ಶ್ರೀನಿವಾಸ ಪ್ರಭು ಅಂಕಣ: ‘ನೃತ್ಯ ಭೂಷಣ’ ಎಂಬ ಗರಿ ಮುಡಿದ ರಾಧಿಕೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. 

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು. 

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. 

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

144 

ರಾಧಿಕಾಳ ರಂಗಪ್ರವೇಶ ಸಂಭ್ರಮದಿಂದ ಜರುಗಿದ ವಿವರಗಳನ್ನು ಈಗಾಗಲೇ ಹಂಚಿಕೊಂಡಿದ್ದೇನೆ. ಆ ವೇಳೆಗೆ ರಾಧಿಕಾ ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ ಗಳನ್ನು ಯಶಸ್ವಿಯಾಗಿ ದಾಟಿ ವಿದ್ವತ್ ಪರೀಕ್ಷೆಗೆ ಸಿದ್ಧತೆ ನಡೆಸಬೇಕೆಂದು ಆಲೋಚಿಸುತ್ತಿದ್ದಳು. ಕಾರಣಾಂತರಗಳಿಂದ ಶುಭಾ ಧನಂಜಯ ಅವರ ಬಳಿ ವಿಶೇಷ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಸರಿ, ಇದುವರೆಗೆ ಅಭ್ಯಾಸ ಮಾಡಿದ್ದ ನೃತ್ಯಶೈಲಿಯಲ್ಲಿಯೇ ವಿದ್ವತ್ ಮಟ್ಟದ ತರಬೇತಿಯನ್ನು ನೀಡುವ ಗುರುಗಳ ಅನ್ವೇಷಣೆ ಆರಂಭವಾಯಿತು. ಆಗ ಮುನ್ನೆಲೆಗೆ ಬಂದ ಹೆಸರು ಪ್ರಸಿದ್ಧ ನೃತ್ಯ ಕಲಾವಿದರೂ ನಾಟ್ಯಗುರುಗಳೂ ಆದ ಕಿರಣ್ ಸುಬ್ರಹ್ಮಣ್ಯಂ ಅವರ ಹೆಸರು. ಕಿರಣ್ ಸುಬ್ರಹ್ಮಣ್ಯಂ ಹಾಗೂ ಸಂಧ್ಯಾ ಕಿರಣ್ ಅವರದು ಅನುಪಮ ನೃತ್ಯ ಜೋಡಿ. ಭರತನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಅಪೂರ್ವ ಕಲಾವಿದರು ವಿಶ್ವಾದ್ಯಂತ ಸಂಚರಿಸಿ ನೃತ್ಯ ಪ್ರದರ್ಶನಗಳನ್ನು ನೀಡಿ ರಸಿಕರ ಮನ ಸೂರೆಗೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮದೇ ‘ರಸಿಕ ಅಕಾಡಮಿ’ ಎಂಬ ನೃತ್ಯ ಶಾಲೆಯನ್ನು ಆರಂಭಿಸಿ ನೂರಾರು ನೃತ್ಯಕಲಾವಿದರನ್ನು ರೂಪಿಸಿ ಭರತನಾಟ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರನ್ನು ಸಂಪರ್ಕಿಸಿ ರಾಧಿಕಾಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡಿ ವಿದ್ವತ್ ಪರೀಕ್ಷೆಗೆ ಅಣಿಗೊಳಿಸಲು ಸಾಧ್ಯವೇ ಎಂದು ನಾನೂ ರಂಜನಿಯೂ ವಿನಂತಿಸಿಕೊಂಡಾಗ ಯಾವೊಂದು ಸಣ್ಣ ಅನುಮಾನವೂ ಇಲ್ಲದ ದೃಢ ಸ್ವರದಲ್ಲಿ, “ಖಂಡಿತ ರಾಧಿಕಾಳಿಗೆ ಮಾರ್ಗದರ್ಶನ ನೀಡುತ್ತೇನೆ ಚಿಂತೆ ಬೇಡ” ಎಂದು ಆಶ್ವಾಸನೆ ಕೊಟ್ಟೇಬಿಟ್ಟರು!

ಪ್ರಸಿದ್ಧ ನೃತ್ಯ ಕಲಾವಿದ ಕಿರಣ್ ಸುಬ್ರಹ್ಮಣ್ಯಂ

ಮರುದಿನದಿಂದಲೇ ಪ್ರಾರಂಭವಾಗಿ ಹೋಯಿತು ರಾಧಿಕಾಳ ವಿದ್ವತ್ ಶಿಕ್ಷಣ. ಚಿತ್ರಕಲಾಪರಿಷತ್ತಿನಲ್ಲಿಯೂ ಚಿತ್ರಕಲೆಯ ಕುರಿತಾದ ಅವಳ ಕಲಿಕೆ ಮುಂದುವರಿದಿತ್ತು. ಇದರ ಜತೆಗೇ ಬರವಣಿಗೆಯಲ್ಲಿಯೂ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ರಾಧಿಕಾ ಇಂಗ್ಲೀಷ್ ಭಾಷೆಯಲ್ಲಿ ಕಥೆ ಕವಿತೆಗಳನ್ನು ಬರೆಯತೊಡಗಿದ್ದಳು. ಶೈಕ್ಷಣಿಕವಾಗಿ ಇಂಗ್ಲೀಷ್ ಸಾಹಿತ್ಯವನ್ನು ಅಭ್ಯಸಿಸದಿದ್ದರೂ ಅವಳಿಗೆ ಇಂಗ್ಲೀಷ್ ಭಾಷೆಯ ಮೇಲಿದ್ದ ಹಿಡಿತ. ಅವಳ ಭಾಷಾಪ್ರೌಢಿಮೆ ಬೆರಗು ಹುಟ್ಟಿಸುವಂತಿತ್ತು. ರಾಧಿಕಾಳ ಕಲಾಜಗತ್ತಿನ ಗಂಭೀರ ಹಾಗೂ ಬದ್ಧತೆಯ ತೊಡಗುವಿಕೆ ಮತ್ತು ಅವಳ ಸಾಧನೆಗಳಿಗೆ ತೋರುಬೆರಳಾಗುವಂತಹ ಎರಡು ಪ್ರಸಂಗಗಳನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಕಿರಣ್ ಸುಬ್ರಹ್ಮಣ್ಯಂ ಹಾಗೂ ಸಂಧ್ಯಾ ಅವರ ಸಮರ್ಥ ಮಾರ್ಗದರ್ಶನದಲ್ಲಿ ವಿದ್ವತ್ ಪರೀಕ್ಷೆಯ ಘಟ್ಟವನ್ನು ಯಶಸ್ವಿಯಾಗಿ ಮುಗಿಸಿ ‘ವಿದುಷಿ’ ಪಟ್ಟವನ್ನು ಮುಡಿಗೇರಿಸಿಕೊಂಡ ರಾಧಿಕಾ ಒಂದು ಭರತನಾಟ್ಯ ಪ್ರದರ್ಶನವನ್ನು ಕಿರಣ್ ಅವರ ಮಾರ್ಗದರ್ಶನದಲ್ಲಿ ನೀಡಬಯಸಿದಳು. ಮೊದಲಿನಿಂದಲೂ ಪರಮ ಕೃಷ್ಣಭಕ್ತೆಯಾದ ರಾಧಿಕಾ ತನ್ನ ಈ ಒಂದು ನೃತ್ಯ ಪ್ರದರ್ಶನಕ್ಕೆ ಸಂಪೂರ್ಣವಾಗಿ ಕೃಷ್ಣನನ್ನು ಕುರಿತ ಕೃತಿಗಳನ್ನೇ ಆರಿಸಿಕೊಳ್ಳಲು ಆಲೋಚಿಸಿದಳು. ಈ ಸಂದರ್ಭದಲ್ಲಿ ಅಮೂಲ್ಯ ಸಲಹೆಗಳನ್ನು ನೀಡಿ ಸಹಕರಿಸಿದವರು ಶತಾವಧಾನಿ ಗಣೇಶ್ ಅವರು. ಈ ನೃತ್ಯ ಕಾರ್ಯಕ್ರಮಕ್ಕೆ ರಾಧಿಕಾ ನೀಡಿದ ಹೆಸರು “ಅಖಿಲಂ ಮಧುರಂ”. ಆ ಸಮಯದಲ್ಲಿ ಕಲಾಕ್ಷೇತ್ರ ರಿಪೇರಿಗಾಗಿ ಮುಚ್ಚಿದ್ದರಿಂದ ಎ ಡಿ ಎ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆವು. ಒಂದು ರೀತಿಯಲ್ಲಿ ಎರಡನೆಯ ರಂಗಪ್ರವೇಶದಂತೆಯೇ ಈ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದವೆಂದರೂ ಅತಿಶಯೋಕ್ತಿಯಲ್ಲ!

‘ಅಖಿಲಂ ಮಧುರಂನೃತ್ಯ ಕಾರ್ಯಕ್ರಮದ ಆಹ್ವಾನ ಪತ್ರಿಕೆ

ಇಸ್ಕಾನ್ ಸಂಸ್ಥೆಯ ಸಂಪರ್ಕಾಧಿಕಾರಿಗಳಾಗಿದ್ದ ಭರತರ್ಷಭ ದಾಸ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿಕೊಡಲು ಸಮ್ಮತಿಸಿದರು. ಮುಖ್ಯ ಅತಿಥಿಗಳಾಗಿ ನನ್ನ ಮಾನಸಗುರು ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಹಾಗೂ ಪ್ರಸಿದ್ಧ ಕಲಾವಿಮರ್ಶಕ, ಸಂಗೀತ ಕಲಾರತ್ನ ಮೈಸೂರು ವಿ. ಸುಬ್ರಹ್ಮಣ್ಯ ಅವರುಗಳನ್ನು ಆಹ್ವಾನಿಸಿದೆವು. ಅಂದು ಎ ಡಿ ಎ ರಂಗಮಂದಿರ ಬಂಧು ಮಿತ್ರರಿಂದ ರಸಿಕ ಸಹೃದಯರಿಂದ ತುಂಬಿ ತುಳುಕುತ್ತಿತ್ತು. ಗುರು ಕಿರಣ್ ಸುಬ್ರಹ್ಮಣ್ಯಂ ಅವರದೇ ನಟ್ಟುವಾಂಗ; ನಾಡಿನ ಸುಪ್ರಸಿದ್ಧ ಕಲಾವಿದರ ವಿದ್ವತ್ಪೂರ್ಣ ಪಕ್ಕವಾದ್ಯದಲ್ಲಿ ರಾಧಿಕಾ ಅದ್ಭುತ ನೃತ್ಯ ಪ್ರದರ್ಶನವನ್ನೇ ನೀಡಿದಳು. ಮುಖ್ಯ ಅತಿಥಿಗಳಿಂದ ಮೆಚ್ಚುಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿತು! ‘ಅಖಿಲಂ ಮಧುರಂ’ ರಾಧಿಕಾಳ ಕಲಾಯಾತ್ರೆಯ ಒಂದು ಪ್ರಮುಖ ಮೈಲುಗಲ್ಲಾಯಿತು. ಇದೇ ಸಂದರ್ಭದಲ್ಲಿಯೇ ರಾಧಿಕಾಳಿಗೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆಯಲಿದ್ದ ಒಂದು ಯುವ ನೃತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿತು. ಆಗ ಪರಿಚಯವಾದವರೇ ಮಹಾ ಕಲಾಪ್ರೇಮಿ ಸಹೃದಯಿ ಜಗಬಂಧು ಅವರು. ರಾಧಿಕಾ ಭುವನೇಶ್ವರದಲ್ಲಿ ನೀಡಿದ ನೃತ್ಯ ಪ್ರದರ್ಶನ ಸಹೃದಯರ ಅಪಾರ ಮೆಚ್ಚುಗೆಗೆ ಪಾತ್ರವಾದುದಷ್ಟೇ ಅಲ್ಲ, ಜಗಬಂಧು ಅವರು ರಾಧಿಕಾಳ ನೃತ್ಯದ ಅಭಿಮಾನಿಯೇ ಆಗಿಬಿಟ್ಟರು. ಇದರ ಫಲಶ್ರುತಿಯೇ ಕಟಕ್ ನಲ್ಲಿ ನಡೆಯಲಿದ್ದ ಮತ್ತೊಂದು ಕಲಾ ಮಹೋತ್ಸವದಲ್ಲಿ ನೃತ್ಯ ಪ್ರದರ್ಶನದ ಮತ್ತೊಂದು ಅವಕಾಶ!

ರಾಧಿಕಾಳ ನೃತ್ಯವನ್ನು ಭುವನೇಶ್ವರದಲ್ಲಿ ವೀಕ್ಷಿಸಿ ಅಪಾರವಾಗಿ ಮೆಚ್ಚಿಕೊಂಡಿದ್ದ ಅಲ್ಲಿನ ಮತ್ತೂ ಕೆಲ ಸಹೃದಯಿ ಸಂಘಟಕರೇ ಆಯೋಜಿಸುತ್ತಿದ್ದ ಕಟಕ್ ನೃತ್ಯೋತ್ಸವದಲ್ಲಿ ರಾಧಿಕಾಳಿಗೆ ಕೇವಲ ನೃತ್ಯ ಪ್ರದರ್ಶನದ ಅವಕಾಶವಷ್ಟೇ ಅಲ್ಲ, ಅವಳಿಗೆ ಉತ್ಕಲ್ ಯುವ ಸಾಂಸ್ಕೃತಿಕ ಸಂಘದ ವತಿಯಿಂದ “ನೃತ್ಯ ಭೂಷಣ್” ಎಂಬ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲೂ ತೀರ್ಮಾನಿಸಿಬಿಟ್ಟರು! ಈ ವೇಳೆಗಾಗಲೇ ನನ್ನ ಬಗ್ಗೆಯೂ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದ ಜಗಬಂಧು ಹಾಗೂ ಅಲ್ಲಿನ ಕಲಾಸಂಸ್ಥೆಯ ಆಧಾರಸ್ತಂಭವೇ ಆಗಿದ್ದ ಕಾರ್ತಿಕ್ ಚಂದ್ರ ರಥ್ ಎಂಬ ಕಲಾ ಪೋಷಕರು ನನ್ನನ್ನೂ ಈ ಉತ್ಸವದ ಸಂದರ್ಭದಲ್ಲಿ ಸನ್ಮಾನಿಸಲು ಆಯೋಜಿಸಿಬಿಟ್ಟರು! ಹೀಗೆ ಕಟಕ್ ನ ಕಲಾ ಮಹೋತ್ಸವದಲ್ಲಿ ರಾಧಿಕೆ ‘ನೃತ್ಯ ಭೂಷಣ್’ ಎಂಬ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿ ಸನ್ಮಾನಿತಳಾದರೆ ನಾನು “ನಾಟ್ಯ ಶಿರೋಮಣಿ” ಎಂಬ ರಂಗಭೂಮಿ ಸಂಬಂಧಿತ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸುವ ಗೌರವಕ್ಕೆ ಪಾತ್ರನಾದೆ! ಪ್ರಾಸಂಗಿಕವಾಗಿ ಹೇಳುವುದಾದರೆ ಕಮಲ್ ಹಾಸನ್ ರ ‘ಹೇರಾಮ್ ‘ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ವಸುಂಧರಾ ದಾಸ್ ಅವರು ಮುಖ್ಯ ಪಾತ್ರ ವಹಿಸಿದ್ದ ಚೆನ್ನೈನ ತಂಡದ ನಾಟಕ ಪ್ರದರ್ಶನವೂ ಅಂದು ಅಲ್ಲಿ ಆಯೋಜಿತವಾಗಿತ್ತು. ವಿಶೇಷವೆಂದರೆ ಹಲವಾರು ರಾಜ್ಯಗಳಿಂದ ಬಂದಿದ್ದ ಅನೇಕ ಶ್ರೇಷ್ಠ ಕಲಾವಿದರ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳಲು ಕಿಕ್ಕಿರಿದು ರಸಿಕರು ತುಂಬಿರುತ್ತಿದ್ದದ್ದು ಅವರ ಕಲಾಸಕ್ತಿ, ರಸಿಕತೆ, ಸಹೃದಯತೆಗಳಿಗೆ ಕನ್ನಡಿ ಹಿಡಿಯುವಂತಿತ್ತು.

‘ನೃತ್ಯ ಭೂಷಣ್’ ಪ್ರಶಸ್ತಿ ಫಲಕದ ಚಿತ್ರ

ನಾನು ಅಭಿನಯಿಸಿದ ಚಿತ್ರಗಳಲ್ಲಿ ಒಂದು ವಿಶೇಷ ಕಾರಣಕ್ಕಾಗಿ ಎರಡು ಚಿತ್ರಗಳನ್ನು ನೆನಪಿಸಿಕೊಳ್ಳಬೇಕು: ಮೋಹನ್ ಶಂಕರ್ ಅವರ ನಿರ್ದೇಶನದ ‘ನರಸಿಂಹ’ ಹಾಗೂ ಕವಿತಾ ಲಂಕೇಶ್ ಅವರ ನಿರ್ದೇಶನದ ‘ಕ್ರೇಜಿ಼ಲೋಕ’. ಎರಡೂ ಚಿತ್ರಗಳ ನಾಯಕ ನಟ ರವಿಚಂದ್ರನ್ ಅವರು. ಮೋಹನ್ ಶಂಕರ್ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ನಟನೆ, ನಿರ್ದೇಶನ, ಬರವಣಿಗೆ ಎಲ್ಲದರಲ್ಲಿಯೂ ತೊಡಗಿಕೊಂಡು ಸೈ ಅನ್ನಿಸಿಕೊಂಡ ಮೋಹನ್ ರದ್ದು ಬಹುಮುಖ ಪ್ರತಿಭೆ. ಆದರೆ ಅರ್ಹತೆಗೆ ಸಿಗಬೇಕಾದಷ್ಟು ಮನ್ನಣೆ ಅವಕಾಶಗಳು ದೊರೆಯದ ಪ್ರತಿಭಾವಂತರ ಗುಂಪಿಗೆ ಬಹುಶಃ ಮೋಹನ್ ಅವರನ್ನೂ ಸೇರಿಸಬಹುದೇನೋ! ಅವರು ‘ನರಸಿಂಹ’ ಚಿತ್ರವನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಒಮ್ಮೆ ಭೇಟಿಯಾಗಿದ್ದಾಗ, ‘ಅಣ್ಣಾ, ಸಿನೆಮಾ ಮಾಡ್ತಿದೀನಿ, ಒಂದು ಒಳ್ಳೇ ಪಾತ್ರಕ್ಕೆ ನಿಮ್ಮನ್ನ ಆಲೋಚನೆ ಮಾಡ್ತಿದೀನಿ. ಸಧ್ಯದಲ್ಲೇ ಫೋನ್ ಮಾಡ್ತೀನಿ’ ಅಂದಾಗ ಖುಷಿಯಾಗಿತ್ತು. ಕೆಲದಿನಗಳಲ್ಲೇ ರವಿಚಂದ್ರನ್ ಅವರು ‘ನರಸಿಂಹ’ ಚಿತ್ರದ ನಾಯಕರು ಎಂದು ತಿಳಿದುಬಂದಾಗ ಉತ್ಸಾಹ ಜರ್ರನೆ ಇಳಿದುಹೋಯಿತು! ಎಷ್ಟಾದರೂ ನಾನು ರವಿಚಂದ್ರನ್ ಅವರ ಹಳೆಯ ಚಿತ್ರಗಳ ‘ಧ್ವನಿ’ ಅಲ್ಲವೇ! ಆ ದಿನಗಳಲ್ಲಿಯಂತೂ ನಾನು ಚಿತ್ರಗಳಲ್ಲಿ ನಟಿಸುವಂತಿಲ್ಲ ಅನ್ನುವುದು ಒಂದು ಅಲಿಖಿತ ಒಪ್ಪಂದದಂತೆಯೇ ಆಗಿಹೋಗಿತ್ತು. ಈಗ ಅವರೇ ಅವರಿಗೆ ‘ಧ್ವನಿ’ಯಾಗುತ್ತಿದ್ದಾರೆಂಬುದೇನೋ ಸರಿಯೇ; ಆದರೂ ಅವರು ಏನನ್ನುತ್ತಾರೋ? ಬಹುಶಃ ಒಪ್ಪಲಿಕ್ಕಿಲ್ಲ ಅನ್ನುವುದು ನನ್ನ ಅನುಮಾನವಾಗಿತ್ತು.

ಮೋಹನ್ ಅವರ ಮುಂದೆ ನನ್ನ ಅನುಮಾನವನ್ನು ಹೊರಹಾಕಿ, ‘ನಾನು ಅಭಿನಯಿಸುತ್ತಿದ್ದೇನೆಂದು ರವಿಯವರಿಗೆ ಗೊತ್ತಿದೆಯೇ? ಅವರು ಒಪ್ಪಿದ್ದಾರೆಯೇ?’ ಎಂದು ಕೇಳಿದೆ. “ಅವರಿಗೆ ಗೊತ್ತಿದೆ ಅಣ್ಣಾ, ಮಾತಾಡಿದೇನೆ. ಏನೂ ತೊಂದರೆಯಿಲ್ಲ. ಒಂದು ಕಾಲದಲ್ಲಿ ಒಂದಾಗಿದ್ದ ಶರೀರ ಶಾರೀರಗಳನ್ನ ಬೇರ್ಪಡಿಸಿ ತೋರಿಸಬೇಕು ಅನ್ನೋದೇ ನನ್ನ ಮುಖ್ಯ ಉದ್ದೇಶ ಕೂಡಾ! ಪ್ರೇಕ್ಷಕರು ಯಾವ ಥರಾ ರಿಯಾಕ್ಟ್ ಮಾಡ್ತಾರೆ ಅಂತ ನೋಡೋ ಕುತೂಹಲ ನನಗೆ’ ಎಂದು ಮೋಹನ್ ನುಡಿದಾಗ ಮನಸ್ಸಿಗೆ ಎಷ್ಟೋ ಸಮಾಧಾನವಾಯಿತು. ಮೋಹನ್ ತುಂಬಾ ಶ್ರದ್ಧೆಯಿಂದ ತುಂಬಾ ಅಚ್ಚುಕಟ್ಟಾಗಿಯೇ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಆದರೂ ನಿರೀಕ್ಷಿತ ಮಟ್ಟದ ಯಶಸ್ಸು ಚಿತ್ರಕ್ಕೆ ಲಭಿಸದೇ ಹೋದದ್ದು ಖೇದದ ಸಂಗತಿ. ಆಗುವುದೇ ಹೀಗೆ! ಒಳ್ಳೆಯ ಪಾತ್ರಗಳನ್ನು ಮಾಡಿದಾಗ ಆ ಚಿತ್ರವೂ ಯಶಸ್ವಿಯಾದರೆ ಹೆಚ್ಚಿನ ಮಟ್ಟದ ಜನಪ್ರಿಯತೆ ದೊರೆತು ಹೊಸ ಅವಕಾಶಗಳ ಬಾಗಿಲೂ ತೆರೆಯುತ್ತದೆ. ಇಲ್ಲದಿದ್ದರೆ ಅಷ್ಟಕ್ಕಷ್ಟೇ! ಹತ್ತರ ಜತೆಗೆ ಹನ್ನೊಂದನೆಯದು! ಇಲ್ಲಾದದ್ದೂ ಅದೇ. ರವಿಯವರೊಂದಿಗೆ ಅವರ ಹಳೆಯ ಚಿತ್ರಗಳ ಧ್ವನಿಯಾಗಿದ್ದ ಕಲಾವಿದ ಅಭಿನಯಿಸಿದ್ದಾನೆ ಎನ್ನುವ ಸುದ್ದಿಯೂ ಸಹಾ ಯಾವ ಸದ್ದೂ ಮಾಡಲಿಲ್ಲ! ಇನ್ನು ಕವಿತಾ ಲಂಕೇಶ್ ಅವರ ‘ಕ್ರೇಜಿ಼ಲೋಕ’ ಚಿತ್ರದ್ದೂ ಹೆಚ್ಚುಕಡಿಮೆ ಇದೇ ಕಥೆ. ವಾಸ್ತವವಾಗಿ ನನ್ನ ಪಾತ್ರದ ಚಿತ್ರೀಕರಣ ಆರಂಭವಾದ ದಿನ ಮಾಡಿದ ದೃಶ್ಯ ತುಂಬಾ ಪ್ರಮುಖವಾದದ್ದಾಗಿತ್ತು. ಕಾಲೇಜಿನ ಪ್ರಿನ್ಸಿಪಾಲನ ಪಾತ್ರವನ್ನು ವಹಿಸಿದ್ದ ನಾನು ರವಿಚಂದ್ರನ್ ಅವರನ್ನು ಹೀನಾಯವಾಗಿ ಕಾಣುವ, ಮೂದಲಿಸುವ ದೃಶ್ಯವಾಗಿತ್ತು ಅದು.

ನಾಟ್ಯ ಶಿರೋಮಣಿ’ ಪ್ರಶಸ್ತಿ ಫಲಕದ ಚಿತ್ರ

ನನ್ನದು ಚಿತ್ರದಲ್ಲಿ ತೀರಾ ಪ್ರಮುಖವಾದ ಪಾತ್ರವೆಂಬ ಭ್ರಮೆ ಹುಟ್ಟಿಸುವಂತೆ ಆ ದೃಶ್ಯ ರೂಪಿತವಾಗಿತ್ತು. ಆದರೆ ಅದೇಕೋ ಮುಂದೆ ಹೆಚ್ಚಿನ ಯಾವ ವಿಶೇಷ ಬೆಳವಣಿಗೆಯನ್ನೂ ಕಾಣದೆ ನನ್ನ ಪಾತ್ರ ಠುಸ್ಸೆಂದು ನೆಲಕಚ್ಚಿ ತುಂಬಾ ನಿರಾಸೆಯಾಗಿಹೋಯಿತು! ಇಂಥ ಪ್ರಸಂಗಗಳು ಪದೇ ಪದೇ ಆದಮೇಲೆಯೇ ನಾನು ಪಾತ್ರಸಂಬಂಧಿ ನಿರೀಕ್ಷೆಗಳನ್ನಿಟ್ಟುಕೊಳ್ಳುವುದನ್ನೇ ತ್ಯಜಿಸಿಬಿಟ್ಟದ್ದು! ನಿರೀಕ್ಷೆ ಇದ್ದರೆ ತಾನೇ ನಿರಾಸೆಗೆ ಅವಕಾಶ ಒದಗಿಬರುವುದು! ಕ್ರೇಜಿ಼ಲೋಕ ಚಿತ್ರವೂ ಸಹಾ ದೊಡ್ಡ ಯಶಸ್ಸನ್ನು ಗಳಿಸಿದ ಚಿತ್ರಗಳ ಸಾಲಿಗೆ ಸೇರಲಿಲ್ಲ. ಅದೊಂದು ಕಾಲಘಟ್ಟ. ಒಂದಷ್ಟು ಆತಂಕ ತಲ್ಲಣಗಳನ್ನು ಅನುಭವಿಸಿದ ಘಟ್ಟ. ನನ್ನ ವೃತ್ತಿ ಜೀವನದಲ್ಲಿ ಹಿನ್ನಡೆ; ಆರ್ಥಿಕ ಸಮಸ್ಯೆಗಳು; ಆರೋಗ್ಯದಲ್ಲಾದ ಏರುಪೇರು. ಎಲ್ಲವೂ ಸೇರಿ ನನ್ನನ್ನು ಕೊಂಚ ವಿಚಲಿತಗೊಳಿಸಿಬಿಟ್ಟವು. ಮನೆಯಲ್ಲಿಯೂ ಯಾಕೋ ಎಲ್ಲವೂ ಸರಿ ಇದೆ ಅನ್ನಿಸುತ್ತಿರಲಿಲ್ಲ. ಆ ದಿನಗಳಲ್ಲೇ ಆ ಒಂದು ಘಟನೆ ನಡೆದು ನನ್ನನ್ನು ಮತ್ತಷ್ಟು ಚಿಂತೆಗೆ ದೂಡಿದ್ದು. ಒಂದು ದಿನ ಬೆಳಿಗ್ಗೆ ಸುಮಾರು ಆರು ಗಂಟೆಯ ಸಮಯ. ಎಂದಿನಂತೆ ನನ್ನ ತಿಂಡಿ ಅಡುಗೆಗಳ ತಯಾರಿ ನಡೆದಿತ್ತು. ಯಾರೋ ಬಾಗಿಲು ಬಡಿದಂತಾಯಿತು. ಇಷ್ಟು ಬೆಳಿಗ್ಗೆ ಯಾರು ಬಂದರಪ್ಪಾ ಎಂದುಕೊಂಡು ಬಾಗಿಲು ತೆರೆದರೆ ಪಂಚೆ ಅರೆತೋಳಿನ ಜುಬ್ಬಾ ಧರಿಸಿದ್ದ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ನನ್ನನ್ನು ದೂಡಿಕೊಂಡೇ ಸೀದಾ ಒಳ ಬಂದು ಹಾಲ್ ನಲ್ಲಿದ್ದ ಸೋಫಾ ಮೇಲೆ ಕುಳಿತೇಬಿಟ್ಟರು.

‘ಯಾರು ಸ್ವಾಮೀ ನೀವು? ಯಾರು ಬೇಕಾಗಿತ್ತು ನಿಮಗೆ?” ಎನ್ನುತ್ತಾ ನಾನೂ ಅವರ ಹಿಂದೆಯೇ ಹೋದೆ. ಇದ್ದಕ್ಕಿದ್ದಂತೆ ಆ ವ್ಯಕ್ತಿ ತಮ್ಮ ಜುಬ್ಬಾವನ್ನು ಮೇಲೆತ್ತಿ “ಇಲ್ನೋಡಿ..” ಎಂದರು. ನೋಡುತ್ತಿದ್ದಂತೆ ನನಗೆ ಬವಳಿ ಬಂದಂತಾಯಿತು. ಹೊಟ್ಟೆಯ ಎಡಭಾಗದಲ್ಲಿ ಮೇಲಿಂದ ಕೆಳಕ್ಕೆ ದೊಡ್ಡ ಗಾಯ. ಬಹುಶಃ ಶಸ್ತ್ರ ಚಿಕಿತ್ಸೆಯಾದ ನಂತರ ಆಗುವಂತಹ ಗಾಯದ ಗುರುತು. ನಿಜಕ್ಕೂ ಭಯ ಹುಟ್ಟಿಸುವಂತಿತ್ತು. “ದಯವಿಟ್ಟು ಜುಬ್ಬಾ ಕೆಳಗಿಳಿಸಿ ಸ್ವಾಮೀ. ನೋಡೋಕಾಗೋಲ್ಲ ನನ್ನ ಕೈಲಿ” ಎಂದು ನಾನು ಅಕ್ಷರಶಃ ಚೀರಿದೆ. ನಿಧಾನವಾಗಿ ಜುಬ್ಬಾ ಕೆಳಗಿಳಿಸಿದ ವ್ಯಕ್ತಿ ಅಷ್ಟೇ ನಿಧಾನವಾಗಿ ಮಾತಾಡತೊಡಗಿದರು: “ಆಪರೇಷನ್ ಆಗಿದೆ 25 ಹೊಲಿಗೆ ಹಾಕಿದಾರೆ. ನಾನು ಶೃಂಗೇರಿಗೆ ಹೋಗಬೇಕು. ಕೈಯಲ್ಲಿ ದುಡ್ಡಿಲ್ಲ. ನನಗೆ ಸ್ವಲ್ಪ ಹಣ ಸಹಾಯ ಮಾಡಿ. ಬಸ್ ಛಾರ್ಜ್ ಗೆ ಅಷ್ಟೇ ಕೇಳ್ತಿರೋದು ನಾನು. “ಸಾಧಾರಣವಾಗಿ ನಾನು ಅಂಥ ಸಂದರ್ಭಗಳಲ್ಲಿ ಎಂದೂ ತಾಳ್ಮೆ ಕಳೆದುಕೊಂಡು ಮಾತಾಡಿದವನಲ್ಲ. ಅಂದು ಅದೇನಾಗಿತ್ತೋ ನನಗೆ. ಎಂದೂ ಸಿಟ್ಟಿನ ಕೈಗೆ ಬುದ್ಧಿ ಕೊಡದ ನಾನು ಅಂದು ಕೂಗಾಡಿಬಿಟ್ಟೆ. “ಇದ್ದಕ್ಕಿದ್ದ ಹಾಗೆ ಬಂದು ದುಡ್ಡು ಕೇಳಿದರೆ ಎಲ್ಲಿಂದ ತರಲಿ? ನಮ್ಮ ಮನೇಲೇನು ದುಡ್ಡಿನ ಗಿಡ ಇದೆಯೇ? ಜತೆಗೆ ಯಾವ ನಂಬಿಕೆ ಮೇಲೆ ನಿಮಗೆ ದುಡ್ಡು ಕೊಡಬೇಕು? ಹೀಗೆಲ್ಲಾ ಮನೇಗೆ ನುಗ್ಗಿಬಂದು ತೊಂದರೆ ಕೊಡಬೇಡಿ” ಎಂದೆಲ್ಲಾ ಬಡಬಡಿಸಿಬಿಟ್ಟೆ. ವಾಸ್ತವವಾಗಿಯೂ ಅಂದು ನನ್ನ ಕೈ ಖಾಲಿಯಾಗಿತ್ತು ಕೂಡಾ. ಮೊದಲೇ ಆತಂಕ ಒತ್ತಡದಲ್ಲಿದ್ದವನಿಗೆ ಹೀಗೆ ಧುತ್ತೆಂದು ಯಾರೋ ಪ್ರತ್ಯಕ್ಷರಾಗಿ ಹಿಂಸೆಯಾಗುವಂತೆ ನಡೆದುಕೊಂಡುಬಿಟ್ಟರೆ ಹೇಗಾಗಬೇಕು? ನನ್ನ ಬಡಬಡಿಕೆಯನ್ನು ಕೇಳಿಸಿಕೊಂಡ ವ್ಯಕ್ತಿ ಒಂದು ಕ್ಷಣ ನನ್ನ ಮುಖವನ್ನೇ ದಿಟ್ಟಿಸಿ ನೋಡಿದರು. ಒಂದು ನಿಟ್ಟುಸಿರು ಬಿಟ್ಟು ಎದ್ದು ನಿಂತು ಮತ್ತೊಮ್ಮೆ ನನ್ನನ್ನು ದಿಟ್ಟಿಸಿ ನೋಡಿ ಬಾಗಿಲತ್ತ ಹೆಜ್ಜೆ ಹಾಕಿದರು.

ಅದೇ ವೇಳೆಗೆ ಮಹಡಿ ಮೆಟ್ಟಲಿಳಿದುಕೊಂಡು ಬರುತ್ತಿದ್ದ ರಂಜನಿಗೆ ಚೂರು ಪಾರು ಅರ್ಥವಾಗಿತ್ತೋ ಏನೋ, “ನಿಂತ್ಕೊಳಿ. ಹಾಗೇ ಹೋಗಬೇಡಿ. ಒಂದು ಸ್ವಲ್ಪ ಹಾಲೋ ಕಾಫೀನೋ ಕೊಡ್ತೀನಿ. ಕೂತ್ಕೊಳಿ ಬನ್ನಿ” ಎಂದು ಜೋರಾಗಿ ಹೇಳುತ್ತಲೇ ಕೆಳಗಿಳಿದು ಬಂದಳು. ಆದರೆ ಆತ ನಿಲ್ಲಲಿಲ್ಲ. ದುರ್ದಾನ ತೆಗೆದುಕೊಂಡವರಂತೆ ದಾಪುಗಾಲಿಟ್ಟುಕೊಂಡು ಹೊರನಡೆದೇಬಿಟ್ಟರು. “ಪ್ರಭೂಜೀ. ಕರೀರಿ ಅವರನ್ನ. ಮನೇಗೆ ಬಂದವರನ್ನ ಹಾಗೇ ಕಳಿಸಬಾರದು. ಕರೀರಿ” ಎಂದು ರಂಜನಿ ಹೇಳುತ್ತಿದ್ದರೂ ನಾನು ಅದೇಕೋ ಗರಬಡಿದವನಂತೆ ನಿಂತೇ ಇದ್ದೆ. ರಂಜನಿ ಎರಡು ಮೂರು ಬಾರಿ ಹೇಳಿದ ಮೇಲೆ ಎಚ್ಚರಗೊಂಡು ಸರಸರನೆ ಗೇಟ್ ಬಳಿ ಹೋಗಿ ರಸ್ತೆಯ ಎಡ ಬಲಗಳಲ್ಲಿ ಆತ ಕಾಣುತ್ತಾರೆಯೇ ಎಂದು ನಿಟ್ಟಿಸಿ ನೋಡಿದೆ. ಎಡಭಾಗದ ರಸ್ತೆಯ ಕೊನೆಯಲ್ಲಿ ಬಲಕ್ಕೆ ಹೊರಳಿ ಆತ ಕಣ್ಮರೆಯಾದರು. ಸಪ್ಪೆ ಮೋರೆ ಹಾಕಿಕೊಂಡು ಒಳಬಂದ ನನ್ನನ್ನು ನೋಡಿ ರಂಜನಿ, “ನನಗೆ ನಿಮ್ಮ ಮಾತೆಲ್ಲಾ ಕೇಳಿಸ್ತು. ಅವರನ್ನ ತಡೀಬೇಕು ಅಂತ ಕೆಳಗಿಳಿದು ಬರೋ ಅಷ್ಟರಲ್ಲಿ ಅವರು ಹೊರಟುಬಿಟ್ಟರು. ಹೋಗಲಿ ಬಿಡಿ. ಏನು ಮಾಡೋಕಾಗುತ್ತೆ? ಇದೂ ಎಲ್ಲಾ ಒಂಥರಾ ಪರೀಕ್ಷೇನೇ” ಎಂದು ನುಡಿದು ಮಹಡಿ ಹತ್ತಿದಳು. ಅಂದು ನಾನು ಅನುಭವಿಸಿದ ಹಿಂಸೆ ಸಂಕಟ ವಿವರಣೆಗೆ ಮೀರಿದ್ದು. ನನ್ನ ಬಗ್ಗೆ ನನಗೇ ಒಂದೆಡೆ ಜುಗುಪ್ಸೆ. ಒಂದೆಡೆ ಅನುಕಂಪ. ಇನ್ನೊಂದೆಡೆ ಭಯಂಕರ ಸಿಟ್ಟು. ಕಣ್ಮುಚ್ಚಿದರೆ ಆ ವ್ಯಕ್ತಿಯ ತೀಕ್ಷ್ಣ ನೋಟ ಇರಿದಂತಾಗುತ್ತಿತ್ತು. ಅವರ ಹೊಟ್ಟೆಯ ಗಾಯದ ಗುರುತು ಮುಖಕ್ಕೆ ರಾಚಿದಂತಾಗುತ್ತಿತ್ತು. ಹೌದು. ರಂಜನಿ ಹೇಳಿದಂತೆ ಇದೂ ಒಂದು ರೀತಿಯ ಪರೀಕ್ಷೆಯೇ! ನನ್ನ ಸಹನೆಯ ಪರೀಕ್ಷೆ. ನನ್ನ ಸಮಚಿತ್ತದ ಪರೀಕ್ಷೆ. ನನ್ನ ವಿವೇಚನೆಯ ಪರೀಕ್ಷೆ. ಸಣ್ಣ ಘಟನೆಯೇ ಇರಬಹುದು; ಹತ್ತಾರು ವರ್ಷಗಳ ಹಿಂದೆ ಘಟಿಸಿದ್ದೇ ಇರಬಹುದು. ಆದರೂ ಆ ವ್ಯಕ್ತಿಯ ದೃಷ್ಟಿಯ ತೀಕ್ಷ್ಣತೆ ಮೊನಚುಗಳು ಒಂದಿಷ್ಟೂ ಮಾಸಿಲ್ಲ. ಆಗಾಗ್ಗೆ ಧಿಡೀರನೆ ನೆನಪಿಗೆ ನುಗ್ಗಿಬಂದು ಇರಿಯುತ್ತಲೇ ಇರುತ್ತವೆ. ಸಾಂದರ್ಭಿಕ ಅಸಹಾಯಕತೆಗಳು, ಪ್ರಕ್ಷುಬ್ದತೆಗಳು ಕಣ್ಣ ಮುಂದೆ ಪೊರೆಯ ಜಾಲವನ್ನು ಹೆಣೆದು ವಿವೇಚನೆ ಮಂದವಾಗಿಬಿಡುತ್ತದೆ. ಇದನ್ನೆಲ್ಲಾ ಗೆಲ್ಲುವುದೇ ಬದುಕೇ? ಇದೇ ಬದುಕಿನ ಪಾಠವೇ?

‍ಲೇಖಕರು Admin MM

September 13, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: