ಶ್ರೀನಿವಾಸ ಪ್ರಭು ಅಂಕಣ – ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳ ನರ್ತನ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

71

ಅರೆ! ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಮರುಚಿತ್ರೀಕರಣವೇ?! ಧಿಡೀರನೆ ಉದ್ಭವವಾಗಿರುವ ಅಂತಹ ವಿಷಮ ಪರಿಸ್ಥಿತಿಯಾದರೂ ಯಾವುದೆಂಬುದರ ತಲೆಬುಡ ತಿಳಿಯದೇ ನಾನು ಗೊಂದಲ—ಆಶ್ಚರ್ಯಗಳಲ್ಲಿ ಮುಳುಗಿಹೋದೆ.ಅಂದೇ ಸಂಜೆ ಶಂಕರ್ ತಂಡದ ಎಲ್ಲರನ್ನೂ ಕಲೆಹಾಕಿ ಎದುರಾಗಿದ್ದ ಕಠಿಣ ಸಂದರ್ಭವನ್ನು ವಿವರಿಸಿದರು: ‘accident’ ಚಿತ್ರದ climax ಭಾಗದಲ್ಲಿ ಸತ್ಯವನ್ನು ಹೂತಿಟ್ಟು ಅಪರಾಧಿಗಳನ್ನು ರಕ್ಷಿಸಲು ವ್ಯವಸ್ಥೆಯೇ ಟೊಂಕ ಕಟ್ಟಿ ನಿಂತದ್ದನ್ನು ನೋಡಿ ಕೆರಳುವ ಪತ್ರಕರ್ತ (ಶಂಕರ್ ಅವರೇ ನಿರ್ವಹಿಸಿದ ಪಾತ್ರ) ಹತಾಶೆ—ಸಂಕಟ—ಸಿಟ್ಟಿನಿಂದ ಕುದ್ದುಹೋಗಿ ತಾನೇ ಕಾನೂನನ್ನು ಕೈಗೆತ್ತಿಕೊಳ್ಳುವ ತೀರ್ಮಾನ ಮಾಡುತ್ತಾನೆ; ಅಪರಾಧಿಗಳನ್ನು ತಾನೇ ಗುಂಡಿಟ್ಟು ಕೊಂದು ತನ್ನದೇ ರೀತಿಯಲ್ಲಿ ನ್ಯಾಯ ಒದಗಿಸುವ,ತನ್ಮೂಲಕ ಅಂತಹ ಕುಕೃತ್ಯಗಳಲ್ಲಿ ತೊಡಗುವ ವ್ಯವಸ್ಥೆಗೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಾನೆ. ಬೇರಾವುದೇ ಸಂದರ್ಭದಲ್ಲಿ ಇಂಥದೊಂದು ಅಂತ್ಯಕ್ಕೆ ಯಾವ ವಿಶೇಷತೆಯೂ ಪ್ರಾಪ್ತವಾಗುತ್ತಿರಲಿಲ್ಲ. ಕರಾಳ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಒಬ್ಬ ಪ್ರಾಮಾಣಿಕ—ಅಸಹಾಯಕ ಪತ್ರಕರ್ತನ ರೋಷ—ಆವೇಶಗಳ ಪ್ರತಿಕ್ರಿಯೆಯಂತೆ ದೃಶ್ಯ ಬಿಂಬಿತವಾಗುತ್ತಿತ್ತು. ಆದರೆ ಈಗಿನ ಸಂದರ್ಭ ಬೇರೆಯದೇ ಆಗಿದೆ! ಪ್ರಧಾನಿಯವರ ಹತ್ಯೆಯಾಗಿದೆ! ಅದೂ ಅವರ ಅಂಗರಕ್ಷಕರಿಂದಲೇ!

ಇಂಥದೊಂದು ಸಮಯದಲ್ಲಿ ಚಿತ್ರದ ಪರಾಕಾಷ್ಠೆಯ ಈ ದೃಶ್ಯದ ಪರಿಕಲ್ಪನೆ ತಪ್ಪು ಅರ್ಥಗಳನ್ನು—ಸಂದೇಶಗಳನ್ನು ರವಾನಿಸಿಬಿಡಬಹುದು;ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಅನುಮೋದನೆಯೂ ದೊರೆಯದೇ ಹೋಗಬಹುದು; ಮತ್ತೊಂದು ತಾರ್ಕಿಕ ಅಂತ್ಯವನ್ನು ಕುರಿತಾಗಿ ಯೋಚಿಸಿ ಅಳವಡಿಸಿಕೊಂಡು ಮರುಚಿತ್ರೀಕರಣ ನಡೆಸುವುದು ಸರ್ವರೀತಿಯಿಂದಲೂ ಸೂಕ್ತ!

ಹೀಗೆ accident ಚಿತ್ರ ಪ್ರದರ್ಶನಕ್ಕೆ ಒದಗಬಹುದಾಗಿದ್ದ ತೊಂದರೆಗಳನ್ನು ಪೂರ್ವಭಾವಿಯಾಗಿಯೇ ಊಹಿಸಿ ನಿವಾರಿಸಿಕೊಳ್ಳಲು ಮಾರ್ಗದರ್ಶನ ಮಾಡಿದವರು ಪ್ರಸಿದ್ಧ ಸಾಹಿತಿ—ಪತ್ರಕರ್ತೆ ಡಾ॥ವಿಜಯಾ ಅವರು! ಹಾಗೆ ನೋಡಿದರೆ ನಮ್ಮ ಅನೇಕ ನಿರ್ದೇಶಕರಿಗೆ—ನಿರ್ಮಾಪಕರಿಗೆ ಎದುರಾದ ಅನೇಕ ಸಂದಿಗ್ಧ ಪರಿಸ್ಥಿತಿಗಳಲ್ಲಿ ಅಮೂಲ್ಯ ಸಲಹೆಗಳನ್ನು ನೀಡಿ ನೆರವಾಗಿರುವ ಸಹೃದಯಿ ವಿಜಯಮ್ಮ ಅವರು.
ಡಿ.ರಾಜೇಂದ್ರಬಾಬು ಅವರ ‘ಜೀವನದಿ’ ಚಿತ್ರದ ಪರಾಕಾಷ್ಠೆಯ ದೃಶ್ಯದ ಬಗ್ಗೆಯೂ ವಿಜಯಮ್ಮ ಹೀಗೆಯೇ ಆಕ್ಷೇಪವನ್ನೆತ್ತಿ, ‘ಕಾವೇರಿ ನದಿಯ ಕುರಿತಾದ ಒಂದು ತಪ್ಪು ಧ್ವನಿ’ ಹಿನ್ನೆಲೆಯಲ್ಲಿ ಹೊರಡುತ್ತಿರುವುದರ ಬಗ್ಗೆ ಗಮನ ಸೆಳೆದಾಗ ಅವರ ಸಲಹೆಯ ಗಂಭೀರತೆಯನ್ನು ಅರ್ಥಮಾಡಿಕೊಂಡ ನಿರ್ದೇಶಕ ಡಿ. ರಾಜೇಂದ್ರ ಬಾಬು ಚಿತ್ರದ climax ಅನ್ನೇ ಬದಲಾಯಿಸಿ ಮರು ಚಿತ್ರೀಕರಣ ನಡೆಸಿದ್ದರಂತೆ!
ಈಗ accident ಚಿತ್ರದ ಪರಾಕಾಷ್ಠೆಯ ದೃಶ್ಯವನ್ನು ಬದಲಿಸಲೇ ಬೇಕಾಗಿದೆ: ಆದರೆ ಹೇಗೆ? ಸಾಕಷ್ಟು ಚಿಂತನ—ಮಂಥನಗಳ ತರುವಾಯ ಒಂದು ಮಾರ್ಗ ಸರ್ವಸಮ್ಮತವಾಗಿ ರೂಪುಗೊಂಡಿತು: ನಶೆಯಲ್ಲಿ ಕಾರ್ ಚಲಿಸಿ ಹಲವಾರು ಅಮಾಯಕರ ದಾರುಣ ಸಾವಿಗೆ ಕಾರಣನಾಗಿದ್ದ ದೀಪಕ್ ,ಕೊನೆಯ ದೃಶ್ಯದಲ್ಲಿ ವಿಹ್ವಲನಾಗಿ ವೇಗವಾಗಿ ಕಾರ್ ಚಲಾಯಿಸಿಕೊಂಡು ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಸಾಯುತ್ತಾನೆ.ಶಂಕರ್ ಗಂತೂ ಈ ಅಂತ್ಯ ಹೆಚ್ಚು ಸಮಂಜಸವಾಗಿ ಕಂಡು,”ಇದೊಂದು ರೀತಿಯಲ್ಲಿ ‘poetic justice’ಮಾದರಿಯ ತಾರ್ಕಿಕ ಅಂತ್ಯ” ಎಂದು ಉದ್ಗರಿಸಿದ್ದರು. ನನ್ನ ಪಾತ್ರವನ್ನು ಈ ಮೊದಲೇ ವಿದೇಶಕ್ಕೆ ಕಳಿಸಿಬಿಟ್ಟಿದ್ದರಿಂದ ನನ್ನ ಭಾಗದ ಮರುಚಿತ್ರೀಕರಣದ ಅಗತ್ಯ ಬರಲಿಲ್ಲ.

ಹೀಗೆ ಮರುಚಿತ್ರೀಕರಣದ ನಂತರವೂ ನಿಗದಿಯಾಗಿದ್ದ ದಿನಾಂಕದಂದೇ ಚಿತ್ರವನ್ನು ತೆರೆಗರ್ಪಿಸಿದರು ಶಂಕರ್! ಸಮಾಜಮುಖಿಯೂ ಅರ್ಥಪೂರ್ಣವೂ ಆಗಿದ್ದ accident ಚಿತ್ರ ಪ್ರೇಕ್ಷಕರನ್ನು ಚಿಂತನೆಗೆ ದೂಡುವಲ್ಲಿ ಯಶಸ್ವಿಯಾದದ್ದಷ್ಟೇ ಅಲ್ಲ, ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿಯಾಗಿ ಒಂದು ಚಿತ್ರಮಂದಿರದಲ್ಲಿ ಶತದಿನೋತ್ಸವವನ್ನೂ ಪೂರೈಸಿತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ‘ಮೈಲುಗಲ್ಲು’ ಚಿತ್ರವೆಂದೇ ಹೆಸರಾಗಿರುವ accident ಚಿತ್ರ ಪ್ರೇಕ್ಷಕರ—ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾದುದಷ್ಟೇ ಅಲ್ಲದೆ ಹಲವಾರು ಪ್ರಶಸ್ತಿಗಳನ್ನೂ ತನ್ನ ಮುಡಿಗೇರಿಸಿಕೊಂಡಿತು.

ಆಗಲೂ ನಾನು ನನ್ನ ಬಳಿ ಇದ್ದ ಪುಟ್ಟ ಸುವೇಗಾ ಗಾಡಿಯಲ್ಲೇ ಓಡಾಡುತ್ತಿದ್ದೆ. Accident ಚಿತ್ರ ಬಿಡುಗಡೆಯಾದ ನಂತರ ಜನ ನನ್ನನ್ನು ಗುರುತಿಸತೊಡಗಿದರು.ಸಿಗ್ನಲ್ ಗಳಲ್ಲಿ ನಿಂತಾಗ,ರಸ್ತೆಗಳಲ್ಲಿ ಓಡಾಡುವಾಗ ಗುರುತಿಸಿ ಮೆಚ್ಚುಗೆಯ ಮಾತಾಡುತ್ತಿದ್ದರು.ಒಂದು ದಿನ ಪ್ರಜಾವಾಣಿ ಕಛೇರಿಗೆ ಹೋಗಿ YNK ಅವರನ್ನು ಮಾತಾಡಿಸಿಕೊಂಡು ಅಲ್ಲೇ ಪಕ್ಕದಲ್ಲಿದ್ದ ಯೂಕೋ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಎಂ ಎನ್ ವ್ಯಾಸರಾವ್ ಅವರನ್ನು ಭೇಟಿಯಾಗಲೆಂದು ಹೋಗಿದ್ದೆ. ವ್ಯಾಸರಾವ್ ನನಗಿಂತ ಹಿರಿಯನೇ ಆಗಿದ್ದರೂ ಅವನಲ್ಲಿ ಅದೇನೊ ಸಲುಗೆ ಬೆಳೆದುಬಿಟ್ಟಿತ್ತು. ಸದಾ ನಗುಮೊಗದ ಈ ಸರಳ ಸ್ನೇಹಜೀವಿಗೂ ನನ್ನನ್ನು ಕಂಡರೆ ವಿಶೇಷ ಪ್ರೀತಿ—ಅಕ್ಕರೆ.

ಆ ವೇಳೆಗಾಗಲೇ ತನ್ನ ಭಾವಗೀತೆಗಳ ಮೂಲಕ,ಅನೇಕ ಚಿತ್ರಗೀತೆಗಳ ಮೂಲಕ ದೊಡ್ಡ ಹೆಸರನ್ನೇ ಗಳಿಸಿಕೊಂಡು ಪ್ರಸಿದ್ಧನಾಗಿದ್ದರೂ ಆ ಖ್ಯಾತಿ ತಲೆಗೇರಲು ವ್ಯಾಸ ಅನುವು ಮಾಡಿಕೊಟ್ಟಿರಲಿಲ್ಲ! ವ್ಯಾಸನ ಸ್ನೇಹಪರತೆ—ಹೃದಯಸಂಪನ್ನತೆ ನನಗೆ ವೈಯಕ್ತಿಕವಾಗಿ ಅನುಭವಕ್ಕೆ ಬಂದದ್ದು ಹೀಗೆ:
ಅಂದು ವ್ಯಾಸನನ್ನು ನೋಡಲು ಹೋಗಿದ್ದೆನಲ್ಲಾ, ಕಾಫಿಹೌಸ್ ನಲ್ಲಿ ಕುಳಿತು ಒಂದಷ್ಟು ಹರಟಿದ ಮೇಲೆ ನಾನು ಅವನಿಂದ ಬೀಳ್ಕೊಂಡು ಹೊರಡಲನುವಾಗಿ ನನ್ನ ಸುವೇಗಾ ಏರಿದೆ.ಹೊರಟವನನ್ನು ತಡೆದು ವ್ಯಾಸ ಹೇಳಿದ: “ಲೋ ಗೆಳೆಯಾ,ನೀನೀಗ ಚಿತ್ರನಟ ಕಣಯ್ಯಾ…ಈ ಪುಟ್ಟ ಗಾಡೀಲಿ ಓಡಾಡೋದು ನಿನಗೆ ಶೋಭೆಯಲ್ಲ..ಎಲ್ಲಕ್ಕಿಂತ ಹೆಚ್ಚಿಗೆ ಜನ ಗುರುತಿಸಿ ನಿನ್ನನ್ನೇ ದಿಟ್ಟಿಸಿ ನೊಡ್ತಿದ್ರೆ ಮುಜುಗರ ಆಗೋಲ್ವೇ? ಒಂದು ಬೈಕ್ ತೊಗೋ.ನಿಮ್ಮ ಆಫೀಸಲ್ಲಿ ವಾಹನ ಸಾಲದ ಸೌಲಭ್ಯ ಇರಬೇಕಲ್ಲಾ?”. ನಾನು ಹೇಳಿದೆ: “ಸೌಲಭ್ಯ ಏನೋ ಇದೆ ಅಣ್ಣಾ..ಆದರೆ ನಾನು ಹೊಸದಾಗಿ ಕೆಲಸಕ್ಕೆ ಸೇರಿರೋದಲ್ಲವಾ? ನನಗಿನ್ನೂ ಆ ಸಾಲ ಪಡೆಯೋ ಅರ್ಹತೆ ಪ್ರಾಪ್ತವಾಗಿಲ್ಲ”. ವ್ಯಾಸ ಒಂದು ಕ್ಷಣ ಏನನ್ನೋ ಯೋಚಿಸಿ, “ಆಯಿತು..ನೀನು ಎರಡು ದಿನ ಬಿಟ್ಟುಕೊಂಡು ಬಂದು ನನ್ನನ್ನು ಕಾಣು” ಎಂದ. ಆಯಿತೆಂದು ನುಡಿದು ನಾನು ಅಲ್ಲಿಂದ ಹೊರಟುಹೋದೆ. ಆಫೀಸಿನ ಕೆಲಸಗಳಲ್ಲಿ ಮುಳುಗಿಹೋದ ನನಗೆ ವ್ಯಾಸ ಬರಲು ಹೇಳಿದ್ದು ಮರೆತಂತೆಯೇ ಆಗಿಹೋಗಿತ್ತು. ಒಂದು ಬೆಳಿಗ್ಗೆ ವ್ಯಾಸನಿಂದ ಆಫೀಸಿಗೆ ಫೋನ್ ಕರೆ ಬಂತು: “ಈ ತಕ್ಷಣ ಹೊರಟು ಬ್ಯಾಂಕ್ ಹತ್ತಿರ ಬಾ” ಎಂದು ಹೇಳಿ ವ್ಯಾಸ ಫೋನ್ ಇಟ್ಟುಬಿಟ್ಟ.

ಬ್ಯಾಂಕ್ ಬಳಿ ಹೋದ ನನಗೆ ದೊಡ್ಡದೊಂದು ಆಶ್ಚರ್ಯ ಕಾದಿತ್ತು: ವ್ಯಾಸ ತನ್ನ ಹೆಸರಿನಲ್ಲಿಯೇ ಬ್ಯಾಂಕ್ ನಿಂದ ಸಾಲ ಮಂಜೂರಾತಿ ಮಾಡಿಸಿಕೊಂಡು ನನಗೆ ಬೈಕ್ ಕೊಡಿಸಲು ಪೂರ್ವ ಸಿದ್ಧತೆಗಳನ್ನು ಮಾಡಿ ಮುಗಿಸಿದ್ದ!ವ್ಯಾಸನ ಈ ಔದಾರ್ಯ—ಅಂತಃಕರಣಗಳನ್ನು ಕಂಡು ನನಗಂತೂ ಮಾತೇ ಹೊರಡಲಿಲ್ಲ. ವ್ಯಾಸನೇ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಬೂದುಬಣ್ಣದ ರಾಜದೂತ್ ಸೂಪರ್ ಡಿ ಬೈಕ್ ಅನ್ನು ನನಗೆ ಕೊಡಿಸಿ ನನ್ನನ್ನು ಬೈಕ್ ಮೇಲೆ ಕೂಡಿಸಿ ರಾಜ್ಯ ಗೆದ್ದವನಂತೆ ಖುಷಿ ಪಟ್ಟ.”ಈಗ ನೋಡು ಸರಿಹೋಯ್ತು! ಸಿನೆಮಾ ನಟ ಅಂದಮೇಲೆ ಒಂದು ಸ್ಟೇಟಸ್ ಕಾಪಾಡಿಕೊಂಡು ಬರಬೇಕೋ ಗೆಳೆಯಾ! ಇಲ್ಲದಿದ್ದರೆ ನೋಡೋರ ಕಣ್ಣಿಗೆ ಸಸಾರವಾಗಿಬಿಡುತ್ತೆ! ಆಮೇಲೆ ಪ್ರತಿ ತಿಂಗಳು ಐದನೇ ತಾರೀಖಿನ ಒಳಗೆ ಕಂತಿನ ಹಣ ತಂದುಕೊಡೋದು ಮರೀಬೇಡ!” ಎಂದು ದೊಡ್ಡದಾಗಿ ನಕ್ಕ.ಆಮೇಲೆ ತಾನೇ ಸಮಾಧಾನ ಪಡಿಸುತ್ತಾ,”ತುಂಬಾ ತೊಂದರೆ ಆದ ಸಂದರ್ಭದಲ್ಲಿ ಹೇಳು.. ನಾನೇ ಹೊಂದಿಸ್ಕೋತೀನಿ…ಆತಂಕ ಪಟ್ಟುಕೋಬೇಡ” ಎಂದು ಮತ್ತೊಮ್ಮೆ ನಕ್ಕ.ಇಂದು ವ್ಯಾಸ ನಮ್ಮ ಜತೆಗಿಲ್ಲ.ಆದರೆ ಅವನ ಆ ನಿಷ್ಕಲ್ಮಶ ನಗು—ಮುಖದ ಮೇಲೆ ಶಾಶ್ವತವಾಗಿ ನೆಲೆಸಿದ್ದ ಮಂದಹಾಸ—ಅವನ ಸ್ನೇಹಪರತೆಗಳು ಮತ್ತೆ ಮತ್ತೆ ನೆನಪಾಗಿ ಕಾಡುತ್ತಲೇ ಇರುತ್ತವೆ.

ನಮ್ಮ ದೂರದರ್ಶನ ಕೇಂದ್ರದಿಂದ ವಾರಕ್ಕೊಮ್ಮೆ ‘ಪ್ರಿಯ ವೀಕ್ಷಕರೇ’ ಅನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.ನಮ್ಮ ಕೇಂದ್ರದ ಕಾರ್ಯಕ್ರಮಗಳನ್ನು ಕುರಿತು ವೀಕ್ಷಕರು ಪತ್ರಮುಖೇನ ನೀಡುತ್ತಿದ್ದ ಪ್ರತಿಕ್ರಿಯೆಗಳಿಗೆ—ಅವರ ಹಲವು ಹತ್ತು ಪ್ರಶ್ನೆಗಳಿಗೆ ಉತ್ತರ ನೀಡುವ—ಪ್ರತಿಸ್ಪಂದಿಸುವ ಕಾರ್ಯಕ್ರಮ ಅದಾಗಿತ್ತು.ಆ ಕಾರ್ಯಕ್ರಮವನ್ನು ಕೇಂದ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಬಸವರಾಜು ಅವರು ನಮ್ಮ ಕೇಂದ್ರದಲ್ಲಿಯೇ ಉದ್ಘೋಷಕಿಯರಾಗಿ ಕೆಲಸ ಮಾಡುತ್ತಿದ್ದವರೊಂದಿಗೆ ನಡೆಸಿಕೊಡುತ್ತಿದ್ದರು. ಒಮ್ಮೆ ಬಸವರಾಜು ಅವರು ಕೊಂಚ ದೀರ್ಘಕಾಲದ ರಜೆಯ ಮೇಲೆ ಹೋಗಿದ್ದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಡುವ ಜವಾಬ್ದಾರಿ ನನ್ನ ಹೆಗಲೇರಿತು!ಹಾಗೆ ಹೆಗಲೇರಿದ ಹೊರೆ ಮುಂದೆ ಸಾಕಷ್ಟು ವರ್ಷಗಳ ಕಾಲ ಕೆಳಗಿಳಿಯಲೇ ಇಲ್ಲ!ಕೇಂದ್ರಕ್ಕೆ ಬರುತ್ತಿದ್ದ ನೂರಾರು ಪತ್ರಗಳನ್ನು ಓದಿ ಉತ್ತರಿಸಬೇಕಾದ ಪತ್ರಗಳನ್ನು ಆರಿಸಿಕೊಳ್ಳುವುದೇ ಬಹು ದೊಡ್ಡ ಕೆಲಸವಾಗಿಬಿಡುತ್ತಿತ್ತು. ಎಷ್ಟೋ ಬಾರಿ ಉತ್ತರಿಸಲು ಸಾಧ್ಯವಾಗುವ ಪತ್ರಗಳನ್ನು ಮಾತ್ರವೇ ಸೋಸಿ ತೆಗೆದುಕೊಂಡದ್ದೂ ಉಂಟು! ಕೆಲವು ವೀಕ್ಷಕರಿಗಂತೂ ನಮ್ಮ ಕಾರ್ಯಕ್ರಮಗಳನ್ನು ಟೀಕಿಸಿ ಬರೆಯುವುದು ಒಂದು ನಿತ್ಯಕರ್ಮವೇ ಆಗಿಬಿಟ್ಟಿತ್ತು! ಸಂಧ್ಯಾ ಎಸ್ ಕುಮಾರ್ ,ಆಶಾ. ಜಿ.,ಶಶಿಕಲಾ, ಅಪರ್ಣಾ,ಕಲ್ಪನಾ ರೆಡ್ಡಿ..ಇವರೆಲ್ಲರೂ ವಿವಿಧ ಕಾಲಘಟ್ಟಗಳಲ್ಲಿ ನನ್ನೊಂದಿಗೆ ಈ ‘ಪ್ರಿಯ ವೀಕ್ಷಕರೇ’ ಕಾರ್ಯಕ್ರಮ ನಡೆಸಲು ನೆರವಾದ ಪ್ರತಿಭಾವಂತ ಉದ್ಘೋಷಕಿಯರು. ಈ ಕಾರ್ಯಕ್ರಮ ನಡೆಸಿಕೊಡಲು ನಾನು ಪ್ರಾರಂಭಿಸಿದ ಮೇಲೆ ಮೊದಲೆರಡು ವಾರಗಳು ತೀರಾ ಗಂಭೀರ ಮುಖಮುದ್ರೆಯನ್ನು ಹೊತ್ತು ಮುಗುಳ್ನಗುವನ್ನೇ ಅರಿಯದವನಂತೆ ಮಾತಾಡಿದ್ದೂ ಸಹಾ ವೀಕ್ಷಕರ ಟೀಕೆಗೆ ತುತ್ತಾಗಿತ್ತು! ಕೆಲವೊಂದು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿದರೆ ಸದಾ ‘ನೇರ ಪ್ರಸಾರ’ದಲ್ಲಿಯೇ ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದುದೂ ಸಹಾ ಆ ಗಾಂಭೀರ್ಯಕ್ಕೆ, ಕೊಂಚ ಆತಂಕದ ಮುಖಮುದ್ರೆಗೆ ಕಾರಣವಾಗಿದ್ದಿರಬಹುದು! ಬರಬರುತ್ತಾ ರೂಢಿಯಾದಂತೆ ಹೆಚ್ಚು ಲವಲವಿಕೆಯಿಂದ,ಕೊಂಚ ತಿಳಿಹಾಸ್ಯದೊಂದಿಗೆ ಕಾರ್ಯಕ್ರಮವನ್ನು ನಡೆಸಿಕೊಡತೊಡಗಿದೆ.

ಪದೇ ಪದೇ ನಮ್ಮ ಕಾರ್ಯಕ್ರಮಗಳನ್ನು ಟೀಕಿಸಿ ಬರೆಯುತ್ತಿದ್ದ ಕೆಲ ವೀಕ್ಷಕರನ್ನು ನಮ್ಮ ಸ್ಟುಡಿಯೋಗೇ ಆಹ್ವಾನಿಸಿ,”ನೋಡಿ,ಎಷ್ಟು ಇತಿಮಿತಿಗಳ ನಡುವೆ,ನಿಮ್ಮ ಮನೆಯ ಹಜಾರಕ್ಕಿಂತ ಚಿಕ್ಕದಾಗಿರಬಹುದಾದ ಈ ಸ್ಟುಡಿಯೋದಲ್ಲಿಯೇ ನಮ್ಮ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟೂ ಉತ್ತಮವಾಗಿ ರೂಪಿಸಲು ಯತ್ನಿಸುತ್ತಿದ್ದೇವೆ; ಮುಂಬರುವ ದಿನಗಳಲ್ಲಿ ಮುನಿರೆಡ್ಡಿ ಪಾಳ್ಯದ ನಮ್ಮ ಹೊಸ ಸ್ಟುಡಿಯೋಗೆ ಸ್ಥಳಾಂತರಿಸಿದ ಮೇಲೆ ಕಾರ್ಯಕ್ರಮಗಳ ಗುಣಮಟ್ಟ ನಿಸ್ಸಂದೇಹವಾಗಿ ಹೆಚ್ಚುತ್ತದೆ;ಅಲ್ಲಿಯತನಕ ಸಹಕರಿಸಿ” ಎಂದೆಲ್ಲಾ ಮನವರಿಕೆ ಮಾಡಿಕೊಡಲು ಯತ್ನಿಸಿದೆ.ನನ್ನೆದುರಿಗೆ ಸಹಾನುಭೂತಿಯಿಂದಲೇ ಮಾತಾಡಿ ಹೋದ ಆ ವೀಕ್ಷಕ ಮಹನೀಯರು ಮರುವಾರ ಮತ್ತೆ,’ನಿಮ್ಮ ಸಬೂಬುಗಳಿಗೆಲ್ಲಾ ಮರುಳಾಗುವವರಲ್ಲ ನಾವು’ ಎನ್ನುತ್ತಾ ಟೀಕಾಪ್ರಹಾರವನ್ನು ಮುಂದುವರಿಸಿದರು! ನಾನೂ ಸುಮ್ಮನಾಗದೇ,”ಛಲದಂಕಮಲ್ಲ ವೀಕ್ಷಕ ಮಹನೀಯರಿಗೆ ಅನಂತಾನಂತ ವಂದನೆಗಳು!ಸಬೂಬುಗಳಿಗೂ ವಾಸ್ತವ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೂ ಇರುವ ಅಂತರ ತಮಗೆ ಅರ್ಥವಾಗದೇ ಹೋದದ್ದು ಖೇದದ ಸಂಗತಿ! ಇರಲಿ..ತಮ್ಮ ಟೀಕೆಗಳ ಮಳೆ ಹೀಗೇ ಸುರಿಯುತ್ತಿರಲಿ..ನಾನೂ ಸಮಜಾಯಿಷಿಗಳ ಕೊಡೆಯನ್ನು ಹಿಡಿಯುತ್ತಲೇ ಹೋಗುತ್ತೇನೆ” ಎಂದು ನಗುನಗುತ್ತಲೇ ಹೇಳಿ ಮರುಚಾಟಿ ಬೀಸಿದೆ! ಈ ತರಹದ ಮುಸುಕಿನೊಳಗಿನ ಗುದ್ದಾಟ ನಮ್ಮ ವೀಕ್ಷಕರೊಂದಿಗೆ ಹಲವಾರು ಬಾರಿ ಆದದ್ದುಂಟು. ಏನೇ ಆದರೂ ನಮ್ಮ ‘ಪ್ರಿಯ ವೀಕ್ಷಕರೇ’ ಕಾರ್ಯಕ್ರಮ ಅದೆಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತೆಂದರೆ ಆ ಕಾರ್ಯಕ್ರಮದ ಮುಖೇನವೇ ಜನರು ನನ್ನನ್ನು ಗುರುತಿಸುವಂತಾಗಿ ಹೋಯಿತು! ಅಷ್ಟೇ ಅಲ್ಲ,ಎಷ್ಟೋ ವರ್ಷಗಳ ನಂತರವೂ, ಈಗಲೂ ಆ ಕಾರ್ಯಕ್ರಮವನ್ನು ನೆನೆಸಿಕೊಳ್ಳುವವರುಂಟು!

ಇದರ ಜತೆಗೇ ನಿರ್ದೇಶಕ ಗುರುನಾಥ್ ಅವರು ‘ಕಚಗುಳಿ’ ಎಂಬ ಹದಿನೈದು ನಿಮಿಷಗಳ ಹಾಸ್ಯಪ್ರಧಾನ ಕಾರ್ಯಕ್ರಮವೊಂದರ ಪ್ರಸಾರವನ್ನು ಆಯೋಜಿಸಿ ಅದರ ಜವಾಬ್ದಾರಿಯನ್ನೂ ನನಗೇ ಹೊರಿಸಿದರು.ಈ ಕಾರ್ಯಕ್ರಮವನ್ನು ರೂಪಿಸಿ ನಿರ್ಮಿಸಲು ನನಗೆ ನೆರವಾದ ಕೆ.ಆರ್. ನಾಗಭೂಷಣ ಅವರು ನಂತರದ ದಿನಗಳಲ್ಲಿ ನನಗೆ ಆತ್ಮೀಯ ಗೆಳೆಯರೇ ಆಗಿಬಿಟ್ಟರು. ಆಗ ಬಹಳ ಜನಪ್ರಿಯವಾಗಿದ್ದ humour club ನ ವೈ.ಎಮ್.ಎನ್.ಮೂರ್ತಿ,ರಾಜ್ ಕುಮಾರ್ ಮಿಶ್ರಾ,ಜೊತೆಗೆ ವೈ.ವಿ.ಗುಂಡೂರಾವ್ ಮೊದಲಾದವರನ್ನೆಲ್ಲಾ ಆಹ್ವಾನಿಸಿ ಒಂದಷ್ಟು ‘ಕಚಗುಳಿ’ ಕಾರ್ಯಕ್ರಮಗಳನ್ನು ರೂಪಿಸಿದೆ.ನಾಗಭೂಷಣ್ ಅವರು ಸಂಗ್ರಹಿಸಿಕೊಟ್ಟ ಅನೇಕಾನೇಕ ನಗೆಹನಿಗಳನ್ನು,ಚಿಕ್ಕಚಿಕ್ಕ ಹಾಸ್ಯ ಪ್ರಸಂಗಗಳನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿಕೊಂಡು ಹಲವು ಹತ್ತು ಕಾರ್ಯಕ್ರಮಗಳನ್ನು ರೂಪಿಸಿದೆ.ಅ.ರಾ.ಮಿತ್ರ,ಪಡುಕೋಣೆ ರಮಾನಂದರಾಯರು, ಎಚ್.ಎಸ್.ಪಾರ್ವತಿ ಮುಂತಾದವರ ನಗೆ ಬರಹಗಳನ್ನು ನಾಟಕರೂಪಕ್ಕೆ ಅಳವಡಿಸಿಕೊಂಡು ನುರಿತ ಕಲಾವಿದರಿಂದ ಮಾಡಿಸಿದ ಪ್ರಯೋಗಗಳು ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡವು. ಈ ಸಂದರ್ಭದಲ್ಲೇ ನಾನು ಒಂದು ಧಾರಾವಾಹಿಯಂತೆ ಅಳವಡಿಸಿಕೊಂಡು ಮಾಡಿದ ಪ್ರಯೋಗವೆಂದರೆ “ತೆನಾಲಿ ರಾಮ’. ತೆನಾಲಿ ರಾಮನ ಹಲವಾರು ಹಾಸ್ಯ ಪ್ರಸಂಗಗಳನ್ನು ಕಿರುನಾಟಕಗಳಾಗಿ ರೂಪಿಸಿಕೊಂಡು ಸೂಕ್ತ ಕಲಾವಿದರನ್ನು ಆರಿಸಿಕೊಂಡು ನಾನೇ ನಿರ್ದೇಶಿಸಿ ದೂರದರ್ಶನಕ್ಕೆ ಅಳವಡಿಸಿಕೊಂಡು ನಿರ್ಮಿಸಿದೆ.ಇದು ಬಹುಶಃ ದೂರದರ್ಶನದ ಪ್ರಪ್ರಥಮ ಅನಧಿಕೃತ ಧಾರಾವಾಹಿ! ಫಣೀಂದ್ರನಾಥ್ ಕೃಷ್ಣದೇವರಾಯನಾಗಿ,ಸಂಕೇತ್ ಕಾಶಿ ತೆನಾಲಿ ರಾಮನಾಗಿ ಈ ಮಾಲಿಕೆಯಲ್ಲಿ ಮಿಂಚಿದ್ದರು.ಇದೂ ಸಹಾ ಆಗ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡ ಕಿರು ಧಾರಾವಾಹಿ. ಒಮ್ಮೆ ಹೀಗಾಯಿತು:
ಮುದ್ದಣ—ಮನೋರಮೆಯರ ಒಂದು ಸರಸ ಸನ್ನಿವೇಶವನ್ನು ನಾಟಕ ರೂಪಕ್ಕೆ ಅಳವಡಿಸಿಕೊಂಡು ನಳಿನಿ ಅಕ್ಕ ಹಾಗೂ ಸತ್ಯನಾರಾಯಣ ಭಟ್ ಅವರನ್ನು ಪ್ರಮುಖ ಪಾತ್ರಗಳಿಗೆ ಆರಿಸಿಕೊಂಡು ತಾಲೀಮನ್ನೂ ನಡೆಸಿದ್ದೆ. ಅದೇನೋ ಕಾರಣಾಂತರಗಳಿಂದ ನಿಗದಿತ ದಿನದಂದು ಸ್ಟುಡಿಯೋದಲ್ಲಿ ನಾಟಕವನ್ನು ಚಿತ್ರೀಕರಣ ಮಾಡಲಾಗಲಿಲ್ಲ.

ಇನ್ನೆರಡು ದಿನಕ್ಕೆ ನಾಟಕ ಪ್ರಸಾರವಾಗಬೇಕು..ಆದರೆ ಅಷ್ಟರೊಳಗೆ ಚಿತ್ರೀಕರಣ ನಡೆಸಲು ಸ್ಟುಡಿಯೋ ಲಭ್ಯವಿಲ್ಲ.ಹೋಗಲಿ,ಇಎನ್ ಜಿ ಕ್ಯಾಮರಾ ಬಳಸಿ ಹೊರಗಡೆ ಚಿತ್ರೀಕರಣ ಮಾಡಿಕೊಂಡು ಬರೋಣವೆಂದರೆ ಆ ಕ್ಯಾಮರಾ ಕೂಡಾ ಲಭ್ಯವಿಲ್ಲ! ವಾಸ್ತವವಾಗಿ ನಮ್ಮಲ್ಲಿದ್ದುದೇ ಎರಡು ಇ ಎನ್ ಜಿ ಕ್ಯಾಮರಾಗಳು; 20 ನಿಮಿಷದ 25 ಕ್ಯಾಸೆಟ್ ಗಳು ಹಾಗೂ 60 ನಿಮಿಷದ 20 ಕ್ಯಾಸೆಟ್ ಗಳು! ಈ ಕ್ಯಾಸೆಟ್ ಗಳನ್ನು ಎಲ್ಲರಿಗೂ ಹಂಚಿದಾಗ ಪ್ರತಿ ನಿರ್ಮಾಪಕರಿಗೆ ದೊರೆತದ್ದು ನಾಲ್ಕು ಇಪ್ಪತ್ತು ನಿಮಿಷದ ಹಾಗೂ ಮೂರು ಅರವತ್ತು ನಿಮಿಷದ ಕ್ಯಾಸೆಟ್ ಗಳು! ಅಷ್ಟರಲ್ಲಿಯೇ ನಮ್ಮೆಲ್ಲಾ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನೂ ತಯಾರಿಸಬೇಕಾದ ಅನಿವಾರ್ಯತೆಯಿತ್ತು! |ಮುದ್ದಣ ಮನೋರಮೆಯರ ಪ್ರಸಂಗವನ್ನು ಚಿತ್ರೀಕರಿಸಲು ಸ್ಟುಡಿಯೋ ಆಗಲೀ ಇ ಎನ್ ಜಿ ಕ್ಯಾಮರಾ ಆಗಲೀ ದೊರೆಯುತ್ತಿಲ್ಲ;ಹಾಗಾಗಿ ಹಳೆಯ ಒಂದು ಕಾರ್ಯಕ್ರಮವನ್ನೇ ಮರು ಪ್ರಸಾರ ಮಾಡುತ್ತೇನೆ ಎಂದರೆ ನಿರ್ದೇಶಕ ಗುರುನಾಥ್ ಅವರು “no no no! you can’t do that! do it live!” ಎಂದುಬಿಡುವುದೇ! ಏನು!!? ನಾಟಕದ ನೇರ ಪ್ರಸಾರವೇ!? ಒಂದು ಕ್ಷಣ ಏನೂ ತೋಚದೆ ನಾನು ಸುಮ್ಮನೆ ನಿಂತುಬಿಟ್ಟೆ. “why srinivas? are you afraid to do it live?” ಎಂದು ನಿರ್ದೇಶಕರು ಕೆಣಕಿದಾಗ ಯಾಕೋ ಸ್ವಾಭಿಮಾನ ಕೆರಳಿಬಿಟ್ಟಿತು! ನೇರ ಪ್ರಸಾರ ಮಾಡಲು ನನಗಾವ ಅಂಜಿಕೆಯೂ ಇಲ್ಲ,ಖಂಡಿತ ಮಾಡುತ್ತೇನೆ ಎಂದು ವೀರಾವೇಶದಿಂದ ನುಡಿದು ಹೊರನಡೆದುಬಿಟ್ಟೆ.

ಆಮೇಲೆ ಆತಂಕ ಶುರುವಾಯಿತು! ನೇರಪ್ರಸಾರದಲ್ಲಿ ಏನಾದರೂ ವ್ಯತ್ಯಯವಾಗಿಬಿಟ್ಟರೆ? ಕಲಾವಿದರು ಮಾತು ಮರೆತುಬಿಟ್ಟರೆ? ಕ್ಯಾಮರಾಮನ್ ಗಳು ತಪ್ಪು ಮಾಡಿಬಿಟ್ಟರೆ?..ಎಂಬ ಭಯಗಳು ಕಾಡತೊಡಗಿದವು. ನಳಿನಿ ಅಕ್ಕ ಹಾಗೂ ಸತ್ಯನಾರಾಯಣ ಭಟ್ ಅವರುಗಳು ನುರಿತ ಕಲಾವಿದರಾದ್ದರಿಂದ ನಿಭಾಯಿಸಿಕೊಂಡು ಹೋಗುತ್ತಾರೆಂಬ ನಂಬಿಕೆ ಏನೋ ಇತ್ತು.ಭಾನುವಾರ ಬೆಳಿಗ್ಗೆ 8 ರಿಂದ 9 ರ ನಡುವೆ ಆ ಕಾರ್ಯಕ್ರಮದ ಪ್ರಸಾರವಿದ್ದಂತೆ ನೆನಪು. ಎಲ್ಲರಿಗೂ ಏನು ಮಾಡಬೇಕೆಂಬುದನ್ನು ವಿವರಿಸಿ ಹೇಳಿ ನೇರ ಪ್ರಸಾರವಾದುದರಿಂದ ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ವಿನಂತಿಸಿಕೊಂಡು ಒಂದು ಸಣ್ಣ ಅಳುಕಿನೊಂದಿಗೇ ನೇರ ಪ್ರಸಾರ ಆರಂಭಿಸಿದೆ. ಅದೃಷ್ಟವಶಾತ್ ಆ 15 ನಿಮಿಷಗಳ ನಾಟಕದ ನೇರ ಪ್ರಸಾರ ಯಾವ ತೊಂದರೆ ಅಡಚಣೆಗಳೂ ಆಗದೆ ಸುಗಮವಾಗಿ ನೆರವೇರಿತು!ಕಲಾವಿದರಿಬ್ಬರೂ ಸೊಗಸಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿ ನಾಟಕವನ್ನು ಕಳೆಗಟ್ಟಿಸಿದರು.ತಾಂತ್ರಿಕ ವರ್ಗದವರೆಲ್ಲರ ಸಂಪೂರ್ಣ ಸಹಕಾರದೊಂದಿಗೆ ನಾಟಕದ ನೇರ ಪ್ರಸಾರ ಯಶಸ್ವಿಯಾಗಿ ಆಯಿತು. ಆದರೆ ನೇರಪ್ರಸಾರ ನಡೆಯುತ್ತಿದ್ದಷ್ಟು ಹೊತ್ತೂ ‘ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳ ನರ್ತನ’ ಅವಿರತವಾಗಿ ಸಾಗಿದ್ದಂತೂ ಸತ್ಯಸ್ಯ ಸತ್ಯ!!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಪ್ರಜ್ವಲ್

    “ಡಿ.ರಾಜೇಂದ್ರಬಾಬು ಅವರ ‘ಜೀವನದಿ’ ಚಿತ್ರದ ಪರಾಕಾಷ್ಠೆಯ ದೃಶ್ಯದ ಬಗ್ಗೆಯೂ ವಿಜಯಮ್ಮ ಹೀಗೆಯೇ ಆಕ್ಷೇಪವನ್ನೆತ್ತಿ, ‘ಕಾವೇರಿ ನದಿಯ ಕುರಿತಾದ ಒಂದು ತಪ್ಪು ಧ್ವನಿ’ ಹಿನ್ನೆಲೆಯಲ್ಲಿ ಹೊರಡುತ್ತಿರುವುದರ ಬಗ್ಗೆ ಗಮನ ಸೆಳೆದಾಗ ಅವರ ಸಲಹೆಯ ಗಂಭೀರತೆಯನ್ನು ಅರ್ಥಮಾಡಿಕೊಂಡ ನಿರ್ದೇಶಕ ಡಿ. ರಾಜೇಂದ್ರ ಬಾಬು ಚಿತ್ರದ climax ಅನ್ನೇ ಬದಲಾಯಿಸಿ ಮರು ಚಿತ್ರೀಕರಣ ನಡೆಸಿದ್ದರಂತೆ!”

    ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತೀರಾ ಸಾರ್?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: