ಸಂಚಾರಿ ವಿಜಯ್ ಅಭಿನಯದ ಕಡೆಯ ಚಿತ್ರ ‘ತಲೆದಂಡ’

ಸ್ವಾರ್ಥ ಮಾನವನ ತಣಿಯದ ದುರಾಸೆಗೆ ನಿಸರ್ಗಮಾತೆಯ ‘ತಲೆದಂಡ’

ಚಂದ್ರಪ್ರಭ ಕಠಾರಿ

ಗೋವಾದಲ್ಲಿ ನಡೆದ 52ನೇ  ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ನನಗೆ ಆದಷ್ಟು ಕನ್ನಡ ಚಿತ್ರಗಳನ್ನು, ಅದರಲ್ಲೂ ‘ತಲೆದಂಡ’ ನೋಡುವ ಕುತೂಹಲವಿತ್ತು. ಆ ಚಿತ್ರ, ಕನ್ನಡ ಚಲನಚಿತ್ರರಂಗದ ಪ್ರತಿಭಾವನ್ವಿತ ರಾಷ್ಟ್ರಪ್ರಶಸ್ತಿ ವಿಜೇತ ನಟ, ನಮ್ಮನ್ನಗಲಿದ ಸಂಚಾರಿ ವಿಜಯ್ ನಟಿಸಿದ ಕಡೆಯ ಚಲನಚಿತ್ರ ಎನ್ನುವುದು ಒಂದು ಕಾರಣವಾಗಿತ್ತು.

ಪ್ರತಿದಿನ ಮಧ್ಯರಾತ್ರಿ ಸುಮಾರು ಹನ್ನೆರೆಡರ ಹೊತ್ತಿಗೆ ಕಾದು ಕೂತು, ಆನ್ ಲೈನಲ್ಲಿ ಅಂದರೆ ಮೊಬೈಲ್ ಆ್ಯಪಲ್ಲಿ ಅಥವಾ ವೆಬ್ ಸೈಟಲ್ಲಿ ಸಿನಿಮಾಗಳನ್ನು ನೋಡಲು ಟಿಕೇಟನ್ನು ಮುಂಗಡವಾಗಿ ಕಾಯ್ದಿರಿಸುವ ಹೊಸ ಪದ್ಧತಿ ಮೊದಮೊದಲಿಗೆ ಕಕ್ಕಾಬಿಕ್ಕಿಯಾಗುವಂತೆ ಮಾಡಿತು. ನಾವು ನೋಡಬೇಕಾದ ಸಿನಿಮಾವನ್ನು ಆಯ್ಕೆ ಮಾಡುವ ಮೊದಲೇ ಕೆಲ ನಿಮಿಷಗಳಲ್ಲೇ, ಟಿಕೇಟುಗಳು ಮುಗಿದಿವೆ ಎಂಬ ಸಂದೇಶ ಮುಖಕ್ಕೆ ರಾಚುತ್ತಿತ್ತು. ಅಂಥದ್ದರಲ್ಲಿ – ಕನ್ನಡ ಸಿನಿಮಾ ನೋಡುವ ಪ್ರೇಕ್ಷಕರು ಕಮ್ಮಿ ಇದ್ದದ್ದರಿಂದಲೋ ಏನೋ? ತಲೆದಂಡಕ್ಕೆ ಟಿಕೇಟು ತಟ್ಟನೆ ದೊರಕಿತು. ಹಾಗೆ, ಸಿನಿಮಾ ನೋಡಿ ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ ಮತ್ತು ಚಿತ್ರದ ತಂಡದೊಂದಿಗೆ ಸಂವಾದಿಸುವ ಅವಕಾಶವೂ ದೊರಕಿತು.

ಇನ್ನು ತಲೆದಂಡ ಸಿನಿಮಾದ ವಿಷಯಕ್ಕೆ ಬರುವುದಾದರೆ – ಪ್ರಕೃತಿ ಪ್ರೀತಿ, ಮಾನವನ ಸ್ವಾರ್ಥದಿಂದಾಗಿ ನಿಸರ್ಗದ ಮೇಲೆ ಆಗುತ್ತಿರುವ ಅತ್ಯಾಚಾರ ಮತ್ತು ಆ ಬಗೆಗಿನ ಅಪಾರ ಕಾಳಜಿ, ಪಡುವ ಸಂಕಟದಂಥ ವಿಷಯವನ್ನು ಜನರ ಮನಮುಟ್ಟುವಂತೆ ಹೇಳಲು ಸಿನಿಮಾವು ಸಶಕ್ತ ಮಾಧ್ಯಮವೇ ಹೌದಾದರೂ, ಡಾಕ್ಯುಮೆಂಟರಿಯಾಗಿ ಅಂಕಿಅಂಶಗಳೊಂದಿಗೆ ಹೇಳಬಹುದು. ಆದರೆ‌ ಪ್ರೇಕ್ಷಕರನ್ನು ಭಾವುಕವಾಗಿ ಬಂಧಿಸಲು ಆಗುವುದಿಲ್ಲ. ಹಾಗೆಂದು ಜನಪ್ರಿಯ ಸಿನಿಮಾ ಮಾದರಿಯಾಗಿ ಹೇಳಿದರೆ, ಅಂಕಿಅಂಶಗಳ ತುರುಕಾಟದಲಿ, ಬೋಧನಾ ಪ್ರಧಾನವಾಗಿ ಚಿತ್ರ ಬೋರು ಹೊಡೆಸಿ ಸೋಲುವ ಸಾಧ್ಯತೆ ಹೆಚ್ಚು.

ಮೇಲಿನ ಪೀಠಿಕೆಯ ಹಿನ್ನೆಲೆಯಲ್ಲಿ, ಪ್ರವೀಣ್ ಕೃಪಕಾರ ಅವರ ಮೊದಲ ಸ್ವತಂತ್ರ ನಿರ್ದೇಶನದ ಚಿತ್ರ ತಲೆದಂಡ ವನ್ನು‌ ನೋಡಿದರೆ, ಅವರು ಬಹುಮಟ್ಟಿಗೆ ಗೆದ್ದಿದ್ದಾರೆಂದೇ ಹೇಳಬಹುದು. ಅದಕ್ಕೆ ಕಾರಣ ಎರಡು. ಒಂದು – ಕಥಾನಾಯಕನ ಪಾತ್ರ ಸ್ವರೂಪದ ಕಲ್ಪನೆ. ಅವನದು ದೇಹಕ್ಕೆ ವಯಸ್ಸಾದರೂ ಅದಕ್ಕೆ ಅನುಗುಣವಾಗಿ ಬೆಳೆಯದ ಬುದ್ಧಿಮತ್ತೆ. (ಬಾಲ್ಯದಲ್ಲಿ ತಮ್ಮ ಹಳ್ಳಿಯಲ್ಲಿ ಕಂಡ ಅಂಥಹದೇ ವ್ಯಕ್ತಿ ಆ ಪಾತ್ರಕ್ಕೆ ಸ್ಪೂರ್ತಿಯೆಂದು ನಿರ್ದೇಶಕರು ತಮ್ಮ ಸಂವಾದದಲ್ಲಿ ತಿಳಿಸಿದರು) ಎರಡು – ಆ ಪಾತ್ರವನ್ನು ಮೈಮೇಲೆ ಅಲ್ಲದೆ ಆತ್ಮಕ್ಕೆ ಆವಾಹಿಸಿಕೊಂಡಂತೆ ನಿರ್ವಹಿಸಿರುವ ನಟ ಸಂಚಾರಿ ವಿಜಯ್ ಆಯ್ಕೆ ಮಾಡಿಕೊಂಡ ಮ್ಯಾನರಿಸಮ್ (ಆಂಗೀಕಾಭಿನಯ).

ಹಳ್ಳಿಯಲ್ಲಿ ರಸ್ತೆ ನಿರ್ಮಾಣದ ಯೋಜನೆಯೊಂದನ್ನು ಸರ್ಕಾರ ರೂಪಿಸಿದಾಗ, ಅದು ತನ್ನ ಜಮೀನನ ಮೂಲಕವೇ ಹಾದು ಜಮೀನು ಇಬ್ಭಾಗವಾಗುವುದ ಕಂಡು ಚಿಂತಿತನಾದ ಹಾಲಿ ಎಮ್ಮೆಲೆ, ರಸ್ತೆಯ ದಿಕ್ಕನ್ನು ತನ್ನ ಜಮೀನಿನಿಂದ ಬೇರೆಡೆಗೆ ತಿರುಗಿಸಿ ಹೊಸದಾಗಿ ನಕ್ಷೆಯನ್ನು ಬರೆಯುವಂತೆ ಇಂಜಿನಿಯರ್ಗಳಿಗೆ ಆಜ್ಞಾಪಿಸುತ್ತಾನೆ. ಹಾಗೆ ಮಾಡುವಾಗ ಮತ್ತೊಂದು ಸಂಕಷ್ಟ ಎದುರಾಗುತ್ತದೆ. ಸುಮಾರು ನೂರೈವತ್ತು ಗೊಮ್ಮಟನ ಎತ್ತರಕ್ಕೆ ಅಗಾಧವಾಗಿ ಬೆಳೆದು ನಿಂತ ಮರಗಳನ್ನು ಕಡಿಯಬೇಕಾಗುತ್ತದೆ. ತನ್ನ ಸ್ವಾರ್ಥಕ್ಕಾಗಿ ಮರಗಳನ್ನು ಕಡಿಯಲು ಹೇಸದ ಎಮ್ಮೆಲೆ ಮತ್ತು ಅವನು ಹೇಳಿದಂತೆ ಬಾಲ ಬಡಿಯುವ ಸರ್ಕಾರ, ನಿಯೋಜಿತ ಅಧಿಕಾರಿಗಳು ಗ್ರಾಮಸ್ಥರಿಗೆ ಸುಳಿವು ಕೊಡದೆ ಮರ ಕತ್ತರಿಸಲು ಮುಂದಾಗುತ್ತಾರೆ.

ಮರ ಕತ್ತರಿಸುವ ವಿಷಯ ತಿಳಿದ ಕನ್ನೇಗೌಡ ಕಂಗಾಲಾಗಿ ಓಡಿಬಂದು ಅಂಗಲಾಚಿ, ತನ್ನ ಬಿಕ್ಕುವ ಮಾತಿನಲ್ಲಿ ಮರ ಕಡಿಯದಂತೆ ಗೋಗೆರೆಯುತ್ತಾನೆ. ಅವನ ಮಾತಿಗೆ ಅಧಿಕಾರಿಗಳು ಕೇಳದಿದ್ದಾಗ, ಅಡ್ಡನಿಂತು ಮರಕಡಿಯುವ ಕಾರ್ಯವನ್ನು ತಡೆಯುತ್ತಾನೆ. ಆಗ ಆಗುವ ತಳ್ಳಾಟವನ್ನೇ ಮುಂದು ಮಾಡಿ, ಸರ್ಕಾರಿ ಅಧಿಕಾರಿಯ ಮೇಲೆ ಕೈಮಾಡಿದ ಅಪರಾಧಕ್ಕಾಗಿ ಕನ್ನನನ್ನು ಬಂಧಿಸುತ್ತಾರೆ. ಆದರೆ, ಕೋರ್ಟಿನಲ್ಲಿ ಕನ್ನನ ಪರ ವಾದ ನಡೆದು ಆತ ಬುದ್ಧಿಮಾಂದ್ಯನಾದ್ದರಿಂದ ಶಿಕ್ಷಿಸಲು ಬರುವುದಿಲ್ಲವೆಂಬ ವಾದ ಮುಂದಾಗುತ್ತದೆ. ನ್ಯಾಯಾಧೀಶರು ಕನ್ನೇಗೌಡನ ಬುದ್ಧಿಮತ್ತೆಯನ್ನು (ಐಕ್ಯೂ) ಪರಿಶೀಲಿಸಲು ಮನಶಾಸ್ತ್ರಜ್ಞರಿಗೆ ಆದೇಶಿಸುತ್ತಾರೆ.  

ಆತಂಕಕ್ಕೊಳಗಾದ ಕನ್ನೇಗೌಡನಿಗೆ ಆಸ್ಪತ್ರೆಯಲ್ಲಿ ಎಲ್ಲಾ ಹೆಂಗಸರು ನಿರ್ಸಗಮಾತೆಯಂತೆ ಕಂಡು, ಅವರನ್ನು ಓಡಿ ಹೋಗಿ ಅತ್ಯಾಚಾರದಿಂದ ತಪ್ಪಿಸಿಕೊಳ್ಳುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಕನ್ನೇಗೌಡನ ಬುದ್ಧಿಮತ್ತೆಯನ್ನು ಪರಿಶೀಲಿಸುವ ಹಂತದಲ್ಲಿ ತಜ್ಞರು, ಅವನ ಪರಿಸರದ ಬಗೆಗಿನ ಅಪಾರ ಕಾಳಜಿ ಕಂಡು ಬೆರಗಾಗುತ್ತಾರೆ. ಚಿಕಿತ್ಸಾತ್ಮಕವಾಗಿ ಅವರು  ಕೇಳುವ ಪ್ರಶ್ನಾವಳಿಗಳಿಂದ ಕನ್ನನ ಬಾಲ್ಯದ ದಿನಗಳು, ಗೆಳತಿಯೊಂದಿಗಿನ ಒಡನಾಟ, ಕನ್ನನ ಮುಗ್ಧತನವನ್ನು ಪೆದ್ದುತನವೆಂದು ತಿಳಿಯುವ ಘಟನೆಗಳು, ಕನ್ನನ ಅಮ್ಮನೊಂದಿಗಿನ ವಾತ್ಸಲ್ಯಭರಿತ ಗಳಿಗೆಗಳು ಸಿಂಹಾವಲೋಕನ ಕ್ರಮದಿ ಬಿಚ್ಚಿಕೊಳ್ಳುತ್ತದೆ.

ಬುದ್ಧಿಮಾಂದ್ಯನಂತಿದ್ದರೂ ಚಿಕ್ಕಂದಿನಿಂದಲೇ ಹೆತ್ತಪ್ಪನಂತೆ ಮರಗಿಡ, ಕಾಡಿನ ಬಗ್ಗೆ ಕನ್ನನಿಗೆ ಅಪಾರ ಪ್ರೀತಿ, ಕಾಳಜಿ. ಮರಗಳಿಗೆ ಮಾತಾಡಲು ಬರುವುದಿಲ್ಲ. ಆದರೆ, ಮನುಷ್ಯರ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ಅವು ಜೀವಂತವಾಗಿದೆ ಮತ್ತು ಅವುಗಳಿಂದಲೇ ಮನುಷ್ಯರು ಉಸಿರಾಡಲು ಸಾಧ್ಯವಿರುವುದು ಎಂಬುದನ್ನು ಅಪಾರವಾಗಿ ನಂಬಿದ್ದಾನೆ.

ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬಂದಾಗ, ಮೊದಲಿನ ಉದ್ವೇಗ, ಆವೇಶ ಕಡಿಮೆಯಾದರೂ ಮರ ಕಡಿಯುವಿಕೆಯ ಸಂಗತಿ ತರುವ ನೋವು, ಸಂಕಟ ಹೆಚ್ಚಾಗುತ್ತದೆ. ಚಿತ್ರದ ಕೊನೆಯಲ್ಲಿ ಆ ನೋವನ್ನು ಭರಿಸಲಾಗದೆ ಸಾವನ್ನಾಪ್ಪುತ್ತಾನೆ. ತನ್ನ ಸಾವಿನಿಂದಲಾದರೂ ಮರಗಳನ್ನು ಉಳಿಸುವ ಅವನ ಕಟುನಿರ್ಧಾರ ನೋಡುಗರನ್ನು ಆಳದ ವಿಷಾದಕ್ಕೆ ತಳ್ಳುತ್ತದೆ.

ಚಿತ್ರಕತೆಯ ಹೆಣಿಗೆಯಲ್ಲಿ ನಿರ್ದೇಶಕರು ಗಿರಿಜನ ಸೋಲಿಗರ ನೆಲದ ಸಂಸ್ಕೃತಿ, ಸಂಪ್ರದಾಯ, ಸಂಭಾಷಣೆ, ಹಾಡುಗಳನ್ನು ಯಥೋಚಿತವಾಗಿ ಬಳಸಿರುವುದು ಚಿತ್ರದ ವಿಶೇಷ. ಆದರೆ, ಹಾಡುಗಳು ಕತೆಯ ಓಘವನ್ನು ತಡೆದಂತೆ ಭಾಸವಾಗುತ್ತದೆ.

ನಾಯಕ ನಟ ಸಂಚಾರಿ ವಿಜಯ್ ರನ್ನು ಒಳಗೊಂಡಂತೆ ಮಂಗಳ ಎನ್, ಬಿ ಸುರೇಶ್, ಮಂಡ್ಯ ರಮೇಶ್, ರಮೇಶ್ ಪಂಡಿತ್, ಭವಾನಿ ಪ್ರಕಾಶ್, ಚೈತ್ರಾ, ರಾಜೇಶ್ ರಾವ್, ಪ್ರಶಾಂತ್ ನಟನಾ, ಹೇಮಾಮಾಲಿನಿ, ಸ್ಪರ್ಶ ಶೆಣಾಯ್ ಮುಂತಾದವರು ತಂತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅದರಲ್ಲೂ, ಸಂಚಾರಿ ವಿಜಯ್ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ಕೊಂಡಂತೆ ಅದ್ಧುತವಾಗಿ ನಟಿಸಿದ್ದಾರೆ. ಚಿತ್ರ ಮುಗಿದ ಮೇಲೆ ಕಣ್ಣಲ್ಲಿ ಹನಿ ಜಿನುಗಿದರೆ ವಿಜಯ್ ನಮ್ಮೊಡನಿಲ್ಲ ಎಂಬ ಕಾರಣಕ್ಕಿಂತ ಚಿತ್ರದಲ್ಲಿ  ಕನ್ನನ ಅನಿರೀಕ್ಷಿತ ಸಾವೇ ಕಾರಣವಾಗಿ ಮನಸ್ಸು ಮುದುಡುತ್ತದೆ.

ಚಾಮರಾಜನಗರ ಸುತ್ತಮುತ್ತಲಿನ ಕಾಡುಗಳ ಸುಂದರ ಛಾಯಾಗ್ರಹಣವನ್ನು ಅಶೋಕ್ ಕಶ್ಯಪ್ ಅವರು ಮಾಡಿದ್ದಾರೆ. ಕೆಂಪರಾಜು ಅವರ ಸಂಕಲನ ಮತ್ತು ಹರಿಕಾವ್ಯರ ಸಂಗೀತ ಚಿತ್ರದ ದೃಶ್ಯ ಅನುಭವವನ್ನು ಹೆಚ್ಚಿಸಿದೆ.

ಪರಿಸರದ ಬಗ್ಗೆ ನಿಜ ಕಾಳಜಿಯ ದಂಪತಿಗಳು – ನಿರ್ಮಾಪಕರಾದ ಡಾ. ಹೇಮಾಮಾಲಿನಿ ಕೃಪಾಕರ್ ಮತ್ತು ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತ ಪ್ರವೀಣ್ ಕೃಪಾಕರರು ಅಭಿನಂದನೆಗೆ ಅರ್ಹರು.

ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿತವಾದಾಗ ಸಂಚಾರಿ ವಿಜಯನ ನಟನೆಗಾಗಿಯೇ ತಪ್ಪದೇ ನೋಡಲೇಬೇಕಾದ ಚಿತ್ರ – ತಲೆದಂಡ.

‍ಲೇಖಕರು Admin

December 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: