ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 128

ಬಿ. ಸುರೇಶ ಕನ್ನಡ ರಂಗಭೂಮಿ—ಕಿರುತೆರೆ—ಸಿನೆಮಾ ಕ್ಷೇತ್ರಗಳಲ್ಲಿ ನಟ—ನಿರ್ದೇಶಕ—ಬರಹಗಾರನಾಗಿ ತೊಡಗಿಕೊಂಡಿರುವ ಸೃಜನಶೀಲ ಪ್ರತಿಭೆ. ಎ.ಎಸ್.ಮೂರ್ತಿಯವರ ‘ಅಭಿನಯ ತರಂಗ’ ನಾಟಕಶಾಲೆಯಲ್ಲಿ ತರಬೇತಿಯನ್ನು ಪಡೆಯುವ ಸಂದರ್ಭದಲ್ಲಿ ನಾನು ಇವರಿಗೆ ರಂಗಭೂಮಿಯ ಕುರಿತಾಗಿ ನಾಲ್ಕಾರು ದಿನ ಪಾಠ ಮಾಡಿದ್ದೂ ಉಂಟು. ಅಭಿನಯ ತರಂಗದ ವಿದ್ಯಾರ್ಥಿಗಳಿಗಾಗಿ ನಾನು ‘ಬಂದಾ ಬಂದಾ ಸರದಾರ’ ಎನ್ನುವ ನಾಟಕ ಮಾಡಿಸಿದಾಗ ಅದರಲ್ಲಿ ಸುರೇಶ ಮುಖ್ಯ ಪಾತ್ರವನ್ನೂ ಸೊಗಸಾಗಿ ನಿರ್ವಹಿಸಿದ್ದರು. ಇದೆಲ್ಲವನ್ನೂ ನೆನಪಿನಲ್ಲಿಟ್ಟುಕೊಂಡು ಈಗಲೂ ಭೇಟಿಯಾದಾಗಲೆಲ್ಲಾ ತುಂಬು ಪ್ರೀತಿಯಿಂದ ಸುರೇಶ ‘ಮೇಷ್ಟ್ರೇ’ ಎಂದು ಕರೆದಾಗ ಹೆಮ್ಮೆಯಿಂದ ಎದೆ ಉಬ್ಬುತ್ತದೆ!

ಸುರೇಶ ಹಾಗೂ ಇವರ ಮಡದಿ ಶೈಲಜಾ ಸುರೇಶ್ ಅವರದು ನಿರ್ಮಾಣ ಕ್ಷೇತ್ರದಲ್ಲೂ ಬಹು ದೊಡ್ಡ ಹೆಸರು. ಇವರು ಸ್ಥಾಪಿಸಿರುವ ‘ಮೀಡಿಯಾ ಹೌಸ್’ ನಿರ್ಮಾಣ ಸಂಸ್ಥೆ ಸಾವಿರ ಸಾವಿರ ಕಂತುಗಳಷ್ಟು ಪ್ರಸಾರವಾದ ಅನೇಕ ಮಹಾ ಧಾರಾವಾಹಿಗಳನ್ನು ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತೆಯೇ ಜನಪ್ರಿಯ ಚಿತ್ರಗಳ ಚೌಕಟ್ಟಿನಲ್ಲಿಯೇ ಸಮಾಜಕ್ಕೆ ಸಾಂದರ್ಭಿಕ ಅಗತ್ಯದ ಸಂದೇಶಗಳನ್ನು ನೀಡುವ ಅರ್ಥಪೂರ್ಣ ಚಿತ್ರಗಳನ್ನು ನಿರ್ಮಿಸುವುದರಲ್ಲಿಯೂ ಸುರೇಶ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರ ಅನೇಕ ಧಾರಾವಾಹಿಗಳಲ್ಲಿ—ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುವ ಸದವಕಾಶ ನನಗೆ ಒದಗಿ ಬಂದದ್ದು ನಾನು ಸದಾ ನೆನೆಯುವ ಸಂಗತಿ. ಇವುಗಳಲ್ಲಿ ಅತ್ಯಂತ ಪ್ರಮುಖವಾದುದು ‘ನಾಕುತಂತಿ’ ಧಾರಾವಾಹಿಯ ಹೊಸಮನೆ ಸದಾನಂದನ ಪಾತ್ರ. ಸೀತಾರಾಮ್ ಅವರ ‘ಮುಕ್ತ’ ಧಾರಾವಾಹಿಯ ಟೋಪಿ ಶೇಷಪ್ಪನ ಪಾತ್ರದಂತೆಯೇ ಹೊಸಮನೆ ಸದಾನಂದನ ಪಾತ್ರವನ್ನೂ ಈಗಲೂ ಅನೇಕ ಸಹೃದಯರು ನೆನಪಿಸಿಕೊಳ್ಳುತ್ತಾರೆ. ಒಬ್ಬ ಕಲಾವಿದನ ಬದುಕಿಗೆ ಸಾರ್ಥಕತೆಯನ್ನು ತಂದುಕೊಡುವುದು ಇಂಥ ಸಂಗತಿಗಳೇ ಅಲ್ಲವೇ!

ಹೊಸಮನೆ ಸದಾನಂದನ ಪಾತ್ರ ಒಂದು ಅತಿಥಿ ಪಾತ್ರದಂತೆ ಪ್ರಾರಂಭವಾಗಿ ನಂತರ ಬಹು ಮುಖ್ಯ ಪಾತ್ರವಾಗಿ ಧಾರಾವಾಹಿಯಲ್ಲಿ ಹರಡಿಕೊಂಡ ಸಂಗತಿಯ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ಆಗಲೇ ಪ್ರಸ್ತಾಪಿಸಿದ್ದೇನೆ. ಹೊಸಮನೆ ಸದಾನಂದ ಒಬ್ಬ ಮಹಾ ರಸಿಕ , ಭ್ರಷ್ಟ ರಾಜಕಾರಣಿ. ಅಲ್ಲಮನ ವಚನಗಳಿಂದ ಮೊದಲುಗೊಂಡು ಅಡಿಗರ ಪದ್ಯಗಳವರೆಗೆ.. ಉರ್ದು ಶೇರ್ ಗಳಿಂದ ಮೊದಲುಗೊಂಡು ಆಧುನಿಕ ನವ್ಯ ಕವಿತೆಗಳವರೆಗೆ ಅಗಾಧವಾಗಿ ಓದಿಕೊಂಡಿರುವ ಈ ಸದಾನಂದ ನಿರರ್ಗಳವಾಗಿ ಕವಿತೆಗಳನ್ನು ಉದ್ಧರಿಸುತ್ತಾ ಒಂದು ಮೋಡಿಯ ಜಾಲ ರಚಿಸುವುದರಲ್ಲೂ ಸಮರ್ಥನಿರುತ್ತಾನೆ.

ಮಹಾ ಹೆಣ್ಣುಬಾಕನೇ ಆದ ಸದಾನಂದ ಪೂರ್ವಿ ಎಂಬ ಹೆಸರಿನ ನೃತ್ಯಗಾತಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಅವಿರತವಾಗಿ ಪ್ರಯತ್ನಿಸುತ್ತಲೇ ಇರುತ್ತಾನೆ. ಈ ಪೂರ್ವಿ, ಸುಕನ್ಯಾ ಸರ್ದೇಸಾಯಿ ಎಂಬ ವಿರೋಧಪಕ್ಷದ ರಾಜಕಾರಣಿಯ ಮಗಳು; ಈ ಸುಕನ್ಯಾ ಸದಾನಂದನ ಒಂದುಕಾಲದ ಪ್ರೇಯಸಿ! ಆ ಪ್ರೇಮದ ಫಲವೇ ಪೂರ್ವಿ.. ಆದರೆ ಈ ಸತ್ಯದ ಅರಿವಿಲ್ಲದ ಸದಾನಂದ ಪೂರ್ವಿಯೆಡೆಗೆ ಆಕರ್ಷಿತನಾಗಿ ಅವಳನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದುಬಿಟ್ಟಿರುತ್ತಾನೆ ! ಇಂಥದೊಂದು ಸಂಕೀರ್ಣ ಸನ್ನಿವೇಶವನ್ನು ಸೃಷ್ಟಿಸಿಬಿಟ್ಟ ಸುರೇಶ ನೂರಾರು ಕಂತುಗಳವರೆಗೆ ಅದನ್ನು ಬೆಳೆಸಿ ನಿರ್ವಹಿಸಿದ ರೀತಿ ಅನನ್ಯವಾದುದು. ಇಂಥ ಸನ್ನಿವೇಶಗಳನ್ನು ಸೃಷ್ಟಿಸಿ ಕಥೆ ಕಟ್ಟುವುದೆಂದರೆ ಕತ್ತಿಯ ಅಲಗಿನ ಮೇಲಿನ ನಡಿಗೆಯೇ ಸರಿ! ಕೊಂಚ ಹೆಚ್ಚುಕಡಿಮೆಯಾದರೂ ಸಹೃದಯರ ಪ್ರತಿಕ್ರಿಯೆ ಯಾವ ತಿರುವನ್ನೂ ಪಡೆದುಕೊಂಡುಬಿಡಬಹುದು!

ನನಗೆ ಚೆನ್ನಾಗಿ ನೆನಪಿದೆ: ಪ್ರಸಿದ್ಧ ನಿರ್ದೇಶಕ ಫಣಿ ರಾಮಚಂದ್ರ ಅವರು ‘ನಾಕುತಂತಿ’ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದರು. ಅಪಾರವಾಗಿ ಮೆಚ್ಚಿಕೊಂಡಿದ್ದರು ಕೂಡಾ. ಒಮ್ಮೆ ಭೇಟಿಯಾದಾಗ ನನ್ನ ಅಭಿನಯವನ್ನೂ ಮೆಚ್ಚಿ ಮಾತಾಡಿ ಕೊನೆಗೆ, “ಭಾಳ ವಿಶಿಷ್ಟವಾಗಿ ಕಥೆ ಹೆಣೀತಿದಾರೆ ಸುರೇಶ ಅವರು. ಆದರೆ ಅನುಚಿತವಾದ್ದು ಏನೂ ಆಗಬಾರದು ಅಷ್ಟೇ..ಅದನ್ನೆಲ್ಲಾ ಸಹಿಸಿಕೊಳ್ಳೋಕ್ಕಾಗಲ್ಲ” ಎಂದಿದ್ದರು!

ಪೂರ್ವಿಯ ಪಾತ್ರವನ್ನು ನಿರ್ವಹಿಸುತ್ತಿದ್ದವರು ಶಮಾ ಕೃಷ್ಣಾ . ಶಮಾ ಈ ಮೊದಲು ನನ್ನ ‘ಆಸರೆ’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಸ್ವತಃ ಬಹಳ ಒಳ್ಳೆಯ ನೃತ್ಯಪಟುವಾಗಿರುವ ಶಮಾ ಭಾವಪೂರ್ಣ ಅಭಿನಯಕ್ಕೆ ಹೆಸರಾದವರು. ಸುಕನ್ಯಾ ಸರ್ದೇಸಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದವರು ಶೈಲಜಾ ಸುರೇಶ್ ಅವರು. ರಂಗಭೂಮಿಯ ಹಿನ್ನೆಲೆಯಿಂದ ಬಂದು ಅನೇಕ ನಾಟಕ ಧಾರಾವಾಹಿಗಳಲ್ಲಿ ಅಭಿನಯಿಸಿ ಪಳಗಿದ್ದ ಶೈಲಜಾ ಅವರದು ಗತ್ತು—ಗಾಂಭೀರ್ಯಗಳ ಸುಕನ್ಯಾ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ. ನನ್ನ ಮಡದಿಯ ಪಾತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಕಲಾವಿದೆ ವೀಣಾ ಮೂರ್ತಿಯವರು ಅಭಿನಯಿಸುತ್ತಿದ್ದರು. ಜತೆಗೆ ಏಣಗಿ ನಟರಾಜ, ರಮೇಶ್, ಇಂದಿರಾ, ಖ್ಯಾತ ಗಾಯಕ ಶಶಿಧರ ಕೋಟೆ, ಕವಿತಾ ಕಂಬಾರ.. ಹೀಗೆ ಇನ್ನೂ ಅನೇಕ ಖ್ಯಾತನಾಮರು.

ನಿಜಕ್ಕೂ ಒಬ್ಬ ನಟನಾಗಿ ನನ್ನನ್ನು ನಾನು ಅರ್ಥೈಸಿಕೊಳ್ಳಲು, ಶೋಧಿಸಿಕೊಳ್ಳಲು ಅನುವು ಮಾಡಿಕೊಟ್ಟ ಪಾತ್ರಗಳಲ್ಲಿ ಹೊಸಮನೆ ಸದಾನಂದನ ಪಾತ್ರ ಪ್ರಮುಖವಾದುದು. ಒಟ್ಟು 1600 ಎಪಿಸೋಡ್ ಗಳಲ್ಲಿ ಝೇಂಕರಿಸಿದ ‘ನಾಕುತಂತಿ’ ಯಾವ ಹಂತದಲ್ಲೂ ಚರ್ವಿತಚರ್ವಣವಾಗದೆ ಸವಕಲಾಗದೆ ಕೊನೆಯವರೆಗೂ ಆಸಕ್ತಿ ಕುತೂಹಲಗಳನ್ನು ಕಾದುಕೊಂಡು ಬಂದದ್ದು ಧಾರಾವಾಹಿಗಳ ಕ್ಷೇತ್ರದ ಮಟ್ಟಿಗೆ ಅತಿಶಯದಲ್ಲಿ ಅತಿಶಯದ ಸಂಗತಿ!

ಪೂರ್ವಿಯನ್ನು ವಶಪಡಿಸಿಕೊಳ್ಳಲು ಸದಾನಂದ ನಡೆಸುವ ಹುನ್ನಾರಗಳೆಲ್ಲಾ ತಲೆಕೆಳಗಾಗುತ್ತಾ ಹೋಗುತ್ತವೆ! ವೀಕ್ಷಕರನ್ನು ಕುತೂಹಲ—ಆತಂಕಗಳಲ್ಲಿ ಅದ್ದಿ ತೆಗೆಯುವಂತಹ ಇಂತಹ ಸನ್ನಿವೇಶಗಳನ್ನು ಸುರೇಶ ಸಮರ್ಥವಾಗಿ ಕಟ್ಟಿಕೊಡುತ್ತಿದ್ದರು. ಹಾಗೆಯೇ ಹಗ್ಗವನ್ನು ಎಷ್ಟು ಜಗ್ಗಬೇಕೆಂಬುದರ ಖಚಿತ ತಿಳುವಳಿಕೆಯಿದ್ದ ಸುರೇಶ, ಸದಾನಂದ—ಪೂರ್ವಿ ಪ್ರಸಂಗಕ್ಕೆ ಒಂದು ಸೂಕ್ತ—ಸಮಂಜಸ ಅಂತ್ಯವನ್ನೂ ರೂಪಿಸಿದರು

ಧಾರಾವಾಹಿಯ ಕೊನೆಯ ಹೊತ್ತಿಗೆ ಹೊಸಮನೆ ಸದಾನಂದ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸಿಲುಕಿಕೊಂಡು ತತ್ಕಾರಣವಾಗಿ ಹಾಗೂ ಮಡದಿಯ ಕೊಲೆಯ ಆರೋಪದ ಮೇಲೆ ಜೈಲು ಸೇರುತ್ತಾನೆ. ಜೈಲಿನಲ್ಲಿರುವಾಗಲೇ ಪೂರ್ವಿ ಬೇರೆ ಯಾರೂ ಅಲ್ಲ, ತನ್ನ ಸ್ವಂತ ಮಗಳು ಎಂಬ ಸತ್ಯ ತಿಳಿದುಬರುತ್ತದೆ. ಮಗಳನ್ನೇ ಮೋಹಿಸಿ ವಶಪಡಿಸಿಕೊಳ್ಳಲು ಯತ್ನಿಸಿದ್ದ ತನ್ನ ಅಸಹ್ಯ ಆಲೋಚನೆ—ನಡವಳಿಕೆಗಳನ್ನು ನೆನೆನೆನೆದು ತತ್ತರಿಸಿಹೋಗುತ್ತಾನೆ ಸದಾನಂದ. ಮನಸ್ಸಿಗೆ ಆದ ಈ ಭಾರೀ ಆಘಾತವನ್ನು ತಡೆದುಕೊಳ್ಳಲಾಗದೆ ಮಾನಸಿಕ ಸ್ತಿಮಿತವನ್ನೇ ಕಳೆದುಕೊಂಡುಬಿಡುತ್ತಾನೆ. ಜೈಲಿನ ಕಂಬಿಗಳ ಹಿಂದೆ ನಾಲ್ಕು ಗೋಡೆಗಳ ನಡುವೆ ಅಲ್ಲಮನ ವಚನಗಳನ್ನೋ ಅಡಿಗರ ಪದ್ಯದ ಸಾಲುಗಳನ್ನೋ ಗುನುಗುತ್ತಾ ತೆವಳುತ್ತಾ ಅಂಬೆಗಾಲಿಕ್ಕುತ್ತಾ ಒಮ್ಮೊಮ್ಮೆ ಅಳುತ್ತಾ ಒಮ್ಮೊಮ್ಮೆ ನಗುತ್ತಾ ನರಳುತ್ತಾ ಪರಿತಪಿಸುವ ಸದಾನಂದನ ಪ್ರಲಾಪಗಳೊಂದಿಗೆ ಆ ಪಾತ್ರ ಕೊನೆಯಾಗುತ್ತದೆ.

ಒಬ್ಬ ನಟನಾಗಿ ಬಹಳಷ್ಟು ಸವಾಲುಗಳನ್ನು ಒಡ್ಡಿದ ಪಾತ್ರವಿದು. ಅನೇಕ ಪದರಗಳ—ವಿವಿಧ ಛಾಯೆಗಳ —ಹತ್ತಾರು ಮುಖವಾಡಗಳ ಪಾತ್ರದ ಅಂತರಂಗದ ಅನಾವರಣ ಮಾಡಿಸುವುದು ಎಂಥವರಿಗಾದರೂ ಕಷ್ಟಸಾಧ್ಯದ ಕೆಲಸ. ಅಂಥದೊಂದು ಪಾತ್ರವನ್ನು ನನ್ನ ಮೇಲೆ ನಂಬುಗೆಯಿಟ್ಟು ನೀಡಿದ ಪ್ರಿಯಶಿಷ್ಯ ಸುರೇಶನಿಗೆ ಹೃದಯಪೂರ್ವಕ ಧನ್ಯವಾದವನ್ನಲ್ಲದೇ ಬೇರೇನು ಹೇಳಲಿ?

ಇತ್ತ ಮನೆಯಲ್ಲಿ ಅಣ್ಣನ ಆರೋಗ್ಯದ ಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿತ್ತು. ಅವರು ಅನುಭವಿಸುತ್ತಿದ್ದ ನೋವು ಸಂಕಟಗಳನ್ನು ನೋಡುವುದಕ್ಕೇ ಕಷ್ಟವಾಗುತ್ತಿತ್ತು. ಮೂಳೆಗಳ ಕ್ಯಾನ್ಸರ್ ಆದ್ದರಿಂದ ಇಡೀ ಮೈಯನ್ನು ಸುತ್ತಿಗೆಯಿಂದ ಜಜ್ಜಿದಷ್ಟು ನೋವಾಗುತ್ತಿತ್ತಂತೆ ಅವರಿಗೆ. ಆಗಾಗ್ಗೆ ಮೂರು ನಾಲ್ಕು ದಿನಗಳ ಮಟ್ಟಿಗೆ ಆಸ್ಪತ್ರೆಗೆ ಸೇರಿಸುವುದು.. ಒಂದಿಷ್ಟು ನೋವು ನಿವಾರಕಗಳನ್ನು ನೀಡುವುದು.. ನಂತರ ಮನೆಗೆ ಕರೆದುಕೊಂಡು ಬರುವುದು… ಹೀಗೇ ಸಾಗುತ್ತಿತ್ತು.

ಕುಮಾರಣ್ಣಯ್ಯ—ವತ್ಸಲಾ ಅತ್ತಿಗೆಯರು ತುಂಬಾ ಮುತುವರ್ಜಿಯಿಂದ ಅಣ್ಣನನ್ನು ನೋಡಿಕೊಳ್ಳುತ್ತಿದ್ದರು. ವತ್ಸಲಾ ಅತ್ತಿಗೆಯಂತೂ ಮಗಳಾಗಿ ನಿಂತು ಅಣ್ಣನ ಶುಶ್ರೂಷೆ ಮಾಡುತ್ತಿದ್ದರು. ಅಕ್ಕಂದಿರು ಭಾವಂದಿರೂ ಸಹಾ ಹೆಚ್ಚುಕಡಿಮೆ ಪ್ರತಿನಿತ್ಯವೆಂಬಂತೆ ಬಂದು ಅಣ್ಣನನ್ನು ನೋಡಿಕೊಂಡು ಅವರೊಟ್ಟಿಗೆ ಸ್ವಲ್ಪ ಕಾಲ ಕಳೆದು ಹೋಗುತ್ತಿದ್ದರು. ವಿಪರೀತವಾಗಿ ಶೂಟಿಂಗ್ ಹಾಗೂ ರಿಹರ್ಸಲ್ ಗಳಲ್ಲಿ ತೊಡಗಿದ್ದರಿಂದ ನನಗೇ ಪದೇ ಪದೇ ಹೋಗಿ ಅಣ್ಣನೊಟ್ಟಿಗೆ ತುಸು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ರಂಜನಿ ಆಗಾಗ್ಗೆ ಮಕ್ಕಳೊಂದಿಗೆ ಹೋಗಿ ಅಣ್ಣನೊಟ್ಟಿಗೆ ಕೊಂಚ ಸಮಯ ಇದ್ದು ಮಾತಾಡಿಸಿಕೊಂಡು ಬರುತ್ತಿದ್ದಳು. ಮನೆಯವರೆಲ್ಲರ ಪ್ರೀತಿಯ ಆರೈಕೆ—ಶುಶ್ರೂಷೆಗಳ ನಡುವೆ ನನ್ನ ಅನುಪಸ್ಥಿತಿ ಗಮನಕ್ಕೆ ಬಾರದೇ ಹೋದರೂ ವೈಯಕ್ತಿಕವಾಗಿ ನನ್ನೊಳಗೇ ಒಂದು ಗಿಲ್ಟ್ ನ ಭಾವನೆ ಮೊಳಕೆ ಒಡೆದಿತ್ತು.

ಮೂಲತಃ ನಾನು ಆಸ್ಪತ್ರೆ ಎಂದರೆ ಅಂಜುವ, ನೋವು—ಸಂಕಟದ ಸಂದರ್ಭಗಳೆಂದರೆ ಎದುರಿಸಲಾರದೆ ಹಿಂದೆ ಸರಿಯುವ ಸ್ವಭಾವದವನಾದ್ದರಿಂದ ಒಂದು ರೀತಿಯಲ್ಲಿ ನನ್ನ ಬಿಡುವಿರದ ಚಟುವಟಿಕೆ ಅಣ್ಣನ ಅನಾರೋಗ್ಯದ ಈ ಯಾತನಾಮಯ ದಿನಗಳಲ್ಲಿ ನನಗೆ ಗುರಾಣಿಯಾಗಿದ್ದಿರಲಿಕ್ಕೂ ಸಾಕು. ಆದರೂ ಈಗಲೂ ಅನೇಕ ಏಕಾಂತದ ಕ್ಷಣಗಳಲ್ಲಿ ಮನಸ್ಸು ಚೀರಿ ಚೀರಿ ತಿವಿಯುತ್ತದೆ: ‘ ಒಮ್ಮೆಯಾದರೂ ಅಣ್ಣನಿಗೆ ಅನ್ನಿಸಿರುವುದಿಲ್ಲವೇ—ಈ ನನ್ನ ಕಿರಿಯ ಮಗ ಭಾವನಾತ್ಮಕವಾಗಿ ಇಷ್ಟು ದೂರಾಗಿದ್ದಾನೆಯೇ ನನ್ನಿಂದ? ನನ್ನ ಬಗ್ಗೆ ನನ್ನ ಆರೋಗ್ಯದ ಬಗ್ಗೆ ಅವನಿಗೆ ಕಾಳಜಿಯೇ ಇಲ್ಲವೇ ಎಂದು ಒಂದು ಕ್ಷಣಕ್ಕಾದರೂ ಅವರಿಗೆ ಅನ್ನಿಸಿರುವುದಿಲ್ಲವೇ? ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸಿಯೇ ಆಗಿದ್ದ ಅವರನ್ನು ಬಹುಶಃ ಇಂಥ ಪ್ರಶ್ನೆಗಳು ಕಾಡಿರಲಾರವೇನೋ..

ಆದರೂ ಪ್ರಭೂ, ನೀನು ಅಣ್ಣನಿಗಾಗಿ ಇನ್ನಷ್ಟು ಸಮಯ ನೀಡಬೇಕಿತ್ತು..ಹೋದವರು ಮರಳಿ ಬರುತ್ತಾರೆಯೇ? ವಿದ್ಯಾವಾರಿಧಿಯೇ ಆಗಿದ್ದ ಅವರಿಂದ ಎಷ್ಟೆಲ್ಲಾ ಗಳಿಸಿಕೊಳ್ಳಬಹುದಿದ್ದರೂ ನಮ್ಮನಮ್ಮದೇ ಸಮಸ್ಯೆಗಳ ವಿಷವರ್ತುಲದಲ್ಲಿ ಸಿಲುಕಿ ಆ ಕಡೆ ಹೆಚ್ಚು ಗಮನ ಹರಿಸಲಾಗಲಿಲ್ಲˌ.. ಈಗ ಅವರ ಕೊನೆಯ ದಿನಗಳಲ್ಲಾದರೂ ಅವರ ಸಮೀಪ ಇದ್ದು ಅವರಿಗೆ ಒಂದಿಷ್ಟು ಸಾಂತ್ವನ ನೀಡಬಹುದಿತ್ತು.. ಅದೂ ಆಗಲಿಲ್ಲ.. ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..”

ಇಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವೊಂದು ದೊರೆಯುವಂತಿದ್ದರೆ ಎಷ್ಟು ಚೆನ್ನಿರುತ್ತಿತ್ತು!

‍ಲೇಖಕರು avadhi

April 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Suresha B

    ಥ್ಯಾಂಕ್ಸು ಮೇಷ್ಟರೇ…
    ನನ್ನ ನಿಮ್ಮ ಪಯಣದ ಕೆಲ ಘಳಿಗೆಗಳನ್ನು ಹಂಚಿಕೊಂಡದ್ದಕ್ಕೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: