ಶ್ರೀರಾಮ ಇಟ್ಟಣ್ಣವರ ಕಂಡಂತೆ ‘ಮುಂಬೈ ಕನ್ನಡ ಜಗತ್ತು’

ಶ್ರೀರಾಮ ಇಟ್ಟಣ್ಣವರ

ಡಾ. ಜಿ. ಎನ್. ಉಪಾಧ್ಯ ಅವರ ಸಾಹಿತ್ಯಕ ವ್ಯಕ್ತಿತ್ವವನ್ನು ಪ್ರಧಾನವಾಗಿ ಮೂರು ನೆಲೆಗಳಲ್ಲಿ ಗುರುತಿಸಬಹುದು. ಒಂದು – ಮುಂಬಯಿ ಭಾಗದಲ್ಲಿ ಸಾಹಿತ್ಯಕ ಪರಿಚಾರಿಕೆ ಕೈಕೊಂಡು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅಪರೂಪದ ಗ್ರಂಥಗಳನ್ನು ಕೊಟ್ಟರು. ಎರಡು -ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಅಗಾಧವಾಗಿ ಬೆಳೆಸಿದರು. ಮೂರು – ಮುಂಬಯಿ ಹಿರಿ-ಕಿರಿಯ ಸಾಹಿತಿಗಳ ಒಡನಾಟದಲ್ಲಿ ಕನ್ನಡ ಪರ ಸಂಘಟನೆಗಳಲ್ಲಿ ನಿರಂತರ ತೊಡಗಿಸಿಕೊಂಡವರು. ಇಲ್ಲಿಯ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದಲ್ಲಿ ಉಪಾಧ್ಯ ಅವರದು ಅಧಿಕೃತ ಹೆಸರು. ಈ ಬಗೆಯ ಎಲ್ಲಾ ಹೇಳಿಕೆಗಳನ್ನು ಖಚಿತಪಡಿಸುವ ರೀತಿಯಲ್ಲಿದೆ ಅವರ ‘ಮುಂಬೈ ಕನ್ನಡ ಜಗತ್ತು’ ಗ್ರಂಥ (೨೦೧೯).

ವ್ಯಕ್ತಿ ಚಿತ್ರಣ, ಗ್ರಂಥ ಸಮೀಕ್ಷೆ, ಪತ್ರಿಕೋದ್ಯಮ, ಮುದ್ರಣಾಲಯಗಳು, ಕನ್ನಡ ಸಂಘ ಸಂಸ್ಥೆಗಳು – ಹೀಗೆ ಹಲವು ವಿಷಯಗಳನ್ನು ತನ್ನ ಒಡಲಲ್ಲಿ ತುಂಬಿಕೊ೦ಡಿರುವ ಈ ಪುಸ್ತಕ ಮುಂಬೈ ಜಗತ್ತಿನ ಸಾಂಸ್ಕೃತಿಕ ವಲಯವನ್ನು ೪೦ ಲೇಖನಗಳಲ್ಲಿ ಆತ್ಮೀಯವಾಗಿ, ಅಷ್ಟೇ ಅಧಿಕೃತವಾಗಿ ಅನಾವರಣಗೊಳಿಸುತ್ತದೆ. ‘ಮುಂಬೈ ಮಹಾನಗರದಲ್ಲಿ ಕನ್ನಡ ಪರಿಚಾರಿಕೆ’ ಎಂಬ ಮೊದಲ ಲೇಖನ ಪುಸ್ತಕದ ಒಟ್ಟು ಆಶಯದ ಬಾಗಿಲಂತಿದೆ. ಮುಂಬಯಿಯಲ್ಲಿ ಜನ್ಮ ತಾಳಿದ ಸಾಮಾಜಿಕ ಮಂಡಳಿಗಳು, ಕನ್ನಡ ಸಂಘಗಳು, ಶಿಕ್ಷಣ ಸಂಸ್ಥೆಗಳು, ಮುಂಬಯಿಯಲ್ಲಿ ಕನ್ನಡ ಸಂಸ್ಕೃತಿಯನ್ನು ಜೀವಂತವಾಗಿಡಲು ಕಾರಣರಾದ ಚೇತನಗಳು, ಕನ್ನಡ ವಾಙ್ಮಯವನ್ನು ಶ್ರೀಮಂತಗೊಳಿಸಿದ ಸಾಹಿತಿಗಳು – ಏನೆಲ್ಲ, ಯಾರೆಲ್ಲರನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಮುಂಬಯಿಯ ಕೆಲವು ಮೊದಲುಗಳನ್ನು ಲೇಖನದ ಕೊನೆಯಲ್ಲಿ ಪಟ್ಟಿ ಮಾಡಲಾಗಿದೆ. ಈ ಎಲ್ಲ ವಿಷಯಗಳು ಮುಂದಿನ ಒಂದಿಲ್ಲೊ೦ದು ಲೇಖನದಲ್ಲಿ ಹಾದು ಹೋಗುತ್ತವೆ. ಅಂತೆಯೇ ‘ಮುಂಬೈ ಕನ್ನಡ ಜಗತ್ತು’ ಎಂಬ ಶಿರೋನಾಮೆ ಮುಂಬೈ ಕನ್ನಡಿಗರ ಸಾಂಸ್ಕೃತಿಕ ಆಯಾಮಗಳನ್ನು ಸಮಗ್ರವಾಗಿ ಕಟ್ಟಿಕೊಡುತ್ತದೆ. ಇಲ್ಲಿ ಅಡಕವಾಗಿರುವ ವಿಷಯಗಳು ಏನನ್ನು ಹೇಳುತ್ತಿದ್ದರೂ ಅಂತಿಮವಾಗಿ ಮುಂಬೈ ನಗರದ ಸಾಂಸ್ಕೃತಿಕ ವಿದ್ಯಮಾನಕ್ಕೆ ಬಂದು ನಿಲ್ಲುತ್ತವೆ. ಮುಖ್ಯವೆಂದರೆ ಯಾವ ಲೇಖನವನ್ನು ಓದಲು ತೊಡಗಿದರೂ ಅತ್ಯಂತ ಆಪ್ತ ನೆಲೆಯಲ್ಲಿ ವಿಷಯ ನಿರೂಪಣೆಗೊಳ್ಳುತ್ತದೆ.

ಇಲ್ಲಿಯ ಬಹಳಷ್ಟು ಲೇಖನಗಳು ಸಾಹಿತಿಗಳನ್ನು ಕುರಿತಾಗಿವೆ. ಇವು ಆಯಾ ಲೇಖಕರ ವೈಯಕ್ತಿಕ ಬದುಕನ್ನು ಹೆಚ್ಚು ವಿವರಿಸದೆ ಅವರ ಪ್ರತಿಭೆ ಮತ್ತು ಅನುಭವಗಳನ್ನು ಪ್ರಧಾನವಾಗಿ ಕೇಂದ್ರೀಕರಿಸಿಕೊ೦ಡಿವೆ. ನನಗೆ ಹಿಡಿಸಿದ್ದು – ಅನೇಕ ಲೇಖನಗಳು ಸಂದರ್ಶನಗಳ ಮೂಲಕ ಸಾಹಿತಿಗಳನ್ನು ತಲುಪಿದ್ದು, ಈ ಸಂದರ್ಶನಗಳು ಸಿದ್ಧಮಾದರಿಯ ಕೇವಲ ಪ್ರಶೋತ್ತರಗಳ ಸಂಗ್ರಹವಲ್ಲ. ಇಲ್ಲಿಯ ಉತ್ತರಗಳು ಕೇವಲ ಸಂದರ್ಶಕನಿಗೆ ಕೊಡಮಾಡಿದವುಗಳಲ್ಲ. ಅವು ಅನೇಕ ಬಾರಿ ತಮ್ಮೊಳಗೆ ತಾವೇ ನಡೆಸುವ ಸಂವಾದದ ಪಯಣಗಳಾಗುತ್ತವೆ. ಇಂತಹ ಬರವಣ ಗೆಗೆ ಉಪಾಧ್ಯ ಅವರು ಒಂದು ಮಾದರಿ.

ಜೀವನ ನಿರೂಪಣೆ, ಪುಸ್ತಕಾವಲೋಕನ, ಸಂದರ್ಶನಗಳು ಕೈಕೈ ಹಿಡಿದು ಸಾಗುವ ಸಾಹಿತಿ ಸಂಬ೦ಧಿ ಬಹುತೇಕ ಲೇಖನಗಳು ಆಯಾ ಲೇಖಕರ ಒಳಹೊರಗೆರಡನ್ನೂ ವಿವರಗೊಳಿಸುತ್ತವೆ. ಕವಿಯಾಗಿ, ಪತ್ರಕರ್ತರಾಗಿ, ವಿಮರ್ಶಕರಾಗಿ ನಾನಾ ಕ್ಷೇತ್ರಗಳಲ್ಲಿ ಜೀವಿಯವರು ಗೈದ ಸಾಧನೆ ‘ಡಾ. ಜೀವಿ ಜೀವನ-ಸಾಧನೆ’ ಲೇಖನದಲ್ಲಿ ಸಾಂದ್ರಗೊ೦ಡಿದೆ. ಜೀವಿಯವರನ್ನು ಸಮೀಪದಿಂದ ಬಲ್ಲ ಉಪಾಧ್ಯ ಅವರ ಮಾತುಗಳಿಗೆ ಅಧಿಕೃತತೆಯ ಮುದ್ರೆಯಿದೆ: “ಜೀವಿ ಕುಲಕರ್ಣಿಯವರು ಕನ್ನಡ ಸಾಹಿತ್ಯವನ್ನು ಏಕಕಾಲಕ್ಕೆ ಒಳಗಿನವರಂತೆ ಆಪ್ತ ನೆಲೆಯಲ್ಲಿಯೂ ಹೊರಗಿನವರಂತೆ ವೈಚಾರಿಕ ನೆಲೆಯಲ್ಲಿಯೂ ನೋಡಬಲ್ಲರು” (೧೩೩). “ಬೇಂದ್ರೆಯವರ ಪ್ರೀತಿ ಪಾತ್ರರಾಗಿ ಗುರುಗಳ ಸಾಹಿತ್ಯ ಪ್ರೀತಿಯನ್ನು, ಶಿಸ್ತನ್ನು ತಮ್ಮ ಬರವಣ ಗೆಯಲ್ಲಿ ರೂಢಿಸಿಕೊಂಡ ಜೀವಿ ಸರ್ವ ಕುತೂಹಲಿ” (೧೩೩), “ಜೀವಿ, ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರಿಂದ ಅವರ ವಿದ್ವತ್ತು, ಪತಿಭೆ ಎಲ್ಲರ ಗಮನಕ್ಕೆ ಬಾರದಂತೆ ಅಡ್ಡಿಯಾಗಿದೆ” (೧೩೯), “ಸಖೀಗೀತ’ಕ್ಕೆ ಕೆಲವು ವ್ಯಕ್ತಿ ನಿಷ್ಠ ಮಿತಿಗಳಿವೆ. ಆದರೆ ‘ಹುಚ್ಚಹುಚ್ಚಿ’ಯು ಪ್ರತಿಯೊಬ್ಬರ ಅನುಭವವೂ ಆಗಬಲ್ಲುದು” (೧೩೫) – ಇದು ಭೈರಪನವರ ಮಾತಾದರೂ ಲೇಖಕರ ಅನುಮೋದನೆಯೂ ಇದಕ್ಕಿದೆ.

ಜೀವಿಯವರ ‘ಬೇಂದ್ರೆ ಒಳನೋಟಗಳು’ ಕೃತಿ ಸಮೀಕ್ಷೆ, ಲೇಖಕರು ಯಾಕಾಗಿ ಇದನ್ನು ತುಂಬ ಮೆಚ್ಚಿಕೊಂಡಿದ್ದಾರೆ, ಹಚ್ಚಿಕೊಂಡಿದ್ದಾರೆ ಎಂಬುದನ್ನು ಸಾದರಪಡಿಸುತ್ತದೆ. ಸಂದರ್ಶನ, ದರ್ಶನ, ನೆನಪುಗಳೆಂದು ವಿಭಾಗಗೊಳ್ಳುವ ಈ ಪುಸ್ತಕ ಕೇವಲ ಬೇಂದ್ರೆಯವರನ್ನು ಪರಿಚಯಿಸುವುದಿಲ್ಲ; ಆ ಕಾಲದ ಬಹುಮುಖ ತಿಳುವಳಿಕೆಗಳನ್ನು ಈ ಕೃತಿ ಕಟ್ಟಿಕೊಂಡಿದೆ. ವಿಶೇಷವಾಗಿ ಹನ್ನೊಂದು ಜನ ಸಾಹಿತಿಗಳ ಸಂದರ್ಶನಗಳು ಬೇಂದ್ರೆಯವರನ್ನು ಬೇರೆಬೇರೆ ನೆಲೆಗಳಲ್ಲಿ ಅರ್ಥೈಸಿಕೊಂಡಿದ್ದಿದೆ. ‘ದರ್ಶನ’ದಲ್ಲಿ ಬೇಂದ್ರೆಯವರ ಹದಿನೆಂಟು ಕವಿತೆಗಳನ್ನು ಜೀವಿ ಅರ್ಥೈಸಿಕೊಂಡ ಬಗೆಯಿದೆ. ನೆನಪುಗಳು ಮಾಲಿಕೆಯಾಗಿ ಬೇಂದ್ರೆಯವರನ್ನು ಅರಿಯುವಂತಾಗುತ್ತದೆ. ಈ ಮೂರೂ ವಿಭಾಗಗಳನ್ನು ವಿವರಿಸುವಲ್ಲಿ ತೋರುವ ಉಪಾಧ್ಯ ಅವರ ನಿಲುವುಗಳು ಪ್ರಾಮಾಣ ಕವಾಗಿವೆ. “ಈ ಸಂದರ್ಶನಗಳನ್ನು ಓದುವುದರಲ್ಲಿಯೇ ಒಂದು ಬಗೆಯ ಸುಖವಿದೆ. ಸಾಕ್ಷಾತ್ ಬೇಂದ್ರೆ ನಮ್ಮ ಕಣ್ಣಮುಂದೆ ಆಡಿದಂತೆ, ಹಾಡಿದಂತೆ, ಓಡಾಡಿದಂತೆ ಭಾಸವಾಗುತ್ತದೆ” (೧೫೩). “ಮೇಲು ನೋಟಕ್ಕೆ ಬೇಂದ್ರೆಯವರ ಕವಿತೆಗಳು ಶಬ್ದದ ಆಟದಂತೆ ಕಂಡರೂ ಮೋಡ ದಾಟದಂತೆ ಕಂಡರೂ ಅದರಲ್ಲಿ ತಿಳಿವಿನ ಬೆಳಕು ಚೆಲ್ಲಿದಾಗ ಬಣ್ಣಗಳ ಲೋಕವೇ ಕಾಣುತ್ತದೆ. ಬೇಂದ್ರೆಯವರು ಹೆಣೆಯುವ ಪದಬಂಧದಲ್ಲಿ ಆ ಛಂದವಿದೆ, ಆ ಬಂಧವಿದೆ” (೧೫೫). “ಬೇಂದ್ರೆಯವರು ಕವಿಯಾಗಿ ಎಷ್ಟು ದೊಡ್ಡವರೋ ಅಷ್ಟೇ ವ್ಯಕ್ತಿಯಾಗಿಯೂ ಕೂಡ ದೊಡ್ಡವರು ಎಂಬ ಅಂಶ ಈ ಲೇಖನದಲ್ಲಿ ಮೂಡಿ ಬಂದಿದೆ” (೧೫೭).

ಮೊದಲು ಹೇಳಿದ ಆಪ್ತತೆಯ ವಿಷಯ: ಸಾಹಿತಿಯೊಬ್ಬರ ಬರವಣಿಗೆ, ಮಾತು ಆಪ್ತವೆನ್ನಿಸಬೇಕು. ಉಪಾಧ್ಯ ಅವರು ಏನೇ ಬರೆದರೂ ಅಲ್ಲಿ ಆಪ್ತತೆಯಿರುತ್ತದೆ. ಬಹುಶಃ ಅವರು ಸಾಹಿತ್ಯ, ಬದುಕು ಎರಡನ್ನೂ ಧನಾತ್ಮಕವಾಗಿಯೇ ನೋಡುತ್ತ ಬಂದಿರುವುದು ಈ ಆಪ್ತತೆಗೆ ಹಿನ್ನೆಲೆಯೆಂದು ನಾನು ಭಾವಿಸಿದ್ದೇನೆ. ಇತ್ತಿತ್ತಲಾಗಿ ಸೃಜನೇತರ ಬಿಡಿ, ಸೃಜನ ವಿಭಾಗದಲ್ಲಿಯೂ ಹೃದಯ ಹಿಂದುಳಿದು ಬುದ್ಧಿಗೇ ಪ್ರಾಧಾನ್ಯತೆ ದೊರೆತು ಕಾವ್ಯಮೀಮಾಂಸೆಯ ‘ಸಹೃದಯತೆ’ ನೇಪಥ್ಯಕ್ಕೆ ಸರಿಯುತ್ತಿದೆ. ವಿಶೇಷವಾಗಿ ಕಾವ್ಯಪ್ರಕಾರದಲ್ಲಿ ಇದು ಒಡೆದು ತೋರುವ ವಿಪರ್ಯಾಸವಾಗಿದೆ.

ಜೀವಿಯವರನ್ನು ತುಂಬ ಪ್ರೀತಿಸುವವರು ಜಿ.ಎನ್. ಉಪಾಧ್ಯ ಅವರು. ಅಂತೆಯೇ ಹಲವು ಕಡೆಗೆ ಜೀವಿಯವರ ಸಂಬ೦ಧದಲ್ಲಿ ಆಪ್ತತೆಯ ಮಾತುಗಳು ಬಂದಾಗಲೆಲ್ಲ ಒಂದು ಕ್ಷಣ ಪುಟ ಮುಚ್ಚಿ ಸುಖಿಸುವಂತಾಗುತ್ತದೆ. “…. ನಾನಾ ಮಜಲುಗಳ ಚೌಕಟ್ಟಿನಲ್ಲಿ ತಮ್ಮದೇ ಆದ ಸಾಹಿತ್ಯದ ಸ್ವಂತಿಕೆಯನ್ನು ಗಳಿಸಿಕೊಂಡವರು ನಮ್ಮ ಜೀವಿ” (೧೩೩). “ನಾವು ಒಂದರ್ಥದಿ೦ದ ಮುಂಬಯಿಯಲ್ಲೇ ಬೇರು ಬಿಟ್ಟಿದ್ದರೂ ಧಾರವಾಡದ ತಾಯಿ ಬೇರು ನಮ್ಮನ್ನು ಸದಾ ಎಳೆಯುತ್ತಿದೆ; ‘ಬಾರೋ ಸಾಧನ ಕೇರಿಗೆ’ ಎಂದು ಕರೆಯುತ್ತಿದೆ” (೧೪೫). ಅಮೇರಿಕಾದಲ್ಲಿರುವ ಮಗ ತಂದೆಗೆ ಬರೆದ ಪತ್ರದ ಉಲ್ಲೇಖ : ನೀವು ಕಷ್ಟಪಟ್ಟು ಇಬ್ಬರು ಮಕ್ಕಳಿಗೆ ಇಂಜಿನೀಯರಿ೦ಗ್ ಶಿಕ್ಷಣ ನೀಡಿದ್ದೀರಿ. ನೀವು ಭಾರತ ಪ್ರವಾಸ ಮಾಡಲಿಲ್ಲ. ಕರ್ನಾಟಕ ಕೂಡ ಸರಿಯಾಗಿ ನೋಡಿಲ್ಲ. ಈ ಪತ್ರದೊಂದಿಗೆ ಹತ್ತು ಬ್ಲ್ಯಾಂಕ್ ಚೆಕ್ ಇಟ್ಟಿದ್ದೇನೆ. ನೀವು ಬೇಕಾದಾಗ, ಬೇಕಾದಷ್ಟು ಹಣ ಬಳಸಿರಿ, ನೀವು ಕವಿತೆ ಬರೆಯಿರಿ, ಪುಸ್ತಕ ಬರೆಯಿರಿ, ಪ್ರವಾಸ ಮಾಡಿರಿ. ನೌಕರಿಯ ವಿಚಾರ ಬಿಟ್ಟು ಬಿಡಿ(೧೪೭). ನಮ್ಮ ಭಾರತೀಯ ಪರಂಪರೆಯಲ್ಲಿ ಕುಟುಂಬಧರ್ಮವನ್ನು ಪಾಲಿಸುವುದು ಕುಟುಂಬ ಸದಸ್ಯರೆಲ್ಲರ ಹೊಣೆ. ಇಂಥ ಮಾತುಗಳನ್ನು ಉದ್ಧರಿಸುವ ಮೂಲಕ ಲೇಖಕರು ಆ ಧರ್ಮ ಪಾಲನೆಯನ್ನು ಮುನ್ನೆಲೆಗೆ ತಂದಿದ್ದಾರೆ.

‘ಮಿತ್ರಾ ವೆಂಕಟ್ರಾಜ್ ಸಾಹಿತ್ಯ ಸಾಧನೆ’ಯನ್ನು ಪರಿಚಯಿಸುವಲ್ಲಿ ತೋರುವ ಜಿ.ಎನ್.ಉಪಾಧ್ಯ ಅವರ ಸಹೃದಯತೆ ಅಪರೂಪದ್ದು. ವಿಶೇಷವಾಗಿ ಮಿತ್ರ ಅವರ ಸಂದರ್ಶನದಲ್ಲಿ ಅಭಿವ್ಯಕ್ತಗೊಂಡ ಕಥಾಸೃಷ್ಟಿಯ ಅನುಭವಗಳು ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆಯೆಂದೇ ನಾನು ಭಾವಿಸುತ್ತೇನೆ. ಮಿತ್ರಾ ಅವರು ತಮ್ಮೊಳಗೆ ಕತೆಯೊಂದು ಜನ್ಮತಾಳುವಾಗಿನ ಅನುಭವಗಳನ್ನು ಎಲ್ಲಿಯೂ ತಡವರಿಸದೆ ಪ್ರಾಮಾಣಿಕವಾಗಿ ಹೇಳುತ್ತ ಹೋಗುವ ರೀತಿ ಅನನ್ಯವಾದುದು. ಮಿತ್ರಾ ಅವರ ಅನುಭವಗಳೆಲ್ಲ ಮೀಮಾಂಸೆಯ ಹಂತ ತಲುಪುವುದೇ ಈ ಸಂದರ್ಶನದ ಶ್ರೇಯಾಂಶ: ನನ್ನ ಮಟ್ಟಿಗೆ ಕತೆ ಬರೆಯುವುದೆಂದರೆ ಒಂದು ದೀರ್ಘ ಪಯಣ. ಕತೆ ಬರೆಯುವುದೆಂದರೆ ಅದೊಂದು ಶೋಧ, ಒಂದು ದರ್ಶನ, ಒಂದು ವಿಶ್ಲೇಷಣೆಯೆಂದು ನನ್ನ ನಂಬಿಕೆ.

ನಮ್ಮ ಮನೆಗಿಂತ ಭಿನ್ನವಾದ ಅನೇಕ ಪ್ರಪಂಚಗಳು ಹೊರಗಿವೆ ಎಂಬುದರತ್ತ ನನ್ನ ಗಮನ ಹೋಗುವಂತಾಗಿರಬೇಕು.

ಅಮ್ಮನ ಬಾಯಲ್ಲಿ ಕೇಳಿದ ಅವೆಷ್ಟೋ ಇಂತಹ ಕತೆಗಳು ಇನ್ನೂ ನನ್ನೊಳಗೆ ಇವೆ.

ಕತೆ ಬರೆಯುವುದೆಂದರೆ ಅದೊಂದು ಪರಕಾಯ ಪ್ರವೇಶವೇ. ಸಾಹಿತ್ಯವು ನಮಗೆ ಈ ಹಿಂದೆ ಗೊತ್ತಿಲ್ಲದೆ ಇರುವುದನ್ನು ನಮ್ಮ ಅರಿವಿಗೆ ತಂದು ಆ ಕಡೆಗೆ ನಮ್ಮನ್ನು ನಡೆಸಿಕೊಂಡು ಹೋಗುವುದುಂಟು.

ನನ್ನ ಮಟ್ಟಿಗಂತೂ ಕತೆಯೇ ನನ್ನನ್ನು ಹಿಡಿದುಕೊಂಡದ್ದು ಜಾಸ್ತಿ. ಸಣ್ಣ ಕತೆಯೆಂಬುದು ಕಥಾ ವಸ್ತುವಿನ ಸಾಂದ್ರ ಬಿಂದು. ಅಲ್ಲಿ ಒಂದು ಪಾತ್ರ ಒಂದು ಮಾತು ಯಾಕೆ, ಒಂದು ಶಬ್ದ ಹೆಚ್ಚಾದರೂ ಕತೆಯ ಅಂದ ಕೆಡುತ್ತದೆ. ಸಂಬ೦ಧಗಳ ಸಂಕೀರ್ಣತೆ, ಇದು ಯಾವಾಗಲೂ ನನ್ನನ್ನು ದಿಗ್ಭ್ರಮೆಗೊಳಿಸುತ್ತದೆ. ನಿಜ ಬದುಕಿನ ಸಂಕೀರ್ಣತೆಯು ಎಷ್ಟು ಗಾಢವಾಗಿದೆಯೆಂದರೆ ನಮಗೆ ತಿಳಿಯುವ ಭಾಷೆಯ ಮಿತಿಯೊಳಗೆ ಅದನ್ನು ಹಿಡಿದಿಡುವುದು ಕಷ್ಟವಾಗುತ್ತದೆ. ಪ್ರತಿಯೊಂದು ವಾಕ್ಯದೊಟ್ಟಿಗೆ ನಾನು ತುಂಬಾ ಹೊತ್ತು ಇರುತ್ತೇನೆ.

ಶಬ್ದಗಳಿಗೆ ನಿಲುಕದ ಎಷ್ಟೋ ವಿಚಾರ-ಭಾವನೆಗಳಿರುವ ನಮ್ಮೊಳಗಿನ ಆಳದ ಜಾಗಗಳನ್ನು ತಲುಪಲು ಭಾಷೆಗೂ ಕಷ್ಟ.

ಮಿತ್ರಾ ಅವರ ಬರವಣಿಗೆಗೆ ಜಿ.ಎನ್.ಉಪಾಧ್ಯ ಅವರು ಪ್ರತಿಕ್ರಯಿಸುವ ರೀತಿಯಲ್ಲಿ ಸಹೃದಯತೆಯಿದೆ, ಅದಕ್ಕಿಂತ ಮಿಗಿಲಾಗಿ ಖಚಿತತೆಯಿದೆ. “ನಾಗಮ್ಮನ ಮನೆಯ ಸಣ್ಣ ಗೇಟು ನಾನಾ ‘ಪ್ರತೀಕ’ವಾಗಿ ಇಲ್ಲಿ ಅಭಿವ್ಯಕ್ತಗೊಂಡಿದೆ” (೧೭೭), “…..ಇವರು ಜೀವನ ಶಾಲೆಯಲ್ಲಿ ಪಳಗಿದವರು, ಜೀವನಾಭಿಮುಖಿಗಳು” (೧೭೯). “ಸಾಮಾಜಿಕ ಬದಲಾವಣೆಗಳ ಸ್ವರೂಪ ಹಾಗೂ ಹೊಸ ಮೌಲ್ಯಗಳ ಹುಡುಕಾಟವೂ ಇಲ್ಲಿ ಅಷ್ಟೇ ಪ್ರಖರವಾಗಿ ಬಂದಿದೆ” (೧೮೦).

‘ಎಂ.ಬಿ. ಕುಕ್ಯಾನ್ ಸಾಹಿತ್ಯ ಪರಿಚಾರಿಕೆ’ ಲೇಖನ ಕುಕ್ಯಾನ್ ಅವರ ವ್ಯಕ್ತಿತ್ವವನ್ನು ಅತ್ಯಂತ ಆತ್ಮೀಯವಾಗಿ ಬಿಂಬಿಸುತ್ತದೆ. ಕುಕ್ಯಾನ್ ಅವರು ಇಂದು ಶ್ರೀಮಂತರಾಗಿರಬಹುದು. ಆದರೆ ತಮ್ಮ ಬದುಕಿನ ಆದಿಮ ಹೆಜ್ಜೆಗಳನ್ನು ಅವರು ಮರೆತಿಲ್ಲ. ಹಾಗೆ ಅವರು ಮರೆತಿಲ್ಲವಾದುದರಿಂದಲೇ ಅವರು ಉಪಾಧ್ಯ ಅವರಿಗೆ ಪ್ರಿಯರಾಗಿ ಅವರ ಲೇಖನಿಗೆ ವಸ್ತುವಾಗಿದ್ದಾರೆ. ಕುಕ್ಯಾನ್ ಅವರ ಬದುಕಿನ ಪೂರ್ವಾರ್ಧವೆಲ್ಲ ಕಷ್ಟಗಳ ಸರಮಾಲೆಯೇ ಆಗಿದೆ. ಕುಕ್ಯಾನ್ ಅವರ ಮಾತುಗಳಿಂದಲೇ ಅವರ ವ್ಯಕ್ತಿತ್ವವನ್ನು ಕಂಡರಿಯಲಾಗಿದೆ.

ಡಾ. ಶ್ರೀನಿವಾಸ ಹಾವನೂರ ಅವರ ‘ಹೊಸಗನ್ನಡದ ಅರುಣೋದಯ’ ಗ್ರಂಥದ ಸಮೀಕ್ಷೆ ಪ್ರಬುದ್ಧವಾಗಿರುವಷ್ಟೇ ಸರಳವೂ ಆಗಿದೆ. ಕೃತಿಯೊಂದನ್ನು ಮನಃಪೂರ್ವಕ ಅನುಭವಿಸಿದ ರೀತಿ ಇಲ್ಲಿದೆ. ಹೊಸಗನ್ನಡ ಅರುಣೋದಯ ನಾನು ಮೆಚ್ಚಿದ ಕೃತಿಗಳಲ್ಲೊಂದು. ಹೊಸಗನ್ನಡ ಸಾಹಿತ್ಯದ ಅರುಣೋದಯ ಸಂದರ್ಭವನ್ನು ಡಾ. ಹಾವನೂರ ಅವರಂತೆ ಆಳವಾಗಿ, ಸಮಗ್ರವಾಗಿ ಭೇದಿಸಿದವರು ಇನ್ನೊಬ್ಬರಿಲ್ಲ ಎಂಬ ೪೦ ವರ್ಷಗಳ ಹಿಂದಿನ ನನ್ನ ಅನಿಸಿಕೆ ಈಗಲೂ ಬದಲಾಗಿಲ್ಲ. ಇದು ಹೊಸಗನ್ನಡ ಸಾಹಿತ್ಯದ ಅರುಣೋದಯ ಸಂಶೋಧನೆಗೊ೦ದು ಪ್ರಮಾಣ ಗ್ರಂಥ.

ಮು೦ಬೈ ಕನ್ನಡ ಸಾಹಿತ್ಯವನ್ನು ಅರಿಯಬೇಕೆನ್ನುವವರಿಗೆ ‘ಮುಂಬೈ ಕನ್ನಡ ಜಗತ್ತು’ ಒಂದು ಕೈಪಿಡಿ. ಇಂಥದೊ೦ದು ಗ್ರಂಥ ನಿರ್ಮಿತಿ ಮುಂಬಯಿಯಲ್ಲಿ ಬಾಳುವವರಿಗಷ್ಟೇ ಅಲ್ಲ, ಹೊರಗಿನವರಿಗೂ ಸುಖ ಕೊಡಬಲ್ಲದು. ಈ ಪುಸ್ತಕ ಓದುವ ಸಂದರ್ಭದಲ್ಲಿ ನನಗೆ ‘ಬೇಂದ್ರೆ ಒಳನೋಟ’, ‘ಹಕ್ಕಿ ಮತ್ತು ಅವಳು’ ಪುಸ್ತಕಗಳನ್ನು ಓದಬೇಕೆಂಬ ವಾಂಛೆ ಹುಟ್ಟಿತು. ಇಂಥದೊ೦ದು ವಾಂಛೆಯೇ ಮುಂಬೈ ಕನ್ನಡ ಜಗತ್ತಿನ ಸಾರ್ಥಕತೆಯನ್ನು ಹೇಳಬಲ್ಲದು.

ಬರವಣಿಗೆಯನ್ನು ಒಂದು ವ್ರತವಾಗಿ ಸ್ವೀಕರಿಸಿರುವ ಜಿ.ಎನ್.ಉಪಾಧ್ಯ ಅವರ ಬರವಣಿಗೆಯನ್ನು ಮೊದಲಿನಿಂದಲೂ ಮೆಚ್ಚಿಕೊಂಡವ ನಾನು. ‘ಮುಂಬೈ ಕನ್ನಡ ಜಗತ್ತು’ ಗ್ರಂಥವನ್ನು ಯಾರು ಬೇಕಾದರೂ ಆಕರ ಗ್ರಂಥವಾಗಿ ತಮ್ಮ ಓದುವ ಕೋಣೆಯ ಸೆಲ್ಫ್ ನಲ್ಲಿ ಅಭಿಮಾನಪೂರ್ವಕ ಸೇರಿಸಿ ಇಟ್ಟುಕೊಳ್ಳಬಹುದು.

‍ಲೇಖಕರು avadhi

May 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: