ಸಂದೇಶ್ ಎಚ್ ನಾಯ್ಕ್ ಓದಿದ ‘ನಾ ಸೆರೆಹಿಡಿದ ಕನ್ಯಾಸ್ತ್ರೀ’

ಸಂದೇಶ್ ಎಚ್ ನಾಯ್ಕ್

ಸುಮ್ಮನೆ ಒಮ್ಮೆ ನಮ್ಮ ಸುತ್ತಲಿನ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೂ ಸಾಕು ಅವೆಷ್ಟೋ ಸಂಗತಿಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಯಾವುದಕ್ಕೂ ನಮ್ಮ ಕುತೂಹಲದ ಕಣ್ಣು, ಅರಿವಿನ ಹಸಿವು ಇಂಗಿಸಬಲ್ಲ ಒಳಗಣ್ಣು ಸದಾ ತೆರೆದಿರಬೇಕಷ್ಟೇ. ಅದರೊಂದಿಗೆ ಆ ನಿಟ್ಟಿನ ಒಂದಷ್ಟು ಒಳ್ಳೆಯ ಆಸಕ್ತಿ, ಅಭಿರುಚಿಯೂ ಜೊತೆಯಾದರೆ, ಪ್ರಕೃತಿ ತನ್ನೊಡಲೊಳಗೆ ಹುದುಗಿಸಿಟ್ಟುಕೊಂಡ ಮೊಗೆದಷ್ಟೂ ಮುಗಿಯದ ವೈಶಿಷ್ಟ್ಯತೆಗಳು ತೆರೆದುಕೊಳ್ಳುತ್ತವೆ. ಆದರೆ ಈ ಸಾಧ್ಯತೆಯಲ್ಲಿನ ಬಹುದೊಡ್ಡ ಕೊರತೆಯೆಂದರೆ ಅವುಗಳನ್ನು ಅನುಭವಿಸುವವರ ಸಂಖ್ಯೆ ಕಡಿಮೆ ಮತ್ತು ಅನುಭವಿಸಿದ್ದನ್ನು ಸಮರ್ಪಕವಾಗಿ ದಾಖಲಿಸುವವರಂತೂ ಇನ್ನೂ ವಿರಳ. ‘ನಾ ಸೆರೆ ಹಿಡಿದ ಕನ್ಯಾಸ್ತ್ರೀ’ ಎಂಬ ಪ್ರಬಂಧ ಸಂಕಲನದಲ್ಲಿ ಪತ್ರಕರ್ತ, ಲೇಖಕರಾದ ಶಶಿಧರ ಹಾಲಾಡಿಯವರು ಪ್ರಕೃತಿಯಲ್ಲಿರುವ ಕಂಡುಬರುವ ಅಂಥ ಅಪರೂಪದ ಚಿತ್ರಗಳನ್ನು ತಮ್ಮ ಪ್ರಬಂಧಗಳಲ್ಲಿ ಮೂಡಿಸುವ ಅತ್ಯಂತ ಸಶಕ್ತ ಪ್ರಯತ್ನ ನಡೆಸಿದ್ದಾರೆ.

ಸಾಮಾನ್ಯವಾಗಿ ಪ್ರಬಂಧಗಳಲ್ಲಿ ಬಾಲ್ಯದ ಅನುಭವ ಹಾಗೂ ನೆನಪುಗಳೇ ಹೆಚ್ಚೆಚ್ಚು ಚಿತ್ರಿಸಲ್ಪಟ್ಟಿರುವ ಮಾದರಿಗಳನ್ನು ನಾವೆಲ್ಲರೂ ಗಮನಿಸಿಯೇ ಇರುತ್ತೇವೆ. ಇದು ಒಂದು ಬಗೆಯ ಏಕತಾನತೆಗೂ ಕಾರಣವಾಗುವುದಿದೆ. ಆದರೆ ಇಲ್ಲಿ ಲೇಖಕರು ನಮ್ಮನ್ನು ಅವರ ಬಾಲ್ಯದ ದಿನಗಳಿಗೆ ಕರೆದೊಯ್ದರೂ ಕೂಡಾ ಅದದೇ ಹಳಸಲು ವಿಚಾರಗಳ ಸುತ್ತ ಸುತ್ತು ಹೊಡೆಸದೇ, ಅಲ್ಲಿನ ವಿಭಿನ್ನವಾದ, ಹೊಸತೊಂದು ಲೋಕವನ್ನು ನಮಗೆ ತೋರಿಸುತ್ತಾ ಹೋಗುತ್ತಾರೆ. ಇದು ಆ ಏಕತಾನತೆಯನ್ನು ಮುರಿಯುವ ಸಕಾರಾತ್ಮಕ ಪ್ರಯತ್ನವೂ ಹೌದು.

ಇಲ್ಲಿ ಹೆಚ್ಚಿನ ಬರಹಗಳನ್ನು ಓದುತ್ತಾ ಹೋದಂತೆ ಅವು ನಮ್ಮ ಕೈ ಹಿಡಿದು ನಡೆಸಿಕೊಂಡು ಹೋದಂತೆ ಭಾಸವಾಗಲು ಇನ್ನೂ ಒಂದು ಕಾರಣವಿದೆ. ಅದೆಂದರೆ ರೂಟ್‌ಮ್ಯಾಪ್. ಶಾಲೆ, ಪೇಟೆ, ಹಾಡಿ, ಹಕ್ಕಲು, ಯಾವುದೋ ಗುಡ್ಡ ಇತ್ಯಾದಿ ಸ್ಥಳಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಅಲ್ಲಿಗೆ ತಲುಪುವ ಮಾರ್ಗವನ್ನೂ ಅಷ್ಟೇ ಚೆಂದವಾಗಿ ಹೇಳುತ್ತಾ ಹೋಗುತ್ತಾರೆ. ಓಣಿ ಇಳಿದು, ಏರಿ ಹತ್ತಿ, ಕಾಡನ್ನು ಬಳಸಿ ಒಂದು ಪರ್ಲಾಂಗ್ ನಡೆದು, ಎಡಕ್ಕೆ ತಿರುಗಿ, ತುಸು ಮುಂದೆ ಸಾಗಿದರೆ… ಎನ್ನುವಾಗ ಓದುಗರೂ ಆ ದಾರಿಯಲ್ಲಿ ನಡೆದಂತೆ ಭಾಸವಾಗುತ್ತದೆ. ಅದರೊಂದಿಗೆ ಮನಸ್ಸಿನಲ್ಲಿ ಆ ಮಾರ್ಗದ ಚಿತ್ರವೂ ಮೂಡುತ್ತಾ ಹೋಗುತ್ತದೆ. ಇದು ನಾವು ಸಾಗಿದ ಇಂಥದ್ದೇ ದಾರಿಗಳೂ, ಆ ದಾರಿಯಲ್ಲಿ ಕಂಡ ಸಂಗತಿಗಳನ್ನೂ ಕೂಡಾ ಸ್ಮರಣೆಗೆ ತಂದು ಕೂರಿಸುತ್ತದೆ.

ಪ್ರಕೃತಿಯ ಜೊತೆಗಿನ ಲೇಖಕರ ಗಾಢ ಒಡನಾಟವೇ ಇಲ್ಲಿನ ಪ್ರಬಂಧಗಳ ಸ್ಥಾಯೀ ಭಾವವಾಗಿದೆ. ಈ ಬರಹಗಳು ಅತ್ತ ಕೇವಲ ಮೇಲ್ನೋಟಕ್ಕೆ ಸಿಕ್ಕಿದ್ದಷ್ಟನ್ನು ಹಾಗು ಹಾಗೇ ಹೇಳಿಕೊಂಡು ಹೋಗುವ ಅವಸರದ ಅಭಿವ್ಯಕ್ತಿಯೂ ಅಲ್ಲದ, ಇತ್ತ ಆಳವಾದ ತಿಳುವಳಿಕೆ, ಅಧ್ಯಯನ ಸಂಶೋಧನೆಯಿಂದ ಮೂಡಿದ ಸಂಕೀರ್ಣ ಪರಿಭಾಷೆಯಲ್ಲಿ ಹೇಳಲ್ಪಟ್ಟ ಕ್ಲಿಷ್ಟಕರ ಮಂಡನೆಯೂ ಆಗಿರದೇ ಇವೆರಡರ ನಡುವೆ ಒಂದು ಸಮತೋಲನವನ್ನು ಕಾಯ್ದುಕೊಂಡಿರುವಂತದ್ದಾಗಿವೆ. ಎಷ್ಟೋ ಕಡೆಗಳಲ್ಲಿ ಲೇಖಕರು ಅಂಥ ಕ್ಲಿಷ್ಟ ವಿವರ, ವಿಚಾರಗಳು ಬರುವ ಸಾಧ್ಯತೆ ಇದ್ದ ಹೊರತಾಗಿಯೂ ಅವುಗಳನ್ನು ಅತ್ಯಂತ ಪ್ರಯತ್ನಪೂರ್ವಕವಾಗಿ ತಪ್ಪಿಸುವ ಮೂಲಕ ಅಗಾಧ ಸಂಯಮವನ್ನು ಕಾಯ್ದುಕೊಂಡಿದ್ದಾರೆ. ಪ್ರಕೃತಿ ಅನುಭವಕ್ಕೆ ಸಿಗಬೇಕಾದರೆ ಮನಸ್ಸಿನ ಧ್ಯಾನಸ್ಥ ಸ್ಥಿತಿ ಅತ್ಯಂತ ಅವಶ್ಯ ಎಂದೆನ್ನುತ್ತೇವಲ್ಲ, ಲೇಖಕರ ಅಂಥ ಏಕಾಗ್ರ ಮನಸ್ಸು ಇಲ್ಲಿನ ಪ್ರಬಂಧಗಳಲ್ಲಿ ಪ್ರತಿಫಲನಗೊಂಡಿದೆ. ಅದಕ್ಕೆ ಪೂರಕವೆಂಬಂತೆ ಏನನ್ನು ಹೇಳಬೇಕು ಎಂದುಕೊಂಡಿದ್ದಾರೋ ಅದನ್ನು ಹೇಳುವಲ್ಲಿ ಲೇಖಕರು ತೋರಿರುವ ಸಂಯಮ ಹಾಗೂ ಆಸ್ಥೆಯು, ಕುತೂಹಲದ ಕಣ್ಣು-ಕಿವಿ ತೆರೆದಿಟ್ಟ ಮಕ್ಕಳ ಮುಂದೆ ಕಥೆ ಹೇಳಲು ಸಜ್ಜಾಗಿ ಕುಳಿತ ಅಜ್ಜಿ ಆವಾಹಿಸಿಕೊಳ್ಳುವ ತಾಳ್ಮೆ, ಆಸಕ್ತಿಯನ್ನು ನೆನಪಿಸುತ್ತದೆ.

ಪ್ರಬಂಧಗಳಲ್ಲಿ ಬರುವ ಸನ್ನಿವೇಶಗಳ ಜೀವನಕ್ರಮಕ್ಕೂ ಇಂದಿಗೂ ಸಾಕಷ್ಟು ವ್ಯತ್ಯಾಸಗಳಿದ್ದಾಗಿಯೂ ಲೇಖಕರು ಅದನ್ನು ತಣ್ಣಗೆ ಸ್ವೀಕರಿಸುವ ಮನೋಭಾವ ಮೆರೆಯುತ್ತಾರೆಯೇ ವಿನಾ ಆ ಕುರಿತು ಯಾವುದೇ ಬಗೆಯ ಅಸಮಧಾನ, ಪ್ರಲಾಪಗಳನ್ನು ತೋಡಿಕೊಳ್ಳುವುದಿಲ್ಲ. ಇದು ಬರಹಗಳನ್ನು ಅಲ್ಲಲ್ಲಿ ಕಾಡಬಹುದಾಗಿದ್ದ ಸಂಭಾವ್ಯ ಹಳಹಳಿಕೆಯ ಛಾಯೆಯಿಂದ ಮುಕ್ತಗೊಳಿಸಿದೆ. ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಹಕ್ಕಿಗಳ ಕುರಿತಾದ ಪುಸ್ತಕ ಸಂಪುಟ ಕೊಂಡುಕೊಳ್ಳಲು ಬೇಕಾದಷ್ಟು ಹಣ ಇಲ್ಲದೇ ಇದ್ದ ಆ ಪರಿಸ್ಥಿತಿಯನ್ನು ಅಂದಿಗೆ ಅದು ಸಹಜವೆಂಬಂತೆ ಬಗೆದು ಒದಗಿದ ಬದಲಿಯ ವ್ಯವಸ್ಥೆಯ ಬಗ್ಗೆ ಹೇಳುತ್ತಾರೆ. ಆ ನೆಪದಲ್ಲಿ ತಮಗಿದ್ದ ಸವಾಲು, ತಾವು ಎದುರಿಸಿದ ಸಂಕಷ್ಟಗಳನ್ನೆಲ್ಲಾ ಹೇಳಿ ಅನುಕಂಪ ಗಿಟ್ಟಿಸಿಕೊಳ್ಳುವ ಯತ್ನ ಮಾಡದೇ, ಆ ಮಿತಿಗಳೇ ಅಂದಿನ ಬದುಕಿನ ಸೊಬಗೆಂಬಂತೆ ನಿರುಮ್ಮಳತೆಯಿಂದ ಹೇಳಿ ಮುಗಿಸುತ್ತಾರೆ‌.

ಕಾಲದ ಜೊತೆ ಅದೆಷ್ಟು ಸಂಗತಿಗಳು ಬದಲಾಗುತ್ತಾ ಸಾಗುವುದಲ್ಲವೇ? ಈಗ ನಮ್ಮ-ನಿಮ್ಮ ಊರ ಮಧ್ಯದಲ್ಲಿ ಇರುವ ಶಾಲೆಯೊಂದು ಹುಟ್ಟಿ ಬೆಳೆದುದರ ಹಿಂದಿನ ಕಥೆ ಈ ತಲೆಮಾರಿನ ಅದೆಷ್ಟು ಜನರಿಗೆ ತಾನೇ ಗೊತ್ತಿರಲು ಸಾಧ್ಯ? ಆ ಬೆಳವಣಿಗೆಯ ಹಾದಿಯನ್ನು ಅತ್ಯಂತ ಆಕರ್ಷಕವಾಗಿ ಪರಿಚಯಿಸಿದ್ದಾರೆ. ಇದು ಅರೇ.. ನಮ್ಮೂರಿನ ಶಾಲೆಗಳ ಹಿಂದೆಯೂ ಇಂಥದ್ದೇ ಅಸಂಖ್ಯಾತ ಕಥೆಗಳು ಅಡಗಿರಬಹುದು ಎಂಬ ಕುತೂಹಲದ ಎಳೆ ಓದುಗರ ಮನದಲ್ಲಿ ಮೂಡಿಸುತ್ತದೆ. ಆ ಬದಲಾವಣೆಗಳಿಗೆ ದನಿಯಾದ ಹಾಲಾಡಿಯವರ ಜತನ ಗಮನಸೆಳೆಯುತ್ತದೆ.

ಇಲ್ಲಿನ ಬಹುತೇಕ ಪ್ರಬಂಧಗಳು ವಿವರಣೆಗಳ ವಿಜ್ರಂಭಣೆ, ಪದಾಡಂಭರದ ಡೌಲು, ಅತಿಯಾದ ಅಲಂಕಾರ ಪ್ರಯೋಗ, ವಿಪರೀತವೆನಿಸುವ ಹೋಲಿಕೆಗಳ ಭಾರಗಳಿಂದ ಮುಕ್ತವಾಗಿವೆ. ಪ್ರಕೃತಿಯ ಜೊತೆಗಿನ ಲೇಖಕರ ಸುದೀರ್ಘ ನಂಟಿನಿಂದ ಪ್ರಾಪ್ತವಾದ ಸಾಂಧ್ರ ಅನುಭವಗಳೇ ಸಾದಾ ಸೀದಾ ಶೈಲಿಯ ಈ ಬರಹಗಳ ಗಟ್ಟಿತನವಾಗಿದೆ. ಅವರ ಆ ತಾದಾತ್ಮ್ಯ ಎಲ್ಲಾ ಬರಹಗಳಲ್ಲೂ ನಿಚ್ಚಳವಾಗಿ ಗೋಚರಿಸುತ್ತದೆ.

ಹಾಡಿಗೋ, ಹಕ್ಕಲಿಗೋ(ಇವುಗಳ ನಡುವಿನ ವ್ಯತ್ಯಾಸ ಸ್ಪಷ್ಟಪಡಿಸುವುದಕ್ಕೂ ಲೇಖಕರು ಆದ್ಯ ಗಮನಹರಿಸಿದ್ದಾರೆ!) ಹೋದರೆ ಕಾಣುವ ಪರಿಸರದ ಚಿತ್ರಣಗಳನ್ನೇ ತಮ್ಮದೇ ದೃಷ್ಟಿಕೋನದಲ್ಲಿ ಸರಳವಾಗಿ ಸ್ಕ್ಯಾನ್ ಮಾಡಿ, ಅಲ್ಲಿ ಮೂಡುವ ಚಿತ್ರಗಳನ್ನು ತುಂಬಾ ಆಳವಾಗಿ ಗಮನಿಸಿ ಬರೆದಿದ್ದಾರೆ. ಎಳವೆಯಿಂದಲೇ ಮೂಡಿದ ಅವರ ಆಸಕ್ತಿಯೇ ಅದಕ್ಕೆ ಕಾರಣ. ಆದಾಗ್ಯೂ ಅದನ್ನು ತೀರಾ ಶಾಸ್ತ್ರೀಯ ಅಥವಾ ಶಿಷ್ಟಗೊಳಿಸಲು ಮುಂದಾಗದೆ ಸ್ಥಳೀಯವಾಗಿ ಜನರ ಬದುಕಿನ ಭಾಗವಾಗಿಯೇ ಅವುಗಳನ್ನು ಕಟ್ಟಿಕೊಟ್ಟಿದ್ದಾರೆ.

ಅಳಿವಿನಂಚಿನಲ್ಲಿರುವ ಸಸ್ಯಗಳು, ಸ್ಥಳೀಯ ಪ್ರಾಣಿ ಪಕ್ಷಿಗಳು, ಸರ್ಪಗಂಧಿಯ ಬಗೆಗಿನ ಕುತೂಹಲ, ಬಿಳಿ ದಾಸವಾಳ ಬದುಕಿಗೆ ಬೆಸೆದುಕೊಂಡಿದ್ದ ರೀತಿಯಿಂದ ಹಿಡಿದು ಮನುಷ್ಯರ ಲೋಭದ ಫಲವಾಗಿ ನಡೆದ ಕಪ್ಪೆಗಳ ಬೇಟೆ, ಕಿಸ್ಕಾರ ಗಿಡ ಕಿತ್ತೊಯ್ದ ಕಥೆ, ಭಾರೀ ಬುಲ್ಡೋಜರ್‌ಗಳ ಆರ್ಭಟದವರೆಗೆ ಪ್ರಕೃತಿಯಲ್ಲಾಗುತ್ತಿರುವ ಬದಲಾವಣೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಗ್ರಹಿಸಿರುವುದು ಬರಹಗಳಲ್ಲಿ ಢಾಳಾಗಿ ಗೋಚರಿಸುತ್ತದೆ. ಈ ಬರಹಗಳಲ್ಲಿ ನಮ್ಮೊಳಗೆ ಇಳಿಯಬೇಕಾದ ಪರಿಸರದ ಬಗೆಗಿನ ಜಾಗೃತಿ ಹಾಗೂ ಕಳಕಳಿಯ ಒಸರೂ ಇದೆ.

ಕೆಲವೊಂದು ಅಂಶಗಳು ಬೇರೆ ಬೇರೆ ಪ್ರಬಂಧಗಳಲ್ಲಿ ಅಲ್ಲಲ್ಲಿ ಮತ್ತೆ ಮತ್ತೆ ಬಂದಿರುವುದರಿಂದ, ‘ಅಯ್ಯೋ ಇದು ಆಗಲೇ ಓದಿದ್ದೇನಲ್ಲ’ ಎಂಬ ಭಾವ ಮೂಡಿಸಿ ಕೆಲವೊಮ್ಮೆ ಓದಿನ ಸವಿಯನ್ನು ಕೊಂಚ ಪೇಲವಗೊಳಿಸುತ್ತದೆ. ಅಂಥವುಗಳನ್ನು ಮೊದಲೇ ಗುರುತಿಸಿ ಕತ್ತರಿ ಪ್ರಯೋಗ ಮಾಡಬಹುದಿತ್ತು. ಇನ್ನು ಒಂದು ನಿರ್ಧಿಷ್ಟ ಪ್ರದೇಶದಲ್ಲಷ್ಟೇ ಬಳಕೆಯಾಗುವ ಹಕ್ಕಲು, ಹಾಡಿ, ಬ್ಯಾಣ, ಕೊಳ್ ಹೂವು, ಒಳ್ಳೆ ಹಾವು, ಸೋಣೆ ಹೂವು ಓಲಿ ಕೊಡೆ ಇತ್ಯಾದಿಗಳನ್ನು ಎಲ್ಲಾ ಓದುಗರಿಗೂ ಅರ್ಥೈಸುವಂತೆ ಒಂದಷ್ಟು ಪರಿಚಯಾತ್ಮಕ ವಿವರಣೆ ಸೇರಿಸುವ ಅಗತ್ಯವಿತ್ತು.

ನಮ್ಮ ಸುತ್ತಲಿನ ಪರಿಸರವನ್ನು ನಾವು ಹೇಗೆ ಕಂಡರೆ ಅದು ನಮಗೆ ದಕ್ಕೀತು ಎನ್ನುವುದಕ್ಕೆ ಒಂದು ಅನುಕರಣೀಯ ಮಾದರಿಯ ಈ ಪ್ರಬಂಧಗಳಲ್ಲಿ ಅಡಕವಾಗಿದೆ‌. ನಮ್ಮ ಕುತೂಹಲದ ಕಣ್ಣೋಟಗಳನ್ನು ಇನ್ನಷ್ಟು ಸೂಕ್ಷ್ಮಗೊಳಿಸಿ, ಹದಗೊಳಿಸುವ ಹಾಗೂ ಅದರ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸುವ ನಿಟ್ಟಿನಲ್ಲಿ ಇಲ್ಲಿನ ಬರಹಗಳು ಬಲು ಉಪಯುಕ್ತವಾಗಿವೆ. ಈ ಬರಹಗಳ ಚುಂಗು ಹಿಡಿದು ಸಾಗಿದಂತೆ ಸುಂದರ ಪರಿಸರದ ಭಾಗವಾದ ನಾವು ನಮ್ಮ ಬದುಕಿನಲ್ಲಿ ಕಳೆದುಕೊಂಡಿದ್ದೇನು ಹಾಗೂ ಕಳೆದುಕೊಳ್ಳುತ್ತಿರುವುದೇನು ಎನ್ನುವುದು ನಮ್ಮ ಮುಂದೆಯೇ ತೆರೆದುಕೊಳ್ಳುತ್ತಾ ಹೋಗುತ್ತದೆ.

‍ಲೇಖಕರು Admin

March 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: