ಸಂಗೀತ ರವಿರಾಜ್ ಓದಿದ ‘ಚೌ ಚೌ ಬಾತ್’

ಸಂಗೀತ ರವಿರಾಜ್

ಮನದ ಮೌನವನ್ನು ಅಕ್ಷರ ರೂಪಕ್ಕೆ ಇಳಿಸಿದ, ಮನದ ಭಾವಗಳ ಮಿಶ್ರ ಕಹಾನಿ ಎಂಬುದಾಗಿ ಒಕ್ಕಣೆಯಿರುವ “ಚೌ ಚೌ ಬಾತ್” ಕೃತಿ ಕೃಪಾ ದೇವರಾಜ್ ರವರ ಮೂರನೆಯ ಪುಸ್ತಕ. ಮೌನ ಮತ್ತು ಅಕ್ಷರದ ನಡುವಿನ ಅಂತರದ ಸ್ಥಾನದಲ್ಲಿರುವ ಮಾತುಗಳು ಇಲ್ಲಿ ಅಕ್ಷರಗಳಾಗಿ ಒಂದು ಉತ್ತಮವಾದ ಕೃತಿಯಾಗಿ ಮೂಡಿ ಬಂದಿದೆ. ಭಾವನೆಗಳನ್ನೆಲ್ಲಾ ಅಕ್ಷರರೂಪಕ್ಕಿಳಿಸಿ ಮಾತಿನಿಂದ ಬರಹದ ಶಕ್ತಿಯೇ ಹೆಚ್ಚು ಎಂಬುದಾಗಿ ನಮಗಿಲ್ಲಿ ನಿರೂಪಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಇರುವ ಪ್ರಕಾರಗಳಿಗೆ ಹೊಸ ಹೊಸ ಆಯಾಮಗಳನ್ನು ಕೊಡುತ್ತಿರುವ ಈಗಿನ ಆಧುನಿಕ ಸಾಹಿತ್ಯದ ಕಾಲಘಟ್ಟದಲ್ಲಿ, ಕೃಪಾರವರ ಚೌ ಚೌ ಬಾತ್ ಕೃತಿ ಕನ್ನಡ ಸಾಹಿತ್ಯಕ್ಕೆ ಹೊಸ ಹೊಳಪಿನಿಂದ ಸೇರ್ಪಡೆಯಾದ ಹೊಸ ಉಡುಗೊರೆ ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ಇದರಲ್ಲಿ ತನ್ನ ಸಂವೇದನೆಯ ಅನುಭವಗಳನ್ನು, ಮೆಲುಕುಗಳನ್ನು ಸಣ್ಣ ಲಹರಿಗಳ ಮೂಲಕ ತೆರೆದಿಟ್ಟಿದ್ದಾರೆ.

ಈಗಿನ ಧಾವಂತದ ಬದುಕಿನಲ್ಲಿ ಜಾಲತಾಣದ ಬಳಕೆ ಅತಿ ಸಾಮಾನ್ಯ. ಹಾಗಾಗಿ ತಮ್ಮ ಜಾಲತಾಣದ ಗೋಡೆಯಲ್ಲಿ ಭಾವದ ಬರವಣಿಗೆಯನ್ನು ಹಾಕಿ ಅದಕ್ಕೆ ಬಂದಿರುವ ಚಂದನೆಯ, ಸತ್ವಭರಿತ ಪ್ರತಿಕ್ರಿಯೆಗಳನ್ನು ಕೃತಿಯಲ್ಲಿ ಪ್ರಕಟಿಸಿರುವುದು ಕೃತಿಯ ಹೆಚ್ಚುಗಾರಿಕೆ. ನಿಜವಾಗಿಯೂ ಇದು ಶ್ಲಾಘಿಸುವಂತಹ ವಿನೂತನ ಪ್ರಯೋಗ. ಬರಹ ರೂಪದಲ್ಲಿ ಮನಸ್ಸಿನ ಭಾವನೆಗಳನ್ನು ಪರಸ್ಪರ ಹಂಚಿಕೊಂಡಾಗ ಅದಕ್ಕೆ ಪ್ರತಿಕ್ರಿಯೆ ಕೊಡುವ ಮನಸ್ಸು ಅದು ಖಂಡಿತ ಎಲ್ಲರಿಗೂ ಬರುವಂಥದಲ್ಲ. ಅದಕ್ಕು ಹೃದಯವಂತಿಕೆ ಬೇಕು. ಆ ಹೃದಯವಂತಿಕೆಯನ್ನು ಮೆಚ್ಚುವಂತಹ ಕೆಲಸವನ್ನು ಕೃಪಾರವರು ಮಾಡಿದ್ದಾರೆ. ಯಾರೋ ಬಾಲ್ಯದಲ್ಲಿ ಸೈಕಲ್ ಕಲಿತ ಅನುಭವಕ್ಕೆ ನಾನೇಕೆ ಪ್ರತಿಕ್ರಯಿಸಲಿ ಎಂಬುದಾಗಿ ಯೋಚಿಸುವವರ ನಡುವೆ, ತಮ್ಮ ಮಧುರ ನೆನಪನ್ನು ಹಂಚಿಕೊಳ್ಳುವವರನ್ನು ನಾವು ಗುರುತಿಸಲೇಬೇಕು. ಸಾಮಾಜಿಕ ಕಳಕಳಿಯ ಮೂಲ ಇಲ್ಲಿಂದಲೇ ತಾನೇ?

ಕೃತಿ ಚೌ ಚೌ ಬಾತ್ ಯಾವುದೇ ಪೂರ್ವಗ್ರಹವಿಲ್ಲದ ಬಿಚ್ಚು ಮಾತುಗಳ ಮನಸ್ಸಿನ ಲಹರಿಗಳಾಗಿವೆ. ಯಾವ ಓದುಗನು ಕೃತಿಯನ್ನು ಮೆಚ್ಚದಿರಲು ಸಾಧ್ಯವಿಲ್ಲ. ಲಲಿತವಾಗಿ ಹರಡಿರುವ ಲಾಲಿತ್ಯದ ಹಾಸ್ಯಗಳು, ಹದವಾದ ಭಾಷೆ, ಮಿತವಾದ ವಾಕ್ಯಗಳು, ಚುಟುಕಾಗಿ ಮುಗಿಸಿದ ಪರಿ ಓದುಗರನ್ನು ಕ್ಷಣ ಸೆಳೆದು ಬಿಡುತ್ತದೆ. ಮನರಂಜನೆ ಕೊಡುವಂತಹ ಪ್ರತಿಕ್ರಿಯೆಗಳನ್ನು ಓದುವ ಕುತೂಹಲವುಂಟಾಗುತ್ತದೆ. ಬೇರೆಯವರ ಪತ್ರ ಓದಲು ಬರುವಂತಹ ಕುತೂಹಲವನ್ನು ಇದಕ್ಕೆ ಹೆಸರಿಸಬಹುದು. ಆದರೆ ಕದ್ದು ಓದುವ ಪ್ರಮೇಯ ಇಲ್ಲಿಲ್ಲ!

ಬಾಲ್ಯದಿಂದಲೇ ಶುರು ಹಚ್ಚಿ ಇಲ್ಲಿಯವರೆಗೆ ವಿಶೇಷ ವೆನಿಸಿದ ಅನುಭವಗಳ ಗುಚ್ಛದ ಬರಹಗಳು ಬಲು ಆಸಕ್ತಿದಾಯಕ. ಪ್ರತಿಭೆಗೆ ಮಾನದಂಡ ಯಾವುದು, ಕಾಳು ಮೆಣಸಿನ ತೋಟ, ಬಾಲ್ಯದ ನೆನಪಿನ ಬುತ್ತಿ ತೆರೆದಾಗ, ಉಡುಪಿನ ಗೊಂದಲ, ಗೂಡು ಸೇರುವ ಹಕ್ಕಿಗಳು ಹೀಗೆ ಅರವತ್ತು ವಿಭಿನ್ನ ಬರಹಗಳನ್ನು ಕೃತಿಯು ಒಳಗೊಂಡಿದೆ. ಆರೋಹಣ ತಂಡದ ಚಾರಣದ ರೋಮಾಂಚನಗೊಳಿಸುವ ಅನುಭವಗಳು ನಮ್ಮಲ್ಲೂ ರೋಮಾಂಚನವನ್ನುಂಟು ಮಾಡುತ್ತವೆ. ಚೌ ಚೌ ಬಾತ್ ಎನ್ನುವ ಹೆಸರಿಗೆ ತಕ್ಕಂತೆ ಮಿಶ್ರ ವಿಚಾರಗಳ ವೈವಿಧ್ಯಮಯ ಬರಹಗಳಿವೆ. ಈ ಬರಹಗಳೆಲ್ಲವೂ ನಮ್ಮ ಮೇಲೆ ಪರಿಣಾಮ ಬೀರುವ ಮೂಲಕ ಆಪ್ತವಾಗುತ್ತವೆ. ಉದಾಹರಣೆಗೆ, ಹುಡುಗನಿಗೆ ಕೃತಜ್ಞತೆ ಹೇಳದ ನೋವು, ಪೇಪರ್ ನಾರಾಯಣ ಮಾಮನ ಕಥನ, ತಿಳಿಯದೆ ಅಧಿಕಾರಿಯಿಂದ ಸಹಾಯ ಪಡೆದ ಅಳುಕು ಹೀಗೆ ಸುಕೋಮಲ ಮನಸ್ಸಿನ ಲೇಖಕಿಯ ಇಂತಹ ಸಂಕಟಗಳನ್ನು ನಾವು ಅಪ್ಯಾಯಮಾನವಾಗಿ ಕೃತಿಯಲ್ಲಿ ಅನುಭವಿಸಬಹುದು. ಒಂದು ಆರೋಗ್ಯವಂತ ಮನಸ್ಸಿನಿಂದ ಮಾತ್ರ ಇಂತಹ ಆರೋಗ್ಯವಂತ ವಿಚಾರದ ಬರಹಗಳು ಸಾಧ್ಯ ಎಂಬುದು ಕೃತಿಯಲ್ಲಿ ನಮಗೆ ಸಾಬೀತಾಗುತ್ತದೆ.

ಬರಹಗಳಲ್ಲಿ ಲೇಖಕಿಯ ಹಲವಾರು ಹವ್ಯಾಸಗಳ ಪರಿಚಯ ನಮಗಾದರು ಸಹ, ಮುಖ್ಯವಾಗಿ ಇವರು ಅಕ್ಷರಕ್ಕೆ ಮಾರುಹೋಗಿದ್ದಾರೆ ಎಂಬುದು ನಮಗೆ ತಿಳಿಯುತ್ತದೆ. ಎಲ್ಲ ಬರಹಗಳು ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ಸೃಜನಶೀಲತೆಯಿಂದ ಬರೆದ ಅನುಭವದ ಬರಹಗಳನ್ನು ಓದಿದ ನಂತರ ಜನರ ಪ್ರತಿಕ್ರಿಯೆಗಳು ಹೇಗಿರಬಹುದೆಂಬ ಕುತೂಹಲವೂ ನಮ್ಮಲ್ಲಿ ಇಣುಕುತ್ತದೆ. ಓದುಗರನ್ನು ಕಾಂತೀಯವಾಗಿ ಒಯ್ಯುವೆಡೆಗೆ ಬರಹ ಸಫಲತೆಯನ್ನು ಸಾಧಿಸಿದೆ. ಮಾನವತೆ ಮತ್ತು ಹಾಸ್ಯವು ಸೇರಿ ಉತ್ತಮ ಸಾಹಿತ್ಯವಿಲ್ಲಿ ಸೃಷ್ಟಿಯಾಗಿದೆ. “ಮಾಸ್ತರ ಬೆತ್ತದ ರುಚಿಯನ್ನೆ ನೆನೆಸಿಕೊಂಡು, ಒಳಬರಲು ಕೇಳುತ್ತ ಹೊರನಿಂತ ನಮ್ಮನ್ನು ಪೂವಪ್ಪ ಮಾಸ್ತರು ಏನೊಂದೂ ಬಯ್ಯದೆ ಯಾಕೆ ಲೇಟು ಎಂದು ಕೇಳಿ ಇವಳ ಮನೆಗೋಗಿದ್ದೋ ಎಂದು ಹೆದರಿ ಕಣ್ತುಂಬಿ ಹೇಳಿದಾಗ ಒಂದಿನಿತು ಬಯ್ಯದೇ ಹೊಡೆಯದೆ ಒಳ ಬಿಟ್ರಲ್ಲ ಹೇಗೆ ಮರೆಯಲಿ ಅವರನ್ನು? ಕಣ್ಣಾ ಲಿ ತುಂಬುತ್ತೆ ಈಗಲೂ…” ಐದನೇ ಕ್ಲಾಸು… ಹುಣಸೆ ಮರವು ಬರಹದ ಈ ಸಶಕ್ತ ಸಾಲುಗಳು ಇಡೀ ಕೃತಿಗೆ ಕಟ್ಟಿಕೊಟ್ಟ ಬುನಾದಿಯಂತಿದೆ. ಇಲ್ಲಿ ಮಾನವೀಯತೆ ಇದೆ, ನೋವು ನಲಿವು ಇದೆ, ವಿನೋದವಿದೆ ಬೆಲೆಕಟ್ಟಲಾಗದ ಪ್ರೀತಿಯ ಕುರುಹುಗಳಿವೆ. ಓದುಗರು ಸತ್ಯಗಳಿಗೆ ಸ್ಪಂದಿಸುತ್ತಾರೆ ಎಂಬುದು ಇವರ ಬರಹಗಳಲ್ಲಿ ನಮಗೆ ಮನದಟ್ಟಾಗುತ್ತದೆ. ಬೆಣ್ಣೆಯ ಕಥೆ ಇರಬಹುದು, ಬ್ರಹ್ಮಗಿರಿಯ ಚಾರಣ, ಜೋಸೆಫ್ ನ ವಿಷಯ, ಯೋಗ ತರಗತಿಯ ಮಾತುಕತೆ ಹೀಗೆ ಹಲವಾರು ಸತ್ಯದ ಹೂರಣದೊಳಗಿನ ಅಕ್ಷರ ಸಾಂಗತ್ಯಕೆ ಇಲ್ಲಿ ಹೆಚ್ಚಿನ ಸ್ಪಂದನವಿದೆ. ತಾಯಿ ಮಗನ ತಲೆಮಾರುಗಳ ವೈರುಧ್ಯಗಳು ಇಲ್ಲಿ ಸಾಮಾಜಿಕ ಎಚ್ಚರವನ್ನು ಉಂಟು ಮಾಡುತ್ತವೆ. ಸಾಮಾಜಿಕ ಕಳಕಳಿಯ ಎಚ್ಚರಗಳು ಹೆಚ್ಚಾಗಿ ತುಂಬಿರುವ ಇಲ್ಲಿನ ಬರಹಗಳು ಒಂದು ಸತ್ವಪೂರ್ಣ ನ್ಯಾಯದ ಹುಡುಕಾಟದಲ್ಲಿದೆ ಎಂದೆನಿಸುತ್ತದೆ. ಒಳ್ಳೆಯತನ ಹೆಚ್ಚಾಗಿ ಹರಡಲಿ ಎಂಬ ಆಶಯದ ಬರಹಗಳು ತುಂಬಾ ಧ್ವನಿಪೂರ್ಣವಾಗಿದೆ. ವರದಕ್ಷಿಣೆ ಕೊಡಬಾರದು ಎಂಬ ನಿರ್ಧಾರ, ಪ್ರಕೃತಿಯನ್ನು ಉಳಿಸುವ ಹಂಬಲ, ದೇಶದ ಬಗ್ಗೆ ಚಿಂತನೆ, ಕೊಡಗಿನ ಪ್ರವಾಸಿ ತಾಣಗಳ ಸ್ವಚ್ಛತೆ ಇವೆಲ್ಲ ಮೃದು ಮನಸ್ಸಿನ ಜನಪರ ಕಾಳಜಿಗಳು. ಬರಹಗಾರರಿಗೆ ಇರಲೇಬೇಕಾದ ಈ ಕಾಳಜಿಯ ಗುಣಗಳು ಇವರನ್ನು ಸಾಹಿತ್ಯದಲ್ಲಿ ಮೀರುವಂತೆ ಮಾಡುತ್ತದೆ. ಇಂತಹ ಸೂಕ್ಷ್ಮ ಸಂವೆದನೆಗಳಿಗೆ ಮಿಡಿಯುವ ಗುಣವೇ ಸಾಹಿತ್ಯದ ಅಡಿಪಾಯ.

ತಮ್ಮ ಮುಖ ಪುಸ್ತಕದಲ್ಲಿ ಸಂಧರ್ಭಯೋಚಿತವಾಗಿ ಪ್ರಕಟಿಸಿರುವುದನ್ನು ವ್ಯರ್ಥ ಮಾಡದೆ ತೇಜೋಹಾರಿಯಾಗಿ ಕೃತಿ ಮಾಡಿರುವ ಕೃಪಾ ದೇವರಾಜ್ ರವರ ಪ್ರಬುದ್ಧತೆಯನ್ನು ನಾವೆಲ್ಲರೂ ಮೆಚ್ಚಲೇಬೇಕು. ಜಾಲತಾಣದಲ್ಲಿ ಕೇವಲ ಚಿತ್ರ ಮತ್ತು ವೀಡಿಯೋ ಹಾಕದೆ ಅರ್ಥಪೂರ್ಣ ವಿಚಾರ ಲಹರಿ ಗಳನ್ನು ಬರೆದು ಹಾಕಿ, ಉತ್ತಮವಾದ ರೀತಿಯಲ್ಲಿ ಉಪಯೋಗಿಸಿಕೊಂಡ ಜಾಣತನ ಇವರದು. ಇವರ ಜಾಲತಾಣದ ಸದ್ಭಳಕೆ ಎಲ್ಲರಿಗೂ ಸ್ಫೂರ್ತಿಯೂ ಮಾದರಿಯು ಆಗಬಹುದು. ಈ ಎಲ್ಲ ನಿಟ್ಟಿನಲ್ಲಿ ಚೌ ಚೌ ಬಾತ್ ಕೃತಿ ಮಹತ್ವ ಪೂರ್ಣವಾಗಿ ನಿಲ್ಲುತ್ತದೆ. ಮೈಸೂರಿನ ಅಹಲ್ಯಾ ಪ್ರಕಾಶನದಿಂದ ಕೃತಿ ಪ್ರಕಟಗೊಂಡಿದೆ.

‍ಲೇಖಕರು avadhi

March 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: