ಶ್ರೀನಿವಾಸ ಪ್ರಭು ಅಂಕಣ: ಜಾಕಿ ಚಾನ್ ಕಲಿಸಿದ ಪಾಠ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 135

ಮೊದಲ ದಶಕದ ಮಧ್ಯಭಾಗ ಹಾಗೂ ಉತ್ತರಾರ್ಧಗಳಲ್ಲಿ ನಾನು ಪಾಲ್ಗೊಂಡ ಕೆಲ ವಿಶೇಷ ಧಾರಾವಾಹಿಗಳು, ಚಲನಚಿತ್ರಗಳನ್ನು ಇಲ್ಲಿ ನೆನಪಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಕನ್ನಡ ರಂಗಭೂಮಿ ಹಾಗೂ ಕನ್ನಡ ವಾಹಿನಿಗಳ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು ಡಾ ಎಸ್.ಎಲ್.ಎನ್.ಸ್ವಾಮಿ. ಕನ್ನಡದ ಹಲವಾರು ಮುಖ್ಯ ವಾಹಿನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವ ಡಾ॥ಸ್ವಾಮಿ ಅವರು ತಮ್ಮ ಅಧಿಕಾರಾವಧಿಯಲ್ಲಿ ರೂಪಿಸಿದ ಅನೇಕ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿವೆ. ನಟ, ನಿರ್ದೇಶಕ, ಸಂಘಟಕರಾಗಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಸ್ವಾಮಿ ಅವರು ರಂಗ ವಿಮರ್ಶಕರೂ ಹೌದು, ನಾಟಕಕಾರರೂ ಹೌದು. ರಂಗಬ್ರಹ್ಮ, ಶಬ್ದಬ್ರಹ್ಮ ಎಂದೇ ಖ್ಯಾತರಾಗಿರುವ ಸ್ವಾಮಿ ಅವರು ಪುರುಷೋತ್ತಮ ಪರ್ವ, ಪದ್ಮಾವತಿ ಪರಿಣಯ, ಕಾನೀನ , ಈತನೀಗ ಕನಕದಾಸ, ಕುದಿಮೌನ ಇವೇ ಮುಂತಾದ ಅನೇಕ ಪ್ರಸಿದ್ಧ ನಾಟಕಗಳನ್ನು ರಚಿಸಿದ್ದಾರೆ. ಇವರು 1999 ರಿಂದ ಈವರೆಗೂ ಒಟ್ಟು 17 ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆನ್ನುವುದು ನಿಜಕ್ಕೂ ಅಚ್ಚರಿಯ, ಅಷ್ಟೇ ಹೆಮ್ಮೆಯ ಸಂಗತಿ ಕೂಡಾ.

ಸ್ವಾಮಿಯವರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸದವಕಾಶ ನನಗೆ ಒದಗಿ ಬಂದಿತ್ತು. ಅವುಗಳಲ್ಲಿ ಮೊದಲನೆಯದು ಅವರು ಚಂದನ ವಾಹಿನಿಗಾಗಿ ರೂಪಿಸಿದ ‘ದಾಸನಾಗು ವಿಶೇಷನಾಗು’ ಧಾರಾವಾಹಿ. ಕನ್ನಡ ಹರಿದಾಸ ಪರಂಪರೆಯಲ್ಲಿ ಬರುವ ದಾಸವರೇಣ್ಯರ ಬದುಕು, ಸಾಧನೆಗಳನ್ನು ಕಥಾನಕದ ರೂಪದಲ್ಲಿ ದೃಶ್ಯ ಮಾಧ್ಯಮಕ್ಕೆ ಅಳವಡಿಸಿಕೊಂಡು ಚಿತ್ರಿಸಿದ ಧಾರಾವಾಹಿ ಇದು. ಇಷ್ಟು ವಿಸ್ತೃತವಾಗಿ ದಾಸ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಬಹುಶಃ ಈ ಮೊದಲು ಆಗಿರಲಿಲ್ಲ. ಪ್ರಸಿದ್ಧ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಪೂರಕ ಸಾಹಿತ್ಯವನ್ನು ಒದಗಿಸಿಕೊಡುತ್ತಿದ್ದರು. ಸಂಭಾಷಣೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದವರು ಡಾ॥ಸ್ವಾಮಿ ಅವರು. “ಹನುಮಂತ ಸೀತೆಯನ್ನರಸಿಕೊಂಡು ಲಂಕೆಗೆ ಹಾರಿ ಅಲ್ಲಿ ರಾವಣನ ಆಸ್ಥಾನಕ್ಕೆ ಹೋಗಿದ್ದಾಗ ನೀನು ಯಾರು ಎಂದು ರಾವಣ ಅವನನ್ನು ಪ್ರಶ್ನಿಸುತ್ತಾನೆ; ಅದಕ್ಕೆ ಹನುಮಂತ ‘ ದಾಸೋಹಂ ಕೋಸಲೇಂದ್ರಸ್ಯ’ ನಾನು ಶ್ರೀರಾಮಚಂದ್ರನ ದಾಸ’ ಎಂದು ಹೇಳುತ್ತಾನೆ; ಇದು ದಾಸ ಪರಂಪರೆಯ ಆರಂಭ” ಎಂದು ಸ್ವಾರಸ್ಯಕರವಾಗಿ ವಿವರಿಸುವ ಸ್ವಾಮಿ ಅವರು ಮುಂದಿನ ಎಲ್ಲ ದಾಸವರೇಣ್ಯರನ್ನೂ ತಮ್ಮ ಧಾರಾವಾಹಿಯಲ್ಲಿ ಸ್ಮರಿಸುತ್ತಾ ಪರಿಚಯಿಸುತ್ತಾ ಹೋಗುತ್ತಾರೆ.

ಅದರಲ್ಲಿಯೂ ವಿಶೇಷವಾಗಿ ಅವರು ಗಮನವನ್ನು ಕೇಂದ್ರೀಕರಿಸಿರುವುದು ಪುರಂದರದಾಸರ ಬದುಕಿನ ಮೇಲೆ. ಧಾರಾವಾಹಿಯ ಈ ಕಂತುಗಳಲ್ಲಿ ಪ್ರಧಾನವಾಗಿ ಬರುವ ದೊರೆ ಕೃಷ್ಣದೇವರಾಯನ ಪಾತ್ರವನ್ನು ನಾನು ನಿರ್ವಹಿಸಿದ್ದೆ. ಪುರಂದರರ ಪಾತ್ರವನ್ನು ಪ್ರಸಿದ್ಧ ಚಲನಚಿತ್ರ ನಟ ರಾಮಕೃಷ್ಣ ಅವರೂ ಸರಸ್ವತಿ ಬಾಯಿಯ ಪಾತ್ರವನ್ನು ಪ್ರತಿಭಾವಂತ ಕಲಾವಿದೆ ಶ್ರೀಮತಿ ಅವರೂ ನಿರ್ವಹಿಸಿದ್ದರು. ನಮ್ಮ ಎಲ್ಲಾ ದೃಶ್ಯಭಾಗಗಳ ಚಿತ್ರೀಕರಣ ನಡೆದದ್ದು ಪ್ರಸಿದ್ಧ ಐತಿಹಾಸಿಕ ಸ್ಥಳವಾದ ಹಂಪೆಯಲ್ಲಿ. ನನಗೆ ವೈಯಕ್ತಿಕವಾಗಿ ಬಹಳ ತೃಪ್ತಿಯನ್ನೂ ಸಂತಸವನ್ನೂ ನೀಡಿದ ಪಾತ್ರಗಳಲ್ಲಿ ಈ ಧಾರಾವಾಹಿಯ ಕೃಷ್ಣದೇವರಾಯನ ಪಾತ್ರವೂ ಒಂದು. ಸ್ವಾಮಿಯವರ ಸಂಭಾಷಣೆಗಳಲ್ಲಿ ಒಂದು ಖಚಿತ ಲಯವಿರುತ್ತಿತ್ತು; ಸಹಜ ಪ್ರಾಸಗಳಿರುತ್ತಿದ್ದವು; ಅಂತೆಯೇ ಒಂದು ಸಲೀಸು ಓಘವಿರುತ್ತಿತ್ತು. ಶಿಷ್ಟಭಾಷೆಯ ಆ ಸುದೀರ್ಘ ಸಂಭಾಷಣೆಗಳನ್ನು ಭಾವಪೂರ್ಣವಾಗಿ ಹೇಳುತ್ತಾ ವೀಕ್ಷಕರ ಹೃನ್ಮನಗಳಿಗೆ ತಲುಪಿಸುವುದು ನಿಜಕ್ಕೂ ಕ್ಲಿಷ್ಟಕರ ಸವಾಲೇ ಆಗಿತ್ತು. ಹಾಗೆ ಸವಾಲುಗಳು ಎದುರಾದಾಗಲೇ ಆಗಲೇ ನಮ್ಮೊಳಗಿನ ನಟನನ್ನು ಬಡಿದೆಬ್ಬಿಸಿದಂತಾಗುವುದು! ಆ ಧಾರಾವಾಹಿಯ ಕೆಲ ದೃಶ್ಯಗಳಂತೂ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿವೆ.

ವ್ಯಾಸತೀರ್ಥರು ಹಾಗೂ ಪುರಂದರ ದಾಸರು ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದು ದೊರೆಯ ಮೇಲೆರಗಿದ್ದ ಕುಹಯೋಗವನ್ನು (ಅಕಾಲ ಮರಣ ಪ್ರಾಪ್ತಿ ಸಂಭವ ಯೋಗ) ನಿವಾರಿಸುವುದು ಅಂಥದೊಂದು ಅಪೂರ್ವ ಸನ್ನಿವೇಶ. ಅಂತೆಯೇ ಪುರಂದರ ದಾಸರೊಂದಿಗೆ ಕೃಷ್ಣದೇವರಾಯ ಮುಖಾಮುಖಿಯಾಗುವಂತಹ ಸನ್ನಿವೇಶಗಳೂ ಸಹಾ ಸೊಗಸಾಗಿ ರೂಪುಗೊಂಡಿದ್ದವು. ಪುರಂದರ ದಾಸರಾಗಿ ರಾಮಕೃಷ್ಣ ಅವರೂ ಸಹಾ ಸೊಗಸಾಗಿ ಅಭಿನಯಿಸಿದ್ದರು. ಇದೇ ಸಮಯದಲ್ಲಿ ‘martial arts king’ ಎಂದೇ ಖ್ಯಾತರಾದ ಸುಪ್ರಸಿದ್ಧ ತಾರೆ ಜಾಕಿ ಚಾನ್ ಅವರು the myth ಎಂಬ ಇಂಗ್ಲೀಷ್ ಚಿತ್ರದ ಶೂಟಿಂಗ್ ಗಾಗಿ ಹಂಪೆಗೆ ಬಂದಿದ್ದರು. ಜಗತ್ಪ್ರಸಿದ್ಧ ನಟ ಅತ್ಯಂತ ಸರಳವಾಗಿ ಆರಾಮವಾಗಿ ಹಂಪೆಯ ಬೀದಿಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಅಡ್ಡಾಡುತ್ತಿದ್ದುದನ್ನು ನೋಡಿಯೇ ಬೆರಗಾಗಿದ್ದ ಸ್ಥಳೀಯರಿಗೆ ಜಾಕಿಚಾನ್ ಚುರುಕು ಮುಟ್ಟಿಸಿದ ಬಗೆಯನ್ನು ಅನಂತರ ಕೆಲ ಹುಡುಗರು ಬಂದು ನಮಗೆ ಹೇಳಿದಾಗ ಬೆರಗಾಗುವ ಸರದಿ ನಮ್ಮದಾಗಿತ್ತು! ನಡೆದದ್ದು ಇಷ್ಟು: ಊರಿನಲ್ಲಿ ಅಡ್ಡಾಡುತ್ತಿದ್ದಾಗ ಹಂಪೆಯ ಪ್ರಸಿದ್ಧ ಕಲ್ಲಿನ ರಥದ ಬಳಿ ಜಾಕಿ ಚಾನ್ ಅವರಿಗೆ ಅಲ್ಲಿ ರೊಪ್ಪಿದ್ದ ಕಸದ ರಾಶಿ ಕಾಣಿಸಿತು. ಒಡನೆಯೇ ಕಾರ್ಯೋನ್ಮುಖರಾದ ಜಾಕಿ ಚಾನ್ ತಾವೇ ಸ್ವತಃ ಆ ಕಸದ ರಾಶಿಯನ್ನು ತೆಗೆದು ಒಂದು ಮೂಲೆಗೆ ಸರಿಸಿದರು. ಅವರ ಮುಖದ ಮೇಲೆ ನೋವು, ಅಸಹನೆಗಳು ಮಡುಗಟ್ಟಿದ್ದವು. ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದ ಕೆಲ ಮಂದಿಯನ್ನುದ್ದೇಶಿಸಿ ಭಾರವಾದ ದನಿಯಲ್ಲಿ ಜಾಕಿ ಚಾನ್ ನುಡಿದರು: “ನಿಮಗೆ ಇಂಥ ಐತಿಹಾಸಿಕ ಸ್ಮಾರಕಗಳ ಪ್ರಾಮುಖ್ಯತೆ ಏನು ಎಂಬುದರ ಅರಿವಾದರೂ ಇದೆಯೇ? ಇಂಥ ಪ್ರಮುಖ— ಪವಿತ್ರ ಸ್ಥಳಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಕನಿಷ್ಠ ತಿಳುವಳಿಕೆಯೂ ನಿಮಗೆ ಇಲ್ಲವೇ?” ಅಷ್ಟು ದೊಡ್ಡ ತಾರೆಯ ಅಂತಹ ಸರಳ, ನಮ್ರ ನಡವಳಿಕೆಯ ಬಗ್ಗೆ ಕೇಳಿ ನಮಗೆ ಅಚ್ಚರಿಯಾದದ್ದರ ಜತೆಗೆ ನಾಚಿಕೆ, ಅವಮಾನಗಳಿಂದ ತಲೆಯೂ ಬಾಗಿಹೋಯಿತು. ನಮ್ಮ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಿಕೊಳ್ಳುವುದರ ಬಗ್ಗೆ, ಸ್ವಚ್ಛತೆಯ ಬಗ್ಗೆ ಪ್ರಾಥಮಿಕ ತಿಳುವಳಿಕೆಯ ಪಾಠಗಳನ್ನೂ ನಾವು ಇತರರಿಂದ ಕಲಿಯಬೇಕೇ?

ಮರುದಿನ ನಮ್ಮ ಚಿತ್ರೀಕರಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆವು. ಇದ್ದಕ್ಕಿದ್ದಂತೆ ಜನರ ಗದ್ದಲ, ಹರ್ಷೋದ್ಗಾರಗಳು ಕೇಳಿಬಂದು ತಿರುಗಿ ನೋಡಿದರೆ ಸ್ವತಃ ಜಾಕಿಚಾನ್ ನಮ್ಮ ಚಿತ್ರೀಕರಣವನ್ನು ನೋಡಲು ಕಾಲ್ನಡಿಗೆಯಲ್ಲೇ ಬಂದುಬಿಟ್ಟಿದ್ದಾರೆ! ಈ ಅದ್ವಿತೀಯ ನಟ ತೆರೆಯ ಮೇಲಿನ ತನ್ನ ಪ್ರಚಂಡ ಫೈಟ್ ಗಳಿಂದ ನಮ್ಮನ್ನು ಬೆರಗುಗೊಳಿಸುವುದು ಒತ್ತಟ್ಟಿಗಾದರೆ ಈ ತನ್ನ ಸರಳತೆ ಸಜ್ಜನಿಕೆಯಿಂದ ಅಚ್ಚರಿಗೊಳಿಸುವುದು ಮತ್ತೊಂದು ಬಗೆ! ಬಂದವರೇ ನಮ್ಮೆಲ್ಲಾ ಚಿತ್ರೀಕರಣದ ಉಪಕರಣಗಳನ್ನೂ ಕುತೂಹಲದಿಂದ ವೀಕ್ಷಿಸಿದರು; ನಮ್ಮ ವೇಷ ಭೂಷಣ ವರ್ಣಾಲಂಕಾರಗಳನ್ನು ಅಚ್ಚರಿಯಿಂದ ನೋಡಿದರು; ನಿರ್ದೇಶಕ ಸ್ವಾಮಿಯವರೊಂದಿಗೆ ಮಾತನಾಡಿ ನಮ್ಮ ಧಾರಾವಾಹಿಯ ಬಗ್ಗೆ, ನಮ್ಮ ಪಾತ್ರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲಲ್ಲಿ ಬಿಸಾಡಿದ್ದ ತಟ್ಟೆ ಲೋಟಗಳನ್ನು ತೆಗೆದು ಸ್ವಚ್ಛಪಡಿಸಲು ಹೇಳಿ, “ಚಿತ್ರೀಕರಣದ ಸ್ಥಳಕ್ಕೂ ಒಂದು ಪಾವಿತ್ರ್ಯತೆ ಇದೆ;ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ” ಎಂದು ಕಿವಿಮಾತು ಹೇಳಿದರು. ತಾವೇ ಸ್ವತಃ ಒಮ್ಮೆ ಟ್ರಾಲಿಯನ್ನು ತಳ್ಳಿ ಸಂಭ್ರಮಿಸಿದರು! ಹೋಗುವಾಗ ‘ನಮ್ಮ ಚಿತ್ರೀಕರಣವನ್ನೂ ಒಮ್ಮೆ ಬಂದು ನೋಡಿ ” ಎಂದು ಆಹ್ವಾನಿಸಿದರು. ಅಂತೆಯೇ ಮರುದಿನ ಸ್ವಾಮಿಯವರೊಂದಿಗೆ ನಾವೂ ಹೋಗಿ ಒಂದಷ್ಟು ಹೊತ್ತು ಅವರೊಂದಿಗೆ ಕಳೆದು ಬಂದೆವು. ಇವೆಲ್ಲವೂ ನಿಜಕ್ಕೂ ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಪ್ರಸಂಗಗಳು.

ಮುಂದೆ ಸ್ವಾಮಿಯವರು ಜೀ಼ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ನೇಮಕಗೊಂಡರು. ಅವರ ಜತೆಗೇ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿ ಅನೂಪ್ ಚಂದ್ರಶೇಖರ್ ಅವರು ನೇಮಕಗೊಂಡರು. ಅದೇ ಸಮಯದಲ್ಲಿ ನನ್ನ ಬಲಗೈ ಬಂಟನಾಗಿ ಸದಾ ಕಾಲ ನನ್ನೊಟ್ಟಿಗೇ ಇರುತ್ತಿದ್ದ ತಿಮ್ಮಣ್ಣ ಗೌಡನೂ ಸಹಾ ಜೀ಼ ಕನ್ನಡ ವಾಹಿನಿಯಲ್ಲಿ ಸಹಾಯಕನಾಗಿ ಸೇರಿಕೊಂಡ. ಜೀ಼ ಕನ್ನಡ ವಾಹಿನಿ ಯಶಸ್ಸಿನ ಮೆಟ್ಟಿಲೇರಲು ತಹತಹಿಸುತ್ತಿದ್ದ ಸಮಯವದು. ಜನಪ್ರೀತಿ ಗಳಿಸದ ಧಾರಾವಾಹಿಗಳಿಂದಾಗಿ ವಾಹಿನಿಯ ಟಿ ಆರ್ ಪಿ ಪಾತಾಳಕ್ಕೆ ಕುಸಿದುಹೋಗಿತ್ತು. ಆಗಲೇ ಸ್ವಾಮಿಯವರು ವಾಹಿನಿಯನ್ನು ಜನಪ್ರಿಯಗೊಳಿಸುವ ಸಲುವಾಗಿ ಹೊಸದೊಂದು ಯೋಜನೆಯನ್ನು ರೂಪಿಸಿದರು. ಮೂವರು ನಿರ್ದೇಶಕರನ್ನು ಆಹ್ವಾನಿಸಿ ಅವರದ್ದೇ ಆಯ್ಕೆಯ ಕಥಾಹಂದರದ ಧಾರಾವಾಹಿಗಳನ್ನು ಜೀ಼ ವಾಹಿನಿಗಾಗಿ ನಿರ್ಮಿಸಿಕೊಡಲು ಅನುವು ಮಾಡಿಕೊಡುವುದೇ ಅವರ ಯೋಜನೆಯಾಗಿತ್ತು. ಹಾಗೆ ಅವರು ಆಹ್ವಾನಿಸಿದ ಮೂವರು ನಿರ್ದೇಶಕರಲ್ಲಿ ನಾನೂ ಒಬ್ಬನಾಗಿದ್ದೆ! ನಾಗಾಭರಣ ಹಾಗೂ ಶಿವಮಣಿ ಇನ್ನಿಬ್ಬರು ಆಹ್ವಾನಿತ ನಿರ್ದೇಶಕರು. ಕಥಾಹಂದರದ ಆಯ್ಕೆ ನನ್ನದೇ ಜವಾಬ್ದಾರಿಯಾಗಿತ್ತು. ನನ್ನ ಸಹಾಯಕರೂ ಆತ್ಮೀಯರೂ ಆಗಿದ್ದ ತಿಮ್ಮಣ್ಣ ಹಾಗೂ ಅಶೋಕ್ ಜೈನ್ ಅವರೊಂದಿಗೆ ಒಂದಿಷ್ಟು ಸಮಾಲೋಚನೆ ನಡೆಸಿದ ಮೇಲೆ ಒಂದು ತೀರ್ಮಾನಕ್ಕೆ ಬಂದೆ. ಒಂದು ಪತ್ತೇದಾರಿ ದೈನಿಕ ಧಾರಾವಾಹಿಯನ್ನು ಕನ್ನಡ ವೀಕ್ಷಕರಿಗರ್ಪಿಸುವುದು! ಅದುವರೆಗೆ ಒಂದಷ್ಟು ಬಿಡಿ ಬಿಡಿ ಪತ್ತೇದಾರಿ ಕಥಾಧಾರಿತ ಎಪಿಸೋಡ್ ಗಳು ಅಥವಾ ವಾರಾಂತ್ಯದ ಪತ್ತೇದಾರಿ ಧಾರಾವಾಹಿಗಳು ಪ್ರಸಾರವಾಗಿದ್ದವೇ ಹೊರತು ಪೂರ್ಣಪ್ರಮಾಣದ ಪತ್ತೇದಾರಿ ಮಹಾ ಧಾರಾವಾಹಿ ಕನ್ನಡದಲ್ಲಂತೂ ಪ್ರಸಾರವಾಗಿರಲಿಲ್ಲ. ಸ್ವಾಮಿಯವರಿಗೂ ನಮ್ಮ ಈ ಒಂದು ಪ್ರಸ್ತಾವನೆ ತುಂಬಾ ಇಷ್ಟವಾಯಿತು. ‘ಮುಂದುವರಿಸಿ’ ಎಂದು ಹಸಿರು ನಿಶಾನೆ ತೋರಿಸಿಯೇಬಿಟ್ಟರು! ಸರಿ, ಶುರುವಾಯಿತು ಕಥೆಗಳನ್ನು ಹುಡುಕುವ ಕೆಲಸ.

ಸರ್ ಆರ್ಥರ್ ಕಾನನ್ ಡೈಲ್ಷೆರ್ಲಾಕ್ಸ್ ಹೋಮ್ಸ್ ಕಥೆಗಳು ನನಗೆ ಮೊದಲಿನಿಂದಲೂ ಪರಮಪ್ರಿಯ. ದೂರದರ್ಶನದಲ್ಲಿದ್ದಾಗಲೇ ಷೆರ್ಲಾಕ್ ಹೋಮ್ಸ್ ನ ಸಾಹಸದ ಕಥೆಗಳನ್ನಾಧರಿಸಿದ್ದ ‘ಅಜಿತನ ಸಾಹಸಗಳು’ ಧಾರಾವಾಹಿಯನ್ನು ನಿರ್ಮಿಸಿ ನಿರ್ದೇಶಿಸಿದ್ದೆನಲ್ಲಾ! ಆ ಸಮಯದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಧಾರಾವಾಹಿ ಅದು. ಈಗ ಮೊದಲು ಧಾರಾವಾಹಿಗೆ ನಾಮಕರಣವಾಗಬೇಕು! ಮನೆಯವರೊಂದಿಗೆ ಕುಳಿತು ಚರ್ಚಿಸಿದಾಗ ಚಿಮ್ಮಿ ಬಂದ ಹೆಸರು “ಡಿಟೆಕ್ಟಿವ್ ಧನುಷ್”! ಬೇರೆ ಬೇರೆ ಕಥೆಗಳನ್ನು ಆಧರಿಸಿ ಧಾರಾವಾಹಿಯನ್ನು ಕಟ್ಟುತ್ತಿದ್ದುದರಿಂದ ಪ್ರತಿ ಕಥಾಭಾಗಕ್ಕೂ ಬೇರೆ ಬೇರೆ ಕಲಾವಿದರನ್ನು ಆರಿಸಿಕೊಳ್ಳಬೇಕಿತ್ತು. ಮುಖ್ಯವಾಗಿ ಎಲ್ಲ ಕಂತುಗಳಿಗೂ ಬೇಕಾಗಿದ್ದ ಪಾತ್ರಗಳು ಎರಡೇ: ಡಿಟೆಕ್ಟಿವ್ ಧನುಷ್ ಹಾಗೂ ಅವನ ಸಹಾಯಕ ಡಾ॥ವತ್ಸ. ಧನುಷ್ ನ ಕೇಂದ್ರಪಾತ್ರವನ್ನು ನಾನೇ ನಿರ್ವಹಿಸುವುದೆಂದು ತೀರ್ಮಾನಿಸಿದೆ. ಬಹಳಷ್ಟು ಚಿಂತನ ಮಂಥನದ ಬಳಿಕ ಡಾ॥ ವತ್ಸ ನ ಪಾತ್ರಕ್ಕೆ ಆಯ್ಕೆಯಾದವರು ಪ್ರತಿಭಾವಂತ ಕಲಾವಿದ ಬಾಬು ಹಿರಣ್ಣಯ್ಯ. ವಾರಕ್ಕೆ ಐದು ಕಂತುಗಳು ಪ್ರಸಾರವಾಗಬೇಕಾದ್ದರಿಂದ ಕನಿಷ್ಠ ಎರಡು ಕಥೆಗಳಾದರೂ ಬೇಕಾಗುತ್ತಿತ್ತು. ಆಗಲೇ ನನಗೆ ಹೊಳೆದದ್ದು, ಷೆರ್ಲಾಕ್ ಹೋಮ್ಸ್ ನ ಕಥೆಗಳಿಗೇ ಧಾರಾವಾಹಿಯನ್ನು ಸೀಮಿತಗೊಳಿಸಿಕೊಳ್ಳದೇ ಅಗಾಥಾ ಕ್ರಿಸ್ಟಿಯಂತಹ ಇತರ ಪ್ರಸಿದ್ಧ ಲೇಖಕರ ಉತ್ತಮ ಕಥೆಗಳನ್ನೂ ಆರಿಸಿಕೊಂಡು ನಮ್ಮ ಚೌಕಟ್ಟಿಗೆ ಅಳವಡಿಸಿಕೊಳ್ಳುವುದು ಹೆಚ್ಚಿನ ವೈವಿಧ್ಯತೆಯನ್ನು ನೀಡುತ್ತದೆಂಬುದು.

ಹೀಗೆ ಕಥೆಗಳನ್ನು ಆರಿಸಿಕೊಂಡು ಚಿತ್ರಕಥೆಯನ್ನು ಸಿದ್ಧಪಡಿಸಿಕೊಡಲು ನನಗೆ ನೆರವಾದವರು ನನ್ನ ಎಂದಿನ ಮೆಚ್ಚಿನ ಲೇಖಕ ಕೃಷ್ಣಶರ್ಮ ಹಾಗೂ ಪ್ರಸಿದ್ಧ ಸಾಹಿತಿ ಅಣಕು ರಾಮನಾಥ್. ಕೆಲವೊಂದು ಕಥೆಗಳನ್ನು ನಾನೇ ರೂಪಾಂತರಿಸುತ್ತಿದ್ದೆ. ಸತೀಶ್ ರೆಡ್ಡಿಯವರು ಎಪಿಸೋಡ್ ಡೈರೆಕ್ಟರ್ ಆಗಿ ನನಗೆ ನೆರವಾಗಲು ಬಂದರು. ಸಹಾಯಕರಾಗಿ ಅಶೋಕ ಹಾಗೂ ತಿಮ್ಮಣ್ಣರು ಎಂದಿನಂತೆ ಜತೆಗಿದ್ದರು. ಸುಪ್ರಸಿದ್ಧ ಸುಗಮ ಸಂಗೀತ ನಿರ್ದೇಶಕ, ಗಾಯಕ ಉಪಾಸನಾ ಮೋಹನ್ ಅವರು ಶೀರ್ಷಿಕೆ ಸಂಗೀತವನ್ನು ಅತ್ಯಂತ ಆಕರ್ಷಕವಾಗಿ ಸಂಯೋಜಿಸಿದ್ದರು. ರಮೇಶ್ ಬಾಬು ಅವರು ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು. ಪ್ರಧಾನ ನಿರ್ದೇಶನದ ಹೊಣೆಯನ್ನೂ ನಾನೇ ವಹಿಸಿಕೊಂಡಿದ್ದೆ. ಪ್ರತಿ ಕಂತಿನಲ್ಲಿಯೂ ಕುತೂಹಲವನ್ನು ಕೆರಳಿಸುತ್ತಾ ವೀಕ್ಷಕರ ಆಸಕ್ತಿಯನ್ನು ಕಾದಿರಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿತ್ತು. ವೈವಿಧ್ಯಮಯ ಕಥೆಗಳನ್ನು ಹುಡುಕಿ ಅಳವಡಿಸಿಕೊಳ್ಳಲು ನನಗೆ ನೆರವಾದವರು ಬಾಬು ಹಿರಣ್ಣಯ್ಯ. ಒಂದಷ್ಟು ಕಥೆಗಳನ್ನಾರಿಸಿಕೊಂಡು ಚಿತ್ರಕಥೆಯನ್ನು ಸಿದ್ಧಪಡಿಸಿಕೊಂಡು ಚಿತ್ರೀಕರಣ ಆರಂಭಿಸಿಯೇ ಬಿಟ್ಟೆವು. ಪ್ರಾರಂಭದಿಂದಲೇ ಸಾಕಷ್ಟು ಜನಪ್ರೀತಿಯನ್ನು ಗಳಿಸಿಕೊಂಡ ಧನುಷ್ ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದ! ಕನ್ನಡ ರಂಗಭೂಮಿಯ ಹಾಗೂ ಕಿರುತೆರೆಯ ಅನೇಕ ಪ್ರತಿಭಾವಂತ ಕಲಾವಿದರು ನಮ್ಮ ಧಾರಾವಾಹಿಯಲ್ಲಿ ನಟಿಸಿ ಧಾರಾವಾಹಿಯ ತಾರಾಮೌಲ್ಯವನ್ನು ಹೆಚ್ಚಿಸಲು ನೆರವಾದರು! ಧನುಷ್ ಗಳಿಸಿಕೊಂಡ ಕ್ಷಿಪ್ರಗತಿಯ ಜನಪ್ರಿಯತೆಯಿಂದ ಸ್ವಾಮಿ ಅವರಿಗೂ ತುಂಬಾ ಸಂತೋಷವಾಯಿತು.

ವಾಹಿನಿಯ ಟಿ ಆರ್ ಪಿ ಯಲ್ಲಿ ಓಹೋ ಎಂಬಂತಹ ಜಿಗಿತ ಕಾಣದಿದ್ದರೂ ಗಮನಾರ್ಹ ಹೆಚ್ಚಳ ಕಂಡದ್ದು ಸಮಾಧಾನ ತಂದಿತು. ಕಥೆಗಳಲ್ಲಿದ್ದ ವೈವಿಧ್ಯ ನಿಜಕ್ಕೂ ಗಮನ ಸೆಳೆಯುವಂತಿತ್ತು. ಸಾಧಾರಣವಾಗಿ ಪತ್ತೇದಾರಿ ಕಥೆಗಳಲ್ಲಿ ಅಪರಾಧಿ ಯಾರೆಂಬುದು ಅನೇಕ ಗೊಂದಲ, ತಪ್ಪು ತಿಳುವಳಿಕೆ ಅಥವಾ ಊಹೆಗಳ ಬಳಿಕ ಕೊನೆಯಲ್ಲಿ ಸ್ಫೋಟಗೊಂಡು ವೀಕ್ಷಕರನ್ನು ಚಕಿತಗೊಳಿಸುತ್ತದೆ. ನಾನು ಆರಿಸಿಕೊಂಡ ಕೆಲ ಕಥೆಗಳು ಇದಕ್ಕೆ ಅಪವಾದವಾಗಿದ್ದವು! ಕೊಲೆ ಅಥವಾ ಅಪರಾಧ ಪ್ರಾರಂಭದಲ್ಲೇ ವೀಕ್ಷಕರೆದುರಿಗೇ ಘಟಿಸಿಬಿಡುತ್ತದೆ! ಪತ್ತೇದಾರ ಮತ್ತು ಪೋಲೀಸರಿಗೆ ಮಾತ್ರ ಅವನು ಯಾರೆಂಬುದರ ಅರಿವಿರುವುದಿಲ್ಲ. ಪತ್ತೇದಾರ ತನಗೆ ಸಿಗುವ ಸುಳಿವುಗಳನ್ನಾಧರಿಸಿ ಹೇಗೆ ಅಪರಾಧಿಯನ್ನು ಪತ್ತೆ ಹಚ್ಚುತ್ತಾನೆಂಬುದು, ಅಂದರೆ ಪತ್ತೆಯ ಇಡೀ ಪ್ರಕ್ರಿಯೆ ಧಾರಾವಾಹಿಯಲ್ಲಿ ಮುಖ್ಯವಾಗಿಬಿಡುತ್ತದೆ! ಇಂತಹ ಕಥೆಗಳನ್ನಾರಿಸಿಕೊಂಡ ಕಂತುಗಳೂ ಸಹಾ ವಿಶೇಷವಾಗಿ ವೀಕ್ಷಕರಿಗೆ ಇಷ್ಟವಾದವು. ಧಾರಾವಾಹಿ ಹೀಗೆ ಯಶಸ್ವಿಯಾಗಿ ಮುಂದುವರಿಯುತ್ತಿದ್ದಾಗಲೇ ಒಂದು ದಿನ ತಿಮ್ಮಣ್ಣ ಬೇಸರದ ಸುದ್ದಿಯೊಂದನ್ನು ತಂದ. ಸ್ವಾಮಿ ಸರ್ ‘ಜೀ಼ ಟಿವಿ’ ಯನ್ನು ಬಿಟ್ಟು ಹೋಗ್ತಿದಾರೆ..!

‍ಲೇಖಕರು Admin MM

June 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This