ಶ್ರೀನಿವಾಸ ಪ್ರಭು ಅಂಕಣ – ಸಾಹಿತ್ಯ ಲೋಕದ ವಿರಾಟ್ ಸ್ವರೂಪದ ಪರಿಚಯ ಆಗಿದ್ದು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

16

ಸೆಂಟ್ರಲ್ ಕಾಲೇಜ್ ಕನ್ನಡ ಅಧ್ಯಯನ ಕೇಂದ್ರದಲ್ಲಿ ನನ್ನ ಬಿ ಎ ಆನರ್ಸ್ ಪದವಿ ಶಿಕ್ಷಣ ಆರಂಭವಾಯಿತು. ಆಗ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದವರು ಡಾ.ರಂ. ಶ್ರೀ. ಮುಗಳಿಯವರು; ಕನ್ನಡ ಸಾಹಿತ್ಯ ಚರಿತ್ರೆಯನ್ನು ಸೊಗಸಾಗಿ ದಾಖಲಿಸಿದವರು. ಕನ್ನಡ ಸಾಹಿತ್ಯ ಕ್ಷೇತ್ರದ ಸುಪ್ರಸಿದ್ಧರೆಲ್ಲಾ ನಮ್ಮ ಅಧ್ಯಾಪಕ ವರ್ಗದಲ್ಲಿದ್ದರು. ಡಾ॥ ಜಿ.ಎಸ್. ಶಿವರುದ್ರಪ್ಪನವರು, ಡಾ॥ ಎಂ. ಚಿದಾನಂದ ಮೂರ್ತಿಗಳು, ಡಾ॥ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ಡಾ॥ಕೆ. ಮರುಳಸಿದ್ದಪ್ಪನವರು, ಡಾ॥ ಹಂ. ಪ. ನಾಗರಾಜಯ್ಯನವರು… ಇಂತಹ ವಿದ್ವನ್ಮಣಿಗಳು-ಕವಿಶ್ರೇಷ್ಠರು ನಮಗೆ ಪಾಠ ಮಾಡುತ್ತಾರೆಂಬುದೇ ನಮಗೆ ಹೆಮ್ಮೆಯ-ಗರ್ವದ ಸಂಗತಿಯಾಗಿತ್ತು.

ನಾನು ಸೇರಿದ ಪ್ರಾರಂಭದ ದಿನಗಳಲ್ಲಿ ಎಂ. ವಿ. ಸೀತಾರಾಮಯ್ಯನವರೂ ಒಂದಷ್ಟು ದಿನಗಳು ನಮಗೆ ಪಾಠ ಮಾಡಿದ್ದರು. ಕೊಂಚ ತಡವಾಗಿ ಕನ್ನಡ ಅಧ್ಯಯನ ಕೇಂದ್ರಕ್ಕೆ ಅಧ್ಯಾಪಕರಾಗಿ ಸೇರ್ಪಡೆಯಾದವರು ಡಾ॥ಚಂದ್ರಶೇಖರ ಕಂಬಾರರು. ಮೊದಲ ವರ್ಷದಲ್ಲಿ ಇಂಗ್ಲೀಷ್ ಕೂಡಾ ಒಂದು ಮುಖ್ಯ ವಿಷಯವಾಗಿತ್ತು. ಪ್ರೊ॥ಎಸ್.ರಾಮಸ್ವಾಮಿಗಳು ಹಾಗೂ ಪಿ.ಲಂಕೇಶ್ ಅವರು ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.

ನನ್ನ ಮೆಚ್ಚಿನ ವಿಷಯವನ್ನೇ ಪಠ್ಯವಾಗಿಯೂ ಓದುತ್ತಿದ್ದುದರಿಂದ ಹೊಸ ಉತ್ಸಾಹ-ಸಂಭ್ರಮಗಳಿಂದ ಕಾಲೇಜ್ ಗೆ ಹೋಗುತ್ತಿದ್ದೆ. ಪ್ರತಿನಿತ್ಯ ಜಯನಗರದಿಂದ ಕಾಲೇಜ್ ಗೆ ಅಣ್ಣಯ್ಯನೊಡನೆ ಬಸ್ ನಲ್ಲಿ ಪ್ರಯಾಣ. ಅಮ್ಮ ಕಟ್ಟಿಕೊಡುತ್ತಿದ್ದ ಊಟದ ಡಬ್ಬಿಯನ್ನು ಚೀಲಕ್ಕೆ ಹಾಕಿಕೊಂಡು, ಭ್ರೂಮಧ್ಯೆ ಕುಂಕುಮ ಇಟ್ಟುಕೊಂಡು ಇಬ್ಬರೂ ಹೊರಡುತ್ತಿದ್ದೆವು. ಈ ವೇಳೆಗಾಗಲೇ ವಿಭೂತಿ ಪಟ್ಟೆ ಎಳೆದುಕೊಳ್ಳುವುದು ಬಿಟ್ಟು ಹೋಗಿತ್ತು. ಹೈಸ್ಕೂಲ್ ಹಾಗೂ ಪಿ ಯು ಸಿ ಗಳಲ್ಲಿ ಕೇವಲ ಕೆಲ ಗದ್ಯ-ಪದ್ಯ ಭಾಗಗಳನ್ನು ಓದಿ ತೃಪ್ತನಾಗಿದ್ದ ನನಗೆ ನಿಧಾನವಾಗಿ ಕನ್ನಡ ಸಾಹಿತ್ಯ ಲೋಕದ ವಿರಾಟ್ ಸ್ವರೂಪದ ಪರಿಚಯ ಆಗತೊಡಗಿತು.

ಕಾವ್ಯಮೀಮಾಂಸೆ, ಪ್ರಾಚೀನ ಕನ್ನಡ ಕಾವ್ಯಗಳು, ಕಥಾ ಸಾಹಿತ್ಯ, ಭಾಷಾ ವಿಜ್ಞಾನ, ಕನ್ನಡ ನಾಟಕ ಪರಂಪರೆ, ಜನಪದ ಸಾಹಿತ್ಯ, ನವೋದಯ ಸಾಹಿತ್ಯ… ಹೀಗೆ ಒಂದೊಂದೇ ಬಾಗಿಲು ತೆರೆಯುತ್ತಾ ಹೋದಂತೆ ಒಂದೊಂದು ಹೊಸ-ಅಪೂರ್ವ ಲೋಕದ ಅನಾವರಣವಾಗುತ್ತಾ ಕನ್ನಡ ಸಾಹಿತ್ಯ ಇನ್ನಿಲ್ಲದಂತೆ ಬೆರಗು ಹುಟ್ಟಿಸಿ ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟಿತು. ಅದರಲ್ಲೂ ನಾಟಕ ನನ್ನ ಅತ್ಯಂತ ಇಷ್ಟದ ಪ್ರಕಾರವಾದ್ದರಿಂದ ಆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಮರುಳಸಿದ್ದಪ್ಪನವರು ಹಾಗೂ ಕಂಬಾರರು ನನ್ನ ಮೆಚ್ಚಿನ ಅಧ್ಯಾಪಕರಾಗಿಬಿಟ್ಟರು. ನಾನು ಆಗಿನಿಂದಲೇ ನಾಟಕಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಕೊಳ್ಳಲೂ ಸಹಾ ಈ ಇಬ್ಬರು ಮೇಷ್ಟ್ರುಗಳ ಪ್ರೋತ್ಸಾಹವೇ ಮುಖ್ಯ ಕಾರಣವಾಯಿತು.

ಕಾಲೇಜ್ ಗೆ ಸೇರಿದ ಕೆಲವೇ ದಿನಗಳಲ್ಲಿ ಬಂದ ಒಂದು ಸುದ್ದಿಯಿಂದ ನನ್ನ ಸಂತಸಕ್ಕೆ ಪಾರವೇ ಇಲ್ಲವಾಯಿತು! ಪಿ ಯು ಸಿ ಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದ ಮಾನದಂಡದ ಮೇಲೆ ನಾನು Subject scholar ಆಗಿ ಆಯ್ಕೆಯಾಗಿದ್ದೆ! ವರ್ಷಕ್ಕೆ 700ರೂಪಾಯಿಗಳ scholarship ನನ್ನದಾಗಿತ್ತು! ಮಿಂಚಿಯೊಂದಿಗೆ ಕೂತು ಕೆಲ ತಿಂಗಳುಗಳ ಹಿಂದಷ್ಟೇ ಮಾಡಿಕೊಂಡಿದ್ದ ನಿರ್ಧಾರ-ಕಂಡ ಕನಸುಗಳಲ್ಲಿ ಒಂದು ನಿರೀಕ್ಷೆಗಿಂತ ವೇಗವಾಗಿ ಈಡೇರಿಬಿಟ್ಟಿತ್ತು!

ತರಗತಿಗಳು ಪ್ರಾರಂಭವಾದ ಕೆಲದಿನಗಳಲ್ಲಿಯೇ ಕಾಲೇಜಿನ ಡಿಬೇಟ್ ತಂಡಕ್ಕೆ ಆಯ್ಕೆಮಾಡಲು ನಮ್ಮ ತರಗತಿಯಲ್ಲಿ ಒಂದು ಚರ್ಚಾಸ್ಪರ್ಧೆಯನ್ನು ಏರ್ಪಡಿಸಿದರು. ಚರ್ಚೆಯ ವಿಷಯ: ‘ಆಧುನಿಕ ಭಾರತದಲ್ಲಿ ಮಹಿಳೆಯ ಸ್ಥಾನಮಾನಗಳು ಕುಸಿದಿವೆಯೇ?’. ಅಣ್ಣನ ಸಹಾಯದಿಂದ ಸಾಕಷ್ಟು ಟಿಪ್ಪಣಿಗಳನ್ನು ಮಾಡಿಕೊಂಡು ತಯಾರಿ ನಡೆಸಿದೆ. ಚರ್ಚೆಯ ದಿನ ನಮ್ಮ ನಾಲ್ಕಾರು ಅಧ್ಯಾಪಕರು ಚರ್ಚಾಪಟುಗಳ ಮೌಲ್ಯಮಾಪನಕ್ಕಾಗಿ ಬಂದಿದ್ದರು.

ನಾನು ನನ್ನ ರೂಢಿಗತ ಶೈಲಿಯಲ್ಲಿ, ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ; ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ- ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ, ಗೌರವಿತರಾಗುತ್ತಾರೋ ಅಂಥಲ್ಲಿ ದೇವತೆಗಳು ಸಂತಸದಿಂದ ನೆಲೆಸುತ್ತಾರೆ; ಎಲ್ಲಿ ನಾರಿಯರಿಗೆ ಗೌರವ ಸಲ್ಲುವುದಿಲ್ಲವೋ ಅಲ್ಲಿ ಎಲ್ಲ ಕ್ರಿಯೆಗಳೂ ನಿಷ್ಪಲವಾಗುತ್ತವೆ… ಸನ್ಮಾನ್ಯ ಅಧ್ಯಾಪಕರೇ ಹಾಗೂ ಸಹಪಾಠಿಗಳೇ, ಈ ಸ್ಮೃತಿ ಶ್ಲೋಕದೊಂದಿಗೆ ನಾನು ನನ್ನ ವಿಚಾರ ಮಂಡನೆಯನ್ನು ಆರಂಭಿಸುತ್ತೇನೆ’ ಎಂದು ಶುರುಮಾಡಿ ಸುಮಾರು ಐದು ನಿಮಿಷಗಳ ಕಾಲ ಭಾಷಣ ಮಾಡಿದೆ.ರಂ. ಶ್ರೀ. ಮುಗಳಿ ಯವರಂತೂ ನನ್ನ ಮಾತುಗಳನ್ನು ಬಹುವಾಗಿ ಮೆಚ್ಚಿಕೊಂಡು ಪ್ರೀತಿಯಿಂದ ತಲೆಸವರಿ ಆಶೀರ್ವದಿಸಿದ್ದು ನನಗಿನ್ನೂ ನೆನಪಿದೆ. ಅನಂತರ ಅನೇಕ ಚರ್ಚಾಸ್ಪರ್ಧೆಗಳಲ್ಲಿ ನಾನು ಸೆಂಟ್ರಲ್ ಕಾಲೇಜನ್ನು ಪ್ರತಿನಿಧಿಸಿ ಭಾಗವಹಿಸಿದ್ದೆ.

ಕಾಲೇಜಿನಿಂದ ಮನೆಗೆ ಹೋಗುವಾಗ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಸಾಮಾನ್ಯವಾಗಿ ಬಸ್ ನಲ್ಲಿ ಜಾಗ ಸಿಕ್ಕುತ್ತಿರಲಿಲ್ಲ. ಜಯನಗರಕ್ಕೆ ಹೋಗುವ ನಮ್ಮ ಬಸ್ ರೈಲ್ವೆ ಸ್ಟೇಷನ್ ಬಳಿಯ ನಿಲ್ದಾಣದಿಂದ ಹೊರಡುತ್ತಿತ್ತು. ಹಾಗಾಗಿ ಕಾಲೇಜಿನಿಂದ ಅಲ್ಲಿಯ ತನಕ ನಡೆದುಕೊಂಡು ಹೋಗಿ ಸರತಿ ಸಾಲಿನಲ್ಲಿ ಒಂದಷ್ಟು ಹೊತ್ತು ನಿಂತು ಬಸ್ ಹತ್ತುತ್ತಿದ್ದೆ. ಹಾಗೆ ನಡೆದು ಹೋಗುವುದು ನನಗೆ ಅತ್ಯಂತ ಪ್ರಿಯವಾದ ಕೆಲಸವೇ ಆಗಿತ್ತು! ಏಕೆಂದರೆ ನನ್ನ ನಡಿಗೆಯ ದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಸಿನಿಮಾ ಥಿಯೇಟರ್ ಗಳು! ಮೇನಕಾ, ಸಾಗರ್, ಸ್ಟೇಟ್ಸ್ ಕೆಂಪೇಗೌಡ, ಅಲಂಕಾರ್, ಸಂತೋಷ್, ನರ್ತಕಿ (ಇವೆರಡೂ ಕೊಂಚ ತಡವಾಗಿ ಆರಂಭವಾದುವು), ಹಿಮಾಲಯ, ಮೆಜೆಸ್ಟಿಕ್, ಸಂಗಂ,ತ್ರಿವೇಣಿ…. ಒಂದೊಂದು ಥಿಯೇಟರನ್ನೂ ಹಾದು ಹೋಗುವ ವೇಳೆ ಒಂದೆರಡು ಗಳಿಗೆ ನಿಂತು ಅಲ್ಲಿ ಪ್ರದರ್ಶಿಸಿದ ಪೋಸ್ಟರ್ ಗಳನ್ನು ಕಣ್ತುಂಬಿಕೊಂಡು ನಿಧಾನವಾಗಿ ನಡೆಯುತ್ತಿದ್ದೆ. ಎಂದು ಈ ಚಿತ್ರಗಳನ್ನೆಲ್ಲಾ ನೋಡುವ ಭಾಗ್ಯ ಸಿಗುತ್ತದೋ ಎಂಬ ಒಂದು ಸಣ್ಣ ಹಳಹಳಿಕೆಯೊಂದಿಗೆ ನನ್ನ ನಡಿಗೆ ಸಾಗುತ್ತಿತ್ತು.

ತೀರಾ ಇತ್ತೀಚೆಗೆ ನನ್ನ ಹಳೆಯ ಗೆಳೆಯರಿಬ್ಬರ ಮನೆಗಳಲ್ಲಿ ಸಂತೋಷ ಕೂಟಗಳು ಜರುಗಿದವು. ಅವರು ಇತ್ತೀಚೆಗೆ ಕೊಂಡ flat ಗಳ ಗೃಹ ಪ್ರವೇಶ ಈ ಸಂತೋಷಕೂಟಕ್ಕೆ ಒಂದು ಕಾರಣವಾದರೆ ನಮ್ಮ ಸ್ನೇಹಬಂಧದ ಸುವರ್ಣ ಮಹೋತ್ಸವವನ್ನು ಆಚರಿಸುವುದು ಎರಡನೆಯ ಮುಖ್ಯ ಕಾರಣ. ಮಾಧವಮೂರ್ತಿ, ನಾಗೇಶ್, ದ್ವಾರಕಾನಾಥ್, ಬಾಲಾಜಿ, ರಮೇಶ್, ರಘುನಂದನ್ (ವಿಜಿ), ಲಕ್ಷ್ಮೀನರಸಿಂಹ (ಲಕ್ಷ್ಮೀಶ) ಹಾಗೂ ನಾನು…. ನಾವೆಲ್ಲರೂ ಐವತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ಜಯನಗರದಲ್ಲಿ ಪರಸ್ಪರ ಸಂಪರ್ಕಕ್ಕೆ ಬಂದವರು; ಇಂದಿಗೂ ಆಗಾಗ್ಗೆ ಭೇಟಿಯಾಗುತ್ತಿರುತ್ತೇವೆ… ಕೊನೆಯಪಕ್ಷ ಉಭಯ ಕುಶಲೋಪರಿಗಳನ್ನಾದರೂ ವಿನಿಮಯ ಮಾಡಿಕೊಳ್ಳುತ್ತಿರುತ್ತೇವೆ.

ನಮ್ಮ ಗುಂಪಿನಲ್ಲಿಯೇ ಇದ್ದ ಸೀನು, ಗುರುರಾಜ ಹಾಗೂ ಗೋಪಾಲಿ ಏನೋ ಬಹಳ ತುರ್ತು ಕೆಲಸವಿದ್ದವರಂತೆ ನಮ್ಮನ್ನು ಬಿಟ್ಟು ಮರಳಿ ಬಾರದ ಲೋಕಕ್ಕೆ ನಡೆದು ಬಿಟ್ಟಿದ್ದಾರೆ.. ನೆನಪಿನ ಗಣಿಯನ್ನು ಅಗೆಯುತ್ತಾ ಹೋದರೆ ಈ ಗೆಳೆಯರೊಂದಿಗಿನ ಅನೇಕ ಸಂಗತಿಗಳು—ಘಟನೆಗಳು ಹೊನ್ನಲೇಪದೊಂದಿಗೆ ಚಿಮ್ಮಿಬರುತ್ತವೆ.. ಅವುಗಳನ್ನು ಸಂದರ್ಭೋಚಿತವಾಗಿ ನೆನಪಿಸಿಕೊಳ್ಳುತ್ತೇನೆ. ಎಲ್ಲಕ್ಕಿಂತ ಸ್ವಾರಸ್ಯಕರ ವಿಷಯವೆಂದರೆ ನಾವು ಅಷ್ಟೂ ಜನ ಸ್ನೇಹಿತರು ಬೇರೆ ಬೇರೆ ವಿಷಯಗಳಲ್ಲಿ ಪದವಿ-ಸ್ನಾತಕೋತ್ತರ ಪದವಿಗಳನ್ನು ಪಡೆದವರು… ಬೇರೆ ಬೇರೆ ಕ್ಷೇತ್ರಗಳಲ್ಲಿ ಸೃಜನಾತ್ಮಕವಾಗಿ ತೊಡಗಿಕೊಂಡವರು. ಆದರೆ ಅದಾವುದೂ ನಮ್ಮ ಗಟ್ಟಿ ಸ್ನೇಹಕ್ಕೆ ತೊಡಕಾಗಿಲ್ಲ; ಪರಸ್ಪರ ಸಂವಹನಕ್ಕೆ ತೊಂದರೆಯಾಗಿಲ್ಲ. ಈ ನನ್ನ ಸ್ನೇಹಿತರ ತಂಡ ನನ್ನ ಹೆಮ್ಮೆಯಷ್ಟೇ ಅಲ್ಲ, ನನ್ನ ಅಮೂಲ್ಯ ಆಸ್ತಿ!!

ಗೆಳೆಯ ನಾಗೇಶನ ಮನೆ ಇದ್ದುದು ಹದಿನೆಂಟನೇ ಮುಖ್ಯರಸ್ತೆಯಲ್ಲಿ… ನಾವು ಗೆಳೆಯರೆಲ್ಲ ಒಟ್ಟಿಗೆ ಸೇರುತ್ತಿದ್ದುದು ಇಲ್ಲಿಯೇ. ಒಂದು ರೀತಿಯಲ್ಲಿ ಅವರ ಮನೆ ನಮ್ಮ head quarters ಆಗಿತ್ತು ಎಂದು ಹೇಳಬಹುದು. ಅವರ ಮನೆಯ ಮುಂದೆಯೇ ಇದ್ದ ಮೈದಾನದಲ್ಲಿ ನಾವು ಒಮ್ಮೊಮ್ಮೆ cricket.. ಒಮ್ಮೊಮ್ಮೆ badminton ಆಡಿ ದಣಿದು, ನಾಗೇಶನ ಮನೆಗೆ ಬಂದು ಕೇರಂ ಅಥವಾ bridge ಆಟ ದಲ್ಲಿ ತೊಡಗುತ್ತಿದ್ದೆವು. ನಾಗೇಶನ ತಂದೆ ಸುಬ್ರಹ್ಮಣ್ಯ ಅವರು ಬಹಳ ಒಳ್ಳೆಯ ಕೇರಂ ಆಟಗಾರರು.

ನಾಗೇಶನ ತಾಯಿ ಸುಶೀಲಮ್ಮನವರು ಏನೇ ವಿಶೇಷ ಮಾಡಿದ್ದರೂ ನಮಗೆಲ್ಲಾ ಕೊಟ್ಟು ಸಂಭ್ರಮಿಸುತ್ತಿದ್ದರು. ನಾಗೇಶನ ಮನೆ ನನಗಂತೂ ಎರಡನೆಯ ಮನೆಯೇ ಆಗಿಬಿಟ್ಟಿತ್ತು. ಅಂತೆಯೇ ಮಾಧುವಿನ ಮನೆ ಕೂಡಾ. ಮಾಧುವಿನ ತಾಯಿ ಲಕ್ಷ್ಮಮ್ಮನವರಿಗೆ ನನ್ನ ಮೇಲೆ ವಿಶೇಷ ಪ್ರೀತಿ – ಅಕ್ಕರೆ. ಮೊನ್ನೆ ಭೇಟಿಯಾದಾಗಲೂ ನನ್ನ ಪತ್ನಿಯ ಬಳಿ, ‘ನನ್ನ ಕೂಸು ಕಣೇ ಇದು’ ಎಂದು ಭಾವುಕರಾಗಿ ನುಡಿದಿದ್ದರು. ಮಾಧು ನಮ್ಮ ತಂಡದ ನಾಯಕ ಅನ್ನಬಹುದಾದರೆ ನಾಗೇಶ ಉಪನಾಯಕ ಅನ್ನಬಹುದೇನೋ! ನಾಗೇಶನ ಮನೆಯಲ್ಲಂತೂ ಸದಾ ಪ್ರೀತಿ -ವಿಶ್ವಾಸ -ಸ್ನೇಹಪರತೆ- ಜೀವನೋತ್ಸಾಹಗಳು ಉಕ್ಕಿ ಹರಿಯುತ್ತಿದ್ದ ವಾತಾವರಣ.

ನಾಗೇಶನ ಅಕ್ಕ ಸುಧಾ ನಮ್ಮೆಲ್ಲರಿಗೂ ಅಕ್ಕನೇ ಆಗಿಬಿಟ್ಟಿದ್ದಳು. ಈ ಸುಧಕ್ಕ ಸೊಗಸಾಗಿ ಹಾಡುತ್ತಿದ್ದಳು ಕೂಡಾ! (ಈಗಲೂ ಸಹಾ!) ಅವಳ ಮದುವೆಯ ಸಂದರ್ಭದಲ್ಲಿ ನಮ್ಮ ಇಡೀ ಗೆಳೆಯರ ತಂಡ ನಾಗೇಶನ ಜೊತೆಗೆ ಯಾವ ಪರಿ ನೆರವಿಗೆ ನಿಂತುಬಿಟ್ಟಿತ್ತೆಂದರೆ ಮದುವೆ ಮುಗಿದ ಮೇಲೆ ಯಾರೋ ನೆಂಟರು ನಾಗೇಶನ ತಂದೆಯವರನ್ನು ಆಶ್ಚರ್ಯದಿಂದ ಕೇಳಿದ್ದರು: ‘ಈ ಹುಡುಗರೆಲ್ಲಾ ಯಾರು ಸುಬ್ಬೂ? ಎಷ್ಟು ಕೆಲಸ ಮಾಡ್ತಿದಾರೆ!’ ನಾಗೇಶನ ತಂದೆ, ‘ಎಲ್ಲಾ ನನ್ನ ಮಕ್ಕಳೇ ಕಣ್ರಯ್ಯ.. ಯಾಕೆ?ಅನುಮಾನಾನಾ?’ ಎಂದು ಗರ್ವದಿಂದ ಮರು ಪ್ರಶ್ನಿಸಿದ್ದರು. ಹಾಗೆ ಹೇಳುವಾಗ ಅವರ ಕಣ್ಣು ತೇವವಾಗಿತ್ತು.

ನಳಿನಿ ಅಕ್ಕನ ಮದುವೆಯಾಗಿದ್ದು 1971ರಲ್ಲಿ. ಆ ವೇಳೆಗಾಗಲೇ ಅಕ್ಕ ಬೆಂಗಳೂರಿನ ಏಜೀಸ್ ಆಫೀಸ್ ನಲ್ಲಿ ಕೆಲಸಕ್ಕೆ ಸೇರಿಯಾಗಿತ್ತು. ಮೂರ್ತಿ ಮಾವಯ್ಯನವರು ಭಿಲೈನ ಮೆಕಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಬಿ ಎ ಆನರ್ಸ್ ಎರಡನೇ ವರ್ಷದಲ್ಲಿ ಓದುತ್ತಿದ್ದೆ. ನಳಿನಿ ಅಕ್ಕನ ಮದುವೆಗೆ ಹಣ ಹೊಂದಿಸುವ ಸಂಬಂಧವಾಗಿ ಅಣ್ಣ ಒತ್ತಡ – ಉದ್ವೇಗಗಳಿಗೆ ಒಳಗಾಗಿದ್ದು ಹಾಗೂ ಮೂರ್ತಿಮಾವಯ್ಯನವರು ಆ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳ ಬಗ್ಗೆ ಈಗಾಗಲೇ ಹೇಳಿದ್ದೇನಷ್ಟೇ. ಈಗ ಮದುವೆಯ ದಿನ ನಿಶ್ಚಿತವಾದ ಸಂದರ್ಭದಲ್ಲಿ ಮತ್ತೊಂದು ಸ್ವಾರಸ್ಯಕರ ಘಟನೆ ನಡೆಯಿತು.

ಅಣ್ಣನ ನೂರೆಂಟು ಸಾಹಸಗಾಥೆಗಳಲ್ಲಿ ಒಂದೆರಡು ಅವರ ಕೃಷಿ ಮೋಹಕ್ಕೂ ಸಂಬಂಧ ಪಟ್ಟವು. ಒಮ್ಮೆ ಹೀಗಾಯಿತು: ಚಾಟಿ ಬೋರನೆಂದು ಬಿರುದಾಂಕಿತನಾದ ಗಿರಿಯನೆಂಬ ವ್ಯಕ್ತಿ ಅಣ್ಣನ ಬಳಿ ಬಂದು, ‘ಇಂದಿ ಮೇಟ್ರೆ, ಇಲ್ಲಿಂದ ಎರಡು ಮೈಲಿ ಒಳಗೇ ಅಗ್ರಹಾರಕ್ಕೆ ಮುದ್ಲೆ, ಬಾರಿ ಒಳ್ಳೇ ಒಲಾ ಐತೆ.. ನಾಕೆಕರೆ.. ನೀವು ಹೂಂ ಅಂದ್ರೆ ಸಸ್ತಾ ರೇಟಿಗೆ ಕುದುರಿಸಿಬಿಡ್ತೀನಿ’ ಎಂದು ಗಾಳ ಹಾಕಿದ. ಅಣ್ಣನೂ ಉಮೇದಿಗೆ ಬಿದ್ದು ಯಾರ ಸಲಹೆಯನ್ನೂ ಕೇಳದೆ, ಮೂರೂವರೆ ಸಾವಿರ ರೂಪಾಯಿಗೆ ಆ ಹೊಲ ವನ್ನು ಖರೀದಿ ಮಾಡಿಬಿಟ್ಟರು! ಅದು ನೋಡಿದರೆ ಬೋರೆಯ ಮೇಲೆ ಇದ್ದ ಹೊಲ… ಅಲ್ಲಿಗೆ ನೀರು ಹಾಯುವುದೇ ಕಷ್ಟ.. ತುಡುಗುದನಗಳ ಕಾಟ ಬೇರೆ… ಅಣ್ಣ ಎಷ್ಟೇ ಕಷ್ಟ ಪಟ್ಟರೂ ಒಳ್ಳೇ ಫಸಲಾಗಲಿಲ್ಲ. ಅಣ್ಣ ನಿರಾಶರಾಗಿ ಕೃಷಿ ಮೋಹವನ್ನು ಬಿಟ್ಟು ವ್ಯಾಪಾರ ಮುಂದುವರಿಸಿದರು.

ನಳಿನಿ ಅಕ್ಕನ ಮದುವೆ ತಮ್ಮ ತಮ್ಮನೊಂದಿಗೆ ನಿಶ್ಚಯವಾದ ಈ ಸಂದರ್ಭದಲ್ಲಿ ನಾಗರಾಜ ಭಾವನಿಗೆ ಹಲ ವರ್ಷಗಳ ಹಿಂದಿನ ಈ ಹೊಲದ ಖರೀದಿಯ ವಿಷಯ ನೆನಪಿಗೆ ಬಂತು! ತಮ್ಮ ಆಜ್ಞಾನುವರ್ತಿಯೂ, ಸಾಕಷ್ಟು ಉಳ್ಳವನೂ ಆಗಿದ್ದ ಚಿಕ್ಕಣ್ಣಶೆಟ್ಟಿಯನ್ನು ಕರೆದು, ‘ಚಿಕ್ಕಣ್ಣ, ಬೋರೆ ಮೇಲೆ ನಮ್ಮ ಮಾವನೋರ್ದು ನಾಕು ಎಕರೆ ಹೊಲ ಇದೆ.. ಮಗಳ ಮದುವೆಗೆ ಹಣ ಹೊಂದಿಸೋದಕ್ಕೆ ಅವರು ಪರದಾಡ್ತಿದಾರೆ.. ನಿಂಗೆ ಆ ಹೊಲಾನ ಎಂಟು ಸಾವಿರಕ್ಕೆ ಕೊಡಿಸ್ತೀನಿ.. ತೊಗೋ.. ನಿಂಗೂ ಪುಣ್ಯ ಬರುತ್ತೆ.. ದೇವರು ಕಣ್ಣು ಬಿಟ್ರೆ ಒಳ್ಳೇ ಫಸಲೂ ಬೆಳೀಬಹುದು’ ಎಂದರು.

ಚಿಕ್ಕಣ್ಣ ಶೆಟ್ರಾದರೂ ಚೂರೂ ತಡಮಾಡದೆ, ‘ಅಯ್ಯನೋರು ಕನ್ಯಾದಾನ ಮಾಡೋದಕ್ಕೆ ಸಹಾಯ ಮಾಡೋದಕ್ಕಿಂತ ಪುಣ್ಯದ ಕೆಲಸ ಯಾವುದಿದೆ ಬಿಡಿ ಸ್ವಾಮಿ’ ಅಂದವರೇ ಕಾಗದ ಪತ್ರ ಮಾಡುವುದಕ್ಕೂ ಮುಂಚೆಯೇ ಎಂಟು ಸಾವಿರ ತಂದು ಭಾವನವರ ಕೈಗೆ ಕೊಟ್ಟುಬಿಟ್ಟರು. ಅಣ್ಣನಂತೂ, ‘ಹತ್ತಿರದ ಬಂಧುಗಳೇ ಕೈ ಹಿಡಿಯಲಿಲ್ಲ.. ಈ ಪುಣ್ಯಾತ್ಮನದು ಎಂಥಾ ದೊಡ್ಡ ಮನಸ್ಸು ನೋಡಿ.. ಇಂಥವರು ಇನ್ನೂ ಕೆಲವರಾದರೂ ಇರೋದರಿಂದಲೇ ಒಂದಿಷ್ಟು ಮಳೆ ಬೆಳೆ ಆಗ್ತಿದೆ ಅಂತ ಕಾಣುತ್ತೆ’ ಎಂದು ಗದ್ಗದಿತರಾದರು. ಆ ಹಣದಲ್ಲಿಯೇ ಅಣ್ಣ ನಿರಾಳವಾಗಿ, ಸರಳವಾಗಿ, ಅಚ್ಚುಕಟ್ಟಾಗಿ ನಳಿನಿ ಅಕ್ಕನ ಮದುವೆಯನ್ನು ಶ್ರೀನಿವಾಸ ಮೂರ್ತಿಯವರ ಜೊತೆ ಮಾಡಿ ಮುಗಿಸಿದರು. ಅದುವರೆಗೆ ಮೂರ್ತಿ ಮಾವಯ್ಯನವರಾಗಿದ್ದವರನ್ನು ಅಂದಿನಿಂದ ನಾವು ಚಿಕ್ಕ ಭಾವ ಎಂದು ಕರೆಯತೊಡಗಿದೆವು.

| ಇನ್ನು ನಾಳೆಗೆ |

‍ಲೇಖಕರು Admin

September 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: