ, ಇಲ್ಲಿ ಬಾ, ತೊಗೋ ಈ ಪೆಪ್ಪರಮೆಂಟು” ಎಂದು ಮೊದಲನೇ ಬಾರಿಗೆ ಹೇಳಿದಾಗ, ನಮಗೆ ನಂಬಲಾಗಲಿಲ್ಲ!
ಹೊಡೆದರೂ, ಬಡೆದರೂ, ಮೂಕ ಮಾತಿಗೆ ಕಿವಿಕೊಡದೆ ಕಡೆಗಾಣಿಸಿದರೂ, ಅದರ ಪ್ರತಿಕ್ರಿಯೆ ಒಂದೇ. ಅದೇನೆಂದರೆ, ಅತ್ಯಂತ ಪ್ರೀತಿಯಿಂದ, ಆಪ್ಯಾಯ ಕಂಗಳಿಂದ ನಮ್ಮನ್ನು ನೋಡಿ, ಅದರ ಪ್ರೇಮ ಸಂವಹನವನ್ನು ಅಗಾಧವಾಗಿ ಪಸರಿಸುವುದು. ಎನ್ ಅನ್ ಕಂಡೀಶನಲ್ ಲವ್!
ಈ ರೀತಿಯಾದ ಪ್ರೀತಿ ಕೊಡುವಿಕೆ ಅಥವಾ ತೆಗೆದು ಕೊಳ್ಳುವಿಕೆ, ಮನುಷ್ಯರಾದ ನಮ್ಮಿಂದ ಸಾಧ್ಯವಾ ಎಂದು ಹಲವು ಬಾರಿ ಅನಿಸಿದೆ. ಅನೇಕ ವರ್ಷಗಳಿಂದ ನಮ್ಮೊಟ್ಟಿಗೆ ಮನೆ ಮಗುವಾಗಿ ಬೆಳೆದಿರುವ ಚೂಟಿ, ನಮಗೆ ಜನ, ಜೀವನದ ಕುರಿತ ಅನುಭೂತಿಯನ್ನು ಬದಲಿಸಿ, ಬೆಳೆಸಿ ಒಂದು ಆದರ್ಶ ಪ್ರಾಯವಾಗಿಬಿಟ್ಟಿದೆ. ನಿಸ್ವಾರ್ಥ ಪ್ರೇಮ ಅಂದರೆ ಇದೇ ಅಲ್ಲವೇ!
ಹೌದು, ನಾಯಿ ಸಾಕಿದ ಪ್ರತಿಯೊಬ್ಬರಿಗೂ ಅದರ ನಿಷ್ಕಲ್ಮಶ ಪ್ರೀತಿಯ ಅರಿವಾಗಿರುತ್ತದೆ – ಎಷ್ಟೇ ನೋವಾದರೂ ನಮ್ಮಂತೆ ಎಗರಾಡದೆ ಎಲ್ಲೂ ಕುಳಿತು ತನ್ನ ಹನಿ ದುಂಬಿದ ಕಂಗಳಿಂದ ನೋಡುತ್ತ ಮೋಕ ವೇದನೆ ಅನುಭವಿಸುವ ಅದರ ಪರಿ ಎಷ್ಟೊಂದು ನಿರ್ವಾಜ್ಯ. ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.
ಅ ನಿರೀಕ್ಷಿತ ಪ್ರೀತಿ . ಚೆಂದವಿದೆ ಸಂಪು.
ಪ್ರಾಣಿಗಳೇ ಹಾಗೆ ಸ್ವಲ್ಪ ಪ್ರೀತಿ.ತೋರಿದರೂ ಹಚ್ಚಿಕೊಳ್ಳುತ್ತವೆ
ತೇಜಸ್ವಿಯವರ ಅಣ್ಣನ ನೆನಪು ಪುಸ್ತಕದ ಒಂದು ಅದ್ಯಾಯ ನೆನಪಿಗೆ ಬಂತು.. ತುಂಬಾ ಚಂದ ಇದೆ..
ಪ್ರಾಣಿ ಪ್ರೀತಿಯೇ ಅಂಥದ್ದು.. ” ಅತ್ಯಂತ ಪ್ರೀತಿಯಿಂದ, ಆಪ್ಯಾಯ ಕಂಗಳಿಂದ ನಮ್ಮನ್ನು ನೋಡಿ, ಅದರ ಪ್ರೇಮ ಸಂವಹನವನ್ನು ಅಗಾಧವಾಗಿ ಪಸರಿಸುವುದು. ಎನ್ ಅನ್ ಕಂಡೀಶನಲ್ ಲವ್!” ಕಣ್ಣು ತೆರೆಸಿದ ಬರಹ.