ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
142
ಒಂದು ದಿನ, ಬಹುಶಃ ಆಗ ಪ್ರೇರಣಾ ಧಾರಾವಾಹಿಯ ಶೂಟಿಂಗ್ ನಲ್ಲಿದ್ದೆನೆಂದು ನೆನಪು, ಒಂದು ಕರೆ ಬಂದಿತು. ಕರೆ ಸ್ವೀಕರಿಸಿ ಹಲೋ ಎಂದೆ. ಅತ್ತಲಿಂದ ಧ್ವನಿ ಕೇಳಿಸಿತು: “ಪ್ರಭಣ್ಣಾ, ನಾನು ಚೆನ್ನ ಮಾತಾಡ್ತಿರೋದು. ಚೆನ್ನಾಗಿದೀರಾ?”. ಚೆನ್ನ ರಂಗಭೂಮಿಯಲ್ಲಿ ನೇಪಥ್ಯದಲ್ಲಿ ಸಾಕಷ್ಟು ವರ್ಷಗಳು ಕೆಲಸ ಮಾಡಿ ನಂತರ ಡಾ॥ ರಾಜ್ ಕುಮಾರ್ ಅವರ ಸಂಪರ್ಕಕ್ಕೆ ಬಂದು ಅವರೊಟ್ಟಿಗೇ ಇದ್ದು ಅವರ ಬಲಗೈ ಬಂಟನಾಗಿದ್ದವರು. ಸಾಕಷ್ಟು ಹಳೆಯ ಪರಿಚಯವೇ ಆಗಿದ್ದರೂ ಹಿಂದೆಂದೂ ನನಗೆ ಅವರು ಫೋನ್ ಮಾಡಿರಲಿಲ್ಲ. “ಹೇಳಿ ಚೆನ್ನಣ್ಣ, ಏನು, ಆಶ್ಚರ್ಯಕ್ಕೆ ನನ್ನ ಜ್ಞಾಪಿಸಿಕೊಂಡುಬಿಟ್ಟಿದೀರಿ!” ಎಂದು ಆಶ್ಚರ್ಯದಿಂದಲೇ ನಾನು ಕೇಳಿದೆ. “ಹೇಳ್ತೀನಿ ಪ್ರಭಣ್ಣಾ. ಮೊದಲು dates ಗುರುತು ಹಾಕಿಕೊಂಡು ಬಿಡಿ. ಯಾರಿಗೂ ಆ ಡೇಟ್ಸ್ ಕೊಡಬೇಡಿ. ನಮ್ಮ ಕಂಪನೀದೇ ಹೊಸ ಫಿಲಂ ಶೂಟಿಂಗ್ ಶುರುವಾಗ್ತಿದೆ. ಅಪ್ಪು ಸರ್ ಹೀರೋ. ನೀವು ಅವರ ಫಾದರ್ ಕ್ಯಾರೆಕ್ಟರ್ ಮಾಡಬೇಕು ಅಂತ ಅಮ್ಮ ಹೇಳಿದಾರೆ. ಓಕೆ ನಾ”? ಎಂದು ಒಂದಷ್ಟು ತಾರೀಖುಗಳನ್ನು ಹೇಳಿದರು ಚೆನ್ನ. ಒಂದು ಕ್ಷಣ ಏನು ಹೇಳಲೂ ತೋಚಲಿಲ್ಲ. ನನ್ನ ಮೌನದಿಂದ ಗೊಂದಲಕ್ಕೊಳಗಾದ ಚೆನ್ನ, “ಯಾಕೆ ಪ್ರಭಣ್ಣಾ, ಆ ಡೇಟ್ಸ್ ಫ್ರೀ ಇಲ್ಲವಾ? ಆ ಡೇಟ್ಸ್ ಬೇಕೇ ಬೇಕು ಪ್ರಭಣ್ಣಾ. ಎಲ್ಲರ ಡೇಟ್ಸ್ ನೂ ಬ್ಲಾಕ್ ಮಾಡಿಕೊಂಡಿದೀನಿ” ಎಂದರು. ನಾನು ಸಾವರಿಸಿಕೊಂಡು, “ಫ್ರೀ ಇದೀನಿ ಚೆನ್ನಣ್ಣಾ. ಏನೂ ತೊಂದರೆ ಇಲ್ಲ” ಎಂದೆ. “ಸರಿ ಹಾಗಾದ್ರೆ. ಅಸೋಸಿಯೇಟ್ ಡೈರೆಕ್ಟ್ರು ರುದ್ರೇಶ್ ಆಮೇಲೆ ಫೋನ್ ಮಾಡಿ ನಿಮ್ಮ ಕ್ಯಾರೆಕ್ಟರ್ ಬಗ್ಗೆ ಹೇಳ್ತಾರೆ” ಎಂದು ನುಡಿದು ಚೆನ್ನ ಫೋನ್ ಕೆಳಗಿಟ್ಟರು.
ಸುಳ್ಳು ಯಾಕೆ ಹೇಳಲಿ? ಚೆನ್ನ ಅವರ ಫೋನ್ ಕರೆಯಿಂದ ನನಗೆ ನಿಜಕ್ಕೂ ಪರಮಾಶ್ಚರ್ಯವೇ ಆಯಿತು! ನನ್ನ ಆಶ್ಚರ್ಯಕ್ಕೆ ಕಾರಣವೂ ಇತ್ತು ಅನ್ನಿ. ನಮ್ಮ ಚಿತ್ರರಂಗ ಅದೇಕೋ ನನ್ನ ಬಗ್ಗೆ ವಿಶೇಷ ಪ್ರೀತಿಯನ್ನು ಎಂದೂ ತೋರಿರಲಿಲ್ಲ. ‘ನಿಮ್ಮನ್ನ ನಮ್ಮ ಇಂಡಸ್ಟ್ರಿ ಸರಿಯಾಗಿ ದುಡಿಸಿಕೊಳ್ಳಲಿಲ್ಲ. ನಿಮ್ಮ ಪ್ರತಿಭೆಗೆ ತಕ್ಕ ಪಾತ್ರಗಳನ್ನ ಕೊಡಲೇ ಇಲ್ಲ” ಎಂದು ಚಿತ್ರರಂಗದ ಅನೇಕ ಗಣ್ಯರೇ ಹೇಳಿದ್ದುಂಟು. ತಮಾಷೆ ಎಂದರೆ ಅಂಥ ಗಣ್ಯರು ತಾವೇ ಖುದ್ದಾಗಿ ಚಿತ್ರ ನಿರ್ಮಿಸಿದಾಗಲೂ ಅಥವಾ ನಿರ್ದೇಶಿಸಿದಾಗಲೂ ‘ನನ್ನನ್ನು ದುಡಿಸಿಕೊಳ್ಳಲು’ ಮನಸ್ಸು ಮಾಡಲೇ ಇಲ್ಲ ಯಾರನ್ನೂ ಕೇಳುವ ಕೇಳಿಕೊಳ್ಳುವ ಸ್ವಭಾವ ನನ್ನದಲ್ಲವಾದ್ದರಿಂದ ತಾನಾಗಿ ಅರಸಿಕೊಂಡು ಬಂದ ಒಂದಷ್ಟು ಚಿಕ್ಕ ಚಿತ್ರಗಳಲ್ಲಿ (ಬಜೆಟ್ ದೃಷ್ಟಿಯಿಂದ!) ಅಭಿನಯಿಸುತ್ತಿದ್ದೆ. ಸಾಮಾನ್ಯವಾಗಿ ಅವು ಹೊಸ ನಾಯಕ ಯಾ ನಿರ್ದೇಶಕರ ಚೊಚ್ಚಲ ಚಿತ್ರಗಳಾಗಿದ್ದು ಹೆಚ್ಚು ಸದ್ದು ಮಾಡುತ್ತಿರಲಿಲ್ಲ. ವಿಶೇಷ ಯಶಸ್ಸನ್ನೂ ಕಾಣುತ್ತಿರಲಿಲ್ಲ. ತತ್ಪರಿಣಾಮವಾಗಿ ನನ್ನ ಸಂಭಾವನೆಯಲ್ಲಿಯೂ ಯಾವ ಜಿಗಿತವೂ ಕಾಣುತ್ತಿರಲಿಲ್ಲ! ಕೆಲವು ಚಿತ್ರಗಳಲ್ಲಿ ಪಾತ್ರಗಳು ಚೆನ್ನಾಗಿರುತ್ತಿದ್ದವು, ಅಭಿನಯಿಸಲೂ ಖುಷಿಯಾಗುತ್ತಿತ್ತು. ಆದರೆ ಬಹುತೇಕ ಸಂದರ್ಭಗಳಲ್ಲಿ ಒಂದು ದಿನದ ಪಾತ್ರಕ್ಕೆ ಅಥವಾ ಒಂದು ದೃಶ್ಯದ ಪಾತ್ರಕ್ಕೆ ಕರೆದು, “ಸಿನಿಮಾಗೆ ನಿಮ್ಮ ಕ್ಯಾರೆಕ್ಟರ್ರೇ ಟ್ವಿಸ್ಟ್ ಕೊಡೋದು ಸರ್!” ಅಂತಲೋ “ಸಿನಿಮಾಲಿ ಕೊನೇಲಿ ನೆನಪಲ್ಲಿ ಉಳಿಯೋದೇ ನಿಮ್ಮ ಪಾತ್ರ ಸರ್!” ಅಂತಲೋ ವರ್ಣರಂಜಿತವಾಗಿ ಬುರುಡೆ ಬಿಟ್ಟು ‘ಏಮಾರಿಸಿ’ರುವುದುಂಟು! ಅಂತಹ ಎಷ್ಟೋ ಚಿತ್ರಗಳನ್ನು ನಿರಾಕರಿಸಿಬಿಟ್ಟಿದ್ದೇನೆ. ಏನೇ ಆದರೂ ಮನಸ್ಸಿಗೆ ತೃಪ್ತಿ ಸಂತೋಷಗಳನ್ನು ನೀಡಿದ ಪಾತ್ರಗಳು ಚಲನಚಿತ್ರಗಳಲ್ಲಿ ತೀರಾ ಕಡಿಮೆ. ಆ ಕೊರತೆಯನ್ನು ಧಾರಾವಾಹಿಗಳು ತುಂಬಿಕೊಟ್ಟಿವೆ ಅನ್ನುವುದೂ ದಿಟವೇ! ಇರಲಿ. ಇಷ್ಟೆಲ್ಲಾ ಹಿನ್ನೆಲೆ ಇದ್ದುದರಿಂದಲೇ ಚೆನ್ನ ಅವರ ಕರೆಯಿಂದ ನನಗೆ ಅಷ್ಟು ಆಶ್ಚರ್ಯವಾದದ್ದು.
ಹುಡುಗರು ಚಿತ್ರದ ದೃಶ್ಯ
ಹಿಂದೊಮ್ಮೆ ಪಾರ್ವತಮ್ಮನವರು ಸಮಾರಂಭವೊಂದರಲ್ಲಿ ಭೇಟಿಯಾದಾಗ ನನ್ನ ಅಭಿನಯವನ್ನು ಮೆಚ್ಚಿ ಮಾತಾಡಿದ್ದ ಪ್ರಸಂಗವನ್ನು ಈಗಾಗಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಹಾಗಾಗಿಯೇ ಈಗ ಈ ಪಾತ್ರಕ್ಕೆ ಅವರು ನನ್ನನ್ನು ಜ್ಞಾಪಿಸಿಕೊಂಡಿದ್ದಿರಬಹುದು ಅನ್ನಿಸಿತು. ಏನೇ ಆದರೂ ದೊಡ್ಡಮನೆಯವರ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ ಅವರ ತಂದೆಯ ಪಾತ್ರ ನಿರ್ವಹಿಸಲು ಆಹ್ವಾನಿಸಿರುವುದು ಖುಷಿಯನ್ನ ತಂದಿತು. ಆ ಚಿತ್ರದ ಹೆಸರು “ಹುಡುಗರು”. ತಮಿಳಿನಲ್ಲಿ ಸಮುದ್ರಕಣಿಯವರು ನಿರ್ದೇಶಿಸಿದ್ದ ‘ನಾಡೋಡಿಗಳ್’ ಚಿತ್ರದ ಕನ್ನಡ ಅವತರಣಿಕೆ. ಪುನೀತ್ ಅವರ ಜತೆಗೆ ಶ್ರೀನಗರ ಕಿಟ್ಟಿ ಹಾಗೂ ಯೋಗೇಶ್ ಅವರೂ ಸಹಾ ಮುಖ್ಯ ಪಾತ್ರಗಳಲ್ಲಿದ್ದರು. ರಾಧಿಕಾ ಪಂಡಿತ್ ಅವರದು ನಾಯಕಿಯ ಪಾತ್ರ. ಜತೆಗೆ ಕೃಷ್ಣ ಅಡಿಗರು, ಚಿದು ಅಲಿಯಾಸ್ ಕೆ.ಎಸ್. ಶ್ರೀಧರ್, ಸುಧಾ ಬೆಳವಾಡಿ, ಅವಿನಾಶ್ ಮುಂತಾದ ಅನೇಕ ಕಲಾವಿದ ಗೆಳೆಯರ ದಂಡೇ ಹುಡುಗರು ಚಿತ್ರದ ತಾರಾಗಣದಲ್ಲಿತ್ತು! ಬೆಂಗಳೂರು, ಶ್ರೀರಂಗಪಟ್ಟಣ, ಮೇಲುಕೋಟೆ ಹಾಗೂ ಶ್ರವಣ ಬೆಳುಗೊಳಗಳಲ್ಲಿ ಚಿತ್ರೀಕರಣ ನಡೆಯಿತು. ನಿರ್ಮಾಣ ವ್ಯವಸ್ಥೆಯಲ್ಲಿದ್ದ ಶಿಸ್ತು ಅಚ್ಚುಕಟ್ಟು ನಿಜಕ್ಕೂ ಮೆಚ್ಚುವಂತಿತ್ತು. ತೀರಾ ಅನಿವಾರ್ಯವಾದ ಹೊರತು ನಿಗದಿತ ದಿನಾಂಕ ಪಟ್ಟಿಯಲ್ಲಿ ಬದಲಾವಣೆ ಆಗುತ್ತಿರಲಿಲ್ಲ. ಪುನೀತ್ ಅವರ ಸರಳತೆ, ಸಜ್ಜನಿಕೆಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.
ಪಾರ್ವತಮ್ಮ ರಾಜ್ ಕುಮಾರ್
ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದವರು ಮಾದೇಶ್, ಕೆ.ವಿ.ರಾಜು ಅವರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು ಅನುಭವ ಗಳಿಸಿಕೊಂಡವರು. ಸತ್ಯ ಹೆಗಡೆ ಅವರು ಛಾಯಾಗ್ರಾಹಕರು. ಹಿಂದೆ ನನ್ನ ನಿರ್ದೇಶನದ ಹಲವಾರು ಎಪಿಸೋಡ್ ಗಳಿಗೆ ಸತ್ಯ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಕಮರ್ಷಿಯಲ್ ಚಿತ್ರಗಳ ಚೌಕಟ್ಟಿನಲ್ಲಿಯೇ ನಿರ್ಮಾಣವಾಗಿದ್ದರೂ ಕಥಾವಸ್ತುವಿನ ದೃಷ್ಟಿಯಿಂದ ಚಿತ್ರದಲ್ಲಿ ಹೊಸತನವಿತ್ತು. ಅರ್ಥಪೂರ್ಣ ಸಂದೇಶವಿತ್ತು. ಯಾವ ಕಿರಿಕಿರಿ ತಾಪತ್ರಯಗಳೂ ಇಲ್ಲದೆ ನಿಗದಿಯಾಗಿದ್ದ ದಿನಗಳಲ್ಲೇ ಚಿತ್ರೀಕರಣ ನಡೆದು ಪೂರ್ಣಗೊಂಡಿತು. ಒಳ್ಳೆಯ ಚಿತ್ರವೆಂದು ಖ್ಯಾತಿಯನ್ನು ಪಡೆಯುವುದರೊಂದಿಗೆ ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದಲೂ ಯಶಸ್ವೀ ಚಿತ್ರವೆನಿಸಿಕೊಂಡಿತು ‘ಹುಡುಗರು’ ಚಿತ್ರ. ನನಗೂ ಸಾಕಷ್ಟು ಹೆಸರನ್ನೂ ತೃಪ್ತಿಯನ್ನೂ ತಂದುಕೊಟ್ಟ ಚಿತ್ರ ‘ಹುಡುಗರು’.
ಮಗಳು ರಾಧಿಕಾಳ ಭರತನಾಟ್ಯ ರಂಗಪ್ರವೇಶ ಅತ್ಯಂತ ಯಶಸ್ವಿಯಾಗಿ ನಡೆದದ್ದರ ಬಗ್ಗೆ ಈಗಾಗಲೇ ಹೇಳಿದ್ದೇನೆ. ರಂಗಪ್ರವೇಶದ ಬೆನ್ನಿಗೇ ಹಲವಾರು ಪ್ರದರ್ಶನಗಳನ್ನು ನೀಡಲು ಅವಕಾಶಗಳು ಅರಸಿ ಬಂದವು. ಸಂಸ್ಕೃತಿ ಇಲಾಖೆಯ ವತಿಯಿಂದ ಕನ್ನಡ ಭವನದಲ್ಲಿ ಒಂದು ಪ್ರದರ್ಶನ ಆಯೋಜನೆಗೊಂಡಿತು. ಪ್ರತಿ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯವನಿಕಾದಲ್ಲಿ ಮತ್ತೊಂದು ಪ್ರದರ್ಶನ ಆಯೋಜನೆಗೊಂಡಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಮಾನ್ಯ ನಂಜುಂಡ ರಾವ್ ಅವರು ನಡೆಸಿಕೊಟ್ಟಿದ್ದರು. ಪತ್ರಿಕೆಗಳಲ್ಲಿ ಈ ಪ್ರದರ್ಶನಗಳ ಕುರಿತಾಗಿಯೂ ಬಹಳ ಒಳ್ಳೆಯ ವಿಮರ್ಶೆಗಳು ಬಂದಿದ್ದವು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಿಮರ್ಶಕರು ಹೀಗೆ ಬರೆದಿದ್ದರು: “Radhika Prabhu put up a brilliant show and her grace and fine footwork lifted her performance. Dressed in traditional Bharatanatyam attire, she started the show with a Ganesha Vandana, and used every nook and corner of the stage for her performance. The music was enthralling and made her performance complete.”
ಯುವ ಭರತನಾಟ್ಯ ಕಲಾವಿದೆ ರಾಧಿಕಾ ಪ್ರಭು
ಮೈಸೂರಿನಲ್ಲಿ ಪ್ರತಿವರ್ಷ ನಡೆಯುವ ಭೂಷಣೋತ್ಸವದಲ್ಲಿ ರಾಧಿಕಾ ಸಂಪೂರ್ಣವಾಗಿ ಭಾವನೃತ್ಯವನ್ನೇ ಪ್ರದರ್ಶಿಸಿದಳು. ಮೈಸೂರಿನಲ್ಲಿಯೇ ಪ್ರಸಿದ್ಧ ಗುರು ವಸುಂಧರಾ ದೊರೆಸ್ವಾಮಿಯವರು ನಡೆಸುವ ವಸುಂಧರೋತ್ಸವದಲ್ಲಿಯೂ ಭರತನಾಟ್ಯ ಪ್ರದರ್ಶಿಸಲು ರಾಧಿಕಾಳಿಗೆ ಅವಕಾಶ ದೊರೆತದ್ದು ಹೆಮ್ಮೆಯ ಸಂಗತಿಯೇ. ಮತ್ತೊಂದು ಪ್ರತಿಷ್ಠಿತ ಸಂಸ್ಥೆ ICCR ರಾಧಿಕಾಳಿಗೆ ದೆಹಲಿಯಲ್ಲಿ ನೃತ್ಯ ಪ್ರದರ್ಶಿಸಲು ಅವಕಾಶ ನೀಡಿದಾಗಲಂತೂ ಅವಳ ಖುಷಿಗೆ ಪಾರವೇ ಇರಲಿಲ್ಲ! ಸಾಲು ಸಾಲು ನೃತ್ಯ ಪ್ರದರ್ಶನಗಳಿಗೆ ಹೀಗೆ ಅವಕಾಶ ದೊರಕುತ್ತಿದ್ದ ಖುಷಿ ಒಂದೆಡೆಗಾದರೆ ಆ ಎಲ್ಲಾ ಪ್ರದರ್ಶನಗಳಿಗೂ ಸಾಕಷ್ಟು ಹಣ ನಮ್ಮ ಕೈಯಿಂದಲೇ ಖರ್ಚಾಗುತ್ತಿತ್ತು ಅನ್ನುವುದು ಖಂಡಿತಾ ಖುಷಿಯ ವಿಷಯವಾಗಿರಲಿಲ್ಲ! ಬಹುಶಃ ಪ್ರವರ್ಧಮಾನಕ್ಕೆ ಬರುತ್ತಿರುವ ಎಲ್ಲ ನೃತ್ಯಪಟುಗಳ(ವಿಶೇಷವಾಗಿ ಮಧ್ಯಮವರ್ಗದ) ಕಥೆಯೂ ಇದೇ ಎಂದು ತೋರುತ್ತದೆ! ಪ್ರತಿಷ್ಠಿತ ಉತ್ಸವಗಳಿಗೆ ಆಹ್ವಾನಿಸಿ ಅವಕಾಶ ನೀಡುತ್ತಾರೆ; ಕೆಲವು ಸಂಸ್ಥೆಗಳವರಂತೂ ಗಾಯನದ ಧ್ವನಿಮುದ್ರಣಗಳನ್ನು ಬಳಸಿಕೊಳ್ಳಲೂ ಅವಕಾಶ ಕೊಡದೆ ‘live music’ ಇರಬೇಕು ಎಂದು ಷರತ್ತು ವಿಧಿಸುತ್ತಾರೆ; ಸಂಭಾವನೆ ಮಾತ್ರ ತೀರಾ ಕಡಿಮೆ ಕೊಡುತ್ತಾರೆ! ಆಗುವ ಖರ್ಚನ್ನು ನೀಡುವ ಸಂಭಾವನೆ ತೂಗಿಸುವುದಿರಲಿ, ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿರುತ್ತದೆ! ಬಹುತೇಕ ಎಲ್ಲ ಸಂಘ ಸಂಸ್ಥೆಗಳ ಕಥೆಯೂ ಇದೇ!
ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ, ಅವರಿಗೊಂದು ವೇದಿಕೆ ಕಲ್ಪಿಸಿಕೊಡುವ ಸದಾಶಯ ಶ್ಲಾಘನೀಯವೇ ಆದರೂ ವಿಧಿಸುವ ಷರತ್ತುಗಳ ಭಾರದಡಿಯಲ್ಲಿ ಯುವ ಪ್ರತಿಭೆಗಳ ಮನಸ್ಸು, ಹುರುಪು ಉತ್ಸಾಹಗಳು ಬಾಡುವ ಪ್ರಸಂಗವೇ ಹೆಚ್ಚು! ರಾಧಿಕಾಳಿಗೆ ತುಂಬಾ ನಿರಾಸೆಯಾದದ್ದು ದೆಹಲಿಯ ಕಾರ್ಯಕ್ರಮದ ಆಯೋಜನೆಯಿಂದ. ಸಂಗೀತಗಾರರ ಉಪಸ್ಥಿತಿಯಲ್ಲಿಯೇ ನೃತ್ಯ ಪ್ರದರ್ಶನವಾಗಬೇಕೆಂದು ಷರತ್ತು ವಿಧಿಸಿದ್ದರಿಂದ ನಾಲ್ವರು ಸಂಗೀತಗಾರರೊಂದಿಗೆ ರಾಧಿಕಾ ದೆಹಲಿಗೆ ಹೊರಡಬೇಕಿತ್ತು. ಸಂಗೀತಗಾರರೆಲ್ಲರೂ ವೃತ್ತಿಪರ ಕಲಾವಿದರೇ ಆದ್ದರಿಂದ, ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಕೊಂಡೇ ಇರುತ್ತಿದ್ದುದರಿಂದ ಒಂದು ಕಾರ್ಯಕ್ರಮದ ಸಲುವಾಗಿ ನಾಲ್ಕಾರು ದಿನಗಳ ರೈಲು ಪ್ರಯಾಣದಲ್ಲಿ ಸಮಯ ಪೋಲು ಮಾಡುವುದು ಕಷ್ಟವಾಗಿತ್ತು. ಅವರೆಲ್ಲರೊಂದಿಗೆ ನಾನೇ ಖುದ್ದಾಗಿ ಮಾತನಾಡಿ ಒಂದು ಹೊತ್ತು ವಿಮಾನದಲ್ಲಿಯೂ ಒಂದು ಬಾರಿ ರೈಲಿನಲ್ಲಿಯೂ ಪ್ರಯಾಣ ಮಾಡಿ ಸಹಕರಿಸಬೇಕೆಂದು ಕೇಳಿಕೊಂಡೆ. ಕಲಾವಿದರ ಬವಣೆ ಕಲಾವಿದರಿಗಲ್ಲದೆ ಬೇರಾರಿಗೆ ಅರ್ಥವಾಗುತ್ತದೆ?! ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ನಾನಾಗಲೀ ರಂಜನಿಯಾಗಲೀ ಕಾರ್ಯಕ್ರಮಕ್ಕೆ ಹೋಗಲಿಲ್ಲ. ರಾಧಿಕಾ ಎಲ್ಲ ಸಂಗೀತಗಾರರೊಂದಿಗೆ ದೆಹಲಿಗೆ ಹೊರಟಳು. ದೊಡ್ಡ ಸಂಸ್ಥೆಯವರು ಆಯೋಜಿಸಿರುವ ಪ್ರತಿಷ್ಠಿತ ಕಾರ್ಯಕ್ರಮ. ದೆಹಲಿಯ ರಸಿಕರು ಖ್ಯಾತನಾಮ ಪತ್ರಕರ್ತರು ನೃತ್ಯ ಪ್ರದರ್ಶನವನ್ನು ನೋಡಿ ಮೆಚ್ಚಿದರೆ, ಪ್ರಶಂಸಿಸಿ ಬರೆದರೆ ಅಷ್ಟು ಖರ್ಚು ಮಾಡಿಕೊಂಡು ಹೋದದ್ದೂ ವ್ಯರ್ಥವಾಗುವುದಿಲ್ಲ. ರಾಷ್ಟ್ರಮಟ್ಟದಲ್ಲಿ ಒಂದು ಮನ್ನಣೆ ಸಿಕ್ಕಂತಾಗುತ್ತದೆಂಬುದು ನಮ್ಮ ಆಲೋಚನೆಯಾಗಿತ್ತು.
ಹಿರಿಯ ಭರತನಾಟ್ಯ ಕಲಾವಿದೆ ವಸುಂಧರಾ ದೊರೆಸ್ವಾಮಿ
ಅಲ್ಲಿಯೂ ಕಾದಿದ್ದು ನಿರಾಸೆಯೇ! ನೃತ್ಯ ಪ್ರದರ್ಶನಕ್ಕೆ ಸಂಬಂಧ ಪಟ್ಟಹಾಗೆ ಯಾವ ಪ್ರಚಾರವೂ ಆಗಿರಲಿಲ್ಲ. ವಿಷಯವೇ ಮುಟ್ಟದೆ ಸಹೃದಯರು ಬರುವುದಾದರೂ ಹೇಗೆ!? ಕೇವಲ ಹಿಡಿಯಷ್ಟು ಪ್ರೇಕ್ಷಕರ ಮುಂದೆ ನೃತ್ಯ ಪ್ರದರ್ಶನವನ್ನು ನೀಡಬೇಕಾಗಿ ಬಂದದ್ದು ರಾಧಿಕಾಳ ಉತ್ಸಾಹ ಸಂಭ್ರಮಗಳಿಗೆ ತಣ್ಣೀರೆರಚಿದಂತಾಗಿಹೋಯಿತು. ಆದರೂ ಆ ಭಾವ ತನ್ನ ನೃತ್ಯವನ್ನು ಪ್ರಭಾವಿಸದಂತೆ ಮನಸ್ಸನ್ನು ಹತೋಟಿಗೆ ತಂದುಕೊಂಡು ಅದ್ಭುತ ಪ್ರದರ್ಶನವನ್ನೇ ನೀಡಿದಳು ರಾಧಿಕಾ. ಇದು ನನ್ನ ಮಾತಲ್ಲ, ಪ್ರದರ್ಶನವನ್ನು ನೋಡಿದ ನನ್ನ ಪ್ರಾಣ ಸ್ನೇಹಿತ, ರಾಷ್ಟ್ರಪ್ರಶಸ್ತಿ ಪುರಸ್ಕೃತ ವರ್ಣಚಿತ್ರ ಕಲಾವಿದ ಕೆ. ಆರ್. ಸುಬ್ಬಣ್ಣನ ಅಭಿಪ್ರಾಯ! ನೃತ್ಯ ಪ್ರದರ್ಶನವನ್ನು ಅಂದು ವೀಕ್ಷಿಸಿದ ಎಲ್ಲರ ಬಾಯಲ್ಲೂ ಅದೇ ಮಾತಂತೆ: “ಇಂಥ ಅನುಪಮ ನೃತ್ಯ ಪ್ರದರ್ಶನಕ್ಕೆ ಜನರನ್ನು ಸೇರಿಸಲಾಗದಿದ್ದುದು ಸಂಸ್ಥೆಯ ಬೇಜವಾಬ್ದಾರಿತನ”. ಕೊನೆಗೆ ಆಯೋಜಕರ ಪರವಾಗಿಯೂ ಅಲ್ಲಿ ನಾಲ್ಕು ಜನರಿರಲಿಲ್ಲ! ಸ್ವಾಗತಿಸಿ ಒಂದು ಹೂಕಡ್ಡಿ ಕೊಟ್ಟು ಜಾಗ ಖಾಲಿಮಾಡಿದ ಮಹನೀಯರು ಮತ್ತೆ ಪ್ರತ್ಯಕ್ಷರಾದದ್ದು ನೃತ್ಯ ಮುಗಿದ ಮೇಲೆ! ತಕ್ಕಮಟ್ಟಿನ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದರೆನ್ನುವುದೊಂದೇ ಸಮಾಧಾನ! ಅಂದಿನ ಒಂದೂವರೆ ತಾಸಿನ, ಸಂಗೀತಗಾರರೊಂದಿಗೇ ನೀಡಿದ ನೃತ್ಯ ಪ್ರದರ್ಶನಕ್ಕೆ ರಾಧಿಕಾಳಿಗೆ ಅವರು ನೀಡಿದ ಸಂಭಾವನೆ (ಮೊದಲೇ ತಿಳಿಸಿದ್ದಂತೆ) ಅಮೋಘ ಐದು ಸಾವಿರ ರೂಪಾಯಿಗಳು! ಬಹುಶಃ ರಾಧಿಕಾ ಹಿಂದೆಂದೂ ಈ ಮಟ್ಟದ ನಿರಾಸೆಯನ್ನು ಅನುಭವಿಸಿರಲಿಲ್ಲ. ಆದ ಖರ್ಚಿನ ಹಣದಲ್ಲಿ ಬೆಂಗಳೂರಿನಲ್ಲಿ ಕನಿಷ್ಠ ಮೂರು ಕಾರ್ಯಕ್ರಮಗಳನ್ನು ನೀಡಬಹುದಿತ್ತು! ಅದೂ ಕಿಕ್ಕಿರಿದು ತುಂಬಿದ ಗೃಹಗಳಿಗೆ!
0 ಪ್ರತಿಕ್ರಿಯೆಗಳು