ಶ್ರೀನಿವಾಸ ಪ್ರಭು ಅಂಕಣ: ರಂಜನಿ ಕೊಟ್ಟ ‘ಭಾವರಂಜನಿ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 124
—————
‘ಜೋಗಿ’ ಹಾಡಿನ ಯಶಸ್ಸು ಕಾವ್ಯರಚನೆಯನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಲು ರಂಜನಿಗೆ ಉತ್ತೇಜನ ನೀಡಿತು. ಈ ವೇಳೆಗಾಗಲೇ ಮಗಳು ರಾಧಿಕಾ , ಭರತನಾಟ್ಯವನ್ನು ಪ್ರಸಿದ್ಧ ನಾಟ್ಯಗುರು—ಕಲಾವಿದೆ ಶುಭಾ ಧನಂಜಯ ಅವರಲ್ಲಿ ಕಲಿಯಲು ಆರಂಭಿಸಿದ್ದಳು. ಅವರೂ ಸಹಾ ‘ಬಹಳ ಒಳ್ಳೆಯ ನೃತ್ಯ ಕಲಾವಿದೆಯಾಗಿ ರೂಪುಗೊಳ್ಳುವ ಎಲ್ಲ ಲಕ್ಷಣಗಳೂ ರಾಧಿಕೆಯಲ್ಲಿ ಕಾಣುತ್ತಿವೆ’ ಎಂದು ಸಂತಸ ಪಟ್ಟುಕೊಂಡು ತುಂಬು ಉತ್ಸಾಹ—ಪ್ರೀತಿಯಿಂದ ಶಿಕ್ಷಣ ನೀಡಲು ಆರಂಭಿಸಿದರು. ಮಗ ಅನಿರುದ್ಧನೂ ಸಹಾ ನಮ್ಮ ಮನೆಯ ಸಮೀಪದಲ್ಲೇ ಇದ್ದ ಗುರುಗಳ ಬಳಿ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದ. ಒಟ್ಟಿನಲ್ಲಿ ಮನೆಯವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸರಸ್ವತಿಯ ಉಪಾಸನೆಯಲ್ಲಿ ತಲ್ಲೀನರಾಗಿಬಿಟ್ಟಿದ್ದೆವು!

‘ಮುಕ್ತ’, ‘ನಾಕುತಂತಿ’ ಧಾರಾವಾಹಿಗಳ ಜೊತೆಗೆ ಮತ್ತೂ ಕೆಲ ಧಾರಾವಾಹಿಗಳಲ್ಲಿ ನಾನು ನಟಿಸತೊಡಗಿದ್ದೆ. ಹೀಗೇ ‘ಆಡಾಡ್ತಾ’, ಪಾತ್ರ ಮಾಡ್ತಾ ಅರ್ಧ ಆಯಸ್ಸು ಕಳೆದು ನೇಪಥ್ಯಕ್ಕೆ ಸರಿದೇ ಹೋದದ್ದು ಅರಿವಿಗೇ ಬರಲಿಲ್ಲ! ಅರೆ! ನನಗೆ ಐವತ್ತು ತುಂಬುತ್ತಿದೆ! ರಂಜನಿಗೆ ನನ್ನ ಐವತ್ತನೆಯ ಹುಟ್ಟುಹಬ್ಬದ ಸಂದರ್ಭಕ್ಕೆ ಭಾವಗೀತೆಗಳ ಒಂದು ಸಿ ಡಿ ಯನ್ನು ಸಿದ್ಧಪಡಿಸಿ ನನಗೆ ಉಡುಗೊರೆಯಾಗಿ ಕೊಡಬೇಕೆಂಬ ಹಂಬಲ!

ಆ ನಿಟ್ಟಿನಲ್ಲಿಯೂ ಕೆಲಸ ಆರಂಭವಾಯಿತು. ‘ಕನ್ನಡವೇ ಸತ್ಯ’ ರಂಗಣ್ಣ ಹಾಗೂ ಪ್ರಭಾಕರ್ ಅವರು ‘ನಿಮ್ಮ ಐವತ್ತನೆಯ ವರ್ಷದ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವ ಹೊಣೆ ನಮ್ಮ ಪಾಲಿಗಿರಲಿ’ ಎಂದು ಪ್ರೀತಿಯಿಂದ ನುಡಿದಾಗ ಹೃದಯ ತುಂಬಿ ಬಂದಿತ್ತು. ಗೆಳೆಯ ಬಿ.ವಿ.ರಾಜಾರಾಂ, “ನಿನ್ನ ಐವತ್ತನೆಯ ಹುಟ್ಟುಹಬ್ಬಕ್ಕೆ ನಿನ್ನ ಒಂದಾದರೂ ನಾಟಕ ಪ್ರಕಟವಾಗಲೇಬೇಕು; ಎಷ್ಟೋ ಸಮಯದಿಂದ ಹೇಳುತ್ತಿದ್ದರೂ ನೀನು ಈ ಕುರಿತಾಗಿ ಆಸಕ್ತಿ ತೋರುತ್ತಿಲ್ಲ.. ಆದರೆ ಈ ಸಲ ತಪ್ಪಿಸಿಕೊಳ್ಳುವ ಹಾಗಿಲ್ಲ! ಈವರೆಗೆ ನೀನು ಬರೆದಿರುವ ನಾಟಕಗಳಲ್ಲಿ ಯಾವುದನ್ನಾದರೂ ಕೊಡು.. ಪ್ರಕಟಣೆಯ ಜವಾಬ್ದಾರಿ ನನ್ನದು” ಎಂದು ಪ್ರೀತಿಪೂರ್ವಕವಾಗಿ ಆಗ್ರಹಿಸಿದ.

ಇಷ್ಟು ಹೇಳಿದ ಮೇಲೆ ಸುಮ್ಮನಿರಲಾದೀತೇ? ಬೆನ್ ಜಾನ್ಸನ್ ನ ‘volpone’ ನಾಟಕದ ನನ್ನ ರೂಪಾಂತರವಾದ ‘ಗುಳ್ಳೆನರಿ’ ನಾಟಕವನ್ನೇ ಪ್ರಕಟಿಸುವುದೆಂದು ತೀರ್ಮಾನಿಸಿದೆ. ರಂಜನಿಯೂ ಪರಮೋತ್ಸಾಹದಿಂದ ಗೀತರಚನೆಯಲ್ಲಿ ತೊಡಗಿಕೊಂಡಿದ್ದಳು. ಆ ಸಂದರ್ಭದಲ್ಲಿ ಕವಿಗುರು ಹೆಚ್ ಎಸ್ ವಿ ಅವರು ಹಾಗೂ ಬಿ ಆರ್ ಲಕ್ಷ್ಮಣರಾವ್ ಅವರು ನೀಡಿದ ಸಹಕಾರ—ಉತ್ತೇಜನ— ಮಾರ್ಗದರ್ಶನಗಳನ್ನು ಮರೆಯುವಂತೆಯೇ ಇಲ್ಲ. ತಮ್ಮೆಲ್ಲಾ ಸೃಜನಾತ್ಮಕ ಚಟುವಟಿಕೆ—ಕಾವ್ಯಕೃಷಿಗಳ ನಡುವೆಯೂ ಈ ಅಪರೂಪದ ಕವಿದ್ವಯರು ಉದಯೋನ್ಮುಖ—ಭರವಸೆಯ ಕವಿಗಳನ್ನು ತಿದ್ದಿ ರೂಪಿಸುವುದರಲ್ಲಿ ತೋರುವ ಕಾಳಜಿ—ಆಸಕ್ತಿಗಳು ನಿಜಕ್ಕೂ ಪ್ರಶಂಸಾರ್ಹ.

ನನ್ನ ಐವತ್ತನೆಯ ಹುಟ್ಟುಹಬ್ಬದ ಸಂದರ್ಭಕ್ಕೆ ರಂಜನಿಯ ಮೊಟ್ಟಮೊದಲ ಧ್ವನಿಸಾಂದ್ರಿಕೆ ಲೋಕಾರ್ಪಣೆಯಾಗುವುದಿತ್ತು. ಉಪಾಸನಾ ಮೋಹನ್ ಒಂದು ತಪಸ್ಸಿನ ಹಾಗೆ ಹಾಡುಗಳಿಗೆ ಸ್ವರ ಸಂಯೋಜಿಸುವುದರಲ್ಲಿ ಮಗ್ನರಾಗಿದ್ದರು. ಪದೇ ಪದೇ ಕವಿದ್ವಯರನ್ನು ಉಪಾಸನಾ ಮೋಹನ್ ರೊಂದಿಗೆ ಭೇಟಿಯಾಗಿ ಕವಿತೆ—ಸಂಯೋಜನೆಗಳ ಬಗ್ಗೆ ಮಂಥನ ನಡೆಸಿ ಎಲ್ಲಾ ಗೀತೆಗಳನ್ನೂ ಸಿದ್ಧಪಡಿಸಿದ ಆ ಒಂದು ಪ್ರಕ್ರಿಯೆಯೇ ಚೇತೋಹಾರಿ. ಕೊನೆಗೆ ರಾಗಿಗುಡ್ಡದ ಬಳಿ ಇರುವ ಶ್ರವಣ್ ಸ್ಟುಡಿಯೋದಲ್ಲಿ ಹಾಡುಗಳ ರೆಕಾರ್ಡಿಂಗ್ ಎಂದು ತೀರ್ಮಾನವಾಯಿತು. ನುರಿತ ವಾದಕರು—ಗಾಯಕರೊಂದಿಗೆ ಎರಡು ದಿನಗಳ ಕಾಲ ಸ್ಟುಡಿಯೋದಲ್ಲಿ ಮೋಹನ್ ರ ನೇತೃತ್ವದಲ್ಲಿ ನಡೆದ ಈ ಸಂಗೀತೋಪಾಸನೆ ಸದಾ ನೆನಪಿನಲ್ಲಿರುವಂಥದ್ದು. ತಮ್ಮೆಲ್ಲಾ ಕಾರ್ಯಗಳನ್ನೂ ಬದಿಗೊತ್ತಿ ಹೆಚ್ ಎಸ್ ವಿ ಹಾಗೂ ಬಿ ಆರ್ ಎಲ್ ಇಬ್ಬರೂ ಆ ಎರಡೂ ದಿನಗಳು ನಮ್ಮೊಟ್ಟಿಗೇ ಕಳೆದದ್ದೂ ಸಹಾ ಸದಾ ಸ್ಮರಣೀಯ ಗಳಿಗೆಗಳು.

ಎಲ್ಲ ಸಂಭ್ರಮದ ನಡುವೆ ಇದ್ದಕ್ಕಿದ್ದ ಹಾಗೆ ಎದುರಾದ ವಿಚಾರ—ಧ್ವನಿ ಸಾಂದ್ರಿಕೆಗೆ ನಾಮಕರಣವೇ ಆಗಿಲ್ಲ! ಹೌದಲ್ಲಾ! ಹೆಸರಿನ ಬಗ್ಗೆ ನಾವಾರೂ ಯೋಚಿಸಿಯೇ ಇರಲಿಲ್ಲ! ಒಂದು ಕ್ಷಣ ಎಲ್ಲರೂ ಹೆಸರಿನ ಚಿಂತನೆಯಲ್ಲಿ ಮುಳುಗಿದೆವು. ಥಟ್ಟನೆ ಮೊಳಗಿತು ಕವಿವಾಣಿ: “ಬೇರೆ ಯಾವುಯಾವುದೋ ಹೆಸರು ಯಾಕೆ ಇಡಬೇಕು? ಭಾವರಂಜನಿ ಅಂತ ಇಟ್ಟುಬಿಡಿ…ಬಹಳ ಅನುರೂಪವಾಗಿರುತ್ತೆ” ಅಂದರು ಹೆಚ್ ಎಸ್ ವಿ ! ಅರೆಚಣದಲ್ಲಿ ನಾಮಕರಣ ಕಾರ್ಯ ಮುಗಿದೇ ಹೋಯಿತು!

ಆಗೆಲ್ಲಾ ಧ್ವನಿಸಾಂದ್ರಿಕೆಗಳ ಆರಂಭದಲ್ಲಿ ಹಿರಿಯ ಕವಿಗಳಿಂದಲೋ ಸಂಯೋಜಕರಿಂದಲೋ ಹಾರೈಕೆಯ ರೂಪದ ಕೆಲ ಮಾತುಗಳನ್ನು ಅಳವಡಿಸಿಕೊಳ್ಳುತ್ತಿದ್ದುದು ವಾಡಿಕೆ. ಹಿರಿಯ ಕವಿಗಳೂ ಪ್ರೀತಿಯ ಮೇಷ್ಟ್ರೂ ಆದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಂದ ಈ ಹಾರೈಕೆಯ ನುಡಿಗಳನ್ನು ಹೇಳಿಸಬಹುದೆಂದು ಮೋಹನ್ ಅಭಿಪ್ರಾಯ ಪಟ್ಟರು. ಸರಿ, ಮರುದಿನವೇ ನಾನೂ ರಂಜನಿಯೂ ಸಿದ್ಧವಾಗಿದ್ದ ಸಿ ಡಿ ಯ ಒಂದು ಪ್ರತಿಯೊಂದಿಗೆ ಮೇಷ್ಟ್ರನ್ನು ಕಂಡುಬರಲು ಅವರ ಮನೆಗೇ ಹೋದೆವು. “ಲೋಕಾರ್ಪಣೆಯಾಗುತ್ತಿರುವ ರಂಜನಿಯ ಮೊಟ್ಟಮೊದಲ ಧ್ವನಿ ಸಾಂದ್ರಿಕೆಗೆ ನಿಮ್ಮ ಆಶೀರ್ವಾದ ಪೂರ್ವಕ ನುಡಿಗಳ ಪೀಠಿಕೆ ಬೇಕು.. ದಯವಿಟ್ಟು ಹರಸಿರಿ” ಎಂದು ಕೇಳಿಕೊಂಡೆವು. ತುಂಬು ಉತ್ಸಾಹದಿಂದ ಮೇಷ್ಟ್ರ ಪ್ರತಿಕ್ರಿಯೆಗೆ ಕಾಯುತ್ತಿದ್ದ ನಮಗೆ ಅಲ್ಲಿ ಮಾತ್ರ ನಿರಾಸೆ ಕಾದಿತ್ತು! “sorry ಪ್ರಭು.. ಈ ಕೆಲಸ ನನ್ನಿಂದಾಗೋಲ್ಲ” ಎಂದುಬಿಟ್ಟರು ಮೇಷ್ಟ್ರು!

ಚಕಿತರಾದ ನಮಗೆ ಅವರು ತಮ್ಮ ಅಸಮ್ಮತಿಯ ಕಾರಣಗಳನ್ನು ವಿವರಿಸಿದ್ದು ಹೀಗೆ: “ಇತ್ತೀಚೆಗೆ ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಪ್ರವೃತ್ತಿಯ ಕವಿಗಳ ಸಂಖ್ಯೆ ವಿಪರೀತವಾಗಿಬಿಟ್ಟಿದೆ. ನಾಲ್ಕು ಹಾಡು ಗೀಚ್ತಾರೆ.. ಸಿ ಡಿ ರಿಲೀಸ್ ಮಾಡ್ತಾರೆ.. ಆಮೇಲೆ ಮಾಯ ಆಗಿಬಿಡ್ತಾರೆ.. ಕ್ಯಾಸೆಟ್ ಕವಿಗಳು ಅಂತ ನಮ್ಮ ವಿಮರ್ಶಕರು ನಮ್ಮೆಲ್ಲರನ್ನೂ ಸೇರಿಸಿಕೊಂಡು ಲೇವಡಿ ಮಾಡ್ತಾರೆ… ಅಸಲಿಗೆ ಒಳ್ಳೇ ಭಾವಗೀತೆ ಬರೆಯೋದು ಎಷ್ಟು ಕಷ್ಟ ಅಂತ ಅವರಿಗೆ ಗೊತ್ತಿದ್ರೆ ತಾನೇ? ಅದೇನೇ ಆಗಲಿ, ಒಂದಾದರೂ ಕವನ ಸಂಕಲನ ಪ್ರಕಟಿಸದೇ ಇರೋರು ಸಿ ಡಿ ಮಾಡ್ತೀವಿ ಅಂದ್ರೆ ನಾನು ಅಂಥವರಿಗೆ ಪ್ರೋತ್ಸಾಹ ಕೊಡೋಲ್ಲ. ನನ್ನ ಮಾತನ್ನ ತಪ್ಪಾಗಿ ಭಾವಿಸಬೇಡಿ. ಈ ಥರದ ಒಂದು ನಿಯಮಾನ ನಾನೇ ಹಾಕಿಕೊಂಡು ಬಿಟ್ಟಿದೇನೆ” ಅಂದರು ಮೇಷ್ಟ್ರು. ನ

ಮಗೆ ನಿರಾಸೆಯಾದರೂ ಸಹಾ ಮೇಷ್ಟ್ರ ಮಾತಿನಲ್ಲಿ ಹುರುಳಿದೆ ಅನ್ನಿಸಿತು. ರಂಜನಿಯಂತೂ, “ಆದಷ್ಟು ಬೇಗ ಕವನ ಸಂಕಲನ ಸಿದ್ಧಪಡಿಸ್ತೀನಿ ಮೇಷ್ಟ್ರೇ..ಆಶೀರ್ವಾದ ಮಾಡಿ” ಎಂದಳು. ಮೇಷ್ಟ್ರಿಗೆ ನಮಸ್ಕರಿಸಿ ಅಲ್ಲಿಂದ ಹೊರಟೆವು. ಮತ್ತೆ ಆ ಸಮಯಕ್ಕೆ ನಮಗೆ ಒದಗಿ ಬಂದು ಬೆನ್ನು ತಟ್ಟಿದವರು ಹೆಚ್ ಎಸ್ ವಿ ಅವರು! ‘ಭಾವರಂಜನಿ’ ಧ್ವನಿ ಸುರುಳಿ—ಧ್ವನಿ ಸಾಂದ್ರಿಕೆಗಳಿಗೆ ಸೊಗಸಾದ ಪ್ರಾರಂಭದ ಆಶಯ ನುಡಿಗಳನ್ನು ಆಡಿ ಹರಸಿದರು. ಉಪಾಸನಾ ಮೋಹನ್ ಅವರಂತೂ ಎಂಟು ಹಾಡುಗಳಿಗೆ ಅಪೂರ್ವವಾದ ರೀತಿಯಲ್ಲಿ ರಾಗ ಸಂಯೋಜನೆ ಮಾಡಿದ್ದರು. ಸ್ವತಃ ಮೋಹನ್ ಹಾಗೂ ನಾಡಿನ ಪ್ರಸಿದ್ಧ ಗಾಯಕಿಯರಾದ ರತ್ನಮಾಲಾ ಪ್ರಕಾಶ್ , ಅರ್ಚನಾ ಉಡುಪ, ಎಂ ಡಿ ಪಲ್ಲವಿ ಹಾಗೂ ಮಂಗಳಾ ರವಿ ಅವರು ಧ್ವನಿ ಸಾಂದ್ರಿಕೆಯ ಗೀತೆಗಳನ್ನು ಮನಸೆಳೆಯುವ ರೀತಿಯಲ್ಲಿ ಹಾಡಿದ್ದರು.

ಇತ್ತ ಬಿ.ವಿ.ರಾಜಾರಾಂ ಅವರ ಗೆಳೆಯರಾದ ಭಾಗ್ಯಲಕ್ಷ್ಮೀ ಪ್ರಕಾಶನದ ನಂಜುಂಡಪ್ಪನವರು ‘ಗುಳ್ಳೆನರಿ’ ನಾಟಕದ ಪುಸ್ತಕ ರೂಪವನ್ನು ಸೊಗಸಾಗಿ ಸಿದ್ಧಪಡಿಸಿದ್ದರು.

ಇನ್ನು ಪುಸ್ತಕ—ಸಿ ಡಿ ಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಯಾರನ್ನು ಆಹ್ವಾನಿಸುವುದೆಂಬುದರ ಬಗ್ಗೆ ಚಿಂತನೆ ಆರಂಭವಾಯಿತು. ಸಿ ಡಿ—ಕ್ಯಾಸೆಟ್ ಅನ್ನು ಅಕ್ಕ ಶ್ಯಾಮಲಾ ಭಾವೆಯವರಿಂದಲೇ ಲೋಕಾರ್ಪಣೆ ಮಾಡಿಸುವುದೆಂದೂ ಸಿ ಡಿ ಯ ಹಾಡುಗಳ ಬಗ್ಗೆ ಬಿ ಆರ್ ಎಲ್ ಅವರು ಮಾತಾಡುವುದೆಂದೂ ಒಂದೇ ಕ್ಷಣದಲ್ಲಿ ತೀರ್ಮಾನಿಸಿಬಿಟ್ಟೆವು. ಹೆಚ್ ಎಸ್ ವಿ ಅವರು ಆ ಸಮಯದಲ್ಲಿ ಮತ್ತೊಂದು ಕಾರ್ಯಕ್ರಮಕ್ಕಾಗಿ ಬೇರೆ ಊರಿಗೆ ಹೋಗುವವರಿದ್ದರು. ನಾಟಕ ಕೃತಿಯನ್ನು ಲೋಕಾರ್ಪಣೆ ಮಾಡಲು ಆಗ ಕನ್ನಡ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದ ಶ್ರೀನಿವಾಸ್ ಜಿ ಕಪ್ಪಣ್ಣ ಅವರನ್ನು ವಿನಂತಿಸಿಕೊಂಡೆವು. ಗುಳ್ಳೆನರಿ ನಾಟಕದ ಬಗ್ಗೆ ಮಾತಾಡಲು ಪ್ರೀತಿಯ ಗೆಳೆಯ ನರಹಳ್ಳಿ ಬಾಲು ಸಂತೋಷದಿಂದ ಒಪ್ಪಿಕೊಂಡ. ಬಿ.ವಿ.ರಾಜಾರಾಂ ಕಾರ್ಯಕ್ರಮ ನಿರ್ವಹಣೆಯ ಹೊಣೆ ಹೊತ್ತುಕೊಂಡ. ರಂಗ ಸಂಘಟಕ, ಮಿತ್ರ ನಾಗರಾಜಮೂರ್ತಿ ರಂಗಗೀತೆಗಳ ಗಾಯನಕ್ಕೆ ತಂಡವನ್ನು ಸಿದ್ಧಗೊಳಿಸಿದ. ಉಪಾಸನಾ ಮೋಹನ್ ಅವರೂ ಸಹಾ ಕೆಲ ಗೀತೆಗಳನ್ನು ಪ್ರಸ್ತುತ ಪಡಿಸಲು ವ್ಯವಸ್ಥೆ ಮಾಡಿಕೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾರು ನಿರ್ವಹಿಸಬೇಕೆಂಬುದರ ಬಗ್ಗೆ ಇನ್ನೂ ತೀರ್ಮಾನಕ್ಕೆ ಬರಲಾಗಿರಲಿಲ್ಲ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ನಮ್ಮಿಬ್ಬರಿಗೂ ಸಾಹಿತ್ಯದ ಗುರುಗಳು; ಅವರನ್ನೇ ಏಕೆ ವಿನಂತಿಸಿಕೊಳ್ಳಬಾರದು? ಎಂದು ರಂಜನಿ ಸೂಚಿಸಿದಳು. ನನಗೇ ಸ್ವಲ್ಪ ಅಳುಕು: ಹಿಂದೆ ಒಂದಿಷ್ಟು ಹೋರಾಟ ಮಾಡಿದ್ದ ಹಿನ್ನೆಲೆಯಲ್ಲಿ ನನ್ನ ಕಾರ್ಯಕ್ರಮಕ್ಕೆ ಬರಲು ಒಪ್ಪುವರೋ ಇಲ್ಲವೋ ಎಂಬ ಸಂಶಯ! ಏನಾದರಾಗಲಿ ಎಂದು ನಾನೂ ರಂಜನಿಯೂ ಅವರ ಮನೆಗೆ ಹೋಗಿ ‘ನನ್ನ ಐವತ್ತನೆಯ ಹುಟ್ಟುಹಬ್ಬ ಹಾಗೂ ರಂಜನಿಯ ಪ್ರಥಮ ಸಿ ಡಿ ಯ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವು ವಹಿಸಿಕೊಂಡು ನಿಮ್ಮ ಈ ಇಬ್ಬರೂ ಶಿಷ್ಯರನ್ನು ಆಶೀರ್ವದಿಸಬೇಕು’ ಎಂದು ಪ್ರಾರ್ಥಿಸಿಕೊಂಡೆವು. ಅರೆಕ್ಷಣವೂ ಯೋಚಿಸದ ಮೇಷ್ಟ್ರು, “ಆಯ್ತು ಪ್ರಭು.. ಖಂಡಿತ ಬರ್ತೀನಿ.. ನೀವಿಬ್ಬರೂ ನನ್ನ ಪ್ರೀತಿಯ ಶಿಷ್ಯರು. ನಿಮ್ಮ ಕಾರ್ಯಕ್ರಮಕ್ಕೆ ಬರದೇ ಇರ್ತೇನೆಯೇ?” ಎಂದು ಆಶ್ವಾಸನೆ ನೀಡಿದಾಗ ನಮ್ಮಿಬ್ಬರಿಗೂ ಹೇಳತೀರದ ಸಂತೋಷ! ಸಿ ಡಿ ಹಾಗೂ ನಾಟಕದ ಪ್ರತಿಗಳನ್ನು ಅವರ ಅವಗಾಹನೆಗಾಗಿ ಒಪ್ಪಿಸಿ ಅವರ ಆಶೀರ್ವಾದ ಪಡೆದು ಅಲ್ಲಿಂದ ಹೊರಟೆವು.

ಕಾರ್ಯಕ್ರಮದ ದಿನ ಎ ಡಿ ಎ ರಂಗಮಂದಿರ ಬಂಧು ಮಿತ್ರರಿಂದ ಕಿಕ್ಕಿರಿದು ಹೋಗಿತ್ತು. ರಂಗಸಜ್ಜಿಕೆಯನ್ನು ಅಣಿಗೊಳಿಸುವ ಹೊಣೆ ಹೊತ್ತಿದ್ದವರು ನನ್ನ ಪ್ರೀತಿಯ ಕಿರಿಯ ಸ್ನೇಹಿತ—ರಂಜನಿಯ ಸಹೋದ್ಯೋಗಿ ತ್ರಿಲೋಚನ ಒಡೆಯರ್. ಈ ಒಡೆಯರ್ ಸಹಾ ನಮ್ಮ ಕುಟುಂಬಕ್ಕೆ ತೀರಾ ಹತ್ತಿರವಾಗಿರುವವರು. ನಮ್ಮ ಕುಟುಂಬದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಒಡೆಯರ್ ಇರಲೇಬೇಕು. ಮಾರುಕಟ್ಟೆಯಿಂದ ಬಗೆಬಗೆಯ ಹೂಗಳನ್ನು ತಂದು ವೇದಿಕೆಯನ್ನು ನಯನ ಮನೋಹರವಾಗಿ ಅಣಿಗೊಳಿಸುವುದರಲ್ಲಿ ಒಡೆಯರ್ ಸಿದ್ಧಹಸ್ತರು. ಅಂದೂ ಸಹಾ ಅವರ ಕೈಚಳಕದಿಂದ ಸೊಗಸಾದ ವೇದಿಕೆ ಸಿದ್ಧಗೊಂಡಿತ್ತು. ರಂಗಣ್ಣ—ಪ್ರಭಾಕರ್ ಅವರು ಕಾರ್ಯಕ್ರಮಕ್ಕೆ ಸಂಬಂಧಪಟ್ಟಹಾಗೆ ಉಳಿದ ಏರ್ಪಾಟುಗಳನ್ನೆಲ್ಲಾ ಸಮರ್ಪಕವಾಗಿ ಮಾಡಿದ್ದರು. ಎಲ್ಲ ಗಣ್ಯರೂ ಆಗಮಿಸಿದ ಮೇಲೆ ನಿಗದಿತ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಂದೆ ವೇದಿಕೆಯ ಮೇಲೆ ಎರಡೂವರೆ ತಾಸಿನಷ್ಟು ಸಮಯ ಜರುಗಿದ್ದು ಕೇವಲ ನನ್ನ ಐವತ್ತನೆಯ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲ, ಅದೊಂದು ಸುಂದರ ಸಾಂಸ್ಕೃತಿಕ ಹಬ್ಬ; ಸಾಹಿತ್ಯಲೋಕದ ದಿಗ್ಗಜರ ಮಾತಿನ ಹಬ್ಬ; ಪ್ರತಿಭಾವಂತ ಗಾಯಕ—ವಾದಕರು ಮೇಳೈಸಿ ಸೃಷ್ಟಿಸಿದ ರಾಗ ಲಯಗಳ ಹಬ್ಬ; ಸಂತಸ—ಸಂಭ್ರಮಗಳಿಂದ ಪರವಶರಾಗಿದ್ದ ಸಹೃದಯರು ತಮ್ಮ ಕರತಾಡನ-ಹರ್ಷೋದ್ಗಾರಗಳ ಮೂಲಕ ತೆರೆದಿಟ್ಟ ಪ್ರೀತಿ ವಿಶ್ವಾಸಗಳ ಹಬ್ಬ!

ವೇದಿಕೆಯ ಮೇಲಿದ್ದ ಗಣ್ಯರೆಲ್ಲರ ಮಾತುಗಳನ್ನೂ ಉದ್ಧರಿಸಹೊರಟರೆ ಅದೇ ಒಂದು ಕಿರು ಹೊತ್ತಗೆಯಾಗಿಬಿಡುವ ಅಪಾಯವಿರುವುದರಿಂದ ಕೆಲ ಮುಖ್ಯ ಮಾತುಗಳನ್ನಷ್ಟೇ ನೆನಪಿಸಿಕೊಳ್ಳುತ್ತೇನೆ. ಅಕ್ಕ ಶ್ಯಾಮಲಾಭಾವೆ ಅವರದು ಎಂದಿನಂತೆ ವಾತ್ಸಲ್ಯ ಪೂರಿತ ಶುಭಹಾರೈಕೆಯ ನಲ್ನುಡಿ. “ವಸಂತದ ಆರಂಭದಲ್ಲಿ ಇದ್ದಕ್ಕಿದ್ದಂತೆ ಬೀಸತೊಡಗುವ ಹೊಸಗಾಳಿಯ ನವುರು ಮತ್ತು ಸಂವೇದನೆ ರಂಜನಿಯವರ ಗೀತೆಗಳಲ್ಲಿದೆ…ಉತ್ತಮ ಸಾಹಿತ್ಯ, ಯುಕ್ತ ಸ್ವರ ಸಂಯೋಜನೆ, ಮೋಹಕ ಗಾಯನದ ಅಪೂರ್ವ ಸಂಗಮ ರಂಜನಿ ಪ್ರಭು ಅವರ ಈ ಧ್ವನಿ ಸುರುಳಿ—ಭಾವರಂಜನಿ”— ಇದು ಸಿ ಡಿ ಯಲ್ಲಿರುವ ಹೆಚ್ ಎಸ್ ವಿ ಅವರ ಮೊದಲ ಮಾತು.

”ರಂಜನಿಯವರ ಗೀತೆಗಳನ್ನು ಓದಿದರೆ ಮೊದಲು ಸ್ಪಷ್ಟವಾಗುವ ಸಂಗತಿ ಎಂದರೆ ಇಲ್ಲೊಬ್ಬ ಸಹಜ ಕವಿ ಇದ್ದಾರೆಂಬುದು..ಆಧುನಿಕ ಕನ್ನಡದ ಭಾವಕವಿಗಳ ಸಾಲಿಗೆ ಸೇರಿದ ಕವಯತ್ರಿಯರಲ್ಲಿ ಮೊದಲಿಗರು ಕಮಲ ಎಂ ಆರ್ ಹಾಗೂ ರಂಜನಿ ಪ್ರಭು”— ಎಂದವರು ಬಿ.ಆರ್. ಲಕ್ಷ್ಮಣರಾವ್.

ಗುಳ್ಳೆನರಿ ನಾಟಕವನ್ನು ಬಿಡುಗಡೆ ಮಾಡಿದ ಕಪ್ಪಣ್ಣ ಜಿ ಶ್ರೀನಿವಾಸ್ ಅವರದು ಎಂದಿನಂತೆ ಲಘು ಹಾಸ್ಯದ ಧಾಟಿಯ ಶುಭ ಹಾರೈಕೆಯ ಮಾತುಗಳು. ಬೆನ್ ಜಾನ್ಸನ್ ಹಾಗೂ volpone ನಾಟಕದ ಬಗ್ಗೆ ಅರ್ಥಪೂರ್ಣ ಒಳನೋಟಗಳನ್ನು ನೀಡಿ ಗುಳ್ಳೆನರಿ ನಾಟಕ ರೂಪಾಂತರದ ಬಗ್ಗೆ ನರಹಳ್ಳಿ ಬಾಲು ಹೇಳಿದ್ದು: ” volpone ನಾಟಕವನ್ನು ಪ್ರಭು ಕನ್ನಡಕ್ಕೆ ಅನುವಾದಿಸಿಲ್ಲ.. ಬದಲಿಗೆ ಕನ್ನಡದ ಸಂದರ್ಭಕ್ಕೆ ಹೊಂದುವಂತೆ ಸೊಗಸಾಗಿ ರೂಪಾಂತರ ಮಾಡಿದ್ದಾರೆ. ಕನ್ನಡದ ಸಂದರ್ಭಕ್ಕೆ ಒಗ್ಗುವ ಹಾಗೆ ಈ ನಾಟಕ ಅನುಸೃಷ್ಟಿಯಾಗಿದೆ, ಮರುಹುಟ್ಟು ಪಡೆದಿದೆ.. ರೂಪಾಂತರ ಪ್ರಕ್ರಿಯೆಯಲ್ಲಿ ಪ್ರಭು ಅದ್ಭುತವಾದ ಯಶಸ್ಸನ್ನು ಪಡೆದಿದ್ದಾರೆ.”

ಇನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ನಮ್ಮನ್ನು ಹರಸಿದ್ದು ಹೀಗೆ:
“ನಾನು ನನ್ನ ಸುದೀರ್ಘ ಅಧ್ಯಾಪನ ವೃತ್ತಿಯಲ್ಲಿ ಅನೇಕಾನೇಕ ಶಿಷ್ಯರನ್ನು ಸಂಪಾದಿಸಿದ್ದೇನೆ. ಆ ಸಂಪತ್ತಿನಲ್ಲಿರುವ ಒಂದು ಅನರ್ಘ್ಯ ರತ್ನ ಶ್ರೀನಿವಾಸ ಪ್ರಭು.” (ರಾಷ್ಟ್ರಕವಿಗಳು ಹಾಗೆಂದಾಗ ಮೂರ್ಛೆ ಹೋಗದಿದ್ದುದು ನನ್ನ ಪುಣ್ಯ!!) ಕವಿಗಳು ಮುಂದುವರಿದು ಹೀಗೆಂದರು: “ರಂಜನಿ ಪ್ರಭು ಅವರ ಗೀತೆಗಳು ನನ್ನನ್ನು ಪ್ರೀತಿ ತುಂಬಿದ ಮಾಧುರ್ಯದ ಜಗತ್ತಿಗೆ ಕರೆದುಕೊಂಡು ಹೋಗಿವೆ… ನವೋದಯದ ಬೇಂದ್ರೆ, ಕುವೆಂಪು, ಕೆ ಎಸ್ ನ—ಇಂಥವರ ಕಾವ್ಯ ಜಗತ್ತಿಗೆ ಮತ್ತೆ ‘ಹೊನ್ನ ಪಲ್ಲಕ್ಕಿ’ಯಲ್ಲಿ ಈ ಗೀತೆಗಳು ನಮ್ಮನ್ನು ಕರೆದುಕೊಂಡು ಹೋಗುತ್ತವೆ.”

ಹಿರಿಯ ಶ್ರೇಷ್ಠ ಕವಿಗಳಿಂದ ಇಂಥ ಮೆಚ್ಚುಗೆಯನ್ನೂ ಪ್ರೀತಿಯ ಹಾರೈಕೆಗಳನ್ನೂ ಪಡೆದ ನಾವು ಅಂದು ಅನುಭವಿಸಿದ್ದು ಪರಮ ಧನ್ಯತೆಯ ಭಾವ…ಇಷ್ಟು ವರ್ಷಗಳ ಬದುಕು ವ್ಯರ್ಥ ಸಾಗಿಲ್ಲವೆಂಬ ಸಾರ್ಥಕತೆಯ ವಿನೀತ ಭಾವ. ಸಮಾರಂಭವನ್ನು ಮತ್ತಷ್ಟು ಕಳೆಗಟ್ಟಿಸಿದ್ದು ನನ್ನ ರಂಗಮಿತ್ರರು ಸಾದರ ಪಡಿಸಿದ ರಂಗಗೀತೆಗಳು; ಉಪಾಸನಾ ಮೋಹನ್ ಹಾಗೂ ಇತರ ಗಾಯಕ ಗಾಯಕಿಯರು ಮಧುರಾತಿ ಮಧುರವಾಗಿ ಪ್ರಸ್ತುತ ಪಡಿಸಿದ ‘ಭಾವರಂಜನಿ’ ಸಿ ಡಿ ಯ ಕೆಲ ಗೀತೆಗಳು ಹಾಗೂ ಬಿ.ವಿ.ರಾಜಾರಾಂ ನ ತೆಳುಹಾಸ್ಯ ಲೇಪಿತ ನಿರೂಪಣೆ. ಒಟ್ಟಾರೆ ಅತ್ಯಂತ ಆತ್ಮೀಯ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆದ ನನ್ನ ಐವತ್ತನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಸದಾ ಸರ್ವಕಾಲ ನಮ್ಮ ನೆನಪಿನಲ್ಲಿ ಉಳಿದಿರುವಂಥದ್ದು.

‍ಲೇಖಕರು avadhi

February 9, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: