ಶ್ರೀನಿವಾಸ ಪ್ರಭು ಅಂಕಣ- ಬವಣೆಯ ನೆನಪು ನುಗ್ಗಿ ಬಂತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

49

ನಾನು ದೆಹಲಿ ನಾಟಕಶಾಲೆಯಿಂದ ಮರಳಿ ಬಂದ ನಂತರ ನಮ್ಮ ಮನೆಯ ಕಡೆ ನಡೆದ ಹಲವಾರು ಬೆಳವಣಿಗೆಗಳನ್ನು ಈಗ ದಾಖಲಿಸುವ ಪ್ರಯತ್ನ ಮಾಡುತ್ತೇನೆ. ಕುಮಾರಣ್ಣಯ್ಯನ ಮದುವೆ ಚಿಲಕುಂದದ ನರಸಿಂಹ ಮೂರ್ತಿಗಳ ಸುಪುತ್ರಿ ವತ್ಸಲಾ ಅವರೊಂದಿಗೆ 1980 ರ ಜೂನ್ ತಿಂಗಳು 23ನೇ ತಾರೀಖಿನಂದು ನಡೆಯಿತು. ಮೈಸೂರಿನಲ್ಲಿ ನಡೆದ ಈ ಆತ್ಮೀಯ ಸಮಾರಂಭದಲ್ಲಿ ನಮ್ಮ ನಾಟಕ ತಂಡದ ಅನೇಕ ಮಿತ್ರರು ಭಾಗವಹಿಸಿ ಸುಂದರ ಸಮಾರಂಭಕ್ಕೆ ಮತ್ತಷ್ಟು ಬಣ್ಣ ತುಂಬಿದ್ದನ್ನು ಬಂಧು ಮಿತ್ರರು ಬಹುಕಾಲ ನೆನಪಿಸಿಕೊಳ್ಳುತ್ತಿದ್ದುದುಂಟು.

ನಾಟಕಶಾಲೆಯ ಸಹಪಾಠಿ ಸುರೇಂದ್ರನಾಥ್ ಅಲಿಯಾಸ್ ಸೂರಿ, ದೆಹಲಿಯ ಪರಮಾಪ್ತ ಮಿತ್ರರಾದ ಸುಬ್ಬಣ್ಣ ಹಾಗೂ ಗುರುದತ್ತ, ಜಯನಗರದ ಬಾಲ್ಯಸ್ನೇಹಿತರಾದ ನಾಗೇಶ, ಗೋಪಾಲಿ, ದ್ವಾರಕಾ, ನಾಟ್ಯದರ್ಪಣ ತಂಡದ ರಿಚರ್ಡ್ ಜಿ ಲೂಯಿಸ್ ಹಾಗು ಕೆಲ ಗೆಳೆಯರು..ಎಲ್ಲರೂ ಸಂಭ್ರಮದಿಂದ ಅಣ್ಣಯ್ಯನ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ರಂಗಗೀತೆಗಳನ್ನು ಹಾಡಿ ಕುಣಿದು ಅತಿಥಿಗಳನ್ನು ರಂಜಿಸಿದರು. ‘ಹುತ್ತವ ಬಡಿದರೆ’ ನಾಟಕದ ಕಾರಂತ ಮೇಷ್ಟ್ರ ಸಂಯೋಜನೆಯ ‘ಮೈಸೂರು ರಾಜ್ಯದ ದೊರೆಯೇ ರಣಧೀರ ನಾಯ್ಕನೇ ನಿನ್ನಂಥೋರು ಯಾರೂ ಇಲ್ಲವಲ್ಲೋ’ ಹಾಡಿಗೆ ಗೆಳೆಯ ರಿಚಿ ಮಾಡಿದ ನೃತ್ಯವನ್ನಂತೂ ಬಂಧು ವರ್ಗದವರು ಈಗಲೂ ನೆನೆಸಿಕೊಳ್ಳುತ್ತಾರೆಂದರೆ ಖಂಡಿತಾ ಉತ್ಪ್ರೇಕ್ಷೆಯ ಮಾತಲ್ಲ! ಒಟ್ಟಿನಲ್ಲಿ ಅದ್ಭುತವಾಗಿ ನೆರವೇರಿದ ಈ ವರ್ಣರಂಜಿತ ಸಮಾರಂಭದಲ್ಲಿ ವತ್ಸಲಾ ನಮ್ಮ ಮನೆಗೆ ಪ್ರೀತಿಯ ಸೊಸೆಯಾಗಿ ಪಾದಾರ್ಪಣೆ ಮಾಡಿದರು.

ಅಣ್ಣಯ್ಯನ ಮದುವೆಯ ಸಂದರ್ಭದಲ್ಲೇ ನಡೆದ ಗೆಳೆಯ ಪೋಲೀಸ್ ಇನ್ಸ್ ಪೆಕ್ಟರ್ ಉಲ್ಲಾಸ್ ರ ಸ್ವಾರಸ್ಯಕರ ಪ್ರಸಂಗವನ್ನು(ಇಸ್ಪೀಟ್ ಪ್ರಸಂಗ) ಈಗಾಗಲೇ ಉಲ್ಲೇಖಿಸಿದ್ದೇನೆ. ರಾಷ್ಟ್ರಮಟ್ಟದ ದೊಡ್ಡ ದುರಂತವೊಂದು ಘಟಿಸಿದ್ದೂ ಸಹಾ ಇದೇ ಜೂನ್ 23 ರಂದು! ಅಂದೇ ಸಂಜಯ್ ಗಾಂಧಿಯವರು ಹೆಲಿಕಾಪ್ಟರ್ ದುರಂತದಲ್ಲಿ ವಿಧಿವಶರಾದದ್ದು. ಈ ನೆನಪು ಲಗ್ಗೆ ಹಾಕುತ್ತಿರುವಂತೆಯೇ ಮತ್ತೊಂದು ದುರಂತದ ನೆನಪೂ ನುಗ್ಗಿ ಬರುತ್ತಿದೆ: ದೆಹಲಿಯಲ್ಲಿ ‘ಸಿಕ್ಕು’ ನಾಟಕ ಪ್ರದರ್ಶನ ಮುಗಿಸಿಕೊಂಡು ಖುಷಿ—ಸಂಭ್ರಮಗಳಿಂದ ಬೀಗುತ್ತಾ ನಾನು ರಿಚಿ—ಗುರುದತ್ತರೊಂದಿಗೆ ರೈಲಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದೆ.

ನಮ್ಮೆಲ್ಲಾ ಸಂತಸಕ್ಕೆ ಮುಳ್ಳು ಚುಚ್ಚುವಂತೆ ರೇಡಿಯೋ ಮುಖಾಂತರ ಬಂದಪ್ಪಳಿದ್ದು ರಾಜ್ಯದ ಸೋಶಿಯಲಿಸ್ಟ್ ಪಕ್ಷದ ಧುರೀಣರೂ ನಮ್ಮ ಗುರುದತ್ತನ ಪ್ರೀತಿಯ ಭಾವಂದಿರೂ ಆಗಿದ್ದ ಎಸ್.ವೆಂಕಟರಾಮ್ ಅವರು ತೀರಿಕೊಂಡರೆಂಬ ಸುದ್ದಿ. ಖುಷಿಯ ಬೆನ್ನಿಗೇ ಬಂದು ಇರಿಯುವ ಇಂಥ ನೋವುಗಳೇ ಬದುಕನ್ನು ಅರ್ಥೈಸಿಕೊಳ್ಳಬೇಕಾದ ಕ್ರಮಕ್ಕೆ ದಾರಿದೀಪವೇ? ಇರಲಿ.

ದೊಡ್ಡಬಳ್ಳಾಪುರದ ಕಾಲೇಜಿನಲ್ಲಿ ಅನಾಯಾಸವಾಗಿ ದೊರೆತಿದ್ದ ಉಪನ್ಯಾಸಕ ಹುದ್ದೆಯನ್ನು ನಾನು ಒಪ್ಪಿಕೊಳ್ಳದೇ ರಂಗಭೂಮಿಯನ್ನು ಅಪ್ಪಿಕೊಂಡ ವಿಚಾರವನ್ನೇನೋ ಮನೆಯಿಂದ ಮುಚ್ಚಿಟ್ಟಿದ್ದೆ; ಆದರೆ ಈ ವೇಳೆಗಾಗಲೇ ಮನೆಯವರಿಗೆಲ್ಲಾ ಖಾತ್ರಿಯಾಗಿಹೋಗಿತ್ತು—ನಾನು ಕೆಲಸಕ್ಕೆ ಸೇರುವ ಪೈಕಿಯಲ್ಲವೆಂದು. ಆ ಕುರಿತಾಗಿ ಅಣ್ಣನಿಗೆ (ತಂದೆಯವರು) ಒಳಗೊಳಗೇ ಕೊಂಚ ಅಸಮಾಧಾನವಿದ್ದರೂ ಅವರೆಂದೂ ಅದನ್ನು ತೋರಿಸಿಕೊಂಡವರಲ್ಲ. ಅಷ್ಟೇ ಯಾಕೆ, ಮಕ್ಕಳ ಮನಸ್ಸಿಗೆ ನೋವುಂಟುವಾಗುವಂತಹ ಒಂದೇ ಒಂದು ಮಾತನ್ನೂ ಅವರೆಂದೂ ಆಡಿದವರೇ ಅಲ್ಲ.

ಮಕ್ಕಳ ಏಳ್ಗೆಯನ್ನು, ಅವರ ಸಾಧನೆಗಳನ್ನು ಕಂಡು ಹೆಮ್ಮೆಯಿಂದ ಬೀಗುತ್ತಿದ್ದರು ಅಣ್ಣ. ನಾನು ಮಾಡಿಸುತ್ತಿದ್ದ ಎಲ್ಲ ನಾಟಕಗಳನ್ನೂ ತಪ್ಪದೇ ನೋಡುತ್ತಿದ್ದುದಲ್ಲದೇ ನಾಟಕವನ್ನು ಕುರಿತಾದ ತಮ್ಮ ಅಭಿಪ್ರಾಯಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.ಪತ್ರಿಕೆಗಳಲ್ಲಿ ನನ್ನ ನಾಟಕಗಳ ಬಗ್ಗೆ ಪ್ರಶಂಸೆಯ ಮಾತುಗಳು ಬಂದರೆ ಓದಿ ಸಂಭ್ರಮಿಸುತ್ತಿದ್ದರು. ಆದರೂ ನನಗೇಕೊ ಅಣ್ಣ ಮೊದಲಿನಂತಿಲ್ಲ, ನಿಧಾನವಾಗಿ ಬದಲಾಗುತ್ತಿದ್ದಾರೆ ಎಂದು ಆಂತರ್ಯದಲ್ಲಿ ಅನ್ನಿಸುತ್ತಿತ್ತು. ಒಂದು ಕಾಲಕ್ಕೆ ಪ್ರಖರ ವಿಚಾರವಾದಿಯಾಗಿದ್ದ ಅಣ್ಣ ನಿಧಾನವಾಗಿ ಅತಿ ಧಾರ್ಮಿಕತೆಯತ್ತ ವಾಲುತ್ತಿದ್ದಾರೇನೋ ಎಂದು ತೀವ್ರವಾಗಿ ಅನ್ನಿಸತೊಡಗಿತ್ತು.

ಏನೇ ಆದರೂ ಅದು ಅವರ ಆಯ್ಕೆ; ಅದನ್ನು ಪ್ರಶ್ನಿಸುವ ಅಧಿಕಾರವಾಗಲೀ ಧೈರ್ಯವಾಗಲೀ ನನಗಿರಲಿಲ್ಲ; ಹಾಗೆ ಪ್ರಶ್ನಿಸುವ ಅಗತ್ಯ ಮೊದಲೇ ಇರಲಿಲ್ಲ. ಅಲ್ಲದೇ ಬದುಕನ್ನೇ ಒಂದು ತಪಸ್ಸಾಗಿಸಿಕೊಂಡು ತಮ್ಮೆಲ್ಲ ಕರ್ತವ್ಯಗಳನ್ನೂ ಲೋಪವಿಲ್ಲದಂತೆ ಪೂರೈಸಿದ ಮಾಗಿದ ಜೀವ, ಎಲ್ಲ ಜಂಜಾಟಗಳಿಂದ ದೂರವಾದ ಅಂತರ್ಮುಖೀ ಧಾರ್ಮಿಕತೆಯತ್ತ ವಾಲಿದ್ದು ಅಸಹಜವೂ ಆಗಿರಲಿಲ್ಲ. ವಿಶೇಷ ಸಂದರ್ಭಗಳ ಹೊರತಾಗಿ ನಾನು ಅಣ್ಣನೊಂದಿಗೆ ಮಾತುಕತೆಗಿಳಿಯುತ್ತಿದ್ದ ಸಂದರ್ಭಗಳು ಅಪರೂಪವೇ. ಆದರೂ ಹತ್ತಿರದಿಂದ ಅವರ ಹೋರಾಟದ ಬದುಕಿನ ತಲ್ಲಣಗಳನ್ನೂ ತಿರುವು—ಪಲ್ಲಟಗಳನ್ನೂ ಕಂಡ ನನಗೆ ಅಣ್ಣ ಎಂದಿಗೂ ಒಂದು ವಿಸ್ಮಯ.

ಪ್ರೀತಿಯ ತಂಗಿ ಪದ್ಮಿನಿ ಮೊದಲಿನಿಂದಲೂ ಮೆರಿಟ್ ವಿದ್ಯಾರ್ಥಿನಿಯಾಗಿ ಸ್ಕಾಲರ್ ಶಿಪ್ ಗಳನ್ನು ಗಳಿಸಿಕೊಂಡು ಯಶಸ್ವಿಯಾಗಿ ಎಂ ಬಿ ಬಿ ಎಸ್ ಶಿಕ್ಷಣವನ್ನು ಮುಗಿಸಿ 1981 ರ ಡಿಸೆಂಬರ್ ಮಾಹೆಯಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದಳು. ಆಗ ವೆಸ್ಟ್ ಇಂಡೀಸ್ ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಡಾ॥ನಂಜುಂಡಸ್ವಾಮಿಯವರು ನನ್ನ ತಂಗಚ್ಚಿಯ ಪತಿರಾಯರಾದವರು. ತಂಗಿಯ ಮದುವೆಗೆ ಯಾವುದೇ ರೀತಿಯ ಸಹಾಯವನ್ನೂ ಮಾಡಲಾಗಲಿಲ್ಲವಲ್ಲಾ ಎಂದು ನಾನು ಸಾಕಷ್ಟು ಕೊರಗಿದ್ದುಂಟು.

ಆರ್ಥಿಕವಾಗಿ ನೆರವಾಗುವುದಿರಲಿ, ಮದುವೆಯ ಸಂದರ್ಭದಲ್ಲಿ ಇರುವ ರಾಶಿ ರಾಶಿ ಕೆಲಸಗಳಲ್ಲಿಯೂ ಅಣ್ಣಯ್ಯನಿಗೆ ಕಿಂಚಿತ್ತಾದರೂ ನೆರವಾಗುವುದೂ ನನಗೆ ಸಾಧ್ಯವಾಗಲಿಲ್ಲ. ಆ ವೇಳೆಯಲ್ಲಿಯೇ ನಾನು “ಆದಿ ಶಂಕರ’ ಚಿತ್ರದ ಚಿತ್ರೀಕರಣ, ಮಂಗಳೂರಿನ ಶಿಬಿರ ಇತ್ಯಾದಿ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದೆ. ಅಣ್ಣ—ಅಮ್ಮ, ಕುಮಾರಣ್ಣಯ್ಯ—ಅಕ್ಕಂದಿರು ಹಾಗೂ ಭಾವಂದಿರು ಎಲ್ಲರೂ ಸೇರಿ ತಂಗಚ್ಚಿಯ ಮದುವೆಯನ್ನು ಒಂದಿಷ್ಟೂ ಕೊರೆಯಾಗದಂತೆ ಸಾಂಗವಾಗಿ ನೆರವೇರಿಸಿದರು. ನಾನು ಬಹುಶಃ ಮಂಗಳೂರಿನಿಂದಲೇ ಎಂದು ತೋರುತ್ತದೆ—ಒಬ್ಬ ಅತಿಥಿಯ ಹಾಗೆ ಬಂದು ಎರಡು ದಿನ ಮದುವೆಯ ಕಲಾಪಗಳಲ್ಲಿ ಭಾಗವಹಿಸಿ ಮತ್ತೆ ಮರಳಿ ಹೊರಟುಹೋದೆ.

ಇಷ್ಟಾದರೂ ಅಣ್ಣಯ್ಯನಾಗಲೀ ಮನೆಯವರಾಗಲೀನನ್ನ ಬಗ್ಗೆ ಒಂದು ಸಾಸಿವೆ ಕಾಳಿನಷ್ಟೂ ಅಸಮಾಧಾನವನ್ನಾಗಲೀ ಬೇಸರವನ್ನಾಗಲೀ ತೋರಲಿಲ್ಲ! ಒಬ್ಬರ ಮುಖದ ಮೇಲಿನ ಒಂದೇ ಒಂದು ಗೆರೆಯೂ ನಲುಗಲೂ ಇಲ್ಲ! ಇಂಥಾ ಕುಟುಂಬ ಪ್ರೀತಿ…ಇಂಥಾ ಪ್ರೋತ್ಸಾಹ—ನೆರವಿನ ಭಾಗ್ಯ ಎಷ್ಟು ಮಂದಿಗೆ ದೊರೆತೀತು? ಈ ಪ್ರೀತಿ—ವಾತ್ಸಲ್ಯ—ಅಂತಃಕರಣಗಳೇ ನನ್ನ ಬದುಕಿಗೆ ಅಭೇದ್ಯ ರಕ್ಷಾಕವಚವಾಗಿ ನನ್ನನ್ನು ಸಲಹುತ್ತಾ ಬಂದಿವೆ—ಅಂದಿನಿಂದ ಇಂದಿನವರೆಗೂ! ಮದುವೆಯಾಗಿ ತಂಗಿ ಗಂಡನೊಟ್ಟಿಗೆ ಹೊರಟಮೇಲೆ ಒಂದು ವಿಷಾದದ ಭಾವ ನನ್ನನ್ನು ಆವರಿಸಿಕೊಂಡುಬಿಟ್ಟಿತು. ನನ್ನ ಅನೇಕ ದ್ವಂದ್ವ—ನೋವು—ಗೊಂದಲಗಳ ಕ್ಷಣಗಳಲ್ಲಿ ನನಗೆ ತಾಳ್ಮೆಯ ಕಿವಿಯಾಗಿದ್ದವಳು ನನ್ನ ತಂಗಚ್ಚಿ. ಸಾಂತ್ವನದ ದನಿಯಾಗಿದ್ದವಳು ನನ್ನ ತಂಗಚ್ಚಿ. ನನ್ನ ಯಾವುದೇ ನಾಟಕದ ಎಷ್ಟನೇ ಪ್ರದರ್ಶನವಾಗಲೀ ಬಿಡುವಿದ್ದರೆ ಅವಳಲ್ಲಿ ಹಾಜರ್! ‘ಹ್ಯಾಮ್ಲೆಟ್’ ನಾಟಕವನ್ನಂತೂ ಅದೆಷ್ಟು ಸಲ ನೋಡಿದ್ದಾಳೋ ಅವಳು!ಇಂಥ ಪ್ರೀತಿಯ ತಂಗಿ ದೂರವಾಗುತ್ತಿದ್ದಾಳಲ್ಲಾ ಎಂಬ ವಿಷಾದದ ಭಾವದೊಂದಿಗೆ ನಾನೂ ಮಂಗಳೂರಿಗೆ ಮರಳಿದೆ.

ಮಂಗಳೂರಿನಲ್ಲಿ ಈ ಮೊದಲು ‘ಉದ್ಭವ’ ನಾಟಕ ಪ್ರದರ್ಶನವನ್ನು ಅಭಿವ್ಯಕ್ತ ತಂಡದ ವತಿಯಿಂದ ಎಸ್.ಕೆ. ಶ್ರೀಧರ್ ಹಾಗೂ ಲೂಸಿ ದಂಪತಿಗಳು ಏರ್ಪಡಿಸಿದ್ದರ ಬಗ್ಗೆ ಹಿಂದಿನ ಪುಟಗಳಲ್ಲಿ ಬರೆದಿದ್ದೇನಷ್ಟೇ. ಆ ತಂಡದ ಉತ್ಸಾಹೀ ಸದಸ್ಯರಿಗೆ ತರಬೇತಿ ಶಿಬಿರವನ್ನು ನಡೆಸಿ ಒಂದು ನಾಟಕವನ್ನು ಮಾಡಿಸಬೇಕೆಂದು ತುಂಬಾ ದಿನಗಳಿಂದ ಶ್ರೀಧರ ಕೇಳಿಕೊಳ್ಳುತ್ತಿದ್ದ. “ಆದಿ ಶಂಕರ” ಚಿತ್ರದ ಚಿತ್ರೀಕರಣದ ನಡುವೆ ಅಚಾನಕವಾಗಿ ದೊರೆತ ಬಿಡುವಿನ ವೇಳೆಯನ್ನು ಸದ್ವಿನಿಯೋಗ ಮಾಡಿಕೊಳ್ಳೋಣವೆಂದೇ ನಾನು ಮಂಗಳೂರಿಗೆ ಹೊರಟಿದ್ದು. ಮಂಗಳೂರಿನಲ್ಲಿ ಶ್ರೀಧರನ ‘ಅಭಿವ್ಯಕ್ತ’ ತಂಡ ತುಂಬು ಉತ್ಸಾಹದಿಂದ ರಂಗ ಚಟುವಟಿಕೆಗಳನ್ನು ನಡೆಸುತ್ತಿತ್ತು.

ಆ ತಂಡದಲ್ಲಿ ಅನೇಕ ಪ್ರತಿಭಾವಂತ ಯುವ ಕಲಾವಿದರಿದ್ದರು. ಈಗಿನ ಸುಪ್ರಸಿದ್ಧ ಕಲಾನಿರ್ದೇಶಕ ಶಶಿಧರ ಅಡಪ,ಚಿತ್ರ ನಿರ್ದೇಶಕ—ನಟ—ಬರಹಗಾರ ರಾಜಶೇಖರ ರಾವ್ , ಅತ್ಯುತ್ತಮ ನಟರಾದ ಉಮಾಶಂಕರ ಹಾಗೂ ಚಂದ್ರಹಾಸ, ಸಂಘಟಕಿ—ಉತ್ತಮ ನಟಿ ಲೂಸಿ…ಇವರೆಲ್ಲಾ ಅಭಿವ್ಯಕ್ತ ತಂಡದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಹಲವಾರು ವರ್ಷಗಳ ಕಾಲ ನಾನು ಈ ತಂಡದೊಂದಿಗೆ ಸಂಪರ್ಕವಿರಿಸಿಕೊಂಡು ಶಿಬಿರಗಳನ್ನು ನಡೆಸಿ ನಾಟಕಗಳನ್ನು ಮಾಡಿಸುತ್ತಿದ್ದೆ. ಅಲ್ಲಿಗೆ ಹೋದಾಗಲೆಲ್ಲಾ ತಂಗುತ್ತಿದ್ದುದು ಶ್ರೀಧರನ ಮನೆಯಲ್ಲಿಯೇ.

ಒಂದು ಪುಟ್ಟ ಕೋಣೆಯನ್ನು ನನಗಾಗಿಯೇ ಅಣಿ ಮಾಡಿಸಿಟ್ಟಿದ್ದರು ಶ್ರೀಧರ್ ದಂಪತಿಗಳು. ಹೆಚ್ಚಾಗಿ ಹೊರಗೆ ಸುತ್ತುವ ಅಭ್ಯಾಸವಿಲ್ಲದ ನಾನು ಸಂಜೆಯ ತಾಲೀಮಿನ ಸಮಯವನ್ನು ಹೊರತು ಪಡಿಸಿ ಹಗಲಿನ ಬಹುಪಾಲು ಸಮಯವನ್ನು ಆ ಕೋಣೆಯಲ್ಲಿಯೇ ಕಳೆಯುತ್ತಿದ್ದೆ. ಆ ಪ್ರಶಾಂತ ವಾತಾವರಣದಲ್ಲಿ ನನ್ನ ಓದು—ಬರವಣಿಗೆ ನಿರಾತಂಕವಾಗಿ ಸಾಗುತ್ತಿತ್ತು. ಅವರ ಮನೆಯ ಪ್ರೀತಿಯ ನಾಯಿ ರಾಜ ದಿನದ ಬಹುಪಾಲು ಆ ಕೋಣೆಯಲ್ಲೇ ಕಳೆಯುತ್ತಿತ್ತು. ಸ್ವಭಾವತಃ ಶ್ವಾನಪ್ರಿಯನೇ ಆದ ನಾನು ಆಗಾಗ್ಗೆ ಅದನ್ನು ಮುದ್ದಿಸುತ್ತಾ ಅದರೊಟ್ಟಿಗೆ ಸಂಭಾಷಿಸುತ್ತಾ(ಏಕಮುಖಿ!) ಬರವಣಿಗೆಯಲ್ಲಿ ತೊಡಗುತ್ತಿದ್ದೆ. ಹಾಗೆ ಅಲ್ಲಿ ಕುಳಿತು ಒಂದೇ ಬೀಸಿನಲ್ಲಿ ಬರೆದು ಮುಗಿಸಿದ ನಾಟಕವೆಂದರೆ ಬೆನ್ ಜಾನ್ಸನ್ ನ volpone ನಾಟಕದ ಮುಕ್ತ ರೂಪಾಂತರವಾದ ‘ಗುಳ್ಳೆನರಿ’.

ಮುಂದೆ ಬಹು ಯಶಸ್ವಿಯಾಗಿ ರಂಗದ ಮೇಲೂ ಪ್ರದರ್ಶನಗೊಂಡ ಈ ನಾಟಕದ ಬಗ್ಗೆ ಮುಂದೆ ವಿವರವಾಗಿ ಬರೆಯುತ್ತೇನೆ. ಮಾರೀಚನ ಬಂಧುಗಳು,ಕುರುಡು ಕುಬೇರ ಅಭಿವ್ಯಕ್ತಕ್ಕಾಗಿ ನಾನು ನಿರ್ದೇಶಿಸಿದ ನಾಟಕಗಳು. ಮುಂದಿನ ದಿನಗಳಲ್ಲಿ ನಾನು ಮಾಡಿಸಿದ ‘ಬೇಲಿ ಮತ್ತು ಹೊಲ’ ನಾಟಕವನ್ನು ನನ್ನ ಬಲಗೈ ಬಂಟ—ಅತ್ಯುತ್ತಮ ರಂಗಕರ್ಮಿ ಗೋಪಾಲಕೃಷ್ಣ ಅಭಿವ್ಯಕ್ತಕ್ಕಾಗಿ ಅಣಿಮಾಡಿಕೊಟ್ಟ.ಆ ನಾಟಕದ ಬಗ್ಗೆಯೂ ಮುಂದೆ ವಿವರವಾಗಿ ಬರೆಯುತ್ತೇನೆ. ಮಂಗಳೂರಿನ ಶಿಬಿರ ಮುಗಿಸಿ ಬೆಂಗಳೂರಿಗೆ ಬಂದವನೇ ಅಯ್ಯರ್ ಅವರ ತಂಡದೊಟ್ಟಿಗೆ ಮತ್ತೆ ಆದಿ ಶಂಕರ ಚಿತ್ರದ ಚಿತ್ರೀಕರಣಕ್ಕೆ ಹೊರಡಲನುವಾದೆ.

ಬೆಂಗಳೂರಿಗೆ ಬಂದಮೇಲೆ ಮತ್ತೊಂದು ಸ್ವಾರಸ್ಯಕರ ಸಂಗತಿ ಪ್ರೇಮಾ ಕಾರಂತರಿಂದ ತಿಳಿದುಬಂತು: ಹಲವಾರು ಕಾರಣಗಳಿಗಾಗಿ ಶಂಕರ ಪಾತ್ರಧಾರಿ ಬ್ಯಾನರ್ಜಿಯ ಬಗ್ಗೆ ಅಸಮಾಧಾನಗೊಂಡಿದ್ದ ಅಯ್ಯರ್ ಅವರು ಅವನನ್ನು ಆ ಪಾತ್ರದಿಂದ ತೆಗೆದುಹಾಕಿ ನನ್ನಿಂದಲೇ ಶಂಕರರ ಪಾತ್ರ ಮಾಡಿಸುವುದೆಂದು ತೀರ್ಮಾನಿಸಿಬಿಟ್ಟಿದ್ದರಂತೆ! ಅನಂತರ ಮತ್ತಷ್ಟು ಚರ್ಚೆ—ಸಂಧಾನ—ತಪ್ಪೊಪ್ಪಿಗೆಗಳೆಲ್ಲಾ ನಡೆದು ಅಂಥ ಯಾವುದೇ ಬದಲಾವಣೆ ಇಲ್ಲದೆ ಚಿತ್ರೀಕರಣ ಮುಂದುವರಿಸಲು ನಿರ್ಧರಿಸಿದರಂತೆ. ಈ ಶಂಕರರ ಪಾತ್ರ ಇದೇಕೆ ಹೀಗೆ ಕಣ್ಣಾಮುಚ್ಚಾಲೆ ಆಡಿಸುತ್ತಿದೆ ಎಂದು ಸೋಜಿಗ ಪಟ್ಟುಕೊಂಡರೂ ಸಧ್ಯ,ಮತ್ತೆ ದ್ರಾಕ್ಷಾಕಲ್ಪ ತಿನ್ನುವ ಪರಿಸ್ಥಿತಿ ಬರಲಿಲ್ಲವಲ್ಲಾ ಎಂದು ಸಮಾಧಾನ ಮಾಡಿಕೊಂಡೆ! ಆನಂತರದ ಒಂದೆರಡು ತಿಂಗಳು ಇಡೀ ತಂಡದೊಟ್ಟಿಗೆ ನಮ್ಮದು ಅಖಂಡ ಭಾರತ ಪ್ರವಾಸ.

ಶಂಕರರು ಸಂದರ್ಶಿಸಿದ ಕ್ಷೇತ್ರಗಳಿಗೆಲ್ಲಾ ಭೇಟಿ ನೀಡುತ್ತಾ ಚಿತ್ರೀಕರಣ ಮಾಡುತ್ತಾ ಹೊರಟ ನಮಗೆ ಹೆಜ್ಜೆಹೆಜ್ಜೆಯಲ್ಲೂ ರೋಚಕ ಹಾಗೂ ಅವಿಸ್ಮರಣೀಯ ಅನುಭವ.ಅಯ್ಯರ್ ಅವರು ವಿಶಿಷ್ಟ ರೀತಿಯಲ್ಲಿ ಕಲ್ಪಿಸಿದ್ದ ನಮ್ಮ ‘ಜ್ಞಾನ’ ಹಾಗೂ ‘ಮೃತ್ಯು’ ಪಾತ್ರಗಳೊಂದಿಗೆ ಶಂಕರರ ಪಾತ್ರವನ್ನು ಮುಖಾಮುಖಿಯಾಗಿಸುತ್ತಾ ಬೆಳೆಸುತ್ತಿದ್ದ ರೀತಿಯಂತೂ ಅನನ್ಯವಾಗಿತ್ತು.ಸಾಕಷ್ಟು ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣವನ್ನು ನಡೆಸಿದ ನಂತರ ನಾವು ಹೊರಟದ್ದು ಹಿಮಾಲಯದ ಕಡೆಗೆ! ಎಲ್ಲರಿಗೂ ಅತ್ಯುನ್ನತ ಹಿಮವತ್ಪರ್ವತವನ್ನು ಅತಿ ಸಮೀಪದಿಂದ ನೋಡುತ್ತಿದ್ದೇವಷ್ಟೇ ಅಲ್ಲ, ಅಲ್ಲೇ ಹಲವಾರು ದಿನಗಳ ಕಾಲ ಚಿತ್ರೀಕರಣ ನಡೆಸುತ್ತೇವೆಂಬ ಸಂಗತಿಯೇ ರೋಮಾಂಚನ ಮೂಡಿಸಿತ್ತು.

ಪ್ರಯಾಣ ಮಾಡುತ್ತಾ ಮಾಡುತ್ತಾ ಇದ್ದಕ್ಕಿದ್ದ ಹಾಗೆ ದೂರದಿಂದ ನಯನ ಮನೋಹರವಾದ ಧವಳಗಿರಿಯ ಉತ್ತುಂಗ ಶಿಖರ ಶ್ರೇಣಿಯ ಪ್ರಪ್ರಥಮ ದರ್ಶನವಾದದ್ದೇ ತಡ, ನಮ್ಮೆಲ್ಲರ ಹರ್ಷೋದ್ಗಾರ ಮುಗಿಲು ಮುಟ್ಟಿತು.ಆದರೆ ಹೀಗೆ ದೂರದಿಂದ ನೋಡಿ ಸುಖಿಸುವುದೋ ಪ್ರವಾಸಿಗರಂತೆ ಒಮ್ಮೆ ಬಂದು ಹೋಗುವುದೋ ಒಂದು ಬದಿಗಾದರೆ ಆ ಕೊರೆಯುವ ಮಂಜಿನ,ಚರ್ಮವನ್ನೇ ಭೇದಿಸಿಕೊಂಡು ಒಳನುಗ್ಗಿ ನರನಾಡಿಗಳನ್ನೆಲ್ಲಾ ಹೆಪ್ಪುಗಟ್ಟಿಸುವ ಕುಳಿರಿನ ಭಾಗವಾಗಿ ಬದುಕುವುದೇ ಬೇರೆಯ ಮಾತೆಂಬುದು ಅರಿವಾಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ!

ಭವ್ಯ ಹಿಮವತ್ಪರ್ವತದ ಮಡಿಲಲ್ಲಿ ನಾವು ಮೊದಲು ತಂಗಿದ್ದು ಜೋಶೀಮಠದಲ್ಲಿ. ಈಗ ಹೇಗೋ ಕಾಣೆ,ಆಗಂತೂ ಅಲ್ಲಿ ತಂಗಲಿಕ್ಕೆ ವಿಶೇಷ ಸೌಕರ್ಯಗಳೇನೇನೂ ಇರಲಿಲ್ಲ.ಅಥವಾ ನಾವು ತಂಗಲು ಏರ್ಪಡಿಸಿದ್ದ ತಾಣ ಮಾತ್ರ ಹಾಗಿತ್ತೋ ತಿಳಿಯದು ಅನ್ನಿ.ಒಂದು ಅತಿ ವಿಶಾಲ ಹಜಾರ..ದೊಡ್ಡ ದೊಡ್ಡ ಕಿಟಕಿಗಳು..ಒಂದಕ್ಕೂ ನೆಟ್ಟಗೆ ಬಾಗಿಲಿಲ್ಲ! ತೆರೆದ ಕಿಟಕಿಗಳಿಂದ ನಿರಾಂತಕವಾಗಿ ಭೋರೆಂದು ಒಳನುಗ್ಗಿ ಗದಗುಟ್ಟಿಸುತ್ತಿದ್ದ ಕುಳಿರ್ಗಾಳಿ! ‘ಸಿನೆಮಾ ಶೂಟಿಂಗ್ ಅಲ್ಲವೇ,ಮೂಲಭೂತ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆ ಇದ್ದೇ ಇರುತ್ತದೆ’ ಎಂಬ ಅಚಲ ನಂಬಿಕೆಯಲ್ಲಿ ನಮ್ಮಲ್ಲಿ ಬಹಳಷ್ಟು ಜನ ಯಾವ ಪೂರ್ವಸಿದ್ಧತೆಯನ್ನೂ ಮಾಡಿಕೊಂಡು ಹೋಗಿರಲಿಲ್ಲ. ಅಲ್ಲಿ ನೋಡಿದರೆ ಅಂಥ ಯಾವ ಸೌಕರ್ಯಗಳನ್ನೂ ನಿರ್ಮಾಪಕರಾಗಲೀ ಸಂಬಂಧಪಟ್ಟ ಸಂಸ್ಥೆಯವರಾಗಲೀ ಒದಗಿಸಿರಲಿಲ್ಲ! ಹಾಸಿಗೆಯಿಲ್ಲದೆ,ಹೊದಿಕೆಯಿಲ್ಲದೆ ಇಡೀ ರಾತ್ರಿ ಚಳಿಯಲ್ಲಿ ಗಡಗಡ ನಡುಗುತ್ತಾ ಕುಳಿತುಕೊಳ್ಳುವ ಪ್ರಸಂಗ ಎದುರಾಗಿಹೋಯಿತು ನಮಗೆ.

ಬಡತನದಲ್ಲಿ ಚಿತ್ರಮಾಡುತ್ತಿರುವುದೇನೋ ಸರಿಯೇ, ಆದರೆ ತೀರಾ ಇಷ್ಟು ಶೋಚನೀಯ ಪರಿಸ್ಥಿತಿಯೇ?! ಸಾಕಷ್ಟು ಪೂರ್ವಭಾವೀ ಸಿದ್ಧತೆಗಳನ್ನು ಮಾಡಿಕೊಂಡು ಬಂದಿದ್ದ ಅಯ್ಯರ್ ಕುಟುಂಬದವರು ಹಾಗೂ ಇತರ ಕೆಲವರು ನೆಮ್ಮದಿಯಾಗಿ ಬೆಚ್ಚಗೆ ಹೊದ್ದು ಸವಿನಿದ್ದೆಗೆ ಜಾರಿದ್ದರು! ಇದ್ದ ಬದ್ದ ಬಟ್ಟೆಗಳನ್ನೆಲ್ಲಾ ಮೈಗೆ ಸುತ್ತಿಕೊಂಡು ಚಳಿಯಲ್ಲಿ ನಡುಗುತ್ತಾ ಕುಳಿತ ನನಗೆ ಹಾಗೂ ನಾಗಾಭರಣನಿಗೆ ನಿದ್ದೆಯೆನ್ನುವುದು ಕಣ್ಣುರೆಪ್ಪೆಯ ಸನಿಹಕ್ಕೂ ಸುಳಿಯಲಿಲ್ಲ.”ನಾವು ನಾಟಕದವರೇ ವಾಸಿ..ಎಷ್ಟೇ ಕಷ್ಟವಾದರೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನಾದರೂ ಒದಗಿಸಿಕೊಡುತ್ತೇವೆ;ಇದು ಅದಕ್ಕಿಂತಲೂ ಕೇಡಾಗಿಹೋಯಿತು..ಈ ಸೌಭಾಗ್ಯಕ್ಕೆ ಸಿನೆಮಾ ಯಾಕೆ ಮಾಡಬೇಕು? ಇನ್ನೊಂದು ರಾತ್ರಿ ಇಂಥಾ ಥಂಡಿಯಲ್ಲಿ ಕಳೆಯಬೇಕಾಗಿ ಬಂದರೆ ಇಲ್ಲೇ ನಮಗೆ ಹಿಮಸಮಾಧಿ ಖಚಿತ..”ಇತ್ಯಾದಿ ಇತ್ಯಾದಿಯಾಗಿ ಸಂಬಂಧ ಪಟ್ಟವರ ಮೇಲೆ ಟೀಕಾ ಪ್ರಹಾರವನ್ನೇ ಮಾಡುತ್ತಾ ಬೆಳಕು ಹರಿಸಿದೆವು. ಕೇವಲ ಹತ್ತು ಅಡಿಗಳ ಅಂತರದಲ್ಲೇ ಮಲಗಿದ್ದ ಅಯ್ಯರ್ ಅವರ ಕಿವಿಗೆ ನಮ್ಮ ಈ ಜೋರು ಗೊಣಗಾಟ—ಟೀಕೆ ಬೀಳದಿರುವ ಸಾಧ್ಯತೆಯೇ ಇರಲಿಲ್ಲ. ಕೇಳಿಸಲೆಂಬುದೇ ನಮ್ಮ ಇರಾದೆಯೂ ಆಗಿತ್ತು ಅನ್ನಿ!ಕೇಳಿಸಿದರೂ ಆ ನಟ್ಟಿರುಳಿನಲ್ಲಿ ಅವರಾದರೂ ಏನು ಮಾಡಿಯಾರು? ಮರುದಿನ ನಸುಕಿನಲ್ಲೇ ನಮ್ಮನ್ನು ಅರಸಿಕೊಂಡು ಬಂದ ಅಯ್ಯರ್ ಅವರು ‘ಬನ್ರಯ್ಯಾ’ ಎಂದು ನಮ್ಮಿಬ್ಬರನ್ನೂ ಒಂದು ಕೋಣೆಗೆ ಕರೆದುಕೊಂಡು ಹೋದರು.”ಈ ಕೋಣೆ ನಿಮ್ಮಿಬ್ಬರಿಗೆ ಕಣ್ರಯ್ಯಾ..ನೋಡಿ..ಹಾಸಿಗೆ ಇದೆ..ರಜಾ಼ಯಿಗಳಿವೆ..ಸಮಾಧಾನವೋ?” ಎಂದರು. ಸಮಾಧಾನವಷ್ಟೇ ಏನು,ವಿಪರೀತ ಖುಷಿಯೇ ಆಯಿತಾದರೂ ಇತರ ಗೆಳೆಯರ ಹಾಗೂ ತಂತ್ರಜ್ಞರ ಬವಣೆಯ ನೆನಪು ನುಗ್ಗಿ ಬಂತು. “ನಮ್ಮದೇನೋ ಆಯಿತು ಗುರುಗಳೇ,ಉಳಿದವರ ಗತಿ ಏನು? ಈ ರಾತ್ರೀನೂ ಹೀಗೇ ಆದರೆ ಛಳಿ ತಡೆಯೋಕ್ಕಾಗದೇನೇ ಒಂದಷ್ಟು ಜನ ಕೇದಾರೇಶ್ವರನ ಪಾದ ಸೇರಿ ಬಿಡ್ತಾರೆ” ಎಂದೆವು ನಾವು.

“ಓಹೋಹೋಹೋ..ಮಹಾ ಸಮಾಜವಾದಿಗಳು! ಎಲ್ಲರಿಗೂ ವ್ಯವಸ್ಥೆ ಮಾಡಿದೀನಿ ಹೋಗ್ರಯ್ಯಾ” ಎಂದು ಸಿಡಿಮಿಡಿಗೊಳ್ಳುತ್ತಾ ಅಲ್ಲಿಂದ ಹೊರಟರು ಅಯ್ಯರ್ ಅವರು. ಅಲ್ಲಿಗೆ ಒಂದು ಸಮಸ್ಯೆ ತೀರಿದಂತಾಯಿತು. ಆದರೆ ಊಟ ತಿಂಡಿಗಳದ್ದು ಮತ್ತೊಂದು ದೊಡ್ಡ ಸಮಸ್ಯೆಯೇ ಆಗಿತ್ತು. ಅಲ್ಲಿ ಅಡುಗೆ ಮಾಡಿ ಬಡಿಸುವವರೂ ಯಾರೂ ನಿಗದಿಯಾಗಿರಲಿಲ್ಲ; ಅಷ್ಟು ಮಂದಿಗೆ ಊಟ—ತಿಂಡಿ ಒದಗಿಸುವಂತಹ ದೊಡ್ಡ ಹೋಟಲ್ ಗಳೂ ಇರಲಿಲ್ಲ. ಪ್ರತಿನಿತ್ಯ ಬೆಳಗಿನ ತಿಂಡಿಗೆ ಮೂರು ರೂಪಾಯಿಗಳನ್ನೂ ಮಧ್ಯಾಹ್ನದ ಊಟಕ್ಕೆ ನಾಲ್ಕು ರೂಪಾಯಿಗಳನ್ನೂ ಮಂಜೂರು ಮಾಡಲಾಗುತ್ತಿತ್ತು! ಯಾರು ಎಲ್ಲಿ ಬೇಕಾದರೂ ಏನು ಬೇಕಾದರೂ ಎಷ್ಟು ಬೇಕಾದರೂ (ಆ ದುಡ್ಡಿಗೆ ಬರುವಷ್ಟು!) ತಿಂದುಕೊಂಡು ಬರಬಹುದಿತ್ತು! ಮುಂಗಡ ಕೊಟ್ಟಿದ್ದ ಹಣದ ಜೊತೆಗೆ ಕೈಯಲ್ಲಿದ್ದ ಚೂರು ಪಾರು ದುಡ್ಡೂ ಮುಗಿದ ಮೇಲೆ ದೆಹಲಿಯ ನಾಟಕಶಾಲೆಯ ಉಪವಾಸದ ದಿನಗಳ ಪುನರಾವರ್ತನೆಯಾಗುವುದೇನೋ ಎಂದು ಭಯವಾಗತೊಡಗಿತು! ಈ ನಡುವೆಯೇ ನಡೆದ ಒಂದು ಅನಿರೀಕ್ಷಿತ ಘಟನೆ ನನ್ನ ಮನಸ್ಸನ್ನು ತೀವ್ರವಾಗಿ ಕದಡಿಬಿಟ್ಟಿತು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

May 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: