ಶ್ರೀನಿವಾಸ ಪ್ರಭು ಅಂಕಣ – ಬೆಳಗಿನ ಜಾವದ ಕನಸು ಖರೇ ಆಕ್ಕತ್ತಿ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

27

ಸಂದರ್ಶನ ಆಗಿ ಎರಡು ದಿನಗಳು ಕಳೆದಿತ್ತಷ್ಟೇ. ಡಾಕ್ಟ್ರು ಒಂದು ವಾರ ವಿಶ್ರಾಂತಿಯ ಸಲಹೆ ನೀಡಿದ್ದರು. ನನಗೋ ಕಾರಾಪುರದ ಕಾಡು—ಶೂಟಿಂಗ್ ಸೆಳೆಯತೊಡಗಿತ್ತು. ಅದೇ ವೇಳೆಗೆ ಯಾವುದೋ ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ನಮ್ಮ ನಿರ್ಮಾಪಕರು ಅವರ ಸಹಾಯಕನ ಮುಖಾಂತರ ಕಳಿಸಿದ ಸುದ್ದಿ ಹೀಗಿತ್ತು: ‘ಅವರು ಸಂಜೆಗೆ ಕಾರ್ ನಲ್ಲಿಯೇ ಕಾರಾಪುರಕ್ಕೆ ಹೋಗುವವರಿದ್ದಾರೆ! ನಾನು ಹೊರಡುವ ಸ್ಥಿತಿಯಲ್ಲಿದ್ದರೆ ಅವರ ಜತೆಯಲ್ಲೇ ಹೋಗಬಹುದು!’ ಇನ್ನೆರಡು ದಿನ ಬಿಟ್ಟು ಎರಡು—ಮೂರು ಬಸ್ ಹಿಡಿದು ಒದ್ದಾಡಿಕೊಂಡು ಹೋಗುವುದಕ್ಕಿಂತ ಹೀಗೆ ಕಾರ್ ನಲ್ಲಿ ಹೊರಟುಬಿಡುವುದು ನೂರು ಪಾಲು ಉತ್ತಮ ಎನಿಸಿ ಡಾಕ್ಟ್ರ ಹತ್ತಿರ ಮಾತಾಡಿದೆ.

ನನ್ನ ಕಾತುರ—ತಹತಹಗಳನ್ನು ಕಂಡು ಡಾಕ್ಟ್ರು ನಗುತ್ತಾ, ‘ಆಯಿತು.. ಹೊರಡಿ.. ಆದರೆ ಪ್ರತಿನಿತ್ಯ ಗಾಯಕ್ಕೆ dressing ಆಗಬೇಕು.. ತುಂಬಾ ಹುಷಾರಾಗಿರಿ.. ನೀರು ಸೋಕಿಸಬೇಡಿ’ ಎಂದೆಲ್ಲಾ ಸೂಚನೆಗಳನ್ನು ಕೊಟ್ಟು ಗಾಯಕ್ಕೆ ನಿತ್ಯ ಕಟ್ಟಬೇಕಿದ್ದ ಪಟ್ಟಿ—ಮುಲಾಮು ಇತ್ಯಾದಿಗಳನ್ನೂ ಕೊಟ್ಟು good luck ಹೇಳಿ ಕಳಿಸಿದರು. ನಾನೂ ಪರಮ ಸಂಭ್ರಮದಿಂದ ನಿರ್ಮಾಪಕರೊಟ್ಟಿಗೆ ಕಾರಾಪುರಕ್ಕೆ ಬಂದು ಸೇರಿದೆ. ಅಲ್ಲಿ ಅದಾಗಲೇ ಅಶೋಕನಿಂದ ನನ್ನ ಅಪಘಾತ — ಸಂದರ್ಶನಗಳ ಬಗ್ಗೆ ಅರಿತುಕೊಂಡಿದ್ದ ತಂಡದ ಸದಸ್ಯರಿಂದ ನನಗೆ ಆತ್ಮೀಯ ಸ್ವಾಗತವೇ ದೊರೆಯಿತು. ಅಶೋಕನೂ ಸಹಾ ಆಯ್ಕೆ ಆಗಿಯೇ ತೀರುತ್ತದೆಂಬ ಆತ್ಮ ವಿಶ್ವಾಸದಿಂದ ಬೀಗುತ್ತಿದ್ದ. ಭಾವಪೂರ್ಣ ಸನ್ನಿವೇಶಗಳಲ್ಲಿ ಅಭಿನಯಿಸುವಾಗ ಗ್ಲಿಸರಿನ್ ನ ಹಂಗಿಲ್ಲದೇ ಗಳಗಳನೆ ಅತ್ತೇಬಿಡುತ್ತಿದ್ದ ಅಶೋಕ ತನ್ನ ಅಭಿನಯ ಸಾಮರ್ಥ್ಯದಿಂದ ಸಂದರ್ಶಕರ ಮೇಲೆ ಗಾಢವಾದ ಪ್ರಭಾವವನ್ನೇ ಬೀರಿ ಬಂದಿದ್ದ.

ಪ್ರತಿನಿತ್ಯ ಬೆಂಗಳೂರಿನಿಂದ ಬರಬಹುದಾದ ಸಿಹಿಸುದ್ದಿಗಾಗಿ ನಾನು ಮತ್ತು ಅಶೋಕ ಚಾತಕಪಕ್ಷಿಗಳಂತೆ ಕಾಯುತ್ತಿದ್ದೆವು. ಪುಣ್ಯವಶಾತ್ ಬಹಳ ದಿನಗಳು ಹಾಗೆ ನಾವು ಕಾಯಬೇಕಾದ ಪ್ರಸಂಗ ಬರಲಿಲ್ಲ. ರಂಗಾ ಅವರು ಬೆಂಗಳೂರಿನಲ್ಲಿದ್ದ ಸರ್ಕಾರಿ ವಲಯದ ಅವರ ಮಿತ್ರರಿಂದ ಸುದ್ದಿ ತರಿಸಿಕೊಂಡರು: ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ವಿದ್ಯಾರ್ಥಿವೇತನದ ಮೇಲೆ ದೆಹಲಿಯ ರಾಷ್ಟ್ರೀಯ ನಾಟಕಶಾಲೆಗೆ ಕಳಿಸಿಕೊಡಲು ಮೂವರನ್ನುಆಯ್ಕೆ ಮಾಡಲಾಗಿದೆ.. ಪಟ್ಟಿಯಲ್ಲಿ ಮೊದಲ ಹೆಸರು ನನ್ನದು! ಎರಡನೆಯದು ಅಶೋಕನದು! ಮೂರನೆಯವರು ಕೆ. ಎನ್. ಭಾರತಿ ಎನ್ನುವ ರಂಗ ಕಲಾವಿದೆ. ಜುಲೈ ಮಾಹೆಯ ಮಧ್ಯಭಾಗದಲ್ಲಿ ನಾವು ದೆಹಲಿಗೆ ಹೋಗಿ ಶಾಲೆಯಲ್ಲಿ ಭರ್ತಿಯಾಗಬೇಕಿತ್ತು.

ನಮ್ಮ ಸಂತೋಷಕ್ಕಂತೂ ಪಾರವೇ ಇಲ್ಲ! ನನಗಾಗಲೇ ತಿಳಿದದ್ದು: ಅಶೋಕನಿಗೆ ಮದುವೆಯಾಗಿ ಮೂರು ಮಕ್ಕಳಿದ್ದರು! ಕುಟುಂಬದಿಂದ ಮೂರು ವರ್ಷ ದೂರ ಇದ್ದುಕೊಂಡು, ನಾಟಕಶಾಲೆಯಲ್ಲಿ ತರಬೇತಿ ಪಡೆದುಕೊಂಡು ಬಂದು ವೃತ್ತಿಪರ ನಟ – ನಿರ್ದೇಶಕನಾಗಿ ಬದುಕು ಕಟ್ಟಿಕೊಳ್ಳುವ ಮಹದಾಸೆ ಇಟ್ಟುಕೊಂಡು ಹೊರಟಿದ್ದ ಅಶೋಕ. ತಂಡದ ಗೆಳೆಯರೆಲ್ಲರೂ ಅಂದು ಸಂಜೆ ನಮ್ಮಿಬ್ಬರಿಗೂ ಭರ್ಜರಿ ಪಾರ್ಟಿ ಕೊಡಿಸಿ ನಮ್ಮ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು! ನಮ್ಮ ನಿರ್ಮಾಪಕರೂ ಹಿಂದೆ ಬೀಳದೆ ಹೋಳಿಗೆ ಊಟ ಹಾಕಿಸಿ ಅಭಿನಂದಿಸಿದರು. ಇದಾದ ನಾಲ್ಕಾರು ದಿನಕ್ಕೇ ಶೂಟಿಂಗ್ ಸಹಾ ಪೂರ್ಣಗೊಂಡು ಯುದ್ಧ ಗೆದ್ದಂಥ ಹುರುಪಿನಿಂದ ನಾವು ಬೆಂಗಳೂರಿಗೆ ಮರಳಿದೆವು.

ಮನೆಯಲ್ಲಿಯೂ ಸಹಾ ಎಲ್ಲರಿಗೂ ನಾನು NSD ಗೆ ಆಯ್ಕೆಯಾದ ಸುದ್ದಿ ಕೇಳಿ ತುಂಬಾ ಸಂತೋಷವಾಯಿತು. ‘ಬದುಕಿನಲ್ಲಿ ಹೀಗೆ ಸವಾಲುಗಳನ್ನು ಸ್ವೀಕರಿಸುತ್ತಾ ಎದುರಿಸುತ್ತಾ ಹೋದಾಗಲೇ ನಮ್ಮ ವ್ಯಕ್ತಿತ್ವ ಪರಿಪಕ್ವಗೊಂಡು ಅದಕ್ಕೊಂದು ಘನತೆ ಪ್ರಾಪ್ತವಾಗುವುದು’ ಎಂಬುದು ನನ್ನ ಭಾವಂದಿರು ಯಾವಾಗಲೂ ಹೇಳುತ್ತಿದ್ದ ಮಾತು. ಅವರ ಬದುಕೇ ಅವರ ಮಾತುಗಳಿಗೆ ಜ್ವಲಂತಸಾಕ್ಷಿಯಾಗಿ ನಮ್ಮೆದುರು ಕಂಗೊಳಿಸುತ್ತಿದ್ದುದರಿಂದ ಅವರ ಮಾತೆಂದರೆ ನನಗೆ ವೇದವಾಕ್ಯ! ‘ಬದುಕಿನಲ್ಲಿ ಹೊಸದೊಂದು ಅಧ್ಯಾಯ ಆರಂಭವಾಗುತ್ತಿದೆ.. ಈ ಹಾದಿಯಲ್ಲಿ ನಿನಗೆ ಸಂಪೂರ್ಣ ಯಶಸ್ಸು ದೊರೆಯಲಿ’ ಎಂದು ಅಕ್ಕಂದಿರು—ಕುಮಾರಣ್ಣಯ್ಯ—ತಂಗಚ್ಚಿ ಪದ್ಮಿನಿ ಮನಸಾರೆ ಹಾರೈಸಿದರು. ‘ಈಗ ಆಗಿರುವುದು ಒಳ್ಳೆಯದೇ ಆಗಿದೆ.. ಒಂದು ಒಳ್ಳೆಯ ಕೆಲಸವೇ ಸಿಕ್ಕಿಬಿಟ್ಟಿದ್ದರೆ ಇನ್ನೂ ಒಳಿತಾಗುತ್ತಿತ್ತೇನೋ.. ಎಷ್ಟಾದರೂ ಕಲಾ ಪ್ರಪಂಚದ ಬದುಕು ಅನಿಶ್ಚಿತತೆಯ ಗೂಡು..’ ಎಂಬೊಂದು ಸಣ್ಣ ಕೊರಗು ಅಣ್ಣ—ಅಮ್ಮನನ್ನು ಕಾಡುತ್ತಿತ್ತೆನಿಸಿದರೂ, ನನಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಎಂದೂ ಅವರು ಅದನ್ನು ಪ್ರಕಟವಾಗಿ ಹೇಳಲಿಲ್ಲ!

ಇನ್ನು 15 ದಿನಗಳಲ್ಲಿ ದೆಹಲಿಗೆ ಹೊರಡಬೇಕು.. ಹೊರಡುವಷ್ಟರಲ್ಲಿ ಗೀಜಗನ ಗೂಡು ಚಿತ್ರಕ್ಕೆ ಸಂಬಂಧಪಟ್ಟಹಾಗೆ ನನ್ನ ಪಾಲಿನ ಕೆಲಸಗಳನ್ನು ಮುಗಿಸಿಕೊಟ್ಟು ಹೋಗಬೇಕು ಎಂದು ಹಗಲು—ರಾತ್ರಿ ಕುಳಿತು ಡಬ್ಬಿಂಗ್ ಸ್ಕ್ರಿಪ್ಟ್ ತಯಾರಿಸಿದೆ. ಹೊರಡಲು ನಾಲ್ಕಾರು ದಿನಗಳಿರುವಂತೆಯೇ ಅಶೋಕನೂ ಬಿಜಾಪುರದಿಂದ ಬಂದಿಳಿದ. ಇಬ್ಬರೂ ಕುಳಿತು ಶಾಲೆಯ ಬಗ್ಗೆ ಮಾಹಿತಿ ಸಂಗ್ರಹಿಸಿದೆವು. ಅಲ್ಲಿ ವಿದ್ಯಾರ್ಥಿಗಳಿಗೆಂದೇ ಹಾಸ್ಟೆಲ್ ವ್ಯವಸ್ಥೆ ಇದೆ; ಎರಡು ಹೊತ್ತು ಊಟ ನೀಡುವ ಮೆಸ್ ಸೌಕರ್ಯವಿದೆ; ಶಾಲೆಯಿಂದ ಹಾಸ್ಟೆಲ್ ಕೇವಲ ಒಂದು ಫರ್ಲಾಂಗ್ ದೂರದಲ್ಲಿದ್ದು ನಿತ್ಯಪ್ರಯಾಣದ ಜಂಜಾಟವಾಗಲೀ ಖರ್ಚಾಗಲೀ ಇಲ್ಲ; ತಿಂಗಳಿಗೆ ಶಾಲೆಯ ಫೀಸ್ ಕೇವಲ 40 ರೂಪಾಯಿಗಳು! ನಮಗೆ ತಿಂಗಳಿಗೆ ನಿಗದಿಯಾಗಿದ್ದು 300 ರೂಪಾಯಿಗಳ ಸ್ಕಾಲರ್ ಶಿಪ್. ಎಲ್ಲಾ ಖರ್ಚು ಕಳೆದು 30—40 ರೂಪಾಯಿ ಕೈಖರ್ಚಿಗೆ ಉಳಿಯುತ್ತದೆ! ಆದರೆ ಹೋದ ಕೂಡಲೇ ಎದುರಾಗಬಹುದಾದ ಖರ್ಚುಗಳನ್ನು ನಿಭಾಯಿಸಲು ಕೊಂಚ ಹಣದ ವ್ಯವಸ್ಥೆ ಮಾಡಿಕೊಂಡು ಹೋಗಬೇಕಷ್ಟೆ. ನನಗೂ ಅಶೋಕನಿಗೂ ಇದ್ದ ಒಂದೇ ಭರವಸೆ ಎಂದರೆ, ‘ಗೀಜಗನ ಗೂಡು’ಚಿತ್ರಕ್ಕೆ ಇಷ್ಟು ದಿನ ಕೆಲಸ ಮಾಡಿರುವುದಕ್ಕೆ ಪ್ರತಿಫಲವಾಗಿ ನಿರ್ಮಾಪಕರು ಒಂದಿಷ್ಟು ಸಂಭಾವನೆ ಕೊಟ್ಟೇ ಕೊಡುತ್ತಾರೆ; ಅದು ನಮ್ಮ ಪ್ರಾರಂಭದ ದಿನಗಳ ಖರ್ಚು ತೂಗಿಸಲು ನೆರವಾಗುತ್ತದೆ’ ಎಂಬುದು.

ರಂಗಾ ಅವರೂ ಈ ಸಂಭಾವನೆ ಕುರಿತಾಗಿ ಆಶ್ವಾಸನೆ ಕೊಟ್ಟಿದ್ದರು. ಮನೆಯವರಿಗೆ ಯಾವ ಕಾರಣಕ್ಕೂ ಹೊರೆಯಾಗಬಾರದೆಂದು ನಿಶ್ಚಯಿಸಿದ್ದ ನಾನು ಅವರುಗಳ ಬಳಿಯೂ ಇದನ್ನೇ ಹೇಳಿದ್ದೆ: ಸಂಭಾವನೆಯ ದುಡ್ಡು ನನ್ನ ಕೈಗಾವಲಿಗಾಗುತ್ತದೆಂದು! ಹೀಗೇ ಡಬ್ಬಿಂಗ್ ಕೆಲಸಗಳ ಭರಾಟೆಯಲ್ಲೇ ದಿನಗಳು ಉರುಳುತ್ತಾ ನಾವು ದೆಹಲಿಗೆ ಹೊರಡುವ ದಿನ ಹತ್ತಿರ ಬಂದೇ ಬಿಟ್ಟಿತು. ನಾಳೆ GT ಎಕ್ಸ್ ಪ್ರೆಸ್ ನಲ್ಲಿ ಹೊರಡಬೇಕು.. ಇಂದು ಮಧ್ಯಾಹ್ನದ ತನಕ ನಿರ್ಮಾಪಕರ ಪತ್ತೆಯಿಲ್ಲ! ನನಗೂ ಅಶೋಕನಿಗೂ ಒಳಗೊಳಗೇ ಸಣ್ಣ ಆತಂಕ ಶುರುವಾಯಿತು! ಅಕಸ್ಮಾತ್ ಅವರು ಬರದೆಯೇ ಹೋಗಿಬಿಟ್ಟರೆ? ‘ಹೊಗಾ ಇವನವ್ವನ.. ಇವರು ರೊಕ್ಕಾ ಕೊಡತಾರಂತ ಎಣಿಸಿ ನಾನೂ ಖಾಲೀ ಕಿಸೇದಾಗ ಬಂದೀನಲ್ಲಲೇ.. ಈಗ ಇಂವಾ ಬರದಿದ್ರ ಹೆಂಗಾ.. ಹೊಯ್ಕ ಬಡ್ಕಾ…’ ಎಂದು ಹಳಹಳಿಸತೊಡಗಿದ ಅಶೋಕ.

ಆಗೆಲ್ಲಾ ಕಲಾತ್ಮಕ ಚಿತ್ರಗಳಲ್ಲಿ ವಿಶೇಷವಾಗಿ ಸಂಭಾವನೆ ಕೊಡುವುದಾಗಲೀ ಆ ಕುರಿತಾಗಿ ಮೊದಲೇ ಮಾತಾಡುವ ಪರಿಪಾಠವಾಗಲೀ ನನಗೆ ತಿಳಿದಮಟ್ಟಿಗೆ ಇರಲಿಲ್ಲ. ಅಂಥ ಚಿತ್ರಗಳ ಮೂಲ ಬಂಡವಾಳವೇ ಬಹಳ ಕಡಿಮೆ ಇರುತ್ತಿತ್ತಾದ್ದರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತೆಯೂ ಇರಲಿಲ್ಲ. ನನ್ನ ಮತ್ತು ಅಶೋಕನ ನಡುವಣ ಆ ಹೊತ್ತಿನ ಸಂಭಾಷಣೆ ಹೀಗೆ ಸಾಗಿತ್ತು: ನಾನು: ‘ಏನೋ ಅಶೋಕ, ನಿರ್ಮಾಪಕರು ಗ್ಯಾರಂಟಿ ಬರ್ತಾರೇನೋ? ದುಡ್ಡು ಕೊಡ್ತಾರೇನೋ? ಒಂದುವೇಳೆ ಅವರು ಬರದಿದ್ರೆ?’ ಅಶೋಕ: ‘ಏ ಏ ಮಬ್ಬಿಡಿಸಿಗಂಡ.. ನೀ ಏನೇನೋ ಶಕುನ ನುಡೀಬ್ಯಾಡ.. ಗಪ್ ಕುಂದ್ರು ಮಗನಾ.. ರೊಕ್ಕಾ ಕೊಡಲಾರ್ದ ಏನು? ಕೊಟ್ಟೇ ಕೊಡ್ತಾರ!’ ನಾನು: ‘ಎಷ್ಟು ಕೊಡ್ತಾರಂತ ಅಂದುಕೊಂಡಿದೀಯಾ’? ಅಶೋಕ: ‘ಕೊಡ್ತಾರ… ಕಮ್ಮಿ ಅಂತಂದ್ರ ನನಗೊಂದು ಐದುನೂರು.. ನಿನಗೊಂದು ಹಜಾರ್ ರುಪಾಯಿ ಕೊಡ್ತಾರನ್ನಿಸ್ತತಿ..’

ಹೀಗೇ ಮಾತಾಡುತ್ತಾ ಮತ್ತಷ್ಟು ಕಾತರ ಆತಂಕದ ಸಮಯ ಉರುಳಿದ ಬಳಿಕ ಸ್ಟುಡಿಯೋ ಬಾಗಿಲಲ್ಲಿ ನಿರ್ಮಾಪಕರು ಪ್ರತ್ಯಕ್ಷರಾಗಿ ಜೀವ ಬಂದ ಹಾಗಾಯಿತು.

ನಿರ್ಮಾಪಕರು ಬಂದವರೇ ನಮ್ಮಿಬ್ಬರನ್ನೂ ಬಳಿ ಕರೆದು, ‘sorry.. ಬರೋದು ಸ್ವಲ್ಪ ತಡ ಆಯ್ತು.. ನಿಮ್ಮಿಬ್ಬರಿಗೂ ಎಷ್ಟು thanks ಹೇಳಿದ್ರೂ ಸಾಲದು… ನಿಮ್ಮೆಲ್ಲರ ಸಹಕಾರ ಇಲ್ಲದಿದ್ರೆ ನಾನು ಸಿನೆಮಾ ಮುಗಿಸೋಕ್ಕಾಗ್ತಿರಲಿಲ್ಲ. ಒಂದು ಸಣ್ಣ token of gratitude ಅಂತ ಕೊಡ್ತಾ ಇದೀನಿ.. ತೊಗೊಳ್ಳಿ’ ಎಂದು ಹೇಳಿ ನಮ್ಮಿಬ್ಬರ ಕೈಗೂ ಒಂದೊಂದು ಮುಚ್ಚಿದ ಲಕೋಟೆಯನ್ನು ಕೊಟ್ಟರು. ನಾವೂ ಪರಮ ವಿನೀತ ಭಾವದಿಂದ ಲಕೋಟೆಯನ್ನು ಸ್ವೀಕರಿಸಿ, ನಮಗೆ ಅವಕಾಶ ಕೊಟ್ಟಿದ್ದಕ್ಕೆ ಅವರಿಗೆ ವಂದನೆಗಳನ್ನೂ ಅರ್ಪಿಸಿ, ಎಲ್ಲರಿಂದ ಬೀಳ್ಕೊಂಡು ಅಲ್ಲಿಂದ ಹೊರಟೆವು.

ಸ್ಟುಡಿಯೋದಿಂದ ಹೊರ ಬರುತ್ತಿದ್ದಂತೆ ಮರೆಯ ಜಾಗಕ್ಕೆ ಓಡಿ ಆತುರಾತುರವಾಗಿ ಜೇಬಿನಿಂದ ಕವರ್ ಅನ್ನು ಹೊರತೆಗೆದೆವು. ‘ಯಾಕೋ ವಜನ್ ಭಾಳ ಕಮ್ಮಿ ಐತಂತನ್ನಿಸ್ತತಲ್ಲೋ ಇವನವ್ವನಾ’ ಎನ್ನುತ್ತಾ ಅಶೋಕ ಕವರ್ ನಿಂದ ಹಣ ತೆಗೆದ.. ಕೇವಲ 250 ರೂಪಾಯಿಗಳು! ನಾನೂ ನಿರಾಸೆ—ಆತಂಕದಿಂದಲೇ ಅಷ್ಟೇ ಗಾತ್ರವಿದ್ದ ನನ್ನ ಕವರ್ ನಿಂದ ಹಣ ಹೊರತೆಗೆದೆ—250ರೂಪಾಯಿಗಳು! ‘ಹೊಗಾ ಇವನ.. ಒಂದು ತಿಂಗಳು ಜಗ್ಗಿ ಸಿಗರೇಟ್ ಸೇದಿದೆನಂದ್ರ ತೀರಿಹೋಗ್ತದಲ್ಲೊ ಈ ರೊಕ್ಕಾ!

ಎಂದು ಅಶೋಕ ಬಡಬಡಿಸಿದ. ಒಂದಷ್ಟು ಹೊತ್ತು ಶೋಕಾಚರಣೆ ಮಾಡುವವರಂತೆ ಸುಮ್ಮನೆ ನಿಂತಿದ್ದು ಅನಂತರ ‘ಈಗಿನ್ನೇನು ಮಾಡೋಕಾಗುತ್ತೆ? ಸಮಯಕ್ಕೆ ಇಷ್ಟಾದರೂ ಒದಗಿತಲ್ಲಾ’ ಎಂದು ಸಮಾಧಾನ ಮಾಡಿಕೊಂಡು ಅಲ್ಲಿಂದ ಹೊರಟೆವು.

ಮರುದಿನ ಮನೆಯವರೆಲ್ಲರ ಶುಭಹಾರೈಕೆಗಳನ್ನು ಪಡೆದುಕೊಂಡು ನಾನು, ಅಶೋಕ ಹಾಗೂ ಭಾರತಿ—ಮೂವರೂ ಜಿ. ಟಿ. ಎಕ್ಸ್ ಪ್ರೆಸ್ ಹತ್ತಿ ದೆಹಲಿಗೆ ಹೊರಟೆವು. ನಾನಂತೂ ಹೇಗಾದರಾಗಲಿ ಎಂದು ಮನೆಯಲ್ಲಿದ್ದ ಒಂದು ಪುಟ್ಟಹಾಸಿಗೆಯನ್ನೇ ಸುತ್ತಿಟ್ಟುಕೊಂಡಿದ್ದೆ. ಅಮ್ಮ ಮುತುವರ್ಜಿಯಿಂದ ಒಂದು ಬಾಟಲ್ ತುಪ್ಪ ಹಾಗೂ ಒಂದು ಬಾಟಲ್ ಉಪ್ಪಿನಕಾಯಿಯನ್ನು ಸಿದ್ಧಪಡಿಸಿ ಇಟ್ಟುಕೊಟ್ಟಿದ್ದರು. 48 ಗಂಟೆಗಳ ಪ್ರಯಾಣದ ನಂತರ ದೆಹಲಿ ತಲುಪಿ ನಮ್ಮ ಹಾಸ್ಟೆಲ್ ಗೆ ಹೋಗಿ ಮುಟ್ಟಿದಾಗ ಏನೋ ಒಂದು ಬಗೆಯ ರೋಮಾಂಚನ, ಸಂಭ್ರಮ. ಅಲ್ಲಿಂದ ಮುಂದೆ ಮೂರು ವರ್ಷಗಳ ಕಾಲ ನನ್ನ ವಿಳಾಸ: c/o ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಬಹಾವಲ್ ಪುರ್ ಹೌಸ್, ಭಗವಾನ್ ದಾಸ್ ರೋಡ್, ಮಂಡಿ ಹೌಸ್, ನ್ಯೂ ಡೆಲ್ಲಿ!

1977 ರ ಮಧ್ಯಭಾಗದಲ್ಲಿ ನಾನು ಶಾಲೆಗೆ ಸೇರಿದ್ದು; ಆ ಸಮಯವನ್ನು ಶಾಲೆಯ ಇತಿಹಾಸದಲ್ಲಿನ ಒಂದು ಸಂಧಿಕಾಲ ಎಂದೇ ಗುರುತಿಸಬಹುದು. ನಾವು ಅಲ್ಲಿಗೆ ಹೋದ ಕೊಂಚ ದಿನಗಳಿಗೇ ಅದುವರೆಗೆ ಶಾಲೆಯ ನಿರ್ದೇಶಕರಾಗಿದ್ದ ಅಲ್ಕಾಜಿ಼ಯವರು ಹಲವು ಭಿನ್ನಾಭಿಪ್ರಾಯಗಳ ಕಾರಣವಾಗಿ ರಾಜೀನಾಮೆ ನೀಡಿ ಹೊರನಡೆದಿದ್ದರು. ಹೊಸ ನಿರ್ದೇಶಕರ ನೇಮಕ ಇನ್ನೂ ಆಗಿರಲಿಲ್ಲ. ಲೈಟಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ದಾಸ್ ಗುಪ್ತಾ ಅವರೇ ಹಂಗಾಮಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಾಚೀನ-ಆಧುನಿಕ ನಾಟಕ ಸಾಹಿತ್ಯ, ಅಭಿನಯ, ರಂಗವಿನ್ಯಾಸ, ಲೈಟಿಂಗ್, ಮೇಕಪ್, ಡಾನ್ಸ್ ಎಂಡ್ ಮೂವ್ ಮೆಂಟ್ಸ್ … ಈ ಎಲ್ಲಾ ತರಗತಿಗಳೂ ಸಮರ್ಥ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಚೆನ್ನಾಗಿ ನಡೆಯುತ್ತಿದ್ದವು.

ನಮ್ಮ ತರಗತಿಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ಒಟ್ಟು 26 ವಿದ್ಯಾರ್ಥಿಗಳಿದ್ದೆವು. ಆ ವೇಳೆಗಾಗಲೇ ದೆಹಲಿ ರಂಗಭೂಮಿಯಲ್ಲಿ ಹೆಸರುಗಳಿಸಿದ್ದ ಅಲೋಕ್ ನಾಥ್, ನೀನಾಗುಪ್ತಾ ಹಾಗೂ ಅನ್ನು ಕಪೂರ್ ಅವರುಗಳೂ ನಮ್ಮ ಸಹಪಾಠಿಗಳಾಗಿದ್ದರು. ನಮ್ಮ ಹಾಸ್ಟೆಲ್ ಗೆ ಹೊಂದಿಕೊಂಡಂತೆಯೇ ನಮಗೋಸ್ಕರವಾಗಿಯೇ ಒಂದು ಮೆಸ್ ನಡೆಸಲಾಗುತ್ತಿತ್ತು. ಅಲ್ಲಿ ದಿನವೂ ಎರಡು ಹೊತ್ತು ಊಟ ದೊರೆಯುತ್ತಿದ್ದು ಬೆಳಗಿನ ಉಪಹಾರಕ್ಕೆ ಮಾತ್ರ ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಹೋದ ಹೊಸತರಲ್ಲಿನ ಉಮೇದಿನ ಓಡಾಟಗಳ ಪರಿಣಾಮವಾಗಿ ಕೈಯಲ್ಲಿದ್ದ ಹಣ ನಿಧಾನವಾಗಿ ಕರಗುತ್ತಾ ಬಂದರೂ ತಿಂಗಳು ಮುಗಿಯುತ್ತಿದ್ದಂತೆ ಸ್ಕಾಲರ್ ಶಿಪ್ ಹಣ ಬರುತ್ತದಲ್ಲಾ ಎಂಬೊಂದು ಭರವಸೆಯಲ್ಲಿ ನಿರಾತಂಕವಾಗಿಯೇ ಇದ್ದೆವು.

ಇತ್ತ ಶಾಲೆಯಲ್ಲಿ ಬಹುತೇಕ ಶಿಕ್ಷಕರು ಹಿಂದಿಯಲ್ಲೇ ಬೋಧಿಸುತ್ತಿದ್ದುದರಿಂದ ಹಿಂದಿ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳು ಪಾಠಗಳನ್ನು ಅರ್ಥಮಾಡಿಕೊಳ್ಳಲುಸ್ವಲ್ಪ ತಿಣುಕಾಡುವ ಸನ್ನಿವೇಶವೇ ಇತ್ತು ಎನ್ನಬಹುದು. ಇದರ ಜತೆಗೆ ಅಲ್ಲಿ ಪ್ರದರ್ಶನಕ್ಕೆ ಆರಿಸಿಕೊಳ್ಳುತ್ತಿದ್ದ ನಾಟಕಗಳೂ ಹಿಂದಿ ಭಾಷೆಯವೇ ಆದ್ದರಿಂದ ನಟನೆಯನ್ನೇ ಮುಖ್ಯವಾಗಿ ಕಲಿಕೆಯ ವಿಷಯವಾಗಿ ಆರಿಸಿಕೊಳ್ಳಬಯಸುತ್ತಿದ್ದ ಅನ್ಯಭಾಷಿಕರಿಗೆ ಹೊಸ ಸಮಸ್ಯೆ ಎದುರಾಗುತ್ತಿತ್ತು. ಈ ಕುರಿತಾಗಿ ಮುಂದೆ ವಿವರವಾಗಿ ಬರೆಯುತ್ತೇನೆ.

ತರಗತಿಗಳು ಮುಗಿದ ನಂತರ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲೆಯ ರೆಪರ್ಟರಿ ತಂಡ ಸಿದ್ಧ ಪಡಿಸಿಕೊಳ್ಳುತ್ತಿದ್ದ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸಲು ನಮ್ಮಂತಹ ಹೊಸ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತಿದ್ದರು. ಬೆಳಕಿನ ವ್ಯವಸ್ಥೆ, ರಂಗಸಜ್ಜಿಕೆ.. ಮುಂತಾದ ನೇಪಥ್ಯದ ವಿಭಾಗಗಳಲ್ಲಿಯೂ ನೆರವಾಗಲು ನಮಗೆ ಅವಕಾಶ ದೊರೆಯುತ್ತಿತ್ತು. ಹೀಗೆ ದೊರೆತ ಎಲ್ಲಾ ಅವಕಾಶಗಳನ್ನೂ ನಾನು ಸಂಪೂರ್ಣವಾಗಿ ಬಳಸಿಕೊಂಡೆ. ಬೆಳಿಗ್ಗೆಯಿಂದ ಸಂಜೆಯವರೆಗೆ ತರಗತಿಗಳು, ಸಂಜೆಯ ಮೇಲೆ ರಿಹರ್ಸಲ್, ನಂತರ ಹಿರಿಯ ವಿದ್ಯಾರ್ಥಿಗಳೊಂದಿಗೆ ನಾಟಕಸಂಬಂಧಿ ಚರ್ಚೆ—ವಿಚಾರ ವಿನಿಮಯ… ಹೀಗೆ ದಿನಗಳು ಗುರುತಿಗೇ ಸಿಗದಂತೆ ಉರುಳಿ ಹೋಗುತ್ತಿದ್ದವು.

ಹೀಗೇ ಒಂದು ತಿಂಗಳು ಕಳೆಯಿತು. ನಾವು ನಿರೀಕ್ಷಿಸಿದಂತೆ ಅಂದುಕೊಂಡ ವೇಳೆಗೆ ಸ್ಕಾಲರ್ ಶಾಪ್ ಹಣ ಬರಲಿಲ್ಲ! ಪ್ರತಿದಿನ ಶಾಲೆಯ ಆಫೀಸ್ ನಲ್ಲಿ ‘ಹಣ ಬಂತೇ’ ಎಂದು ವಿಚಾರಿಸುವುದು, ‘ಇಲ್ಲ’ ಎಂಬ ಉತ್ತರವನ್ನು ಕೇಳಿ ಸಪ್ಪೆ ಮೋರೆ ಹಾಕಿಕೊಂಡು ಹೋಗುವುದು… ಹೀಗೇ ಒಂದಷ್ಟು ಸಮಯ ಕಳೆಯಿತು. ನಳಿನಿ ಅಕ್ಕ, ಅಬ್ಬೂರು ಜಯತೀರ್ಥ.. ಎಲ್ಲರೂ ಪ್ರತಿದಿನ ಬೆಂಗಳೂರಿನಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಹೋಗಿ ಆದಷ್ಟು ಬೇಗ ಹಣ ಕಳಿಸಿ ಎಂದು ಒತ್ತಾಯ ಹೇರುತ್ತಲೇ ಇದ್ದರೂ ಸಹಾ ಸರ್ಕಾರಿ ಕಾರ್ಯಯಂತ್ರಗಳ ವಿಧಿ ವಿಧಾನಗಳ ಅನುಸರಣೆಯಲ್ಲಿ ಅದು ತಡವಾಗುತ್ತಲೇ ಹೋಯಿತು.

ಈ ಮಧ್ಯೆ ನಮ್ಮನ್ನು ತೀರಾ ಕುಗ್ಗದಂತೆ ಲವಲವಿಕೆಯಾಗಿ ಇಟ್ಟದ್ದೆಂದರೆ ನಾವು ಭಾಗವಹಿಸುತ್ತಿದ್ದ ನಾಟಕಗಳ ಪೂರ್ವತಯಾರಿ. ಅದರಲ್ಲಿ ಬಹಳ ಮುಖ್ಯವಾದ ಒಂದು ನಾಟಕವೆಂದರೆ ಜಮೀಲ್ ಅಹ್ಮದ್ ಎಂಬ ಹಿರಿಯ ವಿದ್ಯಾರ್ಥಿ ನಿರ್ದೇಶಿಸಿದ್ದ ಗಿರೀಶ್ ಕಾರ್ನಾಡರ ‘ಹಯವದನ.’ ಈ ಹಿಂದಿ ಅವತರಣಿಕೆಯಲ್ಲಿ ಅನುಪಮ್ ಖೇರ್ ಅವರು ದೇವದತ್ತನ ಪಾತ್ರವನ್ನು ನಿರ್ವಹಿಸಿದ್ದರೆ ಸತೀಶ್ ಕೌಶಿಕ್ (ಈಗ ಪ್ರಸಿದ್ಧ ನಿರ್ದೇಶಕ) ಕಪಿಲನ ಪಾತ್ರವನ್ನೂ ಕವಿತಾ ಚೌಧರಿ (ಉಡಾನ್ ಖ್ಯಾತಿ) ಪದ್ಮಿನಿಯ ಪಾತ್ರವನ್ನೂ ಅನಂಗ ದೇಸಾಯಿ ಅವರು ಭಾಗವತನ ಪಾತ್ರವನ್ನೂ ನಿರ್ವಹಿಸುತ್ತಿದ್ದರು.

ನಾನು ಹಾಗೂ ಅಶೋಕ ಕುದುರೆಯಾಗಿದ್ದೆವು! ನಾನು ಕುದುರೆಯ ಬಾಲವಾಗಿದ್ದರೆ—ಅಶೋಕ ತಲೆಯ ಭಾಗದಲ್ಲಿ! ಸಂಭಾಷಣೆಗನುಗುಣವಾಗಿ ನಾನು ಬಾಲವನ್ನು ಆಡಿಸುತ್ತಿದ್ದುದು ಸಾಕಷ್ಟುರಂಜನೀಯವಾಗಿದ್ದು ಪ್ರೇಕ್ಷಕರ ನಗು—ಚಪ್ಪಾಳೆಗಳಿಗೂ ಪಾತ್ರವಾಯಿತು! ಇಡೀ ನಾಟಕ ರೂಪ ಪಡೆಯುತ್ತಾ ಹೋಗುವ ಅದ್ಭುತ ಪ್ರಕ್ರಿಯೆಯನ್ನು ನಾನು ಬೆರಗು ಗಣ್ಣಿನಿಂದ ಗಮನಿಸುತ್ತಿದ್ದೆ. ಜಮೀಲ್ ಅವರು ನಾಟಕವನ್ನು ಅರ್ಥೈಸುತ್ತಿದ್ದ ರೀತಿಗೆ, ಕಲಾವಿದರು ಪಾತ್ರಗಳನ್ನು ಪರಿಭಾವಿಸಿ ಒಗ್ಗಿಕೊಳ್ಳುತ್ತಿದ್ದ ಕ್ರಮಕ್ಕೆ ನಾನು ಮಾರುಹೋಗಿದ್ದೆ.

ಮತ್ತೊಂದು ಅಪೂರ್ವ ಅನುಭವವನ್ನು ಇಲ್ಲಿ ನೆನೆಸಿಕೊಳ್ಳಲೇಬೇಕು. ಅದು, ಶಾಲೆಯ ರೆಪರ್ಟರಿ ತಂಡದವರು ಪುರಾನಾ ಕಿಲಾ (ಹಳೆಯ ಕೋಟೆ)ದ ಮುಂಭಾಗದಲ್ಲಿ, ಹಿಂದಿಯಲ್ಲಿ ಅಭಿನಯಿಸಿದ ಗಿರೀಶ್ ಕಾರ್ನಾಡರ ತುಘಲಕ್ ನಾಟಕ. ಇಡಿಯ ಕೋಟೆಯನ್ನೇ ಹಿನ್ನೆಲೆಯಾಗಿಟ್ಟುಕೊಂಡು, ಕೋಟೆಯ ಬುರುಜುಗಳನ್ನೂ ರಂಗಕ್ರಿಯೆಯ ಸ್ಥಾನಗಳಾಗಿ ಮಾಡಿಕೊಂಡು ರೂಪಿಸಿದ್ದ ರಂಗವಿನ್ಯಾಸವಂತೂ ಅದ್ಭುತವಾಗಿತ್ತು. ಆಗ ರೆಪರ್ಟರಿಯ ಮುಖ್ಯಸ್ಥರಾಗಿದ್ದ ಮನೋಹರ್ ಸಿಂಗ್ ಅವರ ತುಘಲಕ್ ಪಾತ್ರ ನಿರ್ವಹಣೆಯಂತೂ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿತ್ತು.

ಹಿನ್ನೆಲೆಗಿದ್ದ ಕೋಟೆಯ ಅಂಗುಲ ಅಂಗುಲವನ್ನೂ ರಂಗಕ್ರಿಯೆಗೆ ಒದಗುವಂತೆ ಬಳಸಿಕೊಂಡ ನಿರ್ದೇಶಕರ ಜಾಣ್ಮೆ,ಅಷ್ಟು ವಿಸ್ತಾರವಾದ ರಂಗಸ್ಥಳಕ್ಕೆ ಮಾಡಿದ್ದ ಕರಾರುವಾಕ್ಕಾದ ಅದ್ಭುತ ಬೆಳಕಿನ ವಿನ್ಯಾಸ… ಪ್ರತಿಯೊಂದೂ ರಂಗಭೂಮಿಯ ಅಗಾಧ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತಾ ಹೋದವು. ಬೆರಗೊಂದೇ ಆಗಿನ ನನ್ನ ಸ್ಥಾಯಿ ಭಾವ! ಗುಂಪಿನ ದೃಶ್ಯಗಳಲ್ಲಿ ಭಾಗವಹಿಸುವುದರ ಜತೆಗೆ ನೇಪಥ್ಯದಲ್ಲಿ ನೆರವಾಗುವ ಜವಾಬ್ದಾರಿಯನ್ನೂ ನಮಗೆ ವಹಿಸಿದ್ದರು. ರಂಗಕರ್ಮಿಗಳಿಗೆ ಅತ್ಯಂತ ಅಗತ್ಯವಾದ ಶಿಸ್ತು—ವೃತ್ತಿಪರತೆಗಳ ಪ್ರಾಥಮಿಕ ಪಾಠಗಳ ಕಲಿಕೆ ಇಲ್ಲಿಂದಲೇ ಪ್ರಾರಂಭವಾಯಿತು ಎನ್ನಬಹುದು.

ಎತ್ತರದ ಬುರುಜಿನ ಮೇಲೆ ತುಘಲಕ್ ಹಾಗೂ ಯುವ ಸೈನಿಕನ ನಡುವಣ ದೃಶ್ಯ— ‘ಆಸೆಗಳ ವಯಸ್ಸು..’ ಎಂದು ತುಘಲಕ್ ಉದ್ಗರಿಸುವ ದೃಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಕನ್ನಡದಲ್ಲಿಯೂ ನಮ್ಮ ಸಿ. ಆರ್. ಸಿಂಹ ಅವರು ತುಘಲಕನ ಪಾತ್ರದಲ್ಲಿ ಮನೋಜ್ಞವಾದ ಅಭಿನಯ ನೀಡಿದ್ದರು. ಆದರೆ ಪುರಾನಾ ಕಿಲಾ ಆವರಣದ ಅತ್ಯಂತ ಸೂಕ್ತ ವಾತಾವರಣದ ರಂಗಸಜ್ಜಿಕೆ ಹಿಂದಿ ‘ತುಘಲಕ್ ‘ ನ ವಿಶೇಷ ಅನ್ನಬಹುದು.

ಮನೋಹರ ಸಿಂಗ್ ಹಾಗೂ ಸುರೇಖಾ ಸಿಕ್ರಿಯವರು ಅಭಿನಯಿಸಿದ್ದ ‘ಸಂಧ್ಯಾಛಾಯಾ’ ಮರಾಠಿ ನಾಟಕಕ್ಕೆ ಲೈಟಿಂಗ್ ವಿಭಾಗದಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದೂ ಸಹಾ ಒಂದು ಅಪರೂಪದ ಅನುಭವ. ಈ ನಾಟಕ ನಡೆದದ್ದು ಕೇವಲ 50—60 ಪ್ರೇಕ್ಷಕರು ಮಾತ್ರವೇ ಕೂರಬಹುದಿದ್ದ ಸ್ಟುಡಿಯೋ ಥಿಯೇಟರ್ ನಲ್ಲಿ.

ಸಾವಿರಾರು ಪ್ರೇಕ್ಷಕರ ಮುಂದೆ ಪುರಾನಾ ಕಿಲಾದಲ್ಲಿ ತುಘಲಕನ ಪಾತ್ರದಲ್ಲಿ ಎತ್ತರದ ದನಿಯಲ್ಲಿ ಅಬ್ಬರಿಸಿದ್ದ ಮನೋಹರ್ ಸಿಂಗ್, ಇಲ್ಲಿ 50 ಪ್ರೇಕ್ಷಕರ ಮುಂದೆ ಪಿಸುದನಿಯಲ್ಲೆಂಬಂತೆ ಮಾತಾಡುತ್ತಿದ್ದುದು, ಅವರು ಹಾಗೂ ಸುರೇಖಾ ಸಿಕ್ರಿಯವರು ವೃದ್ಧ ದಂಪತಿಗಳಾಗಿ ಇಡಿಯ ಶರೀರದ ಭಾಷೆಯನ್ನೇ ಬದಲಿಸಿಕೊಂಡು, ಅರೆಚಣಕ್ಕೂ ಅದನ್ನು ಬಿಟ್ಟುಕೊಡದೆ ಅಭಿನಯಿಸುತ್ತಿದ್ದುದು, ಕೈಕುಲುಕುವಷ್ಟು ದೂರದಲ್ಲಿದ್ದ ಪ್ರೇಕ್ಷಕನಿಗೆ ಒಮ್ಮೆಯೂ ಅತಿರೇಕವೆನಿಸದಂತೆ ಭಾವಾಭಿವ್ಯಕ್ತಿಯ ಮೇಲೆ ಸಾಧಿಸಿದ್ದ ಹತೋಟಿ… ಒಂದೊಂದೂ ತರಗತಿಗಳಲ್ಲಿ ಕಲಿಯಲಾಗದ ನೂರು ಸಂಗತಿಗಳನ್ನು ಬೋಧಿಸುತ್ತಾ ಹೋದವು. ನಾನಂತೂ ಇವರುಗಳ ಒಂದೇ ಒಂದು ರಿಹರ್ಸಲ್ ಅನ್ನೂ ತಪ್ಪಿಸಿಕೊಳ್ಳದೇ ನೋಡುತ್ತಾ, ಅವರು ನಿಧಾನವಾಗಿ ಪಾತ್ರದೊಂದಿಗೆ ಬೆಸುಗೆಯಾಗುವ, ತನ್ಮಯತೆಯನ್ನು ಸಾಧಿಸುವ ಪ್ರಕ್ರಿಯೆಯನ್ನು ಗಮನಿಸುತ್ತಿದ್ದೆ.

ಹೀಗೇ ಮತ್ತೂ ಒಂದು ತಿಂಗಳು ಉರುಳಿತು. ಒಂದು ದಿನ ಬೆಳಿಗ್ಗೆ ಎದ್ದವನೇ ಅಶೋಕ ಬಲು ಸಂಭ್ರಮದಿಂದ,

ಮುಂಜಾನಿ ಕನಸಿನ್ಯಾಗ ನಮ್ಮ scholarship ಬಂದಹಂಗಾತಲೇ! ಬೆಳಗಿನ ಜಾವದ ಕನಸು ಖರೇ ಆಕ್ಕತ್ತಿ!’ ಎಂದು ಬಡಬಡಿಸತೊಡಗಿದ. ಓಹೋ! ಬಿದ್ದದ್ದು ಕನಸೇ ಆದರೂ ಹಾಗೆ ಭಾವಿಸಿಕೊಳ್ಳುವುದರಲ್ಲೂ ಒಂದು ಸುಖವಿತ್ತು! ಬೆಂಗಳೂರಿನಿಂದ ಟಪಾಲು ಬರುತ್ತಿದ್ದುದು ಮಧ್ಯಾಹ್ನ 3 ಗಂಟೆಗೆ. ಅಲ್ಲಿಯತನಕ ಹೇಗೋ ಸಹಿಸಿಕೊಂಡಿದ್ದು 3 ಗಂಟೆಗೆ ಸರಿಯಾಗಿ ಆಫೀಸ್ ಬಳಿಗೆ ಓಡಿ ಟೈಪಿಸ್ಟ್ ಸವಿತಾಳ ಮುಂದೆ ನಿಂತು ‘any good news for us?’ ಎಂದು ಕೇಳಿದೆವು. ಸವಿತಾ ನಿಧಾನವಾಗಿ ಅಂದು ಬಂದಿದ್ದ ಟಪಾಲನ್ನು ಪರಿಶೀಲಿಸತೊಡಗಿದಳು. ನಮ್ಮ ಕಣ್ಣಲ್ಲಿ ಕಾತರ—’ಕನಸು’ ಕುಣಿಯುತ್ತಿತ್ತು. ಎಲ್ಲಾ ಟಪಾಲನ್ನು ನೋಡಿದ ಸವಿತಾ ನಿಧಾನವಾಗಿ ತಲೆ ಎತ್ತಿ ನೋಡಿ ಸಾವಕಾಶವಾಗಿ ನುಡಿದಳು: ‘ನಹೀ ಭಯ್ಯಾ… ಆಜ್ ಭೀ ಕುಛ್ ನಹೀ ಆಯಾ’.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: