ಶ್ರೀಪಾದ್‌ ಹೆಗಡೆ ನೋಟ- ’ರಿಪೇರಿ ಹಕ್ಕು’

ರಿಪೇರಿ ಹಕ್ಕು’ ಗ್ರಾಹಕ ಚಳವಳಿ ನಮ್ಮ ದೇಶದಲ್ಲಿಯೂ ಆರಂಭವಾಗಬೇಕಿದೆ

ಶ್ರೀಪಾದ್‌ ಹೆಗಡೆ

ಎಲ್ಲ ಬಗೆಯ ಗ್ರಾಹಕ ವಸ್ತುಗಳನ್ನು ರಿಪೇರಿ ಮಾಡಿಕೊಂಡು ಮರು ಬಳಕೆ ಮಾಡುವ ಸಂಸ್ಕೃತಿಯೇ ನಾಶವಾಗುತ್ತಾ ಬಂದಿದೆ. ಒಂದೊಮ್ಮೆ ರಿಪೇರಿ ಮಾಡಿಸಬೇಕೆಂದಿದ್ದರೂ ಆ ವಸ್ತುವನ್ನು ತಯಾರು ಮಾಡಿದ ಕಂಪನಿಯ ಸರ್ವೀಸ್ ಸೆಂಟರಿನಲ್ಲಿಯೆ ಕಡ್ಡಾಯವಾಗಿ ರಿಪೇರಿ ಮಾಡಿಸಕೊಳ್ಳ ಬೇಕಾದ ಅನಿವಾರ್ಯತೆಯನ್ನು ಇಂದಿನ ಕಾರ್ಪರೇಟ್ ಜಗತ್ತು ಉಂಟುಮಾಡಿದೆ. ಬೀದಿ ಬದಿಯ ವಾಚು ರಿಪೇರಿಯಿಂದ ಹಿಡಿದು ಕಾರು ರಿಪೇರಿಯವರೆಗಿನ ಎಷ್ಟೊಂದು ರಿಪೇರಿ ಅಂಗಡಿಗಳು ಕಾಣೆಯಾಗಿವೆ. ಈ ಬೆಳವಣಿಗೆ ಉದಾರಿಕರಣ ಮತ್ತು ಖಾಸಗೀಕರಣ ಶುರುವಾದ ಮೇಲೆ ಆದದ್ದು.

ಕಳೆದ ಇಪ್ಪತ್ತು ವರ್ಷಗಳಲ್ಲಿ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪಾದನೆಯನ್ನು ಮಾರಲು ದೇಶದ ತುಂಬೆಲ್ಲ ತಮ್ಮ ಮಾರುಕಟ್ಟೆಯ ಜಾಲವನ್ನು ವಿಸ್ತರಿಸಿಕೊಳ್ಳುತ್ತಾ ಹೋದಂತೆ ಸರ್ವೀಸ್ ಸೆಂಟರುಗಳನ್ನೂ ತೆರೆಯುತ್ತಾ ಹೋಗಿ, ಬಿಡಿ ಭಾಗಗಳನ್ನು ಮುಕ್ತ ಮಾರುಕಟ್ಟೆಯಿಂದ ಹಿಂತೆಗೆದು ಕೊಂಡು, ಬೀದಿ ಬದಿಯ ಬಡ ರಿಪೇರಿ ಅಂಗಡಿಯವರಿಗೆ ಅವು ಸುಲಭವಾಗಿ ಸಿಗದಂತೆ ಮಾಡಿದವು.

ಮೊದಮೊದಲು ಗ್ರಾಹಕರನ್ನು ತಮ್ಮತ್ತ ಸೆಳೆಯಲು ಅನೇಕ ರೀತಿಯ ಡಿಸ್ಕೌಂಟುಗಳೇ ಮೊದಲಾದ ಆಮಿಷಗಳನ್ನು ಒಡ್ಡಿದವು. ಅಲ್ಲದೆ ಬೀದಿ ಬದಿಯ ರಿಪೇರಿ ಅಂಗಡಿಯವರ ಸಾಮರ್ಥ್ಯ ಮತ್ತು ಕುಶಲತೆಯ ಬಗೆಗೆ ಗ್ರಾಹಕರಲ್ಲಿ ಸಂಶಯ ಹುಟ್ಟಿಸುವ ಎಲ್ಲ ಬಗೆಯ ಪ್ರಚಾರ ತಂತ್ರವನ್ನೂ ಉಪಯೋಗಿಸಿ ಜನ ಅವರ ಹತ್ತಿರ ಸುಳಿಯದಂತೆ ಮಾಡುವಲ್ಲಿ ಬಹುತೇಕ ಯಶಸ್ವಿಯಾದರು. ದೊಡ್ಡ ದೊಡ್ದ ಕಂಅಪನಿಗಳ ಈ ಎಲ್ಲ ತಂತ್ರಗಳಿಂದ ನಿಧಾನ ನಿಧಾನವಾಗಿ ಒಂದೊಂದೇ ಅಂಗಡಿಗಳು ಮುಚ್ಚುತ್ತಾ ಬಂದವು.

ಅವು ಮುಚ್ಚುತ್ತಾ ಬಂದಹಾಗೆ ಕಂಪನಿಯ ಸರ್ವೀಸ್ ಸೆಂಟರುಗಳು ತಮ್ಮ ರಿಪೇರಿಯ ಮತ್ತು ಸೇವೆಯ ದರವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಮಾಡುತ್ತಾ ಸಾಗಿವೆ. ಉತ್ಪಾದನೆ, ಸೇವೆ (ಸರ್ವೀಸ್) ಮತ್ತು ರಿಪೇರಿ ಇವುಗಳು ಈಗ ಆಯಾ ಕಂಪನಿಯ ಏಕಸ್ವಾಮ್ಯಕ್ಕೊಳಪಟ್ಟಿವೆಯಾಗಿ ಗ್ರಾಹಕನಿಗೆ ಆಯ್ಕೆಯೇ ಇಲ್ಲದಂತಾಗಿದೆ. ಕಂಪನಿಯ ಸರ್ವೀಸ್ ಸೆಂಟರುಗಳಲ್ಲಿ ಒಂದಕ್ಕೆ ನಾಲ್ಕು ಪಟ್ಟು ದುಬಾರಿ ಬೆಲೆ ತೆತ್ತು ರಿಪೇರಿ ಮಾಡಿಸಿಕೊಳ್ಳಬೇಕಾಗಿ ಬಂದಿದೆ.

ಈ ರೀತಿಯ ಏಕಸ್ವಾಮ್ಯ ಗ್ರಾಹಕರ ಸುಲಿಗೆ ಮಾಡುತ್ತಿದೆಯಲ್ಲದೆ, ಮುಕ್ತ ಮಾರುಕಟ್ಟೆಯ ತಾತ್ವಿಕ ತಳಹದಿಗೇ ಇದು ವಿರುದ್ಧವಾಗಿದೆ. ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿರದ ಸಮಸ್ಯೆಯಾಗಿರದೆ ಜಾಗತಿಕ ವಿದ್ಯಮಾನವಾಗಿದೆ. ಹಾಗಾಗಿ ಪಶ್ಚಿಮ ದೇಶದಲ್ಲಿ ಈ ರೀತಿಯ ಏಕಸ್ವಾಮ್ಯದ ವಿರುದ್ಧ ಜನ ದನಿ ಎತ್ತ ತೊಡಗಿದ್ದಾರೆ. ರಿಪೇರಿಯ ಹಕ್ಕು ಎನ್ನುವ ತಲೆ ಬರಹದಡಿ ಜನ ಒಗ್ಗಟ್ಟಾಗಿ ಅಲ್ಲಲ್ಲಿ ಪ್ರತಿಭಟನೆಗಳನ್ನು ನಡೆಸತೊಡಗಿದ್ದಾರೆ. ಇದೊಂದು ಜನಾಂದೋಲನದ ರೂಪವನ್ನು ಇನ್ನೂ ಪಡೆಯಬೇಕಿದೆಯಷ್ಟೆ.

ಇತ್ತೀಚೆಗೆ ಇನ್ನೊಂದು ಟ್ರೆಂಡ್ ಶುರುವಾಗಿದೆ. ಒಂದೋ ಎರಡೋ ವರ್ಷದ ವಾರಂಟಿಯ ನಂತರ AMC (Annual Maintenance Contract) ಪ್ರತಿ ವರ್ಷ ತೆಗೆದುಕೊಳ್ಳುವಂತೆ ಮಾಡಲಾಗುತ್ತಿದೆ. ಮೊದಮೊದಲು ಡಿಸ್ಕೌಂಟಿನ ಆಕರ್ಷಣೆಯ ಮೂಲಕ ಜನರನ್ನು ಆಕರ್ಷಿಸಲಾಗುತ್ತಿತ್ತು, ಇತ್ತೀಚೆಗೆ ಪರೋಕ್ಷವಾಗಿ ಗ್ರಾಹಕರ ಮೇಲೆ ಅದನ್ನು ಹೇರಲಾಗುತ್ತಿದೆ. AMC ಎಂದರೆ ಗ್ರಾಹಕರಿಗೆ ಫ್ರೀಯಾಗಿ ರಿಪೇರಿ ಮಾಡಿಕೊಡಲಾಗುವುದಿಲ್ಲ. ಕೆಟ್ಟು ಹೋದದಕ್ಕೆಲ್ಲ ಶುಲ್ಕ ವಿಧಿಸಿಯೇ ವಿಧಿಸುತ್ತಾರೆ.

ಕೇವಲ ವಿಸಿಟಿಂಗ್ ಚಾರ್ಜ್ ಇರುವುದಿಲ್ಲ ಅಷ್ಟೆ. ಇದರಲ್ಲೂ ಒಂದು ಹುನ್ನಾರವಿದೆ. ಅದೆಂದರೆ ಕಂಪನಿಯ ತಂತ್ರಜ್ಞ ಟಿವಿಯನ್ನೋ, ವಾಶಿಂಗ್ ಮಶಿನ್ನನ್ನೋ, ಫ್ರಿಡ್ಜನ್ನೊ ಪರೀಕ್ಷಿಸಲು ಬಂದವನು ಯಾವುದೋ ಒಂದು ಭಾಗ ಕೆಡುತ್ತಾ ಬಂದಿದೆ, ಅದನ್ನು ಬದಲಿಸಿಕೊಳ್ಳದಿದ್ದರೆ ಬಹು ದೊಡ್ಡ ಭಾಗವೊಂದು ಒಂದೆರಡು ತಿಂಗಳಲ್ಲಿ ಕೆಟ್ಟು ಒಂದಕ್ಕೆ ನಾಲ್ಕು ಪಟ್ಟು ಹೆಚ್ಚು ಖರ್ಚಾಗಬಹುದು ಎಂದು ಗ್ರಾಹಕನ ಕಿವಿಯಲ್ಲಿ ಹುಳು ಬಿಡುತ್ತಾನೆ. ಆಗ ಸುಲಭವಾಗಿ ಗ್ರಾಹಕ ಕಂಪನಿಯ ಈ ತಂತ್ರಕ್ಕೆ ಬಲಿಯಾಗಿ ಕೆಟ್ಟಿರದಿದ್ದರೂ ಆ ಭಾಗವನ್ನು ಬದಲಿಸಿಕೊಳ್ಳುತ್ತಾನೆ. ಕಂಪನಿ ಒಂದಕ್ಕೆ ನಾಲ್ಕರಷ್ಟು ಅದಕ್ಕೆ ಚಾರ್ಜ್ ಮಾಡುತ್ತದೆ. ಹೀಗೆ ಕಂಪನಿಯ ಲಾಭ ಹೆಚ್ಚುತ್ತಲೇ ಸಾಗುತ್ತದೆ, ಗ್ರಾಹಕ ತಲೆ ಬೋಳಿಸಿ ಕೊಳ್ಳುತ್ತಲೇ ಹೋಗುತ್ತಾನೆ.

ಪರೋಕ್ಷವಾಗಿ AMC ಯನ್ನು ಹೇರಲಾಗುತ್ತಿದೆ ಎಂದೆನಲ್ಲ, ಅದಕ್ಕೆ ನನ್ನದೇ ಒಂದು ಉದಾಹರಣೆ ಕೊಡುವೆ. ಈಗ ಐದು ವರ್ಷಗಳ ಹಿಂದೆ ನಾನು ಫೇಬರ್ ಕಂಪನಿಯ ಚಿಮಣಿಯನ್ನು ಅಡಿಗೆ ಮನೆಯಲ್ಲಿ ಹಾಕಿಸಿಕೊಂಡಿದ್ದೆ. ಅದಕ್ಕೆ ಒಂದು ವರ್ಷದ ವಾರಂಟಿ ಮತ್ತು ಮೋಟಾರಿಗೆ ಹತ್ತು ವರ್ಷಗಳ ವಾರಂಟಿ ( ಕೆಟ್ಟು ಹೋದರೆ ಬದಲಿಸಿ ಕೊಡುವ ವಾಗ್ದಾನ) ಇತ್ತು. ಈಗ ನಾಲ್ಕು ತಿಂಗಳ ಹಿಂದೆ ಚಿಮಣಿ ಕೆಟ್ಟು ನಿಂತಿತು. ನಾನೂರು ರೂಪಾಯಿಗಳನ್ನು ತೆತ್ತು ಕಂಪನಿಯ ಪ್ರತಿನಿಧಿಯನ್ನು ಕರೆಸಿದೆ. ಅವನು ಮೋಟಾರು ಕೆಟ್ಟಿದೆ ಎಂದೂ ಮತ್ತು ಅದು ವಾರಂಟಿಯಲ್ಲಿರುವುದರಿಂದ ಅದನ್ನು ಬದಲಿಸಿ ಕೊಡುವೆವೆಂದು ಹೇಳಿ ಹೋದ.

ಒಂದು ತಿಂಗಳ ನಂತರ ಕಂಪನಿಯಿಂದ ಕರೆ ಬಂದಿತು. ಬದಲಿಸುವುದಕ್ಕೆ ಹೊಸ ಮೋಟಾರು ಬಂದಿದೆ ಎಂದು ಹೇಳಿ ಒಂದು ಶರತ್ತಿನ ಮೇಲೆ ಮಾತ್ರ ಅದನ್ನು ಬದಲಿಸಿಕೊಡಲಾಗುವುದೆಂದು ಹೇಳಿದರು. 1750 ರೂ ಗಳ AMCಯನ್ನು ಕಡ್ಡಾಯವಾಗಿ ತೆಗೆದು ಕೊಳ್ಳಬೇಕೆಂಬುದೇ ಆ ಶರತ್ತಾಗಿತ್ತು. ನಾನು ಒಪ್ಪಲಿಲ್ಲ, ಏಕೆಂದರೆ ನಾನು ಆ ಚಿಮಣಿಯನ್ನು ಖರೀದಿ ಮಾಡಿದಾಗ ಆ ಶರತ್ತು ಇರಲಿಲ್ಲ. ಆದರೆ ನನ್ನ ಈ ವಾದಕ್ಕೆ ಕವಡೆ ಕಿಮ್ಮತ್ತನ್ನೂ ಅವರು ಕೊಡಲಿಲ್ಲ. ಈಗ ನಿಯಮ ಬದಲಾಗಿದೆ ನೀವು AMC ತೆಗೆದುಕೊಂಡರೆ ಮಾತ್ರ ಮೋಟಾರನ್ನು ಬದಲಿಸುವುದಾಗಿ ಹೇಳಿಬಿಟ್ಟರು. ಮೂರು ತಿಂಗಳ ಕಾಲ ಕಂಪನಿಯ ಸಂಗಡ ಈ ವಿಷಯವಾಗಿ ವ್ಯವಹರಿಸಿದರೂ ಯಾವ ಪ್ರಯೋಜನವಾಗಲಿಲ್ಲ.

ನಂತರ ಅವರು ಹೇಳಿದಷ್ಟು ಕೊಟ್ಟು AMC ತೆಗೆದುಕೊಂಡ ಮೇಲೆಯೇ ಮೋಟಾರ್ ಬದಲಿಸಿ ಕೊಟ್ಟರು. ಆನ್ ಲೈನಲ್ಲಿ ಚೆಕ್ ಮಾಡಿದಾಗ ಆ ಮೋಟಾರಿನ ಬೆಲೆ ಅದಕ್ಕೂ ಕೊಂಚ ಕಡಿಮೆ ಇರುವುದು ತಿಳಿದು ಬಂತು. ಅಂದರೆ ಮೋಟಾರಿನ ಬೆಲೆಯನ್ನು ನನ್ನಿಂದ ವಸೂಲು ಮಾಡಿಯೇ ಅದನ್ನು ಬದಲಿಸಿ ಕೊಟ್ಟರು.

ಇನ್ನು ಕಾರು ತೆಗೆದು ಕೊಂಡವರಿಗೆಲ್ಲ ಆ ಆ ಕಂಪನಿಯ ಸರ್ವೀಸ್ ಸೆಂಟರುಗಳು ಸುಲಿಗೆ ಮಡುತ್ತಿರುವುದು ಗೊತ್ತೇ ಇದೆ. ನಾನು ಇಪ್ಪತೈದು ವರ್ಷಗಳ ಹಿಂದೆ ನನ್ನ ಮೊದಲ ಕಾರು ಕೊಂಡಿದ್ದೆ. ಅದು ಸೆಕೆಂಡ್ ಹ್ಯಾಂಡ್ ಕಾರು. ಆಗ ಆ ಕಂಪನಿಯ (ಮಾರುತಿ) ಸರ್ವೀಸ್ ಸೆಂಟರುಗಳು ಇದ್ದವಾದರೂ ಬೀದಿ ಬದಿಯ ಗಾರಾಜುಗಳೂ ಸಾಕಷ್ಟಿಟಿದ್ದವು. ಕಾರು ಕೊಂಡ ಮಧ್ಯಮ ವರ್ಗದ ಬಹಳಷ್ಟು ಜನ ಅಲ್ಲಿಯ ದರ ದುಬಾರಿಯೆಂದು ಕಂಪನಿಯ ಸರ್ವೀಸ್ ಸೆಂಟರುಗಳಿಗೆ ಹೋಗುತ್ತಿರಲಿಲ್ಲ, ಬದಲಾಗಿ ಬೀದಿ ಬದಿಯ ಗಾರಾಜುಗಳಲ್ಲಿ ರಿಪೇರಿ ಮತ್ತು ನಿಯತಕಾಲದ ಸರ್ವೀಸ್ ಮಾಡಿಸಿಕೊಳ್ಳುತ್ತಿದ್ದರು. ನನಗೆ ಕಾರು ಮಾರಿದವನೂ ನನಗೆ ಇದೇ ಸಲಹೆ ಕೊಟ್ಟಿದ್ದ. ಆರೆಂಟು ವರ್ಷಗಳ ಕಾಲ ಆ ಕಾರನ್ನು ಉಪಯೋಗಿಸಿದ ಕಾಲದಲ್ಲಿ ನಾನೂ ಹೀಗೇ ಸ್ಥಳೀಯ ಗಾರಾಜಿನಲ್ಲಿಯೇ ರಿಪೇರಿ ಮತ್ತು ಸರ್ವೀಸ್ ಮಾಡಿಸಿಕೊಳ್ಳುತ್ತಿದ್ದೆ.

ಆಗ ಈ ಕಂಪನಿಗಳ ಸರ್ವೀಸ್ ಸೆಂಟರುಗಳ ಮೇಲಿನ ಒಂದು ಗುರುತರ ಆಪಾದನೆಯೆಂದರೆ ಅಲ್ಲಿ ಅವರು ರಿಪೇರಿ ಮಾಡಬಹುದಾದ ಭಾಗಗಳನ್ನೂ ರಿಪೇರಿ ಮಾಡದೆ ಅವುಗಳನ್ನು ಬದಲಿಸಿ ಅನಾವಶ್ಯಕವಾಗಿ ಸುಲಿಗೆ ಮಾಡುತ್ತಾರೆ ಎಂದಾಗಿತ್ತು. ಅದು ನಿಜವೂ ಆಗಿತ್ತು ಮತ್ತು ಇಗಲೂ ಅದು ಹಾಗೆಯೇ ಇದೆ. ಅಲ್ಲಿ ಕಾರುಗಳನ್ನು ರಿಪೇರಿ ಮಾಡಲಾಗುವುದಿಲ್ಲ. ಸವಕಳಿ ಬರದಿದ್ದರೂ ರಿಪೇರಿ ಮಾಡಬಹುದಾದ ಭಾಗಗಳನ್ನು ಕೇವಲ ಬದಲಿಸಿ ಕೊಡುತ್ತಾರೆ. ಬೀದಿ ಬದಿಯ ರಿಪೇರಿಯವರು ಎಷ್ಟು ನಿಷ್ಣಾತರಿದ್ದರೆಂದರೆ ಸವಕಳಿ ಬರದಿದ್ದರೆ ಅವರು ಯಾವ ಭಾಗವನ್ನೂ ಬದಲಿಸುತ್ತಿರಲಿಲ್ಲ, ರಿಪೇರಿ ಮಾಡಿಕೊಡುತ್ತಿದ್ದರು. ಆಗ ರಿಪೇರಿ ಮಾಡುವ ಕೂಲಿ ಮಾತ್ರ ಗ್ರಾಹಕನಿಗೆ ತಗಲುತ್ತಿತ್ತು. ಇದು ಗ್ರಾಹಕನಿಗೆ ಹಣವನ್ನೂ ಉಳಿಸುತ್ತಿತ್ತು ಮತ್ತು ವಸ್ತುವೊಂದನ್ನು ಹೆಚ್ಚು ಕಾಲ ಬಳಸುವುದರಿಂದ ಸಂಪನ್ಮೂಲದ ರಕ್ಷಣೆಯೂ ಆಗುತ್ತಿತ್ತು.

ಆಗ ಕಂಪನಿಯ ಸರ್ವೀಸ್ ದುಬಾರಿಯಾಗಿದ್ದರೂ ಇಂದಿನಷ್ಟು ಸುಲಿಗೆ ಇರಲಿಲ್ಲ. ಸರ್ವೀಸ್ ಮಾಡುವುದೆಂದರೆ ಬದಲಿಸಿದ ಬಿಡಿ ಭಾಗಗಳ ಹೊರತಾದ ಎಲ್ಲ ಕೂಲಿ (Labor charges) ಶುಲ್ಕಗಳೂ ಸೇರಿರುತ್ತಿದ್ದವು. ಗ್ರಾಹಕರು ಹೆಚ್ಚು ಹೆಚ್ಚು ಬರತೊಡಗಿ ಬೀದಿ ಬದಿಯ ಸ್ಥಳೀಯ ಗಾರಾಜುಗಳು ಮುಚ್ಚುತ್ತಾ ಬಂದಂತೆ ಕಂಪನಿಯ ಸರ್ವೀಸ್ ಸೆಂಟರುಗಳ ವರಸೆಯೇ ಬದಲಾಗುತ್ತಾ ಹೋಯಿತು. ಈಗ ಒಂದು ಮಿಡ್ ಸೈಜ್ ಕಾರಿಗೆ ಕನಿಷ್ಟ 2500 ರೂ ಗಳಷ್ಟು ಸರ್ವೀಸ್ ಚಾರ್ಜ್ ತೆಗೆದುಕೊಳ್ಳುತ್ತಾರೆ. ಬ್ರೇಕ್ ಕ್ಲೀನ್ ಮಾಡಿದ್ದಕ್ಕೆ, ಇಲೆಕ್ಟ್ರಿಕಲ್ ವೈರಿಂಗ್ ಚೆಕ್ ಮಾಡಿದ್ದಕ್ಕೆ, ಎಸಿ ಚೆಕ್ ಮಾಡಿದ್ದಕ್ಕೆ ಹೀಗೆ ಪ್ರತಿಯೊಂದಕ್ಕು ಪ್ರತ್ಯೇಕ ಲೇಬರ್ ಚಾರ್ಜ್ ಹಾಕುತ್ತಾರೆ. ಅದು ಸರ್ವೀಸ್ ಚಾರ್ಜ್ ಗಿಂತ ಒಂದುವರೆ ಪಟ್ಟು ಹೆಚ್ಚಾಗುತ್ತದೆ.

ಬ್ಯಾಟರಿಯನ್ನು ಕನೆಕ್ಟ್ ಮಾಡುವ ಟರ್ಮಿನಲ್ಲಿಗೆ ಗ್ರೀಸ್ ಹಚ್ಚಿದ್ದಕ್ಕೂ ಚಾರ್ಜ್ ಮಾಡುತ್ತಾರೆ, ಅದೂ ಒಂದಕ್ಕೆ ನಾಲ್ಕು ಪಟ್ಟು (ನನಗೆ ಇಂದು ಬ್ಯಾಟರಿಯ ಎರಡು ಟರ್ಮಿನಲ್ಲಿಗೆ ಗ್ರೀಸ್ ಹಚ್ಚುದ್ದಕ್ಕೆ ಚಾರ್ಜ ಮಾಡಿದ್ದು 42 ರೂ.ಗಳು). ಇನ್ನು ಬದಲಿಸಿದ ಬಿಡಿ ಭಾಗಗಳಿಗೆ ಮತ್ತು ಕನ್ಸೂಮೇಬಲ್ ಅಂತ ಚಾರ್ಜ ಮಾಡುವುದರ ಬಗ್ಗೆ ನಮಗೆ ತಲೆ ಬುಡ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಗ್ರಾಹಕರ ಸುಲಿಗೆ. ಹಾಗಾಗಿಯೇ ಇಂದು ಈ ಎಲ್ಲ ಕಂಪನಿಗಳೂ ದೇಶದ ಆರ್ಥಿಕತೆ ಕುಸಿದರೂ ತಮ್ಮ ಲಾಭವನ್ನು ಮಾತ್ರ ವರ್ಷದಿಂದ ವರ್ಷಕ್ಕೆ ಎಷ್ಟೋ ಪಟ್ಟು ಹೆಚ್ಚಿಸಿಕೊಳ್ಳುತ್ತಲೇ ಇವೆ.

ಇಂದು ಆಗಬೇಕಾಗಿರುವುದು ರಿಪೇರಿ ಹಕ್ಕಿನಡಿ ಗ್ರಾಹಕರೆಲ್ಲ ಒಂದಾಗುವುದು. ಕಂಪನಿಯೊಂದು ಯಾವುದೇ ಗ್ರಾಹಕ ವಸ್ತುವನ್ನು ತಯಾರಿಸಿದರೆ ಅದರ ಬಿಡಿ ಭಾಗಗಳು ಮುಕ್ತವಾಗಿ ನ್ಯಾಯಯುತ ಬೆಲೆಗೆ ಮಾರುಕಟ್ಟೆಯಲ್ಲಿ ನಿರ್ಧಿಷ್ಟ ವರ್ಷಗಳವರೆಗೆ ಆದರೆ ಧೀರ್ಘವಾಧಿಯಾಗಿ ಸಿಗುವಂತಾಗಬೇಕು. ಈಗ ಬಹುತೇಕ ಎಲ್ಲ ಕಂಪನಿಗಳೂ ಅನುಸರಿಸುತ್ತಿರುವ ಮಾರಾಟ ನಂತರದ Monopoly business tacticsಗಳನ್ನು ಸರಕಾರ ನಿರ್ಭಂಧಿಸಬೇಕು.

ರಿಪೇರಿ ಮತ್ತು ಸರ್ವೀಸ್ ಕ್ಷೇತ್ರದಲ್ಲಿ ಮುಕ್ತ ಪೈಪೋಟಿ ಏರ್ಪಡಬೇಕು. ಅದಿಲ್ಲವಾದರೆ ಬಳಕೆಯಿಂದ ಹೆಚ್ಚು ಸವಕಳಿ ಬರುವಂಥ ವಾಹನವೇ ಮೊದಲಾದ ಚಲಿಸುವ ಭಾಗಗಳುಳ್ಳ ಯಂತ್ರಗಳನ್ನು ಕೊಂಡವನು ಇನ್ನು ಕೆಲವು ವರ್ಷಗಳಲ್ಲಿ ಅವುಗಳ ನಿಯತ ಕಾಲಿಕ ಸರ್ವೀಸ್ ಗಳಿಗಾಗಿಯೇ ಅವುಗಳನ್ನು ಕೊಂಡ ಐದಾರು ವರ್ಷದ ಅವಧಿಯಲ್ಲಿ ಅದರ ಮೂಲ ಬೆಲೆಗಿಂತಲೂ ಹೆಚ್ಚು ಹಣವನ್ನು ತೆರೆಬೇಕಾದೀತು.

ಮತ್ತೆ ಮೊದಲಿನಂತೆ ರಿಪೇರಿ ಅಂಗಡಿಗಳು ಬೀದಿ ಬೀದಿಯಲ್ಲಿ ನಳನಳಿಸುವಂತಾಗಲಿ. ಮುಕ್ತ ಪೈಪೋಟಿಗೆ ದಾರಿಯಾಗಲಿ. ಇದರಿಂದ ಗ್ರಾಹಕನ ಲೂಟಿಯೂ ತಪ್ಪುವುದು, ವಸ್ತುಗಳ ಧೀರ್ಘಾವಧಿ ಬಳಕೆಯಿಂದ ಪರಿಸರ ಮತ್ತು ಸಂಪನ್ಮೂಲಗಳ ರಕ್ಷಣೆಯೂ ಆಗುವುದು. ಅಷ್ಟೇ ಮುಖ್ಯವಾಗಿ ಕಂಪನಿಗಳ ಕೂಲಿ ಮಾಡುವ ಜಡತ್ವದ ಬದಲು ಜನರಲ್ಲಿ ಎಂಟರ್ಪ್ರನರ್‍ ಶಿಪ್ ಬೆಳೆಯುವಂತಾದರೆ ಮುಂದಿನ ಪೀಳಿಗೆ ಹೆಚ್ಚು ಹೆಚ್ಚು ಸೃಜನಶೀಲವೂ ಕಾರ್ಯಶೀಲವೂ ಆಗುವುದು.

‍ಲೇಖಕರು Admin

November 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: