ಸಂಧ್ಯಾರಾಣಿ ಕಾಲಂ : ಹೀಗೊಂದು ರಾತ್ರಿ, ಹೀಗೊಂದು ರಾಗ…


 
‘ಬೇಸರ ಮಾಡಿಕೊಳ್ಳಬೇಡ, ಒಂದಲ್ಲ ಒಂದು ದಿನ ನಿನ್ನನ್ನು ನನ್ನ ಊರಿಗೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿ ನನ್ನ ಕನಸಿನ ಮನೆ ಇರುತ್ತದೆ, ಮನೆಯ ಜಾಗದ ವಿಸ್ತೀರ್ಣದ ಮೂರು ಪಟ್ಟು ದೊಡ್ಡ ಅಂಗಳ, ಅಲ್ಲಿ ಒಂದು ತೋಟ, ತೋಟದ ನಡುವೆ ಒಂದು ಬಿಳಿ ಬಣ್ಣದ ಬೆಂಚು, ಅಲ್ಲಿ ಕುಳಿತು ಚಂದಿರನನ್ನ ನೋಡೋಣ, ಮನೆಯ ಹೆಸರು…’, ಇನ್ನಿಲ್ಲದ ನಂಬಿಕೆಯಿಂದ, ವಿಶ್ವಾಸದಿಂದ  ನನ್ನ ಸ್ನೇಹಿತ ಈ ಮಾತು ಹೇಳುತ್ತಿದ್ದರೆ, ಅದು ಸಾಧ್ಯವಾಗುವುದರ ಬಗ್ಗೆ ಯಾವುದೇ ಅಪನಂಬಿಕೆಯೂ ಇಲ್ಲದೆ ತಲೆ ಆಡಿಸಿದ್ದೆ ನಾನು.
ಉದ್ದಾನೆ ಆಕಾಶದ ಬಗ್ಗೆ, ಚಂದ್ರನ ಬಗ್ಗೆ, ತೊಯ್ದಾಡುತ್ತಾ ಕರೆವ ಕಡಲಿನ ಬಗ್ಗೆ ನನ್ನ ಮೋಹ ಇಂದು ನೆನ್ನೆಯದಲ್ಲ. ಪ್ರತಿ ಊರಿನ ಆಕಾಶಕ್ಕೂ ಒಂದು ಪ್ರತ್ಯೇಕತೆ ಇರುತ್ತದೆ, ಊರಿನಲ್ಲಿ ನೆಲವನ್ನು ನೋಡಿದ ಹಾಗೆಯೇ ಆಕಾಶವನ್ನೂ ನಾನು ದಿಟ್ಟಿಸುತ್ತೇನೆ, ರಾಯಚೂರಿಗೆ ಒಮ್ಮೆ ಹೋಗಿದ್ದಾಗ ಅಲ್ಲಿನ ಕಪ್ಪು ಮಣ್ಣಿನ ಬಗ್ಗೆ ಇನ್ನಿಲ್ಲದ ಪ್ರೀತಿ ಬಂದಿತ್ತು, ಹಾಗೆಯೇ ಸೋಮೇಶ್ವರದ ಕಡಲು, ಹುಬ್ಬಳ್ಳಿಯ ಆಕಾಶ, ಅದರಲ್ಲೂ ನೃಪತುಂಗ ಬೆಟ್ಟದ ಮೇಲಿನಿಂದ ನೋಡಿದಾಗ ಕಾಣುತ್ತಿದ್ದ ನೀಲಿ, ನೀಲಿ ವಿಶಾಲ ಆಕಾಶ ನನ್ನದು ಮತ್ತು ನನ್ನೊಬ್ಬಳದು ಎನ್ನುವ ಪೊಸೆಸ್ಸಿವ್ ನೆಸ್ ಬಂದುಬಿಟ್ಟಿತ್ತು. ಹೀಗೆ ಆಕಾಶವನ್ನು ಪ್ರೀತಿಸುವ ನನಗೆ ಬೆಂಗಳೂರಿನ ಬಗ್ಗೆ ಒಂದೇ ದೂರು:
ಇಲ್ಲಿ ಆಕಾಶ ನೋಡಲೂ ಸಹ ನೂಕು ನುಗ್ಗಲೇ… ಎಲ್ಲಿ ಕಾಣುತ್ತದೆ ತಡೆಯಿಲ್ಲದ, ಗಾಯಗೊಂಡಿಲ್ಲದ, ಚೂರಾಗಿಲ್ಲದ ಆಕಾಶ?? ಹೀಗೇ ಒಮ್ಮೆ ಒಂದು ಸಂಗೀತ ಕಾರ್ಯಕ್ರಮಕ್ಕೆ ಹೋಗುವಾಗ, ಟ್ರಾಫಿಕ್ ನಡುವೆ ಸಿಕ್ಕಿಕೊಂಡಾಗ ಎಂದಿನಂತೆ ಆಕಾಶ ಹುಡುಕಿದ್ದ ಕಂಗಳಿಗೆ ಕಂಡದ್ದು ದುಂಡು ಹಳದಿ ಕುಂಕುಮದಂತಹ ಚಂದ್ರ… ಕಂಡದ್ದು ಒಂದೇ ಘಳಿಗೆ, ಮನಸ್ಸು ಇನ್ನೂ ಮತ್ತೂ ನೋಡಲು ಕಾತರಿಸುತ್ತಿತ್ತು.  ಗಾಡಿ ಒಂದು ಹೆಜ್ಜೆ ಮುಂದಿಟ್ಟ ಕೂಡಲೇ ಯಾವುದೋ ಹಾಳು ಕಟ್ಟಡ ನನ್ನ ಚಂದ್ರನನ್ನು ನುಂಗಿ ಹಾಕಿತ್ತು… ’ಚಂದ್ರ ಕಾಣ್ತಾ ಇಲ್ಲ..’ ಅಂತ ಕಂಗಾಲಾದವಳಿಗೆ, ಫೋನಿನಿಂದಲೇ ಸ್ನೇಹಿತ ಸಮಾಧಾನ ಮಾಡಿದ್ದ.
ಹೀಗೆ ಆಕಾಶವನ್ನು ಧೇನಿಸುವ, ಕಡಲನ್ನು ಪ್ರೀತಿಸುವ, ಚಂದ್ರನಿಗಾಗಿ ಕನಸುವ ನಾನು ಮೊನ್ನೆ ಒಂದು ಇಡೀ ರಾತ್ರಿ ಹಾಡು ಮತ್ತು ಆಕಾಶದ ಜೊತೆ ಕಳೆದಿದ್ದೆ. ಮತ್ತು ಅಲ್ಲಿ ಕೇವಲ ನಾನಿದ್ದೆ, ಹೀಗಾಗಿ ಸಂಪೂರ್ಣವಾಗಿ ನನ್ನ ಹಾಡು, ನನ್ನ ಚಂದ್ರ ಮತ್ತು ನನ್ನ ಆಕಾಶ. ಜೊತೆಗೆ ಆಗಾಗ ಜೊತೆಯಾಗುತ್ತಿದ್ದ ಕಡಲು. ಆ ಒಂದು ರಾತ್ರಿಗಾಗಿ ಆಕಾಶವನ್ನೇ ಕಾಣದೆ ಕಳೆದ ಎಲ್ಲಾ ರಾತ್ರಿಗಳೂ ಬೆಲೆ ಎಂದಾದರೆ ಅದನ್ನು ನಾನು ಉಸಿರೆತ್ತದೆ ಒಪ್ಪಿಬಿಡುತ್ತಿದ್ದೆ.
ಮೂರು ದಿನಗಳ ಗೋವಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದೆವು. ಬಸ್ಸಿನಲ್ಲಿ ಕುಳಿತು ಪ್ರಯಾಣ ಮಾಡುವಾಗ ಎಲ್ಲಾ ಸಹ ಪ್ರಯಾಣಿಕರಲ್ಲೊಬ್ಬನಾಗಿ ಕಾಣುವ ಬಾನು, ಸ್ಲೀಪರ್ ಸೀಟಿನಲ್ಲಿ, ಅಪ್ಪರ್ ಬರ್ತಿನಲ್ಲಿ ಮಲಗಿದ್ದ ನನ್ನನ್ನು ನೇರವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಥೇಟ್ ಕಾಡಿನ ನಡುವೆ ಹಾಸಿಗೆ ಬಿಡಿಸಿಕೊಂಡ ಹಾಗೆ. ಮೊಬೈಲ್ ನಿಂದ ಹೊರಟ ಇಯರ್ ಫೋನ್ ನಿಂದ ಒಂದೊಂದಾಗಿ ಹಾಡುಗಳು ಕೇಳಿಬರುತ್ತಿದ್ದವು..
ಮೊದಲಿನಿಂದಲೂ ಹಾಡುಗಳ ಸಂಗೀತಕ್ಕಿಂತ ಸಾಹಿತ್ಯಕ್ಕೆ ಮನಸೋಲುವ ನನ್ನ ಎದೆಯೊಳಕ್ಕೆ ಹಾಡುಗಳು ನೇರವಾಗಿ ಇಳಿಯುತ್ತಿದ್ದವು..
ಯಾಕೋ ತುಂಬಾ ವರ್ಷಗಳ ಹಿಂದೆ ಹೀಗೆ ಚಿತ್ತದಲ್ಲಿ ಕೆತ್ತಿಟ್ಟ ಇನ್ನೊಂದು ಪ್ರಯಾಣ ನೆನಪಾಯ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ, ಟ್ರೇನಿನಲ್ಲಿ ಪ್ರಯಾಣ. ರಾತ್ರಿ ಸುಮಾರು ೧೦ ದಾಟಿರಬಹುದು, ಬೆಂಗಳೂರು ಹಿಂದಾಗಿತ್ತು. ಎಲ್ಲೋ ೩-೪ ಸೀಟುಗಳ ಹಿಂದಿನಿಂದ, ನಮ್ಮದೇ ಬೋಗಿಯ ಯಾವುದೋ ಕಿಟಕಿಯಿಂದ ಒಂದು ಹಾಡು ನುಸುಳಿ ಬಂದಿತ್ತು. ರಾಣಿ ರೂಪಮತಿ ಚಿತ್ರದ ಹಾಡು. ’ಲೌಟ್ ಕೆ ಆ, ಲೌಟ್ ಕೆ ಆ.., ಆ ಲೌಟ್ ಕೆ ಆಜಾ ಮೇರಿ ಮೀತ್ ತುಝೆ ಮೇರೆ ಗೀತ್ ಬುಲಾತಾ ಹೈ..’, ನಿಜ ಹೇಳುತ್ತೇನೆ, ಒಂದೇ ಹಾಡಿನಲ್ಲಿ, ಒಂದೇ ಸಮಯದಲ್ಲಿ, ಅಷ್ಟು ಯಾತನೆ, ಅಷ್ಟು ಪ್ರೀತಿ ತುಂಬಿರುತ್ತದೆ ಎನ್ನುವುದು ಮೊದಲ ಸಲ ನನಗೆ ಅರ್ಥವಾಗಿತ್ತು. ಆಗಿನ್ನು ಪಿಯೂಸಿ ಹುಡುಗಿ ನಾನು, ದಂಗಾಗಿ ಕೂತು ಆ ಹಾಡು ಕೇಳಿದ್ದೆ, ’ಭರಸೆ ಗಗನ್, ಮೇರೆ ಭರಸೆ ನಯನ್, ದೇಖೋ ತರ್ ಸೇ ಹೈ ಮನ್ ಅಬ್ ತೋ ಆಜಾ’, ಆತ ದನಿಯೆತ್ತಿ, ಜಗತ್ತಿನ ನೋವನ್ನೆಲ್ಲಾ ತುಂಬಿಕೊಂಡು ಹಾಡುತ್ತಿದ್ದ. ತನ್ನ ಆತ್ಮವನ್ನೇ ಕಳೆದುಕೊಂಡಂತೆ ಅವನು ಹಾಡುತ್ತಿದ್ದರೆ ಆ ಘಳಿಗೆಯಲ್ಲಿ ಇಡೀ ಜಗತ್ತಿನಲ್ಲಿ ಅದೊಂದೇ ದನಿ ಇದೆ ಅನ್ನಿಸುತ್ತಿತ್ತು ಮತ್ತು ಆ ಘಳಿಗೆಯಲ್ಲಿ ಯಾಕೋ ಅಮೃತ ಮತಿ ನೆನಪಾಗಿಬಿಟ್ಟಳು ಮತ್ತು ಅರ್ಥವಾಗಿಬಿಟ್ಟಳು.
ಹಾಗೇ ಇಂದೂ ಸಹ ಹಾಡುಗಳು ಒಂದಾದ ಮೇಲೊಂದರಂತೆ ನನ್ನೊಳಗನ್ನು ತಡಕಾಡುತ್ತಿದ್ದವು.
’ಆ ಕಣ್ಣಿಗೊಂದು, ಈ ಕಣ್ಣಿಗೊಂದು ಸ್ವರ್ಗಾನ ತಂದು ಕೊಡಲೇನೆ ಇಂದು…’ ಎಂದು ಹಾಡುವ ಹಾಡಿಗೆ ’ಗೆಳೆಯಾ ಎಂದರೆ ಅದಕೂ ಹತ್ತಿರ, ಇನಿಯಾ ಎಂದರೆ ಅದಕೂ ಎತ್ತರ’ ಎನ್ನುವ ಉತ್ತರವಲ್ಲದೇ ಇನ್ನೇನೂ ಇರಲು ಸಾಧ್ಯವೇ ಇಲ್ಲ ಅನ್ನಿಸಿತ್ತು! ಅಷ್ಟರಲ್ಲಿ ಕೊರತೆಯಿದ್ದದ್ದೇ ಇದರದು ಎನ್ನುವ ಹಾಗೆ ಘಟ್ಟಗಳ ಗಿಡಗಂಟಿಗಳಿಗೆಲ್ಲಾ ಪುಟ್ಟ ಪುಟ್ಟ ದೀಪ ಹಚ್ಚಿಟ್ಟಂತೆ ಸಣ್ಣದಾಗಿ ಹನಿ ಶುರುವಾಯ್ತು.. ಮುಖದ ಬಳಿಯ ಗಾಜನ್ನು ಎಳೆದವಳು, ಕಾಲಿನ ಬದಿಯ ಗಾಜನ್ನು ಒಂದಿಷ್ಟು ತೆರೆದಿಟ್ಟೆ..ಮಸುಕಿಗೂ ಒಂದು ಮುಸುಕು …. ಹನಿ ಹನಿಯಾಗಿ ಬೀಳುತ್ತಿದ್ದ, ಬಸ್ಸಿನ ಕಿಟಕಿಗೆ ಬಡಿಯುತ್ತಿದ್ದ, ತೆರೆದಿಟ್ಟ ಕಿಟಕಿಯಿಂದ ನುಸುಳಿ ಪಾದವನ್ನು ಒದ್ದೆ ಮಾಡುತ್ತಿದ್ದ ಮಳೆಯೊಡನೆ ಒಂದು ಮೌನ ಸಂವಾದ, ನನ್ನದು ಮೌನ, ಅವುಗಳದು ನನ್ನೊಡನೆ ನಿರಂತರ ಸಂವಾದ..
ಗೋವಾದ ಕಡಲುಗಳು ತೋಳು ತೆರೆದು ಸ್ವಾಗತಿಸಿದ್ದವು, ಎಲ್ಲಾ ಕಡಲುಗಳಂತೆಯೇ,

’ಕರೆಯುತ್ತದೆ, ಕರಗಿಸುತ್ತದೆ,
ನೀರಾಗಿಸುತ್ತದೆ,
ಕೊಟ್ಟದ್ದೆಲ್ಲವ ಮುತ್ತಿಟ್ಟು
ಮರಳಿಸುತ್ತದೆ ಕಡಲು,
ಬಾ ಗೆಳೆಯ ಒಮ್ಮೆ ಮುಳುಗಿಸು ನನ್ನ…’, ಕಡಲಿಗಿಳಿದಾಗ ಮನಸ್ಸೂ ಕಡಲೇ..
ಕಡಲೊಳಿದ್ದಷ್ಟು ಹೊತ್ತೂ ’ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ, ಒಳಗಡಲ ರತ್ನ ಪುರಿಗೆ. ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ, ಒಳ ಗುಡಿಯ ಮೂರ್ತಿ ಮಹಿಮೆ..’ ವಾಪಸ್ಸು ಬರುವಾಗ ಕಡಲ ಮೊರೆತ ಜೊತೆ ಜೊತೆಯಲ್ಲಿಯೇ.. ಬೆಂಗಳೂರಿನ ಛಳಿಯ ಮರೆಸಿದ ಘಟ್ಟದುಬ್ಬಸ, ಕಿರಿಕಿರಿಯೆನಿಸದ ಧಗೆಯಿಲ್ಲದ ಬೆವರು, ಕಿಟಕಿಯಿಂದ ಬರುತ್ತಿದ್ದ ತಂಗಾಳಿಯೊಡನೆ ಆವರಿಸುತ್ತಿದ್ದ ಕತ್ತಲ ಮೋಹಕತೆ. ಅಸ್ಪಷ್ಟತೆಯಲ್ಲಿ ಮಾತ್ರ ಸಾಧ್ಯವಾಗುವ ಸ್ಪಷ್ಟತೆಯ ಗುಣ ಬೆಳಕಿಗಿಲ್ಲ, ಬೆಳಕಲ್ಲಿ ಎಲ್ಲ ನೇರ, ಎಲ್ಲವೂ ವಿಷದ, ವಿಸ್ಮಯಕ್ಕೆ ಅಲ್ಲಿ ತಾವಿಲ್ಲ, ಮಸುಕು ಹಾಗಲ್ಲ.. ಬೆಳಕು ಮನೆಯ ಮುಂದಿನ ಪಾರ್ಕಿನಲ್ಲಿ ವಾಕಿಂಗ್ ಹೋದ ಹಾಗೆ, ಮಸುಕು ಕತ್ತಲು ಕಾಡಿನಲ್ಲಿ ನಮ್ಮನ್ನೇ ಹುಡುಕುವ ಹಾಗೆ..
’ಶ್ಯಾನುಭೋಗರ ಮಗಳು ರತ್ನದಂತಹ ಹುಡುಗಿ…’ ಅಶ್ವಥ್ ಹಾಡುತ್ತಿದ್ದರು. ಅರೆ ’ಹನ್ನೆರಡು ತುಂಬಿಹುದು ಮದುವೆಯಿಲ್ಲ’ ಎನ್ನುವ ಕಾಲದಲ್ಲೂ ಸೀತೆ ನೋಡಲು ಬಂದ ವರ ತನಗೆ ಇಷ್ಟವಾಗಲಿಲ್ಲ ಎಂದು ಹೇಳಬಹುದಾಗಿತ್ತಲ್ಲ ಎನ್ನುವ ಮಾತೇ ಹಿತವಾಗಿ ಕಂಡು, ಆ ಶ್ಯಾನುಭೋಗರ ಮೇಲೆ ಅಕ್ಕರೆ ಬಂದುಬಿಟ್ಟಿತ್ತು!
’ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದನವರ ಮನೆಗೆ
’ವೈದಿಕರ ಮನೆಗಳಲಿ ಊಟ ಹೊತ್ತಾಗುವುದು
ಒಲ್ಲೆನೆಂದಳು ಸೀತೆ ಕೋಣೆಯೊಳಗೆ!’
ಅವಳು ಹೇಳಿದ್ದಿರಲಿ, ’ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ’ …. ಮಗಳು ಬೇಡ ಅಂದ ಕಾರಣವನ್ನು ಕೇಳಿ ತಂದೆ ನಕ್ಕರೆ? ಅದಷ್ಟೇ ಅಲ್ಲ ಎಂದು ಮುಂದಿನ ಸಾಲು ಹೇಳುತ್ತದೆ, ’ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು / ತನ್ನ ಕೂದಲಿಗಿಂತ ಕಪ್ಪು’ ಎಂದು! ತಂದೆ ನಕ್ಕಿದ್ದು ಬಹುಶಃ ಇದಕ್ಕೇ ಇರಬಹುದಾ? ಎಷ್ಟು ಚೆನ್ನಾಗಿ ಒಂದು ಪರಿಸರವನ್ನು ಕಟ್ಟಿಕೊಡುತ್ತಾರೆ ಕೆ ಎಸ್ ನರಸಿಂಹ ಸ್ವಾಮಿ … ’ ಕರುವನಾಡಿಸುವಾಗ ಮಲ್ಲಿಗೆಯ ಬನಗಳಲಿ…’ ಕಣ್ಮುಚ್ಚಿ ನೆನೆದರೆ ಎಂತಹ ಸುಂದರ ನೋಟ ಅದು…
ಹಸಿರನ್ನು ಭೇದಿಸಿ ಬಸ್ಸು ಇಷ್ಟಿಷ್ಟೇ, ಇಷ್ಟಿಷ್ಟೆ ಮುನ್ನುಗ್ಗುತ್ತಿತ್ತು, ಧಾವಂತವಿಲ್ಲದ ನಡೆಯಲ್ಲಿ, ಆವೇಗವಿಲ್ಲದ ವೇಗದಲ್ಲಿ … ಕತ್ತಲು, ಘಟ್ಟಗಳು, ಮಳೆ, ಬಸ್ಸಿನ ಮೇಲಿನ ಸಾಲಿನ ಸ್ಲೀಪರ್ ಕೋಚಿನಲ್ಲಿ ಮಲಗಿದ್ದ ನಾನು, ತೊಯ್ದಾಡುತ್ತಿದ್ದ ಬಸ್ಸು ಆದರೂ ಯಾಕೋ ಭಯವಾಗೇ ಇರಲಿಲ್ಲ. ಹಿಂದಿನ ತಾನೆ ಒಂದು ಭಯ ಗೆದ್ದಿದ್ದೆ. ಎತ್ತರಗಳನ್ನು ಕಂಡರೆ ಹೆದರುವ ನಾನು, ಮೊದಲ ಅಂತಸ್ತಿನಿಂದ ಕೂಡ ಕೆಳಗೆ ನೋಡಲು ಹೆದರುವ ನಾನು ಭೋರ್ಗರೆಯುವ, ಮುಖವನ್ನು ಆವರಿಸಿ, ನನ್ನನ್ನು ಅಲ್ಲಾಡಿಸಿದ ಸಮುದ್ರದ ಮೇಲೆ ಪ್ಯಾರ ಸೇಲಿಂಗ್ ಮಾಡಿದ್ದೆ, ನಿಜ ಹೇಳಬೇಕೆಂದರೆ ಅಷ್ಟು ಎತ್ತರದಿಂದ ಕಡಲನ್ನು ನೋಡುವಾಗ ಹಾಗೆ ಸುಮ್ಮನೆ ಕಡಲ ಮೇಲೆ ಇಳಿದುಬಿಡಬೇಕು ಅನ್ನಿಸಿತ್ತು! ಯಾಕೋ ಗೆಲ್ಲಲು ಅರ್ಜೆಂಟಾಗಿ ಇನ್ನೊಂದು ಭಯ ಹುಡುಕಿಕೊಳ್ಳಬೇಕು ಅನ್ನಿಸಿತು!
ಕಿಟಕಿಯಿಂದ ಹೊರ ನೋಡಿದೆ, ಮಳೆ ಹಿಂದೆ ಬಿದ್ದಿತ್ತು…. ಕಾರವಾರದ ಕಡಲು ಒಂದು ಕಡೆ, ಮೋಡಗಳೇ ಇಲ್ಲದ ಆಕಾಶದಲ್ಲಿ ಬಸ್ಸಿನ ಕಿಟಕಿ ಫ್ರೇಮು ಹಾಕಿಟ್ಟ ಹಾಗೆ ಚಂದ್ರಮ… ನೋಡುತ್ತಾ ಮಲಗಿದವಳನ್ನು ಏಕಾ ಏಕಿ ಬಾನಿಂದ ಎತ್ತಿ ಎಸೆದಂತೆ ಹಾಡು ಕೇಳತೊಡಗಿತು … ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಒಳಗೊಳಗೆ ಹರಿಯುವವಳು, ಜೀವ ಹಿಂಡಿ ಹಿಪ್ಪೆ ಮಾಡಿ, ಒಳಗೊಳಗೆ ಕೊರೆಯುವವಳು ಸದಾ ಗುಪ್ತಗಾಮಿನಿ ನನ್ನ ಶಾಲ್ಮಲ/ ……..ನನ್ನ ಬಾಳ ಭುವನೇಶ್ವರಿ ನನ್ನ ಶಾಲ್ಮಲ, ನನ್ನ ಬದುಕ ರಾಜೇಶ್ವರಿ ನನ್ನ ಶಾಲ್ಮಲ… ಗುಪ್ತಗಾಮಿನಿ ನನ್ನ ಶಾಲ್ಮಲ, ತಪ್ತ ಕಾಮಿನಿ ನನ್ನ ಶಾಲ್ಮಲ…’ ಸದಾ ವ್ಯಂಗ್ಯದ, ವಿಡಂಬನೆಯ ಸೂಜಿ ಮೊನೆಯಂತಹ ಚಂಪಾ ಲೇಖನಿಯಿಂದ ಇಂತಹ ಹಾಡು ಸಹ ಹುಟ್ಟಬಹುದೇ? ಅದನ್ನು ಅಶ್ವಥ್ ಬಿಟ್ಟು ಮತ್ತ್ಯಾರೂ ಹೀಗೆ ಹಾಡಲಾರರು.. ಯಾಕೋ ಈ ಹಾಡು ಕಡಲಿನಂತೆ ನನ್ನನ್ನು ತೊಯ್ದಾಡಿಸುತ್ತಿತ್ತು.. ನಗುನಗುತ್ತಿರುವಾಗಲೂ ಕಣ್ಣಲ್ಲಿ ಹನಿ ಒಸರಿಸುವ, ಗುಂಪಿನಲ್ಲಿದ್ದಾಗಲೂ ಒಂಟಿ ಅನ್ನಿಸಿಬಿಡುವ, ಅವನ ಜೊತೆಗಿರುವಾಗಲೂ ಏಕಾಂಗಿ ಅನ್ನಿಸಿಬಿಡುವ ನನ್ನಲ್ಲೂ ಹರಿವ  ಈ ಶಾಲ್ಮಲೆಯನ್ನೇನು ಮಾಡಲಿ?? ಹೌದು ಒಂದೇ ಹಾಡಿನಲ್ಲಿ ಅಷ್ಟೊಂದು ಪ್ರೀತಿ, ಅಷ್ಟೊಂದು ಮೋಹ, ಅಷ್ಟೇ ಗಾಢ ನೋವು ಇರಲು ಸಾಧ್ಯ …’ಪ್ರೀತಿ ಇಲ್ಲದಿದ್ದರೆ ನಾನು ಏನನ್ನೂ ಮಾಡಲಾರೆ, ಧ್ವೇಷವನ್ನು ಸಹ..’ ಅಂದವರಲ್ಲವೇ ಚಂಪಾ..
ದಾರಿ ಸಾಗುತ್ತಲೇ ಇತ್ತು. ಆ ಘಳಿಗೆಯಲ್ಲಿ ನನ್ನ ಉದ್ದೇಶ ನನ್ನ ಊರನ್ನು ತಲುಪುವುದಾ ಅಥವಾ ಈ ಕ್ಷಣಗಳನ್ನು ನನ್ನದಾಗಿಸುವುದಾ ಎಂದರೆ ಉತ್ತರ ನನ್ನಲ್ಲಿರಲಿಲ್ಲ. ಆದರೂ ಅದು ಪರಸ್ಪರ ವಿರುದ್ಧ ಯಾಕಾಗಬೇಕು? ಎರಡೂ ಮುಖ್ಯ ಅಲ್ಲವೇ?  ಅತ್ತಿತ್ತ ನೋಡದೆ, ನಿಲ್ಲದೆ, ಒಂದೆರಡು ನಿಟ್ಟುಸಿರು, ಒಂದಿಷ್ಟು ಕನಸುಗಳನ್ನು ಆಯ್ದು ಮಡಿಲಿಗೆ ತುಂಬದೆ, ಅಮ್ಮನ ಬೆಚ್ಚನೆಯ ಮಡಿಲಲ್ಲಿ ಕೂತು, ಓರೆ ಕಣ್ಣಲ್ಲಿ ನೋಡುವ ಕಂದನನ್ನು ಕಂಡು ಕೈ ಬೀಸದೆ, ಓಡುತ್ತಲೇ ಹೋಗುವುದೆಂತಹ ಪ್ರಯಾಣ?
ಪ್ರಯಾಣವನ್ನು ಎರಡು ರೀತಿ ಆಸ್ವಾದಿಸಬಹುದು, ಕೆಲವರಿಗೆ ಗುರಿ ಮುಖ್ಯ, ಆಗ ವೇಗವೇ ಪ್ರಧಾನ, ಇನ್ನೂ ಕೆಲವರಿಗೇ ಗುರಿಯಷ್ಟೇ, ಅಥವಾ ಎಷ್ಟೋ ಸಲ ಗುರಿಗಿಂತ ಪ್ರಯಾಣದ ಸುಖವೇ ಮುಖ್ಯ. ಥೇಟ್ ಬದುಕಿನ ಹಾಗೆ…  ’ಅರೆ, ಗೋವಾಗೆ ಬಸ್ಸಿನಲ್ಲಿ ಹೋಗಿ ಬಂದಿರಾ? ಪ್ಲೇನಿನಲ್ಲಿ ಹೋಗಿದ್ದಿದ್ದರೆ ಎಷ್ಟು ಸಮಯ ಉಳಿಸಬಹುದಿತ್ತು ಗೊತ್ತಾ’ ಎಂದು ಕೇಳಿದ ಗೆಳತಿಗೆ ಹಾಗೆ ಪ್ರಯಾಣದ ಸುಖವೇ ಒಂದು ನೆನಪಾದ ರಾತ್ರಿಯ ಕಥೆ ಹೇಳಬೇಕು ಅನ್ನಿಸಿತು..
 

‍ಲೇಖಕರು avadhi

October 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗುಲ್ಜಾರ್ ಕನ್ನಡಿಯಲ್ಲಿ ಕಂಡ ಗಾಲಿಬ್

ಗುಲ್ಜಾರ್ ಕನ್ನಡಿಯಲ್ಲಿ ಕಂಡ ಗಾಲಿಬ್

ನನ್ನ ಭಾವ ಜಗತ್ತಿಗೂ, ಇಂಗ್ಲಿಷಿನ G ಅಕ್ಷರಕ್ಕೂ ಒಂದು ಸೂಫಿಯಾನಿ ಸಂಬಂಧವಿದೆ. ನನ್ನನ್ನು ಆಳವಾಗಿ ಕಲಕುವ, ನಾನು ಕನವರಿಸುವ, ಸ್ಪರ್ಶಕ್ಕೆ...

ಇದು ‘ಅಕ್ಷಯ’.. ಈಕೆ ಶರಣ್ಯ..

ಸಂಧ್ಯಾರಾಣಿ  ದಿನಾಂಕ : ಜುಲೈ ೧೩, ಸಂದರ್ಭ : ಸಾನಿಯಾ ಮಿರ್ಜಾರ ಆತ್ಮಚರಿತ್ರೆ "Ace Against Odds" ಬಿಡುಗಡೆಯ ನಂತರ. ರಾಜ್ ದೀಪ್...

13 ಪ್ರತಿಕ್ರಿಯೆಗಳು

  1. bharathi b v

    Ufff …..entha adbhutha sundara lahari … manasina olage beedu bittithu …nidreyantha echchara …eluva manasillade Haage koothiruve …

    ಪ್ರತಿಕ್ರಿಯೆ
  2. ಅಪರ್ಣ ರಾವ್

    beLagge beLagge … ella kelasa bittu.. ello bettada meleri marada kelage biddukondu aakaasha dittisuva aase huttisiddeera sandya.. ashtondu swatantrya naavu padedukondu bandilla bidi..

    ಪ್ರತಿಕ್ರಿಯೆ
  3. Swarna

    ಅಂಥದ್ದೇ ಇನ್ನೊಂದು ಹಾಡು “ಚಾಹೂಂಗ ಮೈ ತುಜ್ಹೆ ಸಾಂಜ್ ಸವೇರೆ..ಫಿರ್ ಭಿ ಕಭಿ ಅಬ್ ನಾಮ್ ಕೋ ತೇರೆ….”. ಹಾಡು, ಚಂದಿರ,ಒಂದಷ್ಟು ಹನಿ ಪಯಣಕ್ಕಿನೇನು ಬೇಕು ?
    ಸುಂದರ ಲಹರಿ

    ಪ್ರತಿಕ್ರಿಯೆ
  4. ಶಮ, ನಂದಿಬೆಟ್ಟ

    ಎಷ್ಟೋ ಸಲ ಗುರಿಗಿಂತ ಪ್ರಯಾಣದ ಸುಖವೇ ಮುಖ್ಯ.
    ಸತ್ಯ ಸತ್ಯ… ದಾರಿಗುಂಟ ಸಾಗುವಾಗ ನೂರಾರು ತಿರುವುಗಳಲ್ಲಿ ಸಾವಿರಾರು ನೆನಪುಗಳು 🙂 ಪ್ಲೇನಿನಲ್ಲಿ ಹೋದರೆ ಉಳಿಯುವುದು ಸಮಯ ಮಾತ್ರ.. ಬಸ್ಸು, ರೈಲುಗಳಲ್ಲಾದರೆ ಮನದಲ್ಲಿ ಉಳಿಯುವುದು ಏನೇನೋ… ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಸಂಧ್ಯಾ.. ಲವ್ ಯೂ..

    ಪ್ರತಿಕ್ರಿಯೆ
  5. Anil Talikoti

    ರಾಗದ ರಾತ್ರಿಯ, ಮಣ್ಣಿನ ಬಣ್ಣದ, ಕಡಲಿನ ಚಂದ್ರನ ನಂಜೆರಿಸುವಂತಹ ಬರಹ. ತುಂಬಾ ಇಷ್ಟವಾಯಿತು.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  6. ಚೇತನಾ ಭಟ್

    ಅಬ್ಭಾ! ನಿಮ್ಮ ಲಹರಿಯೊಳಗಿನ ನಮ್ಮ ಪಯಣ ಕೂಡ ಅಷ್ಟೇ ನವಿರು ನವಿರಾಗಿತ್ತು ಸಂಧ್ಯಾ….ಎಷ್ಟು ಸುಂದರ ಭಾವ ಲಹರಿ.. ತುಂಬಾನೇ ಇಷ್ಟವಾಯ್ತು.

    ಪ್ರತಿಕ್ರಿಯೆ
  7. amardeep.p.s.

    ತುಂಬಾ ಇಷ್ಟವಾಯಿತು ಮೇಡಂ ಲೇಖನ …. ಸಿ . ಅಶ್ವಥ್, ಚಂಪಾ … ಕೆ. ಎಸ್. ನ .. ಎಲ್ಲರನ್ನೂ ನೆನೆದು… ಹಾಡುಗಳೊಂದಿಗೆ ಬೆರೆತ ಮನಸ್ಸಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಾ… ಅಭಿನಂದನೆಗಳು ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This