ಶ್ರೀನಿವಾಸ ಪ್ರಭು ಅಂಕಣ: ಪವಾಡವೆನ್ನುವಂತೆ ಪಾರಾಗಿದ್ದು ನನ್ನ ಅದೃಷ್ಟವೇ ಸರಿ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 127


ಮುಂದಿನ ಕೆಲದಿನಗಳು ನಿಜಕ್ಕೂ ಒಂದು ರೀತಿಯಲ್ಲಿ ಪರೀಕ್ಷೆಯ ದಿನಗಳೆನ್ನಬೇಕು. ಹೆಚ್ಚುಕಡಿಮೆ ವಾರದಲ್ಲಿ ನಾಲ್ಕು ದಿನವಾದರೂ ‘ಮುಕ್ತ’ ಧಾರಾವಾಹಿಯ ಶೂಟಿಂಗ್ ಇರುತ್ತಿತ್ತು. ಎಷ್ಟೋ ದಿವಸ ಮಗಳನ್ನೂ ಜತೆಯಲ್ಲೇ ಕರೆದುಕೊಂಡು ಹೊರಟುಬಿಡುತ್ತಿದ್ದೆ. ಮುಕ್ತ ಧಾರಾವಾಹಿಯಲ್ಲಿ ನನ್ನ ರಂಗಭೂಮಿ ಪಯಣದ ಆರಂಭದ ದಿನಗಳಲ್ಲಿ ನನಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿದ ಅಬ್ಬೂರು ಜಯತೀರ್ಥ ಅವರ ಮಗಳಾದ ಸುಧಾ ನನ್ನ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಳು. ವಿನೋದ—ವಿಷಾದಗಳು ಸದಾ ತಳುಕು ಹಾಕಿಕೊಂಡಂತೆಯೇ ಇರುತ್ತಿದ್ದ ದೃಶ್ಯಗಳಲ್ಲಿ ಅಭಿನಯಿಸುವುದು ದೊಡ್ಡ ಸವಾಲಾಗಿತ್ತು. ಮಗಳು ರಾಧಿಕೆಗೆ ಆಗಿನಿಂದಲೇ ಚಿತ್ರಕಲೆಯಲ್ಲಿ ವಿಪರೀತ ಆಸಕ್ತಿ. ಹಾಗಾಗಿ ಅವಳು ಬಿಡುವಾದಾಗಲೆಲ್ಲಾ ಚಿತ್ರ ಬರೆಯಲು—ಬಣ್ಣ ಹಚ್ಚಲು ಬೇಕಾದ ವ್ಯವಸ್ಥೆಗಳನ್ನೆಲ್ಲಾ ಮಾಡಿಕೊಂಡೇ ಶೂಟಿಂಗ್ ಗೆ ಬಂದುಬಿಡುತ್ತಿದ್ದಳು.

ಸೀತಾರಾಂ ಅದೆಷ್ಟು ಅದ್ಭುತವಾದ ಹೃದಯಸ್ಪರ್ಶಿ ದೃಶ್ಯಗಳನ್ನು ಪರಿಭಾವಿಸುತ್ತಿದ್ದರೆಂದರೆ ಪ್ರತಿನಿತ್ಯ ಒಂದಷ್ಟು ಕಣ್ಣೀರು ಸುರಿಸದೇ ನಾನು ಹೊರಡುವಂತೆಯೇ ಇರಲಿಲ್ಲ! ಬಹುಶಃ ಆ ಸಮಯದಲ್ಲಿ ‘ಮುಕ್ತ’ ಸೆಟ್ ನಲ್ಲಿ ನಾನು ಅತ್ತಷ್ಟು ಮತ್ತೆ ಯಾವಾಗಲೂ ಅತ್ತಿಲ್ಲವೇನೋ! ಮಗಳು ಡಾಕ್ಟರ್ ಆಗಬೇಕೆಂದು ಹಂಬಲಿಸುತ್ತಿದ್ದಾಳೆ; ಒಳ್ಳೆಯ ಅಂಕಗಳನ್ನೂ ಗಳಿಸಿದ್ದಾಳೆ.. ಆದರೂ ಸುಲಭಕ್ಕೆ ಸೀಟ್ ಸಿಗುತ್ತಿಲ್ಲ. ಹೇಗಾದರೂ ಮಗಳ ಕನಸನ್ನು ನನಸು ಮಾಡಬೇಕೆಂಬ ಪ್ರಯತ್ನದಲ್ಲಿ ಶೇಷಪ್ಪ ತನಗಿರುವ ಯಾವೊಂದು ವಶೀಲಿ—ಶಿಫಾರಸ್ಸಿನ ಅವಕಾಶವನ್ನೂ ಕಳೆದುಕೊಳ್ಳದೇ ಮಗಳ ಸೀಟ್ ಗಾಗಿ ದೇಹಮನಸ್ಸುಗಳನ್ನು ಹಿಡಿಮಾಡಿಕೊಂಡು ಗೋಗರೆಯುತ್ತಾ ಹೋಗುವ ದೃಶ್ಯಗಳಂತೂ ನನ್ನ ವೃತ್ತಿ ಜೀವನದಲ್ಲೇ ನನಗೆದುರಾದ ಅದ್ಭುತ ದೃಶ್ಯಗಳು.

ಮನೆಯಲ್ಲಿ ಹೆಂಡತಿ—ಮಗಳೊಂದಿಗೆ ನಗುನಗುತ್ತಾ ಮಾತಾಡುತ್ತಾ ‘ನನ್ನ ಮಗಳಿಗಲ್ಲದೆ ಇನ್ನಾರಿಗೆ ಸೀಟ್ ಕೊಡುತ್ತಾರೆ’ ಎಂದು ಧೈರ್ಯ ತುಂಬುತ್ತಾ, ಅತ್ತ ಅಧಿಕಾರಿಗಳ—ಮಂತ್ರಿಗಳೆದುರು ಕುಬ್ಜನಾಗಿ ಬೇಡುತ್ತಾ ಮಿಡುಕುವ ಶೇಷಪ್ಪನ ದೃಶ್ಯಗಳು ಹಾಸ್ಯದ ಲೇಪದ ಗಾಢ ವಿಷಾದದ ದೃಶ್ಯಗಳಿಗೆ ಶ್ರೇಷ್ಠ ಉದಾಹರಣೆ.

ಹೃದಯ ಕಲಕುವಂತಿದ್ದ ಭಾವನಾತ್ಮಕ ದೃಶ್ಯಗಳಲ್ಲಿ ಸುಧಾ ಕೂಡಾ ತುಂಬಾ ತನ್ಮಯತೆಯಿಂದ ಅಭಿನಯಿಸುತ್ತಿದ್ದಳು. ಮಗಳು ರಾಧಿಕೆಯಂತೂ ಮುಗ್ಧತೆಯೇ ಮೈವೆತ್ತು ಬಂದಂತೆ ಕಾಣುತ್ತಿದ್ದು ಆ ವಯಸ್ಸಿನ ಹೆಣ್ಣುಮಕ್ಕಳ ಕನಸು ಆಶೋತ್ತರಗಳನ್ನೂ ಆತಂಕ ತಲ್ಲಣಗಳನ್ನೂ ಸಮರ್ಥವಾಗಿ ಹೊರಸೂಸುವಲ್ಲಿ ಯಶಸ್ವಿಯಾಗಿದ್ದಳು. ನನಗಂತೂ ಪ್ರತಿನಿತ್ಯ ಶೂಟಿಂಗ್ ನಲ್ಲಿ ಅಳುವುದರ ಜತೆಗೆ ಮನೆಗೆ ಹೋದಮೇಲೆ ದೃಶ್ಯಗಳನ್ನು ಮೆಲುಕು ಹಾಕಿಕೊಳ್ಳುತ್ತಾ ಇನ್ನಷ್ಟು ಅಳುವ ದಿನಚರಿ!

ಕೆಲವಾರು ದಿನಗಳ ಶೂಟಿಂಗ್ ನಂತರ ನಾನು ಅಂಜುತ್ತಿದ್ದ ದೃಶ್ಯದ ಶೂಟಿಂಗ್ ದಿನ ಬಂದೇಬಿಟ್ಟಿತು. ಮಗಳಿಗೆ ಸೀಟ್ ಕೊಡಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಂಡು ಶೇಷಪ್ಪ ಖುಷಿಖುಷಿಯಾಗಿ ಮನೆಗೆ ಬರುತ್ತಾನೆ; ಆದರೆ ಆ ವೇಳೆಗೆ ಮಗಳು ‘ಅಪ್ಪ ನನ್ನಿಂದಾಗಿ ತುಂಬಾ ಕಷ್ಟಪಡುತ್ತಿದ್ದಾರೆ.. ಅವರ ಹಾಗೂ ಮನೆಯ ನೆಮ್ಮದಿ ಕದಡಲು ನಾನು ಕಾರಣವಾಗಬಾರದು” ಎಂದು ತಾನೇ ಏನೇನೋ ಭಾವಿಸಿಕೊಂಡು ನೇಣಿಗೆ ಶರಣಾಗಿಬಿಟ್ಟಿರುತ್ತಾಳೆ. ಶೇಷಪ್ಪ ಮನೆಗೆ ಬರುವ ವೇಳೆಗಾಗಲೇ ಮಗಳ ಪ್ರಾಣಪಕ್ಷಿ ಹಾರಿಹೋಗಿದೆ; ಮನೆಯ ಹಜಾರದಲ್ಲಿ ಅವಳನ್ನು ಮಲಗಿಸಿದ್ದಾರೆ; ಸಾಕಷ್ಟು ಜನ ನೆರೆಹೊರೆಯವರು—ಬಂಧುಗಳು ಅದಾಗಲೇ ಬಂದು ಸೇರಿದ್ದಾರೆ… ಪತ್ನಿಯಂತೂ ಹತೋಟಿಗೆ ತರಲಾಗದಷ್ಟು ದುಃಖದಿಂದ ರೋದಿಸುತ್ತಿದ್ದಾಳೆ… ನಿದ್ದೆ ಮಾಡುತ್ತಿರುವಳೋ ಎಂಬಂತೆ ನಿಶ್ಚಲವಾಗಿ ಮಲಗಿದ್ದ ಮಗಳನ್ನು ಕಂಡು ಶೇಷಪ್ಪ ದಿಗ್ಭ್ರಾಂತನಾಗುತ್ತಾನೆ; ಮಗಳ ಸಾವಿನ ನೋವು—ಸಂಕಟ ಒಂದು ಕಡೆ; ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಂಡೇ ಬಂದರೂ ಮಗಳು ಹೀಗೆ ದುಡುಕಿನ ನಿರ್ಧಾರಕ್ಕೆ ಶರಣಾಗಿಬಿಟ್ಟಳಲ್ಲಾ ಎಂಬ ಆಘಾತ ಮತ್ತೊಂದೆಡೆ. ಏನೂ ಮಾತಾಡದೆ ಮೌನವಾಗಿ ದುಃಖಿಸುತ್ತಾ ಮನೆಯ ಹೊರಗಿದ್ದ ಮರಕ್ಕೆ ಒರಗಿಕೊಂಡು ಶೋಕತಪ್ತನಾಗಿ ನಿಂತುಬಿಡುತ್ತಾನೆ.

ಈ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ನಾನು ಅನುಭವಿಸಿದ ಸಂಕಟ ಶಬ್ದಗಳನ್ನು ಮೀರಿದ್ದು. ನಾನಷ್ಟೇ ಅಲ್ಲ, ಅಂದು ಶೂಟಿಂಗ್ ಸಮಯದಲ್ಲಿ ಅಲ್ಲಿದ್ದವರ ಕಣ್ಣುಗಳೆಲ್ಲಾ ತೇವವಾಗಿದ್ದವು.

ಗೆಳೆಯ ಸೀತಾರಾಂ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರು. ಒಬ್ಬ ಹೆಣ್ಣುಮಗಳ ಆತ್ಮಹತ್ಯೆಯ ಪ್ರಸಂಗವನ್ನು ಭಾವನಾತ್ಮಕ ಬಂಡವಾಳವಾಗಿಸಿಕೊಳ್ಳದೆ ಸೂಚ್ಯವಾಗಿ, ಅಬ್ಬರ ಅತಿರೇಕಗಳು ಒಂದಿಷ್ಟೂ ಇಣುಕದಂತೆ ಎಚ್ಚರವಹಿಸಿ ಸಂಯಮದಿಂದ ನಿರೂಪಿಸಿದ್ದು ನಿಜಕ್ಕೂ ಪ್ರಶಂಸಾರ್ಹ.

ಈ ದೃಶ್ಯಗಳ ಶೂಟಿಂಗ್ ಮುಗಿದ ನಂತರ ಸಹಾಯಕ ನಿರ್ದೇಶಕರೂ ಸಹ ಬರಹಗಾರರೂ ಆಗಿದ್ದ ರಘು ಸಮರ್ಥ ಹಾಗೂ ಇತರರು ದುಃಖ ತಡೆಯಲಾರದೇ ರೋದಿಸುತ್ತಿದ್ದ ನನ್ನನ್ನು ಸಂತೈಸುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಈಗಲೂ ಸಹಾ ಅನೇಕ ಸಹೃದಯರು ನನ್ನ ಟೋಪಿ ಶೇಷಪ್ಪನ ಪಾತ್ರವನ್ನು ಪ್ರೀತಿಯಿಂದ ನೆನೆಸಿಕೊಂಡು ಮೆಚ್ಚಿ ಮಾತಾಡುತ್ತಾರೆ.

ಇದೇ ಸಂದರ್ಭದಲ್ಲಿ ನಾನು ಅಭಿನಯಿಸುತ್ತಿದ್ದ ಮತ್ತೊಂದು ಮುಖ್ಯ ಧಾರಾವಾಹಿ ಎಂದರೆ ‘ಕುಟುಂಬ’. ಎ.ಜಿ.ಶೇಷಾದ್ರಿ ಬಹಳ ಸೊಗಸಾದ ಕಥೆ—ಚಿತ್ರಕಥೆಯನ್ನು ರೂಪಿಸಿದ್ದರು. ಪ್ರಸಿದ್ಧ ನಿರ್ದೇಶಕ ವಿನು ಬಳಂಜ ಅವರ ಆರಂಭದ ದಿನಗಳ ನಿರ್ದೇಶನದ ಧಾರಾವಾಹಿ ಇದು. ನನ್ನದು ಒಬ್ಬ ಜ್ಯೋತಿಷ್ಯಶಾಸ್ತ್ರ ಪಾರಂಗತ ಶಾಸ್ತ್ರಿಯ ಪಾತ್ರ. ನನ್ನ ಪತ್ನಿಯ ಪಾತ್ರವನ್ನು ನಿರ್ವಹಿಸಿದವರು ಗಿರಿಜಾ ಲೋಕೇಶ್. ಉಳಿದಂತೆ ರಾಜೇಶ್ ನಟರಂಗ, ಮಂಜುನಾಥ ಹೆಗ್ಗಡೆ, ಶ್ರೀನಾಥ್ ವಸಿಷ್ಠ, ವೆಂಕಟಾದ್ರಿ, ರಂಗಶಾಯಿ, ಮಾಲತಿ ಹರಿದಾಸ್ ಮುಂತಾದವರು ಇತರ ಮುಖ್ಯ ಪಾತ್ರಗಳಲ್ಲಿದ್ದರು.

‘ಕುಟುಂಬ’ ಧಾರಾವಾಹಿ ಉದಯ ಟಿ ವಿ ಯಲ್ಲಿ ಪ್ರಸಾರ ಆರಂಭವಾದ ಸ್ವಲ್ಪ ಸಮಯದಲ್ಲೇ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡರೂ ಹಲವಾರು ಒಳ ರಾಜಕೀಯಗಳಿಂದಾಗಿ ಹೆಚ್ಚು ಸಮಯ ಮುಂದುವರಿಯದೆ ಬೇಗನೇ ನೇಪಥ್ಯಕ್ಕೆ ಸರಿದುಬಿಟ್ಟಿತು. ಆದರೂ ಈ ಧಾರಾವಾಹಿ ಅದೆಂಥಾ ಪರಿಣಾಮವನ್ನು ಸಹೃದಯರ ಮೇಲೆ ಬೀರಿತ್ತೆಂದರೆ ಶ್ರೇಷ್ಠ ಕೊಳಲು ವಿದ್ವಾಂಸರಾದ ರಾಜೇಶ್ ಅವರಿಂದ ಮೊದಲುಗೊಂಡು ಅನೇಕ ಸಹೃದಯರು ಈಗಲೂ ‘ಕುಟುಂಬ’ವನ್ನು ನೆನಪಿಸಿಕೊಳ್ಳುತ್ತಾರೆ! ಮತ್ತೂ ಒಂದು ನಮ್ರವಾಗಿ ನೆನಪಿಸಿಕೊಳ್ಳಬಹುದಾದ ಸಂಗತಿಯೆಂದರೆ ಇದೇ ಧಾರಾವಾಹಿಯ ನನ್ನ ಅಭಿನಯಕ್ಕೆ ಆ ವರ್ಷದ ‘ಆರ್ಯಭಟ ಶ್ರೇಷ್ಠ ನಟ ‘ ಪ್ರಶಸ್ತಿ ಸಂದಿತ್ತು.

ವಿಶೇಷವೆಂದರೆ ಆ ವರ್ಷ ‘ಕುಟುಂಬ’ದ ಜತೆಗೆ ‘ಮುಕ್ತ’ ಧಾರಾವಾಹಿಯ ನನ್ನ ಅಭಿನಯವೂ ಪ್ರಶಸ್ತಿಗೆ ಅರ್ಹವೆಂದು ಪರಿಗಣಿತವಾಗಿತ್ತಂತೆ. ಆದರೆ ಅದು ಪೋಷಕ ಪಾತ್ರ ವಿಭಾಗದಲ್ಲಿದ್ದುದರಿಂದ ಸಂಸ್ಥೆಯ ಪದಾಧಿಕಾರಿಗಳು ಶ್ರೇಷ್ಠ ನಟ ವಿಭಾಗಕ್ಕೆ ಬಂದಿದ್ದ ‘ಕುಟುಂಬ’ ಧಾರಾವಾಹಿಯ ಪಾತ್ರವನ್ನೇ ಆಯ್ಕೆ ಮಾಡಿಕೊಂಡರಂತೆ. ಬಹುಶಃ ಸಹೃದಯರ ಮೆಚ್ಚುಗೆಯ ಪ್ರಶಸ್ತಿಯನ್ನು ಹೊರತುಪಡಿಸಿ ನಾನು ಅಭಿನಯಕ್ಕಾಗಿ ಸ್ವೀಕರಿಸಿದ ಪ್ರಥಮ ಮುಖ್ಯ ಪ್ರಶಸ್ತಿ ಆರ್ಯಭಟ ಪ್ರಶಸ್ತಿ.

ಈ ಎಲ್ಲ ಗದ್ದಲಗಳ ನಡುವೆ ನನ್ನ ಅನಾರೋಗ್ಯ—ತೂಕ ಇಳಿಕೆಯ ಸಮಸ್ಯೆ ಕಾಡುತ್ತಲೇ ಇತ್ತು! ಒಂದು ದಿನ ಬನಶಂಕರಿಯ ಬಳಿ ಇದ್ದ ಮನೆಯೊಂದರಲ್ಲಿ ನಡೆಯುತ್ತಿದ್ದ ‘ಗೀತಾಂಜಲಿ’ ಧಾರಾವಾಹಿಯ ಶೂಟಿಂಗ್ ಗಾಗಿ ಹೋಗಿದ್ದೆ. ಅಕಸ್ಮಾತ್ತಾಗಿ ನನ್ನ ಭಾವನವರ ಸೋದರ ಡಾ॥ಬಿ.ಆರ್. ರಾಮಕೃಷ್ಣ ನನಗೆ ಎದುರು ಸಿಕ್ಕಿದಾಗ ನನಗೆ ಪರಮಾನಂದ! ಏಕೆಂದರೆ ನಮ್ಮ ಮನೆಯಲ್ಲಿ ಯಾರದೇ ಆರೋಗ್ಯದಲ್ಲಿ ಏನೇ ಏರುಪೇರಾದರೂ ಏನೇ ಸಮಸ್ಯೆಯಾದರೂ ಈ ಧನ್ವಂತರಿಯೇ ತಪಾಸಣೆ ನಡೆಸಿ ಪರಿಹಾರ ಸೂಚಿಸಬೇಕು! ಅಷ್ಟೇಕೆ, ಮಗಳು ರಾಧಿಕಾ ಪುಟ್ಟ ಕೂಸಾಗಿದ್ದಾಗ ನ್ಯುಮೋನಿಯಾಗೆ ತುತ್ತಾಗಿದ್ದವಳನ್ನು ಉಳಿಸಿಕೊಟ್ಟವನು ಇದೇ ಧನ್ವಂತರಿ ಅಲ್ಲವೇ! ಈ ಪ್ರಸಂಗವನ್ನು ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಈಗ ವಾಸ್ತವವಾಗಿ ಯಾವುದೋ ವಿಶೇಷ ಪ್ರಾಜೆಕ್ಟ್ ಗಾಗಿ ಅವನು ಜರ್ಮನಿಗೆ ಹೋಗಿದ್ದರಿಂದ ನನಗೆ ಅವನ ಚಿಕಿತ್ಸೆಯ ಯೋಗ ದೊರೆತಿರಲಿಲ್ಲ! ನೋಡಿದರೆ ಜರ್ಮನಿಯಿಂದ ಉದಯಪ್ಪ ಮರಳಿ ಬಂದಾಗಿದೆ ಅಷ್ಟೇ ಅಲ್ಲ ಸಾಕ್ಷಾತ್ ಎದುರಿಗೇ ನಿಂತಿದ್ದಾನೆ! ನನಗೆ ಹೇಗಾಗಿರಬಹುದು , ಅದೆಷ್ಟು ಸಂತಸವಾಗಿರಬಹುದು ನೀವೇ ಊಹಿಸಿಕೊಳ್ಳಿ! ನಾನು ಬಾಯಿ ತೆರೆಯುವ ಮುನ್ನವೇ ಅವನೇ, “ಏನಯ್ಯಾ ಪ್ರಭುರಾಜ.. ಏನು ಹೀಗೆ ತೆಗೆದುಹೋಗಿದೀಯಾ! ಏನಾಯ್ತು?” ಎಂದು ಉದ್ಗರಿಸಿದ. ಅವನನ್ನು ನೋಡುತ್ತಿದ್ದಂತೆ ಅರ್ಧ ಗುಣಮುಖನಾದಂತೆಯೇ ಸಂಭ್ರಮಿಸುತ್ತಿದ್ದ ನಾನು ಆವರೆಗೆ ನಡೆದದ್ದೆಲ್ಲವನ್ನೂ ವಿವರವಾಗಿ ವರದಿ ಒಪ್ಪಿಸಿದೆ. ಎಲ್ಲವನ್ನೂ ಸಮಾಧಾನದಿಂದ ಕೇಳಿದ ನಮ್ಮ ಧನ್ವಂತರಿ ರಾಮಕೃಷ್ಣ ಕೇಳಿದ ಮೊದಲ ಪ್ರಶ್ನೆ: “ಥೈರಾಯಿಡ್ ಟೆಸ್ಟ್ ಮಾಡಿಸಿದೆಯಾ?”. “ಓಹೋ! ಎರಡು ವರ್ಷದ ಹಿಂದೆಯೇ ಮಾಡಿಸಿದ್ದೇನೆ. ನನಗೆ ಆ ಸಮಸ್ಯೆ ಇಲ್ಲ” ಎಂದೆ ನಾನು. “ಆಗ ನಿನಗೆ ಆ ಸಮಸ್ಯೆ ಇರಲಿಲ್ಲ..ಈಗ ಬಂದಿರಬಾರದೆಂದೇನೂ ಇಲ್ಲವಲ್ಲ! ಮೊದಲು ಥೈರಾಯಿಡ್ ಟೆಸ್ಟ್ ಮಾಡಿಸು. ಹೈಪೋ ಥೈರಾಯಿಡ್ ಆದರೆ ತುಂಬಾ ತೂಕ ಜಾಸ್ತಿ ಆಗುತ್ತದೆ ಹೀಗೆ ತೂಕ ಕಡಿಮೆ ಆಗುವುದು..ಅತಿ ಚಟುವಟಿಕೆ..ಇದೆಲ್ಲಾ ಹೈಪರ್ ಥೈರಾಯಿಡ್ ಲಕ್ಷಣ” ಎಂದು ಆ ಖಾಯಿಲೆಯ (ಅವ)ಗುಣ—ಲಕ್ಷಣಗಳನ್ನೆಲ್ಲಾ ವಿವರವಾಗಿ ಹೇಳಿ “ಈಗಲೇ ಹೋಗಿ ಪರೀಕ್ಷೆ ಮಾಡಿಸಿ ರಿಸಲ್ಟ್ ಬಂದ ತಕ್ಷಣ ನನಗೆ ಫೋನ್ ಮಾಡು” ಎಂದು ಹೇಳಿ ಕಳಿಸಿಕೊಟ್ಟ. ಆ ತಕ್ಷಣವೇ ಸಮಿಪದಲ್ಲಿದ್ದ ಯಾವುದೋ ಡಯಾಗ್ನಾಸ್ಟಿಕ್ಸ್ ಸೆಂಟರ್ ನಲ್ಲಿ ರಕ್ತ ಪರೀಕ್ಷೆಗೆ ಕೊಟ್ಟು ಶೂಟಿಂಗ್ ಗೆ ಹೋದೆ.

ಮರುದಿನ ಟೆಸ್ಟ್ ನ ಫಲಿತಾಂಶ ತೆಗೆದುಕೊಂಡು ಉದಯಪ್ಪ ಅಲಿಯಾಸ್ ಡಾ॥ರಾಮಕೃಷ್ಣನಿಗೆ ತೋರಿಸಿದರೆ ಒಂದು ಕ್ಷಣ ಅವನು ತಲ್ಲಣಿಸಿಯೇ ಹೋದ! “ಇದೇನಯ್ಯಾ ಇದು ನಿನ್ನ ಅವಾಂತರ! ಇರಬೇಕಾದ್ದಕ್ಕಿಂತ T3, T4, TSH ಎಲ್ಲಾನೂ ನಾಲ್ಕು ಪಟ್ಟು ವ್ಯತ್ಯಾಸವಾಗಿದೆಯಲ್ಲಯ್ಯಾ! ನಿನಗೆ ಯಾರೂ ಥೈರಾಯಿಡ್ ಟೆಸ್ಟ್ ಮಾಡಿಸೋಕೆ ಹೇಳಲೇ ಇಲ್ಲವೇ?!” ಎಂದ ಉದಯಪ್ಪ. “ಹೇಳಿದರು ಉದಯಪ್ಪ.. ಮಾಡ್ಸಿದೀನಿ, ಏನೂ ತೊಂದರೆ ಇಲ್ಲಾಂತ ನಾನೇ ಹೇಳಿಬಿಟ್ಟೆ” ಎಂದು ತೊದಲಿದೆ ನಾನು. ವಾಸ್ತವವಾಗಿ ಆ ಸಮಯದಲ್ಲಿ ಥೈರಾಯಿಡ್ ಬಗ್ಗೆ ಹೆಚ್ಚಿನ ಮಾಹಿತಿ—ತಿಳುವಳಿಕೆಗಳೂ ಇರಲಿಲ್ಲ ಎಂದು ತೋರುತ್ತದೆ. ಇದರ ಜತೆಗೆ ನನ್ನದೇ ಮೂರ್ಖ ನಿರ್ಧಾರಗಳು—ಅಜ್ಞಾನ! “ಏನೇ ಆಗಲಿ, ತುಂಬಾ ಬೆಳೆಯೋಕೆ ಬಿಟ್ಟುಬಿಟ್ಟಿದೀಯಾ. ನಾಳೇನೇ ಡಬಲ್ ರೋಡ್ ಹತ್ರ ಇರೋ ಇನ್ಸ್ ಟಿಟ್ಯೂಟ್ ಆಫ್ ಆಂಕಾಲಜಿಗೆ ಹೋಗಿ ಡಾ॥ ಕಲ್ಲೂರ್ ಅವರನ್ನ ಭೇಟಿಯಾಗು.. ನಾನು ಅವರಿಗೆ ಫೋನ್ ಮಾಡಿ ನಿನ್ನ ವಿಷಯ ಹೇಳಿರ್ತೇನೆ. ಏನು ಮಾಡಬೇಕು ಅಂತ ಅವರು ಸರಿಯಾಗಿ ಗೈಡ್ ಮಾಡ್ತಾರೆ” ಎಂದು ಹೇಳಿ ಒಂದಿಷ್ಟು ಧೈರ್ಯ ತುಂಬಿ ಕಳಿಸಿದ ಉದಯಪ್ಪ.

ಉದಯಪ್ಪನ ಮಾತು ಕೇಳಿ ನನಗೆ ಜಂಘಾಬಲವೇ ಉಡುಗಿಹೋದಂತಾಯಿತು. ವಿಧಿಯಿಲ್ಲದೆ ಮತ್ತೆ ಮರುದಿನ ಶೂಟಿಂಗ್ ನಿಂದ ವಿನಾಯಿತಿ ಪಡೆದುಕೊಂಡು ಡಾ॥ ಕಲ್ಲೂರ್ ಅವರನ್ನು ಭೇಟಿಯಾದೆ. ಅದ್ಭುತ ಹಾಸ್ಯಪ್ರಜ್ಞೆಯ ಸರಸಿ ವೈದ್ಯರು ಡಾ॥ಕಲ್ಲೂರ್. ನಾನು ಕೊಟ್ಟ ರಿಪೋರ್ಟ್ ಗಳನ್ನೆಲ್ಲಾ ಪರಿಶೀಲಿಸಿ ನನ್ನತ್ತ ತಿರುಗಿ—”ಏನು ನಟಸಾರ್ವಭೌಮರು ಭಾಳ ಲಗೂನ ಬಂದೀರಲ್ಲಾ ತಪಾಸಣಿ ಮಾಡಿಸಾಕ! ಅಡ್ಡಿಯಿಲ್ಲ!” ಎಂದಾಗ ನಾನು ಪೆಚ್ಚುಪೆಚ್ಚಾಗಿ ನಕ್ಕೆ.

ಮತ್ತೆ ಅವರೇ ಮುಂದುವರಿಸಿದರು: “ಈಗ ನೋಡ್ರೀ ಇದು ಭಾಳ ಡೆಲಿಕೇಟ್ ಪರಿಸ್ಥಿತಿ ಐತಿ… ಈಗ ನಿಮ್ಮ ಮುಂದಿರಾದು ಮೂರು ದಾರಿ. ನಾ ಎಲ್ಲಾನೂ ಒದರ್ತೀನಿ, ಆಯ್ಕೆ ನಿಮ್ಮದು. ಮೊದಲನೇದು ನೋಡ್ರೀ.. ನಿಮ್ಮ ಈ ಬ್ಯಾನೀಗ ಔಷಧ—ಗುಳಿಗಿ ತಗಳಾದು. ಆದ್ರ ಗುಣ ಆಗೋ ಖಾತ್ರಿ ಇಲ್ಲ.. ಒಂದೆರಡು ತಿಂಗಳದಾಗ ನೀವು ಶಿವಾ ಅನ್ನಭೌದು..” ಒಂದು ಕ್ಷಣ ನನಗೆ ಆಗಲೇ ಉಸಿರು ಸಿಕ್ಕಿಹಾಕಿಕೊಂಡಂತಾಯಿತು! “ಇನ್ನು ಎರಡನೇ ದಾರಿ ಅಂದ್ರ ಆಪರೇಷನ್ ಮಾಡಿ ಥೈರಾಯಿಡ್ ಗ್ಲಾಂಡ್ಸ್ ತೆಗೆದು ಮುಂದ ಸಪೋರ್ಟ್ ಗ ಜೀವನಪೂರ್ತಿ ಗುಳಿಗಿ ತಗಳಾದು…ಆದ್ರ ಇದರಾಗ ಒಂದು ಪ್ರಾಬ್ಲಂ ಏನಂದ್ರ ಆಪರೇಷನ್ ಆದಮ್ಯಾಲ ನಿಮ್ಮ ಧ್ವನಿ ಬದಲಿ ಆಗಿಬಿಡೋ ಅಪಾಯ ಇರ್ತತಿ.. ನಿಮ್ಮ ದನಿ ಇದ್ದ ಹಾಂಗs ಇರಲೂ ಭೌದು… ಅದೃಷ್ಟ ಛಲೋ ಇತ್ತಂದ್ರ ಅಮಿತಾಭ್ ಬಚ್ಚನ್ ಅವರ ದನಿ ಹಾಂಗೂ ಆಗಭೌದು..ಅದೃಷ್ಟ ಇನ್ನೂ ಭಾಳ ಛಲೋ ಇತ್ತಂದ್ರ ಲತಾ ಮಂಗೇಶ್ಕರ್ ದನಿ ಹಾಂಗೂ ಆಗಭೌದು!” ಅಯ್ಯೋ ದೇವರೇ! ಈ ಡಾಕ್ಟ್ರು ಸ್ವಲ್ಪ ರಂಜನೆ—ಉತ್ಪ್ರೇಕ್ಷೆ ಬೆರೆಸಿ ಹೇಳುತ್ತಿದ್ದರೂ ಹಾಗಾಗುವ ಸಾಧ್ಯತೆಗಳಂತೂ ಇವೆ! ನಿಧಾನವಾಗಿ ನಡುಗುವ ಧ್ವನಿಯಲ್ಲಿ ಕೇಳಿದೆ: “ಮೂರನೇ ಮಾರ್ಗ ಯಾವುದು ಡಾಕ್ಟ್ರೇ?”

ಅವರು ನಸುನಗುತ್ತಾ ಹೇಳಿದರು: “ಅಷ್ಟು ಅಂಜಬ್ಯಾಡ್ರೀ..ಕಾಳಜಿ ಮಾಡಬ್ಯಾಡ್ರಿ.. ಮೂರನೇ ಮಾರ್ಗ ಐತಲ್ಲಾ, ಅದು ಅಗದೀ ಬೆಸ್ಟ್ ಮಾರ್ಗ ಐತಿ. ನ್ಯೂಕ್ಲಿಯರ್ ಮೆಡಿಸಿನ್! ಅದು ತೊಗೊಂಡ್ರೆ ಒಳಗಿಂದೊಳಗs ಥೈರಾಯಿಡ್ ಗ್ಲಾಂಡ್ಸ್ ಅನ್ನ ಸುಟ್ಟುಹಾಕಿ ನಿಷ್ಕ್ರಿಯಗೊಳಿಸ್ತತಿ..ಆಮ್ಯಾಲ ಜೀವನ ಪೂರ್ತಿ ಸಪ್ಲಿಮೆಂಟರಿ ಆಗಿ ಗುಳಿಗಿ ತೊಗೋಬೇಕು…ಸುಟ್ಟುಹಾಕ್ತತಿ ಅಂದ್ರ ನಿಮಗೇನೂ ಅದು ತಿಳಿಯಾ ಹಾಂಗಿಲ್ರೀ..no pain..no burning..nothing. safest ಮಾರ್ಗ ಅಂದ್ರ ಇದs ನೋಡ್ರೀ” ಅಂದರು ಡಾ॥ಕಲ್ಲೂರ್ ಸರ್. ನಾನೂ ಸ್ವಲ್ಪ ಸಮಾಧಾನದ ನಿಟ್ಟುಸಿರಿಟ್ಟು, “ಇದೇ ಆಗಬಹುದು ಸರ್.. ನ್ಯೂಕ್ಲಿಯರ್ ಮೆಡಿಸಿನ್ ಕೊಟ್ಟುಬಿಡಿ” ಎಂದೆ. “ಆ ಮೆಡಿಸಿನ್ ನಮ್ಮಲ್ಲಿ ಸ್ಟಾಕ್ ಇರಂಗಿಲ್ರೀ..ಬಾಂಬೇಂದ ತರಿಸ್ಬೇಕು..ಎರಡು ದಿನದಾಗ ಬರ್ತತಿ..ಆಮ್ಯಾಲ ಬರ್ರಿ..administer ಮಾಡೋಣು” ಎಂದು ಕೈಕುಲುಕಿ ಕಳಿಸಿಕೊಟ್ಟರು ಡಾ॥ಕಲ್ಲೂರ್. ಅವರಿಗೆ ನಮಸ್ಕರಿಸಿ ಹೊರ ಬಂದ ಮೇಲೆ ಎಷ್ಟೋ ನಿರಾಳದ ಭಾವ! ಅನೇಕ ದಿನಗಳ ಈ ರಗಳೆಗೆ ಕೊನೆಗೂ ಒಂದು ಮುಕ್ತಾಯ ಸಿಕ್ಕುತ್ತಿದೆಯೆಂಬ ಸಮಾಧಾನ!

ಇದಾದ ಎರಡು ಮೂರು ದಿನಕ್ಕೇ ಡಾಕ್ಟರ್ ಕಲ್ಲೂರ್ ಅವರಿಂದ ಸಂದೇಶ ಬಂತು: ಬಾಂಬೆಯಿಂದ ಔಷಧಿ ಬಂದಿದೆ! ಮರುದಿನವೇ ಬರುತ್ತೇನೆಂದು ಹೇಳಿ ಸಮಯ ನಿಗದಿ ಮಾಡಿಕೊಂಡೆ. ಡಾಕ್ಟ್ರು ಆಗ ಹೇಳಿದ ಕೆಲ ಮಾತುಗಳು ಇನ್ನಷ್ಟು ಸೋಜಿಗವನ್ನೂ ತಳಮಳವನ್ನೂ ಉಂಟುಮಾಡಿದವು: ” ಔಷಧಿ ತಗೊಂಡ ಮ್ಯಾಲ ಎರಡು ದಿವಸ ನೀವು isolation ದಾಗ ಇರಬೇಕಾಕ್ಕತಿ ನೋಡ್ರೀ..ಯಾಕಂದ್ರ body ಇಂದ radiations ಇರ್ತಾವ..ಸಣ್ಣ ಮಕ್ಕಳಿದ್ರಂತೂ ಮತ್ತೂ ಎಚ್ಚರಿರಬೇಕಾಕ್ಕತಿ ನೋಡ್ರೀ”.. ನನಗಂತೂ ತಲೆಬುಡ ಅರ್ಥವಾಗದ ವೈದ್ಯವಾಗಿತ್ತಿದು!

ಮರುದಿನ ಮೂರ್ತಿ ಭಾವ ನನ್ನನ್ನು ಅವರ ಕಾರ್ ನಲ್ಲಿ ಅಲ್ಲಿಗೆ ಕರೆದುಕೊಂಡು ಹೋದರು. ಮುಂಜಾಗ್ರತಾ ಕ್ರಮವಾಗಿ ಒಂದು ಮಂದವಾದ ಬೆಡ್ ಶೀಟ್ ಅನ್ನು ನಾನು ಜತೆಯಲ್ಲಿ ಒಯ್ದಿದ್ದೆ—ಭಾವನನ್ನು ರೇಡಿಯೇಷನ್ ನಿಂದ ರಕ್ಷಿಸಲಿಕ್ಕಾಗಿ ಅಡ್ಡ ಪರದೆ ಹಿಡಿಯಲು!
ಆಸ್ಪತ್ರೆಗೆ ಹೋಗಿ ಭರಿಸಬೇಕಾಗಿದ್ದ ಹಣವನ್ನು ತುಂಬಿ ನಂತರ ಡಾ॥ಕಲ್ಲೂರ್ ಅವರನ್ನು ಭೇಟಿಯಾದೆ. “ನೋಡ್ರೀ ಶ್ರೀನಿವಾಸ್ , ಫಸ್ಟ್ ಫ್ಲೋರ್ ನಾಗ ಎರಡನೇ ಖೋಲಿಯಾಗ ನಿಮಗೆ ಔಷಧಿ ಕೊಡ್ತಾರ..ಒಂದೇ ಗುಟುಕಿಗೆ ಅದನ್ನ ಕುಡಿದು ಒಂದೇ ದೌಡಿನಾಗ ಮನೀಗ ಹೊಂಟುಬಿಡ್ರಿ! ಮತ್ತ ಇಲ್ಲಿ ನನ್ನ ಹಂತ್ಯಾಕ ಬರಬಾರದು ನೋಡ್ರಿ! ನಿಮಗೇನು ಅನುಮಾನ ಇದ್ರೂ ಈಗಲೇ ಪರಿಹಾರ ಮಾಡಿಕೋರಿ..ಥ್ಯಾಂಕ್ಸ್ ಹೇಳೋದಿದ್ರ ಅದನ್ನೂ ಈಗಳೇ ಹೇಳಿ ಮುಗಿಸಿಬಿಡ್ರಿ! ಮತ್ತೆ ಇಲ್ಲಿ ಮಾತ್ರ ಬರಬಾರದು ಔಷಧಿ ಕುಡಿದ ಮ್ಯಾಲ!” ಎಂದು ಡಾಕ್ಟರ್ ಸಾಹೇಬ್ರು ನುಡಿದಾಗ ಮತ್ತಷ್ಟು ಸೋಜಿಗ!

ಆಮೇಲೆ ಯೋಚಿಸಿದಾಗ ಅವರ ಗಾಬರಿ—ಮುಂಜಾಗ್ರತೆಗಳಿಗೆ ಕಾರಣ ಅರ್ಥವಾಯಿತು. ನನಗಾದರೆ ಇದು ಒಂದು ಬಾರಿ ತೆಗೆದುಕೊಳ್ಳುವ ರೇಡಿಯೇಷನ್ ಔಷಧಿ.. ಅವರಿಗಾದರೆ ನನ್ನಂಥ ಎಷ್ಟು ಜನ ಹೀಗೆ ಎದುರಾಗುತ್ತಿರುತ್ತಾರೋ! ತೊಂದರೆ ಆಗದೇ ಇರುತ್ತದೆಯೇ? ಡಾಕ್ಟರ್ ಸಾಹೇಬರಿಗೆ ನಮಸ್ಕರಿಸಿ ಧನ್ಯವಾದ ಹೇಳಿ ಔಷಧಿ ಹಾಕಿಸಿಕೊಳ್ಳಲು ಮೇಲುಗಡೆ ರೂಂಗೆ ಹೋದೆ. ಆ ಖೋಲಿಯಲ್ಲೊಬ್ಬ ವ್ಯಕ್ತಿ ಕವಚ ಶಿರಸ್ತ್ರಾಣಗಳನ್ನೆಲ್ಲಾ ಧರಿಸಿಕೊಂಡು ಕೈಯಲ್ಲೊಂದು ಟ್ಯೂಬ್ ಹಿಡಿದು ಕಾಯುತ್ತಿದ್ದ. ನಾನು ಹೋಗುತ್ತಿದ್ದಂತೆ ಪಟಪಟನೆ ಹೀಗಂದ: “ನೀವು ರೆಡಿ ಅಂದತಕ್ಷಣ ನಾನು ಈ ಔಷಧಿ ನಿಮ್ಮ ಗಂಟಲಿಗೆ ಹಾಕ್ತೇನೆ…ನೀರು ಕುಡಿದ ಹಾಗಿರುತ್ತೆ ಅಷ್ಟೇ..ನೋವು ಉರಿ ಏನೂ ಆಗಲ್ಲ. ನಿಮ್ಮ ಫೈಲ್ ಎಲ್ಲಾ ಕೈಲಿ ಸಿದ್ಧವಾಗಿಟ್ಟುಕೊಂಡಿರಿ. ಔಷಧಿ ಕುಡಿದ ತಕ್ಷಣ ಒಂದು ಕ್ಷಣಾನೂ ನಿಲ್ಲದೆ ಇಲ್ಲಿಂದ ಹೊರಟುಹೋಗಬೇಕು..ಅರ್ಥ ಆಯ್ತಲ್ಲಾ! ರೆಡೀನಾ?”

ನಾನು ಕುರಿಯ ಹಾಗೆ ತಲೆ ಆಡಿಸಿದೆ. ಆತ ಟ್ಯೂಬ್ ನ ಒಂದು ತುದಿಯನ್ನು ಒಡೆದು ‘ಆ ಅನ್ನಿ’ ಎಂದು ಬಾಯಿ ತೆಗೆಸಿ ಔಷಧಿಯನ್ನು ಗಂಟಲಿಗೆ ಸುರಿದು,”done! you should leave now!” ಎಂದು ಆಜ್ಞಾಪಿಸಿದ. ನಾನೂ ಪರಮ ಆಜ್ಞಾಧಾರಕನಂತೆ ಅಲ್ಲಿಂದ ಓಡುತ್ತಾ ಕೆಳಬಂದೆ. ಭಾವ ಅಲ್ಲಿಯೇ ಕಾಣುವಂತೆಯೇ ಕಾರ್ ನಿಲ್ಲಿಸಿಕೊಂಡು ಕಾಯುತ್ತಿದ್ದರು. ನಾನು ಕಾರ್ ನ ಒಳಗೆ ಹಿಂದಿನ ಸೀಟ್ ನಲ್ಲಿ ಕುಳಿತು ಬೆಡಶೀಟ್ ಅನ್ನು ನಮ್ಮಿಬ್ಬರ ನಡುವೆ ತೆರೆಯಾಗಿ ಹಿಡಿದು ‘ಹೊರಡಿ ಭಾವ’ ಎಂದೆ. ಮನೆಗೆ ಬಂದವನೇ ಸೀದಾ ಮಹಡಿಯ ನಮ್ಮ ರೂಂಗೆ ಹೋಗಿ ಬಾಗಿಲು ಹಾಕಿಕೊಂಡವನು ಮತ್ತೆ ಹೊರಬಂದದ್ದು ಎರಡು ದಿನಗಳ ನಂತರವೇ! ರಂಜನಿ ಹೊತ್ತುಹೊತ್ತಿಗೆ ಸರಿಯಾಗಿ ತಿಂಡಿ ಊಟ ಕಾಫಿಗಳನ್ನು ರೂಂನ ಹೊರಗೆ ತಂದಿಟ್ಟು ಹೋಗುತ್ತಿದ್ದಳು. ನಾನೂ ಎರಡು ದಿನಗಳ ಅಜ್ಞಾತವಾಸವನ್ನು ಯಶಸ್ವಿಯಾಗಿ ಪೂರೈಸಿದೆ.

ಔಷಧಿ ತೆಗೆದುಕೊಂಡ ಒಂದು ವಾರದಲ್ಲೇ ನನ್ನ ಶರೀರ ಪ್ರಕೃತಿಯಲ್ಲಿ ಗಮನಾರ್ಹ ಬದಲಾವಣೆಗಳಾಗತೊಡಗಿದವು. ಕೊಂಚ ತೀವ್ರಗತಿಯಲ್ಲಿಯೇ ತೂಕದಲ್ಲಿ ಏರಿಕೆಯಾಗತೊಡಗಿತು. ನಾನು ತಲುಪಿದ್ದ ಹೈಪರ್ ಥೈರಾಯಾಡ್ ಸ್ಥಿತಿಯಲ್ಲಿ ನನಗೆ ಚಿಕಿತ್ಸೆ ಸಾಧ್ಯವೇ ಇಲ್ಲದ್ದರಿಂದ ನನ್ನನ್ನು ಹೈಪೋ ಥೈರಾಯಿಡ್ ಸ್ಥಿತಿಗೆ ನೂಕಿ ನಂತರ ಚಿಕಿತ್ಸೆ ನೀಡುವ ಕ್ರಮವಾಗಿತ್ತಂತೆ ಇದು! ಮುಂದಿನ ಒಂದಷ್ಟು ದಿನಗಳಲ್ಲಿ ಔಷಧೋಪಚಾರಗಳು ಮೈಗೆ ಒಗ್ಗಿ ಔಷಧದ ಪ್ರಮಾಣವೂ ನಿಶ್ಚಿತವಾದ ಬಳಿಕ ನಾನೂ ಮೊದಲಿನ ಸ್ಥಿತಿಗೆ ಬಂದೆನೆಂದಿಟ್ಟುಕೊಳ್ಳಿ..
ಹೀಗೊಂದು ಅನಿರೀಕ್ಷಿತ ಆತಂಕದ ಪ್ರಸಂಗ ನನ್ನ ತಪ್ಪು ಗ್ರಹಿಕೆಗಳ ಕಾರಣವಾಗಿಯೇ ಘಟಿಸಿ ನಾನು ಪವಾಡವೆನ್ನುವಂತೆ ಅದರಿಂದ ಪಾರಾಗಿಬಂದದ್ದು ನನ್ನ ಅದೃಷ್ಟವೇ ಸರಿ!

‍ಲೇಖಕರು avadhi

April 5, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: