ಸಂಗಮೇಶ ಸಜ್ಜನ ಕಂಡಂತೆ ‘ಕಾಡಿಗೆ ಮಾಯ’

ಸಂಗಮೇಶ ಸಜ್ಜನ

ನಿನ್ನೆಗೆ ಜಿ. ಎ. ಕುಲಕರ್ಣಿಯವರಿದ್ದಿದ್ರೆ ಜನ್ಮಶತಮಾನೋತ್ಸವದ ಕೊನೆಯ ಹಂತದಲ್ಲಿರುತ್ತಿದ್ದರೇನೋ. ಅಂದ್ರೆ ಅವರ ತುಂಬು ಜೀವನಕ್ಕೆ 99 ವರ್ಷಗಳು ಪೂರ್ಣಗೊಂಡವು. ಮರಾಠಿ ಸಾಹಿತ್ಯದ ಮಹತ್ವದ ಮತ್ತು ಶ್ರೇಷ್ಠ ಕತೆಗಾರ ಜಿ. ಎ. ಕುಲಕರ್ಣಿ. ಕನ್ನಡದಲ್ಲಿ ಯಶವಂತ ಚಿತ್ತಾಲರೆಂದರೆ ತಪ್ಪಾಗಲಾರದು. ಕಾರಣ ಇಷ್ಟೇ, ಚಿತ್ತಾಲರು ಕನ್ನಡದವರಾಗಿದ್ದು ಮುಂಬೈಯಲ್ಲಿದ್ದು ಕನ್ನಡಕ್ಕಾಗಿ ಬರೆದರೆ, ಕುಲಕರ್ಣಿಯವರು ಮರಾಠಿಯವರಾಗಿದ್ದು ಧಾರವಾಡದಲ್ಲಿ ಕೂತು ಬರೆದರು. ಹಾಗಾಗಿ ನನಗೆ ಬಹುವಾಗಿ ಕಾಡುವರಲ್ಲಿ ಇವರಿಬ್ಬರು.

ಮೊದಮೊದಲು ನಾನು ಇವರದ್ದು ಕಾಡಿಗೆ ಮಾಯ ಅನ್ನುವ ಕಥಾಸಂಗ್ರಹವನ್ನು ಪೋಕಳೆಯರ ಮೂಲಕ ಓದಿದಾಗ ಬಹಳವೇ ಆಶ್ಚರ್ಯಚಕಿತನಾಗಿದ್ದೆ. ಅರೆ ಎಷ್ಟು ಚಂದ ಅನುವಾದಿಸಿದ್ದರಲ್ಲ. ಕುಲಕರ್ಣಿಯವರ ಒಟ್ಟು ಕತೆಗಳು ನಮ್ಮ ಉತ್ತರಕರ್ನಾಟಕದ ಮಣ್ಣಿನ ಕತೆಗಳೇ. ಓದುತ್ತ ಹೋದಂತೆಲ್ಲ ನಮ್ಮನ್ನು ಬೇರೆಯೇ ಜಗತ್ತಿಗೆ ಕೊಂಡೊಯ್ಯುತ್ತವೆ. ಕತೆಗಳ ಅಂತ್ಯವಂತೂ ಅನಿರೀಕ್ಷಿತ ತಿರುವು ಕೊಡುವುದರಲ್ಲಿ ಮಾತೆ ಇಲ್ಲ. ಎಲ್ಲವೂ ಕಾಲಾತೀತವೆಂದು ನಾವಂದುಕೊಂಡರೆ, ಇಲ್ಲಿ ಬರುವ ವಿಚಾರಗಳು ಮಾತ್ರ ತುಂಬಾ ರಹಸ್ಯಮಯ.

ಕುಲಕರ್ಣಿಯವರ ಕತೆಗಳ ಪಾತ್ರಗಳು ಒಂದು ರೀತಿಯಲ್ಲಿ ತಮ್ಮವೇ ಜೀವನದಲ್ಲಿ ಕಪ್ಪು ಮೋಡದಂತೆ ತೂಗಾಡುವವು. ಜೀವನದ ಅರ್ಥಕ್ಕಾಗಿ ಸಾಕಷ್ಟು ಅನ್ವೇಷಣೆಗಳನ್ನು ಮಾಡಿದವರು, ಅವರ ದುಃಖ, ಹತಾಶೆಗಳು ಮಾತ್ರ ತುಂಬಾನೇ ಅಸಹಾಯಕತೆಯನ್ನು ಪರಿಶೀಲಿಸುತ್ತಿರುತ್ತವೆ. ಕುಲಕರ್ಣಿಯವರಿಗೆ ಅತೀ ಪ್ರೀಯವಾದುದೆಂದರೆ ಧಾರಾವಾಡದಲ್ಲಿರುವುದು. ಮತ್ತೆ ಬೆಳಗಾವಿಯು ಸಹ. ಮರಾಠಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಶುರು ಮಾಡಿದ ಕುಲಕರ್ಣಿಯವರು ಮುಂದೊಮ್ಮೆ ಧಾರವಾಡದ ಜೆ. ಎಸ್. ಎಸ್.

ಕಾಲೇಜಿನ ಇಂಗ್ಲಿಷ್ ಭಾಷೆಯ ಮುಖ್ಯ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಕತೆ ಬರೆಯುವುದರ ಮೂಲಕ ಸಂಪನ್ನಗೊಳಿಸಿದವರು. ಅದೇ ಧಾರವಾಡದ ಕಡೇಮನೆಯ ಕಾಂಪೊಂಡಿನ ಚಿಕ್ಕದಾದ ಚೊಕ್ಕದಾದ ಮನೆಯ ಛತ್ತಿನ ಮೇಲೆ ಇವರದ್ದೊಂದು ಕೋಣೆ. ಅದಕ್ಕೆ ಹತ್ತಿ ಒಂದು ಕಟ್ಟೆ, ಅಲ್ಲೊಂದು ಖುರ್ಚಿ, ಅಲ್ಲೇ ಕೂತು ಬರೆಯುವುದೆಂದರೆ ಕುಲಕರ್ಣಿಯವರಿಗೆ ಎಲ್ಲಿಲ್ಲದ ಸಂತಸ. ಅವರ ಕುಟುಂಬವರ್ಗದವರಾದ ನಂದಾ ಪೈಠಣಕರ್ ಹೇಳ್ತಿದ್ರು, ಬಾಬು ಅಣ್ಣ ಅಂದ್ರೆ ಜಿ. ಎ. ಕುಲಕರ್ಣಿಯವರಿಗೆ ಸಾಹಿತ್ಯ ಅಕಾಡೆಮಿಯ ಬಹುಮಾನ ತೆಗೆದುಕೊಳ್ಳಲು ಎಳ್ಳಷ್ಟೂ ಆಸೆ ಇರಲಿಲ್ಲವಂತೆ, ಮೂರು ಬಾರಿ ಆ ಪ್ರಶಸ್ತಿ ಮತ್ತು ಹೋಗಿ ಬರುವ ಖರ್ಚನ್ನು ಸಹ ವಾಪಾಸು ಮಾಡಿದ್ದರಂತೆ.

ಕಾಜಾಳ ಮಾಯಾ (ಕಾಡಿಗೆ ಮಾಯೆ) ಇದು ಕುಲಕರ್ಣಿಯವರ ಕೊನೆಯ ಪುಸ್ತಕ. ಅಷ್ಟೊತ್ತಿಗೆ ಅವರ ಆರೋಗ್ಯ ತುಂಬಾನೇ ವ್ಯಸ್ತವಾಗಿತ್ತು. ಆರೋಗ್ಯದ ವಿಚಾರವಾಗಿ ಧಾರವಾಡದಿಂದ ಪುಣೆಗೆ ಕರೆದೊಯ್ದರೆ, ಅವರಿಗೆ ಎಲ್ಲಿಲ್ಲದ ಸಂಕಟ, ನನಗೆ ಧಾರವಾಡಕ್ಕೆ ಹೋಗೋ ಆಸೆ ಎಂದಾಗ, ಮತ್ತೆ ಧಾರವಾಡಕ್ಕೆ ತಂದರೆ, ತುಂಬು ಖುಷಿಯಿಂದ ಕಣ್ಣಾಲಿಯಾಗಿ, ಗಳಗಳನೆ ಅತ್ತೆ ಬಿಟ್ಟಿದ್ದರಂತೆ. ಇನ್ನೊಂದು ಬಹು ನಿರಾಶೆಯ ವಿಷಯವೆಂದರೆ ಕುಲಕರ್ಣಿಯವರು ಯಾರನ್ನು ಕೂಡ ಭೇಟಿಯಾಗುತ್ತಿರಲಿಲ್ಲ.

ಅಕಾಡೆಮಿಯ ಪ್ರಶಸ್ತಿ ಪ್ರಕಟಣೆಯ ಸುದ್ದಿಯನ್ನು ಪತ್ರಿಕೆಯಲ್ಲೋದಿದ ಬೇಂದ್ರೆ ಅಜ್ಜ, ಬಹು ಆಶ್ಚರ್ಯದಿಂದ ಅರೆ ನಮ್ಮ ಕನ್ನಡದ ನೆಲದಲ್ಲಿ ಮರಾಠಿ ಪ್ರತಿಭೆನಾ… ಎಂದು ಖುಷಿಯಿಂದ ಭೇಟಿ ಮಾಡೋಣವೆಂದರೆ ಅವರನ್ನು ಖಡಾಖಂಡಿತವಾಗಿ ನಿರಾಕರಿಸಿದ್ದರಂತೆ. ಅಷ್ಟೇ ಯಾಕೆ, ಒಮ್ಮೆ ಆರೋಗ್ಯದ ವಿಚಾರವಾಗಿ ಪುಣೆಗೆ ಹೋದಾಗ, ಅವರೇ ಅನುವಾದಿಸಿದ ನೊಬೆಲ್ ಪಾರಿತೋಷಕ ಪುರಸ್ಕೃತ ವಿಲಿಯುಮ್ ಗೋಲ್ಡಿಂಗ್ ಅವರ “ಲಾರ್ಡ್ ಆಫ್ ದಿ ಪ್ಲಾಯಿಸ್” ಪುಸ್ತಕದ ಸಂಭ್ರಮದ ಖುಷಿಗೆ, ಪ್ರಕಾಶಕರು ಒಂದು ಕಾರ್ಯಕ್ರಮವನ್ನು ಏರ್ಪಾಟು ಮಾಡಿದ್ದರು.

ಮತ್ತೊಂದು ಖುಷಿಯ ವಿಚಾರವೆಂದರೆ ಆ ಸಂಭ್ರಮಕ್ಕೆ ವಿಲಿಯುಮ್ ಗೋಲ್ಡಿಂಗರನ್ನು ಕೂಡ ಆಹ್ವಾನಿಸಲಾಗಿತ್ತು. ಹೀಗಾಗಿ ಓದುಗ ವರ್ಗಕ್ಕೆ ಅದೊಂದು ಹಬ್ಬದ ವಾತಾವರಣೆ ನಿರ್ಮಾಣವಾದಂತಿತ್ತು. ಇಬ್ಬರು ಮಹಾನ್ ಲೇಖಕರನ್ನು ಒಟ್ಟಿಗೆ ನೋಡಲು ಯಾರು ತಾನೇ ಬಯಸುವುದಿಲ್ಲ ನೀವೇ ಹೇಳಿ. ಆದರೆ ಅಂತಹ ಬಹುದೊಡ್ಡ ಸಂಭ್ರಕ್ಕೂ ಹೋಗಿರಲಿಲ್ಲ ಕುಲಕರ್ಣಿ. ಇಂಟರ್ನ್ಯಾಷನಲ್ ಬುಕ್ ಹೌಸ್ ನಲ್ಲಿದ್ದ ಕಾರ್ಯಕ್ರಮಕ್ಕೆ ತುಂಬು ಗರ್ದಿಯಿಂದ ಬಂದಿದ್ದ ಎಲ್ಲರು ತುಂಬಾ ನಿರಾಸೆಯಿಂದಾನೆ ಮರಳಿದ್ದರು. ಅದಾದ ನಂತರ ಅವರೇ ಹೇಳಿದ್ರು, “ಅಲ್ಲ ನಾ ಕಾರ್ಯಕ್ರಮಕ್ಕೆ ಬರ್ತೀನಿ ಅಂತ ಎಲ್ಲಿಯಾದರೂ ಹೇಳಿದ್ದೆನಾ… ಮತ್ತ್ಯಾಕೆ ಈ ನಿರಾಸೆ” ಅಂದ್ರೆ ಅವ್ರು ಬರಂಗಿಲ್ಲಾ ಅಂತ ಗೊತ್ತಿದ್ದೂ ಈ ಅಪವಾದ ಅವರಿಗೆ ಸಲ್ಲಿಸುವುದು ಸರಿಯಂತಿರಲಿಲ್ಲ. ಇದೆಲ್ಲದರ ನಡುವೆ ನನಗೆ ಅತಿಯಾಗಿ ಖುಷಿಯಾಗುವುದೆಂದರೆ ಪು. ಲ. ದೇಶಪಾಂಡೆ ಮತ್ತು ಸುನಿತಾಬಾಯಿ ದೇಶಪಾಂಡೆಯವರೊಟ್ಟಿಗೆ ಇದ್ದ ಸ್ನೇಹ ಸಂಬಂಧ ಅಷ್ಟಿಷ್ಟಲ್ಲ.

ಒಬ್ಬರನ್ನೊಬ್ಬರು ಮುಖತಃ ಎಂದೂ ಭೇಟಿಯಾಗಿರಲಿಲ್ಲ. ಆದರೆ ಇವರುಗಳ ಪತ್ರವ್ಯವಹಾರ ಮತ್ತೆ ಫೋನಿನ ಮಾತುಕತೆ ಮಾತ್ರ ಭರ್ಜರಿಯಾಗೇ ನಡೀತಿತ್ತು. ಒಂದು ಕಡೆ ಸುನಿತಾಬಾಯಿ ದೇಶಪಾಂಡೆ ಹೇಳ್ತಾರೆ, ನಮ್ಮ ಪತ್ರವ್ಯವಹಾರ ಪ್ರಾರಂಭವಾದುದ್ದರಿಂದಲೇ ನಮ್ಮ ಸ್ನೇಹ ಇಷ್ಟು ಬಲವಾಗಿ ಹಸ್ತಾಪೇಕ್ಷ ಪಡೆಯಲು ಸಾಧ್ಯವಾಯಿತು. ಇದು ಆ ಸಮಯದ ಅವಶ್ಯಕವು ಕೂಡ ಆಗಿತ್ತು. ನಾವು ಆಕಸ್ಮಿಕವಾಗಿಯೇ ನಮ್ಮಗಳ ಪರಿಚಯ ಮಾಡ್ಕೊಂಡೆವು. ನೀವು ಬಯಸಿದ ರೀತಿಯಲ್ಲೇ ನಿಮ್ಮ ಗೆಳೆಯ/ಗೆಳತಿಯ ರೂಪದಲ್ಲಿ ಸಿಕ್ಕೆವು.

ಈಗ ಕ್ರಮೇಣ ಗೆಳೆತನ ಬೆಸೆಯುತ್ತಿದೆ, ಮಾತನಾಡಲು ಸಾಧ್ಯವಾಗುತ್ತಿದೆ, ನಿಮಗೆ ನಿರಂತರವಾಗಿ ಕಾಡುವ ಹಲವು ವಿಷಯಗಳನ್ನು ಚರ್ಚಿಸಲು ಸಾಧ್ಯವಾಗುತ್ತಿದೆ. ಮೌಲ್ಯಗಳನ್ನು ಹೆಚ್ಚಿಸುವ ಅನೇಕ ಕನಸುಗಳನ್ನು ನೀವು ಹೊಂದಿದ್ದೀರಿ, ಹಾಗಾಗಿಯೇ ಏನೋ ನಮ್ಮ ಪತ್ರವ್ಯವಹಾರವು ಬೆಳೆಯಿತು ಮತ್ತು ನಮ್ಮ ಆತ್ಮವಿಶ್ವಾಸವು ಹೆಚ್ಚಾಯಿತು. ಅರೆ, ಎಷ್ಟು ಸಿಹಿ ಇದೆ ಅಲ್ವಾ, ಇವರುಗಳ ಮಾತಿನಲ್ಲಿ, ಇಷ್ಟೆಲ್ಲಾ ಓದಿದ ನನಗೆ ಇದನ್ನು ಬರೆಯಲು ಮನಸ್ಸು ತಡಿಯಲೇ ಇಲ್ಲ. ಒಂದೊಮ್ಮೆ ಕಣ್ಣಾಲಿ ತುಂಬಿ ಬಂದ್ವು. ಜಿ. ಎ. ನೀವು ಎಲ್ಲಿದ್ದರು ನನಗೆ ಅಲ್ಲಿಂದಲೆ ಹರಿಸಿ, ಆಶೀರ್ವದಿಸಿ.

‍ಲೇಖಕರು Admin

July 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: