ಶ್ವೇತಾರಾಣಿಯವರ ಮಹತ್ವದ ನಿರ್ದೇಶನದ ‘ಆ ಲಯ ಈ ಲಯ’

ಕಿರಣ ಭಟ್‌, ಹೊನ್ನಾವರ

—-

ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದರೆ ನೀನಾಸಮ್‌ ತಿರುಗಾಟದ ನಾಟ್ಕಗಳು ಉತ್ತರ ಕನ್ನಡಕ್ಕೆ ಬರುತ್ತಿದ್ದುದು ಕಡಿಮೆಯೇ. ಮಂಚಿಕೇರಿಯ ʼರಾಜರಾಜೇಶ್ವರಿ ರಂಗ ವಿಭಾಗʼ ದವರು ಪ್ರತಿವರ್ಷದ ವ್ರತದಂತೆ ತಿರುಗಾಟ ನಾಟ್ಕಗಳನ್ನು ಆಡಿಸುತ್ತ ಬಂದಿದ್ದಾರೆ. ಪ್ರಾರಂಭದ ದಿನಗಳಲ್ಲಿ ಶಿರಸಿಯ ʼರಂಗ ಸಂಗʼ ದವರು ಕೆಲವು ವರ್ಷ ಆಡಿಸಿದ್ದರಾದರೂ ಮುಂದೆ ಅದು ಕಾರಣಾಂತರಗಳಿಂದ ನಿಂತುಹೋಯಿತು. ಕೈಗಾದಲ್ಲಿಯೂ ಪ್ರತಿ ವರ್ಷ ಈ ನಾಟಕಗಳಾಗ್ತಿದ್ದ ನೆನಪು. ಹೊನ್ನಾವರದಲ್ಲಿ ಜೀಯು ಭಟ್ಟರು ನಿರಂತರವಾಗಿ ತಿರುಗಾಟದವರನ್ನು ಕರೆಸಿ ಆಡಿಸ್ತಿದ್ದ ನಾಟಕಗಳು ಇತ್ತೀಚೆಗೆ ನಿಂತುಹೋಗಿದ್ದವು. ಈಗ ಮತ್ತೆ ಕಾಸರಕೋಡಿನ ರಂಗಪ್ರೇಮಿ ಅಶೋಕ ಕಾಸರಕೋಡ್‌ ರ ‌ ʼಮಾತೃಛಾಯಾ ಟ್ರಸ್ಟ್ʼ ಕಳೆದ ಮೂರು ವರ್ಷಗಳಿಂದ ತಿರುಗಾಟದ ನಾಟ್ಕಗಳನ್ನು ಆಡಿಸ್ತಿದೆ. ಈ ವರ್ಷದ ತಿರುಗಾಟದ ನಾಟ್ಕಗಳು ಇತ್ತೀಚೆಗೆ ಹೊನಾವರದಲ್ಲಿ ಪ್ರದರ್ಶನ ಕಂಡವು. ಅವುಗಳ ಕುರಿತ ಚಿಕ್ಕ ಬರಹ ಇಲ್ಲಿದೆ.

ಆ ಲಯ ಈ ಲಯ

ರಚನೆ; ಲೂಯಿ ನಕೋಸಿ

ಕನ್ನಡಕ್ಕೆ: ನಟರಾಜ ಹೊನ್ನವಳ್ಳಿ

ನಿರ್ದೇಶನ; ಶ್ವೇತಾರಾಣಿ ಎಚ್.ಕೆ.

ವೇದಿಕೆಯ ಮೇಲೆ ಮಂದ ಬೆಳಕಿದೆ. ಎರಡೂ ತುದಿಗಳಲ್ಲಿ ಪೋಲೀಸರು ಕುಳಿತಿದ್ದಾರೆ. ಪಕ್ಕದಲ್ಲಿ ಗನ್‌ ಗಳಿವೆ. ಜಾಜ್‌ ಸಂಗೀತ ಶುರುವಾಗಿದೆ. ಅವರಲ್ಲಿ ಗಮನಿಸಲಾರದಷ್ಟು ಚಲನೆ.  ಸಮಯ ಕಳೀತಿದೆ. ಉಹುಂ. ಸಂಗೀತ ಬರ್ತಲೇ ಇದೆ. ಇದೆಷ್ಟು ದೀರ್ಘ ಕಾಯುವಿಕೆ! ಇನ್ನೇನು ಪ್ರೇಕ್ಷಕರ ಸಹನೆ ಮೀರಬೇಕು ಎನ್ನೋದ್ರಲ್ಲಿಹೊಡೀತದೆ ನಾಟ್ಕದ ಮೂರನೆಯ ಬೆಲ್.‌ ಈಗ ನಾಟ್ಕ ಶುರುವಾಗಿದೆ.  ಪೋಲೀಸರು ಮಾತನಾಡೋಕೆ ಶುರು ಮಾಡಿದಾರೆ.  ಅವರದೂ ದೀರ್ಘ ಕಾಯುವಿಕೆಯೇ.  ಅಸಹನೆ ತುಂಬಿದ ಕಾಯುವಿಕೆ ಅದು. ಗನ್‌ ನ ಟ್ರಿಗರ್‌ ಒತ್ತೋದಕ್ಕೆ ಅವರ ಬೆರಳುಗಳು ತುರಿಸ್ತಿವೆ.

ಹೊರಗಡೆ ದಕ್ಷಿಣ ಅಫ್ರಿಕಾ ದ ಜನಾಂಗೀಯ ನೀತಿ ಮತ್ತು ಕರಿಯರ ಮೇಲಿನ ನಿರಂತರ ಹಿಂಸೆ ಯ ವಿರುದ್ಧ ಪ್ರತಿಭಟನೆ ನಡೀತಿದೆ. ಘೋಷಣೆ, ಹಾಡುಗಳು, ಭಾಷಣಗಳ ಅಹಿಂಸಾತ್ಮಕ ಪ್ರತಿಭಟನೆಯದು.  ಅಮಾನುಷ, ಹಿಂಸೆ, ದ್ವೇಷವನ್ನೇ ಒಡಲಲ್ಲಿಟುಕೊಂಡ ಈ ಬಿಳಿಯ ಪೋಲೀಸರು ಆ ಗುಂಪು ಸಂಯಮ ಮೀರುವದನ್ನೇ ಕಾಯುತ್ತಿದ್ದಾರೆ ಗುಂಪಿನ ಮೇಲೆ ಗುಂಡು ಹಾರಿಸೋದಕ್ಕೆ. ಮಾರಣ ಹೋಮ ಮಾಡೋದಕ್ಕೆ.

ಹೀಗೆ ಮೊದಲಿನಿಂದಲೇ ತನ್ನ ಮೂಡ್‌ ಗೆ ಪ್ರೇಕ್ಷಕರನ್ನು ಸೆಳೆದುಕೊಳ್ತಲೇ ಶುರುವಾಗ್ತದೆ ಈ ನಾಟ್ಕ. ಮುಂದೆ ಪ್ರತಿಭಟನೆಗಳು, ಹಾಡುಗಳು, ಸೆನೆಟ್‌ ನೊಳಗಣ ಘಟನೆಗಳು ಪ್ರೇಕ್ಷಕರ ನಡುವೆಯೇ ನಡೆಯುತ್ತಾ ಹೋಗ್ತವೆ. ಇಂಥದೊಂದು ನಮ್ಮ ನಡುವೆಯೂ ನಡೀತಿದೆ ಅಂತ ನಮ್ಮನ್ನ ಎಚ್ಚರಿಸುವ ಹಾಗೆ.

ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ಮತ್ತು ಜನಾಂಗೀಯ ಹಿಂಸೆಯ ವಿರುದ್ಧದ ಪ್ರತಿಭಟನೆಗಳು, ಪೋಲೀಸರ ಕ್ರೌರ್ಯ ದ ವಿವರಗಳೊಂದಿಗೆ ಶುರುವಾಗ್ತದೆ ನಾಟ್ಕ.  ಮನವಿ ಕೊಡೋದಕ್ಕೆ  ಬಂದ ಯುವ ನಾಯಕ ʼತುಲಾʼ ನನ್ನು ಪೋಲೀಸರು ಹಿಂಸಿಸೋದ್ರೊಂದಿಗೆ ನಾಟಕೀಯ ಬೆಳವಣೆಗೆಗಳು ಶುರುವಾಗ್ತವೆ. ಮುಂದೆ ಬರೋದೇ ವಿದ್ಯಾರ್ಥಿಗಳ ಕೂಡು ತಾಣವಾದ ʼಕೆಫೆʼ ಯ ದೃಶ್ಯಗಳು.. ತುಂಬ ವಿವರವಾದ ಮತ್ತು ಬಹು ಮುಖ್ಯವಾದ ಭಾಗ ಇದು. ತಮ್ಮ ಸ್ಥಿತಿಯ ವಿರುದ್ದವಾಗಿ ಆಫ್ರಿಕಾ ದ ವಿದ್ಯಾರ್ಥಿ ಸಮೂಹ ಪ್ರತಿಕ್ರಯಿಸುವ ವಿವರಗಳಿವೆ. ಚಟಪಟನೆ ಸಿಡಿಯೋ ಬಂಡುಕೋರ ವಿದ್ಯಾರ್ಥಿ ನಾಯಕ ʼಗಾಮʼ ಇಲ್ಲಿದ್ದಾನೆ.ಇಲ್ಲಿ ಕುಡಿತವಿದೆ, ಹಾಡುಗಳಿವೆ, ನಾಟಕವಿದೆ. ತೀಕ್ಷ್ಣ ವಿಡಂಬನೆಯಿದೆ. ತೀವೃ ಭಾವಗಳಿವೆ. ಇವುಗಳ ನಡುವೆಯೇ ʼತುಲಾʼ, ಬಿಳೀ ಹುಡ್ಗಿ ʼಸರೈʼ ನಡುವೆ ಬೆಳೆಯುವ ತಣ್ಣಗಿನ ಪ್ರೀತಿಯೂ ಇದೆ.

ಸಂಜೆಯಾಗ್ತಿದ್ದಂತೆ ಕೆಫೆಯಲ್ಲಿ ವಿದ್ಯಾರ್ಥಿಗಳು ಸೇರ್ತಿದಾರೆ. ಜನಜಂಗುಳಿ ಜಾಸ್ತಿಯಾಗ್ತಿದೆ. ಜೊತೆಗೆ ಒತ್ತಡ ಕೂಡ. ಆ ರಾತ್ರಿ ದೊಡ್ಡ ಘಟನೆಯೊಂದು ನಡೀಲಿಕ್ಕಿದೆ. ಹುಡುಗರೇ ನಂಬಿಕೊಂಡಂತೆ, ಚಳುವಳಿಯ ದಿಕ್ಕನ್ನೇ ಬದಲಿಸಬಲ್ಲ ಘಟನೆಯಿದು. ಈ ಹುಡುಗರು ಜೋಹಾನ್ಸಬರ್ಗ್‌ ನ ಸಿಟಿ ಕೌನ್ಸಿಲ್‌  ಮತ್ತು ನ್ಯಾಷನಲ್‌ ಪಾರ್ಟಿಯ ರ್ಯಾಲಿಯನ್ನ ಉಡಾಯಿಸೋ ಪ್ಲಾನ್‌ ಮಾಡಿದಾರೆ. ಸರಿಯಾಗಿ ಹನ್ನೆರಡು ಘಂಟೆಗೆ ಅಲ್ಲಿ ಬಾಂಬ್‌ ಒಂದು ಸಿಡೀಲಿಕ್ಕಿದೆ. ಅದನ್ನು ನೆನಪಿಸೋ ಹಾಗೆ ಆಗಾಗ ಕೆಫೆಯಲ್ಲಿ ಆಲಾರಾಂ ಮೊಳಗ್ತಿದೆ. ಕ್ಷಣ ಕ್ಷಣಕ್ಕೂ ಉದ್ವೇಗ ಜಾಸಿಯಾಗ್ತಿದೆ. ಬಾಂಬ್‌ ಇನ್ನೇನು ಕೆಲವೇ ಕ್ಷಣಗಳಲ್ಲಿ ಸಿಡಿಯಲಿದೆ…

                        ಅಷ್ಟರಲ್ಲಿ….

ಬಿಳಿಯ ಹುಡುಗಿ ʼಸರೈʼ ಯ ತಂದೆ ಅದೇ ರ್ಯಾಲಿಯಲ್ಲಿ ಬಾಗವಹಿಸ್ತಿರೋ ಸುದ್ದಿ ತಿಳೀತದೆ. ಆತನನ್ನ ಉಳಿಸೋಕೆ, ಬಾಂಬ್‌ ಸಿಡಿಯೋದನ್ನ ತಪ್ಪಿಸೋಕೆ ಹೊರಡ್ತಾನೆ ʼತುಲಾʼ. ಒಳಗೊಳಗೇ ಸಂಘರ್ಷ ಶುರುವಾಗ್ತದೆ. ಆದ್ರೂ ಹೇಗೋ ತಪ್ಪಿಸಿಕೊಂಡ ʼತುಲಾʼ ಕೌನ್ಸಿಲ್‌ ತಲುಪ್ತಾನೆ. ಕೂಗ್ತಾ, ಒಡಾಡ್ತಾ ಜನರನ್ನೆಲ್ಲ ಚದುರಿಸ್ತಾನೆ.

ಬಾಂಬ್ ಸಿಡಿದಿದೆ. ತುಲಾ ಪೋಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಹೋರಾಟದ ಹುಡುಗ್ರೂ ಕೂಡ.

 ಆದರೆ ಕ್ರೂರಿ ಪೋಲೀಸ್ ಪಯಟ್‌ ಮತ್ತು ಜಾನ್‌ ಬಾಂಬಿಂಗ್‌ ನಿಂದ ಪಾರಾಗಿ ಉಳ್ಕೊಂಡಿದ್ದಾರೆ. ಮತ್ತೆ ಮೊದಲ ದೃಶ್ಯದಲ್ಲಿ ಕಂಡಂತೆ ಗನ್‌ ಹಿಡಿದು ನಿಂತಿದ್ದಾರೆ.  ಮುಂದಿನ ಬೇಟೆಗೆ ಕಾಯುತ್ತ.ನಾಟ್ಕ ಒಂದು ಸುತ್ತು ಸುತ್ತಿ ಬಂದಿದೆ.

೧೯೬೪ ರಲ್ಲಿ ದಕ್ಷಿಣ ಆಫ್ರಿಕಾ ದ ನಾಟಕಕಾರ ʼಲೂಯಿ ನಕೋಸಿʼ ಬರೆದ ʼದ ರಿದಮ್‌ ಆಫ್‌ ವಯಲೆನ್ಸ್‌ʼ ನಾಟಕವನ್ನು ಕನ್ನಡಕ್ಕೆ ತಂದವರು ನಟರಾಜ ಹೊನ್ನವಳ್ಳಿ. ತುಂಬ ಪ್ರಭಾವಶಾಲಿಯಾದ ಈ ಅನುವಾದವನ್ನ ಶ್ವೇತಾರಾಣಿ ಎಚ್.ಕೆ. ಅಷ್ಟೇ ಸತ್ವಯುತವಾಗಿ ರಂಗಕ್ಕೆ ತಂದಿದ್ದಾರೆ. ಕಾಲ ದೇಶವನ್ನು ಮೀರುವ ಈ ನಾಟಕ ಪ್ರಸ್ತುತ ಪ್ರಯೋಗದಲ್ಲಿ  ʼ ಆಜಾದಿʼ ಯಂಥ ಘೋಷಣೆಗಳೊಂದಿಗೆ, ನಮ್ಮದೇ ಹಾಡುಗಳೊಂದಿಗೆ ಹೆಚ್ಚು ಪ್ರಸ್ತುತವೂ ಅಗುತ್ತ ಹೋಗುತ್ತದೆ.

ಮೂಲ ನಾಟಕದ ʼ ಲಯʼ ವೇ ಗಮನಾರ್ಹವಾಗಿದೆ. ಶೂನ್ಯದಿಂದ ನಿಧಾನವಾಗಿ ಶುರುವಾಗುವ ಈ ನಾಟಕ ನಿಧಅನವಾಗಿ ಲಯ ಹೆಚ್ಚಿಸಿಕೊಳ್ಳುತ್ತ ಕೆಫೆಯ ದೃಶ್ಯದೊಂದಿಗೆ ಏರು ಲಯಕ್ಕೆ ಹೋಗುತ್ತದೆ. ಇದನ್ನು ಸರಿಯಾಗಿಯೇ ಗ್ರಹಿಸಿರುವ ʼಶ್ವೇತಾರಾಣಿʼ ಪ್ರಸ್ತುತ ರಂಗಪ್ರಯೋಗದಲ್ಲೂ  ʼ ಆ ಲಯʼ ವನ್ನು ಸರಿಯಾಗಿಯೇ ಹಿಡಿದಿದ್ದಾರೆ. ಲಯ ಚೂರೂ ತಪ್ಪದಂತೆ  ಅವರು ದೃಶ್ಯಗಳನ್ನಕಟ್ಟುತ್ತ ಹೋಗುತ್ತಾರೆ . ಕೆಫೆ ಯ ದೃಶ್ಯದಲ್ಲಂತೂ ಅವರು ಪರಿಕರಗಳನ್ನ ಬಳಸುವ ಪರಿ, ಚಕ್‌ ಚಕ್ಕನ ಚಲನೆಗಳು, ಬಳಸುವ ಸಂಗೀತ, ಅದ್ಭುತ ಟೈಮಿಂಗ್‌  ತುಂಬಾ ಅಪರೂಪದ್ದು. ʼತುಲಾʼ ನ ಕಲಾಪ್ರತಿಭೆಯ ನ್ನ ಸೂಚಿಸುವಂತೆ ಬಳಸಿಕೊಂಡ ಪೋಸ್ಟರ್‌ ಗಳು, ಅವುಗಳಿಂದಲೇ ಕಟ್ಟಿದ ಬಾಕ್ಸ್‌ ಗಳನ್ನು ಬಳಸಿಕೊಂಡ ರೀತಿ ಅನನ್ಯ. ( ನೇಪಥ್ಯ: ಸತೀಸ್.ಪಿ.ಬಿ.)

ʼಫ್ರೀಡಮ್‌ʼ ನ ಹೋರ್ಡಿಂಗ್ ನ ಹಿನ್ನೆಲೆಯಲ್ಲಿ ನೆರಳು ದೃಶ್ಯಗಳ ಕಟ್ಟುವಿಕೆಯೂ, ಅವುಗಳ ಮುಂದೆ ನಡೆಯುವ ದೃಶ್ಯಗಳ ಹೊಂದಾಣಿಕೆಯೂ ಚೆನ್ನ.

ಅಭಿನಯದಲ್ಲಿ ಎಲ್ಲರಿಗೂ ಫುಲ್‌ ಮಾರ್ಕ. ನಿರಂತರವಾಗಿ ಚಲಿಸುತ್ತ, ಹಾಡುಗಳಿಗೆ ಹೆಜ್ಜೆ ಹಾಕುತ್ತ. ಪರಿಕರಗಳನ್ನು ಹಾರಿಸುತ್ತ, ಹಿಡಿಯುತ್ತ, ಮಧ್ಯೆ ಮಧ್ಯೆ ಮಾತುಗಳಿಗೂ ದನಿಯಾಗುತ್ತ ಈ ಹುಡುಗರು ಅಭಿನಯಿಸಿದ ಪರಿ ಅದ್ಭುತ. ಮತ್ತು ಇಂಥ ಅಭಿನಯ, ಚಲನೆಗಳನ್ನ ಪಡೆಯುವಲ್ಲಿ, ವಿನ್ಯಾಸಗೊಳಿಸುವದರಲ್ಲಿ ನಿರ್ದೇಶಕಿಯ ಪಾತ್ರವೂ ಗಮನಾರ್ಹವೇ.

ʼಜಾನ್‌ʼ ಅಶೋಕ ಕುಮಾರ್‌, ‌ʼಪಯಟ್ʼ ದುಂಡೇಶ್‌ ಹಿರೇಮಠ್‌, ʼಗಾಮʼ ರಂಜಿತ್‌ ಶೆಟ್ಟಿ, ʼಸರೈʼ ಅಂಕಿತ ಸಾಗರ, ʼತುಲಾʼ ದೇವರಾಜ್‌ ಕೆ.ಟಿ ಯವರ ಜೊತೆ ಉಳಿದೆಲ್ಲ ನಟ ನಟಿಯರೂ ನಾಟಕದ ಯಶಸ್ಸಿನ ಪಾಲುದಾರರೇ.

ನನ್ನನ್ನ ತುಂಬ ಗಮನ ಸೆಳೆದದ್ದು ಈ ನಾಟಕದಲ್ಲಿ ಧ್ವನಿ ಮತ್ತು ಬೆಳಕನ್ನು ಉಪಯೋಗಿಸಿಕೊಂಡ ಬಗೆ. ತಿರುಗಾಟದ ಸೀಮಿತವಾದ ದೀಪಗಳನ್ನ ಇಲ್ಲಿ ತುಂಬ ಪ್ರಭಾವಶಾಲಿಯಾಗಿ ಬಳಸಲಾಗಿದೆ. (ಬೆಳಕಿನ ವಿನ್ಯಾಸ: ಕೃಷ್ಣಮೂರ್ತಿ ಎಮ್ .ಎಮ್.)  ಅದರಲ್ಲೂ ಮೊದಲ ದೃಶ್ಯದಲ್ಲಿ ಪಯಟ್‌ ನ ಫ್ಲಾಷ್‌ ಬ್ಯಾಕ್‌ ನಲ್ಲಿ ಮೆರವಣಿಗೆಯ ಹಿಂದಿನಿಂದ ಉಪಯೋಗಿಸಿದ ಚಲಿಸುವ ಬೆಳಕು ನೀಡಿದ silhouette effect,  ಅದರ ಜೊತೆಗೇ ಬರುವ ಘೋಷಣೆಗಳು ಸೇರಿ  ನೀಡುವ ಪರಿಣಾಮವಂತೂ ಅದ್ಭುತ. ಶೂಟ್‌ ಔಟ್‌ ದೃಶ್ಯಗಳಲ್ಲಂತೂ ಸ್ಟ್ರೋಬ್‌ ಗಳು ಅದ್ಭುತ ಕೆಲಸ ಮಾಡಿವೆ. ಮೆರವಣಿಗೆ, ಸಭೆಗಳ ನೆರಳಿನ ಇಫೆಕ್ಟ್‌ ಗಾಗಿ ಹಿನ್ನೆಲೆಯಲ್ಲಿ ಬಳಸಿದ ಬೆಳಕೂ ಹಾಗೆಯೇ. ರೆಕಾರ್ಡೆಡ್‌ ಧ್ವನಿಯ ಬಳಕೆಯ ಕುರಿತೂ ಈ ಮಾತನ್ನು ಹೇಳಬಹುದು.

ಅಂತೆಯೇ  ಧ್ವನಿ, ಬೆಳಕು ನಿರ್ವಹಿಸಿದ ಕಲಾವಿದರಿಗೂ ಬೆನ್ತಟ್ಟು.

ನಾಟಕ ನಮ್ಮ ನಡುವಿನಿಂದಲೇ ಶುರುವಾಗಿ ನಮ್ಮ ನಡುವಿನಲ್ಲೇ ಮುಗಿಯುತ್ತದೆ.  ಇಂಥದೊಂದು ವಾತಾವರಣದಲ್ಲಿ ನಾವೂ ಬದುಕುತ್ತಿದ್ದೇವೆ ಎಂಬುದನ್ನು ನೆನಪಿಸುವ ಹಾಗೆ.

ʼನೆನಪಿಡಲಾಗುವದು

ಎಲ್ಲವನ್ನೂ

ನೆನಪಿಡಲಾಗುವದುʼ

(ನಾಟಕದ ಕೊನೆಯ ಕವನ)

ನಿಜಕ್ಕೂ ನೆನಪಿನಲ್ಲಿಡುವಂಥ ಪ್ರಯೋಗವಿದು.

ನಮ್ಮ ಊರಿಗೂ ಇಂಥ ತಂಡವೊಂದನ್ನು ಕರೆಸಿ ನಾಟಕಗಳನ್ನ ತೋರಿಸಿದ್ದಕ್ಕೆ ಅಶೋಕ ಕಾಸರಕೋಡ್‌ ಗೆ ಧನ್ಯವಾದಗಳು.

‍ಲೇಖಕರು avadhi

November 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: