ಸಂಧ್ಯಾ ಹೊನಗುಂಟಿಕರ್
ದೀಪ ಹಚ್ಚಿದ್ದೇನೆ ನಿನ್ನ ಚಿತ್ರದೆದಿರು
ಅದೆಷ್ಟೋ ನೆನಪುಗಳ ಬತ್ತಿ ಹೊಸೆದು
ಅಂದು ನಿನಗೆಂದು ರುಚಿಖಾದ್ಯದ
ಸಿದ್ಧತೆಯ ಸಡಗರವು ನನಗೆ
ಅದೇನು ದೀರ್ಘ ಸಮಯದಲ್ಲ
ಅಷ್ಟೇ ದೂರಕ್ಕೆ ಅದೆಷ್ಟು ಮುನಿಸು
ಬಯಕೆ ಕಂಗಳ ಕುಡಿನೋಟ
ಕಾದು ಕುಳಿತ ಕಾಮಿ ಬೆಕ್ಕಿನ ಕಣ್ಣು
ವಜ್ರಹೊಳಪಿನ ದೀಪಸಾಲು
ಪಡಸಾಲೆಯಲಿ ಪವಡಿಸಿದ ನೀನು
ಎಣ್ಣೆ ತೀರಿದ ದೀಪ ಕುಡಿಗಟ್ಟಿದಂತೆ
ನಶ್ವರತೆ ಸಾರುವ ಬುದ್ಧನೆದೆಯಂತೆ
ಚಿತ್ರಪಟದಿಂದಲೂ ಹೊರ ನಡೆದಂತೆ
ನನಗೋ…
ಚಿತ್ರವಿರದ ಚೌಕಟ್ಟಿನಲಿ ಬರೀ ಹುಡುಕಾಟ
ನೀನು ಮಾತ್ರ ಹೊಯ್ದಾಡದ ದೀಪವೀಗ

ನಡುಮನೆಯ ಹಣತೆಯಲಿ
ಕುಡಿಯೊಡೆದ ಐದಾರು ದೀಪ
ಬಿಂಬಕ್ಕೆ ಆತುಕೊಂಡವಳಿಗೆ
ಪ್ರತಿಬಿಂಬದಲೇ ಸಮಾಧಾನ
ಆದರೂ
ಎದೆಯಂಗಳದಿ ಕಪ್ಪು ಕಡಲೊಂದು
ನಿಸೂರಾಗಿ ಮಲಗಿಬಿಟ್ಟಿದೆ
ದೂರದಿ ನಾವಿಕನು ಅಲುಗಾಡಿಸುವ
ಟಾರ್ಚಿನ ಬೆಳಕನ್ನೂ ಹೀರದೆ
ಕಡಲ ಕಿನಾರೆಯಲಿ ಕೈ ಹೊಸೆದು
ತೂಗುತ್ತ ಸಾಗುವ ಜೋಡಿಯಲಿ
ಬಿಂಬವನು ಅರಸುವ ಮರಳು
ಕಣ್ಣದೀಪವು ಉರಿದು
ಉರುಳಿದ ಕಣ್ಣೀರು ಮುತ್ತಾಗದ ಕ್ರೀಯೆ
ಅರಸುತಿದ್ದೆ, ಮರೀಚೀಕೆಯೆಂದರಿತೂ
ನೀನೋ….
ಆಗಸಕೆ ಲಾಂದ್ರವಾಗದೆ
ಅಮವಾಸೆಗೆ ಜಾರಿಬಿಟ್ಟೆ
ಅದ್ಭುತ ಕವಿತೆ. ಮನ ತಟ್ಟುವ ಭಾವ.
ಸುಂದರ ಕವಿತೆ. ಮನ ತಟ್ಟುವ ಭಾವ.
ಮೆಟಫರ್ ಗಳು ಒಂದಕ್ಕೊಂದು ಮಾರ್ಮಿಕ..
ಭಾವಾಭಿವ್ಯಕ್ತಿ ಚೆಂದ.