ಶ್ರೀನಿವಾಸ ಪ್ರಭು ಅಂಕಣ: ಎಂಥೆಂಥಾವರು ನಮ್ಮ ಸುತ್ತ ಇರ್ತಾರೆ ಅನ್ನೋದು ಗೊತ್ತಿರಲಿ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 110
——————
‘ಆಸರೆ’ ಉದಯ ಟಿ ವಿ ಯಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಪ್ರಸಾರವಾಗುತ್ತಿತ್ತು. ನನಗೆ ಸಹ ನಿರ್ದೇಶಕರಾಗಿ ತಿಮ್ಮಣ್ಣ ಗೌಡ , ಅಶೋಕ್ ಜೈನ್ ಹಾಗೂ ಸಂಧ್ಯಾ ಶಾಸ್ತ್ರಿ ಅವರುಗಳು, ಸಂಚಿಕೆ ನಿರ್ದೇಶಕರಾಗಿ ಕಲ್ಯಾಣ್ ರಾಜ್ ಗೊಬ್ಬೂರ್ ಕರ್ ಅವರು ಜವಾಬ್ದಾರಿ ಹೊತ್ತಿದ್ದರು. ರಮೇಶ್ ದೇಸಾಯಿ ಅವರು ಕಲಾ ನಿರ್ದೇಶಕರಾಗಿದ್ದರು; ನಾಗರಾಜ ಆದವಾನಿಯವರು ಛಾಯಾಗ್ರಹಣದ ಹೊಣೆ ಹೊತ್ತಿದ್ದರು; ದಾಸ್ ಹಾಗೂ ರಮೇಶ್ ಬಾಬು ನಿರ್ಮಾಣದ ಮೇಲ್ವಿಚಾರಣೆ ವಹಿಸಿಕೊಂಡಿದ್ದರು.

‘ಆಸರೆ..ಆಸರೆ..’ ಎಂದೇ ಆರಂಭವಾಗುತ್ತಿದ್ದ ಸೊಗಸಾದ ಶೀರ್ಷಿಕೆ ಗೀತೆಯನ್ನು ಗೆಳೆಯ ವ್ಯಾಸರಾವ್ ಬರೆದುಕೊಟ್ಟಿದ್ದ. ವಿ.ಮನೋಹರ್ ಅವರು ಅತ್ಯಂತ ಆಕರ್ಷಕವಾಗಿ ಆ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದರು. ನಂದಿತಾ ಅವರ ಇನಿದನಿಯಲ್ಲಿ ‘ಆಸರೆ’ ಶೀರ್ಷಿಕೆ ಗೀತೆ ಸೊಗಸಾಗಿ ಮೂಡಿಬಂದಿತ್ತು. ಬನ್ನೇರಘಟ್ಟ ರಸ್ತೆಯಲ್ಲಿ ಒಂದು ದೊಡ್ಡ ಮನೆಯನ್ನು ಚಿತ್ರೀಕರಣಕ್ಕಾಗಿ ಬಾಡಿಗೆಗೆ ಹಿಡಿದಿದ್ದೆವು. ಸಂಕಲನ ಕಾರ್ಯವೂ ಅಲ್ಲೇ ನಡೆಯುತ್ತಿತ್ತು. ಪ್ರಸಾರ ಆರಂಭವಾದ ಕೆಲವೇ ದಿನಗಳಲ್ಲಿ ‘ಆಸರೆ’ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಾಗ ನಮ್ಮ ಖುಷಿಗೆ ಪಾರವೇ ಇಲ್ಲ!

ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತಾದರೂ ಪ್ರತಿ ಕಂತಿಗೆ ಹಿನ್ನೆಲೆ ಸಂಗೀತವನ್ನು ನೀಡಲು ಸಮರ್ಥರಾದವರು ದೊರೆಯದೆ ಕಷ್ಟವಾಗುತ್ತಿತ್ತು. ಆ ಸಂದರ್ಭದಲ್ಲಿ ‘ಆಸರೆ’ ಕುಟುಂಬಕ್ಕೆ ಸೇರ್ಪಡೆಯಾದವರು ಪ್ರವೀಣ್ ಡಿ ರಾವ್. ಇಂದು ದೇಶ ವಿದೇಶಗಳಲ್ಲಿ ಖ್ಯಾತರಾಗಿರುವ ಪ್ರವೀಣ್ ಡಿ ರಾವ್ ಅವರದು ಬಹುಮುಖೀ ದೈತ್ಯ ಪ್ರತಿಭೆ. ಹತ್ತಾರು ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸಬಲ್ಲರು; ಸೊಗಸಾಗಿ ಹಾಡಬಲ್ಲರು; ಅದ್ಬುತವಾಗಿ ಸ್ವರ ಸಂಯೋಜನೆ ಮಾಡಬಲ್ಲರು; ಭಾರತೀಯ ಶಾಸ್ತ್ರೀಯ ಸಂಗೀತದಿಂದ ಪಾಶ್ಚಾತ್ಯ ಸಂಗೀತದವರೆಗೆ ಎಲ್ಲ ಬಗೆಯ ಸಂಗೀತ ಪ್ರಕಾರಗಳನ್ನು ಅಧ್ಯಯನ ಮಾಡಿ ಅಗತ್ಯಗಳಿಗೆ ತಕ್ಕಂತೆ ಅವನ್ನು ಅಳವಡಿಸಿಕೊಳ್ಳಬಲ್ಲರು!

ಅವರು ಆ ದಿನಗಳಲ್ಲಿ ನಮ್ಮ ‘ಆಸರೆ’ ಗೆ ಬಂದದ್ದು ನಮಗೆ ಆನೆ ಬಲ ಬಂದಂತಾಗಿಹೋಗಿತ್ತು! ದೃಶ್ಯಗಳನ್ನು ಅರ್ಥೈಸಿಕೊಂಡು ಅವರು ಸಂಗೀತ ಸಂಯೋಜಿಸುತ್ತಿದ್ದ ಪರಿಗೆ ನಾನು ಮಾರುಹೋಗಿದ್ದೆ. ಅಷ್ಟೇ ಅಲ್ಲ, ಅಭಿನಯದಲ್ಲಿಯೂ ಅವರಿಗೆ ಆಸಕ್ತಿ ಇದ್ದುದನ್ನು ಗಮನಿಸಿ ಪತ್ರಿಕಾ ಸಂಪಾದಕನ ಒಂದು ವಿಶೇಷ ಪಾತ್ರವನ್ನೂ ಅವರಿಗೆ ನೀಡಿದ್ದೆ! ಬಹುಶಃ ಧಾರಾವಾಹಿ ಕ್ಷೇತ್ರದಲ್ಲಿ ನಟನಾಗಿ ಅದು ಅವರ ಮೊದಲ ಹೆಜ್ಜೆ ಇದ್ದಿರಬೇಕು! ‘ಆಸರೆ’ಯ ಮೂಲಕ ನನ್ನ ಆತ್ಮೀಯ ವಲಯಕ್ಕೆ ಸೇರ್ಪಡೆಯಾದ ಒಬ್ಬ ಅಪರೂಪದ ಸೃಜನಾತ್ಮಕ ಕಲಾವಿದ ಪ್ರವೀಣ್ ಡಿ ರಾವ್.

‘ಆಸರೆ’ಯ ಮೂಲಕ ನನಗೆ ತುಂಬಾ ಹತ್ತಿರವಾದ ಮತ್ತೊಬ್ಬ ಪ್ರತಿಭಾವಂತ ಸ್ನೇಹಶೀಲ ಸಜ್ಜನ ಶಿರೋಮಣಿ ಎಂದರೆ ಕೆ ಎಸ್ ಶ್ರೀಧರ್ ಅಲಿಯಾಸ್ ಚಿದು. ರಂಗಭೂಮಿಯಲ್ಲಿ ಸಕ್ರಿಯನಾಗಿದ್ದ ಚಿದು ಮೊದಲೇ ನನಗೆ ಪರಿಚಿತನಾಗಿದ್ದರೂ ತುಂಬಾ ಹತ್ತಿರದವನಾಗಿದ್ದು ‘ಆಸರೆ’ಯ ಮೂಲಕ. ನಟನಾಗಿ ಮಾತ್ರವೇ ಅಲ್ಲ, ಸಂಕಲನಕಾರನಾಗಿಯೂ ಚಿದು ದೊಡ್ಡ ಹೆಸರು ಮಾಡಿದ್ದ. ‘ಕಾನೂರು ಹೆಗ್ಗಡಿತಿ’ ಧಾರಾವಾಹಿಯ ಸಂಕಲನವನ್ನು ಸೊಗಸಾಗಿ ಮಾಡಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದ ಚಿದು. ಮುಂದಿನ ದಿನಗಳಲ್ಲಿ ಪ್ರವೀಣ್ ಹಾಗೂ ಚಿದು—ಈ ಇಬ್ಬರೂ ಪ್ರತಿಭಾವಂತರೊಂದಿಗೆ ಬಗೆಬಗೆಯ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಸುವರ್ಣಾವಕಾಶ ಪ್ರಾಪ್ತವಾಗಿದ್ದು ನನ್ನ ಅದೃಷ್ಟ.

‘ಆಸರೆ’ ಧಾರಾವಾಹಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡು ನೂರು ಕಂತುಗಳನ್ನು ಪೂರೈಸಿ ಮುಂದುವರಿಯುತ್ತಿತ್ತು. ರಾಮಚಂದ್ರ, ವ್ಯಾಸರಾವ್ ಹಾಗೂ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರುಗಳೊಂದಿಗೆ ಆಗಾಗ್ಗೆ ಕುಳಿತು ಕಥೆಯನ್ನು ಬೆಳೆಸುವುದರ ಬಗೆಗೆ ಚರ್ಚಿಸುತ್ತಿದ್ದೆ. ಅದರ ಆಧಾರದ ಮೇಲೆ ಅವರುಗಳು ಚಿತ್ರಕಥೆಯನ್ನು ರೂಪಿಸಿ ಸಂಭಾಷಣೆ ಸಹಿತವಾಗಿ ಸಿದ್ಧಪಡಿಸಿಕೊಡುತ್ತಿದ್ದರು. ನನಗೆ ನೆನಪಿದೆ: ಪ್ರಸಿದ್ಧ ಸಂಗೀತ ನಿರ್ದೇಶಕ ಸಿ.ಅಶ್ವಥ್ ಅವರ ಸಮೀಪದ ಒಡನಾಟವಿದ್ದ ಬಾಲು, ಅಶ್ವಥ್ ಅವರು ಹೇಳುತ್ತಿದ್ದ ಅನೇಕ ರಸವತ್ತಾದ ಪ್ರಸಂಗಗಳನ್ನು ದೃಶ್ಯರೂಪಕ್ಕೆ ಅಳವಡಿಸಿಕೊಡುತ್ತಿದ್ದ! ವ್ಯಾಸರಾವ್ ಅನೇಕ ಕವಿತೆಗಳನ್ನು ದೃಶ್ಯಗಳಲ್ಲಿ ಸೊಗಸಾಗಿ ಹೊಂದಿಕೆಯಾಗುವಂತೆ ಸೇರಿಸಿ ಚಿತ್ರಕಥೆ ಸಿದ್ಧಪಡಿಸುತ್ತಿದ್ದ. ಕೆಲವೊಮ್ಮೆ ಪ್ರವೀಣ್ ಡಿ ರಾವ್ ಅವರೇ ಈ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ, ತಾವೇ ಹಾಡಿ, ತಮ್ಮ ಸ್ಟುಡಿಯೋದಲ್ಲಿಯೇ ರಿಕಾರ್ಡಿಂಗ್ ಅನ್ನೂ ಮಾಡಿಕೊಟ್ಟುಬಿಡುತ್ತಿದ್ದರು. ‘ಆಸರೆ’ಯ ಒಂದು ಪ್ರಮುಖ ಸ್ತ್ರೀ ಪಾತ್ರ ಆಗಾಗ್ಗೆ ಚಿತ್ರವಿಚಿತ್ರ ಕನಸುಗಳನ್ನು ಕಾಣುವ ಪ್ರವೃತ್ತಿಯ ಪಾತ್ರ. ಆ ಕನಸಿನ ದೃಶ್ಯಗಳನ್ನು ಮೈನವಿರೇಳಿಸುವ ರೀತಿಯಲ್ಲಿ ರಾಮಚಂದ್ರ ಹೆಣೆದುಕೊಡುತ್ತಿದ್ದ. ಆ ದೃಶ್ಯಗಳ ಚಿತ್ರೀಕರಣವೇ ಒಂದು ದೊಡ್ಡ ಸವಾಲಾಗಿತ್ತು ನನಗೆ!

ಕಥಾಹಂದರವನ್ನು ವಿಸ್ತರಿಸುತ್ತಿದ್ದಾಗ ಸಹಜವಾಗಿಯೇ ಕೆಲ ಹೊಸ ಮುಖ್ಯ ಪಾತ್ರಗಳು ಸೃಷ್ಟಿಯಾಗುತ್ತಿದ್ದವು. ಒಮ್ಮೆ ಹಾಗಾದಾಗ ಗೆಳೆಯ ವ್ಯಾಸರಾವ್ ಗೆ ಇದ್ದಕ್ಕಿದ್ದ ಹಾಗೆ ಒಂದು ಅಮೋಘ ಆಲೋಚನೆ ನುಗ್ಗಿ ಬಂತು: ಒಂದು ಮುಖ್ಯಪಾತ್ರ ನಿರ್ವಹಿಸಲು ಪ್ರಸಿದ್ಧ ಚಿತ್ರನಟ ಶ್ರೀನಾಥ್ ಅವರನ್ನೇಕೆ ವಿನಂತಿಸಬಾರದು ಎಂದ ವ್ಯಾಸ! ವ್ಯಾಸ ಹಾಗೂ ಶ್ರೀನಾಥ್ ಅವರು ಆತ್ಮೀಯ ಗೆಳೆಯರಾದ್ದರಿಂದ ಅವರನ್ನು ಸಂಪರ್ಕಿಸುವುದು ಕಷ್ಟವೇನಾಗಲಿಲ್ಲ. ಅವರೂ ಸಹಾ ಹೆಚ್ಚೇನೂ ಪ್ರಶ್ನೆಗಳನ್ನು ಕೇಳದೆ ಒಂದಿಷ್ಟೂ ಬಿಂಕ ತೋರದೆ ನಮ್ಮ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡೇಬಿಟ್ಟರು! ಅವರೊಟ್ಟಿಗೂ ಎರಡು ಮೂರು ದಿನಗಳ ಚಿತ್ರೀಕರಣವನ್ನು ಮಾಡಿ ಮುಗಿಸಿದೆವು. ಶ್ರೀನಾಥ್ ಅವರದೂ ಸಹಾ ಒಂದಿಷ್ಟೂ ಬಿಂಕ ಬಿಗುಮಾನಗಳಿಲ್ಲದ ಸರಳ ಸುಸಂಸ್ಕೃತ ವ್ಯಕ್ತಿತ್ವ. ಒಬ್ಬ ದೊಡ್ಡ ಸ್ಟಾರ್ ನಟರೊಟ್ಟಿಗೆ ಕೆಲಸ ಮಾಡುತ್ತಿದ್ದೇವೆಂದು ಚಣಮಾತ್ರಕ್ಕೂ ನಮಗನ್ನಿಸಲಿಲ್ಲ. ಎಲ್ಲರೊಂದಿಗೂ ನಗುನಗುತ್ತಾ ಮಾತಾಡುತ್ತಾ ಬಿಡುವಿನ ಸಮಯದಲ್ಲಿ ನೆನಪಿನ ಬುತ್ತಿಯನ್ನು ಬಿಚ್ಚಿ ಅವರ ಚಿತ್ರರಂಗದ ಅಪರೂಪದ ಅನುಭವಗಳನ್ನು ಬಲು ರಸವತ್ತಾಗಿ ಹಂಚಿಕೊಳ್ಳುತ್ತಿದ್ದರು. ಅವರೊಟ್ಟಿಗೆ ಕೊಂಚ ಸಮಯದ ಮಟ್ಟಿಗಾದರೂ ಕೆಲಸ ಮಾಡಿದ್ದು ಒಂದು ಸ್ಮರಣೀಯ ಅನುಭವ.

ಸಮರ್ಥ ಬರವಣಿಗೆ, ಕಲಾವಿದರೆಲ್ಲರ ಪ್ರಬುದ್ಧ ಅಭಿನಯ, ಸೊಗಸಾದ ಸಂಗೀತ, ಅದ್ಭುತ ಛಾಯಾಗ್ರಹಣ.. ಇದೆಲ್ಲದರಿಂದಾಗಿ ‘ಆಸರೆ’ಗೆ ಒಂದು ವಿಶಿಷ್ಟ ಸ್ಥಾನ ದೊರೆತು ನಾವೆಲ್ಲರೂ ಪರಮ ಸಂತೋಷದಿಂದ ಕೆಲಸದಲ್ಲಿ ತೊಡಗಿದ್ದೆವು.

ಆದರೆ ಯಾವ ಸಂತೋಷವೂ ಬಹುಕಾಲ ಉಳಿಯಬಾರದೆಂದು ಒಂದು ಅಲಿಖಿತ ನಿಯಮ ನನ್ನ ಬಾಳಿಗಂಟಿದ್ದಿರಬೇಕು…. ‘ಆಸರೆ’ ಇನ್ನೂರರ ಗಡಿಗೆ ಬರುತ್ತಿದ್ದಂತೆ ನಿರ್ಮಾಣ ಸಂಸ್ಥೆಯಾಗಿದ್ದ ಮಲ್ಟಿ ಛಾನಲ್ ನ ಮೂವರು ಪಾಲುದಾರರಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಭಿನ್ನಾಭಿಪ್ರಾಯಗಳು ಮೊಳಕೆ ಒಡೆಯತೊಡಗಿದವು. ನಾವೆಲ್ಲರೂ ಎಷ್ಟೇ ಪ್ರಯತ್ನ ಪಟ್ಟರೂ ಏನೂ ಸರಿ ಹೋಗದೆ ಯಶಸ್ವಿ ಧಾರಾವಾಹಿಯೆಂಬ ಹಣೆಪಟ್ಟಿ ಧರಿಸಿಕೊಳ್ಳುವ ಹೊಸ್ತಿಲಲ್ಲಿದ್ದ ‘ಆಸರೆ’ ಧಾರಾವಾಹಿ ಆಸರೆ ತಪ್ಪಿ ಗೋಣುಮುರಿದುಕೊಂಡು ನೆಲ ಕಚ್ಚಿಬಿಟ್ಟಿತು.

ಎಂಥೆಂಥಾ ವಿಚಿತ್ರಗಳು ನಮ್ಮ ಈ ರಂಗದಲ್ಲಿ ಘಟಿಸುತ್ತವೆಂದರೆ ‘ಆಸರೆ’ ತಪ್ಪಿಹೋದ ಸಂಕಟದಲ್ಲಿ ನಾವು ಕೊರಗುತ್ತಿದ್ದಾಗಲೇ,”ಅತ್ತು ಕೆಂಪಾಗಿದ್ದ ಕಣ್ಣುಗಳು ಶುಭ್ರವಾಗುವ ಮೊದಲು” (ಹ್ಯಾಮ್ಲೆಟ್ ನಾಟಕದ ಮಾತು) ಒಂದು ಒಳ್ಳೆಯ ಸುದ್ದಿ ಬಂದಿತು! ಮಲ್ಟಿ ಛಾನಲ್ ನಿರ್ಮಾಣ ಸಂಸ್ಥೆಯ ಒಬ್ಬ ಪಾಲುದಾರರು ಇಡೀ ಸಂಸ್ಥೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಮತ್ತೆ ‘ಆಸರೆ’ಗೆ ಜೀವ ತುಂಬುವ ಉತ್ಸಾಹ ತೋರಿದರು! ಅವರ ಉದ್ದೇಶವಾದರೂ, ‘ಅದುವರೆಗೆ ಪ್ರಸಾರವಾಗಿದ್ದ ಎಲ್ಲ ಕಂತುಗಳನ್ನೂ ಮರು ಪ್ರಸಾರ ಮಾಡಿ ಅನಂತರ ಹಾಗೆಯೇ ಧಾರಾವಾಹಿಯನ್ನು ಮುಂದುವರಿಸಿಕೊಂಡು ಹೋಗುವುದು’ ಎಂಬುದಾಗಿತ್ತು. ನಾವೂ ಬಹಳ ಉತ್ಸಾಹದಿಂದ ಮತ್ತೆ ಒಟ್ಟು ಸೇರಿ ಕಥೆಯನ್ನು ಮುಂದೆ ಹೇಗೆ ಬೆಳೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಿ ಒಂದು ಸ್ಥೂಲ ಕಥಾಹಂದರವನ್ನು ಸಿದ್ಧಪಡಿಸಿದೆವು.

‘ಆಸರೆ’ಯ ಮರುಪ್ರಸಾರ ಆರಂಭವಾಗಿಯೇಬಿಟ್ಟಿತು! ಸಿದ್ಧವಾಗಿದ್ದ ಕಂತುಗಳ ಮರುಪ್ರಸಾರ ಮುಗಿಯುವ ಮೊದಲು ಇನ್ನಷ್ಟು ಕಂತುಗಳನ್ನು ಸಿದ್ಧಪಡಿಸಿಕೊಳ್ಳಬೇಕೆಂಬುದು ನಮ್ಮ ಆಲೋಚನೆಯಾಗಿತ್ತು. ಅಲ್ಲಿ ಮತ್ತೊಂದು ಆಘಾತ ಎದುರಾಗಿತ್ತು ನಮಗೆ! ಅದುವರೆಗೆ ಅತ್ಯುತ್ಸಾಹದಿಂದ ನಮ್ಮ ಜೊತೆಗೆ ಮಾತುಕತೆಯಾಡುತ್ತಿದ್ದ ನಿರ್ಮಾಪಕ ಮಹೋದಯರು ಸಿದ್ಧ ಕಂತುಗಳ ಮರುಪ್ರಸಾರ ಮುಗಿಯುತ್ತಾ ಬಂದಂತೆ ಇದ್ದಕ್ಕಿದ್ದಂತೆ ತಣ್ಣಗಾಗಿಬಿಡುವುದೇ! ಮರುಪ್ರಸಾರದಲ್ಲಿಯೂ ಒಂದಷ್ಟು ಹಣ ಅವರಿಗೆ ಬಂದಿದ್ದಿರಬೇಕು.. ಅದನ್ನು ಜೇಬಿಗೆ ಹಾಕಿಕೊಂಡವರೇ ನಮಗೆ ‘ತಾರಮ್ಮಯ್ಯ’ ಆಡಿಸಿಬಿಟ್ಟರು!

ನಾವೋ, ಮರುಪ್ರಸಾರದ ಸಮಯದಲ್ಲಿ ಧಾರಾವಾಹಿಯನ್ನು ಮತ್ತಷ್ಟು ಚಂದವಾಗಿಸಲು ಒಂದಿಷ್ಟು ಬದಲಾವಣೆಗಳನ್ನು ಸಂಕಲನ ಕೇಂದ್ರದಲ್ಲಿ ಮಾಡಿಕೊಂಡಿದ್ದೆವು. ಆ ಕಾರ್ಯಕ್ಕಾಗಿ ಕೊಡಬೇಕಾಗಿದ್ದ ಹಣವನ್ನು ಮುಂದಿನ ಕಂತುಗಳ ನಿರ್ಮಾಣ ಕಾರ್ಯ ಶುರುವಾಗುತ್ತಿದ್ದಂತೆ ಚುಕ್ತಾ ಮಾಡುತ್ತೇವೆಂದು ವಿನಂತಿಸಿಕೊಂಡಿದ್ದೆವು. ಈಗ ನೋಡಿದರೆ ಆಸರೆ ಮುಂದುವರಿಯುವ ಸಾಧ್ಯತೆಯೇ ಕ್ಷೀಣವಾಗಿ ಹೋಗಿದೆ! ಹೋಗಲಿ ಸಂಕಲನ ಕೇಂದ್ರದ ಬಾಕಿ ಹಣವನ್ನಾದರೂ ತೀರಿಸಿಬಿಡಿರೆಂದು ನಿರ್ಮಾಪಕರನ್ನು ಕೇಳಿಕೊಂಡರೆ ಅವರು, ಮರುಪ್ರಸಾರಕ್ಕೆ ಮತ್ತೆ ಹಣ ಖರ್ಚು ಮಾಡಿದ್ದು ನಿಮ್ಮ ತಪ್ಪಲ್ಲವೇ ಎಂದು ನಮ್ಮ ತಲೆಯ ಮೇಲೇ ಗೂಬೆ ಕೂರಿಸಿದರು. ನಾವು ಏನೇ ಮಾಡಿದ್ದರೂ ಅದು ಧಾರಾವಾಹಿಗೋಸ್ಕರವೇ ಹೊರತು ನಮ್ಮ ಸ್ವಂತಕ್ಕಲ್ಲ, ನೀವು ಈ ಬಾಕಿ ತೀರಿಸದಿದ್ದರೆ ನಮಗೆ ತೊಂದರೆಯಾಗುತ್ತದೆ ಎಂದು ನಾವು ನಮ್ಮ ಕಷ್ಟಗಳ ಬಗ್ಗೆ ಅವರ ಬಳಿ ಹೇಳಿಕೊಳ್ಳಹೋದರೆ ಅವರು ನಮ್ಮ ಮುಂದೆ ಅವರ ಕಷ್ಟಗಳ ಪಟ್ಟಿಯನ್ನೇ ಬಿಚ್ಚಿಟ್ಟು ನಮ್ಮ ಬಾಯಿ ಮುಚ್ಚಿಸಿಬಿಟ್ಟರು! ಹೀಗೆ ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅನ್ನುವಂತೆ ‘ಆಸರೆ’ ಧಾರಾವಾಹಿಯನ್ನು ಮುಂದುವರಿಸುವ ಆಸೆಗಳೆಲ್ಲವೂ ಕಮರಿಹೋದವು.

ಆ ದಿನಗಳಲ್ಲಿ ದೂರದರ್ಶನಕ್ಕಾಗಿ ಒಂದು ಅಥವಾ ಎರಡು ಎಪಿಸೋಡ್ ಗಳ ಕಾರ್ಯಕ್ರಮಗಳನ್ನು ನಿರ್ಮಿಸಿಕೊಡಬಹುದಿತ್ತು. ಅಂತಹ ಕಾರ್ಯಕ್ರಮಗಳ ಪ್ರಸಾರಕ್ಕಾಗಿಯೇ ಒಂದು ಸಮಯವೂ ನಿರ್ಧರಿತವಾಗಿತ್ತು. ಅಂಥ ಅನೇಕ ಎಪಿಸೋಡ್ ಗಳಲ್ಲಿ ಅಭಿನಯದ ಅವಕಾಶ ನನಗೆ ಒದಗಿ ಬಂದಿತು. ನಿಧಾನವಾಗಿ ಕಿರುತೆರೆ ಕ್ಷೇತ್ರದಲ್ಲಿ ಒಬ್ಬ ಬೇಡಿಕೆಯ ನಟನಾಗಿ ನಾನು ರೂಪುಗೊಳ್ಳುತ್ತಿದ್ದೆ. ಈ ಸಮಯದಲ್ಲೇ ಬಂದ ಮತ್ತೊಂದು ಸಂತಸದ ಸುದ್ದಿ ಅಂದರೆ ‘ಈಟಿವಿ ಕನ್ನಡ’ ಎಂಬ ಹೊಸ ವಾಹಿನಿಯೊಂದು ಸಧ್ಯದಲ್ಲಿಯೇ ಪ್ರಾರಂಭವಾಗುತ್ತಿದೆ ಅನ್ನುವುದು!

ಪ್ರಸಿದ್ಧ ನಿರ್ಮಾಪಕ ರಾಮೋಜಿರಾವ್ ಅವರ ಕನಸಿನ ಸ್ಟುಡಿಯೋ ಹೈದರಾಬಾದ್ ನಲ್ಲಿ ಕಾರ್ಯಾರಂಭ ಮಾಡಿ ಚಿತ್ರನಿರ್ಮಾಪಕರನ್ನು ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿತ್ತು. ಅದರ ಜೊತೆಜೊತೆಗೇ ರಾಮೋಜಿರಾವ್ ಅವರು ಹಲವಾರು ಪ್ರಾದೇಶಿಕ ವಾಹಿನಿಗಳನ್ನೂ ವಿಜೃಂಭಣೆಯಿಂದ ಆರಂಭಿಸಿ ಆ ವಾಹಿನಿಗಳ ಬಹುತೇಕ ಧಾರಾವಾಹಿಗಳ—ಕಾರ್ಯಕ್ರಮಗಳ ಚಿತ್ರೀಕರಣ ಹೈದರಾಬಾದ್ ನ ಸ್ಟುಡಿಯೋಗಳಲ್ಲಿಯೇ ನಡೆಯುವಂತೆ ರೂಪುರೇಷೆಗಳನ್ನು ಸಿದ್ಧಪಡಿಸಿದರು.

ಈಟಿವಿ ಕನ್ನಡ ವಾಹಿನಿಯ ಮುಖ್ಯಸ್ಥರಾಗಿ ಆಯ್ಕೆಯಾದವರು ಪವನ್ ಕುಮಾರ್ ಮಾನ್ವಿಯವರು. ಧಾರಾವಾಹಿಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದವನು ರಂಗಭೂಮಿಯ ಗೆಳೆಯ ಸುರೇಂದ್ರನಾಥ್ ಅಲಿಯಾಸ್ ಸೂರಿ. ಈ ಇಬ್ಬರೂ ನನಗೆ ಪರಿಚಿತರಾದವರೇ ಆದ್ದರಿಂದ ಈಟಿವಿಯಲ್ಲಿ ಕೆಲ ಕಾರ್ಯಕ್ರಮಗಳನ್ನು ರೂಪಿಸಲು, ಅಲ್ಲಿನ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಲು ಅವಕಾಶ ದೊರೆಯುತ್ತದೆಂಬ ವಿಶ್ವಾಸವಿತ್ತು. ಆ ನಿಟ್ಟಿನಲ್ಲಿ ಒಂದಷ್ಟು ಮಾತುಕತೆಗಳೂ ನಡೆದು ಕೆಲವು ಕಾರ್ಯಕ್ರಮಗಳೂ ನಿಗದಿಯಾದವು. ಆ ವಿವರಗಳಿಗೆ ಮುಂದಿನ ಪುಟಗಳಲ್ಲಿ ಬರುತ್ತೇನೆ.

ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಾನು ವಿಶೇಷವಾಗಿ ಪಾಲ್ಗೊಳ್ಳುತ್ತಿದ್ದರೂ ಅಲ್ಲೊಂದು ಇಲ್ಲೊಂದು ಚಲನಚಿತ್ರದಲ್ಲೂ ನಟಿಸಲು ಅವಕಾಶಗಳು ಬರುತ್ತಿದ್ದವು. ಹಾಗೆ ಅರಸಿಕೊಂಡು ಬಂದ ಒಂದು ಸುವರ್ಣಾವಕಾಶವೆಂದರೆ ಕೆ.ವಿ. ರಾಜು ಅವರ ‘ರಾಷ್ಟ್ರಗೀತೆ’. ಕೆ.ಮಂಜು ಅವರು ಈ ಚಿತ್ರದ ನಿರ್ಮಾಪಕರು. ಸಾಯಿಕುಮಾರ್ ಅವರು ನಾಯಕನಾಗಿಯೂ ವಿನೋದ್ ರಾಜ್ ಅವರು ಎರಡನೆಯ ನಾಯಕನಾಗಿಯೂ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದರು. ಒಂದು ದಿನ ರಾಜು ಅವರೇ ಖುದ್ದು ಫೋನ್ ಮಾಡಿ ‘ ಈಗಲೇ ಟೂರಿಸ್ಟ್ ಹೋಟಲ್ ಗೆ ಬಂದುಬಿಡಯ್ಯಾ’ ಎಂದಾಗ ನನಗೆ ಖುಷಿಯೋ ಖುಷಿ! ರವಿಚಂದ್ರನ್ ಅವರ ‘ಸಂಗ್ರಾಮ’ ಚಿತ್ರದ ಡಬ್ಬಿಂಗ್ ಸಂದರ್ಭದಲ್ಲಿಯೇ ರಾಜು ಅವರನ್ನು ಭೇಟಿಯಾಗಿದ್ದ ಪ್ರಸಂಗವನ್ನು ಈ ಹಿಂದೆ ನೆನಪಿಸಿಕೊಂಡಿದ್ದೇನೆ. ಈ ಬಾರಿ ಪಾತ್ರಕ್ಕಾಗಿ ಕರೆದಿದ್ದಾರೆ! ಆ ಸಮಯದಲ್ಲಿ ರಾಜು ನಿರ್ದೇಶಿಸುತ್ತಾರೆಂದರೆ ಆ ಚಿತ್ರ ಖಂಡಿತ ಯಶಸ್ವಿಯಾಗುತ್ತದೆನ್ನುವುದು ಜನಜನಿತ ಮಾತಾಗಿತ್ತು.

ನಮ್ಮ ಚಿತ್ರರಂಗದಲ್ಲಿ ಒಂದು ಸೂಪರ್ ಹಿಟ್ ಚಲನಚಿತ್ರದಲ್ಲಿ ಒಂದು ಗಮನಾರ್ಹ ಪಾತ್ರ ಸಾಕು ಒಬ್ಬ ನಟನ ಅದೃಷ್ಟದ ಬಾಗಿಲು ತೆರೆಯಲು! ನಾನೂ ಹಲವು ಕನಸುಗಳೊಂದಿಗೆ ಕೆ.ವಿ.ರಾಜು ಅವರನ್ನು ಭೇಟಿಯಾಗಲು ಟೂರಿಸ್ಟ್ ಹೋಟಲಿಗೆ ಹೋದೆ. ಆತ್ಮೀಯವಾಗಿ ಸ್ವಾಗತಿಸಿದ ರಾಜು, “ನನ್ನ ಪಿಕ್ಚರ್ ನಲ್ಲಿ main villain ಪಾರ್ಟ್ ಗೆ ನಿನ್ನನ್ನ ಹಾಕ್ಕೋಬೇಕಂತಿದೀನಿ..ಮಾಡ್ತೀಯಾ?” ಎಂದರು! “ಖಂಡಿತ ಮಾಡ್ತೇನೆ ಸರ್! ಅನುಮಾನವೇ ಬೇಡ!” ಎಂದೆ ನಾನು ಅತ್ಯುತ್ಸಾಹದಿಂದ! “ನಿನ್ನ ಕಣ್ಣುಗಳನ್ನು ಸರಿಯಾಗಿ ಬಳಸಿಕೊಂಡು ಒಳ್ಳೇ ಕ್ಯಾರೆಕ್ಟರ್ ನಿನ್ನ ಕೈಲಿ ಮಾಡಿಸಬೇಕೂಂತ ಸುಮಾರು ಸಮಯದಿಂದ ಅಂದುಕೋತಿದ್ದೆ.. ಈಗ ಮುಹೂರ್ತ ಬಂದಿದೆ ನೋಡು” ಎಂದು ನಕ್ಕರು ರಾಜು. ಅಲ್ಲೇ ಕೂರಿಸಿಕೊಂಡು ವಿವರವಾಗಿ ಕಥೆಯನ್ನು ಹೇಳಿದರು. ಅಲ್ಲೇ ಇದ್ದ ನಿರ್ಮಾಪಕ ಮಂಜು ಅವರು, “ಡೇಟ್ಸ್ ಬಗ್ಗೆ ನಮ್ಮ ಮ್ಯಾನೇಜರ್ ವೇಣು ಹೇಳ್ತಾರೆ.. ಇದು ಅಡ್ವಾನ್ಸ್ ಅಮೌಂಟು.. ತೊಗೊಳ್ಳಿ ಸರ್…ಗುಡ್ ಲಕ್” ಎಂದವರೇ ಇಪ್ಪತ್ತು ಸಾವಿರ ರೂಪಾಯಿಗಳಿಗೆ ಚೆಕ್ ಕೊಟ್ಟೇಬಿಟ್ಟರು. ಅಂದಿನಿಂದ ಸರಿಯಾಗಿ ಒಂದು ವಾರಕ್ಕೆ ಚಿತ್ರೀಕರಣ ಆರಂಭವಾಗುವುದಿತ್ತು. ರಾಜು ಅವರಿಗೂ ಮಂಜು ಅವರಿಗೂ ಧನ್ಯವಾದಗಳನ್ನರ್ಪಿಸಿ ಅಲ್ಲಿಂದ ಹೊರಟೆ.

ಮರುದಿನ ರಾಜು ಫೋನ್ ಮಾಡಿ ಒಂದು ಆಘಾತಕರ ಸಂಗತಿಯನ್ನು ಹೇಳಿದರು: “ಏನಯ್ಯಾ ಪ್ರಭುರಾಜ.. ಎಂಥೆಂಥಾ ಫ್ರೆಂಡ್ಸ್ ಇದಾರಯ್ಯಾ ನಿಂಗೆ! ನಿನ್ನನ್ನ ವಿಲನ್ ಆಗಿ ಸೆಲೆಕ್ಟ್ ಮಾಡಿದೀನಿ ಅಂತ ಗೊತ್ತಾದ ತಕ್ಷಣವೇ ನನಗೆ ಫೋನ್ ಮಾಡಿದ್ರಯ್ಯಾ ನಿನ್ನ ಫ್ರೆಂಡ್ಸು! ಯಾಕೆ ರಾಜಣ್ಣ, ನಾವು ನಿಮ್ಮ ಕಣ್ಣಿಗೆ ಬೀಳಲೇ ಇಲ್ಲವಾ? ಅವನು ಹೇಳಿಕೇಳಿ ಟಿವಿಯೋನು.. ಸೀರಿಯಲ್ ಗಳಲ್ಲಿ ತುಂಬಾನೇ ಬಿಜಿ಼ಯಾಗಿದಾನೆ.. ನಾವು ಸಿನಿಮಾನೇ ನಂಬಿಕೊಂಡಿರೋರು.. ನೀವು ನಮ್ಮನ್ನೇ ಮರೆತುಬಿಟ್ರೆ ಹೆಂಗೆ ಸರ್ ಅಂತ ಕೇಳಿದ್ರಯ್ಯಾ! ಫ್ರೆಂಡ್ಸೇ ಕಲ್ಲು ಹಾಕೋಕೆ ನೋಡ್ತಾರಲ್ಲಯ್ಯಾ.. ಏನು ಹೇಳ್ತೀಯಾ ಇದಕ್ಕೆ!” ಎಂದರು ರಾಜಣ್ಣ!

ನನಗೆ ಈ ಮಾತು ಕೇಳಿ ದಿಗ್ಭ್ರಮೆಯಾಗಿಹೋಯಿತು. “ನಾನು ಹೇಳೋದೇನಿದೆ ರಾಜಣ್ಣ? ನನಗೆ ಈ ಇಂಡಸ್ಟ್ರಿಯ ಒಳಸುಳಿಗಳೆಲ್ಲಾ ಅರ್ಥವಾಗೊಲ್ಲ.. ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಂಡು ಹೋಗೋದಷ್ಟೇ ನನಗೆ ಗೊತ್ತಿರೋದು.. ಏನೇ ಆಗಲಿ.. ನಾನು ನಿಮ್ಮ ತೀರ್ಮಾನಕ್ಕೆ ಬದ್ಧ.. ನೀವು ಹೇಗೆ ಹೇಳಿದರೆ ಹಾಗೆ ಮಾಡ್ತೀನಿ” ಎಂದೆ ಹತಾಶೆಯ ದನಿಯಲ್ಲಿ. “ಏ ನೀನೊಳ್ಳೆ…ಅಷ್ಟೆಲ್ಲಾ ಸೀರಿಯಸ್ ಆಗಿಬಿಡಬೇಡ.. ಯಾರು ಏನೇ ಬಡಕೊಂಡರೂ ನನ್ನ ಪಿಕ್ಚರ್ ವಿಲನ್ ನೀನೇ! ಅದರಲ್ಲಿ ಅನುಮಾನವೇ ಇಲ್ಲ! ಎಂಥೆಂಥಾವರು ನಮ್ಮ ಸುತ್ತ ಇರ್ತಾರೆ ಅನ್ನೋದು ನಮಗೆ ಗೊತ್ತಿರಲಿ ಅನ್ನೋದಕ್ಕೆ ಹೇಳಿದೆ ಅಷ್ಟೇ.. ನೀನೇನೂ ತಲೆ ಕೆಡಿಸಿಕೋಬೇಡ” ಎಂದು ಸಮಾಧಾನ ಹೇಳಿದರು ರಾಜಣ್ಣ. ಹಾಗೆ ನನ್ನ ಪಾತ್ರಕ್ಕೆ ಕಲ್ಲು ಹಾಕಹೊರಟಿದ್ದ ನನ್ನ ಸ್ನೇಹಿತರು ಯಾರು ಎಂದು ರಾಜಣ್ಣನೂ ಹೇಳಲಿಲ್ಲ.. ನಾನೂ ಕೇಳುವ ಗೋಜಿಗೆ ಹೋಗಲಿಲ್ಲ. ಆ ಹೆಸರುಗಳು ತಿಳಿಯುವುದಕ್ಕಿಂತ ಅಜ್ಞಾತವಾಗಿದ್ದರೇ ಹೆಚ್ಚು ಸುಖ—ನೆಮ್ಮದಿ ಎಂದೆನ್ನಿಸಿ ಆ ಬಗ್ಗೆ ಏನೂ ಕೇಳದೆ ಸುಮ್ಮನಾಗಿಬಿಟ್ಟೆ.

‍ಲೇಖಕರು avadhi

September 8, 2023

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This