ಸಂಗನಗೌಡ ಹಿರೇಗೌಡ ಓದಿದ ‘ಸ್ಕಾರ್‍ಲೆಟ್ ಪ್ಲೇಗ್’

ನಾಗರಿತೆಯಿಂದ-ಅನಾಗರಿಕತೆಯೆಡೆಗೆ 

ಸಂಗನಗೌಡ ಹಿರೇಗೌಡ

ಚನ್ನಪ್ಪ ಕಟ್ಟಿ ಅವರು ಅನುವಾದಿಸಿರುವ, ಜಾಕ್ ಲಂಡನ್‍ನ ‘ಸ್ಕಾರ್‍ಲೆಟ್ ಪ್ಲೇಗ್’ ಓದಿದಾಗ ಮುಖ್ಯವಾದ ಎರಡು ಕೃತಿಗಳು ಥಟ್ಟನೆ ನೆನಪಿಗೆ ಬಂದವು. ಒಂದು: ಜಗದೀಶ್ ಕೊಪ್ಪರವರ ‘ಬಿಳಿಸಾಹೇಬನ ಭಾರತ’. ಎರಡು: ತೇಜಸ್ವಿಯವರು ಅನುವಾದಿಸಿದ ‘ಒಂದು ಹುಲ್ಲಿನ ಕ್ರಾಂತಿ’ ಈ ಎರಡು ಕೃತಿಗಳನ್ನು ‘ಸ್ಕಾರ್‍ಲೆಟ್ ಪ್ಲೇಗ್’ ಜತೆಗಿಟ್ಟು ನೋಡುವಾಗ ಈ ಮೂರೂ ಕೃತಿಗಳ ವಸ್ತು, ವಿಷಯ ಭಿನ್ನವಾಗಿದ್ದವಾದರೂ ‘ಬಿಳಿಸಾಹೇಬನ ಭಾರತ’ದಲ್ಲಿ ಬರುವ ‘ಜಿಮ್ ಕಾರ್ಬೆಟ್’ ಮತ್ತು ‘ಒಂದು ಹುಲ್ಲಿನ ಕ್ರಾಂತಿ’ಯಲ್ಲಿನ ಮಸನೊಬ ಪುಕುವೊಕ’ ಹಾಗೂ ‘ಸ್ಕಾರ್‍ಲೆಟ್ ಪ್ಲೇಗ್’ ದಲ್ಲಿ ಬರುವ ವಯಸ್ಸಾದ ‘ಗ್ಲ್ಯಾನ್ಸರ್’ ಎನ್ನುವ ಮುದುಕ. ಈ ಮೂರೂ ಜನರಲ್ಲಿ ಬದುಕಿನ ದಟ್ಟವಾದ ಅನುಭವ ಲೋಕವನ್ನು ತಮ್ಮ ತಮ್ಮ ಎದುರಿಗಿರುವವರ ಮುಂದಿಟ್ಟಿರುವುದನ್ನು ಏಕಕಾಲಕ್ಕೆ ಕಣ್ಣು ಮುಂದೆ ಬಂದು ನಿಲ್ಲುತ್ತದೆ. 

ಜಗತ್ತಿನಲ್ಲಿ ಯುದ್ಧವಾಗಲಿ, ಪ್ರವಾಹವಾಗಲಿ, ರೋಗರುಜಿನಗಳಾಗಲಿ ಒಟ್ಟಿನಲ್ಲಿ ಏನೇ ಸಂಭವಿಸಿದರೂ ಇವುಗಳ ಪೆಟ್ಟು ಅತಿ ಹೆಚ್ಚು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮೇಲೆಯೇ ಬೀಳುತ್ತದೆನ್ನುವ ಮಾತು ನಮ್ಮ ನಡುವೆ ಇದೆ. ಆದರೆ ಈ ಕಾದಂಬರಿ ಈ ಮೇಲಿನವರನ್ನೂ ಒಳಗೊಂಡು ಒಟ್ಟು ಜೀವಸಂಕುಲವನ್ನು ಪ್ರಕ್ಷುಬ್ಧ ಸ್ಥಿತಿಗೆ ದೂಡುತ್ತದೆನ್ನುವ ಚಿತ್ರಣ ಈ ಕಾದಂಬರಿ ಬಿಚ್ಚಿಡುತ್ತಾ ಹೋಗುತ್ತದೆ. ಮತ್ತು ಇತ್ತೀಚಿನ ‘ಕೊರೋನಾ’ ವೈರಸ್‍ನಿಂದ ಇಡೀ ಲೋಕದಲ್ಲಿ ಏರುಪೇರುಗಳಾಗುತ್ತಿರುವುದೂ ನಮ್ಮ ಕಣ್ಣ ಮುಂದೆಯೇ ಇದೆ. 

ಗಾಂಧೀಜಿ ಮತ್ತು ಬಾಬಾಸಾಹೇಬ್‍ರ ಮುಖ್ಯವಾದ ನಿಲುವನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆಂದು ತೋರುತ್ತದೆ. ಗಾಂಧೀಜಿಯವರು ‘ಈ ದೇಶವನ್ನು ಗ್ರಾಮಭಾರತವಾಗಬೇಕಾದರೆ, ಜನರು ನಗರಗಳಿಂದ ಹಳ್ಳಿಯ ಕಡೆಗೆ ಮುಖ ಮಾಡಬೇಕು’ ಎಂದು ಹೇಳಿದರೆ, ಬಾಬಾಸಾಹೇಬರು ‘ಅಸ್ಪೃಶ್ಯತೆ ಹೋಗಬೇಕಾದರೆ, ದಲಿತರು, ಹಿಂದುಳಿದವರು ವಿದ್ಯಾವಂತರಾಗಿ ಉನ್ನತ ಹುದ್ದೆ ಹಿಡಿದು ನಗರಗಳನ್ನು ಸೇರಿದಾಗ ಮಾತ್ರ ಸಾಧ್ಯ’ ಈ ಇಬ್ಬರೂ ಮಹಾನಿಯರ ದಾರಿ ಬೇರೆ ಬೇರೆಯಾಗಿದ್ದರೂ ಗುರಿ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದೇ ಆಗಿದೆ. ಆದರೆ ಈ ಕಾದಂಬರಿ ಕಟ್ಟಿಕೊಡುವ ಚಿತ್ರಣ ಅಭಿನ್ನವಾಗಿದೆ.

ಭಯಂಕರವಾದ ‘ಪ್ಲೇಗ್’ ಎನ್ನುವ ರೋಗವು ಮನುಕುಲವನ್ನು ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಚಲಿಸುವಂಥ ಸ್ಥಿತಿಯನ್ನು ನಿಧಾನವಾಗಿ ಬಿಚ್ಚಿಡುತ್ತಾ ಹೋಗುತ್ತದೆ. ಅನಾಗರಿಕ ಸ್ಥಿತಿಯಲ್ಲಿರುವ ಎಡ್ವಿನ್, ಹೂ ಹೂ, ಹೇರ್‍ ಲಿಪ್‍ನಂಥವರನಂಥವರ ಮುಂದೆ ಗ್ರ್ಯಾನ್ಸರ್ ಎನ್ನುವ ನಾಗರಿಕ ಮುದುಕ ತನ್ನ ಹಿಂದಣ ಕತೆಯನ್ನು ದಶಲಕ್ಷ, ಸ್ಕಾರ್‍ಲೆಟ್, ಜೀವಾಣು, ಸೂಕ್ಷದರ್ಶಕ, ಸಿಡುಬು, ಬೆಕ್ಟೀರಿಯಮ್ ಈ ತರಹದ ವಿಜ್ಞಾನದ ಪರಿಭಾಷೆ ಬಳಸಿ ರೋಗದ ಕುರಿತು ಹೇಳುವಾಗ ಅಪಹಾಸ್ಯ ಮಾಡುತ್ತಾರೆ.

ಸಾಮಾಜಿಕ ಜವಾಬ್ದಾರಿ ಇರುವ ಗ್ರ್ಯಾನ್ಸರ್ ಅವರದ್ದೇ ಪರಿಸರದ ಕೆಂಪುರೋಗ, ಸಿಂಪಿಯ ಚಿಪ್ಪು, ಬೆಣಚು ಕಲ್ಲು, ಉಸುಕು, ಬೆರಳು ಇಷ್ಟೇ ಅಲ್ಲದೆ ಸತ್ತವರ ಹಲ್ಲಗಳನ್ನೂ ಬಳಸಿಕೊಳ್ಳುವುದು ಅನಾಗರಿಕತೆಯಲ್ಲಿರುವ ಹುಂಬತನವನ್ನು ಕ್ರೂರವ್ಯಂಗ್ಯ ಮಾಡಿದಂತೆ ತೋರುತ್ತದೆ. ಇಂಥ ಅನಾಗರಿಕತೆಯು ಶಾಫರ್ ನಲ್ಲಿಯೂ ಇತ್ತು. ಈ ಎಲ್ಲಾ ಅನಾಗರಿಕ ಸ್ಥಿತಿಯ ಕುರಿತು ಗ್ರ್ಯಾನ್ಸರ್ ನ ವಿಷಾದದ ಮಾತು ‘ನಾಗರಿಕತೆ ಎಲ್ಲವನ್ನೂ ಕಳೆದುಕೊಂಡು ಅನಾಗರಿಕವಾಗಿರುವ, ಜಗತ್ತಿನ ಈ ಹುಡುಗರ ಎದುರಿಗೆ ಜೀವಾಳಗಳ ಕುರಿತು, ಅತ್ಯಂತ ನೂತನವಾದ ಅರವತ್ತು ವರ್ಷಗಳ ಹಿಂದೆ ಪ್ರಚಲಿತವಿದ್ದ ವಿಜ್ಞಾನ ಸಿದ್ಧಾಂತಗಳನ್ನು ಹೇಳುತ್ತಿದ್ದೇನಲ್ಲ’ ಈ ಹತಾಶದ ನಡುವೆಯೂ ಈತನಿಗೆ ಬುಡಕಟ್ಟುಗಳನ್ನು ಕ್ರೋಢೀಕರಿಸಿ ನಾಗರಿಕ ಸಮಾಜವನ್ನು ಕಟ್ಟುವ ಭರವಸೆಯ ಮೂಲಕ ಕಾದಂಬರಿ ಕೊನೆಗಳ್ಳುತ್ತದೆ.

ಚೆನ್ನಪ್ಪ ಕಟ್ಟಿಯವರು ಚಿಕ್ಕ ಚಿಕ್ಕ ವಾಕ್ಯಗಳು ಮತ್ತು ತೀರಾ ಅನಿವಾರ್ಯವೆನಿಸಿದಲ್ಲಿ ಕನ್ನಡ ನೆಲಕ್ಕೆ ಒಗ್ಗುವ ವಿಶೇಷ ನುಡಿಗಟ್ಟುಗಳನ್ನು ಬಳಸಿ ಈ ಕಾದಂಬರಿ ಕನ್ನಡ ನೆಲದ್ದೇ ಎನ್ನುವಷ್ಟರ ಮಟ್ಟಿಗೆ ಗಟ್ಟಿಯಿದೆ. ಆದರೆ ಕಾದಂಬರಿಯಲ್ಲಿ ಗ್ರ್ಯಾನ್ಸರ್ ಪ್ರಾರಂಭದಲ್ಲಿ ಸ್ಕಾರ್‍ಲೆಟ್ ಪ್ಲೇಗ್ ಕುರಿತು ಹೇಳುವಾಗಿನ ನಾಟಕೀಯತೆ, ತಿರುವುಗಳು. ಕಾದಂಬರಿಯ ಮಧ್ಯದಲ್ಲಿ ಸಿಗುವುದಿಲ್ಲ. ಅಲ್ಲೇನಿದ್ದರೂ ವರದಿ ಹಾಗೆ, ಹೇಳುತ್ತಾ ಹೋಗುತ್ತದೆ.

‍ಲೇಖಕರು Admin

May 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: