ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
138
ತನ್ಮಯತೆ! ಈ ಒಂದು ಅಮೂಲ್ಯ ಗುಣ ರಾಧಿಕಾಳ ವ್ಯಕ್ತಿತ್ವದ ಒಂದು ಅಂಗವೇ ಆಗಿಬಿಟ್ಟಿತ್ತು. ನೃತ್ಯವಿರಲಿ, ವರ್ಣಚಿತ್ರ ರಚನೆಯಿರಲಿ, ಕವಿತೆ ರಚಿಸುವುದಿರಲಿ. ಮೈಮರೆತು ತಲ್ಲೀನಳಾಗಿಬಿಡುತ್ತಿದ್ದಳು. ರಂಗಪ್ರವೇಶದಲ್ಲಿಯೂ ಪ್ರೇಕ್ಷಕರಿಗೆ ಪ್ರಮುಖವಾಗಿ ಗೋಚರಿಸಿದ್ದು ಇದೇ ತನ್ಮಯತೆ. ತನ್ಮಯತೆಯ ಜತೆಗೆ ಆತ್ಮವಿಶ್ವಾಸ. ನೃತ್ಯಕ್ಕೆ ಅತ್ಯಗತ್ಯವಾದ ಆಕರ್ಷಕ ನಿಲುವು. ಅನೂನವಾದ ಭಾವಭಂಗಿಗಳ ಪ್ರದರ್ಶನ. ಲಯವಿನ್ಯಾಸ ಗ್ರಹಿಕೆಯಲ್ಲಿನ ಪರಿಣತಿ. ಎಲ್ಲವೂ ಒಟ್ಟು ಸೇರಿ ನೇರ ಪ್ರೇಕ್ಷಕರ ಹೃದಯಕ್ಕೇ ಲಗ್ಗೆ ಹಾಕಿದವು. ಹಕ್ಕಿಗೆ ಹಾರುವುದು, ಮೀನಿಗೆ ಈಜುವುದು ಎಷ್ಟು ಸಹಜ ಸ್ವಾಭಾವಿಕವೋ ರಾಧಿಕಾಳಿಗೆ ನೃತ್ಯ ಅಷ್ಟೇ ಸಹಜವಾಗಿ ಮೈಗೂಡಿಬಿಟ್ಟಿತ್ತು. ಇವು ಮಗಳೆಂಬ ಅಭಿಮಾನ ಮಮಕಾರಗಳಿಂದ ನಾನು ಹೇಳುತ್ತಿರುವ ಪ್ರಶಂಸೆಯ ಮಾತುಗಳಲ್ಲ.
ಸಹೃದಯರು, ವಿಮರ್ಶಕರು ಹೃದಯಪೂರ್ವಕವಾಗಿ ಆಡಿದ ಮೆಚ್ಚುನುಡಿಗಳು. ಕೆಲವು ನೃತ್ಯಭಾಗಗಳ ಪ್ರಸ್ತುತಿಯ ನಂತರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಡಾ॥ಎಂ.ಚಿದಾನಂದಮೂರ್ತಿಗಳು, ನರಸಿಂಹಲು ವಡವಟ್ಟಿಯವರು ಹಾಗೂ ಗುರು ವಸಂತಲಕ್ಷ್ಮಿಯವರು ರಾಧಿಕಾಳ ನೃತ್ಯಕಲಾವಂತಿಕೆಯನ್ನು ಮನಸಾರೆ ಮೆಚ್ಚಿಕೊಂಡು ಅಭಿನಂದಿಸಿ ಆಶೀರ್ವದಿಸಿದರು. ನಮಗೆ ಪರಮ ಆತ್ಮೀಯರೂ ನಮ್ಮ ಆಧ್ಯಾತ್ಮದ ಗುರುಗಳೂ ಮಾರ್ಗದರ್ಶಕರೂ ಆದ ಹರೀಶ್ ಜೀ ಅವರು ಸಹಾ ರಾಧಿಕಾಳ ಕಲಾನೈಪುಣ್ಯವನ್ನೂ ಅವಳ ನೃತ್ಯಕಲಾ ಬದ್ಧತೆಯನ್ನೂ ಶ್ಲಾಘಿಸಿ ಮಾತನಾಡಿ ಆಶೀರ್ವದಿಸಿದರು. ಗುರು ಶುಭಾ ಧನಂಜಯ ಅವರಿಗೆ ಆಗಿದ್ದ ಸಂತಸವಂತೂ ಹೇಳತೀರದು. ವೇದಿಕೆಯ ಕಾರ್ಯಕ್ರಮದ ನಂತರದ ನೃತ್ಯಭಾಗಗಳೂ ಅತ್ಯಂತ ಆಕರ್ಷಕವಾಗಿ ಮೂಡಿಬಂದು ಸಹೃದಯರ ಅಪಾರ ಮೆಚ್ಚುಗೆಗೆ ಪಾತ್ರವಾದವು.
ರಂಗ ಪ್ರವೇಶದ ಕುರಿತಾಗಿ ಕೆಲ ಪ್ರಸಿದ್ಧ ಕಲಾವಿಮರ್ಶಕರು ಪತ್ರಿಕೆಗಳಲ್ಲಿ ಬರೆದ ವಿಮರ್ಶೆಯ ಕೆಲ ಭಾಗಗಳನ್ನು ಉದ್ಧರಿಸಬಹುದಾದರೆ:
“ತನ್ಮಯತೆ ತುಂಬಿದ ಹೆಜ್ಜೆಗಳು, ಮುಗುಳ್ನಗೆಯಿಂದ ಕೂಡಿದ ಗಂಭೀರತೆಯ ಆಲಾಪ, ಅಪರೂಪದ ಆಂಗಿಕ ಅಭಿನಯ, ನಟ್ಟುವಾಂಗದ ಏಟಿಗೆ ಕಾಲ್ಗೆಜ್ಜೆಯ ಎದಿರೇಟು, ಸಹಜ ಭಾವದ ಕಣ್ಣೋಟ, ಭೂಮಿಕೆಯ ಆಕರ್ಷಕ ಬಳಕೆ, ಶ್ರುತಿ ಲಯ ರಾಗ ತಾಳಗಳಿಗೆ ದೇಹದ ಪಾಲ್ಗೊಳ್ಳುವಿಕೆ, ಆಂಗಿಕ, ಆಹಾರ್ಯ, ಸಾತ್ವಿಕ ಭಾವಗಳ ಸಂವಹನ. ಒಬ್ಬ ಪರಿಪೂರ್ಣ ನರ್ತಕಿಯಂತೆ ಕಂಡಳು ಆ ರಾಧಿಕೆ! ನಟರಾಜನಿಗೆ, ಗುರುವರ್ಯರಿಗೆ ನಮಿಸಿ ಭೂಮಿಕೆ ಪ್ರವೇಶಿಸಿದ ರಾಧಿಕಾ, ಆದಿತಾಳ ಅಮೃತವರ್ಷಿಣಿ ರಾಗಕ್ಕೆ ಹೆಜ್ಜೆ ಹಾಕಿದರು. ಸುಬ್ರಹ್ಮಣ್ಯ ಸ್ತುತಿಯಲ್ಲಿ ರಾಧಿಕಾ ಸುಬ್ರಹ್ಮಣ್ಯನ ಅಂತರಂಗಕ್ಕೇ ಇಳಿದಂತೆ ಕಂಡರು. ‘ಸುಂದರೇಶ ಸುಕುಮಾರ ಪಾಹಿಮಾಂ’ ಕೃತಿಯ ಸೂಕ್ಷ್ಮತೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಸಂಗೀತವಾಗಲೀ ನೃತ್ಯವಾಗಲೀ ವರ್ಣಗಳಿಗೆ ಪ್ರಮುಖ ಸ್ಥಾನ. ಖಮಾಚ್ ರಾಗ ಆದಿತಾಳದ ‘ಭುವನ ಸುಂದರನ ಕರೆತಾರೋ’ ಕೃತಿಯಲ್ಲಿ ರಾಧಿಕಾ ಶೃಂಗಾರಮಯವಾಗಿ ನರ್ತಿಸಿದರು. ರೇವತಿ ರಾಗ ಆದಿತಾಳ ಸಂಯೋಜನೆಯ ತಿಲ್ಲಾನ , ನೃತ್ಯಸಾಗರವನ್ನು ಬೊಗಸೆಯಲ್ಲಿ ಹಿಡಿದು ಒಮ್ಮೆಲೇ ವೇದಿಕೆಯ ಮೇಲೆ ಸುರಿದಂತಿತ್ತು. ಅಷ್ಟು ಉತ್ಸಾಹದ ನರ್ತನವದು. ರಾಧಿಕಾಳ ನೃತ್ಯದಲ್ಲಿ ವೃತ್ತಿಪರತೆಯ ಸ್ಪರ್ಶವಿತ್ತು.”
– ಯೋಗೇಶ್ ಮಾರನಹಳ್ಳಿ (ಉದಯವಾಣಿಯಲ್ಲಿ.)
“ಶ್ರಮಸಾಧ್ಯವಾದ ಜತಿಗಳು ಮತ್ತು ಅವುಗಳಿಗೆ ಸೂಕ್ತವಾಗಿ ಹೊಂದುವಂತಹ ಅಡವುಗಳ ಜೋಡಣೆಯಾಗಿದ್ದ ಖಂಡಛಾಪಿನ ಸ್ವರಕಟ್ಟನ್ನು (ಹಂಸನಾದ) ರಾಧಿಕಾ ಆತ್ಮವಿಶ್ವಾಸದಿಂದ ನಿರ್ವಹಿಸಿದರು. ಬಾಗೇಶ್ರೀ ರಾಗದ ಸುಬ್ರಹ್ಮಣ್ಯ ಸ್ತುತಿ ಸ್ವಾಗತಾರ್ಹ ಸೇರ್ಪಡೆ. ಅಂದಿನ ಸಂಜೆಯ ಪ್ರಧಾನ ಘಟ್ಟವಾಗಿ ನಿರೂಪಿತಗೊಂಡಿದ್ದು ಕೊಳಲು ವಿದುಷಿ ದ್ವಾರಕಿ ಕೃಷ್ಣಸ್ವಾಮಿ ಅವರ ‘ಭುವನ ಸುಂದರನ ಕರೆತಾರೆ’ (ಖಮಾಚ್) ವರ್ಣ. ತನ್ನನ್ನು ತೊರೆದು ಹೋಗಿರುವ ನಾಯಕನನ್ನು ಕರೆತರುವಂತೆ ಬಿನ್ನವಿಸಿಕೊಳ್ಳುವ ವಿರಹೋತ್ಕಂಠಿತ ನಾಯಕಿಯ ಮನಸ್ಥಿತಿಯನ್ನು ರೇಖಾಂಕಿತಗೊಳಿಸುವಲ್ಲಿ ರಾಧಿಕಾ ಅಪೂರ್ವ ಯಶ ಕಂಡರು. ಸಮಪ್ರಮಾಣದಲ್ಲಿ ಅಡಕಗೊಂಡಿದ್ದ ನೃತ್ಯ ಹಾಗೂ ನೃತ್ತದ ವಿಸ್ತರಣೆಯಲ್ಲಿ ಅವರ ಪ್ರಾಮಾಣಿಕ ಪ್ರದರ್ಶನ ಪ್ರಶಂಸನಾರ್ಹ. ಕೃಷ್ಣಲೀಲಾ ತರಂಗಿಣಿ ಅವರ ಸುಂದರ ಅಭಿನಯದಲ್ಲಿ ಕಂಗೊಳಿಸಿತು. ರೇವತಿರಾಗದ ತಿಲ್ಲಾನ ಶ್ರೇಷ್ಠಮಟ್ಟದ ಸಮಾಪ್ತಿಯನ್ನೊದಗಿಸಿತು.”
– ಡಾ ಎಂ ಸೂರ್ಯಪ್ರಸಾದ್ (ಪ್ರಜಾವಾಣಿಯಲ್ಲಿ.)
“Young Radhika Prabhu hails from a family of artistes and has passed the senior exam. in dance. She has already performed in many places both in and outside the state and in China. Apart from Bharatanatyam she is also learning Kathak and is being trained in music too. She has a flair for poetry and is pursuing her bachelor’s degree in fine arts at Chitrakala Parishat. Radhika has an elegant stance and her ‘Thattu-mettu’ is sound as evidenced in the Pushpanjali set to raga Amritavarshini. She stood the test admirably in the Alaripu (Mishrajathi) itself revealing that the youngster had outgrown the fledgling stage and is able to bring an individual impression of her presentation. The ‘Virahothkanthita Nayika’ came alive in the varna presentation and provided ample scope for the dancer to exhibit her talent and good training. There was a surprise item in the second half. She performed for a poetry written by her mother Ranjini Prabhu, sung well by Nagachandrika Bhat. With her sparkling eyes and restrained abhinaya, her performance registered well with connoisseurs. No doubt Radhika has a bright future in the years to come.”
–ವಿಮರ್ಶಕರು, ಡೆಕ್ಕನ್ ಹೆರಾಲ್ಡ್.
ಇವು ಪತ್ರಿಕೆಗಳಲ್ಲಿ ಬಂದ ವಿಮರ್ಶೆಗಳ ಕೆಲ ಆಯ್ದ ಭಾಗಗಳು. ಹೀಗೆ ರಾಧಿಕಾಳ ರಂಗಪ್ರವೇಶ ಅಭೂತಪೂರ್ವವಾದ ಯಶಸ್ಸನ್ನು ಕಂಡದ್ದು ನಮಗಂತೂ ಅಪಾರ ಸಂತಸವನ್ನು ತಂದಿತು. ಅದು ಹಾಗೇ ಅಲ್ಲವೇ? ಮಕ್ಕಳು ಬೆಳೆಯುತ್ತಾ ಹೋದಂತೆ ತಂದೆ ತಾಯಿಯರ ಬದುಕು ಅವರ ಸುತ್ತಲೇ ಪರಿಭ್ರಮಿಸತೊಡಗುತ್ತದೆ! ಅವರಿಗೊಂದು ಬದುಕನ್ನು, ವ್ಯಕ್ತಿತ್ವವನ್ನು ಕಟ್ಟಿಕೊಟ್ಟು ಬೆಳೆಸುವುದೇ ಬದುಕಿನ ಗುರಿಯಾಗಿಬಿಡುತ್ತದೆ. ಅವರ ಅಭಿವೃದ್ಧಿ ಗೆಲುವುಗಳಿಗಾಗಿ ಕನಸುವುದು, ಹಂಬಲಿಸುವುದು, ಅವರ ಯಶಸ್ಸು, ಏಳ್ಗೆಯನ್ನು ಕಂಡು ಸಂಭ್ರಮಿಸುವುದು ನಮ್ಮ ಜೀವನಕ್ರಮವೇ ಆಗಿಬಿಡುತ್ತದೆ! ಬಹುಶಃ ಭಾರತೀಯ ಕುಟುಂಬಪ್ರಜ್ಞೆಯ ಮೂಲಸೆಲೆ ಇದೇ ಎಂದು ತೋರುತ್ತದೆ! ಒಂದು ದಿನ ಪ್ರಸಿದ್ಧ ಅಭಿನೇತ್ರಿ ಗಿರಿಜಾ ಲೋಕೇಶ್ ಅವರಿಂದ ಫೋನ್ ಕರೆ ಬಂದಿತು. ನಾವಿಬ್ಬರೂ ಕುಟುಂಬ ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದ ಸಂಗತಿಯನ್ನು ಈಗಾಗಲೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ದಿವಂಗತ ಲೋಕೇಶ್ ಅವರ ಸ್ಮರಣಾರ್ಥವಾಗಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವುದಾಗಿ ಹೇಳಿದ ಗಿರಿಜಾ ಅವರು ಮುಂದುವರಿದು ಹೀಗಂದರು “ಲೋಕೇಶ್ ಅವರಿಗೆ ಅಪಾರ ಹೆಸರನ್ನು ತಂದುಕೊಟ್ಟ ನಾಟಕವೆಂದರೆ ‘ಕಾಕನಕೋಟೆ’. ಆ ನಾಟಕದಲ್ಲಿ ಅವರ ‘ಕಾಚ’ನ ಪಾತ್ರ ನಿರ್ವಹಣೆಯಂತೂ ಅತ್ಯಮೋಘ .ಆ ನಾಟಕವನ್ನು ಅವರ ಸ್ಮರಣಾರ್ಥವಾಗಿ ಮತ್ತೊಮ್ಮೆ ರಂಗದ ಮೇಲೆ ತರಬೇಕೆಂದು ಆಲೋಚಿಸುತ್ತಿದ್ದೇವೆ. ಅದರಲ್ಲಿ ‘ಕಾಚ’ನ ಪಾತ್ರವನ್ನು ನೀವು ನಿರ್ವಹಿಸಬಹುದೇ?” ನನಗೆ ಒಂದು ಕ್ಷಣ ಏನು ಹೇಳಲೂ ತೋಚಲಿಲ್ಲ. ‘ಕಾಕನಕೋಟೆ’ ನಾಟಕವನ್ನು ನಾಲ್ಕಾರು ಬಾರಿ ನೋಡಿದ್ದ ನಾನು ಲೋಕೇಶರ ಅಭಿನಯ ಪ್ರತಿಭೆಗೆ ಮಾರುಹೋಗಿದ್ದೆ. ಅಂತಹ ಅದ್ವಿತೀಯ ನಟ ಅತ್ಯದ್ಭುತವಾಗಿ ನಟಿಸಿ ‘ಆ ಪಾತ್ರ ನಿರ್ವಹಣೆ ಮತ್ತಾರಿಂದಲೂ ಸಾಧ್ಯವಿಲ್ಲ’ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿಯಾಗಿದ್ದ ಮೇಲೆ ಈಗ ನಾನು ಆ ಸಾಹಸಕ್ಕೆ ಕೈ ಹಾಕುವುದೇ! “ಆ ಪಾತ್ರನಿರ್ವಹಣೆಗೆ ನನಗೆ ನೀವು ಸರಿಯಾದ ಆಯ್ಕೆ ಅನ್ನಿಸಿತು. ಸಾಧ್ಯವಾದಷ್ಟೂ ಮೊದಲು ಅಭಿನಯಿಸಿದ್ದ ಕಲಾವಿದರನ್ನೇ ಮತ್ತೆ ರಂಗದ ಮೇಲೆ ಒಟ್ಟುಗೂಡಿಸಲು ಯತ್ನಿಸುತ್ತಿದ್ದೇವೆ. ದಯವಿಟ್ಟು ಒಪ್ಪಿಕೊಳ್ಳಿ.” ಎಂದರು ಗಿರಿಜಾ ಅವರು.
ನನ್ನ ಮೇಲೆ ಅವರಿಟ್ಟಿದ್ದ ನಂಬಿಕೆಗೆ ಒಂದೆಡೆ ಖುಷಿಯೇ ಆದರೂ ಈಗಾಗಲೇ ಸಿದ್ಧವಾಗಿರುವ ಒಂದು ಅಪೂರ್ವ ಮಾದರಿಯ ಸಮೀಪಕ್ಕಾದರೂ ನನ್ನಿಂದ ಹೋಗಲಾದೀತೇ ಎಂಬ ಅಳುಕು ಅನುಮಾನಗಳೂ ತೀವ್ರವಾಗಿಯೇ ಬಾಧಿಸುತ್ತಿದ್ದವು. ಕೊನೆಗೆ, ‘ಒಬ್ಬ ಮಹಾನಟನಿಗೆ ನಾನು ಅರ್ಪಿಸುವ ಶ್ರದ್ಧಾಂಜಲಿ ಇದು’ ಎಂದುಕೊಂಡು ‘ಆಗಲಿ ಗಿರಿಜಮ್ಮಾ. ಆ ಪಾತ್ರವನ್ನು ನಾನು ನಿರ್ವಹಿಸುತ್ತೇನೆ’ ಎಂದು ಒಪ್ಪಿಕೊಂಡೆ. ‘ಕಾಕನ ಕೋಟೆ’ ಮಾಸ್ತಿಯವರ ಒಂದು ಶ್ರೇಷ್ಠ ನಾಟಕ. “ರಾಜಕೀಯ ಇತಿಹಾಸದ ದಾಖಲೆಯಾಗಿ ‘ಕಾಕನ ಕೋಟೆ’ಯು ಪಾಳೆಯಗಾರಿ ಪ್ರಭುತ್ವಶಾಹಿಯಿಂದ ರಾಜಪ್ರಭುತ್ವಕ್ಕೆ ವರ್ಗಾಯಿಸಲ್ಪಡುವ ಸಂಸ್ಕೃತಿಯೊಂದರ ಸಂಕ್ರಮಣ ಕಾಲವನ್ನು ಚಿತ್ರಿಸುತ್ತದೆ. ‘ಭಾವಗೀತದ ಲಾಲಿತ್ಯದಿಂದೋಡುವ ಈ ನಾಟಕದಲ್ಲಿ ಮಹಾಕಾವ್ಯದ ಯೋಗ್ಯತೆಯ ಸಾಮಗ್ರಿಯಿದೆ’ ಎಂದು ಮತ್ತೊಬ್ಬ ಪ್ರತಿಭಾವಂತ ಕನ್ನಡ ನಾಟಕಕಾರರಿಂದ ಮನ್ನಣೆ ಪಡೆದಿದೆ ಕಾಕನಕೋಟೆ.
“ಕಲಾಕೃತಿಯಾಗಿ ‘ಕಾಕನಕೋಟೆಗಿರುವ ಅಸಾಧಾರಣ ಉಜ್ವಲತೆಯನ್ನು ಮತ್ತು ಸಾಂಸ್ಕೃತಿಕವಾಗಿ ಅದಕ್ಕಿರುವ ಮಹತ್ವವನ್ನು ಬೇರ್ಪಡಿಸಿ ಚರ್ಚಿಸುವುದು ಕಷ್ಟ. ಅವೆರಡೂ ಜೀವ ದೇಹ ನ್ಯಾಯದಂತೆ ಅಭಿನ್ನವಾಗಿವೆ.” ಎಂದಿದ್ದಾರೆ ಡಾ॥ಮರುಳಸಿದ್ಧಪ್ಪನವರು. ಹವ್ಯಾಸಿ ರಂಗಭೂಮಿಯ ಒಂದು ಪ್ರಮುಖ ತಂಡವಾದ ನಟರಂಗ ‘ಕಾಕನ ಕೋಟೆ’ ನಾಟಕವನ್ನು ಅತ್ಯಂತ ಯಶಸ್ವಿಯಾಗಿ ರಂಗದ ಮೇಲೆ ಪ್ರದರ್ಶಿಸಿದ್ದರು. ಸಿ.ಆರ್. ಸಿಂಹ ಅವರ ನಿರ್ದೇಶನ, ಲೋಕೇಶ್, ಗಿರಿಜಾ ಲೋಕೇಶ್, ವೆಂಕಟಾಚಲ, ವೆಂಕಟರಾವ್, ಜಯರಾಜ್, ಪ್ರಣಯರಾಜ ಶ್ರೀನಾಥ್ ಮುಂತಾದವರ ಮನೋಜ್ಞ ಅಭಿನಯ, ಸಿ.ಅಶ್ವಥ್ ಅವರ ಸೊಗಸಾದ ಸಂಗೀತ ಸಂಯೋಜನೆ, ಸೂಕ್ತ ರಂಗಸಜ್ಜಿಕೆ ಬೆಳಕಿನ ವಿನ್ಯಾಸ. ಎಲ್ಲವೂ ಮೇಳೈಸಿ ‘ಕಾಕನ ಕೋಟೆ’ ಒಂದು ಅಭೂತಪೂರ್ವ ಪ್ರದರ್ಶನವಾಗಿ ಪ್ರೇಕ್ಷಕರನ್ನು ಸೆಳೆದಿತ್ತು. ಅಂಥ ನಾಟಕದ ಮರು ಪ್ರದರ್ಶನವೆಂದಾಗ ಸಹಜವಾಗಿಯೇ ಪ್ರೇಕ್ಷಕರಿಗೆ ಒಂದಷ್ಟು ನಿರೀಕ್ಷೆಗಳಿರುತ್ತವೆ. ಆ ನಿರೀಕ್ಷೆಗಳು ಹುಸಿ ಹೋಗದಂತಹ ಮಟ್ಟವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ!
ಹಳಬರ ಪೈಕಿ ವೆಂಕಟಾಚಲ ಹಾಗೂ ವೆಂಕಟರಾವ್ ಅವರು ನಮ್ಮೊಟ್ಟಿಗಿದ್ದರು. ಪೂಜಾ ಲೋಕೇಶ್, ಸುರಭಿ ಹಾಗೂ ಇನ್ನೂ ಕೆಲ ಕಲಾವಿದರು ಹೊಸದಾಗಿ ಸೇರ್ಪಡೆಯಾಗಿದ್ದರು. ಪ್ರಸಿದ್ಧ ನಟ ಶ್ರೀನಿವಾಸ ಮೂರ್ತಿ ಅವರು ದೊರೆಯ ಪಾತ್ರ ನಿರ್ವಹಿಸಲು ಸಮ್ಮತಿಸಿದ್ದರು. ಸೃಜನ್ ಲೋಕೇಶ್ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಸಿ. ಅಶ್ವಥ್ ಅವರೂ ಸಹಾ ಪ್ರದರ್ಶನದಲ್ಲಿ ಹಾಡಲು ಒಪ್ಪಿಕೊಂಡಿದ್ದರು. ನಾಟಕದ ಭಾಷೆ. ನುಡಿಕಟ್ಟುಗಳು ಹಳೆ ಮೈಸೂರು ಪ್ರಾಂತದ ಪ್ರಭೇದವಾದ್ದರಿಂದ ಸಂಭಾಷಣೆಗಳನ್ನು ಹೇಳುವುದರಲ್ಲಿ ಹೆಚ್ಚಿನ ಎಚ್ಚರ ಮುತುವರ್ಜಿಗಳು ಅಗತ್ಯವಾಗಿತ್ತು. ವೆಂಕಟಾಚಲ, ವೆಂಕಟರಾವ್ ಇಬ್ಬರೂ ಈ ಮೊದಲೇ ಅಭಿನಯಿಸಿದ್ದರಿಂದ ಅವರ ಮಾರ್ಗದರ್ಶನ ನಮಗೆ ಕೈಗಾವಲಾಗಿ ಒದಗಿತ್ತು! ಸಾಕಷ್ಟು ದಿನಗಳ ತಾಲೀಮು ನಡೆಸಿ ಪ್ರಯೋಗಕ್ಕೆ ಅಣಿಯಾದೆವು. ಕಲಾಕ್ಷೇತ್ರದ ಸಭಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ಹಲವಾರು ಕಾರ್ಯಕ್ರಮಗಳ ನಂತರ ನಾಟಕ ಆರಂಭವಾಯಿತು. ಯಾವ ತೊಂದರೆಗಳೂ ಎದುರಾಗದೇ ಪ್ರದರ್ಶನ ಚೆನ್ನಾಗಿ ಮೂಡಿಬಂದಿತು. ಯಾವ ಪ್ರದರ್ಶನ ಉತ್ತಮವಾಗಿತ್ತು ಮೊದಲಿನದೋ ಈಗಿನದೋ, ಯಾರ ಅಭಿನಯ ಮೇಲಾಗಿತ್ತು. ಇಂತಹ ಹೋಲಿಕೆಗಳಿಗಿಂತ ಅಂದು ಮುಖ್ಯವಾದದ್ದು ಒಂದು ಮಹಾನ್ ರಂಗ ಚೇತನಕ್ಕೆ ಹೃತ್ಪೂರ್ವಕ ಶ್ರದ್ಧಾಂಜಲಿಯನ್ನರ್ಪಿಸುವುದು. ಆ ಒಂದು ಘನ ಉದ್ದೇಶ ಸಂದೇಹಾತೀತವಾಗಿ ಈಡೇರಿತೆಂಬುದು ಎಲ್ಲರಿಗೂ ಸಂತಸ ಸಮಾಧಾನಗಳನ್ನು ತಂದ ಸಂಗತಿ.
0 ಪ್ರತಿಕ್ರಿಯೆಗಳು