ಶ್ರೀನಿವಾಸ ಪ್ರಭು ಅಂಕಣ- ನಹೀ ಭಯ್ಯಾ.. ಆಜ್ ಭೀ ಕುಛ್ ನಹೀ ಆಯಾ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

28

ಸವಿತಾಳ ಮಾತು ಕೇಳಿ ನಮ್ಮ ಉತ್ಸಾಹವೆಲ್ಲಾ ಜರ್ರನೆ ಇಳಿದುಹೋಯಿತು. ಹ್ಯಾಪುಮೋರೆ ಹಾಕಿಕೊಂಡು ಹಾಸ್ಟೆಲ್ ನತ್ತ ಹೆಜ್ಜೆ ಹಾಕಿದೆವು. ‘ಥೂ.. ಖರೇ ಆಗಲಾರದ ಕನಸು ಯಾಕಾರಾ ಬೀಳ್ತವೋ ಏನೋ’ ಎಂದು ದಾರಿಯುದ್ದಕ್ಕೂ ಅಶೋಕ ಗೊಣಗುತ್ತಲೇ ಇದ್ದ. ಇಂಥಾ ಸಂಕಟಕಾಲದಲ್ಲೂ ಅಶೋಕನಿಗೆ ಒಂದು ದಿವ್ಯವಾದ ವಿಚಾರ ಹೊಳೆದುಬಿಟ್ಟಿತು. ಬಹುಶಃ ಇದುವರೆಗೆ NSD ಯಲ್ಲಿ ಯಾವ ವಿದ್ಯಾರ್ಥಿಯೂ ಕನ್ನಡ ನಾಟಕ ಮಾಡಿಸಿಲ್ಲ.. ನಾವೇ ಏಕೆ ಮೊದಲಿಗರಾಗಬಾರದು? ಅವನ ಉತ್ಸಾಹ ಕಂಡು ನಾನು ದಂಗಾಗಿಹೋದೆ.

ಬಿಜಾಪುರದಲ್ಲಿ ಚಂದ್ರಕಾಂತ ಕುಸನೂರರ ‘ಆನಿ ಬಂತಾನಿ’ ಎಂಬ ಅಸಂಗತ ನಾಟಕವನ್ನು ಅಶೋಕ ಮಾಡಿಸಿದ್ದನಂತೆ. ಆ ನಾಟಕದಲ್ಲಿನ ಅವನ ಅಭಿನಯಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿತ್ತಂತೆ. ಕೇವಲ ಮೂರೇ ಪಾತ್ರಗಳಿದ್ದ ಆ ನಾಟಕವನ್ನೇ ನಾವು ಮೂವರು ಕನ್ನಡಿಗರು ಏಕೆ ಮಾಡಬಾರದು? ಎಂಬುದು ಅಶೋಕನ ವಿಚಾರವಾಗಿತ್ತು.

Classroom production ಆಗಿ ನಾವು ನಾಟಕ ಮಾಡಲು ಯಾವುದೇ ತೊಡಕಿರಲಿಲ್ಲವಾದರೂ ನಾವಿನ್ನೂ ಪ್ರಥಮ ವರ್ಷದ ವಿದ್ಯಾರ್ಥಿಗಳಾದ್ದರಿಂದ ನಾವೇ ನಿರ್ದೇಶನ ಮಾಡುವಂತಿರಲಿಲ್ಲ. ಅದಕ್ಕೂ ಅಶೋಕನ ಬಳಿ ಉಪಾಯ ಸಿದ್ಧವಿತ್ತು: ‘ಯಾರಾದರೂ ಹಿರಿಯ ವಿದ್ಯಾರ್ಥಿಗಳನ್ನು ನಿರ್ದೇಶಿಸಲು ಕೋರಿಕೊಳ್ಳುವುದು! ಅವರಿಗೆ ನಾವು ನಾಟಕವನ್ನು ಅರ್ಥಮಾಡಿಸಿ ಕೊಟ್ಟರಾಯಿತು!’ ಸರಿ, ನಿರ್ದೇಶಕರ ಬೇಟೆ ಶುರುವಾಯಿತು. ನಾವು ಅಂದುಕೊಂಡಷ್ಟು ಸುಲಭವೇನಾಗಿರಲಿಲ್ಲ ನಿರ್ದೇಶಕರನ್ನು ನೇಮಿಸಿಕೊಳ್ಳುವುದು. ಸಾಕಷ್ಟು ಹುಡುಕಾಟ—ಚರ್ಚೆಗಳ ನಂತರ ಕಡೆಗೊಬ್ಬ ಹಿರಿಯ ವಿದ್ಯಾರ್ಥಿ, ಜ್ಯೋತಿ ಸ್ವರೂಪ್, ನಮ್ಮ ನಾಟಕವನ್ನು ನಿರ್ದೇಶಿಸಲು ಒಪ್ಪಿಕೊಂಡ. ಅಶೋಕ, ನಾನು ಹಾಗೂ ಭಾರತಿ—ಮೂವರೂ ಪಾತ್ರಧಾರಿಗಳು.

ನಾಟಕವನ್ನು ಸ್ವಲ್ಪ ಭಿನ್ನವಾದ ದೃಷ್ಟಿಕೋನದಿಂದ ನೋಡಬಯಸಿದ ನಿರ್ದೇಶಕ ತನಗಾಗಿ ಹೆಚ್ಚು ಮಾತುಗಳಿಲ್ಲದ ಒಂದು ಹೊಸ ಪಾತ್ರವನ್ನೂ ಸೃಷ್ಟಿಸಿಕೊಂಡು ಅಸಂಗತ ನಾಟಕಕ್ಕೆ ಶೈಲೀಕೃತ ಪ್ರಸ್ತುತಿಯ ಸ್ಪರ್ಶ ನೀಡಿ ಅಣಿಗೊಳಿಸಿದ. 15-20 ದಿನಗಳ ಸತತ ಅಭ್ಯಾಸದ ನಂತರ ಸ್ಟುಡಿಯೋ ಥಿಯೇಟರ್ ನಲ್ಲಿ ಪ್ರದರ್ಶನವನ್ನು ಏರ್ಪಡಿಸಿದೆವು. ಅನೇಕ ಸಹಪಾಠಿಗಳು, ಹಿರಿಯ ವಿದ್ಯಾರ್ಥಿಗಳು ತುಂಬು ಆಸಕ್ತಿ—ಕುತೂಹಲಗಳಿಂದ ಪ್ರದರ್ಶನಕ್ಕೆ ಬಂದಿದ್ದರು. ಮುಖ್ಯಪಾತ್ರದಲ್ಲಿದ್ದ ಅಶೋಕನಂತೂ ಅದ್ಭುತ ಅಭಿನಯ ನೀಡಿ ಎಲ್ಲರ ಗಮನ ಸೆಳೆದ. ನಾಟಕವೂ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಏತನ್ಮಧ್ಯೆ ಬಾಲಭವನದ ಯಾವುದೋ ಕಾರ್ಯಕ್ರಮದ ನಿಮಿತ್ತವಾಗಿ ಖ್ಯಾತ ಅಭಿನೇತ್ರಿ ಬಿ.ಜಯಶ್ರೀ ಅವರು ದೆಹಲಿಗೆ ಬಂದರು. ಅವರ ಜೊತೆಯಲ್ಲಿ ಪ್ರಸಿದ್ಧ ನಟಿ ಆರ್. ಟಿ. ರಮಾ ಅವರ ಸೋದರಿಯೂ ನೃತ್ಯಕಲಾವಿದೆಯೂ ಆಗಿದ್ದ ಪ್ರಭಾ ಅವರೂ ಸಹಾ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡಲು ಬಂದಿದ್ದರು. ಬಿ. ಜಯಶ್ರೀಯವರೂ ಸಹಾ ನಮ್ಮ ನಾಟಕ ಶಾಲೆಯಲ್ಲೇ ಕಲಿತವರು. ಪ್ರಸನ್ನ ಅವರು ನಿರ್ದೇಶಿಸಿದ್ದ ‘ತಾಯಿ’ ನಾಟಕದಲ್ಲಿನ ಅವರ ಅಭಿನಯವನ್ನು ನೋಡಿ ನಾನು ಅವರ ಅಭಿಮಾನಿಯೇ ಆಗಿಹೋಗಿದ್ದೆ. ಅವರ ಆಹ್ವಾನದ ಮೇರೆಗೆ ನಾನು ಹಾಗೂ ಅಶೋಕ ಬಾಲಭವನಕ್ಕೆ ಹೋಗಿ ಅವರ ಕಾರ್ಯಕ್ರಮಗಳನ್ನು ನೋಡಿ ನಂತರ ಅವರ ಆತಿಥ್ಯವನ್ನೂ ಸ್ವೀಕರಿಸಿ ಅಲ್ಲಿಂದ ಹೊರಟೆವು. ಅಲ್ಲಿಯ ತನಕ ಎಲ್ಲಾ ಸುಸೂತ್ರವಾಗಿಯೇ ನಡೆದಿತ್ತು. ಹೊರಬಾಗಿಲ ಬಳಿ ಬಂದು ಅವರೆಲ್ಲರಿಗೂ ಶುಭರಾತ್ರಿ ಹೇಳಿ ಇನ್ನೇನು ಹೊರಡಬೇಕು—ನಮ್ಮ ಅಶೋಕ ಚಕ್ರವರ್ತಿಗಳು ಫರಮಾನ್ ಹೊರಡಿಸಿಯೇಬಿಟ್ಟರು: ‘ನಾಡಿದ್ದು ರವಿವಾರ ನೀವೆಲ್ಲರೂ ನಮ್ಮಲ್ಲಿಗೆ ಊಟಕ್ಕೆ ಬರ್ರಿ.’ ಅಶೋಕನ ಮಾತು ಕೇಳಿ ನಾನು ಸ್ತಂಭೀಭೂತನಾಗಿ ಹೋದೆ. ಅವರು ‘ಬೇಡ, ಪರವಾಗಿಲ್ಲ.. ನಿಮಗ್ಯಾಕೆ ತೊಂದರೆ’ ಎಂದು ಹೇಳುತ್ತಲೇ ಇದ್ದರೂ, ನಾನು ಎಚ್ಚರಿಕೆ ನೀಡುವಂತೆ ಅವನ ಷರ್ಟ್ ನ ತುದಿಯನ್ನು ಜಗ್ಗುತ್ತಲೇ ಇದ್ದರೂ ಪುಣ್ಯಾತ್ಮನಿಗೆ ಧ್ಯಾನವೇ ಇಲ್ಲ! ‘ಏ… ಹಂಗ್ಹೆಂಗ್ ಆಗ್ತತಿ! ನೀವು ಬರಾಕಾ ಬೇಕು.. ಬಡವರ ಆತಿಥ್ಯ ಸ್ವೀಕರಿಸಿಯೇ ತೀರಬೇಕು’ ಎಂದು ಹಠ ಹಿಡಿದು ಅವರನ್ನು ಒಪ್ಪಿಸಿಯೇ ಬಿಟ್ಟ. ಜಯಶ್ರೀ ಅಕ್ಕಯ್ಯ, ಪ್ರಭಾ ಹಾಗೂ ಮೂವರು ನೃತ್ಯಕಲಾವಿದರು ಭಾನುವಾರ ಮಧ್ಯಾಹ್ನದ ಊಟಕ್ಕೆ ನಮ್ಮ ಅತಿಥಿಗಳಾಗಿ ಆಗಮಿಸುವವರಿದ್ದರು! ಅಲ್ಲಿಂದ ಹೊರಟಮೇಲೆ ಸುಮಾರು ಹೊತ್ತು ನಾನು ಮಾತಾಡಲಿಲ್ಲ. ಅಶೋಕನೇ ಮಾತಿಗೆಳೆದ: ‘ಯಾಕಲೇ ಮಗನಾ… ಗಡಿಗಿ ಮಾರಿ ಹೊತ್ತುಕೊಂಡು ಹೊಂಟೀ… ಸಿಟ್ಟಿಗೆದ್ದೀಯೇನು?’ ನನಗೂ ಅಷ್ಟುಹೊತ್ತೂ ಅದುಮಿಟ್ಟುಕೊಂಡಿದ್ದ ಸಿಟ್ಟು ಕಟ್ಟೆಯೊಡೆದು ಸಿಡಿಯಿತು: ‘ಜೇಬಲ್ಲಿರೋ ಚಿಲ್ಲರೆ ಪಲ್ಲರೆ ಎಲ್ಲಾ ಒಟ್ಟುಹಾಕಿದರೂ 20 ರೂಪಾಯಿ ದಾಟೋಲ್ಲ.. ದೊಡ್ಡ ಜಮೀನ್ದಾರನ ಹಾಗೆ ಔತಣಕ್ಕೆ ಆಹ್ವಾನ ಕೊಟ್ಟು ಬಂದಿದೀಯಲ್ಲಾ.. ಬುದ್ಧಿ ಇದೆಯಾ ನಿನಗೆ?’

‘ಹೊಗಾ ಇವನಾ.. ಏ ಮಳ್ಳಾ.. ನಮ್ಮ ಮೆಸ್ ನ್ಯಾಗ ಊಟ ಹಾಕಿಸಾಕ ರೊಕ್ಕ ಯಾಕೋ ಬೇಕು? Scholarship ಬಂದಮ್ಯಾಲ ಎಲ್ಲಾ ಸೇರಿಸಿ ಕೊಟ್ರಾತಪಾ… ನೀ ಏನೂ ಕಾಳಜಿ ಮಾಡಬ್ಯಾಡ.. ನಾ ಎಲ್ಲಾ ನೋಡ್ಕತೀನಿ’ ಎಂದು ನಿರುಮ್ಮಳವಾಗಿ ನುಡಿದ ಅಶೋಕ. ನನಗೆ ಯಾಕೋ ಒಳಗೊಳಗೇ ಅಳುಕು ಬಾಧಿಸುತ್ತಿತ್ತು… ‘ಏನೋ ಸರಿಹೋಗುತ್ತಿಲ್ಲ.. ಎಲ್ಲೋ ತಪ್ಪಾಗಿದೆ’ ಅಂತಲೇ ಅನ್ನಿಸುತ್ತಿತ್ತು.

ನಮ್ಮ ಮೆಸ್ ನಡೆಸುತ್ತಿದ್ದವನ ಹೆಸರು ನಿಕ್ಕು ಎಂದು. ಮರುದಿನ ಮುಂಜಾನೆ ಇಬ್ಬರೂ ನಿಕ್ಕುವಿನ ಬಳಿ ಹೋಗಿ, ‘ನಿಕ್ಕು ಭಾಯ್, ನಾಳೆ ಐದು ಜನ ನಮ್ಮ ಅತಿಥಿಗಳು ಊಟಕ್ಕೆ ಬರ್ತಿದಾರೆ.. ಒಂದು sweet ಮಾಡೋದಕ್ಕೆ ಸಾಧ್ಯವೇ?’ ಎಂದು ಸಾಕಷ್ಟು ವಿಶ್ವಾಸದಿಂದಲೇ ಕೇಳಿದರೂ ದನಿಯಲ್ಲಿದ್ದ ಸಣ್ಣ ನಡುಕ ಯಾರಿಗೂ ತಿಳಿಯುವಂತಿತ್ತು! ಒಂದು ಕ್ಷಣ ನಮ್ಮನ್ನು ದಿಟ್ಟಿಸಿದ ನಿಕ್ಕು ಭಾಯ್ ಸಾವಕಾಶವಾಗಿ ಕೇಳಿದ: ‘ಪಾಂಚ್ ಲೋಗ್ ಆ ರಹೇ ಹೈ ಕ್ಯಾ?’ ನಾವು, ಸಧ್ಯ, ತಕರಾರಿಲ್ಲದೇ ಒಪ್ಪಿಕೊಳ್ಳುತ್ತಿದ್ದಾನೆ’ ಎಂದು ಭಾವಿಸಿ ಖುಷಿಯಿಂದಲೇ ಹೌದೆನ್ನುವಂತೆ ತಲೆ ಆಡಿಸಿದೆವು. ‘ಪಾಂಚ್ ಹೀ ಕ್ಯೂ? ಪೂರೇ ದಿಲ್ಲೀವಾಲೋಂಕೋ ಬುಲಾಲೋನಾ.. ದಾವತ್ ದೇದೂಂಗಾ! ಸಾಲಾ ದೋ ಮಹೀನೇ ಸೇ ಖಾ ರಹೇ ಹೋ.. ಏಕ್ ಪೈಸಾ ನಹೀ ದಿಯಾ.. ಊಪರ್ ಸೇ ಗೆಸ್ಟ್ ಕೋ ಲಾ ರಹೇ ಹೋ…’ ಎಂದು ಇದ್ದಕ್ಕಿದ್ದಂತೆ ನಿಕ್ಕು ಒಂದೇ ಸಮ ಕಚ್ಚತೊಡಗಿದ!

ನಾನಂತೂ ಎಲ್ಲಾ ಭರವಸೆಯನ್ನೂ ಕಳೆದುಕೊಂಡು ಹತಾಶೆಯಿಂದ ತಲೆಯ ಮೇಲೆ ಕೈಹೊತ್ತುಕೊಂಡು ಕೂತುಬಿಟ್ಟೆ. ಆದರೆ ಹಾಗೆ ಸೋಲೊಪ್ಪಿಕೊಳ್ಳುವ ಜಾಯಮಾನವೇ ಅಲ್ಲ ಅಶೋಕನದು. ಮೆಲ್ಲಗೆ ಮಾತಾಡತೊಡಗಿದ: ‘ನಿಕ್ಕು ಭಾಯ್, ತೂ ಸಿರ್ಫ್ ಹಮಾರಾ ದೋಸ್ತ್ ಹೀ ನಹೀ.. ಅನ್ನದಾತಾ ಹೋ.. ಮಾಯಿ ಬಾಪ್ ಹೋ’ ಎಂದು ಹೇಳುವಷ್ಟರಲ್ಲಿಯೇ ಅವನ ಕಣ್ಣಿನಿಂದ ತಟತಟನೆ ಹನಿಗಳು ಉದುರತೊಡಗಿದವು! ಆಗಲೇ ನಿಕ್ಕು ಕೊಂಚ ವಿಚಲಿತನಾದಂತೆ ಕಂಡು ಬಂದಿತು! ಮಾತು ಮುಂದುವರೆಸಿದ ಅಶೋಕ ನಮ್ಮ ಕರುಣಾಜನಕ ಸ್ಥಿತಿಯನ್ನಷ್ಟು ವಿಜೃಂಭಿಸಿ, ನಿಕ್ಕುವನ್ನು ಒಂದಿಷ್ಟು ಉಬ್ಬಿಸಿ ಅಟ್ಟಕ್ಕೇರಿಸಿ ಓಲೈಸುತ್ತಿದ್ದಂತೆ ನಿಕ್ಕು ಪೂರ್ತಿ ತಣ್ಣಗಾಗಿಬಿಟ್ಟ! ನಮ್ಮ ಅತಿಥಿಗಳಿಗೆ ಊಟದ ಜತೆಗೆ ಖೀರ್ ಕೂಡಾ ಮಾಡಿಕೊಡುವುದಾಗಿ ಆಶ್ವಾಸನೆ ಕೊಟ್ಟು ಹೊರಟಾಗ ಅಶೋಕನ ತುಟಿಯಂಚಿನಲ್ಲಿ ಸಣ್ಣ ನಗು ಇಣುಕುತ್ತಿತ್ತು!
ನನಗೆ ಮಾತ್ರ ಎದೆ ಢವಗುಡುತ್ತಲೇ ಇತ್ತು… ಅಕಸ್ಮಾತ್ ನಿಕ್ಕು ಮನಸ್ಸು ಬದಲಾಯಿಸಿಬಿಟ್ಟರೆ? ನಮ್ಮ ಅತಿಥಿಗಳ ಎದುರಿಗೆ ಅವಮಾನವಾಗುವಂತೆ ಮಾತಾಡಿಬಿಟ್ಟರೆ?.. ಪುಣ್ಯವಶಾತ್ ಹಾಗೇನೂ ಆಗಲಿಲ್ಲ. ಮರುದಿನ ಬಂದ ನಮ್ಮ ಅತಿಥಿಗಳಿಗೆ ಒಳ್ಳೆಯ ಅಡಿಗೆಯನ್ನೇ ಮಾಡಿ ಬಡಿಸಿದ ನಿಕ್ಕು ಕೊಟ್ಟ ಮಾತು ಉಳಿಸಿಕೊಂಡ.. ನಮ್ಮ ಮರ್ಯಾದೆಯನ್ನೂ ಕಾಪಾಡಿದ. ಬಂದ ಅತಿಥಿಗಳನ್ನು ಆದರದಿಂದ ಸತ್ಕರಿಸಿ ಒಂದಿಷ್ಟು ಸಾರ್ಥಕ ಸಮಯವನ್ನು ಅವರೊಟ್ಟಿಗೆ ಕಳೆದು ಬೀಳ್ಕೊಟ್ಟ ಬಳಿಕವೇ ನನ್ನ ಉಸಿರಾಟ ಸಹಜ ಸ್ಥಿತಿಗೆ ಬಂದದ್ದು!

ಈ ಸಮಯದಲ್ಲೇ ನಾನು ಲೈಟಿಂಗ್ ವಿಭಾಗದಲ್ಲಿ ನೆರವಾದ ಮತ್ತೊಂದು ಮಹತ್ವದ ನಾಟಕವೆಂದರೆ ಪ್ರಸಿದ್ಧ ಅಮೆರಿಕನ್ ನಾಟಕಕಾರ ಯೂಜೀನ್ ಓ ನೀಲ್ ನ ‘ಗ್ರೇಟ್ ಗಾಡ್ ಬ್ರೌನ್’. ಈ ನಾಟಕವನ್ನು ನಿರ್ದೇಶಿಸಿದ್ದವರು ಅದಾಗಲೇ ಕ್ರಿಯಾಶೀಲ ನಿರ್ದೇಶಕರೆಂದು ಹೆಸರು ಪಡೆದಿದ್ದ ಯೂಸುಫ್ ಎಂಬ ಮೂರನೇ ವರ್ಷದ ವಿದ್ಯಾರ್ಥಿ. ‘ಮುಖವಾಡಗಳ ನಾಟಕ’ ಎಂದೇ ಪ್ರಸಿದ್ಧವಾಗಿರುವ ಈ ನಾಟಕದಲ್ಲಿ ಯೂಜೀನ್ ಓ ನೀಲ್, ವ್ಯಕ್ತಿಗಳ ಆಂತರಂಗಿಕ ಹಾಗೂ ಸಾರ್ವಜನಿಕ ವ್ಯಕ್ತಿತ್ವಗಳನ್ನು ಮುಖವಾಡಗಳ ಬದಲಾವಣೆಯ ಮೂಲಕ ದಾಖಲಿಸುತ್ತಲೇ, ಬದಲಾಗುತ್ತಾ ಹೋಗುವ ವ್ಯಕ್ತಿಗಳ ಒಳಮನದ ಪದರಗಳನ್ನು ಅನಾವರಣಗೊಳಿಸುತ್ತಾನೆ. ಅಭಿವ್ಯಕ್ತಿ ಪಂಥಕ್ಕೆ ಸೇರಿದ ಈ ನಾಟಕ ನನ್ನ ಮೇಲೆ ವಿಶೇಷ ಪ್ರಭಾವವನ್ನು ಬೀರಿ ಓ ನೀಲ್ ನ ಇತರ ನಾಟಕಗಳನ್ನೂ ನಾನು ಓದತೊಡಗಿದೆ. ಅವುಗಳಲ್ಲಿ ಮತ್ತೆ ನನ್ನನ್ನು ಗಾಢವಾಗಿ ತಟ್ಟಿದ್ದು ‘ಎಂಪರರ್ ಜೋನ್ಸ್’ ಎಂಬ ನಾಟಕ. ಆಗಲೇ ಆ ನಾಟಕವನ್ನು ಕನ್ನಡಕ್ಕೆ ಅಳವಡಿಸಿಕೊಳ್ಳಲು ಪ್ರಾರಂಭಿಸಿಯೇ ಬಿಟ್ಟೆ. ನನ್ನ ಮೊಟ್ಟಮೊದಲ ನಿರ್ದೇಶನದ ನಾಟಕವೂ ಸಹಾ ಅದೇ: ‘ಎಂಪರರ್ ಜೋನ್ಸ್’ ನ ರೂಪಾಂತರವಾದ ‘ಬೆಳ್ಳಿಗುಂಡು’. ಈ ಕುರಿತು ವಿವರವಾಗಿ ಬರೆಯುತ್ತೇನೆ.

ಸುಹಾಸ್ ಖಾಂಡ್ಕೆ ಎಂಬ ಒಬ್ಬ ಹಿರಿಯ ವಿದ್ಯಾರ್ಥಿ ಲೈಟಿಂಗ್ ನಲ್ಲಿ ನನಗಿದ್ದ ಅಪಾರ ಆಸಕ್ತಿಯನ್ನು ಗಮನಿಸಿ, ತಾನೇ ನಿರ್ದೇಶಿಸಿ ಅಭಿನಯಿಸುತ್ತಿದ್ದ ಒಂದು ನಾಟಕಕ್ಕೆ ಲೈಟಿಂಗ್ ಮಾಡುವ ಜವಾಬ್ದಾರಿಯನ್ನು ನನಗೊಪ್ಪಿಸಿದ. ಶಾಲೆಗೆ ಸೇರಿದ ಹೊಸತರಲ್ಲೇ ಇಷ್ಟು ದೊಡ್ಡ ಅವಕಾಶ ದೊರೆಯುತ್ತದೆಂದು ನಾನು ನಿರೀಕ್ಷಿಸಿರಲಿಲ್ಲ. ಆ ನಾಟಕದಲ್ಲಿ ನಾಯಕನ ಸ್ವಗತದ ಒಂದು ದೀರ್ಘ ದೃಶ್ಯವಿತ್ತು. ನಾಯಕ ಇಡಿಯ ರಂಗದಲ್ಲಿ ಅಡ್ಡಾಡುತ್ತಾ ಒಂದಷ್ಟುಹಳೆಯ ನೆನಪುಗಳನ್ನು ಪ್ರೇಕ್ಷಕನೊಂದಿಗೆ ಹಂಚಿಕೊಳ್ಳುತ್ತಾ ಹೋಗುವ ಆ ದೃಶ್ಯದಲ್ಲಿ ವಿವಿಧ ಭಾವಗಳ ಪ್ರದರ್ಶನಕ್ಕೂ ಹೇರಳವಾದ ಅವಕಾಶವಿತ್ತು. ‘ಇದಿಷ್ಟು ನನ್ನಕಥೆ ನೋಡಿ’ ಎಂದು ಕೊನೆಯಲ್ಲಿ ನಾಯಕ ಕುರ್ಚಿಯಲ್ಲಿ ಕೂರುವುದರೊಂದಿಗೆ ದೃಶ್ಯ ಮುಕ್ತಾಯವಾಗುತ್ತಿತ್ತು.

ನಾನು ನಾಯಕನ ಸ್ವಗತದ ಒಂದೊಂದು ಭಾವಕ್ಕೆ ಒಂದೊಂದು ಬಣ್ಣವನ್ನು ನಿಯೋಜಿಸಿ, ಒಂದಾದ ಮೇಲೊಂದರಂತೆ ಅವುಗಳನ್ನು ಪ್ರಕಾಶಿಸುತ್ತಾ ವಿವಿಧ ಬಣ್ಣಗಳ ಓಕುಳಿಯಲ್ಲಿ ನಾಯಕ ಮೀಯುವಂತೆ ಮಾಡಿ ಕೊನೆಯಲ್ಲಿ ಅವನು ಕುರ್ಚಿಯಲ್ಲಿ ಕೂರುವ ವೇಳೆಗೆ ಇಡಿಯ ರಂಗದಲ್ಲಿ ಝಗ್ಗೆಂದು ಬೆಳಕು ಆವರಿಸಿಕೊಳ್ಳುವಂತೆ ಸಂಯೋಜನೆ ಮಾಡಿದ್ದೆ. ಹಾಗೆ ಬೆಳಕು ಆವರಿಸಿಕೊಂಡ ಚಣದಲ್ಲೇ ಸಭಿಕರು ಕರತಾಡನದ ಮೂಲಕ ಆ ದೃಶ್ಯದ ಬೆಳಕಿನ ಸಂಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು! ಇದೂ ಸಹಾ ನನ್ನ ಆತ್ಮವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸಿದ ಒಂದು ಪ್ರಸಂಗ.

ಒಂದು ಮುಂಜಾನೆ ಎದ್ದು ಸಿದ್ಧರಾಗಿ ಶಾಲೆಗೆ ಹೊರಟ ಹೊತ್ತಿನಲ್ಲಿ ನೋಡಿದರೆ ಮೆಸ್ ನಲ್ಲಿ ಯಾವುದೇ ಚಟುವಟಿಕೆ ಕಾಣುತ್ತಿಲ್ಲ! ಅಲ್ಲಿದ್ದ ನಮ್ಮ ಸಹಪಾಠಿಗಳನ್ನು ವಿಚಾರಿಸಿದಾಗ ತಿಳಿದುಬಂದ ಆಘಾತಕಾರಿ ಸುದ್ದಿ—ನಿಕ್ಕು ಮೆಸ್ ಅನ್ನು ಬಂದ್ ಮಾಡಿದ್ದಾನೆ. ತುಂಬಾ ಹುಡುಗರು ಹಲವಾರು ತಿಂಗಳುಗಳ ಬಾಕಿ ಉಳಿಸಿಕೊಂಡಿದ್ದು ಆ ಬಾಕಿ ಚುಕ್ತಾ ಆಗುವವರೆಗೂ ಮೆಸ್ ಪ್ರಾರಂಭಿಸುವುದಿಲ್ಲವಂತೆ. ‘ಹೊಸದೊಂದು ತಲೆನೋವು ಆರಂಭವಾಯಿತೇ’ ಎಂದು ಪೇಚಾಡಿಕೊಳ್ಳುತ್ತಾ ಶಾಲೆಗೆ ಹೊರಟೆವು. ಅಂದಿನಿಂದ ನಮ್ಮ ಊಟ ಶಾಲೆಯಿಂದ ತುಸುವೇ ದೂರದಲ್ಲಿದ್ದ ರೆಫ್ಯೂಜಿ ಮಾರ್ಕೆಟ್ ನಲ್ಲಿ. ಆ ಜಾಗಕ್ಕೆ ಆ ಹೆಸರು ಹೇಗೆ ಬಂತೋ ಅರಿಯೆ—ಆದರೆ ಅದು ಒಂದು ರೀತಿಯಲ್ಲಿ ಅನ್ವರ್ಥನಾಮವೇ ಆಗಿತ್ತು. ಅಲ್ಲಿ 50 ಪೈಸೆಗೆ ಒಂದು ರೊಟ್ಟಿ. ಅದರ ಜತೆ ಎರಡು ಚಮಚ ಬೇಳೆ (ದಾಲ್) ಹಾಗೂ ಈರುಳ್ಳಿಯನ್ನು ಉಚಿತವಾಗಿ ಕೊಡುತ್ತಿದ್ದ.

ಪಲ್ಯ—ಸಬ್ಜಿ ಬೇಕೆಂದರೆ ಅದಕ್ಕೆ ಎಂಬತ್ತು ಪೈಸೆ ಕೊಡಬೇಕಿತ್ತು. ಅಶೋಕ—ನಾನು ಇಬ್ಬರೂ ನಮ್ಮ ಎಲ್ಲಾ ಬಟ್ಟೆಗಳ ಎಲ್ಲಾ ಜೇಬುಗಳನ್ನೂ ತಡಕಿ ನಮ್ಮಬೀರುವಿನ ಪ್ರತಿ ಸಂದಿಯನ್ನೂ ಹುಡುಕಿ ತೆಗೆದು ಒಟ್ಟುಹಾಕಿದ್ದು 15 ರೂಪಾಯಿಗಿಂತಲೂ ಕೊಂಚ ಕಡಿಮೆಯೇ. ಅಷ್ಟರಲ್ಲೇ ಹೇಗಾದರೂ ಒಂದಷ್ಟು ದಿನ ತಳ್ಳಬೇಕು… ಆ ವೇಳೆಗಾಗಲೇ ಬೆಳಗಿನ ತಿಂಡಿಯನ್ನು ಬಿಟ್ಟಾಗಿತ್ತು. ಎರಡು ಹೊತ್ತು ಊಟ.. ಜತೆಗೆ ಸಿಗರೇಟು! ಅಶೋಕ ಊಟವನ್ನಾದರೂ ಒಂದು ವೇಳೆ ಬಿಟ್ಟಾನು.. ಆದರೆ ಸಿಗರೇಟ್ ಬಿಟ್ಟಿರಲಾರ! ಎರಡು ದಿನದ ಊಟದ ನಂತರ ನಮ್ಮ ಊಟದಿಂದ ಪಲ್ಯವನ್ನು ಉಚ್ಚಾಟಿಸಲು ತೀರ್ಮಾನಿಸಿದೆವು.

ಸಿಗರೇಟಿನ ಜಾಗಕ್ಕೆ ಬೀಡಿ ಬಂತು. ನಾವು ಹೋಗುತ್ತಿದ್ದ ಢಾಬಾದ ಮಾಲೀಕ ಮಿಶ್ರಾ, ‘ಕ್ಯಾ ಸಬ್ಜಿ ದೂ?’ ಎಂದು ಕೇಳಿದರೆ ಅಶೋಕ ಬಲು ಗಾಂಭೀ ರ್ಯದಿಂದ ನನ್ನತ್ತ ತಿರುಗಿ, ‘ಸಬ್ಜಿ ಚಾಹಿಯೇ ಕ್ಯಾ’ ಎನ್ನುವುದು; ನಾನು ಅಷ್ಟೇ ನಿರಾಸಕ್ತಿಯಿಂದ ‘ನಹೀ’ ಎಂದು ತಲೆಯಾಡಿಸುವುದು… ಮಿಶ್ರಾ ಕೊಡುತ್ತಿದ್ದ ಚೂರು ಬೇಳೆ—ಈರುಳ್ಳಿಗಳ ಜತೆಗೇ ರೊಟ್ಟಿ ಕಡಿದು ಮುಗಿಸುವುದು.. ಹೀಗೇ ನಾಲ್ಕು ದಿನ ದೂಡಿದೆವು. ಒಮ್ಮೆಯಂತೂ ಮಿಶ್ರಾ ನಮ್ಮ ನಾಟಕ ನೋಡಿ ನಸು ನಗುತ್ತಾ, ‘NSD ಕೇ ಹೋ ಕ್ಯಾ?’ ಎಂದ. ಹೌದೆಂದು ತಲೆಯಾಡಿಸಿದೆವು. ನಮ್ಮಂಥವರು ಎಷ್ಟು ವಿದ್ಯಾರ್ಥಿಗಳನ್ನು ನೋಡಿದ್ದನೋ ಆ ಮಿಶ್ರಾ ಮಹಾಶಯ, ಆಗಾಗ್ಗೆ ಒಂದಿಷ್ಟು ಪಲ್ಯವನ್ನೂ ತಾಟಿಗೆ ಹಾಕಿಕೊಟ್ಟು, ‘ಕೋಈ ಬಾತ್ ನಹೀ.. ಪೈಸಾ ಆನೇಕೇ ಬಾದ್ ದೇನಾ’ ಎನ್ನುತ್ತಿದ್ದ. ಆದರೆ ಆ ‘ಪೈಸಾ’ ಯಾಕೋ ಬರಲು ತೀರಾ ತಕರಾರು ಮಾಡುತ್ತಿತ್ತು. ಮತ್ತೂ ಎರಡು ದಿನ ಕಳೆಯುವ ವೇಳೆಗೆ ನಮ್ಮ ಒಂದು ಹೊತ್ತಿನ ಊಟಕ್ಕೆ ತಿಲಾಂಜಲಿಯಾಯಿತು.

ಮತ್ತೆರಡು ದಿನ ಕಳೆಯುತ್ತಿದ್ದಂತೆ ಅಶೋಕ ದೊಡ್ಡ ದನಿಯಲ್ಲಿ ಘೋಷಿಸಿದ: ‘ರೊಕ್ಕ ಖಲ್ಲಾಸ್!’ ಯಾವ ಕಾರಣಕ್ಕೂ ಪ್ರಾಣಪ್ರಿಯ ಚಟಕ್ಕೆ ತೊಂದರೆಯಾಗಬಾರದೆಂದು ಮುಂಜಾಗ್ರತೆ ವಹಿಸಿ ಒಂದು ಬಂಡಲ್ ಬೀಡಿ ತಂದಿಟ್ಟುಬಿಟ್ಟಿದ್ದ! ಅಲ್ಲಿಂದ ಶುರುವಾಯಿತು ಉಪವಾಸದ ಬವಣೆಯ ದಿನಗಳು. ಹೊಟ್ಟೆ ತುಂಬಾ ನೀರು ಕುಡಿದು ಹೋಗಿ ಒಂದಿಷ್ಟು ತರಗತಿಗಳನ್ನು ಮುಗಿಸಿಕೊಂಡು ಬಂದು ನಮ್ಮ ಹಾಸ್ಟೆಲ್ ಮುಂಭಾಗದಲ್ಲಿದ್ದ ಲಾನ್ ನಲ್ಲಿ ಕೂರುತ್ತಿದ್ದೆವು.

ಅಶೋಕ ಮುಕೇಶನ ಹಾಡುಗಳನ್ನು ಸೊಗಸಾಗಿ ಹಾಡುತ್ತಿದ್ದ. ಈಗಿನ ನಮ್ಮ ಸಂಕಟದ ಹೊತ್ತಿಗೆ ಆ ವಿಷಾದದ ಹಾಡುಗಳು ಅಪ್ರಯತ್ನಪೂರ್ವಕವಾಗಿಯೇ ಸಮಯೋಚಿತವಾಗಿರುತ್ತಿದ್ದವು! ಯಾರಾದರೂ ಸಹಪಾಠಿಗಳೋ ಹಿರಿಯ ವಿದ್ಯಾರ್ಥಿಗಳೋ ಅಕಸ್ಮಾತ್, ‘ಚಲೋ ಯಾರ್ ಚಾಯ್ ಪಿಯೇಂಗೇ’ ಎಂದು ಕರೆದರೆ ಸಾಕು, ‘ಹಾಂ ಚಲೋ’ ಎಂದು ಅವರ ಜತೆ ಹೊರಟು ಚಹಾ ಕುಡಿದು, ಬಿಲ್ ಕೊಡುವ ವೇಳೆಯಲ್ಲಿ ತುಸು ದೂರದಲ್ಲಿ ಕೈಕಟ್ಟಿಕೊಂಡು ನಿಂತುಬಿಡುತ್ತಿದ್ದೆವು. ಅಲ್ಲಿ ಯಾರನ್ನೂ ಹಣ ಬೇಡಲು ಮುಜುಗರ.. ಸ್ವಾಭಿಮಾನ ಒಂದು ಕಾರಣವಾದರೆ ಬಹಳಷ್ಟು ವಿದ್ಯಾರ್ಥಿಗಳ ಪರಿಸ್ಥಿತಿ ನಮಗಿಂತೇನೂ ಉತ್ತಮವಾಗಿರದಿದ್ದುದು ಮತ್ತೊಂದು ಪ್ರಮುಖ ಕಾರಣವಾಗಿತ್ತು. ಬೆಂಗಳೂರಿನಿಂದ ಮಾತ್ರ ಆಶ್ವಾಸನೆಯ ಪತ್ರಗಳು ಬರುತ್ತಲೇ ಇದ್ದವು: ‘ಎಲ್ಲಾ ಔಪಚಾರಿಕತೆಯೂ ಪೂರ್ಣಗೊಂಡು ಮೇಲಧಿಕಾರಿಗಳ ಒಪ್ಪಿಗೆಯ ಮುದ್ರೆ ಬಿದ್ದಾಗಿದೆ… ಕೆಲವೇ ದಿನಗಳಲ್ಲಿ ಸ್ಕಾಲರ್ ಶಿಪ್ ಹಣ ಬರಲಿದೆ.. ಎದೆಗುಂದಬೇಡಿ’.

ಇದೇ ವೇಳೆಗೆ ಅಮ್ಮನದೊಂದು ಪತ್ರ ಬಂತು: ‘ಪ್ರೀತಿಯ ಪ್ರಭುವಿಗೆ ಆಶೀರ್ವಾದಗಳು. ಇದು ನವರಾತ್ರಿಯ ಸಮಯ.. ನಿನಗೂ ಗೊತ್ತಿರಬಹುದು.. ಇನ್ನು ಎರಡು ದಿನಕ್ಕೆ ಅಂದರೆ 15 ನೇ ತಾರೀಖು ಸರಸ್ವತಿ ಪೂಜೆಯ ದಿನದಂದು ನಿನ್ನ ಹುಟ್ಟಿದ ಹಬ್ಬ. ಅಂದು ತಲೆಗೆ ಸ್ನಾನ ಮಾಡಿ ಒಂದು ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿಕೊಂಡು ಬಾ. ಗೆಳೆಯರೊಟ್ಟಿಗೆ ಹೋಗಿ ಸಿಹಿ ತಿನ್ನು. ಎಲ್ಲಾ ಒಳ್ಳೆಯದಾಗಲಿ. ಎಲ್ಲರ ಆಶೀರ್ವಾದಗಳು.’ ಪತ್ರವನ್ನು ಓದಿ ಒಂದು ವಿಷಾದದ ನಗು ನಕ್ಕು ಪತ್ರವನ್ನು ದಿಂಬಿನಡಿಯಲ್ಲಿ ಇಟ್ಟುಬಿಟ್ಟೆ. ಒಂದು ಹೊತ್ತಿನ ಊಟಕ್ಕೇ ತತ್ವಾರವಾಗಿರುವಾಗ ಸಿಹಿ ಎಲ್ಲಿಂದ ತಂದು ತಿನ್ನುವುದು! ಹೀಗೇ ಮತ್ತೆರಡು ದಿನಗಳುರುಳಿ ಹುಟ್ಟುಹಬ್ಬ ನೆನಪಿನಿಂದಲೇ ಹಾರಿ ಹೋಗಿತ್ತು.

ಅಂದು ಸಂಜೆ ಯಥಾ ಪ್ರಕಾರ ತರಗತಿಗಳನ್ನು ಮುಗಿಸಿಕೊಂಡು ಬಂದು ಲಾನ್ ನಲ್ಲಿ ಕುಳಿತಿದ್ದೆ. ಎಲ್ಲೋ ಹೊರಹೋಗಿದ್ದ ಅಶೋಕ ಸ್ವಲ್ಪ ತಡವಾಗಿ ಬಂದ. ಬಂದವನೇ, ‘ನಡಿ.. ಒಂದೀಟು ಕೆಲಸ ಐತಿ.. ಹೋಗಿಬರೋಣು ನಡಿ’ ಎಂದು ಜುಲುಮಿಮಾಡಿ ಕರೆದುಕೊಂಡು ಹೊರಟ. ಒಲ್ಲದ ಮನಸ್ಸಿನಿಂದಲೇ ಎದ್ದು ಅವನೊಟ್ಟಿಗೆ ಹೊರಟೆ. ಅದು ನಾವು ರೆಫ್ಯೂಜಿ ಮಾರ್ಕೆಟ್ ಗೆ ಹೋಗುತ್ತಿದ್ದ ಹಾದಿ. ಮುಖ್ಯರಸ್ತೆಯಲ್ಲಿ ಹೋಗಿ ಎಡಕ್ಕೆ ಹೊರಳಿದರೆ ರೆಫ್ಯೂಜಿ ಮಾರ್ಕೆಟ್, ಸೀದಾ ಹೋದರೆ ಬೆಂಗಾಲಿ ಮಾರ್ಕೆಟ್. ಅಂದೇಕೊ ಅಶೋಕನ ಕಾಲುಗಳು ಬೆಂಗಾಲಿ ಮಾರ್ಕೆಟ್ ಮುಖವಾಗಿ ಹೆಜ್ಜೆ ಹಾಕಿದವು! ‘ಯಾಕಲೇ ಮಗನೇ.. ಹಾದಿ ತಪ್ಪಿ ಹೊಂಟೀಯೇನು?’ ಎಂದು ರೇಗಿಸಿದರೆ ಅಶೋಕ ತುಟಿಪಿಟ್ಟನ್ನದೆ ನಡೆಯುತ್ತಲೇ ಇದ್ದ.

ಸೀದಾ ಹೋದವನೇ ಆ ಮಾರ್ಕೆಟ್ ನಲ್ಲಿದ್ದ ದೊಡ್ಡ ಅಂಗಡಿ ನಥ್ಥು ಸ್ವೀಟ್ ಸ್ಟಾಲ್ ಮುಂದೆ ನಿಂತು ಅಲ್ಲಿ ಓರಣವಾಗಿ ಜೋಡಿಸಿದ್ದ ಮಿಠಾಯಿಗಳ ಬೆಲೆ ಪಟ್ಟಿಯನ್ನು ನೋಡತೊಡಗಿದ! ನನಗಂತೂ ಅವನ ಕ್ರಿಯೆಯ ತಲೆಬುಡ ತಿಳಿಯದೆ ಗೊಂದಲವಾಗತೊಡಗಿತು. ಆ ವೇಳೆಗೆ ಆ ಅಂಗಡಿಯ ಸೇಠ್ ಜೀ ‘ಕ್ಯಾ ಚಾಹಿಯೇ ಆಪ್ ಕೋ?’ ಎಂದು ದೊಡ್ಡದನಿಯಲ್ಲೇ ಕೇಳಿದ. ಅಶೋಕ ಯಾವುದೋ ಒಂದು ಮಿಠಾಯಿಯನ್ನು ತೋರಿಸಿ, ‘ಯೇ ಕೈಸಾ ಭಾಯಿಸಾಬ್?’ ಎಂದ. ‘ಸಾಠ್ (60) ರುಪೈ ಕಿಲೋ’— ಸೇಠ್ ಜೀಯ ಗಡಸು ಉತ್ತರ. ಬಲು ಗಾಬರಿಯಿಂದ ಅಶೋಕ ತೊದಲತೊಡಗಿದ: ‘ನಹೀ ನಹೀ… ಕಿಲೋ ನಹೀ.. ಏಕ್.. ಏಕ್ ಪೀಸ್ ಚಾಹಿಯೇ ಮುಝೇ’. ಅತ್ಯಂತ ಕರುಣಾಜನಕವಾಗಿ ಅಶೋಕನನ್ನೇ ದಿಟ್ಟಿಸುತ್ತಾ ಆ ಸೇಠ್ ಜೀ ಆ ಖಾನೆಯಿಂದ ಒಂದು ಮಿಠಾಯಿಯನ್ನು ತೆಗೆದು ಅಶೋಕನ ಕೈಗಿತ್ತು, ‘ಚಲೋ.. ಏಕ್ ರುಪೈ ದೇದೋ ಬಸ್’ ಎಂದ.

ಅಶೋಕನೋ ಪರಮಸಂತೋಷದಿಂದ ಜೇಬಿನಿಂದ ಒಂದು ರೂಪಾಯಿ ತೆಗೆದು ಸೇಠ್ ಜೀಗೆ ಕೊಟ್ಟು ಮಿಠಾಯಿಯನ್ನು ತೆಗೆದುಕೊಂಡು ದುಡುದುಡು ಅಲ್ಲಿಂದ ಹೊರಟ. ನಾನೂ ಕೋಲೆಬಸವನ ಹಾಗೆ ಅವನ ಹಿಂದೆ ಹೊರಟೆ. ಅಷ್ಟು ದೂರ ಹೊಗಿ ಮೋಟು ಮರವೊಂದರ ಕೆಳಗೆ ನಿಂತು ಮಿಠಾಯಿಯನ್ನು ಮುರಿದು, ‘ಏ ಹುಚ್ ನನ್ನ ಮಗನ… ಇವತ್ತು ನಿನ್ನ ಹ್ಯಾಪಿ ಬರ್ತ್ ಡೇ ಕಣಲೇ… ನಿಮ್ಮವ್ವ ಬರೆದ ಪತ್ರ ದಿಂಬಿನ ಅಡ್ಯಾಗ ಇಟ್ಟಿದ್ಯಲ್ಲಾ.. ನಾನು ನೋಡ್ದೆ.. ಸ್ವೀಟ್ ತಿನಬೇಕು ಅಂತ ಅವ್ವ ಹೇಳಿಲ್ಲೇನು?.. ಎಲ್ಲಿ.. ಆ ಅನ್ನು’ ಎಂದು ನನಗೆ ಸಿಹಿ ತಿನ್ನಿಸಿದ.

ಒಂದು ರೀತಿಯ ಅಯೋಮಯ ಸ್ಥಿತಿಯಲ್ಲಿ ಅದುವರೆಗೆ ತೊಳಲುತ್ತಿದ್ದ ನನಗೆ ಒಮ್ಮೆಲೇ ಆ ತನಕ ತಡೆಹಿಡಿದಿದ್ದ ದುಃಖ ಒತ್ತರಿಸಿಕೊಂಡು ಬಂದು ಬಿಟ್ಟಿತು. ಅಶೋಕನನ್ನು ತಬ್ಬಿಕೊಂಡು ಗಳಗಳನೆ ಅತ್ತುಬಿಟ್ಟೆ. ‘ಥೂ ನಿನ್ನ.. ಬರ್ತ್ ಡೇ ದಿನ ಯಾರಾರೂ ಅಳ್ತಾರೇನಲೇ ಹುಚ್ ಸೂಳೀಮಗನಾ..’ ಎಂದು ಅಪ್ಪಟ ಬಿಜಾಪುರೀ ಶೈಲಿಯಲ್ಲಿ ಬೈಯುತ್ತಲೇ ಇದ್ದರೂ ಅಶೋಕನ ಕಣ್ಣೂ ಮಡುಗಟ್ಟಿನಿಂತಿತ್ತು. ಕೊಂಚ ಸುಧಾರಿಸಿಕೊಂಡು ನಾನೇ ಕೇಳಿದೆ: ‘ರೊಕ್ಕ ಎಲ್ಲಿತ್ತೋ?’. ‘ಏ ಬಿಡೋ.. ಯಾರಿಗೋ ಚೆಂಡು ಹಾಕಿ ಇಸಗೊಂಡು ಬಂದೀನಿ’ ಎಂದು ಅಶೋಕ ಮಾತು ತೇಲಿಸಿಬಿಟ್ಟ. ನೋವು.. ಸುಖ.. ದುಃಖ… ಸಂತಸಗಳೆಲ್ಲವೂ ಮಿಳಿತಗೊಂಡ ಒಂದು ಸಂಮಿಶ್ರ ಭಾವದಲ್ಲಿ ಇಬ್ಬರೂ ಏನೂ ಮಾತಾಡದೆ ಹಾಸ್ಟೆಲ್ ನತ್ತ ಹೆಜ್ಜೆ ಹಾಕಿದೆವು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: