ಶ್ರೀನಿವಾಸ ಪ್ರಭು ಅಂಕಣ – ಆ ಕಹಿ ಪ್ರಸಂಗ ನೆನಪಿಗೆ ನುಗ್ಗಿ ಬಂತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

61

‘ಗುಳ್ಳೆನರಿ’, ‘ಉದ್ಭವ’ ಹಾಗೂ ‘ಬೇಲಿ ಮತ್ತು ಹೊಲ’ ನಾಟಕಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಲ್ಲದೆ ಈ ನಾಟಕಗಳ ಪ್ರದರ್ಶನ ಏರ್ಪಡಿಸಲು ರಾಜ್ಯದ ನಾನಾ ಕಡೆಗಳಿಂದ ಆಹ್ವಾನ ಬರುತ್ತಿತ್ತು. ಹಾಗಾಗಿ ಹುಬ್ಬಳ್ಳಿ, ಧಾರವಾಡ, ಬೆಳಗಾಂ ಹಾಗೂ ಬಾಂಬೆಯಲ್ಲಿ ಈ ನಾಟಕಗಳ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡು ಪ್ರವಾಸ ಹೊರಟೆವು. ಈ ವೇಳೆಗೆ ನಮ್ಮ ತಂಡದ ಗೋಪಾಲಕೃಷ್ಣ ಒಳ್ಳೆಯ ಸಂಘಟಕನಾಗಿ ತರಬೇತುಗೊಂಡಿದ್ದು ಇಡೀ ಪ್ರವಾಸದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ.

ಹುಬ್ಬಳ್ಳಿ—ಧಾರವಾಡ—ಬೆಳಗಾಂಗಳಲ್ಲಿ ಗುಳ್ಳೆನರಿ ಹಾಗೂ ಬೇಲಿ ಮತ್ತು ಹೊಲ ನಾಟಕಗಳ ಪ್ರದರ್ಶನಗಳೂ ಬಾಂಬೆಯಲ್ಲಿ ಉದ್ಭವ ನಾಟಕದ ಪ್ರದರ್ಶನವೂ ಆಯೋಜನೆಗೊಂಡಿದ್ದವು. ಹುಬ್ಬಳ್ಳಿಯಲ್ಲಿ ನಾಟಕಗಳ ಪ್ರದರ್ಶನವೇರ್ಪಡಿಸಲು ಆಸಕ್ತಿ ತೋರಿ ನಮಗೆ ನೆರವಾದವರು ಅನಿಲ್ ಠಕ್ಕರ್ ಅವರು.

ಧಾರವಾಡದಲ್ಲಿ ಪ್ರಸಿದ್ಧ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ನಮ್ಮ ನಾಟಕಗಳನ್ನು ಆಯೋಜಿಸಲು ನೆರವಾದರೆ ಬೆಳಗಾಂನಲ್ಲಿ ಈ ಜವಾಬ್ದಾರಿ ಹೊತ್ತವರು ಪ್ರಸಿದ್ಧ ನಟ—ಸಂಘಟಕ ಶ್ರೀಪತಿ ಮಂಜನಬೈಲು ಅವರು.ಬಾಂಬೆ ಪ್ರದರ್ಶನಕ್ಕೆ ನೆರವು ನೀಡಲು ಮುಂದೆ ಬಂದವರು ಮಂಜುನಾಥ ದ್ವಯರ (ಡಾ॥ಮಂಜುನಾಥ್ ಹಾಗೂ ಮಂಜುನಾಥಯ್ಯ) ನೇತೃತ್ವದ ಮೈಸೂರು ಅಸೋಸಿಯೇಷನ್ ತಂಡದವರು. ಇದೇ ಮೈಸೂರು ಅಸೋಸಿಯೇಷನ್ ತಂಡಕ್ಕೆ ಬರುವ ತಿಂಗಳಲ್ಲೇ ಒಂದು ಶಿಬಿರವನ್ನು ನಡೆಸಿ ‘ಬೇಲಿ ಮತ್ತು ಹೊಲ’ ನಾಟಕವನ್ನು ಮಾಡಿಸುವುದೆಂದು ತೀರ್ಮಾನವಾಗಿತ್ತು.

ಅಂತೂ ಸಕಲ ಸಿದ್ಧತೆಗಳೊಂದಿಗೆ ರಂಗ ಪ್ರವಾಸಕ್ಕೆ ಸಂಭ್ರಮದಿಂದ ಎಲ್ಲರೂ ಹೊರಟೆವು.
ಮೊಟ್ಟ ಮೊದಲು ಪ್ರದರ್ಶನಗಳ ‘ಆಯೋಜನೆಯಾದದ್ದು ಹುಬ್ಬಳ್ಳಿಯಲ್ಲಿ, ಸವಾಯಿ ಗಂಧರ್ವ ರಂಗಮಂದಿರದಲ್ಲಿ. ‘ಗುಳ್ಳೆನರಿ’ ಹಾಗೂ ಬೇಲಿ ಮತ್ತು ಹೊಲ’—ಎರಡೂ ನಾಟಕಗಳು ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರೆದುರು ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡವು. ನಮಗೆ ಉಳಿದುಕೊಳ್ಳಲಿಕ್ಕೆ ಅದೇ ರಂಗಮಂದಿರದಲ್ಲಿಯೇ ಒಂದು ದೊಡ್ಡ ಹಜಾರದಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಅನಿಲ್ ಠಕ್ಕರ್ ಅವರು ಪೂರ್ವಭಾವಿಯಾಗಿಯೇ ನನಗೊಂದು ಸೂಚನೆ ನೀಡಿದ್ದರು: “ನೀವು ತಂಗಲು ವ್ಯವಸ್ಥೆ ಮಾಡಿರುವ ಹಜಾರದ ಮಗ್ಗುಲಿಗೇ ಪ್ರತಿನಿತ್ಯ ಮುಂಜಾನೆ ಐದು ಗಂಟೆಯಿಂದಲೇ ಯೋಗ ಶಿಬಿರ ನಡೆಯುತ್ತಿದೆ. ಆದ್ದರಿಂದ ದಯವಿಟ್ಟು ತುಂಬಾ ಗಲಾಟೆಯಾಗದಂತೆ, ಶಿಬಿರಕ್ಕೆ—ಇಲ್ಲೇ ತಂಗಿರುವ ಶಿಬಿರಾರ್ಥಿಗಳಿಗೆ ತೊಂದರೆ ಆಗದಂತೆ ನಡೆದುಕೊಳ್ಳಲು ನಿಮ್ಮ ತಂಡದವರಿಗೆ ಸೂಚನೆ ಕೊಟ್ಟುಬಿಡಿ”. ಅವರ ಕೋರಿಕೆಯಂತೆಯೇ ನಾನು ನಮ್ಮ ತಂಡದವರೆಲ್ಲರಿಗೂ ಶಿಸ್ತು—ಸಂಯಮಗಳನ್ನು ಕಾಪಾಡಿಕೊಂಡಿರಲು ಸೂಚನೆಗಳನ್ನು ನೀಡಿದ್ದೆ. ಹುಬ್ಬಳ್ಳಿಯ ಪ್ರದರ್ಶನಗಳ ನಂತರ ಪ್ರದರ್ಶನಗಳಿದ್ದುದು ಧಾರವಾಡದಲ್ಲಿ.

ಧಾರವಾಡದಲ್ಲಿಯೂ ಯಶಸ್ವೀ ಪ್ರದರ್ಶನಗಳನ್ನು ನೀಡಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಶುಭ ಹಾರೈಕೆಗಳನ್ನು ಪಡೆದುಕೊಂಡು ಅಲ್ಲಿಂದ ಬೆಳಗಾಂನತ್ತ ಪ್ರಯಾಣ ಬೆಳೆಸಿದೆವು. ಆಗಲೇ ನನಗೆ ಆಘಾತವುಂಟುಮಾಡುವಂತಹ ಸುದ್ದಿಯೊಂದು ಕರ್ಣಾಕರ್ಣಿಯಾಗಿ ತೇಲಿಬಂತು: ‘ಹುಬ್ಬಳ್ಳಿ ಪ್ರದರ್ಶನದ ನಂತರ ನಾಲ್ಕಾರು ಕಲಾವಿದರು ಸ್ವಲ್ಪ ಹೆಚ್ಚು ಅನ್ನುವಂತೆಯೇ ‘ತೀರ್ಥ ಸೇವನೆ’ ಮಾಡಿದ್ದಾರೆ; ಮೂರ್ತಿ ಎಂಬ ಹೊಸದಾಗಿ ತಂಡಕ್ಕೆ ಸೇರಿದ್ದ ಒಬ್ಬ ಕಲಾವಿದನಂತೂ ಗುಂಡಿನ ‘ಏಟ’ನ್ನು ತಡೆದುಕೊಳ್ಳಲಾಗದೆ ತೂರಾಡುತ್ತಾ ಮೋರಿಗೆ ಜಾರಿದ್ದಾನೆ.. ಉಳಿದವರು ಕಷ್ಟಪಟ್ಟು ಅವನನ್ನು ಎಬ್ಬಿಸಿಕೊಂಡು ಹೋಗಿ ಮಲಗಿಸಿದ್ದಾರೆ!”

ನನಗೇಕೋ ಈ ಸುದ್ದಿ ಕೇಳಿ ವಿಪರೀತ ಸಿಟ್ಟು ಬಂದುಬಿಟ್ಟಿತು. “ಯಾವುದೇ ಗದ್ದಲ—ಆಭಾಸಗಳಾಗಬಾರದು, ಬೆಳಗಾಂನಲ್ಲಿ ಪ್ರದರ್ಶನಗಳ ನಂತರ ಭರ್ಜರಿ ಪಾರ್ಟಿಯ ಆಯೋಜನೆಯೇ ಆಗಿದೆ; ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಕೊಂಚ ಸೂಕ್ಷ್ಮವಿರುವುದರಿಂದ ಸಂಯಮವಿರಲಿ” ಎಂದು ನಾನು ಮುಂಚಿತವಾಗಿಯೇ ಸೂಚನೆ ಕೊಟ್ಟು ವಿನಂತಿಸಿಕೊಂಡಿದ್ದೆ; ಆದರೂ ಹುಡುಗರು ಹೀಗೆ ಮಾಡಿಬಿಟ್ಟರೇ?! ಪುಣ್ಯವಶಾತ್ ಹೆಚ್ಚಿನ ಆಭಾಸವಾಗಲಿಲ್ಲ..ಸರಿ. ಆದರೆ ಏನಾದರೂ ಮುಜುಗರವಾಗುವಂತಹ ಪ್ರಸಂಗ ಘಟಿಸಿದ್ದರೆ ಅನಿಲ್ ಠಕ್ಕರ್ ಅವರಿಗೆ ನಾವು ಮುಖ ತೋರಿಸಲಾಗುತ್ತಿತ್ತೇ? ಹೊರಗಡೆ ಪ್ರವಾಸಕ್ಕೆಂದು ಬಂದಾಗ ದೊರೆಯುವ ಸ್ವಾತಂತ್ರ್ಯದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂಬ ಹುಡುಗರ ತಹತಹ ನನಗೆ ಅರ್ಥವಾಗದ್ದಲ್ಲವಾದರೂ ವಿಶೇಷ ಸಂದರ್ಭಗಳಲ್ಲೂ ಒಂದು ಶಿಸ್ತು—ಕಟ್ಟುಪಾಡಿಲ್ಲದಿದ್ದರೆ ಹೇಗೆ?..ಹೀಗೆಲ್ಲಾ ಯೋಚಿಸಿ ಮನಸ್ಸು ಯಾಕೋ ತುಂಬಾ ವ್ಯಗ್ರಗೊಂಡು ಬಿಟ್ಟಿತು. ಎಲ್ಲಾ ಕಲಾವಿದರನ್ನೂ ಕೂರಿಸಿಕೊಂಡು ಶಿಸ್ತಿನ ಬಗ್ಗೆ ಒಂದು ಪುಟ್ಟ ಭಾಷಣವನ್ನೇ ಮಾಡಿದೆ.

“ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಕೊಳ್ಳಬೇಕೆನ್ನುವವರು ಅತ್ಯಂತ ಅಗತ್ಯವಾಗಿ ರೂಢಿಸಿಕೊಳ್ಳಲೇ ಬೇಕಾಗಿರುವುದು ಶಿಸ್ತು..” ಎಂದು ಮುಂತಾಗಿ ಮಾತಾಡುತ್ತಾ, “ನಾನು ಶಿಸ್ತಿಗೆ ತುಂಬಾ ಬೆಲೆ ಕೊಡುವಂಥವನು…ಅಶಿಸ್ತಿನ ನಡವಳಿಕೆಯನ್ನು ನಾನು ಎಷ್ಟುಮಾತ್ರಕ್ಕೂ ಸಹಿಸುವವನಲ್ಲ.. ನಿನ್ನೆಯ ಪ್ರಸಂಗದ ಬಗ್ಗೆ ನನಗೂ ಸುದ್ದಿ ಬಂದಿದೆ..ಮತ್ತೆಂದೂ ಇಂಥ ಪ್ರಸಂಗ ಮರುಕಳಿಸಬಾರದು.. ಒಂದು ವೇಳೆ ನನ್ನ ಗಮನಕ್ಕೆ ಯಾವುದಾದರೂ ಅಶಿಸ್ತಿನ ನಡವಳಿಕೆ ಬಂದದ್ದೇ ಆದರೆ ಅಂಥ ವ್ಯಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ತಂಡದಿಂದ ಹೊರಗಟ್ಟಬೇಕಾಗುತ್ತದೆ.. ಇದೊಂದು ವಿಷಯದಲ್ಲಿ ಹೊಂದಾಣಿಕೆ ಎಂಬ ಮಾತೇ ಇಲ್ಲ.. ನನ್ನ ಸಹನೆಯನ್ನು ದಯವಿಟ್ಟು ಪರೀಕ್ಷಿಸಬೇಡಿ” ಎಂದು ಸಾಕಷ್ಟು ಕಟುವಾಗಿಯೇ ತಂಡದ ಕಲಾವಿದರಿಗೆ ಎಚ್ಚರಿಕೆ ಕೊಟ್ಟೆ. ಆ ಕ್ಷಣಕ್ಕೆ ಯಾರೂ ತುಟಿ ಎರಡು ಮಾಡದೇ ಮೌನವಾಗಿಯೇ ಇದ್ದರು. ನಾನೂ ‘ಬಾಣ ಗುರಿ ಮುಟ್ಟಿದೆ’ ಎಂಬ ಸಮಾಧಾನದಲ್ಲಿ ಎದ್ದುಹೋದೆ.

ಮರುದಿನ ಬೆಳಗಾಂನಲ್ಲಿ ನಾಟಕ ಪ್ರದರ್ಶನ. ಬೆಳಿಗ್ಗೆ 11.30 ರ ಸಮಯ. ನಾನು ರಂಗಸಜ್ಜಿಕೆಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದೆ. ಆ ವೇಳೆಯಲ್ಲೇ ಗೋಪಿ ಒಂದು ಆಘಾತಕಾರೀ ಸುದ್ದಿ ತಂದ: ‘ಮೂರ್ತಿ ಎಂಬ ಕಲಾವಿದ ಸಿಟ್ಟುಮಾಡಿಕೊಂಡು ಬೆಂಗಳೂರಿಗೆ ವಾಪಸ್ ಹೊರಟುಬಿಟ್ಟಿದ್ದಾನೆ!’

ಈ ಮೂರ್ತಿಯೇ ಹುಬ್ಬಳ್ಳಿಯಲ್ಲಿ ‘ಗುಂಡಿನ ಏಟಿ’ಗೆ ತತ್ತರಿಸಿದವನೆಂದು ಸುದ್ದಿಯಾದದ್ದು! ಒಂದು ಕ್ಷಣ ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಅದೇ ವೇಳೆಗೆ ಮೂರ್ತಿ ತನ್ನ ಸೂಟ್ ಕೇಸ್ ಹಿಡಿದು ಹೊರಹೊರಟಿರುವುದು ಕಾಣಿಸಿತು. ‘ಯಾಕೆ ಮೂರ್ತಿ, ತಂಡ ಬಿಟ್ಟು ಹೋಗೋಅಂಥದ್ದು ಏನಾಗಿದೆ ಈಗ?’ ಎಂದು ನಾನವನನ್ನು ಕೇಳಿದೆ. ಧುಮುಗುಡುತ್ತಲೇ ಇದ್ದ ಮೂರ್ತಿ ಕೊಂಚ ಅಳು ಕೊಂಚ ಸಿಟ್ಟಿನಿಂದ ಗೊಣಗತೊಡಗಿದ: “ನಾನು ಥಿಯೇಟರ್ ಗೆ ಬರೋದು ಒಂದಷ್ಟು ಹೊತ್ತು ಕಳೆಯೋಕೆ. ನಾನು ಬ್ಯಾಂಕ್ ನಲ್ಲಿ ದೊಡ್ಡ ಆಫೀಸರ್…ಅಷ್ಟೇ ಅಲ್ಲ most respected officer. ಇದುವರೆಗೆ ಯಾರೂ ನನ್ನ ಕಡೆ ಒಂದು ಬೊಟ್ಟು ಮಾಡಿ ತೋರಿಸಿದ್ದಿಲ್ಲ..ಅಂಥಾದ್ರಲ್ಲಿ ನೀವು ಬಾಯಿಗೆ ಬಂದಹಾಗೆ ಬೈದುಬಿಟ್ರೆ ಸಿಟ್ಟು ಬರೋಲ್ಲವಾ? ಇನ್ನು ಯಾವತ್ತೂ ನಿಮ್ಮ ಟ್ರೂಪ್ ಗಾಗಲೀ ನಾಟಕಕ್ಕಾಗಲೀ ಖಂಡಿತ ಬರೋಲ್ಲ…ಮಾಡೋಕೆ ಸಾವಿರ ಕೆಲಸ ಇದೆ ನನಗೆ” ಎಂದವನೇ ಬಿರಬಿರನೆ ನಡೆಯತೊಡಗಿದ.

ನಿರ್ವಾಹವಿಲ್ಲದೆ ನಾನೂ ಅವನ ಜತೆ ಮಾತಾಡುತ್ತಾ ನಡೆದೆ: “ಮೂರ್ತಿ, ನಾಟಕಕ್ಕೆ ಬರೋದು—ನಮ್ಮ ಟ್ರೂಪ್ ನಲ್ಲಿ ಉಳಕೊಳ್ಳೋದು ನಿಮ್ಮ ಆಯ್ಕೆˌ. ಅದು ಯಾವುದಕ್ಕೂ ನಾನು ಬಲವಂತ ಮಾಡೋದಿಲ್ಲ. ಆದರೆ ಇವತ್ತು ನಾಟಕದ show ಇಟ್ಟುಕೊಂಡು ನೀವು ಬಿಟ್ಟು ಹೋಗ್ತಿರೋದು ಅಕ್ಷಮ್ಯ. ಬಿಟ್ಟು ಹೋಗ್ತಿರೋದಕ್ಕೆ ನೀವು ಕೊಡ್ತಿರೋ ಕಾರಣವಾದ್ರೂ ಏನು? ನಾನು ಬೈದಿರೋದರಿಂದ ನಿಮಗೆ ಅವಮಾನವಾಗಿದೆ ಅನ್ನೋದು.ಆದರೆ ನಾನು ವೈಯಕ್ತಿಕವಾಗಿ ನಿಮ್ಮೊಬ್ಬರನ್ನು ಮಾತ್ರ ಟೀಕಿಸಿಲ್ಲ.. ಒಟ್ಟಾರೆ ತಂಡದ ಎಲ್ಲರಿಗೂ ಅನ್ವಯವಾಗುವಂತೆ ಕೆಲ ಮಾತುಗಳನ್ನಾಡಿದ್ದೇನೆ ಅಷ್ಟೇ.. ಅಷ್ಟಕ್ಕೇ ಸಿಟ್ಟು ಮಾಡಿಕೊಂಡು ನಾಟಕ ಬಿಟ್ಟುಹೋಗುವುದು ಸರಿಯೇ? ನಿಮ್ಮ ವರ್ತನೆ ಬಾಲಿಶ ಎಂದು ನಿಮಗೇ ಅನ್ನಿಸುತ್ತಿಲ್ಲವೇ? ಜೊತೆಗೆ ನಿಮಗೆ ತಪ್ಪಿತಸ್ಥ ಭಾವನೆ ಕಾಡ್ತಾ ಇದೆ ಅಂತ ನೀವೇ ಸಾಬೀತು ಮಾಡಿಕೊಂಡ ಹಾಗಾಗ್ತಾ ಇಲ್ಲವೇ? ಆತುರದ ತೀರ್ಮಾನಗಳನ್ನು ತೆಗೆದುಕೊಳ್ಳದೇ ದಯವಿಟ್ಟು ನನ್ನ ಜತೆ ಬನ್ನಿ..”

ಇಷ್ಟೆಲ್ಲಾ ಹೇಳಿ ಆ ಮನುಷ್ಯನ ಮನ ಒಲಿಸಲು ಎಷ್ಟೇ ಯತ್ನಿಸಿದರೂ ಅವರು ಜಗ್ಗಲೇ ಇಲ್ಲ. “ಇಲ್ಲ..ನನಗೆ ತುಂಬಾ hurt ಆಗಿದೆ..ನಾನು ಹೋಗ್ತೀನಿ” ಎಂದವರೇ ಹೋಗಿ ಬೆಂಗಳೂರು ಬಸ್ ಹತ್ತಿಯೇಬಿಟ್ಟರು. ನಾನೂ ಮತ್ತೇನೂ ಮಾಡಲು ತೋಚದೇ ಅಂದಿನ ನಾಟಕದ ಸಿದ್ಧತೆಗಾಗಿ ರಂಗಮಂದಿರದತ್ತ ಹೆಜ್ಜೆ ಹಾಕಿದೆ. ಮರಳಿ ಬಂದವನಿಗೆ ಯಾಕೋ ‘ಎಲ್ಲವೂ ಸರಿಯಾಗಿದೆ’ ಅನ್ನಿಸಲಿಲ್ಲ. ತಂಡದ ಕಲಾವಿದರು ಅವರವರದೇ ಗುಂಪು ಮಾಡಿಕೊಂಡು ಮಾತುಕತೆಯಲ್ಲಿ ತೊಡಗಿದ್ದರು…ಬೂದಿ ಮುಚ್ಚಿದ ಕೆಂಡದ ಹಾಗೆ ಅಸಮಾಧಾನ ಹೊಗೆಯಾಡುತ್ತಿರುವುದರ ಶಾಖ ತಟ್ಟುತ್ತಿತ್ತು.

ಪ್ರದರ್ಶನದ ವೇಳೆ ಸಮೀಪಿಸುತ್ತಿದ್ದುದರಿಂದ ಬೆಳಕಿನ ವ್ಯವಸ್ಥೆ ಮಾಡಿ ಮುಗಿಸೋಣ ಎಂದು ನಾನು ಸಜ್ಜಾಗುವ ವೇಳೆಗೆ ಗೋಪಿ ಮತ್ತೊಂದು ಆಘಾತಕಾರಿ ಸುದ್ದಿ ತಂದ: ‘ಮೇಳದ ಹುಡುಗರು ಯಾರೂ ನಾಟಕದಲ್ಲಿ ಭಾಗವಹಿಸುತ್ತಿಲ್ಲ! ಮೂರ್ತಿ ಮರಳಿ ಬಂದರೆ ಮಾತ್ರವೇ ಅವರು ಪ್ರದರ್ಶನದಲ್ಲಿ ಹಾಡುವುದು!’
ನನಗೆ ಗೋಪಿಯ ಮಾತು ಕೇಳಿ ದಿಗ್ಭ್ರಮೆಯಾಗಿ ಹೋಯಿತು! ಬೆಂಗಳೂರಿನ ಹಾದಿಯಲ್ಲಿರುವ ಮೂರ್ತಿಯನ್ನು ನಾನು ಹೇಗೆ ಮರಳಿ ಕರೆತರಲಿ? ಮೇಲಾಗಿ ಮೂರ್ತಿಯ ಮುನಿಸಿಗೂ ಇವರ ಈ ಹಠಕ್ಕೂ ಇರುವ ಸಂಬಂಧವಾದರೂ ಏನು? .. ಒಂದೂ ಅರ್ಥವಾಗಲಿಲ್ಲ ನನಗೆ. ಆಗಲೇ ನನಗೆ ಹೊಳೆದದ್ದು: ಹುಬ್ಬಳ್ಳಿಯ ‘ತೀರ್ಥಸೇವನೆ’ ಪ್ರಸಂಗದಲ್ಲಿ ಈ ಬಂಡಾಯಗಾರರೂ ಮೂರ್ತಿಯ ಜತೆಗಿದ್ದವರು! ಬಂಡೆದ್ದಿರುವವರನ್ನು ಕರೆಸಿ ಮಾತಾಡಲು ಯತ್ನಿಸಿದೆ. ಅವರು ಹೇಳಿದ ಮಾತು ಕೇಳಿದಾಗಲಂತೂ ನನಗೆ ಮಾತೇ ಹೊರಡದಂತಾಗಿ ಹೋಯಿತು. “ಮೂರ್ತಿಯನ್ನೂ ನಮ್ಮೆಲ್ಲರನ್ನೂ ನೀವು ಅವಮಾನಿಸಿದ್ದೀರಿ. ಆ ಅವಮಾನವನ್ನು ತಡೆದುಕೊಳ್ಳಲಾರದೇ ಸ್ವಾಭಿಮಾನಿಯಾದ ಮೂರ್ತಿ ನಾಟಕ ಬಿಟ್ಟು ಹೊರಟುಹೋಗಿದ್ದಾನೆ. ನಿಮ್ಮದು ಸರ್ವಾಧಿಕಾರಿ ಧೋರಣೆಯಾಗಿದೆ. ನೀವು ಕಲಾವಿದರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದೀರಿ. ನೀವು ಮೂರ್ತಿಯನ್ನು ಮರಳಿ ಕರೆಸಿ ಕ್ಷಮಾಪಣೆ ಕೇಳಿಕೊಂಡರೆ ಮಾತ್ರ ನಾವು ಹಾಡುತ್ತೇವೆ. ಇಲ್ಲದಿದ್ದರೆ ಇಲ್ಲ” ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿಬಿಟ್ಟ ಒಬ್ಬ ಬಂಡಾಯಗಾರ.

ನಾನು ಒಂದೆರಡು ಕ್ಷಣ ಏನೂ ಮಾತಾಡಲಿಲ್ಲ.ಇಷ್ಟು ದಿನಗಳ ಕಾಲ ಒಂದು ಕುಟುಂಬದವರಂತೆ ಹಲವಾರು ನಾಟಕಗಳ ಮೇಳದಲ್ಲಿ ಭಾಗಿಯಾಗಿ ನಗುನಗುತ್ತಾ ನಾಟಕದ ಯಶಸ್ಸನ್ನು ಸಂಭ್ರಮಿಸುತ್ತಾ ನನ್ನ ರಂಗಪಯಣದಲ್ಲಿ ಜೊತೆಯಾಗಿ ನಡೆದು ಬಂದ ಗೆಳೆಯರೇ ಇಂದು ಹೀಗೆ ಸಿಡಿದೆದ್ದಿರುವರೇ? ಅದೂ ಒಬ್ಬ ಅಪಕ್ವ ಮನಸ್ಸಿನ ಕಲಾವಿದನ ಆತುರದ ಹುಚ್ಚು ನಿರ್ಧಾರದ ಕಾರಣಕ್ಕೆ! ನಾನು ಎಷ್ಟೆಷ್ಟೋ ವಿವರಣೆಗಳನ್ನು ಕೊಟ್ಟು ಅವರ ಮನ ಪರಿವರ್ತಿಸಲು ಯತ್ನಿಸಿದೆ. ನಾನು ಹೇಳಿದ್ದೆಲ್ಲವೂ ತಂಡದ ಪ್ರತಿಯೊಬ್ಬರಿಗೂ ಅನ್ವಯಿಸುವ ಮಾತೇ ವಿನಾ ಯಾರೊಬ್ಬರನ್ನೂ ವೈಯಕ್ತಿಕವಾಗಿ ಕುರಿತದ್ದಲ್ಲ; ಶಿಸ್ತು—ಬದ್ಧತೆಗಳು ಯಾರ ಮೇಲೂ ಬಲವಂತವಾಗಿ ಹೊರಿಸುವಂತಹ ಸಂಗತಿಗಳಲ್ಲ.. ಯಾದೃಚ್ಛಿಕವಾಗಿ ಅನುಸರಿಸಲೇಬೇಕಾದ ಕಟ್ಟೊತ್ತಾಯಗಳು ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದೆ. ಏನೇ ಆದರೂ ತಮ್ಮ ನಿಲುವು ಸಡಿಲಿಸುವ ಮನಸ್ಥಿತಿಯಲ್ಲಿರಲಿಲ್ಲ ಬಂಡಾಯಗಾರರು. ಕೊನೆಗೆ ನನಗೂ ರೋಸಿಹೋಗಿ ನಾನೂ ಅಷ್ಟೇ ಕಟುವಾಗಿ ಹೇಳಿದೆ: “ಆಯಿತು.. ನಿಮ್ಮ ಹಠಕ್ಕೆ ನಾನು ಸೊಪ್ಪು ಹಾಕುವವನಲ್ಲ. ಶಿಸ್ತನ್ನು ವಿಧಿಸುವುದು ಸರ್ವಾಧಿಕಾರೀ ಧೋರಣೆಯಾಗುವುದಾದರೆ ನಾನು ಸರ್ವಾಧಿಕಾರಿ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ನನಗೇನೂ ಅವಮಾನವಿಲ್ಲ. ನೀವು ನಾಟಕದಲ್ಲಿ ಭಾಗವಹಿಸುವುದಿಲ್ಲ ಅನ್ನುವುದಾದರೆ ಹಾಗೇ ಆಗಲಿ ಬಿಡಿ. ನೀವಿಲ್ಲದೆಯೇ ನಾಟಕ ಮಾಡಲು ನನಗೆ ಗೊತ್ತಿದೆ. ನಾನು ನಿಮ್ಮನ್ನು ರಮಿಸಲೂ ಯತ್ನಿಸುವುದಿಲ್ಲ, ನಾನು ತಪ್ಪು ಮಾಡಿಲ್ಲವಾದ್ದರಿಂದ ಕ್ಷಮೆ ಯಾಚಿಸುವ ಅಗತ್ಯವೂ ನನಗಿಲ್ಲ” ಎಂದು ಹೇಳಿದವನೇ ಅಲ್ಲಿಂದ ಎದ್ದು ಹೊರಟೆ. ಅದಾಗಲೇ ಆರು ಗಂಟೆ ದಾಟಿ ನಾಟಕ ಪ್ರದರ್ಶನದ ಸಮಯ ಸಮೀಪಿಸುತ್ತಿತ್ತು. ಸಾಧ್ಯವಾದಷ್ಟೂ ತಲೆಯನ್ನು ತಣ್ಣಗಿಟ್ಟುಕೊಂಡು ಮೇಳದ ನೆರವಿಲ್ಲದೇ, ಹಾಡುಗಳೇ ಇಲ್ಲದೆ ನಾಟಕವನ್ನು ರಂಗದ ಮೇಲೆ ಹೇಗೆ ತರುವುದೆಂದು ವಿಚಾರ ಮಾಡತೊಡಗಿದೆ.ಪುಣ್ಯಕ್ಕೆ ಮೂರ್ತಿಯದು ಗುಳ್ಳೆನರಿ ನಾಟಕದಲ್ಲಿ ಮುಖ್ಯ ಪಾತ್ರವಾಗಿರದೆ ಗುಂಪಿನಲ್ಲಿ ಬಂದು ಹೋಗುವ ಪಾತ್ರವಾಗಿತ್ತು. ಆದರೆ ‘ಗುಳ್ಳೆನರಿ’ ನಾಟಕದಲ್ಲಿದ್ದದ್ದು ಬರೋಬ್ಬರಿ 11 ಹಾಡುಗಳು! ಈಗ ಅವುಗಳಿಲ್ಲದೆಯೇ ನಾಟಕ ಮಾಡಬೇಕು! ನಾನೇ ಪತಂಗಿಯ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದುದರಿಂದ ಹಾಡುಗಳಿಲ್ಲದೆಯೂ ನಾಟಕವನ್ನು ನಿಭಾಯಿಸಬಹುದೆಂಬ ಭರವಸೆ ಮೂಡತೊಡಗಿತು. ಹೆಚ್ಚಿನಂಶ ಎಲ್ಲ ಹಾಡುಗಳ ಭಾವಾರ್ಥವನ್ನೂ ಮಾತಿನಲ್ಲೇ ಅಡಕವಾಗಿ ಹೇಳುತ್ತಾ ನಾಟಕದ ಓಟಕ್ಕೆ ಧಕ್ಕೆ ಬರದಂತೆ ಮುಂದುವರೆಸುವ ರೀತಿಯಲ್ಲಿ ಪ್ರದರ್ಶನವನ್ನು ಮನಸ್ಸಿನಲ್ಲಿ ಊಹಿಸಿಕೊಂಡು ರೂಪಿಸಿಕೊಂಡೆ.ನಂತರ ಎಲ್ಲ ಕಲಾವಿದರನ್ನೂ ಕರೆಸಿ, “ನೀವುಗಳು ನಿಮ್ಮ ನಿಮ್ಮ ಸಂಭಾಷಣೆಗಳಿಗೆ ಬದ್ಧರಾಗಿರಿ..ನಾಟಕದಲ್ಲಿ ಹಾಡುಗಳಿರುವುದಿಲ್ಲ. ಬದಲಿಗೆ ನನ್ನ ಸಂದರ್ಭಾನುಸಾರೀ ವಿವರಣೆಗಳಿರುತ್ತವೆ. ಏನೇ ಹೆಚ್ಚುಕಡಿಮೆಯಾದರೂ ನೀವುಗಳು ತಲೆ ಕೆಡಿಸಿಕೊಳ್ಳಬೇಡಿ, ನಾನು ನಿಭಾಯಿಸಿಕೊಂಡು ಹೋಗುತ್ತೇನೆ” ಎಂದು ನುಡಿದು ಒಮ್ಮೆ ಬೆಳಕಿನ ವ್ಯವಸ್ಥೆಯನ್ನು ಪರೀಕ್ಷಿಸಿ ನೋಡಿ ಮೇಕಪ್ ಗೆ ಕುಳಿತುಕೊಂಡೆ.

ಎಲ್ಲ ಕಲಾವಿದರೂ ಮೌನವಾಗಿ ಹೋಗಿ ವೇಷಭೂಷಣಗಳನ್ನು ಧರಿಸಿಕೊಂಡು ಪ್ರದರ್ಶನಕ್ಕೆ ಸಜ್ಜಾದರು. ಮೊದಲ ಬೆಲ್ ಆಯಿತು. ಎಲ್ಲರೂ ಕೊನೆಯ ಕ್ಷಣದ ಸಿದ್ಧತೆಗಳನ್ನು ಮುಗಿಸಿಕೊಂಡು ಬರುವ ವೇಳೆಗೆ ಎರಡನೆಯ ಬೆಲ್ ಆಯಿತು. ಗುಳ್ಳೆನರಿ ನಾಟಕಕ್ಕೆ ಬಳಸುತ್ತಿದ್ದ ‘ಅರೆ ಪರದೆ’ (half curtain) ಹಿಂದೆ ನಾನು ಬಂದು ನಿಂತೆ; ಶ್ರೀನಿವಾಸ ಮೇಷ್ಟ್ರುಮಂಚದ ಮೇಲೆ ಮಲಗಿದರು.ಸಾಮಾನ್ಯವಾಗಿ ಮೂರನೆಯ ಬೆಲ್ ಆಗುತ್ತಿದ್ದಂತೆ ಮಂಗಳ ವಾದ್ಯ ಘೋಷದೊಂದಿಗೆ ಅರೆಪರದೆ ಸರಿದು ಮೇಳದವರ “ಕೌಸಲ್ಯಾ ಸುಪ್ರಜಾರಾಮ” ಶ್ಲೋಕದ ಗಾಯನದೊಂದಿಗೆ ನಾಟಕ ಆರಂಭವಾಗುತ್ತಿತ್ತು.. ಆದರೆ ಇಂದು ಮೇಳದವರು ಇಲ್ಲದ ಕಾರಣ ಶ್ಲೋಕಗಾಯನ ಇರುವುದಿಲ್ಲ.. ನಾನೇ ಮಾತು ಆರಂಭಿಸಬೇಕು” ಎಂದೆಲ್ಲಾ ಮತ್ತೊಮ್ಮೆ ಹೇಳಿಕೊಂಡು ಮೂರನೆಯ ಬೆಲ್ ಗೆ ಸೂಚನೆ ಕಳಿಸಿದೆ. ಬೆಲ್ ಆಗಿ ಇನ್ನೇನು ಅರೆ ಪರದೆಯನ್ನು ಗೋಪಿ ಸರಿಸಿಕೊಂಡು ಹೋಗಬೇಕು, ಅಷ್ಟರಲ್ಲಿ ದುಃಖ ಉಮ್ಮಳಿಸಿಕೊಂಡು ಬಂದುಬಿಟ್ಟಿತು. ಅದುವರೆಗೆ ತಡೆಹಿಡಿದಿದ್ದ ಮಡುಗಟ್ಟಿದ್ದ ಅಳು ಉಕ್ಕಿ ಬರತೊಡಗಿ ಅಲ್ಲಿಂದಲೇ ಗೋಪಿಗೆ ಪರದೆ ಸರಿಸಬೇಡವೆಂದು ಸೂಚನೆಕೊಟ್ಟು ನೇಪಥ್ಯಕ್ಕೆ ಓಡಿದೆ. ಒಂದೆಡೆ ಕುಳಿತು ಕೆಲ ನಿಮಿಷ ಬಿಕ್ಕಿಬಿಕ್ಕಿ ಅತ್ತುಬಿಟ್ಟೆ. ಏನಾಯಿತೋ ಎಂದು ನೋಡಲು ಓಡಿಬಂದಿದ್ದ ಗೋಪಿ ಸಮಾಧಾನ ಮಾಡಿ ನಿಧಾನವಾಗಿ ಎಬ್ಬಿಸಿದ. ಒಂದಷ್ಟು ಅತ್ತ ಮೇಲೆ ಭಾರ ಇಳಿದಂತಾಯಿತು. ಮನಸ್ಸು ಹಗುರಾದಂತಾಯಿತು. ಹೋಗಿ ಮುಖ ತೊಳೆದುಕೊಂಡು ಬಂದು ಗೋಪಿಗೆ ಪರದೆ ಎಳೆಯಲು ಸೂಚನೆ ಕೊಟ್ಟು ಕಳಿಸಿ ನಾನು ನನ್ನ ಜಾಗಕ್ಕೆ ಹೋಗಿ ನಿಂತೆ. ಶ್ರೀನಿವಾಸ ಮೇಷ್ಟ್ರು ಮಲಗಿದ್ದಲ್ಲಿಂದಲೇ ಸಹಾನುಭೂತಿಯಿಂದ ನನ್ನನ್ನು ನೋಡುತ್ತಾ ‘ಚಿಂತೆ ಮಾಡಬೇಡ..ನಾಟಕ ಚೆನ್ನಾಗಿ ಆಗುತ್ತದೆ’ ಎಂದು ಕಣ್ಸನ್ನೆಯಲ್ಲೇ ಆಶ್ವಾಸನೆ ನೀಡಿದರು. ಗೋಪಿ ಪರದೆ ಸರಿಸತೊಡಗಿದ. ಪರದೆ ಸರಿದೊಡನೆ, ಮೇಳವಿಲ್ಲದ ಕಾರಣಕ್ಕೆ, ಮೇಷ್ಟ್ರು— ‘ಲೋಕಕ್ಕೆಲ್ಲಾ ಬೆಳಕು ಚೆಲ್ಲೋ ಓ ಸೂರ್ಯದೇವಾ’ ಎಂದು ಮಾತು ಆರಂಭಿಸಬೇಕು; ಪರದೆ ಸರಿಯಿತು.. ಇನ್ನೇನು ಮೇಷ್ಟ್ರುತುಟಿ ತೆರೆಯಬೇಕು….ಅಷ್ಟರಲ್ಲೇ ಮೇಳದ ಶ್ಲೋಕಗಾಯನ ಆರಂಭವಾಗಿಯೇ ಬಿಟ್ಟಿತು! “ಕೌಸಲ್ಯಾ ಸುಪ್ರಜಾರಾಮಾ….”

ನೋಡಿದರೆ ಮೇಳದವರೆಲ್ಲರೂ ಬಂದು ಕುಳಿತು ಹಾಡುತ್ತಿದ್ದಾರೆ! ಸಂತಸ—ಸಂಕಟ—ಸಿಟ್ಟು—ನಿರಾಳ—ಆತಂಕ ಇತ್ಯಾದಿ ಇತ್ಯಾದಿ ಭಾವಗಳೆಲ್ಲಾ ಒಟ್ಟಿಗೆ ಒಂದೇ ಬಾರಿ ಆಕ್ರಮಿಸಿ ಆವರಿಸಿಕೊಂಡಂತಾಗಿ ಒಂದು ಕ್ಷಣ ಸ್ಮೃತಿಯೇ ಪಲ್ಲಟವಾದಂತೆ ಆಗಿಹೋಯಿತು. ಮರುಕ್ಷಣದಲ್ಲೇ ಸಾವರಿಸಿಕೊಂಡು ನಾಟಕವನ್ನು ಮುಂದುವರಿಸಿಕೊಂಡು ಹೋದೆ.ಸೊಗಸಾಗಿ ಮೂಡಿ ಬಂದ ಅಂದಿನ ಪ್ರದರ್ಶನವಂತೂ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿಬಿಟ್ಟಿತು!

ಮೇಳದವರಿಗೆ ಅದಾವ ದೇವರು ಹಾಡುವ ಬುದ್ಧಿ ಕೊಟ್ಟನೋ.. ಅಥವಾ ಅವರಿಗೇ ಜ್ಞಾನೋದಯವಾಗಿ ಬಂದು ಹಾಡ ತೊಡಗಿದರೋ ನನಗರ್ಥವಾಗಲಿಲ್ಲ..ನಾನವರನ್ನು ಕೇಳಲೂ ಹೋಗಲಿಲ್ಲ!
ನಾಟಕ ಮುಗಿದ ಮೇಲೆ ನಾವು ಯಾರೂ ಮುಖಾಮುಖಿಯಾಗಲೇ ಇಲ್ಲ. ಪ್ರವಾಸ ಮುಗಿಸಿಕೊಂಡು ಊರಿಗೆ ಮರಳಿದ ಮೇಲೆ ನನ್ನ ‘ವಿಚಾರಣೆ’ಯನ್ನು ಕೈಗೆತ್ತಿಕೊಳ್ಳುವುದೆಂದೂ ಈಗ ಉಳಿದಿರುವ ನಾಟಕಗಳನ್ನು ಯಾವುದೇ ತಕರಾರಿಲ್ಲದೆ ಮುಗಿಸಿಕೊಂಡು ಹೋಗುವುದೆಂದೂ ಬಂಡಾಯಗಾರರು ನಿರ್ಧರಿಸಿದ್ದಾರೆಂಬ ಸುದ್ದಿ ಕಿವಿಗೆ ಬಿದ್ದು ಎಷ್ಟೋ ಸಮಾಧಾನವಾಯಿತು: ಸಧ್ಯ! ಉಳಿದ ಪ್ರದರ್ಶನಗಳಿಗೆ ಯಾವುದೇ ಅಡಚಣೆ ಇಲ್ಲ!ಬೀಸುವ ದೊಣ್ಣೆಯಿಂದೇನೋ ತಪ್ಪಿಸಿಕೊಂಡಿದ್ದೇನೆ ಸರಿ…ಆದರೆ ಈ ಬೀಸಿಗೆ ಇರುವ ಕಾರಣವಾದರೂ ಏನು? ಕ್ಷುಲ್ಲಕ ಕಾರಣಗಳಿಗೆ ನಾಟಕವನ್ನೇ ಬಿಟ್ಟುಹೋಗುವುದಾದರೆ, ಆ ಕಾರಣಕ್ಕೆ ಒಂದುವೇಳೆ ಪ್ರದರ್ಶನವೇ ರದ್ದಾಗಿಬಿಟ್ಟರೆ ರಂಗತಂಡದ—ನಿರ್ದೇಶಕನ ಘನತೆ—ಗೌರವಗಳೇನಾಗಬೇಕು?..ನಾಟಕ ನೋಡಲು ಬಂದ ಪ್ರೇಕ್ಷಕರಿಗೆ ಉತ್ತರ
ಕೊಡುವವರಾದರೂ ಯಾರು?

ರಂಗಭೂಮಿಯಲ್ಲಿ ಒಂದು ರೀತಿಯಲ್ಲಿ ಎಲ್ಲರೂ ‘ಪರಾವಲಂಬಿ’ಗಳೇ ಆದರೂ ಇದು ‘ಪರಸ್ಪರ’ ಅವಲಂಬನೆ; ಒಂದು ಸಹಜ ಸಾತ್ವಿಕ ಧನಾತ್ಮಕ ಪ್ರಕ್ರಿಯೆ. ಆದರೆ ಹೀಗೆ ಅದು ಬೆದರಿಸುವ ಅಸ್ತ್ರವಾಗಿ ಮಾರ್ಪಟ್ಟು ತಲೆಯ ಮೇಲಿನ ತೂಗುಕತ್ತಿಯಾಗಿಬಿಟ್ಟರೆ ಗತಿ ಏನು? ಎಲ್ಲಕ್ಕಿಂತ ಹೆಚ್ಚಿಗೆ ರಂಗಭೂಮಿಯ ಘನತೆ—ಪಾವಿತ್ರ್ಯಗಳಿಗೇ ಧಕ್ಕೆ ತರುವ ಸಂಗತಿಯಾಗುವುದಿಲ್ಲವೇ ಇದು? ..

ಆ ಕ್ಷಣದಲ್ಲೇ ಹೊನ್ನಾವರದಲ್ಲಿ ನಡೆದ ಕಹಿ ಪ್ರಸಂಗ ನೆನಪಿಗೆ ನುಗ್ಗಿ ಬಂತು.
ಓಹೋ!!ಈ ‘ಶಿಸ್ತಿನ ಪಾಠ’ ನನ್ನ ಪಾಲಿಗೆ ಯಾಕೋ ತುಂಬಾ ದುಬಾರಿಯಾಗುತ್ತಿದೆ!!

ಹೀಗೆ ತಲೆಯಲ್ಲಿ ನೂರು ಆಲೋಚನೆಗಳು ಗೂಡುಕಟ್ಟಿಕೊಂಡು ತಿವಿಯುತ್ತಿದ್ದವು.

ಮೊಟ್ಟಮೊದಲ ಬಾರಿಗೆ ಹೊರಳು ದಾರಿಯತ್ತ ನಾನು ಚಿಂತಿಸಲು ಪ್ರೇರೇಪಿಸಿದ್ದೂ ಸಹಾ ಇದೇ ಪ್ರಸಂಗವೇ!!!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

August 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: