ಶ್ರೀನಿವಾಸ ಪ್ರಭು ಅಂಕಣ- ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

35

ನಮ್ಮ ತಂಡದ ಎಲ್ಲ ಕಲಾವಿದರಲ್ಲಿ ಒಂದು ಹೊಸ ಉತ್ಸಾಹ..ಹುಮ್ಮಸ್ಸು ಮೂಡಿತ್ತು. ‘ಇವತ್ತು ನಿನ್ನೆಗಿಂತ ಚೆನ್ನಾಗಿ ಆಗಬೇಕು ಪ್ರದರ್ಶನ..ಧಮಾಕಾ ಕರದೇಂಗೇ’ ಎಂದು ಮೇಯರ್ ಪಾತ್ರಧಾರಿ ಶ್ರೀಕಾಂತ ಹುರುಪಿನಿಂದ ಪುಟಿಯುತ್ತಿದ್ದ. ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ನಾವು ಮಾಡಿಕೊಳ್ಳುವ ಲಘು ಶಾರೀರಿಕ ವ್ಯಾಯಾಮ—ಏಕಾಗ್ರಚಿತ್ತತೆಯ ಸಾಧನೆಗೆ ನೆರವಾಗುವ ಧ್ಯಾನಕ್ರಿಯೆಗಳಲ್ಲಿ ನಾವು ತೊಡಗಿದ್ದಂತೆಯೇ ಪ್ರೇಕ್ಷಾಗೃಹದ ದಿಕ್ಕಿನಿಂದ ಧ್ವನಿಯೊಂದು ತೇಲಿಬಂತು: “ಚಲೋ..ಸಾರೀ ಲೈಟ್ಸ್ ಆನ್ ಕರದೋ..ಏಕ್ ಬಾರ್ ಚೆಕ್ ಕರಲೇಂಗೇ”…

ಅರೆ! ನಮ್ಮ ನಿರ್ದೇಶಕರದೇ ಧ್ವನಿ! ಅನುಮಾನವೇ ಇಲ್ಲ! ನಮ್ಮ ತಂಡದ ಎಲ್ಲರೂ ಒಮ್ಮೆ ಮುಖ ಮುಖ ನೋಡಿಕೊಂಡೆವು. “ನಾಟಕ ಮಸ್ತ್ ಹೊಂಟೈತಂತ ಸುದ್ದಿ ಹೋಗಿರಬೇಕು.. ಅದಕಾ ಬೆನ್ನು ತಟ್ಟಿಸಿಕೊಳ್ಳಾಕ ಬಂದಾನ ನೋಡು ಮಗ” ಎಂದು ತನ್ನದೇ ವಿಶಿಷ್ಟ ಶೈಲಿಯಲ್ಲಿ ಗೊಣಗಿದ ಅಶೋಕ. ಅವನ ಮಾತಿನ್ನೂ ಮುಗಿದಿಲ್ಲ, ನಿರ್ದೇಶಕ ಮಹೋದಯರು ಗ್ರೀನ್ ರೂಂಗೆ ಬಂದೇ ಬಿಟ್ಟರು! ನಮ್ಮೆಲ್ಲರನ್ನೂ ಪ್ರೀತಿಯಿಂದ ಮಾತಾಡಿಸಿದರು.

ಎಷ್ಟೇ ನೋವು ಮಾಡಿರಬಹುದು, ಚುಚ್ಚಿರಬಹುದು.. ಆದರೆ ನಾಟಕವನ್ನು ತಮ್ಮದೇ ವಿಶಿಷ್ಟರೀತಿಯಲ್ಲಿ ಅದ್ಭುತವಾಗಿ ನಿರ್ದೇಶಿಸಿದ್ದ ಅವರ ಸೃಜನಶೀಲತೆಯನ್ನಾಗಲೀ ಪರೋಕ್ಷವಾಗಿಯಾದರೂ ನಮ್ಮನ್ನು ನಾಟಕಕ್ಕೆ ಸಿದ್ಧಗೊಳಿಸಿದ ಅವರ ಕೊಡುಗೆ—ಪರಿಶ್ರಮಗಳನ್ನಾಗಲೀ ಕಡೆಗಣಿಸಲಾದೀತೇ! ‘ಅಕ್ಷರಂ ಕಲಿಸಿದಾತಂ ಗುರು’ ಎಂದು ಅಣ್ಣ ಬಾಲ್ಯದಲ್ಲೇ ಹೇಳಿಕೊಟ್ಟ ಪಾಠ ನೆನಪಾಯಿತು. ‘ನಾಟಕ ತುಂಬಾ ಚೆನ್ನಾಗಿ ಬಂತು’ ಎಂಬ ಸುದ್ದಿ ಕೇಳಿಯೇ ಅವರು ಬಂದಿದ್ದಾರೆಂಬುದರಲ್ಲಿ ಸಂದೇಹವೇ ಇರಲಿಲ್ಲವಾದರೂ ನಾವು ನಮ್ಮ ಅಸಮಾಧಾನವನ್ನು ಕಿಂಚಿತ್ತೂ ತೋರಗೊಡದೆ ಎದ್ದು ಹೋಗಿ ಅವರಿಗೆ ನಮಸ್ಕರಿಸಿ ಅವರ ಶುಭಹಾರೈಕೆಗಾಗಿ ಬೇಡಿಕೊಂಡೆವು.

“ಇವತ್ತು ಶೋ ನೋಡಲು ಕಾರಂತ್ ಬಾಬಾ, ಬೆನವಿಟ್ಸ್ ಸಾಬ್, ನಮ್ಮ ಅನೇಕ ಶಿಕ್ಷಕರು, ಹಿಂದಿ ರಂಗಭೂಮಿಯ ಅನೇಕ ಗಣ್ಯರು,ಪತ್ರಿಕಾ ವಿಮರ್ಶಕರು ಎಲ್ಲರೂ ಬರುತ್ತಿದ್ದಾರೆ.. ಇವತ್ತಿನ ಶೋ ಅದ್ಭುತವಾಗಿ ಆಗಬೇಕು.. all the best” ಎಂದು ಮನಸಾರೆ ಹಾರೈಸಿ ಲೈಟಿಂಗ್ ಕ್ಯಾಬಿನ್ ನತ್ತ ಹೊರಟರು ನಮ್ಮ ನಿರ್ದೇಶಕರು.ಅವರು ಹೋಗುವುದನ್ನೇ ಕಾಯುತ್ತಿದ್ದ ಅಶೋಕ, “ಏನಪಾ,ಛಲೋತ್ನಾಗ ಕಾಲಿಗೆ ಬಿದ್ದು ಆಶೀರ್ವಾದ ತೊಗೊಂಡೇನಪಾ ಡೈರೆಕ್ಟರ್ ಸ್ವಾಮಿಗಳದ್ದು”? ಎಂದು ಛೇಡಿಸಿದ.

“ಹೂಂ.. ನಾನಷ್ಟೆ ಏನು, ನೀನೂ ತೊಗೊಂಡೆಲ್ಲೋ ಮಗನಾ” ಎಂದು ನಾನು ಮರು ಛೇಡಿಸಿದೆ. “ತೊಗೊಂಡೆನಪ್ಪಾ..ನಾನೂ ಆಶೀರ್ವಾದ ತೊಗೊಂಡೆ.. ಅವರ ಬ್ಯಾಗ್ ದು” ಎಂದ ಅಶೋಕ. ಪ್ರಶ್ನಾರ್ಥಕವಾಗಿ ನೋಡಿದ ನನ್ನನ್ನು ಮತ್ತೆ ಛೇಡಿಸುತ್ತಾ ಅವನೆಂದ:” ಏ ಮಬ್ಬಿಡಿಸಿಗಂಡ,ನಮ್ಮ ರಿಹರ್ಸಲ್ ಹಾಲ್ ನ್ಯಾಗ ಡೈರೆಕ್ಟರ್ ಛೇರ್ ಮೇಲೆ ಕೂರ್ತಿದ್ದದ್ದು ಅವರ ಬ್ಯಾಗೇ ಅಲ್ಲೇನು? ಅದರ ಮುಂದೆ ತಾನೇ ನಾವು ತಾಲೀಮು ಮಾಡ್ತಿದ್ದದ್ದು? ಅದಕಾ ಆ ಬ್ಯಾಗ್ ಗೇ ಮುಗದು ಬಂದೆ ನೋಡು” ಎಂದು ಕಿಸಕ್ಕನೆ ನಕ್ಕ ಅಶೋಕ!ಅವನ ಸ್ವಭಾವವೇ ಹಾಗೆ..ಯಾವಾಗಲೂ ತಮಾಷೆ..ನಗೆಚಾಟಿಕೆ!

ಅಂದಿನ ಪ್ರದರ್ಶನಕ್ಕೆ ಕಿಕ್ಕಿರಿದು ಜನ ಸೇರಿದ್ದರು. ನಮ್ಮ ನಿರ್ದೇಶಕರು ಹೇಳಿದ್ದಂತೆ ಅನೇಕ ಗಣ್ಯರೂ ಮೇಷ್ಟ್ರೂ ಬೆನವಿಟ್ಸ್ ಅವರೂ ಆಗಮಿಸಿದ್ದರು. ಒಬ್ಬನೇ ಒಬ್ಬ ಪ್ರೇಕ್ಷಕ ಇದ್ದರೂ ಅದೇ ತನ್ಮಯತೆಯಿಂದ ನಾಟಕ ಮಾಡಬೇಕು, ನಮ್ಮ ಉತ್ಸಾಹ-ಹುರುಪು ಮುಕ್ಕಾಗಬಾರದು ಅನ್ನುವುದು ಅಲಿಖಿತ ನಿಯಮ ಹಾಗೂ ನಮ್ಮ ನೈತಿಕ ಹೊಣೆಯೇ ಹೌದಾದರೂ ಅಷ್ಟು ಗಣ್ಯರು—ರಂಗಕರ್ಮಿಗಳು ಬಂದಿದ್ದಾರೆನ್ನುವುದು ನಮ್ಮ ಜವಾಬ್ದಾರಿಯನ್ನು ಗಣನೀಯವಾಗಿ ಹೆಚ್ಚಿಸಿತ್ತು.

ನಾಟಕ ಪ್ರಾರಂಭವಾಯಿತು. ಪ್ರೇಕ್ಷಕರ ಅಭೂತಪೂರ್ವವಾದ ಪ್ರತಿಕ್ರಿಯೆ ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತಾ, ನಾಟಕ ಅತ್ಯಂತ ಪರಿಣಾಮಕಾರಿಯಾಗಿ ಅಂಕದಿಂದ ಅಂಕಕ್ಕೆ ಕಟ್ಟಿಕೊಳ್ಳುತ್ತಾ ಹೋಯಿತು. ಮೂರನೆಯ ಅಂಕ ಪ್ರಾರಂಭವಾಯಿತು. ಈ ಅಂಕದ ನಂತರ ಹತ್ತು ನಿಮಿಷಗಳ ಮಧ್ಯಂತರ. ಒಂದು ‘ಕಿರು ಶಿಖರ'(mini climax) ದಂತಹ ಈ ಅಂಕ ಪ್ರೇಕ್ಷಕರನ್ನು ಕುತೂಹಲದಲ್ಲಿ ಅದ್ದಿ ತೆಗೆಯುತ್ತಾ ತೀವ್ರ ಗತಿಯಲ್ಲಿ ಸಾಗುತ್ತಿದ್ದಂತೆಯೇ ಇದ್ದಕ್ಕಿದ್ದ ಹಾಗೆ ವಿದ್ಯುತ್ ಸ್ಥಗಿತವಾಗಿ ರಂಗಮಂದಿರದಲ್ಲಿ ಗಾಢಾಂಧಕಾರ ವ್ಯಾಪಿಸಿ ಬಿಟ್ಟಿತು! ಒಂದು ಕ್ಷಣ ಏನು ಮಾಡುವುದೆಂದು ತೋಚದೆ ರಂಗದ ಮೇಲಿದ್ದ ನಾವು ಮೂವರು ಪಾತ್ರಧಾರಿಗಳು ಸುಮ್ಮನೇ ನಿಂತುಬಿಟ್ಟೆವು.

ಕತ್ತಲಲ್ಲಿ ನಾಟಕ ಮುಂದುವರಿಸುವುದಾದರೂ ಹೇಗೆ? ಹಾಗೊಂದು ಗೊಂದಲದ ಸ್ಥಿತಿಯಲ್ಲಿ ನಿಂತಿರುವಂತೆಯೇ ಪ್ರೇಕ್ಷಾಗೃಹದಲ್ಲಿ ಮೂರು ನಾಲ್ಕು ಟಾರ್ಚ್ ಗಳು ಹೊತ್ತಿಕೊಂಡವು! ಒಂದೊಂದು ಟಾರ್ಚ್ ನ ಬೆಳಕು ಒಬ್ಬೊಬ್ಬ ಕಲಾವಿದನ ಮುಖದ ಮೇಲೆ! “continue…continue…ಆಗೇ ಬಢೋ..ಆಗೇ ಬಢೋ..” ಎಂಬ ಪ್ರೇಕ್ಷಕರ ಪಿಸುದನಿಯ ಉದ್ಗಾರಗಳು ಕೇಳಿಬರುತ್ತಿವೆ! ಸರಿ,ಹಾಗೆಯೇ ಟಾರ್ಚ್ ಗಳ ಬೆಳಕಿನಲ್ಲೇ ದೃಶ್ಯವನ್ನು ಮುಂದುವರಿಸಿದೆವು. ನಾಲ್ಕೈದು ನಿಮಿಷಗಳಷ್ಟು ಉಳಿದಿದ್ದ ದೃಶ್ಯವನ್ನು ಮುಗಿಸಿದ ನಂತರ ಮಧ್ಯಂತರದ ಘೋಷಣೆಯಾಯಿತು.

ಮಧ್ಯಂತರದ ಸಮಯ ಕಳೆದು ಹತ್ತು ನಿಮಿಷಗಳಾದರೂ ಕರೆಂಟ್ ಬರಲಿಲ್ಲ. ಆ ತಕ್ಷಣವೇ ನಮ್ಮ ನಿರ್ದೇಶಕರು ನಾಲ್ಕಾರು ತುರ್ತುದೀಪಗಳನ್ನು ತರಿಸಿ ಮುಂದಿನ ದೃಶ್ಯ ನಡೆಯುವ ವೇದಿಕೆಯ ಸುತ್ತ ಅಳವಡಿಸಿದರು. ತದೇಕಚಿತ್ತರಾಗಿ ನೋಡುತ್ತಾ ನಾಟಕದಲ್ಲಿ ಮುಳುಗಿಹೋಗಿದ್ದ ಪ್ರೇಕ್ಷಕರು ಅತೀವ ಸಹನೆಯಿಂದ ತುಟಿಪಿಟ್ಟೆನ್ನದೇ ಕುಳಿತಲ್ಲೇ ಕುಳಿತಿದ್ದರು. ಒಬ್ಬೇ ಒಬ್ಬ ಪ್ರೇಕ್ಷಕನೂ ಅಸಹನೆಯಿಂದ ಎದ್ದುಹೋದದ್ದಿಲ್ಲ ಅನ್ನುವುದೇ ನಾಟಕ ಯಾವ ಪರಿಯಲ್ಲಿ ಅವರನ್ನು ಹಿಡಿದಿಟ್ಟಿತ್ತೆನ್ನುವುದಕ್ಕೆ ಪ್ರಖರ ಸಾಕ್ಷಿಯಾಗಿತ್ತು.

ಕೊನೆಗೆ ತುರ್ತುದೀಪಗಳ ಬೆಳಕಿನಲ್ಲೇ ನಾಟಕವನ್ನು ಮುಂದುವರಿಸುವುದೆಂದು ಪ್ರೇಕ್ಷಕರ ಒಪ್ಪಿಗೆಯ ಮೇರೆಗೆ ತೀರ್ಮಾನವಾಗಿ ಮಧ್ಯಂತರದ ನಂತರದ ನಾಟಕ ಆರಂಭವಾಯಿತು. ನಾಲ್ಕನೆಯ ಅಂಕದಲ್ಲಿಯೇ ಡಾಕ್ಟರ್ ಸಾರ್ವಜನಿಕ ಸಭೆಯಲ್ಲಿ ಸುದೀರ್ಘ ಭಾಷಣ ಮಾಡುತ್ತಾ, ವಿನಾಕಾರಣ ಜನವಿರೋಧಿಯೆಂದು ಛೀಮಾರಿ ಹಾಕಿಸಿಕೊಳ್ಳುತ್ತಾ ಹಲ್ಲೆಗೊಳಗಾಗುತ್ತಾನೆ. ಈ ದೃಶ್ಯವಂತೂ ಅಮೋಘವಾಗಿ ಮೂಡಿಬಂದು ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿತು. ಅದರ ಮುಂದಿನ ದೃಶ್ಯದಲ್ಲಿ ಡಾಕ್ಟರ್ ತನ್ನ ಪತ್ನಿ—ಪುತ್ರಿಯರೊಂದಿಗೆ ಮಾತಾಡುತ್ತಾ ತನ್ನ ಅಂತರಂಗವನ್ನು ಬಿಚ್ಚಿಡುತ್ತಾನೆ.

ಡಾಕ್ಟರ್ ಕೊನೆಯಲ್ಲಿ ಹೇಳುವ ಮಾತುಗಳು: “ಅನುಕೂಲಸಿಂಧು ಮನೋಧರ್ಮ ಹಾಗೂ ಸಮಯಸಾಧಕತನಗಳು ನೈತಿಕತೆ ಮತ್ತು ನ್ಯಾಯಗಳ ಅಡಿಪಾಯವನ್ನೇ ಬುಡಮೇಲು ಮಾಡಿಬಿಡುತ್ತವೆ..ನಾನು ಈ ಊರು ಬಿಟ್ಟು ಎಲ್ಲೂ ಹೋಗುವುದಿಲ್ಲ..ಇಲ್ಲೇ ಇದ್ದು ವ್ಯವಸ್ಥೆಯ ವಿರುದ್ಧ ಹೋರಾಡುತ್ತೇನೆ.ಈ ದೇಶದ ಬಹು ದೊಡ್ಡ ಶತ್ರುವೆಂದರೆ ಬಹುಮತ.. solid majority. ತಾತ್ವಿಕ ತಳಹದಿಯ ಮೇಲೆ ಏಕಾಂಗಿಯಾಗಿಯೇ ಇದನ್ನೆದುರಿಸುತ್ತಾ ಧೈರ್ಯವಾಗಿ ನಿಂತಿರುವ ನಾನು ಎಲ್ಲರಿಗಿಂತ ಸಮರ್ಥ! ನಾಳೆ ಉದಯಿಸುವ ಸೂರ್ಯ ಹೊಸ ಭರವಸೆಗಳನ್ನು ತರುತ್ತಾನೆ..ಹೊಸ ಕನಸುಗಳನ್ನು ಬಿತ್ತುತ್ತಾನೆ.”

ಹೀಗೆ ಡಾಕ್ಟರ್ ಹೇಳುತ್ತಿರುವಂತೆಯೇ ಎದುರಿಗಿದ್ದ ಕಿಟಕಿಯಿಂದ ಉದಯಿಸುತ್ತಿರುವ ಸೂರ್ಯನ ನಸು ಕೆಂಬಣ್ಣದ ಬೆಳಕಿನ ಪುಂಜ ನಮ್ಮ ಮೇಲೆ ಬೀಳುವಂತೆ ಯೋಜಿಸಲಾಗಿತ್ತು. ನಾನು ಕೊನೆಯ ಮಾತುಗಳನ್ನಾಡುತ್ತಾ ಹಾಗೇ ಕಿಟಕಿಯತ್ತ ದೃಷ್ಟಿ ಹರಿಸಿದರೆ..ಅರೆ! ಸೂರ್ಯ ಉದಯಿಸುತ್ತಿದ್ದಾನೆ! ಆ ಅರುಣ ವರ್ಣ ನಮ್ಮ ಮುಖಗಳ ಮೇಲೆ ಚೆಲ್ಲಾಡಿ ಹೊಳೆಸುತ್ತಿದೆ! ಅಂದರೆ ಅದಾಗಲೇ ಕರೆಂಟ್ ಬಂದಿದೆ ಎಂದಾಯಿತು! ಯಾವಾಗ ಬಂದಿತು, ಯಾವಾಗ ತುರ್ತುದೀಪಗಳನ್ನಾರಿಸಿ ವಿಶೇಷ ದೀಪಗಳನ್ನು ಬೆಳಗಿಸಿದ್ದಾರೆ ಒಂದೂ ನನ್ನ ಅರಿವಿಗೆ ದಾಖಲಾಗಿಲ್ಲ! ಅದೊಂದು ಬಗೆಯ ವಿಸ್ಮೃತಿಯ ಭಾವ..ಅಯೋಮಯ ಸ್ಥಿತಿ.

ಕೊನೆಯ ಸಂಭಾಷಣೆಗಳನ್ನು ಮುಗಿಸಿ ರಂಗದಲ್ಲಿ ಕತ್ತಲು ಆವರಿಸುತ್ತಿದ್ದಂತೆಯೇ ಪ್ರೇಕ್ಷಕರು ಕಿವಿ ಗಡಚಿಕ್ಕುವಂತೆ ಕರತಾಡನ ಮಾಡತೊಡಗಿದರು. ನನಗಿನ್ನೂ ಆ ಅದ್ಭುತ ಮಾಂತ್ರಿಕ ಜಗತ್ತಿನಿಂದ, ನನ್ನನ್ನಾವರಿಸಿಕೊಂಡಿದ್ದ ಆ ಹೊಸ ಭಾವ ವಲಯದಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಹಾಗೇ ಪ್ರೇಕ್ಷಕರಿಗೆ ವಂದಿಸಿ ಗ್ರೀನ್ ರೂಂ ಗೆ ಬಂದು ಒಂದೆಡೆ ಕುಳಿತುಬಿಟ್ಟೆ. ಹತ್ತಾರು ನಿಮಿಷಗಳ ನಂತರ ಸಹಜಸ್ಥಿತಿಗೆ ಮರಳುತ್ತಿದ್ದೇನೆ ಎನ್ನಿಸಿತು.

ಪ್ರಶ್ನೆಗಳು ಮಾತ್ರ ಮನಸ್ಸಿನಲ್ಲಿ ಪುಟಿಪುಟಿದೇಳುತ್ತಿದ್ದವು: “ಇದೇ ಏನು ಕಲಾವಿದ ಸಾಧಿಸಬೇಕಾದ ಸಂಪೂರ್ಣ ತನ್ಮಯತೆ? ಇದೇ ಏನು ಚಿಂತಕರು ಪ್ರತಿಪಾದಿಸುವ ಪರಕಾಯ ಪ್ರವೇಶದಂತಹ ಸ್ಥಿತಿ? ಕೊಂಚ ಸಮಯದ ಮಟ್ಟಿಗಾದರೂ ಅಂಥದೊಂದು ಅವರ್ಣನೀಯ ಸ್ಥಿತಿಯಲ್ಲಿ ಮುಳುಗೆದ್ದುಬರಲು ನನಗೆ ಸಾಧ್ಯವಾಗಿದೆಯೇ?”… ಹೀಗೆಲ್ಲಾ ಮಂಥನ ನಡೆಯುತ್ತಿರುವಾಗಲೇ ನಮ್ಮ ನಿರ್ದೇಶಕರು ಒಳಬಂದರು. ಬಂದವರೇ ಅಪ್ಪಿಕೊಂಡು, “ಬಢಿಯಾ! ಬಹುತ್ ಬಢಿಯಾ! ವಾಕಯಿ ಕಮಾಲ್ ಕರ್ ದಿಯಾ!” ಎಂದು ಮುಕ್ತವಾಗಿ ಪ್ರಶಂಸಿಸಿದರು.

ಹಾಗೇ ಅವರಿಗೆ ವಂದನೆಗಳನ್ನು ಹೇಳುತ್ತಾ ಸಾವರಿಸಿಕೊಂಡು ಎದ್ದು ಅವರೊಟ್ಟಿಗೇ ಹೊರಬಂದೆ. ಹೊರಗಿದ್ದ ಅನೇಕ ಪ್ರೇಕ್ಷಕರು ಬಳಿಬಂದು ಕೈಕುಲುಕಿ,ಅಪ್ಪಿ ಅಭಿನಂದನೆಗಳನ್ನು ಸಲ್ಲಿಸಿದರು. ನನ್ನ ಕಣ್ಣುಗಳು ಮೇಷ್ಟ್ರನ್ನು ಅರಸುತ್ತಿದ್ದವು. ಅತ್ತ ಒಂದು ಬದಿಗೆ ನಿಂತಿದ್ದ ಬೆನವಿಟ್ಸ್ ಅವರ ಮೇಲೆ ನನ್ನ ದೃಷ್ಟಿ ಹರಿಯಿತು. ಅವರು ಅಲ್ಲಿಂದಲೇ ಒಂದು ಹೂ ಮುತ್ತನ್ನು ನನ್ನತ್ತ ಎಸೆದರು! ತಮಗೆ ಯಾವುದಾದರೊಂದು ವಿಷಯ ತುಂಬಾ ಇಷ್ಟವಾಗಿಬಿಟ್ಟರೆ ಹಾಗೆ ಹೂಮುತ್ತನ್ನೆಸೆದು ಮೆಚ್ಚುಗೆ ಸೂಸುವುದು ಅವರ ಅಭ್ಯಾಸವೇ ಆಗಿತ್ತು. ಅವರಿಂದ ಹಾಗೆ ಹೂ ಮುತ್ತು ಪಡೆದದ್ದು ನನ್ನ ಸಂತಸವನ್ನು ನೂರ್ಮಡಿ ಹೆಚ್ಚಿಸಿಬಿಟ್ಟಿತು! ಅತ್ತ ಯಾರೋ ನಮ್ಮ ನಿರ್ದೇಶಕರಿಗೆ ಶಭಾಸ್ ಗಿರಿ ಕೊಡುತ್ತಿದ್ದರು: “ಹಿಂದಿ ಮಾತೃಭಾಷೆಯಲ್ಲದ ಹುಡುಗರು ಈ ಪ್ರದರ್ಶನ ನೀಡಿದ್ದು ಎಂದು ಆಣೆ ಮಾಡಿ ಹೇಳಿದರೂ ನಂಬಲು ಸಾಧ್ಯವಿಲ್ಲ..ವಾಹ್..ಅದೆಷ್ಟು ಸೊಗಸಾಗಿ ಹುಡುಗರನ್ನು ತಯಾರು ಮಾಡಿದ್ದೀರಿ!” ಬಳಿಯಲ್ಲೇ ನಿಂತಿದ್ದ ಗೆಳೆಯ ಯುವರಾಜ ಶರ್ಮ ನನ್ನತ್ತ ತಿರುಗಿ ನೋಡಿ ಅರ್ಥಗರ್ಭಿತವಾಗಿ ನಕ್ಕ!

ಷ್ಟರಲ್ಲೇ ಯಾರೊಂದಿಗೋ ಮಾತಾಡುತ್ತಿದ್ದ ಮೇಷ್ಟ್ರು ಅವರನ್ನು ಕಳಿಸಿಕೊಟ್ಟು ನಮ್ಮತ್ತ ಬಂದರು. ಅವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು. ನಾನು ಕಂಡಂತೆ ಮೇಷ್ಟ್ರು ಎಂದೂ ಅತಿ ಭಾವುಕರಾಗಿ ಮಾತಾಡಿದ್ದಿಲ್ಲ. ಅಂದೂ ಹಾಗೆಯೇ! ಅವರು ಬಳಿ ಬರುತ್ತಿದ್ದಂತೆಯೇ ನಾನು ಹೋಗಿ ಅವರ ಪಾದ ಮುಟ್ಟಿ ನಮಸ್ಕರಿಸಿದೆ. ನನ್ನ ಭುಜ ಹಿಡಿದು ಮೇಲೆತ್ತಿದ ಮೇಷ್ಟ್ರು, “ಸರಿಹೋಯ್ತು ತಾನೇ?ಅವತ್ತು ನಾನು ಬೈದಿದ್ದು ಸರಿಹೋಯ್ತು ತಾನೇ?” ಎಂದರು! “ಪದೇ ಪದೇ ಹೀಗೇ ಬೈತಾನೇ ಇರಿ ಮೇಷ್ಟ್ರೇ.. ನನಗೆ ಯಾವ ಬೇಜಾರೂ ಇಲ್ಲ” ಎಂದೆ ನಾನು. “ಹಾಗಂತ ಪದೇ ಪದೇ ಸ್ಕೂಲ್ ಬಿಟ್ಟು ಹೋಗ್ತಿರಬೇಡಿ ನೀವು!” ಎಂದು ಛೇಡಿಸುತ್ತಾ ಮೇಷ್ಟ್ರು ನನ್ನನ್ನು ಅಪ್ಪಿಕೊಂಡು ಪ್ರೀತಿಯಿಂದ ಬೆನ್ನು ತಟ್ಟಿದರು.ಆ ಬೆಚ್ಚನೆಯ ಅಪ್ಪುಗೆಯಲ್ಲಿ ಸಹಸ್ರ ಸಹಸ್ರ ಪುಟಗಳ ಮೆಚ್ಚುಗೆಯ ಒಕ್ಕಣೆ ದಾಖಲಾಗಿತ್ತು. ಜನ್ಮವಿಡೀ ನೆನಪಿಟ್ಟುಕೊಳ್ಳುವ ಪ್ರೀತಿ—ವಾತ್ಸಲ್ಯದ ಅಪ್ಪುಗೆ ಅದಾಗಿತ್ತು.

ಅದಾದ ಎರಡೇ ದಿನಕ್ಕೆ ದೆಹಲಿಯ ಕೆಲ ಮುಖ್ಯ ಪತ್ರಿಕೆಗಳಲ್ಲಿ ನಮ್ಮ ಪ್ರದರ್ಶನ ಕುರಿತಾದ ವಿಮರ್ಶೆಗಳು ಪ್ರಕಟವಾದವು. ಇಷ್ಟು ವರ್ಷಗಳ ನಂತರವೂ ಅತ್ಯಂತ ಜತನದಿಂದ ಆ ವಿಮರ್ಶೆಯ ಪ್ರತಿಗಳನ್ನು ನಮ್ಮ ಅಂದಿನ ಪುಟ್ಟ ಸಾಧನೆಯ ಸಾಕ್ಷಿಗಳಾಗಿ ಕಾಪಾಡಿಕೊಂಡು ಬಂದಿದ್ದೇನೆ! “Enemy of people-ಉತ್ಕೃಷ್ಟ್” ಎಂಬ ತಲೆ ಬರಹದಡಿಯಲ್ಲಿ ಒಂದು ಜನಪ್ರಿಯ ಹಿಂದಿ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶೆಯಲ್ಲಿ— “ಅಭಿನಯ್ ಕೀ ಉತ್ಕೃಷ್ಟತಾ ಸರಾಹನೀಯ್ (ಪ್ರಶಂಸನೀಯ) ಥಾ..ಡಾಕ್ಟರ್ ಕೇ ರೂಪ್ ಮೇ ಕೆ.ವಿ.ಎಸ್.ಪ್ರಭು ಕಾ ಭೂಮಿಕಾನುಕೂಲ್ ಸಹಜ್ ಏವಂ ಪ್ರಭಾವೀ ಅಭಿನಯ್ ಹೈ” ಎಂದು ಪ್ರಶಂಸಿಸಿದ್ದರು.

ಮತ್ತೊಂದು ಇಂಗ್ಲೀಷ್ ಪತ್ರಿಕೆಯಲ್ಲಿ “Good Hindi adaptation of Ibsen’s play” ಎಂಬ ತಲೆಬರಹದಡಿಯಲ್ಲಿ ಪ್ರಕಟವಾದ ವಿಮರ್ಶೆಯಲ್ಲಿ, “K.V.S.Prabhu portrayed a powerful picture of a doctor who was dedicated to science and was true to his conscience” ಎಂಬ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದರು. ತಂಡದ ಇತರ ಕಲಾವಿದರ ಅಭಿನಯವನ್ನೂ ಮನಸಾರೆ ಮೆಚ್ಚಿದ್ದ ವಿಮರ್ಶಕರು ಅಶೋಕ ಬಾದರದಿನ್ನಿಯ ಅಭಿನಯದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತ ಪಡಿಸಿದ್ದರು!

ಹೀಗೆ ಯಾವುದೋ ಕಾರಣಕ್ಕೆ ಆರಂಭವಾದ ನಮ್ಮ ಒಂದು ಕಿರು ಹೋರಾಟ ಅನೇಕ ತಿರುವುಗಳಲ್ಲಿ ಹೊರಳಾಡಿ ಒಂದು ಸಮಾಧಾನಕರ—ಸಾರ್ಥಕ ಮುಕ್ತಾಯವನ್ನು ಗಳಿಸಿಕೊಂಡದ್ದು ನಾನು ಆಗಾಗ್ಗೆ ನೆನಪಿಸಿಕೊಳ್ಳುತ್ತಲೇ ಇರುವ ನನ್ನ ಬದುಕಿನ ಒಂದು ಪ್ರಮುಖ ಘಟ್ಟ.
ಇದರ ಜತೆಗೆ ನಾನು ನಟನೆಯಿಂದ ದೂರವೇ ಉಳಿದಿದ್ದರೂ ‘ಬಿಟ್ಟೆನೆಂದರೆ ಬಿಡದೀ ಮಾಯೆ’ ಎಂಬಂತೆ ನಟನೆಯೇ ಅಪ್ರಯತ್ನಪೂರ್ವಕವಾಗಿ ನನ್ನ ಸನಿಹಕ್ಕೆ ಬಂದು ತನ್ನ ಮಧುರ ಅಪ್ಪುಗೆಯಲ್ಲಿ, ಬಿಡಿಸಲಾಗದ ಬಂಧದಲ್ಲಿ (ಇಂದಿನ ತನಕ!) ನನ್ನನ್ನು ಸೆರೆ ಹಿಡಿದದ್ದೂ ಇದೇ ಕಾಲಘಟ್ಟದಲ್ಲಿ ಘಟಿಸಿದ ವಿಶೇಷ ಸಂಗತಿಯೇ!!

ದೆಹಲಿಯಲ್ಲಿ ಪರಿಚಿತನಾಗಿ ನನ್ನ ಆಪ್ತ ವಲಯಕ್ಕೆ ಬಂದ ಒಬ್ಬ ಮಿತ್ರ—ಕೆ.ಆರ್.ಸುಬ್ಬಣ್ಣ.ದೆಹಲಿ ಕನ್ನಡ ಸ್ಕೂಲ್ ನಲ್ಲಿ ಡ್ರಾಯಿಂಗ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಸುಬ್ಬಣ್ಣ ಮಿತಭಾಷಿ,ಮೃದುಭಾಷಿ,ಮಹಾ ಅಂತರ್ಮುಖಿ ಹಾಗೂ ಸಂಕೋಚ ಸ್ವಭಾವದವನು. ಈ ಅವನ ಸ್ವಭಾವವೇ ಅವನನ್ನು ನನಗೆ ತೀರಾ ಕಡಿಮೆ ಸಮಯದಲ್ಲಿ ತೀರಾ ಹತ್ತಿರದವನನ್ನಾಗಿ ಮಾಡಿದ್ದು ಎಂದರೂ ಅತಿಶಯೋಕ್ತಿಯಲ್ಲ. ಅವನು ರಚಿಸುತ್ತಿದ್ದ ಅಮೂರ್ತ ನವ್ಯ ವರ್ಣಚಿತ್ರಗಳಲ್ಲಿ ಹೊಡೆದುಕಾಣುತ್ತಿದ್ದುದು ಅವನ ಸೂಕ್ಷ್ಮಾತಿ ಸೂಕ್ಷ್ಮ ಕುಸುರಿ ಕೆಲಸ ಹಾಗೂ ರೇಖೆಗಳ ಸಂಯೋಜನೆಯಲ್ಲಿ ಅವನು ಸಾಧಿಸಿದ್ದ ಪರಿಣತಿ.

ಮುಂದೆ ತನ್ನ ಅದ್ಭುತ ಕಲಾ ಪ್ರೌಢಿಮೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ಈ ಸುಬ್ಬಣ್ಣ ನಿಜಕ್ಕೂ ಒಬ್ಬ ಅಪರೂಪದ ಕಲಾವಿದ. ಗೀತಗೋವಿಂದವನ್ನು ಆಧರಿಸಿ ಅವನು ರಚಿಸಿದ ವಿಶಿಷ್ಟ ವರ್ಣಸಂಯೋಜನೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಂದದ್ದೂ ಸಹಾ ಹೆಮ್ಮೆಯ ಸಂಗತಿಯೇ. ಇಂಥಾ ನಮ್ಮ ಈ ಸುಬ್ಬಣ್ಣ ಏಕಾಗ್ರಚಿತ್ತತೆ ಅಂದರೇನು ಅನ್ನುವುದನ್ನು ನನಗೆ ಪ್ರತ್ಯಕ್ಷವಾಗಿ ನಿರೂಪಿಸಿ ಅರಿವು ಮಾಡಿಕೊಟ್ಟವನು! ಒಮ್ಮೆ ಹೀಗಾಯಿತು:

ರಜೆಯ ದಿನ ಇದ್ದಿರಬೇಕು,ಯಾಕೋ ಸುಬ್ಬಣ್ಣನನ್ನು ನೋಡಬೇಕೆನಿಸಿತು. ಸೀದಾ ಲೋಧಿ ಕಾಲನಿಗೆ ಹೊರಟುಬಿಟ್ಟೆ. ಸುಬ್ಬಣ್ಣನ ಖೋಲಿ ಇದ್ದದ್ದು ಮೊದಲ ಮಹಡಿಯಲ್ಲಿ. ಮೆಟ್ಟಲೇರಿ ಎಡಕ್ಕೆ ಹೊರಳಿ ನೋಡಿದರೆ ಅವನ ಖೋಲಿಯ ಬಾಗಿಲು ತೆರೆದೇ ಇದೆ. ಸಧ್ಯ,ಖೋಲಿಯಲ್ಲೇ ಇದ್ದಾನೆಂದು ಸಮಾಧಾನದಿಂದ ಖೋಲಿಯ ಬಾಗಿಲ ಬಳಿ ಬಂದೆ. ಅದಿದ್ದದ್ದು ಒಂದೇ ಕೋಣೆ; ಒಳಭಾಗದಿಂದ ನೋಡಿದರೆ ಹೊರಬಾಗಿಲ ಪಕ್ಕ ಬಲಕ್ಕೆ ನಾಲ್ಕು ಅಡಿಗಳಷ್ಟು ಗೋಡೆ; ಅದರ ಪಕ್ಕಕ್ಕೆ ಅಡುಗೆಯ ಜಾಗ ಎಂದು ಕರೆಯಬಹುದಾದ ತುಸು ಎತ್ತರದ ಕಟ್ಟೆ.

ಬಾಗಿಲ ಬಳಿ ನಿಂತು ನೋಡಿದ ನನಗೆ ಮೊದಲು ಕಂಡದ್ದು ಎದುರಿಗೇ ನೆಲದ ಮೇಲೆ ಕುಳಿತು ಚಿತ್ರ ಬಿಡಿಸುತ್ತಿದ್ದ ಸುಬ್ಬಣ್ಣ ಹಾಗೂ ಅವನೆದುರಿನ ಗೋಡೆಗೆ ಒರಗಿಸಿದ್ದ ಕ್ಯಾನ್ ವಾಸ್.ನಾಲ್ಕಾರು ನಿಮಿಷ ನಾನು ಬಾಗಿಲಲ್ಲೇ ನಿಂತು ನೋಡಿದೆ…ಸುಬ್ಬಣ್ಣನ ದೃಷ್ಟಿ ನನ್ನ ಮೇಲೆ ಹರಿಯಬಹುದೆಂದು. ಉಂಹೂಂ…ಸುಬ್ಬಣ್ಣನ ಕಣ್ಣುಗಳು ಕ್ಯಾನ್ ವಾಸ್ ನೊಳಗೇ ಕೀಲಿಸಿಬಿಟ್ಟಿದ್ದವು! ತದೇಕ ಚಿತ್ತನಾಗಿ ಕೈಲಿ ಹಿಡಿದಿದ್ದ ಬ್ರಷ್ ನಿಂದ ಕ್ಯಾನ್ ವಾಸ್ ನ ಅಮೂರ್ತ ಆಕೃತಿಗಳಿಗೆ ಬಣ್ಣ ತುಂಬುತ್ತಿದ್ದ..ಕೆಲವೊಮ್ಮೆ ಕೂದಲುಗಾತ್ರದ ರೇಖೆಗಳನ್ನೆಳೆಯುತ್ತಿದ್ದ.

ನಾನೂ ಅವನ ಏಕಾಗ್ರಚಿತ್ತಕ್ಕೆ ಚೂರೂ ಭಂಗ ತಾರದಂತೆ ಅವನ ಮುಂದಿನಿಂದಲೇ ನಿಧಾನವಾಗಿ ನಡೆದುಹೋಗಿ ಹಿಂಬದಿಯಲ್ಲಿ ಹಾಸಿದ್ದ ಚಾಪೆಯ ಮೇಲೆ ಕುಳಿತು ಅವನ ಅದ್ಭುತ ಸೃಷ್ಟಿ ಕ್ರಿಯೆಗೆ ಸಾಕ್ಷಿಯಾದೆ. ಎತ್ತೆತ್ತಲೋ ಹೇಗೆಹೇಗೋ ಚಾಚಿಕೊಂಡಿದ್ದ ರೇಖೆಗಳೆಲ್ಲಾ ನಿಧಾನಕ್ಕೆ ಒಂದು ಸ್ಪಷ್ಟ ಆಕಾರದಲ್ಲಿ ಬಂದಿಯಾಗಿ, ವಿವಿಧ ಬಣ್ಣಗಳಿಂದ ಮೈದುಂಬಿಕೊಂಡು ಹೊಸ ಹೊಸ ವ್ಯಾಖ್ಯೆಗಳಿಗೆ ತೆರೆದುಕೊಳ್ಳುವ ಒಂದು ವರ್ಣಚಿತ್ರವಾಗಿ ಮೈತಳೆಯುವ ಆ ಪ್ರಕ್ರಿಯೆಯೇ ಅಲೌಕಿಕವಾದುದು. ಅದೊಂದು ವಿಸ್ಮಯ..ಅದೊಂದು ಜಾದೂ…ನಾನು ಅಲ್ಲಿ ಹಾಗೆ ಕುಳಿತು ಅರ್ಧ ತಾಸು ಕಳೆಯಿತು..ಸುಬ್ಬಣ್ಣನ ಅರಿವಿಗೆ ನನ್ನ ಬರವಾಗಲೀ ಅಷ್ಟು ಹೊತ್ತಿನ ಉಪಸ್ಥಿತಿಯಾಗಲೀ ದಾಖಲಾಗಿಲ್ಲ..ಮುಕ್ಕಾಲು ತಾಸು..ಉಂಹೂಂ..ಕುಳಿತಲ್ಲಿಂದ ಮಿಸುಕಿದ್ದರೆ ಕೇಳಿ! ಒಂದು ತಾಸೂ ಕಳೆದುಹೋಯಿತು.

ಕೊನೆಗೊಮ್ಮೆ ರಚಿಸುತ್ತಿದ್ದ ಚಿತ್ರ ಒಂದು ಹಂತಕ್ಕೆ ಬಂತೆಂದು ತೋರುತ್ತದೆ..ಹೋ ಎಂದು ಗಟ್ಟಿಯಾಗಿಯೇ ಒಂದು ಜಯಘೋಷವನ್ನು ಕೂಗಿ ಹಾಗೇ ಹೊರಳಿದವನಿಗೆ ಹಿಂಬದಿಯಲ್ಲಿದ್ದ ನಾನು ಕಾಣಿಸಿದೆ! “ಹೇ..ಪ್ರಭೂ! ಯಾವಾಗ ಬಂದೆ?” ಎಂದು ಆಶ್ಚರ್ಯದಿಂದ ಕೇಳಿದ ಸುಬ್ಬಣ್ಣ. “ನಾನು ಬಂದು ಒಂದು ತಾಸಿನ ಮೇಲಾಯ್ತು..ಅದು ಸರಿ ಮಾರಾಯ.. ನೀನು ಇಷ್ಟು ಮಮ್ಮರವಾಗಿ ಚಿತ್ರ ಬರೀತಾ ಕೂತುಬಿಟ್ರೆ ಕಳ್ಳರು ಯಾರಾದ್ರೂ ಬಂದು ಏನಾದ್ರೂ ಒಯ್ದರೂ ನಿನಗೇನೂ ಗೊತ್ತಾಗೋಲ್ಲ ಬಿಡು” ಎಂದು ನಾನೂ ತಮಾಷೆ ಮಾಡಿದೆ.

ಮಗುವಿನಂಥಾ ಮುಗ್ಧ ನಗುವನ್ನು ಮುಖದಲ್ಲಿ ತುಳುಕಿಸುತ್ತಾ ಸುಬ್ಬಣ್ಣ ಮಾರ್ಮಿಕವಾಗಿ ನುಡಿದ: “ಈ ಬಡ ಆರ್ಟಿಸ್ಟ್ ಖೋಲೀಲಿ ಕಳ್ಳನಿಗೇನೋ ಸಿಗುತ್ತೆ? ಹಾಗೆ ಅವನು ಒಯ್ಯಲೇ ಬೇಕಂದ್ರೆ ನನ್ನ ಪೇಂಟಿಂಗ್ಸ್ ಒಯ್ಯಬೇಕು. ಹಾಗೂ ಒಂದು ವೇಳೆ ನಮ್ಮ ಈ ದೇಶದಲ್ಲಿ ಪೇಂಟಿಂಗ್ ಕದಿಯೋ ಅಂಥ ಕಳ್ಳಾನೇ ಬಂದ್ರೆ ನಾನೇ ಖುಷೀಂದ ಕೊಟ್ಟು ಕಳಿಸ್ತೀನಿ ಬಿಡು!”

ಸುಬ್ಬಣ್ಣನ ಈ ಅರ್ಥಗರ್ಭಿತ ಮಾತು ಒಂದೆಡೆ ನನ್ನನ್ನು ಮಂಥನಕ್ಕೆ ದೂಡಿದರೆ ಅವನ ಅದುವರೆಗಿನ ‘ಕ್ರಿಯೆ’ ನನಗೆ ಹೊಸ ಹೊಳವುಗಳನ್ನು ನೀಡಿಬಿಟ್ಟಿತ್ತು;ಅಲ್ಲಿ ನನಗೆ, ನಿರ್ವಹಿಸುವ ಪಾತ್ರದಲ್ಲೇ ಚಿತ್ತ ನೆಟ್ಟು ಪಾತ್ರ ಕಟ್ಟುವ ಜರೂರಿನ ದರ್ಶನವಾಗಿತ್ತು;ಥಟ್ಟನೇ ಅಕ್ಕನ ವಚನ ನೆನಪಾಯಿತು: “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ…ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ..” ನಿಜವೇ! ಚಿತ್ರಕಲಾವಿದನಾದರೂ ಏಕಾಂತದಲ್ಲಿ ಸೃಷ್ಟಿಕ್ರಿಯೆಗೆ ತೊಡಗುವವ..ನಾವೋ,ರಂಗ ಕಲಾವಿದರು….ನಮ್ಮ ಕಲೆ ಪ್ರಕಾಶಕ್ಕೆ ಬರುವುದೇ ‘ಸಂತೆ’ಯಲ್ಲಿ! ಪ್ರೇಕ್ಷಕರ ಮುಖಾಮುಖಿಯಾಗದೇ ನಮಗೆ ಅಸ್ತಿತ್ವವೇ ಇಲ್ಲ! ಎಲ್ಲಾ ‘ಶಬ್ದ’ ಗಳನ್ನೂ ಮೀರಿ ನಮ್ಮ ಕಲೆ ಪ್ರಕಟಗೊಳ್ಳಬೇಕಾದರೆ ನಟ/ನಟಿ ಸಂಪೂರ್ಣ ಏಕಾಗ್ರಚಿತ್ತತೆಯಿಂದ ತನ್ನ ಪಾತ್ರಸೃಷ್ಟಿಯಲ್ಲಿ ತೊಡಗಿಕೊಳ್ಳದೇ ಬೇರೆ ಉಪಾಯವೇ ಇಲ್ಲ!!

“no shortcuts for this and if you try to adopt some, it is fake and you are pathetic in front of an esteemed crowd!”

ಯಾಕೋ ಅಯಾಚಿತವಾಗಿ ಈ ಸಂದರ್ಭದಲ್ಲಿ ಅಡಿಗರ ಕವಿತೆಯ ಸಾಲುಗಳು ನೆನಪಾದವು:

“ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ—ರೇಖೆ”.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: