ಶ್ರೀನಿವಾಸ ಪ್ರಭು ಅಂಕಣ – ಹಾಗೊಂದು ಕಾಲ… ಹೀಗೂ ಒಂದು ಕಾಲ!!!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

60

ಈ ವೇಳೆಯಲ್ಲೇ ‘ಮನೆಯ ಕಡೆ ನಡೆದ ಕೆಲವು ವಿದ್ಯಮಾನಗಳನ್ನು ಕೊಂಚ ಗಮನಿಸುವ ಪ್ರಯತ್ನ ಮಾಡುತ್ತೇನೆ.

ಕುಮಾರಣ್ಣಯ್ಯ ಕೆನರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಗಾಗ್ಗೆ—ಸಾಧಾರಣವಾಗಿ ಮೂರು ವರ್ಷಗಳಿಗೊಮ್ಮೆ—ಬೇರೆ ಬೇರೆ ಊರುಗಳಿಗೆ ವರ್ಗವಾಗಿ ಹೋಗಿ ಸೇವೆ ಸಲ್ಲಿಸಬೇಕಾಗುತ್ತಿತ್ತು. ಅವನು ಹಾಗೆ ಬೇರೆ ಊರುಗಳಿಗೆ ಹೋದಾಗಲೆಲ್ಲಾ ನಾನು ಅಕ್ಕಂದಿರ ಮನೆಯಲ್ಲೇ ಇರುತ್ತಿದ್ದೆ.ಈ ಸಂದರ್ಭದಲ್ಲೇ ಅಕ್ಕ—ಭಾವಂದಿರು ನಾಗಸಂದ್ರ ಸರ್ಕಲ್ ಬಳಿಯ ಸ್ವಂತ ಮನೆಗೆ ‘ಗೃಹ ಪ್ರವೇಶ’ ಮಾಡಿದ್ದರು. ಸಿರಾದಲ್ಲಿ ಕೆಲ ಸಮಯ ಸೇವೆ ಸಲ್ಲಿಸಿ ಬೆಂಗಳೂರಿಗೆ ಮತ್ತೆ ವರ್ಗವಾಗಿ ಬಂದಿದ್ದ ಅಣ್ಣಯ್ಯ ವಾಸ್ತವ್ಯ ಹೂಡಿದ್ದು ಹನುಮಂತನಗರದ ಒಂದು ಬಾಡಿಗೆ ಮನೆಯಲ್ಲಿ. ಎಂದಿನ ಹಾಗೆ ನಾನು ಊರಿನಲ್ಲಿದ್ದಾಗಲೆಲ್ಲಾ ಅಣ್ಣಯ್ಯನ ಮನೆ..ಅಕ್ಕಯ್ಯನ ಮನೆ..ಗೆಳೆಯ ಗೋಪಾಲಿ ಮನೆ..ಮಿನರ್ವ ಸರ್ಕಲ್ ನ ಬೆನಕ ಕಛೇರಿ..ಹೀಗೆ ಎಲ್ಲಾ ಕಡೆಗಳಲ್ಲೂ ಅನುಕೂಲಕ್ಕೆ ತಕ್ಕಂತೆ ಓಡಾಡಿಕೊಂಡಿರುತ್ತಿದ್ದೆ.

ವಾಸ್ತವವಾಗಿ ಆ ಸಂದರ್ಭದಲ್ಲಿ ನಾನು ಶಿಬಿರ—ನಾಟಕ ಎಂದು ಪರ ಊರುಗಳಲ್ಲಿ ಸುತ್ತಾಡಿಕೊಂಡಿರುತ್ತಿದ್ದುದೇ ಹೆಚ್ಚು. ಹಾಗಾಗಿ ಮನೆಯ ಕಡೆ ನಡೆದ ಎಷ್ಟೋ ಸಂಗತಿಗಳು ನನ್ನ ಗಮನಕ್ಕೇ ಬರುತ್ತಿರಲಿಲ್ಲ.ಹೀಗೆ ನಾನು ಮಂಗಳೂರಿನಲ್ಲಿ ಒಂದು ನಾಟಕದ ಚಟುವಟಿಕೆಯಲ್ಲಿ ವ್ಯಸ್ತನಾಗಿದ್ದಾಗಲೇ ಒಂದು ದಿನ ಅಣ್ಣಯ್ಯ ಎಸ್.ಕೆ. ಶ್ರೀಧರನ ಮನೆಗೆ ಫೋನ್ ಮಾಡಿ ಸಿಹಿ ಸುದ್ದಿಯೊಂದನ್ನು ಅರುಹಿದ್ದ: ಮನೆ ಬೆಳಗಲು ಮಹಾಲಕ್ಷ್ಮಿಯ ಆಗಮನವಾಗಿದೆ! ವತ್ಸಲಾ ಅತ್ತಿಗೆ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ! ಆ ಕೂಸಿಗೆ ಮಾಧವಿ ಎಂದು ನಾಮಕರಣವಾಯಿತು. ನಾನು ಮನೆಯಲ್ಲಿದ್ದ ಸಮಯದಲ್ಲೆಲ್ಲಾ ಮುದ್ದು ಮಾಧವಿಯನ್ನು ಹೆಗಲ ಮೇಲೆ ಹಾಕಿಕೊಂಡು ನನಗೆ ಬರುತ್ತಿದ್ದ ನಾಟಕದ ಹಾಡುಗಳನ್ನು ಹೇಳುತ್ತಾ ಮಲಗಿಸುತ್ತಿದ್ದುದು ಇನ್ನೂ ಹಸಿರು ನೆನಪು!

ಈ ವೇಳೆಯಲ್ಲೇ ಅಣ್ಣ ಬಸವನ ಗುಡಿಯ ಹನುಮಂತನ ದೇವಸ್ಧಾನದ ಬಳಿ ಹಲವು ಆಸ್ತಿಕ ಬಂಧುಗಳು ಸ್ಥಾಪಿಸಿದ್ದ ಗೀತಾ ಸತ್ಸಂಗ ಸಮಿತಿಯ ಸಂಪರ್ಕಕ್ಕೆ ಬಂದದ್ದು. ಅದಾಗಲೇ ಧಾರ್ಮಿಕತೆಯತ್ತ ಸಾಕಷ್ಟು ವಾಲಿದ್ದ ಅಣ್ಣನಿಗೆ ಈ ಹೊಸ ಸಂಪರ್ಕದಿಂದ, ಸಮಾನ ಮನಸ್ಕ ಉತ್ಸಾಹೀ ಭಕ್ತರ ಒಡನಾಟದಿಂದ ರೆಕ್ಕೆ ಬಂದಂತಾಗಿಹೋಯಿತು. ಅಲ್ಲಿ ಅವರು ನಡೆಸಿದ ಹೋಮ ಹವನಾದಿಗಳಿಗೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಲೆಕ್ಕವೇ ಇಲ್ಲ. ಅಣ್ಣನ ಬದುಕಿನಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾದಂತಾಗಿ ಪರಮೋತ್ಸಾಹದಿಂದ, ಸಂಭ್ರಮದಿಂದ ಈ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಅಣ್ಣ. ವಿಶೇಷವಾಗಿ, ಚಂಡೀಹೋಮವನ್ನು ಪರಮ ನಿಷ್ಠೆ—ಭಕ್ತಿ—ಸಂಭ್ರಮದಿಂದ ಅಣ್ಣ ಆಚರಿಸುತ್ತಿದ್ದ ಪರಿಯನ್ನು ಕಂಡು ಭಕ್ತಾದಿಗಳು ಪರವಶರಾಗಿ ಹೋಗುತ್ತಿದ್ದರು. ಅಣ್ಣ ನಡೆಸುತ್ತಿದ್ದ ಈ ಧಾರ್ಮಿಕ ಆಚರಣೆಗಳು—ಕಾರ್ಯಕ್ರಮಗಳು ಸುತ್ತಮುತ್ತಲ ಭಾಗಗಳಲ್ಲಿ ಸಾಕಷ್ಟು ಜನಪ್ರಿಯವಾದುದಷ್ಟೇ ಅಲ್ಲ, ಹತ್ತಿರದ ಕೆಲ ಸಂಬಂಧಿಗಳಲ್ಲಿ ಸಣ್ಣಗೆ ಅಸೂಯೆಯ ಕಿಚ್ಚನ್ನೂ ಹೊತ್ತಿಸಿತು! ಈ ಸಂದರ್ಭದಲ್ಲೇ ನಡೆದ ಒಂದು ಘಟನೆಗೆ ಅಪರೂಪಕ್ಕೆಂಬಂತೆ ನಾನೂ ಸಾಕ್ಷಿಯಾದ್ದರಿಂದ, ಹಾಗೂ ಅಣ್ಣನ ವ್ಯಕ್ತಿತ್ವದ ಧೀಮಂತತೆಗೆ ಈ ಪ್ರಸಂಗ ಕನ್ನಡಿ ಹಿಡಿಯುವುದರಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಅಣ್ಣನ ಸೋದರ ಸಂಬಂಧಿಯಾದ ‘ಮಾಧವ’ ಅವಧಾನಿಗಳ ಹಿರಿಯ ಪುತ್ರಿ ‘ಸರಸ್ವತಿ’. ಯಾವುದೋ ಕಾರಣಕ್ಕೆ ಮಗಳು ಸರಸ್ವತಿಯ ಮೇಲೆ ಮುನಿಸಿಕೊಂಡ ಅವಧಾನಿಗಳು ಸರಸ್ವತಿಯ ಮಗಳ ಮದುವೆಗೂ ಬರುವುದಿಲ್ಲವೆಂದು ಘಂಟಾಘೋಷವಾಗಿ ಹೇಳಿಬಿಟ್ಟರು.ನಮ್ಮ ಮನೆಗೆ ಆಹ್ವಾನ ಪತ್ರಿಕೆ ನೀಡಲು ಬಂದ ಸರಸ್ವತಿ ತನ್ನ ತಂದೆ ಹೀಗೆ ಹಠ ಹಿಡಿದು ಕೂತಿರುವ ಸಂಗತಿಯನ್ನು ಅಣ್ಣನಿಗೆ ವಿವರಿಸಿ, “ಚಿಕ್ಕಪ್ಪಾ, ನೀವು ಯಾವುದೇ ಕಾರಣಕ್ಕೂ ಮದುವೆಗೆ ಬರದೇ ಇರಬಾರದು..ಅಷ್ಟೇ ಅಲ್ಲ,ನನ್ನ ತಂದೆ-ತಾಯಿಯರ ಸ್ಥಾನದಲ್ಲಿ ನೀವು ಹಾಗೂ ಚಿಕ್ಕಮ್ಮ ನಿಂತು ಈ ಶುಭ ಕಾರ್ಯವನ್ನು ಯಾವ ಕೊರೆಯೂ ಆಗದಂತೆ ಸಾಂಗವಾಗಿ ನಡೆಸಿಕೊಡಬೇಕು” ಎಂದು ಅಲವತ್ತುಕೊಂಡಳು. ಅಣ್ಣನಿಗೋ ಧರ್ಮ ಸಂಕಟ! ಸರಸ್ವತಿಯ ಮಾತಿಗೆ ಒಪ್ಪಿ ಮದುವೆಗೆ ಹೋದರೆ ಸೋದರನೊಂದಿಗಿನ ಸಂಬಂಧಕ್ಕೆ ಇತಿಶ್ರೀ ಹಾಡಿದಂತೆಯೇ! ಹೋಗದಿದ್ದರೆ ತನ್ನ ಮೇಲೆ ಅಷ್ಟು ಗೌರವಾದರಗಳನ್ನು ಇರಿಸಿಕೊಂಡು ಅಂಗಲಾಚುತ್ತಿರುವ ಸೋದರನ ಪುತ್ರಿಯ ನಂಬಿಕೆ—ವಿಶ್ವಾಸಕ್ಕೆ ಪೆಟ್ಟುಕೊಟ್ಟಂತೆ! ಮೊದಲೇ ಹೆಂಗರುಳಿನ ಅಣ್ಣ..ಹೆಣ್ಣುಮಕ್ಕಳಿಗೆ ನೋವಾದರೆ, ಸಂಕಟವಾದರೆ, ಅವರ ಕಣ್ಣಲ್ಲಿ ನೀರು ಧುಮುಕಿಬಿಟ್ಟರೆ ಒಂದಿಷ್ಟೂ ಸಹಿಸುವವರಲ್ಲ. “ಆಯಿತು ನಡಿ ಮಗಳೇ..ನಾವು ಬರುತ್ತೇವೆ..ಆದದ್ದಾಗಲಿ..ಅದೇನು ನಮ್ಮ ಕರ್ತವ್ಯಗಳಿವೆಯೋ ನಿಭಾಯಿಸುತ್ತೇವೆ..ಚಿಂತೆ ಮಾಡಬೇಡ” ಎಂದು ಆಶ್ವಾಸನೆ ಕೊಟ್ಟೇಬಿಟ್ಟರು. ಹಾಗೆಯೇ ಮದುವೆಗೆ ಹೋಗಿ ಹಿರಿಯರ ಸ್ಥಾನದಲ್ಲಿ ನಿಂತು ಎಲ್ಲ ಕಾರ್ಯಗಳನ್ನೂ ಸಾಂಗವಾಗಿ ನೆರವೇರಿಸಿಕೊಟ್ಟು ಬಂದರು.ಅಣ್ಣನ ಈ ಕೃತ್ಯ ಸರಸ್ವತಿಗೆ ನೆಮ್ಮದಿ—ಸಮಾಧಾನಗಳನ್ನು ತಂದು ಅವಳ ಮುಖದಲ್ಲಿ ನಗು ಮೂಡಿತಾದರೂ ಮತ್ತೊಂದೆಡೆ ಅಸಮಾಧಾನ—ಸಿಟ್ಟುಗಳು ಭುಗಿಲೇಳಲೂ ಕಾರಣವಾಯಿತು.ಆದರೆ ಅಣ್ಣ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ.ಅವರ ಮಾತಿನಲ್ಲೇ ಹೇಳುವುದಾದರೆ ಅವರು ‘DONT CARE MASTER’!!

ಈ ಪ್ರಸಂಗದ ಮುಂದುವರಿದ ಭಾಗಕ್ಕೆ ಈಗ ಬರುತ್ತೇನೆ.

ಮಾಧವ ಅವಧಾನಿಗಳ ಕೊನೆಯ ಮಗಳು ಸಾವಿತ್ರಿಯನ್ನು ನನ್ನ ದೊಡ್ಡಮ್ಮನ(ತಾಯಿಯ ಅಕ್ಕ) ಮಗಳ ಮಗ ‘ಅಚ್ಯುತ’ನಿಗೆ ಕೊಟ್ಟು ಮದುವೆ ಮಾಡಿದ್ದರು.ಈ ಅಚ್ಯುತನ ಮಗನಿಗೆ ಜುಟ್ಟು ಬಿಡಿಸುವ ಕಾರ್ಯಕ್ರಮಕ್ಕೆ ನಮ್ಮೆಲ್ಲರಿಗೂ ಆಹ್ವಾನ ಬಂದಿತ್ತು.ಕಾರ್ಯಕ್ರಮಕ್ಕೆ ಅಣ್ಣ—ಅಮ್ಮನನ್ನು ಕರೆದುಕೊಂಡು ನಾಗರಾಜ ಭಾವನವರು ಮುಂಚಿತವಾಗಿಯೇ ಹೋಗಿದ್ದರು. ನಾವುಗಳು ಸ್ವಲ್ಪ ನಿಧಾನವಾಗಿ ಹೋದರಾಯಿತೆಂದು ಮನೆಯಲ್ಲೇ ಇದ್ದೆವು. ಮಧ್ಯಾಹ್ನ—ಇನ್ನೇನು ನಾವುಗಳು ಹೊರಡಬೇಕು—ಅಷ್ಟರಲ್ಲಿ ಮನೆಗೆ ನಾಗರಾಜ ಭಾವನ ಫೋನ್ ಸಂದೇಶ ಬಂತು: “ಯಾರೂ ಹೊರಟು ಬರುವ ಅವಶ್ಯಕತೆಯಿಲ್ಲ..ಇಲ್ಲಿ ಸ್ವಲ್ಪ ಯಡವಟ್ಟಾಗಿದೆ..ಬಂದಮೇಲೆ ವಿವರವಾಗಿ ಹೇಳುತ್ತೇವೆ”.

ಬಂದ ಮೇಲೆ ಅಲ್ಲಿ ನಡೆದದ್ದನ್ನೆಲ್ಲಾ ಭಾವ ವಿವರವಾಗಿ ಹೇಳಿದರು:
ಅಣ್ಣ—ಅಮ್ಮ ಭಾವನೊಟ್ಟಿಗೆ ಕಾರ್ಯಕ್ರಮ ನಡೆಯುತ್ತಿದ್ದ ಛತ್ರಕ್ಕೆ ಹೋಗುತ್ತಿದ್ದಂತೆಯೇ ಅಚ್ಯುತ ಹೊರಬಾಗಿಲಿಗೇ ಓಡಿಬಂದ. ಹಾಗೆ ಓಡಿಬಂದದ್ದು ಅಣ್ಣ—ಅಮ್ಮನಿಗೆ ಸ್ವಾಗತ ಕೋರಲಿಕ್ಕಲ್ಲ,ಅವರು ಒಳಹೋಗದಂತೆ ತಡೆಯಲಿಕ್ಕೆ! ಓಡಿ ಬಂದವನೇ ಅಣ್ಣ—ಅಮ್ಮನ ಕಾಲಿಗೆ ಬಿದ್ದು, “ಚಿಕ್ಕು—ಚಿಕ್ಕಪ್ಪಾ,ದಯವಿಟ್ಟು ಕ್ಷಮಿಸಬೇಕು..ನನಗೆ ಏನು ಹೇಳಬೇಕು ಏನು ಮಾಡಬೇಕು ಅಂತಲೇ ತೋಚ್ತಾ ಇಲ್ಲ. ‘ಅವನು ಏನಾದರೂ ಛತ್ರದ ಒಳಗೆ ಬಂದರೆ ನಾನು ಒಂದು ಕ್ಷಣವೂ ಇಲ್ಲಿರೋಲ್ಲ.. ಹೊರಟುಹೋಗ್ತೀನಿ..ನಿನಗೆ ಅವನು ಬೇಕೋ ನಾನು ಬೇಕೋ ತೀರ್ಮಾನ ಮಾಡಿ ಹೇಳು’ ಅಂತ ನನ್ನ ಮಾವನವರು (ಮಾಧವ ಅವಧಾನಿಗಳು) ಹಠ ಹಿಡಿದು ಕೂತುಬಿಟ್ಟಿದಾರೆ.. ಯಾರು ಎಷ್ಟು ಹೇಳಿದರೂ ಅವರು ಕೇಳೋ ಮನಸ್ಥಿತೀಲೇ ಇಲ್ಲ..ನನಗಂತೂ ದಿಕ್ಕೇ ತಪ್ಪಿದ ಹಾಗಾಗಿಬಿಟ್ಟಿದೆ.. ನೀವೇ ನನಗೆ ದಾರಿ ತೋರಿಸಬೇಕು” ಎಂದು ಒಂದೇ ಸಮ ಬಡಬಡಿಸತೊಡಗಿದ. ಅಣ್ಣ ಕ್ಷಣಕಾಲ ಮೌನವಾಗಿ ನಿಂತರು. ನಂತರ ಸಾವಧಾನವಾಗಿ ಹೇಳತೊಡಗಿದರು: “ನಾನು ತೋರಿಸಿಕೊಡೋದಕ್ಕೆ ಯಾವ ದಾರಿ ಉಳಿದಿದೆಯಪ್ಪಾ ಈಗ? ಬಾಗಿಲಲ್ಲಿ ತಡೆದು ನನ್ನದು ಮನೆಯ ದಾರಿ ಅಂತ ನೀನೇ ತೋರಿಸಿಕೊಡ್ತಿದೀಯಲ್ಲಾ! ಆಯಿತು ಬಿಡು..ನಿನ್ನ ಆಯ್ಕೆ ಏನು ಅಂತ ನನಗೆ ಅರ್ಥವಾಗಿದೆ…ಶುಭಕಾರ್ಯ ಚೆನ್ನಾಗಿ ನಡೀಲಿ..ಮಗುವಿಗೆ ನಮ್ಮ ಆಶೀರ್ವಾದ ಇದೆ..ಬರ್ತೀವಿ”.

ಇಷ್ಟು ಹೇಳಿದವರೇ ಅಮ್ಮನ ಕಡೆ ತಿರುಗಿ,”ನಡಿ ಹೊರಡೋಣ..ನಡೀರಿ ಅಳಿಯಂದಿರೇ..ನಮಗೇನೂ ಕೆಲಸವಿಲ್ಲ ಇಲ್ಲಿ” ಎಂದು ಹೊರ ಹೊರಟರು.ಅಷ್ಟಕ್ಕೇ ಬಿಡದ ಅಚ್ಯುತ,”ಒಂದು ನಿಮಿಷ ಚಿಕ್ಕಪ್ಪ..ಹೋಗಬೇಡಿ..ಒಂದೇ ನಿಮಿಷ” ಎಂದು ಅಲ್ಲಿದ್ದವರಿಗೆ ಏನೋ ಸನ್ನೆ ಮಾಡಿದ.ಅಣ್ಣ—ಅಮ್ಮ—ಭಾವಂದಿರನ್ನು ಬಲವಂತವಾಗಿ ಅಲ್ಲೇ ಇದ್ದ ಕುರ್ಚಿಯ ಮೇಲೆ ಕೂರಿಸಿದ. ಒಳಗಿಂದ ಯಾರೋ ಹಾಲು ತಂದುಕೊಟ್ಟರು. ಮತ್ತಾರೋ ವಟುವನ್ನು ಕರೆತಂದರು. “ದಯವಿಟ್ಟು ಅನ್ಯಥಾ ಭಾವಿಸದೆ ಹಾಲು ಕುಡಿದು ಮಗುವಿಗೆ ಆಶೀರ್ವಾದ ಮಾಡಿ ಚಿಕ್ಕಪ್ಪಾ..”ಎಂದು ಮತ್ತಷ್ಟು ಬೇಡಿಕೊಂಡ ಅಚ್ಯುತ. ಅಣ್ಣ ಒಂದೂ ಮಾತಾಡದೇ ಹಾಲು ಕುಡಿದು ಮಗುವಿಗೆ ಆಶೀರ್ವಾದ ಮಾಡಿ ಕಣ್ಸನ್ನೆಯಿಂದಲೇ ಅಮ್ಮ—ಭಾವನನ್ನು ಅಲ್ಲಿಂದ ಎಬ್ಬಿಸಿಕೊಂಡು ಹೊರಟುಬಿಟ್ಟರು.
ಭಾವನವರು ಹೇಳಿದ ಈ ಪ್ರಸಂಗವನ್ನು ಕೇಳಿ ನಮ್ಮೆಲ್ಲರಿಗೂ ಅಚ್ಯುತನ ಮೇಲೆ ಕೆಂಡದಂಥ ಸಿಟ್ಟು ಬಂದುಬಿಟ್ಟಿತು.

ಅಣ್ಣ ಮಾತ್ರ ಯಾರೊಂದಿಗೂ ಹೆಚ್ಚು ಮಾತಾಡದೆ ಸುಮ್ಮನೆ ಕುಳಿತುಬಿಟ್ಟಿದ್ದರು.ಅಣ್ಣ ಎಂದೂ ಯಾರಿಗೂ ತಲೆ ಬಾಗಿದವರೂ ಅಲ್ಲ,ಯಾರನ್ನೂ ನೋಯಿಸಿದವರೂ ಅಲ್ಲ.ನಮ್ಮ ಕುಟುಂಬ ವಲಯದಲ್ಲಿಯೇ ಅಣ್ಣ ಎಂದುಬಿಟ್ಟರೆ ಎಲ್ಲರಿಗೂ ವಿಶೇಷ ಅಭಿಮಾನ—ಗೌರವ.ತಮ್ಮ ವಿದ್ವತ್ತಿನಿಂದಲೂ ಸಚ್ಚಾರಿತ್ರದಿಂದಲೂ ಸುಸಂಪನ್ನ ನಡವಳಿಕೆಯಿಂದಲೂ ಅಪಾರ ಜನಮನ್ನಣೆ ಗಳಿಸಿಕೊಂಡು ಎಲ್ಲರಿಗೆ ಬೇಕಾದವರಾಗಿ ಸಾರ್ಥಕ—ಸಾತ್ವಿಕ ಬದುಕು ನಡೆಸುತ್ತಿರುವ ಅಣ್ಣನನ್ನು ಹೀಗೆ ಅವಮಾನಿಸಿ ಕಳಿಸುವುದೇ ಎಂದು ನಾವೆಲ್ಲರೂ ಸಿಟ್ಟು—ಸಂಕಟದಿಂದ ಕುದಿಯುತ್ತಿದ್ದರೆ ಅಣ್ಣನ ಬಾಯಲ್ಲಿ ಮಾತ್ರ ಒಂದೇ ಒಂದು ಅಪಶಬ್ದವೂ ಬರಲಿಲ್ಲ. “ಅಣ್ಣ ಛತ್ರಕ್ಕೆ ಬರುವ ತನಕಯಾಕೆ ಕಾಯಬೇಕಿತ್ತು? ಅಣ್ಣನ ಬಗ್ಗೆ ಅವಧಾನಿಗಳಿಗಿದ್ದ ಸಿಟ್ಟು—ಮುನಿಸು ಅವರ ಅಳಿಯನಿಗೆ ತಿಳಿಯದ ಸಂಗತಿಯೇ? ಇಂಥದೊಂದು ಪ್ರಸಂಗ ಎದುರಾಗಬಹುದೆಂಬ ಕನಿಷ್ಠ ತಿಳುವಳಿಕೆಯೂ ಇಲ್ಲದ ಮೂರ್ಖನೇ ಅವನು? ತನ್ನ ಮಾವನವರ ನಿಲುವಿನ ಒಂದು ಸಣ್ಣ ಸೂಚನೆಯೂ ಅಣ್ಣ ಛತ್ರದ ಬಾಗಿಲಿಗೆ ಬರುವ ತನಕವೂ ಅವನಿಗೆ ಸಿಕ್ಕಿರಲೇ ಇಲ್ಲ ಎನ್ನುವುದು ನಂಬುವ ಮಾತೇ? ಅಣ್ಣನನ್ನು ಸಮಾರಂಭಕ್ಕೆ ಕರೆಯದೇ ಇದ್ದರೂ ಆಗುತ್ತಿತ್ತು..ಹೀಗೆ ಕರೆದು ಅವಮಾನಿಸುವುದರ ಹಿಂದೆ ಇರುವುದು ಅವನ ಮೂರ್ಖತನವೋ ಅಥವಾ ‘ಹೇಗೋ ನಡೆದು ಹೋಗುತ್ತದೆ’ ಎಂಬ ಉಡಾಫೆಯೋ ಅಥವಾ ‘ದೊಡ್ಡವರ’ ಪೂರ್ವ ನಿಯೋಜಿತ ಸಂಚೋ?”….ಹೀಗೆ ನಾವೆಲ್ಲರೂ ನಡೆದ ಅಚಾತುರ್ಯದ ಪರಾಮರ್ಶೆಯನ್ನು ನಡೆಸುತ್ತಿದ್ದರೆ ಅಣ್ಣ ಮಾತ್ರ ಬಾಯಿ ತೆರೆಯಲೇ ಇಲ್ಲ.ನಮ್ಮ ಹಾರಾಟ—ಕೂಗಾಟಗಳನ್ನು ಒಂದಷ್ಟು ಹೊತ್ತು ಮೌನವಾಗಿ ಕೇಳಿಸಿಕೊಂಡು ಕೊನೆಗೊಮ್ಮೆ ಮೌನ ಮುರಿದು ಮಾತಾಡಿದರು: “ಹೋಗಲಿ ಬಿಡಿ..ಆದದ್ದು ಆಗಿಹೋಯಿತು..ನನಗೆ ಅರಿವಿರುವ ಮಟ್ಟಿಗೆ ಇದುವರೆಗೆ ನಾನು ಯಾರ ಜೊತೆಗೂ ಅನುಚಿತವಾಗಿ ನಡೆದುಕೊಂಡವನಲ್ಲ..ಯಾರನ್ನೂ ಉದ್ದೇಶಪೂರ್ವಕವಾಗಿ ಅವಮಾನಿಸಿದವನಲ್ಲ.ಒಬ್ಬ ಹೆಣ್ಣುಮಗಳ ಕಣ್ಣೀರು ಒರೆಸಲು ನಾನು ತೆಗೆದುಕೊಂಡ ನಿರ್ಧಾರದಿಂದ ತನಗೆ ಅವಮಾನವಾಯಿತು ಎಂದು ದೊಡ್ಡವರು ಭಾವಿಸಿ ಪ್ರತಿಯಾಗಿ ನನಗೆ ಅವಮಾನ ಮಾಡಿ ಸೇಡು ತೀರಿಸಿಕೊಳ್ಳಲೆಂದೇ ಹೀಗೆ ವರ್ತಿಸಿದರೆ ನಾವು ಅವರ ಸಂಕುಚಿತ ಬುದ್ಧಿಗೆ ಸಹಾನುಭೂತಿ ತೋರಬೇಕೇ ಹೊರತು ಸಿಟ್ಟಾಗಬಾರದು! ಇರಲಿ.ನನಗೆ ಸರಿ ಕಂಡಂತೆ ನಾನು ನಡೆದುಕೊಂಡಿದ್ದೇನೆ.ಅವರಿಗೆ ಸರಿಕಂಡಂತೆ ಅವರು ಮಾಡಿದ್ದಾರೆ. ಈ ಸರಿ ತಪ್ಪುಗಳ ವಿಚಾರ ವಿಮರ್ಶೆ ಇಲ್ಲಲ್ಲ..ಮೇಲೆ..ಊರ್ಧ್ವಲೋಕದಲ್ಲಿ ನಡೆಯುತ್ತೆ! ಅಲ್ಲಿ..ಅಲ್ಲಿ ನಾನು ಅವನಿಗೆ ಉತ್ತರ ಕೊಡುತ್ತೇನೆ. ಇನ್ನು ಈ ಕುರಿತ ಮಾತುಕತೆ ನಿಲ್ಲಿಸಿ ಮುಂದಿನ ಕೆಲಸ ನೋಡಿ” ಎಂದು ನುಡಿದವರೇ ಅಣ್ಣ ಎದ್ದು ತಮ್ಮ ಕೋಣೆಗೆ ನಡೆದುಬಿಟ್ಟರು. ಅಣ್ಣನ ಜಾಗದಲ್ಲಿ ಬೇರೆ ಯಾರೇ ಇದ್ದರೂ ಏನೆಲ್ಲಾ ರಂಪ ರಾದ್ಧಾಂತಗಳು, ವಾಗ್ಯುದ್ಧ—ಅನಾಹುತಗಳು ಜರುಗಿಬಿಡುತ್ತಿದ್ದವೋ ಊಹಿಸಲೂ ಆಗದು. ಅಣ್ಣನ ಆ ಸ್ಥಿತಪ್ರಜ್ಞತೆಯನ್ನು, ಸಹನಶೀಲತೆಯನ್ನು ಕಂಡು ನಾನು ಮೂಕವಿಸ್ಮಿತನಾಗಿ ಹೋದೆ. ಹತ್ತಾರು ವರ್ಷಗಳ ಬದುಕು ಕಲಿಸುವ ಪಾಠವನ್ನು ಅದೊಂದು ಘಟನೆಯ ಸಂದರ್ಭದ ಅಣ್ಣನ ವರ್ತನೆ ಕಲಿಸಿತ್ತೆಂದರೆ ಖಂಡಿತ ಅತಿಶಯೋಕ್ತಿಯಲ್ಲ.

1983 ನನ್ನ ಬದುಕು ಅನೇಕ ತಿರುವುಗಳನ್ನು ಕಂಡ ವರ್ಷವಿದು. ಅನೇಕ ಅನಿರೀಕ್ಷಿತ ಪ್ರಸಂಗಗಳ ಜೊತೆಗೆ ನಾನು ಕನಸು ಮನಸಿನಲ್ಲಿಯೂ ಎಣಿಸದಿದ್ದಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣೀಭೂತವಾದ ಪ್ರಸಂಗಗಳು ಘಟಿಸಿದ ವರ್ಷವಿದು.

ನಮ್ಮ ರಾಜ್ಯದ ವಿಧಾನಸಭೆಗೆ ಚುನಾವಣೆಗಳು ನಡೆದದ್ದು 1983 ರ ಆರಂಭದಲ್ಲಿ. 1977ರಲ್ಲಿಯೇ ಗುಲ್ಬರ್ಗಾದಲ್ಲಿ ದೂರದರ್ಶನ ಕೇಂದ್ರ ಆರಂಭವಾಗಿತ್ತು.ಆದರೆ ಸ್ಟುಡಿಯೋ ಇತ್ಯಾದಿ ಸೌಕರ್ಯಗಳ ಕೊರತೆಯಿಂದಾಗಿ ಗುಲ್ಬರ್ಗಾ ಕೇಂದ್ರದಲ್ಲಿ ಕಾರ್ಯಕ್ರಮಗಳ ನಿರ್ಮಾಣವಾಗುತ್ತಿರಲಿಲ್ಲ. ಅದು ಹೆಚ್ಚುಕಡಿಮೆ ದೆಹಲಿ ಕಾರ್ಯಕ್ರಮಗಳನ್ನೇ ಬಿತ್ತರಿಸುವ ಒಂದು ರಿಲೇ ಕೇಂದ್ರವಾಗಿತ್ತು. ಆಗಾಗ್ಗೆ ಹೈದರಾಬಾದ್ ದೂರದರ್ಶನ ಕೇಂದ್ರದಲ್ಲಿ ಒಂದಷ್ಟು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚಿತ್ರೀಕರಿಸಿ ಗುಲ್ಬರ್ಗಾ ಕೇಂದ್ರದಿಂದ ಅಲ್ಲಿನ ವೀಕ್ಷಕರಿಗಾಗಿ ಬಿತ್ತರಿಸುತ್ತಿದ್ದರು. ಪಿ.ವಿ.ಸತೀಶ್ ಅವರು ನಮ್ಮ ‘ಸಿಕ್ಕು’,’ಉದ್ಭವ’ ಹಾಗೂ ‘ಗುಳ್ಳೆನರಿ’ ನಾಟಕಗಳನ್ನು ಹೈದರಾಬಾದ್ ನಲ್ಲಿ ದೂರದರ್ಶನಕ್ಕಾಗಿ ಚಿತ್ರೀಕರಿಸಿ ಗುಲ್ಬರ್ಗಾ ಕೇಂದ್ರದಿಂದ ಪ್ರಸಾರ ಮಾಡಿದ್ದರ ಕುರಿತಾಗಿ ಈ ಹಿಂದೆಯೇ ಬರೆದಿದ್ದೇನೆ. ನಮ್ಮ ರಾಜ್ಯದಲ್ಲಿ 1983 ರ ವಿಧಾನ ಸಭಾ ಚುನಾವಣೆಗಳ ಸಂದರ್ಭದಲ್ಲಿ ಗುಲ್ಬರ್ಗಾ ಕೇಂದ್ರದಿಂದ ನನಗೊಂದು ವಿಶೇಷ ಆಹ್ವಾನ ಬಂದಿತು: ಚುನಾವಣಾ ಫಲಿತಾಂಶ ಪ್ರಕಟಣೆಯ ಸಮಯದಲ್ಲಿ ವಾರ್ತೆಗಳನ್ನು ಓದುವ ಬಹು ಮುಖ್ಯ ಜವಾಬ್ದಾರಿಯನ್ನು ನಿರ್ವಹಿಸಲು ನನ್ನನ್ನು ಆಹ್ವಾನಿಸಿದ್ದರು! ಪಿ.ವಿˌಸತೀಶ್ ಹಾಗೂ ಪವನಕುಮಾರ ಮಾನ್ವಿಯವರು ನಾನು ಹೈದರಾಬಾದ್ ಗೆ ಹೋದಾಗಲೆಲ್ಲಾ ಕೆಲವಾರು ಸಾಕ್ಷ್ಯ ಚಿತ್ರಗಳಿಗೆ ನನ್ನಿಂದ ನಿರೂಪಣೆಯನ್ನು ಮಾಡಿಸುತ್ತಿದ್ದರು. ಹಾಗಾಗಿಯೇ ಈ ವಾರ್ತಾವಾಚಕನ ಕಾರ್ಯಕ್ಕೆ ಅವರು ನನ್ನನ್ನು ನೆನಪಿಸಿಕೊಂಡು ಆಹ್ವಾನಿಸಿದ್ದು! ನನ್ನೊಂದಿಗೆ ಇದ್ದ ಮತ್ತೊಬ್ಬ ವಾರ್ತಾವಾಚಕರು ರಾಜಶೇಖರ ಮಾನ್ವಿಯವರು.ಕ್ಯಾಮರಾ ಮುಂದೆ ಕುಳಿತು ವಾರ್ತೆಗಳನ್ನು ಓದುವುದು ನಮ್ಮಿಬ್ಬರಿಗೂ ಹೊಸ ಅನುಭವವೇ ಆಗಿದ್ದರೂ ಯಶಸ್ವಿಯಾಗಿಯೇ ನಮ್ಮ ಕರ್ತವ್ಯವನ್ನು ನಿಭಾಯಿಸಿದೆವು.ಹೀಗೆ ಕನ್ನಡ ದೂರದರ್ಶನಕ್ಕೆ ಪ್ರಪ್ರಥಮವಾಗಿ ವಾರ್ತೆಗಳನ್ನು ಓದಿದ ದಾಖಲೆ ನನ್ನದು ಹಾಗೂ ರಾಜಶೇಖರ ಮಾನ್ವಿಯವರದು ಎಂಬುದು ನನ್ನ ನಮ್ರ ತಿಳುವಳಿಕೆ! ಆದರೆ ಯಾಕೋ ಏನೋ ಮುಂದಿನ ವರ್ಷಗಳಲ್ಲಿ ಪ್ರಪ್ರಥಮ ಕನ್ನಡ ವಾರ್ತಾವಾಚಕರ ಪ್ರಸ್ತಾಪ ಬಂದಾಗ ಯಾರೂ ನಮ್ಮ ಹೆಸರನ್ನು ನೆನಪಿಸಿಕೊಳ್ಳಲೇ ಇಲ್ಲ! ಆಗ ಈ ಕುರಿತು ಮಾತಾಡಬೇಕೆಂದು ನನಗೂ ತೋಚಲಿಲ್ಲ ಅನ್ನುವುದು ಬೇರೆ ಮಾತು…ಇರಲಿ.

ಇದೇಸಮಯದಲ್ಲಿ ನಡೆದ ಮತ್ತೊಂದು ಪ್ರಸಂಗ ನೆನಪಾಗುತ್ತಿದೆ…

ಆಗ ವಿಜಯ್ ಸಾಸನೂರ ಅವರು ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದರು.ಆ ಮೊದಲು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದ ವಿಜಯ್ ಅವರು ಸ್ವತಃ ಸಾಹಿತಿಗಳು. ಬೇರೊಂದು ಕಾವ್ಯನಾಮದಲ್ಲಿ—ಬಹುಶಃ ವಿದ್ಯುಲ್ಲತಾ ಇರಬೇಕು—ಅವರು ಹಲವಾರು ಕಾದಂಬರಿಗಳನ್ನೂ ಕಥೆಗಳನ್ನೂ ಬರೆದಿದ್ದರು.ನನ್ನ ಹಲವಾರು ನಾಟಕಗಳನ್ನು ನೋಡಿ ಮೆಚ್ಚಿ ಅಭಿನಂದಿಸಿದ್ದರು ಕೂಡಾ. ವಿಜಯ್ ಅವರನ್ನು ಕಂಡರೆ ನನಗೂ ಏನೋ ಒಂದು ವಿಶೇಷ ಆತ್ಮೀಯತೆ ಒಡಮೂಡಿತ್ತು. ಅವರಿಗೂ ಕುಮಾರಣ್ಣಯ್ಯನಿಗೂ ಮುಖಚಹರೆಯಲ್ಲಿದ್ದ ಹೋಲಿಕೆಯೂ ಇದಕ್ಕೆ ಒಂದು ಕಾರಣ ಆಗಿದ್ದಿರಬಹುದು.ನನಗಂತೂ ಅವರನ್ನು ನೋಡಿದರೆ ಅಣ್ಣಯ್ಯನನ್ನು ನೋಡಿದ ಹಾಗೇ ಆಗುತ್ತಿತ್ತು.ಕೇವಲ ಮುಖಚಹರೆಯಷ್ಟೇ ಅಲ್ಲ,ಅವರ ಮೆಲುದನಿಯ ಮೃದು ಮಾತು ಹಾಗೂ ಅವರ ಮುಗುಳ್ನಗುವಿನಲ್ಲೂ ನನಗೆ ಅಣ್ಣಯ್ಯನ ಹೋಲಿಕೆ ಕಾಣುತ್ತಿತ್ತು. ಒಂದು ದಿನ ನನ್ನನ್ನು ವಾರ್ತಾ ಇಲಾಖೆಗೆ ಕರೆಸಿಕೊಂಡ ವಿಜಯ್ ಅವರು, “ಪ್ರಭು ಅವರೇ,ನಿಮಗೆ ಒಂದು ವಿಶೇಷ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊರಿಸಬೇಕೆಂದಿದ್ದೇನೆ..ನಮ್ಮ ಇಲಾಖೆಗೆ ಮಾಸ್ತಿಯವರನ್ನು ಕುರಿತು ಒಂದು ಸಾಕ್ಷ್ಯಚಿತ್ರ ಮಾಡಿಕೊಡುವಿರಾ?” ಎಂದರು. ನನಗೋ ಒಂದೆಡೆ ಹಿಡಿಸಲಾರದ ಹಿಗ್ಗು..ಮತ್ತೊಂದೆಡೆ ನನಗೆ ಇದು ಸಾಧ್ಯವಾದೀತೇ ಎಂಬ ಅಳುಕು! ನನ್ನ ಮನಸ್ಸು ಅರ್ಥವಾದವರಂತೆ ವಿಜಯ್ ನಗುತ್ತಾ ಹೇಳಿದರು: ” ಏನೂ ಚಿಂತಿಸಬೇಡಿ.ನಮ್ಮ ಕ್ಯಾಮರಾಮನ್ ದಾಸಪ್ಪನವರು ನಿಮ್ಮ ಜೊತೆಗೆ ಇರುತ್ತಾರೆ. ಅವರು ನಿಮಗೆ ಎಲ್ಲ ತರಹದ ತಾಂತ್ರಿಕ ಸಹಕಾರ ನೀಡುತ್ತಾರೆ. ನೀವು ಮಾಸ್ತಿಯವರ ವ್ಯಕ್ತಿತ್ವವನ್ನು ಅದ್ಭುತವಾಗಿ ಹಿಡಿದಿಡುವ ಹಾಗೆ script ಸಿದ್ಧ ಮಾಡಿಕೊಳ್ಳಿ..ನಾಳೆ ಮಾಸ್ತಿಯವರ ಮನೆಗೆ ಹೋಗಿ ಮಾತಾಡಿಕೊಂಡು ಬರೋಣ”.

ಅವರ ಮಾತಿನಿಂದ ಮನಸ್ಸು ಎಷ್ಟೋ ಹಗುರಾಗಿ ಅಳುಕು ದೂರವಾಯಿತು.

ಮರುದಿನವೇ ನಾವೆಲ್ಲರೂ ಹೋಗಿ ಮಾಸ್ತಿಯವರನ್ನು ಭೇಟಿ ಮಾಡಿದೆವು.’ಹಿರಿಯಣ್ಣ’ನನ್ನು ಭೇಟಿ ಮಾಡಿದ ಆ ಅಪೂರ್ವ ದಿನವನ್ನು ನಾನೆಂದೂ ಮರೆಯಲಾರೆ.

“ನಿಮ್ಮ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ನಮ್ಮ ಇಲಾಖೆಯ ವತಿಯಿಂದ ನಿರ್ಮಿಸಬೇಕೆಂದಿದ್ದೇವೆ.ಇವರು ಶ್ರೀನಿವಾಸ ಪ್ರಭು ಅಂತ..ರಂಗಭೂಮಿ ನಿರ್ದೇಶಕರು,ನಟರು.ಕೆಲವು ಸಿನೆಮಾಗಳಲ್ಲೂ ಕೆಲಸ ಮಾಡಿದಾರೆ..ಇವರು ನಿರ್ದೇಶಕರಾಗಿರ್ತಾರೆ..ದಯವಿಟ್ಟು ತಾವು ಅನುಮತಿ ನೀಡಬೇಕು” ಎಂದು ವಿಜಯ್ ಸಾಸನೂರ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು. ಅದಕ್ಕೆ ಮಗುವಿನ ಮುಗ್ಧನಗೆಯನ್ನು ಮುಖದಲ್ಲಿ ತುಳುಕಿಸುತ್ತಾ ಮಾಸ್ತಿಯವರು ಆಡಿದ ಮಾತುಗಳು ಇನ್ನೂ ನನ್ನ ಕಿವಿಗಳಲ್ಲಿ ಅನುರಣಿಸುತ್ತಿವೆ.

“ಮಾಡೀಪ್ಪಾ..ಮಾಡಿ. ನಿಮಗೆ ಏನು ಸರಿ ಅಂತ ತೋಚುತ್ತೋ ಹಾಗೆ ಮಾಡಿ. ನಾನು ಹೇಳೋದೇನಿದೆ? ನಾನು ರಸ್ತೆಯ ಬದಿಯಲ್ಲಿ ಬಿದ್ದಿರೋ ಕಲ್ಲಿನ ಹಾಗೆ. ಕಲ್ಲನ್ನು ತೊಗೊಂಡು ಒಳಗಿಟ್ಟು ಪೂಜೆ ಮಾಡಿದರೆ ಅದೇ ದೇವರು.. ಹೊರಗೇ ಬಿದ್ದಿದ್ದರೆ ಸಾಧಾರಣ ಕಲ್ಲು ಅಷ್ಟೇ… ನಮ್ಮದೂಂತ ಏನೂ ಇರೋಲ್ಲ ನೋಡಿ.”

ದೊಡ್ಡವರು ಸುಮ್ಮನೇ ದೊಡ್ಡವರಾಗಿರುವುದಿಲ್ಲ…ಅವರ ಒಂದೊಂದು ಮಾತೂ, ಒಂದೊಂದು ನಡೆಯೂ ಒಂದೊಂದು ದೀಪ ಬೆಳಗುತ್ತದೆ ಅನ್ನಿಸಿ ನನಗೊದಗಿ ಬಂದಿರುವ ಈ ಸುವರ್ಣಾವಕಾಶಕ್ಕೆ ಹಿಗ್ಗುತ್ತಾ ಸಾಕ್ಷ್ಯಚಿತ್ರದ ಸ್ಕ್ರಿಪ್ಟ್ ಕೆಲಸವನ್ನು ಪ್ರಾರಂಭಿಸಿದೆ.

ಆದರೆ ನನ್ನ ಈ ಹಿಗ್ಗೂ ಅಲ್ಪಾಯುವಾಗಿ ಕೊನೆಯುಸಿರೆಳೆದು ಬಿಟ್ಟಿತು. “ಪ್ರಭು ಹೇಳಿಕೇಳಿ ನಾಟಕದವನು..ಸಿನೆಮಾ ಮಾಧ್ಯಮ ಅವನಿಗೇನು ಗೊತ್ತು? ನಾವುಗಳು ನಾಲ್ಕಾರು ವರ್ಷಗಳಿಂದ ಸಿನೆಮಾ ಮಾಧ್ಯಮದಲ್ಲೇ ತೊಡಗಿಕೊಂಡಿದ್ದೇವೆ..ನಮಗೇ ಯಾಕೆ ನೀವು ಅವಕಾಶ ಕೊಡಬಾರದು?” ಎಂದು ಕೆಲ ನಿರ್ದೇಶಕರು ಅಪಸ್ವರ ನುಡಿಯತೊಡಗಿದರು. “ಪ್ರತಿಯೊಬ್ಬರಿಗೂ ಒಂದು ಪ್ರಾರಂಭ ಅಂತ ಇದ್ದೇ ಇರುತ್ತೆ..ಪ್ರಭು ಏನೂ ಚಿತ್ರರಂಗಕ್ಕೆ ಹೊಸಬರಲ್ಲ..ಸಹ ನಿರ್ದೇಶಕರಾಗಿ ರಂಗಾ ಅವರ ಜೊತೆ ಕೆಲಸ ಮಾಡಿದಾರೆ.. ಜಿ.ವಿ.ಅಯ್ಯರ್ ಅಂಥ ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದಾರೆ..ಅವರಿಗೆ ಯಾಕೆ ಒಂದು ಅವಕಾಶ ಕೊಡಬಾರದು?” ಎಂದು ವಿಜಯ್ ಅವರು ಎಷ್ಟೇ ಹೇಳಿದರೂ ಪ್ರತಿಭಟನೆಯ ಸೊಲ್ಲಡಗಲಿಲ್ಲ. ಕೊನೆಗೆ ನಾನೇ ಬೇಸತ್ತು ವಿಜಯ್ ಅವರಿಗೆ ಹೇಳಿ ಹಿಂದೆ ಸರಿದುಬಿಟ್ಟೆ. ಆ ವೇಳೆಗಾಗಲೇ ಇಂತಹ ಹಲವು ಹತ್ತು ನಿರಾಸೆಗಳನ್ನು ಅನುಭವಿಸಿ ರೂಢಿಯಾಗಿದ್ದರಿಂದ ಮೊದಲಿನಷ್ಟು ಹಿಂಸೆಯಾಗಲಿಲ್ಲ.

ಒಂದು ಅಡಿ ಟಿಪ್ಪಣಿ:

83ರಲ್ಲಿ ಸ್ವತಃ ನಿರ್ದೇಶಕರೇ ಇಲಾಖೆಗೆ ಕರೆಸಿ ಸಾಕ್ಷ್ಯಚಿತ್ರ ಮಾಡಿಕೊಡಲು ಸಾಧ್ಯವೇ ಎಂದು ಕೇಳಿದ್ದರು. ಈಗ 8—10 ವರ್ಷಗಳ ಹಿಂದೆ ಗೆಳೆಯರ ಒತ್ತಾಯದ ಮೇರೆಗೆ ‘ನನಗೊಂದು ಸಾಕ್ಷ್ಯ ಚಿತ್ರ ಮಾಡಲು ಅವಕಾಶ ಮಾಡಿಕೊಡಿ’ ಎಂದು ನಾನೇ ಇಲಾಖೆಗೆ ಅರ್ಜಿ ಹಾಕಿಕೊಂಡಿದ್ದೆ. ನನ್ನ ಅನುಭವದ ಹತ್ತರಲ್ಲಿ ಒಂದು ಭಾಗದಷ್ಟು ಅನುಭವವಿಲ್ಲದವರಿಗೂ ಅವಕಾಶ ದೊರೆತದ್ದರಿಂದ ನನಗೂ ಖಂಡಿತ ದೊರೆಯುತ್ತದೆಂಬ ವಿಶ್ವಾಸವಿತ್ತು. ಆ ವಿಶ್ವಾಸವೂ ಒಂದೆರಡು ವಾರಗಳಲ್ಲೇ ಬುಡಮೇಲಾಯಿತು! ಒಪ್ಪಿಗೆ ಪತ್ರದ ನಿರೀಕ್ಷೆಯಲ್ಲಿದ್ದ ನನಗೆ ಬಂದದ್ದು ಇಲಾಖೆಯ ಒಬ್ಬ ಅಧಿಕಾರಿಯಿಂದ ಒಂದು ಫೋನ್ ಕರೆ: “ನಮಸ್ಕಾರ ಸರ್..ಕ್ಷಮೆ ಇರಲಿ.. ಈ ಸಲ ನಿಮಗೆ ಅವಕಾಶ ನೀಡೋದಕ್ಕಾಗ್ತಾ ಇಲ್ಲ.. ಮುಂದಿನ ಸಲ ನೋಡೋಣ”. ನಾನು ಬಾಯಿ ತೆರೆಯುವಷ್ಟರಲ್ಲಿ ಅವರು ಫೋನ್ ಇಟ್ಟುಬಿಟ್ಟರು! ನಾನು ಹಾಗೆ ಅರ್ಜಿ ಹಾಕಿಕೊಂಡದ್ದು ಮೊದಲು ಅದೇ ಕೊನೆ!

ಹಾಗೊಂದು ಕಾಲ…
ಹೀಗೂ ಒಂದು ಕಾಲ!!!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: