ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
143
ಈ ಶತಮಾನದ ಮೊದಲ ದಶಕದ ಕೊನೆಗೇ ಇರಬೇಕು. ನನ್ನನ್ನು ನಾನು ಒರೆಗೆ ಒಡ್ಡಿಕೊಳ್ಳುವ ಒಂದು ಪ್ರಸಂಗ ಎದುರಾಯಿತು. ಒಂದು ದಿನ ಆತ್ಮೀಯ ಮಿತ್ರ ಸೂರಿ ಅಲಿಯಾಸ್ ಸುರೇಂದ್ರನಾಥ್ ನನಗೆ ಫೋನ್ ಮಾಡಿ, “ಗೆಳೆಯಾ, ‘ರಂಗಶಂಕರ’ದ ವತಿಯಿಂದ ಷೇಕ್ಸ್ ಪಿಯರ್ ನ ನಾಟಕಗಳ ಒಂದು ಉತ್ಸವವನ್ನು ಆಯೋಜಿಸುತ್ತಿದ್ದೇವೆ. ಇದು ಮುಖ್ಯವಾಗಿ ಆ ಮಹಾನ್ ನಾಟಕಕಾರನನ್ನು ನೆನೆಸಿಕೊಂಡು ಇಂದಿನ ಪೀಳಿಗೆಗೆ ಅವನ ಶ್ರೇಷ್ಠತೆಯ ಬಗ್ಗೆ ಅರಿವು ಮೂಡಿಸುವಂತಹ ಪ್ರಯತ್ನ ಎನ್ನಬಹುದು. ನೀನು ನಿನ್ನ ಸುಪ್ರಸಿದ್ಧ ಹ್ಯಾಮ್ಲೆಟ್ ನಾಟಕವನ್ನು ಮಾಡಬಹುದೇ”? ಎಂದ. ಇಂಥದೊಂದು ಆಹ್ವಾನವನ್ನು ನಾನು ಕನಸು ಮನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ! ನಾನು ಹ್ಯಾಮ್ಲೆಟ್ ಪಾತ್ರವನ್ನು ನಿರ್ವಹಿಸಿ ದಶಕಗಳೇ ಕಳೆದುಹೋಗಿದ್ದವು! ಈಗ, ಅದೂ ವಯಸ್ಸು ಐವತ್ತು ದಾಟಿದ ಮೇಲೆ ನಾನು ಡೆನ್ಮಾರ್ಕಿನ ರಾಜಕುಮಾರನ ಪಾತ್ರವನ್ನು ನಿರ್ವಹಿಸಲು ಸಾಧ್ಯವೇ? ಇಡಿಯ ನಾಟಕದ ತುಂಬಾ ವ್ಯಾಪಿಸಿಕೊಂಡು ಪುಟಗಟ್ಟಲೆ ಮಾತಾಡುವ, ರೊಚ್ಚಿನಿಂದ ಅಬ್ಬರಿಸುವ, ದ್ವಂದ್ವಗಳಲ್ಲಿ ನರಳಿ ತೊಳಲುತ್ತಾ ಸುದೀರ್ಘ ಸ್ವಗತಗಳಲ್ಲಿ ಶೋಕಿಸುವ ಹ್ಯಾಮ್ಲೆಟ್ ನ ಅತಿ ಸಂಕೀರ್ಣ ಪಾತ್ರವನ್ನು ಈಗ ನನ್ನಿಂದ ನಿರ್ವಹಿಸಲಾದೀತೇ? ಅಷ್ಟು ಕಸುವು ಕ್ಷಮತೆ ನನ್ನಲ್ಲಿದೆಯೇ? ಎಂದು ಚಿಂತೆಗೆ ಬಿದ್ದ ನನ್ನನ್ನು ಸೂರಿ ತಟ್ಟಿ ಎಚ್ಚರಿಸಿದ: “ಅಷ್ಟು ಚಿಂತಿಸಬೇಡ. ಮೊದಲನೇದಾಗಿ ನೀನು ಇಡೀ ನಾಟಕವನ್ನ ಮಾಡಬೇಕಾಗಿಲ್ಲ. ಒಂದು ಗಂಟೆ ಹದಿನೈದು ಅಥವಾ ಇಪ್ಪತ್ತು ನಿಮಿಷಕ್ಕೆ ಹೊಂದಿಸಿಕೊಂಡು ತುಂಬಾ ಮುಖ್ಯವಾದ ದೃಶ್ಯಗಳನ್ನ ಒಂದು ಮಾಂಟಾಜ್ ರೀತಿಯಲ್ಲಿ ಪ್ರಸ್ತುತಿ ಪಡಿಸಿದರೂ ಸಾಕು. ಈ ರೀತಿ ದಿನಕ್ಕೆ ಎರಡು ನಾಟಕಗಳ ಪ್ರದರ್ಶನವನ್ನ ಆಯೋಜಿಸ್ತಿದೇವೆ. ಮುಖ್ಯ ಷೇಕ್ಸ್ ಪಿಯರ್ ನ ಶ್ರೇಷ್ಠ ನಾಟಕಗಳು ಯುವ ಪೀಳಿಗೆಗೆ ಪರಿಚಯ ಆಗಬೇಕು ಅನ್ನೋದು ನಮ್ಮ ಉದ್ದೇಶ. ಯಾವುದಕ್ಕೂ ಯೋಚನೆ ಮಾಡಿ ನಾಳೆ ತಿಳಿಸು ಪರವಾಗಿಲ್ಲ” ಎಂದ ಸೂರಿ.
ರಂಗ ನಿರ್ದೇಶಕ ಸೂರಿ
ನಿಜಕ್ಕೂ ಯೋಚನೆ ಮಾಡಬೇಕಾದ ವಿಷಯವೇ ಆಗಿತ್ತು! ಮೂಲ ನಾಟಕ ಹೆಚ್ಚುಕಡಿಮೆ ಮೂರು ತಾಸಿನದು. ಅದನ್ನು ಒಂದೂಕಾಲು ಗಂಟೆಗೆ ಇಳಿಸಬೇಕು! ಮಾಂಟಾಜ್ ರೀತಿಯಲ್ಲಿಯೇ ದೃಶ್ಯಗಳನ್ನು ಜೋಡಿಸಿದರೂ ಕಥೆ ಅರ್ಥವಾಗುವಂತಿರಬೇಕು. ಅಷ್ಟೇ ಅಲ್ಲ, ಪ್ರೇಕ್ಷಕರಿಗೆ ಗೊಂದಲವಾಗದಂತೆ ಸುಲಲಿತವಾದ ಒಂದು ಓಘ ಇರಬೇಕು. ಜತೆಗೆ ಒಂದೇ ದಿನ ಎರಡು ನಾಟಕಗಳ ಪ್ರದರ್ಶನವಿದ್ದುದರಿಂದ, ದೃಶ್ಯ ಬದಲಾವಣೆಗೆ ಹೆಚ್ಚಿನ ಅವಕಾಶಗಳಿಲ್ಲದೆ ರಂಗಸಜ್ಜಿಕೆಯನ್ನೂ ಸರಳವಾಗಿಯೇ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇತ್ತು. ಆದಷ್ಟೂ ಕಡಿಮೆ ಪಾತ್ರಗಳನ್ನಿಟ್ಟುಕೊಂಡು ಒಟ್ಟು ನಾಟಕದ ಧ್ವನಿ ಪ್ರೇಕ್ಷಕರಿಗೆ ತಲುಪುವಂತೆ ನಿರೂಪಿಸುವುದು ಅತ್ಯಗತ್ಯವಾಗಿತ್ತು. ಈ ಕುರಿತಾಗಿ ಸಾಕಷ್ಟು ಯೋಚಿಸಿದ ಮೇಲೆ ಒಂದು ಮುಖ್ಯ ಎಳೆ ಸಿದ್ಧವಾಗಿಬಿಟ್ಟಿತು: ಸ್ವತಃ ಶೇಕ್ಸ್ ಪಿಯರನೇ ರಂಗದ ಮೇಲೆ ಬಂದು ತನ್ನ ನಾಟಕದ ಕಥೆಯನ್ನು ನಿರೂಪಿಸುವುದು! ಈ ತಂತ್ರವನ್ನು ಬಳಸಿಕೊಂಡು ಹ್ಯಾಮ್ಲೆಟ್ ನಾಟಕವನ್ನು ಒಂದೂಕಾಲು ತಾಸಿಗೆ ಅಳವಡಿಸಿಕೊಳ್ಳುವುದು ಕಷ್ಟವಾಗದು ಎಂದು ವಿಶ್ವಾಸ ಮೂಡಿ ಸೂರಿಗೆ ನಾಟಕ ಮಾಡುತ್ತೇನೆಂದು ಹೇಳಿಬಿಟ್ಟೆ.
ಮೂಲ ನಾಟಕದ 25-30 ಪಾತ್ರಗಳಲ್ಲಿ ನಾನು ಕೇವಲ ನಾಲ್ಕು ಪಾತ್ರಗಳನ್ನು ಉಳಿಸಿಕೊಂಡು ಕಥೆ ಕಟ್ಟಲು ಆಲೋಚಿಸಿದೆ: ಹ್ಯಾಮ್ಲೆಟ್, ಹೊರೇಷಿಯೋ, ಒಫೀಲಿಯಾ, ತಾಯಿ ಗರ್ಟ್ರೂಡ್ ಹಾಗೂ ತಂದೆಯ ಭೂತ. ಇಷ್ಟು ಪಾತ್ರಗಳ ಹಲವು ಮುಖ್ಯ ದೃಶ್ಯಗಳನ್ನು ಒಂದು ಸೂತ್ರಕ್ಕೆ ಅಳವಡಿಸಿ ನಡುವೆ ಅಗತ್ಯವಿದ್ದೆಡೆಯಲ್ಲೆಲ್ಲಾ ಶೇಕ್ಸ್ ಪಿಯರನೇ ನಿರೂಪಕನಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ ಸ್ಕ್ರಿಪ್ಟ್ ತಯಾರಿಸಿದೆ. (ಸ್ಕ್ರಿಪ್ಟ್ ಎಂದರೆ ದೃಶ್ಯಗಳ ಜೋಡಣೆಯ ಒಂದು ಸೂತ್ರವೇ ಹೊರತು ನಾಟಕವೇ ಅಲ್ಲ! ರಾಮಚಂದ್ರದೇವರ ಅದ್ಭುತ ಅನುವಾದ ಸಿದ್ಧವಾಗಿಯೇ ಇತ್ತಲ್ಲಾ! ) ಕಥೆಯ ಯಾವ ಅಂಶವೂ ಕಳೆದುಹೋಗದಂತೆ ನಿರೂಪಣಾ ಸಾಹಿತ್ಯವನ್ನು ಬರೆದು ಸಿದ್ಧಮಾಡಿಕೊಂಡೆ. ಈ ಪ್ರದರ್ಶನದಲ್ಲಿ ಅಭಿನಯಿಸಿದ ಕಲಾವಿದರೆಂದರೆ: ಶೇಕ್ಸ್ ಪಿಯರನ ಪಾತ್ರದಲ್ಲಿ ಶ್ರೀನಿವಾಸ ಮೇಷ್ಟ್ರು, ಒಫೀಲಿಯಾ ಆಗಿ ವಿದ್ಯಾ ವೆಂಕಟರಾಮ್, ತಂದೆಯ ಭೂತದ ಪಾತ್ರದಲ್ಲಿ ಸಾಯಿಪ್ರಕಾಶ್ ಹಾಗೂ ಹೊರೇಶಿಯೋ ಆಗಿ ಅಲಕ್ ನಂದ ಶ್ರೀನಿವಾಸ್. ಗರ್ಟ್ರೂಡ್ ಪಾತ್ರದಲ್ಲಿ ನಳಿನಿ ಅಕ್ಕನೇ ಅಭಿನಯಿಸಿದರೆ ಸೊಗಸಾಗಿರುತ್ತದೆ ಅನ್ನಿಸಿತು. 80 ರ ದಶಕದಲ್ಲಿ ಹ್ಯಾಮ್ಲೆಟ್ ನಾಟಕವನ್ನು ಮೊದಲು ರಂಗದ ಮೇಲೆ ಪ್ರದರ್ಶಿಸಿದಾಗ ನಳಿನಿ ಅಕ್ಕನೇ ಗರ್ಟ್ರೂಡ್ ಪಾತ್ರವನ್ನು ನಿರ್ವಹಿಸಿದ್ದಳು; ಆಗಿನ ಪ್ರದರ್ಶನಗಳಲ್ಲಿ ಹ್ಯಾಮ್ಲೆಟ್ ತನ್ನ ತಾಯಿಯನ್ನು ದೂಷಿಸಿ ಚುಚ್ಚುವ ದೃಶ್ಯ ರಂಗದ ಮೇಲೆ ಬಲು ಪ್ರಭಾವಿಯಾಗಿ ಮೂಡಿ ಬರುತ್ತಿತ್ತಲ್ಲದೇ ಪ್ರೇಕ್ಷಕರ ಅಚ್ಚುಮೆಚ್ಚಿನ ದೃಶ್ಯವೂ ಆಗಿ ಅತಿ ಹೆಚ್ಚು ಕರತಾಡನವನ್ನೂ ಗಿಟ್ಟಿಸಿಕೊಳ್ಳುತ್ತಿತ್ತು! ಒಂದು ರೀತಿಯಲ್ಲಿ ಆ ದೃಶ್ಯವೇ ನಾಟಕದ ಭಾವನಾತ್ಮಕ ಕ್ಲೈಮ್ಯಾಕ್ಸ್ ಎಂದರೂ ಅತಿಶಯವಲ್ಲ! ಹಾಗಾಗಿ ನಳಿನಿ ಅಕ್ಕನೇ ಆ ಪಾತ್ರವನ್ನು ನಿರ್ವಹಿಸಲಿ ಎಂಬುದು ನನ್ನ ಇಚ್ಛೆಯಾಗಿತ್ತು.
ಹಿರಿಯ ಕಲಾವಿದ ಶ್ರೀನಿವಾಸ ಮೇಷ್ಟ್ರು
ಆದರೆ ನಳಿನಿ ಅಕ್ಕ ಆ ವೇಳೆಗಾಗಲೇ ರಂಗ ಚಟುವಟಿಕೆಗಳಿಂದ ದೂರ ಸರಿದುಬಿಟ್ಟಿದ್ದಳು. ಅವಳು ಬಣ್ಣಹಚ್ಚಿ ಕೆಲ ವರ್ಷಗಳೇ ಉರುಳಿಹೋಗಿದ್ದವು. ಮೊದಲು ಕೇಳಿದಾಗ ಅಷ್ಟೇನೂ ಆಸಕ್ತಿ ತೋರದ ಅಕ್ಕ ನಂತರ ನನ್ನ ಒತ್ತಾಯಕ್ಕೆ ಕಟ್ಟುಬಿದ್ದು ಒಪ್ಪಿಕೊಂಡಳು. ಉಳಿದ ಎಲ್ಲ ಕಲಾವಿದರೂ ನುರಿತವರೇ ಆದ್ದರಿಂದ ಬಹಳ ಬೇಗ ಪಾತ್ರಗಳಿಗೆ ಹೊಂದಿಕೊಂಡುಬಿಟ್ಟರು. ಪ್ರಾರಂಭದಲ್ಲಿ ಹ್ಯಾಮ್ಲೆಟ್ ನ ತಂದೆಯ ಭೂತ ತನ್ನ ಸಾವಿನ ನಿಜ ಕಾರಣವನ್ನು ಹ್ಯಾಮ್ಲೆಟ್ ಗೆ ತಿಳಿಸುವ ದೃಶ್ಯ; ಹ್ಯಾಮ್ಲೆಟ್ ನ ಬಹುತೇಕ ಎಲ್ಲ ಸ್ವಗತಗಳು; ಹ್ಯಾಮ್ಲೆಟ್ ಒಫೀಲಿಯಾಳಿಗೆ ಚುಚ್ಚಿ ಮಾತಾಡುವ ದೃಶ್ಯ; ಹ್ಯಾಮ್ಲೆಟ್ ಹಾಗೂ ಹೊರೇಶಿಯೋರ ನಡುವಿನ ಎರಡು ಮೂರು ದೃಶ್ಯಗಳು; ತಾಯಿಯನ್ನು ಮೊನೆಯಾದ ಮಾತುಗಳಿಂದ ಇರಿಯುವ ದೃಶ್ಯ ಹಾಗೂ ಕೊನೆಯ ಸಾವಿನ ದೃಶ್ಯ ಇಷ್ಟನ್ನೂ ಹೆಣೆದು ನಿರೂಪಣೆಯೊಂದಿಗೆ ರಂಗಕ್ಕೆ ಅಳವಡಿಸಿಕೊಂಡದ್ದು ಒಂದು ಹೊಸ ಪ್ರಯೋಗದಂತೆಯೇ ಆಗಿಬಿಟ್ಟಿತು. ನನಗೇ ಅಚ್ಚರಿಯಾದ ಸಂಗತಿಯೆಂದರೆ ದಶಕಗಳೇ ಉರುಳಿಹೋಗಿದ್ದರೂ ನನಗೆ ನಾಟಕದ ಸಂಭಾಷಣೆಗಳು ಯಾವುವೂ ಮರೆತಿರಲಿಲ್ಲ! ಒಂದೆರಡು ಸಲ ಹಸ್ತಪ್ರತಿಯ ಮೇಲೆ ಕಣ್ಣಾಡಿಸುತ್ತಿದ್ದಂತೆ ನೆನಪಿನ ಗಣಿಯೊಳಗೆ ಹುದುಗಿದ್ದ ಮಾತುಗಳೆಲ್ಲವೂ ತಟತಟನೆ ನಾಲಗೆಯ ಮೇಲೆ ಪ್ರತ್ಯಕ್ಷವಾಗಿಬಿಟ್ಟವು! ಮೂರು ತಿಂಗಳು ಸತತವಾಗಿ ಅಶೋಕ ಬಾದರದಿನ್ನಿಯೊಂದಿಗೆ ತಾಲೀಮು ನಡೆಸಿದ್ದರ ಫಲಶ್ರುತಿಯಿದು ಎನ್ನಿಸಿತು ನನಗೆ! ವಿದ್ಯಾ ವೆಂಕಟರಾಮ್ ಅವರು ಪ್ರಸಿದ್ಧ ರಂಗಕರ್ಮಿ ಎನ್ ಎಸ್ ವೆಂಕಟರಾಮ್ ಹಾಗೂ ಪ್ರಸಿದ್ಧ ನಾಟ್ಯಗುರು ವಸಂತಲಕ್ಷ್ಮಿ ಅವರ ಮಗಳು; ಸ್ವತಃ ಭರತನಾಟ್ಯ ಪ್ರವೀಣೆ; ಬಹಳ ಒಳ್ಳೆಯ ಅಭಿನೇತ್ರಿ ಕೂಡಾ. ಅವರೊಂದಿಗೆ ಒಂದೆರಡು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ನನ್ನ ‘ಸಂಜೆಮಲ್ಲಿಗೆ’ ಧಾರಾವಾಹಿಯಲ್ಲಿಯೂ ಆಕೆ ಒಂದು ಪಾತ್ರ ನಿರ್ವಹಿಸಿದ್ದರು. ಒಫೀಲಿಯಾಳ ಪಾತ್ರ ಅವರಿಗೆ ಹೇಳಿ ಮಾಡಿಸಿದ ಪಾತ್ರದಂತಿತ್ತು!
ಹಲವಾರು ರಿಹರ್ಸಲ್ ಗಳನ್ನು ಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧರಾದೆವು. ರಂಗಸಜ್ಜಿಕೆಯ ನಿರ್ವಹಣೆಯನ್ನು ಪ್ರಕಾಶ ವಹಿಸಿಕೊಂಡಿದ್ದ. ವಾಸ್ತವವಾಗಿ ಎಲ್ಲರಿಗಿಂತ ಹೆಚ್ಚು ಆತಂಕದಲ್ಲಿದ್ದವನೆಂದರೆ ನಾನೇ! ನನ್ನಿಂದಾಗುವುದೇ ಇದು? ಎಂಬ ಅಳುಕು ಅದೇಕೋ ಕೊನೆಯ ಕ್ಷಣದವರೆಗೂ ಕಾಡುತ್ತಿತ್ತು. ಪ್ರದರ್ಶನದ ದಿನ ಮೊದಲ ನಾಟಕ ಪ್ರಸಿದ್ಧ ಅಭಿನೇತ್ರಿ ಲಕ್ಷ್ಮೀ ಚಂದ್ರಶೇಖರ್ ಅವರ ಏಕವ್ಯಕ್ತಿ ಪ್ರದರ್ಶನವಾಗಿತ್ತು. ಲೇಡಿ ಮ್ಯಾಕ್ ಬೆತ್ ಳ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಆ ನಾಟಕವನ್ನು ಲಕ್ಷ್ಮೀ ಚಂದ್ರಶೇಖರ್ ಅವರು ಸಿದ್ಧಪಡಿಸಿದ್ದರು. ಆ ನಾಟಕದ ಯಶಸ್ವೀ ಪ್ರದರ್ಶನದ ನಂತರ ನಮ್ಮ ನಾಟಕ ಹ್ಯಾಮ್ಲೆಟ್ ಆರಂಭವಾಯಿತು. ಮೊದಲ ದೃಶ್ಯ ಆರಂಭವಾದ ಕೆಲವೇ ಕ್ಷಣಗಳಲ್ಲಿ, ಇದ್ದ ಅಳುಕೆಲ್ಲಾ ತೆರೆಮರೆಗೆ ಸರಿದು ಹೊಸ ಹುರುಪು ಉತ್ಸಾಹಗಳು ತುಂಬಿಕೊಂಡವು! ಯಾವ ಅಡ್ಡಿ ಆತಂಕಗಳೂ ಇಣುಕದೇ ಅತ್ಯಂತ ಸರಾಗವಾಗಿ ರಂಗದ ಮೇಲೆ ದೃಶ್ಯಗಳು ತೆರೆದುಕೊಳ್ಳುತ್ತಾ ಹೋದವು. ಸ್ವತಃ ಶೇಕ್ಸ್ ಪಿಯರನೇ ತನ್ನ ನಾಟಕದ ಕಥೆ ಹೇಳಿಕೊಂಡು ದೃಶ್ಯಗಳಿಗೆ ಚಾಲನೆ ಕೊಡುತ್ತಿದ್ದುದು ತುಂಬಾ ಸ್ವಾರಸ್ಯಕರವಾಗಿದ್ದಿತಲ್ಲದೆ ಪ್ರೇಕ್ಷಕರಿಗೂ ಇಷ್ಟವಾಯಿತು. ಶ್ರೀನಿವಾಸ ಮೇಷ್ಟ್ರಂತೂ ರಂಗದ ಮೇಲೆ ಸಾಕ್ಷಾತ್ ಶೇಕ್ಸ್ ಪಿಯರ್ ನಂತೆಯೇ ಕಾಣುತ್ತಿದ್ದರು! ಒಫೀಲಿಯಾಳ ಪಾತ್ರವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ನಾಟಕದ ಯಶಸ್ಸಿಗೆ ತಮ್ಮ ಕೊಡುಗೆ ನೀಡಿದರು ವಿದ್ಯಾ ವೆಂಕಟರಾಮ್. ಅಲಕ್ ನಂದ, ಹಾಗೂ ಸಾಯಿ ಪ್ರಕಾಶ್ ಅವರ ಬಗೆಗೂ ಇದೇ ಮಾತುಗಳನ್ನು ಹೇಳಬಹುದು. ನಿರೀಕ್ಷಿಸಿದ್ದಂತೆಯೇ ನನ್ನ ಹಾಗೂ ನಳಿನಿ ಅಕ್ಕನ ದೃಶ್ಯ ಬಹಳ ಪ್ರಭಾವಿಯಾಗಿ ಮೂಡಿಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮೂರು ತಾಸಿನ ನಾಟಕವನ್ನೇ ಮಾಡಿದ್ದರೂ ನಿಭಾಯಿಸುತ್ತಿದ್ದೆನೇನೋ ಎನ್ನುವಷ್ಟರ ಮಟ್ಟಿಗೆ ನನ್ನ ಬಗ್ಗೆ ನನಗೆ ವಿಶ್ವಾಸ ಮೂಡಿತ್ತು! ಪ್ರೇಕ್ಷಕರು ನಾಟಕವನ್ನು ಅಪಾರವಾಗಿ ಮೆಚ್ಚಿಕೊಂಡು ನಾಟಕ ಮುಗಿದಮೇಲೆ ಎದ್ದುನಿಂತು ಚಪ್ಪಾಳೆ ಹೊಡೆದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಲಾವಿದರ ಬದುಕಿನ ಸಾರ್ಥಕ ಕ್ಷಣಗಳೆಂದರೆ ಇವೇ ಅಲ್ಲವೇ!
ವಿಶ್ವ ಪ್ರಸಿದ್ಧ ಕವಿ-ನಾಟಕಕಾರ ಷೇಕ್ಸ್ ಪಿಯರ್
ಇದೇ ಸಮಯದಲ್ಲಿಯೇ ನಾನು ಅಭಿನಯಿಸಿದ ಮತ್ತೊಂದು ಮಹಾ ಧಾರಾವಾಹಿಯೆಂದರೆ ‘ಇದ್ದರ ಇರಬೇಕು ನಿನ್ಹಾಂಗ’ ಮಹೇಶ್ ಸಾರಂಗ್ ಅವರು ಈ ಧಾರಾವಾಹಿಯ ನಿರ್ದೇಶಕರು. ಅವರ ತಂದೆಯವರಾದ ಭಗವಾನ್ ಸಾರಂಗ್ ಅವರು ಸುವರ್ಣ ವಾಹಿನಿಗಾಗಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದರು. ಪೂರ್ಣಿಮಾ ಪ್ರಭಾಕರ್ ಅವರು ಕಥಾನಾಯಕಿಯ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಮೈಸೂರು ಮಾಲತಿ ಶ್ರೀ ಅವರದು ನನ್ನ ಪತ್ನಿಯ ಪಾತ್ರ. ಉಮೇಶ್ ಹೆಗಡೆ ಅವರೂ ಸಹಾ ಒಂದು ಮುಖ್ಯ ಪಾತ್ರದಲ್ಲಿದ್ದರು. ಸ್ಥಳೀಯ ಪ್ರತಿಭೆಗಳಾದ ಲಕ್ಷ್ಮಿ ಹಾಗೂ ವಾಣಿ ಎಂಬಿಬ್ಬರು ಸೋದರಿಯರು ನನ್ನ ಮಕ್ಕಳ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅವರಿಬ್ಬರಿಗೂ ಅದು ಮೊದಲ ಧಾರಾವಾಹಿಯೇ ಆಗಿದ್ದರೂ ಯಾವ ಅಳುಕು ಇಲ್ಲದೇ ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಒಮ್ಮೆ ಲಕ್ಷ್ಮಿ ಏನೋ ತಪ್ಪು ಮಾಡಿದಳೆಂದು ನಾನು ಅವಳಿಗೆ ರಪರಪನೆ ಬಾರಿಸಬೇಕಾಗಿದ್ದ ದೃಶ್ಯದ ಚಿತ್ರೀಕರಣ ನಡೆದಿತ್ತು. ಇಂಥ ದೃಶ್ಯಗಳೆಂದರೆ ನನಗೆ ಮೊದಲಿನಿಂದಲೂ ಸ್ವಲ್ಪ ಅಂಜಿಕೆ! ಕೈತಪ್ಪಿ ಹೊಡೆತ ಜೋರಾಗಿ ಬಿದ್ದುಬಿಟ್ಟರೆ ಎಂಬ ಭಯ! ಅಂದು ಆಗಿದ್ದೂ ಅದೇ! ಎಷ್ಟೇ ಎಚ್ಚರವಾಗಿದ್ದರೂ ಪಾಪದ ಹುಡುಗಿಗೆ ಏಟು ಜೋರಾಗಿಯೇ ಬಿದ್ದಿತಲ್ಲದೆ ಕೆನ್ನೆಯ ಮೇಲೂ ನನ್ನ ಬೆರಳ ಗುರುತು ಮೂಡಿಬಿಟ್ಟಿತ್ತು! ಪಾಪ. ಹೇಗೋ ಒತ್ತಿ ಬರುತ್ತಿದ್ದ ದುಃಖವನ್ನು ಲಕ್ಷ್ಮಿ ತಡೆದುಕೊಂಡಳು. ಆದರೆ ನನಗೇ ತುಂಬಾ ಒದ್ದಾಟವಾಗಿಹೋಯಿತು! ಆ ಮಕ್ಕಳು ಪ್ರತಿಭಾವಂತರಾಗಿದ್ದೂ ಅದೇಕೋ ಮುಂದೆ ನಟನೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಂತೆ ಕಾಣಲಿಲ್ಲ.(ನನ್ನ ಹೊಡೆತ ಖಂಡಿತ ಕಾರಣವಾಗಿದ್ದಿರಲಿಕ್ಕಿಲ್ಲ!) ಈ ಧಾರಾವಾಹಿಯಲ್ಲಿ ಅಭಿನಯಿಸಿದ ಉಳಿದ ಕಲಾವಿದರ ಹೆಸರುಗಳು. ಮತ್ತಿತರ ಅನೇಕ ಸಂಗತಿಗಳು ಬಹಳಷ್ಟು ನನ್ನ ನೆನಪಿನಿಂದ ಜಾರಿ ಹೋಗಿವೆ.
ಹಿರಿಯ ಕಲಾವಿದೆ ಮಾಲತಿ ಶ್ರೀ
ಆದರೆ ಒಂದು ವಿಶೇಷ ಕಾರಣಕ್ಕಾಗಿ ಈ ಧಾರಾವಾಹಿಯನ್ನು ನಾನು ಸದಾ ನೆನೆಯುತ್ತೇನೆ. ಅದೇನೆಂದರೆ ಇಡೀ ಧಾರಾವಾಹಿಯ ಚಿತ್ರೀಕರಣ ನಡೆದದ್ದು ಹಾವೇರಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಹಾಗೂ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಉತ್ತರ ಕರ್ನಾಟಕದ ಭಾಷೆಯನ್ನೇ ಬಳಸಲಾಗಿತ್ತು. ಏನೇ ಆದರೂ ಬೆಂಗಳೂರು ಮೈಸೂರು ಪ್ರಾಂತದ ಕಲಾವಿದರಿಗೆ ಉತ್ತರ ಕರ್ನಾಟಕ ಭಾಗದ ಕನ್ನಡದ ಉಚ್ಚಾರಣೆ ಅಷ್ಟು ಸುಲಭದ ತುತ್ತಲ್ಲ! ಲಕ್ಷ್ಮಿ—ವಾಣಿ ಆ ಪ್ರಾಂತದವರೇ ಆದ್ದರಿಂದ ಅವರಿಗೆ ಏನೇನೂ ಕಷ್ಟವಾಗುತ್ತಿರಲಿಲ್ಲ. ಮಾಲತಿ ಶ್ರೀ ಅವರೂ ಕೂಡಾ ಸಮರ್ಥವಾಗಿಯೇ ನಿಭಾಯಿಸುತ್ತಿದ್ದರೆಂದು ನನ್ನ ನೆನಪು. ನನಗೂ ಸಹಾ ಆ ಪ್ರಾಂತದ ಭಾಷೆಯನ್ನಾಡುವುದರಲ್ಲಿ ಸಾಕಷ್ಟು ಪರಿಶ್ರಮವಿದ್ದದ್ದರಿಂದ ಅಂಥದ್ದೇನೂ ಸಮಸ್ಯೆ ಎದುರಾಗಲಿಲ್ಲ. ಆದರೆ ಉಳಿದ ಕೆಲ ಕಲಾವಿದರಿಗೆ ಆ ಭಾಷೆಯ ಧ್ವನಿಯನ್ನು, ಸೊಗಡನ್ನು ಗ್ರಹಿಸಿ ಉಚ್ಚರಿಸುವುದು ಪ್ರಯಾಸದ ಕೆಲಸವಾಗಿತ್ತು! ಮಹೇಶ್ ಸಾರಂಗ್ ಅವರು ಸ್ಥಳೀಯ ಮಾಸ್ತರರೊಬ್ಬರನ್ನು ಸಂಭಾಷಣೆ ತಿದ್ದುವ ಸಲುವಾಗಿಯೇ ನೇಮಿಸಿದ್ದರು ಕೂಡಾ. ಕಲಾವಿದರು ಆ ಭಾಷಾ ಪ್ರಭೇದದ ಶಬ್ದಗಳನ್ನೇನೋ ಕಷ್ಟಪಟ್ಟು ಹೇಳಿಬಿಡುತ್ತಿದ್ದರು. ಆದರೆ ತೊಡಕಾಗುತ್ತಿದ್ದದ್ದು ಆ ಭಾಷೆಯ ಧ್ವನಿ ವೈಶಿಷ್ಟ್ಯವನ್ನು ಕರಗತ ಮಾಡಿಕೊಳ್ಳುವಲ್ಲಿ! ಬಹುಶಃ ಯಾವುದೇ ಭಾಷಾ ಪ್ರಭೇದವೇ ಆಗಲಿ, ಅದರ ‘ಅಸ್ಮಿತೆ’ ಎನ್ನಬಹುದಾದ ಗುಣ ವೈಶಿಷ್ಟ್ಯಗಳನ್ನು ಗ್ರಹಿಸಿ ಮಾತನಾಡಲು ಇತರ ಪ್ರಾಂತದವರಿಗೆ ಸಾಕಷ್ಟು ಪೂರ್ವಸಿದ್ಧತೆಯೇ ಬೇಕು.
ಆದರೆ ಚಿತ್ರೀಕರಣ ನಡೆಸುವಾಗ ಅಷ್ಟೆಲ್ಲಾ ಸಮಯವನ್ನು ಭಾಷೆಗಾಗಿ ಸಂಭಾಷಣೆಯ ಸರಿಯಾದ ಉಚ್ಚಾರಣೆಗಾಗಿ ಒದಗಿಸುವಷ್ಟು ವ್ಯವಧಾನ ತಾಳ್ಮೆ ಬಹುತೇಕ ಮಂದಿಗೆ ಇರುವುದಿಲ್ಲ! ತತ್ಪರಿಣಾಮವಾಗಿಯೇ ಅನೇಕ ಅಸಂಬದ್ಧಗಳು. ತಪ್ಪು ಉಚ್ಚಾರಣೆಗಳು. ನಮ್ಮ ಧಾರಾವಾಹಿಗಳಲ್ಲಿ ನುಸುಳಿಕೊಳ್ಳುವುದು! ಒಂದಿಷ್ಟು ಕಾಳಜಿ, ಒಂದಿಷ್ಟು ಪೂರ್ವಸಿದ್ಧತೆ, ಒಂದಿಷ್ಟು ಆಸಕ್ತಿ ಎಲ್ಲವೂ ಸೇರಿದರೆ ಇಂತಹ ತಪ್ಪುಗಳು ನುಸುಳದಂತೆ ತಡೆಯುವುದೇನೂ ಅಸಾಧ್ಯವಲ್ಲ. ಆದರೂ ಇರಲಿ. ತಿಂಗಳಲ್ಲಿ ಎಂಟು ಹತ್ತು ದಿನಗಳಾದರೂ ಹಾವೇರಿಗೆ ಹೋಗಿಬರುವ ಪ್ರಸಂಗ ಎದುರಾಗುತ್ತಿತ್ತು. ಅಲ್ಲಿದ್ದ ಸಮಯದಲ್ಲಿ, ಹಳ್ಳಿಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಬಿಡುವಾದಾಗಲೆಲ್ಲಾ ಆ ಮನೆಗಳಲ್ಲಿದ್ದ ಹಿರಿಯ ತಾಯಂದಿರೊಂದಿಗೆ ಮಾತಾಡುತ್ತಾ ಅಲ್ಲಿನ ವಿಶೇಷ ಅಡುಗೆಗಳ ಬಗ್ಗೆ ಮಾಹಿತಿಗಳನ್ನು ಪಡೆದು ಬರೆದುಕೊಳ್ಳುತ್ತಿದ್ದೆ! ನಾಲಗೆಯಲ್ಲಿ ನೀರೂರಿಸುವ ಅಲ್ಲಿನ ಅನೇಕ ಖಾದ್ಯ ವಿಶೇಷಗಳ ಪಾಕವಿಧಾನ ನನ್ನ ಅಡುಗೆ ಪುಸ್ತಕದಲ್ಲಿ ಸ್ಥಾನ ಪಡೆದು ದಾಖಲಾಗಿದೆ! ‘ಇದ್ದರ ಇರಬೇಕು ನಿನ್ಹಾಂಗ’ ಧಾರಾವಾಹಿಯ ಬಗೆಗೆ ಹೆಚ್ಚಿನ ವಿವರಗಳು ನನ್ನ ನೆನಪಲ್ಲಿ ಉಳಿದಿಲ್ಲವಾದರೂ ಆ ಧಾರಾವಾಹಿಯಲ್ಲಿನ ಪಾತ್ರನಿರ್ವಹಣೆ ನನಗೆ ಸಾಕಷ್ಟು ತೃಪ್ತಿಯನ್ನು ತಂದುಕೊಟ್ಟಿತ್ತೆನ್ನುವುದಂತೂ ಸತ್ಯ.
0 ಪ್ರತಿಕ್ರಿಯೆಗಳು