
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
96
ಈ ಭೂಕಂಪವಾದ ಬಳಿಕ ಗುಲ್ಬರ್ಗಾದಲ್ಲಿ ನಮ್ಮ ಬದುಕು ಮತ್ತೆ ಮೊದಲಿನ ಲಯಕ್ಕೆ ತಿರುಗಲೇ ಇಲ್ಲ. ಏನೋ ಒಂದು ಅವ್ಯಕ್ತ ಭಯದಲ್ಲಿ, ಅನಿರೀಕ್ಷಿತ ಅನಾಹುತದ ಆತಂಕದಲ್ಲಿ ದಿನಗಳನ್ನು ಕಳೆಯುವಂತಾಗಿಹೋಯಿತು.ಹಾಗೂ ಹೀಗೂ ನಾಲ್ಕಾರು ತಿಂಗಳು ಕಳೆಯುವಷ್ಟರಲ್ಲಿ 94ರ ಶೈಕ್ಷಣಿಕ ವರ್ಷ ಪ್ರಾರಂಭವಾಗಿಬಿಟ್ಟಿತು. ಅಂದರೆ ರಂಜನಿ ಬೆಂಗಳೂರಿಗೆ ಮರಳುವ ಸಮಯ! ಕಾಲೇಜ್ ನಲ್ಲಿ ಮಂಜೂರಾಗಿದ್ದು ಕೇವಲ ಒಂದು ವರ್ಷದ ರಜೆಯಾದ್ದರಿಂದ ಅವಳು ಹೊರಡುವುದು ಅನಿವಾರ್ಯವಾಗಿತ್ತು. ರಂಜನಿ ರಜೆ ಹಾಕಿ ಬಂದ ಸಮಯದಲ್ಲಿ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಗೆಳೆಯ ನರಹಳ್ಳಿ ಬಾಲು ಯಾವ ಕಿರಿಕಿರಿಗೂ ಅವಕಾಶವಾಗದಂತೆ ಅದ್ಭುತವಾಗಿ ತನ್ನ ಕಾರ್ಯ ನಿರ್ವಹಿಸಿದ್ದ. ಆ ವೇಳೆಗೆ ಬಸವೇಶ್ವರ ನಗರದ ಬಿ ಇ ಎಂ ಎಲ್ ಲೇಔಟ್ ನಲ್ಲಿ ನನ್ನ ಮಾವನವರು ಕಟ್ಟಿಸುತ್ತಿದ್ದ ಮನೆಯ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿತ್ತು. ಮೂವರು ಅಕ್ಕ ತಂಗಿಯರು ಒಬ್ಬೊಬ್ಬರು ಒಂದೊಂದು ಭಾಗದಲ್ಲಿ ನೆಲೆಸಲು ಅನುಕೂಲವಾಗುವಂತೆ ಮೂರಂತಸ್ತಿನ ಮನೆಯನ್ನು ಕಟ್ಟಿಸಿದ್ದರು ಮಾವನವರು. ಕೆಳಗಿನ ಮನೆಯಲ್ಲಿ ಹಿರಿಯಕ್ಕ ರಾಜಲಕ್ಷ್ಮಿ—ಸೀತಾರಾಂ ಕುಟುಂಬ, ನಡುವಿನ ಮನೆಯಲ್ಲಿ ಪದ್ಮಿನಿ—ರಮೇಶ್ ಕುಟುಂಬ ಹಾಗೂ ಮೇಲ್ಮನೆಯಲ್ಲಿ ನಮ್ಮ ಕುಟುಂಬ ನೆಲೆಸುವುದೆಂದೂ ಬ್ಯಾಂಕ್ ಸಾಲ ತೀರಿಸಲು ಅನುಕೂಲವಾಗುವಂತೆ ಒಂದಷ್ಟು ಬಾಡಿಗೆಯನ್ನು ನೀಡಬೇಕೆಂದೂ ತೀರ್ಮಾನವಾಗಿತ್ತು.
ನನಗಿದ್ದ ಒಂದು ಸಮಾಧಾನವೆಂದರೆ ರಂಜನಿ ಬೆಂಗಳೂರಿಗೆ ಬಂದಮೇಲೆ ಮಗಳೊಟ್ಟಿಗೆ ಒಬ್ಬಳೇ ಇರಬೇಕಾಗಿಲ್ಲ ಎನ್ನುವುದು! ಅಕ್ಕ ತಂಗಿಯರ ಮನೆಗಳು ಕೆಳಗೇ ಇರುವುದರಿಂದ, ಮಾವನವರು ಹಾಗೂ ಅಣ್ಣ ಬಾಬು ಕೆಳಗಿನ ಮನೆಯಲ್ಲಿ ಅಕ್ಕನೊಂದಿಗೇ ಇರುವುದರಿಂದ ಯಾವುದೇ ಸಮಯಕ್ಕೂ ಒಬ್ಬರಲ್ಲ ಒಬ್ಬರು ಒದಗಿ ಬರುತ್ತಾರೆ ಎಂಬ ಸಂಗತಿಯೇ ಮನಸ್ಸಿಗೆ ನಿರಾಳವನ್ನು ತಂದಿತ್ತು.
ರಂಜನಿಯ ಕಾಲೇಜ್ ಪ್ರಾರಂಭವಾಗುವ ವೇಳೆಗೆ ಗುಲ್ಬರ್ಗಾ ಮನೆಯನ್ನು ಖಾಲಿ ಮಾಡಿಕೊಂಡು ಸಾಮಾನು ಸರಂಜಾಮುಗಳನ್ನು ಲಾರಿಯಲ್ಲಿ ತುಂಬಿಕೊಂಡು ಬೆಂಗಳೂರಿನ ಮನೆಗೆ ವರ್ಗಾಯಿಸಿ ಅಲ್ಲಿ ವಾಸ್ತವ್ಯಕ್ಕೆ ಬಂದ ಮೇಲೆ ಬದುಕಿನ ಹೊಸದೊಂದು ಅಧ್ಯಾಯ ಆರಂಭವಾಯಿತು. ಮಗಳು ರಾಧಿಕಾಳನ್ನು ಮಲ್ಲೇಶ್ವರದ ಕೇಂದ್ರೀಯ ವಿದ್ಯಾಲಯಕ್ಕೆ ಸೇರಿಸಿದೆವು. ನಾನು ಮೊದಲಿನಂತೆ ಕೆಲವೊಮ್ಮೆ ರಜೆಯ ಮೇಲೆ, ಮತ್ತೆ ಕೆಲವೊಮ್ಮೆ ಕಾರ್ಯನಿಮಿತ್ತವಾಗಿಯೇ ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿದ್ದು ಬೆಂಗಳೂರಿಗೆ ಮತ್ತೆ ವರ್ಗ ಮಾಡಿಸಿಕೊಳ್ಳುವ ಕುರಿತಾಗಿ ಯೋಚಿಸುತ್ತಿದ್ದೆ. ಯಾವುದೇ ರಾಜಕೀಯ ಧುರೀಣರ ವಿಶೇಷ ಪರಿಚಯವಾಗಲೀ ಸ್ನೇಹ ಸಂಪರ್ಕವಾಗಲೀ ಇರದಿದ್ದ ನನಗೆ ಈ ವರ್ಗಾವಣೆ ಸುಲಭದ ತುತ್ತೇನೂ ಆಗಿರಲಿಲ್ಲ! ಇದ್ದ ಬದ್ದ ರಜೆಗಳೆಲ್ಲಾ ತೀರಿಹೋಗಿದ್ದರಿಂದ ಸಂಬಳ ಕೈಗೆ ಬರುವುದೇ ಅಪರೂಪವಾಗಿಹೋಗಿತ್ತು! ಗೆಳೆಯರ ನೆರವಿನಿಂದಾಗಿ ಬೆಂಗಳೂರಿನಲ್ಲಿ ಹೊರಗಡೆ ಒಂದಷ್ಟು ಕೆಲಸ ಸಿಗುತ್ತಿದ್ದುದು ಆ ಸಂದರ್ಭದಲ್ಲಿ ಸಂಸಾರ ನಿರ್ವಹಣೆಗೆ ಆಮ್ಲಜನಕದಂತಿತ್ತು!
ಆ ಸಮಯದಲ್ಲಿಯೇ ಒಮ್ಮೆ ದೂರದರ್ಶನಕ್ಕೆ ಹೋಗಿದ್ದಾಗ ಗೆಳೆಯ ಮೋಹನ ರಾಮ ಕೇಳಿದ್ದ: “ನಮ್ಮ ಸ್ನೇಹಿತರು ಒಂದು ಸೀರಿಯಲ್ ಮಾಡ್ತಿದಾರೆ.. ನೀನು ಡೈರೆಕ್ಟ್ ಮಾಡಿಕೊಡ್ತೀಯಾ?”.

ಸಧ್ಯ.. ನನಗೆ ಬೇಕಾದ್ದೂ ಅದೇ ಅಲ್ಲವೇ! ಆಗೆಲ್ಲಾ ಚಾಲ್ತಿಯಲ್ಲಿದ್ದದ್ದು ವಾರಕ್ಕೆ ಒಂದು ದಿನ ಮಾತ್ರ ಪ್ರಸಾರವಾಗುತ್ತಿದ್ದ 13 ಕಂತುಗಳ ಧಾರಾವಾಹಿಗಳು. ಏನೇ ಅಂದರೂ 3—4 ತಿಂಗಳ ಕೆಲಸ! ನಿರ್ದೇಶಕನೆಂದು ಹೆಸರು ಬರದಿದ್ದರೂ ಕೆಲಸಕ್ಕೆ ದೊರೆಯುವ ಸಂಭಾವನೆ ಸಂಬಳ ಬಾರದ ಕೊರತೆಯನ್ನು ನೀಗಿಸುತ್ತದೆ! ಹಾಗೆ ಆಗ ನಿರ್ದೇಶಕನಾಗಿ ನಾನು ತೊಡಗಿಕೊಂಡ ಧಾರಾವಾಹಿಯ ಹೆಸರು “ಒಂದು ಕಥಾನಕದ ಸುತ್ತ”. ಇದು ಆ ವೇಳೆಗಾಗಲೇ ಹಲವಾರು ಉತ್ತಮ ಕಥೆಗಳನ್ನು ಬರೆದು ಖ್ಯಾತರಾಗಿ ಸಾಹಿತ್ಯವಲಯದಲ್ಲಿ ಚಿರಪರಿಚಿತರಾಗಿದ್ದ ಕೆ.ಸತ್ಯನಾರಾಯಣ ಅವರ ‘ಒಂದು ಕಥಾನಕದ ಮೂಲಕ’ ಎಂಬ ಅವರ ಪ್ರಥಮ ಕಾದಂಬರಿಯನ್ನು ಆಧರಿಸಿದ್ದು. ಈ ಧಾರಾವಾಹಿಯ ನಿರ್ಮಾಪಕರು ವೆಂಕಟೇಶ್ ಹಾಗೂ ಮಿತ್ರರು; ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕೆ ರೂಪಾಂತರಿಸಿಕೊಡುವ ಹೊಣೆಯನ್ನು ಹೊತ್ತಿದ್ದವರು ಎಸ್.ವಿದ್ಯಾಶಂಕರ್. ವಿದ್ಯಾಶಂಕರ್ ಅವರೂ ಸಹಾ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿರುವಂಥವರು. ಸಿನೆಮಾ ಇವರ ವಿಶೇಷ ಆಸಕ್ತಿಯ ಕ್ಷೇತ್ರ.ಜಗತ್ತಿನ ಶ್ರೇಷ್ಠ ನಿರ್ದೇಶಕರ ಅತ್ಯುತ್ತಮ ಚಿತ್ರಗಳನ್ನು ಸೊಗಸಾಗಿ ವಿಶ್ಲೇಷಿಸಬಲ್ಲ ವಿದ್ಯಾಶಂಕರ್ ಅವರು ಜತೆಗಿರುತ್ತಾರೆನ್ನುವುದೇ ಹೊಸ ಹುರುಪನ್ನು ತಂದಿತ್ತು.”ಒಂದು ಕಥಾನಕದ ಸುತ್ತ” ಸಾಹಿತ್ಯಿಕವಾಗಿ ಸಾಕಷ್ಟು ಮನ್ನಣೆ ಗಳಿಸಿಕೊಂಡ ಒಂದು ವಿಶಿಷ್ಟ ಕಥಾನಕ; ಒಂದು ಕೇಂದ್ರಪ್ರಜ್ಞೆಯ ಸುತ್ತ ಕಥಾನಕವನ್ನು ಕಟ್ಟಿ ಬೆಳೆಸುವ ಮಾರ್ಗವನ್ನು ತ್ಯಜಿಸಿ ವಿಕೇಂದ್ರೀಕೃತ ಕಥಾನಕವನ್ನು ಕಟ್ಟಿಕೊಡುವ ವಿಶಿಷ್ಟ ಪ್ರಯತ್ನ. ಕಥೆ—ಸನ್ನಿವೇಶ ಒಂದೇ ಆದರೂ ಹಲವು ಪಾತ್ರಗಳ ಹಲವಾರು ದೃಷ್ಟಿಕೋನಗಳಿಂದ, ಹಲವು ಮಗ್ಗುಲುಗಳಿಂದ ಸನ್ನಿವೇಶವನ್ನು ಶೋಧಿಸುವ ಪ್ರಯತ್ನ ಇದು. ಹೀಗೆ ಒಂದೊಂದು ಪಾತ್ರವೂ ನೋಡುವ ದೃಷ್ಟಿಕೋನಗಳು ಬೇರೆ ಬೇರೆಯಾಗುತ್ತಲೇ ಹೊಸತೊಂದು ದೃಷ್ಟಿಕೋನ ಹೊರಹೊಮ್ಮುವ ಸಾಧ್ಯತೆಯೂ ಕಾದಂಬರಿಯಲ್ಲಿ ಅಡಕವಾಗಿರುವುದು ಸ್ವಾರಸ್ಯದ ಸಂಗತಿ.ಹೀಗೆ ಕುತೂಹಲಕಾರಿ ಕಥೆಯನ್ನು ಹೇಳುತ್ತಲೇ ಸಾಹಿತ್ಯಿಕವಾಗಿಯೂ ಮುಖ್ಯವಾಗುವ ಸತ್ಯನಾರಾಯಣ ಅವರ ಈ ಕಾದಂಬರಿಯನ್ನು ವಿದ್ಯಾಶಂಕರ್ ಅವರು ದೃಶ್ಯಮಾಧ್ಯಮಕ್ಕೆ ಸೊಗಸಾಗಿ ಅಳವಡಿಸಿಕೊಟ್ಟಿದ್ದರು. ಒಂದು ತರಬೇತಿ ಸಂಸ್ಥೆಗೆ ನೇಮಕಗೊಂಡು ಬಂದಿರುವ ಕೆಲ ಅಭ್ಯರ್ಥಿಗಳ ಅಲ್ಲಿನ ಬದುಕಿನಲ್ಲಿ ನಡೆಯುವ ಹಲ ಘಟನಾವಳಿಗಳ ಸುತ್ತ ಕಾದಂಬರಿಯ ಶಿಲ್ಪ ಕಟ್ಟಿಕೊಳ್ಳುತ್ತಾ ಹೋಗುತ್ತದೆ.ಈ ಧಾರಾವಾಹಿಯಲ್ಲಿ ನನಗೆ ಸಹಾಯಕನಾಗಿದ್ದವನು ‘ತಬರ’ನೆಂದೇ ರಂಗಭೂಮಿಯಲ್ಲಿ ಖ್ಯಾತನಾಗಿರುವ ನಂದ ಕಿಶೋರ್; ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದವರು ಸೇತುರಾಂ, ಸಂಕೇತ್ ಕಾಶಿ, ವಾಣಿಶ್ರೀ, ಸುನೇತ್ರಾ, ಹಿರಿಯಣ್ಣಯ್ಯ, ರಾಜಲಕ್ಷ್ಮಿ ಮುಂತಾದವರು. ಹೆಸರುಘಟ್ಟದಲ್ಲಿರುವ ಹಾರ್ಟಿಕಲ್ಚರ್ ಇನ್ಸ್ ಟಿಟ್ಯೂಟ್ ನಲ್ಲಿ ಬಹುತೇಕ ಚಿತ್ರೀಕರಣವನ್ನು ನಡೆಸಿದ್ದೆವು. ಆ ಕಾಲಕ್ಕೆ ತುಂಬಾ ಜನಪ್ರಿಯತೆಯನ್ನು ನಮ್ಮ ಈ ಧಾರಾವಾಹಿ ಗಳಿಸಿಕೊಂಡಿತ್ತೆನ್ನುವುದು ನನಗೊಂದು ಹೆಮ್ಮೆಯ ಸಂಗತಿ. ವೈ ಎನ್ ಕೆ, ನರಹಳ್ಳಿ ಬಾಲು ಮುಂತಾದವರು ‘ಕಥಾನಕ’ವನ್ನು ಮೆಚ್ಚಿದ್ದ ಸಂಗತಿಯನ್ನು ಸತ್ಯನಾರಾಯಣ ಅವರು ನೆನೆಸಿಕೊಳ್ಳುತ್ತಾರೆ. ಹಾಗೆಯೇ ಪ್ರಜಾವಾಣಿಯಲ್ಲಿ ಟಿ ವಿ ಕಾರ್ಯಕ್ರಮಗಳನ್ನು ವಿಶ್ಲೇಷಿಸುತ್ತಿದ್ದ ದಿವಸ್ಪತಿ ಹೆಗ್ಗಡೆಯವರು ತಮ್ಮ ಅಂಕಣದಲ್ಲಿ ನಮ್ಮ ಧಾರಾವಾಹಿಯನ್ನು ಮೆಚ್ಚಿ ಮೂರು ನಾಲ್ಕು ವಾರಗಳು ಬರೆದಿದ್ದರು.
ಮತ್ತೂ ಒಂದು ಪ್ರಸಂಗ—ಮನುಷ್ಯನ ಸಣ್ಣತನವನ್ನು ಬಯಲಿಗೆಳೆಯುವಂತಹ ಒಂದು ಚಿಕ್ಕ ಪ್ರಸಂಗ ನೆನಪಿಗೆ ನುಗ್ಗಿ ಬರುತ್ತಿದೆ:
ಧಾರಾವಾಹಿಯ ಚಿತ್ರೀಕರಣ ಆರಂಭವಾದ ಎರಡನೆಯ ದಿನ ಇರಬೇಕು, ಹತ್ತಿರದ ಕ್ಯಾಂಟೀನ್ ನಿಂದ ಬಂದಿದ್ದ ಅಡುಗೆ ವಿಪರೀತ ಖಾರವಾಗಿತ್ತು.. ‘ಹಾಹಾಖಾರ’ವೇಳುವಷ್ಟು! ಅಂದು ಸಂಜೆ ಶೂಟಿಂಗ್ ಮುಗಿಸಿ ಹೊರಟಾಗ ಮಾರ್ಗಮಧ್ಯದಲ್ಲೇ ಇದ್ದ ಆ ಕ್ಯಾಂಟೀನ್ ಗೆ ಹೋಗಿ, “ದಯವಿಟ್ಟು ಅಷ್ಟು ಖಾರ ಹಾಕಬೇಡಿ..ಹೊಟ್ಟೆ ಉರಿ ಕಿತ್ತುಕೊಳ್ಳುತ್ತದೆ” ಎಂದು ವಿನಂತಿಸಿಕೊಂಡೆ. ಕ್ಯಾಂಟೀನ್ ಮಾಲೀಕ ಒಂದು ಕ್ಷಣ ನನ್ನನ್ನೇ ದಿಟ್ಟಿಸಿ ಹೇಳಲೋ ಬೇಡವೋ ಎಂದು ಹೊಯ್ದಾಡುತ್ತಾ ಕೊನೆಗೆ ಬಾಯಿಬಿಟ್ಟ: “ನಾವು ಅಷ್ಟು ಖಾರ ಮಾಡೋದೇ ಇಲ್ಲ ಸಾರ್..ಬೇಕಾದ್ರೆ ಇಲ್ಲೇ ಒಂದು ಚೂರು ರುಚಿ ನೋಡಿ ನೀವೇ ನಿರ್ಧಾರ ಮಾಡಿ… ಅದ್ಯಾರೋ ಮ್ಯಾನೇಜರ್ ಅಂತೆ.. ನಿಮ್ಮ ತಂಡದವರೇ.. ಅವರು ಬಂದು,’ನಮ್ಮಲ್ಲಿ ಕೆಲಸಕ್ಕೆ ಬಂದಿರೋ ಹುಡುಗರ ಬಾಯಿ—ಹೊಟ್ಟೆ ತುಂಬಾ ದೊಡ್ಡದು..ಸಿಕ್ಕಾಪಟ್ಟೆ ತಿಂದುಬಿಡ್ತಾರೆ.. ಅದಕ್ಕೇ ಸ್ವಲ್ಪ ಖಾರ ಜಾಸ್ತಿ ಹಾಕಿ ಸಾರು ಸಾಂಬಾರ್ ಗೆ.. ಆಗ ಆಟೋಮ್ಯಾಟಿಕ್ ಆಗಿ ಕಮ್ಮಿ ತಿಂತಾರೆ’ ಅಂತ ಸೂಚನೆ ಕೊಟ್ರು ಸಾರ್..ದುಡ್ಡು ಕೊಡೋರ ಮಾತು ಕೇಳಬೇಕಲ್ಲಾ ಸಾರ್ ನಾವು”!
ಈ ಮಾತು ಕೇಳಿ ನನಗೆ ದಿಗ್ಭ್ರಮೆಯಾಗಿಹೋಯಿತು! ಅಯ್ಯೋ ದೇವಾ! ಇಂತಹ ಜನರೂ ಇದ್ದಾರೆಯೇ! ಕಷ್ಟಪಟ್ಟು ಬೆಳಗಿನಿಂದ ರಾತ್ರಿಯವರೆಗೆ ದುಡಿಯುವ ಜೀವಗಳ ತಿನ್ನುವ ಅನ್ನಕ್ಕೂ ಹೀಗೆ ಕತ್ತರಿ ಹಾಕುವುದೇ! “ಯಾರು ಏನೇ ಹೇಳಿದರೂ ನೀವು ಕೇಳಬೇಡಿ..ನೀವು ಮಾಮೂಲಾಗಿ ಮಾಡೋ ಅಡಿಗೆ ಕಳಿಸಿ ಸಾಕು..ಮ್ಯಾನೇಜರ್ ಹತ್ರ ನಾವು ಮಾತಾಡ್ತೀವಿ” ಎಂದು ನುಡಿದು ಅಲ್ಲಿಂದ ಹೊರಟೆ.
1993 ರ ಮಹಾ ಭೂಕಂಪದ ಕರಿ ನೆರಳಿನ್ನೂ ನೆನಪಿನಂಗಳದಲ್ಲಿ ಹರಿದಾಡುತ್ತಿರುವಂತೆಯೇ 1994 ನೆಯ ಇಸವಿ ಮತ್ತೊಂದು ದೊಡ್ಡ ದುರಂತಕ್ಕೆ ಸಾಕ್ಷೀಭೂತವಾಗಿಹೋಯಿತು! ಈ ಸಂದರ್ಭದ ಘಟನಾವಳಿಗಳನ್ನು ನೆನಪಿಸಿ ಮಾಹಿತಿ ಸಂಗ್ರಹಕ್ಕೆ ನೆರವಾದವರು ಪ್ರೀತಿಯ ವಿಜಯಮ್ಮ ಹಾಗೂ ಆತ್ಮೀಯ ಗೆಳೆಯ ರಾಜೇಂದ್ರಕಟ್ಟಿ.ಅದು ಘಟಿಸಿದ್ದು ಹೀಗೆ:
ಆಗ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿದ್ದವರು ಅನೀಸ಼್ ಉಲ್ ಹಕ್ ಅವರು. 94 ರ ಅಕ್ಟೋಬರ್ 2 ನೆಯ ತಾರೀಖು ಗಾಂಧಿ ಜಯಂತಿಯ ದಿವಸ ಹಕ್ ಸಾಹೇಬರು ಇದ್ದಕ್ಕಿದ್ದಂತೆ ನಮ್ಮ ಕೇಂದ್ರದಿಂದ ಉರ್ದು ವಾರ್ತಾಪ್ರಸಾರವನ್ನು ಆರಂಭಿಸಿಬಿಟ್ಟರು. ಮುಂದಿನ ಕೆಲ ಸಮಯದಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಈ ಉರ್ದು ವಾರ್ತಾಪ್ರಸಾರಕ್ಕೆ ವಿಶೇಷ ಮಹತ್ವ ಪ್ರಾಪ್ತವಾಗಿಬಿಟ್ಟಿತ್ತು. ಚುನಾವಣೆಯ ಹೊಸ್ತಿಲಲ್ಲಿ ವಾರ್ತಾಪ್ರಸಾರ ಆರಂಭಿಸಿರುವುದು ಒಂದು ವರ್ಗದ ಓಲೈಕೆಗಾಗಿ ಎಂತಲೂ ಇದು ಅತ್ಯಂತ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯೆಂತಲೂ ಹಲವಾರು ಸಂಘ ಸಂಸ್ಥೆಗಳು ಪ್ರತಿಭಟನೆಗೆ ಧುಮುಕಿದವು.ಡಾ॥ಚಿದಾನಂದ ಮೂರ್ತಿ, ಡಾ॥ವಿಜಯಾ, ರಾ.ನಂ.ಚಂದ್ರಶೇಖರ್ ಮುಂತಾದವರ ನೇತೃತ್ವದಲ್ಲಿ ಕನ್ನಡ ಶಕ್ತಿ ಕೇಂದ್ರದವರು, ಡಾ॥ರಾಜ್ ಕುಮಾರ್ ಅಭಿಮಾನಿ ಸಂಘದವರು, ಅನೇಕ ಕನ್ನಡ ಹೋರಾಟಗಾರರು ನೂರಾರು ಗಣ್ಯರ ಸಹಿ ಸಂಗ್ರಹಿಸಿ ಕೂಡಲೇ ಉರ್ದು ವಾರ್ತಾಪ್ರಸಾರವನ್ನು ನಿಲ್ಲಿಸಬೇಕೆಂದು ಕೋರಿ ಆಗ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ವೀರಪ್ಪ ಮೊಯ್ಲಿ ಅವರಿಗೆ ಪತ್ರ ಬರೆದರು. ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚುತ್ತಾ ಹೋಗಿ ಇದು ರಾಷ್ರ್ಟಮಟ್ಟದಲ್ಲಿ ದೊಡ್ಡ ಸುದ್ದಿಯಾಗಿಹೋಯಿತು. ಪ್ರತಿಭಟನೆಗೆ ಅಂಜಿ ದೂರದರ್ಶನ ಕೇಂದ್ರ ಉರ್ದು ವಾರ್ತಾಪ್ರಸಾರವನ್ನು ನಿಲ್ಲಿಸುತ್ತೇವೆಂದು ಹೇಳಿಕೆ ಕೊಟ್ಟರೂ ಮಾನ್ಯ ಮುಖ್ಯಮಂತ್ರಿಗಳು, “ಉರ್ದು ವಾರ್ತಾಪ್ರಸಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶ ನೀಡಿದ್ದೇವೆ” ಎಂದು ಹೇಳಿಕೆ ಕೊಟ್ಟುಬಿಟ್ಟರು! ಮತ್ತೆ ಚುನಾವಣೆಯನ್ನು ಲಕ್ಷ್ಯದಲ್ಲಿಟ್ಟುಕೊಂಡೇ ಇಂಥದೊಂದು ‘ಅಡ್ಡಗೋಡೆಯ ಮೇಲಿನ ದೀಪ’ದಂತಹ ಓಲೈಕೆಯ ಹೇಳಿಕೆ ಹೊರಟಿರಬಹುದು ಎಂಬ ಭಾವನೆ ಪ್ರಚುರವಾಗುತ್ತಿದ್ದಂತೆ ಪ್ರತಿಭಟನೆ ತೀವ್ರ ಸ್ವರೂಪದಲ್ಲಿ ಕೆರಳಿಬಿಟ್ಟಿತು. ಆ ಸಂದರ್ಭದಲ್ಲೇ ಒಂದು ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜನೆಗೊಂಡು ಆ ಮೆರವಣಿಗೆಯ ಮುಂಚೂಣಿಯಲ್ಲಿ ಡಾ॥ಚಿದಾನಂದಮೂರ್ತಿಗಳು, ದೊರೆಸ್ವಾಮಿಗಳು, ಡಾ॥ವಿಜಯಾ,ರಾ.ನಂ.ಚಂದ್ರು, ಗೊ.ರು.ಚನ್ನಬಸಪ್ಪ, ಪ್ರಮೀಳಾ ನೇಸರ್ಗಿ, ಹನುಮಂತರಾಯಪ್ಪ, ಮುಖ್ಯಮಂತ್ರಿ ಚಂದ್ರು, ಹಂಸಲೇಖ, ಜಿ.ಕೆ.ಸತ್ಯ,ಹೆಚ್.ಎಸ್.ಪಾರ್ವತಿ ಮೊದಲಾದ ವಿವಿಧ ಕ್ಷೇತ್ರಗಳ ಅನೇಕ ಗಣ್ಯರಿದ್ದರು. ಮೆರವಣಿಗೆ ಸಿಟಿಮಾರ್ಕೆಟ್ ಪ್ರದೇಶದ ಬಳಿ ಬಂದಾಗ ಯಾರೋ ಕೆಲ ದುಷ್ಕರ್ಮಿಗಳು ಮೆರವಣಿಗೆಯ ಮೇಲೆ ಕಲ್ಲು ತೂರಿದ್ದೇ ಕಾರಣವಾಗಿ ಮೆರವಣಿಗೆಯ ಸಾತ್ವಿಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿಬಿಟ್ಟಿತಲ್ಲದೇ ಅದಕ್ಕೆ ಕೋಮುಗಲಭೆಯ ಕಪ್ಪೂ ಮೆತ್ತಿಕೊಂಡುಬಿಟ್ಟಿತು. ಅನೇಕ ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಅಗ್ನಿಯ ಕೆನ್ನಾಲಿಗೆಗೆ ಸಿಕ್ಕು ಬೂದಿಯಾಗಿ ಹೋದವು. ದೊಡ್ಡ ಮಟ್ಟದ ಗಲಾಟೆಯೇ ಆರಂಭವಾಗಿ ಬೇರೆ ದಾರಿಯೇ ಇಲ್ಲದೆ ಪೋಲೀಸರು ಗೋಲೀಬಾರ್ ನಡೆಸಬೇಕಾಯಿತು. ಈ ಗಲಾಟೆ ಹಾಗೂ ಗೋಲೀಬಾರ್ ಗಳಲ್ಲಿ 23 ಜನ ಪ್ರಾಣ ಕಳೆದುಕೊಂಡರೆಂದೂ ನೂರಾರು ಜನ ತೀವ್ರವಾಗಿ ಗಾಯಗೊಂಡರೆಂದೂ ಅಂದಿನ ಪತ್ರಿಕಾ ವರದಿಗಳು ತಿಳಿಸಿದವು. ಈ ಗಲಭೆಗಳ ಸಂಬಂಧ ಇನ್ನೂರು ಮಂದಿಯನ್ನು ಬಂಧಿಸಿರುವುದಾಗಿಯೂ ಮುನ್ನೂರು ಮಂದಿ ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಆಗಿನ ಪೋಲೀಸ್ ಕಮೀಷನರ್ ಪಿˌಕೋದಂಡರಾಮಯ್ಯನವರು ಹೇಳಿಕೆ ಕೊಟ್ಟರು. ಆಗ ಇಲ್ಲೇ ಬೆಂಗಳೂರಿನಲ್ಲಿಯೇ ಇದ್ದ ನಾನು ಆಗಾಗ್ಗೆ ದೂರದರ್ಶನ ಕೇಂದ್ರಕ್ಕೆ ಹೋಗಿ ಬರುತ್ತಿದ್ದೆ. ಒಂದು ದಿನ ಅಚಾನಕ್ ಆಗಿ ಅಲ್ಲಿ ನನಗೆದುರಾದ ಹಕ್ ಸಾಹೇಬರು ಕ್ಷಣಕಾಲ ನನ್ನನ್ನೇ ದಿಟ್ಟಿಸಿ ನೋಡಿದರು! ನನ್ನ ಮೇಲೆ ಮೊದಲಿನಿಂದಲೂ ಅವರಿಗೆ ‘ವಿಶೇಷ ಪ್ರೀತಿ’ಯಲ್ಲವೇ! ಹಾಗಾಗಿ ತಮಾಷೆಗೆ ಅನ್ನಿಸುವ ಧಾಟಿಯಲ್ಲಿ ಕೇಳಿಯೇ ಬಿಟ್ಟರು: “ಏನ್ರಪ್ಪಾ.. ಗುಲ್ಬರ್ಗಾ ಬಿಟ್ಟು ಬೆಂಗ್ಳೂರಿಗೆ ಬಂದುಬಿಟ್ಟಿದೀರಿ! ಅಲ್ಲಿ ಭೂಕಂಪ ಮಾಡ್ಸಿಬಿಟ್ರಿ.. ಇಲ್ಬಂದು ಬೆಂಕಿ ಹಚ್ಚಿಬಿಟ್ರಿ! ಈಗ ಸಂತೋಷಾನಾ ನಿಮ್ಗೆ?”. ಅವರ ಮಾತು ಕೇಳಿ ನನಗೆ ನಖಶಿಖಾಂತ ಉರಿದುಹೋಯಿತು. “ಶಾಂತವಾಗಿದ್ದ ಮನೇಗೆ ಕಿಚ್ಚು ಹಚ್ಚಿದ್ದು ಯಾರು ಅಂತ, ಉರಿಯೋ ಮನೆ ಬೆಂಕೀಲಿ ಗಳ ಹಿರೀತಿರೋದು ಯಾರು ಅಂತ ಎಲ್ರಿಗೂ ಗೊತ್ತಿದೆ ಬಿಡಿ ಸರ್..ನನ್ನಂಥ ಒಬ್ಬ ಸಾಧಾರಣ ಮನುಷ್ಯನಿಗೆ ಯಾಕೆ ಅಷ್ಟು ದೊಡ್ಡ ಕ್ರೆಡಿಟ್ ಕೊಡ್ತೀರಿ” ಎಂದು ಖಾರವಾಗಿ ನುಡಿದವನೇ ಅವರಿಗದು ಅರ್ಥವಾಗುವ ಮುನ್ನವೇ ಬಿರಬಿರನೆ ಹೊರಟುಹೋದೆ.
ಮತ್ತೆರಡು ದಿನದ ನಂತರ ಪರಿಸ್ಥಿತಿ ಹತೋಟಿ ಮೀರಿ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆಯೆಂಬುದು ಮನವರಿಕೆಯಾಗುತ್ತಿದ್ದಂತೆ ಉರ್ದುವಾರ್ತಾಪ್ರಸಾರವನ್ನು ನಿಲ್ಲಿಸಲಾಯಿತು. ‘ಕಾರಣ ಪುರುಷ’ ಅನೀಸ್ ಉಲ್ ಹಕ್ ಅವರನ್ನು ಬೆಂಗಳೂರು ಕೇಂದ್ರದಿಂದ ವರ್ಗಾಯಿಸಲಾಯಿತು. ಆದರೆ ಆ ವೇಳೆಗಾಗಲೇ ಆಗಬಾರದಿದ್ದ ಅನಾಹುತಗಳು ಘಟಿಸಿಬಿಟ್ಟಿದ್ದವು. ಹತ್ತಾರು ಅಮಾಯಕರ ಉಸಿರು ನಿಂತು ಆ ಕುಟುಂಬಗಳು ಬೀದಿಗೆ ಬಂದಿದ್ದವು. ಉರ್ದು ವಾರ್ತಾಪ್ರಸಾರಕ್ಕೆ ಕೊನೆಗೊಮ್ಮೆ ತಡೆ ಹಾಕಿದಾಗ ನೆನಪಿಗೆ ಬಂದದ್ದು ಎರಡು ಸಂಗತಿಗಳು: ಎಂ.ಎಸ್.ಸತ್ಯುಅವರ ‘ಬರ’ ಚಿತ್ರದಲ್ಲಿ ಹೀಗೆಯೇ ಅನಾಹುತಗಳ ಸರಣಿಯ ಬಳಿಕ ಕೊನೆಗೊಮ್ಮೆ ‘ಇದು ಬರಪೀಡಿತ ಪ್ರದೇಶ’ ಎಂದು ಅಧಿಕೃತ ಹೇಳಿಕೆ ಹೊರಡಿಸುವ ಮಾರ್ಮಿಕ ಸನ್ನಿವೇಶ ಹಾಗೂ ಬಹು ಪ್ರಚಲಿತ ಗಾದೆ ಮಾತು: “ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ”!
। ಇನ್ನು ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು