ಶ್ರೀನಿವಾಸ ಪ್ರಭು ಅಂಕಣ- ಕಾಲಮಾನದಲ್ಲಿ ಕೊಂಚ ಹಿಂದೆ ಸರಿಯುತ್ತಾ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

86

ಕಾಲಮಾನದಲ್ಲಿ ಕೊಂಚ ಹಿಂದೆ ಸರಿದು ಮತ್ತೆ ಮುಂದುವರಿಯುತ್ತೇನೆ.
ಅಣ್ಣ, ನನ್ನ ತಂದೆಯವರು, ಭಾಗವತ ಪ್ರಕಾಶನ ಸಮಿತಿಯನ್ನು ಪ್ರಾರಂಭಿಸಿದ್ದು 1984 ರಲ್ಲಿಯೇ. ಪರಮ ಕೃಷ್ಣಭಕ್ತರಾಗಿದ್ದ ಅಣ್ಣನ ಜೀವನ ದರ್ಶನವನ್ನು ಅವರ ಮಾತಿನಲ್ಲಿಯೇ ಕ್ರೋಢೀಕರಿಸಿ ಹೇಳುವುದಾದರೆ:
“ಅಂತಃಕರಣ ಶುದ್ಧಿಯೇ ಪರಮ ಕಲ್ಯಾಣದ ಪ್ರಥಮ ಸೋಪಾನವೆಂಬುದು ನಿರ್ವಿವಾದವಾದ ವಿಚಾರವು. ಅಂತಃಕರಣ ಶುದ್ಧಿಗೆ ಭಾಗವತಾದಿ ಸದ್ಗ್ರಂಥಗಳ ಪಠಣ ಮನನಗಳಿಗಿಂತ ಸುಲಭವಾದ ಉಪಾಯವು ಮತ್ತೊಂದಿಲ್ಲ, ಮನಸ್ಸಿನ ಭಾವನೆಗೆ ಅನುಗುಣವಾಗಿ ಕಾರ್ಯಗಳು ಸಿದ್ಧಿಸುತ್ತವೆ. ಸದಾ ಮನಸ್ಸು ಪವಿತ್ರ ಭಾವನಾಮಯವಾಗಿರುವಂತೆ ಕಾರ್ಯಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಸರ್ವಮಾನವರ ಆದ್ಯ ಕರ್ತವ್ಯವಾಗಿದೆ. ಇದೊಂದರಿಂದ ಮಾತ್ರ ಪಶುಧರ್ಮವು ದೂರವಾಗಿ ಮಾನವನು ಮಾನವನಾಗಿಯೇ ಉಳಿದಾನು.” ಇಂಥದೊಂದು ಉದಾತ್ತ ವಿಚಾರವನ್ನಿಟ್ಟುಕೊಂಡು ಭಾಗವತ ಪ್ರಕಾಶನ ಸಮಿತಿಯನ್ನು ಸ್ಥಾಪಿಸಿದ ಅಣ್ಣ ಮೊದಲಿಗೆ ಶ್ರೀಮದ್ಭಾಗವತವನ್ನು ಜನಸಾಮಾನ್ಯರಿಗೆ ಸರಳವಾದ ಭಾಷೆಯಲ್ಲಿ ತಲುಪಿಸುವ ಯೋಜನೆಯನ್ನು ಹಾಕಿಕೊಂಡರು.

ಸಾಕಷ್ಟು ದೊಡ್ಡ ಗಾತ್ರದ ಐದು ಸಂಪುಟಗಳಲ್ಲಿ ಹೊರಬಂದ “ಶ್ರೀ ಭಾಗವತ ದರ್ಶನ”ದ ಪ್ರಥಮ ಸಂಪುಟ ‘ಕಪಿಲ’. ಈ ಕೃತಿಗೆ ಮುನ್ನುಡಿ ಬರೆದಿರುವವರು ಶ್ರೇಷ್ಠ ವಿದ್ವಾಂಸರೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪ್ರಾತಃಸ್ಮರಣೀಯರೂ ಆದ ಡಾ॥ಕೆ.ಕೃಷ್ಣಮೂರ್ತಿಗಳು. ಅವರು ಮುನ್ನುಡಿಯಲ್ಲಿ ಬರೆದಿರುವ ಕೆಲ ಮಾತುಗಳು ಅಣ್ಣನ ಬರವಣಿಗೆಯ ಸಾಮರ್ಥ್ಯಕ್ಕೆ ತೋರುಬೆರಳಾಗಿವೆ: ” ಹಿಂದಿ ಭಾಷೆಯಲ್ಲಿ ಪರಿಣತರೂ ಸಂಸ್ಕೃತ ಕಾವ್ಯ ಶಾಸ್ತ್ರಗಳಲ್ಲಿ ಪಂಡಿತರೂ ಕಥನ ಕಲೆಯಲ್ಲಿ ಪ್ರಗಲ್ಭರೂ ಆದ ನನ್ನ ಆಪ್ತಮಿತ್ರ ಶ್ರೀ ಕೆ.ರಾ.ವೆ.ಸುಬ್ರಹ್ಮಣ್ಯ ಶಾಸ್ತ್ರಿಗಳು, ಶ್ರೀ ಭಾಗವತ ಪ್ರಕಾಶನ ಎಂಬ ಯೋಜನೆಯನ್ನು ಹಾಕಿಕೊಂಡು ಕಾಲಕಾಲಕ್ಕೆ ಇಂದಿನ ತಿಳಿಗನ್ನಡದಲ್ಲಿ ಶ್ರೀ ಭಾಗವತ ದರ್ಶನದ ಸಂಪುಟಗಳನ್ನು ಹೊರತರಲು ಶ್ರಮಿಸುತ್ತಿರುವುದು ಕನ್ನಡ ಸಾಹಿತ್ಯವನ್ನು ನಿಜಕ್ಕೂ ಶ್ರೀಮಂತಗೊಳಿಸುತ್ತದೆ. ಇಲ್ಲಿ ಎಲ್ಲೂ ವಾಕ್ಯಗಳು ತೊಡರಿಕೊಂಡು ಗೋಜಲಾಗುವುದಿಲ್ಲ. ರಾಮಬಾಣದಂತೆ ನೇರವಾಗಿ ಸಾಗಿ ಗುರಿ ಮುಟ್ಟುತ್ತವೆ. ಚಿಕ್ಕ ಚಿಕ್ಕದಾಗಿರುವಂತೆ ಚೊಕ್ಕವಾಗಿಯೂ ಇವೆ. ಗಹನವಾದ ವೇದಾಂತ ಪ್ರಕ್ರಿಯೆ, ದರ್ಶನ ವಿಚಾರಗಳು, ಸಾಂಕೇತಿಕ ರಹಸ್ಯಗಳು ಮುಂತಾದುವೆಲ್ಲಾ ಸ್ಪಷ್ಟವಾದ ಕಥಾಭಿತ್ತಿಯ ಅಥವಾ ಚೌಕಟ್ಟಿನ ಪರಿಮಿತಿಯಲ್ಲಿಯೇ ಹಿತಮಿತವಾಗಿ ರೂಪು ಪಡೆಯುತ್ತವೆ.ಇಷ್ಟು ಓದತೊಡಗಿದರೆ ಇನ್ನಷ್ಟು ಓದುವ ಉತ್ಸಾಹ ಮೂಡಿಸುವಂತೆ ಗದ್ಯಗುಣ ಆಕರ್ಷಕವಾಗಿದೆ”.

‘ಭಾಗವತ ದರ್ಶನ’ ದ ಪ್ರಥಮ ಸಂಪುಟ ‘ಕಪಿಲ’ ಲೋಕಾರ್ಪಣೆಗೊಂಡದ್ದು 1984 ರ ಡಿಸೆಂಬರ್ ಮಾಹೆಯಲ್ಲಿ. ಎನ್.ಆರ್.ಕಾಲನಿಯ ಗೋಖಲೆ ಇನ್ಸ್ ಟಿಟ್ಯೂಟ್ ಸಭಾಂಗಣದಲ್ಲಿ ಅನೇಕ ಗಣ್ಯರ— ಕಿಕ್ಕಿರಿದು ನೆರೆದಿದ್ದ ಬಂಧುಮಿತ್ರರ ಸಮಕ್ಷಮದಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ಕೃತಿ ಬಿಡುಗಡೆ ಕಾರ್ಯ ನೆರವೇರಿತು. ನನ್ನ ಗೆಳೆಯರಾದ ನಾಗಭೂಷಣ್, ವೈ ವಿ ಗುಂಡೂರಾವ್ ಮತ್ತಿತರರು ಒಂದಷ್ಟು ಸ್ವಾರಸ್ಯಕರ ನಗೆಹನಿಗಳನ್ನು ಸಿಡಿಸಿ ಸಮಾರಂಭಕ್ಕೆ ಮತ್ತಷ್ಟು ಮೆರುಗು ತುಂಬಿದರು. ಬರವಣಿಗೆಯನ್ನು ಮುಗಿಸಿ ನಂತರ ಪುಸ್ತಕ ಮುದ್ರಣದಿಂದ ಮೊದಲುಗೊಂಡು ಕೃತಿ ಲೋಕಾರ್ಪಣೆಯವರೆಗೆ ಎಲ್ಲ ಹಂತದ ಎಲ್ಲ ಕೆಲಸಗಳನ್ನೂ ಅಣ್ಣ ಒಬ್ಬರೇ ಅಷ್ಟು ಸಮರ್ಥವಾಗಿ ನಿರ್ವಹಿಸಿ ಗೆದ್ದದ್ದು ನಮ್ಮೆಲ್ಲರನ್ನೂ ಅಕ್ಷರಶಃ ಮೂಕವಿಸ್ಮಿತರನ್ನಾಗಿ ಮಾಡಿತ್ತು. ನನಗಂತೂ ಅದು ಕೆಲಸಕ್ಕೆ ಸೇರಿದ ಪ್ರಾರಂಭದ ದಿನಗಳಾಗಿದ್ದರಿಂದ ಬಿಡುವು ಸಿಗುವುದೇ ದುಸ್ತರವಾಗಿತ್ತು. ಆದರೆ ಅಣ್ಣ ಎಂದೂ ಯಾರ ನೆರವಿಗೂ ಕಾದವರಲ್ಲ, ಎಂಥ ಪ್ರಸಂಗದಲ್ಲೂ ವಿಚಲಿತರಾದವರಲ್ಲ, ಯಾರ ಕುರಿತೂ ಅಸಮಾಧಾನವನ್ನೂ ತೋರಿದವರಲ್ಲ. ಯಾರಿಂದ ಏನನ್ನೂ ಅಪೇಕ್ಷಿಸದೆ ಸದಾ ಕಾರ್ಯನಿರತರಾಗಿ ಚಟುವಟಿಕೆಯಿಂದ ಇರುತ್ತಿದ್ದ ಅಣ್ಣ ಕೇವಲ ತಮ್ಮ ಅಗಾಧ ಮನೋಬಲದ ನೆರವಿನಿಂದಲೇ ಎದುರಾದ ಸವಾಲುಗಳೆಲ್ಲವನ್ನೂ ಗೆದ್ದವರು!

ಮುಂದಿನ ನಾಲ್ಕಾರು ವರ್ಷಗಳಲ್ಲಿ ಅಣ್ಣ ತಾವೇ ರಚಿಸಿ ಹೊರತಂದ ಕೃತಿಗಳೆಂದರೆ—ಶ್ರೀ ಭಾಗವತ ದರ್ಶನದ ಒಟ್ಟು ಐದು ಸಂಪುಟಗಳು; ದೇವಿ ಭಾಗವತದ ನಾಲ್ಕು ಸಂಪುಟಗಳು; ಮಾಂಡೂಕ್ಯೋಪನಿಷತ್ ವ್ಯಾಖ್ಯಾನ ಹಾಗೂ ನಾರದ ಭಕ್ತಿ ಸೂತ್ರ. ಅಣ್ಣನ ಅಧ್ಯಯನ ಪರತೆ—ಶಿಸ್ತು ಸಂಯಮಗಳು—ಸೃಜನಶೀಲತೆಗಳು ಒಂದು ಸೋಜಿಗವಾದರೆ ಅವರ ಸಂಘಟನಾ ಶಕ್ತಿ—ಸಂವಹನ ಶಕ್ತಿ—ವಾಕ್ಪಟುತ್ವ—ಜನಪ್ರೀತಿಗಳು ಮತ್ತಷ್ಟು ಕೌತುಕವನ್ನು ಬಿತ್ತುತ್ತಿದ್ದವು! ಅಂತೆಯೇ ಅವರು ಗಳಿಸಿದ ಶಿಷ್ಯ ಸಂಪತ್ತೂ ಅಪಾರವಾದುದೇ! ಇಂಥ ಒಬ್ಬ ಅಸಾಧಾರಣ ಸಾಧಕ ನನ್ನ ತಂದೆಯೆಂಬುದೇ ನನಗೆ ಅಪಾರ ಹೆಮ್ಮೆಯ ಸಂಗತಿ.

ಇತ್ತ ದೂರದರ್ಶನ ಕೇಂದ್ರದಲ್ಲಿಯೂ ನಾಟಕ ಸಂಬಂಧಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದವು. ನಾಡಿನ ಅನೇಕ ತಂಡಗಳನ್ನು ನಮ್ಮ ಸ್ಟುಡಿಯೋಗೆ ಆಹ್ವಾನಿಸಿ ಅವರ ನಾಟಕಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೆವು. ಅಂತಹ ಕೆಲವು ಮುಖ್ಯ ನಾಟಕ—ರಂಗ ಪ್ರಯೋಗಗಳನ್ನು ನೆನಪಿಸಿಕೊಳ್ಳುತ್ತೇನೆ:

ಹೆಗ್ಗೋಡಿನ ನೀನಾಸಂ ತಂಡದವರು ಅಭಿನಯಿಸಿದ, ಜಿ.ಬಿ.ಜೋಶಿಯವರ “ಕದಡಿದ ನೀರು” ವೀಕ್ಷಕರ ಅಪಾರ ಮೆಚ್ಚುಗೆ ಗಳಿಸಿದ ನಾಟಕ. ಜಂಬೆ ಚಿದಂಬರ ರಾವ್ ಈ ನಾಟಕದ ನಿರ್ದೇಶಕರು. “ಸ್ವಾತಂತ್ರ್ಯೋತ್ತರ ಗ್ರಾಮೀಣ ಭಾರತದ ಬದುಕು—ಬವಣೆ, ತವಕ—ತಲ್ಲಣಗಳು, ಬಡತನದ ಅಸಹಾಯಕತೆ, ಸ್ತ್ರೀಶೋಷಣೆ ಮುಂತಾದುವುಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ” ಈ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ಧ್ರುವರಾಜ ದೇಶಪಾಂಡೆಯವರದು ಸೊಗಸಾದ ಅಭಿನಯ. ಒಬ್ಬ ವಿಮರ್ಶಕರ ಮೆಚ್ಚುಗೆಯ ಉದ್ಗಾರ ನಾಟಕ ಬೀರಿದ ಪರಿಣಾಮಕ್ಕೆ ಸಾಕ್ಷಿ: “ಪ್ರೇಕ್ಷಕರ ‘ಮನ’ ಕದಡಿದ ನೀರು”. ಚಿಕ್ಕವಯಸ್ಸಿನಲ್ಲೇ ಈ ಪ್ರತಿಭಾವಂತ ನಟ—ಧ್ರುವ— ಬದುಕಿಗೆ ವಿದಾಯ ಹೇಳಿದ್ದು ರಂಗಭೂಮಿಗೆ ತುಂಬಲಾರದ ನಷ್ಟ.

ಪ್ರಸಿದ್ಧ ವಿಮರ್ಶಕ ಕಿ ರಂ ನಾಗರಾಜ, ಅವರು ರಚಿಸಿರುವ ‘ಕಾಲಜ್ಞಾನಿ ಕನಕ’ ಆ ಕಾಲದ ಒಂದು ಮಹತ್ವದ ನಾಟಕ. ದಾಸಶ್ರೇಷ್ಠ—ಅನುಭಾವಿ ಕವಿ ಕನಕದಾಸರ ಬದುಕು—ಚಿಂತನೆಗಳನ್ನು ಸಾದರಪಡಿಸುತ್ತಲೇ ಆ ಕಾಲದ ಸಾಮಾಜಿಕ ವ್ಯವಸ್ಥೆಯ ಟೊಳ್ಳುತನಗಳತ್ತ ಕ್ಷಕಿರಣ ಬೀರುವ ಈ ನಾಟಕವನ್ನು ಸಮರ್ಥವಾಗಿ ರಂಗಕ್ಕೆ ಅಳವಡಿಸಿದವರು ಶ್ರೇಷ್ಠ ನಿರ್ದೇಶಕ ಸಿ.ಜಿ.ಕೃಷ್ಣಸ್ವಾಮಿ. ನನಗೆ ನೆನಪಿರುವಂತೆ ಮುಖ್ಯ ಪಾತ್ರಧಾರಿಗಳು ತಾವೇ ಸ್ವತಃ ಹಾಡಿಕೊಂಡು ಅಭಿನಯಿಸಿದ ಪ್ರಯೋಗವಿದು. ನನ್ನ ಕೆಲ ನಾಟಕಗಳಲ್ಲೂ ಮುಖ್ಯ ಪಾತ್ರ ನಿರ್ವಹಿಸಿದ್ದ ಕೃಷ್ಣಮೂರ್ತಿ ಹೊಳ್ಳ ಎಂಬ ಕಲಾವಿದ, ಕನಕನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು.

ಎಸ್.ಮಾಲತಿಯವರು ಸಮುದಾಯ ತಂಡಕ್ಕಾಗಿ ನಿರ್ದೇಶಿಸಿದ ‘ಜನತೆಯ ಶತ್ರು’ ನಾಟಕ ಹೆನ್ರಿಕ್ ಇಬ್ಸನ್ನನ ‘ಎನಿಮಿ ಆಫ್ ದಿ ಪೀಪಲ್’ ನಾಟಕದ ರೂಪಾಂತರ. ಪ್ರೊ॥ರಾಮಚಂದ್ರ ಮೂರ್ತಿಯವರು ಬಹಳ ಸೊಗಸಾಗಿ ಕನ್ನಡದ ವಾತಾವರಣಕ್ಕೆ ಹೊಂದುವಂತೆ ನಾಟಕವನ್ನು ರೂಪಾಂತರಿಸಿದ್ದರು. ದೆಹಲಿಯ ನಾಟಕಶಾಲೆಯಲ್ಲಿ ನನಗೆದುರಾದ ಸವಾಲುಗಳನ್ನು ಸ್ವೀಕರಿಸಿ ನಾನು ಮುಖ್ಯಪಾತ್ರವನ್ನು ನಿರ್ವಹಿಸಿ ನಟನೆಯತ್ತ ಹೊರಳಿಕೊಂಡದ್ದು ಇದೇ ಮೂಲ ನಾಟಕದ ಹಿಂದಿ ರೂಪಾಂತರದಲ್ಲಿ! ಈ ಕುರಿತಾಗಿ ಹಿಂದೆಯೇ ವಿವರವಾಗಿ ಬರೆದಿದ್ದೇನೆ. ಮಾಲತಿಯವರ ದಕ್ಷ ನಿರ್ದೇಶನ; ಸೇತುರಾಂ ಬಲ್ಲರವಾಡ್ , ಶಶಿ, ನಂದಿತಾ ಮುಂತಾದ ಕಲಾವಿದರ (ಕೆಲ ಕಲಾವಿದರ ಹೆಸರು ನೆನಪಿನಿಂದ ಜಾರಿದೆ) ಸಮರ್ಥ ಅಭಿನಯ; ನಮ್ಮ ಸ್ಟುಡಿಯೋದಲ್ಲಿಯೇ ನಿರ್ಮಿಸಿದ್ದ ಸೊಗಸಾದ ಸೆಟ್ ಗಳು ನಾಟಕದ ಯಶಸ್ಸಿಗೆ ಕಾರಣವಾದ ಪ್ರಮುಖ ಸಂಗತಿಗಳು.

ವೃತ್ತಿ ರಂಗಭೂಮಿಯ ಶ್ರೇಷ್ಠ ಕಲಾವಿದರಾದ ಏಣಗಿ ಬಾಳಪ್ಪನವರು ತಮ್ಮ ಕಂಪನಿಗಾಗಿ ಸಿದ್ಧಪಡಿಸಿದ ನಾಟಕ “ಜಗಜ್ಜ್ಯೋತಿ ಬಸವೇಶ್ವರ”. ರಂಗದ ಮೇಲೆ ನೂರಾರು ಬಾರಿ ಪ್ರದರ್ಶನಗೊಂಡಿದ್ದ ಈ ಮಹತ್ವದ ಪ್ರಯೋಗವನ್ನು ದೂರದರ್ಶನಕ್ಕೆ ಅಳವಡಿಸಿಕೊಳ್ಳಲು ನಾನು ಯೋಚಿಸಿದೆ. ವೃತ್ತಿ ರಂಗಭೂಮಿಯಲ್ಲಿ ನಾಟಕ ಹೇಗೆ ಪ್ರದರ್ಶನಗೊಳ್ಳುತ್ತದೋ ಅದೇ ಮಾದರಿಯಲ್ಲಿಯೇ ಕಿರುತೆರೆಗೂ ಅಳವಡಿಸಿಕೊಳ್ಳುವ ಪ್ರಯತ್ನ ನಮ್ಮದಾಗಿತ್ತು. ನಾಟಕದ ಒಂದು ದೃಶ್ಯದಲ್ಲಿ ಸಿಂಹಾಸನ ಹೊತ್ತಿ ಉರಿಯುತ್ತಿರುವಂತೆ ಬಸವಣ್ಣನವರಿಗೆ ಗೋಚರವಾಗುವ ಒಂದು ಸಂದರ್ಭ ಬರುತ್ತದೆ. ಆ ಕಾಲದಲ್ಲಿಯೇ ನಮ್ಮ ಇಂಜಿನಿಯರ್ ಗಳು ಸಿಂಹಾಸನ ಹೊತ್ತಿ ಉರಿಯುವ ಈ ದೃಶ್ಯವನ್ನು ಸಹಜವಾಗಿ ಕಾಣುವಂತೆ ಕಿರುತೆರೆಯಲ್ಲಿ ಮೂಡಿಸಿ ನಾಟಕಕ್ಕೆ ತಾಂತ್ರಿಕ ಕೌಶಲದ ಮೆರುಗು ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಏಣಗಿ ಬಾಳಪ್ಪನವರು ಬಸವಣ್ಣನವರ ಪಾತ್ರ ನಿರ್ವಹಣೆಯಲ್ಲಿ ಸಾಧಿಸಿದ ತನ್ಮಯತೆಯಂತೂ ಅನನ್ಯವಾದುದು. ಹಾಡುಗಾರಿಕೆಯಲ್ಲಾಗಲೀ ಮಾತುಗಾರಿಕೆಯಲ್ಲಾಗಲೀ ಭಾವಾಭಿವ್ಯಕ್ತಿಯಲ್ಲಾಗಲೀ ಅವರಿಗೆ ಅವರೇ ಸಾಟಿ! ಅವರ ಸುಪುತ್ರ ಏಣಗಿ ನಟರಾಜನದೂ ಸಹಾ ಕುಯುಕ್ತಿಯ ಅಧಿಕಾರಿಯ ಪಾತ್ರದಲ್ಲಿ ಸ್ಮರಣೀಯ ಅಭಿನಯ.

ಹವ್ಯಾಸಿ ಹಾಗೂ ವೃತ್ತಿರಂಗಭೂಮಿಯ ನಾಟಕಗಳನ್ನು ಅಳವಡಿಸಿಕೊಳ್ಳುವುದರ ಜತೆಜತೆಗೇ ನಮ್ಮ ಜಾನಪದ ರಂಗಭೂಮಿಯ ಹಲವಾರು ವಿಶಿಷ್ಟ ಪ್ರಯೋಗಗಳನ್ನೂ ಕಿರುತೆರೆಗೆ ಅಳವಡಿಸಿಕೊಂಡದ್ದು ಒಂದು ಮಹತ್ವದ ಹೆಜ್ಜೆ. ಬಯಲಾಟ—ಯಕ್ಷಗಾನಗಳ ಅನೇಕ ಪ್ರಸಂಗಗಳನ್ನು ದೂರದರ್ಶನಕ್ಕೆ ಅಳವಡಿಸುವುದರ ಮೂಲಕ ನಮ್ಮ ಜನಪದ ಕಲಾಪ್ರಕಾರಗಳ ಸೊಬಗು—ವೈಭವಗಳನ್ನು ನಾಡಿನ ಸಮಸ್ತ ಜನತೆಗೆ ಪರಿಚಯಿಸುವ ಸಾರ್ಥಕ ಕೆಲಸವೂ ಆಯಿತು ಎನ್ನಬೇಕು. ಚಿಟಾಣಿ ರಾಮಚಂದ್ರ ಹೆಗಡೆ, ಕಾಳಿಂಗ ನಾವುಡ, ಅರಾಟೆ ಮಂಜುನಾಥ ಮೊದಲಾದ ಆ ಸಮಯದ ಶ್ರೇಷ್ಠ ಯಕ್ಷಗಾನ ಪಟುಗಳು ನಮ್ಮ ಸ್ಟುಡಿಯೋಗೆ ಆಗಮಿಸಿ ಪ್ರದರ್ಶನಗಳನ್ನು ನೀಡಿದರು. ಯಕ್ಷಗಾನಗಳನ್ನು ಚಿತ್ರೀಕರಿಸುವಾಗ ಚಂಡೆ ವಾದ್ಯದವರನ್ನು ಸ್ಟುಡಿಯೋದ ಹೊರಬಾಗಿಲ ಬಳಿ ಕೂರಿಸುತ್ತಿದ್ದೆವು! ಬೇರೆಯವರಿಗೆ ನೀಡಿದಂತೆ ಅವರಿಗೆ ಮೈಕ್ ಅನ್ನೂ ಕೊಡುತ್ತಿರಲಿಲ್ಲ! ಇಲ್ಲದಿದ್ದರೆ ಆ ವಾದ್ಯದ ಜೋರುನಾದದಲ್ಲಿ ಭಾಗವತರ—ಕಲಾವಿದರ ಧ್ವನಿಗಳು ಉಡುಗಿಯೇ ಹೋದಂತೆ ಭಾಸವಾಗುತ್ತಿತ್ತು! ನಮ್ಮ ಆಡಿಯೋ ಇಂಜಿನಿಯರ್ ಗಳಂತೂ “ಸರ್ ಅವರಿಗೆ ಸ್ವಲ್ಪ ಮೆಲ್ಲಗೆ ಬಡಿಯೋಕೆ ಹೇಳಿ ಇಲ್ಲದಿದ್ದರೆ ಮೈಕ್ ಗಳು ಒಡೆದುಹೋಗುತ್ವೆ” ಎಂದು ಪೇಚಾಡಿಕೊಳ್ಳುತ್ತಿದ್ದರು!

ಹೀಗೆ ಅನೇಕ ತಂಡಗಳನ್ನು ಆಹ್ವಾನಿಸಿ ಅವರ ನಾಟಕಗಳನ್ನು ದೂರದರ್ಶನಕ್ಕೆ ಅಳವಡಿಸಿಕೊಳ್ಳುತ್ತಿದ್ದೆನಲ್ಲಾ,ಈ ಪ್ರಕ್ರಿಯೆಯಲ್ಲಿ ಒಂದು ತೊಡಕು ಎದುರಾಯಿತು. ತಂಡದ ಒಟ್ಟಾರೆ ಖರ್ಚು ವೆಚ್ಚಗಳಿಗಾಗಿ ಹಾಗೂ ಕಲಾವಿದರ ಸಂಭಾವನೆಯ ಸಲುವಾಗಿ ಕೊಡಲು ಕೇಂದ್ರದಿಂದ ನಿಗದಿಯಾಗಿದ್ದ ಮೊತ್ತವನ್ನು(15 ರಿಂದ 25 ಸಾವಿರ ರೂಪಾಯಿಗಳು) ಒಂದು ಚೆಕ್ ರೂಪದಲ್ಲಿ ತಂಡದ ಮುಖ್ಯಸ್ಥರಿಗೆ ನೀಡುತ್ತಿದ್ದೆವು. ತಂಡದ ಎಲ್ಲರಿಗೂ ಅವರವರ ಸಂಭಾವನೆಯ ಹಣವನ್ನು ವಿತರಿಸುವುದು ಆ ಮುಖ್ಯಸ್ಥರ ಜವಾಬ್ದಾರಿಯಾಗಿತ್ತು. ಆದರೆ ಈ ಕುರಿತಾಗಿ ಕೆಲ ಕಲಾವಿದರಿಂದ ದೂರು—ಅಹವಾಲುಗಳು ಕೇಳಿಬರತೊಡಗಿದವು.

ದೊಡ್ಡ ಹೆಸರನ್ನು ಗಳಿಸಿಕೊಂಡಿದ್ದ ಕೆಲ ನಿರ್ದೇಶಕ ಅಥವಾ ಮುಖ್ಯಸ್ಥರೇ ಬೇರಾರಿಗೂ ಒಂದೇ ಒಂದು ರೂಪಾಯಿಯನ್ನೂ ಕೊಡದೆ ಎಲ್ಲವನ್ನೂ ತಮ್ಮ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದಾರೆಂಬ ವರ್ತಮಾನವೂ (ದಾಖಲೆಗಳ ಸಮೇತ!) ಬಂದಿತು! ತಂಡದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಚೆಕ್ ವಿತರಿಸುವುದೆಂದರೆ ಮಹಾ ಕಷ್ಟದ ಕೆಲಸ! ನಲವತ್ತು ಐವತ್ತು ಕಾಂಟ್ರ್ಯಾಕ್ಟ್ ಗಳನ್ನು ಸಿದ್ಧಪಡಿಸಿ ಎಲ್ಲರ ರುಜುವನ್ನೂ ಪಡೆದುಕೊಂಡು ಚೆಕ್ ವಿಲೇವಾರಿ ಮಾಡುವುದೆಂದರೇನು ಸುಮ್ಮನೇ ಆಯಿತೇ? ಹಾಗಾಗಿ ಈ group contract ಪದ್ಧತಿಯನ್ನು ಜಾರಿಗೊಳಿಸಲಾಗಿತ್ತು. ಮತ್ತೂ ಆಘಾತಕಾರಿಯಾದ ಇನ್ನೊಂದು ಸಂಗತಿಯೆಂದರೆ ‘ದೂರದರ್ಶನದ ಅಧಿಕಾರಿಗಳಿಗೆ ಸಾಕಷ್ಟು ಹಣ ಕೊಟ್ಟು ಈ ಅವಕಾಶ ಗಳಿಸಿಕೊಂಡಿದ್ದೇವೆ’ ಎಂದು ಬೇರೆ ನಮ್ಮ ತಲೆಯ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಕೆಲ ತಂಡಗಳ ಮುಖ್ಯಸ್ಥರು ಮಾಡಿದ್ದರು! ಓಹೋ! ತಾವು ತಿಂದ ಮೊಸರನ್ನವನ್ನು ನಮ್ಮ ಮೂತಿಗೆ ಒರೆಸಿ ನಮ್ಮ ತೇಜೋವಧೆ ಮಾಡುವ ಯತ್ನ! ಈ ಸುದ್ದಿ ಕಿವಿಗೆ ಬಿದ್ದಾಗ ಮಾತ್ರ ಮನಸ್ಸು ಮುದುಡಿಹೋಯಿತು.

‘ಇದು ಮತ್ತೊಂದು ರೀತಿಯ ರಂಗಭೂಮಿ ಸೇವೆ’ ಎಂದುಕೊಂಡು ಉತ್ಸಾಹದಿಂದ ಕೆಲಸ ಮಾಡುತ್ತಿರುವವನಿಗೆ ಇಂಥದೊಂದು ಮುಳ್ಳಿನ ಕಿರೀಟ ತೊಡಿಸಿಬಿಟ್ಟರೆ ಮನೋಬಲ ಕುಸಿಯದೇ ಇರುತ್ತದೆಯೇ? ಮತ್ತೆ ಈ ಸಮಸ್ಯೆಗೆ ಪರಿಹಾರವಾದರೂ ಏನು? ಸಾಕಷ್ಟು ತಲೆ ಕೆಡಿಸಿಕೊಂಡ ಮೇಲೆ ಒಂದು ಮಾರ್ಗ ಹೊಳೆಯಿತು. ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಗೆಂದು ಬಂದ ತಂಡದವರೆಲ್ಲರನ್ನೂ ಒಂದೆಡೆ ಸೇರಿಸಿ, “ನಿಮ್ಮೆಲ್ಲರ ಸಂಭಾವನೆಗಳನ್ನೂ ಸೇರಿಸಿ ಒಟ್ಟಾರೆಯಾಗಿ ತಂಡಕ್ಕೆ 20000 ರೂಪಾಯಿಗಳ ಚೆಕ್ ಅನ್ನು ನೀಡುತ್ತಿದ್ದೇವೆ.ಇದರಲ್ಲಿ ನಾನಾಗಲೀ ನನ್ನ ಸಹಾಯಕ ಕಟ್ಟಿಯಾಗಲೀ ನನ್ನ ಹಿರಿಯ ಅಧಿಕಾರಿಗಳಾಗಲೀ ಯಾವುದೇ ಪಾಲಿಗೆ ಬೇಡಿಕೆ ಇಟ್ಟಿಲ್ಲ, ನಿಮ್ಮ ಸಮಸ್ಯೆಗಳೇನೇ ಇದ್ದರೂ ನಿಮ್ಮ ನಿಮ್ಮಲ್ಲೇ ಪರಿಹರಿಸಿಕೊಳ್ಳಿ” ಎಂದು ಸ್ಪಷ್ಟವಾಗಿ—ನೇರವಾಗಿ ಹೇಳಿಬಿಡಲು ಪ್ರಾರಂಭಿಸಿದೆ! ಈ ರಾಮಬಾಣ ಪ್ರಯೋಗದ ನಂತರ ಕಲಾವಿದರಿಂದ ಬರುತ್ತಿದ್ದ ದೂರುಗಳು ತಾವಾಗಿಯೇ ನಿಂತುಹೋದವು!!

1989 ರ ಮಧ್ಯಭಾಗ ಇರಬೇಕು, ನಿರ್ದೇಶಕ ಗುರುನಾಥ್ ಅವರಿಗೆ ದೆಹಲಿಗೆ ವರ್ಗವಾಗಿ ನಮ್ಮ ಕೇಂದ್ರದ ನಿರ್ದೇಶಕರಾಗಿ ಅನೀಜ಼್ ಉಲ್ ಹಕ್ ಅವರು ಆಗಮಿಸಿದರು.ಅವರು ಬಂದೊಡನೆ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಕಾರ್ಯಕ್ರಮ ನಿರ್ಮಾಪಕರ ವಿಭಾಗಗಳನ್ನು ಬದಲಾಯಿಸಿದ್ದು! ಈ ಬದಲಾವಣೆಗಳ ಹಿಂದಿನ ಉದ್ದೇಶ ಏನೆಂಬುದು ನಮಗೆ ಅರ್ಥವಾಗದಿದ್ದರೂ ಆ ಕುರಿತಾದ ಒಂದಿಷ್ಟು ಊಹಾಪೋಹಗಳು ಹರಿದಾಡತೊಡಗಿದವು. ಅದು ಒತ್ತಟ್ಟಿಗಿರಲಿ. ನನ್ನನ್ನು ನಾಟಕ ವಿಭಾಗದಿಂದ ಎತ್ತಂಗಡಿ ಮಾಡಿ ಸಾಹಿತ್ಯ ಸಂಬಂಧಿ ಸಂಚಿಕೆಯಾದ ‘ಸಂಚಯ’ ಎಂಬ ವಿಭಾಗವನ್ನು ನೀಡಲಾಯಿತು. ಜತೆಗೆ ಉದ್ಯೋಗ ಮಾಹಿತಿ ಕಾರ್ಯಕ್ರಮ ಹಾಗೂ ಪ್ರಿಯ ವೀಕ್ಷಕರೇ ಕಾರ್ಯಕ್ರಮ! ನಾಟಕದಿಂದ ದೂರವಾದದ್ದು ಬೇಸರ ಉಂಟು ಮಾಡಿದರೂ ನಾನೂ ಸಾಹಿತ್ಯದ ವಿದ್ಯಾರ್ಥಿಯೇ ಆದ್ದರಿಂದ ಹೊಸ ಜವಾಬ್ದಾರಿಯನ್ನು ಸಂತೋಷದಿಂದಲೇ ವಹಿಸಿಕೊಂಡೆ. ಸಾಹಿತ್ಯ ಸಂಚಿಕೆಗಳನ್ನು ಹೊಸ ರೀತಿಯಲ್ಲಿ ಹೇಗೆ ಪ್ರಸ್ತುತಪಡಿಸಬಹುದು ಎಂಬುದರ ಕುರಿತಾಗಿ ಆಲೋಚಿಸತೊಡಗಿದೆ. ಸಾಹಿತ್ಯ ಸಂಚಿಕೆ ಎಂದರೆ ಕೇವಲ ಸ್ಟುಡಿಯೋದಲ್ಲಿ ಇಬ್ಬರು ಮೂವರನ್ನು ಕೂರಿಸಿ ನಡೆಸುವ ಮಾತುಕತೆ— ಚರ್ಚೆಗೆ ಮಾತ್ರ ಸೀಮಿತವಾಗಬೇಕಾಗಿಲ್ಲ; ದೃಶ್ಯ ಮಾಧ್ಯಮವಾದ್ದರಿಂದ ಹೆಚ್ಚು ಸ್ವಾರಸ್ಯಕರವಾಗಿ—ವಿಭಿನ್ನವಾಗಿ ಹೊರಾಂಗಣದಲ್ಲಿಯೂ ಚಿತ್ರೀಕರಿಸಬಹುದು ಎಂದು ಯೋಚಿಸತೊಡಗಿದೆ. ಆ ಸಮಯದಲ್ಲಿ ಅಮೂಲ್ಯ ಸಲಹೆಗಳನ್ನಿತ್ತು ಸಂಚಯ ಸಂಚಿಕೆ ಸೊಗಸಾಗಿ ಮೂಡಿಬರಲು ನೆರವಾದವರು ಡಾ॥ಹೆಚ್ ಎಸ್ ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಎಂ ಎನ್ ವ್ಯಾಸರಾವ್ ಹಾಗೂ ಡಾ॥ನರಹಳ್ಳಿ ಬಾಲಸುಬ್ರಹ್ಮಣ್ಯ.

‍ಲೇಖಕರು avadhi

March 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: