ಸಂತೋಷ್ ಅನಂತಪುರ ಲಹರಿ- ಮೌನದೊಳಗಿನ ಕಥನ

ಸಂತೋಷ್ ಅನಂತಪುರ

ನಾವು ಮನುಷ್ಯರಾಗಿರುವುದರಿಂದಲೇ ಬಾಂಧವ್ಯಗಳು ನಮ್ಮನ್ನು ಸುತ್ತುವರಿದಿರುತ್ತವೆ ಮತ್ತು ಭವ ಬಂಧನಗಳಲ್ಲಿ ಬಂಧಿಯಾಗಿಯೂ ಇರುತ್ತೇವೆ. ಪ್ರಾಣಿಯಾಗಿರುತ್ತಿದ್ದರೆ ಇವುಗಳ್ಯಾವುದರ ಹಂಗೂ ಇರುತ್ತಿರಲಿಲ್ಲ ಬಿಡಿ.  ಹಾಗಂತ ನಮ್ಮಲ್ಲಿ ಮನುಷ್ಯ ಪ್ರಾಣಿಗಳಿಲ್ಲವೆಂದಲ್ಲ, ಇವೆ ಕೆಲವೊಂದಿಷ್ಟು! ಅವುಗಳು ಆಗಾಗ ಊಳಿಡುವುದಿದೆ. ಕಾಲು ಕೆರೆದು ಜಗಳಕ್ಕೆ ನಿಲ್ಲುವುದೂ ಇದೆ.  ಪರಾವಲಂಬಿಯಾಗಿದ್ದುಕೊಂಡೇ ಉಸಿರಾಡುವುವುಗಳಿಗೆ ಸ್ವಾಲಂಬಿಯಾಗಿ ಬದುಕನ್ನು ಸವೆಯುವ ದರ್ದು ಇಷ್ಟವಿರುವುದಿಲ್ಲವಷ್ಟೇ.  ಹೀಗಿರಲು ಭೂಮಿಗೇ ಭಾರವೆನಿಸಿಕೊಂಡು ಕಾಯ ಅಳಿಯುವ ನಿಟ್ಟಿನಲ್ಲಿ ದಿನ ನೂಕುವ ಜೀವಗಳಿಗೇನು ಕಡಿಮೆಯಿಲ್ಲ.

ಯಾವುದೇ ಅಪೇಕ್ಷೆ-ನೀರಿಕ್ಷೆಗಳಿಗೆ ಮುಖವೊಡ್ಡದೆ ಪ್ರೀತಿ-ಕಾಳಜಿಗಳನ್ನು ಬಂಧಗಳು ಹರಿಸುತ್ತಲಿರುತ್ತವೆ.  ಮಮತೆಯನ್ನು ಹರಿಸಲು ಇಂತಹದ್ದೇ  ಕಾರಣ ಬೇಕೆನ್ನುವ  ನಿಯಮವಲ್ಲಿಲ್ಲ. ಹರಿಯುವುದು ಮತ್ತು ಹರಿಸುವುದಷ್ಟೇ ಖಡ್ಡಾಯವಾಗಿರುವ ಭಾವಸ್ಥಿತಿಯ ಹೊದಿಕೆಯದು.  ಯಾಕೆ? ಎಂದು ಕೇಳಿದರೆ ಸ್ಪಷ್ಟ ಉತ್ತರ ದೊರೆಯುವುದಿಲ್ಲ.ಇಷ್ಟವಾಯಿತು. ಅಷ್ಟಕ್ಕೇ ಇಷ್ಟ್ಟೆಲ್ಲಾ.. ಎನ್ನುವ ಒಲುಮೆಪೂರಿತ ನಿಲುವಿಗೆ ಬದ್ಧರಾಗುತ್ತೇವೆ. ನಮ್ಮ ಸುತ್ತಲೂ ಕಾದು ಪೊರೆಯುವ ಪ್ರೀತಿಯ ಬಂಧಗಳ ಅರಿವು ನಮಗಿರುವುದಿಲ್ಲವಷ್ಟೆ.

ಬೆಚ್ಚಗಿನ ಸ್ಪರ್ಶವೊಂದರ ಸುಖದಲ್ಲಡಗಿದ ಅಸಂಖ್ಯ ಕೋಟಿ ಪ್ರಶ್ನೆಗಳಿಗೆ ಪಟಪಟನೆ ಅರ್ಥವೊಂದು ಮೂಡಿದ್ದೇ ತುಟಿಯಂಚಿನಲ್ಲಿ ಮಂದಹಾಸವೊಂದು ಮಿನುಗಿ ಶಾಂತವಾಗಿ ಹರಿದು ಸರಿದು ಬಿಡುತ್ತದೆ. ಕೊಟ್ಟು ತೆಗೆದುಕೊಳ್ಳುವ ಮಟ್ಟಕ್ಕಿಂತಲೂ ಹಿರಿದಾದ, ಪದಗಳಲ್ಲೂ ವ್ಯಕ್ತಪಡಿಸಲಾಗದ ಭಾವಸ್ಥಿತಿಯ ಅನುಭವದ ಗತಿಯೊಳಗೆ ನಾವಿರುತ್ತೇವೆ. ಅಂತಹ ಭಾವುಕ ಗಳಿಗೆಗಳು ಬದುಕಲ್ಲಿ ಆಗಾಗ ಬಂದು ಹೋಗಿ ಮಾಡುವುದಿದೆ. ವಯೋ ಸಹಜ ಅಹಂಕಾರ, ಮದ, ದೌರ್ಬಲ್ಯ, ಆಕರ್ಷಣೆ, ಚಿತ್ತ ಚಾಂಚಲ್ಯತೆ, ಸ್ವಾರ್ಥಗಳಿಂದ ದೂರವಿರಬೇಕೇ  ಹೊರತು, ಅವುಗಳಿಗೆ ಬಲಿಯಾಗದಂತೆ ಸದಾಕಾಲ ಕಾಪಿಡುವ ಭವದ ಬಂಧಗಳಿಂದಲ್ಲ.   

***

ಭ್ರಮೆಗಳು ಸೃಷ್ಟಿಸುವ ನಶೆಯ ಅವಾಂತರವು ಒಂದಷ್ಟು ಗೋಜಲನ್ನು ನಿರ್ಮಿಸುವುದಿದೆ. ನಶೆಯಿರಬೇಕು ಸರಿ. ಆದರೆ ತಲೆಗೇರಿಸಿಕೊಳ್ಳುವಷ್ಟು ಇರಬಾರದು. ವಾಸ್ತವದ ಕಾವಲಿಯಲ್ಲಿ ಸುಡುತ್ತಿರಲು ಅದರಿಂದ ಹೊರಬಂದು ತುಸು ಹೊತ್ತು ತೇಲುವಷ್ಟು ನಶೆಯಿದ್ದರೆ ಸಾಕು. ಭ್ರಮೆಯ ನಶೆಗೆ ವಾಸ್ತವತೆಯ  ಹಂಗಿರುವುದಿಲ್ಲ. ಅದಕ್ಕೆ ನಶಿಸುವ ಕಲೆ ಮಾತ್ರ ಸಿದ್ಧಿಸಿರುತ್ತದೆಯೇ ವಿನಃ  ಸೃಜಿಸುವ ನೈಪುಣ್ಯತೆಯನ್ನು ಅದು ಹೊಂದಿರುವುದಿಲ್ಲ. 

ಸುಂದರ ಬದುಕು ದಿಢೀರೆಂದು ಉದ್ಭವಿಸುವುದಿಲ್ಲವಲ್ಲ? ಪ್ರೀತಿ, ತಾಳ್ಮೆ, ಸಂತೋಷ, ತ್ಯಾಗಗಳಿಂದ ಮೊಳೆತು ಚಿಗುರಿ ಬದುಕು ಬೆಳೆಯುತ್ತದೆ. ಬೆಳೆದು ಬೆಳಗುತ್ತದೆ. ಮಾಡಿದ ಸತ್ಕಾರ್ಯ, ಮೆರೆದ ಔದಾರ್ಯಗಳ ಜೊತೆಗೆ ಆನಂದಿಸಿ ಅನುಭವಿಸಿದ ನೆನಪುಗಳೂ ತೋರಣದಂತೆ ನೆತ್ತಿಯ ಮೇಲೆ ಯಾವತ್ತೂ ತೂಗುತ್ತಿರುತ್ತದೆ. 

ಅದೆಷ್ಟೋ ಮಂದಿಗೆ ಹೇಳುವವರು-ಕೇಳುವವರು, ನಮ್ಮವರು-ತಮ್ಮವರು, ಹಿಂದು-ಮುಂದು, ಬಂಧು-ಬಾಂಧವರೇ ಇರುವುದಿಲ್ಲ. ಕೆಲವೊಮ್ಮೆ ಇದ್ದರೂ ಇಲ್ಲದಂತಿರುವ ಅವುಗಳು ಲೆಕ್ಕಕ್ಕಿರುವುದಿಲ್ಲವಷ್ಟೇ. ಹಾಗಿರಲು ಪ್ರಶ್ನಿಸುತ್ತಾರೆಂದು ಸಿಡುಕದೆ, ಪ್ರಶ್ನೆಗಳನ್ನೇ ಅವಕಾಶವನ್ನಾಗಿಸಿ ಕೊಳ್ಳಬೇಕಲ್ಲವೇ ?  ಹಾಗೆ ಪ್ರಶ್ನಿಸುವವರು ಕೂಡಾ ನಮ್ಮವರೇ ಎಂದು ತಿಳಿಯಲ್ಪಟ್ಟು ಲೋಕವು ನೀಡಿದ ವರವದು ಎಂದದನ್ನು ಬಳಸಿ-ಬೆಳೆಸಿ-ಉಳಿಸಿಕೊಳ್ಳಬೇಕು. ಶಾಪಗಳನ್ನು ವರಗಳನ್ನಾಗಿಸುತ್ತಾ, ಚಿಂತೆಗಳನ್ನು ಪ್ರಾರ್ಥನೆಗಳನ್ನಾಗಿಸುತ್ತಾ, ಬಯಸಿದ್ದನ್ನು ಸಾಧಿಸಲಾಗದಂತೆ ನಾವೇ ಕಟ್ಟಿಕೊಂಡ ಗೋಡೆಗಳ ಸೆರೆಮನೆಯಿಂದ ಹೊರ ಬರಬೇಕು. ಆಗಲೇ ಸಾಧನೆಯ ಹಾದಿಯು ಸುಗಮವಾಗಿ ಗಮ್ಯವು ಸ್ಪಷ್ಟವಾಗಿ ಗೋಚರಿಸ ತೊಡಗುತ್ತದೆ. 

***

ಪುಣ್ಯ ಏರುವಾಗ ನೋಯಿಸುವವರ ಸಂಖ್ಯೆ ಹೆಚ್ಚಾಗುವುದು ಸಹಜವಷ್ಟೆ. ತಪ್ಪುಗಳು ಅನ್ಯರದ್ದೇ ಇದ್ದರೂ ಕೆಲವೊಮ್ಮೆ ಅದಕ್ಕೆ ಪ್ರತಿಕ್ರಿಯಿಸಿದ ರೀತಿಯು ಕ್ಷಮಿಸಿಬಿಡು ಎಂದು ನಮ್ಮಿಂದ ಹೇಳಿಸಿ ಬಿಡುತ್ತದೆ. ಇದು ನಮ್ಮನ್ನು ನಾವು ಕಂಡುಕೊಳ್ಳಲಿಕ್ಕಿರುವ ಬಗೆಯಾಗಬೇಕು. ಹಾಗೆ ಕಂಡುಕೊಳ್ಳುತ್ತಲೇ ಬೆಳೆಯುತ್ತಿರಬೇಕು. ಅಂತಹ ಸೂಕ್ಶ್ಮತೆಗಳಿದ್ದಲ್ಲಿ ಮಾತ್ರ ಹೆಣೆದ ಬದುಕು ಸುಂದರವೆನಿಸಿ ಬಿಡುವುದು. 

ಮನಸ್ಸು ಬೆರೆಯದೆ ದೇಹಗಳು ಬೆಸೆಯುವುದುಂಟೇ? ಮನಸ್ಸುಗಳನ್ನು ಬೆಸೆಯಲಿರುವ  ಪರಿಕರವಷ್ಟೇ ದೇಹ. ದೇಹದ ಬಯಕೆಗಳ ಇಷ್ಟಾರ್ಥಗಳನ್ನು ಸಿದ್ದಿಸುವ ನಿಟ್ಟಿನಲ್ಲಿ ಬಹಳಷ್ಟು ಬಾರಿ ಎಡವಿ ಬೀಳುವುದಿದೆ. ಕತ್ತಲೊಳಗೆ ಬೆತ್ತಲಾಗುವುದು ಸಹಜವಷ್ಟೆ. ಬೆತ್ತಲಾದಷ್ಟು ಪರಸ್ಪರರನ್ನು ತಬ್ಬಲು, ಎತ್ತಲು ಸಹಕಾರಿ.  ಆದರೆ ದಟ್ಟ ಹಗಲೂ ಬೆತ್ತಲಾದೆವೆಂದರೆ ಹೇಗಿರಬೇಡ ಪರಿಸ್ಥಿತಿ? ಅಹಮಿಕೆಯನ್ನು ಹದ್ದುಬಸ್ತಿನಲ್ಲಿಡದೆ ಇದ್ದುದರ ಫಲವದು. ಜೊತೆಗೆ ತೆವಲು ಸೃಷ್ಟಿಸುವ ಅವಾಂತರವೂ ಹೌದು. 

ಮನಸ್ಸಿದೆ ನೋಡಿ ಅದರಂತಹ ದುಷ್ಟವೂ-ಶಿಷ್ಟವೂ ಮತ್ತೊಂದಿಲ್ಲ. ಬೇಕೆಂದರೆ ಬೇಕೆಂದೂ, ಬೇಡವೆಂದರೆ ಬೇಡವೆಂದೂ ಗೊಣಗುತ್ತಲೇ ತನಗನಿಸಿದ್ದನ್ನು ಕ್ಷಣಕ್ಷಣಕ್ಕೂ ಬದಲಾಯಿಸುತ್ತ ಪಡೆದುಕೊಳ್ಳುತ್ತಿರುತ್ತದೆ. ತಾನೂ ಸುಡುವುದಲ್ಲದೆ ಅನ್ಯರನ್ನೂ ಸುಡುವ ಮನಸ್ಸಿನಾಟಕ್ಕೆ ಕೊನೆಯುಂಟೇ ?

***

ಪಶ್ಚಾತಾಪ, ಪ್ರತಿಭಟನೆಗಳೇನಿದ್ದರೂ ಮಾತು ಹಾಗು ಕ್ರಿಯೆಗಳ ಮೂಲಕ ಹುಟ್ಟಿಕೊಳ್ಳುವಂತದ್ದು. ಆತ್ಮವಿಮರ್ಶೆಯ ಹಾದಿಯಲ್ಲಿ ನಾವು ನಮ್ಮೊಳಗಿಳಿದ ಅವುಗಳನ್ನು ನಾಶಪಡಿಸಬೇಕು. ನಮ್ಮನ್ನು ನಾವು ಬದಲಿಸಿಕೊಳ್ಳಲಿರುವ ಮತ್ತು ಇಹವನ್ನು ಬದಲಿಸಲಿರುವ ಪ್ರಕ್ರಿಯೆ ಅದೆಂದು ತಿಳಿಯಬೇಕು. ಜೀವನದೊಂದಿಗೆ ಸಂಪರ್ಕದ ಕೊರತೆಯಿದೆ ಎಂದೆನಿಸುವುದೇ ಇಂತಹ ಕ್ಷಣಗಳಲ್ಲಿ. ಬದುಕಿನೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಬೇಕಿದೆಯೆಂಬ ಸಮಯದ ಅರಿವು ಇರಬೇಕಾದ ತುರ್ತಿದೆ.   

ಜೀವನವನ್ನು ಕೇವಲ ವಿಸ್ತರಿಸಿಕೊಳ್ಳುವ ಬದಲು ಜೀವನದೊಂದಿಗಿನ ಸಂಪರ್ಕವನ್ನು ಸಾಧಿಸಿ ಬದುಕನ್ನು ಅಭಿವೃದ್ಧಿಪಡಿಸಬೇಕು. ಕೆಲವೊಮ್ಮೆ ನಮ್ಮದಲ್ಲದ ಹಾದಿಯಲ್ಲಿ ನಡೆಯುತ್ತಿರುತ್ತೇವೆ… ಆ ಹೊತ್ತಿಗೆ ಅದು ನಮ್ಮದಲ್ಲದ್ದು  ಹಾದಿ ಎಂಬ ಅರಿವು ಮೂಡಿರುವುದಿಲ್ಲ. ಅರಿವು ಮೂಡಿದ ಗಳಿಗೆಯಲ್ಲಿ ಮತ್ತದೇ ಹಾದಿಯನ್ನು ತುಳಿಯುವ ತಪ್ಪನ್ನು ಮಾಡದೆ ಥಟ್ಟೆ೦ದು ತುಳಿದ ಹಾದಿಯನ್ನು  ಬದಲಿಸಿ ಬಿಡಬೇಕು. ರಹದಾರಿಯಲ್ಲಿ ಮೂಡುವ ಹೆಜ್ಜೆಗಳಿವೆ ನೋಡಿ, ಅವು ಖರೆಯಾಗಿಯೂ ನಮ್ಮವೇ ಆಗಿರುತ್ತವೆ. 

ನಭಕೆ ಹಬ್ಬಿದ ಕತ್ತಲನ್ನು ಓಡಿಸಲು ತಾರೆಗಳು ಸತತವಾಗಿ ಹೇಗೆ ಪ್ರಯತ್ನ ಪಡುತ್ತವೋ, ಅಂತೇ ನಾವೂ ಮಬ್ಬಾಗಿಸಿದ ನಮ್ಮ ದಾರಿಯ ಕತ್ತಲನ್ನು ಓಡಿಸಿ ಬೆಳಕನ್ನು ಹಬ್ಬಿಸಲು  ಪ್ರಯತ್ನ ಪಡಬೇಕು. ಹಾಗೊಮ್ಮೆ ಹುಡುಕಿ ದೊರೆತ ಬೆಳಕಿನ ಹಾದಿಯಲ್ಲಿ ನಡೆಯುವಾಗ ಅದೆಲ್ಲೋ ಬಿರಿದ ದೇವಗಂಧ ಪುಷ್ಪವು ಗಾಳಿಯಲ್ಲಿ ತೇಲುತ್ತಾ ಬಂದು ನಮ್ಮನ್ನು ತಬ್ಬಿಕೊಂಡು ಬಿಡುವುದುಂಟು. ಕೈಗೇ ಸಿಗದ ಆ ಸುಗಂಧವು ಉದ್ದೀಪಿಸುವ ಬಗೆ ಅದೆಂತಹದ್ದು…ಅಬ್ಬಾ ! 

***

ನಮ್ಮದೇ ಹಾದಿಯನ್ನು ಕಂಡುಕೊಂಡು ನಡೆಯುವಾಗ, ನಮ್ಮವೇ ಹೆಜ್ಜೆಗಳನ್ನು ಪಡಿಮೂಡಿಸುವ ಹೊತ್ತಲ್ಲಿ, ಬಯಸದೆ ಸುರಿಯುವ ಬೊಗಸೆಯಷ್ಟು ಅಚ್ಚರಿಗಳು ಎದೆಯೊಳಗಿನ ಮಿದುವನ್ನು ಮಿಸುಕಾಡಿಸಿ ಬಿಡುವುದುಂಟು. 

ಒಳ ಮನಸ್ಸಿನ ಆಲೋಚನೆ, ಹೃದಯ ಮಿಡಿತದ ಭಾವನೆಗಳು ಎಲ್ಲವೂ ಸೇರಿ ನಮಗರಿಯದೇ ನಾಟಕವಾಡಿ ಬಿಡುತ್ತೇವೆ. ಅಷ್ಟರಲ್ಲಿ ವಿದೂಷಕನ ಪಾತ್ರವೊಂದು ಅಲ್ಲಿ ಹುಟ್ಟಿ ಎಲ್ಲಿಯೂ, ಎಷ್ಟೇ ಹೊತ್ತಲ್ಲೂ ಸಲ್ಲಲ್ಪಡುವ ಸೃಷ್ಟಿಯ ಸ್ಥಿತಿಯೊಂದು ನಿರ್ಮಾಣವಾಗಿ ಬಿಡುತ್ತದೆ. ಅದಕ್ಕೆ ಪ್ರತ್ಯೇಕವಾದ ಅಸ್ತಿತ್ವವಿರುವುದಿಲ್ಲ. ಭೂತ ಭವಿಷ್ಯವಿದ್ದರೆ ಮಾತ್ರ ವರ್ತಮಾನಕ್ಕೆ ಅರ್ಥ. ಎಡ-ಬಲವಿದ್ದರೆ ಮಾತ್ರ ಹೃದಯ ಮಧ್ಯಕ್ಕೊಂದು ಸ್ಥಾನ-ಮಾನ. ಹಾಗಾಗಿ ಮನಸ್ಸು-ಹೃದಯಗಳ ನಡುವೆ ನಾಟಕಕ್ಕೆ ಎಂದಿಗೂ ಆಸ್ಪದ ಸಲ್ಲ.

ಹಾಗೊಂದು ವೇಳೆ ನಾಟಕವಾಡಿದ್ದೇ ಆದಲ್ಲಿ ನಮ್ಮನ್ನು ನಾವೇ ಕ್ಷಮಿಸಲಾರದ ಮಟ್ಟಕ್ಕೆ ಕೊಂಡೊಯ್ದು ಬಿಡುತ್ತೇವೆ ಎಂಬ ಪ್ರಜ್ಞೆ ಜಾಗೃತವಾಗಿರಬೇಕು.ಯೋಚನೆ, ಅಭಿಪ್ರಾಯಗಳನ್ನು ಭಾವನೆಗಳ ಕಗ್ಗಂಟಾಗಲು ಬಿಡಬಾರದು. ಸ್ಪಂದನದ ಜೀವನ, ಮಿಡಿದು ತುಳುಕುವ ಬಡಿತಗಳೇ ನಮ್ಮುಸಿರಾದರೆ ಬದುಕನ್ನು ಅರಿಯುವುದೊಂದು ಸಹಜ ಕ್ರಿಯೆಯಾಗಿ ಬಿಡುತ್ತದೆ. ಅವೆಲ್ಲದಕ್ಕೂ ಮೊದಲು ಬಾಯಿ ತೆರೆಯುವ ತಪ್ಪನ್ನು ಮಾಡದೆ, ಮನಸ್ಸನ್ನು ತೆರೆದಿಡುವ ಕಲೆಯನ್ನು ರೂಢಿಸಿಕೊಳ್ಳಬೇಕು. ಮೌನದೊಳಗೆ ಕಥಿಸುವ ಕಥನಕ್ಕಾಗಿ ಮನಸ್ಸು ಮತ್ತಷ್ಟು ಹಂಬಲಿಸುತ್ತಿರಲು- ನಮ್ಮನ್ನು ನಾವಲ್ಲಿ ಕಾಣುತ್ತಿರಬೇಕು.

‍ಲೇಖಕರು Admin

September 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: