ಶ್ರೀನಿವಾಸ ಪ್ರಭು ಅಂಕಣ – ನೋಡನೋಡುತ್ತಾ ಮದುವೆ ಇನ್ನು ಹತ್ತು ದಿನಕ್ಕೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

73

ಒಂದು ಬೆಳಿಗ್ಗೆ ದೂರದರ್ಶನ ಕೇಂದ್ರದಲ್ಲಿ ನಾಟಕ ಪ್ರದರ್ಶನಕ್ಕೆ ಅನುಮತಿ ಕೋರಿ ಬಂದಿದ್ದ ಪತ್ರಗಳನ್ನು ಪರಿಶೀಲಿಸುತ್ತಾ ಕುಳಿತಿದ್ದೆ. ಆ ಹೊತ್ತಿನಲ್ಲೇ ನನ್ನ ಕೋಣೆಗೆ ಯುವತಿಯೊಬ್ಬರ ಆಗಮನವಾಯಿತು. “ನಮಸ್ಕಾರ. ನನ್ನ ಹೆಸರು ಸುಮಿತ್ರಾ ಅಂತ. ನಿಮ್ಮ ಹತ್ರ ಸ್ವಲ್ಪ ಪರ್ಸನಲ್ ಆಗಿ ಮಾತಾಡಬೇಕಿತ್ತು.ಹತ್ತು ನಿಮಿಷ ಸಮಯವಿದೆಯೇ?” ಎಂದಾಕೆ ಕೇಳಿದರು.”ಅಗತ್ಯವಾಗಿ ಆಗಬಹುದು. ಹೇಳಿ..ಏನು ವಿಷಯ?” ಎಂದು ನಾನು ಕೇಳಿದೆ. “ಇಲ್ಲಿ ಮಾತಾಡೋದು ಕಷ್ಟವಾಗಬಹುದು..ಬರೋರು ಹೋಗೋರು ಇರ್ತಾರೆ..ಹೊರಗಡೆ ಎಲ್ಲಾದ್ರೂ ಕಾಫಿ ಕುಡೀತಾ ಮಾತಾಡಬಹುದೇ? ನಿಮಗೆ ತೊಂದರೆಯಾಗದಿದ್ದರೆ..” ಎಂದಾಕೆ ನಮ್ರವಾಗಿ ನುಡಿದರು.”ಆಗಲಿ..ನಡೀರಿ” ಎನ್ನುತ್ತಾ ನಾನು ಮೇಲೆದ್ದೆ. ಅವರ ಪೀಠಿಕೆಯ ಮಾತುಗಳಿಂದಲೇ ‘ಇದು ನನ್ನ ಮದುವೆಗೆ ಸಂಬಂಧಪಟ್ಟ ವಿಷಯ’ ಅನ್ನುವುದು ನನಗೆ ಖಾತ್ರಿಯಾಗಿತ್ತು.

ನನ್ನ ಊಹೆಯೇನೂ ಸುಳ್ಳಾಗಲಿಲ್ಲ! ಅವರ ಜೀವದ ಗೆಳತಿ ರಂಜನಿಯ ಮದುವೆಯ ಪ್ರಸ್ತಾಪಕ್ಕಾಗಿ ಸುಮಿತ್ರಾ ಅವರು ನನ್ನ ಬಳಿ ಬಂದಿರುವುದು ಎಂದು ಪ್ರಾರಂಭದಲ್ಲೇ ಅವರು ಸ್ಪಷ್ಟ ಪಡಿಸಿಬಿಟ್ಟರು.ನಮ್ಮ ಕೇಂದ್ರದ ಬಳಿಯಲ್ಲೇ ಇದ್ದ ಶ್ಯಾಂಪ್ರಕಾಶ್ ಹೋಟಲ್ ನಲ್ಲಿ ಕಾಫಿ ಹೀರುತ್ತಾ ನಮ್ಮ ಮಾತುಕತೆ ಪ್ರಾರಂಭವಾಯಿತು.ನಾನು ಸಕ್ಕರೆ ಇಲ್ಲದ ಕಾಫಿ ತರಲು ಹೇಳಿದ್ದು ಕೇಳಿ ‘ಯಾಕೆ ಶುಗರ್ ಲೆಸ್?’ ಎಂದು ಕೇಳಿದರು ಸುಮಿತ್ರಾ.ಡಯಟ್ ಗಾಗಿ ಅಷ್ಟೇ ಎಂದು ನುಡಿದು ಅವರ ಅನುಮಾನ ಪರಿಹರಿಸಿದೆ! ‘ಸಕ್ಕರೆ ಕಾಫೀನೇ ಕುಡಿಯೋಲ್ಲ ಕಣೇ ಆ ಹುಡುಗ! ಅಂದಮೇಲೆ ಬೇರೆ ಯಾವ ಹವ್ಯಾಸಗಳೂ ಇರೋದು ಸಾಧ್ಯಾನೇ ಇಲ್ಲ ಬಿಡು’ ಎಂಬಂತಹ ‘ಸುಳ್ಳುಮಾಹಿತಿ’ಯನ್ನು ಸುಮಿತ್ರಾ ಅವರು ರಂಜನಿಗೆ ನೀಡಿದ್ದರೆಂಬುದು ಆನಂತರದ ದಿನಗಳಲ್ಲಿ ನನಗೆ ತಿಳಿದುಬಂದ ಸುದ್ದಿ! ಇರಲಿ.

ಅಂದಿನ ನಮ್ಮ ಮಾತುಕತೆಯ ಪ್ರಮುಖ ಸಾರಾಂಶವಿಷ್ಟು: ಸುಮಿತ್ರಾ ಅವರೂ ಕೂಡಾ ಕನ್ನಡ ಎಂ ಎ ಪದವೀಧರೆ. ಅವರ ಸಹಪಾಠಿಯಾಗಿದ್ದ ರಂಜನಿಗೆ ಸೂಕ್ತ ಸಂಗಾತಿಯ ಅನ್ವೇಷಣೆಯಲ್ಲಿದ್ದಾರೆ.ನೋಡಲೂ ಚಂದವಿರುವ ರಂಜನಿ ತುಂಬಾ ಜಾಣೆ;ಕವಿತೆ—ಲೇಖನಗಳನ್ನು ಬರೆಯುತ್ತಾಳೆ;ಶಾಲಾ ಕಾಲೇಜು ನಾಟಕಗಳಲ್ಲೂ ಅಭಿನಯಿಸಿದ್ದಾಳೆ; ಸಂಗೀತದಲ್ಲಿ ತುಂಬಾ ಆಸಕ್ತಿ;ಕೆಲ ವರ್ಷಗಳಿಂದ ವೀಣೆ ನುಡಿಸುವುದನ್ನು ಕಲಿಯುತ್ತಿದ್ದಾಳೆ.

ಇಷ್ಟೆಲ್ಲಾ ವಿವರಗಳನ್ನು ನೀಡಿದ ಸುಮಿತ್ರಾ ಅವರು,”ನಿಮ್ಮ ಮನೆಯಲ್ಲೂ ನಿಮ್ಮ ಮದುವೆಯ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿತು..ರಂಜನಿ ನಿಮಗೆ ಒಳ್ಳೆಯ ಜೋಡಿಯಾಗಬಹುದು ಅನ್ನಿಸಿತು.ಹಾಗಾಗಿ ನನ್ನ ಗೆಳತಿಯ ಪರವಾಗಿ ಮಾತಾಡಲು ನಾನೇ ಖುದ್ದಾಗಿ ಬಂದುಬಿಟ್ಟೆ. ಅನ್ಯಥಾ ಭಾವಿಸಬೇಡಿ” ಎಂದರು.”ಖಂಡಿತ ಇಲ್ಲ ಸುಮಿತ್ರಾ ಅವರೇ..ಅವರ ಮನೆಯವರಿಗೆ ನಮ್ಮ ಮನೆಯವರನ್ನು ಸಂಪರ್ಕಿಸಲು ಹೇಳಿ..ಹಿರಿಯರ ನಡುವೆ ಮೊದಲ ಸುತ್ತಿನ ಮಾತುಕತೆಯಾಗಲಿ” ಎಂದು ನಾನು ಹೇಳಿ ನಮ್ಮ ಮನೆಯ ವಿಳಾಸವನ್ನು ಅವರಿಗೆ ನೀಡಿ ಅವರನ್ನು ಬೀಳ್ಕೊಟ್ಟೆ.

ಈ ಪ್ರಸ್ತಾವನೆಯ ನಂತರ ರಂಜನಿಯ ತಂದೆಯವರಾದ ಸುಂದರಂ ಅಯ್ಯರ್ ಅವರೂ ಅವರ ಕಿರಿಯ ಮಗಳು ಪದ್ಮಿನಿಯೂ ಭೈರಸಂದ್ರದ ನಮ್ಮ ಮನೆಗೆ ಹೋಗಿದ್ದರಂತೆ.ಅವರು ಹೋದ ವೇಳೆಯಲ್ಲಿ ಅಮ್ಮ ಮನೆಯಲ್ಲಿರಲಿಲ್ಲ.ಅಣ್ಣ ಒಬ್ಬರೇ ಇದ್ದರು.ಪರಸ್ಪರ ಪರಿಚಯದ ನಂತರ ಇಬ್ಬರೂ ಹಿರಿಯರು ಮನೆ—ಮನೆತನಗಳ ಕುರಿತಾಗಿ ಒಂದಷ್ಟು ಮಾತುಕತೆ ನಡೆಸಿದ್ದಾರೆ.ಅಣ್ಣ ಕಾಯಿಸಿಕೊಟ್ಟ ಹಾಲು ಕುಡಿದು ಅಲ್ಲಿಂದ ಹೊರಟ ಸುಂದರಂ ಅವರಿಗೆ ಈ ಸಂಬಂಧ ಆಗಬಹುದು ಅನ್ನಿಸಿದೆ.’ನಾಟಕ—ಸಿನೆಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹುಡುಗ; ಗುಣ ಸ್ವಭಾವ—ಹವ್ಯಾಸಗಳು ಹೇಗೋ ಏನೋ..’ ಎಂಬಂತಹ ಅಡ್ಡ ಮಾತುಗಳು ಅವರ ಕಿವಿಗೂ ಬಿದ್ದಿದ್ದು,ನಮ್ಮ ಮನೆಯ ವಾತಾವರಣವನ್ನು ನೋಡಿದ ಮೇಲೆ ಹಾಗೂ ಅಣ್ಣನೊಡನೆ ಮಾತಾಡಿದ ಮೇಲೆ ಅವರ ಅನುಮಾನಗಳು ಪರಿಹಾರವಾಗಿರಲಿಕ್ಕೂ ಸಾಕು! ಒಟ್ಟಿನಲ್ಲಿ ಮೊದಲ ಹಂತದ ಕುಟುಂಬದ ಮಾತುಕತೆ ಯಶಸ್ವಿಯಾಗಿ,ಫಲಪ್ರದವಾಗಿ ನೆರವೇರಿ ಮುಂದಿನ ತೀರ್ಮಾನಕ್ಕಾಗಿ ‘ಚೆಂಡು ನನ್ನ ಅಂಗಳ’ಕ್ಕೆ ರವಾನೆಯಾಯಿತು!

ಮನೆಯಲ್ಲಿ ‘ಉಪ್ಪಿಟ್ಟು—ಕೇಸರಿಬಾತ್ ಗಳ ಸಾಂಪ್ರದಾಯಿಕ ಹೆಣ್ಣು ನೋಡುವ ಕಾರ್ಯಕ್ರಮ’ ಖಂಡಿತವಾಗಿ ಬೇಡವೆಂದು ನಿರಾಕರಿಸಿದ ನಾನು ಒಂದು ದಿನ ದೂರದರ್ಶನಕ್ಕೇ ಬಂದು ನನ್ನನ್ನು ಭೇಟಿಯಾಗುವಂತೆ ರಂಜನಿಗೆ ಸಂದೇಶ ಕಳಿಸಿದೆ. ಅಂತೆಯೇ ಒಂದು ಬೆಳಿಗ್ಗೆ ಸೋದರಿ ಪದ್ಮಿನಿಯೊಂದಿಗೆ ದೂರದರ್ಶನ ಕೇಂದ್ರಕ್ಕೆ ರಂಜನಿಯ ಆಗಮನವಾಯಿತು.ಬೆಳಿಗ್ಗೆ ಹನ್ನೊಂದರ ಸುಮಾರಿಗೆ 20ನೇ ಮಹಡಿಯ ನಮ್ಮ ಕೇಂದ್ರಕ್ಕೆ ಬಂದ ಸೋದರಿಯರನ್ನು ‘ಬನ್ನಿ,ಕಾಫಿ ಕುಡಿಯುತ್ತಾ ಮಾತಾಡೋಣ’ ಎಂದು ಲಿಫ್ಟ್ ನಲ್ಲಿ ಕೆಳಗೆ ಕರೆದುಕೊಂಡು ಹೊರಟೆ. ರಂಜನಿ ತೆಳು ನೀಲಿ ಬಣ್ಣದ ಸೀರೆ ಉಟ್ಟಿದ್ದಳು.ಒಂದು ದಿನ ರಂಜನಿ ಡಬ್ಬಲ್ ರೋಡ್ ನಲ್ಲಿರುವ ಸುಮಿತ್ರಾ ಅವರ ಮನೆಯ ಮುಂದೆ ಹೊರಭಾಗದಲ್ಲಿ ಮಾತಾಡುತ್ತಾ ನಿಂತಿದ್ದಾಗ ಆ ಮಾರ್ಗವಾಗಿ ಬೈಕ್ ನಲ್ಲಿ ಹಾದುಹೋದ ನಾನು ತೊಟ್ಟಿದ್ದುದು ನೀಲಿ ಬಣ್ಣದ ಷರ್ಟ್ ಅಂತೆ; ನೀಲಿ ನನ್ನ ಪ್ರಿಯ ಬಣ್ಣವಿರಬಹುದು ಎಂಬ ಊಹೆಯ ಮೇರೆಗೆ ಅಂದು ನೀಲಿ ಬಣ್ಣದ ಸೀರೆ ಉಟ್ಟು ಬಂದಿದ್ದಳೆಂಬುದು ಆನಂತರ ತಿಳಿದು ಬಂದ ಸುದ್ದಿ! ಲಿಫ್ಟ್ ನಲ್ಲಿ ನನ್ನ ಮೊದಲ ಪ್ರಶ್ನೆ: ‘ಎಂ ಎ ಮುಗಿಸಿದ್ದು ಯಾವ ವರ್ಷ?’ ರಂಜನಿ ಬಾಯಿ ತೆರೆಯುವ ಮುನ್ನವೇ ಪದ್ಮಿನಿಯ ಉತ್ತರ ನುಗ್ಗಿ ಬಂತು:’1983′. ಮುಂದಿನ ನನ್ನ ಮತ್ತೊಂದೆರಡು ಪ್ರಶ್ನೆಗಳಿಗೂ ರಂಜನಿ ಬಾಯಿತೆರೆಯಬೇಕೆನ್ನುವಷ್ಟರಲ್ಲಿ ಪದ್ಮಿನಿಯದೇ ಉತ್ತರ ಧುಮುಕುತ್ತಿತ್ತು!ಅರೆ! ಇದೇನಿದು? ರಂಜನಿಗೇನು ಮಾತು ಬಾರದೇ? ಎಲ್ಲ ಪ್ರಶ್ನೆಗಳಿಗೂ ಪದ್ಮಿನಿಯೇ ಉತ್ತರಿಸುತ್ತಿದ್ದಾರಲ್ಲಾ! ನನ್ನ ಸಂಶಯಾಸ್ಪದ ನೋಟಕ್ಕೆ ಮತ್ತೆ ಪದ್ಮಿನಿಯ ಉತ್ತರ ಸಿದ್ಧವಾಗಿತ್ತು:”ಹಿಂದಿನ ದಿನದಿಂದ ರಂಜನಿಯ ಗಂಟಲು ಕಟ್ಟಿಕೊಂಡುಬಿಟ್ಟಿದೆ! ಸ್ವರವೇ ಹೊರಡುತ್ತಿಲ್ಲ!” ಓಹೋ!ಹಾಗಾಗಿಯೇ,ರಂಜನಿಯ ‘ಮುಖವಾಣಿ’ಯಾಗಿಯೇ ಪದ್ಮಿನಿ ಬಂದಿರುವುದು! “ಹಾಗಿದ್ದರೆ ಎರಡು ದಿನ ಬಿಟ್ಟು ಗಂಟಲು ಬಿಟ್ಟಮೇಲೇ ಭೇಟಿಯಾಗಬಹುದಿತ್ತಲ್ಲಾ!” ಎಂದು ನಾನಂದರೆ ಮತ್ತೆ ಪದ್ಮಿನಿಯ ಜವಾಬು:”ಖಂಡಿತ! ಎರಡು ದಿನ ಬಿಟ್ಟು ಮತ್ತೆ ಬರ್ತಾಳೆ ಬೇಕಾದ್ರೆ!” ನಸುನಗುತ್ತಾ ಅವರನ್ನು ಶ್ಯಾಂ ಪ್ರಕಾಶ್ ಹೋಟಲ್ ಗೆ ಕರೆದುಕೊಂಡು ಹೋಗಿ ಕಾಫಿ ಆರ್ಡರ್ ಮಾಡಿದೆ. ನನಗೆ ಯಥಾಪ್ರಕಾರ ಶುಗರ್ ಲೆಸ್! ನಾನು ಹಾಗೆ ಹೇಳಿ ಕಳಿಸುತ್ತಿದ್ದಂತೆ ಒಮ್ಮೆ ಅಕ್ಕ ತಂಗಿಯರು ಮುಖ ಮುಖ ನೋಡಿಕೊಂಡದ್ದು ಯಾಕೆಂದು ಆಗ ನನಗೆ ಅರ್ಥವಾಗಿರಲಿಲ್ಲ! ಸುಮಿತ್ರಾ ಅವರ ‘ಹವ್ಯಾಸ ವ್ಯಾಖ್ಯಾನ’ ನನಗೆ ಗೊತ್ತಾದದ್ದು ಆನಂತರವೇ ಅಲ್ಲವೇ! ಆನಂತರದಲ್ಲಿ ತಿಳಿದು ಬಂದ ಮತ್ತೂ ಒಂದು ಸಂಗತಿಯೆಂದರೆ ಗಂಟಲು ಬಿಡಲು ರಂಜನಿ ಅಂದು ಮಾಡದೇ ಇದ್ದ ವೈದ್ಯವೇ ಇಲ್ಲವಂತೆ! ಯಾರೋ ಹೇಳಿದರೆಂದು ಈರುಳ್ಳಿಯನ್ನು ಜಜ್ಜಿ ರಸ ತೆಗೆದು ಕುಡಿದರೂ ಹಾಳಾದ ಗಂಟಲು ಬಿಡಲಿಲ್ಲವಂತೆ! ಹಿಂದೆ ಉಡುಪಿಯಲ್ಲಿ ಹ್ಯಾಮ್ಲೆಟ್ ನಾಟಕ ಪ್ರದರ್ಶನದ ಸಮಯದಲ್ಲಿ ನನ್ನ ಗಂಟಲು ಹೂತಿದ್ದಾಗ ಮಂಗಳೂರಿನ ಎಸ್ ಕೆ ಶ್ರೀಧರ ತನ್ನ ‘ಭಯಾನಕ’ ಔಷಧಿಯ ನೆರವಿನಿಂದ ನನ್ನ ಗಂಟಲು ಸರಿಪಡಿಸಿದ ಪ್ರಸಂಗದ ನೆನಪೂ ಆ ವೇಳೆಯಲ್ಲಿ ನನ್ನ ಮನದಂಗಳದಲ್ಲಿ ಮೂಡಿಬಂದಿತ್ತು!
ಒಟ್ಟಿನಲ್ಲಿ ಶ್ಯಾಂ ಪ್ರಕಾಶ್ ಹೋಟಲ್ ನಲ್ಲಿ ನಡೆದ ಈ ‘ತ್ರಿಮುಖೀ ಸಂಭಾಷಣೆ’ ರಂಜನಿಯೊಂದಿಗಿನ ನನ್ನ ಪ್ರಪ್ರಥಮ ಭೇಟಿಯ ವಿಶೇಷತೆ!

ಇದಾದ ನಂತರ ಕೆಲದಿನಗಳು ನಾನು ಮದುವೆಯ ವಿಷಯವಾಗಿ ಏನೂ ಮಾತಾಡದೇ ಸುಮ್ಮನಾಗಿಬಿಟ್ಟೆ.ಒಳಗೊಳಗೇ ಇದ್ದಕ್ಕಿದ್ದಂತೆ ಮತ್ತೆ ಶುರುವಾದ ‘ಸಂಸಾರ—ಜವಾಬ್ದಾರಿ’ಗಳ ಕುರಿತಾದ ಭಯವೂ ಈ ಮೌನ—ಹಿಂಜರಿಕೆಗೆ ಪ್ರಮುಖ ಕಾರಣವಾಗಿತ್ತು.ಒಂದು ದಿನ ಆಫೀಸ್ ನಿಂದ ಮನೆಗೆ ಬರುವ ವೇಳೆಗೆ ರಂಜನಿಯಿಂದ ಬಂದಿದ್ದ ಒಂದು ಪತ್ರ ನನ್ನ ಹಾದಿ ಕಾಯುತ್ತಿತ್ತು! ಅತ್ಯಂತ ಸರಳವಾಗಿ, ನೇರವಾಗಿ ತನ್ನ ಮನದ ಮಾತುಗಳನ್ನು ಬರೆದಿದ್ದಳು: “ನಿಮಗೆ ನಿರ್ಧಾರ ತೆಗೆದುಕೊಳ್ಳಲು ಇನ್ನಷ್ಟು ಸಮಯದ ಅಗತ್ಯವಿರಬಹುದು… ನನಗೆ ಅರ್ಥವಾಗುತ್ತದೆ.ನೀವು ನನಗೆ ಒಪ್ಪಿಗೆಯಾಗಿದ್ದೀರಿ.ಮನೆಯಲ್ಲಿ ಎಲ್ಲರೂ ನಿಮ್ಮ ಉತ್ತರವನ್ನೇ ಎದುರು ನೋಡುತ್ತಿದ್ದಾರೆ. ನಿಮ್ಮ ನಿರ್ಧಾರ ತಿಳಿದ ನಂತರ ಬೇರೆ ಸಂಬಂಧಗಳ ಕಡೆಗೆ ಗಮನ ಹರಿಸುವ ಆಲೋಚನೆಯಿದೆ ಅವರಿಗೆ.ಆದಷ್ಟು ಬೇಗ ನಿಮ್ಮಅಭಿಪ್ರಾಯ ತಿಳಿಸಬಹುದೇ? ನಿರೀಕ್ಷೆಯಲ್ಲಿ…”
ರಂಜನಿಯ ನೇರ ಮಾತು ಮನಸ್ಸಿಗೆ ಮುಟ್ಟಿತು.ಮನೆಯವರೆಲ್ಲರೂ ಒಮ್ಮೆ ನೋಡಿದ ಮೇಲೆ ಒಪ್ಪಿಗೆಯನ್ನು ತಿಳಿಸೋಣವೆಂದು ನಿರ್ಧರಿಸಿ ‘ಒಮ್ಮೆ ಜಯನಗರದಲ್ಲಿರುವ ಅಕ್ಕನ ಮನೆಗೆ ಬರಲು ಸಾಧ್ಯವೇ’ ಎಂದು ಸಂದೇಶ ಕಳಿಸಿದೆ. ಹಾಗೆಯೇ ಒಂದು ದಿನ ಸಂಜೆಯ ವೇಳೆಗೆ ಜಯನಗರದ ಅಕ್ಕನ ಮನೆಗೆ ರಂಜನಿ ಒಬ್ಬಳೇ ಬಂದಳು. ಗಂಟಲು ಸರಿಯಿದ್ದುದರಿಂದ ಅಂದು ದುಬಾಷಿಯ ಅಗತ್ಯವಿರಲಿಲ್ಲ ಅವಳಿಗೆ! ಬಸ್ ಸ್ಟಾಂಡ್ ಗೆ ಬಂದಿಳಿದವಳನ್ನು ನಾಗರಾಜ ಭಾವ ತಮ್ಮ ಸ್ಕೂಟರ್ ನಲ್ಲಿ ಮನೆಗೆ ಕರೆದುಕೊಂಡು ಬಂದರು.ಅಣ್ಣ—ಅಮ್ಮ—ಅಕ್ಕಂದಿರು—ಭಾವಂದಿರೊಂದಿಗೆ ನಗುನಗುತ್ತಾ ಸರಳವಾಗಿ—ಹಿತವಾಗಿ ಮಾತಾಡಿದ ರಂಜನಿ ಎಲ್ಲರ ಮನಸ್ಸಿಗೂ ಹಿಡಿಸಿದಳು.’ಕಣ್ಣು—ನಗು ತುಂಬಾ ಚಂದ’ ಎಂದು ನಳಿನಿ ಅಕ್ಕ ಮೆಚ್ಚಿ ನುಡಿದರೆ ‘ದಟ್ಟವಾದ ಕೂದಲು..ಉದ್ದ ಜಡೆ..ಹಸನ್ಮುಖಿ..ತುಂಬಾ ಲಕ್ಷಣದ ಹುಡುಗಿ’ ಎಂದು ವಿಜಯಕ್ಕ ಶಭಾಷ್ ಗಿರಿ ನೀಡಿದಳು.ನನ್ನ ಅಂತರಂಗದ ಮಿತ್ರ ಗೋಪಿಯೂ ಆ ಸಮಯದಲ್ಲಿ ಹಾಜರಿದ್ದು ನೂರಕ್ಕೆ ನೂರು ಅಂಕ ಕೊಟ್ಟು ರಂಜನಿಯನ್ನು ನನಗೆ ಸೂಕ್ತ ಜೋಡಿ ಎಂದು ಘೋಷಿಸಿಬಿಟ್ಟ! ಅಣ್ಣಯ್ಯ—ಅತ್ತಿಗೆ ಬಿಳಿಛೋಡಿನಲ್ಲಿದ್ದುದರಿಂದ ಈ ಸಂದರ್ಭದಲ್ಲಿ ಅವರು ನಮ್ಮೊಂದಿಗೆ ಇರಲಾಗಲಿಲ್ಲ.ವಾಸ್ತವವಾಗಿ ನಾಗರಾಜ ಭಾವ ಸ್ಕೂಟರ್ ನಲ್ಲಿ ಮನೆಗೆ ಕರೆದುಕೊಂಡು ಬರುವಾಗಲೇ,”ಏನೂ ಆತಂಕ ಪಟ್ಟುಕೋಬೇಡ ಪುಟ್ಟಾ..ನಮ್ಮ ಮನೆಗೆ ಕರಕೊಂಡು ಹೋಗ್ತಿದೀವಿ ಅಂದರೆ ಮನೆ ತುಂಬಿಸಿಕೋತೀವಿ ಅಂತಲೇ ಅರ್ಥ..ಸುಮ್ಮಸುಮ್ಮನೆ ಹೆಣ್ಣುಮಕ್ಕಳನ್ನ ಹಾಗೆಲ್ಲಾ ಮನೆಗೆ ಕರಕೊಂಡು ಹೋಗೊಲ್ಲ” ಎಂದು ಭರವಸೆಯ ಮಾತಾಡಿ ರಂಜನಿಗೆ ಧೈರ್ಯ ತುಂಬಿದ್ದರಂತೆ!

ಇಷ್ಟಾದ ಮೇಲೆ ನನಗೆ ಇದ್ದಕ್ಕಿದ್ದ ಹಾಗೆ ನೆನಪು ಬಂದು ಕಾಡಿದ ಸಂಗತಿಯೆಂದರೆ ನಾನು ರಂಜನಿಯ ಜೊತೆ ಒಂದು ಬಾರಿಯೂ ಮುಖಾಮುಖಿ ಕುಳಿತು ಮಾತುಕತೆಯನ್ನೇ ಆಡಿಲ್ಲ! ಅವಳ ಇಷ್ಟಾನಿಷ್ಟಗಳನ್ನು,ಆಸೆ ಆಕಾಂಕ್ಷೆ ಕನಸುಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲವಷ್ಟೇ ಅಲ್ಲ.. ನನ್ನ ಬಗ್ಗೆಯೂ ಏನೂ ಹೇಳಿಕೊಂಡಿಲ್ಲ! ಮರುದಿನ ಸಂಜೆ ಕಲಾಕ್ಷೇತ್ರದಲ್ಲಿ ನಳಿನಿ ಅಕ್ಕ ಮುಖ್ಯ ಪಾತ್ರ ನಿರ್ವಹಿಸಿದ್ದ, ಅಶೋಕ ಬಾದರದಿನ್ನಿ ನಿರ್ದೇಶಿಸಿದ್ದ ‘ಸಿಂಗಾರೆವ್ವ ಮತ್ತು ಅರಮನೆ’ ನಾಟಕ ಪ್ರದರ್ಶನವಿತ್ತು. ನಾನು ರಂಜನಿಗೆ,’ ಕಲಾಕ್ಷೇತ್ರಕ್ಕೆ ಕೊಂಚ ಮುಂಚಿತವಾಗಿಯೇ ಬಂದರೆ ಅಲ್ಲಿಯೇ ಎಲ್ಲಾದರೂ ಕುಳಿತು ಮಾತಾಡಬಹುದು,ನಂತರ ನಾಟಕ ನೋಡಿಕೊಂಡು ಮನೆಗೆ ತೆರಳಬಹುದು’ ಎಂದು ಸೂಚಿಸಿದೆ. ಹಾಗೆ ಅಂದು ನಾವು ಕೂತು ಮಾತಾಡಿದ್ದು ಟೌನ್ ಹಾಲ್ ಬಳಿಯ ಕಾಮತ್ ಹೋಟಲಿನಲ್ಲಿ.’ಏನು ತೆಗೆದುಕೊಳ್ಳುತ್ತೀರಿ? ಕಾಫಿ? ಜ್ಯೂಸ್?’ ಎಂದು ನಾನು ಕೇಳಿದ್ದಕ್ಕೆ ಅವಳು ಪೈನಾಪಲ್ ಜ್ಯೂಸ್ ಅಂದಳು! ಅರೆ! ನನಗೆ ಪ್ರಿಯವಾದ ಹಣ್ಣೇ ಇವಳಿಗೂ ಇಷ್ಟ! ನಾನು ಎರಡು ಪೈನಾಪಲ್ ಜ್ಯೂಸ್ ತರಲು ಹೇಳಿದೆ. ನನಗೂ ಅದು ಇಷ್ಟದ ಹಣ್ಣು ಎಂಬುದು ಹೊಳೆದವಳಂತೆ ಅವಳ ಕಣ್ಣುಗಳೂ ಹೊಳೆದಂತೆ ಕಂಡವು! ರಂಜನಿ ತನ್ನ ಬಗ್ಗೆ ವಿಶೇಷವಾಗಿ ಏನನ್ನೂ ಹೇಳಿಕೊಳ್ಳಲಿಲ್ಲ.ಹೇಳಿಕೊಳ್ಳುವುದೇನು ಬಂತು,ಮಾತೇ ಆಡಲಿಲ್ಲ ಅನ್ನಬೇಕು! ನಾನೇ ನನ್ನ ಬಗ್ಗೆ,ನನ್ನ ಕೆಲಸದ ಒತ್ತಡಗಳ ಬಗ್ಗೆ, ತಡರಾತ್ರಿ ಶೂಟಿಂಗ್ ಗಳ ಬಗ್ಗೆ,ಆಗಾಗಿನ ಗೆಳೆಯರೊಂದಿಗಿನ ‘ತೀರ್ಥಯಾತ್ರೆ’ಗಳ ಬಗ್ಗೆ ಸ್ವಲ್ಪ ಹೆಚ್ಚು ಅನ್ನುವಂತೆಯೇ ಉತ್ಪ್ರೇಕ್ಷೆಯ ದನಿಯಲ್ಲಿಯೇ ಹೇಳಿದೆ! ಅದೇನೂ ಅವಳ ಮೇಲೆ ಹೆಚ್ಚಿನ ಪರಿಣಾಮ ಬೀರಿದಂತೆ ಕಾಣಲಿಲ್ಲ,ಅವಳು ಹೆದರಲೂ ಇಲ್ಲ! ಬಹುಶಃ ಏನೇ ಆದರೂ ನಿಭಾಯಿಸುತ್ತೇನೆನ್ನುವ ಆತ್ಮವಿಶ್ವಾಸ ಇದ್ದಿರಬೇಕು!

ಇಷ್ಟಾದ ಬಳಿಕ ಹುಡುಗಿ—ಹುಡುಗ ಹಾಗೂ ಎರಡೂ ಕುಟುಂಬದವರ ಒಪ್ಪಿಗೆಯ ಮುದ್ರೆ ಬಿದ್ದು ಮದುವೆಯ ಮುಂದಿನ ಕಾರ್ಯಕ್ರಮಗಳ ಸಿದ್ಧತೆ ಆರಂಭವಾಯಿತು.
ನನ್ನ ಭಾವೀ ಮಾವನವರಾದ ಸುಂದರಂ ಅವರದೂ ತುಂಬು ಕುಟುಂಬ.ಸುಂದರಂ—ಸಾವಿತ್ರಮ್ಮ ದಂಪತಿಗಳಿಗೆ ಮೂವರು ಗಂಡುಮಕ್ಕಳು—ಜಗದೀಶ್ ಬಾಬು, ರವೀಂದ್ರ ಹಾಗೂ ನಟರಾಜ್; ಮೂವರು ಹೆಣ್ಣುಮಕ್ಕಳು—ರಾಜಲಕ್ಷ್ಮಿ, ರಂಜನಿ ಹಾಗೂ ಪದ್ಮಿನಿ. ನಮ್ಮ ಭಾವೀ ಅತ್ತೆ ಸಾವಿತ್ರಮ್ಮನವರನ್ನು ಚಿಕ್ಕಂದಿನಿಂದಲೂ ಎಲ್ಲರೂ ಕರೆಯುತ್ತಿದ್ದುದು ಪೊನ್ನಮ್ಮನೆಂದು. ಅಗಲ ಕುಂಕುಮವನ್ನು ಹಣೆಯಲ್ಲಿಟ್ಟು ಹೊಳೆವ ಮೂಗುತಿ ಧರಿಸಿ ಬೆಳ್ಳಗೆ ದೈವೀಕ ಕಳೆಯಿಂದ ಬೆಳಗುತ್ತಿದ್ದ ಪೊನ್ನಮ್ಮನವರನ್ನು ನೋಡಿದರೆ ಗಾನ ಸರಸ್ವತಿ ಎಂ ಎಸ್ ಸುಬ್ಬಲಕ್ಷ್ಮಿ ಅವರನ್ನು ಕಂಡಂತೆಯೇ ಆಗುತ್ತಿತ್ತು.ಇನ್ನು ಸುಂದರಂ ಅವರದು ನಸುಗಪ್ಪು ಬಣ್ಣದ ಎತ್ತರದ ಸಪೂರ ದೇಹ ಮಾಟ. ಅವರ ಮನೆಗೆ ಮೊಟ್ಟಮೊದಲ ಬಾರಿ ಹೋದಾಗ ಒಂದು ವಿಶೇಷ ಸಂಗತಿಯನ್ನು ನಾನು ಗಮನಿಸಿದೆ: ಸುಂದರಂ ಅವರು ತಮ್ಮ ಧರ್ಮಪತ್ನಿಯನ್ನು ‘ಬನ್ನಿ’ ‘ಹೋಗಿ’ ಎಂದು ಬಹುವಚನದಲ್ಲಿಯೇ ಮಾತಾಡಿಸುತ್ತಿದ್ದರು! ಮದುವೆಯಾದ ಹೊಸತರಲ್ಲಿ ಪೊನ್ನಮ್ಮನವರು,’ಹಾಗೆ ಬಹುವಚನದಲ್ಲಿ ಕರೆಯಬೇಡಿ,ಎಲ್ಲರೆದುರು ಮುಜುಗರವಾಗುತ್ತೆ’ ಎಂದರೆ ಸುಂದರಂ ಅವರು,’ನೀವೂ ನನ್ನನ್ನು ಏಕವಚನದಲ್ಲೇ ಕರೆಯುವುದಾದರೆ ಮಾತ್ರ ನಾನೂ ನಿಮ್ಮನ್ನು ಹಾಗೇ ಕರೆಯುತ್ತೇನೆ..ಇಲ್ಲದಿದ್ದರೆ ಕಡೆಯವರೆಗೂ ಹೀಗೇ ನಾನು ನಿಮ್ಮನ್ನು ಕರೆಯುವುದು’ ಎಂದಿದ್ದರಂತೆ! ಆ ಮಾತನ್ನು ಕಡೆಯವರೆಗೂ ಅವರು ಉಳಿಸಿಕೊಂಡರು ಕೂಡಾ. ಇಂದಿನ ದಿನಮಾನದಲ್ಲಿ ಈ ಸಂಗತಿ ಅಷ್ಟು ಪ್ರಮುಖವಾದುದು ಎಂದೇನೂ ಅನ್ನಿಸದಿರಬಹುದು;ಆದರೆ ನಲವತ್ತು—ಐವತ್ತರ ದಶಕದಲ್ಲಿ ಇದೊಂದು ರೀತಿಯಲ್ಲಿ ಕ್ರಾಂತಿಕಾರಿ ನಡೆಯೇ ಆಗಿತ್ತು! ತಹಶೀಲ್ದಾರರಾಗಿ ನಿವೃತ್ತರಾಗಿದ್ದ ಸುಂದರಂ ಅವರ ನಿಸ್ಪೃಹತೆ—ಪ್ರಾಮಾಣಿಕತೆ—ಹೃದಯವಂತಿಕೆಗಳನ್ನು ಮೆಚ್ಚಿ ಕೊಂಡಾಡದವರೇ ಇಲ್ಲ ಅನ್ನಬಹುದು! ಆ ಕಾಲಕ್ಕೇ ತೀರಾ ಪ್ರಗತಿಪರ ಮನೋಧರ್ಮವನ್ನು ಹೊಂದಿದ್ದ ಸುಂದರಂ ಅವರು ಎಂದೂ ಕಂದಾಚಾರಗಳನ್ನಾಗಲೀ ಅತಿ ಧಾರ್ಮಿಕ ನಡಾವಳಿಗಳನ್ನಾಗಲೀ ಪಾಲಿಸಿದವರಲ್ಲ.ನನ್ನ ಪಾಲಿಗೆ ಅವರು ಸದಾ ಒಂದು ಅಚ್ಚರಿ!

ಅವರ ಹಿರಿಯ ಮಗ ಜಗದೀಶ ಬಾಬು ಅವರು ತಮ್ಮದೇ ಕಾರಣಗಳಿಗೆ ಮದುವೆಯಾಗದೆ ಉಳಿದು ತಂದೆಯವರೊಂದಿಗೆ ಮನೆಯ ಜವಾಬ್ದಾರಿಯನ್ನು ಹೊತ್ತು ನಡೆಸುತ್ತಿದ್ದರು.ಹಿರಿಯ ಮಗಳು ರಾಜಲಕ್ಷ್ಮಿ ಅವರ ವಿವಾಹ ಸೀತಾರಾಂ ಅವರೊಂದಿಗೆ ಆಗಿತ್ತು. ರಂಜನಿಯ ಅಣ್ಣಂದಿರಾದ ರವಿ ಹಾಗೂ ನಟರಾಜ ಅವರೂ ಸಹಾ ಗೃಹಸ್ಥಾಶ್ರಮವನ್ನು ಸ್ವೀಕರಿಸಿಯಾಗಿತ್ತು. ಇದೀಗ ಮನೆಯ ಐದನೆಯ ಮಗು ರಂಜನಿಯ ವಿವಾಹ ನನ್ನೊಂದಿಗೆ ನೆರವೇರುವುದಿತ್ತು!

ಮನೆ ಮಂದಿಯ ಮಟ್ಟಿಗೆ ಮಾತ್ರ ಎಲ್ಲರೂ ಕಲೆತು ರಂಜನಿಯ ಮನೆಯಲ್ಲಿಯೇ ಸರಳವಾಗಿ ಅಚ್ಚುಕಟ್ಟಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು.ಜುಲೈ 11ನೆಯ ತಾರೀಖು ಚಾಮರಾಜಪೇಟೆಯ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ನಮ್ಮ ಮದುವೆ ಎಂದೂ ನಿಶ್ಚಯವಾಯಿತು!

ಮುಂದಿನ ದಿನಗಳಲ್ಲಿ ರಂಜನಿ ನನ್ನೊಂದಿಗೆ ಹಂಚಿಕೊಂಡ ಒಂದೆರಡು ಸ್ವಾರಸ್ಯಕರ ಸಂಗತಿಗಳು:
ಮನೆಯಲ್ಲಿ ರಂಜನಿಯ ಮದುವೆಯ ಪ್ರಯತ್ನಗಳು ನಡೆಯುತ್ತಿದ್ದಾಗ ಬಂದಿದ್ದ ಒಂದೆರಡು ಸಂಬಂಧಗಳನ್ನು,’ಹುಡುಗ ನೋಡಲು ಸುಮಾರು’ ಎಂದು ರಂಜನಿ ನಿರಾಕರಿಸಿದ್ದಳಂತೆ. ಒಳ್ಳೆಯ ಹಾಸ್ಯಪ್ರಜ್ಞೆ ಇದ್ದ ಅವಳ ಅಣ್ಣ ರವಿ,’ರೂಪಕ್ಕಿಂತ ಗುಣ ಮುಖ್ಯ ಕಣೇ..ನೋಡೋದಕ್ಕೆ ತುಂಬಾ ಚೆನ್ನಾಗಿದ್ದು ಗುಣ ಸ್ವಭಾವಗಳೇ ಸರಿ ಇಲ್ಲದಿದ್ರೆ ಏನು ಮಾಡ್ತೀಯಾ? ಕೆಟ್ಟವನ ಜೊತೆ ಜೀವನ ಪೂರ್ತಿ ಏಗೋಕಾಗುತ್ತಾ? ರೂಪದ ವಿಷಯದಲ್ಲಿ ಒಂಚೂರು adjust ಮಾಡಿಕೊಳ್ಳೋದು ನಿನ್ನ ಭವಿಷ್ಯದ ದೃಷ್ಟಿಯಿಂದ ತುಂಬಾ ಒಳ್ಳೇದು ಅನ್ನೋದು ನನ್ನ ಪ್ರಾಮಾಣಿಕ ಅಭಿಪ್ರಾಯ’ ಎಂದು ರೇಗಿಸಿದರಂತೆ. ಅದಕ್ಕೆ ರಂಜನಿಯ ಸವಾಲಿನ ಮಾರುತ್ತರ: “ಹುಡುಗ ಒಳ್ಳೆಯವನೂ ಆಗಿರಬೇಕು,ನೋಡೋದಕ್ಕೂ ಚೆನ್ನಾಗಿರಬೇಕು. ಒಂದು ಪಕ್ಷ ಒಂಚೂರು ಕೆಟ್ಟವನು ಅಂತ ಆಮೇಲೆ ಗೊತ್ತಾದ್ರೂ ಕಷ್ಟಪಟ್ಟು ಅವನನ್ನು ತಿದ್ದಬಹುದು..ಆದರೆ ಇರೋ ರೂಪಾನ ಬದಲಾಯಿಸಿ ಚೆನ್ನಾಗಿ ಕಾಣೋ ಹಾಗೆ ಮಾಡೋಕಾಗುತ್ತಾ? ನೀನೇನೂ ತಲೆ ಕೆಡಿಸಿಕೋಬೇಡ..ನೋಡೋಕೂ ಚೆನ್ನಾಗಿರೋ ಒಳ್ಳೇ ಹುಡುಗನ್ನೇ ಆರಿಸಿಕೋತೀನಿ!”

ಮತ್ತೊಮ್ಮೆ—ಇದು ನಮ್ಮ ಮದುವೆ ನಿಶ್ಚಯವಾದ ಮೇಲೆ—ಏನೋ ಕಾರಣವಾಗಿ ಪ್ರೀತಿಯ ಗೆಳತಿ ಸುಮಿತ್ರಾ ಅವರೊಂದಿಗೆ ರಂಜನಿ ಮೈಸೂರಿಗೆ ಹೋಗಿದ್ದ ಸಂದರ್ಭ..ಆಗಷ್ಟೇ ನಾನು ಅಭಿನಯಿಸಿದ್ದ ‘accident’ ಚಿತ್ರ ಅಲ್ಲಿ ಪ್ರದರ್ಶನಕ್ಕೆ ಬಂದಿತ್ತು.ಅಂದು ಗೆಳತಿಯರಿಬ್ಬರೂ ‘accident’ ಚಿತ್ರ ನೋಡಲು ಹೊರಟಿದ್ದಾರೆ. ರಂಜನಿ ತಿಳಿ ನೇರಳೆ ಬಣ್ಣದ ಮೇಲೆ ಗುಲಾಬಿ ಹೂಗಳ ವಿನ್ಯಾಸವಿದ್ದ ಹೊಸ ಸೀರೆಯನ್ನು ಕೊಂಡು ತಂದು ಉಟ್ಟು ಸಂಭ್ರಮದಿಂದ ಸಿದ್ಧಳಾಗುತ್ತಿದ್ದಾಳೆ..ಗೆಳತಿ ಸುಮಿತ್ರಾ ಹಗುರಾಗಿ ಛೇಡಿಸುತ್ತಾರೆ: “ರಂಜೂ,ನೀನು ಯಾವುದೇ ಸೀರೆ ಉಟ್ಟು ಎಷ್ಟೇ ಮುತುವರ್ಜಿಯಾಗಿ ಅಲಂಕಾರ ಮಾಡಿಕೊಂಡು ಬಂದ್ರೂ ನೀನೇನೂ ಅವರಿಗೆ ಕಾಣೋಲ್ಲ ಕಣೇ…ನೀನು ಅವರನ್ನ ತೆರೆಯ ಮೇಲೆ ನೋಡಬಹುದು ಅಷ್ಟೇ!”

ಮದುವೆಯ ದಿನಾಂಕ ನಿಗದಿಯಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದರೂ ಕೆಲಸದ ಒತ್ತಡದಿಂದಾಗಿ ನನಗೆ ರಂಜನಿಯನ್ನು ಹೆಚ್ಚು ಬಾರಿ ಸಂಧಿಸಲಾಗಿರಲಿಲ್ಲ. ನೋಡನೋಡುತ್ತಾ ಮದುವೆ ಇನ್ನು ಹತ್ತು ದಿನಕ್ಕೆ ಅನ್ನುವಷ್ಟು ಹತ್ತಿರ ಬಂದೇಬಿಟ್ಟಿತು. ಈ ಸಮಯದಲ್ಲಿಯೇ ಕೆಲಸದ ಹೊರೆಯನ್ನು ಮತ್ತಷ್ಟು ಹೆಚ್ಚಿಸುವಂತೆ ರವಿಚಂದ್ರನ್ ಅವರ ಮುಂದಿನ ಚಿತ್ರ ‘ಸ್ವಾಭಿಮಾನ’ ದ ಡಬ್ಬಿಂಗ್ ಗೆ ಕರೆ ಬಂದುಬಿಟ್ಟಿತು! ‘ಹದಿನೈದು ದಿನಗಳ ನಂತರ ಮದುವೆಯ ಕಲಾಪಗಳೆಲ್ಲಾ ಮುಗಿದಮೇಲೆ ಡಬ್ಬಿಂಗ್ ಗೆ ಬರುತ್ತೇನೆ’ ಎಂದು ಇನ್ನಿಲ್ಲದಂತೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ‘ಬೇರೆ ಎಲ್ಲಾ ಕಲಾವಿದರ dates ಸಿಕ್ಕಿಬಿಟ್ಟಿದೆ ಸರ್.. ಜೊತೆಗೆ release date ಬೇರೆ ತೀರ್ಮಾನವಾಗಿಬಿಟ್ಟಿದೆ.ಆದಷ್ಟು ಬೇಗ ನಿಮ್ಮ ಕೆಲಸ ಮುಗಿಸಿಕೊಡ್ತೀವಿ..co operate ಮಾಡಿ” ಎಂದು ಒತ್ತಡ ಹೇರಿದ ಕಾರಣವಾಗಿ ವಿಧಿಯಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ಮನೆಯವರೆಲ್ಲರೂ ಮದುವೆಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೂ ನನಗೆ ಅವರೊಂದಿಗೆ ಕೈ ಜೋಡಿಸುವುದು ಸಾಧ್ಯವಾಗಲಿಲ್ಲ. ನನ್ನ ಸಮಸ್ಯೆಗಳ ಅರಿವಿದ್ದ ಮನೆಯವರೂ ಸಹಾ ನನ್ನನ್ನು ವಿಶೇಷವಾಗಿ ಯಾವುದಕ್ಕೂ ಕರೆಯದೆ ತಾವುಗಳೇ ಜವಳಿ—ಉಡುಗೊರೆಗಳ ಖರೀದಿ—ಆಹ್ವಾನ ಪತ್ರಿಕೆ ಇತ್ಯಾದಿ ಎಲ್ಲ ಕೆಲಸ ಕಾರ್ಯಗಳನ್ನೂ ಸಮರ್ಪಕವಾಗಿ ಮಾಡಿ ಮುಗಿಸಿದರು.

ನನ್ನ ಆತ್ಮೀಯ ಗೆಳೆಯರಿಗೆ ಹಾಗೂ ರಂಗ ಮಿತ್ರರಿಗೆ ನೀಡಲು ಒಂದು ವಿಶೇಷ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಬೇಕೆಂಬುದು ನನ್ನ ಆಸೆಯಾಗಿತ್ತು. ಈ ಕನ್ನಡದ ಆಹ್ವಾನ ಪತ್ರಿಕೆಯ ಒಕ್ಕಣೆಯನ್ನು ಸಿದ್ಧ ಪಡಿಸಿದ್ದು ನಳಿನಿ ಅಕ್ಕ. ಜಯನಗರದ ಆತ್ಮೀಯ ಗೆಳೆಯ ಮಾಧವ ಮೂರ್ತಿ ಈ ಪತ್ರಿಕೆಯನ್ನು ಸಿದ್ಧ ಪಡಿಸಿಕೊಡುವ ಹೊಣೆ ಹೊತ್ತುಕೊಂಡ. ಮಾಧುವಿನ ಆಪ್ತ ಕಲಾವಿದ ಮಿತ್ರ ವಾಸುದೇವ್ ಅವರು ಸೊಗಸಾಗಿ ವಿನ್ಯಾಸ ರೂಪಿಸಿ ಸ್ಕ್ರೀನ್ ಪ್ರಿಂಟಿಂಗ್ ಮುಖಾಂತರ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿಕೊಟ್ಟರು.ಆ ಪತ್ರಿಕೆ ತಮ್ಮ ಅವಗಾಹನೆಗಾಗಿ:

ಈ ಪತ್ರಿಕೆಯ ಮೊದಲ ಪ್ರತಿಯನ್ನು ರಂಜನಿಗೆ ಕಳಿಸಿಕೊಟ್ಟೆ. ಅವಳಿಂದ ಬಂದ ನಾಲ್ಕು ಸುಂದರ ಸಾಲುಗಳ ಉತ್ತರ ಅವಳೆಲ್ಲ ಕನಸು—ಆಸೆ—ನಿರೀಕ್ಷೆಗಳಿಗೆ ಕನ್ನಡಿ ಹಿಡಿಯುವಂತಿತ್ತು:
” ಬಾಂದಳದ ಬಾನಾಡಿ ದೊರೆಯೇ, ಸಂಸಾರದಲ್ಲಿ ಸಹಬಂದಿ ಮಾತ್ರವಲ್ಲ, ಸ್ವಚ್ಛಂದ ನೀಲಿ ಬಾಂದಳದಲ್ಲಿ ನಿನ್ನೊಂದಿಗೆ ಸಹಚರಿಯಾಗಲೂ ಕಾದಿರುವ—ನಿನ್ನವಳು!”

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: