ಶ್ರೀನಿವಾಸ ಪ್ರಭು ಅಂಕಣ – ಒಂದು ಸಣ್ಣ ಆತಂಕ ಬಾಧಿಸುತ್ತಿತ್ತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

21

ಒಂದು ದಿನ NSL ಮೇಷ್ಟ್ರು ನನ್ನನ್ನು ಅವರ ಕೋಣೆಗೆ ಕರೆಸಿದರು. ‘ನೋಡಿ ಪ್ರಭೂ, ಇದು ತುಂಬಾ ಸೂಕ್ಷ್ಮವಾದ ವಿಚಾರ. ನಿಮ್ಮ ವೈಯಕ್ತಿಕ ವಿಷಯದಲ್ಲಿ ಮೂಗು ತೂರಿಸ್ತಿದೀನಿ ಅಂತ ಭಾವಿಸಬೇಡಿ. ನಿನ್ನೆ Mathematics Department ನ ಕೆ.ಆರ್.ಶ್ರೀಕಂಠಯ್ಯ ಅವರು ನನ್ನ ಹತ್ತಿರ ಮಾತಾಡಬೇಕು ಅಂತ ಬಂದಿದ್ದರು. ಅವರು ನಿಮಗೆ ಹತ್ತಿರದ ಬಂಧುಗಳಂತೆ. ನಿಮ್ಮ ಮತ್ತು ಜ್ಯೋತಿಯ ಬಗ್ಗೆ ವಿಚಾರಿಸಿದರು. ‘ಅವರಿಬ್ಬರೂ ಮದುವೆಯಾಗ್ತಿದಾರೆ ಅಂತಲೂ, ಒಂದಷ್ಟು ಜನ ಅವರಿಗೆ ತುಂಬಾ support ಮಾಡ್ತಿದಾರೆ ಅಂತಲೂ ಸುದ್ದಿ ಹಬ್ಬಿದೆ; ನಿಜಾನಾ’ ಅಂತ ನನ್ನನ್ನು ಕೇಳಿದರು. ‘ಅವರಿಬ್ಬರೂ ತುಂಬಾ ಸ್ನೇಹದಿಂದಿರೋದನ್ನ ನಾನು ಬಲ್ಲೆ; ಆದರೆ ನೀವು ಹೇಳಿದ ಉಳಿದ ವಿಷಯಗಳು ನನಗೂ ಹೊಸತು.. ಆ ಬಗ್ಗೆ ನಾನೇನೂ ಹೇಳಲಾರೆ’ ಅಂತ ಹೇಳಿಕಳಿಸಿದೆ. ಒಂದು ವಿಷಯ ಪ್ರಭೂ. Final M A ಪರೀಕ್ಷೆಗಳು ಹತ್ತಿರಕ್ಕೆ ಬರ್ತಾ ಇವೆ.ನಿಮಗೆ ಎಲ್ಲಕ್ಕಿಂತ ಈಗ ನಿಮ್ಮ ಪರೀಕ್ಷೆ, ಅದರ ತಯಾರಿ ಮುಖ್ಯ ಆಗಬೇಕು. ನಿಮ್ಮ ಫಲಿತಾಂಶದ ಮೇಲೆ ನಿಮ್ಮ ಭವಿಷ್ಯ ಬಹಳಷ್ಟರ ಮಟ್ಟಿಗೆ ಅವಲಂಬಿತವಾಗಿದೆ ಅನ್ನೋದನ್ನ ಮರೀಬೇಡಿ. ನಿಮಗಿನ್ನೂ ಚಿಕ್ಕ ವಯಸ್ಸು.. ಉಳಿದದ್ದೇನಿದ್ರೂ ಆಮೇಲೆ ಕೂತು ಮಾತಾಡಬಹುದೇನೋ ಅನ್ನೋದು ನನ್ನ ಅಭಿಪ್ರಾಯ’ ಅಂದರು ಮೇಷ್ಟ್ರು.

ಮೊಟ್ಟಮೊದಲ ಬಾರಿಗೆ ಶ್ರೀಕಂಠಮೇಷ್ಟ್ರ ಮೇಲೆ ಕೆಂಡದಂಥಾ ಸಿಟ್ಟು ಬಂದುಬಿಟ್ಟಿತು. ಇವರಿಗ್ಯಾಕೆ ಬೇಕಿತ್ತು ಈ ಉಸಾಬರಿ? ಹೀಗೆಲ್ಲಾ ಗೂಢಚಾರಿಕೆ ಮಾಡಿ ನನ್ನ ಮೇಷ್ಟ್ರುಗಳ ಹತ್ತಿರ ನನ್ನ ವೈಯಕ್ತಿಕ ವಿಚಾರಗಳನ್ನೆಲ್ಲಾ ಚರ್ಚೆ ಮಾಡಿದರೆ ಅವರು ನನ್ನ ಬಗ್ಗೆ ತಪ್ಪು ತಿಳಿಯೋದಿಲ್ಲವೇ? ಎಂದೆಲ್ಲಾ ಅನ್ನಿಸಿ ಒಳಗೊಳಗೇ ಕುದ್ದು ಹೋದೆ. ಅಂದೇ ರಾತ್ರಿ ಮೂರ್ತಿ ಭಾವ, ನಾನು ಮನೆಗೆ ಬರುವವರೆಗೆ ಕಾದಿದ್ದು, ‘ನಿನ್ನ ಜೊತೆ ಸ್ವಲ್ಪ ಮಾತಾಡಬೇಕು ಬಾ’ ಎಂದು terrace ಗೆ ಕರೆದುಕೊಂಡು ಹೋದರು. ‘ಪ್ರಭೂ, ನಿನ್ನ ಮನಸ್ಸಿನಲ್ಲಿ ಏನಿದೆ ಅದನ್ನ ನೇರವಾಗಿ ನನ್ನ ಹತ್ರ ಹೇಳು… ದೊಡ್ಡ ನಿರ್ಧಾರಗಳನ್ನ ತೆಗೆದುಕೊಳ್ಳೋ ಅಷ್ಟು ದೊಡ್ಡವನಾಗಿಲ್ಲ ನೀನು.. ಶ್ರೀಕಂಠ ಮೇಷ್ಟ್ರು ಒಂದಷ್ಟು ವಿಷಯಗಳನ್ನ ನಮಗೆ ಹೇಳಿದಾರೆ.. ಅವರು..’ ಮಧ್ಯದಲ್ಲೇ ಅವರ ಮಾತನ್ನು ಕತ್ತರಿಸಿ ನಾನು ಸಿಡಿದೆ:’ ಬಿಡಿ ಭಾವಾ, ಯಾರು ಯಾರ ಬಗ್ಗೆ, ಏನು ಬೇಕಾದ್ರೂ ಮಾತಾಡಬಹುದು’. ಅಂತಹದೊಂದು ಒರಟು ಪ್ರತಿಕ್ರಿಯೆಯನ್ನು ಭಾವ ನಿರೀಕ್ಷಿಸಿರಲಿಲ್ಲ. ‘ಓಹೋ! ಸರಿ ಬಿಡಪ್ಪಾ.. ಮನೆ ದೊಡ್ಡ ಮಗನ ಹಾಗಿರೋ ಶ್ರೀಕಂಠ ಮೇಷ್ಟ್ರೇ ನಿನಗೆ ‘ಯಾರೋ’ ಆಗಿ ಹೋದಮೇಲೆ ಮಾತಾಡೋದೇನಿದೆ?’ ಎಂದು ನೋವಿನಿಂದ ನುಡಿದವರೇ ಕೆಳಗಿಳಿದು ಹೊರಟುಹೋದರು. ಏನು ಮಾಡಲೂ ತೋಚದೆ ಒಂದಷ್ಟು ಹೊತ್ತು ಪ್ರೀತಿಯ ಹಸುಗಳ ಜೊತೆ ಕಷ್ಟ ಸುಖ ಮಾತಾಡಿಕೊಂಡು ಹೋಗಿ ಮಲಗಿದೆ.

ಮರುದಿನ ನನ್ನ ದ್ವಂದ್ವ-ತುಮುಲಗಳೆಲ್ಲಾ ಅರ್ಥವಾದವಳಂತೆ ಜ್ಯೋತಿ ನನ್ನ ಜೊತೆ ಮಾತಾಡಿದಳು: ‘ಇತ್ತೀಚೆಗೆ ನಿನ್ನ ವರ್ತನೆಯನ್ನು ಗಮನಿಸ್ತಿದೇನೆ. ನೀನು ಎಂದಿನ ಹಾಗಿಲ್ಲ. ನಿನ್ನ ಮಾನಸಿಕ ಕ್ಲೇಶಗಳಿಗೆ ನಾನು ಪ್ರಮುಖ ಕಾರಣ ಅನ್ನೋದು ನನಗೆ ಗೊತ್ತು. ನಮ್ಮಿಬ್ಬರ ಭವಿಷ್ಯದ ಕಾರಣವಾಗಿ ನೀನು ಕೊರಗ್ತಿದೀಯಾ ಅನ್ನೋದೂ ನನಗೆ ಗೊತ್ತು. ನಮ್ಮ ವಿಷಯ ನಮ್ಮ ಮನೆ ತನಕಾನೂ ಮುಟ್ಟಿದೆ. ಯಾರು ಮುಟ್ಟಿಸಿದರು ಅನ್ನೋದು ಇಲ್ಲಿ ಮುಖ್ಯ ಅಲ್ಲ. ಮನೇಲಿ ಅಪ್ಪ-ಅಮ್ಮಇಬ್ಬರೂ ಭಯಂಕರ ಸಿಟ್ಟಿಗೆದ್ದಿದ್ದಾರೆ. ಬೇರೆ ಜಾತಿಯ, ಅದರಲ್ಲೂ ಒಬ್ಬ ಬ್ರಾಹ್ಮಣ ಹುಡುಗನನ್ನ ನಾನು ಮದುವೆಯಾಗೋದನ್ನ ಅವರು ಕಲ್ಪಿಸಿಕೊಳ್ಳೋದಕ್ಕೂ ಸಿದ್ಧರಿಲ್ಲ. ಅವರ ಮಾತು ಮೀರಿ ಅಂಥದೊಂದು ನಿರ್ಧಾರ ತೊಗೊಂಡ್ರೆ ಜೀವಸಹಿತ ಉಳಿಯೋಲ್ಲ ಅಂತ ಅಮ್ಮ ಹೆದರಿಸ್ತಿದಾರೆ…’ ಇಷ್ಟು ಹೇಳಿ ನಿಲ್ಲಿಸಿ ಜ್ಯೋತಿ ನನ್ನತ್ತ ತಿರುಗಿದಳು.

ದುಃಖ, ನಿರಾಸೆ, ಹತಾಶೆಗಳೆಲ್ಲವೂ ಮಡುಗಟ್ಟಿದ್ದ ನನ್ನ ಮುಖವನ್ನೇ ನೋಡುತ್ತಾ ಮುಂದುವರಿಸಿದಳು: ‘ನನ್ನ ಮನೆಯವರ ಸ್ವಭಾವ ನನಗೆ ಚೆನ್ನಾಗಿ ಗೊತ್ತು. ಅವರನ್ನೆಲ್ಲಾ ಎದುರು ಹಾಕಿಕೊಂಡು ಯಾವುದೇ ನಿರ್ಧಾರ ತೆಗೆದುಕೊಳ್ಳೋ ಸ್ಥಿತೀಲಿ ನಾನಿಲ್ಲ.. ನೀನೂ ಸಹಾ ಇಲ್ಲದ ಯೋಚನೆಗಳನ್ನು ತಲೇಲಿ ತುಂಬಿಕೊಂಡು ಒದ್ದಾಡ್ತಾ ಇರಬೇಡ.. ಕಾಲೇಜಲ್ಲಿ ಇರೋ ಅಷ್ಟು ದಿನ ಒಳ್ಳೇ ಸ್ನೇಹಿತರಾಗಿರೋಣ’ ಅಂದವಳು ಅರೆಚಣ ಸುಮ್ಮನಾದಳು. ಏನೋ ಹೇಳಬೇಕೆಂದು ನಾನು ಬಾಯಿ ತೆರೆಯುವಷ್ಟರಲ್ಲಿ ಅವಳೇ ಮತ್ತೆ ಹೇಳಿದಳು: ‘ಜೀವನದಲ್ಲಿ ಎಲ್ಲವೂ ನಾವಂದುಕೊಂಡ ಹಾಗೇ ಆಗೋದಿಲ್ಲ.. ಅಲ್ಲವಾ?’ ನನ್ನ ನೂರು ಪ್ರಶ್ನೆಗಳಿಗೆ ಅವಳ ಆ ಒಂದು ಮಾತು ಉತ್ತರ ನೀಡಿತ್ತು. ಜ್ಯೋತಿಯೊಂದಿಗಿನ ಆ ಮಾತುಕತೆ ವಾಸ್ತವವಾಗಿ ನನ್ನ ಸಮಸ್ಯೆಗಳ ಪರಿಹಾರಕ್ಕೇ ಒದಗುವಂತಿದ್ದರೂ, ಅವಳ ನಿರಾಕರಣೆಯ ಆಘಾತವನ್ನು ತಡೆದುಕೊಳ್ಳುವುದು ನನಗೆ ತೀರಾ ಕಷ್ಟವಾಗಿಹೋಯಿತು. ‘ಇಡೀ ಜಗತ್ತೇ ನನ್ನವಿರುದ್ಧ ತಿರುಗಿಬಿದ್ದಿದೆ; ನನ್ನವರು ಯಾರೂ ಇಲ್ಲ.. ನಾನು ಏಕಾಂಗಿ’ ಎಂದೆಲ್ಲಾ ಭ್ರಮಿಸಿಕೊಂಡು ಮತ್ತಷ್ಟು ಖಿನ್ನನಾದೆ. ಸಿಟ್ಟು ಸೆಡವುಗಳು ವಿಪರೀತವಾಗಿಬಿಟ್ಟವು.

ಒಂದು ದಿನ ಅಮ್ಮ, ‘ತಲೆ ಎಣ್ಣೆ ಮುಖ ಕಂಡು ಯಾವ ಕಾಲವಾಗಿದೆಯೋ.ˌಬಾ.. ಎಣ್ಣೆಸ್ನಾನ ಮಾಡಿಸ್ತೀನಿ’ ಎಂದು ಬಲವಂತವಾಗಿ ತಲೆಗೆ ಎಣ್ಣೆ ಮೆತ್ತಿ ಬಚ್ಚಲಿಗೆ ದೂಡಿದರು. ತಲೆಯ ಮೇಲೆ ರಭಸದಿಂದ ಬೀಳುತ್ತಿದ್ದ ನೀರಿನ ಶಾಖಕ್ಕೆ ಒಳಗಿನ ವಿನಾಕಾರಣದ ಸಿಟ್ಟು ಮತ್ತಷ್ಟು ಕೆರಳುತ್ತಿತ್ತು. ‘ಮೈ ಕೈಗೆ ಸೋಪ್ ಹಚ್ಚಿಕೊಂಡು ಕರಿ.. ಇನ್ನೊಂದು ನಾಲ್ಕು ಚೊಂಬು ಹಾಕ್ಕೊಡ್ತೀನಿ’ ಎಂದ ಅಮ್ಮ ಬಾಗಿಲು ತೆರೆದು ಹೊರಡುತ್ತಿದ್ದಂತೆಯೇ, ‘ಮತ್ತೆ ಬರೋದೇನೂ ಬೇಡ.. ನಾನೇ ಸ್ನಾನ ಮಾಡ್ಕೋತೀನಿ’ ಅಂದವನೇ ರಪ್ಪೆಂದು ಬಾಗಿಲನ್ನು ದೂಡಿದೆ. ಸ್ನಾನ ಮುಗಿಸಿ ಒಳಬಂದರೆ ಹಾಲ್ ನಲ್ಲಿ ಅಮ್ಮ-ವಿಜಯಕ್ಕ ಕುಳಿತಿದ್ದರು. ಅಮ್ಮನ ಬಲಗೈಗೆ ಬಟ್ಟೆಯನ್ನು ಸುತ್ತಲಾಗಿತ್ತು. ಅವರ ಮುಖದಲ್ಲಿ ನೋವು ಮಡುಗಟ್ಟಿತ್ತು. ಸಣ್ಣಗೆ ನರಳುತ್ತಿದ್ದರು. ಹೊರಬಂದ ನನ್ನನ್ನು ದುರುಗುಟ್ಟಿಕೊಂಡು ನೋಡಿದ ವಿಜಯಕ್ಕ, ಆಹಾ!ಶೂರ! ಇನ್ನೊಂದು ಸ್ವಲ್ಪ ಜೋರಾಗಿ ಬಾಗಿಲು ಹಾಕಬೇಕಿತ್ತು.. ಪೂರ್ತಿ ಬೆರಳೇ ಹೋಗಿರೋದು..’ ಎಂದು ಸಂಕಟ ಪಟ್ಟುಕೊಂಡು ವ್ಯಂಗ್ಯವಾಗಿ ಚುಚ್ಚಿದಳು. ಆದ ಅನಾಹುತದ ಅರಿವಾಗಿ ತಳಮಳ ತಡೆದುಕೊಳ್ಳಲಾರದೇ ಅಲ್ಲಿಂದ ಹೊರಟುಹೋದೆ. ಅಂದು ರಾತ್ರಿ ಯಾವುದೋ ಥಿಯೇಟರ್ ನ ಕತ್ತಲಲ್ಲಿ ಮೂರು ತಾಸು ಕಳೆದು ಮನೆಗೆ ಬಂದಾಗ ರಾತ್ರಿ ಒಂದು ಗಂಟೆ. ಆಶ್ಚರ್ಯವೆನ್ನುವಂತೆ ಅಣ್ಣನ ಕೋಣೆಯ ದೀಪ ಉರಿಯುತ್ತಿತ್ತು. ದೀಪ ಆರಿಸಲು ಮರೆತಿರಬಹುದು ಎಂದುಕೊಂಡು ಎಂದಿನಂತೆ ನಿಧಾನವಾಗಿ ಹಿಂದಿನ ಬಾಗಿಲು ತೆಗೆದು ಒಳಬಂದೆ. ಅಪರೂಪಕ್ಕೆನ್ನುವಂತೆ ಅಮ್ಮ ಎದ್ದು ಬರಲಿಲ್ಲ. ಮಲಗುವ ಜಾಗದತ್ತ ಹೊರಟ ನನ್ನನ್ನು ಅಣ್ಣನ ದನಿ ತಡೆದು ನಿಲ್ಲಿಸಿತು: ‘ಪ್ರಭೂ,ಬಾ ಇಲ್ಲಿ.’ ನಿಧಾನವಾಗಿ ಹೋಗಿ ಅವರ ಮುಂದೆ ಕುಳಿತೆ. ಮಾತಿನ ದಿಕ್ಕು ಗೊತ್ತೇ ಇತ್ತಾದ್ದರಿಂದ ‘ಏನು ಪ್ರಶ್ನೆಗೆ ಏನು ಉತ್ತರ ಕೊಡಲಿ’ ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಿದ್ದೆ.

ಅಣ್ಣ ಮಾತು ಆರಂಭಿಸಿದರು: ‘ಸುತ್ತಿ ಬಳಸಿ ಮಾತಾಡೋಕೆ ಹೋಗೋಲ್ಲ ನಾನು. ನಿನ್ನ ಇತ್ತೀಚಿನ ದಿನಗಳ ವಿಪರೀತ ವರ್ತನೆಗೆ ಏನು ಕಾರಣ ಅನ್ನೋದು ಈಗ ನಮಗೆಲ್ಲಾ ಸ್ಪಷ್ಟವಾಗಿ ಗೊತ್ತಾಗಿದೆ. ಇನ್ನೂ ಪ್ರೌಢಾವಸ್ಥೆಗೂ ಬರದ 18 ವಯಸ್ಸಿನ ಕಿಶೋರ ನೀನು. ಯಾವುದೋ ಬೇರೆ ಜಾತಿಯ ಹುಡುಗಿಯ ಜೊತೆ ತುಂಬಾ ಸ್ನೇಹ-ಅಥವಾ ಅದಕ್ಕಿಂತ ತುಸು ಹೆಚ್ಚು ಅನ್ನೋ ಹಾಗೇ ಇದ್ದೀಯಂತೆ… ‘ಅದೆಲ್ಲಾ ನನ್ನ ಸ್ವಂತ ವಿಷಯ, ಯಾರೂ ಅದರಲ್ಲಿ ತಲೆ ಹಾಕಬಾರದು’ ಅನ್ನೋದು ನಿನ್ನ ತಿಳುವಳಿಕೆ ಆಗಿರಬಹುದು. ಇರಲಿ. ಅದರ ಬಗ್ಗೆ ನನ್ನ ಪ್ರಶ್ನೆ ಇಲ್ಲ. ನನ್ನ ಪ್ರಶ್ನೆ ಇದು: ಆಗಲೇ ನಿನ್ನ ಮದುವೆ—ಭವಿಷ್ಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳೋ ಅಷ್ಟು ಪ್ರೌಢನಾಗಿಬಿಟ್ಟಿದೀಯಾ ನೀನು? ಇಷ್ಟು ವರ್ಷ ಸುಖದ ಸುಪ್ಪತ್ತಿಗೇಲಿ ಅಲ್ಲದಿದ್ದರೂ ಹೊಟ್ಟೆ ಬಟ್ಟೆಗೆ, ಪ್ರೀತಿ ವಾತ್ಸಲ್ಯಕ್ಕೆ ಕೊರತೆ ಬರದ ಹಾಗೆ ನಿಮ್ಮನ್ನೆಲ್ಲಾ ಬೆಳೆಸಿದೀನಿ ನಾನು. ದೊಡ್ಡ ವಿಷಯ ಏನಲ್ಲ ಅದು… ನಾನು ನನ್ನ ಕರ್ತವ್ಯಗಳನ್ನು ನಿರ್ವಂಚನೆಯಿಂದ ನಿರ್ವಹಿಸಿದೀನಿ ಅಷ್ಟೇ. ಹಾಗೇ ನೀನೂ ನಿರ್ವಹಿಸಬೇಕಾದ ಒಂದಷ್ಟು ಕರ್ತವ್ಯಗಳಿವೆ, ನಿನ್ನ ಹೆಗಲ ಮೇಲೂ ಒಂದಷ್ಟು ಜವಾಬ್ದಾರಿಗಳಿವೆ ಅನ್ನೋದನ್ನ ನೀನು ಮರೀಬಾರದು.

ಇಡೀ ಮನೆಯ ಜವಾಬ್ದಾರಿಯನ್ನ ಕುಮಾರ ಒಬ್ಬನೇ ಹೊತ್ತುಕೋಬೇಕಾ? ನಿನ್ನದೇನೂ ಪಾಲೇ ಇಲ್ಲವಾ ಅದರಲ್ಲಿ? ಮೊದಲು ನಿನ್ನ ವಿದ್ಯಾಭ್ಯಾಸ ಯಶಸ್ವಿಯಾಗಿ ಮುಗೀಬೇಕು.. ಈ ಕುಟುಂಬವನ್ನ ಒಂದು ದಡ ಮುಟ್ಟಿಸಬೇಕು.. ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ತಲೆ ಎತ್ತಿಕೊಂಡು ಬದುಕಬೇಕು.. ನಿನ್ನ ತಂಗಿಯ ಮದುವೆಯಾಗಬೇಕು.. ಇದೆಲ್ಲಾ ಆಗುವುದರ ಜೊತೆಗೆ ಬದುಕಿನಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳೋ ಅಂಥ ಪಕ್ವತೆಯನ್ನು ನೀನು ಮೊದಲು ಪಡೀಬೇಕು. ಆಮೇಲೆ… ಆಮೇಲೆ ಬೇಕಾದ್ರೆ ನಿನ್ನ ಇಷ್ಟದ ಪ್ರಕಾರಾನೇ ನಡಕೋ.. ಯಾರನ್ನಾದರೂ ಮದುವೆಯಾಗು. ಗಾಂಧಿಯವರ ಮಾರ್ಗದಲ್ಲಿ ನಡೆದು ವರ್ಷಗಟ್ಟಲೆ ಹೋರಾಟದ ಬದುಕು ಸವೆಸಿರೋ ನನಗೆ ಸರ್ವಸಮಾನತೆಯ ಪಾಠವನ್ನ ಯಾರಿಂದಲೂ ಕಲಿಯೋ ಅಗತ್ಯವಿಲ್ಲ. ನನ್ನ ಮಾತು ನಿನಗೆ ಅರ್ಥವಾಗಿದೆ ಅಂದುಕೋತೀನಿ. ನಾಳೆ ಬೆಳಿಗ್ಗೆಯ ಹೊತ್ತಿಗೆ ನನಗೆ ನಿನ್ನ ತೀರ್ಮಾನ ಗೊತ್ತಾಗಬೇಕು: ‘ನನ್ನ ಮನಸ್ಸಿಗೆ ಬಂದ ಹಾಗೆ ಸ್ವೇಚ್ಫೆಯಾಗಿ ನಡಕೋತೀನಿ’ ಅಂತ ಹೇಳಿ ಹೊರಗೆ ಹೋಗ್ತೀಯೋ ಇಲ್ಲಾ ನನ್ನ ಮಗನಾಗಿ ಈ ಮನೇಲೇ ಉಳಕೋತೀಯೋ ನಿನಗೆ ಬಿಟ್ಟಿದ್ದು” ಎಂದು ಅಣ್ಣ ಮಾತು ಮುಗಿಸಿದರು. ಒಂದೂ ಮಾತಾಡದೆ ಅಲ್ಲಿಂದ ಎದ್ದು ಹೊರಟುಹೋದೆ.

ಮಲಗಿದರೂ ನಿದ್ದೆ ಹತ್ತಿರ ಸುಳಿಯಲಿಲ್ಲ. ಎದ್ದು ಹೊರಬಂದವನೇ ಹಸುಗಳ ಬಳಿ ಕುಳಿತೆ. ಅವುಗಳನ್ನು ತಬ್ಬಿಕೊಂಡು ಒಂದಷ್ಟು ಅತ್ತು ಆಮೇಲೆ ಅಲ್ಲಿಯೇ ಇದ್ದ ಬೆಂಚ್ ಮೇಲೆ ಕುಳಿತು ಯೋಚಿಸತೊಡಗಿದೆ. ಆಕಾಶದ ತುಂಬಾ ಕಪ್ಪುಮೋಡಗಳು ತುಂಬಿಕೊಂಡು ಮಳೆ ಬರುವ ಲಕ್ಷಣಗಳೂ ಕಾಣಿಸುತ್ತಿದ್ದವು. ಯೋಚಿಸುತ್ತಾ ಯೋಚಿಸುತ್ತಾ ನನ್ನೆಲ್ಲಾ ತುಮಲ-ಪ್ರಕ್ಷುಬ್ದತೆ-ತಲ್ಲಣಗಳಿಗೆ ಕಾರಣ ‘ನಾನೇ’ ಅನ್ನುವುದು ಸ್ಪಷ್ಟವಾಗತೊಡಗಿತು. ಜ್ಯೋತಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಮೇಲಂತೂ ಇದೀಗ ಯಾವ ಪ್ರಶ್ನೆಗಳೂ ಉಳಿದಿಲ್ಲ.. ಯಾವ ಕಾಡುವ ಸಮಸ್ಯೆಯೂ ಉಳಿದಿಲ್ಲ.. ಸುಖಾಸುಮ್ಮನೆ ಖಿನ್ನತೆ—ಸ್ವಾನುಕಂಪಗಳ ಚಪ್ಪಡಿಯನ್ನು ಮೇಲೆಳೆದುಕೊಂಡು ನಾನು ಮರುಗುತ್ತಿರುವುದು ಮೂರ್ಖತನ ಎನ್ನಿಸತೊಡಗಿತು.

ಹಾಗೆ ಮರುಗುವುದನ್ನೇ ಸುಖಿಸುತ್ತಾ ಕಾಲಹರಣ ಮಾಡುವುದನ್ನು ಬಿಟ್ಟು ಕೆಲ ತಿಂಗಳುಗಳಿಂದ ಹಿನ್ನೆಲೆಗೆ ಸರಿಸಿಬಿಟ್ಟಿರುವ ಓದಿನ ಕಡೆಗೆ ಗಮನ ಕೊಡಬೇಕು, ವಿನಾ ಕಾರಣ ಮನೆಯವರನ್ನು ನೋಯಿಸದೆ, ಮನೆಯ ಶಾಂತಿ ಕದಡದೆ ಅವರ ಮತ್ತು ನನ್ನ ಕನಸುಗಳ ಸಾಕಾರಕ್ಕೆ ಪ್ರಯತ್ನಿಸಬೇಕು.. ನಾನು ಬದಲಾಗಬೇಕು ಎಂದು ತೀರ್ಮಾನ ಮಾಡಿದೆ. ಹೀಗೊಮ್ಮೆ ಜ್ಞಾನೋದಯವಾಗುತ್ತಿದ್ದಂತೆಯೇ ಮನಸ್ಸು ಹಗುರಾತಿ ಹಗುರಾಗಿ ಹೋಯಿತು. ನಸು ನಗುತ್ತಾ ಕತ್ತೆತ್ತಿ ಆಗಸವನ್ನೊಮ್ಮೆ ದಿಟ್ಟಿಸಿದೆ. ಕಪ್ಪುಮೋಡಗಳ ಮರೆಯಲ್ಲಿ ಅಲ್ಲಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು. ಮತ್ತೊಮ್ಮೆ ಪ್ರೀತಿಯ ಹಸುಗಳ ಬಳಿ ಹೋಗಿ ಮನಸಾರೆ ಅವುಗಳನ್ನು ಮುದ್ದಿಸಿ ಅಣ್ಣ ಏಳುವುದನ್ನೇ ಕಾಯುತ್ತಾ ಅಲ್ಲೇ ಕುಳಿತೆ.

ಎಂದಿನಂತೆ ನಾಲ್ಕು ಗಂಟೆಗೇ ಎದ್ದ ಅಣ್ಣ ಸ್ನಾನ ಮುಗಿಸಿ ಬರುವುದನ್ನೇ ಕಾದಿದ್ದು ಅವರ ಕೋಣೆಗೆ ಹೋದೆ. ಅಣ್ಣ ಆಶ್ಚರ್ಯದಿಂದ-ಪ್ರಶ್ನಾರ್ಥಕವಾಗಿ ನನ್ನ ಮುಖವನ್ನೇ ದಿಟ್ಟಿಸಿದರು. ‘ನಾನು ನಿಮ್ಮ ಮಗನಾಗಿ ಈ ಮನೆಯವನಾಗಿಯೇ ಉಳಿಯುತ್ತೇನೆ ಅಣ್ಣಾ’ ಎಂದು ಹೇಳಿ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ನನ್ನ ಭುಜ ಹಿಡಿದು ಮೇಲೆತ್ತಿದ ಅಣ್ಣ ನನ್ನನ್ನು ತಬ್ಬಿಕೊಂಡು ತಲೆ ನೇವರಿಸಿದರು. ಆ ಅಭಯಹಸ್ತದ ಸ್ಪರ್ಶ ಮತ್ತಷ್ಟು ಭರವಸೆಯನ್ನು, ನೆಮ್ಮದಿಯನ್ನು ತಂದಿತು. ಇಬ್ಬರ ಕಣ್ಣುಗಳೂ ಹನಿಗೂಡಿದ್ದವು. ಮತ್ತಾವ ಮಾತುಕತೆಯೂ ನಮ್ಮ ನಡುವೆ ನಡೆಯಲಿಲ್ಲ. ಅದೇ ವೇಳೆಗೆ ಬೆಳಕು ಹರಿದು ಹೊಸ ಹುರುಪು-ಉತ್ಸಾಹದಿಂದ ಕಾಲೇಜ್ ಗೆ ಹೊರಡಲು ಸಿದ್ಧನಾದೆ.

ಅಂದಿನಿಂದ ಓದು ಒಂದು ತಪಸ್ಸಾಗಿ ಹೋಯಿತು. ಸಾಕಷ್ಟು ತರಗತಿಗಳನ್ನು ತಪ್ಪಿಸಿಕೊಂಡಿದ್ದರಿಂದ ಎಲ್ಲಿ ಹಾಜರಾತಿಯ ಸಮಸ್ಯೆ ಕಾಡುವುದೋ ಎಂದು ಆತಂಕವಾಗಿದ್ದರೂ ಮೇಷ್ಟ್ರುಗಳ ನೆರವಿನಿಂದ ಸಧ್ಯ ತೊಂದರೆಯಾಗಲಿಲ್ಲ. ಶೈಕ್ಷಣಿಕ ವರ್ಷದ ಕೊನೆಯ ಭಾಗವಾದ್ದರಿಂದ ಒಂದು ಪ್ರೌಢಪ್ರಬಂಧವನ್ನು ತರಗತಿಯಲ್ಲಿ ಮಂಡಿಸಬೇಕಿತ್ತು. ಆಗ ಗಿರೀಶ್ ಕಾರ್ನಾಡರ ತುಘಲಕ್ ನಾಟಕ ಹೇಗೆ ಕೆಲ ಪಾಶ್ಚಾತ್ಯ ನಾಟಕಗಳಿಂದ ಪ್ರಭಾವಿತವಾಗಿದೆ ಅನ್ನುವುದು ಬಹು ಚರ್ಚಿತವಾಗುತ್ತಿದ್ದ ವಿಷಯ. ನಾನು ನನ್ನ ಪ್ರಬಂಧಕ್ಕೆ ಅದೇ ವಿಷಯವನ್ನು ಆರಿಸಿಕೊಂಡೆ. ‘ಗಿರೀಶರ ತುಘಲಕ್ ಹಾಗೂ ಆಲ್ಬರ್ಟ್ ಕಾಮು ನ ಕಾಲಿಗುಲಾ: ಒಂದು ತೌಲನಿಕ ಸಮೀಕ್ಷೆ’- ಇದು ನನ್ನ ಪ್ರಬಂಧದ ವಿಷಯ. ಪ್ರಬಂಧದ ತಯಾರಿಗಾಗಿ ಕಾಮು-ಕಾಫ್ಕಾರ ಸಾಹಿತ್ಯವನ್ನು ವಿಶೇಷವಾಗಿ ಅಭ್ಯಸಿಸುವ ಅವಕಾಶ ಒದಗಿ ‘ಅಸಂಗತ’ ನಾಟಕ—ಸಾಹಿತ್ಯಗಳು ಆ ಸಂದರ್ಭದಲ್ಲಿ ಹೆಚ್ಚು ಆಪ್ತವಾದುದಲ್ಲದೇಹೊಸ ಹೊಳಹುಗಳನ್ನೂ ನೀಡಿದವು. ಪ್ರೀತಿಯ ಮೇಷ್ಟ್ರು ಮರುಳಸಿದ್ದಪ್ಪನವರ ಮಾರ್ಗದರ್ಶನದಲ್ಲಿ ನಾನು ಸಿದ್ಧಪಡಿಸಿ ಮಂಡಿಸಿದ ಪ್ರಬಂಧ ಅಧ್ಯಾಪಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಚಿದಾನಂದ ಮೂರ್ತಿಗಳು ಆ ನನ್ನ ಲೇಖನವನ್ನು ಬೆಂಗಳೂರು ವಿಶ್ವವಿದ್ಯಾಲಯದ ಪ್ರಕಟಣೆಯಾಗಿದ್ದ ‘ಸಾಧನೆ’ ನಿಯತಕಾಲಿಕದಲ್ಲಿ ಪ್ರಕಟಿಸಿದರು ಕೂಡಾ. ಇದು ಅಕ್ಷರಮಾಧ್ಯಮದಲ್ಲಿ ಪ್ರಕಟಗೊಂಡ ನನ್ನ ಮೊಟ್ಟಮೊದಲ ಲೇಖನವೂ ಹೌದು. ಆ ಮೊದಲೂ ಕೂಡಾ ನಮ್ಮ ತರಗತಿಯ ಸೆಮಿನಾರ್ ಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದೆ: ‘ಕನ್ನಡ ಸಾಹಿತ್ಯದಲ್ಲಿನ ಕೆಲ ಹಾಸ್ಯ ಪ್ರಸಂಗಗಳು’; ‘ದೆವ್ವದ ಕಥೆಗಳು’; ‘ಕುಕವಿ ನಿಂದೆ’… ಇತ್ಯಾದಿ. ಈ ಪ್ರಬಂಧಗಳಿಗೆ ಪ್ರಕಟಣೆಯ ಭಾಗ್ಯ ಒದಗದಿದ್ದರೂ ಅವುಗಳನ್ನು ಆಕಾಶವಾಣಿಯ ಯುವ ವಿಭಾಗದಲ್ಲಿ ಪ್ರಸ್ತುತ ಪಡಿಸಿದ್ದೆ. ಆಗ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿಯೋ ಉಪ ನಿರ್ದೇಶಕರಾಗಿಯೋ ಕಾರ್ಯ ನಿರ್ವಹಿಸುತ್ತಿದ್ದ ಎನ್.ಎಸ್.ಕೃಷ್ಣಮೂರ್ತಿಯವರು ಅನೇಕ ಚರ್ಚೆಗಳಲ್ಲಿಯೂ ಭಾಗವಹಿಸಲು ನನಗೆ ಅವಕಾಶ ನೀಡಿ ಪ್ರೋತ್ಸಾಹಿಸಿದ್ದರು. ಒಂದೊಂದೂ ಕಾರ್ಯಕ್ರಮಕ್ಕೆ 15-20 ರೂಪಾಯಿಗಳ ಸಂಭಾವನೆ ಕೂಡಾ ದೊರೆಯುತ್ತಿತ್ತು. ಕಾರ್ಯಕ್ರಮವನ್ನು ಮುಗಿಸಿ, ಆಕಾಶವಾಣಿಯವರು ನೀಡುತ್ತಿದ್ದ ಚೆಕ್ ಅನ್ನು ಏಜಂಟರ ಮೂಲಕ ಡಿಸ್ಕೌಂಟ್ ಮಾಡಿಸಿ ಜೇಬಿಗಿಳಿಸುತ್ತಿದ್ದ ಹಣ ನಾಲ್ಕಾರು ನಾಟಕ-ಸಿನೆಮಾಗಳ ಖರ್ಚು ತೂಗಿಸಲು ನೆರವಾಗುತ್ತಿತ್ತು! ಇರಲಿ…

ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಓದಿನಲ್ಲಿಯೇ ಮುಳುಗಿಹೋದೆ. ಕಾಲೇಜ್ ಲೈಬ್ರರಿಯ ರೆಫರೆನ್ಸ್ ವಿಭಾಗದಲ್ಲಿ ಗಂಟೆಗಟ್ಟಲೆ ಕುಳಿತು ಓದುತ್ತಿದ್ದೆ. ತೀರಾ ಆಯಾಸವೆನಿಸಿದಾಗ ಒಂದು ಸಿನೆಮಾ ನೋಡಿ ಬಂದುಬಿಡುತ್ತಿದ್ದೆ. ಒಂದಷ್ಟು ದಿನಗಳ ಇಂತಹ ಸತತ ಓದಿನಿಂದ ನನ್ನ ಆತ್ಮವಿಶ್ವಾಸವೂ ಹೆಚ್ಚಿತು. ಬೇರಾವ ಯೋಚನೆಗಳೂ ನನ್ನನ್ನು ಬಾಧಿಸದಂತೆ ಕಟ್ಟೆಚ್ಚರ ವಹಿಸುತ್ತಿದ್ದೆ. ಮನಸ್ಸು ವಿಚಲಿತಗೊಂಡು ಜಾರತೊಡಗಿದ ಕ್ಷಣವೇ ಮನೆಯವರ ಬಗ್ಗೆ, ಅಣ್ಣನ ಬಗ್ಗೆ ಚಿಂತಿಸತೊಡಗಿ ಹತೋಟಿ ಸಾಧಿಸಲು ಯತ್ನಿಸುತ್ತಿದ್ದೆ. ತುಂಬು ವಿಶ್ವಾಸದಿಂದ ಪರೀಕ್ಷೆಗಳನ್ನು ಬರೆದು ಮುಗಿಸಿದೆ.

ಫಲಿತಾಂಶಗಳು ಪ್ರಕಟವಾಗುವ ದಿನವೂ ಸಮೀಪಿಸಿತು. ಆಗೆಲ್ಲಾ ಇಂತಿಂತಹ ಪರೀಕ್ಷೆಯ ಫಲಿತಾಂಶಗಳು ಇಂತಹ ದಿನಾಂಕದಂದು ಇಂಥಲ್ಲಿ ಪ್ರಕಟವಾಗುತ್ತವೆ ಎಂಬ ಪ್ರಕಟಣೆ ಹೊರಡುತ್ತಿತ್ತೇ ವಿನಾ ಫಲಿತಾಂಶಗಳೇ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರಲಿಲ್ಲ. ನಮ್ಮ ಪರೀಕ್ಷಾ ಫಲಿತಾಂಶಗಳ ಪ್ರಕಟಣೆಯ ದಿನ ಸಮೀಪಿಸಿಯೇ ಬಿಟ್ಟಿತು. ಫಲಿತಾಂಶದ ಹಿಂದಿನ ರಾತ್ರಿ ಒಂದು ಕ್ಷಣದ ಮಟ್ಟಿಗೂ ನಿದ್ದೆ ಹತ್ತಿರವೂ ಸುಳಿಯಲಿಲ್ಲ. ಬೆಳಿಗ್ಗೆ 6 ಗಂಟೆಗೇ ಮನೆಯವರೆಲ್ಲರ ಶುಭ ಹಾರೈಕೆಗಳನ್ನು ಪಡೆದುಕೊಂಡು ಸೈಕಲ್ ಏರಿ ಕಾಲೇಜ್ ನತ್ತ ಹೊರಟೆ. ಸಣ್ಣಗೆ ಸೋನೆ ಮಳೆ ಸುರಿಯುತ್ತಿತ್ತು.

ಒಂದು ಸಣ್ಣ ಆತಂಕ ಬಾಧಿಸುತ್ತಿತ್ತು-ಏನಾಗಿರುತ್ತದೋ ಫಲಿತಾಂಶ… ವೇಗವಾಗಿ ಸೈಕಲ್ ತುಳಿದುಕೊಂಡು ಸಣ್ಣಮಳೆಯಲ್ಲಿ ನೆನೆಯುತ್ತಾ, ಛಳಿ-ಆತಂಕಗಳಿಗೆ ನಡುಗುತ್ತಾ ಮ್ಯಾಥಮ್ಯಾಟಿಕ್ಸ್ ವಿಭಾಗವನ್ನು ತಲುಪಿದೆ. ಅಲ್ಲಿಯೇ ನೋಟೀಸ್ ಬೋರ್ಡ್ ಮೇಲೆ ನಮ್ಮ ಫಲಿತಾಂಶಗಳ ಪಟ್ಟಿಯನ್ನು ಲಗತ್ತಿಸಿದ್ದರು. ನಮ್ಮ ತರಗತಿಯವರು ಯಾರೂ ಕಾಣಲಿಲ್ಲ. ನಡುನಡುಗುತ್ತಾ ನೋಟೀಸ್ ಬೋರ್ಡ್ ಸಮೀಪಿಸಿ ಭಯ-ಕಾತರದಿಂದ ಪಟ್ಟಿಯನ್ನು ನೋಡಿದೆ. ಮೆರಿಟ್ ಆಧಾರದ ಅನುಕ್ರಮಣಿಕೆಯಲ್ಲಿ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಪಟ್ಟಿಯಲ್ಲಿ ಮೊಟ್ಟಮೊದಲ ಸಂಖ್ಯೆ 748… ಅರೆ!! ನನ್ನದೇ ರಿಜಿಸ್ಟರ್ ನಂಬರ್! ಅಂದರೆ ನನಗೇ ಪ್ರಪ್ರಥಮ ಸ್ಧಾನ! ನಾನೇ FIRST RANK!! ಖುಷಿ ತಡೆಯಲಾರದೇ ಒಮ್ಮೆ ‘ಹೋ’ ಎಂದು ಚೀರಿದೆ! ಮತ್ತೆ ವೇಗವಾಗಿ ಸೈಕಲ್ ತುಳಿದುಕೊಂಡು ಬಂದು ಮನೆ ತಲುಪಿ ‘ಫಸ್ಟ್ rank’ ಎಂದು ಕೂಗುತ್ತಲೇ ಒಳಗೋಡಿದೆ. ನನ್ನ ಬರವನ್ನೇ, ನಾನು ತರುವ ಸಿಹಿಸುದ್ದಿಯನ್ನೇ ಕಾಯುತ್ತಿದ್ದ ಮನೆಯವರೆಲ್ಲರಿಗೂ ಖುಷಿಯೋ ಖುಷಿ! ‘ಮೊದಲು ಏನಾದರೂ sweet ಮಾಡಿಬಿಡ್ತೀನಿ’ ಎಂದು ಅಮ್ಮ ಅಡಿಗೆ ಮನೆಗೆ ಧಾವಿಸಿದರು. ಅಣ್ಣನ ಮುಖದಲ್ಲಂತೂ ಕೈತಪ್ಪಿ ಹೋಗುವಂತಾಗಿದ್ದ ಮಗ ಇಷ್ಟರಮಟ್ಟಿಗೆ ಬದಲಾದನಲ್ಲಾ ಎಂಬ ಸಮಾಧಾನದ ಭಾವ ಹೊಡೆದುಕಾಣುತ್ತಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: