ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 134
ಕನ್ನಡ ಹವ್ಯಾಸಿ ರಂಗಭೂಮಿಯ ಒಂದು ಪ್ರಮುಖ ತಂಡ ‘ನಟರಂಗ’. ಶ್ರೇಷ್ಠ ನಟ—ನಿರ್ದೇಶಕ ಸಿ.ಆರ್. ಸಿಂಹ, ಪ್ರಸಿದ್ಧ ನಟ ಲೋಕೇಶ್, ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ಅತ್ಯುತ್ತಮ ನಟರಾದ ವೆಂಕಟರಾವ್, ಶಂಕರ ರಾವ್ , ಜಯರಾಜ್ , ರಾಜಾರಾಂ ಹಾಗೂ ಮತ್ತೂ ಅನೇಕ ಪ್ರತಿಭಾವಂತರು ಒಟ್ಟುಗೂಡಿ ಮುನ್ನಡೆಸುತ್ತಿದ್ದ ‘ನಟರಂಗ’ ತಂಡ ಕನ್ನಡ ರಂಗಭೂಮಿಗೆ ಅನೇಕ ಅತ್ಯುತ್ತಮ ಕೊಡುಗೆಗಳನ್ನು ನೀಡಿದೆ. ಮೃಚ್ಫಕಟಿಕ, ತುಘಲಕ್ , ಒಥೆಲೋ ಮುಂತಾದುವೆಲ್ಲಾ ರಂಗಭೂಮಿಯಲ್ಲಿ ಸಂಚಲನ ಮೂಡಿಸಿದಂತಹ ಪ್ರಯೋಗಗಳು. ಈ ಶತಮಾನದ ಮೊದಲ ದಶಕಾರ್ಧದಲ್ಲಿ ಈ ಪ್ರತಿಷ್ಠಿತ ರಂಗತಂಡಕ್ಕೆ ಒಂದು ನಾಟಕ ನಿರ್ದೇಶಿಸುವ ಸುವರ್ಣಾವಕಾಶ ಒದಗಿಬಂದಿತು. ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ಒಂದು ದಿನ ಭೇಟಿಯಾಗಿ, “ನಮ್ಮ ನಟರಂಗ ತಂಡಕ್ಕೆ ಜಿ.ಬಿ.ಯವರ ಒಂದು ನಾಟಕವನ್ನು ಮಾಡಿಸಲು ಆದೀತೇ?” ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡೆ.
‘ಜಡಭರತ’ ಕಾವ್ಯ ನಾಮಾಂಕಿತರಾದ ಜಿ.ಬಿ ಜೋಶಿಯವರು ಕನ್ನಡದ ಒಬ್ಬ ಪ್ರಮುಖ ನಾಟಕಕಾರರು. ಅವರ ‘ಸತ್ತವರ ನೆರಳು’ ನಾಟಕ ಬಿ.ವಿ.ಕಾರಂತ ಮೇಷ್ಟ್ರ ನಿರ್ದೇಶನದಲ್ಲಿ ಪ್ರಯೋಗಗೊಂಡು ಆ ಸಮಯದ ಅತ್ಯಂತ ಯಶಸ್ವೀ ಪ್ರಯೋಗಗಳಲ್ಲಿ ಒಂದಾಗಿ ನೂರಾರು ಪ್ರದರ್ಶನಗಳನ್ನು ಕಂಡಿತಲ್ಲದೆ ಇಂದಿನವರೆಗೂ ಅದೇ ಜನಪ್ರಿಯತೆಯನ್ನು ಕಾದುಕೊಂಡು ಈಗಲೂ ತುಂಬಿದ ಪ್ರೇಕ್ಷಾಗೃಹಗಳಿಗೆ ಪ್ರದರ್ಶಿತವಾಗುತ್ತಿದೆ. ಈ ನಾಟಕದ ರಂಗಪ್ರಯೋಗವಾದದ್ದು ಬೆನಕ ತಂಡದ ವತಿಯಿಂದ. ನನಗೆ ನೆನಪಿರುವ ಮಟ್ಟಿಗೆ ಇದರ ಪ್ರಥಮ ಪ್ರದರ್ಶನವನ್ನು ನಾನು ನೋಡಿದ್ದು ನಾನು ಕನ್ನಡ ಎಂ ಎ ಪದವಿಗೆ ಓದುತ್ತಿದ್ದ ಸಂದರ್ಭದಲ್ಲಿ ಅಂದರೆ ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ!ಮುಂದೆ ಬೆನಕ ತಂಡದ ವತಿಯಿಂದಲೇ ನಾವು ಹ್ಯಾಮ್ಲೆಟ್ ನಾಟಕವನ್ನು ಪ್ರದರ್ಶಿಸಿದ ಸಂದರ್ಭದಲ್ಲಿ ಅಂದರೆ ಎಂಬತ್ತರ ದಶಕದ ಆರಂಭದಲ್ಲಿ ‘ಸತ್ತವರ ನೆರಳು’ ನಾಟಕದ ಮರುಪ್ರದರ್ಶನಗಳಾದಾಗ ನಾನೂ ಸಹಾ ಚಿಕ್ಕ ಪುಟ್ಟ ಪಾತ್ರನಿರ್ವಹಣೆ ಮಾಡಿದ್ದುಂಟು! ‘ಸತ್ತವರ ನೆರಳು’ ಕನ್ನಡ ರಂಗಭೂಮಿಯ ಒಂದು ಬಹು ಚರ್ಚಿತ ಪ್ರಯೋಗ ಕೂಡಾ.
ಜಿ.ಬಿ.ಜೋಶಿಯವರ ನಾಟಕದ ಒಟ್ಟು ಸ್ವರೂಪವನ್ನೇ ಬದಲಿಸಿ ಕಾರಂತ ಮೇಷ್ಟ್ರು ದಾಸಮೇಳವನ್ನು ನಿರೂಪಕರಾಗಿ ರೂಪಿಸಿಕೊಂಡು ದಾಸರ ಪದಗಳನ್ನು ಹೇರಳವಾಗಿ ಬಳಸಿಕೊಂಡು ಒಂದು ಸಂಗೀತ ಪ್ರಧಾನ ನಾಟಕವಾಗಿ ರೂಪಿಸಿದ್ದು ಅನೇಕ ವಿಮರ್ಶಕರಿಗೆ ಒಪ್ಪಿಗೆಯಾಗಿರಲಿಲ್ಲ. ‘ಹಾಡು ಕುಣಿತದ ರಂಜನೆಯಡಿ ನಾಟಕದ ಸಂದೇಶ ನಲುಗಿಹೋಯಿತೇ ಎಂದು ಅನುಮಾನ —ಆಕ್ಷೇಪ ದೊಡ್ಡ ದನಿಯಲ್ಲಿಯೇ ವ್ಯಕ್ತವಾಯಿತು. ಅಂತೆಯೇ ‘ರಂಗ ಸಂಗೀತ’ಕ್ಕೆ ಒಂದು ಸ್ವರೂಪವನ್ನು ಕಟ್ಟಿಕೊಡುವುದರಲ್ಲಿ ಕಾರಂತರು ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆಂದು ಶ್ಲಾಘಿಸಿದವರೂ ಉಂಟು! ಕಾರಂತರು ಹೀಗೆ ರೂಪಾಂತರಗೊಳಿಸಿದ್ದು ಸ್ವತಃ ಜಿ.ಬಿ.ಯವರಿಗೆ ಅಸಮಾಧಾನವನ್ನೇನೂ ಉಂಟುಮಾಡಿರಲಿಲ್ಲ ಅನ್ನುವುದೂ ಗಮನಿಸಬೇಕಾದ ಸಂಗತಿಯೇ! ಇಷ್ಟು ಪೀಠಿಕೆಯ ಮಾತುಗಳನ್ನು ಹೇಳಿದ ನಂತರ ಮುಖ್ಯ ವಿಷಯಕ್ಕೆ ಬರುತ್ತೇನೆ: ನಾನು ಜಿ.ಬಿ.ಯವರ ನಾಟಕೋತ್ಸವದಲ್ಲಿ ಪ್ರಯೋಗಿಸಲು ನಟರಂಗ ತಂಡಕ್ಕಾಗಿ ಆಯ್ದುಕೊಂಡ ನಾಟಕ ‘ನಾನೇ ಬಿಜ್ಜಳ’. ಜಿ.ಬಿ.ಯವರೇ ತಮ್ಮ ಅರಿಕೆಯಲ್ಲಿ ಹೇಳಿಕೊಂಡಿರುವಂತೆ ಇದು ಇಟಲಿಯ ನಾಟಕಕಾರ ಪಿರಾಂಡಲೋ ನ 1920ರಲ್ಲಿ ರಚಿತವಾದ ‘ಹೆನ್ರಿ ದಿ ಫೋರ್ಥ್’ ನಾಟಕದಿಂದ ಪ್ರಭಾವಿತವಾದದ್ದು.
ಸ್ಟೀಫನ್ ರಿಚ್ ಅವರು ಇಂಗ್ಲೀಷ್ ಗೆ ಈ ನಾಟಕವನ್ನು ಭಾಷಾಂತರಿಸಿದ್ದು ಎಪ್ಪತ್ತರ ದಶಕದ ಆರಂಭದಲ್ಲಿ ಈ ನಾಟಕವನ್ನು ಬ್ರಾಡ್ ವೇ ಯಲ್ಲಿ ಪ್ರದರ್ಶಿಸಿದಾಗ ಪ್ರಸಿದ್ಧ ನಟ ರೆಕ್ಸ್ ಹ್ಯಾರಿಸನ್ ಅವರು ಮುಖ್ಯ ಭೂಮಿಕೆಯನ್ನು ನಿರ್ವಹಿಸಿದ್ದರಂತೆ. ಮೇಳವೊಂದರ ಸಂದರ್ಭದಲ್ಲಿ, ರೋಮ್ ದೊರೆ ನಾಲ್ಕನೇ ಹೆನ್ರಿಯ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಅಭಿನಯಿಸುತ್ತಿದ್ದಾಗಲೇ ಕುದುರೆಯಿಂದ ಬಿದ್ದು ಘಾಸಿಗೊಂಡು ಮಾನಸಿಕ ಸ್ತಿಮಿತವನ್ನು ಕಳೆದುಕೊಂಡು ‘ತಾನೇ ಸ್ವತಃ ದೊರೆ ಹೆನ್ರಿ’ ಎಂಬ ವಿಕಲ್ಪಕ್ಕೆ ತುತ್ತಾಗಿ ವಿಚಿತ್ರವಾಗಿ ವರ್ತಿಸತೊಡಗುತ್ತಾನೆ. ಅವನ ಕುಟುಂಬದವರು ಅವನನ್ನು ಗುಣಪಡಿಸಲು ಮಾಡುವ ಬಗೆಬಗೆಯ ಪ್ರಯತ್ನಗಳು ನಾಟಕದ ಬೆಳವಣಿಗೆಯ ಹಂತಗಳನ್ನು ರೂಪಿಸುತ್ತವೆ. ಜಿ.ಬಿ.ಯವರು ಇದೇ ಸಂವಿಧಾನವನ್ನು ಮುಂದಿಟ್ಟುಕೊಂಡು ಅದರೊಳಗೆ ಬಿಜ್ಜಳ—ಬಸವಣ್ಣ ಮುಂತಾದ ಪಾತ್ರಗಳನ್ನು ತರುವ ಮೂಲಕ ಪ್ರಾದೇಶಿಕ ಸೊಗಡಿನ ಹೂರಣವನ್ನು ತುಂಬಿಕೊಡುವ ಪ್ರಯತ್ನ ಮಾಡುತ್ತಾರೆ. ಪ್ರಸಿದ್ಧ ವಿಮರ್ಶಕ—ಚಿಂತಕ ಡಾ॥ಮರುಳಸಿದ್ದಪ್ಪನವರು ಹೇಳುವಂತೆ: “ಜೀವನವೊಂದು ರಂಗಭೂಮಿ, ಅಲ್ಲಿ ನಾವೆಲ್ಲಾ ಪಾತ್ರಧಾರಿಗಳು ಎಂಬ ಸಾಂಪ್ರದಾಯಿಕ ಹೇಳಿಕೆಯನ್ನೇ ಹೊಸ ನೆಲೆಯಿಂದ ಜಿ.ಬಿ.ಜೋಶಿಯವರು ನಾನೇ ಬಿಜ್ಜಳ ನಾಟಕದಲ್ಲಿ ಪರೀಕ್ಷಿಸಿದ್ದಾರೆ. ನಟನೊಂದಿಗೆ ಪಾತ್ರದ ಸಮೀಕರಣದಿಂದ ಉದ್ಭವಿಸುವ ದ್ವಂದ್ವವನ್ನು ಇಲ್ಲಿ ಕಾಣಬಹುದು. ನಾಟಕವೊಂದರಲ್ಲಿ ಬಿಜ್ಜಳನ ಪಾತ್ರ ವಹಿಸಿದವ ಆಘಾತಕ್ಕೆ ತುತ್ತಾಗಿ ಭ್ರಮಾಧೀನನಾಗಿ ನಿಜ ಜೀವನದಲ್ಲೂ ಬಿಜ್ಜಳನಂತೆ ವರ್ತಿಸುವ ಇಲ್ಲಿನ ದುರಂತ ಸಾಂಕೇತಿಕವಾದದ್ದು”.
ಮನುಷ್ಯರೆಲ್ಲಾ ಒಂದು ರೀತಿಯಲ್ಲಿ ನಟರೇ; ತಾವು ವಹಿಸಿದ ಪಾತ್ರದಲ್ಲೇ ತನ್ಮಯರಾಗಿ ತಮ್ಮ ನಿಜ ಸ್ವರೂಪವನ್ನೇ ಮರೆತಿದ್ದಾರೆ. ತನ್ನತನವನ್ನು ಅರಸಲು ಹೊರಟಾಗ ಎದುರಾಗುವ ದೊಡ್ಡ ಆತಂಕವೇ ಇದು. ಪಿರಾಂಡಲೋ ನ ‘ನಾಲ್ಕನೆಯ ಹೆನ್ರಿ’ ನಾಟಕದ ನೆರಳಿನಂತೆಯೇ ಇರುವ ‘ನಾನೇ ಬಿಜ್ಜಳ’ ನಾಟಕದಲ್ಲಿ ಮೂಲದಂತೆಯೇ ಕಾಲ ಮತ್ತು ಪ್ರಜ್ಞೆಯನ್ನು ಕುರಿತ ಜಿಜ್ಞಾಸೆಯಿದೆ. ಉದ್ದೇಶಪೂರ್ವಕವಾಗಿಯೇ ಜಗತ್ತಿನ ವಂಚನೆ—ಕ್ರೌರ್ಯದಿಂದಾದ ಸಂಕಟವನ್ನು ಸಹಿಸಲಾರದೇ ಆತ ಈ ದಾರಿ ಹಿಡಿಯುತ್ತಾನೆ. ವಾಸ್ತವಕ್ಕಿಂತ ಭ್ರಮೆಯನ್ನೇ ಸತ್ಯವೆಂದು ತಿಳಿದ ಉಳಿದೆಲ್ಲ ಲೌಕಿಕರ ದುರಂತಕ್ಕಿಂತ ಇದು ಭಿನ್ನವಾದುದು. ನಾಟಕವನ್ನು ಪ್ರಯೋಗಕ್ಕೆಂದು ಕೈಗೆತ್ತಿಕೊಂಡು ಹಲವಾರು ಬಾರಿ ಓದಿದಾಗ ಒಂದು ಮುಖ್ಯ ಸಮಸ್ಯೆ ಢಾಳಾಗಿ ಕಂಡಿತು. ಅದೆಂದರೆ ನಾಟಕದ ಮೂರನೆಯ ದೃಶ್ಯ ‘ಫ್ಲ್ಯಾಶ್ ಬ್ಯಾಕ್’ ದೃಶ್ಯವಾಗಿದ್ದು ಮತ್ತೆ ಮೊದಲಿನಂತೆ ಮುಂದುವರಿಯುತ್ತದೆ. ಅಂದರೆ ಹಲವಾರು ಪಾತ್ರಧಾರಿಗಳು ಆಧುನಿಕ ಕಾಲದ ವೇಷಭೂಷಣಗಳಲ್ಲಿದ್ದವರು 12ನೇ ಶತಮಾನದವರಾಗಿ ಮಾರ್ಪಟ್ಟು ಮತ್ತೆ ಆಧುನಿಕ ಸಮಯಕ್ಕೆ ಧುಮುಕುವ ರೀತಿಯ ಸಂವಿಧಾನವಾಯಿತು! ರಂಗಪ್ರಯೋಗದ ದೃಷ್ಟಿಯಿಂದ ಇದು ದೃಶ್ಯಗಳ ಹಿತವಾದ ಹರಿವಿಗೆ ಅಡ್ಡಿಯಾಗಬಹುದೆನ್ನಿಸಿ ಒಟ್ಟಾರೆ ವಿನ್ಯಾಸವನ್ನೇ ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.
ನಾಟಕದ ಮೂಲ ಉದ್ದೇಶಕ್ಕಾಗಲೀ ಸಂದೇಶಕ್ಕಾಗಲೀ ಭಂಗ ಬಾರದಂತೆ ಸಂವಿಧಾನವನ್ನು ಕೊಂಚ ಬದಲಿಸಿಕೊಳ್ಳುವುದು ತಪ್ಪೇನಾಗಲಿಕ್ಕಿಲ್ಲ ಅನ್ನಿಸಿತು. ಜಿ ಬಿ ಅವರೇ ಸ್ವತಃ ಅಂಥ ಸಾಂವಿಧಾನಿಕ ಬದಲಾವಣೆಗಳನ್ನು ಮುಕ್ತವಾಗಿ ಒಪ್ಪಿಕೊಂಡಿದ್ದರಲ್ಲ! ಸಾಕಷ್ಟು ಈ ಕುರಿತು ಚಿಂತಿಸಿದ ಮೇಲೆ ಒಂದು ದಾರಿ ಗೋಚರವಾಯಿತು. ನಾಟಕದಲ್ಲಿ ಬರುವ ಮನಃಶಾಸ್ತ್ರಜ್ಞನ ಪಾತ್ರವನ್ನು ಕಥೆಯನ್ನು ಮಂಡಿಸುವ ನಿರೂಪಕನನ್ನಾಗಿ ಮಾಡಿದೆ. ಪೂರ್ವಕಥೆಯ ಕೆಲ ಸಂಗತಿಗಳ ಅನಾವರಣವಾಗುತ್ತಿದ್ದಂತೆಯೇ ನೇರವಾಗಿ 12 ನೇ ಶತಮಾನದ ಬಿಜ್ಜಳನ ಆಸ್ಥಾನದ ದೃಶ್ಯವನ್ನು ತಂದು ನಂತರ ಮತ್ತೊಂದು ನಿರೂಪಣಾಭಾಗದ ನಂತರ ಕಥೆ ಮುಂದುವರಿಯುವ ರೀತಿಯಲ್ಲಿ ದೃಶ್ಯಗಳನ್ನ ಅದಲಿ ಬದಲಿ ಮಾಡಿದೆ. ಹಳೆಯದನ್ನು ನೆನಪಿಸಿಕೊಳ್ಳುವ flashback ತಂತ್ರದ ದೃಶ್ಯವನ್ನು ಮೊದಲೇ ತಂದು ನೇರ ಸರಳ ನಿರೂಪಣೆಯ ಶೈಲಿಯನ್ನು ಅಳವಡಿಸಿಕೊಂಡೆ. ಇದು ಆಶ್ಚರ್ಯಕರ ರೀತಿಯಲ್ಲಿ ಫಲಕೊಟ್ಟಿತು! ನಾಟಕವನ್ನು ಗ್ರಹಿಸಲು ಪ್ರೇಕ್ಷಕರಿಗೂ ಹೆಚ್ಚು ಸುಲಭವಾಗಿ ರಂಗದ ಮೇಲೆ ದೃಶ್ಯಗಳ ಸಲೀಸು ಹರಿವಿಗೂ ನೆರವಾಯಿತು. ನಾಟಕದ ವಸ್ತುವೇ ತೀರಾ ಗಂಭೀರವೂ ಗಾಢವೂ ಅಂತರ್ಮುಖಿಯೂ ಆದ್ದರಿಂದ ರಂಗಸಜ್ಜಿಕೆಯಲ್ಲಾಗಲೀ ವಸ್ತ್ರ ವಿನ್ಯಾಸದಲ್ಲಾಗಲೀ ಉಲ್ಲಾಸ—ಉತ್ಸಾಹ—ಸಂಭ್ರಮವನ್ನು ಹೊರಸೂಸುವ ಬಣ್ಣಗಳನ್ನು ಬಳಸದೇ ದಟ್ಟ ಕಂದು—ಬೂದು ಬಣ್ಣಗಳನ್ನೇ ವಿಶೇಷವಾಗಿ ಬಳಸಿದ್ದೆ. ಸೊಗಸಾದ ರೀತಿಯಲ್ಲಿ ವಸ್ತ್ರ ವಿನ್ಯಾಸ ಮಾಡಿಕೊಟ್ಟಿದ್ದವರು ನಮ್ಮ ಗುರುಪತ್ನಿ ಶ್ರೀಮತಿ ಜಯಂತಿ ಮರುಳಸಿದ್ದಪ್ಪನವರು.
ನಾಟಕದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದವರು ರಾಜೇಶ್ ನಟರಂಗ, ಸೃಜನ್ ಲೋಕೇಶ್ , ವೆಂಕಟರಾವ್ , ಶ್ವೇತಾ ಕೃಷ್ಣಪ್ಪ ಮುಂತಾದವರು. ಬಿಜ್ಜಳನ ಪಾತ್ರದಲ್ಲಿ ರಾಜೇಶ್ ರದ್ದು ಅಪೂರ್ವವಾದ ಅಭಿನಯ. ಬಿಜ್ಜಳನ ಮಾನಸಿಕ ಅಸ್ಥಿರತೆಯನ್ನೂ ಹೊಯ್ದಾಟ, ತಲ್ಲಣ, ಆತಂಕಗಳನ್ನೂ ಅವರು ಅಭಿವ್ಯಕ್ತಿಸಿದ ರೀತಿ ಸೊಗಸಾಗಿತ್ತು. ಅಂತೆಯೇ ಉಳಿದೆಲ್ಲಾ ಪಾತ್ರಧಾರಿಗಳದ್ದೂ ಸಮಯೋಚಿತ, ಸಂಯಮದ ಅಭಿನಯ. ನನಗೆ ಬಹುವಾಗಿ ತೃಪ್ತಿ ಸಮಾಧಾನಗಳನ್ನು ತಂದುಕೊಟ್ಟ ಪ್ರಯೋಗವಿದು. ಪ್ರಯೋಗ ನೋಡಲು ಧಾರವಾಡದಿಂದ ಆಗಮಿಸಿದ್ದ ಪ್ರಸಿದ್ಧ ವಿಮರ್ಶಕ ಗಿರಡ್ಡಿಯವರು ಹಾಗೂ ರಾಮ್ ಜೋಶಿಯವರು ಪ್ರಯೋಗವನ್ನು ಬಹಳವಾಗಿ ಮೆಚ್ಚಿಕೊಂಡದ್ದು ಮತ್ತೂ ಖುಷಿಗೆ ಕಾರಣವಾದ ಸಂಗತಿ.
ಇನ್ನು ಧಾರಾವಾಹಿಗಳ ವಿಷಯಕ್ಕೆ ಬಂದರೆ, ಇಲ್ಲಿ ಉಲ್ಲೇಖಿಸಬೇಕಾದ ನಾನು ಅಭಿನಯಿಸಿದ ಮತ್ತೊಂದು ಮಹಾ ಧಾರಾವಾಹಿ ಎಂದರೆ “ಕ್ಲಾಸ್ ಮೇಟ್ಸ್”. ಪ್ರಸಿದ್ಧ ಚಲನ ಚಿತ್ರ ನಿರ್ದೇಶಕರಾದ ಶಿವಮಣಿಯವರು ಈ ಧಾರಾವಾಹಿಯ ನಿರ್ದೇಶಕರು. ಪಾತ್ರದ ದೃಷ್ಟಿಯಿಂದ ಹೆಚ್ಚು ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ. ಕಥಾನಾಯಕಿಯರ ತಂದೆಯ ಪಾತ್ರ. ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪೋಷಕರು ಎದುರಿಸುವ ಸಮಸ್ಯೆಗಳು ಹಾಗೂ ಹದಿ ಹರೆಯದವರ ಕನಸು, ಆಶೋತ್ತರ, ದ್ವಂದ್ವಗಳ ಸುತ್ತ ಹೆಣೆಯಲಾಗಿದ್ದ ಕಥಾಹಂದರ ಈ ಧಾರಾವಾಹಿಯದಾಗಿತ್ತು. ಪ್ರಸಾರ ಆರಂಭವಾದ ಕೆಲವೇ ದಿನಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡ ಧಾರಾವಾಹಿ ಇದು. ಶಿವಮಣಿಯವರು ಚಿತ್ರರಂಗದಲ್ಲಿ ಬಹಳ ಒಳ್ಳೆಯ ತಂತ್ರಜ್ಞ ನಿರ್ದೇಶಕರೆಂದೇ ಖ್ಯಾತರಾದವರು. ಅವರ ಆ ಛಾಪು ಕ್ಲಾಸ್ ಮೇಟ್ಸ್ ಧಾರಾವಾಹಿಯಲ್ಲೂ ಹೊಡೆದು ಕಾಣುತ್ತಿತ್ತು. ಅದೇ ಕಾಲಘಟ್ಟದಲ್ಲಿ ನಾನು ಅಭಿನಯಿಸಿದ ಮತ್ತೊಂದು ಮುಖ್ಯ ಧಾರಾವಾಹಿ ಎಂದರೆ ‘ಚಿಕ್ಕಮ್ಮ’. ವಿಜಯಕಾಶಿ, ಮಂಜುನಾಥ ಹೆಗ್ಡೆ, ಉಮಾಶಂಕರಿ (ಆತ್ಮೀಯ ಗೆಳೆಯ, ಖ್ಯಾತ ನಿರ್ದೇಶಕ ಡಿ.ರಾಜೇಂದ್ರಬಾಬುವಿನ ಮಗಳು), ಸ್ನೇಹಾ, ಶೈಲಜಾ ಜೋಶಿ, ಅಶೋಕ್ ಹೆಗ್ಡೆ, ಮೈಕೋ ಶಿವು ಮುಂತಾದವರೆಲ್ಲಾ ತಾರಾಗಣದಲ್ಲಿದ್ದ ಈ ಧಾರಾವಾಹಿ ತಮಿಳು ಧಾರಾವಾಹಿಯ ರೀಮೇಕ್, ಉದಯ ಟಿ.ವಿ.ಗೆಂದು ನಿರ್ಮಾಣವಾದದ್ದು.
ನನ್ನದು ಕೊಂಚ ತಡವಾಗಿ ಕಥಾಹಂದರಕ್ಕೆ ಸೇರ್ಪಡೆಯಾಗುವ ಪಾತ್ರ. ಮಾನವೀಯತೆಯ ಸೋಂಕೇ ಇಲ್ಲದ ಮಹಾ ದುಷ್ಟಬುದ್ಧಿಯ ಕೆಟ್ಟಾಕೆಡುಕನ ಪಾತ್ರ ನನ್ನದು! ದುಷ್ಟ ಪಾತ್ರವಾದರೂ ಈ ಪಾತ್ರ ನಿರ್ವಹಣೆ ನನಗೆ ತುಂಬಾ ಖುಷಿಕೊಟ್ಟಿತು. ಒಂದಷ್ಟು ವಿಶೇಷ ಮ್ಯಾನರಿಸಂಗಳನ್ನು ಅಳವಡಿಸಿಕೊಂಡು ಮಾತಿನ ಶೈಲಿಯನ್ನೊಂದಿಷ್ಟು ಬದಲಿಸಿಕೊಂಡು ಪಾತ್ರಕ್ಕೆ ಹೊಸ ಖದರ್ ನೀಡಲು ಯತ್ನಿಸಿದ್ದೆ. ‘ಚಿಕ್ಕಮ್ಮ’ ಆ ಸಮಯದ ಒಂದು ಅತ್ಯಂತ ಯಶಸ್ವೀ ಧಾರಾವಾಹಿಯಾಗಿತ್ತು. ಅಂತೆಯೇ ದುಷ್ಟನೇ ಆದರೂ ನನ್ನ ಪಾತ್ರ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಅದೂ ಆ ಸಮಯದಲ್ಲಿ ನಾನು ಅಭಿನಯಿಸುತ್ತಿದ್ದ ಇತರ ಧಾರಾವಾಹಿಗಳ ಪಾತ್ರಗಳನ್ನು ಮರೆಸುವಷ್ಟರ ಮಟ್ಟಿಗೆ! ರಾಜ್ಯದಲ್ಲಿ ಎಲ್ಲಿ ಹೋದರೂ ವೀಕ್ಷಕರು ಗುರುತುಹಿಡಿದು ನಿಲ್ಲಿಸಿ ಮಾತಾಡಿಸುತ್ತಿದ್ದರು; ಕೆಟ್ಟ ಮಾತುಗಳಲ್ಲಿ ನನ್ನ ಪಾತ್ರವನ್ನು ಹೀನಾಮಾನಾ ಬೈಯುತ್ತಲೇ ನನ್ನ ಮೇಲೆ ಮೆಚ್ಚುಗೆಯ ಮಳೆ ಸುರಿಸುತ್ತಿದ್ದರು! ತೆಗಳಿಕೆ—ಹೊಗಳಿಕೆಗಳೆರಡೂ ಒಟ್ಟಿಗೇ ಸಂದಾಯವಾಗುತ್ತಿದ್ದಂತಹ ವಿಶಿಷ್ಟ ಸಂದರ್ಭ ಅದು! ಬರಬರುತ್ತಾ ನನ್ನ ಪಾತ್ರ ಹಲವಾರು ಸಂದಿಗ್ಧ ಸನ್ನಿವೇಶಗಳಲ್ಲಿ ಸಿಲುಕಿ ನರಳಿ ಒಳ್ಳೆಯ ವ್ಯಕ್ತಿಯಾಗಿ ರೂಪಾಂತರಗೊಂಡುಬಿಡುತ್ತದೆ. ದುರದೃಷ್ಟವಶಾತ್ ಆ ಒಳ್ಳೆಯತನದೊಂದಿಗೇ ಮೊದಲಿನ ಖಡಕ್ ಪಾತ್ರದ ಜೋರೂ ಮರೆಯಾಗಿ ಸಪ್ಪೆತನ ಆವರಿಸಿಕೊಂಡು ಜನಪ್ರಿಯತೆಯೂ ಕ್ಷೀಣಿಸಿದ್ದು ಸುಳ್ಳಲ್ಲ! ಅಷ್ಟಲ್ಲದೇ ದಾಸರು ಉದ್ಗರಿಸುತ್ತಾರೆಯೇ “ಸತ್ಯವಂತರಿಗಿದು ಕಾಲವಲ್ಲ”..!
0 ಪ್ರತಿಕ್ರಿಯೆಗಳು