ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
147
ಎರಡನೇ ದಶಕದ ಪ್ರಾರಂಭದ ವರ್ಷಗಳು ಸಮ್ಮಿಶ್ರ ಭಾವಗಳನ್ನು ಬಿತ್ತಿದ ಕಾಲಮಾನ. ಒಂದಷ್ಟು ಒತ್ತಡಗಳು, ಒಂದಷ್ಟು ಗೊಂದಲಗಳು ಕೊಂಚ ಸಂದಿಗ್ಧದ ಸ್ಥಿತಿ. ಒಳಗೊಳಗೇ ಕುಸಿಯುವಂತೆ ಮಾಡಿದ ನೋವುಗಳು. ಒಂದಿಷ್ಟು ಸಂಭ್ರಮ ಕೂಡಾ! ಬದುಕೇ ಹಾಗೆ ಅಲ್ಲವೇ? ಒಂದು ಬೆಳಿಗ್ಗೆ ಹಾಲ್ ನಲ್ಲಿ ಪೇಪರ್ ಓದುತ್ತಾ ಕುಳಿತಿದ್ದೆ. ರಂಜನಿ ಕಾಲೇಜ್ ಗೆ ಹೊರಟಾಗಿತ್ತು. ರಾಧಿಕಾ ಬಲು ಸಂಭ್ರಮದಿಂದ ‘ಡ್ಯಾಡೀ, good news’ ಎಂದು ಕೂಗುತ್ತಾ ಮಹಡಿ ಮೇಲಿನಿಂದ ಅಕ್ಷರಶಃ ನೆಗೆದುಕೊಂಡೇ ಬಂದಳು! ಮತ್ತಾವುದೋ ನೃತ್ಯ ಕಾರ್ಯಕ್ರಮಕ್ಕೆ ಆಹ್ವಾನ ಬಂದಿರಬಹುದೆಂಬುದು ನನ್ನ ಭಾವನೆಯಾಗಿತ್ತು. ಕೊಂಚ ಆರ್ಥಿಕ ಹಿನ್ನಡೆಯ ಸಮಯವೂ ಆಗಿದ್ದರಿಂದ ಮತ್ತಾವುದೋ ದೊಡ್ಡ ಖರ್ಚಿನ ಬಾಬತ್ತಿನ ಕಾರ್ಯಕ್ರಮವಾಗಿಬಿಟ್ಟರೆ ಹೇಗೆ ನಿಭಾಯಿಸುವುದು ಎಂಬ ಸಣ್ಣ ಆತಂಕವೂ ಮೂಡದಿರಲಿಲ್ಲ! ಮಗಳು ಕೆಳಗಿಳಿದು ಬಂದವಳೇ ಪರಮೋತ್ಸಾಹದಿಂದ, “ಡ್ಯಾಡಿ, ನನಗೆ ಲಂಡನ್ ನ ಛೆಲ್ಸಿ ಯೂನಿವರ್ಸಿಟಿಯಲ್ಲಿ visual arts ನಲ್ಲಿ masters ಮಾಡೋದಕ್ಕೆ ಸೆಲೆಕ್ಷನ್ ಆಗಿದೆ!” ಎಂದು ನರ್ತಿಸುತ್ತಲೇ ನುಡಿದಳು!
ಅವಳು ನೀಡಿದ ಉಳಿದ ವಿವರಗಳು ಇಂತಿದ್ದವು: ಲಂಡನ್ ನಲ್ಲಿ ಸ್ನಾತಕೋತ್ತರ ಪದವಿಗೆ ಒಂದು ವರ್ಷದ ಅಧ್ಯಯನ! ಅಲ್ಲಿ ಉಳಿದುಕೊಳ್ಳಲು ಹಾಸ್ಟೆಲ್ ವ್ಯವಸ್ಥೆಯೂ ಇದೆ; ಹಾಸ್ಟೆಲ್ ರೂಂ ಬಾಡಿಗೆ, ಸ್ಕೂಲ್ ಗೆ ಕಟ್ಟಬೇಕಾಗಿದ್ದ ಶುಲ್ಕಗಳೆಲ್ಲವೂ ಸೇರಿ ಹೆಚ್ಚುಕಡಿಮೆ 25 ರಿಂದ 30 ಲಕ್ಷದ ಖರ್ಚು; ಇದರ ಜತೆಗೆ ಅವಳ ಅಲ್ಲಿಯ ಊಟ ತಿಂಡಿ ಇತ್ಯಾದಿಗಳ ಮೇಲು ಖರ್ಚು; ಯಾವುದೇ ವಿದ್ಯಾರ್ಥಿವೇತನ ಕೊಡುವ ಪರಿಪಾಠ ಅಲ್ಲಿ ಇಲ್ಲದ್ದರಿಂದ ಎಲ್ಲವನ್ನೂ ನಾವೇ ಭರಿಸಬೇಕು! ಒಂದೆಡೆ ಮಗಳಿಗೆ ಇಂಥದೊಂದು ಅಪೂರ್ವ ಅವಕಾಶ ದೊರೆತ ಖುಷಿಯಾದರೆ ಮತ್ತೊಂದೆಡೆ ಈ ‘ಆರ್ಥಿಕ ಕುಸಿತ’ದ ಸಮಯದಲ್ಲಿ ಅಷ್ಟೆಲ್ಲಾ ಖರ್ಚು ವೆಚ್ಚಗಳನ್ನು ನಿಭಾಯಿಸುವುದಾದರೂ ಹೇಗೆ ಎಂಬ ಆತಂಕ! ಏನೇ ಆದರೂ ಪ್ರೀತಿಯ ಮಗಳು ಕಣ್ಣಲ್ಲಿ ಕನಸುಗಳನ್ನು ತುಳುಕಿಸುತ್ತಾ, “ಆಗುತ್ತೆ ಅಲ್ವಾ ಡ್ಯಾಡಿ? ನನ್ನನ್ನ ಓದೋದಕ್ಕೆ ಲಂಡನ್ ಗೆ ಕಳಿಸೋಕೆ ಆಗುತ್ತೆ ಅಲ್ವಾ?” ಎಂದು ಕಾತರದಿಂದ ಕೇಳಿದಾಗ ‘ಇಲ್ಲ’ ಅನ್ನುವುದಾದರೂ ಹೇಗೆ? ಅವಳಿಗೆ ಮೊದಲು ಅಭಿನಂದನೆಗಳನ್ನು ಹೇಳಿ ನಂತರ, “ಏನೋ ಒಂದು ವ್ಯವಸ್ಥೆ ಮಾಡೋಣ ಚಿನ್ನು. ಚಿಂತೆ ಮಾಡಬೇಡ” ಎಂದು ಆಶ್ವಾಸನೆ ಕೊಟ್ಟಾಗ ಅವಳ ಕಣ್ಣಲ್ಲಿ ಮಿಂಚೇ ಹೊಳೆದಂತಾಯ್ತು! ರಂಜನಿ ಕಾಲೇಜ್ ನಿಂದ ಬಂದಮೇಲೆ ಈ ಕುರಿತಾಗಿ ನಮ್ಮ ಮಾತುಕತೆ ಪ್ರಾರಂಭವಾಯಿತು. ಅಂದಿನ ಪರಿಸ್ಥಿತಿಯಲ್ಲಿ ಅಷ್ಟು ಹಣವನ್ನು ಹೊಂದಿಸುವುದಾದರೂ ಹೇಗೆ? ಎಂಬ ಬೃಹದಾಕಾರದ ಪ್ರಶ್ನೆ ಎದುರು ನಿಂತಿತ್ತು. ಬ್ಯಾಂಕ್ ಗಳಲ್ಲಿ ಉನ್ನತ ಶಿಕ್ಷಣಕ್ಕೆ ಸಾಲ ಕೊಡುತ್ತಾರೆ ನಿಜ; ಆದರೆ ಒಂದು ಕಾಲಮಿತಿಯ ನಂತರ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳ ಕಂತಿನ ಹಣ ಕಟ್ಟಬೇಕಾಗುತ್ತದಲ್ಲಾ!
ಲಂಡನ್ ನ ಛೆಲ್ಸಿ ಯೂನಿವರ್ಸಿಟಿ
ಅವಳ ವಿದ್ಯಾಭ್ಯಾಸದ ನಂತರ ಕೆಲಸ ಸಿಕ್ಕಿದರೆ ಅಡ್ಡಿಯಿಲ್ಲ; ಆದರೆ ಕಲೆಯ ಕ್ಷೇತ್ರದಲ್ಲಿ ಅದು ಅಷ್ಟು ಸರಾಗವಾಗಿ ನಡೆಯುವ ಪ್ರಕ್ರಿಯೆಯಲ್ಲ! ಬೇರೆ ತಾಂತ್ರಿಕ ಯಾ ವೈದ್ಯಕೀಯ ಕ್ಷೇತ್ರಗಳಲ್ಲಿರುವಷ್ಟು ಅವಕಾಶಗಳು—ಬೇಡಿಕೆ ಕಲೆಯ ಕ್ಷೇತ್ರದಲ್ಲಿ ಇಲ್ಲವೇ ಇಲ್ಲ. ಆಗ ಕಂತು ಕಟ್ಟುವುದೇ ಒಂದು ದೊಡ್ಡ ಸಮಸ್ಯೆಯಾಗಿಬಿಡುತ್ತದೆ. ಹಾಗಾಗಿ ಹಣ ಹೊಂದಿಸುವ ಪರ್ಯಾಯ ಮಾರ್ಗಗಳ ಬಗ್ಗೆ ಆಲೋಚಿಸತೊಡಗಿದಾಗ ನನಗೆ ಥಟ್ಟನೆ ಹೊಳೆದದ್ದೆಂದರೆ ಮನೆಯನ್ನು ಮಾರಿಬಿಡುವುದು! ಈ ನನ್ನ ಆಲೋಚನೆಯನ್ನು ರಂಜನಿಯ ಮುಂದೆ ಮಂಡಿಸುತ್ತಿದ್ದಂತೆಯೇ ಅವಳು ಗಾಬರಿಯಿಂದ ತಲ್ಲಣಿಸಿಬಿಟ್ಟಳು! “ಬಿಡ್ತು ಅನ್ನಿ! ಕನಸಲ್ಲೂ ಹಾಗೆಲ್ಲಾ ಯೋಚಿಸಬೇಡಿ. ಮನೆ ಮಾರೋದಕ್ಕೆ ಖಂಡಿತ ನಾನು ಒಪ್ಪೋಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿ ಮಾತುಕತೆಗೆ ಪೂರ್ಣವಿರಾಮವನ್ನೇ ಹಾಕಿಬಿಟ್ಟಳು. ವಾಸ್ತವವಾಗಿ ನನಗಾದರೂ ಮನೆ ಮಾರುವುದು ಎಳ್ಳುಕಾಳಿನಷ್ಟೂ ಇಷ್ಟವಿರಲಿಲ್ಲ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಆ ಮನೆಯಲ್ಲಿ ಯಾಕೋ ಏನೋ ಸರಿಯಿಲ್ಲ ಎಂದು ಒಂದೆರಡು ವರ್ಷಗಳಿಂದಲೇ ಅನ್ನಿಸತೊಡಗಿತ್ತು. ಯಾರ, ಯಾವ ಕೆಲಸಗಳಿಗೂ ಸಿಗಬೇಕಾದಷ್ಟು ಪ್ರತಿಫಲವಾಗಲೀ ಮನ್ನಣೆಯಾಗಲೀ ಸಿಗದೆ ಮನಸ್ಸು ಮುದುಡುತ್ತಿತ್ತು. ಏನೋ ಅಡ್ಡಿ ಆತಂಕಗಳು, ಭಯ ತಲ್ಲಣಗಳು ಬಾಧಿಸುತ್ತಿದ್ದವು. ಮತ್ತೂ ಅನೇಕ ಸಂಗತಿಗಳಿದ್ದರೂ ಅದೆಲ್ಲವನ್ನೂ ಈ ವೇದಿಕೆಯಲ್ಲಿ ಸಂಪೂರ್ಣವಾಗಿ ನಿವೇದಿಸಲು ಹೋಗುವುದಿಲ್ಲ. ಕೇವಲ ಅನುಭವ ವೇದ್ಯವಾದ ಕೆಲವಷ್ಟು ಸಂಗತಿಗಳನ್ನು ವೈಯಕ್ತಿಕ ನೆಲೆಯಲ್ಲಿಯೇ ನಮಗೆ ಸರಿತೋಚಿದಂತೆ ಪರಿಹರಿಸಿಕೊಳ್ಳಬೇಕೇ ವಿನಾ ಅವನ್ನು ಸಾರ್ವಜನಿಕ ಚರ್ಚೆಯ ವಿಷಯವಾಗಿಸುವುದು ತಪ್ಪಾಗಬಹುದು. ಒಟ್ಟಿನಲ್ಲಿ ನಮಗೆ ಮನೆಯ—ಆ ಜಾಗದ ವಾಸ್ತು ಹೊಂದಲಿಲ್ಲವೋ ಅಥವಾ ಆ ಮನೆ— ಆ ಸ್ಥಳಕ್ಕೇ ನಮ್ಮ ವಾಸ್ತು ಹಿಡಿಸಲಿಲ್ಲವೋ ಕಾಣೆ, ನಮ್ಮ ನೆಮ್ಮದಿಗೆ ಭಂಗ ಬಂದದ್ದಂತೂ ದಿಟ.
ಇದೆಲ್ಲವನ್ನೂ ರಂಜನಿಗೆ ಬಿಡಿಸಿ ಬಿಡಿಸಿ ಹೇಳಿದ ಮೇಲೆ ಅವಳ ಕಠೋರ ನಿಲುವು ಕೊಂಚ ಸಡಿಲವಾದಂತೆ ಕಾಣಿಸಿತು! ಆ ವೇಳೆಗಾಗಲೇ ಕುಮಾರಣ್ಣಯ್ಯ ಬಸವೇಶ್ವರ ನಗರದ ಮನೆಯನ್ನು ಮಾರಿ ಬನಶಂಕರಿಯ ಸ್ಟರ್ಲಿಂಗ್ ಅಪಾರ್ಟ್ ಮೆಂಟ್ ನಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದ! ನನ್ನದೂ ಅದೇ ವಿಚಾರವಾಗಿದ್ದರಿಂದ ಅಣ್ಣಯ್ಯನ ನಡೆ ನನಗೆ ದಾರಿದೀಪದಂತಾಗಿ ಮೇಲ್ಪಂಕ್ತಿಯನ್ನೂ ಹಾಕಿಕೊಟ್ಟಿತು! ಮನೆಯನ್ನು ಮಾರಿ ಮಗಳನ್ನು ಲಂಡನ್ ವಿದ್ಯಾಭ್ಯಾಸಕ್ಕೆ ಕಳುಹಿಸಿ ನಾವು ಒಂದು flat ಅನ್ನು ಖರೀದಿಸಿ ಸ್ಥಳಾಂತರಗೊಳ್ಳುವುದು! ಇದರಿಂದ ಮಗಳ ಕನಸೂ ಈಡೇರುತ್ತದೆ; ಸಾಲದ ಶೂಲವೂ ನೆತ್ತಿಗೇರುವುದಿಲ್ಲ; ಚಿಕ್ಕದೇ ಆದರೂ ಒಂದು ಸ್ವಂತ ಗೂಡೂ ದೊರೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವುದು ಹೆಚ್ಚು ಸುರಕ್ಷಿತ. ಅದೂ ವಯಸ್ಸಾದ ಮೇಲೆ—ಎಂಬೊಂದು ‘ಅನುಕೂಲ ಸಿಂಧು ವಾದ’ ಎನ್ನಿಸಿದರೂ ಸತ್ಯವೇ ಆದ ವಾದಸರಣಿಯೂ ನನ್ನ ನೆರವಿಗೆ ಬಂತು. ಮನೆಯಲ್ಲಿಯೂ ಸಹಾ ಅಕ್ಕ ಭಾವ ಅಣ್ಣಂದಿರಾದಿಯಾಗಿ ಎಲ್ಲರೂ ಮನೆ ಮಾರುವ ವಿಚಾರವನ್ನು ಅನುಮೋದಿಸಿದರು. ಮೊದಲಿನಿಂದಲೂ ನಮಗೆ ಮಾರ್ಗದರ್ಶಕರಾಗಿರುವ ಹರೀಶ್ ಜೀ ಅವರ ಜೊತೆಗೂ ಮನೆ ಮಾರುವ ವಿಷಯವನ್ನು ಚರ್ಚಿಸಿದೆವು. ಅವರು ನಮ್ಮ ಆಲೋಚನೆಗಳಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದರು. ಮನೆಯನ್ನೂ ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿ, “ಈ ಮನೆಯಿಂದ ನಿಮಗೆ ಏನೇನು ಲಭ್ಯವಿತ್ತೋ ಅದೆಲ್ಲಾ ಬಂದಾಗಿದೆ. ಇನ್ನು ಇಲ್ಲಿರುವ ಅಗತ್ಯವಿಲ್ಲ. ನಿಮ್ಮ ಈಗಿನ ಪರಿಸ್ಥಿತಿಯಲ್ಲಿ ಮನೆ ಮಾರುವುದರಿಂದಲೇ ಹೆಚ್ಚು ಅನುಕೂಲವಾಗುತ್ತದೆ ಎಂದು ನಮಗೂ ಅನ್ನಿಸುತ್ತಿದೆ. ಮುಂದುವರಿಯಿರಿ” ಎಂದು ಭರವಸೆ ನೀಡಿದರು. ಅವರ ಮಾತಿನಿಂದ ನಮ್ಮ ಮನಸ್ಸಿಗೂ ಎಷ್ಟೋ ನಿರಾಳವಾಯಿತು—ವಿಶೇಷವಾಗಿ ರಂಜನಿಗೆ!
ರಾಧಿಕಾ ಪ್ರಭು
ಇಷ್ಟಾದ ಮೇಲೆ ಮಧ್ಯವರ್ತಿಗಳ ನೆರವಿನಿಂದ ಸೂಕ್ತ ಖರೀದಿದಾರರ ಅನ್ವೇಷಣೆ ಆರಂಭವಾಯಿತು. ತುಂಬಾ ಒಳ್ಳೆಯ ಬಡಾವಣೆ. ಜೊತೆಗೆ ಸೊಗಸಾಗಿ ಕಲಾತ್ಮಕವಾಗಿ ಕಟ್ಟಿದ್ದ ಮನೆ. ಖರೀದಿದಾರರು ಸಿಗುವುದೇನೂ ಕಷ್ಟವಾಗಲಿಲ್ಲ. ಹೆಗಡೆ ಎಂಬೊಬ್ಬ ಸಜ್ಜನರು ಕುಟುಂಬ ಸಮೇತರಾಗಿ ಬಂದು ಮನೆಯನ್ನು ನೋಡಿ ಬಹಳವಾಗಿ ಮೆಚ್ಚಿಕೊಂಡು ಕೊಳ್ಳಲು ನಿರ್ಧರಿಸಿ ಒಂದಿಷ್ಟು ಮುಂಗಡ ಹಣವನ್ನೂ ಕೊಟ್ಟುಬಿಟ್ಟರು. ರಂಜನಿ ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ. ಕಾಲೇಜಿಗೆ ಹೋಗಿದ್ದಳು. ಮರಳಿ ಬಂದಾಗ ಅವಳಿಗೆ ವಿಷಯವನ್ನು ಹೇಳಿದೆ. ಮನೆ ವಾಸ್ತವವಾಗಿಯೂ ಮಾರಾಟವಾಗಿಯೇ ಹೋಯಿತು; ಮುಂಗಡ ಹಣವನ್ನೂ ಕೊಟ್ಟಿದ್ದಾರೆ; ಸಧ್ಯದಲ್ಲೇ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ನಾನು ಹೇಳುತ್ತಿದ್ದಂತೆಯೇ ಬವಳಿ ಬಂದವಳಂತೆ ಕುಸಿದುಹೋದಳು ರಂಜನಿ. ಬಹುಶಃ ಎಲ್ಲೋ ಒಂದು ದೂರದ ಆಸೆಯಿತ್ತೇನೋ ಅವಳಿಗೆ ಸೂಕ್ತ ಖರೀದಿದಾರರು ಅಥವಾ ನಿರೀಕ್ಷಿತ ಬೆಲೆ ದೊರೆಯದೆ ಮನೆ ಮಾರಾಟವಾಗದೇ ಇರಬಹುದೇನೋ ಎಂದು! ಈಗ ಅವಳ ಎಲ್ಲಾ ಆಸೆಗಳೂ ಕಮರಿಹೋದಂತಾಗಿ ಮನೆ ಮಾರಾಟವಾದ ಆಘಾತದ ಸುದ್ದಿಯನ್ನು ಜೀರ್ಣಿಸಿಕೊಳ್ಳುವುದು ಅವಳಿಗೆ ಸಾಧ್ಯವೇ ಆಗಲಿಲ್ಲ. ಬಿಕ್ಕಿ ಬಿಕ್ಕಿ ಅಳತೊಡಗಿದ ಅವಳನ್ನು ಸಮಾಧಾನ ಪಡಿಸಲು ನಾನು ಹರಸಾಹಸವನ್ನೇ ಪಡಬೇಕಾಯಿತು. ಆದರೂ ಅವಳ ಬಿಕ್ಕು ನಿಲ್ಲಲಿಲ್ಲ. ಮೊದಲೇ ಮಹಾ ಭಾವಜೀವಿ ಅವಳು. ಜತೆಗೆ ಆ ಮನೆಯೊಟ್ಟಿಗೆ ಅವಳ ನೂರು ಕನಸುಗಳು ಬೆಸೆದುಕೊಂಡುಬಿಟ್ಟಿದ್ದವು. ಮನೆಯ ಅಂಗುಲ ಅಂಗುಲವನ್ನೂ ಪ್ರೀತಿಸುತ್ತಿದ್ದ ಅವಳಿಗೆ ಮನೆಯನ್ನು ಸುಂದರವಾಗಿ ಸಿಂಗರಿಸುವುದೇ ಅತ್ಯಂತ ಪ್ರೀತಿಯ ಕೆಲಸವಾಗಿತ್ತು. ಬಿಡುವಿನ ಸಮಯದಲ್ಲಿ ಹಳೆಯ ಕನ್ನಡ ಚಿತ್ರಗೀತೆಗಳನ್ನು ಗುನುಗಿಕೊಳ್ಳುತ್ತಾ ಮನೆಯನ್ನು ಅಣಿಗೊಳಿಸುವುದು. ಬಗೆಬಗೆಯ ಹೂಕುಂಡಗಳನ್ನು ತರಿಸಿ ಮೇಲ್ಮಹಡಿಯಲ್ಲಿ ಚಂದದ ತೋಟವನ್ನು ಬೆಳೆಸುವುದು. ಅಲ್ಲಿಯೇ ತೂಗುಹಾಕಿದ್ದ ಉಯ್ಯಾಲೆಯ ಮೇಲೆ ಕೂತು ಜೀಕಿಕೊಳ್ಳುತ್ತಾ ತನ್ನದೇ ಕಾವ್ಯಲೋಕದಲ್ಲಿ ವಿಹರಿಸುವುದು. ಅಲ್ಲಿಅರಳಿದ್ದ ಹೂವುಗಳ ಜತೆ, ಚಿಗುರೊಡೆಯುತ್ತಿದ್ದ ಗಿಡಗಳ ಜತೆ ಮುದ್ದುಮುದ್ದಾಗಿ ಮಾತಾಡುವುದು. ಇದೆಲ್ಲಾ ಅವಳ ಮೆಚ್ಚಿನ ಹವ್ಯಾಸವಾಗಿಹೋಗಿತ್ತು.
ಯಾವುದೋ ಅಪಾರ್ಟ್ ಮೆಂಟ್ ನ ಅಂಗೈ ಅಗಲದ ಪುಟ್ಟ ಮನೆಯಲ್ಲಿ ಇಷ್ಟೆಲ್ಲವನ್ನೂ ಕಲ್ಪಿಸಿಕೊಳ್ಳಲಾದರೂ ಆದೀತೇ? ನಿಜವಾದ ಅರ್ಥದಲ್ಲಿ ಸೂರೂ ನಮ್ಮದಲ್ಲದ ತಳಪಾಯವೂ ನಮ್ಮದಲ್ಲದ ತ್ರಿಶಂಕು ಸ್ಥಿತಿಯ ಜಾಗವನ್ನು ಮನೆಯೆಂದು ಒಪ್ಪಿ ಅಪ್ಪಿಕೊಳ್ಳುವುದಾದರೂ ಹೇಗೆ? ಮನೆಯೆಂದರೆ ಮರಳು ಇಟ್ಟಿಗೆ ಕಾಂಕ್ರೀಟುಗಳ ಮಿಶ್ರಣದ ಒಂದಷ್ಟು ಗೋಡೆಗಳ ನಡುವಿನ ಖಾಲಿತನವನ್ನು ರಾಚುವ ಜಾಗ ಮಾತ್ರವೇ? ಹೀಗೆ ಹಲುಬುತ್ತಿದ್ದ ಅವಳ ವೇದನೆಯನ್ನು ಕಂಡು ನನ್ನ ಮನಸ್ಸು ಕದಡಿಹೋಯಿತು. ಅವಳ ನೆಮ್ಮದಿಗೇ ಕಂಟಕವಾಗುವುದಾದರೆ ಈ ಮನೆ ಮಾರುವ ಉಸಾಬರಿಯೇ ಬೇಡ. ಮಗಳಿಗೆ ಇಲ್ಲಿಯೇ ಎಲ್ಲಾದರೂ ಸ್ನಾತಕೋತ್ತರ ಶಿಕ್ಷಣ ಪಡೆದುಕೋ ಎಂದು ಹೇಳಿ ಒಪ್ಪಿಸಿದರಾಯಿತು ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಕೊಂಡುಬಿಟ್ಟೆ. ಮರುದಿನ ರಂಜನಿ ಕಾಲೇಜಿಗೆ ಹೋದಮೇಲೆ ಹೆಗಡೆ ಅವರನ್ನು ಮನೆಗೆ ಕರೆಯಿಸಿ, “ಸ್ವಾಮಿ, ಮನೆ ಮಾರುವ ವಿಚಾರವಾಗಿ ನಾವು ಈಗ ಇನ್ನಷ್ಟು ಯೋಚಿಸುತ್ತಿದ್ದೇವೆ. ಅಂತಿಮ ನಿರ್ಧಾರಕ್ಕೆ ಕೊಂಚ ಸಮಯ ಬೇಕು” ಎಂದೆ. ನನ್ನ ಮಾತು ಕೇಳಿ ಹೆಗಡೆಯವರ ಮುಖ ಇಳಿದುಹೋಯಿತು! “ಇಪ್ಪತ್ತೈದು ಮನೆ ನೋಡಿದ ಮೇಲೆ ನಮ್ಮ ಮನೆಯವರು ಈ ಮನೆಯನ್ನ ಇಷ್ಟಪಟ್ಟಿದ್ದರು. ಈಗ ನೀವು ಹೀಗೆ ಹೇಳಿದರೆ ಹೇಗೆ?” ಎಂದು ಬೇಸರದಿಂದಲೇ ನುಡಿದರು. “ಅರ್ಥವಾಗುತ್ತದೆ ಸ್ವಾಮಿ. ಆದರೆ ನನ್ನ ಪರಿಸ್ಥಿತಿಯೂ ಅಷ್ಟೇ ನಾಜೂಕಾಗಿದೆ. ಬೇಕಿದ್ದರೆ ನಿಮ್ಮ ಮುಂಗಡ ಹಣವನ್ನು ಮರಳಿ ಕೊಟ್ಟುಬಿಡುತ್ತೇನೆ. ಈ ತಕ್ಷಣಕ್ಕೆ ನಿರ್ಧಾರ ಹೇಳಲು ಒತ್ತಡ ಹೇರಬೇಡಿ. ನನಗೆ ಸ್ವಲ್ಪ ಕಾಲಾವಕಾಶ ಬೇಕು. ನನ್ನ ಶ್ರೀಮತಿಯವರು ಪೂರ್ಣ ಮನಸ್ಸಿನಿಂದ ಮನೆ ಮಾರಲು ಒಪ್ಪಿದರೆ ಮಾತ್ರ ನಾನು ಮುಂದುವರಿಯುತ್ತೇನೆ. ಇಲ್ಲದಿದ್ದರೆ ಖಂಡಿತ ಮಾರುವುದಿಲ್ಲ” ಎಂದು ನಾನೂ ಖಚಿತ ಸ್ವರದಲ್ಲಿಯೇ ನುಡಿದೆ. ಹೆಗಡೆಯವರು ಕ್ಷಣಕಾಲ ಚಿಂತಿಸಿ, “ಆಯಿತು. ಅಡ್ವಾನ್ಸ್ ಹಣ ನಿಮ್ಮಲ್ಲೇ ಇರಲಿ. ನೀವು ಮನೆ ಮಾರುವುದೇ ಅಲ್ಲ ಅಂತ ತೀರ್ಮಾನ ಮಾಡಿಬಿಟ್ರೆ ಆಮೇಲೆ ವಾಪಸ್ ತೊಗೋತೀನಿ. ದಯವಿಟ್ಟು ಆದಷ್ಟು ಬೇಗ ನಿಮ್ಮ ನಿರ್ಧಾರ ತಿಳಿಸಿ” ಎಂದು ನುಡಿದು ಹೊರಟುಹೋದರು.
ರಂಜನಿ ಪ್ರಭು
ಮತ್ತೆ ರಂಜನಿಯ ಜತೆ ಮನೆ ವಿಷಯ ಚರ್ಚಿಸುವ ಧೈರ್ಯವಾಗಲಿಲ್ಲ ನನಗೆ. ಹೆಗಡೆಯವರು ಕೊಟ್ಟಿದ್ದ ಮುಂಗಡ ಹಣವನ್ನೂ ದೇವರ ಕೋಣೆಯಲ್ಲಿ ದೇವರ ಮುಂದೆ ಇಟ್ಟುಬಿಟ್ಟೆ. ಮಗಳನ್ನು ಲಂಡನ್ ಗೆ ಕಳಿಸಲು ಬೇರೆ ಏನು ಮಾಡಬಹುದು ಎಂಬ ಚಿಂತೆಯಲ್ಲಿದ್ದಾಗಲೇ ಮತ್ತೆ ನನ್ನ ನೆರವಿಗೆ ಬಂದವರು ಹರೀಶ್ ಜೀ. ಮನೆಗೇ ಬಂದು ಎಲ್ಲ ಸಾಧಕಬಾಧಕಗಳ ಬಗ್ಗೆಯೂ ವಿಷದವಾಗಿ ಚರ್ಚಿಸಿ ರಂಜನಿ ಪೂರ್ಣ ಮನಸ್ಸಿನಿಂದ ಮನೆ ಮಾರಲು ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಹರೀಶ್ ಜೀ ಯಶಸ್ವಿಯಾದರು. ಪೂರ್ಣ ಮನಸ್ಸಿನಿಂದ ಒಪ್ಪಿದಳು ಅನ್ನುವುದಕ್ಕಿಂತ ಬೇರೆ ಉತ್ತಮ ಆಯ್ಕೆಗಳಿಲ್ಲವಾದ್ದರಿಂದ ಸೋತಳು ಅನ್ನುವುದು ಹೆಚ್ಚು ಸೂಕ್ತವೋ ಏನೋ! ಹೆಗಡೆಯವರಿಗೆ ಫೋನ್ ಮಾಡಿ ನಮ್ಮ ಅಂತಿಮ ನಿರ್ಧಾರವನ್ನು ತಿಳಿಸಿ ಮುಂದಿನ ಪ್ರಕ್ರಿಯೆ ಆರಂಭಿಸಲು ಹೇಳಿದೆ. ಅವರಿಗೋ, ನಾನು ಮತ್ತೆಲ್ಲಿ ನಿರ್ಧಾರ ಬದಲಿಸಿಬಿಡುತ್ತೇನೋ ಎಂಬ ಅನುಮಾನ ಕಾಡತೊಡಗಿತ್ತು! ಹಾಗಾಗಿ ಮರುದಿನ ಸಂಜೆ ಬಂದು ಒಂದು ಹೊಸ ಕರಾರು ಪತ್ರವನ್ನು ನನ್ನ ಮುಂದೆ ಹಿಡಿದರು! ಅದರ ಒಕ್ಕಣೆಯ ಸಾರಾಂಶ ಇಂತಿತ್ತು: “ಮನೆ ಮಾರಾಟದ ಒಪ್ಪಂದ ಆಗಿದೆ. ಇನ್ನೆರಡು ತಿಂಗಳಲ್ಲಿ ಎಲ್ಲಾ ಕಾನೂನಾತ್ಮಕ ಕಾರ್ಯಗಳನ್ನೂ ಪೂರೈಸಲಾಗುತ್ತದೆ. ಅಷ್ಟರೊಳಗೆ ಮಾರಾಟಗಾರರು ಮತ್ತೆ ತಮ್ಮ ನಿರ್ಧಾರ ಬದಲಿಸಿದರೆ ಇಪ್ಪತ್ತು ಲಕ್ಷ ರೂಪಾಯಿಗಳ ದಂಡವನ್ನು ನೀಡಬೇಕಾಗುತ್ತದೆ!” ನಾನು ಸಾರಾಸಗಟಾಗಿ ಈ ಕರಾರನ್ನು ತಿರಸ್ಕರಿಸಬಹುದಿತ್ತು. ಆದರೆ ನಿರ್ಧಾರ ಬದಲಿಸದಿರಲು ಇದೂ ಒಂದು ಪ್ರಬಲ ಕಾರಣವಾಗಿ ಬಿಡುವುದರಿಂದ ಹೆಚ್ಚೇನೂ ತಲೆ ಕೆಡಿಸಿಕೊಳ್ಳದೆ ಸಹಿ ಮಾಡಿಬಿಟ್ಟೆ. ಆದರೆ ಒಂದಂತೂ ಪರಮಸತ್ಯ: ಯಾವ ಕಾರಣಕ್ಕಾಗಿ ಮನೆ ಮಾರಲು ನಿರ್ಧರಿಸಿದೆ ಎಂಬುದು ಅಪ್ರಸ್ತುತ. ಆದರೆ ಈ ಕಾರಣವಾಗಿ ಬಾಳ ಗೆಳತಿ ರಂಜನಿಯ ಸೂಕ್ಷ್ಮ ಮನಸ್ಸಿಗೆ ತೀರಾ ಘಾಸಿಯಾಗುವಂತೆ, ನೋವಾಗುವಂತೆ ಮಾಡಿಬಿಟ್ಟೆ ಎಂಬ ತಪ್ಪಿತಸ್ಥ ಭಾವನೆ ನನ್ನನ್ನು ಇಷ್ಟು ವರ್ಷಗಳ ನಂತರವೂ ಇನ್ನೂ ಕಾಡುತ್ತಿದೆ.
0 ಪ್ರತಿಕ್ರಿಯೆಗಳು