ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 132
ಈಗ ನಾನು ದಾಖಲಿಸುತ್ತಿರುವುದೆಲ್ಲವೂ ಹೊಸ ಶತಮಾನದ ಮೊದಲ ದಶಕದ ಘಟನಾವಳಿಗಳು. ಕಾಲಮಾನದ ದೃಷ್ಟಿಯಿಂದ ಪ್ರಸಂಗಗಳು ಹಿಂದುಮುಂದಾಗಿರುವ ಸಾಧ್ಯತೆಗಳೂ ಇವೆ. ಹಠಾತ್ತನೆ ನೆನಪಿಗೆ ಬಂದು ದಾಖಲಿಸಿರುವ ಕೆಲ ಹಳೆಯ ಪ್ರಸಂಗಗಳೂ ಇವೆ! ಕೊಂಚ ಅನುಸರಿಸಿಕೊಳ್ಳಿ. 2003—4 ರ ಆಜುಬಾಜಿನಲ್ಲಿಯೇ ಎಂದು ತೋರುತ್ತದೆ. ರಂಜನಿಗೆ ಕೊಂಚ ಆರೋಗ್ಯದ ಸಮಸ್ಯೆ ಕಾಡತೊಡಗಿತು. ವಿಪರೀತ ಮೈಗ್ರೇನ್ ತಲೆನೋವಿನಿಂದ ಒದ್ದಾಡುತ್ತಿದ್ದಾಗಲೇ ಅದರ ಕಾರಣ ‘ಹೆಚ್ಚಿರುವ ರಕ್ತದೊತ್ತಡ’ (high b p)ಎಂದು ತಪಾಸಣೆ ಮಾಡಿದ ವೈದ್ಯರು ತಿಳಿಯಪಡಿಸಿದರು. ಸರಿಸುಮಾರು ಅದೇ ಸಮಯದಲ್ಲಿಯೇ ನನಗೂ ಅದೇ ಸಮಸ್ಯೆ ಆರಂಭವಾದದ್ದು. ರಂಜನಿಗಂತೂ ಪ್ರತಿನಿತ್ಯ ಬೆಳಿಗ್ಗೆ ಎಂಟುಗಂಟೆಯೊಳಗೆ ಸಿದ್ಧಳಾಗಿ ಕಾಲೇಜಿಗೆ ಹೊರಡಬೇಕಿತ್ತು. ಅಷ್ಟರೊಳಗೆ ತಿಂಡಿ—ಅಡುಗೆಗಳನ್ನು ಮಾಡಿ ಮುಗಿಸಿ ಮಕ್ಕಳನ್ನು ಸಿದ್ಧಪಡಿಸಿ ಅವರಿಗೆ ಡಬ್ಬಿ ಕಟ್ಟಿಕೊಟ್ಟು ಸ್ಕೂಲು—ಕಾಲೇಜಿಗೆ ಕಳಿಸಿ ತಾನೂ ತರಾತುರಿಯಿಂದ ಹೊರಡಬೇಕಿತ್ತು. ಕಾಲೇಜಿನಿಂದ ಬಂದ ಮೇಲಾದರೂ ಹೆಚ್ಚಿನ ವಿಶ್ರಾಂತಿಗೆ ಅವಕಾಶವಿಲ್ಲ.ರಾತ್ರಿಯ ಅಡುಗೆ, ಮರುದಿನದ ಕ್ಲಾಸ್ ಗಳಲ್ಲಿ ಪಾಠ ಮಾಡಲು ತಯಾರಿ ಮಾಡಿಕೊಳ್ಳುವುದು, ಮನೆಯ ಕೆಲಸಗಳು ಈ ಎಲ್ಲ ಒತ್ತಡಗಳಲ್ಲಿ ನಿಜಕ್ಕೂ ಹೈರಾಣಾಗಿಹೋಗುತ್ತಿದ್ದಳು.
ಒಂದೇ ಪಠ್ಯವನ್ನು ನಾಲ್ಕಾರು ವರ್ಷಗಳಿಂದ ಪಾಠ ಮಾಡುತ್ತಿದ್ದರೂ ಪ್ರತಿ ವರ್ಷವೂ ಹೊಸದಾಗಿಯೇ ಆ ಪಠ್ಯವನ್ನು ಬೋಧಿಸಲು ರಂಜನಿ ಸಿದ್ಧತೆ ಮಾಡಿಕೊಳ್ಳುತ್ತಿದ್ದುದು ನನಗೆ ಸೋಜಿಗವನ್ನುಂಟುಮಾಡುತ್ತಿತ್ತು. “ಹೊಸ ವಿದ್ಯಾರ್ಥಿಗಳಿಗೆ ಹಳೆಯ ಪಾಠವನ್ನೇ ಮಾಡಲು ಹೊಸ ತಯಾರಿ ಏಕೆಂದು ನಾನು ಕೇಳಿದರೆ”, “ಅದು ಒಂದು ರೀತಿಯಲ್ಲಿ ನನ್ನ ಕಲಿಕೆ ಹಾಗೂ ಬೆಳವಣಿಗೆ; ಓದಿದ್ದನ್ನೇ ಮತ್ತೆ ಮತ್ತೆ ಓದಿದಾಗ ಹೊಸ ಹೊಳಹುಗಳು ಮೂಡುತ್ತವೆ; ನನ್ನ ಚಿಂತನೆ ಹರಿತಗೊಳ್ಳುತ್ತದೆ” ಎನ್ನುತ್ತಿದ್ದಳು ರಂಜನಿ. ಒಟ್ಟಿನಲ್ಲಿ ಈ ಎಲ್ಲ ಜವಾಬ್ದಾರಿಗಳ ನಿರ್ವಹಣೆಯ ಭರಾಟೆಯಲ್ಲಿ ಅವಳು ಸುಸ್ತಾದದ್ದಂತೂ ನಿಜ. ರಕ್ತದೊತ್ತಡದ ಜೊತೆಗೆ ಶುಗರ್ ಕೂಡಾ ಸಂಗಾತಿಯಾಗಿ ಸೇರಿಕೊಂಡು ಅವಳನ್ನು ಮತ್ತಷ್ಟು ನಿತ್ರಾಣಗೊಳಿಸಿದವು. ಒಂದು ದಿನವಂತೂ ಒತ್ತಡದ ಭಾರಕ್ಕೆ ಸಿಕ್ಕು ಕಾಲೇಜಿಗೆ ಹೊರಡುವ ಗಡಿಬಿಡಿಯಲ್ಲಿ ಮಹಡಿಯಿಂದಿಳಿಯುವಾಗ ನಾಲ್ಕು ಮೆಟ್ಟಲಿರುವಾಗಲೇ ಬವಳಿ ಬಂದು ಬಿದ್ದುಬಿಟ್ಟಳು. ನಾನು ಮನೆಯಲ್ಲೇ ಇದ್ದುದರಿಂದ ಹೆಚ್ಚಿನ ಆತಂಕಕ್ಕೆ ಅವಕಾಶವಾಗಲಿಲ್ಲವೆನ್ನಿ. ಆದರೆ ಯಾಕೋ ಅಂದು ನನ್ನ ಮನಸ್ಸು ಬಹಳ ಕ್ಷೋಭೆಗೊಳಗಾಗಿಬಿಟ್ಟಿತು. ನಿಜಕ್ಕೂ ರಂಜನಿಗೆ ಇಷ್ಟೆಲ್ಲಾ ಜವಾಬ್ದಾರಿಗಳನ್ನು ಹೊತ್ತು ನಡೆಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ; “ನಾನು ಒಂದಿಷ್ಟು ಸಹಾಯ ಮಾಡದೇ ಹೋದರೆ ಪರಿಸ್ಥಿತಿ ಬಿಗಡಾಯಿಸಿ ಅವಳು ಮತ್ತಷ್ಟು ದಣಿದುಹೋಗುತ್ತಾಳೆ, ಆದರೆ ನಾನು ಮಾಡಬಹುದಾದರೂ ಏನು?” ಚಿಂತನೆ ಆರಂಭವಾಯಿತು.
ಯುರೇಕಾ! ಒಂದು ಮಾರ್ಗ ಹೊಳೆದೇಬಿಟ್ಟಿತು: ಅಡುಗೆ! ಅಡುಗೆಮನೆಯ ಜವಾಬ್ದಾರಿಯನ್ನು ನಾನು ವಹಿಸಿಕೊಂಡುಬಿಟ್ಟರೆ ಅವಳಿಗೆ ಎಷ್ಟೋ ಹೊರೆ ಕಡಿಮೆಯಾಗುತ್ತದೆ! ಈ ನನ್ನ ದಿವ್ಯ ಹೊಳಹನ್ನು ರಂಜನಿಯೊಂದಿಗೆ ಹಂಚಿಕೊಂಡೆ! ಅವಳು ಪ್ರಾರಂಭದಲ್ಲಿ ಅಷ್ಟೇನೂ ಗಂಭೀರವಾಗಿ ನನ್ನ’ಹೊಳಹಿ’ಗೆ ಸ್ಪಂದಿಸಲಿಲ್ಲ. ತಾನೇ ಹೇಗೋ ನಿಭಾಯಿಸಬಹುದೆಂಬ ಆತ್ಮವಿಶ್ವಾಸವೋ ಅಥವಾ ಹೇಳಿದಷ್ಟು ಸುಲಭವಾಗಿ ನನ್ನಿಂದ ಮಾಡಲಾಗದು ಎಂಬ ಸಂಶಯವೋ.ˌಒಟ್ಟಿನಲ್ಲಿ, ‘ಪರವಾಗಿಲ್ಲ ಬಿಡಿ, ಹೇಗೋ ಮಾಡಿಕೊಳ್ಳೋಣ’ ಎಂದುಬಿಟ್ಟಳು. ಆ ಹಗುರ ಮಾತಿನಿಂದ ನನ್ನ ಹಠ ಮತ್ತಷ್ಟು ಹೆಚ್ಚಿತು! “ಇಲ್ಲ, ಇನ್ನು ಮುಂದೆ ಅಡುಗೆಮನೆಯ ಪೂರ್ಣ ಜವಾಬ್ದಾರಿ ನನ್ನದು. ‘ಮುಂದೆ’ ಏನು ಬಂತು, ನಾಳೆಯಿಂದಲೇ! ಬೆಳಗಿನ ತಿಂಡಿ—ಮಧ್ಯಾಹ್ನದ ಊಟದ ತಯಾರಿ ನನ್ನದು; ಸಂಜೆ ಮನೆಗೆ ಬಂದಮೇಲೆ ನೀನು ನೋಡಿಕೋ” ಎಂದು ಘಂಟಾಘೋಷವಾಗಿ ಹೇಳಿಬಿಟ್ಟೆ! ಒಂದು ಸಣ್ಣ ಅರ್ಥಪೂರ್ಣ ನಗು ಅವಳ ಮುಖದಲ್ಲೊಮ್ಮೆ ಮೂಡಿ ಮರೆಯಾಯಿತು! ಅಷ್ಟು ಸಾಕಲ್ಲಾ ನನ್ನ ಹಠವನ್ನು ಬಡಿದೆಬ್ಬಿಸಲು! ಹಾಗೆ ನೋಡಿದರೆ ಅಡುಗೆಮನೆಯ ಸಂಗ ನನಗೇನೇನೂ ಹೊಸದಲ್ಲ. ಅಮ್ಮ ಅಕ್ಕಂದಿರಿಂದ ಅಡುಗೆಯ ಪ್ರಾಥಮಿಕ ಪಾಠಗಳನ್ನು ಅದಾಗಲೇ ಕಲಿತು ಕರಗತ ಮಾಡಿಕೊಂಡು ಸಾಕಷ್ಟು ಬಾರಿ ಕಾರ್ಯರೂಪಕ್ಕೂ ತಂದು ಮನೆಯವರ ಮೇಲೆ ಪ್ರಯೋಗ ನಡೆಸಿ ಯಶಸ್ಸು ಗಳಿಸಿಯಾಗಿತ್ತು! ಈಗಿದು ಅಡುಗೆಯಲ್ಲಿ ಪೂರ್ಣಪ್ರಮಾಣದ ತೊಡಗು ಅಷ್ಟೇ.
ಮರುದಿನ ಬೆಳಗಿನ ಜಾವ ನಾಲ್ಕು ಗಂಟೆಗೇ ಎದ್ದು ತಿಂಡಿ—ಅಡುಗೆಯ ತಯಾರಿ ಪ್ರಾರಂಭಿಸಿದೆ. ಸಮಯಕ್ಕೆ ಸರಿಯಾಗಿ ಮಾಡಲಾಗದೇ ಹೋದರೆ ಎಂಬ ಆತಂಕ ಇತ್ತಲ್ಲಾ! ಈ ಮೊದಲೇ ಕೈ ಸಾಕಷ್ಟು ಪಳಗಿದ್ದರಿಂದ ಹೇಳಿಕೊಳ್ಳುವಂಥ ಕಷ್ಟವೇನಾಗಲಿಲ್ಲˌ. ಪ್ರಾರಂಭದಲ್ಲಿ ಮಾಡಲು ಹೆಚ್ಚು ಕಷ್ಟವಾಗದಂತಹ ತಿಂಡಿ — ಅಡುಗೆಗಳನ್ನೇ ಮಾಡುತ್ತಾ ಬಂದೆ. ನನ್ನ ಮಗ ಅನಿರುದ್ಧನಿಗೆ ಬೇರೆ ಬೇರೆ ಬಗೆಯ ಹೊಸ ಹೊಸ ರುಚಿಗಳೆಂದರೆ ಬಲು ಪ್ರಿಯ. ಮಗಳು ರಾಧಿಕಾ ಈ ವಿಷಯದಲ್ಲಿ ತೀರಾ ಸುಖವಿಲ್ಲ! ಹೊಟ್ಟೆ ತುಂಬಲು ಏನೋ ಒಂದಿಷ್ಟು ತಿಂದರಾಯ್ತು ಎಂಬ ಮನೋಭಾವ ಅವಳದು! ಪುಟ್ಟ ಮಗುವಿನಿಂದಲೂ ಅವಳು ಹಾಗೆಯೇ. ಅವಳು ಕ್ಲೂನಿ ಕಾನ್ವೆಂಟ್ ನಲ್ಲಿ ನರ್ಸರಿ ಶಾಲೆಗೆ ಹೋಗುತ್ತಿದ್ದಾಗಿನ ಒಂದು ಪ್ರಸಂಗ ನೆನಪಾಗುತ್ತಿದೆ: ರಾಧಿಕಾ ಸ್ಕೂಲ್ ಗೆ ವ್ಯಾನ್ ನಲ್ಲಿ ಹೋಗುತ್ತಿದ್ದಳು. ಒಂದು ದಿನ ಮಗಳನ್ನು ವ್ಯಾನ್ ಹತ್ತಿಸಿ ಒಳ ಬಂದು ಅಡುಗೆಮನೆಗೆ ಹೋಗುತ್ತಿದ್ದಂತೆ ರಂಜನಿ ‘ಅಯ್ಯೋ’ ಎಂದೊಂದು ಆರ್ತನಾದ ಮಾಡಿದಳು! ನಾನು ಗಾಬರಿಯಿಂದ ಹೋಗಿ ನೋಡಿದರೆ ರಂಜನಿ ಕೈಯಲ್ಲಿ ಫೀಡಿಂಗ್ ಬಾಟಲ್ ಹಿಡಿದು ಬಿಕ್ಕುತ್ತಿದ್ದಾಳೆ! ‘ಮಗು ಹಾಲು ಕುಡೀದೇ ಸ್ಕೂಲ್ ಗೆ ಹೊರಟುಬಿಡ್ತು. ಈಗೇನು ಮಾಡೋದು?’ ಎಂದು ದುಃಖಿಸತೊಡಗಿದಳು ರಂಜನಿ.
ಮಗಳು ಆಗಿನ್ನೂ ಫೀಡಿಂಗ್ ಬಾಟಲ್ ಅಭ್ಯಾಸ ಬಿಟ್ಟಿರಲಿಲ್ಲ. ಜೊತೆಗೆ ಡಬ್ಬಿಯಲ್ಲಿ ಏನೇ ಅದ್ಭುತವಾದ ತಿಂಡಿ ತಿನಿಸನ್ನು ಇಟ್ಟುಕಳಿಸಿದರೂ ಒಂದು ದಿನವೂ ಡಬ್ಬಿಯನ್ನು ತೆಗೆದೂ ನೋಡುತ್ತಿರಲಿಲ್ಲ ನಮ್ಮ ಮುದ್ದುಮಗಳು! ಕಳಿಸಿದ್ದೆಲ್ಲವನ್ನೂ ಹಾಗೇ ಮರಳಿ ತರುತ್ತಿದ್ದಳು. ಅಕಸ್ಮಾತ್ ಡಬ್ಬಿ ಖಾಲಿಯಾಗಿದ್ದರೆ ತಿಂಡಿ ಅವಳ ಗೆಳತಿಯರ ಹೊಟ್ಟೆ ಸೇರಿರುತ್ತಿತ್ತು. ಇದು ಅವಳದೇ ತಪ್ಪೊಪ್ಪಿಗೆ! ರಂಜನಿಯ ದುಃಖಕ್ಕೆ ಮೂಲಕಾರಣ ಅದು! ಡಬ್ಬಿಯ ತಿಂಡಿಯನ್ನೂ ತಿನ್ನುವುದಿಲ್ಲ, ಮನೆಯಲ್ಲೂ ಹಾಲು ಕುಡಿದಿಲ್ಲ. ಇನ್ನು ಸಂಜೆ ಬರುವ ತನಕ ಮಗುವಿಗೆ ಖಾಲಿಹೊಟ್ಟೆ! ಅವಳ ಸಂಕಟವನ್ನು ನೋಡಲಾರದೆ, “ನಡಿ, ಸ್ಕೂಲ್ ಹತ್ರಾನೇ ಹೋಗಿ ನೋಡೋಣ ಏನಾಗುತ್ತೆ ಅಂತ” ಎಂದು ಕರೆದುಕೊಂಡು ಹೊರಟೆ. ಆ ಕಾನ್ವೆಂಟ್ ನಲ್ಲಿಯೋ ವಿಪರೀತ ಶಿಸ್ತಿನ ಉಸಿರುಗಟ್ಟಿಸುವ ವಾತಾವರಣ. ಇನ್ನು ಮಗುವನ್ನು ತರಗತಿಯಿಂದ ಹೊರಕರೆಯುವುದಾದರೂ ಹೇಗೆ? ರಂಜನಿಯ ಮಾತೃಹೃದಯ ಉಪಾಯವೊಂದನ್ನು ಹುಡುಕಿಯೇಬಿಟ್ಟಿತು! ಸೀದಾ ಪ್ರಿನ್ಸಿಪಾಲರ ಬಳಿ ಹೋಗಿ, ‘ಮಗಳಿಗೆ ಹುಷಾರಿಲ್ಲ, ಸಿರಪ್ ಕುಡಿಯದೇ ಬಂದುಬಿಟ್ಟಿದ್ದಾಳೆ, ದಯವಿಟ್ಟು ಔಷಧಿ ಕುಡಿಸಲು ಅನುಮತಿ ಕೊಡಿ’ ಎಂದು ಪ್ರಾರ್ಥಿಸಿಕೊಂಡು ಅವರ ಅನುಮತಿ ಪಡೆದುಕೊಂಡೇಬಿಟ್ಟಳು. ನಂತರ ತರಗತಿಯಿಂದ ರಾಧಿಕಾಳನ್ನು ಹೊರಕರೆತಂದು ಮಹಡಿ ಮೆಟ್ಟಿಲುಗಳ ಸಂಧಿಜಾಗದಲ್ಲಿ ಮರೆಗೆ ಕರೆದುಕೊಂಡು ಹೋಗಿ ಫೀಡಿಂಗ್ ಬಾಟಲ್ ತೆಗೆದು ‘ಬೇಗ ಬೇಗ ಕುಡಿ’ ಎಂದು ಕುಡಿಸತೊಡಗಿದಳು! ಈ ಒಂದು ‘ಔಷಧಿ’ ಕುಡಿಸುವ ಕೆಲಸ ಯಾರ ಕಣ್ಣಿಗೂ ಬೀಳದಂತೆ ನಾನು ಸಾಧ್ಯವಾದಷ್ಟೂ ಮರೆಮಾಡಿಕೊಂಡು ನಿಂತಿದ್ದೆ. ಹಾಲುಕುಡಿಸಿ ಮಗಳನ್ನು ಮರಳಿ ತರಗತಿಗೆ ಕಳಿಸಿ ನನ್ನೊಟ್ಟಿಗೆ ಬೈಕ್ ಏರಿ ಕುಳಿತ ಮೇಲೆ ರಂಜನಿಯ ಕಣ್ಣಲ್ಲಿ ಆನಂದಬಾಷ್ಪ!
ಇರಲಿ. ಮುಖ್ಯ ಪ್ರಸಂಗಕ್ಕೆ ಬರೋಣ. ರಂಜನಿಯೂ ಮಹಾ ರುಚಿಪ್ರಿಯೆ! ಅವಳೇ ಅವಳ ಬಗ್ಗೆ ‘ಸ್ವಲ್ಪ ನಾಲಗೆ ಉದ್ದ’ ಎಂದು ಹೇಳಿಕೊಳ್ಳುವುದುಂಟು!ಅಡುಗ ಸರಳವಾಗಿದ್ದರೂ ಉಪ್ಪು ಹುಳಿ ಖಾರಗಳು ಹದವಾಗಿ ಬೆರೆತಿರಬೇಕು ಅವಳಿಗೆ! ಇದ್ದದರಲ್ಲಿ ನಾನೇ ಬಡಪಾಯಿ. ಹೇಗಿದ್ದರೂ ಹೊಂದಿಕೊಂಡು ತಿಂದುಕೊಂಡಿರುವವನು! ಮಗನ ಹೊಸರುಚಿಗಳ ಆಸಕ್ತಿಯಿಂದಾಗಿ ನನ್ನಲ್ಲೂ ಅವನ ಆಸೆ ತಣಿಸುವ ಆಸಕ್ತಿ ಮೂಡಿ ನಿಧಾನಕ್ಕೆ ಹೊಸ ಹೊಸ ಪ್ರಯೋಗಗಳನ್ನು ನಡೆಸತೊಡಗಿದೆ. ದಕ್ಷಿಣ ಭಾರತದ ಅಡುಗೆಗಳ ಜತೆಗೆ ಉತ್ತರ ಭಾರತೀಯ ಶೈಲಿಯ ಅಡುಗೆಗಳು, ಚಾಟ್ ಗಳು, ಚೈನೀಸ್ ,ಕಾಂಟಿನೆಂಟಲ್, ಹೀಗೆ ನಮ್ಮ ಅಡುಗೆಮನೆಯ ಪ್ರಯೋಗಗಳ ವ್ಯಾಪ್ತಿ ವಿಸ್ತರಿಸತೊಡಗಿತು! ಅಡುಗೆ ನನ್ನ ಪ್ರಮುಖಾತಿ ಪ್ರಮುಖ ಹವ್ಯಾಸವಾಗಿ, ಅಡುಗೆ ಮನೆ ಪ್ರಧಾನ ಕಾರ್ಯಕ್ಷೇತ್ರವಾಗಿಹೋಯಿತು! ಹೊಸ ಹೊಸ ತಿಂಡಿ ತಿನಿಸುಗಳ, ವೈವಿಧ್ಯಮಯ ಅಡುಗೆಗಳ ಪಾಕವಿಧಾನಗಳು ನನ್ನ ಹೊತ್ತಗೆಯಲ್ಲಿ ದಾಖಲಾಗುತ್ತಾ ಬಂದವು. ನೋಡನೋಡುತ್ತಿದ್ದಂತೆ ನೂರಾರು ಪುಟಗಳ ನನ್ನ ಸ್ವಂತದ ಅಡುಗೆ ಪುಸ್ತಕ ಸಿದ್ಧವಾಗಿ ಹೋಯಿತು! ಅನೇಕ ನನ್ನ ಕಲಾವಿದ ಗೆಳತಿಯರು ಅದರ ಪ್ರತಿ ಮಾಡಿಸಿಕೊಂಡಿರುವುದುಂಟು! ಮಾಡಿದ ತಿಂಡಿ—ಅಡುಗೆಯನ್ನು ರಂಜನಿಗೂ ಡಬ್ಬಿಯಲ್ಲಿ ಕೊಟ್ಟು ಕಳಿಸುತ್ತಿದ್ದೆನಲ್ಲಾ. ಆ ನನ್ನ ಪೆದ್ದು ಪತ್ನಿ ಅದು ‘ತಾನೇ ಮಾಡಿದ ಅಡುಗೆ’ ಯೆಂದು ಹೇಳಿಕೊಳ್ಳಬಾರದೇ? ಅದು ಬಿಟ್ಟು,—’ಪ್ರಭು ಮಾಡಿ ಕಳಿಸಿರೋದು’ ಎಂದು ಗೆಳತಿಯರ ಮುಂದೆ ಪ್ರಮಾಣ ವಚನವನ್ನು ಸ್ವೀಕರಿಸಿದವಳ ಹುರುಪಿನಲ್ಲಿ ಸತ್ಯವನ್ನೇ ಸಾರಿಬಿಟ್ಟಿದ್ದಳು! ಅವರುಗಳ ಅಪಾರ ಮೆಚ್ಚುಗೆಯೂ ನನ್ನ ತಯಾರಿಗಳಿಗೆ ಲಭಿಸಿದ ಮೇಲೆ ನನಗೆ ಕೋಡುಮೂಡಿದಂತಾಗಿಹೋಯಿತು!
ಶೂಟಿಂಗ್ ಇದ್ದ ದಿನಗಳಲ್ಲಿ ನಾನೂ ಡಬ್ಬಿ ಕಟ್ಟಿಕೊಂಡು ಹೋಗುತ್ತಿದ್ದೆ. ರುಚಿ ನೋಡುತ್ತಿದ್ದ ಗೆಳೆಯ ಗೆಳತಿಯರೂ ಭರ್ಜರಿಯಾಗಿ ಬೆನ್ನು ತಟ್ಟಿದ ಮೇಲಂತೂ ನನ್ನನ್ನು ಹಿಡಿಯುವವರಾರು? ನನ್ನ ಅಡುಗೆ ಮನೆಯಲ್ಲಿ ಆಗದ ಪ್ರಯೋಗವಿಲ್ಲ ಮಾಡದ ತಿನಿಸುಗಳಿಲ್ಲ! ಹೊಸ ಹೊಸ ಅಡುಗೆಯ ಪಾಕಕ್ರಮಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುವುದೂ ಹವ್ಯಾಸವಾಗಿಹೋಯಿತು. ಶೂಟಿಂಗ್ ಗೆಂದು ಬೇರೆ ಊರುಗಳಿಗೆ ಹೋದರೆ ಅಲ್ಲಿನ ವಿಶೇಷ ತಿಂಡಿ ತಿನಿಸುಗಳ ಪಾಕವಿಧಾನವನ್ನು ಅಲ್ಲಿನ ಹಿರಿಯರಿಂದ ತಿಳಿದುಕೊಂಡು ರೆಕಾರ್ಡ್ ಮಾಡಿಕೊಂಡು ಬಂದು ಮನೆಯಲ್ಲಿ ಪ್ರಯೋಗಿಸುತ್ತಿದ್ದೆ! ಆ ಸಮಯದಲ್ಲಿಯೇ ಗಾನ ಗಾರುಡಿಗ ಸಿ.ಅಶ್ವಥ್ ರೊಂದಿಗೂ ಹಲವಾರು ಕಾರ್ಯಕ್ರಮಗಳಲ್ಲಿ—ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೆ. ಅಶ್ವಥ್ ಅವರಿಗೂ ಪಾಕಕಲೆಯಲ್ಲಿ ವಿಶೇಷ ಆಸಕ್ತಿ! ಅವರೊಟ್ಟಿಗೆ ಹರಟೆಗೆ ಕೂತುಬಿಟ್ಟರೆ ಸಾಕು, ಅಡುಗೆಗೆ ಸಂಬಂಧಿಸಿದ ಅನೇಕಾನೇಕ ಸ್ವಾರಸ್ಯಕರ ಸಂಗತಿಗಳನ್ನು ಅಷ್ಟೇ ರಸವತ್ತಾಗಿ ವರ್ಣಿಸುತ್ತಿದ್ದರು. ಅವರು ವರ್ಣಿಸುತ್ತಿದ್ದ ಬಿಸಿಬೇಳೆ ಭಾತ್ ನ ಹದ; ಹಸಿರು ಬಾಳೆ ಎಲೆಯ ಮೇಲಿನ ವಿವಿಧ ತಿನಿಸು—ಭಕ್ಷ್ಯಗಳ ವರ್ಣವೈಭವ; ಅವರು ITI ಫ್ಯಾಕ್ಟರಿ ಬಸ್ ನಲ್ಲಿ ಬರುವಾಗ ಮಸಾಲೆದೋಸೆ ಮಾಡುವ ಕ್ರಮವನ್ನು ರಸಭರಿತವಾಗಿ ವರ್ಣಿಸುತ್ತಿದ್ದುದನ್ನು ಕೇಳಿ ಬಾಯಲ್ಲಿ ನೀರೂರಿಸಿಕೊಂಡು ಎಲ್ಲೋ ಹೋಗಬೇಕಿದ್ದ ಅವರ ಗೆಳೆಯರು ಗಾಂಧಿಬಜಾ಼ರ್ ನಲ್ಲೇ ಧುಮುಕಿ ವಿದ್ಯಾರ್ಥಿಭವನದತ್ತ ಮಸಾಲೆ ದೋಸೆ ತಿನ್ನಲು ಓಡುತ್ತಿದ್ದುದು. ಇವೆಲ್ಲಾ ಅವರ ಮಿತ್ರವಲಯದಲ್ಲಿ ಬಲು ಪ್ರಚಲಿತವಾಗಿರುವ ಸ್ವಾರಸ್ಯಕರ ಪ್ರಸಂಗಗಳು. ಇದೂ ಸಹಾ ಆ ದಿನಗಳಲ್ಲಿ ನನ್ನ ಮೇಲೆ ವಿಶೇಷ ಪ್ರಭಾವವನ್ನು ಬೀರಿದಂತಹ ಸಂಗತಿ.
ಒಂದು ಒತ್ತಡದ ಸನ್ನಿವೇಶದಲ್ಲಿ ಕಾಳಜಿಗಳ ಫಲಶೃತಿಯಾಗಿ ಆರಂಭವಾದ ನನ್ನ ‘ಅಡುಗೆಮನೆ’ ಗೆ ಬಗೆಬಗೆಯ ಬಣ್ಣಗಳು ಸೇರ್ಪಡೆಯಾಗಿ ಅದು ಗರಿಗೆದರಿ ಸಂಭ್ರಮಿಸುವಂತಾಗಲು ಅಶ್ವಥ್ ರ ಪ್ರಭಾವವೂ ಪ್ರಮುಖ ಕಾರಣವೆಂದರೆ ತಪ್ಪಾಗಲಾರದು. ನನ್ನ ಈ ಆಸಕ್ತಿ ಹೀಗೆ ಬೆಳೆಯಲು ಕಾರಣಕರ್ತನಾದ ಮತ್ತೊಬ್ಬ ಪ್ರಿಯಮಿತ್ರ ಎಂ ಎನ್ ವ್ಯಾಸರಾವ್. ಒಂದೆರಡು ಬಾರಿ ವ್ಯಾಸನನ್ನು ಭೇಟಿಯಾಗಲು ರಂಜನಿಯೊಟ್ಟಿಗೆ ಅವರ ಮನೆಗೆ ಹೋಗಿದ್ದಾಗ ವ್ಯಾಸನ ಪತ್ನಿ ಸಾವಿತ್ರಿ ಅತ್ತಿಗೆ ಮನೆಯಲ್ಲಿರಲಿಲ್ಲ. ಬ್ಯಾಂಕ್ ಗೆ ಹೋಗಿದ್ದರು. ಗೆಳೆಯ ವ್ಯಾಸ ತುಂಬು ಪ್ರೀತಿಯಿಂದ, ‘ಬಾರೋ ಮಿತ್ರಾ, ಹೈಕ್ಲಾಸ್ ಅವರೆಕಾಳು ಹುಳಿ ಮಾಡಿದೀನಿ. ಸಂಡಿಗೆ, ಮಿಡಿ ಉಪ್ಪಿನ ಕಾಯಿ ಜತೆ ಹ್ಯಾಗಿರುತ್ತೆ ಗೊತ್ತಾ? ಏಳಿ ಊಟಕ್ಕೇಳಿ” ಎಂದು ಊಟಕ್ಕೆ ಕೂರಿಸಿ ತಾನೇ ಪ್ರೀತಿಯಿಂದ ಬಡಿಸಿದ್ದ! ನಿಜಕ್ಕೂ ಬಲು ರುಚಿಯಾಗಿತ್ತು ಅವನು ಮಾಡಿದ್ದ ಅವರೆಕಾಳು ಹುಳಿ! ಆ ಗೆಳೆಯನ ಕೈರುಚಿಯ ಜತೆಗೆ ಪ್ರೀತಿಯ ಸತ್ಕಾರ ಆತಿಥ್ಯಗಳೂ ಸೇರಿ ಹೃದಯ ತುಂಬಿಬಂದಿತ್ತು! ಒಟ್ಟಿನಲ್ಲಿ ಅಡುಗೆಮನೆಯೊಂದಿಗೆ ಹೀಗೆ ಬೆಸೆದುಕೊಂಡ ಈ ಬಂಧ ಅಂದಿನಿಂದ ಇಂದಿನವರೆಗೆ ಹಾಗೇ ಉಳಿದುಕೊಂಡು ಬಂದಿದೆ!
ಅನಾರೋಗ್ಯ—ಪ್ರವಾಸಗಳಂತಹ ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿದರೆ ನಮ್ಮ ಮನೆಯಲ್ಲಿ ಇಂದಿಗೂ ನಾನೇ ಪ್ರಮುಖ ಬಾಣಸಿಗ! ನನ್ನ ಅಡುಗೆಯನ್ನು ಮೆಚ್ಚಿ ಅನೇಕ ಬಂಧುಮಿತ್ರರು ಶಭಾಷ್ ಗಿರಿ ಕೊಟ್ಟಿದ್ದಾರೆ. ನನ್ನ ಅಡುಗೆಮನೆಯ ಬಂಧ ಗಟ್ಟಿಯಾಗಲು. ಇಷ್ಟು ದೀರ್ಘಾವಧಿ ಮುಂದುವರಿಯಲು ಇದೂ ಒಂದು ಪ್ರಮುಖ ಕಾರಣವೇ ಹೌದು! ಯಾಕೆಂದರೆ ನಾವು ಮಾಡಿದ ಅಡುಗೆಯನ್ನು ತಿಂದ ಮಹನೀಯರು ತೃಪ್ತಿಯಿಂದ ತೇಗಿ ‘ಸೊಗಸಾಗಿತ್ತು‘ ಎಂದು ಬೆನ್ನು ತಟ್ಟಿದಾಗ ಸಿಗುವ ಆನಂದಕ್ಕೆ ಸಾಟಿಯೇ ಇಲ್ಲ! ನನ್ನ ಮಟ್ಟಿಗಂತೂ ಅಡುಗೆ ಒಂದು ತಪಸ್ಸು. ಒಂದು ಧ್ಯಾನಸ್ಥ ಸ್ಥಿತಿ ಇದ್ದಂತೆ! ನಟನೆಯಲ್ಲಿ ಹೇಗೆ ತನ್ಮಯತೆಯಿಂದ ತೊಡಗಿಕೊಳ್ಳುತ್ತೇವೋ ಅದೇ ಬಗೆಯ ತನ್ಮಯತೆಯಿಂದ ಅಡುಗೆಯಲ್ಲಿ ತೊಡಗಿಕೊಳ್ಳದೇ ಹೋದರೆ, ತುಸುವೇ ಉಡಾಫೆಯಿಂದ ವರ್ತಿಸಿದರೂ ಸಹಾ ಅನಾಹುತ ತಪ್ಪಿದ್ದಲ್ಲ! ನನ್ನ ತತ್ವ ಇಷ್ಟೇ: “ಊಟ ಮಾಡಲಿಕ್ಕೆಂದೇ ಬದುಕದಿದ್ದರೂ ಬದುಕುಳಿಯಲು ಅನ್ನಬ್ರಹ್ಮನ ಕೃಪಾಕಟಾಕ್ಷ ಇರಲೇಬೇಕು! ಅಂದಮೇಲೆ, ತಿನ್ನುವುದು ಅನಿವಾರ್ಯ ಎಂದಾದಮೇಲೆ ಒಂದಿಷ್ಟು ರುಚಿಕರವಾಗಿ, ಒಂದಿಷ್ಟು ಆರೋಗ್ಯಪೂರ್ಣವಾಗಿ ತಿನ್ನುವುದರಲ್ಲಿ ತಪ್ಪೇನಿದೆ?
ಅಡುಗೆ ಕೇವಲ ಒಂದು ಸಾಧಾರಣ ದೈನಂದಿನ ಚಟುವಟಿಕೆಯಲ್ಲ. ಅದೊಂದು ಕಲೆ, ಅದೊಂದು ಶಾಸ್ತ್ರ. ಯಾವ ತಿನಿಸಿಗೆ ಯಾವ ಯಾವ ಧಾನ್ಯ, ತರಕಾರಿ, ಮಸಾಲೆಗಳನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕೆಂದು ಒಂದು ಖಚಿತವಾದ, ಪ್ರಮಾಣಬದ್ಧವಾದ ಚೌಕಟ್ಟಿನಲ್ಲಿ ಅಳವಡಿಸಿಕೊಂಡು ಅಡುಗೆ ಮಾಡಬೇಕೆಂಬುದೇನೋ ನಿಜ; ಆದರೆ ಅದು ಅಲ್ಲಿಗೇ ನಿಲ್ಲುವುದಿಲ್ಲ! ಅಲ್ಲಿಂದಾಚೆಗೆ ಕೆಲಸ ಮಾಡುವುದು ನಿಮ್ಮ ಪ್ರತಿಭೆ, ನಿಮ್ಮ ಮನೋಧರ್ಮ! ಹೇಗೆ ಒಬ್ಬ ಸಂಗೀತಗಾರ—ಗಾರ್ತಿ ರಾಗದ ಚೌಕಟ್ಟಿನ ಆಚೆ ತನ್ನ ಪ್ರತಿಭಾ ಸಾಮರ್ಥ್ಯವನ್ನು ಹರಿಯಬಿಟ್ಟು ಶ್ರೋತೃಗಳ ಹೃದಯಕ್ಕೆ ಲಗ್ಗೆ ಹಾಕುತ್ತಾರೋ, ಹೇಗೆ ಒಬ್ಬ ನಟ—ನಟಿ ತಮ್ಮ ಪಾತ್ರಗಳ ಚೌಕಟ್ಟುಗಳ ಆಚೆ ತಮ್ಮ ಪ್ರತಿಭಾಬಲದಿಂದ ಹೊಸ ಹೊಳಹುಗಳನ್ನು ಸೃಷ್ಟಿಸಿಕೊಡುತ್ತಾರೋ ಹಾಗೆಯೇ ಒಬ್ಬ ನುರಿತ ಬಾಣಸಿಗ ತನ್ನ ವಿಶೇಷ ಕೌಶಲದಿಂದ ಹಸಿದವನ ಹೊಟ್ಟೆ ತುಂಬಿಸುತ್ತಲೇ ನಾಲಗೆ—ಮನಸ್ಸುಗಳಿಗೆ ಅನಿರ್ವಚನೀಯವಾದ ಆನಂದವನ್ನು ನೀಡುತ್ತಾನೆ! ನನ್ನದೇ ಪದ್ಯ:
“ಪಾಕಲೋಕಕ್ಕುಂಟು ಅದರದ್ದೆ ರೀತಿ ನೀತಿ|
ಮಾಡಿ ಬಡಿಸುವ ಹೊತ್ತು ತುಂಬಿರಲಿ ಸ್ನೇಹ ಪ್ರೀತಿ॥
ಹದವರಿತು ಬೆರೆಸಿರಿ ಹುಳಿ ಉಪ್ಪು ಸಕ್ಕರೆ|
ಜೊತೆಯಲೇ ಇರಲಿ ಬಂಧ ಬೆಸೆವ ಅಕ್ಕರೆ॥
ಅಡುಗೆಮನೆಯ ಇನ್ನಷ್ಟು ಸಾಹಸ—ಸಾಧನೆಗಳ ಬಗ್ಗೆ ಮುಂದಿನ ಕಂತುಗಳಲ್ಲಿ ಮತ್ತೆ ಬರೆಯುತ್ತೇನೆ.
0 Comments