ಶ್ರೀನಿವಾಸ ಪ್ರಭು ಅಂಕಣ- ‘ಪ್ರಭು ಭಾಯ್.. ಕಮಾಲ್ ಕರ್ ದಿಯಾ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

34

ಟೆಲಿಗ್ರಾಂ ಬಂದ ಎರಡು ದಿನಕ್ಕೇ ನಾನು ದೆಹಲಿಗೆ ಹೊರಟುಬಿಟ್ಟೆ. ಅಶೋಕ ಮುಂಬೈ ಮಾರ್ಗವಾಗಿ ಬರುತ್ತೇನೆ ಎಂದು ತಂತಿ ಕಳಿಸಿದ್ದ. ದೆಹಲಿ ತಲುಪುತ್ತಿದ್ದಂತೆ ಕಾರಂತರನ್ನು ಭೇಟಿಯಾಗಿ ಅವರಿಗೆ ನಡೆದದ್ದೆಲ್ಲವನ್ನೂ ತಿಳಿಸಿಬಿಡಬೇಕೆಂದು ತೀರ್ಮಾನಿಸಿದೆ. ಕಾರಂತರು ಭೋಪಾಲ್ ನಿಂದ ನಾಲ್ಕು ದಿನದ ಹಿಂದೆ ದೆಹಲಿಗೆ ಮರಳಿದ್ದರು. ಅಶೋಕ ನಾನು ತಲುಪಿದ ಮರುದಿನ ದೆಹಲಿಗೆ ಬರುವವನಿದ್ದ. ನಮ್ಮ ತಂಡದ ರಂಗ ನಿರ್ವಾಹಕನಾಗಿದ್ದ ಗೆಳೆಯ ಸೂರಿ ಅದಾಗಲೇ ಕಾರಂತರಿಗೆ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದನಂತೆ.

ಮೊದಲೇ ನಮ್ಮ ಮೇಲೆ ಕಾರುತ್ತಿದ್ದ ನಮ್ಮ ನಿರ್ದೇಶಕ ಮಹೋದಯರೂ ಘಟನೆಯ ತಮ್ಮ ಆವೃತ್ತಿಯನ್ನು ವಿವರವಾಗಿಯೇ ವರದಿ ಒಪ್ಪಿಸಿರುತ್ತಾರೆ; ಹೆದರಿ ನಾಟಕ ಬಿಟ್ಟು ಓಡಿಹೋಗಿದ್ದಾರೆ ಎಂದು ನಮ್ಮ ಮೇಲೆ ಗೂಬೆ ಕೂರಿಸಿರುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿರಲಿಲ್ಲ.

ಮೊದಲು ಕಾರಂತರ ಮನೆಗೇ ಹೋಗಿ ನಮಗಾಗಿರುವ ಅವಮಾನ-ಅನ್ಯಾಯಗಳನ್ನು ಚಾಚೂ ತಪ್ಪದೇ ವಿವರಿಸಿ ಹೇಳಿದರೆ ನಮ್ಮ ನೋವು—ಸಂಕಟ ಮೇಷ್ಟ್ರಿಗೆ ಅರ್ಥವಾಗಿಯೇ ಆಗುತ್ತದೆ; ಸಂತೈಸಿ ಸಮಾಧಾನ ಮಾಡುತ್ತಾರೆ; ಅವರ ಜೊತೆ ಕೂತು ಒಂದು ಗುಂಡು ಹಾಕಿಕೊಂಡು, ಮೇಷ್ಟ್ರ ನೆಚ್ಚಿನ ಬಂಟ ರಘುವೀರ ಹೊಳ್ಳ ಮಾಡಿರುವ ರುಚಿಯಾದ ಅಡುಗೆ ಸವಿದು ಬರುವುದೆಂದು ಲೆಕ್ಕಾಚಾರ ಹಾಕಿಕೊಂಡು ಅಂದು ಸಂಜೆಯೇ ಕಾರಂತರ ಮನೆಗೆ ಹೋಗಿ ಬರಲು ನಿರ್ಧರಿಸಿದೆ. ಸೂರಿಯನ್ನೂ ಜೊತೆಗೆ ಕರೆದರೆ ಯಾಕೋ ಒಲ್ಲೆ ಎಂದುಬಿಟ್ಟ. ಏನಾದರಾಗಲಿ ಎಂದುಕೊಂಡು ಒಬ್ಬನೇ ಸಂಜೆಯಾದೊಡನೆ ಮೇಷ್ಟ್ರ ಮನೆಗೆ ಹೊರಟುಬಿಟ್ಟೆ.

ಮೇಷ್ಟ್ರ ಮನೆ ತಲುಪಿ ಬೆಲ್ ಮಾಡಿದರೆ ಬಾಗಿಲು ತೆರೆದವನು ಹೊಳ್ಳ. ‘ಬನ್ನಿ ಪ್ರಭುಗಳೇ’ ಎಂದು ಹೊಳ್ಳ ಆತ್ಮೀಯವಾಗಿ ಸ್ವಾಗತಿಸಿದ. ಇನ್ನೇನು ಒಳಗೆ ಹೆಜ್ಜೆ ಇಡಬೇಕು,ಹೊಳ್ಳನ ಬೆನ್ನ ಹಿಂದೆಯೇ ಮೇಷ್ಟ್ರು ಪ್ರತ್ಯಕ್ಷರಾದರು. ‘ನಮಸ್ತೆ ಮೇಷ್ಟ್ರೇ’ ಎಂದು ನಸು ನಕ್ಕೆ. ಹೊಳ್ಳ ಹಾಗೇ ಹಿಂದೆ ಸರಿದು ಮೇಷ್ಟ್ರ ಪೂರ್ಣ ಆಕೃತಿಯ ದರ್ಶನವಾಯಿತು. ಮಸುಕು ಬೆಳಕಿನಲ್ಲಿ ಯಾಕೋ ಮೇಷ್ಟ್ರ ಮುಖಭಾವ ತುಂಬಾ ವ್ಯಗ್ರವಾಗಿದ್ದಂತೆ ತೋರಿತು.ಒಂದು ಕ್ಷಣ ಏನು ಮಾಡಲೂ ತೋಚದೇ ಹಾಗೇ ನಿಂತೆ. ಇದ್ದಕ್ಕಿದ್ದ ಹಾಗೆ, ಯಾವೊಂದು ಪೂರ್ವ ಪೀಠಿಕೆಯೂ ಇಲ್ಲದೆ ಮೇಷ್ಟ್ರ ವಾಕ್ಪ್ರಹಾರ ಆರಂಭವಾಗಿಬಿಟ್ಟಿತು: “ಏನು ಬಂದಿರಿ? ಯಾರು ನಿಮಗೆ ಬರೋಕೆ ಆಹ್ವಾನ ಕೊಟ್ಟಿದ್ದು? ಊರು ಬಿಟ್ಟು ಹೋಗೋವಾಗ ಹೇಳಿ ಹೋಗೋಕೆ ತೋಚಲಿಲ್ಲ ನಿಮಗೆ.. ಧರ್ಮಛತ್ರ ಅಲ್ಲ ಇದು.. ಸ್ಕೂಲು.. ನಾಟಕದ ಸ್ಕೂಲು.. ಒಂದು discipline ಇರಬೇಕು ನಿಮಗೆ.. ಅದೇ ಇಲ್ಲದ ಮೇಲೆ ಇಲ್ಯಾಕೆ ಸಾಯೋಕೆ ಬಂದಿದೀರಿ? ನಾಟಕ ಬಿಟ್ಟು ಓಡಿ ಹೋಗಿದೀರಲ್ಲಾ, ನಾಚಿಕೆ ಆಗೋಲ್ವಾ ನಿಮಗೆ? ಥೂ.. ಥೂ.. ಹೇಡಿಗಳು..ರಣಹೇಡಿಗಳು..

ಈ ಸೌಭಾಗ್ಯಕ್ಕೆ ಪಾರ್ಟ್ ಕೊಡಿ ಅಂತ ಯಾಕೆ ಗಲಾಟೆ ಮಾಡಬೇಕಿತ್ತು? ಯೋಗ್ಯತೆ ಇಲ್ಲದಿದ್ದರೆ ತೆಪ್ಪಗೆ ಬಿದ್ದಿರಬೇಕು.. ‘ನಿಮ್ಮ ಶಿಷ್ಯರು ಹೆದರಿ show ಬಿಟ್ಟು ಓಡಿಹೋಗಿದಾರೆ ಬಾಬಾ’ ಅಂತ ಇಲ್ಲಿಯೋರೆಲ್ಲಾ ತಮಾಷೆ ಮಾಡಿಕೊಂಡು ನಗತಿದಾರೆ..ನಿಮಗಂತೂ ಮರ್ಯಾದೆ ಇಲ್ಲ..ನನ್ನ ಮಾನಾನೂ ಕಳೆದುಬಿಟ್ರಿ..’ಕಾನಡಿ ಲೋಗ್ ಡರ್ ಪೋಕ್’ ಅಂತ ಹಣೆಪಟ್ಟಿ ಹಚ್ಚಿದಾರೆ ಈಗ…ಶಿಸ್ತು—ಬದ್ಧತೆ ಇಲ್ಲದೇ ಹೋದ್ರೆ ರಂಗಭೂಮೀಗೆ ಯಾಕೆ ಬರ್ತೀರಿ? ಹೇಡಿಗಳಿಗೆ ರಂಗಭೂಮೀಲಿ ಜಾಗ ಇಲ್ಲ…ಥೂ..”

ಒಮ್ಮೆ ಉಸಿರು ತೆಗೆದುಕೊಳ್ಳಲು ಅರೆಚಣ ಮೇಷ್ಟ್ರು ಸುಮ್ಮನಾದರು. ಅದುವರೆಗೆ ದಿಕ್ಕೆಟ್ಟವನಂತೆ ಥರಥರಗುಟ್ಟುತ್ತಾ ನಿಂತಿದ್ದ ನಾನು ಇದ್ದ ಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿಕೊಂಡು ತೊದಲಿದೆ: “ನಾವೇನೂ show ಬಿಟ್ಟು ಹೋಗಿಲ್ಲ ಮೇಷ್ಟ್ರೇ.. back stage ಕೆಲಸ ಮಾಡಿದೀವಿ, ಗುಂಪಲ್ಲಿ ಪಾರ್ಟ್ ಕೂಡಾ ಮಾಡಿದೀವಿ..ಅವಮಾನ ಮಾಡಿ ನೋವು ಮಾಡಿದ್ದರಿಂದ ಮುಖ್ಯ ಪಾತ್ರ ಮಾಡೋಲ್ಲ ಅಂತ ಹೇಳಿದ್ದಷ್ಟೇ…”

ಮಾತು ಮುಗಿಸುವ ಮುನ್ನವೇ ಮತ್ತೆ ಶುರುವಾಯಿತು ಮೇಷ್ಟ್ರ ವಾಗ್ದಾಳಿ: “ಅನ್ನಬಾರದು! ಪಾತ್ರ ಮಾಡೋಲ್ಲ ಅನ್ನಬಾರದು! ಮಾನ ಹೋಗೋದಲ್ಲ, ಪ್ರಾಣಾನೇ ಹೋಗ್ತಿದ್ರೂ ಪಾತ್ರ ಮಾಡೋಲ್ಲ ಅನ್ನಬಾರದು! ಹೇಡಿತನ ಅದು! ಪಾತ್ರ ಮಾಡ್ತಾನೇ ಸತ್ತುಹೋದ್ರೂ ಸರಿಯೇ, ಆಗೋಲ್ಲ ಅನ್ನಬಾರದು! ಅದು crime! ದೊಡ್ಡ ಅಪರಾಧ..” ಮೇಷ್ಟ್ರ ಮುಖ ಬೆಂಕಿಯುಂಡೆಯ ಹಾಗೆ ಉರಿಯುತ್ತಿತ್ತು. ಅವರು
ಸಿಟ್ಟು-ಆವೇಶದಿಂದ ನಡುಗುತ್ತಿದ್ದರು; ನಾನು ನೋವು—ಅವಮಾನದಿಂದ, ಭಯದಿಂದ ನಡುಗುತ್ತಿದ್ದೆ. ಅಲ್ಲೇ ನಿಂತಿದ್ದರೆ ಕುಸಿದು ಬಿದ್ದೇಹೋಗುತ್ತೇನೆ ಅನ್ನಿಸಿ, “sorry ಮೇಷ್ಟ್ರೇ..ಕ್ಷಮಿಸಿಬಿಡಿ.. ತಪ್ಪಾಯ್ತು” ಎಂದಷ್ಟೇ ಹೇಳಿ ಉಕ್ಕಿ ಬರುತ್ತಿದ್ದ ಅಳುವನ್ನು ತಡೆದುಕೊಳ್ಳುತ್ತಾ ಮರಳಿ ಹೊರಟುಬಿಟ್ಟೆ. ಬೆನ್ನಿಗೇ ಮೇಷ್ಟ್ರ ಕೂಗು ಕೇಳುತ್ತಿತ್ತು: “ಪ್ರಭೂ..ನಿಂತುಕೊಳ್ಳಿ.. ಮತ್ತೆ ಹೇಡಿ ಥರಾ ಓಡಬೇಡಿ.. ಬನ್ನಿ ಇಲ್ಲಿ”.

ನಾನು ಮತ್ತೆ ಹೊರಳಲಿಲ್ಲ. ಮನೆ ಬಾಗಿಲನ್ನು ಧಬಾರನೆ ಹಾಕಿಕೊಂಡ ಸದ್ದು ಕಿವಿಗಪ್ಪಳಿಸಿತು. ನಾನು ನಡೆದೇ ಇದ್ದೆ.. ಹಾದಿಯ ಗುಂಟ ರಸ್ತೆಯನ್ನು ಕಣ್ಣೀರಿನಿಂದ ತೋಯಿಸುತ್ತಾ ನಡೆದೇ ಇದ್ದೆ.. ಒಂದು ಸಾಂತ್ವನದ ಮಾತಿಗಾಗಿ ಇವರ ಬಳಿ ಬಂದರೆ ಹೀಗೆ ಮಾತಿನ ಚಾಟಿಯಿಂದ ಬಾರಿಸಿಬಿಟ್ಟರಲ್ಲಾ ಎಂದು ಒಳಗೇ ಮರುಗುತ್ತಾ ನಡೆದೇ ಇದ್ದೆ… ನಡೆಯುತ್ತಲೇ ಹಾಸ್ಟಲ್ ತಲುಪಿ ಯಾರೊಂದಿಗೂ ಮಾತಾಡದೇ ಊಟವನ್ನೂ ಮಾಡದೆ ಮುಸುಕು ಹೊದ್ದು ಮಲಗಿಬಿಟ್ಟೆ. ಅದುವರೆಗಿನ ನನ್ನ ಬದುಕಿನಲ್ಲಿ ನನ್ನನ್ನು ಯಾರೂ ಹಾಗೆ ಟೀಕಿಸಿದ್ದಿಲ್ಲ..ಬೈದಿದ್ದಿಲ್ಲ.ಅದು ನನ್ನ ದುಃಖವನ್ನು ಹೆಚ್ಚಿಸಿದ ಮತ್ತೊಂದು ಪ್ರಮುಖ ಕಾರಣವಾಗಿ ಹೋಯಿತು.

ಮರುದಿನ ಎದ್ದು ಯಾಂತ್ರಿಕವಾಗಿ ತಯಾರಾಗಿ ಶಾಲೆಗೆ ಹೋದೆ.ಯಾವುದರಲ್ಲೂ ಆಸಕ್ತಿಯಿಲ್ಲ..ಲವಲವಿಕೆ ಇಲ್ಲ..ಎಲ್ಲೋ ಕಳೆದುಹೋದಂತೆ.. ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗತೊಡಗಿ ತೀರಾ ಖಿನ್ನತೆಗೆ ಜಾರಿಬಿಟ್ಟೆ. ನನ್ನ ಸೋಲು—ಅಸಹಾಯಕತೆಗಳನ್ನು ಕಂಡು ಎಲ್ಲರೂ ಮುಸಿಮುಸಿ ನಗುತ್ತಿದ್ದಾರೆ ಎಂದೆಲ್ಲಾ ಅನ್ನಿಸತೊಡಗಿ ಮತ್ತಷ್ಟು ವಿಷಣ್ಣನಾಗಿಬಿಟ್ಟೆ. ಮಧ್ಯಾಹ್ನದ ವೇಳೆಗೆ ಅಶೋಕ ಬಂದಿಳಿದ. ಮೇಷ್ಟ್ರ ಬಳಿ ಛೀಮಾರಿ ಹಾಕಿಸಿಕೊಂಡು ಬಂದದ್ದನ್ನು ಸಾದ್ಯಂತವಾಗಿ ಅವನಿಗೆ ವಿವರಿಸಿದೆ.

ಒಂದು ಕ್ಷಣ ಸುಮ್ಮನಿದ್ದ ಅವನು ನಂತರ, “ಛಲೋ ಆತು ಬಿಡು”ಎನ್ನುವುದೇ! ಸಿಟ್ಟು ನೆತ್ತಿಗೇರಿತು! ನಾನು ಮೇಷ್ಟ್ರ ಕೈಲಿ ಆ ಪಾಟಿ ಬೈಸಿಕೊಂಡು ಬಂದಿದ್ದರೆ “ಒಳ್ಳೆಯದಾಯಿತು” ಅನ್ನುವುದು ಅದೆಂಥಾ ಕ್ರೌರ್ಯ! “ಹಂಗಲ್ಲಲೇ ಮಬ್ಬಿಡಿಸಿಗಂಡ, ನಾನೂ ನಿನ್ನ ಜೋಡಿ ಬರದೇ ಇದ್ದದ್ದು ಛಲೋ ಆತು ಅಂದೆ.. ನಿನ್ನ ಜೋಡಿ ನಾನೂ ಬೈಸಿಕೊಳೋದು ತಪ್ಪಿತಲ್ಲಾ ಅಂತ.. ಸಿಟ್ಟಾಗಬೇಡ” ಎಂದು ಅಶೋಕ ಸಮಾಧಾನ ಪಡಿಸಿದ. ಹೀಗೇ ಒಂದೆರಡು ದಿನಗಳುರುಳಿದವು.

ಇದರ ನಡುವೆಯೇ ಬಂದ ಒಂದು ಒಳ್ಳೆಯ ಸುದ್ದಿ ಅಂದರೆ ಜರ್ಮನಿಯ ಪ್ರಸಿದ್ಧ ರಂಗ ನಿರ್ದೇಶಕ ಫ್ರಿಡ್ಜ಼್ ಬೆನವಿಟ್ಸ್ ಅವರು ಬರ್ಟೋಲ್ಟ್ ಬ್ರೆಖ್ಟ್ ನ ನಾಟಕವನ್ನು ಮಾಡಿಸಲು ನಮ್ಮ ಶಾಲೆಗೆ ಬರುತ್ತಿದ್ದಾರೆ ಅನ್ನುವುದು. ಬೆನವಿಟ್ಸ್ ಅವರು ವಿಶ್ವ ವಿಖ್ಯಾತರಾದ ಶ್ರೇಷ್ಠ ನಿರ್ದೇಶಕರು. ಬ್ರೆಖ್ಟ್ ನ ನಾಟಕಗಳನ್ನು ರಂಗಕ್ಕೆ ಅಳವಡಿಸುವುದರಲ್ಲಿ ಸಿದ್ಧಹಸ್ತರು.ಅಂಥವರೊಟ್ಟಿಗೆ ಕೆಲಸ ಮಾಡುವುದೆಂದರೆ, ಅವರು ನಮಗೆ ನಾಟಕ ಮಾಡಿಸುತ್ತಾರೆಂದರೆ ಅದು ನಮ್ಮ ಅದೃಷ್ಟವೇ ಸರಿ ಎಂದು ಖುಷಿಯಿಂದ ಬೀಗಿದೆವು. ಮರುದಿನವೇ ಅವರ ಆಗಮನವೂ ಆಯಿತು.

ಅಂದೇ ತರಗತಿಯಲ್ಲಿ ನಿಭಾ ಜೋಶಿಯವರ ಪಾಠ ಕೇಳುತ್ತಾ ಕುಳಿತಿದ್ದಾಗ ಶಾಲೆಯ peon ಆಗಿದ್ದ ಜಮೀಲ್ ಭಾಯ್ ಬಂದು “ಪ್ರಭು ಔರ್ ಅಶೋಕ್ ಸಾಬ್ ಕೋ ಬಾಬಾ ಬುಲಾ ರಹೇ ಹೈ” ಎಂದು ಹೇಳಿದ. ಕಾರಂತರಿಂದ ಕರೆ! ಮತ್ತೇನು ಕಾದಿದೆಯೋ ಎಂದು ಎದೆ ಧಸಕ್ಕೆಂದಿತು. ಹೋಗುವಾಗ ದಾರಿಯಲ್ಲಿ ಅಶೋಕನಂತೂ, “ಮಗನಾ..ಇದು ನಿಂದಾ ಹಿಕಮತ್ ಇರಬೇಕು..ನನ್ನೂ ಮೇಷ್ಟ್ರ ಕೈಯಾಗ ಬೈಸಬೇಕಂತ ನೀನಾ ಚುಚ್ಚಿಕೊಟ್ಟೀಯೇನು? ಹೋಗಾ ಇವನ.. ಈ ಗಡ್ಡಧಾರಿ ಯಾಕೋ ನಮ್ಮನ್ನ ಬಿಡಾ ಹಂಗಾ ಕಾಣ್ತಿಲ್ಲಲೇ” ಎಂದು ಹಲುಬುತ್ತಲೇ ಇದ್ದ. ಮೇಷ್ಟ್ರ ಆಫೀಸ್ ಕೋಣೆಗೆ ಹೋಗಿ ಇಬ್ಬರೂ ಕೈಕಟ್ಟಿಕೊಂಡು ನಿಂತೆವು.

ಒಮ್ಮೆ ತಲೆಯೆತ್ತಿ ನಮ್ಮನ್ನು ನೋಡಿದ ಮೇಷ್ಟ್ರು ‘ಬಂದ್ರಾ’ ಎನ್ನುತ್ತಾ ಪೇಪರ್ ಒಂದನ್ನು ನಮ್ಮ ಮುಂದೆ ತಳ್ಳಿ ‘ನೋಡಿ’ ಎಂದರು. ಅದು ಅವರು ಸಿದ್ಧಪಡಿಸಿಟ್ಟಿದ್ದ ಒಂದು ಸುತ್ತೋಲೆ. ನಾಟಕದಲ್ಲಿ ಪಾತ್ರ ವಹಿಸದೇ ಬಂಡೆದ್ದದ್ದನ್ನು ಅಶಿಸ್ತಿನ ವರ್ತನೆಯೆಂದು ಪರಿಗಣಿಸಿ ಎಚ್ಚರಿಕೆಯ ನೋಟೀಸ್ ನೀಡುತ್ತಿದ್ದಾರೆ ಎನ್ನಿಸಿ ಮತ್ತೆ ಸಣ್ಣಗೆ ಕಾಲು ನಡುಗತೊಡಗಿತು. ಆದರೆ ಆ ಸುತ್ತೋಲೆಯಲ್ಲಿದ್ದ ಒಕ್ಕಣೆಯೇ ಬೇರೆ! “ಮುಂಬರುವ ವಾರದಲ್ಲಿ enemy of the people ನಾಟಕದ ಎರಡನೆಯ ತಂಡದ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನೂ ತಕ್ಷಣದಿಂದಲೇ ಮಾಡಿಕೊಳ್ಳತಕ್ಕದ್ದು”! ಎಂದು ಸುತ್ತೋಲೆಯಲ್ಲಿ ನಮೂದಿಸಲಾಗಿತ್ತು.

ಓದುತ್ತಿದ್ದಂತೆ ಇಬ್ಬರೂ ಗರ ಬಡಿದವರಂತೆ ನಿಂತು ಬಿಟ್ಟೆವು! “ಏನು? ಸುಮ್ಮನೇ ನಿಂತುಬಿಟ್ರಿ? sign ಮಾಡಿ ನೋಟೀಸ್ ಬೋರ್ಡ್ ಗೆ ಹಾಕೋದಕ್ಕೆ ಕಳಿಸಲಾ ಇಲ್ಲಾ ಹರಿದು ಹಾಕಲಾ? ನಾಟಕ ಮಾಡೋ ಧೈರ್ಯ ಇದೆಯಾ ಇಲ್ಲಾ ಈಗಲೂ ಹೇಡಿಗಳ ಥರಾ ಶಸ್ತ್ರತ್ಯಾಗ ಮಾಡಿ ಓಡಿಹೋಗ್ತೀರಾ?” ಎಂದರು ಮೇಷ್ಟ್ರು. ಆಗಿದ್ದ ಹಿತವಾದ ಆಘಾತದಿಂದ ಚೇತರಿಸಿಕೊಂಡವರೇ ಇಬ್ಬರೂ ಒಕ್ಕೊರಲಿನಿಂದ “ಮಾಡ್ತೀವಿ ಮೇಷ್ಟ್ರೇ..ಖಂಡಿತ ಮಾಡ್ತೀವಿ” ಎಂದು ಉತ್ಸಾಹದಿಂದ ಕೂಗಿಯೇಬಿಟ್ಟೆವು! ಹತ್ತು ದಿನಗಳ ನಂತರದಲ್ಲಿ ಅದೇ ರಂಗಮಂದಿರದಲ್ಲಿ, ‘enemy of the people’ ನಾಟಕದ, ಕೇವಲ ನಮ್ಮ ತಂಡದ ಎರಡು ಪ್ರದರ್ಶನಗಳು ಎಂದು ಪ್ರಕಟಣೆ ಹೊರಟೇಬಿಟ್ಟಿತು!

ಅಂದಿನಿಂದಲೇ ಶುರುವಾಗಿ ಹೋಯಿತು ನಮ್ಮತಂಡದ ಕಠಿಣ ತಾಲೀಮು. ಯುವರಾಜ ಶರ್ಮನಿಗಂತೂ ಹೇಳತೀರದ ಸಂತಸ: “ಕಷ್ಟಪಟ್ಟು ಸಿದ್ಧತೆ ಮಾಡಿಕೊಂಡಿರುವುದು ವ್ಯರ್ಥವಾಗುತ್ತಿಲ್ಲ ಎನ್ನುವುದೇ ದೊಡ್ಡ ವಿಷಯ..ಬಾಬಾ ನಿಮಗೆ ಈ ಅವಕಾಶ ಕೊಟ್ಟಿರುವುದು ಒಂದುರೀತಿ ಮರುಹುಟ್ಟಿನಂತೆ..ಶ್ರದ್ಧೆಯಿಂದ ಅಭ್ಯಾಸ ಮಾಡಿ” ಎಂದು ಧೈರ್ಯ ತುಂಬಿದ. ಆ ಹತ್ತು ದಿನಗಳಂತೂ ನನಗೆ ಹಗಲಿರುಳೂ ನನ್ನ ಪಾತ್ರದ ಬಗ್ಗೆಯೇ ಧೇನಿಸುತ್ತಾ, ಸಂಭಾಷಣೆಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತಾ ಡಾಕ್ಟರ್ ಪಾತ್ರದ ಗುಂಗಿನಲ್ಲಿ ಮುಳುಗಿರುವುದೇ ಆಗಿಹೋಯಿತು.

ಹಿಂದಿ ಸಂಭಾಷಣೆಗಳನ್ನು ಯಾವ ಮಟ್ಟಿಗೆ ಕಂಠಸ್ಥ ಮಾಡಿಕೊಂಡಿದ್ದೆನೆಂದರೆ ನಿದ್ದೆಯಿಂದೆಬ್ಬಿಸಿ ಕೇಳಿದರೂ ಪಟಪಟನೆ ಒಂದೇ ಉಸುರಿಗೆ ಒಂದೂ ತಪ್ಪಿಲ್ಲದೇ ಹೇಳಬಲ್ಲೆನಾಗಿದ್ದೆ! ಒಂದೇ ಬೇಸರದ ಸಂಗತಿಯೆಂದರೆ ನಮಗೆ ತಾಲೀಮು ನೀಡಲು ನಮ್ಮ ನಿರ್ದೇಶಕರು ಒಮ್ಮೆಯೂ ಅಭ್ಯಾಸದ ಕೊಠಡಿಯತ್ತ ಸುಳಿಯಲಿಲ್ಲ ಅನ್ನುವುದು.ನಮ್ಮ ಸಹಪಾಠಿಗಳೆಲ್ಲಾ ನಮ್ಮೊಟ್ಟಿಗೆ ಇದ್ದು ನೆರವಾಗುತ್ತಿದ್ದುದರಿಂದ ಆ ಕೊರತೆಯೂ ವಿಶೇಷವಾಗಿ ಬಾಧಿಸಲಿಲ್ಲವೆನ್ನಿ.

ನಮ್ಮ ಶಾಲೆಯ ಸಮೀಪದಲ್ಲೇ ಇದ್ದ ಶ್ರೀರಾಮ ಆರ್ಟ್ ಸೆಂಟರ್ ನ ಬೇಸ್ ಮೆಂಟ್ ಆಪ್ತ ರಂಗಮಂದಿರದಲ್ಲಿ ನಮ್ಮ ನಾಟಕದ ಪ್ರದರ್ಶನ ನಿಯೋಜಿತವಾಗಿತ್ತು. ನಮ್ಮ ನಾಟಕಕ್ಕೆ ರೂಪಿಸಿದ್ದ ರಂಗವಿನ್ಯಾಸವೂ ಬಹಳ ವಿಶಿಷ್ಟವಾಗಿತ್ತು. ಬೇಸ್ ಮೆಂಟ್ ನ ದೊಡ್ಡ ಹಾಲ್ ನಲ್ಲಿ ನಟ್ಟನಡುವೆ ಪ್ರೇಕ್ಷಕರು ನೆಲದ ಮೇಲೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಮತ್ತೆ ಮೂರು ಬದಿಗೆ ಮೂರು ರಂಗಕ್ರಿಯಾ ಸ್ಥಳಗಳ ರಂಗಸಜ್ಜಿಕೆಯನ್ನು ವಿನ್ಯಾಸ ಗೊಳಿಸಲಾಗಿತ್ತು.

ಯಾವ ವೇದಿಕೆಯಲ್ಲಿ ಬೆಳಕು ಮೂಡಿ ದೃಶ್ಯ ಆರಂಭವಾಗುತ್ತಿತ್ತೋ ಅತ್ತ ತಿರುಗಿ ಕುಳಿತು ಪ್ರೇಕ್ಷಕರು ರಂಗಕ್ರಿಯೆಯನ್ನು ವೀಕ್ಷಿಸಬೇಕಿತ್ತು. ಪ್ರೇಕ್ಷಕರಿಗೆ ನಿಜಕ್ಕೂ ಒಂದು ಹೊಸರೀತಿಯ ವಿಶೇಷ ಅನುಭವವನ್ನು ತಂದುಕೊಟ್ಟ ಪ್ರದರ್ಶನ ಇದು. ಬಹುಶಃ ಅದುವರೆಗಿನ ನನ್ನ ಬದುಕಿನಲ್ಲಿ ನಾನು ಎದುರಿಸಿದ ಬಹು ದೊಡ್ಡ ಸವಾಲು ಈ ನಾಟಕ.. ಈ ಪಾತ್ರ.

ಒಬ್ಬ ನಟನಾಗಿ ನನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಬೇಕಾದ ಅಗತ್ಯದ ಜತೆಗೆ ನಮ್ಮ ಮೇಷ್ಟ್ರು ನಮ್ಮ ಮೇಲೆ ಆ ಮಟ್ಟಿಗೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ ಜರೂರೂ ನಮ್ಮ ಹೆಗಲೇರಿತ್ತು. ನಮ್ಮದೊಂದೇ ಗುರಿ: ಯಾವುದೇ ಕಾರಣಕ್ಕೆ ನಾವಾಗಲೀ ಮೇಷ್ಟ್ರಾಗಲೀ ತಲೆ ತಗ್ಗಿಸುವಂತಹ ಪ್ರಸಂಗ ಬರಬಾರದು! ಹಾಗೊಂದು ಸಂಕಲ್ಪ ಮಾಡಿ ಏಕನಿಷ್ಠೆಯಿಂದ ತಾಲೀಮಿನಲ್ಲಿ ತೊಡಗಿಕೊಂಡೆವು.ದಿನಗಳು ಕ್ಷಣಗಳಂತುರುಳಿ ನಮ್ಮ ನಾಟಕದ ಪ್ರಥಮ ಪ್ರದರ್ಶನದ ದಿನ ಬಂದೇಬಿಟ್ಟಿತು!

ಸಂಜೆ 6.30 ಕ್ಕೆ ನಾಟಕ ಪ್ರದರ್ಶನ. ಅಂದಾದರೂ ನಿರ್ದೇಶಕರು ಬಂದು ಶುಭ ಹಾರೈಸಬಹುದೆಂದು ನಾನು ಕಾಯುತ್ತಿದ್ದೆ. ಅವರು ಬರಲಿಲ್ಲ. ಅದೊಂದು ನೋವು ನಮ್ಮನ್ನು ಕುಗ್ಗಿಸಲು ಬಿಡದಂತೆ ಮನೋಸ್ಥೈರ್ಯವನ್ನು ಕಾಪಾಡಿಕೊಂಡು ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಪ್ರದರ್ಶನಕ್ಕೆ ಸಿದ್ಧರಾದೆವು. ದೆಹಲಿಯ ಆತ್ಮೀಯ ಗೆಳೆಯರಾದ ಗುರುದತ್ತ, ಸುಬ್ಬಣ್ಣ ಹಾಗೂ ಮತ್ತೂ ಕೆಲ ಗೆಳೆಯರು ಮೊದಲ ಪ್ರದರ್ಶನಕ್ಕೇ ಬಂದಿದ್ದರು. ಮೇಷ್ಟ್ರು ಎರಡನೆಯ ಪ್ರದರ್ಶನಕ್ಕೆ ಬರುವುದಾಗಿ ಹೇಳಿ ಶುಭ ಕೋರಿ ಆಶೀರ್ವದಿಸಿ ಕಳಿಸಿದರು. ಸಂಜೆ ನಾಲ್ಕು ಗಂಟೆಗೇ ಥಿಯೇಟರ್ ಗೆ ಹೋಗಿ ಸಿದ್ಧತೆಗಳನ್ನು ಮಾಡಿಕೊಂಡು ಪರಸ್ಪರ ಶುಭ ಹಾರೈಕೆಗಳ ವಿನಿಮಯ ಮಾಡಿಕೊಂಡು ಕ್ಷಣಗಣನೆ ಮಾಡುತ್ತಾ ಕುಳಿತೆವು.

ಸಂಜೆ 6 ಗಂಟೆ ಇಪ್ಪತ್ತು ನಿಮಿಷ. ಮೊದಲ ಬೆಲ್ ಬಾರಿಸುತ್ತಲೇ ಎದೆ ಬಡಿತದ ಗತಿಯಲ್ಲೂ ಏರಿಕೆ! ಐದು ನಿಮಿಷದ ನಂತರ ಎರಡನೆಯ ಬೆಲ್. ದತ್ತ..ದತ್ತ..ದತ್ತ… ಅಣ್ಣ ಕಲಿಸಿದ್ದ ದತ್ತ ಜಪ ತನ್ನಂತಾನೇ ಎದೆಬಡಿತದ ತಾಳದೊಂದಿಗೆ ಮನದೊಳಗೇ ಅನುರಣಿಸಿತ್ತು. ಮೂರನೆಯ ಬೆಲ್!ನನ್ನ ಭವಿಷ್ಯವನ್ನೇ ನಿರ್ಧರಿಸುವಂತಹ ಘಂಟಾನಾದ! ನಾಟಕ ಆರಂಭವಾಯಿತು.

ಕೈ ಕುಲುಕುವಷ್ಟು ಹತ್ತಿರದಲ್ಲೇ, ಉಸಿರಾಟದ ಪ್ರತಿ ಏರಿಳಿತವೂ ಕೇಳುವಷ್ಟು ಸಮೀಪದಲ್ಲೇ ಕುಳಿತಿರುವ ಪ್ರೇಕ್ಷಕರು! ಮಾತೃಭಾಷೆಯಲ್ಲದ ಪರಭಾಷೆಯಲ್ಲಿ ನಾಟಕದ ಕೇಂದ್ರ ಪಾತ್ರವನ್ನು ನಿರ್ವಹಿಸಲು ನಿಂತಿದ್ದೇನೆ! ಉಸಿರಾಟದ ಸದ್ದೇ ಕೇಳುತ್ತಿದ್ದ ಪ್ರೇಕ್ಷಕರಿಗೆ ಡಮರುವಿನಂತೆ ಬಡಿದುಕೊಳ್ಳುತ್ತಿದ್ದ ನನ್ನ ಎದೆ ಬಡಿತ ಕೇಳದಿದ್ದೀತೇ! ಐದು ನಿಮಿಷ.. ಕೇವಲ ಐದು ನಿಮಿಷದಲ್ಲಿ ಆರಂಭದ ಅಳುಕೆಲ್ಲಾ ಮಾಯವಾಗಿ ಪಾತ್ರ ನನ್ನನ್ನು ಆವರಿಸಿಕೊಳ್ಳತೊಡಗಿತು.

ನಿಜಕ್ಕೂ ಆ ರೂಪಾಂತರದ ಪ್ರಕ್ರಿಯೆಯೇ ಬೆರಗು ಹುಟ್ಟಿಸುವಂಥದ್ದು. ಅದೊಂದು ಎಚ್ಚರದ ಸ್ಥಿತಿಯ ಕನಸಿನಂತೆ.. ಯಾವುದೋ ಪಾತ್ರದ ವೇಷಭೂಷಣದಲ್ಲಿ ನನ್ನ ಶರೀರವನ್ನು ತೂರಿಸುತ್ತಲೇ ಆ ಪಾತ್ರದ ಆತ್ಮವನ್ನು ಆಹ್ವಾನಿಸಿಕೊಂಡಂತೆ.. ಪಾತ್ರದೊಳಗೆ ಇಳಿಯುವ ಒಂದು ಹಿತವಾದ ಮುಳುಗು ಅದು! ಹಂತದಿಂದ ಹಂತಕ್ಕೆ ನಾಟಕ ಕುತೂಹಲ ಕೆರಳಿಸುತ್ತಾ, ಪ್ರೇಕ್ಷಕರನ್ನು ತನ್ನೊಳಕ್ಕೆ ಸೆಳೆದುಕೊಳ್ಳುತ್ತಾ, ನಾಟಕದೊಳಗಿನ ತಾತ್ವಿಕ ಘರ್ಷಣೆಯನ್ನು ಪ್ರಕಟ ಗೊಳಿಸುತ್ತಾ ಅಡೆತಡೆಯಿಲ್ಲದ ನದಿಯ ಹಾಗೆ ಸುಲಲಿತವಾಗಿ ಪ್ರವಹಿಸತೊಡಗಿತು.

ಎಲ್ಲ ಕಲಾವಿದರ ಸಮರ್ಥ—ತನ್ಮಯ ಅಭಿನಯ ಪ್ರೇಕ್ಷಕರ ಮನ ಸೂರೆಗೊಂಡಿತು. ನಾಟಕ ಮುಗಿದಾಗ ಪ್ರೇಕ್ಷಕರ ಮೆಚ್ಚುಗೆಯ ಪ್ರಚಂಡ ಕರತಾಡನ ಅದೆಷ್ಟು ಸುಖ ನೀಡಿತೆಂದರೆ ಅದುವರೆಗೆ ಅನುಭವಿಸಿದ್ದ ನೋವು—ಅವಮಾನಗಳೆಲ್ಲಾ ಹಾಗೇ ಬದಿಗೆ ಸರಿದು ಹೋದವು. ಅಬ್ಬಾ!ಮೇಷ್ಟ್ರ ನಿರೀಕ್ಷೆಗಳು ಹುಸಿ ಹೋಗಲಿಲ್ಲ! ನಾವು ಗೆದ್ದಿದ್ದೇವೆ! ನಮ್ಮನ್ನು ನಾವು ಸಾಬೀತು ಪಡಿಸಿಕೊಂಡಿದ್ದೇವೆ! ಪ್ರೇಕ್ಷಕರಿಂದ, ಶಾಲೆಯ ಹಿರಿಯ-ಕಿರಿಯ ವಿದ್ಯಾರ್ಥಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದು ಎದೆಯ ಮೇಲೆ ಆ ತನಕ ಭದ್ರವಾಗಿ ನೆಲೆಯೂರಿದ್ದ ಬಂಡೆಗಲ್ಲು ಹಗುರಾಗಿ ಸರಿದು ಹೋದಂತಾಗಿ ನೆಮ್ಮದಿಯ ನಿಟ್ಟುಸಿರು ಹೊರಹೊಮ್ಮಿತು.

ಊಟದ ಶಾಸ್ತ್ರ ಮುಗಿಸಿ ಹಾಸ್ಟಲ್ ಗೆ ಬಂದು ಮಲಗಿದರೆ ಅಷ್ಟು ದಿನಗಳು ಆತಂಕ—ದುಗುಡದ ಕಾರಣಕ್ಕೆ ಬಾರದಿದ್ದ ನಿದ್ದೆ ಅಂದು ಖುಷಿಯ ಕಾರಣಕ್ಕೆ ರೆಪ್ಪೆಯ ಬಳಿಯೂ ಸುಳಿಯಲಿಲ್ಲ!

ಮರುದಿನ ಶಾಲೆಗೆ ಹೋದರೆ ಒಂದು ಬೇರೆಯದೇ ಬಗೆಯ ಸ್ವಾಗತ! ‘ಡಾಕ್ಟರ್ ಸಾಬ್’ ಎಂದು ಪ್ರೀತಿಯಿಂದ ಕರೆದು ಮೆಚ್ಚಿದವರು ಕೆಲವರು; ‘ಪ್ರಭು ಭಾಯ್.. ಕಮಾಲ್ ಕರ್ ದಿಯಾ’ ಎಂದು ಅಪ್ಪಿ ಬೆನ್ನು ತಟ್ಟಿದವರು ಕೆಲವರು… ಖುಷಿಯಿಂದ ಬೀಗುತ್ತಾ, ಮೇಷ್ಟ್ರಿಗೆ ನಮ್ಮ ಯಶೋಗಾಥೆಯನ್ನು ಹೇಳಿ ಅವರ ಮುಖದಲ್ಲಿ ಮೂಡುವ ಹೆಮ್ಮೆಯ ಮಂದಹಾಸವನ್ನು ಕಂಡು ಇನ್ನಷ್ಟು ಖುಷಿ ಪಡೋಣವೆಂದುಕೊಂಡು ಅವರ ಕೋಣೆಗೆ ಹೋದರೆ ಅವರಿಲ್ಲ! ‘ಕಾರ್ಯ ನಿಮಿತ್ತ ಹೊರಹೋಗಿರುವ ಅವರು ಅಂದು ಶಾಲೆಗೆ ಬರುವುದೇ ಅನುಮಾನ’ ಎಂದು ಮೇಷ್ಟ್ರ ಆಪ್ತ ಸಹಾಯಕಿ ಹೇಳಿದಾಗ ನಮಗಾದ ನಿರಾಸೆ ಅಷ್ಟಿಷ್ಟಲ್ಲ.

ಸಂಜೆ ನಾಟಕಕ್ಕಾದರೂ ಬರುತ್ತಾರೋ ಇಲ್ಲವೋ…ಅವರ ಒತ್ತಾಸೆಯಿಂದ, ಅವರ ಹಠ—ಉತ್ತೇಜನದಿಂದ ಆಗುತ್ತಿರುವ ನಾಟಕಕ್ಕೆ ಅವರೇ ಬಾರದೇ ಹೋದರೆ… ಆ ಯೋಚನೆಯಿಂದಲೇ ಮನಸ್ಸು ಮುದುಡಿತು. ಆದರೆ ಅಶೋಕನಿಗೆ ಮಾತ್ರ ಅವರು ಬಂದೇ ಬರುತ್ತಾರೆಂಬ ವಿಶ್ವಾಸವಿತ್ತು. “ಏ ಮಬ್ಬಾ.. ಹಂಗ್ಯಾಕ ಮಾರಿ ಚಿಕ್ಕದು ಮಾಡ್ಕಂತೀ.. ಅಷ್ಟು ಬೈದು ನಾಟಕ ಮಾಡಿಸ್ಯಾರ.. ಬರಲಾರದ ಹ್ಯಾಂಗಿದ್ದಾರು.. ನಾ ಬರಕೊಡ್ತೀನಿ ತಿಳ್ಕಾ—ಗಡ್ಡಧಾರಿ ನಾಟಕಕ್ಕ ಬಂದಾ ಬರ್ತಾರ” ಎಂದು ತನ್ನ ಗಡ್ಡ ತುರಿಸಿಕೊಳ್ಳುತ್ತಾ ನನಗೆ ಸಮಾಧಾನ ಹೇಳಿದ ಅಶೋಕ.

ಸಂಜೆ ನಾಲ್ಕು ಗಂಟೆಯಾಗುತ್ತಿದ್ದಂತೆ ಅಶೋಕನೊಟ್ಟಿಗೆ ಥಿಯೇಟರ್ ನತ್ತ ಹೆಜ್ಜೆ ಹಾಕಿದೆ. ಮೊದಲ ಪ್ರದರ್ಶನ ಚೆನ್ನಾಗಿ ಆಯಿತು ಎಂದಮಾತ್ರಕ್ಕೆ ಮುಂದಿನ ಪ್ರದರ್ಶನಗಳನ್ನು ಹಗುರಾಗಿ ತೆಗೆದುಕೊಳ್ಳುವಂತಿಲ್ಲ! “ನಾಟಕದ ಪ್ರತಿ ಪ್ರಯೋಗವೂ ಮೊದಲ ಪ್ರಯೋಗವೇ ಎಂಬಂತೆಯೇ ಭಾವಿಸಿ ತೊಡಗಿಕೊಳ್ಳಬೇಕು”—ಇದು ಕಾರಂತ ಮೇಷ್ಟ್ರು ಆಗಾಗ್ಗೆ ನಮಗೆ ಹೇಳುತ್ತಿದ್ದ ಕಿವಿಮಾತು. ಪ್ರದರ್ಶನದಿಂದ ಪ್ರದರ್ಶನಕ್ಕೆ ಆತ್ಮವಿಶ್ವಾಸ ಹೆಚ್ಚುವುದು ದಿಟವಾದರೂ ಅದು ಎಚ್ಚರ ತಪ್ಪಿಸಬಾರದು..ಉಡಾಫೆಗೆ ಅವಕಾಶ ಮಾಡಿಕೊಡಬಾರದು! ಹಾಗಾಗಿ ಥಿಯೇಟರ್ ಗೆ ಹೋದವರೇ ಎಲ್ಲರೂ ಒಟ್ಟಿಗೆ ಕುಳಿತು ಒಮ್ಮೆ ಪಟಪಟನೆ ಸಂಭಾಷಣೆಗಳನ್ನು ಹೇಳಿಕೊಂಡು ನಂತರ ಪ್ರದರ್ಶನದ ಸಿದ್ಧತೆಗೆ ತೊಡಗಿದೆವು.

ಆ ಪ್ರದರ್ಶನ ನನ್ನ ಪಾಲಿಗೆ ಒಂದು ಅಪೂರ್ವ ಅನುಭವವನ್ನು ತಂದುಕೊಟ್ಟಂತಹ ಪ್ರದರ್ಶನ.ಒಬ್ಬ ಕಲಾವಿದ ಸದಾ ಹಂಬಲಿಸುವ ಒಂದು ಮಾಂತ್ರಿಕ ಸ್ಥಿತಿಯ ಅರಿವನ್ನು ನನಗೆ ಮೂಡಿಸಿದಂತಹ ಪ್ರದರ್ಶನ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: