ಶ್ರೀನಿವಾಸ ಪ್ರಭು ಅಂಕಣ- ನಾಟಕ ಮುಗಿದ ಮೇಲೆಯೂ ಬಹುಕಾಲ ಕಾಡುತ್ತಲೇ ಇರುತ್ತದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

55

ಟಿ.ಎಸ್.ರಂಗಾ ಅವರು ‘ಗೀಜಗನ ಗೂಡು’ (ನನ್ನ ಮೊಟ್ಟಮೊದಲ ಚಿತ್ರ) ನಂತರ ಒಂದೆರಡು ಚಿತ್ರಗಳನ್ನು ಮಾಡಿದ್ದರೂ ನಾನು ಅವುಗಳಲ್ಲಿ ಯಾವುದೇ ಪಾತ್ರ ನಿರ್ವಹಿಸಿರಲಿಲ್ಲ.ಒಂದು ಸಂಜೆ nmh ಹೋಟಲ್ ಗೆ ನನ್ನನ್ನು ಕರೆಸಿಕೊಂಡ ರಂಗಾ ಅವರು, “ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದೇನೆ..ನನ್ನ ಜತೆಗಿರುವಿರಾ? ಕಥೆ—ಚಿತ್ರಕಥೆ ರೂಪಿಸಿಕೊಳ್ಳುವುದರಲ್ಲಿಯೂ ನೀವು ನನಗೆ ನೆರವಾಗಬೇಕು..ಹಿಂದಿ ಭಾಷೆಯ ಚಿತ್ರ..’ಗಿಧ್’ ಎಂದು ನಾಮಕರಣವಾಗಿದೆ..ಓಂಪುರಿ,ಸ್ಮಿತಾ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ..ನೀವು ಹೂಂ ಎಂದರೆ ಇಂದಿನಿಂದಲೇ ಕೆಲಸ ಪ್ರಾರಂಭಿಸಬಹುದು” ಎಂದರು.

ಓಂಪುರಿ, ಸ್ಮಿತಾ ಪಾಟೀಲ್ ರಂತಹ ಶ್ರೇಷ್ಠ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಬಿಡುವುದುಂಟೇ? ಓಂಪುರಿಯವರಂತೂ ದೆಹಲಿಯ ನಾಟಕ ಶಾಲೆಯಲ್ಲೇ ಕಲಿತವರು..ನಾನು ಅಲ್ಲಿ ಓದುತ್ತಿದ್ದಾಗ ಒಂದೆರಡು ಬಾರಿ ಬಂದಿದ್ದರು ಕೂಡಾ. ಕ್ಷಣಮಾತ್ರವೂ ತಡಮಾಡದೆ ‘ನಾನು ನಿಮ್ಮೊಟ್ಟಿಗಿರುತ್ತೇನೆ ರಂಗಾ..ಯಾವುದೇ ಜವಾಬ್ದಾರಿಯನ್ನೂ ಹೊರಲು ಸಿದ್ಧನಾಗಿದ್ದೇನೆ’ ಎಂದು ನನ್ನ ಸಮ್ಮತಿ ಸೂಚಿಸಿದೆ.ಅಮಾಯಕ ಹಳ್ಳಿಯ ಹೆಣ್ಣುಮಕ್ಕಳನ್ನು ದೇವಿಯ ಸೇವೆಯ ನೆಪದಲ್ಲಿ ದೇವದಾಸಿಯರನ್ನಾಗಿ ಮಾಡಿ ನಂತರ ಮುಂಬೈನ ವೇಶ್ಯಾವಾಟಿಕೆಗಳಿಗೆ ಮಾರಿಬಿಡುತ್ತಿದ್ದ ಒಂದು ಕರಾಳ ಷಡ್ಯಂತ್ರ ಕರ್ಣಾಟಕ-ಮಹಾರಾಷ್ಟ್ರಗಳ ನಡುವಿನ ಗಡಿ ಪ್ರದೇಶಗಳಲ್ಲಿ ಅವಿರತವಾಗಿ ನಡೆಯುತ್ತಲೇ ಇತ್ತು.

ಈ ಅಸಹ್ಯದ ಪಿಡುಗು ಒಳಗೊಳಗೇ ಹೇಗೆ ಮುಗ್ಧ ಹೆಣ್ಣುಮಕ್ಕಳ ಬದುಕನ್ನು ಛಿದ್ರಗೊಳಿಸಿ ಮೂರಾಬಟ್ಟೆ ಮಾಡುತ್ತಿದೆಯೆಂಬ ಮಾರ್ಮಿಕ ಕಥಾಹಂದರದ ಸುತ್ತ ‘ಗಿಧ್ಧ್'(ರಣಹದ್ದುಗಳು) ಚಿತ್ರವನ್ನು ಕಟ್ಟಲು ರಂಗಾ ಯೋಜಿಸುತ್ತಿದ್ದರು.ಕಥೆಯ ಪ್ರಥಮ ಹಂತದ ಹಂದರವನ್ನು ಸಿದ್ಧ ಪಡಿಸಿಕೊಂಡ ನಂತರ ಚಿತ್ರೀಕರಣ ನಡೆಸುವ ಸ್ಥಳಗಳ ಅನ್ವೇಷಣೆಗಾಗಿ ರಂಗಾ,ನಾನು,ಅನಿಲ್ ಠಕ್ಕರ್ (ಹುಬ್ಬಳ್ಳಿಯ ಪ್ರಸಿದ್ಧ ರಂಗ ಕಲಾವಿದ) ಹಾಗೂ ಇನ್ನೊಂದಿಬ್ಬರು ಗೆಳೆಯರು ಉತ್ತರ ಕರ್ಣಾಟಕದತ್ತ ಹೊರಟೆವು.ಅಲ್ಲಿ ನಾಲ್ಕಾರು ದಿನ ಸುತ್ತಾಡಿ ಚಿತ್ರೀಕರಣಕ್ಕೆ ಅನುಕೂಲವಿರುವ ಒಂದಷ್ಟು ಜಾಗಗಳನ್ನು ಗುರುತು ಮಾಡಿಕೊಂಡೆವು.ಬೆಳಗಾಂ ಹತ್ತಿರದ ಯಾವುದೋ ಹಳ್ಳಿಯಲ್ಲಿ ಮಂಗಳಮುಖಿಯರ ಒಂದು ಹಾಡಿ ಇತ್ತು. ಅಲ್ಲಿಗೆ ಹೋಗಿದ್ದಾಗ ನಾನು ನಾಲ್ಕಾರು ಮಂಗಳಮುಖಿಯರ ಸಂದರ್ಶನ ಮಾಡಿ ಅವರ ಬದುಕಿನ ವಿವರಗಳನ್ನೆಲ್ಲಾ ಕೇಳಿ ತಿಳಿದು ಬರೆದಿಟ್ಟುಕೊಂಡೆ.

ಪ್ರಾರಂಭದಲ್ಲಿ ಅವರನ್ನು ನೊಡಿದರೆ ಒಂದು ರೀತಿಯ ಭಯವೂ ಮುಜುಗರವೂ ಆಗುತ್ತಿತ್ತಾದರೂ ಅವರ ಯಾತನಾಮಯ ಬದುಕಿನ ಪುಟಗಳು ತೆರೆಯುತ್ತಾ ಹೋದಂತೆ ಒಳಗಿನಿಂದ ಸಂಕಟ ಒತ್ತಿಕೊಂಡು ಬಂದು ಕಣ್ಣು ಮಡುಗಟ್ಟಿತು.. ಸಮಾಜದಿಂದ ಬಹಿಷ್ಕೃತಗೊಂಡವರಂತೆ ದೂರದಲ್ಲೆಲ್ಲೋ ಗುಡಿಸಲು ಕಟ್ಟಿಕೊಂಡು ತುತ್ತು ಅನ್ನಕ್ಕೂ ಬವಣೆ ಪಡುತ್ತಾ ಮುಖಕ್ಕೇ ರಾಚುವ ಅವಮಾನ-ತಿರಸ್ಕಾರಗಳನ್ನು ನುಂಗಿಕೊಳ್ಳುತ್ತಾ ಹೇಗೋ ಉಸಿರಾಡಿಕೊಂಡಿರುವ ಅವರ ದಯನೀಯ ಸ್ಥಿತಿ ಕಂಡು ಸಂಕಟ, ದುಃಖಗಳ ಜತೆಗೆ ಅಮಾನವೀಯ ವ್ಯವಸ್ಥೆಯ ಕ್ರೌರ್ಯದ ಬಗೆಗೆ ಸಿಟ್ಟು—ಆಕ್ರೋಶಗಳೂ ಉಕ್ಕಿಬಂದವು.ಒಂದು ಹೊಸ ಜಗತ್ತಿನ ಪರಿಚಯ ಹಾಗೆ ನನ್ನನ್ನು ತಲ್ಲಣಗೊಳಿಸಿದ್ದು ಅದೇ ಮೊದಲು.

ಅಲ್ಲಿಯ ಕೆಲಸಗಳನ್ನು ಮುಗಿಸಿಕೊಂಡು ಬೆಂಗಳೂರಿಗೆ ಮರಳುವ ಹಾದಿಯಲ್ಲಿ ಅತಿ ವಿಶಾಲ ವಾಗಿ ಹರಡಿಕೊಂಡಿದ್ದ, ಭಾರೀ ಗಾತ್ರದ ಕೊಂಬೆ ರೆಂಬೆಗಳಿಂದ ಸಮೃದ್ಧವಾಗಿದ್ದ ಒಂದೆರಡು ಮರಗಳು ಕಣ್ಣಿಗೆ ಬಿದ್ದವು. ಹತ್ತಿರ ಹೋಗಿ ನೋಡಿದಾಗ ಎದೆ ಝಲ್ಲೆಂದುಹೋಯಿತು! ಆ ಮರಗಳ ತುಂಬಾ ರಣಹದ್ದುಗಳು ಕಿಕ್ಕಿರಿದು ತುಂಬಿವೆ! ಹಾಗೆ ಹದ್ದುಗಳು ಎಲೆಗಳನ್ನು ಪೋಣಿಸಿದಂತೆ ಸಾಲಾಗಿ ಕುಳಿತು ಕೊಕ್ಕು ತಿರುಗಿಸುತ್ತಾ ವಿಚಿತ್ರ ಸದ್ದು ಹೊರಡಿಸುತ್ತಿದ್ದುದನ್ನು ಕಂಡು ಜಂಘಾಬಲವೇ ಉಡುಗಿದಂತಾಗಿಹೋಯಿತು.ಕಾರ್ ನಿಂದ ಕೆಳಗಿಳಿಯಲೂ ಧೈರ್ಯವಾಗಲಿಲ್ಲ! ಕ್ಯಾಮರಾ ಕ್ಲಿಕ್ಕಿಸಿ ಒಂದಷ್ಟು photo ಗಳನ್ನು ತೆಗೆದುಕೊಂಡು ಜಾಗ ಖಾಲಿ ಮಾಡಿದೆವು! ‘ಗಿದ್ಧ್’—’ರಣಹದ್ದುಗಳು’ ಚಿತ್ರದ ಚಿತ್ರೀಕರಣಕ್ಕೆ ಸ್ಥಳಾನ್ವೇಷಣೆಗೆಂದು ಹೋದವರಿಗೆ ಆ ಪರಿಯಲ್ಲಿ ರಣಹದ್ದುಗಳೇ ಎದುರಾದದ್ದು ಅದೆಂಥ ಕಾಕತಾಳೀಯ!!

ಬೆಂಗಳೂರಿಗೆ ಮರಳಿ ಬಂದು ಹುರುಪಿನಿಂದ ಚಿತ್ರಕಥೆಯನ್ನು ಸಿದ್ಧಪಡಿಸಲು ಕೂತರೆ ಮುಂಬೈನಿಂದ ನಿರಾಶಾದಾಯಕ ಸುದ್ದಿ: ಮುಖ್ಯ ಕಲಾವಿದರಿಬ್ಬರೂ ಆ ತಕ್ಷಣಕ್ಕೆ ಚಿತ್ರೀಕರಣಕ್ಕೆ ಬರಲು ಸಾಧ್ಯವಿಲ್ಲವಾದ್ದರಿಂದ ಅನಿವಾರ್ಯವಾಗಿ ಚಿತ್ರೀಕರಣ ಮುಂದೂಡಲೇಬೇಕಾಗಿದೆ! ನಿರಾಸೆಯಾದರೂ ನಮ್ಮ ಕೆಲಸ ನಿಲ್ಲಿಸದೆ ಮುಂದುವರಿಸಿಕೊಂಡು ಹೋಗುವುದೆಂದು ನಿರ್ಧರಿಸಿಕೊಂಡೆವು.

ಹೀಗೇ ನಾಲ್ಕಾರು ದಿನಗಳು ಉರುಳಿದ ಮೇಲೆ ಒಂದು ದಿನ ರಂಗಾ ಇದ್ದಕ್ಕಿದ್ದ ಹಾಗೆ ಕೇಳಿದರು: ” ಪ್ರಭೂ,ಹೇಗೂ ಶೂಟಿಂಗ್ ಮುಂದಕ್ಕೆ ಹೋಗಿದೆ. ಈ ನಡುವಿನ ಸಮಯದಲ್ಲಿ ಯಾಕೆ ಒಂದು ನಾಟಕ ಮಾಡಬಾರದು?.”
ಶೂಟಿಂಗ್ ಗಿಂತಲೂ ಹೆಚ್ಚಿನ ಖುಷಿಯ ವಿಷಯವೇ ಆಗಿತ್ತು ನನಗದು!

ಒಂದು ರೆಪರ್ಟರಿ ಮಾದರಿಯ ತಂಡವನ್ನು ಕಟ್ಟಿ ವರ್ಷಕ್ಕೆ ಕನಿಷ್ಠ ನಾಲ್ಕು ಹೊಸ ನಾಟಕಗಳನ್ನು ಸಿದ್ಧಪಡಿಸಿ ನಾಡಿನಾದ್ಯಂತ ಸಂಚರಿಸಿ ಪ್ರದರ್ಶನಗಳನ್ನು ನೀಡುತ್ತಾ ಹವ್ಯಾಸಿರಂಗಭೂಮಿಗೆ ವೃತ್ತಿಪರತೆಯ ಒಂದು ಹೊಸ ಆಯಾಮವನ್ನು ಕಟ್ಟಿಕೊಡುವ ಮಹತ್ವಾಕಾಂಕ್ಷೆ ರಂಗಾ ಅವರದಾಗಿತ್ತು. ಹವ್ಯಾಸೀ ರಂಗಭೂಮಿಯಲ್ಲಿ ತೊಡಗಿಕೊಂಡೇ ಬದುಕು ಕಟ್ಟಿಕೊಳ್ಳಲು ಸಾಧ್ಯ—ಬೇರಾವುದೇ ಕೆಲಸದ ಹಂಗಿಲ್ಲದಿದ್ದರೂ—ಎನ್ನುವಂತಹ ಒಂದು ಪರಿಸ್ಥಿತಿ ನಿರ್ಮಾಣವಾಗಬೇಕು ಎನ್ನುತ್ತಿದ್ದರು ರಂಗಾ. ಅಂಥದೊಂದು ಸದಭಿಲಾಷೆಯಿಂದ ಅವರು ಮಿತ್ರರೊಂದಿಗೆ ಸೇರಿ ಕಟ್ಟಿದ ತಂಡವೇ ‘ಪ್ರಯೋಗ’ ತಂಡ.

“ನಮ್ಮ ಪ್ರಯೋಗತಂಡದ ಮೊದಲ ನಾಟಕವನ್ನು ನೀವು ನಿರ್ದೇಶಿಸಲು ಸಾಧ್ಯವೇ” ಎಂದು ಕೇಳಿದರು ರಂಗಾ. “ಇಲ್ಲ ಅನ್ನುವ ಮಾತೇ ಇಲ್ಲ ರಂಗಾ..ಯಾವ ಬಗೆಯ ನಾಟಕ ಬೇಕೆಂದು ನೀವು ಸೂಚಿಸಿದರೆ ನಾನು script ಸಿದ್ಧಪಡಿಸಿಕೊಳ್ಳುತ್ತೇನೆ” ಎಂದೆ ನಾನು. ರಂಗಾ ಹೇಳಿದರು: “script ಈಗಾಗಲೇ ಸಿದ್ಧವಾಗಿದೆ! ರಾಮಚಂದ್ರದೇವ ಅವರು ‘ರಥಮುಸಲ’ ಅನ್ನುವ ಹೊಸ ನಾಟಕ ಬರೆದಿದ್ದಾರೆ..ಇನ್ನೂ ಅದು ಪ್ರಕಟಗೊಂಡಿಲ್ಲ..ಒಂದು ಸ್ವತಂತ್ರ ಕನ್ನಡ ನಾಟಕವೇ ನಮ್ಮ ತಂಡದ ಮೊದಲ ಪ್ರಯೋಗವಾದರೆ ಮತ್ತೂ ಒಳ್ಳೆಯದೇ ಅಲ್ಲವೇ?”. ಸತ್ಯವಾದ ಮಾತು ಅನ್ನಿಸಿತು.ಜೊತೆಗೆ ರಾಮಚಂದ್ರದೇವ ಅವರು ಹ್ಯಾಮ್ಲೆಟ್ ನಾಟಕದ ಮೂಲಕ ಅದಾಗಲೇ ನಮಗೆ ಪರಿಚಿತರಾಗಿ ಸ್ವಲ್ಪ ಸಮಯದಲ್ಲೇ ಆತ್ಮೀಯರೂ ಆಗಿಬಿಟ್ಟಿದ್ದರಲ್ಲಾ! ಮರುದಿನವೇ ಬೆನಕ ರಂಗಮನೆಯಲ್ಲಿ ದೇವರಿಂದ ರಥಮುಸಲ ನಾಟಕದ ವಾಚನ ಏರ್ಪಾಡಾಯಿತು.

ರಾಮಚಂದ್ರದೇವ ಅವರು ಆ ವೇಳೆಗಾಗಲೇ ಪ್ರಜಾವಾಣಿ ಬಳಗವನ್ನು ಸೇರಿಕೊಂಡಿದ್ದರು. ಬೆನಕ ರಂಗಮನೆಯಲ್ಲಿ ಅವರ ‘ರಥಮುಸಲ ‘ ನಾಟಕ ವಾಚನ ಕಾರ್ಯಕ್ರಮಕ್ಕೆ ಹಲವಾರು ರಂಗಮಿತ್ರರು ಬಂದಿದ್ದರು. ನಾಟಕದ ವಸ್ತು ವಿನ್ಯಾಸದ ಬಗ್ಗೆ,ಕಾಲ-ಪಾತ್ರ ಹಾಗೂ ಅಂದಿನ ಸಾಮಾಜಿಕ-ರಾಜಕೀಯ ಸ್ಥಿತಿಗತಿಗಳ ಬಗ್ಗೆ ಒಂದು ವಿಸ್ತಾರವಾದ ವಿವರಣೆಯನ್ನು ಕೊಟ್ಟು ಬಳಿಕ ದೇವ ಅವರು ನಾಟಕವನ್ನು ಓದಿದರು.

ವಾಸ್ತವವಾಗಿ ನಮಗಾರಿಗೂ ‘ರಥಮುಸಲ’ ಎಂದರೇನು ಎಂಬುದೇ ಅರಿವಿರಲಿಲ್ಲ! ಪ್ರೇಕ್ಷಕರಿಗೂ ಈ ಅನುಮಾನ ಕಾಡುತ್ತದೆಂದು ದೇವ ಅವರು ಅರಿತಿದ್ದರಿಂದ ನಾಟಕದ ಒಂದು ದೃಶ್ಯದಲ್ಲಿಯೇ ಆ ವಿವರ ಬರುವಂತೆ ಜಾಣ್ಮೆಯಿಂದ ಹೆಣೆದಿದ್ದಾರೆ.

ಕ್ರಿ.ಪೂ.493 ರ ಕಾಲಮಾನದಲ್ಲಿ ಮಗಧದ ದೊರೆಯಾದ ಅಜಾತಶತ್ರು ತನಗೆ ಶರಣಾಗದೆ ಸೆಡ್ಡು ಹೊಡೆದು ನಿಂತಿದ್ದ ಗಣರಾಜ್ಯ ವೈಶಾಲಿಯನ್ನು ಭೇದೋಪಾಯದ ಕುಟಿಲ ತಂತ್ರಗಳಿಂದ ಟೊಳ್ಳುಗೊಳಿಸಿ ಅಧಃಪತನದತ್ತ ದೂಡುವ ಘಟನಾವಳಿಗಳ ಸುತ್ತ ದೇವ ತಮ್ಮ ನಾಟಕವನ್ನು ಕಟ್ಟುತ್ತಾ ಹೋಗುತ್ತಾರೆ.’ರಥಮುಸಲ’ ಯುದ್ಧಭೂಮಿಯಲ್ಲಿ ಬಳಕೆಯಾಗುತ್ತಿದ್ದ ಒಂದು ವಿಶಿಷ್ಟ ಸಮರಾಯುಧ. ರಥದ ಸುತ್ತಲೂ ಜೋಡಿಸಿರುವ ಹರಿತವಾದ ಕತ್ತಿಗಳು; ರಥದೊಳಗೆ ಯಾರಿಗೂ ಕಾಣದಂತೆ ಕುಳಿತು ರಥದ ಗತಿಯನ್ನು ನಿರ್ದೇಶಿಸುತ್ತಿದ್ದ ಚಾಲಕ; ರಣಭೂಮಿಯಲ್ಲಿ ಎದುರಾದವರನ್ನೆಲ್ಲಾ ನಿರ್ದಯವಾಗಿ ಕೊಚ್ಚಿ ಹಾಕುತ್ತಾ ಎಲ್ಲೆಂದರಲ್ಲಿ ಚಲಿಸುತ್ತಿದ್ದ ರಥ—ಇದು ‘ರಥಮುಸಲ’.

ತನ್ನವರೆಲ್ಲರನ್ನೂ ಪಗಡೆಯ ಕಾಯಿಗಳಂತೆ ತನಗೆ ಬೇಕಾದಂತೆ ಬಳಸಿಕೊಂಡು ಅರಿವಿಗೇ ಬಾರದ ರೀತಿಯಲ್ಲಿ ಎದುರಾಳಿಗಳನ್ನು ದಮನಿಸುತ್ತಾ ಸರ್ವನಾಶದತ್ತ ಸಾಗುವ ಸರ್ವಾಧಿಕಾರೀ ಆಸುರೀ ಶಕ್ತಿಯ ರುದ್ರಭೀಕರ ನರ್ತನವನ್ನು ಧ್ವನಿಸುವ ಅದ್ಭುತ ಪ್ರತೀಕವೇ ಈ ರಥಮುಸಲ ಎನ್ನಿಸಿ ದೇವ ಅವರ ಸೂಕ್ಷ್ಮ ಹಾಗೂ ಸಂವೇದನಾಶೀಲ ಕಲಾತ್ಮಕತೆಗೆ ನಾನು ಬೆರಗಾಗಿ ಹೋದೆ.ವೈಶಾಲಿಯ ಗಣರಾಜ್ಯದಲ್ಲಿ ಆತಂಕ ಸೃಷ್ಟಿಸಲು ವಸ್ಸಕಾರನನ್ನು ಅಲ್ಲಿಗೆ ಗೂಢಚಾರನನ್ನಾಗಿ ಕಳಿಸುತ್ತಾನೆ ಮಗಧದ ದೊರೆ ಅಜಾತಶತ್ರು. ಇವನಾದರೂ ತನ್ನ ತಂದೆ ಬಿಂಬಿಸಾರ ಸ್ವರ್ಗಸ್ಥನಾದ ಮೇಲೆ ಬಂಧು ಬಳಗದವರನ್ನೆಲ್ಲಾ ಕೊಂದು ಪಟ್ಟವೇರಿದವನು! ವಸ್ಸಕಾರ ವೈಶಾಲಿಗೆ ಬಂದು ಜನರ ವಿಶ್ವಾಸ ಪಡೆದು ಅಲ್ಲಿನ ಚಿನ್ನದ ಗಣಿಯ ಮುಖ್ಯಸ್ಥನಾಗಿ, ಯಾರಿಗೂ ಸುಳಿವೇ ಸಿಗದಂತೆ ಚಿನ್ನವನ್ನೆಲ್ಲಾ ಕದ್ದು ಗುಪ್ತ ಸ್ಥಳಕ್ಕೆ ಸಾಗಿಸಿ ಕಳ್ಳರನ್ನು ಹುಡುಕುವ ನಾಟಕ ಮಾಡುತ್ತಾ ಹಂತಹಂತವಾಗಿ ವೈಶಾಲಿಯ ಗಣರಾಜ್ಯ ವ್ಯವಸ್ಥೆಯನ್ನು ದುರ್ಬಲ ಗೊಳಿಸುತ್ತಾನೆ.

ಮುಂದೆ ಅವನ ಸೇವೆಯ ಅಗತ್ಯ ತನಗಿಲ್ಲವೆಂದು ಅನ್ನಿಸಿದ ಮೇಲೆ ಅಜಾತಶತ್ರು ವಸ್ಸಕಾರನನ್ನೇ ಸೆರೆಗೆ ದೂಡಿಬಿಡುತ್ತಾನೆ! ಹೀಗೆ ತಂತ್ರ ಪ್ರತಿತಂತ್ರಗಳ ರಾಜಕೀಯ ಚದುರಂಗದಾಟದ ಒಳಸುಳಿಗಳನ್ನು ಸಮರ್ಥವಾಗಿ ಅನಾವರಣಗೊಳಿಸುತ್ತಾ ಹೋಗುವ ‘ರಥಮುಸಲ’ ನಾಟಕ, ಇಂದಿನಅಪಾಯಕಾರೀ ನವವಸಾಹತುಶಾಹಿ ಧೋರಣೆಗಳ ಪರಿಣಾಮಗಳಿಗೂ ಕನ್ನಡಿ ಹಿಡಿಯುವಂತಿದೆ. ರಷ್ಯಾದ ಉಕ್ರೇನ್ ಮೇಲಿನ ಆಕ್ರಮಣದ ಪ್ರಸಕ್ತ ಸಂದರ್ಭದಲ್ಲಂತೂ ಈ ನಾಟಕ ಅಂದಿಗಿಂತ ಇಂದು ಹೆಚ್ಚು ಸಾಮಯಿಕವೆನಿಸಿಬಿಡುತ್ತದೆ! ನಾಟಕದಲ್ಲಿ ಹೋರಾಟಗಾರ ಪಿಂಗಳೀಕ, ಭಯೋತ್ಪಾದಕನಂತೆ ಕಾಣುವ—ವರ್ತಿಸುವ ಗೋಪ, ವೈಯಕ್ತಿಕ ಬದುಕಿನ ಸುಂದರ ಕ್ಷಣಗಳು ಪ್ರಭುತ್ವದ ಅಟ್ಟಹಾಸದಲ್ಲಿ ಮುರುಟಿಹೋಗುವುದನ್ನು ಧ್ವನಿಸುವ ವಸ್ಸಕಾರನ ಪತ್ನಿ ಮಲ್ಲಿಕೆ, ನಾಟ್ಯಾಚಾರ್ಯ-ವಿದೂಷಕ, ಗಣರಾಜ್ಯದ-ಗಣಗಳ ಮುಖ್ಯಸ್ಥನಾಗಿ ದೊರೆಯನ್ನು ಆರಿಸುವ ಹೊಣೆ ಹೊತ್ತ ಚೇತಕ…ಹೀಗೆ ಹಲವು ಹತ್ತು ಮುಖ್ಯಪಾತ್ರಗಳು ಬರುತ್ತವೆ. ರಥಮುಸಲ—ಶಿಲಾಕಂಟಕದಂತಹ ಅಸ್ತ್ರಗಳ ರಣಾರ್ಭಟದಲ್ಲಿ ನಲುಗಿಹೋಗುವ ವೈಶಾಲಿಯ ಜನತೆಯ ದಾರುಣ ಆಕ್ರಂದನದ ನರಳುದನಿ ನಾಟಕ ಮುಗಿದ ಮೇಲೆಯೂ ಬಹುಕಾಲ ಕಾಡುತ್ತಲೇ ಇರುತ್ತದೆ…

ದೇವ ಅವರು ನಾಟಕ ಓದಿ ಮುಗಿಸಿದ ಮೇಲೆ ಇಂಥದೊಂದು ಮನಕಲಕುವ ಸಮರ್ಥ ನಾಟಕವನ್ನು ಕನ್ನಡಕ್ಕೆ ಕೊಡುಗೆಯಾಗಿ ಕೊಟ್ಟ ಅವರನ್ನು ಎಲ್ಲರೂ ಮನಸಾರೆ ಅಭಿನಂದಿಸಿದೆವು.ಅಷ್ಟೇ ಸಮರ್ಥವಾಗಿ—ಪ್ರಭಾವಿಯಾಗಿ ನಾಟಕವನ್ನು ರಂಗದ ಮೇಲೆ ತರುವ ಹೊಣೆ ನನ್ನ ಹೆಗಲೇರಿತ್ತು!

ರಥಮುಸಲಕ್ಕೂ ಮುನ್ನ ದೇವ ಅವರು ಶೇಕ್ಸ್ ಪಿಯರ್ ನ ಹ್ಯಾಮ್ಲೆಟ್ ಹಾಗೂ ಮ್ಯಾಕ್ ಬೆತ್ ನಾಟಕಗಳನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದವರು.ಒಟ್ಟಾರೆ ರಥಮುಸಲ ನಾಟಕದ ಶಿಲ್ಪವಿನ್ಯಾಸದ ಮೇಲೂ ಶೇಕ್ಸ್ ಪಿಯರ್ ನ ಪ್ರಭಾವವನ್ನು ಗುರುತಿಸಬಹುದು. ಆ ಪ್ರಭಾವವನ್ನು ಅರಗಿಸಿಕೊಂಡು ಒಂದು ಶ್ರೇಷ್ಠ ನಾಟಕವನ್ನು ಕಟ್ಟಿಕೊಡುವುದರಲ್ಲಿ ದೇವ ಯಶಸ್ವಿಯಾಗಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ.

ನಾಟಕವನ್ನು ನಾಲ್ಕಾರು ಬಾರಿ ಓದಿದ ಮೇಲೆ ನನಗೊಂದು ಸಣ್ಣ ಅನುಮಾನ ಕಾಡತೊಡಗಿತು: ಓದುವಾಗ ನಮ್ಮ ಮನೋಭೂಮಿಕೆಯಲ್ಲಿ ತೆರೆದುಕೊಳ್ಳುತ್ತಾ ಆವರಿಸಿಕೊಳ್ಳುತ್ತಾ ಕೊನೆಗೆ ತಲ್ಲಣಗೊಳಿಸಿಬಿಡುವ ‘ರಥಮುಸಲ’, ರಂಗದ ಮೇಲೂ ಇದೇ ಪರಿಣಾಮವನ್ನು ಬೀರಬಲ್ಲುದೇ? ನನ್ನ ಅನುಮಾನಕ್ಕಿದ್ದ ಕಾರಣವೆಂದರೆ ಹನ್ನೊಂದು ದೃಶ್ಯಗಳ ನಾಟಕ ದೃಶ್ಯದಿಂದ ದೃಶ್ಯಕ್ಕೆ ಬದಲಾಗುತ್ತಾ ಹೋಗುವುದರ ಜತೆಗೆ ಪಾತ್ರಗಳೂ ಪಟಪಟನೆ ಬದಲಾಗುತ್ತಾ ಹೋಗುತ್ತವೆ! ಪ್ರತಿ ದೃಶ್ಯದಲ್ಲೂ ಹೊಸ ಪಾತ್ರಗಳು ಕಾಣಿಸಿಕೊಳ್ಳುತ್ತವೆ! ಮರುಮರು ಓದಿನಲ್ಲಿ ನಾವು ಪಾತ್ರಸಂಬಂಧಗಳನ್ನೂ ರಂಗಕ್ರಿಯೆಯನ್ನೂ ಖಚಿತ ಪಡಿಸಿಕೊಂಡು ಮುಂದುವರಿಯುವಂತೆ ನಾಟಕ ಪ್ರದರ್ಶನದಲ್ಲಿ ದೃಶ್ಯಗಳನ್ನು ಮರುಕಳಿಸಲಾಗದು! ಹಾಗಿರುವಾಗ ಪ್ರೇಕ್ಷಕರಿಗೆ ಪಾತ್ರ ಸಂಬಂಧಗಳ ಕುರಿತಾಗಿ ಗೊಂದಲವುಂಟಾಗಿ ನಾಟಕವನ್ನು ಗ್ರಹಿಸುವುದು ಕಷ್ಟವಾಗಬಹುದೇನೋ ಅನ್ನಿಸತೊಡಗಿತು. ನಾಟಕದಲ್ಲಿ ವಿರಳವಾಗಿ ಇರುವ ನಾಟ್ಯಾಚಾರ್ಯ—ವಿದೂಷಕರ ಪಾತ್ರಗಳನ್ನು ಇನ್ನಷ್ಟು ಬೆಳೆಸಿ ಒಟ್ಟಾರೆ ಶಿಲ್ಪದಲ್ಲಿಯೇ ಕೊಂಚ ಬದಲಾವಣೆ ಮಾಡಿಕೊಂಡು ಎಪಿಕ್ ರಂಗಭೂಮಿಯ ಮಾದರಿಯನ್ನು ಅಳವಡಿಸಿಕೊಂಡರೆ ಅನುಕೂಲವಾಗಬಹುದೇ ಎಂದು ಯೋಚಿಸತೊಡಗಿದೆ.ಹಾಗೆ ಮಾಡಲು ವಿಪುಲ ಅವಕಾಶಗಳೂ ನಾಟಕದಲ್ಲಿದ್ದವು.

ಈ ವಿಚಾರವನ್ನು ದೇವ ಅವರೊಂದಿಗೂ ಚರ್ಚಿಸಿದೆ. “ಯಾವ ಕಾರಣಕ್ಕೂ ನಾಟಕದ ವಿನ್ಯಾಸವನ್ನು ಬದಲಿಸಬೇಡಿ.ಎಪಿಕ್ ಮಾದರಿಯೂ ಈಗ ಅಗತ್ಯವಿಲ್ಲದೆಡೆಯೂ ಬಳಕೆಗೊಳ್ಳುತ್ತಾ ತನ್ನ ಕಾವು ಕಳೆದುಕೊಂಡು ಸವಕಲಾಗುತ್ತಿದೆ;ಚರ್ವಿತಚರ್ವಣವಾಗುತ್ತಿದೆ…ನಾಟಕ ಪ್ರಕಟವಾದ ಮೇಲೆ ಬೇಕಾದರೆ ವಿನ್ಯಾಸ ಬದಲಿಸಲು ನೀವು ಸ್ವತಂತ್ರರು.ಇದಿನ್ನೂ ಹಸ್ತಪ್ರತಿಯ ಹಂತದಲ್ಲೇ ಇರುವುದರಿಂದ ನಾನು ಬರೆದಿರುವ ರೀತಿಯಲ್ಲಿಯೇ ಪ್ರೇಕ್ಷಕರಿಗೆ ತಲುಪಲಿ” ಎಂದುಬಿಟ್ಟರು ದೇವ. ಅದರಿಂದ ನನಗೊಂದಿಷ್ಟೂ ಬೇಸರವಾಗಲಿಲ್ಲ. ನಾನು ಬದಲಾವಣೆ ಸೂಚಿಸಿದ್ದಾದರೂ ರಂಗದ ಮೇಲಿನ ಕ್ರಿಯಾಪ್ರವಾಹಕ್ಕೆ ತಡೆಬಾರದಿರಲಿ,ಪ್ರೇಕ್ಷಕರು ಸುಲಭವಾಗಿ ಪಾತ್ರಗಳನ್ನೂ ನಾಟಕದಲ್ಲಿರುವ ಒಳದನಿಗಳನ್ನೂ ಗ್ರಹಿಸಲು ಸಾಧ್ಯವಾಗಲಿ ಎಂಬ ಕಾರಣಕ್ಕೇ ಹೊರತು ನಾಟಕದ ಮೂಲ ವಿನ್ಯಾಸ ದೋಷಪೂರ್ಣವಾಗಿತ್ತೆಂದಲ್ಲ! ಇರಲಿ.

ರಥಮುಸಲ ನಾಟಕದ ಬೆಳಕು-ರಂಗವಿನ್ಯಾಸಗಳ ಹೊಣೆಯನ್ನು ವಿ.ರಾಮಮೂರ್ತಿಗಳು ವಹಿಸಿಕೊಂಡಿದ್ದರು.ಚಾರಿತ್ರಿಕ ನಾಟಕವಾದ್ದರಿಂದ ಆ ಕಾಲದ ಉಡುಗೆ ತೊಡುಗೆ ಹಾಗೂ ರಂಗಪರಿಕರಗಳನ್ನು ಅಧಿಕೃತ ರೀತಿಯಲ್ಲಿ ಸಿದ್ಧ ಪಡಿಸಿಕೊಳ್ಳಬೇಕಿದ್ದುದು ಅನಿವಾರ್ಯವಾಗಿತ್ತು.ಈ ಜವಾಬ್ದಾರಿಯನ್ನು ಹೊತ್ತುಕೊಂಡು,ಸಾಕಷ್ಟು ಸಂಶೋಧನೆ ಮಾಡಿ ಸೊಗಸಾದ ವಿನ್ಯಾಸಗಳನ್ನು ರೂಪಿಸಿಕೊಟ್ಟವರು ಅನ್ನಪೂರ್ಣ ಅವರು.ರಾಮಮೂರ್ತಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ರಂಗಸಜ್ಜಿಕೆಯ ವಿನ್ಯಾಸಗಳನ್ನು ರೂಪಿಸಲಾಯಿತು.ರಂಗ ಕ್ರಿಯೆಯ ಸ್ಥಳಗಳು ಸಾಕಷ್ಟು ಇದ್ದುದರಿಂದ ಆ ಸ್ಥಳಗಳನ್ನು ನಿರ್ದಿಷ್ಟವಾಗಿ ತೋರುವಂತೆಯೂ ಬದಲಾವಣೆಗೆ ಹೆಚ್ಚು ಸಮಯ ವ್ಯರ್ಥವಾಗದಂತೆಯೂ ರಂಗವಿನ್ಯಾಸವನ್ನು ರಾಮಮೂರ್ತಿಯವರು ಸಿದ್ಧಪಡಿಸಿದರು.

ಹನ್ನೆರಡು ಅಡಿ ಎತ್ತರದ ಮರದ ಫ್ರೇಮ್ ಗಳ ಎರಡೂ ಬದಿಗಳಿಗೆ ಎರಡು ಬೇರೆ ಬೇರೆ ರಂಗಕ್ರಿಯಾ ಸ್ಥಳಗಳನ್ನು ಸೂಚಿಸುವ ವಿನ್ಯಾಸದ ಹೊದಿಕೆಗಳನ್ನು ಲಗತ್ತಿಸಲಾಯಿತು. ಗಾಲಿಗಳ ಮೇಲೆ ತಿರುಗುವಂತಿದ್ದ ಈ ಫ್ರೇಮ್ ಗಳು ತಿರುಗಿಸಿದೊಡನೆ ಬೇರೊಂದು ಸ್ಥಳ ನಿರ್ದೇಶನ ಮಾಡುತ್ತಾ ಕಡಿಮೆ ಸಮಯದಲ್ಲಿ ದೃಶ್ಯ ಬದಲಾವಣೆಗೆ ನೆರವಾಗುವಂತಿದ್ದವು.ರಂಗದ ಎರಡೂ ಬದಿಗಳಿಗೆ ಈ ತರಹದ ಫ್ರೇಮ್ ಗಳನ್ನು ಅಳವಡಿಸಿಕೊಂಡು, ರಂಗಮಧ್ಯದಲ್ಲಿ ಕೊಂಚ ಎತ್ತರದ ಅಟ್ಟಣೆಯನ್ನು ನಿರ್ಮಿಸಿಕೊಂಡು ಎಲ್ಲಾ ದೃಶ್ಯಗಳಿಗೆ ಸೂಕ್ತ ಕ್ರಿಯಾಸ್ಥಳವನ್ನು ಹೊಂದಿಸಲಾಯಿತು.

ಇನ್ನು ರಂಗದ ಮೇಲಂತೂ ಅನೇಕ ಪ್ರತಿಭಾವಂತರ ದಂಡೇ ನೆರೆದಿತ್ತು! ಅಂದಿನ ಹವ್ಯಾಸೀ ರಂಗಭೂಮಿಯ ಅದ್ಭುತ ನಟ ಸತ್ಯಸಂಧ, ವೈಶಾಲಿ ಕಾಸರವಳ್ಳಿ, ಸುಂದರ್ ರಾಜ್, ಅಂಕಲ್ ಲೋಕನಾಥ್, ಸಂಕೇತ್ ಕಾಶಿ, ಅವಿನಾಶ್, ವೈಜಯಂತಿ ಕಾಶಿ,ಫಣೀಂದ್ರನಾಥ್…ಇನ್ನೂ ಅನೇಕ ಉತ್ತಮ ನಟ ನಟಿಯರು ಮುಖ್ಯಭೂಮಿಕೆಗಳಲ್ಲಿದ್ದರು. ಇಲ್ಲಿಯೂ ಎರಡು ಬೇರೆ ಬೇರೆ ತಂಡಗಳನ್ನು ಮಾಡಿಕೊಂಡು ನಾಟಕ ಸಿದ್ಧಪಡಿಸುತ್ತಿದ್ದೆ. ಇನ್ನೊಂದು ತಂಡದಲ್ಲಿ ನಮ್ಮ ನಾಟ್ಯದರ್ಪಣ ತಂಡದ ಸಾಯಿಪ್ರಕಾಶ್ ಹಾಗೂ ನಳಿನಿ ಮೂರ್ತಿ(ನನ್ನ ಅಕ್ಕ) ಮುಖ್ಯಪಾತ್ರಗಳನ್ನು ನಿರ್ವಹಿಸುತ್ತಿದ್ದರು. ನನ್ನ ಎಲ್ಲಾ ನಾಟಕಗಳಲ್ಲೂ ನನ್ನ ಬಲಗೈ ಬಂಟನಾಗಿ ಕೆಲಸ ಮಾಡುತ್ತಿದ್ದ ಗೋಪಾಲ ಕೃಷ್ಣ ಅಲಿಯಾಸ್ ಗೋಪಿ ರಂಗ ನಿರ್ವಹಣೆಯ ಹೊಣೆ ಹೊತ್ತಿದ್ದ. ”ಗೋಪಿ ಇದ್ದರೆ ಮುಗಿಯಿತು, ಅಲ್ಲಿ ಯಾವುದೇ ತಪ್ಪಾಗಲೀ ಕೊರತೆಯಾಗಲೀ ಇಣುಕಲು ಸಾಧ್ಯವಿಲ್ಲ” ಎನ್ನುವಷ್ಟರ ಮಟ್ಟಿಗೆ ಗೋಪಿ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದ.

ಒಂದೂವರೆ ತಿಂಗಳ ಸತತ ಅಭ್ಯಾಸದ ನಂತರ ಪ್ರದರ್ಶನ ನೀಡಲು ಸಿದ್ಧರಾದೆವು.

ರಥಮುಸಲ ನಾಟಕದ ಪ್ರಥಮ ಪ್ರದರ್ಶನಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವು.ಬಹುಶಃ ಅದುವರೆಗಿನ ನನ್ನ ನಾಟಕಗಳಲ್ಲೆಲ್ಲಾ ಅತ್ಯಂತ ‘ಶ್ರೀಮಂತ’ ನಾಟಕವೆಂದರೆ ‘ರಥಮುಸಲ’ವೇ! ಭಾರಿ ಎನ್ನಿಸುವಂತಹ ರಂಗಸಜ್ಜಿಕೆ, ಚಾರಿತ್ರಿಕ ನಾಟಕವಾದ್ದರಿಂದ ಆ ಕಾಲದ ಉಡುಗೆ ತೊಡುಗೆ ಹಾಗೂ ರಂಗಪರಿಕರಗಳು,ವಿಶೇಷ ಬೆಳಕಿನ ವ್ಯವಸ್ಥೆ…ಈ ಎಲ್ಲ ಕಾರಣಗಳಿಂದಾಗಿ ‘ರಥಮುಸಲ’ ಆ ಸಮಯದ ‘ಬಿಗ್ ಬಜೆಟ್’ ನಾಟಕಗಳ ಪಟ್ಟಿಗೆ ಸೇರ್ಪಡೆಯಾಯಿತು.

ಪ್ರೇಕ್ಷಾಗೃಹದಲ್ಲಿ ಕುಳಿತು ನೋಡಿದರೆ ರಾಮಮೂರ್ತಿಯವರು ರೂಪಿಸಿದ್ದ ರಂಗಸಜ್ಜಿಕೆ ಕಣ್ಮನ ಸೆಳೆಯುವಂತಿತ್ತು. ಅವರ ಬೆಳಕಿನ ವಿನ್ಯಾಸವೂ ಅಷ್ಟೇ ಸೊಗಸಾಗಿದ್ದು ನಾಟಕದ ಯಶಸ್ಸಿಗೆ ಒಂದು ಮುಖ್ಯ ಕಾರಣವಾಯಿತು. ಎಲ್ಲ ಕಲಾವಿದರೂ ತನ್ಮಯತೆಯಿಂದ ಅಭಿನಯಿಸಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.

ಪ್ರಸಿದ್ಧ ರಂಗಕರ್ಮಿ—ಸಾಹಿತಿ ಕ.ವೆಂ.ರಾಜಗೋಪಾಲ ಅವರು ನಾಟಕವನ್ನು ಮೆಚ್ಚಿಕೊಂಡು ಹೀಗೆ ಬರೆದರು:
” ರಥಮುಸಲ ನಾಟಕದಲ್ಲಿ ಕ್ರಿ.ಪೂ.ದಲ್ಲಿ ನಡೆದಿರಬಹುದಾದ ಒಂದು ಘಟನೆಯ ಮೂಲಕ ಸಮಕಾಲೀನವನ್ನು ನಾಟ್ಯೀಕರಿಸಲು ಯತ್ನಿಸಲಾಗಿದೆ. ಪ್ರಜಾಡಳಿತ ನಿಧಾನವಾಗಿ ಅಧಿಕಾರ ವ್ಯಾಮೋಹಿಗಳಿಂದಾಗಿ ಹೊರಗಿನವರ ಕೈವಶವಾಗಿ ಸಾಮ್ರಾಜ್ಯಶಾಹಿಯು ಮೇಲುಗೈ ಪಡೆಯುವ ವ್ಯಾಖ್ಯಾನವೊಂದನ್ನು ಇಲ್ಲಿ ಮಂಡಿಸಲಾಗಿದೆ. ಇದೆಲ್ಲವೂ ಪರಿಣಾಮದಲ್ಲಿ ಮಾತ್ರ ಗೋಚರವಿದ್ದು ಕಾರಣಶಕ್ತಿ ಮಾತ್ರ ಅಗೋಚರವಿರುವುದೆಂಬ ಭಾವ ರಥಮುಸಲವೆಂಬ ಸಮರಾಯುಧದ ಕಲ್ಪನೆಯಲ್ಲಿದೆ… ವಸ್ಸಕಾರ ತಾನೇ ಚಿನ್ನ ಬಚ್ಚಿಟ್ಟು ತಾನೇ ಚಿನ್ನಕ್ಕಾಗಿ ಹುಡುಕಾಟ ನಡೆಸಿ ಜನರನ್ನೆಲ್ಲಾ ಹಿಂಸಿಸುತ್ತಾ ಹೋಗುವುದು, ಚಿನ್ನದ ಗೌಪ್ಯ ಕಾಯಲೆಂದು ಹೋದವನು ಒಂಟಿತನವನ್ನು ಸಹಿಸಲಾಗದೇ ಕೊಳಲು ನಾದದ ಬೆನ್ನುಹತ್ತಿ ಜನರ ನಡುವೆ ಮತ್ತೆ ಬರುವುದು..ಇವೆಲ್ಲವೂ ಸಾಕಷ್ಟು ಧ್ವನಿರಮ್ಯವಾಗಿ ಮಂಡಿತವಾದವು. ರಾಜ್ಯವೇ ಬಂದೀಖಾನೆಯಾದಾಗ ನಾಟ್ಯಾಚಾರ್ಯ ಮತ್ತು ವಿದೂಷಕರು ತಮ್ಮ ವೃತ್ತಿಗೆ ತಂದುಕೊಳ್ಳುವ ತಿರುವುಗಳು ಕೂಡಾ ಒಟ್ಟು ನಾಟಕದ ಬಂಧಕ್ಕೆ ವಿಶಿಷ್ಟ ಆಯಾಮವನ್ನು ತರುವಂತಿವೆ.”
ಆದರೆ ಮತ್ತೊಬ್ಬ ಪ್ರಸಿದ್ಧ ವಿಮರ್ಶಕರು ನಾಟಕ ಪ್ರದರ್ಶನವನ್ನು ಮೆಚ್ಚಿ ಬರೆದರೂ ನಾಟಕದ ಬಗ್ಗೆಯೇ ತಗಾದೆ ಎತ್ತಿದ್ದು,ನಾಟಕದ ಬಂಧ ಸರಿಯಿಲ್ಲವೆಂಬಂತೆ ಬರೆದದ್ದು,ನಿರ್ದೇಶಕರ ಅಪಾರ ಶ್ರಮ ನಾಟಕದ ಶಿಥಿಲ ರಚನೆಯಿಂದಾಗಿ ವ್ಯರ್ಥವಾಯಿತೆಂಬಂತೆ ಬರೆದದ್ದು ದೇವ ಅವರಿಗೆ ತುಂಬಾ ಬೇಸರವನ್ನುಂಟುಮಾಡಿತು. ‘For the first time a playwright has been attacked like this” ಎಂದು ನಮ್ಮ ಬಳಿ ಪೇಚಾಡಿಕೊಂಡರು.”ಎಲ್ಲ ವಿಮರ್ಶೆಗಳೂ ವಸ್ತುನಿಷ್ಠವಾಗಿರುವುದಿಲ್ಲ..ಎಲ್ಲ ವಿಮರ್ಶಕರೂ ನಿಷ್ಪಕ್ಷಪಾತವಾಗಿಯೇ ಬರೆಯುತ್ತಾರೆಂದೂ ಹೇಳಲಾಗುವುದಿಲ್ಲ..ಇಂತಹ ಪೂರ್ವಗ್ರಹ ಪೀಡಿತ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ” ಎಂದು ನಾವೇ ಅವರಿಗೆ ಸಮಾಧಾನ ಹೇಳಿದೆವು.

ಆದರೆ ರಥಮುಸಲ ರಂಗದ ಮೇಲೆ ಯಶಸ್ವಿಯಾದರೂ ಕಲಾವಿದರ ಅಲಭ್ಯತೆಯ ಕಾರಣದಿಂದಾಗಿ ಹೆಚ್ಚು ಪ್ರದರ್ಶನಗಳನ್ನು ಕಾಣಲಾಗದೇ ಹೋದುದು ನನಗಂತೂ ತುಂಬಾ ನೋವಿನ ಸಂಗತಿಯಾಯಿತು.ಏನೇ ಆಗಲಿ, ರಾಮಚಂದ್ರ ದೇವ ಅವರ ‘ರಥಮುಸಲ’ ನಾಟಕ ಮಾತ್ರ ಇಂದಿಗೂ ಸಾಂದರ್ಭಿಕವೆನ್ನಿಸುವ, ಅನೇಕ ರಂಗಸಾಧ್ಯತೆಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವ, ನಿರ್ದೇಶಕರಿಗೆ ಸವಾಲೊಡ್ಡುವ ಕನ್ನಡದ ಒಂದು ಶ್ರೇಷ್ಠ ನಾಟಕ ಎಂಬುದಂತೂ ನನ್ನ ಖಚಿತ ಗ್ರಹಿಕೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: