ಶ್ರೀನಿವಾಸ ಪ್ರಭು ಅಂಕಣ – ಸಿನೆಮಾ ಕಥೆಗಿಂತ ಹೆಚ್ಚು ರೋಚಕ ಕುಟುಂಬದ ಕಥೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

20

ಈಗ ಕೊಂಚ ನನ್ನ ಕುಟುಂಬದ ಕಥೆಯತ್ತ ಹೊರಳಿ ಇದೇ ಕಾಲಘಟ್ಟದಲ್ಲಿ ನಡೆದ ಒಂದಷ್ಟು ಪ್ರಮುಖ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ನಳಿನಿ ಅಕ್ಕ ಬೆಂಗಳೂರಿನ ಮಾರ್ಥಾಸ್ ಆಸ್ಪತ್ರೆಯಲ್ಲಿ ಕುಮಾರ ಸಂಜಯನಿಗೆ ಜನ್ಮ ಕೊಟ್ಟದ್ದು 1972ರಲ್ಲಿ. ಆ ಸಮಯದಲ್ಲಿ ಮೂರ್ತಿ ಭಾವ ಭಿಲೈನ ಮೆಕಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಳಿನಿ ಅಕ್ಕ ಆ ವೇಳೆಗಾಗಲೇ ಬೆಂಗಳೂರಿನಲ್ಲಿ ಏಜೀಸ್ ಆಫೀಸ್ ನಲ್ಲಿ ನೌಕರಿಗೆ ಸೇರಿಯಾಗಿತ್ತು. ಕುಮಾರ ಸಂಜಯ ಇನ್ನೂ 4-5 ತಿಂಗಳ ಕೂಸು. ಒಂದು ದಿನ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಯಿತು. ಮನೆಗೇ ಬಂದು ತಪಾಸಣೆ ಮಾಡಿ ವೈದ್ಯರು ಔಷಧಿ ಕೊಟ್ಟು ಹೋದರಾದರೂ ಅದೇಕೋ ಕೂಸಿಗೆ ದಕ್ಕದೆ ವ್ಯತಿರಿಕ್ತ ಪರಿಣಾಮವೇ ಆಗಿ ರಕ್ತ ಭೇದಿ ಶುರುವಾಗಿ ಹೋಯಿತು. ಮುಂದೆ ನಡೆದದ್ದೆಲ್ಲಾ ಸಿನೆಮಾ ಕಥೆಗಿಂತ ಹೆಚ್ಚು ರೋಚಕ. ಆ ಹೊತ್ತಿನಲ್ಲಿ ಮನೆಯಲ್ಲಿದ್ದವಳು ವಿಜಯಕ್ಕ ಒಬ್ಬಳೇ. ಎಲ್ಲರೂ ಕಾಲೇಜು-ಕಛೇರಿಗಳಿಗೆ ಹೋಗಿರುವ ಸಮಯ; ದೊಡ್ಡಭಾವ ಕೂಡಾ ವ್ಯಾಪಾರದ ನಿಮಿತ್ತ ಸೇಲಂಗೆ ಹೋಗಿಬಿಟ್ಟಿದ್ದರು.

ಮಗುವಿನ ಸ್ಥಿತಿಯನ್ನು ನೋಡಿ ನಡುಗಿಹೋದ ವಿಜಯಕ್ಕ ಆಫೀಸ್ ಗೆ ಫೋನ್ ಮಾಡಿ ನಳಿನಿ ಅಕ್ಕನನ್ನು ಮನೆಗೆ ಕರೆಸಿಕೊಂಡಳು. ಅಕ್ಕ ತಂಗಿಯರಿಬ್ಬರೂ ಅರೆಕ್ಷಣವೂ ತಡಮಾಡದೆ ಆಟೋದಲ್ಲಿ ಮಗುವನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ತಪಾಸಣೆ ಮಾಡಿದ ವೈದ್ಯರು, ‘ತುಂಬಾ ರಕ್ತ ಹೋಗಿಬಿಟ್ಟಿದೆ.. ಈ ತಕ್ಷಣವೇ ರಕ್ತದ ವ್ಯವಸ್ಥೆಯಾಗಬೇಕು; ಇನ್ನೆರಡು ತಾಸಿನಲ್ಲಿ ಮಗುವಿಗೆ ಆಪರೇಷನ್ ಆಗಬೇಕು.. ಪರಿಸ್ಥಿತಿ ತುಂಬಾ ಗಂಭೀರವಾಗಿದೆ’ ಎಂದುಬಿಟ್ಟರು.

ಆಸ್ಪತ್ರೆಯಲ್ಲಿ ನೋಡಿದರೆ ಮಗುವಿಗೆ ಬೇಕಾಗಿದ್ದ ಗುಂಪಿನ ರಕ್ತ ಸಿಗುತ್ತಿಲ್ಲ.. ಹೊರಗಿನಿಂದಲೇ ತರಬೇಕು. ಅಲ್ಲಿಗೆ ಹತ್ತಿರದಲ್ಲಿದ್ದುದೆಂದರೆ ಡಬ್ಬಲ್ ರೋಡ್ ನಲ್ಲಿದ್ದ ಕಾಳಪ್ಪ ಬ್ಲಡ್ ಬ್ಯಾಂಕ್. ಹೊರಗೆ ನೋಡಿದರೆ ಧೋ ಧೋ ಸುರಿಯುತ್ತಿರುವ ಮಳೆ.. ವಿಜಯಕ್ಕ ಮಗುವಿನ ಪಕ್ಕ ಕುಳಿತು ದತ್ತ ಜಪ ಮಾಡುತ್ತಿದ್ದರೆ ನಳಿನಿ ಅಕ್ಕ ಹೊರಗೆ ಕಂಡ ಕಂಡ ಆಟೋದವರನ್ನು ಅಂಗಲಾಚುತ್ತಿದ್ದಾಳೆ: ‘ನನ್ನ ಮಗೂನ ಉಳಿಸಿಕೊಳ್ಳೋದಕ್ಕೆ ರಕ್ತ ತರಬೇಕು.. ದಮ್ಮಯ್ಯ ಅಂತೀನಿ ಬನ್ರಪ್ಪಾ.. ಎಷ್ಟಾದ್ರೂ ದುಡ್ಡು ತೊಗೊಳ್ಳಿ.. ನನ್ನ ಮಗೂನ ಉಳಿಸಿಕೊಡಿ.. ಪ್ಲೀಸ್.. ಬನ್ನಿ..’ ಕೊನೆಗೊಬ್ಬ ಪುಣ್ಯಾತ್ಮ ದೊಡ್ಡ ಮನಸ್ಸು ಮಾಡಿ ಅಕ್ಕನನ್ನು ಆಟೋದಲ್ಲಿ ಕರೆದುಕೊಂಡು ಹೋಗುತ್ತಾನೆ.. ರಕ್ತದ ವ್ಯವಸ್ಥೆಯಾಗುತ್ತದೆ. ಆಪರೇಷನ್ ಕೂಡಾ ಯಶಸ್ವಿಯಾಗಿ ಆಗಿ ಒಂದಷ್ಟು ಆತಂಕದ ಗಂಟೆಗಳು ಕಳೆದ ಮೇಲೆ ಮಗು ಅಪಾಯದಿಂದ ಪಾರಾಗಿದೆ ಎಂದು ಡಾಕ್ಟ್ರು ಆಶ್ವಾಸನೆ ಕೊಡುತ್ತಾರೆ. ಆದರೂ 8-10 ದಿನಗಳ ಕಾಲ ಮಗು ಆಸ್ಪತ್ರೆಯಲ್ಲೇ, ವೈದ್ಯರ ಸುಪರ್ದಿನಲ್ಲೇ ಇರಬೇಕಾಗುತ್ತದೆ. ಇಂಥದೊಂದು ಸಂಕಟದ ಸನ್ನಿವೇಶದಲ್ಲಿ ಅಕ್ಕಂದಿರು-ಮನೆಯವರು ತೊಳಲುತ್ತಿದ್ದ ಸಮಯಕ್ಕೆ ಕೊಂಚ ಮೊದಲಷ್ಟೇ-ಭಾಗ್ಯಲಕ್ಷ್ಮಿಯ ಪ್ರಸಂಗ ಘಟಿಸಿದ್ದು. ಭಾಗ್ಯಳನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸಿಕೊಳ್ಳಲು ಯತ್ನಿಸಿದ್ದರೂ ಫಲಕಾರಿಯಾಗದೇ ಆಕೆ ಅಸು ನೀಗಿದ್ದಳೆಂದು ಕೇಳಿ ತಿಳಿದಿದ್ದೆನಷ್ಟೇ.. ಯಾಕೋ ಯಾವುದೇ ಆಸ್ಪತ್ರೆಯ ಬಳಿ ಹೋದರೂ ಸಾಕು, ನನಗೆ ಒಂದು ವಿಧದ ಕಳವಳ-ತಳಮಳ ಶುರುವಾಗಿಬಿಡುತ್ತಿತ್ತು..

ಹಾಗಾಗಿಯೇ ಅಕ್ಕನ ಮಗು ಹತ್ತು ದಿನ ಆಸ್ಪತ್ರೆಯಲ್ಲಿದ್ದರೂ ಒಮ್ಮೆಯೂ ಹೋಗಿ ನೋಡಲಿಲ್ಲ ನಾನು. ಮಾರ್ಥಾಸ್ ಆಸ್ಪತ್ರೆ ನನ್ನ ಕಾಲೇಜ್ ಗೆ ತೀರಾ ಸನಿಹದಲ್ಲೇ ಇತ್ತು. ನಾಲ್ಕಾರು ಬಾರಿ ಮಗುವನ್ನು ನೋಡಿಕೊಂಡು ಬರಲು ಆಸ್ಪತ್ರೆಯ ಬಳಿ ಹೋಗಿದ್ದುಂಟು. ಆದರೆ ಗೇಟ್ ತನಕ ಹೋಗುತ್ತಿದ್ದಂತೆಯೇ ವಿಚಿತ್ರ ತಲ್ಲಣ ಶುರುವಾಗಿಬಿಡುತ್ತಿತ್ತು. ಅಲ್ಲೆಲ್ಲೋ ಭಾಗ್ಯಳ ನೆರಳು ಸರಿದಾಡಿದಂತೆ.. ಭಾಗ್ಯ ಕೂಗಿ ಕರೆದಂತೆ.. ನಕ್ಕಂತೆ ಭಾಸವಾಗಿ ಮರಳಿ ಕಾಲೇಜ್ ಗೆ ಬಂದುಬಿಡುತ್ತಿದ್ದೆ. ನನಗೆ ನೆನಪಿರುವ ಹಾಗೆ ಮಗುವನ್ನು ಮನೆಗೆ ಕರೆದುಕೊಂಡು ಹೋಗುವ ದಿನ ಮಾತ್ರ ನಾನು ಆಸ್ಪತ್ರೆಗೆ ಅಕ್ಕನ ಜೊತೆ ಹೋದದ್ದು.

ಮುಂದೆ ಎಷ್ಟೋ ವರ್ಷಗಳ ನಂತರ ಇದೇ ಕುಮಾರ ಸಂಜಯ ಎಂಬಿಬಿಎಸ್ ಪದವಿ ಪಡೆದು ಸ್ವತಃ ವೈದ್ಯನಾಗಿ ತರಬೇತಿಗಾಗಿ ಮಾರ್ಥಾಸ್ ಆಸ್ಪತ್ರೆಗೇ ಹೋದ ಸಂದರ್ಭದಲ್ಲಿ ಒಂದಿಬ್ಬರು ಹಿರಿಯ ನರ್ಸ್ ಗಳು, ‘ಡಾಕ್ಟ್ರೇ, ನೀವು ಹುಟ್ಟಿದ್ದು ಇದೇ ಆಸ್ಪತ್ರೆಯಲ್ಲಿ; ನಿಮಗೆ ಮರುಹುಟ್ಟು ದೊರೆತದ್ದು ಇದೇ ಆಸ್ಪತ್ರೆಯಲ್ಲಿ; ಈಗ ನಿಮ್ಮ ವೃತ್ತಿ ಜೀವನವೂ ಇಲ್ಲೇ ಆರಂಭವಾಗುತ್ತಿದೆ ನೋಡಿ’ ಎಂದು ಸಂಭ್ರಮ ಪಟ್ಟಿದ್ದರಂತೆ!

ಮಗ ಕುಮಾರ ಸಂಜಯನಿಗೆ ಒಂದು ವರ್ಷವಾಗಿದ್ದಾಗ ನಳಿನಿ ಅಕ್ಕ ಭರತ ನಾಟ್ಯ ಕಲಿಯಲು ಆರಂಭಿಸಿದಳು. ಅವಳ ಚಿಕ್ಕಂದಿನಲ್ಲಿ ಈಡೇರದಿದ್ದ ಕನಸದು. ಯಾವ ವಿಷಯವೇ ಆಗಲಿ, ಶುರು ಮಾಡಿದ ಮೇಲೆ ಅದರ ಕೊನೆ ಅಥವಾ ಒಂದು ನಿರ್ಣಾಯಕ ಘಟ್ಟ ಮುಟ್ಟುವವರೆಗೆ ವಿರಮಿಸುವವಳಲ್ಲ ನಳಿನಿ ಅಕ್ಕ. ಅಂಥ ಹಠ-ಛಲ ಅವಳದು. ಅವಳ ಭರತನಾಟ್ಯದ ಗುರು ಶ್ರೀ ರಾಮನ್ ಅವರು ತುಮಕೂರಿನಿಂದ ಬೆಳಗಿನ ಜಾವ ನಾಲ್ಕು ಗಂಟೆಗೇ ಕ್ಲಾಸ್ ತೆಗೆದುಕೊಳ್ಳಲು ಬಂದುಬಿಡುತ್ತಿದ್ದರು! ಅವರ ನಟ್ಟುವಾಂಗದ ಕೋಲು ಬಡಿಯುವ ಸದ್ದಿಗೆ, ಗೆಜ್ಜೆ ಸದ್ದಿಗೆ ನಮ್ಮ ನಿದ್ದೆ ಎಷ್ಟೋ ದಿನ ಹಾರಿಹೋಗಿರುವುದುಂಟು! ಸಮರ್ಪಣಾಭಾವ-ತನ್ಮಯತೆಗಳ ಸಾಕಾರವೇ ಆಗಿದ್ದ ನಳಿನಿ ಅಕ್ಕ ಸತತ ಐದಾರು ವರ್ಷಗಳ ಕಾಲ ಅಭ್ಯಾಸ ಮಾಡಿ 1980ರಲ್ಲಿ ‘ಭರತನಾಟ್ಯ ರಂಗಪ್ರವೇಶ’ವನ್ನು ಸಮರ್ಥವಾಗಿ ನಿರ್ವಹಿಸಿ ಸಹೃದಯರ-ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರಳಾದಳು.

ಕುಮಾರ ಸಂಜಯನಂತೂ ಎರಡು ಮೂರು ವರ್ಷದ ಮಗುವಾಗಿದ್ದಾಗಲೇ ಗುರುಗಳು ಮಾಡುತ್ತಿದ್ದ ನಟ್ಟುವಾಂಗವನ್ನು ಕೇಳಿ ಕೇಳಿ ಮನನ ಮಾಡಿಕೊಂಡು ಎಷ್ಟೋ ದಿನಗಳು ತಾಯಿಯ ನೃತ್ಯಾಭ್ಯಾಸಕ್ಕೆ ತಾನೇ ನಟ್ಟುವಾಂಗ ಒದಗಿಸುತ್ತಿದ್ದ! ಅವನು ಕೋಲು ತಟ್ಟುತ್ತಿದ್ದ ವರಸೆಗೆ, ನಟ್ಟುವಾಂಗವನ್ನು ಲೀಲಾಜಾಲವಾಗಿ ಹೇಳುತ್ತಿದ್ದ ಪರಿಗೆ ಮರುಳಾಗದವರೇ ಇರಲಿಲ್ಲ. ಅವನು ತದೇಕಚಿತ್ತನಾಗಿ ಕುಳಿತು ಸಿಕ್ಕ ಸಿಕ್ಕ ಪಾತ್ರೆಗಳ ಮೇಲೆಲ್ಲಾ ಕೋಲಿನಿಂದ ಅಮೋಘವಾಗಿ ತಟ್ಟಿ ಬಡಿದು ಕೆಲವಾರು ಅಲ್ಯೂಮಿನಿಯಂ ಪಾತ್ರೆಗಳನ್ನು ನೆಗ್ಗಿಸಿ ಹಾಕಿದ್ದನ್ನು ಅಕ್ಕ ಜ್ಞಾಪಿಸಿಕೊಳ್ಳುತ್ತಿರುತ್ತಾಳೆ. ಮುಂದೆ ಅವನು ಮೃದಂಗ ನುಡಿಸಾಣಿಕೆಯಲ್ಲೂ ಸಿದ್ಧಹಸ್ತನಾಗಿ ಯಶಸ್ವೀ ವೈದ್ಯನೂ ಆಗಿ ರೂಪುಗೊಂಡಿದ್ದು ಬೇರೆಯದೇ ಸ್ವಾರಸ್ಯಕರ ಕಥೆ. ಇರಲಿ.

ಒಂದು ಭಾನುವಾರ.. ಮನೆಯಲ್ಲಿ ನಮ್ಮ ಅಜ್ಜನ ಶ್ರಾದ್ಧ. ಎಲ್ಲ ಕರ್ಮಗಳೂ ಸಾಂಗವಾಗಿ ನೆರವೇರಿ ಪಿಂಡಪ್ರದಾನವಾಗಿ ಬ್ರಾಹ್ಮಣ ಭೋಜನದ ಸಮಯ. ಯಾರೋ ಬಾಗಿಲು ಬಡಿದಂತಾಗಿ ಹೋಗಿ ನೋಡಿದರೆ ನನ್ನ ತರಗತಿಯವರೇ ಆದ ಗೆಳೆಯ-ಮೊಹಮ್ಮದ್ ಅಬ್ಬಾಸ್! ಈ ಅಬ್ಬಾಸ್ ಸಾಹೇಬರು ಯಾವುದೋ ಸರ್ಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು ಅದಾವುದೋ ಆಗ ಚಾಲ್ತಿಯಲ್ಲಿದ್ದ ಒಂದು ಯೋಜನೆಯಡಿ ಓದಲು ಬಂದಿದ್ದವರು. ಮಹಾ ಗಾಂಧಿ ಭಕ್ತರಾಗಿದ್ದ ಅಬ್ಬಾಸ್ ಖಾದಿ ಬಿಟ್ಟು ಬೇರೆ ತೊಡುತ್ತಿರಲಿಲ್ಲ. ಬಂದ ಕೆಲವೇ ದಿನಗಳಲ್ಲಿ ನನಗೆ ತುಂಬಾ ಹತ್ತಿರದವರಾಗಿಬಿಟ್ಟಿದ್ದ ಅಬ್ಬಾಸರಿಗೆ ನಾನು ನೋಟ್ಸ್ ಮಾಡಿಕೊಳ್ಳಲು ನೆರವಾಗುತ್ತಿದ್ದೆ.

ನಾನು ನೋಟ್ಸ್ ತಯಾರಿ ಮಾಡಿಕೊಳ್ಳುವಾಗಲೆಲ್ಲಾ ಕಾರ್ಬನ್ ಪೇಪರ್ ಇಟ್ಟು ಬರೆದು ಎರಡು ಪ್ರತಿಗಳನ್ನು ತಯಾರಿಸಿ ಒಂದನ್ನು ಅವರಿಗೆ ಕೊಡುತ್ತಿದ್ದೆ. ಕೃತಜ್ಞತಾಪೂರ್ವಕವಾಗಿ ಅವರು ಆಗಾಗ್ಗೆ ‘ನಿಮ್ಮ ಪೇಪರ್ ಖರ್ಚಿಗಾಗುತ್ತೆ.. ಇಟ್ಟುಕೊಳ್ಳಿ’ ಎಂದು ಐದೋ ಹತ್ತೋ ರೂಪಾಯಿಗಳನ್ನು ನನ್ನ ಕೈಗಿಡುತ್ತಿದ್ದರು. ಪೇಪರ್ ಗಲ್ಲದಿದ್ದರೂ ಸಿನೆಮಾ ಖರ್ಚಿಗಾದರೂ ಆಗುತ್ತೆ ಎಂದುಕೊಂಡು ನಾನೂ ಬೇಡ ಅನ್ನದೆ ಖುಷಿಯಿಂದ ತೆಗೆದುಕೊಳ್ಳುತ್ತಿದ್ದೆ. ಇಂಥಾ ಅಬ್ಬಾಸರು ಇದ್ದಕ್ಕಿದ್ದಂತೆ ಶ್ರಾದ್ಧದ ದಿನ ಮನೆಗೆ ಬಂದುಬಿಟ್ಟಿದ್ದಾರೆ! ಇನ್ನೇನು ಮಾಡುವುದು? ರೂಮ್ ನಲ್ಲೇ ಕೂರಿಸಿಕೊಂಡು ಮಾತಾಡುತ್ತಿದ್ದೆ.

ಬ್ರಾಹ್ಮಣ ಭೋಜನ ಮುಗಿದು ಅವರೆಲ್ಲರೂ ಹೊರಟಮೇಲೆ ಅಣ್ಣ ನಮ್ಮೆಲ್ಲರನ್ನೂ ಊಟಕ್ಕೆ ಕರೆದರು. ನನಗೆ ಸಂದಿಗ್ಧ-ಶ್ರಾದ್ಧದಂತಹ ಮಡಿಯ ದಿನ ಅಬ್ಬಾಸ್ ರನ್ನು ನಮ್ಮ ಜತೆ ಊಟಕ್ಕೆ ಕೂರಿಸಿಕೊಳ್ಳುವುದು ಅಣ್ಣನಿಗೆ ಇಷ್ಟವಾಗುತ್ತದೋ ಇಲ್ಲವೋ ಎಂಬ ಆತಂಕ. ಅದೇ ವೇಳೆಗೆ ಅತ್ತ ಬಂದ ಅಣ್ಣ ಅಬ್ಬಾಸ್ ರನ್ನು ನೋಡಿ ‘ಓಹೋ.. ನಮ್ಮ ಪ್ರಭು ಸ್ನೇಹಿತರೋ? ಏಳಿ.. ಊಟಕ್ಕೇಳಿ’ ಅಂದರು. ಏನಾದರಾಗಲಿ ಎಂದು ನಾನು ಅಬ್ಬಾಸರನ್ನು ಅಣ್ಣನಿಗೆ ಪರಿಚಯ ಮಾಡಿಕೊಟ್ಟೆ: ‘ಅಣ್ಣಾ, ಇವರು ಮೊಹಮ್ಮದ್ ಅಬ್ಬಾಸ್ ಅಂತ.. ನನ್ ತರಗತಿಯವರೇ’ ಎಂದು ಉದ್ದೇಶಪೂರ್ವಕವಾಗಿಯೇ ಕೊಂಚ ಜೋರಾಗಿ ಹೇಳಿದೆ. ಅಣ್ಣನ ಮುಖದ ಒಂದು ನಿರಿಗೆಯೂ ಬದಲಾಗಲಿಲ್ಲ. ‘ಭಾಳ ಸಂತೋಷ ಸಾಹೇಬ್ರೇ.. ಇವತ್ತು ನಮ್ಮ ಮನೇಗೆ ‘ದೊಡ್ಡವರು’ ಬಂದಿದಾರೆ. ಏಳಿ.. ಕೈಕಾಲು ತೊಳಕೊಳ್ಳಿ.. ಒಟ್ಟಿಗೇ ಪ್ರಸಾದ ಸ್ವೀಕರಿಸೋಣ’ ಎಂದು ಹೇಳಿ ಅಣ್ಣ ಒಳನಡೆದರು. ಅವರ ಮಾತು ಕೇಳಿ ಅಬ್ಬಾಸರಷ್ಟೇ ಆಶ್ಚರ್ಯ ನನಗೂ ಆಗಿತ್ತು. ಅಣ್ಣನ ವಿಶಾಲ ಮನೋಭಾವ-ಹೃದಯವಂತಿಕೆಯನ್ನು ಕಂಡು ನಾನು ಮೂಕವಿಸ್ಮಿತನಾಗಿದ್ದೆ.

ಎಂ ಎ ಪ್ರಥಮ ವರ್ಷದ ಪರೀಕ್ಷೆಗಳು ಮುಗಿದು ಫಲಿತಾಂಶಗಳೂ ಬಂದವು. ಕೇವಲ ಒಂದು ಅಂಕದ ವ್ಯತ್ಯಾಸದಿಂದ ನಾನು ಮೊದಲ ಸ್ಥಾನವನ್ನು ಕಳೆದುಕೊಂಡು ಎರಡನೆಯ ಸ್ಥಾನಕ್ಕೆ ಜಾರಿದ್ದೆ. ಪುಣ್ಯವಶಾತ್ ಎಂ ಎ ಓದುವಾಗ ನಾನು ಆರಿಸಿಕೊಂಡದ್ದು language scholarship… ವರ್ಷಕ್ಕೆ 600 ರೂಪಾಯಿಗಳು. ಪ್ರಥಮ ಸ್ಥಾನ ಬರದಿದ್ದರೂ ಸ್ಕಾಲರ್ ಶಿಪ್ ಗೆ ತೊಂದರೆಯಾಗಲಿಲ್ಲ. ಆ ವೇಳೆಗಾಗಲೇ ಅಭ್ಯಾಸ ಮಾಡಿಕೊಂಡಿದ್ದ ಸಿಗರೇಟು, ಆಗಾಗಿನ ಬಿಯರ್, ಗೆಳೆಯ ಗೆಳತಿಯರೊಂದಿಗೆ ಹೋಟಲ್ ಗೆ ಹೋಗುವುದು, ಎಲ್ಲಕ್ಕಿಂತ ಹೆಚ್ಚಿಗೆ ಸಿನೆಮಾ… ಈ ಎಲ್ಲಾ ಖರ್ಚುಗಳಿಗೆ ಹಣ ಹೊಂದಿಸುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು. ತೀರಾ ಅಗತ್ಯವೆಂಬಂತಹ ಖರ್ಚುಗಳನ್ನು ಬಿಟ್ಟು ಉಳಿದವಕ್ಕೆಲ್ಲಾ ಮನೆಯಲ್ಲಿ ಕೇಳುವಂತಿರಲಿಲ್ಲ.

ಜೊತೆಗೆ ನನ್ನ ವಿನಾಕಾರಣದ ಮುನಿಸು ಬೇರೆ ಬಾಧಿಸುತ್ತಿತ್ತಲ್ಲಾ! ಆಗಲೇ ಅನ್ನಿಸಿದ್ದು ಎಲ್ಲಿಯಾದರೂ ಒಂದು ಅರೆಕಾಲಿಕ ಕೆಲಸವನ್ನು ಹಿಡಿದು ಖರ್ಚಿಗೆ ದಾರಿ ಮಾಡಿಕೊಳ್ಳಬೇಕೆಂದು. ನನ್ನ ಅದೃಷ್ಟಕ್ಕೆ ಸ್ನೇಹಿತರ ಶಿಫಾರಸ್ಸಿನ ಫಲವಾಗಿ ಶಂಕರ ಶಾಸ್ತ್ರಿ ಎಂಬ ಗಣ್ಯ ವ್ಯಕ್ತಿಯೊಬ್ಬರಿಗೆ ಸಹಾಯಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ತಿಂಗಳಿಗೆ 50 ರೂಪಾಯಿ ಸಂಬಳ. ಬೆಳಿಗ್ಗೆ 7:30 ಕ್ಕೆ ಅವರ ಮನೆಗೆ ಹೋಗಿ ಅವರ ವ್ಯವಹಾರಗಳಿಗೆ ಸಂಬಂಧ ಪಟ್ಟಂಥ ಒಂದಷ್ಟು ಪತ್ರಗಳನ್ನು ಇಂಗ್ಲೀಷ್ ನಿಂದ ಕನ್ನಡಕ್ಕೆ ತರ್ಜುಮೆ ಮಾಡಿ ಕೊಡಬೇಕಿತ್ತು. ಇಲ್ಲವೇ ಅವರ ವ್ಯವಹಾರಗಳಿಗೆ ಸಂಬಂಧಿಸಿದ ಒಂದಷ್ಟು ಪತ್ರಗಳ ಕರಡನ್ನು ಸಿದ್ಧ ಪಡಿಸಬೇಕಿತ್ತು.

ಜತೆಗೆ ಸಾವಿರಾರು ಪುಸ್ತಕಗಳು ತುಂಬಿದ್ದ ಅವರ ಗ್ರಂಥಾಲಯವನ್ನೂ ಓರಣಗೊಳಿಸಿಡುವ ಕೆಲಸ. ಅವರ ಮನೆ ಇದ್ದದ್ದು ರಾಜಾಜಿನಗರದ ಆಚೆ. ನಾವಿದ್ದದ್ದು ಜಯನಗರ ಟಿ ಬ್ಲಾಕ್ ನಲ್ಲಿ. ಬೆಳಿಗ್ಗೆ ಅಷ್ಟು ಬೇಗ ಜಯನಗರದಿಂದ ರಾಜಾಜಿನಗರಕ್ಕೆ ಹೋಗುವುದಾದರೂ ಹೇಗೆ? ಎನ್ನುವ ಸಮಸ್ಯೆ ಎದುರಾಯಿತು. ನನ್ನ ಜಯನಗರದ ಆತ್ಮೀಯ ಮಿತ್ರರ ಬಗ್ಗೆ ಈ ಹಿಂದೆಯೇ ಹೇಳಿದ್ದೇನೆ. ಅವರಲ್ಲಿ ರಘುನಂದನ್ (ವಿಜಿ) ಕೂಡಾ ಒಬ್ಬ. ಅವನು ಸೆಂಟ್ರಲ್ ಕಾಲೇಜ್ ನಲ್ಲಿಯೇ ಕೆಮಿಸ್ಟ್ರಿ ಎಂ ಎಸ್ ಸಿ ಓದುತ್ತಿದ್ದ. ಅವನ ತಂಗಿ ಚಂದ್ರಿಕಾಳ ಬಳಿ ಒಂದು ಸೈಕಲ್ ಇತ್ತು.. ಲೇಡೀಸ್ ಸೈಕಲ್. ವಿಜಿಯ ಅಮ್ಮ ಇಂದಿರಮ್ಮ-ಎಲ್ಲರೂ ಅವರನ್ನು ವೈನಿ ಎಂದೇ ಕರೆಯುತ್ತಿದ್ದುದು-ಅವರದಂತೂ ತುಂಬಾ ಮೃದು ಸ್ವಭಾವ. ನನ್ನ ಬಗ್ಗೆಯೂ ವಿಶೇಷ ಪ್ರೀತಿ ಅವರಿಗೆ. ನನ್ನ ಸಮಸ್ಯೆ ಅರ್ಥವಾಯಿತು ಅನ್ನುವ ಹಾಗೆ ಒಂದು ದಿನ ನನ್ನನ್ನು ಕರೆದು, ‘ಚಂದ್ರಿಕಾ ಈಗ ಅವಳ ಸೈಕಲ್ ಬಳಸ್ತಾ ಇಲ್ಲ.. ನಿನಗೆ ಅನುಕೂಲ ಆಗೋದಾದರೆ, ಲೇಡೀಸ್ ಸೈಕಲ್ ಅಂತ ಮುಜುಗರ ಆಗದೇ ಹೋದರೆ ಅವಳ ಸೈಕಲ್ ನೀನು ಉಪಯೋಗಿಸಿಕೋ ಬಹುದು’ ಎಂದರು. ಅಗತ್ಯವಂತೂ ಇದ್ದೇ ಇದೆ; ಮುಜುಗರ ಪಟ್ಟುಕೊಂಡು ಕೂತರೆ ನನಗೇ ನಷ್ಟ-ಕಷ್ಟ ಎಂದು ಆಲೋಚಿಸಿದವನೇ, ‘ಆಗಲಿ ವೈನಿ, ಈಗ ತುಂಬಾ ಅಗತ್ಯ ಇದೆ; ಬಳಸಿಕೋತೀನಿ’ ಎಂದು ಹೇಳಿ ಅವರಿಗೆ ಧನ್ಯವಾದ ಅರ್ಪಿಸಿ ಸೈಕಲ್ ತೆಗೆದುಕೊಂಡು ಹೊರಟೆ.

ಬೆಳಿಗ್ಗೆ ಬೇಗ ಎದ್ದು ಮನೆಯಿಂದ ಸೈಕಲ್ ನಲ್ಲಿ ಹೊರಟು ರಾಜಾಜಿನಗರದ ಗಣ್ಯರ ಮನೆ ತಲುಪಿ ಕೆಲಸಗಳನ್ನು ಮುಗಿಸಿ 10 ಗಂಟೆಯ ಸುಮಾರಿಗೆ ಕಾಲೇಜ್ ಗೆ ಹೋಗುತ್ತಿದ್ದೆ. ದೇಹಕ್ಕೆ ಆಯಾಸವಾಗುತ್ತಿದ್ದರೂ ತಿಂಗಳ ಕೊನೆಯ ಸಂಬಳ ನೆನೆಸಿಕೊಂಡ ತಕ್ಷಣ ಹೊಸ ಉಲ್ಲಾಸ-ಉತ್ಸಾಹ ಮೂಡಿಬಿಡುತ್ತಿತ್ತು. ಒಂದು ದಿನ ಕೆಲಸ ಸ್ವಲ್ಪ ಜಾಸ್ತಿ ಇದ್ದು ಕಾಲೇಜ್ ತಲುಪುವುದು ತಡವಾಗಿಹೋಯಿತು. 10 ಗಂಟೆಗೆ ಇದ್ದದ್ದು NSL (ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು) ಅವರ ಕ್ಲಾಸ್. ತೀರಾ ತಡವಾಗಿ ತರಗತಿಗೆ ಹೋಗುವುದು ಸರಿಯಲ್ಲ ಅನ್ನಿಸಿ ನಮ್ಮ ವಿಭಾಗದ ಎದುರಿಗೇ ಇದ್ದ ಪಾರ್ಕ್ ನಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದೆ. ಅದೇ ವೇಳೆಗೆ ಸರಿಯಾಗಿ ನಳಿನಿ ಎಂಬ ನನ್ನ ಸಹಪಾಠಿಯೂ ಸಹಾ ತಡವಾದ್ದರಿಂದ ತರಗತಿಗೆ ಹೋಗದೆ ನನ್ನ ಬಳಿಯೇ ಬಂದು ಕುಳಿತರು.

ನಾವು ಮಾತಾಡುತ್ತಾ ಕುಳಿತಿದ್ದಂತೆಯೇ ತರಗತಿ ಮುಗಿಸಿ ಹೊರಬಂದ NSL staff room ನತ್ತ ಹೊರಟಿದ್ದವರು ಪಾರ್ಕ್ ನಲ್ಲಿ ಹೆಣ್ಣುಮಗಳ ಜತೆ ಮಾತಾಡುತ್ತಾ ಕುಳಿತಿದ್ದ ನನ್ನನ್ನು ನೋಡಿ ಅಲ್ಲೇ ನಿಂತು, ‘ಶ್ರೀನಿವಾಸ ಪ್ರಭು, ಬನ್ರೀ ಇಲ್ಲಿ’ ಎಂದು ಕೂಗಿದರು. ಬೈಗಳ ಕಾದಿದೆಯೆಂದು ಮನಸ್ಸಿನಲ್ಲೇ ಕಳವಳಿಸುತ್ತಾ ಹತ್ತಿರ ಹೋದೆ. ಸಿಟ್ಟಿನಿಂದ ಮೇಷ್ಟ್ರ ಮುಖ ಕೆಂಪಾಗಿತ್ತು. ‘ಕಾಲೇಜು ಅಂದ್ರೆ ಮನಸೋ ಇಚ್ಛೆ ಇರೋದಲ್ಲ.. ಒಂದು ಶಿಸ್ತಿರಬೇಕು.. Rank student ಆದಮಾತ್ರಕ್ಕೆ ನೀವೇನೂ ಬೃಹಸ್ಪತಿ ಆಗಿಬಿಡೋಲ್ಲ.. ನೀವು ಹೀಗೆಲ್ಲಾ lecturers ಗೆ disrespect ತೋರಿಸೋದು ಚೆನ್ನಾಗಿರೋಲ್ಲ…’ ಎಂದು ನನಗೆ ನಡುವೆ ಮಾತಾಡಲೂ ಅವಕಾಶ ಕೊಡದಂತೆ ಸಾಕಷ್ಟು ವಿದ್ಯಾರ್ಥಿಗಳ ಮುಂದೆಯೇ ಝಾಡಿಸಿಬಿಟ್ಟರು. Sorry sir ಅಂದವನೇ ಅವಮಾನ-ನೋವಿನಿಂದ ಉಕ್ಕಿಬರುತ್ತಿದ್ದ ಅಳುವನ್ನು ಹೇಗೋ ನುಂಗಿಕೊಂಡು ಹೊರಟುಹೋದೆ.

ಮಾರನೆಯ ದಿನ ಸಂಜೆ ತರಗತಿಗಳು ಮುಗಿದ ಮೇಲೆ NSL ಮೇಷ್ಟ್ರು ನನ್ನನ್ನು ತಮ್ಮ ಕೋಣೆಗೆ ಕರೆಸಿಕೊಂಡರು. ಅಳುಕುತ್ತಲೇ ಹೋದೆ. ‘ಅಲ್ರೀ ಪ್ರಭೂ, ವಿಷಯ ಗೊತ್ತಾಯ್ತು ನನಗೆ. ಬೆಳಿಗ್ಗೆ ಕೆಲಸ ಮುಗಿಸಿಕೊಂಡು ಬರ್ತಿದೀನಿ, ಅದಕ್ಕೇ ತಡವಾಯ್ತು ಅಂತ ಒಂದು ಮಾತು ಹೇಳೋದಲ್ವೇನ್ರೀ ನೀವು? ಸುಮ್ಮನೇ ಬೈಸಿಕೊಂಡ್ರಲ್ಲಾ… ನಾವೂ ಎಲ್ಲಾ ಹೀಗೇ ಕಷ್ಟ ಪಟ್ಟುಕೊಂಡು ವಾರಾನ್ನ ಮಾಡಿಕೊಂಡು ಓದಿದೋರು.. ಇರಲಿ. ನಿಮಗೆ ಏನೇ ಸಂದೇಹಗಳಿದ್ರೂ ಯಾವಾಗ ಬೇಕಾದ್ರೂ ಬನ್ನಿ. ನಾನು ಸಹಾಯ ಮಾಡ್ತೀನಿ. ಲೈಬ್ರರಿಯಿಂದ ತುಂಬಾ ಮುಖ್ಯವಾದ ಪುಸ್ತಕಗಳು ಬೇಕಿದ್ರೆ ಹೇಳಿ. ನನ್ನ ಹೆಸರಲ್ಲಿ issue ಮಾಡಿಸಿಕೊಡ್ತೀನಿ. ಆಮೆಲೆ, ನಿಮ್ಮಲ್ಲೇ ಇರಲಿ, ಏನಾದ್ರೂ ಚಿಕ್ಕಪುಟ್ಟ ಹಣದ ಸಹಾಯ ಬೇಕಿದ್ರೆ ಕೇಳಿ.. ಸಂಕೋಚ ಪಟ್ಟುಕೋಬೇಡಿ… ಆದರೆ ಒಂದು ಕಿವಿಮಾತು: ಇನ್ನುಮುಂದೆ ಹೀಗೆ ಯಾರದಾದ್ರೂ ಕ್ಲಾಸ್ ತಪ್ಪಿಸಿಕೊಂಡ್ರೆ ಅವರಿಗೆ ಕಾಣೋ ಹಾಗೆ ಪಾರ್ಕ್ ನಲ್ಲಿ ಕೂತಿರಬೇಡಿ.. ಅದೂ ಹೆಣ್ಣುಮಕ್ಕಳ ಜೊತೆ.. ಮೇಷ್ಟ್ರುಗಳಿಗೆ ಇಷ್ಟವಾಗೋಲ್ಲ’ ಎಂದು ನುಡಿದು ಜೋರಾಗಿ ನಕ್ಕುಬಿಟ್ಟರು. ನಿನ್ನೆ ಬೈದು ದುಃಖಕ್ಕೆ ಅಳಿಸಿದವರು ಇಂದು ಸಮಾಧಾನ ಮಾಡಿ ಖುಷಿಗೆ ಅಳಿಸುತ್ತಿದ್ದಾರೆ ಅಂದುಕೊಂಡು ಮೇಷ್ಟ್ರಿಗೆ ಧನ್ಯವಾದ ಹೇಳಿ ಹಗುರ ಮನಸ್ಸಿನಿಂದ ಹೊರಹೊರಟೆ.

ಒಂದು ದಿನ ಬೆಳಿಗ್ಗೆ ಕೆಲಸಕ್ಕೆ ಹೋದಾಗ ಲೈಬ್ರರಿಯ ಪುಸ್ತಕಗಳನ್ನು ಒಪ್ಪವಾಗಿ ಜೋಡಿಸುವ ಕೆಲಸ ಒಪ್ಪಿಸಿದರು ನನ್ನ ಬಾಸ್ ಶಂಕರ ಶಾಸ್ತ್ರಿಗಳು. ಮೊದಲ ಮಹಡಿಯಲ್ಲಿದ್ದ ಲೈಬ್ರರಿಗೆ ಹೋಗಿ ನೋಡಿದರೆ ಸಾವಿರಾರು ಪುಸ್ತಕಗಳು! ಕಾನೂನು, ರಾಜಕೀಯ, ಆಧ್ಯಾತ್ಮಗಳಿಗೆ ಸಂಬಂಧಪಟ್ಟ ಪುಸ್ತಕಗಳ ಜೊತೆಗೇ ನೂರಾರು ಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಕೃತಿಗಳೂ ಇದ್ದವು. ನನಗೆ ಉಪಯೋಗವಾಗುವಂತಹ ಅನೇಕ ಪುಸ್ತಕಗಳು ಅಲ್ಲಿದ್ದದ್ದು ನೋಡಿ ನನಗೆ ಪರಮ ಸಂತೋಷವಾಗಿಹೋಯಿತು. ಅಂದು ಕೆಲಸ ಮುಗಿಸಿ ಹೊರಟಾಗ ನನಗೆ ತುಂಬಾ ಅಗತ್ಯವಿದ್ದ ಒಂದು ಪುಸ್ತಕವನ್ನು ಕೈಲಿ ಹಿಡಿದು ಕೆಳತಂದು, ‘ಸರ್, ಈ ಪುಸ್ತಕ ತೆಗೆದುಕೊಂಡು ಹೋಗಿ ಓದಿ ಎರಡು ಮೂರು ದಿನದಲ್ಲೇ ಮರಳಿಸಿ ಬಿಡ್ತೀನಿ’ ಎಂದೆ.

ತಕ್ಷಣವೇ ಶಾಸ್ತ್ರಿಗಳು, ‘ಇಡಿ.. ಪುಸ್ತಕ ಕೆಳಗಿಡಿ.. ಹಾಗೆಲ್ಲಾ ಯಾವ ಪುಸ್ತಕಾನೂ ತೊಗೊಂಡು ಹೋಗೋಕೆ ನಾನು ಬಿಡೋಲ್ಲ.. ಇಡಿ ಕೆಳಗೆ’ ಎಂದು ಕಟುವಾಗಿ ಗದರಿಬಿಟ್ಟರು. ತುಂಬಾ ಅವಮಾನವಾದಂತಾಗಿ ಸಪ್ಪೆ ಮೋರೆ ಹಾಕಿಕೊಂಡು ಅಲ್ಲಿಂದ ಹೊರಟೆ. ಅವರು ಹಾಗೆ ಅವಮಾನಿಸಿದ್ದು ಯಾಕೋ ಹಿತವೆನಿಸಲಿಲ್ಲ. ಪುಸ್ತಕ ಕೊಡೋದಿಲ್ಲ ಎಂದು ನಯವಾಗಿಯೇ ಹೇಳಬಹುದಿತ್ತು. ರೇಗಬೇಕು ಯಾಕೆ? ಇರಲಿ, ನೋಡಿಕೊಳ್ಳೋಣ ಎಂದು ಸುಮ್ಮನಾದೆ. ಈ ಸಮಸ್ಯೆಯ ಪರಿಹಾರಕ್ಕೆ ಒಂದು ಉಪಾಯ ಹೊಳೆಯಿತು. ಮೊದಲ ತಿಂಗಳ ಸಂಬಳ ಬರುವ ತನಕ ಕಾದಿದ್ದು ಅದು ಬಂದೊಡನೆ ಸೀದಾ ಅವೆನ್ಯೂ ರೋಡ್ ಗೆ ಹೋದೆ. ನಾಲ್ಕಾರು ರೂಪಾಯಿ ಕೊಟ್ಟು ಒಂದು ಹ್ಯಾಂಡ್ ಬ್ಯಾಗ್ ಖರೀದಿಸಿದೆ.

ಮರುದಿನ ಕೆಲಸಕ್ಕೆ ಹೋದ ವೇಳೆ ಲೈಬ್ರರಿಯಿಂದ ಕೆಳಗಿಳಿದು ಬರುವಾಗ ನನಗೆ ಬೇಕಾದ ಪುಸ್ತಕವನ್ನು ಕೈಲಿ ಹಿಡಿದು ಮೆಟ್ಟಲುಗಳ ತಿರುವಿನಲ್ಲಿ ನಿಂತು ಮೇಲಿನಿಂದ ಕೆಳಕ್ಕೆ, ಅಂದರೆ ಮನೆಯ ಹಿಂಭಾಗದಲ್ಲಿದ್ದ ಖಾಲಿ ನಿವೇಶನದ ಜಾಗಕ್ಕೆ ಪುಸ್ತಕವನ್ನು ಜಾರಿಸಿದೆ. ಕೆಳಬಂದು ಶಾಸ್ತ್ರಿಗಳಿಗೆ ಹೊರಡುತ್ತೇನೆಂದು ಹೇಳಿ ಅವರೆದುರಿಗೇ ಇಟ್ಟಿದ್ದ ನನ್ನ ಹ್ಯಾಂಡ್ ಬ್ಯಾಗ್ ಅನ್ನು ತೆಗೆದುಕೊಂಡು ಹೊರಟೆ. ಆಚೆ ಬಂದವನೇ ಏನೋ ನೆಪ ಮಾಡಿಕೊಂಡು ಖಾಲಿನಿವೇಶನದ ಬಳಿ ನಿಂತು ಯಾರೂ ನೋಡುತ್ತಿಲ್ಲವೆಂದು ಖಾತ್ರಿ ಮಾಡಿಕೊಂಡು ಕೆಳಗೆ ಬಿದ್ದಿದ್ದ ಪುಸ್ತಕವನ್ನೆತ್ತಿಕೊಂಡು ಬ್ಯಾಗ್ ಗೆ ಸೇರಿಸಿ ಸೈಕಲ್ ಏರಿ ವೇಗವಾಗಿ ಹೊರಟುಬಿಟ್ಟೆ.

ಮೊದಲ ದಿನ ಮಾತ್ರ ಸ್ವಲ್ಪ ಹೆದರಿಕೆಯಾದದ್ದು; ನಂತರ ಸಲೀಸಾಗಿ ಹೋಯಿತು. ಇದೇನೂ ಕಳ್ಳತನವಲ್ಲ; ಅಲ್ಲಿ ಧೂಳು ತಿನ್ನುವುದರ ಬದಲು ಪುಸ್ತಕಗಳು ಒಬ್ಬ ಜ್ಞಾನಾರ್ಥಿಗೆ ನೆರವಾಗಿ ಸಾರ್ಥಕವಾಗುತ್ತಿವೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಮೇಲಾಗಿ ನನ್ನ ಉದ್ದೇಶ ನೆರವೇರಿದ ಮೇಲೆ ಪುಸ್ತಕಗಳನ್ನು ಗುಟ್ಟಾಗಿ ಮತ್ತೆ ಲೈಬ್ರರಿಗೆ ಸೇರಿಸಿಬಿಡುವ ವಿಚಾರವೂ ಇತ್ತು ನನಗೆ. ಕಾರಣಾಂತರಗಳಿಂದ ಅಂಥ ಪ್ರಸಂಗ ಬರದೆ ಆ ಪುಸ್ತಕಗಳು ತೀರಿಹೋಗಿರುವ ಆ ಹಿರಿಯ ಗಣ್ಯರ ಆಶೀರ್ವಾದ ರೂಪವಾಗಿ ನನ್ನ ಬಳಿಯೇ ಭದ್ರವಾಗಿವೆ.

ಈ ವೇಳೆಗಾಗಲೇ ನಾಗರಾಜ ಭಾವ ಹಾಗೂ ವಿಜಯಕ್ಕ ಬೆಂಗಳೂರಿಗೇ ವಾಸ್ತವ್ಯವನ್ನು ಬದಲಾಯಿಸಿದ್ದರು. ಭಾವ ಟಿ ಬ್ಲಾಕ್ ಬಸ್ ಡಿಪೋ ಹತ್ತಿರ ಒಂದು ಸೌದೆ ಮಂಡಿ ಇಟ್ಟು ವ್ಯಾಪಾರ ಶುರುಮಾಡಿದ್ದರು. ಮೂರ್ತಿಭಾವ ಕೂಡಾ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜ್ ಗೆ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ ಬೆಂಗಳೂರಿಗೆ ಬಂದಾಗಿತ್ತು. ಟಿ ಬ್ಲಾಕ್ ನಲ್ಲಿಯೇ ಒಂದೇ ಕಾಂಪೌಂಡ್ ನಲ್ಲಿದ್ದ ಜೋಡಿಮನೆಗಳನ್ನು ಬಾಡಿಗೆಗೆ ಹಿಡಿದು ಒಂದು ಭಾಗದಲ್ಲಿ ಇಬ್ಬರು ಭಾವಂದಿರು-ಅಕ್ಕಂದಿರು, ಇನ್ನೊಂದು ಭಾಗದಲ್ಲಿ ನಾವು ವಾಸಿಸುತ್ತಿದ್ದೆವು. ಮನೆಗಳ ಮುಂಭಾಗದಲ್ಲಿದ್ದ ವಿಶಾಲವಾದ ಆವರಣದಲ್ಲಿ ಒಂದು ಶೆಡ್ ಹಾಕಿ ದೊಡ್ಡ ಭಾವ ನಾಲ್ಕು ಹಸುಗಳನ್ನು ಕಟ್ಟಿದ್ದರು. ನನಗಂತೂ ಬೆಂಗಳೂರಿನಲ್ಲೂ ನನ್ನ ಆತ್ಮನಿವೇದನೆಗೆ ಸಂಗಾತಿಗಳು ಸಿಕ್ಕವಲ್ಲಾ ಎಂದು ಒಂದು ರೀತಿಯ ಸಮಾಧಾನ.

ಭಾಗ್ಯಳ ಸಾವಿನ ಸೂತಕ ತೊಳೆದು ಹಾಕಲಾರದಷ್ಟು ಗಾಢವಾಗಿ ನನ್ನ ಮನಸ್ಸಿಗೆ ಅಂಟಿಕೊಂಡಿದ್ದು ಒಂದೆಡೆಯಾದರೆ ಜ್ಯೋತಿಯ ಪ್ರೀತಿಯ ಪ್ರಸಂಗ ಎಲ್ಲಿಗೆ ಕರೆದೊಯ್ದು ಮುಟ್ಟಿಸುವುದೋ ಎಂಬ ಆತಂಕ ಮತ್ತೊಂದೆಡೆ ಬಾಧಿಸತೊಡಗಿ ನಾನು ಹೈರಾಣಾಗಿ ಹೋಗಿದ್ದೆ. ಅಕ್ಕಂದಿರು, ಭಾವಂದಿರು, ಅಣ್ಣಯ್ಯ ಪರಿಪರಿಯಾಗಿ ನನ್ನ ಕ್ಷೋಭೆಯ ಕಾರಣಗಳನ್ನು ಭೇದಿಸಿ ಸಾಂತ್ವನಗೊಳಿಸಲು ಯತ್ನಿಸಿದರೂ ನನ್ನ ಮೌನವೇ ಎಲ್ಲಕ್ಕೂ ಉತ್ತರವಾಗಿತ್ತು. ಮನೆಯವರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಮನೆಗೆ ತುಂಬಾ ತಡವಾಗಿ ಹೋಗಲು ಪ್ರಾರಂಭಿಸಿದೆ. ಯಾವುದೋ ಸಿನೆಮಾ ಥಿಯೇಟರ್ ನಲ್ಲಿ ರಾತ್ರಿ ಕೊನೇ show ನೋಡಿಕೊಂಡು ಎಲ್ಲರೂ ಮಲಗುವ ವೇಳೆಯಾದ ಮೇಲೆ ಬರುತ್ತಿದ್ದೆ. ಮನೆಯ ಹಿಂಭಾಗದಲ್ಲಿ ದೊಡ್ಡ ಗೋಡೆಯ ರಕ್ಷಣೆಯಿದ್ದು ಪಕ್ಕದ ಓಣಿಯಿಂದ ಬಂದು ಹಿಂಬಾಗಿಲ ಮೂಲಕ ಒಳಬರಬಹುದಿತ್ತು. ಅಮ್ಮ ನನಗಾಗಿ ಆ ಬಾಗಿಲಿಗೆ ಅಗಳಿ ಹಾಕದೇ ಹಾಗೇ ಬಿಟ್ಟಿರುತ್ತಿದ್ದರು.

ಸಾಮಾನ್ಯವಾಗಿ ನಾನು ಬರುವ ತನಕ ಅವರು ಮಲಗುತ್ತಿರಲಿಲ್ಲ. ನಾನು ಬಂದ ಮೇಲೆ ಊಟ ಮಾಡಿರದಿದ್ದರೆ ಬಡಿಸಿಕೊಟ್ಟು ನಂತರವೇ ಮಲಗುತ್ತಿದ್ದರು. ನಾನೂ ಮೆಲ್ಲಗೆ ವರಾಂಡದಲ್ಲಿದ್ದ ನನ್ನ ಮಲಗುವ ಜಾಗಕ್ಕೆ ಹೋಗಿ ಸದ್ದಿಲ್ಲದೇ ಮಲಗಿಬಿಡುತ್ತಿದ್ದೆ. ಮರುದಿನ ಬೆಳಿಗ್ಗೆ ಎಲ್ಲರೂ ಎದ್ದು ಮನೆಯಲ್ಲಿ ಚಟುವಟಿಕೆಗಳು ಆರಂಭವಾಗುವ ಮೊದಲೇ ನಾನು ಸಿದ್ಧವಾಗಿ ಸೈಕಲ್ ಏರಿ ಕೆಲಸಕ್ಕೆ ಹೊರಟುಬಿಡುತ್ತಿದ್ದೆ. ಹೀಗಾಗಿ ಮನೆಯವರೊಂದಿಗೆ ಮುಖಾಮುಖಿಯಾಗುವ ಪ್ರಸಂಗವೇ ಒದಗುತ್ತಿರಲಿಲ್ಲ. ಏನೇ ಆದರೂ ಮನಸ್ಸಿನ ಕಳವಳಗಳು ದೂರವಾಗದೇ ಸದಾ ಚಿಂತೆಯಲ್ಲೇ ಮುಳುಗಿರುತ್ತಿದ್ದೆ.

ಕೊನೆಗೊಂದು ದಿನ ತಡೆಯಲಾರದೇ ಆತ್ಮೀಯ ಗೆಳೆಯ ಕೋದಂಡರಾಮನ ಬಳಿ ನನ್ನ ತಳಮಳಗಳನ್ನೆಲ್ಲಾ ತೋಡಿಕೊಂಡೆ. ನನ್ನ ಮಾತುಗಳನ್ನೆಲ್ಲಾ ಶಾಂತಿಯಿಂದ ಆಲಿಸಿದ ಗೆಳೆಯ ನಿಧಾನವಾಗಿ ಮಾತಾಡತೊಡಗಿದ: ‘ನೀನು-ಜ್ಯೋತಿ ಪರಸ್ಪರರನ್ನು ಇಷ್ಟಪಟ್ಟಿರಬಹುದು. ಸಮಸ್ಯೆ ಇರುವುದು ಇಬ್ಬರ ಜಾತಿಗಳೂ ಬೇರೆ ಬೇರೆ ಅನ್ನುವುದು. ಇಷ್ಟ ಪಡುವುದು, ಪ್ರೀತಿಸುವುದು ಬೇರೆ; ಆ ಪ್ರೀತಿಯನ್ನು ಉಳಿಸಿಕೊಂಡು ಮದುವೆಯಾಗಿ ಪ್ರೀತಿಯಿಂದಿರುವುದು ಬೇರೆ. ಮೊದಲು ನೀನು ಎಲ್ಲಾ ಸಾಧಕ ಬಾಧಕಗಳನ್ನೂ ಅಳೆದು ತೂಗಿ ಒಂದು ತೀರ್ಮಾನಕ್ಕೆ ಬಾ. ನಂತರ ಜ್ಯೋತಿಯ ಜೊತೆ ಮಾತಾಡು. ನಿನ್ನೊಬ್ಬನ ತೀರ್ಮಾನದಿಂದ ಸಮಸ್ಯೆ ಬಗೆ ಹರಿಯುವುದಿಲ್ಲ…’ ಗೆಳೆಯನ ಮಾತನ್ನು ಅರ್ಧದಲ್ಲೇ ಕತ್ತರಿಸಿ ಕೇಳಿದೆ: ‘ಅವಳ ಜತೆ ಮಾತಾಡಲು ನನಗೆ ಭಯ. ಒಂದು ವೇಳೆ ಅವಳು ಆಗುವುದಿಲ್ಲ ಎಂದು ಬಿಟ್ಟರೆ? ಆ ನಿರಾಕರಣೆಯನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ’. ಗೆಳೆಯ ನಕ್ಕು ಹೇಳಿದ: ‘ಅದಕ್ಕೇ ನಿನ್ನನ್ನು ಎಳಸು ಅನ್ನುವುದು. ಒಂದು ಸ್ಪಷ್ಟವಾಗಿ ಅರ್ಥ ಮಾಡಿಕೋ: ಅವಳೊಂದಿಗೆ ಮಾತಾಡದೆ ಏನೂ ತೀರ್ಮಾನವಾಗುವುದಿಲ್ಲ.. ನಿನ್ನ ಸಮಸ್ಯೆ ಬಗೆಹರಿಯುವುದಿಲ್ಲ’. ಗೆಳೆಯನ ಮಾತೇನೋ ಸಮಂಜಸವಾಗಿ ತೋರಿತು. ಆದರೆ ನನ್ನ ತೀರ್ಮಾನ ಹೇಗೆ ಮಾಡಲಿ? ಬದುಕಿನ ಪ್ರತಿ ತಿರುವಿನಲ್ಲೂ, ಬೆಳವಣಿಗೆಯ ಪ್ರತಿಹಂತದಲ್ಲೂ ನನ್ನನ್ನು ಜತನದಿಂದ ನೋಡಿಕೊಂಡು ಕಾಪಿಟ್ಟಿರುವ ಕುಟುಂಬದವರನ್ನು ಬಿಟ್ಟು ಹೋಗಿಬಿಡುವುದಾದರೂ ಹೇಗೆ? ಇದೇ ಚಿಂತೆಯಲ್ಲಿ ಪ್ರತಿದಿನ ಮುಳುಗೇಳುತ್ತಿದ್ದ ವೇಳೆಯಲ್ಲೇ ಮತ್ತೊಂದು ಅನಿರೀಕ್ಷಿತ ಘಟನೆ ನಡೆದುಹೋಯಿತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: