ಶ್ರೀನಿವಾಸ ಪ್ರಭು ಅಂಕಣ- ಪರೀಕ್ಷಾ ರಾಕ್ಷಸ ಹತ್ತಿರ ಬಂದೇ ಬಿಟ್ಟ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

11

ಅಣ್ಣ ಜಯನಗರ ಮೂರನೇ ಬಡಾವಣೆಯಲ್ಲಿ ಅಂಗಡಿ ವ್ಯಾಪಾರ ಶುರು ಮಾಡಿದ್ದು ಸರಿಯಷ್ಟೇ. ಆದರೆ ಯಾಕೋ ಅಂಥ ಒಳ್ಳೆಯ ಬಡಾವಣೆಯಲ್ಲೂ ವ್ಯಾಪಾರ ಊರ್ಜಿತವಾಗಲೇ ಇಲ್ಲ. ಗಾಯದ ಮೇಲೆ ಉಪ್ಪು ಸುರಿದಂತೆ ಅಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು: ರೇಷನ್ ದರದಲ್ಲಿ ಅಕ್ಕಿ-ಬೇಳೆ ಮೊದಲಾದ ದಿನಸಿಗಳನ್ನು ತಂದು ಮಾರಲು ವಿಶೇಷ ಪರವಾನಗಿ ಪಡೆದುಕೊಳ್ಳಬೇಕಿತ್ತು. ಆದರೆ ಈ ಪರವಾನಗಿ ಅಷ್ಟು ಸುಲಭಕ್ಕೆ ಸಿಗುವಂಥದಾಗಿರಲಿಲ್ಲ.

ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದಷ್ಟು ಕಪ್ಪಕಾಣಿಕೆಗಳನ್ನು ನೀಡದೆ ಅವರು ಒಪ್ಪಿಗೆ ನೀಡುವಂತೆಯೇ ಇರಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರಾಗಿ, ಮಹಾತ್ಮಾಜೀಯವರ ಆದರ್ಶಗಳನ್ನು ಪಾಲಿಸಿಕೊಂಡು ಬಂದ ಅಣ್ಣ, ಹೀಗೆ ಲಂಚ ತಿನ್ನಿಸಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಸುತರಾಂ ಸಿದ್ಧರಿರಲಿಲ್ಲ. ಹಾಗಾಗಿ ಅಂಗಡಿಗೆ ವಿಶೇಷ ಪರವಾನಗಿಯೂ ಸಿಗಲಿಲ್ಲ. ಕಡಿಮೆ ಬೆಲೆಗೆ ಬೇರೆ ಅಂಗಡಿಗಳಲ್ಲಿ ದಿನಸಿ ಸಿಗುವಾಗ ಹೆಚ್ಚುಬೆಲೆ ಕೊಟ್ಟು ಕೊಳ್ಳಲು ನಮ್ಮ ಅಂಗಡಿಗೆ ಯಾರು ಬರುತ್ತಾರೆ? ವ್ಯಾಪಾರ ದಿನೇ ದಿನೇ ಕ್ಷೀಣಿಸಿ ಅಣ್ಣ ಕುಗ್ಗಿ ಹೋದರು. ಆದರೂ ಛಲ ಬಿಡದೇ ಅದೇ ಅಂಗಡಿಯಲ್ಲಿ ಹಣ್ಣು ತರಕಾರಿ ವ್ಯಾಪಾರ ಶುರು ಮಾಡಿದರು. ಅಲ್ಲಿಯೂ ಅವರಿಗೆ ನಿರಾಶೆಯೇ ಕಾದಿತ್ತು.

ಸರಸ್ವತಿ ದೇವಿ ಒಲಿದು ಎರಡೂ ಕೈಗಳಿಂದ ಮೊಗೆಮೊಗೆದು ವಿದ್ಯೆ-ಜ್ಞಾನಗಳನ್ನು ಧಾರಾಳವಾಗಿ ನೀಡಿದರೂ ಲಕ್ಷ್ಮೀದೇವಿ ಏಕೋ ಅಣ್ಣನತ್ತ ದೃಷ್ಟಿ ಹರಿಸಲೇ ಇಲ್ಲ. ‘ಇನ್ನೆಷ್ಟು ಕಾಲ ಈ ಅಗ್ನಿ ಪರೀಕ್ಷೆ’ ಎಂದು ನಿಡುಸುಯ್ಯುತ್ತಿದ್ದ ಅಣ್ಣನಿಗೆ ಆ ಸಮಯದಲ್ಲಿ ಒದಗಿ ಬಂದದ್ದು ‘ಮೈಸೂರು ರಿಯಾಸತ್ ಹಿಂದೀ ಪ್ರಚಾರ ಸಮಿತಿ’ ಯಲ್ಲಿ ಹಿಂದಿ ಶಿಕ್ಷಕರ ಕೆಲಸ. ಜತೆಗೆ ಅಲ್ಲಿದ್ದ ಗ್ರಂಥಾಲಯದ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಿತ್ತು. ‘ಏನಾದರಾಗಲಿ, ಈ ಒಗ್ಗದ ವ್ಯಾಪಾರದೊಂದಿಗೆ ಗುದ್ದಾಡುವುದೇ ಬೇಡ’ ಎಂದು ಅಣ್ಣ ತೀರ್ಮಾನ ಮಾಡಿ ಅಂಗಡಿ ವ್ಯಾಪಾರಕ್ಕೆ ಎಳ್ಳುನೀರು ಬಿಟ್ಟು ಹಿಂದಿ ಪ್ರಚಾರ ಸಮಿತಿಯಲ್ಲಿ ಕೆಲಸಕ್ಕೆ ಸೇರಿಕೊಂಡರು-ಅದೂ 130 ರೂಪಾಯಿಗಳ ಅಲ್ಪ ಸಂಬಳಕ್ಕೆ. ಮನೆ ಬಾಡಿಗೆಗೆ 65 ರೂಪಾಯಿಗಳನ್ನು ಕೊಟ್ಟು ಉಳಿದ ಹಣದಲ್ಲಿ ಸಂಸಾರ ನಿರ್ವಹಣೆ ಆಗಬೇಕಿತ್ತು. ‘ಏನೇ ಆಗಲಿ, ಒಂದು ಸಂಸ್ಥೆಯಲ್ಲಿ ಕೆಲಸ ಅಂದರೆ ಒಂದು ಮಟ್ಟದ ಸುರಕ್ಷತೆ; ಸಂಬಳ ಕಡಿಮೆ ಬಂದರೂ ವ್ಯಾಪಾರದಲ್ಲಿ ಆಗುವಂತೆ ನಷ್ಟ ಅನುಭವಿಸುವ ಪ್ರಸಂಗವಿಲ್ಲ’ ಎಂದು ಅಣ್ಣ ಸಮಾಧಾನ ಮಾಡಿಕೊಂಡರು.

ಬೆಂಗಳೂರಿಗೆ ಬಂದಮೇಲೆ ಮ್ಯಾಚಸ್ ಚಿತ್ರಗಳನ್ನು ಸಂಗ್ರಹಿಸುವ ನನ್ನ ಹುಚ್ಚು ದುಪ್ಪಟ್ಟಾಗಿತ್ತು. ಗೋಲಿ ಆಟದಲ್ಲಿ ಪಳಗಿದವನಾದ್ದರಿಂದ ನೂರಾರು ಗೋಲಿಗಳನ್ನು ಗೆದ್ದು ಡಬ್ಬಿಗಳಲ್ಲಿ ಶೇಖರಿಸಿಟ್ಟಿದ್ದೆ. ಇದರ ಜತೆಗೆ ಸಿಗರೇಟ್ ಪ್ಯಾಕ್ ಗಳ ಹೊದಿಕೆಯನ್ನೂ ಕತ್ತರಿಸಿಟ್ಟುಕೊಂಡು ಕಲೆ ಹಾಕುವ ಚಟ ಅಂಟಿಕೊಂಡಿತ್ತು. ನಮ್ಮ ಭಾಷೆಯಲ್ಲಿ ಅದಕ್ಕೆ ಟ್ರಿಕ್ಕಿ ಎಂದು ನಾಮಕರಣ ಆಗಿತ್ತು. ಬೀದಿಬೀದಿ ಅಲೆದು ಅಲೆದು ಮ್ಯಾಚಸ್ ಹಾಗೂ ಟ್ರಿಕ್ಕಿಗಳನ್ನು ಹೆಕ್ಕಿಕೊಂಡು ಬರುವುದು ದಿನದ ದೊಡ್ಡ ಕಾಯಕವಾಗಿತ್ತು. ಜತೆಗೆ ಯಾರಾದರೂ ಸ್ನೇಹಿತರನ್ನು ಕರೆದುಕೊಂಡು ಹೋದರೆ ಸಂಗ್ರಹಿಸಿದ್ದೆಲ್ಲಾ ಪಾಲಾಗಿಬಿಡುತ್ತದಲ್ಲಾ ಅನ್ನುವ ಭಯಕ್ಕೆ ಒಬ್ಬನೇ ಬೀದಿ ಬೀದಿ ಅಲೆಯುತ್ತಿದ್ದೆ.

ಈ ಮ್ಯಾಚಸ್ ಸಂಗ್ರಹದ ಹುಚ್ಚಿನಿಂದಾಗಿ ಸಣ್ಣಪುಟ್ಟ ಯಡವಟ್ಟುಗಳನ್ನು ಮಾಡಿಕೊಂಡಿರುವುದೂ ಉಂಟು. ಅಂಥದೊಂದು ಪ್ರಸಂಗ ನೆನಪಾಗುತ್ತಿದೆ: ಅಮ್ಮ ನಮಗೆಲ್ಲಾ 15 ದಿನಕ್ಕೊಮ್ಮೆ ಎಣ್ಣೆಸ್ನಾನ ಮಾಡಿಸುತ್ತಿದ್ದರು. ಒಂದು ಭಾನುವಾರ ಬೆಳಿಗ್ಗೆ ಅಮ್ಮ ನನ್ನನ್ನು ಕರೆದು, ‘ಮನೇಲಿ ಸೀಗೇಪುಡಿ ಮುಗಿದುಹೋಗಿದೆ.. ಮಾವಯ್ಯನ ಅಂಗಡಿಗೆ ಹೋಗಿ ತೊಗೊಂಡು ಬಾ.. ನಳಿನಿ ತಲೇಗೆ ಎಣ್ಣೆ ಬಳಿದು ಕೂರಿಸಿಬಿಟ್ಟಿದೀನಿ.. ಬೇಗ ಹೋಗಿ ತೊಗೊಂಡು ಬಾ.. ಮತ್ತೆ friends ಸಿಕ್ಕಿದ್ರು ಅಂತ ಆಟಕ್ಕೆ ನಿಂತುಬಿಡಬೇಡ’ ಎಂದು ಎಚ್ಚರಿಸುತ್ತಲೇ ಹೇಳಿದರು.

ಮೂರನೇ ಬ್ಲಾಕ್ ನಲ್ಲಿ ನಮ್ಮ ಕುಲಬಾಂಧವರೂ, ಅಣ್ಣ ಬೆಂಗಳೂರಲ್ಲಿ ನೆಲೆಯಾಗಲು ಸಾಕಷ್ಟು ಸಹಾಯ ಮಾಡಿದವರೂ ಆದ ಸುಬ್ಬಕೃಷ್ಣ ಮಾವಯ್ಯನವರ ಅಂಗಡಿ ಇತ್ತು. ಟಿ ಬ್ಲಾಕ್ ನ ನಮ್ಮ ಮನೆಯಿಂದ ಅಂಗಡಿಗೆ ತುಸು ದೂರವೇ ಆಗುತ್ತಿತ್ತು. ‘ಬೇಗ ಹೋಗಿ ತಂದುಬಿಡ್ತೀನಿ’ ಎಂದು ಅಮ್ಮನಿಗೆ ಹೇಳಿದವನೇ ಅಂಗಡಿಯತ್ತ ಬೇಗಬೇಗ ಹೆಜ್ಜೆ ಹಾಕಿದೆ. ಮಾವಯ್ಯನವರ ಅಂಗಡಿಗೆ ಹೋಗಿ ಲೆಕ್ಕದಲ್ಲಿ ಬರೆಸಿ ಸೀಗೇಪುಡಿ ಪೊಟ್ಟಣ ತೆಗೆದುಕೊಂಡು ಹೊರಟೆ. ಮಾವಯ್ಯನವರ ಅಂಗಡಿ ಇದ್ದ ಸಾಲಿನಲ್ಲೇ ಇನ್ನೊಂದು ತುದಿಗೆ ಒಂದು ಪುಸ್ತಕದಂಗಡಿ ಇತ್ತು (R A N STORES ಇರಬೇಕು). ಅಲ್ಲಿ ಯಾವಾಗಲೂ ಹೊಸ ಹೊಸ ಮ್ಯಾಚಸ್ ಚಿತ್ರಗಳ ಕಟ್ಟುಗಳನ್ನು ತರಿಸಿ ಇಟ್ಟಿರುತ್ತಿದ್ದರು.

ಮಾವಯ್ಯನ ಅಂಗಡಿಯಿಂದ ಹೊರಟ ನನ್ನ ಕಾಲುಗಳು ಯಾವುದೋ ಮೋಡಿಗೆ ಸಿಲುಕಿದಂತೆ ಅಪ್ರಯತ್ನ ಪೂರ್ವಕವಾಗಿ ನನ್ನನ್ನು ಆ ಪುಸ್ತಕದಂಗಡಿಯ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿದವು. ನೋಡಿದರೆ ವಾರಾಂತ್ಯದಲ್ಲಿ ಹುಡುಗರನ್ನು ಆಕರ್ಷಿಸಲೆಂದು ಬಣ್ಣಬಣ್ಣದ ಹೊಸ ಹೊಸ ಮ್ಯಾಚಸ್ ಚಿತ್ರಗಳ ಕಟ್ಟುಗಳನ್ನು ಒಂದು ದಪ್ಪ ರಟ್ಟಿನ ಮೇಲೆ ಸುಂದರವಾಗಿ ಜೋಡಿಸಿ ಪ್ರದರ್ಶನಕ್ಕಿಟ್ಟಿದ್ದಾರೆ! ನನ್ನ ಬಳಿ ಇಲ್ಲದ ಎಷ್ಟೋ ಚಿತ್ರಗಳನ್ನು ನೋಡಿಯೇ ನಾನು ಪುಳಕಿತನಾಗಿಬಿಟ್ಟೆ. ಅದೇ ವೇಳೆಗೆ ನನ್ನ ಸಹಪಾಠಿ ರುದ್ರನರಸಿಂಹ ಕೂಡಾ ಅಲ್ಲಿಗೆ ಮ್ಯಾಚಸ್ ಕೊಳ್ಳಲೆಂದೇ ಬಂದ.

ಇಬ್ಬರೂ ಇದ್ದ ಒಂದಷ್ಟು ಚಿಲ್ಲರೆ ದುಡ್ಡಿನಲ್ಲಿ ಒಂದಷ್ಟು ಮ್ಯಾಚಸ್ ಗಳನ್ನು ಖರೀದಿ ಮಾಡಿ ಅಲ್ಲಿಯೇ ಒಂದೆಡೆ ಕುಳಿತುಕೊಂಡು ಪರಸ್ಪರ ವಿನಿಮಯ ಮಾಡಿಕೊಂಡು ಹೊಸಚಿತ್ರಗಳನ್ನು ಗಳಿಸಿದ್ದಕ್ಕೆ ಖುಷಿಪಡುತ್ತಾ ನಮ್ಮ ನಮ್ಮ ಮನೆಗಳತ್ತ ಹೊರಟೆವು. ಸಂಭ್ರಮದಿಂದಲೇ ಮನೆಯೊಳಗೆ ಕಾಲಿರಿಸಿದ ನನ್ನ ಕಿವಿಗೆ ಅಮ್ಮನ ಮಾತುಗಳು ಅಪ್ಪಳಿಸಿದವು: ‘ಪ್ರಭೂ, ಎಷ್ಟು ಹೊತ್ತು ಹೋಗಿಬಿಟ್ಟೆಯೋ! ಅಷ್ಟು ಹೊತ್ತಿಂದ ಅಕ್ಕ ಎಣ್ಣೆ ಮೆತ್ತಿಕೊಂಡು ಕಾಯ್ತಿದಾಳೆ.. ಬೇಗ ಸೀಗೇಪುಡಿ ಕೊಡು.’ ಅಯ್ಯೋ ದೇವರೇ! ಸೀಗೇಪುಡಿ ಪೊಟ್ಟಣ ಎಲ್ಲಿಹೋಯಿತು? ತಕ್ಷಣ ನೆನಪಿಗೆ ಬಂತು: ಮ್ಯಾಚಸ್ ಚಿತ್ರಗಳನ್ನು ಸಂಗ್ರ ಹಿಸುವ ಕಾತರದಲ್ಲಿ ಪೊಟ್ಟಣವನ್ನು ಅಂಗಡಿಯ ಮೇಜಿನ ಮೇಲೇ ಬಿಟ್ಟು ಬಂದಿದ್ದೆ! ಒಂದೇ ಉಸುರಿಗೆ ಅಲ್ಲಿಂದ ಮತ್ತೆ ಅಂಗಡಿಯತ್ತ ದೌಡಾಯಿಸಿದೆ. ಹಿಂದಿನಿಂದ ‘ಪ್ರಭೂ, ಪ್ರಭೂ, ಸೀಗೇಪುಡಿ ಎಲ್ಲೋ’ ಎಂಬ ಅಮ್ಮನ ಕೂಗು ಕೇಳುತ್ತಲೇ ಇತ್ತು.

ಓಡುತ್ತಾ ಬಂದು ಅಂಗಡಿಯ ಮುಂದೆ ನಿಂತು ಏದುಸಿರು ಬಿಡುತ್ತಿದ್ದವನಿಗೆ ಅಲ್ಲೇ ಮೇಜಿನ ಮೇಲೆ ಒಂದು ಮೂಲೆಯಲ್ಲಿದ್ದ ಸೀಗೇಪುಡಿ ಪೊಟ್ಟಣ ಕಂಡು ಉಸಿರು ಬಂದಂತಾಯಿತು. ‘ಇದು ನನ್ನದೇ ಪೊಟ್ಟಣ’ ಎಂದು ಅಂಗಡಿಯವನಿಗೆ ನಂಬಿಕೆ ಬರುವಂತೆ ಅಲವತ್ತುಕೊಂಡು ಪೊಟ್ಟಣ ತೆಗೆದುಕೊಂಡು ಮನೆಗೆ ಬರುವ ವೇಳೆಗೆ ಅಕ್ಕನ ಎಣ್ಣೆಸ್ನಾನ ಮುಗಿದಿತ್ತು. ಪಕ್ಕದ ಓನರ್ ಮನೆಯಿಂದ ಸೀಗೇಪುಡಿ ಕಡ ತಂದು ಅಮ್ಮ ಅಕ್ಕನಿಗೆ ನೀರೆರೆದಿದ್ದರು. ‘ಆಹಾ! ಶೂರ! ಎಷ್ಟು ಬೇಗ ತಂದುಬಿಟ್ಟೆಯಪ್ಪಾ!’ ಎಂದು ಅಮ್ಮ ಉದ್ಗರಿಸಿದರೆ ಅಕ್ಕ, ‘ಈ ನನ್ನ ತಮ್ಮ ಬದಲಾಗುವುದೇ ಇಲ್ಲವೇ’ ಎಂದು ನನ್ನನ್ನೇ ಕರುಣಾಜನಕವಾಗಿ ನೋಡುತ್ತಿದ್ದಳು. ತಕ್ಷಣ ನನಗೆ ನೆನಪಾಯಿತು: ಇಂದು ಭಾನುವಾರ! ಗೆಳೆಯರೆಲ್ಲಾ ಆಗಲೇ ಗೋಲಿಯಾಡಲು ಮೈದಾನದಲ್ಲಿ ಸೇರಿಯಾಗಿದೆ! ಒಂದಷ್ಟು ಗೋಲಿಗಳನ್ನು ಜೇಬಿನಲ್ಲಿ ತುಂಬಿಕೊಂಡು ಮೈದಾನದತ್ತ ಓಡಿದೆ.

ಇದರ ಜತೆಗೆ ಮನೆಯ ಪಕ್ಕದಲ್ಲೇ ಇದ್ದ ಮೈದಾನದಲ್ಲಿ ಕ್ರಿಕೆಟ್ ಬೇರೆ ಶುರುವಾಗಿತ್ತು. ಕ್ರಿಕೆಟ್, ಮ್ಯಾಚಸ್, ಟ್ರಿಕ್ಕಿ, ಗೋಲಿ…. ನನಗಂತೂ ಸಮಯವೇ ಸಾಕಾಗುತ್ತಿರಲಿಲ್ಲ. ಅಣ್ಣಯ್ಯನೂ ಕ್ರಿಕೆಟ್ ಆಡಲು ಬರುತ್ತಿದ್ದ. ಆದರೆ ಮನೆಯಲ್ಲಿ ಸಂಜೆಯ ಭಜನೆಯ ವೇಳೆಯಾಗುತ್ತಿದ್ದಂತೆ ಅರ್ಧ ಆಟದಲ್ಲೇ ಹೊರಟುಹೋಗುತ್ತಿದ್ದ. ‘ಭಜನೆ ಟೈಮ್ ಆಯ್ತು.. ಬಾ.. ಅಣ್ಣ ಕಾಯ್ತಿರ್ತಾರೆ’ ಎಂದು ನನ್ನನ್ನೂ ಕರೆಯುತ್ತಿದ್ದ. ‘ಇನ್ನೆರಡು ಓವರ್ ಆಡಿಕೊಂಡು ಬಂದುಬಿಡ್ತೀನಿ’ ಎಂದು ನಾನು ಅಲ್ಲಿಯೇ ನಿಲ್ಲುತ್ತಿದ್ದೆ. ಅಷ್ಟು ಆಸಕ್ತಿಯಿಂದ, ತನ್ಮಯತೆಯಿಂದ ಆಡುತ್ತಿರುವ ಆಟವನ್ನು ಅಣ್ಣಯ್ಯ ಅದು ಹೇಗೆ ತಾನೇ ಬಿಟ್ಟು ಹೊರಟು ಹೋಗಲು ಸಾಧ್ಯ ಅನ್ನುವುದು ನನ್ನ ಪಾಲಿಗೆ ಯಕ್ಷಪ್ರಶ್ನೆಯಾಗಿತ್ತು.

ಬೆಂಗಳೂರು ಹೈಸ್ಕೂಲ್ ಗೆ ಮರಳುತ್ತೇನೆ: ಬೆಂಗಳೂರು ಹೈಸ್ಕೂಲ್ ನಲ್ಲಿ ಒಬ್ಬ ಪ್ರತಿಭಾವಂತ ಮಾಸ್ತರರಿದ್ದರು—ವೈ.ವೆಂಕಟರಮಣ. ಹಿಂದಿ ಮೇಷ್ಟ್ರಾಗಿದ್ದ ವೈ ವಿ ಅವರು ಸೊಗಸಾಗಿ ಹಾಡುತ್ತಿದ್ದರು. ಗಣಪತಿ ಹಬ್ಬದ ಸಂದರ್ಭದಲ್ಲಿ ಅವರು ಶಾಲೆಯಲ್ಲಿ ಗಮಕ ವಾಚನವನ್ನು ನಡೆಸಿಕೊಡುತ್ತಿದ್ದರು.

ಈ ಗಮಕವಾಚನದಲ್ಲಿ ಅವರ ಹಾಡುಗಾರಿಕೆಗೆ ನನ್ನ ವ್ಯಾಖ್ಯಾನ! ಅವರೇ ಬರೆದುಕೊಡುತ್ತಿದ್ದ ವ್ಯಾಖ್ಯಾನಗಳನ್ನು ಆದಷ್ಟೂ ಭಾವಪೂರ್ಣವಾಗಿ, ನಾಟಕೀಯವಾಗಿ ಒಪ್ಪಿಸಲು ನಾನು ಯತ್ನಿಸುತ್ತಿದ್ದೆ. ‘ಉತ್ತರನ ಪೌರುಷ’ ಪ್ರಸಂಗವನ್ನು ನಾವು ಸಾದರ ಪಡಿಸಿದಾಗಲಂತೂ ಬಂದಿದ್ದ ಪೋಷಕರು, ಅಧ್ಯಾಪಕರು, ಸಹಪಾಠಿಗಳು ಬಿದ್ದುಬಿದ್ದು ನಗುತ್ತಿದ್ದರು.ಅವರ ಪ್ರತಿಕ್ರಿಯೆಯಿಂದ ಉತ್ತೇಜಿತನಾಗಿ ನಾನು ಇನ್ನಷ್ಟು ಚೆನ್ನಾಗಿ, ಪರಿಣಾಮಕಾರಿಯಾಗಿ ವ್ಯಾಖ್ಯಾನ ಭಾಗವನ್ನು ಮಂಡಿಸಲು ಯತ್ನಿಸುತ್ತಿದ್ದೆ!

ಬೆಂಗಳೂರು ಹೈಸ್ಕೂಲ್ ನಲ್ಲಿ ಎಂ ವಿ ಸುಬ್ಬಣ್ಣ ಅವರು ಡ್ರಾಮಾ ಟೀಚರ್ ಆಗಿದ್ದರು. ವಾರದಲ್ಲಿ ಒಂದೇ ಒಂದು ದಿನ ನಾಟಕದ ತರಗತಿ ಇರುತ್ತಿದ್ದುದು. ನಾನಂತೂ ಆ ಕ್ಲಾಸ್ ಗೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಿದ್ದೆ. ಕ್ಲಾಸ್ ನಲ್ಲಿ ಸುಬ್ಬಣ್ಣನವರು ಐತಿಹಾಸಿಕ ನಾಟಕಗಳನ್ನು ಸೊಗಸಾಗಿ ಓದುತ್ತಾ ಸನ್ನಿವೇಶಗಳನ್ನು ವಿವರಿಸುತ್ತಿದ್ದರು. ಸೂಕ್ತ ಹಾವಭಾವಗಳೊಂದಿಗೆ, ಮಾತಿನ ಅಗತ್ಯ ಏರಿಳಿತಗಳೊಂದಿಗೆ ಅಭಿನಯಿಸುತ್ತಲೇ ನಾಟಕವನ್ನು ಓದುತ್ತಾ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರ. ಛೇ, ಗಣಿತದ ಕ್ಲಾಸ್ ಬದಲು ಪ್ರತಿದಿನವೂ ಡ್ರಾಮಾ ಕ್ಲಾಸ್ ಇರಬಾರದಾಗಿತ್ತೇ… ಎಂದು ನಾನು ಹಳಹಳಿಸುತ್ತಿದ್ದೆ! ಸುಬ್ಬಣ್ಣನವರು ಸೂಕ್ತ ವಿದ್ಯಾರ್ಥಿಗಳನ್ನು ಆರಿಸಿಕೊಂಡು ವರ್ಷಕ್ಕೆ ಒಂದೋ ಎರಡೋ ನಾಟಕಗಳನ್ನು ಮಾಡಿಸುತ್ತಿದ್ದರು.

ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ಅವರು ನಮಗೆ ಹೇಳಿಕೊಟ್ಟ ನಾಟಕ ಪರ್ವತವಾಣಿಯವರ ‘ಮುಕುತಿ ಮೂಗುತಿ’. ನಾನು ನಾಟಕದಲ್ಲಿ ನಟನಾಗಿ ಮೊಟ್ಟಮೊದಲ ಬಾರಿಗೆ ರಂಗಪ್ರವೇಶ ಮಾಡಿದ್ದು ಇದೇ ನಾಟಕದಲ್ಲಿ. ಜಿಪುಣ ವ್ಯಾಪಾರಿ ಶ್ರೀನಿವಾಸ ನಾಯಕರು ಪುರಂದರ ದಾಸರಾಗಿ ಪರಿವರ್ತಿತರಾಗಲು ಕಾರಣೀಭೂತವಾದ ಮೂಗುತಿಯ ಪ್ರಸಂಗವನ್ನು ನಾಟಕರೂಪಕ್ಕೆ ಅಳವಡಿಸಿದ್ದರು ಪರ್ವತವಾಣಿಯವರು. ಈ ನಾಟಕದಲ್ಲಿ ನನ್ನದು ಚತುರ್ಮುಖನ ಪಾತ್ರ. ನಾಟಕದಲ್ಲಿ, ‘ನಾಲ್ಕು ದಿಕ್ಕಿಗೂಮುಖ ತಿರುಗಿಸುತ್ತಾ ಹೇಗೆ ನಿಂತಿದ್ದಾನೆ ನೋಡಿ’ ಎನ್ನುವ ಮಾತು ನನ್ನ ಪಾತ್ರವನ್ನು ಉದ್ದೇಶಿಸಿ ಬರುತ್ತದೆ. ನಾನೂ ಹಾಗೆಯೇ ನಾಲ್ಕು ದಿಕ್ಕಿಗೂ ಮುಖ ತಿರುಗಿಸುತ್ತಾ ನಸುನಗುತ್ತಾ ನಿಂತಿದ್ದೆ! ಅದಕ್ಕೆ ಜನರ ನಗುವಿನ ಪ್ರತಿಕ್ರಿಯೆಯೂ ದೊರೆತ ಕಾರಣ, ‘ನಾನು ಚೆನ್ನಾಗಿ ಅಭಿನಯಿಸುತ್ತಿದ್ದೇನೆ’ ಎಂದೆಲ್ಲಾ ನಾನು ಭಾವಿಸಿಕೊಂಡು ಬೀಗಿದ್ದೆ.

ನಾನು SSLC ಯಲ್ಲಿದ್ದಾಗ ಶಾಲಾದಿನಾಚರಣೆಗೆಂದು ಸುಬ್ಬಣ್ಣನವರು ಮಾಡಿಸಿದ ನಾಟಕ ಜಿ.ಪಿ.ರಾಜರತ್ನಂ ಅವರ ‘ಗಂಡುಗೊಡಲಿ’. School day ಕಾರ್ಯಕ್ರಮ ನಡೆದದ್ದು ಟೌನ್ ಹಾಲ್ ನಲ್ಲಿ! ಅಂಥ ದೊಡ್ಡ ಸ್ಟೇಜ್ ನಲ್ಲಿ ನಾಟಕ ಮಾಡುತ್ತಿದ್ದೇವೆ ಎಂದು ನನಗೆ ಹಿಗ್ಗೋ ಹಿಗ್ಗು. ಅಂದು ನಾಟಕ ನೋಡಲು ನಮ್ಮ ಮನೆಯವರು, ಛಾಯಣ್ಣ, ಶಂಕರರಾಮು.. ಎಲ್ಲರೂ ಬಂದಿದ್ದರು. ಗಂಡುಗೊಡಲಿ ನಾಟಕದಲ್ಲಿ ನನ್ನದು ಕಶ್ಯಪ ಮುನಿಯ ಪಾತ್ರ. ಬದರಿನಾಥ್ ಎಂಬ ವಿದ್ಯಾರ್ಥಿ ಪರಶುರಾಮನ ಪಾತ್ರವನ್ನೂ ನನ್ನ ಸಹಪಾಠಿಯೂ ಆತ್ಮೀಯ ಮಿತ್ರನೂ ಆಗಿದ್ದ ರಂಗನಾಥ ಜಮದಗ್ನಿಯ ಪಾತ್ರವನ್ನೂ ನಿರ್ವಹಿಸಿದ್ದರು. ನನ್ನ ಪಾತ್ರ ನಾಟಕದ ಕೊನೆಯ ದೃಶ್ಯದಲ್ಲಿ ಬರುವಂಥದ್ದು. ಇಲ್ಲಿ ನನ್ನ ಮನಸ್ಸಿಗೆ ನೋವಾಗುವಂಥ ಒಂದು ಘಟನೆ ನಡೆದುಹೋಯಿತು.

ನಾಟಕದ ಕೊನೆಯ ದೃಶ್ಯಕ್ಕೆ ಮೊದಲೇ, ಅಂದರೆ ನನ್ನ ಪಾತ್ರ ರಂಗದ ಮೇಲೆ ಬರುವ ಮೊದಲೇ ‘ಪರಶುರಾಮ ಪಾತ್ರಧಾರಿ ಬದರೀನಾಥನಿಗೆ ಮೊದಲ ಬಹುಮಾನ ಹಾಗೂ ಜಮದಗ್ನಿ ಪಾತ್ರಧಾರಿ ರಂಗನಾಥನಿಗೆ ಎರಡನೆಯ ಬಹುಮಾನ ಎಂದು ಘೋಷಿಸಿಬಿಟ್ಟರು. ಅಯ್ಯೋ! ನನ್ನ ಅಭಿನಯವನ್ನು ನೋಡುವ ಮೊದಲೇ ಬಹುಮಾನ ತೀರ್ಮಾನವೇ! ನಾನು ವಿಪರೀತ ಸಂಕಟ ಸಿಟ್ಟಿನಿಂದ ಕುದ್ದುಹೋದೆ. ಹೇಗೋ ಸಾವರಿಸಿಕೊಂಡು ಹೋಗಿ ದೃಶ್ಯ ಮುಗಿಸಿಬಂದೆ.

ಮನೆಗೆ ಬಂದ ಮೇಲೆ ಶಂಕರರಾಮು ಅವರ ಹತ್ತಿರ, ‘ನೋಡಿ.. ಹೇಗೆ ಮೋಸ ಮಾಡಿಬಿಟ್ಟರು’ ಎಂದು ಪೇಚಾಡಿಕೊಂಡೆ. ‘ಇಷ್ಟು ಸಣ್ಣವಿಷಯಕ್ಕೆಲ್ಲಾ ಬೇಜಾರು ಮಾಡಿಕೋಬಾರದು; ಇದರಲ್ಲಿ ಮೋಸವೇನಿಲ್ಲ; ಅವರಿಬ್ಬರದೂ ದೊಡ್ಡ ಪಾತ್ರಗಳು; ಆ ಹುಡುಗರೂ ಚೆನ್ನಾಗಿ ಅಭಿನಯಿಸಿದರು; ನೀನೂ ಚೆನ್ನಾಗಿಯೇ ಅಭಿನಯಿಸಿದೆ.. ಆದರೆ ನಿನ್ನ ಪಾತ್ರಕ್ಕಿದ್ದ ಅವಕಾಶ ಕಡಿಮೆ.. ಜತೆಗೆ ಸ್ವಲ್ಪ ಜೋರಾಗಿ ಮಾತಾಡೋದನ್ನ ನೀನು ಅಭ್ಯಾಸ ಮಾಡ್ಕೋಬೇಕು.. ಇಲ್ಲದಿದ್ದರೆ ಹಿಂದೆ ಕೂತಿರೋ ಜನಕ್ಕೆ ಮಾತು ಕೇಳಿಸೋಲ್ಲ… ಮುಂದೆ ನಿನಗೆ ಬೇಕಾದಷ್ಟು ಅವಕಾಶಗಳೂ ಸಿಗುತ್ತವೆ.. ಬಹುಮಾನಗಳೂ ಬರುತ್ತವೆ.. ಮನಸ್ಸು ಚಿಕ್ಕದು ಮಾಡಿಕೊಳ್ಳದೇ ಓದಿನ ಕಡೆ ಗಮನಕೊಡು.. SSLC ಪರೀಕ್ಷೆಗಳು ಹತ್ತಿರ ಬಂದವು.. ಅಲ್ವಾ?’ ಎಂದು ಶಂಕರರಾಮು ನನಗೆ ಸಮಾಧಾನ ಹೇಳಿದರು. ಪರೀಕ್ಷೆ!!!

ಪರೀಕ್ಷೆ ಅನ್ನುವ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಸಿಡಿಲು ಬಡಿದಂತಾಯಿತು. ಏನೇ ಮಾಡಿದರೂ ಓದಿನ ಕಡೆ ನನ್ನ ಗಮನ ಹರಿಯುತ್ತಿರಲಿಲ್ಲ. ನನ್ನ ಆಟದ ಹುಚ್ಚು ಬಿಡಿಸಲು ಅಕ್ಕ-ಅಣ್ಣಯ್ಯ ಶತಪ್ರಯತ್ನ ಪಟ್ಟು ಸೋತುಹೋಗಿದ್ದರು. ‘ಇನ್ನು ಆಟಕ್ಕೆ ಹೋಗುವುದಿಲ್ಲ.. ಚೆನ್ನಾಗಿ ಓದುತ್ತೇನೆ’ ಎಂದು ಬೆಂಕಿಕಡ್ಡಿ ಗೀಚಿ ಅದರ ಮೇಲೆ ನನ್ನ ಕೈ ಇರಿಸಿ, ಅಗ್ನಿಸಾಕ್ಷಿಯಾಗಿ ಭೀಷ್ಮ ಪ್ರತಿಜ್ಞೆ ಮಾಡಿಸುತ್ತಿದ್ದರು. ಪ್ರತಿಜ್ಞೆ ಮಾಡಿ, ಹತ್ತು ನಿಮಿಷ ಓದಿದ ಶಾಸ್ತ್ರ ಮಾಡಿ ಎಲ್ಲರ ಕಣ್ಣುತಪ್ಪಿಸಿ ಆಟಕ್ಕೆ ಓಡುತ್ತಿದ್ದೆ. ನಳಿನಿ ಅಕ್ಕ, ಕುಮಾರಣ್ಣಯ್ಯ ಗಂಟೆಗಟ್ಟಲೆ ಕೂತು ಓದಿಕೊಳ್ಳುತ್ತಿದ್ದರು. ನನಗೆ ಮಾತ್ರ ಹತ್ತು ನಿಮಿಷದ ಮೇಲೆ ಪುಸ್ತಕದಲ್ಲಿ ಚಿತ್ತ ನಿಲ್ಲುತ್ತಿರಲಿಲ್ಲ.

ಕಣ್ಣೆದುರಿಗೆ ಅಕ್ಷರಗಳು ಇರುತ್ತಿದ್ದವಷ್ಟೇ.. ಮನಸ್ಸಿನಲ್ಲಿ ನಾಟಕ, ಸಿನಿಮಾ, ಮ್ಯಾಚಸ್ ಚಿತ್ರಗಳು, ಗೋಲಿ… ಇವನ್ನು ಕುರಿತ ನೂರು ಯೋಚನೆಗಳು ಕುಣಿಯುತ್ತಿದ್ದವು. ಎಷ್ಟೋ ಸಲ ಸ್ಕೂಲ್ ಪುಸ್ತಕದೊಳಗೆ ಕಥೆ ಪುಸ್ತಕವನ್ನೋ ನಾಟಕವನ್ನೋ ಇಟ್ಟುಕೊಂಡು ಓದುತ್ತಿದ್ದುದುಂಟು. ಹಾಗೆ ಓದುವಾಗ ಎಷ್ಟು ತಲ್ಲೀನನಾಗಿರುತ್ತಿದ್ದೆನೆಂದರೆ ನನ್ನ ತನ್ಮಯತೆಯನ್ನು ನೋಡಿಯೇ ಅಕ್ಕನಿಗೆ ಅನುಮಾನ ಬಂದು ನನ್ನ ಗುಟ್ಟು ರಟ್ಟು ಮಾಡಿಬಿಡುತ್ತಿದ್ದಳು. Physics, Chemistry, ಎರಡೆರಡು ಬಗೆಯ ಗಣಿತ… ಎಲ್ಲವೂ ನನ್ನ ಪಾಲಿಗೆ ದೊಡ್ಡ ಕಲ್ಲುಬಂಡೆಗಳು. ತಲೆ ಚಚ್ಚಿಕೊಂಡು ಚಚ್ಚಿಕೊಂಡು ತಲೆ ಒಡೆಯಿತೇ ಹೊರತು ಬಂಡೆ ಮಿಸುಕಲಿಲ್ಲ. ಹೀಗೇ ಸಾಗುತ್ತಾ SSLC ಪರೀಕ್ಷಾ ರಾಕ್ಷಸ ಹತ್ತಿರ ಬಂದೇ ಬಿಟ್ಟ.

ಕನ್ನಡ ಒಂದು ವಿಷಯವನ್ನು ಬಿಟ್ಟು ಉಳಿದ ಯಾವ ವಿಷಯದಲ್ಲೂ ಸಮರ್ಪಕವಾಗಿ ಉತ್ತರಗಳನ್ನು ಬರೆದಿರಲಿಲ್ಲ. ಗಣಿತದಲ್ಲಿ ಪಾಸಾಗುವುದಿಲ್ಲ ಎಂದು ಯಾರ ಮೇಲೆ ಬೇಕಾದರೂ ಆಣೆ ಇಟ್ಟು ಹೇಳಬಹುದಾದಷ್ಟು ದೃಢವಾದ ನಂಬಿಕೆ ಇತ್ತು ನನಗೆ. ಆದರೂ ಗಣಿತದ ಪರೀಕ್ಷೆ ಮುಗಿಸಿ ಬರುವಾಗ ನನ್ನ ತರಗತಿಯ ಜಾಣ ಹುಡುಗ ಶ್ರೀನಾಥನನ್ನು ಕೇಳಿ ಸರಿ ಉತ್ತರಗಳನ್ನು ಪ್ರಶ್ನ ಪತ್ರಿಕೆಯಲ್ಲೇ ಗುರುತು ಹಾಕಿಕೊಂಡು ಬಂದು ಮನೆಯಲ್ಲಿ ಅಣ್ಣಯ್ಯನಿಗೆ ತೋರಿಸಿದ್ದೆ! ‘ಭೇಷ್! ಪರವಾಗಿಲ್ಲ.. 75ಕ್ಕೆ ಮೋಸವಿಲ್ಲ’ ಎಂದು ನನ್ನ ಮೋಸದ ಅರಿವಿಲ್ಲದ ಅಣ್ಣಯ್ಯ ಖುಷಿಪಟ್ಟಿದ್ದ.

ಕೆಲ ದಿನಗಳ ನಂತರ ಫಲಿತಾಂಶ ಬಂದೇ ಬಿಟ್ಟಿತು! ನನ್ನ ಶೈಕ್ಷಣಿಕ ಬದುಕಿನ ಎರಡನೆಯ ದೊಡ್ಡ ಪವಾಡ ಘಟಿಸಿಯೇ ಬಿಟ್ಟಿತ್ತು!(7ನೆಯ ತರಗತಿ ಪಾಸಾದ್ದು ಮೊದಲ ಪವಾಡ) ನಾನು SSLC ಪರೀಕ್ಷೆಯಲ್ಲಿ ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್! ಬರೋಬ್ಬರಿ 35 ಅಂಕಗಳನ್ನು ನನಗೆ ಗಣಿತದಲ್ಲಿ ನೀಡಿ ನನ್ನನ್ನು ಪಾಸ್ ಮಾಡಿದ ಅಪಾರ ಕರುಣಾಳು ಮೌಲ್ಯಮಾಪಕರಿಗೆ ಮನಸ್ಸಿನಲ್ಲೇ ಸಾಷ್ಟಾಂಗ ಪ್ರಣಾಮ ಸಲ್ಲಿಸಿದೆ.

ಮನೆಯಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚರ್ಚೆ ಶುರುವಾಯಿತು. ಒಂದು ವರ್ಷ ಮನೆಯಲ್ಲೇ ಇದ್ದು ಚೆನ್ನಾಗಿ ಅಭ್ಯಾಸಮಾಡಿ ಇನ್ನೊಂದು ಬಾರಿ SSLC ಪರೀಕ್ಷೆಗೆ ಕಟ್ಟಿ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಬಹುದಲ್ಲವೇ ಎಂದು ನಮಗೆ ಆತ್ಮೀಯರೂ ಹಿತೈಷಿಗಳೂ ಆಗಿದ್ದ ನೆರೆಮನೆಯ ಶಂಕರರಾಮು ಸಲಹೆ ಕೊಟ್ಟರು. ನನಗೆ ಅವರ ಸಲಹೆಯಲ್ಲಿದ್ದ, ‘ಒಂದು ವರ್ಷ ಮನೆಯಲ್ಲಿರುವ’ ಭಾಗ ಇಷ್ಟವಾದರೂ ಮತ್ತೆ ಕಲ್ಲುಬಂಡೆಗಳ ಜತೆ ಕಾದಾಡಿ ಪರೀಕ್ಷೆಗೆ ಬರೆಯಲಿ ಅನ್ನುವ ಎರಡನೆಯ ಭಾಗ ಚೂರೂ ಹಿತವೆನ್ನಿಸಲಿಲ್ಲ.

ಮನೆಯವರೆಲ್ಲರೂ ಒಕ್ಕೊರಲಿನಿಂದ ಈ ಸಲಹೆಯನ್ನು ತಿರಸ್ಕರಿಸಿಬಿಟ್ಟರು! ‘ಮನೇಲಿದ್ದು ಓದಿದರೇನೋ ಪರವಾಗಿಲ್ಲ.. ಚಂಗಲು ಬಿದ್ದುಹೋದರೆ ಗತಿಯೇನು? withdraw ಮಾಡಿಕೊಳ್ಳೋದೇನೂ ಬೇಡ.. ಹೇಗೂ ಪಾಸಾಗಿದ್ದಾನೆ. ಅವನಿಗೆ ಗಣಿತ.. ಸೈನ್ಸ್ ಒಗ್ಗೋಲ್ಲ… PUC ನಲ್ಲಿ arts ತೊಗೊಳ್ಳಲಿ’ ಎಂದು ಎಲ್ಲರ ಒಪ್ಪಿಗೆಯ ಮುದ್ರೆಯೊಂದಿಗೆ ತೀರ್ಮಾನವಾಯಿತು. ನನಗಂತೂ ಆ ಕ್ಷಣ ನನ್ನ ಜೀವನದ ಅಮೃತ ಗಳಿಗೆ! ಮತ್ತೆಂದೂ ಈ ಗಣಿತ-ಲೆಕ್ಕಾಚಾರಗಳ ಗೊಡವೆ ಇಲ್ಲ!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

August 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shivalingaiah

    ಚೇನ್ನಾಗಿ ಬರುತ್ತಿದೇ ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: