ಸಂತೋಷ್ ಅನಂತಪುರರ ‘ರುಚಿ ಕಹಾನಿ’

ಸಂತೋಷ್ ಅನಂತಪುರ

ಆಯಾ ಪ್ರದೇಶದ ವಿಶಿಷ್ಟತೆಗಳನ್ನು ಅರಿಯಬೇಕಿದ್ದರೆ ಮತ್ತು ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಗುಣ-ವಿಶೇಷಣಗಳನ್ನು ತಿಳಿದುಕೊಳ್ಳಬೇಕಿದ್ದರೆ ಮೊದಲು ಆ ಪ್ರದೇಶದ ಆಹಾರವನ್ನು ಸವಿಯಬೇಕು. ಆಗಲೇ ಆ ಮಣ್ಣಿನ ಸೊಗಡನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಜಿಹ್ವಾಚಾಪಲ್ಯವನ್ನು ನಿಯಂತ್ರಿಸುವುದು ಬಹಳ ಕಷ್ಟ.

ಮನುಷ್ಯನ ಮುಖ್ಯ ಕಾಮನೆಗಳಲ್ಲಿ ರುಚಿಯನ್ನು ಹೊತ್ತು ತರುವ ವಿವಿಧ ಬಗೆಯ ಆಹಾರಗಳು ಕೂಡ ಒಂದು. ತಿನ್ನುವುದನ್ನು ಸೊಗಸಾಗಿ ತಿನ್ನಬೇಕು. ಸೊಗಸಾಗಿ ತಿನ್ನಬೇಕಿದ್ದರೆ ಅದು ರುಚಿಯಾಗಿರಬೇಕು-ಶುಚಿಯಾಗಿರಬೇಕು. ಸೊಗಸಾಗಿ ತಿನ್ನುವುದು ಕೂಡ ಒಂದು ಕಲೆ. ರುಚಿಯಾದ ಆಹಾರವನ್ನು ಹುಡುಕಿಕೊಂಡು ಅದೆಷ್ಟು ದೂರಬೇಕಿದ್ದರೂ ಹೋಗಿ ತಿಂದುಂಡು, ಚಪ್ಪರಿಸಿಕೊಂಡು ಬರುತ್ತೇವಲ್ಲ.. ಅದು ಬಾಯಿ ರುಚಿಯ ತಾಕತ್ತು.

ನನಗೋ ಬಾಯಿ ರುಚಿ ಮೊದಲೇ ಹೆಚ್ಚು. ಉಪ್ಪು-ಹುಳಿ-ಖಾರದ ಮಿಶ್ರಣ ಸರಿಯಾಗಿರಬೇಕು. ಅಡುಗೆ ಖಾರವಿರಲೇಬೇಕು! ಖಾರವೇ ಒಂದು ರುಚಿ. ತಿನ್ನುವುದು ಕಡಿಮೆಯಾದರೂ ಅದು ರುಚಿಯಾಗಿರುವುದು ಕಡ್ಡಾಯ. ಸಿಹಿ-ಹದ-ಖಾರ ಅಂತ ರುಚಿಗಳಲ್ಲಿ ಮೂರೂ ವಿಧ. ನನ್ನ ಆಯ್ಕೆ ಮೂರನೆಯದ್ದು- ಖಾರ. ಹಾಗಿರಲು ಬಹಳಷ್ಟು ಬಾರಿ ನಾನು ನಿರಾಶನಾದದ್ದಿದೆ ಮತ್ತು ನಿರಾಶನಾಗುತ್ತೇನೆ ಕೂಡ. ಕಾರಣ ನನ್ನ ರುಚಿಗೆ ಸರಿಗಟ್ಟಾದ ಪಾಕಮನೆಗಳು ವಿರಳಾತಿ ವಿರಳ. ಇದ್ದರೂ ಅವುಗಳು ಇವೆಯಷ್ಟೇ ಎನ್ನುವಂತವುಗಳು. ‘ಖಾರ’ ಅಂದ ಮಾತ್ರಕ್ಕೆ ಮೆಣಸಿನ ಪುಡಿಯನ್ನು ಉದುರಿಸುವುದಲ್ಲ. ಅಮೂಲಾಗ್ರ ಮಸಾಲೆಯಲ್ಲಿಯೇ ಖಾರದ ಮಿಶ್ರಣವಿದ್ದರೇನೇ ಪಾಕಕ್ಕೆ ಖಾರದ ರುಚಿ ಬರುವುದು.

ಆಹಾರದ ಬಗ್ಗೆ ತುಸು ಹೆಚ್ಛೇ ಒಲವಿರುವ ನಾನು ಹಲವಾರು ಟಿವಿ ಶೋಗಳನ್ನು ನೋಡುತ್ತಿರುತ್ತೇನೆ. ಹೊಟ್ಟೆಪಾಡಿಗಾಗಿ ಸಂಚಾರಿಯಾಗುವ ಹೊತ್ತಲ್ಲಿ- ಎಲ್ಲೆಲ್ಲಿ, ಯಾವ್ಯಾವುದು ಚೆನ್ನಾಗಿರುತ್ತವೆ ಎನ್ನುವುದನ್ನು ಟಿವಿ ಶೋಗಳನ್ನು ನೋಡಿ ಮಾಹಿತಿಯನ್ನು ಸಂಗ್ರಹಿಸಿ ಟಿಪ್ಪಣಿ ಮಾಡಿಟ್ಟುಕೊಳ್ಳುತ್ತೇನೆ. ಇಂತಹ ಟಿಪ್ಪಣಿಗಳು ನನ್ನ ಯಾತ್ರೆಗಳಲ್ಲಿ ಸಹಕಾರಿ. ಅವುಗಳ ಆಧಾರದ ಮೇಲೆ ಪಾಕಮನೆಗಳಿಗೆ ಭೇಟಿ ನೀಡಿ, ಇಂದ್ರಿಯಗಳನ್ನು ತೃಪ್ತಿ ಪಡಿಸಿಕೊಂಡು ಬರುವುದು ವಾಡಿಕೆ.

ಅಂತಹ ಒಂದು ಯಾತ್ರೆಯಲ್ಲಿ ನನಗೆದುರಾದವರೇ ‘ರೊಕಿ ಸಿಂಗ್ ಮತ್ತು ಮಯೂರ್ ಶರ್ಮಾ’. ಇವರಿಬ್ಬರು ‘ಎನ್ ಡಿಟಿವಿ ಗುಡ್ ಟೈಮ್ಸ್’ ಚಾನೆಲ್ ನಲ್ಲಿ ‘ಹೈವೆ ಆನ್ ಮೈ ಪ್ಲೇಟ್’ ಎಂಬ ಕಾರ್ಯಕ್ರಮವನ್ನು ನಡೆಸುತ್ತ, ಎಲ್ಲೆಲ್ಲಿ, ಏನೇನು ರುಚಿಯಾದ ಖಾದ್ಯಗಳು ಸಿಗುತ್ತವೆ ಎನ್ನುವುದನ್ನು ಚಪ್ಪರಿಸಿ ಹೇಳಿ ತೋರಿಸುತ್ತಾರೆ. ಆ ಪ್ರದೇಶದಲ್ಲಿ ಶ್ರೇಷ್ಠತಮವಾದ ರುಚಿಯನ್ನು ಉಣ ಬಡಿಸುವ ಪಾಕಮನೆಗಳ ಬಗ್ಗೆ ವಿವರಿಸುತ್ತಾ, ರುಚಿಯ ವಿಶ್ಲೇಷಣೆಯನ್ನು ಮಾಡುತ್ತಾ, ನೋಡುವವರ ಬಾಯಲ್ಲಿ ನೀರುಕ್ಕಿ ಇನ್ನೇನು ತುಟಿ ತೆರೆದು ಸುರಿದೇ ಬಿಟ್ಟಿತು ಅನ್ನುವಷ್ಟರ ಮಟ್ಟಿಗೆ ರುಚಿಯ ಎಸಳನ್ನು ಬಿಡಿಬಿಡಿಸಿ ಹೇಳುತ್ತಾರೆ.

ಅಂದೊಮ್ಮೆ ನಾನು ಆ ಒಂದು ಊರಲ್ಲಿ ಇವರಿಬ್ಬರು ಹೆಚ್ಚು ಅಂಕ ಕೊಟ್ಟಿದ್ದ ಅಲ್ಲಿನ ಪಾಕಮನೆಗೆ ನುಗ್ಗಿದ್ದೆ. ಅಲ್ಲಿ ತಿನ್ನಲೇಬೇಕಾದ ಐಟಂಗಳನ್ನು ಸೊಗಸಾಗಿ ತಿಂದು, ರುಚಿಯನ್ನು ಇಂದ್ರಿಯಗಳಿಗೆಲ್ಲ ಮೆತ್ತಿಸಿಕೊಂಡು ನಾನುಳಿದಿದ್ದ ಹೋಟೆಲಿಗೆ ಬಂದಿಳಿದರೆ- ‘ಧುತ್..’ ಎಂದು ಇವರಿಬ್ಬರು ಎದುರಿಗೆ ಸಿಗಬೇಕೇ! ಸವಿದ ನಾಲಗೆಗೂ, ತುಂಬಿದ ಹೊಟ್ಟೆಗೂ, ರುಚಿಯನ್ನುಇಳಿಸಿಕೊಂಡ ಇಂದ್ರಿಯಗಳಿಗೂ ‘ರೊಕಿ-ಮಯೂರ’ರನ್ನು ಕಂಡದ್ದೇ ‘ಅಬ್ಬಾ..’ ಎನ್ನುತ್ತಾ ಉಂಡು ತೇಗಿದ ಸಮಾಧಾನ.

ಅಪ್ಪಟ ಗೃಹಸ್ಥನಾಗಿರುವ ಈ ಸಮಯದಲ್ಲಿ ಒಂದೊಂದೇ ರುಚಿಗಳು ನಾಲಗೆಯ ತುದಿಯಲ್ಲಿ ಆಡಲು ತೊಡಗಿದ್ದೇ-ಅಡುಗೆ ಮನೆಗೆ ಬಲಗಾಲಿಟ್ಟು ಪ್ರವೇಶಿಸಿ ‘ಕಂಕಭಟ್ಟ’ನಾಗಿ ರಂಗಕ್ಕಿಳಿದೆ. ಅಪ್ಪ-ಅಮ್ಮಂದಿರ ಕಡೆಯಿಂದ ಒಂದಷ್ಟು ಕೈ ನೈಪುಣ್ಯದ ಪುಣ್ಯ ನನಗೂ ದಕ್ಕಿದ ಪರಿಣಾಮ ನಳಪಾಕವನ್ನು ತಯಾರಿಸಿ ಉಣಿಸಿ ಬಡಿಸಿ, ನಾಲಗೆಯ ತುದಿಯಲ್ಲಿ ಕುಣಿಯುತ್ತಿದ್ದ ರುಚಿಗಳನ್ನು ಒಂದಷ್ಟು ತಹಬದಿಗೆ ತಂದು ನಿಲ್ಲಿಸಿದೆ. ಈ ಪ್ರಕ್ರಿಯೆಯ ನಡುವೆ ಥಟ್.. ಎಂದು ನೆನಪಾದವರು –‘ರೋಕಿ ಮತ್ತು ಮಯೂರ್’. ಗತದ ಚಿತ್ರಗಳನ್ನು ಹೊತ್ತ ಡಿಸ್ಕ್ ಅನ್ನು ತೆರೆಯಲು ಅವರ ಜೊತೆಗಿನ ನನ್ನ ಪಟಗಳನ್ನು ನೋಡಿದ್ದಕ್ಕೆ ಇಷ್ಟೆಲ್ಲಾ ಬರೆಯಬೇಕಾಯಿತು.

ಈ ಹಳೆಯ ರುಚಿಗಳು ಇವೆ ನೋಡಿ, ಅವು ಆಗಾಗ ಎದ್ದು ಬಂದು ಮುತ್ತಿಕೊಳ್ಳುವುದಿದೆ. ಆ ಹೊತ್ತಲ್ಲಿ ರುಚಿಗಳು ಪದರು ಪದರಾಗಿ ಬಿಡಿಸಿಕೊಳ್ಳುತ್ತ ಹೋಗುತ್ತಿರುತ್ತವೆ. ಹಾಗಿರುವ ರುಚಿಗಳು, ಅಂತಹ ರುಚಿಯಾದ ಪಾಕವು ಎಲ್ಲರ ಜಿಹ್ವಾ ಚಾಪಲ್ಯವನ್ನು ತಣಿಸಿ ನೀಗಿಸಿ, ರುಚಿಯೇಂದ್ರಿಯಗಳನ್ನು ಸ್ಪರ್ಶಿಸಲಿ ಎನ್ನುವ ಹಾರೈಕೆ ಈ ದುರಿತ ಕಾಲದಲ್ಲೂ.

ದೊಸ್ತೋ, ಇಸ್ ಕೆ ಸಾಥ್ ರುಚಿ ಕಹಾನಿ ಕೋ ಸಮಾಪ್ತ್ ಕರ್ತಾ ಹೂಂ. ನಮಷ್ಕಾರ್.

‍ಲೇಖಕರು Avadhi

June 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: