ಸಂಧ್ಯಾ ತಾಂಡವದ ಮನೋಹರ ‘ಮನು’ ನರ್ತನ 

                                                                                                                             

ಶಿವಾನಿ  ಹೊಸಮನಿ

ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ಗುರು ಡಾ. ವೀಣಾ ಮೂರ್ತಿ ವಿಜಯ್ ಅವರ ನುರಿತ ಮಾರ್ಗದರ್ಶನದಲ್ಲಿ ಕಲಾವಿದ ಮನು. ಜೆ ಅವರ ಕೂಚಿಪುಡಿ ರಂಗಪ್ರವೇಶ – ತೊಲಿ ವಿನಿಕಿ ಕಾರ್ಯಕ್ರಮವು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಿತು.

ಕಾರ್ಯಕ್ರಮವು ಗಣೇಶ ಸ್ತುತಿಯೊಂದಿಗೆ ಆರಂಭಗೊಂಡು, ತಾಯಿ ಬಾಲ ತ್ರಿಪುರ ಸುಂದರಿ ಕುರಿತಾದ  ಕೃತಿಯನ್ನು ಹಿಮ್ಮೇಳದವರು ಅತ್ಯುತ್ತಮ ವಾದ್ಯ ಸಂಗೀತದ ಜೊತೆಯಲ್ಲಿ  ಹಾಡಿ  ನೃತ್ಯ ರಸಾನುಭವಕ್ಕೆ ಬೇಕಾದ ದೈವೀಕ ವಾತಾವರಣವನ್ನು ಸೃಷ್ಟಿಸಿದರು. 

ಕಲಾವಿದ ಮನು ಅವರು ಪೂರ್ವರಂಗ ವಿಧಿಯೊಂದಿಗೆ  ನೃತ್ಯ ಪ್ರದರ್ಶನ ಆರಂಭಿಸಿದರು. ನಾಂದಿ ಶ್ಲೋಕದ ನಂತರ, ದೇವತೆಗಳನ್ನು ಸಂತುಷ್ಟಗೊಳಿಸಲು ಆಚರಿಸಲಾಗುವ ವಿಧಿಗಳಾದ – ಪರಿಶುದ್ಧತೆ, ಅಲಂಕಾರ, ರಂಗವಲ್ಲಿ, ಧೂಪದೀಪಾರತಿ, ಝರ್ಝರ, ಇಂದ್ರಧ್ವಜ ಪ್ರತಿಷ್ಠಾಪನೆ, ಪುಷ್ಪ ಸಮರ್ಪಣೆಗಳನ್ನು ಶ್ರದ್ಧೆಯಿಂದ ನೆರವೇರಿಸಿ, ವಿಘ್ನವಿನಾಶಕ ಗಣಪತಿ ಹಾಗೂ ನಾಟ್ಯಾಧಿದೈವ ನಟರಾಜನಿಗೆ ಭಕ್ತಿಯಿಂದ ಬೇಡಿಕೊಂಡರು. ಇದರೊಂದಿಗೆ ಬ್ರಹ್ಮಾಂಜಲಿ ಸಾದರ ಪಡಿಸಿದ ಕಲಾವಿದ ತಾಂಡವ  ನೃತ್ಯ ಸೃಷ್ಟಿಸಿದ ಬ್ರಹ್ಮನಿಗೆ ಅಂಜಲಿಯಲ್ಲಿ ಪುಷ್ಪ ಸಮರ್ಪಣೆ, ನಾಟ್ಯ ಕಲಾವಿದರಿಗೆ ನೃತ್ಯದ ಮೂಲಕ ಗೌರವ ಸಲ್ಲಿಸಿ, ಕೂಚಿಪುಡಿ ನೃತ್ಯದ ಅದಿಗುರು ಸಿದ್ಧೇಂದ್ರಯೋಗಿಗಳಿಗೆ ಭಕ್ತಿಯ ಅಂಜಲಿ ಸಮರ್ಪಿಸಲಾಯಿತು.

ನೃತ್ತಪ್ರಧಾನವಾದ ಜತಿಸ್ವರದಲ್ಲಿ ಕಲಾವಿದ ತಮ್ಮ ಲಯಚಾತುರ್ಯತೆ ಹಾಗೂ ತಾಳಜ್ಞಾನವನ್ನು ಮೆರೆದರು. ವೇಗವಾದ ಚಲನೆಗಳು, ಚುರುಕು ಜತಿಗಳು, ತಾಳಗಳ ವೈವಿಧ್ಯತೆ, ವಿನೂತನ ವಿನ್ಯಾಸಗಳೊಂದಿಗೆ ಆನಂದಾನುಭವ ನೀಡಿತು. ನೃತ್ಯ ಸಂಯೋಜನೆಯು ಅತ್ಯಂತ ಕೌಶಲ್ಯಪೂರ್ಣವಾಗಿತ್ತು. ಅಠಾಣ ರಾಗ, ಆದಿ ತಾಳದಲ್ಲಿದ್ದ ಜತಿಸ್ವರವು ಕಲಾವಿದನ ನೃತ್ತದ ಅಧ್ಬುತ ಸಾಧನೆಯನ್ನು ಎತ್ತಿಹಿಡಿಯಿತು.

ಪಾರಂಪರಿಕ ಬಂಧವಾದ ದಶಾವತಾರ ಶಬ್ದಂ, ಮೋಹನ ರಾಗ, ಮಿಶ್ರಛಾಪು ತಾಳದ ಈ ನೃತ್ಯಬಂಧದಲ್ಲಿ ದುಷ್ಟಶಿಕ್ಷಕ, ಶಿಷ್ಟ ರಕ್ಷಕ ಶ್ರೀಹರಿ ತಳೆದ ಹತ್ತು ಅವತಾರಗಳ ಸಂಕ್ಷಿಪ್ತ ಹಾಗೂ ಸುಂದರ ವರ್ಣನೆಯನ್ನು ಒಳಗೊಂಡಿತ್ತು. ಇಲ್ಲಿ ಮನು ಅವರು ತಮ್ಮ ಸೊಗಸಾದ ಅಭಿನಯ ಹಾಗೂ ಅಂಗಶುದ್ಧಿಯೊಂದಿಗೆ ದಶಾವತಾರಗಳ ಮನಮೋಹಕ ಚಿತ್ರಣ ನೀಡಿದರು. 

ಶಿವನ ಸಪ್ತತಾಂಡವಗಳಲ್ಲಿ ಒಂದು ಸಂಧ್ಯಾ ತಾಂಡವ.  ಪರಶಿವನು ಪರಮಾನಂದದಲ್ಲಿ ಮಾಡಿದ ನೃತ್ಯ ಸಂಧ್ಯಾ ತಾಂಡವ, ಇಂತಹ ಅಮೋಘ ರೂಪವನ್ನು ಒಳಗೊಂಡಂತಹ ಈ ಕೃತಿಯಲ್ಲಿ ವಿಶೇಷವಾದ ಚಾರಿಗಳು, ಕರಣಗಳು ಹಾಗೂ ವಿನೂತನ ಭಂಗಿಗಳ ಉಲ್ಲೇಖವಿದ್ದದ್ದು ವಿಶೇಷ.  ದೇವತೆಗಳ ಮನರಂಜನೆಗಾಗಿ ಶಿವ ಸಂಧ್ಯಾ ಸಮಯದಲ್ಲಿ ಈ ತಾಂಡವವನ್ನು ಪ್ರದರ್ಶಿಸುತ್ತಾನೆಂಬ ನಂಬಿಕೆ ಇದೆ. ಸೃಷ್ಟಿಕರ್ತನಾದ ಬ್ರಹ್ಮನು ತಾಳ ಹಾಕುತ್ತಾ, ಸ್ಥಿತಿಕಾರಕ ವಿಷ್ಣು ಮೃದಂಗ ನುಡಿಸುತ್ತಾ, ಶಿವ ನರ್ತಿಸುತ್ತಾ, ಬ್ರಹ್ಮ ವಿಷ್ಟುವಿಗೆ ಲಯದ ಖಚಿತ ನುಡಿಸಾಣಿಕೆಗೆ ಸೂಚನೆ ಕೊಡುವ ದೃಶ್ಯವನ್ನು ಕಲಾವಿದ  ತಮ್ಮ ಆಕರ್ಷಕ ಚಲನವಲನಗಳು, ಸ್ಥಾನಕಗಳು, ಪಾದಭೇದಗಳ ಮೂಲಕ ವಿಕ್ಷಕರಿಗೆ ಅಪೂರ್ವ ಅನುಭವ ನೀಡಿದರು.  ಬ್ರಹ್ಮಾಂಡಕ್ಕೆ ಪ್ರಕಾಶ ನೀಡುವ ಸಂಧ್ಯಾತಾಂಡವವನ್ನು ಚಿರಂಜೀವಿ ಮನು ವೇದಿಕೆಯ ಮೇಲೆ ಮಿಂಚಿನ ಅಲೆಯಂತೆ ನರ್ತಿಸುತ್ತಾ, ಅಭಿನಯಿಸುತ್ತಾ , ಲೀಲಾಜಾಲವಾಗಿ ಕ್ಲಿಷ್ಟಕರವಾದ ನೃತ್ಯವಿನ್ಯಾಸಗಳನ್ನು ಹೆಣೆಯುತ್ತಾ ಆ ಪರಶಿವನೇ ಧರೆಗಿಳಿದಿರುವನೇ ಎನ್ನುವಷ್ಟು ರೋಮಾಂಚನ ಉಂಟುಮಾಡಿದರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ಮೆಟ್ಟಿ ಶಿವ ಅಪಸ್ಮಾರನ ಮೇಲೆ ನರ್ತಿಸುತ್ತಾರೆ. ಇಂತಹ ಸುಂದರ ನಟರಾಜನ ವರ್ಣನೆಯನ್ನು ಈ  ಕೃತಿಯಲ್ಲಿ ಅತ್ಯದ್ಭುತವಾಗಿ ಪ್ರದರ್ಶಿಸಿದರು. ಎಲ್ಲರ ಕಣ್ಮನ ಸೆಳೆದ ಮನು ಅವರು ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದರು. 

ಕೂಚಿಪುಡಿ ಕ್ಷೇತ್ರದ ವಿಶಿಷ್ಟತೆಯಾದ ತರಂಗಂ ಅನ್ನು ಕಲಾವಿದ ಪ್ರದರ್ಶಿಸಿದರು.  ಶ್ರೀ ನಾರಾಯಣ ತೀರ್ಥರ ರಚನೆ ಕೃಷ್ಣಲೀಲಾ ತರಂಗಂ,  ಗುರು ವೇಂಪತಿ ಚಿನ್ನ ಸತ್ಯಂ ಅವರ ನೃತ್ಯ ಸಂಯೋಜನೆಯ ಬಾಲಕೃಷ್ಣನ ಬಾಲಲೀಲೆಗಳ ಗುಣಗಾನ ಇರುವ  ತರಂಗಂನಲ್ಲಿ, ಶ್ರೀಕೃಷ್ಣ ಗೋಕುಲದ ನಿವಾಸಿಗಳನ್ನು ಇಂದ್ರನ  ಕೋಪದಿಂದ ಸಂರಕ್ಷಿಸಲು ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಲ್ಲಿ ಎತ್ತಿ ಹಿಡಿಯುವ ದೃಶ್ಯಾವಳಿಯನ್ನು ಕಲಾವಿದ ಅತ್ಯಂತ ಮನೋಹರವಾಗಿ ಅಭಿನಯಿಸಿದರು.  ನೃತ್ತದ ಸೊಗಸು ಹಾಗೂ ಭಾವಾಭಿನಯದಿಂದ ಗೋವರ್ಧನ ಗಿರಿಧಾರಿಯಾಗಿ ಗಮನಸೆಳೆದರು. ಹಿತ್ತಾಳೆಯ ತಟ್ಟೆಯ ಮೇಲೆ ಅನೇಕ ಕ್ಲಿಷ್ಟಕರವಾದ ನೃತ್ತಾವಳಿಗಳನ್ನು ನರ್ತಿಸಿ, ಪ್ರೇಕ್ಷಕರಿಗೆ ನೈಪುಣ್ಯತೆಯೊಂದಿಗೆ ಆಹ್ಲಾದಕರ ಅನುಭವ ನೀಡಿದರು .  ಕೃಷ್ಣನ ನಾಟ್ಯ ರಸೋತ್ಕಟ ನಾನಾ ಆಭರಣಗಳ ವಿಧವಿಧವಾದ ವರ್ಣನೆ ಕಲಾರಸಿಕರಿಗೆ ಆನಂದ ನೀಡಿತು.

ಬಬ್ರುವಾಹನನ ಪ್ರವೇಶದ ಗಾಂಭೀರ್ಯವನ್ನು ಹೊಂದಿದ್ದ ಪ್ರವೇಶ ದರುವೊಂದನ್ನು ಕಲಾವಿದ ಪ್ರಸ್ತುತ ಪಡಿಸಿದರು. ಪತಿ ಅರ್ಜುನನಿಂದ ದೂರಾಗಬೇಕಾದ ಸಂದರ್ಭ ಬಂದರೂ ಚಿತ್ರಾಂಗದೆ ಎದೆ ಗುಂದದೆ ತನ್ನ ಮಗ ಬಬ್ರುವಾಹನನನ್ನು ಸಮರ್ಥ ವೀರನಾಗಿ ಬೆಳೆಸುತ್ತಾಳೇ. ಪಾಂಡವರ ಅಶ್ವಮೇಧ ಯಾಗದ ಕುದುರೆ ಮಣಿಪುರ ಪ್ರವೇಶಿಸುತ್ತದೆ. ಆ ಕುದುರೆಯ ರಕ್ಷಣೆಗೆ ಅರ್ಜುನನೇ ಆಗಮಿಸಿರುತ್ತಾನೆ. ಆದರೆ ಬಬ್ರುವಾಹನನಿಗೆ ಅರ್ಜುನನೇ ತನ್ನ ತಂದೆ ಎಂಬ ವಿಷಯ ತಿಳಿದಿರುವುದಿಲ್ಲ . ಮಹಾಧೀರನಾದ ಬಬ್ರುವಾಹನ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ತನ್ನ ತಾಯಿಯ ಬಳಿ ವಿಷಯ ಹೇಳಿ, ಅರ್ಜುನನೊಂದಿಗೆ ಯುದ್ಧ ಮಾಡುವುದಾಗಿ ಅರಹುತ್ತಾನೆ. ತಾಯಿಯ ಮುಖದಲ್ಲಿ ಆತಂಕ ಕಂಡ ಆತ, ಇದೇನು ವೀರ ಮಗನ ಸಾಹಸ ಗಾಥೆಯನ್ನು ಕೇಳಿ ಹೆಮ್ಮೆ ಪಡುವುದನ್ನು ಬಿಟ್ಟು ಭಯಗೊಂಡಿರುವೆ ಎಂದು ಪ್ರಶ್ನಿಸುತ್ತಾನೆ. ಮೋಹನ ರಾಗ, ಆದಿ ತಾಳದಲ್ಲಿ ನಿಬದ್ಧವಾಗಿದ್ದ ಈ ನೃತ್ಯಬಂಧದಲ್ಲಿ ಕಲಾವಿದ ಯೋಧನ ವಸ್ತ್ರಾಭರಣ ಹಾಗೂ ಕತ್ತಿಯನ್ನು ಹಿಡಿದು ರಂಗವನ್ನು ಪ್ರವೇಶಿಸಿದ್ದು ದರುವಿನ ವೈಭವವನ್ನು ಇಮ್ಮಡಿಗೊಳಿಸಿತು.

ಪ್ರಾಚೀನ ಕಾಲದ ಆಲಯ ನೃತ್ಯ ಸಂಪ್ರದಾಯಕ್ಕೆ ಸೇರಿದ ಬಂಧವೇ ಸಿಂಹ ನಂದಿನಿ. ಕಾಳಹಸ್ತಿ ದೇವಸ್ಥಾನದಲ್ಲಿ ಈ  ನೃತ್ಯ ಪ್ರಚಲಿತವಾಗಿದೆ. ಕಲಾವಿದನು ರಂಗದ ಮೇಲೆ ಹರಡಿರುವ ರಂಗೋಲಿಯಲ್ಲಿ ಚಾಮುಂಡೇಶ್ವರಿ ದೇವಿಯ ವಾಹನವಾದ ಸಿಂಹದ ಚಿತ್ರವನ್ನು ಬಿಡಿಸಿದರು. ದೀರ್ಘತಾಳ ಎಂದು ಗುರುತಿಸಲ್ಪಟ್ಟ 128 ಅಕ್ಷರಗಳ ವಿಶೇಷ ಸಿಂಹನಂದನ ತಾಳದಲ್ಲಿ ಇದು ನಿಬದ್ಧವಾಗಿತ್ತು. ಸಾಹಿತ್ಯ ಹಾಗೂ ತಾಳವನ್ನು ಗಮನದಲ್ಲಿಟ್ಟುಕೊಂಡು ಪಾದಗಳ ಚಲನೆಗಳೊಂದಿಗೆ ಸಿಂಹದ ಚಿತ್ರವನ್ನು ಮೂಡಿಸಿದ್ದು ಕಲಾವಿದನ ಸಾಧನೆ , ನಿಷ್ಠೆ, ಹಾಗೂ ಏಕಾಗ್ರತೆಗೆ ಹಿಡಿದ ಕನ್ನಡಿಯಂತಿತ್ತು. ಚಾಮುಂಡೇಶ್ವರಿಯು ಸಿಂಹವನ್ನು ಏರಿ ಮಹಿಷಾಸುರನ ಮರ್ದನ ಮಾಡಿದ ವೈಖರಿಯನ್ನು ವಿಸ್ತರಿಸುತ್ತಾ, ರಾಗಸ್ತವ, ತಾಳಸ್ತವ, ಚಾರಿಭೇದ, ಗತಿಭೇದ, ಕರ್ಣಭೇದ, ಪ್ರಧಾನ ಜತಿ ಹೀಗೆ ಆರು ಸ್ತವಗಳನ್ನು ನಿರೂಪಿಸಿದರು. ಇಂತಹ ವಿಶೇಷವಾದ ನೃತ್ಯಬಂಧವನ್ನು ಕಲಾವಿಧ ಜೆ. ಮನು ಅವರು ಅತ್ಯಂತ ಶ್ರದ್ಧೆ, ಪ್ರಬುದ್ಧತೆಯೊಂದಿಗೆ ಪರಿಪೂರ್ಣವಾಗಿ ಸಾಕ್ಷಾತ್ಕರಿಸಿದರು.

ಗುರು ಡಾ. ವೀಣಾ ಮೂರ್ತಿ ವಿಜಯ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ತಯಾರಾದ ಮನು ಅವರ ಕೂಚುಪುಡಿ ರಂಗಪ್ರವೇಶವು ಅತ್ಯಂತ ಯಶಸ್ವಿಪೂರ್ಣವಾಗಿ ಸಂಪನ್ನಗೊಂಡಿತು. ಸಂಗೀತ ಕಲಾರಸಿಕರ ಕರ್ಣಾನಂದವನ್ನು ಉಂಟುಮಾಡುವಂತಹ ಗಾಯನ ವಿದ್ವಾನ್ ಅಭಿಶೇಕ್ ಎನ್. ಎಸ್. ಅವರದ್ದು. ಸರಳವಾದ, ಸ್ಫುಟವಾದ ನಿರೂಪಣೆಯಲ್ಲಿ ಶ್ರೀ ಸುಗ್ಗನಹಳ್ಳಿ ಷಡಕ್ಷರಿ  ಅವರು, ಹಾಗೆಯೇ ವಾದ್ಯ ವೃಂದದಲ್ಲಿ ಅತ್ಯಂತ ನಿಪುಣ ವಿದ್ವಾಂಸರಾದ  ಶ್ರೀ ಆನೂರು ವಿನೋದ್ ಶ್ಯಾಮ್ ಅವರು ಮೃದಂಗದಲ್ಲಿ, ಶ್ರೀ ಮಹೇಶ್ ಸ್ವಾಮಿ ಅವರು ವೇಣುವಾದನದಲ್ಲಿ, ವೀಣೆಯನ್ನು ನುಡಿಸಿದವರು ಶ್ರೀ ಶಂಕರ್ ರಾಮನ್ ಅವರು ಹಾಗೂ ರಿದಂಪ್ಯಾಡ್  ಜೊತೆಗೆ ಶ್ರೀ ಧನುಷ್ ಎನ್ ಅವರು, ಹೀಗೆ ನೃತ್ಯಸಂಗೀತ ವಿದ್ವಾಂಸರುಗಳ ಸಹಯೋಗವು ಕಾರ್ಯಕ್ರಮಕ್ಕೆ ಮೆರಗು ನೀಡಿತು. ವಿದ್ವಾನ್ ಸೂರ್ಯ ರಾವ್ ಅವರ ಅದ್ಭುತ ಬೆಳಕಿನ ವಿನ್ಯಾಸ ನೃತ್ಯಪ್ರಸ್ತುತಿಯ ಸೊಬಗನ್ನು ಇಮ್ಮಡಿಗೊಳಿಸಿತು.

ಕಾರ್ಯಕ್ರಮದ ಪ್ರಮುಖ ಅತಿಥಿಗಳಾಗಿದ್ದವರು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ್ಯೆಯ ಮಂತ್ರಿಗಳಾದ ಗೌರವಾನ್ವಿತ ಶ್ರೀಯುತ ದಿನೇಶ್ ಗುಂಡೂರಾವ್ ಅವರು.  ಅತಿಥಿಗಳಾದ ಶ್ರೀ ಸಿದ್ಧೇಂದ್ರಯೋಗಿ ಕೂಚಿಪುಡಿ ಕಲಾಪೀಠಂ ನ ಪ್ರಾಂಶುಪಾಲರಾದ ಡಾ. ವೇದಾಂತಂ ರಾಮಲಿಂಗ ಶಾಸ್ತ್ರಿಗಳು, ಹೆಸರಾಂತ ಕೂಚಿಪುಡಿ, ಯಕ್ಷಗಾನ ಕಲಾವಿದರಾದ ಡಾ. ವೇದಾಂತಂ ವೆಂಕಟ ನಾಗ ಛಲಪತಿ ಅವರು, ಹೆಸರಾಂತ ನೃತ್ಯ ವಿಮರ್ಶಕರಾದ ಡಾ. ಎಂ ಸೂರ್ಯ ಪ್ರಸಾದ್ ಅವರು.  ನಾಡಿನ ಪ್ರಮುಖ ನೃತ್ಯ ಕಲಾವಿದರಾದ ಗುರು ಪಿ ಪ್ರವೀಣ್ ಕುಮಾರ್ ಹಾಗೂ ಆಚಾರ್ಯ ಶ್ರೀ ಅವಿಜಿತ್ ದಾಸ್ ಅವರು ಉಪಸ್ಥಿತರಿದ್ದು ಕಲಾವಿದನನ್ನು ಮನಸಾರೆ ಹಾರೈಸಿದರು.

‍ಲೇಖಕರು avadhi

August 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: