ಶ್ರೀನಿವಾಸ ಪ್ರಭು ಅಂಕಣ: ಸಂಭ್ರಮದ ಬೆನ್ನೇರಿ ಬಂದ ಸೂತಕ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. 

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು. 

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. 

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

141

ಭರಣಿ ಮಳೆ ಕೃತಿ ಧ್ವನಿ ಸಾಂದ್ರಿಕೆಗಳ ಲೋಕಾರ್ಪಣೆಯ ವೇದಿಕೆ

‘ಭರಣಿ ಮಳೆ’ ಕೃತಿ ಧ್ವನಿ ಸಾಂದ್ರಿಕೆಗಳ ಲೋಕಾರ್ಪಣೆಯ ನಂತರ ಕೃಷ್ಣಯ್ಯನವರು ಕೃತಿಯ ಬಗ್ಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸೊಗಸಾಗಿ ಮಾತಾಡಿದರು. ಅವರ ಭಾಷಣದ ಕೆಲವು ಆಯ್ದ ಭಾಗಗಳು ತಮ್ಮ ಅವಗಾಹನೆಗಾಗಿ: “ಭರಣಿಮಳೆ ಇಲ್ಲಿ ಉಲ್ಲಾಸವನ್ನೂ ಆನಂದವನ್ನೂ ತಂದುಕೊಡುವ ಭಾವ ವರ್ಷಧಾರೆಯಾಗಿ ಕಾಣಿಸಿಕೊಳ್ಳುತ್ತಿದೆ. ರಂಜನಿಯವರ ಒಂದು ಕವಿತೆಯ ಒಂದು ಭಾಗ ಹೀಗಿದೆ:

“ಜೊತೆ ಜೊತೆಗೆ ಆಡಿ

ಮರೆಯಾಗಿದ್ದ ಗೆಳತಿಯಂತೆ

ಎಲ್ಲಿ ಅಡಗಿದ್ದೆಯೇ ಕವಿತೆ

ನನ್ನ ಮರೆತು ಹೋದಂತೆ.”

ಈ ಪುಸ್ತಕ ಓದಿದ ಮೇಲೆ ಓದುಗರು, ಸಹೃದಯರು ಸಹಜವಾಗಿ ಕೇಳಬಹುದಾದ ಪ್ರಶ್ನೆ: ‘ಎಲ್ಲಿದ್ದಿರಿ ಇಷ್ಟು ವರ್ಷ? ಏಕೆ ಪ್ರಕಟಿಸಲಿಲ್ಲ ಈ ಮೊದಲೇ ಕವನ ಸಂಕಲನ?’ ಅಷ್ಟು ಸೊಗಸಾಗಿವೆ ರಂಜನಿಯವರ ಕವಿತೆಗಳು! ‘ಎಳೆಯಲಾಗದ ತೇರು ಹೂ ಬಿಟ್ಟ ಈ ಮರ’; ‘ತೈಲವಿಲ್ಲದ ಹಣತೆ ಬಾನ ಜಗಲಿಯ ತುಂಬಾ’; ‘ಹೊಳೆವ ಬೆಳ್ಳಿಯ ಕಲಶ ತುಂಬು ಚಂದಿರ ಬಿಂಬ’. ಎಂಥ ಸೊಗಸಾದ ಚಿತ್ರಗಳು! ಒಬ್ಬ ವರ್ಣಶಿಲ್ಪಿಯ ಮನಸ್ಸಿನಲ್ಲಿ ಮಾತ್ರ ಇಂಥ ನವುರಾದ ಚಿತ್ರಗಳು ಮೂಡಲು ಸಾಧ್ಯ! ‘ಬೆಳ್ಳಿಲಂಗದ ಪುಟ್ಟ ಬಾಲೆಯರು ಬಾನಲ್ಲಿ ಕಿಲಕಿಲನೆ ನಗುತಿರಲು ತನನತಾನ’. ನಿಸರ್ಗದ ದೃಶ್ಯದ ಜತೆಗೆ ಮನಸ್ಸಿನ ಒಲವಿನ ಭಾವನೆಗಳನ್ನು ಸಮೀಕರಿಸಿ ಹೇಳುವ ರೂಪಕ ವಿಧಾನ ಸೊಗಸಾಗಿದೆ”.

ಭರಣಿ ಮಳೆ ಕವನ ಸಂಕಲನ ಮತ್ತು ಧ್ವನಿಸಾಂಧ್ರಿಕೆ ಬಿಡುಗಡೆ

ಧ್ವನಿ ಸಾಂದ್ರಿಕೆಯನ್ನು ಕುರಿತು ಮಾತನಾಡಿದ ನಿರ್ದೇಶಕ ರವಿಯವರು, “ಧ್ವನಿಸಾಂದ್ರಿಕೆಯ ಎಲ್ಲ ಹಾಡುಗಳೂ ಸೊಗಸಾಗಿ ಮೂಡಿ ಬಂದಿವೆ. ಕಾವ್ಯದ ಕೋಮಲತೆ, ಗಾನದ ಲಾಲಿತ್ಯ, ಲಯದ ಮಾಧುರ್ಯ ಎಲ್ಲವೂ ಇಲ್ಲಿ ಮೇಳೈಸಿವೆ” ಎಂದು ಮೆಚ್ಚಿ ನುಡಿದರಲ್ಲದೆ ‘ಮುಗುಳುನಗೆಯ ಕೆಂದಾವರೆಯೇ’ ಎಂಬೊಂದು ಗೀತೆಗೆ ತಾವೇ ಸ್ವರ ಸಂಯೋಜನೆ ಮಾಡಿ ಹಾಡಿಯೂ ತೋರಿಸಿದರು. ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಶಿಯವರು ಮಾತನಾಡಿ, “ಎಲ್ಲರೂ ಕವಿತೆ ಬರೆಯಲು ಸಾಧ್ಯವಿಲ್ಲ. ಅಂತರ್ದೃಷ್ಟಿ ಇರುವವರು ಮಾತ್ರ ಕವಿಗಳಾಗುತ್ತಾರೆ ಇಲ್ಲವೇ ಆಧ್ಯಾತ್ಮಿಗಳಾಗುತ್ತಾರೆ. ಇಂಥ ಅಂತರ್ದೃಷ್ಟಿ ಇರುವ ಕವಯಿತ್ರಿ ರಂಜನಿ ಪ್ರಭು” ಎಂದು ಕೃತಿಯನ್ನು ಮೆಚ್ಚಿ ಮಾತಾಡಿದರು.

ನಂತರ ಡಾ॥ ಜಿ. ಎಸ್. ಶಿವರುದ್ರಪ್ಪನವರು, ಡಾ॥ಸಿ. ಎನ್. ರಾಮಚಂದ್ರನ್, ಡಾ॥ ಲಕ್ಷ್ಮೀನಾರಾಯಣ ಭಟ್ಟರು, ಡಾ॥ ಹೆಚ್. ಎಸ್. ವೆಂಕಟೇಶ ಮೂರ್ತಿ ಹಾಗೂ ಬಿ.ಆರ್. ಲಕ್ಷ್ಮಣ ರಾವ್ ಅವರುಗಳನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಗುರುವಂದನೆಯನ್ನು ನಡೆಸಿಕೊಟ್ಟಂತಹ ಧನ್ಯತಾಭಾವವನ್ನು ಅನುಭವಿಸಿ ಕೃತಾರ್ಥರಾದೆವು. ಆ ಸಂದರ್ಭದಲ್ಲಿ ಮಾತನಾಡಿದ ಡಾ॥ ಸಿ.ಎನ್. ರಾಮಚಂದ್ರನ್ ಅವರು, “ಪ್ರಭುವಿನ ಇಡೀ ಕುಟುಂಬವೇ ಸಂಗೀತ ಕಲೆ ಸಾಹಿತ್ಯಗಳಲ್ಲಿ ತೊಡಗಿಕೊಂಡಿರುವ ಕುಟುಂಬ. ಪ್ರಭುವಿನ ತಂದೆ ನನ್ನ ತಾಯಿಯ ಸೋದರ. ಬಾಲ್ಯದಲ್ಲಿ ನನ್ನನ್ನು ಬೆಳೆಸಿ ತಿದ್ದಿದವರು. ನನಗೆ ಸಾಹಿತ್ಯದ ಪ್ರಥಮ ಪಾಠಗಳನ್ನು ಬೋಧಿಸಿದವರು. ರಂಜನಿಯವರ ಭರಣಿಮಳೆ ಸಂಕಲನ ವೈವಿಧ್ಯಪೂರ್ಣವಾಗಿದೆ. ಈ ಸಂಕಲನದ ‘ಜೋಗಿ ಕಾಡತಾನ’ ಕವಿತೆ ಪ್ರಾಯಃ ಸ್ತ್ರೀಯ ಸುಪ್ತ ಪ್ರಜ್ಞೆಯಲ್ಲಡಗಿರುವ, ತನ್ನ ಸಂಸಾರದ ಜಂಜಾಟವನ್ನೆಲ್ಲಾ ಬಿಟ್ಟು ಎಲ್ಲಾದರೂ ಓಡಿ ಹೋಗಬೇಕೆಂಬ ತೀವ್ರ ಕಾಂಕ್ಷೆಯ ಆದಿಮ ಪ್ರತೀಕವೆಂದು ತೋರುತ್ತದೆ. ಇತರ ಕವನಗಳು ಆಡು ಮಾತಿನಲ್ಲಿ, ನಿಸರ್ಗ, ಪ್ರೇಮ, ಸ್ತ್ರೀವಿಶಿಷ್ಟ ಅನುಭವ ಇತ್ಯಾದಿಗಳ ಬಗ್ಗೆ ಇಂದ್ರಿಯಗಮ್ಯ ಅನುಭವಗಳನ್ನು ದಾಖಲಿಸುತ್ತವೆ. ಈ ಸಂಕಲನದಲ್ಲಿರುವ ಕವಿತೆಗಳನ್ನು ಓದಿ, ಹಾಡುಗಳನ್ನು ಕೇಳಿ ನಾನು ಸಂತೋಷ ಪಟ್ಟಿದ್ದೇನೆ. ಇಂತಹುದೇ ಸಂತೋಷ ಇತರ ಓದುಗ ಕೇಳುಗರಿಗೂ ಲಭಿಸುತ್ತದೆಂಬ ವಿಶ್ವಾಸ ನನಗಿದೆ” ಎಂದರು. ಅವರು ಅಣ್ಣನನ್ನು(ನನ್ನ ತಂದೆಯವರು) ನೆನಪಿಸಿಕೊಂಡಾಗ ಥಟಕ್ಕನೆ ನನ್ನ ಮನಸ್ಸೂ ಒಮ್ಮೆ ಮನೆಯತ್ತ ಹಾರಿ ‘ಅಣ್ಣನ ಪರಿಸ್ಥಿತಿ ಹೇಗಿದೆಯೋ’ ಎಂದು ಕಳವಳಿಸಿತು. ಎಲ್ಲಾ ಸರಿಯಾಗಿಯೇ ಇದ್ದಿರಬೇಕು ಎಂದು ಮರುಕ್ಷಣದಲ್ಲೇ ಸಮಾಧಾನ.

ಕವಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರನ್ನು ಸನ್ಮಾನಿಸಿದ ಕ್ಷಣ

ಪ್ರಾಸಂಗಿಕವಾಗಿ ಮತ್ತೊಂದು ಸಂಗತಿಯನ್ನು ನೆನೆಯುವುದಾದರೆ. ಮುಂದೆ ರಾಮಚಂದ್ರನ್ ಅವರು ‘ಜೋಗಿ ಕಾಡತಾನ’ ಕವಿತೆಯನ್ನು ಇಂಗ್ಲೀಷ್ ಗೆ ಅನುವಾದಿಸಿದರು ಹಾಗೂ ಆ ಅನುವಾದ ‘ಸ್ತ್ರೀ ಸಂವೇದನೆಯ ಕವಿತೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಪ್ರಸಿದ್ಧ ಜರ್ನಲ್ ನಲ್ಲಿ ಪ್ರಕಟವಾಗಿತ್ತು. ಆನಂತರ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಜ್ಜಾಯಿತು. ಮಗಳು ರಾಧಿಕಾ ಪ್ರಭು ಅಂದಿನ ಸಮಾರಂಭಕ್ಕೋಸ್ಕರವಾಗಿಯೇ ರಂಜನಿಯ ನಾಲ್ಕಾರು ಹಾಡುಗಳಿಗೆ ನೃತ್ಯ ಸಂಯೋಜನೆಯನ್ನು ಮಾಡಿಕೊಂಡಿದ್ದಳು. ಈ ‘ಭಾವನೃತ್ಯ’ ಪ್ರದರ್ಶನ ಅಂದಿನ ಸಮಾರಂಭದ ವಿಶೇಷ ಆಕರ್ಷಣೆಯಾಗಿತ್ತು. ಅಮ್ಮನ ಹಾಡುಗಳಿಗೆ ಮಗಳ ನೃತ್ಯ! ರಂಗವನ್ನು ಪ್ರವೇಶಿಸುತ್ತಲೇ ಹೊರ ಜಗತ್ತನ್ನೇ ಮರೆತು ನೃತ್ಯದಲ್ಲಿ ಸಂಪೂರ್ಣ ತಲ್ಲೀನಳಾಗಿ ಬಿಡುವ ರಾಧಿಕಾ ಅಂದು ತನ್ನ ನೃತ್ಯದಿಂದ ಸಹೃದಯರನ್ನು ಮಂತ್ರಮುಗ್ಧರನ್ನಾಗಿಸಿಬಿಟ್ಟಳು. ಎಲ್ಲ ಹಿರಿಯ ಕವಿಗಳೂ ಸಭಾಂಗಣದಲ್ಲಿ ಉಪಸ್ಥಿತರಿದ್ದು ರಾಧಿಕಾಳ ನೃತ್ಯವನ್ನು ನೋಡಿ ಮನಸಾರೆ ಮೆಚ್ಚಿಕೊಂಡು ಹೃತ್ಪೂರ್ವಕವಾಗಿ ಆಶೀರ್ವದಿಸಿದರು. ಪ್ರವರ್ಧಮಾನಕ್ಕೆ ಬರುತ್ತಿರುವ ಯುವಕಲಾವಿದೆಗೆ ಇದಕ್ಕಿಂತ ಹೆಚ್ಚಿನದೇನು ಬೇಕು ಹೇಳಿ!

ಹಿರಿಯ ಕವಿ ಡಾ॥ ಹೆಚ್. ಎಸ್. ವೆಂಕಟೇಶ ಮೂರ್ತಿ ಅವರನ್ನು ಸನ್ಮಾನಿಸುತ್ತಿರುವುದು

ಭರಣಿ ಮಳೆ ಧ್ವನಿ ಸಾಂದ್ರಿಕೆಯ ಹಾಡುಗಳ ಸಂಗೀತ ಸಂಯೋಜಕ ಉಪಾಸನಾ ಮೋಹನ್, ವರ್ಷಾ ಸುರೇಶ್, ಪಂಚಮ್ ಹಳಿಬಂಡಿ ಮೊದಲಾದ ಶ್ರೇಷ್ಠ ಗಾಯಕ ಗಾಯಕಿಯರು ರಂಜನಿಯ ಹಲವಾರು ಗೀತೆಗಳನ್ನು ಹಾಡಿ ಸಮಾರಂಭಕ್ಕೆ ವಿಶೇಷ ಮೆರುಗು ತುಂಬಿದರು. ಒಟ್ಟಿನಲ್ಲಿ ಅಂದಿನ ಸುಂದರ ಸಂಜೆಯ ಕಾರ್ಯಕ್ರಮ ಅತ್ಯಂತ ಆಪ್ತ ಆತ್ಮೀಯ ವಾತಾವರಣದಲ್ಲಿ ಒಂದು ಹಬ್ಬದಂತೆ ನೆರವೇರಿತೆಂದರೆ ಅತಿಶಯೋಕ್ತಿಯಲ್ಲ. ಸಮಾರಂಭ ಮುಗಿಯುತ್ತಿದ್ದಂತೆ ತರಾತುರಿಯಲ್ಲಿ ಗಣ್ಯರೆಲ್ಲರನ್ನೂ ಬೀಳ್ಕೊಟ್ಟು ನಾವು ಮನೆಯ ಕಡೆಗೆ ಹೊರಡಲನುವಾದೆವು. ಕಲಾಕ್ಷೇತ್ರದಿಂದ ಹೊರಬಂದು ಟೌನ್ ಹಾಲ್ ಬಳಿಯ ಸಿಗ್ನಲ್ ನಲ್ಲಿ ಕಾರ್ ನಿಲ್ಲಿಸಿ ಹಸಿರು ನಿಶಾನೆಗೆ ಕಾಯುತ್ತಿರುವಾಗಲೇ ಪಕ್ಕದಿಂದೊಂದು ಧ್ವನಿ ಕೇಳಿಸಿತು: “excuse me”. ನಾನು ಕಿಟಕಿಯ ಹೊರಗೆ ನೋಡಿದರೆ ಬೈಕ್ ಮೇಲಿದ್ದ ವ್ಯಕ್ತಿಯೊಬ್ಬರು, “ಸರ್, ಹಿಂದಿನ ಟೈರ್ ಪಂಕ್ಚರ್ ಆಗಿರಬೇಕು ನೋಡಿ. ಗಾಳಿ ತುಂಬಾ ಕಮ್ಮಿ ಇದೆ” ಎಂದರು. ಆ ವೇಳೆಗೆ ಸಿಗ್ನಲ್ ಕೂಡಾ ಬಿಟ್ಟದ್ದರಿಂದ ಅವರಿಗೆ ಧನ್ಯವಾದ ಹೇಳಿ ಹಾಗೆಯೇ ಕಾರ್ ಅನ್ನು ಚಲಾಯಿಸಿಕೊಂಡು ಬದಿಗೆ ಹೋಗಿ ನಿಲ್ಲಿಸಿದೆ. ಹೌದು. ಹಿಂದಿನ ಚಕ್ರ ಬಹುಶಃ ಪಂಕ್ಚರ್ ಆಗಿದೆ! ತಕ್ಷಣವೇ ಬೈಕ್ ನಲ್ಲಿ ಹೋಗುತ್ತಿದ್ದ ತಿಮ್ಮಣ್ಣ ಪ್ರಕಾಶರಿಗೆ ಅಲ್ಲಿಗೆ ಬರಲು ಹೇಳಿದೆ. ಮೊದಲೇ ಆತಂಕದಲ್ಲಿ ಹೊರಟಿದ್ದೇವೆ, ಪಂಕ್ಚರ್ ಆಗಲು ಈ ಮುಹೂರ್ತವೇ ಬೇಕಿತ್ತೇ ಎಂದು ಸಿಡಿಮಿಡಿಯಾಯಿತು.

ಪ್ರಸಿದ್ಧ ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರಿಗೆ ಆತ್ಮೀಯ ಸನ್ಮಾನ

ಅಷ್ಟರಲ್ಲಿ ಸನಿಹದಲ್ಲೇ ಇದ್ದ ತಿಮ್ಮಣ್ಣ ಹಾಗೂ ಪ್ರಕಾಶ ಅಲ್ಲಿಗೆ ಬಂದರು. ಪ್ರಕಾಶ ಡಿಕ್ಕಿಯಲ್ಲಿದ್ದ ಇನ್ನೊಂದು ಟೈರನ್ನು ತೆಗೆದು ಬದಲಿಸಲು ತೊಡಗಿದ. ತಿಮ್ಮಣ್ಣ ನನ್ನ ಮುಖವನ್ನೇ ನೋಡುತ್ತಾ, “ಬಾಸ್, ನನಗ್ಯಾಕೋ ಅನುಮಾನ ಏನೋ ಸೂಚನೆ ಇರಬೇಕು ಇದು. ಅಪ್ಪಾಜಿಯವರು.” ಎಂದು ಮಾತು ನಿಲ್ಲಿಸಿದ. ಒಂದು ಕ್ಷಣ ನನಗೆ ದಿಕ್ಕೇ ತೋಚಲಿಲ್ಲ. ಮಾತೂ ಹೊರಡಲಿಲ್ಲ. ಅಷ್ಟರಲ್ಲಿ ನನ್ನ ಮೊಬೈಲ್ ರಿಂಗಣಿಸಿತು. ಕರೆ ಸ್ವೀಕರಿಸಿ ‘ಹಲೋ’ ಎಂದೆ. ಅತ್ತಲಿಂದ ಕುಮಾರಣ್ಣಯ್ಯನ ಧ್ವನಿ: “ಪ್ರಭೂ. ಎಲ್ಲಾ ಮುಗಿದುಹೋಯ್ತಪ್ಪಾ. ಈಗ ಹತ್ತು ನಿಮಿಷ ಆಯ್ತು. ಕಾರ್ಯಕ್ರಮ ಮುಗಿದಿದೆ ತಾನೇ? ಬನ್ನಿ. ನಿಧಾನವಾಗಿ ಡ್ರೈವ್ ಮಾಡು..” ಪಕ್ಕದಲ್ಲಿದ್ದ ರಂಜನಿಯೂ ದಿಗ್ಭ್ರಾಂತಳಾಗಿ ನೋಡುತ್ತಿದ್ದಳು. ನನ್ನದಂತೂ ತೀರಾ ಅಯೋಮಯ ಸ್ಥಿತಿಯಾಗಿಬಿಟ್ಟಿತ್ತು. “ಸೊಸೆಯ ಮೊದಲನೇ ಸಂಕಲನದ ಬಿಡುಗಡೆ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು ಅಂತ ಅಣ್ಣ ಇಷ್ಟು ಹೊತ್ತೂ ಉಸಿರು ಬಿಗಿ ಹಿಡಿದುಕೊಂಡು ಕಾಯ್ತಿದ್ರು ಅಂತ ಕಾಣುತ್ತೆ” ಎಂದು ರಂಜನಿ ಬಿಕ್ಕಿದಳು. ಹೌದೆನ್ನಿಸಿತು. ಇಂಥ ಸಂದರ್ಭಗಳಲ್ಲಿ ಇದೆಲ್ಲಾ ‘ಕಾಕತಾಳೀಯ’ವೆಂಬ ತೀರ್ಮಾನಕ್ಕೆ ಧುಮುಕಿಬಿಡುವುದು ಸುಲಭವಾದರೂ, ಅದೇ ವೈಜ್ಞಾನಿಕ ನಿಲುವು ಎನಿಸಿದರೂ ನನಗೇಕೋ ಆ ಕ್ಷಣದಲ್ಲಿ ಇದೆಲ್ಲವನ್ನೂ ಮೀರಿದ ಏನೋ ಒಂದು ಶಕ್ತಿಯಿದೆ ಎಂದು ಖಡಾಖಂಡಿತವಾಗಿ ಅನ್ನಿಸಿಬಿಟ್ಟಿತು.

ಹೃದಯ ಸಂವಾದಗಳು ಯಾವ ಯಾವ ನೆಲೆಯಲ್ಲಿ ಯಾವ ಯಾವ ಬಗೆಯಲ್ಲಿ ನಡೆಯುತ್ತವೋ ತಿಳಿದವರಾರು? ಯಾವ ಮನೋಶಕ್ತಿ ಅವರನ್ನು ಆ ಕ್ಷಣದ ತನಕ ತಡೆದು ನಿಲ್ಲಿಸಿತ್ತೋ ವಿವರಿಸುವವರು ಯಾರು? ಒಂದೆರಡು ದಿನಗಳಿಂದ ಕ್ಷಣಗಣನೆಯಲ್ಲೇ ಇದ್ದ ಜೀವಾತ್ಮ ತನ್ನ ನಿರ್ಗಮನದ ಗಳಿಗೆಯನ್ನು ಅಷ್ಟು ಕರಾರುವಾಕ್ಕಾಗಿ ನಿರ್ಧರಿಸಿದ್ದಾದರೂ ಹೇಗೆ? ಪ್ರಶ್ನೆಗಳು ಒಂದರ ಹಿಂದೊಂದು ಏಳುತ್ತಲೇ ಇದ್ದವು. ಉತ್ತರಿಸುವವರು ಯಾರು? ‘ಅಣ್ಣಾ ,ಕಾರ್ ರೆಡಿಯಾಯಿತು’ ಎಂದು ಪ್ರಕಾಶ ಹೇಳಿದಾಗಲೇ ಯೋಚನಾಲಹರಿಗೆ ತಡೆ ಬಿದ್ದದ್ದು. ನಿಧಾನವಾಗಿ ಕಾರ್ ಚಲಾಯಿಸಿಕೊಂಡು ಮನೆಯತ್ತ ಹೊರಟೆವು. ದಾರಿಯುದ್ದಕ್ಕೂ ಮಾತಿಲ್ಲ ಕಥೆಯಿಲ್ಲ. ಮೌನ ಪಯಣದ ಶೃತಿಗೆ ತಟ್ ತಟ್ ಅಶ್ರುಧಾರೆಯ ಲಯ. ಅಷ್ಟೇ. ರಾತ್ರಿ ತಡವಾದ್ದರಿಂದ ಹತ್ತಿರದಲ್ಲೇ ಇದ್ದ ಅಣ್ಣನ ಹಲವಾರು ಶಿಷ್ಯರು, ಕೆಲ ಆಪ್ತೇಷ್ಟರು ಮಾತ್ರ ಬಂದಿದ್ದರು. ಹೋಗಿ ನೋಡಿದರೆ ಅಣ್ಣ ಪರಮ ಶಾಂತಿಯಿಂದ ಮಲಗಿದ್ದರು. ಎಲ್ಲ ನೋವಿನಿಂದ ಮುಕ್ತಿ. ಎಲ್ಲ ಸಂಕಟದಿಂದ ಮುಕ್ತಿ. ಎಲ್ಲ ಬಂಧಗಳಿಂದ ಮುಕ್ತಿ. ಪಕ್ಕದಲ್ಲೇ ಕುಳಿತ ಅಮ್ಮ ಮೆಲ್ಲಗೆ ಬಿಕ್ಕುತ್ತಿದ್ದರು. ಅಕ್ಕಂದಿರು, ಭಾವಂದಿರು, ಅಣ್ಣಯ್ಯ, ಅತ್ತಿಗೆ, ಮಕ್ಕಳು ಎಲ್ಲರ ಕಣ್ಣಲ್ಲೂ ನೀರು. ಮುಖದಲ್ಲಿ ಮಡುಗಟ್ಟಿದ್ದ ನೋವು ಸಂಕಟ.

ಯುವ ಕಲಾವಿದೆ ರಾಧಿಕಾ ಪ್ರಭು ಅವರ ಅಮೋಘ ನೃತ್ಯ ಎಲ್ಲರ ಮನ ಗೆದ್ದಿತು

ಅಣ್ಣನ ನಿರ್ಗಮನ ನಿರೀಕ್ಷಿತವೇ ಆಗಿದ್ದರೂ ಇದು ಮರಳಿ ಬಾರದ ಪ್ರಯಾಣವಲ್ಲವೇ? ಮತ್ತೆಂದೂ ಅಣ್ಣನನ್ನು ಈ ರೂಪದಲ್ಲಿ ಕಾಣಲಾರೆವು. ಅವರ ದನಿಯನ್ನು ಕೇಳಲಾರೆವು. ಈ ನಷ್ಟ ಶಾಶ್ವತವಾದ್ದು ಎಂಬ ಅರಿವೇ ಕಂಗೆಡಿಸುವಂಥದ್ದು. ಆದರೂ ಇದೆಲ್ಲವೂ ಬದುಕಿನ ಒಂದು ಅವಿಭಾಜ್ಯ ಅಂಗ. ಹಾಗೆಂದೇ ಸಮಾಧಾನಿಸಬೇಕು. ಅಷ್ಟೇ. ಹ್ಯಾಮ್ಲೆಟ್ ನಾಟಕದ ನೂರಾರು ಪ್ರದರ್ಶನ ರಿಹರ್ಸಲ್ ಗಳಲ್ಲಿ ಪದೇ ಪದೇ ಕೇಳಿದ್ದ ಕ್ಲಾಡಿಯಸ್ ದೊರೆಯ ಮಾತುಗಳು ನೆನಪಿಗೆ ನುಗ್ಗಿ ಬಂದವು: “ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬನೂ ತನ್ನ ತಂದೆಯನ್ನು ಕಳೆದುಕೊಂಡಿದ್ದಾನೆ, ಅದಕ್ಕಾಗಿ ಶೋಕಿಸಿದ್ದಾನೆ. ಆಮೇಲೆ ಜಗತ್ತು ನಡೆಯುವುದೇ ಹೀಗೆಂದು ಸಮಾಧಾನ ಪಟ್ಟುಕೊಂಡಿದ್ದಾನೆ.” ನಿಜವೇ. ಆದರೆ ಹಾಗೆ ನಾವೇ ನಮ್ಮ ಮನಸ್ಸನ್ನು ಸಮಾಧಾನಿಸುವ ಕ್ಷಣ ನಮ್ಮೆದುರೇ ಪ್ರತ್ಯಕ್ಷವಾದಾಗ ಮಾತ್ರ. ಮರುದಿನ ಎಲ್ಲ ಬಂಧು ಬಾಂಧವರಿಗೂ ಮಿತ್ರವರ್ಗದವರಿಗೂ ಅಣ್ಣನ ಶಿಷ್ಯವೃಂದದವರಿಗೂ ಸುದ್ದಿ ತಲುಪಿಸಿದೆವು. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಎಲ್ಲರೂ ಬಂದು ಅಂತಿಮ ದರ್ಶನವನ್ನು ಪಡೆದರು. ಒಂದಷ್ಟು ಕ್ರಿಯಾ ಕರ್ಮಗಳ ವಿಧ್ಯುಕ್ತ ಆಚರಣೆಯ ನಂತರ ಅಣ್ಣನನ್ನು ಕಳಿಸಿಕೊಡುವ ಸಿದ್ಧತೆ ಆರಂಭವಾಯಿತು. ಸನ್ಯಾಸಾಶ್ರಮವನ್ನು ಸ್ವೀಕರಿಸಿದವರಿಗೆ ಅಗ್ನಿಸ್ಪರ್ಶ ಮಾಡುವಂತಿಲ್ಲವಂತೆ. ಅವರನ್ನು ಭೂತಾಯಿಯ ಗರ್ಭಕ್ಕೆ ಮತ್ತೆ ಸೇರಿಸಿ ಬಿಡಬೇಕೆಂಬುದು ಶಾಸ್ತ್ರ ನಿಯಮವಂತೆ. ಅದೇ ಪ್ರಕಾರವಾಗಿ ಹರಿಶ್ಚಂದ್ರ ಘಾಟ್ ನಲ್ಲಿ ನಿತ್ಯಾನಂದ ಸರಸ್ವತಿಯವರ (ತಂದೆಯವರು) ಮಹಾಯಾನಕ್ಕೊಂದು ಸ್ಥಾನವನ್ನು ಕಲ್ಪಿಸಿ ಅಲ್ಲಿ ಅವರನ್ನು ಕೂರಿಸಿ ವಿಧಿವತ್ತಾದ ಆಚರಣೆಗಳನ್ನು ನಡೆಸಿ ವಿದಾಯ ಹೇಳಿ ಬಂದೆವು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು

ಕೆಲದಿನಗಳಲ್ಲೇ ಅಲ್ಲೊಂದು ಸ್ಮಾರಕವೂ ನಿರ್ಮಾಣವಾಯಿತು. ಮುಂದಿನ ಕೆಲ ದಿನಗಳು ನನ್ನ ತಂದೆ ಕೆ ಆರ್ ವೆಂಕಟಸುಬ್ರಹ್ಮಣ್ಯ ಶಾಸ್ತ್ರಿ ಅಲಿಯಾಸ್ ಸ್ವಾಮಿ ನಿತ್ಯಾನಂದ ಸರಸ್ವತಿಯವರ ಅಂತಿಮ ಪಯಣದ ಮುಂದಿನ ಹಲವಾರು ಕ್ರಿಯಾವಿಧಿಗಳನ್ನು ಸಾಂಗವಾಗಿ ನೆರವೇರಿಸುವುದಾಯಿತು. ಸನ್ಯಾಸಿಗಳಾಗಿ ದೇಹತ್ಯಾಗ ಮಾಡಿದ್ದರಿಂದ ಬೇರೆ ರೀತಿಯಾದಂತಹ ಶಾಸ್ತ್ರ ವಿಧಿಗಳನ್ನು ನೆರವೇರಿಸಬೇಕಿತ್ತು. ಅದೆಲ್ಲವೂ ಸಾಂಗವಾಗಿ ನಡೆದು ಕೊನೆಯ ದಿನ ಅನೇಕ ಬಂಧು ಮಿತ್ರರ ಹಾಗೂ ಶಿಷ್ಯರ ಸಮಕ್ಷಮದಲ್ಲಿ ‘ಆರಾಧನೆ’ಯನ್ನು ನಡೆಸಲಾಯಿತು. ‘ಸಂತೋಷವಾಗಿ ನನ್ನನ್ನು ಬೀಳ್ಕೊಡಬೇಕು. ಯಾರೂ ಶೋಕಿಸಬಾರದು. ಇದು ಮುಕ್ತಿ, ಎಲ್ಲ ಕೋಟಲೆಗಳಿಂದ ಮುಕ್ತಿಯೆಂದು ಭಾವಿಸಿ ಕೊನೆಯ ದಿನ ಎಲ್ಲರೂ ಸಂತೋಷವಾಗಿ ಪಾಯಸ ಪರಮಾನ್ನಗಳನ್ನು ತಿಂದು ಹಾಡಿ ನರ್ತಿಸಿ ನನಗೆ ವಿದಾಯವನ್ನು ಹೇಳಬೇಕು” ಎಂದು ಅಣ್ಣ ಮೊದಲೇ ಸ್ಪಷ್ಟವಾಗಿ ಬರೆದಿಟ್ಟುಬಿಟ್ಟದ್ದರಿಂದ ಅದೆಲ್ಲವನ್ನೂ ಹಾಗೆಯೇ ಅನುಸರಿಸಲಾಯಿತು. ಬದುಕಿನಲ್ಲಿ ಹೀಗೇ ಒಂದಷ್ಟು ಶೂನ್ಯಗಳು ತುಂಬಿಕೊಳ್ಳುತ್ತಾ ಹೋಗುತ್ತವೆ. ಕಣ್ಣೆದುರಿಗಿದ್ದವರು ಇದ್ದಕ್ಕಿದ್ದಂತೆ ನೆನಪುಗಳ ಲೋಕಕ್ಕೆ ಜಾರಿಬಿಡುತ್ತಾರೆ. ಅಂತರಂಗವನ್ನು ಕಾಡುವ ಧ್ವನಿಗಳಾಗಿಬಿಡುತ್ತಾರೆ. ನಮ್ಮ ಒಳಗಣ್ಣು ನೋಡಿಕೊಳ್ಳುವ ಸಾಕ್ಷೀಪ್ರಜ್ಞೆಯ ಭಾಗವೂ ಆಗಿ ಬೆಳಕಾಗಿಬಿಡುತ್ತಾರೆ. ಅಣ್ಣ ಆಗಿರುವ ಹಾಗೆ.

‍ಲೇಖಕರು Admin MM

August 11, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: