ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
140
ಕವನ ಸಂಕಲನ ಹಾಗೂ ಧ್ವನಿ ಸಾಂದ್ರಿಕೆಗಳ ಬಿಡುಗಡೆಯ ಬಗ್ಗೆ ಆಲೋಚನೆ ಆರಂಭವಾಗುತ್ತಿದ್ದಂತೆಯೇ ನಾನು ಕೊಂಚ ದೂರಾಲೋಚನೆ ಮಾಡಿ ಸಮಾರಂಭ ನಡೆಸಲು ರವೀಂದ್ರ ಕಲಾಕ್ಷೇತ್ರವನ್ನು ಕಾದಿರಿಸಿಬಿಟ್ಟೆ. ಸಾಕಷ್ಟು ಮುಂಚಿತವಾಗಿ ಕಾದಿರಿಸದೇ ಹೋದರೆ ಕಲಾಕ್ಷೇತ್ರ ಸಿಗುವುದು ಕಷ್ಟ. ನವೆಂಬರ್ 12, 2009 ರಂದು ‘ಭರಣಿ ಮಳೆ‘ ಕವನ ಸಂಕಲನ ಹಾಗೂ ಧ್ವನಿಸಾಂದ್ರಿಕೆಗಳ ಲೋಕಾರ್ಪಣೆ ರವೀಂದ್ರ ಕಲಾಕ್ಷೇತ್ರದಲ್ಲಿ ಎಂದು ನಿಶ್ಚಿತವಾಯಿತು. ನಂತರ ಎದುರಾದ ಮೊದಲ ಪ್ರಶ್ನೆ: ಕೃತಿಗೆ ಮುನ್ನುಡಿ ಬೆನ್ನುಡಿಗಳನ್ನು ಯಾರಿಂದ ಬರೆಸುವುದು? ಪ್ರಶ್ನೆ ಏಳುತ್ತಿದ್ದಂತೆಯೇ ಮುನ್ನೆಲೆಗೆ ಬಂದು ನಿಂತ ಹೆಸರುಗಳೆಂದರೆ ರಾಷ್ಟ್ರಕವಿ ಡಾ॥ಜಿ.ಎಸ್. ಶಿವರುದ್ರಪ್ಪ ಹಾಗೂ ಡಾ॥ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು. ಇಬ್ಬರೂ ನಮ್ಮಿಬ್ಬರಿಗೂ ಕನ್ನಡ ಸಾಹಿತ್ಯ ಬೋಧಿಸಿದ ಗುರುಗಳು! ಜಿ ಎಸ್ ಎಸ್ ಅವರು ಈ ಮೊದಲು ರಂಜನಿಯ ಭಾವರಂಜನಿ ಧ್ವನಿ ಸಾಂದ್ರಿಕೆಯನ್ನು ಲೋಕಾರ್ಪಣೆ ಮಾಡಿದ್ದಲ್ಲದೆ ರಂಜನಿಯ ಕವಿತೆಗಳನ್ನು ಬಹಳವಾಗಿ ಮೆಚ್ಚಿಕೊಂಡು ಮಾತಾಡಿದ್ದರು. ಎನ್ ಎಸ್ ಎಲ್ ಅವರಂತೂ ಈ ಪುಸ್ತಕ ಹೊರಬರುತ್ತಿರುವುದಕ್ಕೆ ಒಂದು ರೀತಿಯಲ್ಲಿ ಕಾರಣರಾದವರು. ಒಂದಿಷ್ಟೂ ತಡಮಾಡದೇ ಇಬ್ಬರನ್ನೂ ಸಂಪರ್ಕಿಸಿದೆವು.
ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ
ಇಬ್ಬರೂ ಪರಮ ಸಂತೋಷದಿಂದ ಮುನ್ನುಡಿ—ಬೆನ್ನುಡಿ ಬರೆಯುವ ಜವಾಬ್ದಾರಿಯನ್ನು ಒಪ್ಪಿಕೊಂಡರು. ಎನ್ ಎಸ್ ಎಲ್ ಅವರು, “ನೋಡಿ! ನಾನು ಅವತ್ತು ನಿಮ್ಮ ಸಿ ಡಿ ಗೆ ಪ್ರಾಸ್ತಾವಿಕ ನುಡಿಗಳನ್ನ ಆಡೋದಕ್ಕೆ ಒಪ್ಪಿರಲಿಲ್ಲ! ಮೊದಲು ಕವಿತಾ ಸಂಕಲನ ತನ್ನಿ, ಆಮೇಲೆ ಮುಂದಿನ ಮಾತು’ ಅಂದಿದ್ದೆ! ಹೌದು ತಾನೇ? ಅವತ್ತು ನನ್ನ ಮಾತಿಂದ ನಿಮಗೆ ಬೇಜಾರಾಗಿದ್ದಿರಬಹುದು. ಆದರೆ ನಾನು ಹಾಗೆ ಚುಚ್ಚದೇ ಇದ್ದಿದ್ರೆ ನೀವು ಹೀಗೆ ಬರೀತಿದ್ರಾ? ಸಂಕಲನ ಪ್ರಕಟಿಸ್ತಿದ್ರಾ?” ಎಂದು ವಿಜಯದ ನಗೆ ಬೀರುತ್ತಾ ನುಡಿದರು. ಇಬ್ಬರೂ ಶ್ರೇಷ್ಠ ಕವಿಗಳು ಅವರು ಹೇಳಿದ್ದ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿಯೇ ‘ಬರವಣಿಗೆ ಸಿದ್ಧವಾಗಿದೆ. ಬಂದು ತೆಗೆದುಕೊಂಡು ಹೋಗಿ’ ಎಂದು ಸಂದೇಶ ಕಳಿಸಿದರು! ನಾವು ಮೊದಲು ಹೋದದ್ದು ರಾಷ್ಟ್ರಕವಿಗಳ ಮನೆಗೆ. ಎಂದಿನಂತೆ ಗುರುಪತ್ನಿ ಪ್ರೀತಿಯಿಂದ ಸ್ವಾಗತಿಸಿ ಉಪಚರಿಸಿದರು. ಗುರುಗಳು ತಮ್ಮ ಸ್ವಹಸ್ತಾಕ್ಷರದಲ್ಲಿ ಬರೆದ ಮುನ್ನುಡಿಯ ನಾಲ್ಕಾರು ಪುಟಗಳನ್ನು ಬದಿಯಲ್ಲೇ ಇರಿಸಿಕೊಂಡು ಕುಳಿತಿದ್ದರು. ಒಂದು ರೀತಿಯಲ್ಲಿ ಅದು ನಮಗೆ ಮುಖ್ಯವಾಗಿ ರಂಜನಿಗೆ ಅಗ್ನಿ ಪರೀಕ್ಷೆಯ ಗಳಿಗೆ! ಗುರುಗಳು ತಮ್ಮ ಎಂದಿನ ಮೃದು ಗಂಭೀರ ಶೈಲಿಯಲ್ಲಿ, “ಕವಿತೆಗಳು ತುಂಬಾ ಚೆನ್ನಾಗಿವೆ ರಂಜನಿ. ಪುಸ್ತಕವೂ ತುಂಬಾ ಚೆನ್ನಾಗಿ ಬಂದಿದೆ. ಒಂದು ನಾಲ್ಕು ಪುಟ ಬರ್ದಿದೀನಿ. ನೋಡಿ.” ಎನ್ನುತ್ತಾ ಹಾಳೆಗಳನ್ನು ರಂಜನಿಯ ಕೈಗಿತ್ತರು. “ಪ್ರಭೂ, ಒಂದ್ಸಲ ಜೋರಾಗೇ ಓದಿಬಿಡಿ. ನಾನೂ ಇನ್ನೊಮ್ಮೆ ಕೇಳಿದ ಹಾಗಾಗುತ್ತೆ” ಎಂದರು ಮೇಷ್ಟ್ರು!
ಸರಿ, ಗಂಟಲು ಸರಿ ಪಡಿಸಿಕೊಂಡು ಜೋರಾಗಿ ಓದಿದೆ. ಓದಿ ಮುಗಿಸುವ ವೇಳೆಗೆ ನಮ್ಮಿಬ್ಬರ ಕಣ್ಣುಗಳೂ ಕೃತಜ್ಞತೆಯಿಂದ ಮಂಜಾಗಿದ್ದವು. ಅಷ್ಟು ಅದ್ಭುತವಾದ ಮುನ್ನುಡಿಯನ್ನು ರಂಜನಿಯ ಪ್ರಥಮ ಕವನ ಸಂಕಲನಕ್ಕೆ ಬರೆದುಕೊಟ್ಟಿದ್ದರು ನಮ್ಮ ಮೇಷ್ಟ್ರು! “ಇದಕ್ಕಿಂತ ಹೆಚ್ಚಿನದೇನನ್ನೂ ರಂಜನಿ ನಿರೀಕ್ಷಿಸುವ ಹಾಗೇ ಇಲ್ಲ ಮೇಷ್ಟ್ರೇ! ನಿಮ್ಮ ಈ ಹಾರೈಕೆ ಆಶೀರ್ವಾದ ನಮಗೆ ದೊಡ್ಡ ಆಸ್ತಿ.” ಎಂದು ನುಡಿದು ಗುರುಗಳಿಗೆ ನಮಸ್ಕರಿಸಿ ಹೊರಟೆವು.
ಆ ಮುನ್ನುಡಿಯ ಕೆಲವು ಸಾಲುಗಳು ತಮ್ಮ ಪ್ರೀತಿಯ ಓದಿಗೆ:
“ಶ್ರೀಮತಿ ರಂಜನಿ ಪ್ರಭು ಅವರ ಕವಿತೆಗಳನ್ನು ಓದಿ ನಾನು ತುಂಬಾ ಸಂತೋಷ ಪಟ್ಟಿದ್ದೇನೆ. ಭರಣಿಮಳೆ ಎಂಬ ಅವರ ಈ ಕವನ ಸಂಕಲನದಲ್ಲಿ ತಮ್ಮ ಚೆಲುವಿನಿಂದ ಓದುಗರನ್ನು ಹಿಡಿದು ನಿಲ್ಲಿಸಿ ಪರಿಭಾವನೆಗೆ ಒಳಗುಪಡಿಸುವ ಸಾಕಷ್ಟು ಕವಿತೆಗಳಿವೆ. ಕೌಟುಂಬಿಕ ಜೀವನದೊಳಗಿನ ನೆಳಲು ಬೆಳಕುಗಳನ್ನು ತುಂಬಾ ಸಚಿತ್ರವಾಗಿ ನಿರೂಪಿಸುವ ಈ ಕವಿತೆಗಳಲ್ಲಿ ನಿಸರ್ಗದ ಚೆಲುವನ್ನು ಪ್ರೀತಿಯಿಂದ ಗ್ರಹಿಸಿ ನಿರೂಪಿಸಿರುವ ಕ್ರಮ ಚೇತೋಹಾರಿಯಾಗಿದೆ. ‘ಎಳೆಯಲಾಗದ ತೇರು ಹೂಬಿಟ್ಟ ಈ ಮರ’. ‘ತೈಲವಿಲ್ಲದ ಹಣತೆ ಬಾನಜಗಲಿಯ ತುಂಬಾ’. ಮೊದಲಾದ ರೂಪಕಗಳು ತೆರೆಯುವ ಚಿತ್ರವನ್ನು ಪ್ರತ್ಯೇಕವಾಗಿ ಪರಿಭಾವಿಸಿ ಸುಖಿಸಬೇಕು. ‘ಮೊರೆಯುವ ಕಡಲೇ ತೆರೆಗಳ ನಿಲಿಸು’. ಎಂಬಂಥ ಪದ್ಯಗಳನ್ನು ನಿಜವಾದ ಕವಿಯಲ್ಲದೇ ಇನ್ನಾರು ಬರೆಯಬಲ್ಲರು? ಈ ಸೌಂದರ್ಯಪ್ರಜ್ಞೆ ಹಾಗೂ ಪ್ರಸನ್ನ ಮಧುರ ಪದ ಲಾಲಿತ್ಯ ಮತ್ತು ವೈವಿಧ್ಯಮಯವಾದ ಪದ್ಯಬಂಧಗಳಿಂದ ಕೂಡಿದ ಶ್ರೀಮತಿ ರಂಜನಿ ಪ್ರಭು ಅವರ ಈ ಕವಿತೆಗಳು ಓದುಗರಿಗೆ ಪ್ರಕ್ಷುಬ್ದವಾದ ಜಗತ್ತಿನಲ್ಲಿ ನೆಮ್ಮದಿಯ ನಡುಗಡ್ಡೆಯೊಂದನ್ನು ಕಟ್ಟಿಕೊಡಬಲ್ಲವು.”
ಕವಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಜಿ ಎಸ್ ಎಸ್ ಅವರಿಂದ ಬೀಳ್ಕೊಂಡು ನಾವು ನೇರ ಹೋದದ್ದು ಮತ್ತೊಬ್ಬ ಪ್ರೀತಿಯ ಮೇಷ್ಟ್ರು ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಮನೆಗೆ. ಅಲ್ಲಿಯೂ ಅಷ್ಟೇ: ಗುರುಪತ್ನಿಯ ಪ್ರೀತಿಯ ಸ್ವಾಗತ ಉಪಚಾರ. ಮೇಷ್ಟ್ರು ಬೆನ್ನುಡಿಯನ್ನು ಬರೆದು ಸಿದ್ಧವಾಗಿಟ್ಟುಕೊಂಡಿದ್ದರು! ಅದರ ಕೆಲವು ಸಾಲುಗಳು ತಮ್ಮ ಅವಗಾಹನೆಗೆ: “ಭರಣಿಮಳೆ ಕಳೆದ 25 ವರ್ಷಗಳ ಅವಧಿಯಲ್ಲಿ ರಚಿತವಾದ ಹಲವು ಮನೋಹರ ಕವಿತೆಗಳ ಸಂಗಮ. ಇಲ್ಲಿ 30 ಕ್ಕೂ ಹೆಚ್ಚು ಕವಿತೆಗಳಿದ್ದು ಅವು ಅಚ್ಚುಕಟ್ಟಾದ ಲಯದಲ್ಲಿ ಸಹಜವಾಗಿ ಅರಳಿವೆ. ಇಲ್ಲಿನ ಹೆಚ್ಚಿನ ಕವಿತೆಗಳು ಯಾರಿಗೂ ಮೆಚ್ಚಿಕೆಯಾಗುವಂಥವು. ‘ಕೋರಿಕೆ’ ಎಂಬ ಪದ್ಯ ಸರಳವಾದ ಪ್ರಕೃತಿ ಚಿತ್ರವನ್ನು ಹಿಡಿದುಕೊಡುವ ಕವಿತೆ. ಆದರೆ ಅದು
“ಬೀಳೋ ತರಗೆಲೆ ಸದ್ದು ಮಾಡದಿರಿ
ಬುದ್ಧನಿರಬಹುದು ಧ್ಯಾನದಲಿ
ಕಲ್ಲಿನ ಮೇಲೂ ಮೆಲ್ಲಗೆ ಸುರಿ ಮಳೆ
ಅಹಲ್ಯೆಯ ಅಳಲಿದೆ ಮೌನದಲಿ”
ಎಂಬ ಅನಿರೀಕ್ಷಿತವೂ ಧ್ವನಿಪೂರ್ಣವೂ ಆದ ಸಾಲುಗಳಿಂದ ಕೊನೆಗೊಂಡಾಗ ಕವನಕ್ಕೆ ಹೊಸ ಆಳ ಬಂದುಬಿಡುತ್ತದೆ. ಹೊಸ ವರ್ತಮಾನದಲ್ಲಿ ನಮ್ಮ ಪುರಾಣ ಪರಂಪರೆಯ ಘನಚಿತ್ರಗಳು ಹಠಾತ್ತನೆ ತೆರೆದುಕೊಳ್ಳುತ್ತವೆ. ಇದನ್ನು ಓದುತ್ತಾ ನನಗೆ ‘ನಿಷ್ಕಂಪವೃಕ್ಷಂ ನಿಭೃತದ್ವಿರೇಫಂ ಮೂಕಾಂಡಜಂ ಶಾಂತಮೃಗ ಪ್ರಸಾರಮ್’ ಎಂಬ ಕುಮಾರಸಂಭವದ ಸಾಲುಗಳು ನೆನಪಾದವು.”
ಕವಯಿತ್ರಿ ರಂಜನಿ ಪ್ರಭು
ಇಂತಹ ಅಭೂತಪೂರ್ವವಾದ ಮುನ್ನುಡಿ ಬೆನ್ನುಡಿಗಳ ಅಪೂರ್ವ ಹಾರೈಕೆ ನಾಡಿನ ಇಬ್ಬರು ಶ್ರೇಷ್ಠ ಕವಿಗಳಿಂದ ದೊರೆತ ಮೇಲೆ ನನ್ನ ಹಾಗೂ ರಂಜನಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಮತ್ತಷ್ಟು ಹುರುಪಿನಿಂದ ಮುಂದಿನ ಸಿದ್ಧತೆಗಳಿಗೆ ಅಣಿಯಾಗತೊಡಗಿದೆವು. ಮುಂದಿನ ಹಂತವಾಗಿ ಕಾರ್ಯಕ್ರಮಕ್ಕೆ ಯಾರನ್ನು ಅತಿಥಿಗಳನ್ನಾಗಿ ಆರಿಸುವುದು ಎಂಬುದರ ಕುರಿತಾಗಿ ಚಿಂತನೆ ಆರಂಭವಾಯಿತು. ಗೌರಿಸುಂದರ್ ಅವರಿಗೆ ಕನ್ನಡ ಸಾಂಸ್ಕೃತಿಕ ಲೋಕದ ಸಮಸ್ತರೂ ಚೆನ್ನಾಗಿಯೇ ಪರಿಚಿತರಾದವರಾಗಿದ್ದರು. ಅವರೊಂದಿಗೆ ಸುಂದರ್ ಅವರಿಗೆ ಸಾಕಷ್ಟು ಸ್ನೇಹ ಸಲುಗೆಗಳೂ ಇದ್ದವು. ‘ಚಿತ್ರರಂಗದಲ್ಲೂ ಖ್ಯಾತರಾಗಿರುವ, ಕನ್ನಡ ಸಾಹಿತ್ಯ, ಸಂಸ್ಕೃತಿ, ಕವಿತೆ, ಸುಗಮ ಸಂಗೀತದ ಬಗ್ಗೆಯೂ ಅಭಿಮಾನ ಅಭಿರುಚಿಗಳಿರುವ ಗಣ್ಯರನ್ನು ಆಹ್ವಾನಿಸೋಣ. ಸಹೃದಯರಿಗೆ ಕಾರ್ಯಕ್ರಮದಲ್ಲಿ ಒಂದು ವಿಶೇಷ ಆಕರ್ಷಣೆ ಇದ್ದಂತಾಗುತ್ತದೆ. ಕಲಾಕ್ಷೇತ್ರವೂ ತುಂಬಿ ಹೋಗುತ್ತದೆ’ ಎಂದು ಸುಂದರ್ ಅಭಿಪ್ರಾಯಪಟ್ಟರು. ಸಾಕಷ್ಟು ಮಂಥನ ನಡೆಸಿ ಒಬ್ಬ ಪ್ರಸಿದ್ಧ ಕಿರಿಯ ನಟರನ್ನೂ ಒಬ್ಬ ಪ್ರಸಿದ್ಧ ಹಿರಿಯ ನಟ ನಿರ್ದೇಶಕರನ್ನೂ ಅತಿಥಿಗಳಾಗಿ ಆಹ್ವಾನಿಸಲು ತೀರ್ಮಾನಿಸಿದೆವು. ಸಾಕಷ್ಟು ಮುಂಚಿತವಾಗಿಯೇ ಸುಂದರ್ ಹಾಗೂ ನಾನು ಇಬ್ಬರೂ ಆ ಇಬ್ಬರು ಗಣ್ಯರೊಂದಿಗೆ ಮಾತಾಡಿ ಅವರ ಒಪ್ಪಿಗೆಯನ್ನು ಪಡೆದುಕೊಂಡು ಆಹ್ವಾನ ಪತ್ರಿಕೆಯನ್ನು ಮುದ್ರಿಸಲೂ ಕೊಟ್ಟುಬಿಟ್ಟೆವು. ಅಲ್ಲಿಗೆ ಮತ್ತೊಂದು ಹಂತದ ಸಿದ್ಧತೆ ಪೂರ್ಣವಾದಂತಾಯಿತು.
ಕಾರ್ಯಕ್ರಮಕ್ಕೆ 15 ದಿನಗಳಿವೆ ಎನ್ನುವಾಗ್ಗೆ ತಂದೆಯವರ ಆರೋಗ್ಯ ಹಠಾತ್ತನೆ ತೀವ್ರಗತಿಯಲ್ಲಿ ಕ್ಷೀಣಿಸತೊಡಗಿತು. ಕಾರ್ಯಕ್ರಮವನ್ನು ಮುಂದೂಡುವ ಆಲೋಚನೆಯೂ ಬಾರದೇ ಇರಲಿಲ್ಲ. ಆದರೆ ತಂದೆಯವರ ಆರೋಗ್ಯದಲ್ಲಿ ಆಗಾಗ್ಗೆ ಹೀಗೆ ಏರುಪೇರು ಆಗುತ್ತಲೇ ಇದ್ದುದರಿಂದ ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವ ಕಾರ್ಯಕ್ರಮವನ್ನು ಮುಂದೂಡುವ ಅಗತ್ಯ ಇಲ್ಲ ಎಂಬುದು ಮತ್ತೊಂದು ಅಭಿಪ್ರಾಯವಾಗಿತ್ತು. ಹೀಗೆ ಚರ್ಚಿಸುತ್ತಲೇ ಮತ್ತೂ ನಾಲ್ಕು ದಿನ ಕಳೆದುಹೋಯಿತು. ಅಷ್ಟರಲ್ಲಿ ಮತ್ತೊಂದು ಸಂಕಟ ಎದುರಾಯಿತು! ಪುಸ್ತಕ ಹಾಗೂ ಧ್ವನಿಸಾಂದ್ರಿಕೆಗಳು ಸಿದ್ಧವಾದ ತಕ್ಷಣ ಅವನ್ನು ಮುಖ್ಯ ಅತಿಥಿಗಳಿಗೆ ನೀಡಬೇಕಾಗಿತ್ತು. ಆ ಸಲುವಾಗಿ ಆ ಇಬ್ಬರೂ ಮಹನೀಯರಿಗೆ ಪುಸ್ತಕ ಹಾಗೂ ಸಿಡಿ ಗಳನ್ನು ಯಾವಾಗ ಎಲ್ಲಿಗೆ ತಲುಪಿಸಬೇಕೆಂಬುದನ್ನು ಕೇಳಿಕೊಳ್ಳಲು ಅವರಿಗೆ ಫೋನ್ ಮಾಡಿದೆ. ಮೊದಲಿಗೆ ಕಿರಿಯ ನಟರು ನನ್ನ ಕರೆಯನ್ನು ಸ್ವೀಕರಿಸಿ ನಾನು ಮಾತು ಆರಂಭಿಸುವ ಮುನ್ನವೇ, “ನಾನೇ ನಿಮಗೆ ಫೋನ್ ಮಾಡೋಣಾಂತಿದ್ದೆ ಪ್ರಭು ಸರ್. I am extremely sorry sir. ನಾನು ಇನ್ನು ಮೂರು ದಿನಕ್ಕೆ shooting ಗೆ ಅಂತ out of station ಹೋಗ್ತಿದೀನಿ. 12 ನೇ ತಾರೀಖು ನಿಮ್ಮ ಕಾರ್ಯಕ್ರಮಕ್ಕೆ ಬರೋಕ್ಕಾಗಲ್ಲ. Once again, sorry. ಇನ್ನೊಂದು ಸಲ ಖಂಡಿತ ಬರ್ತೀನಿ. ಬೇಜಾರು ಮಾಡಿಕೋಬೇಡಿ.” ಎಂದು ನುಡಿದು ಫೋನ್ ಕೆಳಗಿಟ್ಟರು. ಅವರ ಮಾತುಗಳನ್ನು ಅರಗಿಸಿಕೊಳ್ಳಲು ಹಲವಾರು ಕ್ಷಣಗಳೇ ಬೇಕಾದವು. ‘ಬರಲಾಗದು’ ಎಂದಮೇಲೆ ನಾವು ಏನು ತಾನೇ ಮಾಡಲು ಸಾಧ್ಯ? ಸರಿ. ಇನ್ನೊಬ್ಬರನ್ನಾದರೂ ಖಚಿತ ಪಡಿಸಿಕೊಂಡುಬಿಡೋಣ ಎಂದುಕೊಂಡು ಹಿರಿಯ ನಟರಿಗೆ ಫೋನ್ ಮಾಡಿದೆ. ಕರೆ ಸ್ವೀಕರಿಸಿದ ಅವರೂ ಕಿರಿಯ ನಟರ ಧಾಟಿಯಲ್ಲೇ ಮಾತು ಆರಂಭಿಸಿದರು! “ನಾನೇ ಫೋನ್ ಮಾಡೋಣಾಂತಿದ್ದೆ ಪ್ರಭು. ನನ್ನ ಮನಸ್ಸು ಅರ್ಥವಾದವರ ಹಾಗೆ ನೀವೇ ಫೋನ್ ಮಾಡಿಬಿಟ್ರಿ! ನೇರ ವಿಷಯಕ್ಕೆ ಬಂದುಬಿಡ್ತೇನೆ. ನವಂಬರ್ 12th I am not available for your programme. ಇಷ್ಟು ವರ್ಷ ಆಗದೇ ಇದ್ದದ್ದು ಈಗ ಆಗಿಬಿಟ್ಟಿದೆ ಪ್ರಭೂ! ಏನು ಗೊತ್ತಾ? for the first time ದೊಡ್ಡಮನೆಯವರು ಅವರ ಕಂಪನಿಯ ಸಿನಿಮಾದಲ್ಲಿ ಭಾಳ ಮುಖ್ಯವಾದ ಪಾತ್ರ ಮಾಡೋದಕ್ಕೆ invite ಮಾಡಿದಾರೆ! I am so thrilled you see! ಇಡೀ picture shooting ಉ ಮೈಸೂರು—ಚಿಕ್ಕಮಗಳೂರಲ್ಲಿ! 9ನೇ ತಾರೀಖೇ ಹೊರಟುಬಿಡ್ತಿದೇವೆ. I only hope you will understand” ಎಂದು ನುಡಿದು ಒಂದು ದೇಶಾವರಿ ನಗು ನಕ್ಕರು ದೊಡ್ಡವರು.
ಹಿರಿಯ ವಿಮರ್ಶಕ ಎಮ್ ಎಚ್ ಕೃಷ್ಣಯ್ಯ
ನನಗೆ ನಗುವೂ ಬರಲಿಲ್ಲ ‘ಅಂಡರ್ ಸ್ಟ್ಯಾಂಡೂ’ ಆಗಲಿಲ್ಲ. ಹೀಗೂ ಉಂಟೇ! ಒಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡ ಮೇಲೆ ಅದೊಂದು ಬದ್ಧತೆ ಅಲ್ಲವೇ? ಕೊನೆಯ ಗಳಿಗೆಯಲ್ಲಿ ಹೀಗೆ ‘ಬರಲಾಗದು’ ಎಂದುಬಿಟ್ಟರೆ ನಮ್ಮ ಗತಿ ಏನು? ಆಹ್ವಾನ ಪತ್ರಿಕೆ ಅಚ್ಚಾಗಿ ಹೋಗಿದೆ ಈ ಇಬ್ಬರೂ ಅತಿಥಿಗಳ ಹೆಸರು ಛಾಪಿಸಿಕೊಂಡು! ಈಗ ಇನ್ನು ಹೊಸ ಅತಿಥಿಗಳನ್ನು ಹುಡುಕಿ ಒಪ್ಪಿಸಿ ಮತ್ತೆ ಪತ್ರಿಕೆ ಮುದ್ರಿಸಲು ಕೊಡಬೇಕು! ಒಡನೆಯೇ ಸುಂದರ್ ಅವರಿಗೆ ಇಬ್ಬರೂ ಅತಿಥಿಗಳು ಕೈಕೊಟ್ಟ ವಿಷಯವನ್ನು ತಿಳಿಸಿದೆ. “ಅಯ್ಯಯ್ಯೋ! ಹಾಗೆಲ್ಲಾ ಮಾಡೋ ಅಂಥವರಲ್ಲವಲ್ಲಾ ಅವರಿಬ್ಬರೂ! ಮೇಲಾಗಿ ನಿನ್ನೆಯಷ್ಟೇ ಎಲ್ಲಾ invitations ನೂ post ಬೇರೆ ಮಾಡಿಸಿಬಿಟ್ಟೆ! ಹೋಗಲಿ ಬಿಡಿ. ಏನಾದರೂ ಮಾಡೋಣ” ಅಂದರು ಸುಂದರ್! ಅವರ ಸ್ಥಿತಪ್ರಜ್ಞತೆಯನ್ನು ಕಂಡು ನಾನು ದಂಗುಬಡಿದು ಹೋದೆ. “ಅದೇನು ಮಾಡ್ತೀರೋ ಮಾಡಿ ಸರ್. ನನಗಂತೂ ಏನೂ ತೋಚ್ತಿಲ್ಲ” ಎಂದು ತಲೆ ಮೇಲೆ ಕೈಹೊತ್ತುಕೊಂಡು ಕುಳಿತುಬಿಟ್ಟೆ. “ಅಷ್ಟೆಲ್ಲಾ ತಲೆ ಕೆಡಿಸಿಕೊಂಡ್ರೆ ಬದುಕೋಕಾಗಲ್ಲ ಮಿ॥ಹ್ಯಾಮ್ಲೆಟ್! ನೀವು ಹೋಗಿ ಬೇರೆ ಕೆಲಸ ನೋಡಿಕೊಳ್ಳಿ. ಆರಾಮಾಗಿರಿ. ನಾನು ಎಲ್ಲಾ ವ್ಯವಸ್ಥೆ ಮಾಡ್ತೀನಿ” ಎಂದು ನನ್ನನ್ನು ಕಳಿಸಿಕೊಟ್ಟರು ಸುಂದರ್. ಸಂಜೆಯ ವೇಳೆಗೆ ಅವರ ಫೋನ್ ಬಂತು. “ಇಬ್ಬರಲ್ಲ. ಮೂರು ಜನ ಅತಿಥಿಗಳನ್ನ finalise ಮಾಡಿದೀನಿ! ಅದೂ ಸಾಧಾರಣದವರಲ್ಲ ಘಟಾನುಘಟಿಗಳು! ಒಬ್ಬರು ಸುಪ್ರಸಿದ್ಧ ವಿಮರ್ಶಕ ಎಂ.ಹೆಚ್. ಕೃಷ್ಣಯ್ಯನವರು. ಎರಡನೆಯವರು great film director ಕೆ ಎಸ್ ಎಲ್ ಸ್ವಾಮಿ ಅಲಿಯಾಸ್ ರವಿ ಅವರು. ಮೂರನೆಯವರು ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾದ ನಾಡೋಜ ಮಹೇಶ್ ಜೋಶಿಯವರು. ಹ್ಯಾಗೆ?” ಎಂದು ವಿಜಯದ ನಗೆ ಬೀರಿದರು ಸುಂದರ್! ಆ ಮೂವರೂ ಗಣ್ಯರಿಂದ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಅವರ ಲಭ್ಯತೆಯನ್ನು ಖಚಿತಪಡಿಸಿಕೊಂಡು ಹೊಸ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲು ಕೊಟ್ಟುಬಂದೆ.
ವೇದಿಕೆಯನ್ನು ಸಜ್ಜುಗೊಳಿಸುವುದು, ಅತಿಥಿಗಳನ್ನು ಕರೆತರುವುದು, ಅವರಿಗೆ ತಿಂಡಿ ತೀರ್ಥದ ವ್ಯವಸ್ಥೆ ಇತ್ಯಾದಿ ಎಲ್ಲ ಕೆಲಸಗಳನ್ನೂ ನಿರ್ವಹಿಸಲು ತಿಮ್ಮಣ್ಣ, ತ್ರಿಲೋಚನ ಒಡೆಯರ್, ಅಶೋಕ ಜೈನ್ ಹಾಗೂ ಪ್ರಕಾಶರ ಮಿತ್ರ ಪಡೆ ಸನ್ನದ್ಧವಾಗಿತ್ತು. ಅತ್ತ ಧ್ವನಿ ಸಾಂದ್ರಿಕೆಗೆ ಸಂಬಂಧಿಸಿದಂತೆ ಹಾಗೂ ಕಾರ್ಯಕ್ರಮದಲ್ಲಿ ಗಾಯನ ವಿಭಾಗಕ್ಕೆ ಸಂಬಂಧಪಟ್ಟ ಹಾಗೆ ಎಲ್ಲವನ್ನೂ ನಿಭಾಯಿಸಲು ಉಪಾಸನಾ ಮೋಹನ್ ಸಿದ್ಧವಾಗಿದ್ದರು. ಅಷ್ಟರಲ್ಲಿ ಒಂದು ಸಣ್ಣ ಮುಜುಗರದ ಪ್ರಸಂಗವೂ ಎದುರಾಯಿತು. ಯಾವುದೋ ಸ್ಪಷ್ಟೀಕರಣಕ್ಕಾಗಿ ಒಂದು ದಿನ ಕೃಷ್ಣಯ್ಯನವರಿಗೆ ಫೋನ್ ಮಾಡಿದಾಗ ಅವರು, “ಪ್ರಭು, ನನಗೊಂದು ಗೊಂದಲ. ಎರಡು ದಿವಸದ ಹಿಂದೆ ನನಗೊಂದು ಆಹ್ವಾನ ಪತ್ರಿಕೆ ಬಂತು. ಇದೇ ‘ಭರಣಿಮಳೆ’ ಪುಸ್ತಕದ ಬಿಡುಗಡೆಗೆ ಸಂಬಂಧ ಪಟ್ಟಿದ್ದು. ಆದರೆ ಅದರಲ್ಲಿ ನನ್ನ ಹೆಸರು ಇರಲಿಲ್ಲ. ಬೇರೆಯವರ ಹೆಸರುಗಳಿದ್ದವು. ನನಗೊಂದೂ ಅರ್ಥವಾಗಲಿಲ್ಲ. ಇವತ್ತು ಇನ್ನೊಂದು ಆಹ್ವಾನ ಪತ್ರಿಕೆ ಬಂತು. ಅದರಲ್ಲಿ ನನ್ನ ಹೆಸರಿದೆ! ಯಾವುದು ಸರಿ? ನಾನು ನಾಡಿದ್ದು ಕಾರ್ಯಕ್ರಮಕ್ಕೆ ಬರಬೇಕು ತಾನೇ?” ಎಂದು ನಗುನಗುತ್ತಲೇ ಕೇಳಿದರು. ನಾನು ಅತೀವ ಮುಜುಗರದಿಂದ, “ಅದು. ಸ್ವಲ್ಪ ಏನೋ ಎಡವಟ್ಟಾಗಿಬಿಟ್ಟಿತ್ತು ಸರ್. ಆಮೇಲೆ ಅದನ್ನ ವಿವರಿಸ್ತೇನೆ. ನಾಡಿದ್ದು ನಿಮ್ಮದೇ ಕಾರ್ಯಕ್ರಮ ಸರ್. ಅನುಮಾನವೇ ಇಲ್ಲ” ಎಂದು ತಡವರಿಸಿದೆ. ಅವರೂ ನಗುತ್ತಾ, “ನೀವೇನೂ ವಿವರಿಸೋದು ಬೇಡ. ನನಗೆ ಅರ್ಥವಾಗುತ್ತೆ. ನಾನೇನೂ ತಪ್ಪು ತಿಳಕೊಂಡಿಲ್ಲ. ನಾಡಿದ್ದು ಬರ್ತೀನಿ. ಚಿಂತೆ ಮಾಡಬೇಡಿ” ಎಂದು ಆಶ್ವಾಸನೆ ಕೊಟ್ಟಾಗಲೇ ನನಗೆ ಜೀವ ಬಂದಂತಾಗಿದ್ದು! ದೊಡ್ಡವರನ್ನು ದೊಡ್ಡವರೆನ್ನುವುದು ಇಂಥ ಕಾರಣಗಳಿಗಾಗಿಯೇ ಅಲ್ಲವೇ?
ನಿರ್ದೇಶಕ ಕೆ ಎಸ್ ಎಲ್ ಸ್ವಾಮಿ (ರವಿ)
ಇಲ್ಲಿ ಮತ್ತೂ ಒಂದು ಅಂಶವನ್ನು ಸ್ಪಷ್ಟ ಪಡಿಸಿಬಿಡುತ್ತೇನೆ: ನಾನು ನನ್ನ ಕಥೆಯನ್ನು ಬರೆಯುವಾಗ ಅನೇಕರ ಹೆಸರುಗಳನ್ನು ಮರಮಾಚಿದ್ದೇನೆ. ಕೆಲವೊಮ್ಮೆ ಬದಲಿಸಿದ್ದೇನೆ ಕೂಡಾ. ಅದು ಯಾವುದೇ ಭಯದಿಂದ ಖಂಡಿತ ಅಲ್ಲ. ನಡೆದ ಘಟನೆಯನ್ನು ಎಷ್ಟೇ ನಿರ್ಲಿಪ್ತನಾಗಿ ನಿಂತು ವರದಿ ಮಾಡಿದರೂ ಅದು ನನ್ನ ವೈಯಕ್ತಿಕ ದೃಷ್ಟಿಕೋನದ ಸಂಕೋಲೆಯಿಂದ ಪೂರ್ತಿ ಮುಕ್ತವಾಗಿಲ್ಲದಿರಬಹುದು ಎಂಬುದು ಒಂದು ಕಾರಣ; ಜತೆಗೆ ಯಾರೇ ಆಗಲಿ ಒಂದು ಸಂದರ್ಭಕ್ಕೆ ತಕ್ಕಹಾಗೆ ತಮಗೆ ಸರಿ ಎಂದು ತೋಚಿದ ರೀತಿಯಲ್ಲಿ ಪ್ರತಿಕ್ರಿಯಿಸಿರುತ್ತಾರೆಯೇ ವಿನಾ ಅದು ಅವರ ಯಾವತ್ತಿನ ನಿಲುವುಗಳೇ ಆಗಿರಬೇಕಿಲ್ಲ! ಅವರವರ ಅನಿವಾರ್ಯತೆಗಳು ಆಯ್ಕೆಗಳು ಅವರ ತೀರ್ಮಾನಕ್ಕೇ ಬಿಟ್ಟಿದ್ದು! ನನ್ನ ವರದಿಯಿಂದ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗುವುದು ನನಗೇಕೋ ಸರಿಕಾಣದ ಸಂಗತಿ. ಮತ್ತೂ ಒಂದು ಬಹು ಮುಖ್ಯ ಕಾರಣವೆಂದರೆ ಸಹೃದಯ ಮಾನಸದಲ್ಲಿ ಆ ಗಣ್ಯರಿಗೆ ಒಂದು ಘನವಾದ ಸ್ಥಾನವಿರುತ್ತದೆ. ಅವರ ಬಗ್ಗೆ ಪ್ರೀತಿ ಗೌರವಾದರಗಳು ಮನೆ ಮಾಡಿರುತ್ತವೆ. ಒಂದು ಪ್ರಸಂಗದ ನೆಪದಿಂದ ಆ ಉನ್ನತ ಸ್ಥಾನಕ್ಕೆ ಧಕ್ಕೆ ತರುವುದಾಗಲೀ ಅವರ ಚಾರಿತ್ರ್ಯವಧೆ ಮಾಡುವುದಾಗಲೀ ನನಗೆ ಒಗ್ಗದ ಸಂಗತಿ. ಹಾಗಾಗಿಯೇ ಈ ಮರೆಮಾಚುವ ಯಾ ಹೆಸರು ಬದಲಿಸುವ ಪ್ರಯತ್ನವಷ್ಟೇ!
ಇರಲಿ. ಎಲ್ಲಾ ಸಿದ್ಧತೆಗಳೂ ಮುಗಿದು ನೆಮ್ಮದಿಯಿಂದ ಉಸಿರು ಬಿಡುತ್ತಿದ್ದಂತೆಯೇ ಒಂದು ಆಘಾತದ ಸುದ್ದಿ ಬಂದೆರಗಿತು: ‘ಅಣ್ಣ ಕುಸಿಯುತ್ತಿದ್ದಾರೆ! ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು!”ನನಗಂತೂ ದಿಕ್ಕು ತಪ್ಪಿದಂತಾಗಿಹೋಯಿತು. ಪುಸ್ತಕ ಬಿಡುಗಡೆಯನ್ನು ಈ ಸಮಯದಲ್ಲಿ ಹಮ್ಮಿಕೊಂಡು ತಪ್ಪು ಮಾಡಿಬಿಟ್ಟೆನೆಂಬ ತಪ್ಪಿತಸ್ಥ ಭಾವ ಕಾಡತೊಡಗಿತು. ಅಕ್ಕ ಭಾವಂದಿರೇ ಧೈರ್ಯ ತುಂಬಿದರು: “ದೇವರ ಮೇಲೆ ಭಾರ ಹಾಕಿ ಮುಂದುವರಿಯೋಣ. ಸಂದರ್ಭಕ್ಕೆ ತಕ್ಕ ಹಾಗೆ ಏನು ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಿದರಾಯ್ತು.” ನೋಡ ನೋಡುತ್ತಲೇ ಕಾರ್ಯಕ್ರಮದ ದಿನವೂ ಬಂದೇ ಬಿಟ್ಟಿತು. ಅಣ್ಣನ ಪರಿಸ್ಥಿತಿ ಅದೆಷ್ಟು ನಾಜೂಕಾಗಿತ್ತೆಂದರೆ ಮನೆಯಿಂದ ಯಾರೂ ಕಾರ್ಯಕ್ರಮಕ್ಕೆ ಬರುವ ಕುರಿತು ಯೋಚಿಸುವಂತೆಯೂ ಇರಲಿಲ್ಲ. ನಾನು ರಂಜನಿಗೂ ಮಿತ್ರರಿಗೂ ಪೂರ್ವಭಾವಿಯಾಗಿಯೇ ಸೂಚನೆಗಳನ್ನು ಕೊಟ್ಟೆ: “ನಿಗದಿಯಾಗಿರುವಂತೆ ಎಲ್ಲಾ ನಡೆಯುತ್ತಾ ಹೋಗಲಿ. ತೀರಾ ಅನಿವಾರ್ಯದ ಪ್ರಸಂಗ ಎದುರಾದರೆ ನಾನು ಮನೆಯಲ್ಲೇ ಉಳಿದುಕೊಳ್ಳುತ್ತೇನೆ. ನೀವುಗಳು ನಿಭಾಯಿಸಿಕೊಂಡು ಹೋಗಿ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ರದ್ದಾಗುವುದು ಬೇಡ.” ಸತ್ಯವಾಗಿ ಹೇಳುತ್ತೇನೆ. ಆಗ ಕಳೆದ ಸಮಯದಷ್ಟು ಆತಂಕದ, ಒತ್ತಡ—ತಲ್ಲಣಗಳ ಕ್ಷಣಗಳು ಅದುವರೆಗಿನ ಬದುಕಿನಲ್ಲಿ ಎದುರಾಗಿರಲಿಲ್ಲ! ಸಂಜೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿಯೇಬಿಟ್ಟಿತು. ಯಾವ ಕ್ಷಣದಲ್ಲಿ ಏನು ಸುದ್ದಿ ಬಂದು ನಾನು ಮನೆಗೆ ಧಾವಿಸಬೇಕಾಗುತ್ತದೋ ಎಂಬ ಆತಂಕ ಕಾಡುತ್ತಲೇ ಇತ್ತು.
ಗೌರಿಸುಂದರ್ ಅವರ ಮಗಳು ಚಿತ್ರಶ್ರೀ ಪ್ರಸಿದ್ಧ ನಿರೂಪಕಿ ಎಂದು ಹೆಸರಾದವರು. ಅವರೇ ಅಂದಿನ ಕಾರ್ಯಕ್ರಮದ ಚುಕ್ಕಾಣಿ ಹಿಡಿದಿದ್ದರು ಕೂಡಾ. ಅಂದು ವೇದಿಕೆಯಲ್ಲಿ ಪುಸ್ತಕ ಧ್ವನಿ ಸಾಂದ್ರಿಕೆಗಳ ಬಿಡುಗಡೆಯ ಜತೆಗೆ ಪ್ರೀತಿಯ ಮೇಷ್ಟ್ರು ಜಿ ಎಸ್ ಎಸ್ ಹಾಗೂ ಎನ್ ಎಸ್ ಎಲ್, ನಮ್ಮ ಸದಾ ಕಾಲದ ಮಾರ್ಗದರ್ಶಕರಾದ ಡಾ॥ ಸಿ ಎನ್ ರಾಮಚಂದ್ರನ್, ಪ್ರೀತಿಯ ಹಿರಿಯ ಕವಿಗಳಾದ ಹೆಚ್ ಎಸ್ ವಿ ಹಾಗೂ ಬಿ ಆರ್ ಎಲ್ ಅವರಿಗೆ ಆದರದ ಸನ್ಮಾನವನ್ನೂ ಹಮ್ಮಿಕೊಂಡಿದ್ದೆವು. ಎಲ್ಲ ಗಣ್ಯರೂ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಯಿತು. ಆಪ್ತೇಷ್ಟರಿಂದ, ಸಹೃದಯರಿಂದ ಕಲಾಕ್ಷೇತ್ರ ಕಿಕ್ಕಿರಿದು ತುಂಬಿಹೋಗಿತ್ತು. ಮೋಹನ್ ತಂಡದವರಿಂದ ಪ್ರಾರ್ಥನಾ ಭಾವಗೀತೆಯ ನಂತರ ವೇದಿಕೆಯ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯ ಮೇಲೆ ಎಂ ಹೆಚ್ ಕೃಷ್ಣಯ್ಯನವರು, ಮಹೇಶ್ ಜೋಶಿ, ಲಹರಿ ವೇಲು ಹಾಗೂ ಕೆ ಎಸ್ ಎಲ್ ಸ್ವಾಮಿ ಅವರು ಆಸೀನರಾಗಿದ್ದರು. ಗೌರಿಸುಂದರ್ ಹಾಗೂ ಇಂದಿರಾ ಸುಂದರ್ ದಂಪತಿಗಳು ಕೃತಿ ಬಿಡುಗಡೆ ಅಚ್ಚುಕಟ್ಟಾಗಿ ನೆರವೇರಲು ಸಕಲ ಸಿದ್ಧತೆಗಳನ್ನೂ ಸಮರ್ಪಕವಾಗಿ ಮಾಡಿದ್ದರು. ಸಹೃದಯರ ಪ್ರಚಂಡ ಕರತಾಡನ ಹಾಗೂ ಹರ್ಷೋದ್ಗಾರಗಳ ನಡುವೆ ‘ಭರಣಿ ಮಳೆ’ ಕೃತಿ ಹಾಗೂ ಧ್ವನಿ ಸಾಂದ್ರಿಕೆಗಳು ವಿಜೃಂಭಣೆಯಿಂದ ಲೋಕಾರ್ಪಣೆಗೊಂಡವು.
0 ಪ್ರತಿಕ್ರಿಯೆಗಳು