ಶ್ರೀನಿವಾಸ ಪ್ರಭು ಅಂಕಣ – ಮರುದಿನವೇ ನನ್ನ ಮದುವೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

74

ಮದುವೆಗೆ ಕೇವಲ 15 ದಿನಗಳಷ್ಟೇ ಉಳಿದಿವೆ ಎನ್ನುವಂತೆಯೇ ‘ಸ್ವಾಭಿಮಾನ’ ಚಿತ್ರದ ಡಬ್ಬಿಂಗ್ ಕೆಲಸ ಪ್ರಾರಂಭವಾಗಿಬಿಟ್ಟಿತು.
ಈ ಚಿತ್ರದ ನಿರ್ದೇಶಕ ಆತ್ಮೀಯ ಗೆಳೆಯ ಡಿ.ರಾಜೇಂದ್ರಬಾಬು.ಈ ಬಾಬಣ್ಣ ನನಗೆ ಮೊದಲು ಪರಿಚಯವಾದದ್ದು ಗೆಳೆಯ ರಿಚರ್ಡ್ ಜಿ ಲೂಯಿಸ್ ಮುಖಾಂತರ. ನಟನಾಗಿ ಚಿತ್ರರಂಗ ಪ್ರವೇಶಿಸಿದ ರಾಜೇಂದ್ರ ಬಾಬು ಮುಂದೆ ನಿರ್ದೇಶನದತ್ತ ಹೊರಳಿ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿ ಒಳ್ಳೆಯ ತಂತ್ರಜ್ಞನೆಂದು ಖ್ಯಾತನಾದ. ನನಗೆ ನೆನಪಿದೆ: ನಾನು ಬೇಲಿ ಮತ್ತು ಹೊಲ ನಾಟಕವನ್ನು ಮಾಡಿಸುತ್ತಿದ್ದಾಗ ಬಾಬು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿರಲಿಲ್ಲ. ಸಂಜೆ ಬಿಡುವಿದ್ದಾಗಲೆಲ್ಲಾ ನಮ್ಮ ರಿಹರ್ಸಲ್ ನೋಡಲು ಬರುತ್ತಿದ್ದ. ‘ಬೇಲಿ ಮತ್ತು ಹೊಲ’ ನಾಟಕದಲ್ಲಿ ಇನ್ಸ್ ಪೆಕ್ಟರ್ ಪೋತರಾಜು ಪಾರವ್ವನೆಂಬ ಹೆಂಗಸಿನ ಕುತ್ತಿಗೆಯ ತಾಳಿಯನ್ನೇ ಕಿತ್ತುಕೊಳ್ಳುವ ಒಂದು ಹೃದಯಸ್ಪರ್ಶಿ ದೃಶ್ಯವಿದೆ.

ಆ ದೃಶ್ಯವನ್ನು ನಾನು ರಂಗಕ್ಕೆ ಅಣಿಗೊಳಿಸುತ್ತಿದ್ದಾಗ ತಾಲೀಮು ನೋಡಲು ಬಂದಿದ್ದ ಬಾಬು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಅಂತಹ ಸೂಕ್ಷ್ಮ ಸಂವೇದನಾಶೀಲ ಮನಸ್ಸು ಅವನದು. ಅಂತಹ ಆತ್ಮೀಯ ಮಿತ್ರನೊಂದಿಗೆ ಕೆಲಸ ಮಾಡುವುದು ಖುಷಿಯ ವಿಷಯವೇ ಆಗಿದ್ದರೂ ಮದುವೆಯ ದಿನ ಹತ್ತಿರ ಬಂದಿತ್ತಲ್ಲಾ.. ಹಾಗಾಗಿ ನಾನು ತುಂಬಾ ಒತ್ತಡದಲ್ಲಿದ್ದೆ. ಉಳಿದೆಲ್ಲಾ ಕೆಲಸಗಳನ್ನೂ ಮನೆಯವರೇ ನೋಡಿಕೊಳ್ಳುತ್ತಿದ್ದರಾದರೂ ನನ್ನ ಗೆಳೆಯರನ್ನು ಆಹ್ವಾನಿಸಲಾದರೂ ನಾನೇ ಖುದ್ದಾಗಿ ಹೋಗಬೇಕಿತ್ತಲ್ಲಾ! ಆಫೀಸ್ ಗೆ ರಜೆ ಹಾಕಿದ್ದರೂ ಇಡೀ ದಿನ ಡಬ್ಬಿಂಗ್ ನಲ್ಲಿಯೇ ಕಳೆದುಹೋಗುತ್ತಿತ್ತು. ಎಲ್ಲಾ ಕಲಾವಿದರೊಂದಿಗೆ ಕೂಡಿಯೇ ಡಬ್ಬಿಂಗ್ ಮಾಡಬೇಕಾದ ಅನಿವಾರ್ಯತೆ ಇದ್ದುದರಿಂದ ಬಾಬು ಕೂಡಾ ಅಸಹಾಯಕನಾಗಿದ್ದ.

ವಿಧಿಯಿಲ್ಲದೆ ಡಬ್ಬಿಂಗ್ ಮುಗಿದಮೇಲೆ ರಾತ್ರಿ 9 ರ ನಂತರ ಗೆಳೆಯರನ್ನು ಆಹ್ವಾನಿಸಲು ಹೋಗುತ್ತಿದ್ದೆ. ಹಾಗೇ ಒಂದು ರಾತ್ರಿ ಸುಮಾರು 10 ಗಂಟೆಯ ವೇಳೆಗೆ ವೈಎನ್ಕೆ ಅವರಿಗೆ ಆಹ್ವಾನ ಪತ್ರಿಕೆ ಕೊಟ್ಟುಬರಲು ಅವರ ಮನೆಗೇ ಹೋದೆ. ಎಂದಿನಂತೆ ಅವರು ಒಂದಿಬ್ಬರು ಮಿತ್ರರೊಂದಿಗೆ ‘ತೀರ್ಥಯಾತ್ರೆ’ಯಲ್ಲಿದ್ದರು. ಫೋನ್ ಮಾಡದೇ ಹೇಳದೇ ಯಾರೂ ಅವರ ಮನೆಗೆ ಹೋಗುವುದು ಅವರಿಗೆ ಒಂದಿಷ್ಟೂ ಹಿಡಿಸುತ್ತಿರಲಿಲ್ಲ. ನೇರವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು ಕೂಡಾ. ಮದುವೆಗೆ ಕರೆಯಲು ಹೋಗುತ್ತಿರುವುದರಿಂದ ಹೆಚ್ಚು ರೇಗುವುದಿಲ್ಲವೆಂಬ ನಂಬಿಕೆಯಿದ್ದರೂ ಸಣ್ಣ ಅಳುಕಂತೂ ಇದ್ದೇ ಇತ್ತು! ನಾನು ಎಣಿಸಿದ್ದಂತೆಯೇ, “ಏನ್ರೀ ಘಾ, ಏನು ಇಷ್ಟು ಹೊತ್ತಲ್ಲಿ ಬಂದಿದೀರಿ? ಫೋನ್ ಕೂಡಾ ಮಾಡಲಿಲ್ಲ” ಎಂದು ಆಕ್ಷೇಪಿಸುತ್ತಲೇ ಸ್ವಾಗತಿಸಿದರು YNK.

“sorry ಸರ್..ತಪ್ಪು ತಿಳಕೋಬೇಡಿ…ನನ್ನ ಮದುವೆ ಇದೇ ಹನ್ನೊಂದನೇ ತಾರೀಖು..ಪತ್ರಿಕೆ ಕೊಟ್ಟು ಆಹ್ವಾನಿಸಿ ಹೋಗೋಣ ಅಂತ ಬಂದೆ..ಡಬ್ಬಿಂಗ್ ಮುಗಿಸಿ ಬರೋದು ತಡ ಆಯಿತು” ಎನ್ನುತ್ತಾ ಆಹ್ವಾನ ಪತ್ರಿಕೆಯನ್ನು ಅವರ ಕೈಗಿತ್ತೆ. ಪತ್ರಿಕೆಯ ಮೇಲೆ ಕಣ್ಣು ಹಾಯಿಸುತ್ತಾ,”ಓಹೋ….ಬಾಂದಳದ ಬಾನಾಡೀನೋ ನೀವು! your wings are going to get cut shortly! good luck! ಆದ್ರೆ ನಾನು ಮದುವೆಗೆ ಬರೋಲ್ಲ..ಬೇಜಾರು ಮಾಡ್ಕೋಬೇಡಿ” ಎಂದರು YNK. ನಾನು ನಿರಾಸೆಯಿಂದ, “ಯಾಕೆ ಸರ್ ಹಾಗೆ ಹೇಳ್ತಿದೀರಿ? ಊರಲ್ಲಿ ಇರೋಲ್ವಾ?” ಎಂದೆ. “ಇರ್ತೀನ್ರೀ..ಆದ್ರೆ ಮದುವೇಗೆ ಬರೋಲ್ಲ! I avoid all weddings including mine!” ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನುಡಿದು ನಕ್ಕರು ಅವಿವಾಹಿತ YNK! ಪೆಚ್ಚುಮೋರೆ ಹಾಕಿಕೊಂಡು ಕುಳಿತಿದ್ದ ನನಗೆ ಒಂದು ಗುಂಡು ಕೊಟ್ಟು ಸಮಾಧಾನ ಪಡಿಸಿ ಶುಭಹಾರೈಸಿ ಬೀಳ್ಕೊಟ್ಟರು YNK. ಹೇಳಿದ್ದಂತೆಯೇ ನಡೆದುಕೊಂಡರು ಕೂಡಾ—ಮದುವೆಗೆ ಬರಲಿಲ್ಲ!

‘ಸ್ವಾಭಿಮಾನ’ ಚಿತ್ರದ ಡಬ್ಬಿಂಗ್ ಕೆಲಸ ಅಂದುಕೊಂಡಷ್ಟೇನೂ ವೇಗವಾಗಿ ಮುಂದುವರಿಯಲಿಲ್ಲ.ಈ ಚಿತ್ರದ ನಾಯಕಿಗೆ ಕಂಠದಾನ ಮಾಡುತ್ತಿದ್ದ ಗಾಯತ್ರಿ ಪ್ರಭಾಕರ್ ಪ್ರತಿಭಾವಂತ ನಟಿ ಕೂಡಾ.ಆ ವೇಳೆಗಾಗಲೇ ನನ್ನ ಆತ್ಮೀಯ ಸ್ನೇಹಬಳಗಕ್ಕೆ ಸೇರಿ ಹೋಗಿದ್ದ ಗಾಯತ್ರಿಯೊಂದಿಗೆ ಬಿಡುವಿನ ಸಮಯದಲ್ಲಿ ಮಾತಾಡುತ್ತಾ ಕುಳಿತಿದ್ದಾಗ ಹಾಗೇ ಪ್ರಾಸಂಗಿಕವಾಗಿ ನನ್ನ ಮದುವೆ ನಿಶ್ಚಯವಾಗಿರುವ ಸಂಗತಿಯನ್ನು ಹೇಳಿದೆ.ಸುದ್ದಿ ಕೇಳಿ ಪರಮ ಸಂತೋಷ ಪಟ್ಟ ಗಾಯತ್ರಿ,’ಹುಡುಗಿಯ ಹೆಸರೇನೋ?’ ಎಂದು ಕೇಳಿದಳು. ನಾನು ‘ರಂಜನಿ’ ಎನ್ನುತ್ತಿದ್ದಂತೆ ಒಂದು ಕ್ಷಣ ಏನೋ ಯೋಚನೆಗೆ ಬಿದ್ದವಳಂತೆ ಕಂಡ ಗಾಯತ್ರಿ,’ರಂಜನಿ ಅಂದರೆ…ಕನ್ನಡ ಎಂ ಎ ಮಾಡಿರೋ ಹುಡುಗೀನಾ?’ ಎಂದು ಕೇಳಿದಳು. ನಾನೂ ಆಶ್ಚರ್ಯ ಪಡುತ್ತಲೇ ಹೌದೆಂದು ತಲೆಯಾಡಿಸಿದೆ. ಮತ್ತೂ ಒಂದೆರಡು ಪ್ರಶ್ನೆಗಳನ್ನು ಕೇಳಿ ತನ್ನ ಅನುಮಾನಗಳನ್ನು ದೃಢ ಪಡಿಸಿಕೊಂಡ ಗಾಯತ್ರಿಯ ಮುಖ ಹಿಗ್ಗಿನಿಂದ ಮೊರದಗಲವಾಯಿತು! “ರಂಜು ನನ್ನ best friend ಕಣೋ! ನನಗೆ ಅವರ ಮನೆಯವರೆಲ್ಲರ ಪರಿಚಯ ಇದೆ..ರಂಜು ನಮ್ಮ ಮನೇಗೂ ಬೇಕಾದಷ್ಟು ಸಲ ಬಂದಿದಾಳೆ..ನಮ್ಮಮ್ಮನಿಗಂತೂ ರಂಜು ಅಂದರೆ ಪ್ರಾಣ! ರಂಜು ತುಂಬಾ ಒಳ್ಳೇ ಹುಡುಗಿ ಕಣೋ! ಹದಿನೈದು ದಿನ ನಮ್ಮ ಎರಡೂ ಕುಟುಂಬಗಳು ದಕ್ಷಿಣ ಭಾರತ ಪ್ರವಾಸಕ್ಕೆ ಹೋಗಿದ್ದೆವು..ಆಗ ಅವಳನ್ನ ತುಂಬಾ ಹತ್ತಿರದಿಂದ ನೋಡಿದೀನಿ..ಅವಳನ್ನ ಮದುವೆಯಾಗೋದಕ್ಕೆ ಒಪ್ಪಿ ನೀನು ತೊಗೊಂಡಿರೋ ನಿರ್ಧಾರ ತುಂಬಾ..ತುಂಬಾ ಸರಿಯಾಗಿದೆ! perfect decision! Hearty congratulations!’ ಎಂದು ಕೈಕುಲುಕಿ ಆತ್ಮೀಯವಾಗಿ ಅಭಿನಂದಿಸಿದಾಗ ನನಗೆ ನಿಜಕ್ಕೂ ರೆಕ್ಕೆ ಬಿಚ್ಚಿ ಬಾಂದಳದಲ್ಲಿ ಹಾರಾಡಿದ ಅನುಭವ… ಮೈಮನಗಳೆಲ್ಲವೂ ಹಗುರಾತಿ ಹಗುರವಾದಂತೆ…ಮನದೊಳಗೆ ಕಂಡೂ ಕಾಣದಂತೆ ಹುದುಗಿದ್ದ ಹಲಹತ್ತು ಪ್ರಶ್ನೆಗಳಿಗೆ ಉತ್ತರ ಸಿಕ್ಕಂತೆ..ಅವ್ಯಕ್ತ ಅನುಮಾನಗಳ ತೆರೆ ಸರಿದಂತೆ! ನೇರವಾಗಿ ರಂಜನಿಯೊಂದಿಗೆ ಹೆಚ್ಚು ಸಮಯ ಕೂತು ಮಾತಾಡಲು ಆ ವರೆಗೆ ಸಾಧ್ಯವಾಗಿರಲಿಲ್ಲವಾದರೂ ಅವಳ ವ್ಯಕ್ತಿತ್ವದ ಹಲ ಮುಖಗಳ ಪರಿಚಯ ಗಾಯತ್ರಿಯ ಮೂಲಕ ನನಗಾಯಿತು ಎಂದು ಹೇಳಬಹುದು.

ಈ ಡಬ್ಬಿಂಗ್ ಕೆಲಸದ ನಡುವೆಯೇ ಒಮ್ಮೆ ರಂಜನಿಯನ್ನು ಕರೆದುಕೊಂಡು ಕಬ್ಬನ್ ಪಾರ್ಕ್ ಗೆ ಹೋಗಿದ್ದೆ.ಆ ವೇಳೆಗಾಗಲೇ ಗಾಯತ್ರಿಯಿಂದ ರಂಜನಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರೂ ತನ್ನ ಬಗ್ಗೆ ಅವಳೇ ಏನು ಹೇಳಿಕೊಳ್ಳುತ್ತಾಳೆಂಬುದನ್ನು ತಿಳಿಯುವ ಕುತೂಹಲವಿತ್ತು ನನಗೆ. ಹಾಗೆಯೇ ನನ್ನ ಕಳೆದ ದಿನಗಳ ಬಗ್ಗೆ, ಕೆಲಸ—ಹವ್ಯಾಸಗಳ ಬಗ್ಗೆ ಎಲ್ಲವನ್ನೂ ಹೇಳಿಕೊಳ್ಳುವ ಇರಾದೆಯಿತ್ತು. ನಾನು ಸರಿಸುಮಾರಾಗಿ ಎಲ್ಲವನ್ನೂ ಹೇಳಿಕೊಂಡರೂ ನನ್ನ ಭಾವೀಪತ್ನಿ..ಪುಣ್ಯಾತ್ಗಿತ್ತಿ ರಂಜನಿ ಬಾಯಿ ತೆರೆಯುವುದೇ ಬೇಡವೇ! ‘ಏನು?ಮೌನವ್ರತವೇ?’ ಎಂದು ನಾನು ತಮಾಷೆ ಮಾಡಿದರೆ ಅದಕ್ಕೂ ಒಂದು ಚಂದನೆಯ ಮುಗುಳ್ನಗುವಿನ ಉತ್ತರ! ತಾನು ಮಾತಾಡುವುದಿರಲಿ,ನಾನು ಕೇಳಿದ್ದಕ್ಕೂ ಬರೀ ಏಕಾಕ್ಷರಿ—ದ್ವ್ಯಕ್ಷರಿ ಉತ್ತರ..ಹೂಂ..ಉಹೂಂ…ಇಲ್ಲ..ಹೌದು..ಅಥವಾ ಒಮ್ಮೆ ತಲೆದೂಗುವ—ಆಡಿಸುವ—ಹೊರಳಿಸುವ ಉತ್ತರ! ‘ಹುಡುಗಿ ತೀರಾ ಕಡಿಮೆ ಮಾತಿನ ಸ್ವಭಾವದವಳು.. ಈಗಂತೂ ಸಂಕೋಚ—ನಾಚಿಕೆಯ ಕಡಿವಾಣ ಬೇರೆ..’ ಎಂದು ನಾನು ಭಾವಿಸಿದ್ದೆ. ‘ಈಗೇಕೆ ಮಾತು ಸಖಾ?..ಈಗ ಆಡದೇ ಉಳಿದಿರುವ ಎಲ್ಲ ಮಾತನ್ನೂ ಮುಂದೆ ನೂರ್ಮಡಿಯಾಗಿ ತೀರಿಸುತ್ತೇನೆ..ಕಾದುನೋಡು’ ಎಂಬಂತಹ ಅವಳ ಹುನ್ನಾರ ಆಗ ನನಗೆ ತಿಳಿಯುವ ಸಾಧ್ಯತೆಯಾದರೂ ಎಲ್ಲಿತ್ತು?!!

ಒಂದು ಸಂಜೆ ಡಬ್ಬಿಂಗ್ ಬೇಗ ಮುಗಿದದ್ದರಿಂದ ರಂಜನಿಯನ್ನೊಮ್ಮೆ ನೋಡಿ ಬರಲು ಸೀದಾ ರಾಜಾಜಿನಗರದ ಅವರ ಮನೆಗೇ ಹೋದೆ.ನಾನು ಬರುವ ಸೂಚನೆಯೇ ಇಲ್ಲದಿದ್ದ ಪೊನ್ನಮ್ಮನವರು ತಿಂಡಿ ತೀರ್ಥದ ವ್ಯವಸ್ಥೆಯನ್ನೇನೂ ಮಾಡಿಕೊಂಡಿರಲಿಲ್ಲ. “ಒಂದು ಮಾತು ಮುಂಚಿತವಾಗಿ ತಿಳಿಸಿಬಿಟ್ಟಿದ್ದರೆ ಏನಾದರೂ ಅಣಿ ಮಾಡಿಕೋತಿದ್ದೆ…ಪರವಾಗಿಲ್ಲ..ಸ್ವಲ್ಪ ಹೊತ್ತು ಮಾತಾಡ್ತಾ ಕೂತ್ಕೊಳಿ..ಬಿಸಿಬಿಸಿಯಾಗಿ ಅಕ್ಕಿ ರೊಟ್ಟಿ ತಟ್ಟಿಕೊಡ್ತೀನಿ” ಎಂದು ಪೊನ್ನಮ್ಮನವರು ಪೇಚಾಡಿಕೊಳ್ಳುತ್ತಲೇ ನುಡಿದರು. ಪೊನ್ನಮ್ಮನವರು ತಟ್ಟಿಕೊಡುತ್ತಿದ್ದ ಹದವಾದ ಅಕ್ಕಿರೊಟ್ಟಿ ಅವರ ಕುಟುಂಬವರ್ಗದಲ್ಲೇ ಎಷ್ಟು ಪ್ರಖ್ಯಾತಿಯನ್ನು ಪಡೆದಿತ್ತೆಂದರೆ ಅವರು ತಟ್ಟಿಕೊಡುತ್ತಿದ್ದ ರೊಟ್ಟಿಯನ್ನು ತಿನ್ನಲೆಂದೇ ಬಂಧು —ಮಿತ್ರವರ್ಗದವರು ಬರುತ್ತಿದ್ದರೆಂಬುದು ನಂತರದ ದಿನಗಳಲ್ಲಿ ನನಗೆ ತಿಳಿದು ಬಂದ ಹಾಗೂ ಸ್ವಂತ ಅನುಭವಕ್ಕೂ ಬಂದ ಸಂಗತಿ! ಇರಲಿ.

“ಈಗ ಅಷ್ಟೆಲ್ಲಾ ತೊಂದರೆ ತೊಗೋಬೇಡಿ.. ಬೇಜಾರೂ ಮಾಡಿಕೋಬೇಡಿ..ಈಗ ನನಗೆ ಹೆಚ್ಚು ಸಮಯ ಇಲ್ಲ..ಏನಿದೆಯೋ ಅದನ್ನೇ ಸ್ವಲ್ಪ ಕೊಡಿ ಸಾಕು..ಕಾಫಿಯಾದ್ರೂ ಆಯಿತು” ಎಂದು ನಾನು ಅವರಿಗೆ ಸಮಾಧಾನ ಹೇಳಿದೆ.”ತಿಂಡಿ ಥರಾ ಏನೂ ಇಲ್ಲಪ್ಪಾ..ಮಾಡಿಕೊಡೋಣಾಂದ್ರೆ ಸಮಯ ಇಲ್ಲ ಅಂತಿದೀರಿ..ಏನು ಮಾಡಲಿ! ಇರೋದನ್ನೇ ಕೊಡಿ ಅಂತಿದೀರಿ..ಇರೋದು ಬರೀ ಸಾರು ಅನ್ನ..ಅಷ್ಟೇ” ಎಂದು ಮತ್ತಷ್ಟು ನೊಂದುಕೊಂಡರು ಪೊನ್ನಮ್ಮ.”ಓಹೋ! ಸಾರನ್ನ ನನಗೆ ಅತಿ ಪ್ರಿಯವಾದದ್ದು..ನಾಲ್ಕು ತುತ್ತು ಅದನ್ನೇ ಕಲಸಿಕೊಟ್ಟುಬಿಡಿ” ಎಂದು ನಾನು ನಗುತ್ತಾ ನುಡಿದೆ.ಪೊನ್ನಮ್ಮನವರು ಅಡಿಗೆ ಮನೆಗೆ ಹೋಗಿ ಸಾರನ್ನ ಕಲಸಿ ತಟ್ಟೆಯನ್ನು ರಂಜನಿಯ ಕೈಲಿ ಕಳಿಸಿದರು.ಮೂರು ನಾಲ್ಕು ತುತ್ತುಗಳನ್ನು ತಿನ್ನುತ್ತಲೇ ಸಾರಿನ ಖಾರ ನನ್ನ ನೆತ್ತಿಗೆ ಹತ್ತಿಬಿಟ್ಟಿತು! ನಮ್ಮ ಮನೆಯಲ್ಲಿ ಒಂದಿಷ್ಟೂ ಖಾರದ ಅಡಿಗೆ ತಿಂದು ರೂಢಿಯೇ ಇಲ್ಲದ ನನಗೆ ಆ ಸಾರನ್ನದ ಖಾರ ತಡೆಯಲಾರದಾಗಿ ನನ್ನ ‘ಹಾಹಾಖಾರ’ವೇ ಆರಂಭವಾಗಿಬಿಟ್ಟಿತು! ನನ್ನ ಆರ್ಭಟ ಕೇಳಿ ಓಡಿಬಂದ ಪೊನ್ನಮ್ಮನವರಿಗೆ ನನ್ನ ಅವಸ್ಥೆ ಕಂಡು ಗಾಬರಿಯೇ ಆಗಿಹೋಯಿತು! ರಂಜನಿ ಓಡಿಹೋಗಿ ಒಂದು ಚೊಂಬು ನೀರು ತಂದುಕೊಟ್ಟಳು.

ಪೊನ್ನಮ್ಮನವರು ಒಂದು ಬಟ್ಟಲು ಸಕ್ಕರೆ ತಂದುಕೊಟ್ಟರು. ಸಕ್ಕರೆ ತಿಂದು ನೀರು ಕುಡಿದು ಸುಧಾರಿಸಿಕೊಂಡ ನನಗೆ ಮತ್ತೆ ಸಾರನ್ನ ತಿನ್ನುವ ಧೈರ್ಯವಾಗದೇ ತಟ್ಟೆಯನ್ನು ಕೆಳಗಿಟ್ಟುಬಿಟ್ಟೆ. ಪೊನ್ನಮ್ಮನವರು ಅಳುವುದೊಂದೇ ಬಾಕಿ! “ಛೆ..ನಿಶ್ಚಿತಾರ್ಥ ಆದಮೇಲೆ ಮೊದಲನೇ ಸಲ ಮನೇಗೆ ಬಂದಿದೀರಿ..ಇವತ್ತೇ ಹೀಗಾಗಬೇಕಾ?”ಎಂದು ಹಳಹಳಿಸತೊಡಗಿದರು.ನಾನೇ ಅವರಿಗೆ ಇನ್ನಷ್ಟು ಸಮಾಧಾನ ಹೇಳಿ ಹೊರಟು ನಿಂತೆ. ಕಳಿಸಿಕೊಡಲು ರಂಜನಿ—ಪೊನ್ನಮ್ಮ ಗೇಟ್ ತನಕ ಬಂದರು. ನನ್ನ ಆರ್ಭಟ ಕಂಡು ರಂಜನಿಯೂ ಮಂಕಾಗಿಬಿಟ್ಟಿದ್ದಳು. “ಇನ್ನೊಂದು ಸಲ ಬರೋ ಮೊದಲು ಒಂದು ಮಾತು ಹೇಳಿಬಿಟ್ಟು ಬನ್ನೀಪ್ಪಾ.. ಸಕ್ಕರೆ ಬದಲು ಏನಾದ್ರೂ ಸಿಹಿ ತಿಂಡೀನೇ ತಿನ್ನಬಹುದು..ಚೊಂಬುಗಟ್ಟಲೆ ನೀರು ಕುಡಿಯೋದೂ ತಪ್ಪುತ್ತೆ!” ಎಂದ ಪೊನ್ನಮ್ಮನವರ ಮಾತಿಗೆ ನಗುತ್ತಾ ಆಗಲೆಂದು ತಲೆಯಾಡಿಸಿ ನಾನು ಬೈಕ್ ಹತ್ತಿಕೊಂಡು ಹೊರಟೆ. ನಮ್ಮ ಮದುವೆಯಾದ ನಂತರವೂ ಅನೇಕ ವರ್ಷಗಳ ಕಾಲ ಪೊನ್ನಮ್ಮನವರು ಈ ‘ಖಾರಾ ಸಾರಿನ’ ಪ್ರಸಂಗವನ್ನು ನೆನೆದು ಪೇಚಾಡಿಕೊಳ್ಳುತ್ತಿದ್ದರು!

ಎಲ್ಲ ಕೆಲಸ—ಒತ್ತಡಗಳ ನಡುವೆಯೇ ಒಂದು ದಿನ ಬಿಡುವು ಮಾಡಿಕೊಂಡು ಜ್ಞಾನಭಾರತಿಯ ನಮ್ಮ ಕನ್ನಡ ಅಧ್ಯಯನ ಕೇಂದ್ರಕ್ಕೆ ಹೋಗಿ ಎಲ್ಲಾ ಪ್ರೀತಿಯ ಅಧ್ಯಾಪಕರನ್ನೂ ಮದುವೆಗೆ ಆಹ್ವಾನಿಸಿದೆ.ಅಲ್ಲಿ ನೋಡಿದರೆ ಪ್ರತಿಯೊಬ್ಬರೂ ರಂಜನಿಯ ಬಗ್ಗೆ ಮೆಚ್ಚುಗೆಯ—ಅಭಿಮಾನದ ಮಾತುಗಳನ್ನು ಆಡುವವರೇ! “ಓ! ನಮ್ಮ ರಂಜನಿಯೇ ನಿಮ್ಮ ಬಾಳ ಸಂಗಾತಿಯಾಗುತ್ತಿರುವುದು?! Very bright and talented girl! ನಮ್ಮ ಇಬ್ಬರು ಮೆಚ್ಚಿನ ವಿದ್ಯಾರ್ಥಿಗಳು ಒಟ್ಟಿಗೆ ಸಪ್ತಪದಿ ತುಳೀತಿದಾರೆ ಅಂದರೆ ನಾವು ಬರದೇ ಇರೋದಕ್ಕಾಗುತ್ತಾ? ಖಂಡಿತ ಬರ್ತೇವೆ” ಎಂದು ಆತ್ಮೀಯ ಆಶ್ವಾಸನೆ ನೀಡಿ ಶುಭ ಹರಸಿ ಕಳಿಸಿಕೊಟ್ಟರು ನನ್ನ ಪ್ರೀತಿಯ ಅಧ್ಯಾಪಕರು.

ಹಾಗೇ ನೋಡನೋಡುತ್ತಾ ದಿನಗಳು ಕ್ಷಣಗಳಂತುರುಳಿ ಮದುವೆಯ ದಿನ ಬಂದೇ ಬಿಟ್ಟಿತು.ಡಬ್ಬಿಂಗ್ ಕೆಲಸವೂ 9 ನೆಯ ತಾರೀಖಿನವರೆಗೂ ಅವಿರತವಾಗಿ ನಡೆದು ಕೊನೆಗೊಮ್ಮೆ ನನಗೆ ಬಿಡುಗಡೆ ಸಿಕ್ಕಿತು.ಪ್ರೀತಿಯ ಅಕ್ಕಂದಿರು ಹಾಗೂ ಅಣ್ಣಯ್ಯ, ಅಣ್ಣ—ಅಮ್ಮನ ನೇತೃತ್ವದಲ್ಲಿ ಎಲ್ಲ ಕೆಲಸಗಳನ್ನೂ ಸಮರ್ಪಕವಾಗಿ ಮಾಡಿ ಮುಗಿಸಿದ್ದರು.ಹಸೆಮಣೆ ಏರುವುದಷ್ಟೇ ನನ್ನ ಪಾಲಿಗೆ ಉಳಿದಿದ್ದ ಕರ್ತವ್ಯ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ!

ಜುಲೈ ಹತ್ತನೆಯ ತಾರೀಖು ಸಂಜೆ ನಾವೆಲ್ಲರೂ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪಕ್ಕೆ ಹೋಗುವ ವೇಳೆಗಾಗಲೇ ರಂಜನಿಯ ಕುಟುಂಬ ವರ್ಗದವರೆಲ್ಲರೂ ಅಲ್ಲಿ ನಮ್ಮ ಸ್ವಾಗತಕ್ಕೆ ನೆರೆದಿದ್ದರು.

ಪ್ರೀತಿ—ಆತ್ಮೀಯತೆಗಳ ಬೆಚ್ಚನೆಯ ಹಿತ ವಾತಾವರಣದಲ್ಲಿ ವರಪೂಜೆ ಇತ್ಯಾದಿ ಮೊದಲ ದಿನದ ಕಾರ್ಯಕ್ರಮಗಳು ಅತ್ಯಂತ ಸಾಂಗವಾಗಿ ಸಂಭ್ರಮದಿಂದ ನೆರವೇರಿದವು.

ವರಪೂಜೆಯ ಕಲಾಪಗಳು ಸಾಂಗವಾಗಿ ನೆರವೇರುತ್ತಿದ್ದಾಗಲೇ ಹಾಗೇ ನನ್ನ ದೃಷ್ಟಿ ವಧುವಿನ ಕೋಣೆಯತ್ತ ಹೊರಳಿತು.ಅರ್ಧ ಮುಚ್ಚಿದ ಬಾಗಿಲ ಮರೆಯಿಂದ ಕೆಂಪು ಬನಾರಸ್ ಸೀರೆಯುಟ್ಟ ನನ್ನ ಭಾವೀ ಅರ್ಧಾಂಗಿ ಕುತೂಹಲ—ಸಂಭ್ರಮದಿಂದ ಇಣುಕಿ ನೋಡುತ್ತಿದ್ದಾಳೆ! ಕಣ್ಣುಗಳಲ್ಲಿ ಸಂತಸದ ನಗು ಮಿನುಗುತ್ತಿದೆ! ನನ್ನ ದೃಷ್ಟಿ ಅತ್ತ ಹರಿಯುತ್ತಲೇ ಅವಳು ನಾಚಿ ಮರೆಯಾದರೂ ಆ ನೋಟ ನಮ್ಮ ಛಾಯಾಗ್ರಾಹಕನ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ! ಆ ಫೋಟೋ ನಮ್ಮ ಮದುವೆಯ ಆಲ್ಬಂನಲ್ಲಿ ಇನ್ನೂ ಜೋಪಾನವಾಗಿದೆ! ಹಾಗೇ ನನ್ನ ಮನಃಪಟಲದಲ್ಲಿ ಕೂಡಾ!

ಶುಭಕಾರ್ಯವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿಕೊಡಲು ನಮ್ಮ ಕುಲ ಪುರೋಹಿತರೂ ನನ್ನ ದೊಡ್ಡಪ್ಪನವರೂ ಆಗಿದ್ದ ಮುತ್ತಣ್ಣ ಬಾಧ್ಯಾರು ಸರಗೂರಿನಿಂದ ಆಗಮಿಸಿದ್ದರು.ನನ್ನನ್ನು ದೊಡ್ಡದನಿಯಲ್ಲಿ’ಪ್ರಭಾ’ ಎಂದೇ ಕೂಗಿ ಕರೆಯುತ್ತಿದ್ದ ಈ ನನ್ನ ದೊಡ್ಡಪ್ಪ ಕೊಣನೂರಿನ ನನ್ನ ಬಾಲ್ಯದ ದಿನಗಳಿಂದಲೇ ನನ್ನನ್ನು ಹತ್ತಿರದಿಂದ ನೋಡಿದ್ದವರಾದ್ದರಿಂದ ನಾನೆಂದರೆ ವಿಶೇಷ ಪ್ರೀತಿ! ಅನೇಕ ಬಂಧುಮಿತ್ರರು ಅಂದು ಸಂಜೆಯ ವೇಳೆಗೇ ಛತ್ರದಲ್ಲಿ ಬಂದು ಸೇರಿದ್ದರು.

ಅವರಲ್ಲಿ ಅನೇಕರು ಅಹೋರಾತ್ರಿಯ ‘ತುಂಡು ಪುಸ್ತಕದ ಪಾರಾಯಣ’ಕ್ಕೆ—ಅಂದರೆ ಇಸ್ಪೀಟ್ ಆಟಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ಬಂದವರಾಗಿದ್ದರು.

ಏಕೆಂದರೆ ಮದುವೆಯ ಎಲ್ಲ ಸಾಂಪ್ರದಾಯಿಕ ವಿಧಿ—ಆಚರಣೆಗಳಂತೆಯೇ ನಮ್ಮ ಕಡೆಯ ಮದುವೆ—ಮುಂಜಿ ಸಮಾರಂಭಗಳಲ್ಲಿ ಅನೇಕರಿಗೆ ಈ ‘ಪಾರಾಯಣ’ವೂ ಒಂದು ವಿಧ್ಯುಕ್ತ ಕ್ರಿಯಾಚರಣೆ!

ನಮ್ಮ ‘ಕುಲಗೌರವ’ಕ್ಕೆ—ಘನತೆಗೆ ಒಂದಿಷ್ಟೂ ಚ್ಯುತಿ ಬಾರದಂತೆ ಹತ್ತು ಹನ್ನೆರಡು ಪಟ್ಟೆಗಳಲ್ಲಿ ಉತ್ಸಾಹೀ ಕ್ರೀಡಾಪಟುಗಳು ಸಂಭ್ರಮದಿಂದ ಎಲೆಗಳನ್ನು ಎಣಿಸಿ ಜೋಡಿಸುವ ಕಾಯಕದಲ್ಲಿ ತೊಡಗಿ ಆನಂದಿಸಿದರು!ಒಮ್ಮೆ ಹರ್ಷದ ಕೇಕೆ—ಮತ್ತೊಮ್ಮೆ ವಿಷಾದದ ನರಳು—ಮಗುದೊಮ್ಮೆ ಆಶ್ಚರ್ಯದ ಉದ್ಗಾರ—ಇನ್ನೊಮ್ಮೆ ಪ್ರಚಂಡ ಸಿಟ್ಟಿನ ಗರ್ಜನೆ—ನಡುನಡುವೆ ಸಹ ಕ್ರೀಡಾಪಟುಗಳಿಗೆ ಬಿಟ್ಟಿ ಸಲಹೆ ಉಪದೇಶಗಳು— ಹೀಗೆ ಸಂದರ್ಭಾನುಸಾರ ನವರಸಗಳೂ ಕ್ರೀಡಾಂಗಣದಲ್ಲಿ ಚಿಮ್ಮಿ ಹೊಮ್ಮಿ ವಾತಾವರಣವನ್ನು ‘ವರ್ಣಮಯ’ವಾಗಿಸಿದವು!10ನೇ ತಾರೀಖು ಸಂಜೆಯಿಂದಲೇ ಆರಂಭವಾದ ಈ ಕ್ರೀಡೋತ್ಸವಕ್ಕೆ ಮುಕ್ತಾಯದ ಪರದೆ ಜಾರಿದ್ದು ಮರುದಿನ ಛತ್ರ ಖಾಲಿ ಮಾಡುವ ವೇಳೆಗೆ! ಬಹಳಷ್ಟು ಮಂದಿ ಪ್ರೇಕ್ಷಕ ವೃಂದಕ್ಕೆ ಇದೊಂದು ಸಾಧಾರಣ ಸಂಗತಿಯೇ ಆಗಿದ್ದರೂ ಅಣ್ಣ ಮಾತ್ರ, ‘ಸಮಯದ ಬೆಲೇನೇ ಅರಿಯದ ದಡ್ಡರ ಸಂತೆ..ಯಾವಾಗ ಇವರುಗಳಿಗೆ ಬುದ್ಧಿ ಬರುತ್ತೋ ಏನೋ’ ಎಂದು ಸಿಡಿಮಿಡಿಗೊಂಡದ್ದಷ್ಟೇ ಅಲ್ಲ.. ಅಪ್ಪಿತಪ್ಪಿಯೂ ಕ್ರೀಡಾಂಗಣದತ್ತ ಸುಳಿಯಲೂ ಇಲ್ಲ! ನಾನೂ ಕದ್ದು ಮುಚ್ಚಿ ತುಸು ಹೊತ್ತು ಹೋಗಿ ಅಲ್ಲಿ ಕೂತು ಕೈತುರಿಕೆ ನೀಗಿಸಿಕೊಂಡು ಬಂದದ್ದು ಅಣ್ಣನ ಗಮನಕ್ಕೆ ಬರದೇ ಇದ್ದುದು ನನ್ನ ಅದೃಷ್ಟ ಎನ್ನಬೇಕು!

ಮರುದಿನವೇ ನನ್ನ ಮದುವೆ! ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡುತ್ತಿರುವ ಮಹತ್ವದ ದಿನ! ಖುಷಿ ಸಂತಸ ಸಂಭ್ರಮಗಳ ಜತೆಗೇ ಚೂರು ಚೂರು ಆತಂಕ—ಒತ್ತಡಗಳೂ ಮಿಳಿತವಾದಂತಹ ಒಂದು ವಿಶೇಷ ಭಾವಸ್ಥಿತಿ…ಕಣ್ಣಿಗೆ ನಿದ್ದೆಯಾದರೂ ಎಲ್ಲಿ ಹತ್ತಬೇಕು? ಬಹಳ ಹೊತ್ತು ಮಗ್ಗುಲು ಬದಲಿಸಿ ಬದಲಿಸಿ ಹೊರಳಾಡಿ ಇನ್ನೇನು ನಿದ್ದೆಗೆ ಜಾರಿಬಿಡುತ್ತೇನೇನೋ ಎನ್ನುವ ವೇಳೆಗೆ ಸರಿಯಾಗಿ ಅಡಿಗೆಯವರು ‘ಕಾಫಿ ಕಾಫಿ’ ಎನ್ನುತ್ತಾ ಬಂದು ಬೆಳಕು ಹರಿದದ್ದನ್ನು ಸಾರಿಯೇಬಿಟ್ಟರು. ಅದರ ಬೆನ್ನಿಗೇ ಮತ್ತೊಂದು ಘೋಷಣೆ: “ಎಲ್ಲರೂ ಬೇಗ ಬೇಗ ಎದ್ದು ಸ್ನಾನಾದಿಗಳನ್ನು ಮುಗಿಸಿಕೊಂಡು ಶುಭಕಾರ್ಯಕ್ಕೆ ಸಿದ್ಧರಾಗಿ”!!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: