ಷೇಕ್ಸ್ಪಿಯರ್ ಗೆ 450ರ ಜನ್ಮ ದಿನದ ಸಂಭ್ರಮ

ಗೊರೂರು ಶಿವೇಶ್

ವಿಶ್ವರಂಗಭೂಮಿಯನ್ನು ತನ್ನ ಅದ್ಭುತನಾಟಕಗಳಿಂದ ಪರವಶಗೊಳಿಸಿದ ಕವಿ, ನಾಟಕಕಾರ ವಿಲಿಯಂ ಷೇಕ್ಸ್ ಪಿಯರ್ಗೆ ಈಗ 450ರ ಜನ್ಮದಿನದ ಸಂಭ್ರಮ. ವಿಶೇಷವೆಂದರೆ ಆತನ ಮರಣ ದಿನವೂ ಏಪ್ರಿಲ್ 23 (ಜನನ ಏಪ್ರಿಲ್ 23, 1564 ಮರಣ ಏಪ್ರಿಲ್ 23, 1616)
ಇಂಗ್ಲೆಂಡಿನ ಏವನ್ ನದಿ ತೀರದಲ್ಲಿರುವ ಸ್ಟ್ರಾಟ್ಫರ್ಡ್ ಎನ್ನುವ ಊರಿನಲ್ಲಿ ಜನನ. ತಂದೆ ಜಾನ್ ಷೇಕ್ಸ್ ಪಿಯರ್ ಕೈಗವಸಿನ ವ್ಯಾಪಾರಿ. ತಾಯಿ ಪ್ರತಿಷ್ಠಿತ ಕುಟುಂಬದ ಮೇರಿ ಆರ್ಡನ್. ಜಾನ್ ಆ ಊರಿನ ಮೇಯರ್ ಆದರೂ ಮುಂದೆ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಲಾರದೆ ಸಾಲಗಾರನಾದ. ಇದರಿಂದಾಗಿ ಶಾಲಾಜೀವನವನ್ನು ಸುಸೂತ್ರವಾಗಿ ಕಳೆದ ಷೇಕ್ಸ್ ಪಿಯರ್ ಕಾಲೇಜಿಗೆ ಹೋಗಲಿಲ್ಲ. ಆದರೆೆ ಆ ಊರಿನ ಪ್ರತಿಷ್ಠಿತ ಶಾಲೆಯಲ್ಲಿ ಅತ್ಯುತ್ತಮ ಪ್ರಾಧ್ಯಾಪಕರಿಂದ ಅವನ ಶಿಕ್ಷಣವಾಯಿತು. ವಿಶೇಷವೆಂದರೆ ಆ ಕಾಲದಲ್ಲಿ ಅವನು ಆ ಕಾಲದಲ್ಲಿ ಕಲಿತಿದ್ದು ಅಂತರರಾಷ್ಟ್ರೀಯ ಭಾಷೆಯಾಗಿದ್ದ ಲ್ಯಾಟೀನ್ ಜೊತೆಗೆ ಗ್ರೀಕ್. (ನಮ್ಮಲ್ಲೀಗ ಇಂಗ್ಲೀಷಿನ ವ್ಯಾಮೋಹದಂತೆ ಆಗ ಲ್ಯಾಟೀನ್ ಭಾಷೆಯ ಮೋಹ).

ಇನ್ನೂ ತನ್ನ ಹದಿನೆಂಟನೆ ವಯಸ್ಸಿನಲ್ಲಿ ತನಗಿಂತ ಒಂಬತ್ತು ವರ್ಷ ದೊಡ್ಡವಳಾದ ಆ್ಯನ್ ಹ್ಯಾತವೇಯಳನ್ನು ಮದುವೆಯಾದ. ಆಕೆಗೆ ಮಗಳು ಸೂಸಾನ್, ಅವಳಿ ಮಕ್ಕಳಾದ ಹ್ಯಾಮ್ನೇಟ್ ಮತ್ತು ಜೂಡಿತ್ 1585ರಲ್ಲಿ ಜನಿಸಿದರು. ಮುಂದೆ ಆತ ಇಂಗ್ಲೆಂಡಿಗೆ ಬಂದ. ಆತ ಏಕೆ, ಹೇಗೆ ಬಂದ ಎಂಬುದರಲ್ಲಿ ಸ್ಪಷ್ಟತೆ ಇಲ್ಲ. ಆದರೆ 1592 ರವರೆಗೆ ಲಾಯರ್ ರೊಬ್ಬರನಿಗೆ ಸಹಾಯಕನಾಗಿದ್ದನೆಂದು ಇನ್ನೂ ಕೆಲವರು ಆತ ನಾಟಕಮಂದಿರದ ಹೊರಗೆ ಶ್ರೀಮಂತರ ಕುದುರೆಯನ್ನು ಕಾಯುತ್ತಿದ್ದನೆಂದು ಹೇಳುತ್ತರಾದರೂ ಖಚಿತತೆ ಇಲ್ಲ. ಅದೇ ಸುಮರಿಗೆ ಹೆನ್ರಿ-ದ-ಸಿಕ್ಸ್ತ್ ನಾಟಕವನ್ನು ರಚಿಸಿದ. ಆದರೆ ಅದೇ ಸಂದರ್ಭದಲ್ಲಿ ಅಪ್ಪಳಿಸಿದ ಪ್ಲೇಗಿನಿಂದಾಗಿ ನಾಟಕದ ಪ್ರದರ್ಶನಕ್ಕೆ ಅಡಚಣೆಯಾಯಿತು. ಆ ಸಂದರ್ಭದಲ್ಲಿ ನಾಟಕಗಳಿಗಿಂತ ಕವನಗಳಿಗೆ ಪ್ರಾಶಸ್ತ್ಯವಿದ್ದರಿಂದ ‘ವೀನಸ್ ಅಂಡ್ ಅಡೋನಿಸ್ ಮತ್ತು ದ ರೇಪ್ ಆಫ್ ಉಕ್ರೀಸ್’ ಎಂದ ಪದ್ಯಗಳನ್ನು ಬರೆದು ಕೀರ್ತಿ ಮತ್ತು ಹಣವನ್ನು ಸಂಪಾದಿಸಿದ.

ತನ್ನ ಆಸಕ್ತಿಯ ಮಾಧ್ಯಮ ‘ನಾಟಕ’ ಎಂದರಿತ ಷೇಕ್ಸ್ ಪಿಯರ್ ಮುಂದೆ ನಾಟಕ ಶಾಲೆಗಳು ಪುನರರಾಂಭಗೊಂಡಾಗ ಆಗಿನ ರಾಣಿ ಎಲಿಜಬೆತ್ ನ ಕೃಪಕಟಾಕ್ಷಗೊಳಗಾಗಿದ್ದ ‘ಲಾರ್ಡ್ ಚೆಂಬರ್ಲಿನ್ಸ್ ಮನ್’ ನಾಟಕ ತಂಡದಲ್ಲಿ ಪ್ರವೇಶಿಸಿದ. ಇದರಿಂದಾಗಿ ಅವನ ಭಾಗ್ಯೋದಯದ ಬಾಗಿಲು ತೆರೆಯಿತು. ಅದೇ ಸಂದರ್ಭದಲ್ಲಿ ರೋಮಿಯೋ ಅಂಡ್ ಜೂಲಿಯಟ್, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ದ ಟೇಮಿಂಗ್ ಆಫ್ ಷ್ರೂ, ದ ಮರ್ಚೆಂಟ್ ಆಫ್ ವೆನಿಸ್’ ಮುಂತಾದ ನಾಟಕಗಳಿಂದ ಜನಪ್ರಿಯವಾದ.
ಆ ಕಾಲದಲ್ಲಿ ನಟರ ಮತ್ತು ನಾಟಕಕಾರರ ಬಗ್ಗೆ ಪ್ರತಿಷ್ಠಿತ ವಲಯಗಳಲ್ಲಿ ಸದಭಿಪ್ರಾಯ ಇರಲಿಲ್ಲ. ಆದರೆ ಎಲಿಜಬೆತ್ ರಾಣಿಗೆ ಸಾಹಿತ್ಯ ಮತ್ತು ನಾಟಕಗಳಲ್ಲಿ ಇದ್ದ ವಿಶೇಷ ಆಸಕ್ತಿಯ ಪರಿಣಾಮವಾಗಿ ಉತ್ತೇಜಿತನಾದ ಷೇಕ್ಸ್ ಪಿಯರ್ ತನ್ನ ಸಹನಟರೊಂದಿಗೆ 1599ರಲ್ಲಿ ಗ್ಲೋಬ್ ಥಿಯೇಟರ್ನ್ನು ತೆರೆದ. ಆ ರಂಗಮಂದಿರದಲ್ಲಿ ಪ್ರತಿ ಆರು ತಿಂಗಳಿಗೊಂದರಂತೆ ‘ಜೂಲಿಯಸ್ ಸೀಸರ್’, ‘ಆ್ಯಸ್ ಯು ಲೈಕ್ ಇಟ್’, ‘ಟ್ವಲ್ತ್ ನೈಟ್’, ‘ಹ್ಯಾಮ್ಲೆಟ್’, ‘ಒಥೆಲೊ’, ‘ಕಿಂಗ್ ಲಿಯರ್’, ‘ಮ್ಯಾಕ್ಬೆತ್’, ಮುಂತಾದ ನಾಟಕಗಳು ಇಲ್ಲಿ ಪ್ರದರ್ಶನಗೊಂಡವು.
ಈ ನಾಟಕಗಳು ಅವನಿಗೆ ಹಣದ ಜೊತೆ ಪ್ರತಿಷ್ಠೆಯನ್ನು ತಂದವು. 1608ರ ಸುಮಾರಿಗೆ ಇಂಗ್ಲೆಂಡಿನಿಂದ ತನ್ನ ಊರಿಗೆ ಮರಳಿದ. ಕುಟುಂಬವನ್ನು ತನ್ನ ಊರಿನಲ್ಲಿರಿಸಿ ತಾನೊಬ್ಬನೆ ಇಂಗ್ಲೆಂಡಿನಲ್ಲಿ ಕಳೆದ ಷೇಕ್ಸ್ ಪಿಯರ್ನಿಗೆ ರಂಗಜೀವನ ದಣಿವನ್ನು ತಂದಿತ್ತು. 1616ರ ಏಪ್ರಿಲ್ 23 ರಂದು ಮರಣವನ್ನಪ್ಪಿದ. ಅವನ ಗೆಳೆಯ ಮತ್ತೊಬ್ಬ ಪ್ರಸಿದ್ಧ ನಾಟಕಕಾರ ಬೆನ್ಜಾನ್ಸನ್ ಕವಿ ಡ್ರೇಟರ್ನೊಂದಿಗೆ ಬೆರೆತ ಸಂದರ್ಭದಲ್ಲಿ ಅಸ್ವಸ್ಥನಾಗಿದ್ದ ಆತ ವಿಪರೀತವಾಗಿ ಕುಡಿದ ಪರಿಣಾಮವಾಗಿ ಅಸುನೀಗಿದ ಎಂದೂ ಕೂಡಾ ಹೇಳಲಾಗುತ್ತದೆ.
38 ವಿನೋದ ಹಾಗೂ ದುರಂತ ನಾಟಕಗಳು ಮತ್ತು 154 ಸಾನೆಟ್ಗಳನ್ನು ರಚಿಸಿ ವಿಶ್ವ ಸಾಹಿತ್ಯ ಮತ್ತು ನಾಟಕರಂಗವನ್ನು ಶ್ರೀಮಂತಗೊಳಿಸಿದ ಷೇಕ್ಸ್ ಪಿಯರ್ನ ಕಾವ್ಯ ಮತ್ತು ನಾಟಕಗಳು ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳಿಗೂ ಅನುವಾದಗೊಂಡಿದೆ. ಕನ್ನಡದಲ್ಲೂ ಆತನ ಬಹುತೇಕ ನಾಟಕಗಳು ಅನುವಾದಗೊಂಡು ಪ್ರದರ್ಶನಗೊಂಡಿವೆ. ಒಂದೇ ನಾಟಕ ವಿವಿಧ ಲೇಖಕರುಗಳಿಂದಲೂ ಅನುವಾದಗೊಂಡಿರುವುದು ವಿಶೇಷ.

ಷೇಕ್ಸ್ ಪಿಯರ್ ತನ್ನ ನಾಟಕದ ವಸ್ತುವಾಗಿ ಹಿಂದಿನ ನಾಟಕಗಳು, ಪುರಾಣ, ಇತಿಹಾಸದ ಭಾಗಗಳನ್ನು ಆಯ್ಕೆಮಾಡಿಕೊಂಡರೂ ಮನುಷ್ಯ ಜೀವನದ ವೈರುಧ್ಯಗಳನ್ನು ನೋವು, ಹತಾಶೆ, ಆಸೆ, ದುರಾಸೆ, ಪ್ರೀತಿ, ಅನುಕಂಪ, ಅಹಂಕಾರ ಮುಂತಾದ ಗುಣಾವಗುಣಗಳನ್ನು ತೆರೆದಿಟ್ಟ ಪರಿಣಾಮವಾಗಿ ಏಕಕಾಲಕ್ಕೆ ಪಂಡಿತರೊಂದಿಗೆ ಪಾಮರರನ್ನು ಮೆಚ್ಚಿಸಿದ. ಹೀಗಾಗಿ ಸಮಾದಿ ಬಳಿ ಇರುವ ಅವನ ವಿಗ್ರಹದ ಕೆಳಗೆ ಕೆತ್ತಿರುವ ಚರಮನುಡಿಗಳಲ್ಲಿ ‘ಬುದ್ಧಿ ಶಕ್ತಿಯಲ್ಲಿ ಸಾಕ್ರಟೀಸ್, ಕಲೆಯಲ್ಲಿ ಒಬ್ಬ ವರ್ಜಿಲ್’ ಎಂದಿದೆ. ಜೊತೆಗೆ ‘ಪ್ರಿಯಮಿತ್ರ ಯೆಸುವಿನ ಆಣೆ. ಇಲ್ಲಿ ಹುದುಗಿಸಿರುವ ಮಣ್ಣನ್ನು ಅಗೆಯಬೇಡ, ಈ ಕಲ್ಲುಗಳನ್ನು ಹಾಗೆಯೇ ಉಳಿಸುವವನಿಗೆ ದೇವರ ಅನುಗ್ರಹವಿರಲಿ. ನನ್ನ ಎಲುಬುಗಳನ್ನು ಕದಲಿಸುವವನಿಗೆ ಶಾಪವಿರಲಿ’ ಎಂದಿದ್ದು ಸ್ವತಃ ತಾನೇ ಬರೆದಿದ್ದಾನೆ ಎಂದು ಅದರ ಊಹಾಪೋಹಗಳಿವೆ.
ಚಲನಚಿತ್ರ ಮಾಧ್ಯಮವು ಅವನ ಕೃತಿಗಳಿಗೆ ಉಪಕೃತವಾಗಿದೆ. ಇಂದಿಗೂ ಕಾಮಿಡಿ ಸಿನಿಮಾಗಳ ಮೂಲವು ಷೇಕ್ಸ್ ಪಿಯರ್ನ ಎರಡು ನಾಟಕಗಳನ್ನು ಆದರಿಸಿರುವುದು ಆ ನಾಟಕಗಳ ವಿಶ್ವವ್ಯಾಪಕತೆಗೆ ಸಾಕ್ಷಿಯಾಗಿದೆ. ಅವನ ಟೇಮಿಂಗ್ ಆಫ್ ದಿ ಷ್ರೂ (ಗಯ್ಯಾಳಿಯನ್ನು ಸಾಧು ಮಾಡುವಿಕೆ) ಕನ್ನಡದ ‘ನಂಜುಂಡಿ ಕಲ್ಯಾಣ’, ‘ಸಂಪತ್ತಿಗೆ ಸವಾಲು’, ‘ನೀನನ್ನ ಗೆಲ್ಲಲಾರೆ’ ಮುಂತಾದ ಸಿನಿಮಾಗಳಿಗೂ ಹಾಗೂ ಕಾಮಿಡಿ ಆಫ್ ಎರರ್ಸ್ ನ ನಾಟಕದ ಗೊಂದಲದಿಂದಾಗಿ ಉಂಟಾಗುವ ಹಾಸ್ಯದ ಘಟನೆಗಳನ್ನು ಹೆಣೆದ ‘ಉಲ್ಟಾ-ಪಲ್ಟಾ’, ‘ಗೋಲ್ಮಾಲ್’ ಸೀರಿಸ್ ನ ಸಿನಿಮಾಗಳು ಮುಂತಾಗಿ ನೂರಾರು ಸಿನಿಮಾಗಳ ದ್ರವ್ಯವಾಗಿದೆ.
ಯಾವುದೇ ನಾಟಕಕಾರ, ನಾಟಕದ ಪ್ರಮುಖಘಟ್ಟ ಮತ್ತು ಅಲ್ಲಿನ ಪ್ರಮುಖಪಾತ್ರಧಾರಿಗಳ ಚಿತ್ರಣವನ್ನು ಸಮರ್ಥವಾಗಿ ಮಾಡುವನಾದರೂ ನಿಜಕ್ಕೂ ಅವನಿಗೆ ಸವಾಲೆನಿಸುವುದು ಸಣ್ಣ ಪುಟ್ಟ ಪಾತ್ರಗಳ ಚಿತ್ರಣ ಮತ್ತು ಪ್ರಾಸಂಗಿಕವಾಗಿ ಕಥೆಯ ಬೆಳವಣಿಗೆಗೆ ರಚಿಸಬೇಕಾದ ಸನ್ನಿವೇಶಗಳನ್ನು ಹೆಣೆಯಬೇಕಾದ ಸಂದರ್ಭ. ಷೇಕ್ಸ್ ಪಿಯರ್ನ ಸಾಮರ್ಥ್ಯ ವಿರುವುದು ಅಲ್ಲಿಯೆ. ಪ್ರತಿಯೊಂದು ಸನ್ನಿವೇಶ ಮತ್ತು ಪಾತ್ರಗಳು ನೋಡುಗರು ಮತ್ತು ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡುವುರಲ್ಲಿ ಅವನ ಕೌಶಲ್ಯವು ಸಾಬೀತಾಗಿದೆ. ಇಂಗ್ಲೀಷ್ ನಿಘಂಟಿಗೆ ಸುಮಾರು ಎರಡು ಸಾವಿರ ಪದಗಳು, ನುಡಿಗಟ್ಟುಗಳನ್ನು ನೀಡಿದ ಕೀರ್ತಿ, ಜೊತೆಗೆ ನಾಮಪದಗಳನ್ನು ಕ್ರಿಯಾಪದವನ್ನಾಗಿಸಿ, ಕ್ರಿಯಾ ಪದಗಳನ್ನು ಗುಣವಾಚಕವನ್ನಾಗಿಸಿ ಭಾಷಾ ಬಳಕೆಯಲ್ಲಿ ಹೊಸ ಪ್ರಯೋಗ ಮಾಡುವುದರಲ್ಲಿಯೂ ಆತ ಭಾಷೆಗೆ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾನೆ.
 
ಕಳೆದ ನಾಲ್ಕು ನೂರು ವರ್ಷಗಳಿಂದ ವಿಶ್ವನಾಟಕ ಸಾರ್ವಭೌಮನಾಗಿ ಇಂದಿಗೂ ವಿಮರ್ಶಕರಿಗೆ, ಸಾಹಿತ್ಯಾಸಕ್ತರಿಗೆ, ರಂಗಪ್ರೇಮಿಗಳಿಗೆ ಆಹಾರವಾಗಿರುವ ಷೇಕ್ಸ್ ಪಿಯರ್ನ ನಾಟಕಗಳು ಇವತ್ತಿಗೂ ಆತನ ಪ್ರಸ್ತುತತೆಯನ್ನು ಸಾರುತ್ತಾ ಮುಂದೆಯೂ ಆತನ ಸ್ಥಾನ ಚಿರಸ್ಥಾಯಿಯಾಗಿ ಉಳಿಯುವ ಸೂಚನೆಯಂತೂ ನೀಡಿವೆ.
 
 
ಷೇಕ್ಸ್ ಪಿಯರ್ನ ಕೆಲವು ಉಲ್ಲೇಖಗಳು
 
ಎಲ್ಲರನ್ನು ಪ್ರೀತಿಸು, ಕೆಲವರನ್ನು ನಂಬು, ಯಾರಿಗೂ ಕೆಡಕೆಣಿಸಬೇಡ.
ಕೆಲವರು ಹುಟ್ಟಿನಿಂದ ಶ್ರೇಷ್ಠರು, ಕೆಲವರು ಶ್ರೇಷ್ಠತೆಯನ್ನು ಸಾದಿಸುತ್ತಾರೆ. ಮತ್ತು ಕೆಲವರು ಶ್ರೇಷ್ಠತೆಯು ತಮ್ಮ ಮೇಲೆ ಬೀಳುವಂತೆ ಮಾಡುತ್ತಾರೆ.
ಜಗವು ಒಂದು ರಂಗಭೂಮಿ. ಮತ್ತೆಲ್ಲ ಪುರುಷ ಮತ್ತು ಸ್ತ್ರೀಯರು ಪಾತ್ರಧಾರಿಗಳು. ಅವರಿಗೆಲ್ಲ ಪ್ರವೇಶ ನಿರ್ಗಮನಗಳಿವೆ. ಅವನು ತನ್ನ ನಾಟಕದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಬೇಕು.
ಜೀವನ ಮೂರ್ಖ ಹೇಳಿದ ಕಥೆ, ಸದ್ದು, ಗದ್ದಲ, ಏನನ್ನು ಸೂಚಿಸದು.
ದೇವರು ಒಂದು ಮುಖವನ್ನು ನೀಡಿದರೆ, ನಾವು ಇನ್ನೊಂದನ್ನು ಧರಿಸುತ್ತೇವೆ.
ಮುಗ್ಧತೆ ದೇವರ ಶಾಪ, ಜ್ಞಾನ ಸ್ವರ್ಗಕ್ಕೆ ಹಾರಿಸುವ ರಕ್ಕೆ
ಎಲ್ಲರನ್ನು ಕೇಳು ಕೆಲವರೊಂದಿಗೆ ಮಾತಾಡು.
ಹೇಡಿಗಳು ಅನೇಕ ಬಾರಿ ಸಾವನಪ್ಪಿದರೆ, ಶೌರ್ಯವಂತ ಒಮ್ಮೆ ಮಾತ್ರ ಸಾವನ್ನಪ್ಪುತ್ತಾನೆ.
ತಪ್ಪಿತಸ್ಥನ ಮನ ಅನುಮಾನದ ಬೇಟೆ.
ಒಂದು ನಿಮಿಷದ ತಡಕ್ಕಿಂತ ಮೂರು ಗಂಟೆ ಮೊದಲಿರುವುದು ಮೇಲು.
ಒಳ್ಳೆಯವರು ಕೆಟ್ಟವರು ಜಗದಲಿಲ್ಲ, ನಮ್ಮ ಯೋಚನೆಗಳು ಹಾಗಾಗಿಸುತ್ತವೆ.
ಕೀರ್ತಿ ಅಲೆಯಂತೆ, ವಿಸ್ತರಿಸುತ್ತಾ ಹೋಗಿ ಕೊನೆಗೆ ನಾಶವಾಗುತ್ತದೆ.
ಕೆಟ್ಟ ಸುದ್ದಿಯನ್ನು ಹೊತ್ತು ಹಾರುವ ಹಕ್ಕಿಗೆ ನಾಲ್ಕು ರೆಕ್ಕೆಗಳು.
 
 
 

‍ಲೇಖಕರು avadhi

May 3, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. Anonymous

  ಎಲ್ಲರನ್ನು ಪ್ರೀತಿಸು, ಕೆಲವರನ್ನು ನಂಬು, ಯಾರಿಗೂ ಕೆಡಕೆಣಿಸಬೇಡ.
  ಕೆಲವರು ಹುಟ್ಟಿನಿಂದ ಶ್ರೇಷ್ಠರು, ಕೆಲವರು ಶ್ರೇಷ್ಠತೆಯನ್ನು ಸಾದಿಸುತ್ತಾರೆ. ಮತ್ತು ಕೆಲವರು ಶ್ರೇಷ್ಠತೆಯು ತಮ್ಮ ಮೇಲೆ ಬೀಳುವಂತೆ ಮಾಡುತ್ತಾರೆ.
  ಜಗವು ಒಂದು ರಂಗಭೂಮಿ. ಮತ್ತೆಲ್ಲ ಪುರುಷ ಮತ್ತು ಸ್ತ್ರೀಯರು ಪಾತ್ರಧಾರಿಗಳು. ಅವರಿಗೆಲ್ಲ ಪ್ರವೇಶ ನಿರ್ಗಮನಗಳಿವೆ. ಅವನು ತನ್ನ ನಾಟಕದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಬೇಕು.
  ಜೀ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: