ಶ್ರೀನಿವಾಸ ಪ್ರಭು ಅಂಕಣ: ಪರಮೇಶಿ ಪ್ರೇಮ ಪ್ರಸಂಗ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 131

ಮಗಳು ರಾಧಿಕಾ ಹಾಗೂ ಮಗ ಅನಿರುದ್ಧ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಗ್ಗೆ ಈಗಾಗಲೇ ಹೇಳಿದ್ದೇನೆ. sslc ಯ ನಂತರ ರಾಧಿಕಾ ಪಿಯುಸಿ ಓದಲು ಎಂ ಇ ಎಸ್ ಕಾಲೇಜಿಗೆ ಸೇರಿಕೊಂಡಳು. ಚಿತ್ರಕಲೆಯಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿದ್ದ ರಾಧಿಕಾ ಪಿಯುಸಿ ಯ ನಂತರ ಚಿತ್ರಕಲೆಯನ್ನೇ ಅಭ್ಯಸಿಸುವ ಇರಾದೆಯನ್ನು ವ್ಯಕ್ತಪಡಿಸಿದಳು. ಇಂಗ್ಲೀಷ್ ಸಾಹಿತ್ಯವನ್ನೋ, ಜರ್ನಲಿಸಂ ಅನ್ನೋ ಅಭ್ಯಸಿಸಲಿ ಎಂಬುದು ರಂಜಿನಿಯ ಇಚ್ಛೆಯಾಗಿತ್ತು. ನಮ್ಮ ಇಷ್ಟಾನಿಷ್ಟಗಳು ಏನೇ ಆದರೂ ಅಂತಿಮ ಆಯ್ಕೆ ಮಕ್ಕಳದ್ದೇ ತಾನೇ! ರಾಧಿಕಾಳ ಅಪೇಕ್ಷೆಯ ಮೇರೆಗೆ ಅವಳನ್ನು ಚಿತ್ರಕಲೆಯ ಅಭ್ಯಾಸಕ್ಕೆ ಚಿತ್ರಕಲಾ ಪರಿಷತ್ತಿಗೆ ಸೇರಿಸಿದೆವು. ಭರತನಾಟ್ಯ ಕಲಿಕೆಯೂ ಜತೆಜತೆಯಲ್ಲೇ ಸಾಗಿತ್ತು. ಅನಿರುದ್ಧ ಹೆಚ್ಚುಹೆಚ್ಚಾಗಿ ವಿದ್ಯಾಭ್ಯಾಸದ ಕಡೆಗೇ ಗಮನ ನೀಡುವಂತೆ ಕಾಣುತ್ತಿದ್ದುದರಿಂದ ಬಹುಶಃ ಅಕ್ಯಾಡಮಿಕ್ ಆಗಿಯೇ ಮುಂದುವರಿದು ಅವನು ತನ್ನ ಭವಿಷ್ಯ ರೂಪಿಸಿಕೊಳ್ಳುತ್ತಾನೆಂಬುದು ನಮ್ಮ ನಂಬಿಕೆಯಾಗಿತ್ತು. ಆದರೆ ನಾವಂದುಕೊಂಡಂತೆಯೇ ಎಲ್ಲವೂ ನಡೆಯುವುದು ಎಲ್ಲಿಯಾದರೂ ಉಂಟೇ?

ಒಮ್ಮೆ ನಮ್ಮ ನೆರೆಮನೆಯವರಾದ ಡಾ॥ರಘುರಾಮಭಟ್ ಹಾಗೂ ಕುಟುಂಬದವರೊಟ್ಟಿಗೆ ರಾಧಿಕಾಳ ಹುಟ್ಟುಹಬ್ಬದ ಆಚರಣೆಗಾಗಿ ನಾವೆಲ್ಲರೂ ಒಂದು ಕಾರ್ ಮಾಡಿಕೊಂಡು ಮೈಸೂರಿಗೆ ಪ್ರವಾಸ ಹೊರಟೆವು. ಈ ಹಿಂದೆ ಹೇಳಿದ್ದಂತೆ ಡಾಕ್ಟ್ರ ಕುಟುಂಬದೊಂದಿಗೆ ಒಂದು ಮಧುರ ಬಂಧ ಬೆಸೆದುಕೊಂಡಿತ್ತು. ಡಾಕ್ಟ್ರ ಮಗಳಾದ ಸೌಮ್ಯ ರಾಧಿಕಾಳ ಓರಗೆಯವಳೇ ಆಗಿದ್ದು ಅವರಿಬ್ಬರೂ ಅಂತರಂಗದ ಗೆಳತಿಯರಾಗಿದ್ದರು. ಡಾಕ್ಟ್ರ ಪತ್ನಿ ಮಾಲಿನಿ ಹಾಗೂ ರಂಜನಿಯರೂ ಸಹಾ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದರು. ರಘುರಾಮರಂತೂ ನನಗೆ ಕಿರಿಯ ಸೋದರನಂತೆಯೇ ಆಗಿಹೋಗಿದ್ದರು.

ಅಂದು ಬೆಳಗಿನಿಂದ ಸಂಜೆಯವರೆಗೆ ಎಲ್ಲರೂ ಆನಂದವಾಗಿ ಕಾಲಕಳೆದು ರಾಧಿಕಾಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ರಾತ್ರಿ ಬೆಂಗಳೂರಿಗೆ ಮರಳುತ್ತಿದ್ದೆವು. ದಾರಿಯುದ್ದಕ್ಕೂ ‘ಅಂತ್ಯಾಕ್ಷರಿ ಹಾಡು’ ಹಸೆಯ ಸಂಭ್ರಮ ಸಾಗಿತ್ತು. ಅದಾವುದರಲ್ಲೂ ಹೆಚ್ಚಾಗಿ ಪಾಲುಗೊಳ್ಳದ ಅನಿರುದ್ಧ ಇದ್ದಕ್ಕಿದ್ದಂತೆ ‘ನಾನು ಒಂದು ಹಾಡು ಹೇಳಲಾ?’ಎಂದಾಗ ನಮಗೆ ಒಂದೆಡೆ ಖುಷಿ—ಮತ್ತೊಂದೆಡೆ ಪರಮಾಶ್ಚರ್ಯ! ನಾವಾಗಿ ಕೇಳಿಕೊಂಡಾಗಲೂ ಎಂದೂ ತುಟಿ ತೆರೆಯದಿದ್ದ ಮಗರಾಯ ಇಂದು ತಾನಾಗಿ ‘ಹಾಡುತ್ತೇನೆ’ ಎನ್ನುತ್ತಿದ್ದಾನೆ!

‘ಹೇಳು ಹೇಳು, ನಿನ್ನ ಹಾಡು ಕೇಳೋದಕ್ಕೆ ಎಷ್ಟೋ ದಿನದಿಂದ ಕಾಯ್ತಿದೇವೆ’ ಎಂದು ನಾವೂ ಹುರಿದುಂಬಿಸಿದೆವು. ಕಣ್ಣು ಮುಚ್ಚಿಕೊಂಡು ಮನದಲ್ಲೇ ಶೃತಿ ಸರಿಮಾಡಿಕೊಂಡು ಮಗ ಹಾಡಲು ಶುರು ಮಾಡಿದ: “ಅನಿಸುತಿದೆ ಯಾಕೋ ಇಂದು, ನೀನೇನೇ ನನ್ನವಳೆಂದು”. ಆ ದಿನಗಳ ಜನಪ್ರಿಯ ಚಿತ್ರ ‘ಮುಂಗಾರುಮಳೆ’ಯ ಅತಿ ಜನಪ್ರಿಯ ಹಾಡು! ಅಂದು ಅವನು ಹಾಡಿದ ಧಾಟಿಗೆ ನಾವೆಲ್ಲರೂ ದಂಗು ಬಡಿದುಹೋದೆವು. ಅವನ ಹಾಡಿನಲ್ಲಿ ಸ್ವರಶುದ್ಧಿಯಿತ್ತು, ತಾಳಶುದ್ಧಿಯಿತ್ತು, ತನ್ಮಯತೆಯಿತ್ತು, ಮಿಗಿಲಾದ ಆತ್ಮವಿಶ್ವಾಸವಿತ್ತು! ನಮಗಂತೂ ಹೇಳತೀರದ ಖುಷಿ. ಮಗ ಕಲೆಯಿಂದ ವಿಮುಖನಾಗಿಲ್ಲ ಎಂದು! ಊರಿಗೆ ಮರಳಿದ ಮೇಲೆ ತಡಮಾಡದೇ ಮನೆಯ ಬಳಿಯೇ ಇದ್ದ ಸಂಗೀತ ಗುರುಗಳೊಬ್ಬರ ಬಳಿ ಕರ್ನಾಟಕ ಸಂಗೀತವನ್ನು ಕಲಿಯಲು ಸೇರಿಸಿಯೇಬಿಟ್ಟೆ. ಶಾಸ್ತ್ರೀಯ ಸಂಗೀತವನ್ನು ಕಲಿಯಲು ಆರಂಭಿಸಿದರೂ ಅವನ ನಿಜವಾದ ಒಲವಿದ್ದದ್ದು ಪಾಶ್ಚಾತ್ಯ ಸಂಗೀತದೆಡೆಗೆ ಎಂಬುದು ನಂತರದ ದಿನಗಳಲ್ಲಿ ನಮ್ಮ ಅರಿವಿಗೆ ಬಂದಿತು. ಸರಿ, ಈ ಸಂಗೀತದ ಕಲಿಕೆಯ ಜತೆಗೇ ಗಿಟಾರ್ ಕಲಿಕೆಯೂ ಆರಂಭವಾಯಿತು. ನಿರಂಜನ್ ಅನ್ನುವವರು ವಾರಕ್ಕೆರಡು ದಿನ ಮನೆಗೇ ಬಂದು ಗಿಟಾರ್ ಹೇಳಿಕೊಡುತ್ತಿದ್ದರು.

ಒಟ್ಟೊಟ್ಟಿಗೇ ಎಂಟೊಂಬತ್ತು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆಂದು ಹೇಳಿದ್ದೆನಲ್ಲಾ, ಅವುಗಳಲ್ಲಿ ಒಂದೆರಡು ತಾವಾಗಿ ಮುಗಿದವು; ಒಂದೆರಡರಲ್ಲಿ ನನ್ನ ಪಾತ್ರ ಮುಕ್ತಾಯ ಕಂಡಿತು; ಮತ್ತೆ ಒಂದೆರಡನ್ನು ತಾತ್ವಿಕ ಕಾರಣಗಳಿಗಾಗಿ ನಾನೇ ಬಿಟ್ಟೆ. ಅವುಗಳಲ್ಲೊಂದು ‘ಮನೆಯೊಂದು ಮೂರು ಬಾಗಿಲು’. ಆತ್ಮೀಯ ಕಿರಿಯ ಮಿತ್ರ ಎ.ಜಿ. ಶೇಷಾದ್ರಿ ಪ್ರಾರಂಭದಲ್ಲಿ ಕಥೆ—ಚಿತ್ರಕಥೆ—ನಿರ್ದೇಶನಗಳ ಹೊಣೆ ಹೊತ್ತಿದ್ದ. ನನ್ನದು ಒಬ್ಬ ಶ್ರೀಮಂತ ಯಶಸ್ವೀ ಉದ್ಯಮಿಯ ಪಾತ್ರ. ವನಿತಾ ವಾಸು ನನ್ನ ಪತ್ನಿಯ ಪಾತ್ರವನ್ನೂ ಸುಂದರ್ ವೀಣಾ, ನವೀನ್ ಕೃಷ್ಣ ಹಾಗೂ ಹರೀಶ್ ರಾಜ್ ಅವರು ನಮ್ಮ ಮಕ್ಕಳ ಪಾತ್ರಗಳನ್ನೂ ಝಾನ್ಸಿ ಸುಬ್ಬಯ್ಯ ಹಾಗೂ ಸಿರಿಯವರು ಸೊಸೆಯರ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಬಹಳ ಬೇಗನೇ ಧಾರಾವಾಹಿಯೂ ಜನಪ್ರಿಯತೆಯನ್ನು ಗಳಿಸಿಕೊಂಡಿತು. ನೂರು ಕಂತುಗಳ ದಾಟುತ್ತಿದ್ದಂತೆ ಹಲವಾರು ಬದಲಾವಣೆಗಳು ಆಗತೊಡಗಿದವು. ಬರಹಗಾರರು ಬದಲಾದರು, ನಿರ್ದೇಶಕರು ಬದಲಾದರು, ನನ್ನ ಪಾತ್ರದ ವಿನ್ಯಾಸವೇ ಬದಲಾಗತೊಡಗಿತು!

ಶೇಷಾದ್ರಿ ನನಗೆ ಪಾತ್ರದ ಬೆಳವಣಿಗೆಯನ್ನು ವಿವರಿಸಿದ್ದ ಬಗೆಯೇ ಬೇರೆ ತೆರನಾಗಿತ್ತು: ನಿಧಾನವಾಗಿ ಪತಿ ಪತ್ನಿಯರ ನಡುವೆ ತಲೆದೋರುವ ತಪ್ಪು ತಿಳುವಳಿಕೆಗಳು. ಬಿಟ್ಟುಕೊಡದ ತಂತಮ್ಮ ಸ್ವಭಾವಗಳಿಂದಾಗಿ ಸಮಾನಾಂತರವಾಗಿ ಸಾಗುತ್ತಾ ಸಂಘರ್ಷಕ್ಕಿಳಿಯುವುದು. ಇದರ ನಡುವೆಯೇ ಮಕ್ಕಳೊಂದಿಗಿನ ಘರ್ಷಣೆಗಳು. ಹೀಗೊಂದು ಕಥಾ ಹಂದರವನ್ನು ಹೆಣೆದಿದ್ದರು ಶೇಷಾದ್ರಿ. ಪ್ರಾರಂಭದಲ್ಲಿ ಆ ದಿಕ್ಕಿನಲ್ಲಿಯೇ ಸಾಗಿದ್ದ ನನ್ನ ಪಾತ್ರ ಬರಬರುತ್ತಾ ಅಮ್ಮಾವ್ರ ಗಂಡನಾಗಿ ರೂಪಾಂತರಗೊಳ್ಳತೊಡಗಿತು! ಯಾವಾಗಲೂ ತನ್ನ ಸಿದ್ಧಾಂತಗಳಿಗೆ ಬದ್ಧನಾಗಿ ಗಟ್ಟಿದನಿಯಲ್ಲಿ ಅದನ್ನು ಸಾರುತ್ತಿದ್ದ ಪಾತ್ರ ನಿಧಾನವಾಗಿ ಪತ್ನಿಯ ಕೈಗೊಂಬೆಯಾಗುತ್ತಾ ಕೊನೆಗೆ ಯಾಂತ್ರಿಕವಾಗಿ ಪೇಪರ್ ಗಳಿಗೆ ಒಪ್ಪಿಗೆಯ ಮುದ್ರೆಯೊತ್ತುವ ಮೊಹರಾಗಿ ಬದಲಾಗಿಹೋಯಿತು. ನನಗೇಕೋ ಇದು ಇಷ್ಟವಾಗಲಿಲ್ಲ. ಅಂಥ ಪಾತ್ರವನ್ನು ಮಾಡಬಾರದೆಂದಲ್ಲ, ಆದರೆ ಅದು ನನಗೆ ಮೊದಲೇ ಅರಿವಿಗೆ ಬಂದಿರಬೇಕಾದ್ದು ಮುಖ್ಯ! ಅದು ಆ ಪಾತ್ರವನ್ನು ಪರಿಭಾವಿಸಿಕೊಂಡು ಬೇಕಾದ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಧಿಡೀರನೆ ಆಗುವ ಇಂಥ ವಿಪರೀತ ಬದಲಾವಣೆಗಳು ಕಥೆಯ ಓಟಕ್ಕೂ ಧಕ್ಕೆ ತರುತ್ತವೆ. ಹಾಗೆಂದು ನಾನು ವಾದಿಸತೊಡಗಿದೆ.

ಆದರೆ ಆ ವೇಳೆಗೆ ನಿರ್ದೇಶಕ—ಬರಹಗಾರರು ಬದಲಾಗಿದ್ದರು! ನಾನು ಅಹವಾಲು ನೀಡುವುದಾದರೂ ಯಾರಿಗೆ! ವಾಹಿನಿಯ ಅಧಿಕಾರಿಗಳೋ ಅವರವರದೇ ಟಿ ಆರ್ ಪಿ ಲೆಕ್ಕಾಚಾರದಲ್ಲಿ ಮುಳುಗಿಹೋಗಿದ್ದರು. ನಾನು ಮ್ಯಾನೇಜರ್ ಗೆ ನೇರವಾಗಿ ಹೇಳಿದೆ: “ಈ ರೀತಿಯ ಪಾತ್ರಪೋಷಣೆ ಎಂದು ಮೊದಲೇ ಹೇಳಿರಲಿಲ್ಲ. ಈಗಿನ ಈ ಬದಲಾವಣೆಗೆ ನನ್ನ ಸಮ್ಮತಿಯಿಲ್ಲ. ಮೊದಲಿನಂತೆಯೇ ಪಾತ್ರಪೋಷಣೆ ಇರುವುದಾದರೆ ಅಡ್ಡಿಯಿಲ್ಲ; ಇಲ್ಲವಾದರೆ ಬೇರೆ ಕಲಾವಿದರನ್ನು ನೋಡಿಕೊಳ್ಳಿ, ನನ್ನನ್ನು ಬಿಟ್ಟುಬಿಡಿ”. ಅಲ್ಲಿಂದ ಏನು ಉತ್ತರ ಬರುತ್ತದೆಂದು ನನಗೆ ಮೊದಲೇ ತಿಳಿದಿತ್ತು! ಒಬ್ಬ ಕಲಾವಿದನ ಬೇಡಿಕೆಗೆ ಬೆಲೆ ಕೊಟ್ಟು ಮಣಿಯುವಷ್ಟು ಸೌಜನ್ಯವನ್ನು ದೊಡ್ಡ ದೊಡ್ಡ ಅಧಿಕಾರಿಗಳು, ಅದೂ ಧಾರಾವಾಹಿಗಳ ಯಶಸ್ಸು— ಭವಿಷ್ಯದ ಬಗ್ಗೆ ಕರಾರುವಾಕ್ಕಾದ ತಿಳುವಳಿಕೆ ಇರುವ ಜ್ಞಾನಿಗಳು ತೋರುವುದಾದರೂ ಉಂಟೇ?! ನಾನೊಂದು ತಿಂಗಳ ಕಾಲಾವಧಿಯನ್ನು ನೀಡಿದ್ದೆ. ಅವಧಿ ಮುಗಿಯಿತು. ಮತ್ತೆ ಅವರಿಂದ ಕರೆ ಬರಲಿಲ್ಲ. ಬದಲಿ ನಟರು ಬಂದರು. ಧಾರಾವಾಹಿ ಮುಂದುವರೆಯಿತು. “ಯಶಸ್ವೀ ವಾಹಿನಿ—ದೊಡ್ಡ ಕಂಪನಿ—ಯೋಚನೆ ಮಾಡಿ ನಿರ್ಧಾರ ತೊಗೋ” ಎಂದು ಕೆಲ ಸ್ನೇಹಿತರು ಕಿವಿಮಾತು ಹೇಳಿದ್ದುಂಟು. ಆದರೆ ಎಲ್ಲಕ್ಕಿಂತ ನನಗೆ ನನ್ನ ನಂಬಿಕೆ—ಸಿದ್ಧಾಂತ ದೊಡ್ಡದು. ಅಲ್ಲವೇ?

“ಅಮ್ಮಾ ನಿನಗಾಗಿ” ಧಾರಾವಾಹಿಯದೂ ಇದೇ ಕಥೆ. ಅಲ್ಲಿ ಆತ್ಮೀಯ ಗೆಳೆಯ, ನಾನು ಮೆಚ್ಚುವ ಬರಹಗಾರ ಕೆ.ಪಿ. ಅಲಿಯಾಸ್ ಕೃಷ್ಣ ಪ್ರಸಾದ್ ಅವರು ಚಿತ್ರಕಥೆ—ಸಂಭಾಷಣೆಗಳನ್ನು ರಚಿಸುತ್ತಿದ್ದರು. ಅಲ್ಲಿಯೂ ಹೀಗೆಯೇ—ವಿಚಿತ್ರ ತಿರುವು! ಅಸಂಗತ ರೀತಿಯಲ್ಲಿ ಪಾತ್ರವನ್ನು ತಿರುಚುವ, ಮತ್ತಾವುದೋ ಪಾತ್ರ ಬೆಳೆಸುವ , ಪಾತ್ರದ ವಿನ್ಯಾಸವನ್ನೇ ಬದಲಿಸಿಬಿಡುವ ಚಾಳಿ! ಕೆ.ಪಿ.ಯವರು ನೇರವಾಗಿ ಇದಕ್ಕೆ ಬಾಧ್ಯರಾಗಿರಲಿಲ್ಲ, ಅವರು ತಮ್ಮ ಮೇಲಿನವರ ಸಂದೇಶಗಳನ್ನು ನಿರ್ವಾಹವಿಲ್ಲದೆ ಪಾಲಿಸುತ್ತಿದ್ದರು ಎಂಬುದು ನನ್ನ ಅರಿವಿಗೆ ಬಂದಿತ್ತು. ಅವರೊಟ್ಟಿಗೂ ಈ ಕುರಿತಾಗಿ ಕೂಲಂಕುಷವಾಗಿ ಚರ್ಚಿಸಿದೆ. ಒಂದು ‘ಮುಖ’ವಿಲ್ಲದ ಪಾತ್ರನಿರ್ವಹಣೆ ನನಗೆ ಆಗಿಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಯಾವ ಚರ್ಚೆಯೂ ಫಲಕಾರಿಯಾಗಲಿಲ್ಲ. ಕೆ.ಪಿ. ಹತಾಶೆಯಿಂದ ಕೈಚೆಲ್ಲಿದರು. ಹದಿನೈದು ದಿನಗಳಲ್ಲಿ ನನಗೆ ಅಂದರೆ ನನ್ನ ಪಾತ್ರಕ್ಕೆ ತೀವ್ರ ಹೃದಯಾಘಾತವಾಗಿಯೇ ಹೋಯಿತು; ಮತ್ತೆ ನನ್ನ ಪಾತ್ರ ಮೇಲೇಳಲೇ ಇಲ್ಲ! ಹೀಗೆ ಧಾರಾವಾಹಿಗಳ ಭರಾಟೆ ಕೊಂಚ ಕಮ್ಮಿಯಾಗುತ್ತಿದ್ದ ಸಮಯದಲ್ಲಿಯೇ ಮೈಸೂರಿನ ರಂಗಾಯಣದಿಂದ ಗೆಳೆಯ ಗಂಗಾಧರ ಸ್ವಾಮಿಯವರ ಫೋನ್ ಬಂದಿತು!

‘ಸಮುದಾಯ’ ತಂಡಕ್ಕೆ ಹಿಂದೆ ನಾನು ರಾಜ್ಯಮಟ್ಟದ ಶಿಬಿರ ಮಾಡಿಸಿದ್ದಾಗ ಆ ಶಿಬಿರದ ನಿರ್ವಹಣೆಯನ್ನು ವಹಿಸಿಕೊಂಡಿದ್ದವರು ಇದೇ ಗಂಗಾಧರ ಸ್ವಾಮಿ; ಸಮುದಾಯ ತಂಡದ ಸಕ್ರಿಯ ಕಾರ್ಯಕರ್ತ; ಅತ್ಯುತ್ತಮ ತಂತ್ರಜ್ಞ. ಅವರು ಫೋನ್ ಮಾಡಿ ‘ರಂಗಾಯಣಕ್ಕೆ ಒಂದು ನಾಟಕ ಮಾಡಿಸಲು ಸಾಧ್ಯವೇ?’ ಎಂದರು. ನನಗೂ ಒಂದು ಬದಲಾವಣೆ ಬೇಕೆನಿಸುತ್ತಿತ್ತು. ಖಂಡಿತ ಮಾಡಿಸುತ್ತೇನೆಂದು ಮಾತುಕೊಟ್ಟು ನನ್ನ ಬಳಿ ಸಿದ್ಧವೇ ಇದ್ದ ಮೂರು—ನಾಲ್ಕು ನಾಟಕಗಳನ್ನೆತ್ತಿಕೊಂಡು ರಂಜನಿಯೊಂದಿಗೆ ಕಾರ್ ನಲ್ಲಿ ಮೈಸೂರಿಗೆ ಹೊರಟೇಬಿಟ್ಟೆ.

ಎಲ್ಲ ಕಲಾವಿದರೊಂದಿಗೆ ಭೇಟಿಯಾಯಿತು. ಅವರೆಲ್ಲರ ಒಲವು ಒಂದು ಕಾಮಿಡಿ ನಾಟಕ ಮಾಡುವುದರ ಕಡೆಗೇ ಇತ್ತು. ಹೊಸ ಹಾಸ್ಯ ನಾಟಕ ಸಿದ್ಧವಾಗಿರಲಿಲ್ಲವಾಗಿ ನಾನು ನನ್ನ ಎರಡು ಹಳೆಯ ಹಾಸ್ಯ ನಾಟಕಗಳನ್ನೇ ಅವರಿಗೆ ಸೂಚಿಸಿದೆ: ‘ಪರಮೇಶಿ ಪ್ರೇಮ ಪ್ರಸಂಗ’ (ಬ್ರಹ್ಮಚಾರಿ ಶರಣಾದ) ಹಾಗೂ ‘ಗುಳ್ಳೆನರಿ’. ‘ಪರಮೇಶಿ’ ನಾಟಕವನ್ನು ಪೂರ್ತಿಯಾಗಿ ಎಲ್ಲರ ಸಮಕ್ಷಮದಲ್ಲಿ ಓದಿದೆ. ಹೊರಳಾಡಿಕೊಂಡು ಬಿದ್ದು ಬಿದ್ದು ನಕ್ಕರಷ್ಟೇ ಅಲ್ಲ, ‘ನಮಗೆ ಈ ನಾಟಕವನ್ನೇ ಮಾಡಿಸಿ’ ಎಂದು ಒಕ್ಕೊರಲಿನಿಂದ ಎಲ್ಲ ಕಲಾವಿದರೂ ಖಡಾಖಂಡಿತವಾಗಿ ಹೇಳಿಬಿಟ್ಟರು.

ಅದಾದ ಒಂದು ವಾರಕ್ಕೇ ತಾಲೀಮು ಆರಂಭಿಸಿದೆ. ಅಲ್ಲಿದ್ದವರೆಲ್ಲರೂ ಬಹಳ ಒಳ್ಳೆಯ ಕಲಾವಿದರೇ ಎಂಬುದರಲ್ಲಿ ಅನುಮಾನವೇ ಇರಲಿಲ್ಲ. ಆದರೆ ಪರಮೇಶಿ—ರಶ್ಮಿಯರ ಪಾತ್ರಗಳಿಗೆ ಕೊಂಚ ಚಿಕ್ಕ ವಯಸ್ಸಿನ ನಟನಟಿಯರ ಅಗತ್ಯವಿತ್ತು. ರಂಗಾಯಣದಲ್ಲಿ ಆ ವಯೋಮಾನದ ಕಲಾವಿದರಿರಲಿಲ್ಲ. ಅಡ್ಡಿಯಿಲ್ಲ, ಕೊಂಚ ಹಿರಿಯರಾದರೂ ‘ನಡುವಯೋಮಾನದವರ ಪ್ರೇಮ ಪ್ರಸಂಗ’ವಾಗಿ ನಾಟಕವನ್ನು ಪ್ರಸ್ತುತ ಪಡಿಸುವುದೆಂದು ತೀರ್ಮಾನಿಸಿದೆ! ಕಲಾವಿದರು ಹೇಗೂ ತೂಗಿಸಿಕೊಂಡು ಹೋಗುತ್ತಾರೆಂಬ ಭರವಸೆಯೂ ಇತ್ತಲ್ಲ! ಹುಲಗಪ್ಪ ಕಟ್ಟೀಮನಿ ಹುಲಿವಾನ್ ಭೂತನಾಥಯ್ಯನಾಗಿ, ಪ್ರಮೀಳಾ ಅವರು ಅಂಬಾಬಾಯಿಯಾಗಿ, ಪ್ರಶಾಂತ ಹಿರೇಮಠ್ ಅವರು ಕೃಷ್ಣೋಜಿ ಪಂಡಿತನಾಗಿ, ಸರೋಜಾ ರಮೇಶ್ ಅವರು ಶಾಂತಲಾದೇವಿಯಾಗಿ ಪಾತ್ರ ನಿರ್ವಹಿಸಲು ಆಯ್ಕೆಯಾದರು. ನೂರ್ ಅಹ್ಮದ್ ಶೇಖ್ ಅವರು ಪರಮೇಶಿಯಾಗಿ, ನಂದಿನಿಯವರು ರಶ್ಮಿಯಾಗಿ ಆಯ್ಕೆಯಾದರು. ಕೃಷ್ಣಕುಮಾರ್ ನಾರ್ಣಕಜೆ ವ್ಯಾಕುಲರಾಯನಾಗಿ, ಮಂಜುನಾಥ ಬೆಳಕೆರೆ ಅವರು ಪುಂಡರೀಕು ಆಗಿ, ಗೀತಾ ಮೊಂಟಡ್ಕ ಅವರು ಚೆನ್ನಿಯಾಗಿ, ರಾಮು ಅವರು ದೇಸಾಯಿ ಆಗಿ ಹಾಗೂ ಸಂತೋಷ್ ಕುಸನೂರ್ ಅವರು ಚಲಪತಿಯಾಗಿ ಪಾತ್ರ ನಿರ್ವಹಿಸುವುದೆಂದು ತೀರ್ಮಾನಿಸಿದೆ.

ನಿಜಕ್ಕೂ ನುರಿತ ಕಲಾವಿದರ ಸಮರ್ಥ ತಂಡವಾಗಿತ್ತು ಅದು. ಪಾತ್ರಕ್ಕೆ ನಾನು ಒದಗಿಸಿಕೊಟ್ಟ ಚೌಕಟ್ಟುಗಳಾಚೆಗೂ ತಮ್ಮ ಪಾತ್ರಗಳನ್ನೊಯ್ಯಲು ಕಲಾವಿದರು ಶ್ರಮಿಸುತ್ತಿದ್ದುದು ನಿಜಕ್ಕೂ ಖುಷಿ ಕೊಟ್ಟ ಸಂಗತಿಯಾಗಿತ್ತು. ಕೆಲವೊಮ್ಮೆ ಉತ್ಸಾಹ ಹೆಚ್ಚಾಗಿ ಅತಿರೇಕದತ್ತ ವಾಲಿದ್ದೂ ಉಂಟು! ರಿಹರ್ಸಲ್ ಗಳಲ್ಲೇ ಆ ಕುರಿತಾಗಿ ಎಚ್ಚರಿಕೆ ನೀಡುತ್ತಾ “ರಂಗದ ಮೇಲೆ ಪ್ರದರ್ಶನ ನಡೆಯುತ್ತಿರುವಾಗ ಯಾವುದೇ ಸಮಯ ಸ್ಫೂರ್ತಿಯ ಮಾತು-ಜೋಕ್ ಗಳಿಗೆ ನನ್ನ ಸಹಮತವಿಲ್ಲ. ಏನೇ ಇಂಪ್ರೂವೈಸೇಶನ್ ಇದ್ದರೂ ತಾಲೀಮಿನಲ್ಲಿ ಮಾಡಿ ನನ್ನ ಅನುಮೋದನೆ ಪಡೆದುಕೊಳ್ಳಿ” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದೆ. ಅಂಥದರಲ್ಲೂ ನಮ್ಮ ಹುಲಗಪ್ಪನವರು ಸ್ವಲ್ಪ ಹೆಚ್ಚು ಕೀಟಲೆ ಮಾಡಿ ಕೋಟಲೆ ಕೊಟ್ಟು ಸಣ್ಣದಾಗಿ ಬೈಸಿಕೊಂಡದ್ದುಂಟು! ಏನೇ ಆದರೂ ರಂಗದ ಮೇಲಂತೂ ಅವರೊಬ್ಬ ಅದ್ಭುತ ನಟ. ಹಾಗೆ ನೋಡಿದರೆ ಪರಮೇಶಿ ತಂಡದ ಎಲ್ಲ ಕಲಾವಿದರೂ ಸೊಗಸಾಗಿ ಅಭಿನಯಿಸಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಷ್ಟೇ ಅಲ್ಲ, ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿ ನಾಟಕ ಮತ್ತೆ ಮತ್ತೆ ಪ್ರದರ್ಶನಗೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾದರು. ನಾಲ್ಕಾರು ಬಾರಿ ಪ್ರದರ್ಶನಗಳನ್ನು ನೋಡಿರುವ ಪ್ರೇಕ್ಷಕರಿಗೂ ಕೊರತೆಯೇನಿಲ್ಲ! ಹೆಚ್ಚುಕಡಿಮೆ ನೂರು ಪ್ರದರ್ಶನಗಳನ್ನು ಪರಮೇಶಿ ನಾಟಕ ಕಂಡಿತಲ್ಲದೆ ಬೆಂಗಳೂರು ದೂರದರ್ಶನದ ವತಿಯಿಂದಲೂ ಪ್ರಸಾರ ಕಂಡಿತು.

ಒಂದೇ ಒಂದು ಬೇಸರದ ಸಂಗತಿಯೆಂದರೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕದ ಪ್ರದರ್ಶನವಾದಾಗ ಮಾತ್ರ ಕಲಾವಿದರು ನನ್ನನ್ನು ನಿರಾಸೆಗೊಳಿಸಿಬಿಟ್ಟರು. ತಾಲೀಮಿನ ಕೊರತೆಯೋ ಮತ್ತೊಂದೋ ಆಗಿ ಮಾತುಗಳನ್ನು ಮರೆತು ಆಭಾಸವೆಸಗಿ ತಾಳಮೇಳವಿಲ್ಲದ ಸಾಧಾರಣ ಪ್ರದರ್ಶನ ನೀಡಿಬಿಟ್ಟರು. ತೀರಾ ನಿರಾಸೆಗೊಂಡ ನಾನು ಅಂದು ವೇದಿಕೆಯ ಮೇಲೂ ಹೋಗಲಿಲ್ಲ. ವೃತ್ತಿಪರ ಸಂಸ್ಥೆಯ ಕಲಾವಿದರೆಂದರೆ ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ಹಾಗಾಗಿ ರಂಗದ ಮೇಲೆ ಹೋಗುವಾಗ ನಾವು ಮೈಯೆಲ್ಲಾ ಎಚ್ಚರವಾಗಿರಬೇಕಾಗುತ್ತದೆ. ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿಕೊಂಡು ತನ್ಮಯತೆ ಸಾಧಿಸಬೇಕಾಗುತ್ತದೆ. ಇಲ್ಲದಿದ್ದರೆ ಎಡವಟ್ಟು ಖಚಿತ! ಅಂದಾದದ್ದೂ ಇದೇ.

“ರಂಗದ ಮೇಲೆ ಒಮ್ಮೊಮ್ಮೆ ಹಾಗಾಗಿಬಿಡುತ್ತದೆ. ಏನೂ ಮಾಡಲಾಗದು” ಎನ್ನುವ ಗುರಾಣಿ ನನಗೆ ಎಂದೂ ಹಿಡಿಸುವ ಸಂಗತಿಯಾಗಿಲ್ಲ. (ಆಕಸ್ಮಿಕಗಳು ಬೇರೆ, ತಯಾರಿಯ ಕೊರತೆ ಬೇರೆ!) ಕಲಾವಿದರೊಂದಿಗೂ ನನ್ನ ಅಸಮಾಧಾನವನ್ನು ತೋಡಿಕೊಂಡೆ. ಪೂರ್ಣ ಶಿಸ್ತಿನಿಂದ ಸರಿಯಾಗಿ ತಾಲೀಮು ನಡೆಸಿ ಮಾಡುವುದಾದರೆ ನಾಟಕ ಮುಂದುವರಿಸಿ; ಇಲ್ಲದಿದ್ದರೆ ನಿಲ್ಲಿಸಿಬಿಡಿ ಎಂದು ಕೇಳಿಕೊಂಡೆ. ಅವರುಗಳಿಗೂ ಸಹಾ ಅಂದಿನ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕೆ ಬಾರದ್ದರ ಬಗ್ಗೆ ತುಂಬಾ ನೋವಿತ್ತು. ‘ಮುಂದೆ ಹೀಗಾಗುವುದಿಲ್ಲ ಪ್ರಭು ಸರ್’ ಎಂದು ಮಾತುಕೊಟ್ಟರು. ಮಾತು ಉಳಿಸಿಕೊಂಡರು! ಆ ನಂತರವೂ ಪರಮೇಶಿಯ ಅನೇಕ ಅತ್ಯಂತ ಯಶಸ್ವೀ ಪ್ರದರ್ಶನಗಳಾದವು. ಅನೇಕ ಸ್ಥಳೀಯ ಪತ್ರಿಕೆಗಳಲ್ಲಿ ‘ಪರಮೇಶಿ’ಯನ್ನು ಅಪಾರವಾಗಿ ಮೆಚ್ಚಿಕೊಂಡು ವಿಮರ್ಶೆಗಳು ಪ್ರಕಟವಾಗಿವೆ. ಈ ಒಂದು ಯಶಸ್ಸಿನ ಗರಿಯನ್ನು ಮುಡಿಸಿದ್ದಕ್ಕೆ ನಾನು ‘ರಂಗಾಯಣ’ಕ್ಕೆ ಸದಾ ಆಭಾರಿ!

‍ಲೇಖಕರು Admin MM

May 11, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: