ಶ್ರೀನಿವಾಸ ಪ್ರಭು ಅಂಕಣ: ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ, ಒಬ್ಬ ತಂದೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 126
——————
ಇದೀಗ ಕೊಂಚ ಹಿಂದೆ ಸರಿದು ಬಿಟ್ಟುಹೋಗಿರುವ ಒಂದೆರಡು ಪ್ರಸಂಗಗಳನ್ನು ದಾಖಲಿಸುವ ಪ್ರಯತ್ನ ಮಾಡುತ್ತೇನೆ!

ನಳಿನಿ ಅಕ್ಕನ ಮಗ ಸಂಜು ಅಲಿಯಾಸ್ ಡಾ॥ಕುಮಾರ ಸಂಜಯನ ಪರಿಚಯ ಈಗಾಗಲೇ ಹಿಂದಿನ ಪುಟಗಳಲ್ಲಿ ನಿಮಗಾಗಿದೆ. ಒಮ್ಮೆ ನಮ್ಮ ಭೇಟಿಯ ಸಂದರ್ಭದಲ್ಲಿ ಸಂಜು ನನ್ನ ಗಂಟಲನ್ನೇ ದಿಟ್ಟಿಸಿ ನೋಡಿ, ” ಪ್ರಭು ಮಾವಾ, ಗಂಟಲ ಒಂದು ಭಾಗ ಯಾಕೋ ಸ್ವಲ್ಪ ಊದಿಕೊಂಡಿರೋ ಹಾಗಿದೆ. ಯಾವುದಕ್ಕೂ ನಾಳೆ ಬ್ಯಾಪ್ಟಿಸ್ಟ್ ಆಸ್ಪತ್ರೇಗೆ ಬಂದುಬಿಡು… ಒಂದೆರಡು ಟೆಸ್ಟ್ ಗಳನ್ನ ಮಾಡಿಸಿಬಿಡ್ತೀನಿ.. ಗಾಬರಿ ಆಗೋ ಅಂಥದ್ದೇನಿಲ್ಲ… just to rule out the possibilities of malignancy” ಎಂದಾಗ ನಿಜವಾಗಲೂ ಗಾಬರಿಯೇ ಆಗಿತ್ತು! ಮರುದಿನ ಆಸ್ಪತ್ರೆಗೆ ಹೋಗಿ ಹಲವಾರು ಟೆಸ್ಟ್ ಗಳನ್ನು ಮಾಡಿಸಿ, “ಯಾವ malignancy ಆಗಲೀ ಥೈರಾಯಿಡ್ ನ ಸಮಸ್ಯೆಯಾಗಲೀ ಇಲ್ಲ” ಎಂದು ವೈದ್ಯರು ಆಶ್ವಾಸನೆ ಕೊಟ್ಟಮೇಲೆ ನಿರಾಳವಾಗಿ ಮನೆಗೆ ಬಂದಿದ್ದೆ. ಇದು ಹೆಚ್ಚುಕಡಿಮೆ ಎರಡು ವರ್ಷಗಳ ಹಿಂದಿನ ಮಾತು. ಇರಲಿ. ಮತ್ತೆ ಕಥೆ ಮುಂದುವರಿದ ಮೇಲೆ ಈ ಪ್ರಸಂಗವನ್ನು ನೆನಪಿಸಿಕೊಳ್ಳುವ ಸಂದರ್ಭ ಒದಗಿಬರುತ್ತದೆ!

ಬಹುಶಃ 2004 ರಲ್ಲೆಂದು ತೋರುತ್ತದೆ, ದರ್ಶನ್ ಅವರು ನಾಯಕರಾಗಿ ಅಭಿನಯಿಸುತ್ತಿದ್ದ 'ಕಲಾಸಿಪಾಳ್ಯ' ಚಿತ್ರದಲ್ಲಿ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸುವ ಅವಕಾಶ ಒದಗಿಬಂದಿತ್ತು. ಒಬ್ಬ ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಕಾಳಸಂತೆಕೋರರ ಆಮಿಷಗಳಿಗೆ ಬಲಿಯಾಗದೇ ಸೆಟೆದು ನಿಲ್ಲಲು ಪ್ರಯತ್ನಿಸುತ್ತಾನೆ; ಆದರೆ ಭ್ರಷ್ಟ ಪೋಲೀಸ್ ಅಧಿಕಾರಿಗಳೇ ದುಷ್ಟರ ಜತೆ ಶಾಮೀಲಾಗಿ ಆ ಪ್ರಾಮಾಣಿಕ ಅಧಿಕಾರಿಯ ಕಥೆ ಮುಗಿಸಿಬಿಡುತ್ತಾರೆ. ಕಥೆಗೆ ಒಂದು ರೀತಿಯ ತಿರುವು ಹಾಗೂ ಚಾಲನೆಯನ್ನು ಕೊಡುವ ಪಾತ್ರ ಇದಾಗಿತ್ತು. ಓಂಪ್ರಕಾಶ ರಾವ್ ಅವರು ಈ ಚಿತ್ರದ ನಿರ್ದೇಶಕರು. ಅನಂತವೇಲು ಅವರು,  ಜಿ ವಿ ಎಂದೇ ಖ್ಯಾತರಾದ ತೆಲುಗು ನಟರೊಬ್ಬರು ದುಷ್ಟರ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ದೃಶ್ಯಗಳ ಚಿತ್ರೀಕರಣ ತುಂಬ ಚೆನ್ನಾಗಿ ಆಯಿತು; ನಿರ್ದೇಶಕರೂ ತುಂಬಾ ಖುಷಿ ಪಟ್ಟುಕೊಂಡರು. ಆನಂತರ ದುಷ್ಟರು ನನ್ನನ್ನು ಹಿಡಿಯಲು ಅಟ್ಟಿಸಿಕೊಂಡು ಬರುವ ಛೇಸ್ ದೃಶ್ಯ. ಇಂಥಾ ಸಾಹಸ ದೃಶ್ಯಗಳಲ್ಲಿ ನಾನು ಹೆಚ್ಚೇನೂ ಪಳಗಿದವನಲ್ಲ. ಅದರಲ್ಲೂ ಗವೀಪುರದ ರಸ್ತೆಗಳಲ್ಲಿ ಬೆಳಗಿನ ದಟ್ಟ ವಾಹನ ಸಂಚಾರದ ವೇಳೆಯಲ್ಲಿ ವಾಹನಗಳ ಮಧ್ಯೆ ನಾನು ಜಾಗ ಮಾಡಿಕೊಂಡು 'ಹೆಲ್ಪ್ ಹೆಲ್ಪ್' ಎಂದು ಕಿರುಚುತ್ತಾ ಓಡಬೇಕು..ದುಷ್ಟರು ನನ್ನನ್ನು ಅಟ್ಟಿಸಿಕೊಂಡು ಬರಬೇಕು! 

ನಮಗೇನೋ ಶೂಟಿಂಗ್ ಎಂದು ಗೊತ್ತು; ಆದರೆ ರಸ್ತೆಗಳಲ್ಲಿ ಸಂಚರಿಸುತ್ತಿರುವವರಿಗೆ ಹೇಗೆ ಗೊತ್ತಾಗಬೇಕು?! ಪುಣ್ಯಕ್ಕೆ ಕ್ಯಾಮರಾ ದೂರದಲ್ಲಿದ್ದುದರಿಂದ ನಾನು, 'ಜಾಗ ಬಿಡಿ..ಶೂಟಿಂಗು..ಹೆಲ್ಪ್ ಹೆಲ್ಪ್' ಎಂದು ಕಿರುಚುತ್ತಾ ಸೂಚನೆಗಳನ್ನು ಕೊಟ್ಟುಕೊಂಡು ಓಡುತ್ತಿದ್ದೆ! ಡಬ್ಬಿಂಗ್ ನಲ್ಲಿ ಬೇಕಾದ ಮಾತುಗಳನ್ನು ಜೋಡಿಸಿಕೊಳ್ಳಬಹುದಲ್ಲಾ! ಸಂದಿಗೊಂದಿಗಳಲ್ಲೆಲ್ಲಾ ಓಡಾಡಿಸಿ ಬೀಳಿಸಿ ಏಳಿಸಿ ಹೈರಾಣಾಗಿಸಿಬಿಟ್ಟರು ನಿರ್ದೇಶಕರು. ರಾತ್ರಿ ಪೋಲೀಸ್ ಸ್ಟೇಷನ್ ನಲ್ಲಿ ರಕ್ಷಣೆಗೆಂದು ಹೋದ ನನ್ನನ್ನು ಸ್ವತಃ ಇನ್ಸ್ ಪೆಕ್ಟರ್ ಅವರೇ ಹೊಡೆದುಹಾಕುವ ದೃಶ್ಯ. ಇನ್ಸ್ ಪೆಕ್ಟರ್ ಪಾತ್ರದಲ್ಲಿದ್ದವರು ನನಗೆ ನೆನಪಿರುವ ಮಟ್ಟಿಗೆ ಸಿದ್ಧಾರ್ಥ್ ಎಂಬ ಬಾಂಬೆ ನಟ. ಒಂದಷ್ಟು ಮಾತಿನ ಚಕಮಕಿಯ ನಂತರ ಇನ್ಸ್ ಪೆಕ್ಟರ್ ನನ್ನನ್ನು ಜೋರಾಗಿ ತಳ್ಳುತ್ತಾರೆ; ಕೆಳಗೆ ಅಂಗಾತನಾಗಿ ಬಿದ್ದ ನನ್ನ ಹೊಟ್ಟೆಯ ಕೆಳಭಾಗಕ್ಕೆ ಜೋರಾಗಿ ಬಂದೂಕಿನಿಂದ ಒಬ್ಬ ಗುದ್ದುತ್ತಾನೆ...ಇಷ್ಟು ಒಂದು ಚಿತ್ರಿಕೆಯಲ್ಲಿ ಆಗಬೇಕಾಗಿದ್ದ ಕ್ರಿಯೆ. ಸರಿ..ಸಾಹಸ ಸಂಯೋಜಕರ ಸೂಚನೆಯ ಹಾಗೆ ಅಭ್ಯಾಸ ಮಾಡಿದೆವು..ಎಲ್ಲಾ ಸರಿಯಾಗಿತ್ತು. 'ಸಖತ್ತಾಗಿದೆ action ಉ..ಟೇಕ್' ಎಂದು ಘೋಷಿಸಿದರು ನಿರ್ದೇಶಕರು. 

ರೋಲ್ ಸೌಂಡ್...ಸ್ಟಾರ್ಟ್ ಕ್ಯಾಮರಾ...ACTION!" ಎಂದು ನಿರ್ದೇಶಕರು ಚೀರುತ್ತಿದ್ದಂತೆ ನನ್ನೆದುರು ನಿಂತಿದ್ದ ಆರೂಕಾಲು ಅಡಿ ಎತ್ತರದ ಆಜಾನುಬಾಹು ನಟ ಇದ್ದಬದ್ದ ಶಕ್ತಿಯನ್ನೆಲ್ಲಾ ಆವಾಹಿಸಿಕೊಂಡು ಧಬಾರೆಂದು ನನ್ನ ಎದೆಯ ಭಾಗಕ್ಕೆ ಗುದ್ದಿ ಹಿಡಿದು ಭಾರೀ ರಭಸದಿಂದ ತಳ್ಳಿಯೇ ಬಿಟ್ಟ! ಈ ಅನಿರೀಕ್ಷಿತ ಆಘಾತಕ್ಕೆ ಬೆಚ್ಚಿಬಿದ್ದ ನನಗೆ ಆ ಪೆಟ್ಟನ್ನು ತಡೆದುಕೊಳ್ಳಲು ಕಷ್ಟವಾಗಿ ಆಯತಪ್ಪಿ ಗಾರೆನೆಲದ ಮೇಲೆ ಧಬ್ಬೆಂದು ಬುಡ ಕತ್ತರಿಸಿದ ದಿಂಡಿನ ಹಾಗೆ ಬಿದ್ದೆ...ಈಡುಗಾಯಿ ಹೊಡೆದಂತಹ ಢಳ್ ಎಂಬ ಸದ್ದಿನೊಡನೆ ನನ್ನ ತಲೆಯ ಹಿಂಭಾಗ ನೆಲಕ್ಕೆ ಬಡಿಯಿತು! ಸಳ್ ಸಳ್ಳೆಂದು ನಾಲ್ಕಾರು ಮಿಂಚುಗಳು ಕಣ್ಮುಂದೆ ಸೀಳಿಕೊಂಡು ಬಂದಂತೆ ಭಾಸವಾಗಿ 'ನನ್ನ ಕಥೆ ಮುಗಿದೇಹೋಯಿತು' ಎಂದು ನನಗನ್ನಿಸಿಬಿಟ್ಟಿತು! ಮರುಕ್ಷಣವೇ ಇದ್ದ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು 'ಹೋಲ್ಡ್' 'ಹೋಲ್ಡ್' ಎಂದು ಚೀರುತ್ತಾ ಮೇಲೆದ್ದು ಕೂತೆ! ಬಂದೂಕಿನಿಂದ ಗುದ್ದಬಂದವನು ಗುರಿತಪ್ಪಿ ಮತ್ತೆಲ್ಲೋ ತಿವಿದು ಮತ್ತೇನಾದರೂ ಅನಾಹುತ ಸಂಭವಿಸಿದರೇನು ಗತಿ ಎಂದು ಎದೆ ಬಡಿದುಕೊಳ್ಳುತ್ತಿತ್ತು! ಕಟ್ ಕಟ್ ಎಂದು ಕೂಗಿ ನಿರ್ದೇಶಕರು ಚಿತ್ರೀಕರಣ ನಿಲ್ಲಿಸಿದರು. ನಾನು 'ನೀರು ತನ್ರೀ..ಬೇಗ ನೀರು ತನ್ರೀ' ಎಂದು ಮತ್ತೆ ಅರಚಿದೆ. ಯಾರೋ ತಂದುಕೊಟ್ಟ ನೀರನ್ನು ರಪರಪನೆ ತಲೆಯ ಹಿಂಭಾಗಕ್ಕೆ ತಟ್ಟಿಕೊಂಡೆ. ಬಹುಶಃ ಯಾರಿಗೂ ನನಗೆ ಬಿದ್ದ ಪೆಟ್ಟಿನ ಗಂಭೀರತೆಯ ಬಗ್ಗೆ ಸುಳಿವೇ ಸಿಕ್ಕಿರಲಿಲ್ಲವೇನೋ..ಸುಮ್ಮನೆ ನೋಡುತ್ತಾ ನಿಂತಿದ್ದರು! 

ಒಬ್ಬ ಪ್ರಭೃತಿಯಂತೂ 'ಛೆ! ಅನ್ಯಾಯ! ಹತ್ತು ಸೆಕೆಂಡ್ ಬಿಟ್ಟುಬಿಟ್ಟಿದ್ದರೆ ಶಾಟ್ ಮುಗಿದೇ ಹೋಗ್ತಿತ್ತು' ಎಂದು ನನಗೆ ಕೇಳುವಂತೆಯೇ ಗೊಣಗಿದ. "ಮುಗೀತಿದ್ದದ್ದು ಶಾಟ್ ಅಲ್ಲ, ನನ್ನ ಕಥೆ..ಸ್ವಲ್ಪ ತೆಪ್ಪಗಿರ್ರೀ" ಎಂದು ನಾನೂ ಕೊಂಚ ರೇಗಿದೆ. ಸ್ವಲ್ಪ ಸಮಯ ಶೂಟಿಂಗ್ ಸ್ಥಗಿತಗೊಂಡಿತು. ನಾನು ತಲೆಗೆ ನೀರು ತಟ್ಟಿಕೊಳ್ಳುತ್ತಲೇ ಇದ್ದೆ...ನನಗೆ ಗೊತ್ತಿದ್ದ ಪ್ರಥಮ ಚಿಕಿತ್ಸೆ ಅದೊಂದೇ! ಅದೂ ತಿಳಿಯದಿದ್ದ ಉಳಿದವರು ಮಿಕಮಿಕ ನೋಡುತ್ತಾ ನಿಂತಿದ್ದರು. ನಾನು ಸ್ವಲ್ಪ ಗಾಳಿಯಾಡುವಲ್ಲಿ ಕೂರೋಣವೆಂದು ಹೊರಬಂದೆ. ಅದೇ ವೇಳೆಗೆ ಅಲ್ಲಿಗೆ ನಾಯಕ ದರ್ಶನ್ ಅವರ ಆಗಮನವಾಯಿತು. ಅವರದ್ದೂ ಒಂದೆರಡು ಶಾಟ್ಸ್ ಸ್ಟೇಷನ್ ನಲ್ಲಿ ಚಿತ್ರೀಕರಣವಾಗಬೇಕಿತ್ತಂತೆ. ಹಾಗೇ ಅವರೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತಾ ನಾನು, "ಏನೇ ಹೇಳಿ..ಈ ಸಾಹಸ ದೃಶ್ಯಗಳ ಶೂಟಿಂಗ್ ಅಂದರೆ ನಿಜಕ್ಕೂ ಭಾರೀ ಸವಾಲಿನ ವಿಷಯ " ಎಂದು ನನ್ನ ಅಂದಿನ ಅನುಭವವನ್ನು ವಿವರಿಸಿದೆ.  ದರ್ಶನ್ ಅವರು ಏನೂ ಮಾತಾಡದೆ ಪಕ್ಕದಲ್ಲೇ ಇದ್ದ ಸಾಹಸ ನಿರ್ದೇಶಕರನ್ನ ನೋಡಿ ಮಾರ್ಮಿಕವಾಗಿ ನಕ್ಕರು! 'ನಾವು ಎಂಥೆಂಥಾ ಅಪಾಯಕಾರಿ ದೃಶ್ಯಗಳಲ್ಲಿ ಭಾಗವಹಿಸ್ತೇವೆ ಅನ್ನೋದು ಬಹುಶಃ ಈ ಪ್ರಜೇಗೆ ಗೊತ್ತಿಲ್ಲ..ಅವುಗಳ ಮುಂದೆ ಇವನೀಗ ಅನುಭವಿಸಿರೋದು  ಯಾವ ಲೆಕ್ಕಕ್ಕೂ ನಿಲ್ಲೊಲ್ಲ' ಎಂಬಂತಹ ಭಾವ ಆ ನಗೆಯಲ್ಲಿ ಸ್ಫುರಿಸುತ್ತಿತ್ತು! ನಿಜವೇ. ಸಾಹಸ ದೃಶ್ಯಗಳ ಸಂಯೋಜನೆಯೇ ಆಗಲೀ ಅವುಗಳನ್ನು ಚಿತ್ರೀಕರಿಸುವುದಾಗಲೀ ಬಹು ದೊಡ್ಡ ಸವಾಲು! ಅತ್ತ ಪ್ರೇಕ್ಷಕನಿಗೆ ಅನುಮಾನ ಬಾರದಂತೆ ದೃಶ್ಯ ಸಹಜತೆಯನ್ನೂ ಉಳಿಸಿಕೊಳ್ಳಬೇಕು..ಇತ್ತ ಭಾಗವಹಿಸುವ ನಟರಿಗೆ ಯಾವುದೇ ಅಪಾಯವೂ ಆಗಬಾರದು! ಕೊಂಚ ಎಚ್ಚರ ತಪ್ಪಿದರೂ ಅನಾಹುತ ಖಚಿತ! ಹಾಗೆ ಎಷ್ಟೋ ಅಚಾತುರ್ಯಗಳು ಘಟಿಸಿವೆ ಕೂಡಾ! ಏನೇ ಆದರೂ ಆ ಕ್ಷಣದಲ್ಲಿ  ಧಾರಾವಾಹಿಗಳ ಸಾಂಸಾರಿಕ ದೃಶ್ಯಗಳ ಚಿತ್ರೀಕರಣವೇ ಪರಮಕ್ಷೇಮ ಅನ್ನಿಸಿದ್ದು ಸುಳ್ಳಲ್ಲ! 

ಅಂದು ಹಾಗೂ ಹೀಗೂ ಶೂಟಿಂಗ್ ಮುಗಿಸಿ ಸೀದಾ ಡಾ॥ಸಂಜುವಿನ ಕ್ಲಿನಿಕ್ಕಿಗೆ ಧಾವಿಸಿದೆ. “ತಲೆಗೆ ಬಿದ್ದ ಪೆಟ್ಟಿನ ತೀವ್ರತೆ ಹೊರನೋಟದಿಂದ ಮಾತ್ರ ಅಳೆಯಲಾಗುವುದಿಲ್ಲ.. ಎರಡು ದಿನ ಮನೆ ಬಿಟ್ಟು ಅಲ್ಲಾಡಬೇಡ.. observation ನ್ನಲ್ಲಿರಬೇಕು. ವಾಂತಿ ಏನಾದರೂ ಆದರೆ ತಕ್ಷಣಾನೇ ಆಸ್ಪತ್ರೇಗೆ ಹೋಗಬೇಕಾಗುತ್ತೆ.. ಮನೇಗೆ ಹೋಗಿ ರೆಸ್ಟ್ ತೊಗೋ” ಎಂದು ಹೇಳಿ ನೋವು ನಿವಾರಕ ಮಾತ್ರೆಗಳನ್ನು ಕೊಟ್ಟು ಧೈರ್ಯ ಹೇಳಿ ಕಳಿಸಿದ ಸಂಜು. ನಂತರದ ಎರಡು ದಿನಗಳನ್ನು ಮನೆಯಲ್ಲಿ ಎಲ್ಲರೂ ಆತಂಕದಲ್ಲೇ ಕಳೆದವು. ಪುಣ್ಯವಶಾತ್ ಬೇರೆ ಏನೂ ಹೊಸ ತೊಂದರೆಗಳು ಕಾಣಿಸದೆ ಹೋದಮೇಲಷ್ಟೇ ನೆಮ್ಮದಿಯಿಂದ ಉಸಿರಾಡುವಂತಾಯಿತು.

ಈ ಒಂದು ಸಮಯದಲ್ಲಿಯೇ, ಅಂದರೆ ಸಾಲು ಸಾಲು ಧಾರಾವಾಹಿಗಳಲ್ಲಿ ನಾನು ಬಿಡುವಿಲ್ಲದಂತೆ ತೊಡಗಿಕೊಂಡಿರುವಾಗಲೇ, ನನ್ನ ಆರೋಗ್ಯಕ್ಕೆ ಸಂಬಂಧ ಪಟ್ಟ ಹಾಗೆ ಮತ್ತೊಂದು ಸಮಸ್ಯೆಯ ಸುಳಿಗೆ ನಾನು ಸಿಲುಕಿದ್ದು.

ಆಗ ಕೆಲಸದ ಒತ್ತಡ ಎಷ್ಟಿತ್ತೆಂದರೆ ಯಾವುದೇ ವ್ಯಾಯಾಮಕ್ಕಾಗಲೀ ಕಡೆಯ ಪಕ್ಷ ಒಂದು ಸಣ್ಣ ವಾಕಿಂಗ್ ಗಾಗಲೀ ನನಗೆ ಬಿಡುವು ಸಿಕ್ಕುತ್ತಿರಲಿಲ್ಲ. ಆದರೂ ಇದ್ದಕ್ಕಿದ್ದಹಾಗೆ ನನ್ನ ತೂಕ ಗಣನೀಯವಾಗಿ ಕಡಿಮೆಯಾಗತೊಡಗಿತು! ಯಾವುದೇ ವಿಶೇಷವಾದ ಪಥ್ಯವನ್ನೂ ನಾನು ಆಚರಿಸುತ್ತಿದ್ದಿಲ್ಲವಾದರೂ ತೂಕದ ಇಳಿಕೆ ಏಕಾಗುತ್ತಿದೆ ಎಂಬುದು ಅರ್ಥವಾಗುತ್ತಿರಲಿಲ್ಲ. ಪ್ರಾರಂಭದಲ್ಲಿ ಈ ಇಳಿಕೆ ಸ್ವಾಗತಾರ್ಹ ಸಂಗತಿಯೇ ಆಗಿದ್ದರೂ ಇಳಿಕೆ ಹೆಚ್ಚಾಗತೊಡಗಿದಾಗ ಆತಂಕ ಶುರುವಾಯಿತು. ಇದರ ಜತೆಗೆ ನಿದ್ದೆ ಕಡಿಮೆಯಾಯಿತು; ಹಸಿವು ಹೆಚ್ಚಾಯಿತು; ಪಚನಕ್ರಿಯೆಯೂ ಶೀಘ್ರ ಗತಿಯದಾಗಿ ಅದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳು ಎದುರಾದವು. ಪ್ರತಿನಿತ್ಯ ಶೂಟಿಂಗ್.. ಆಗಿನ ಕೆಲವು ಶೂಟಿಂಗ್ ಜಾಗಗಳಲ್ಲಿ ಸರಿಯಾದ ರೆಸ್ಟ್ ರೂಂಗಳ ವ್ಯವಸ್ಥೆ ಇರದೆ ಪರದಾಟ! ಜೊತೆಗೆ ನನಗೆ ಮೊದಲಿಂದ ಕಾಡುತ್ತಿದ್ದ ಸಂಕೋಚದ ಪಿಡುಗು ಬೇರೆ! ಕೊನೆಕೊನೆಗೆ ಶೂಟಿಂಗ್ ನಲ್ಲಿ ಊಟ ಮಾಡುವುದನ್ನೇ ನಿಲ್ಲಿಸಿಬಿಟ್ಟೆ. ಹೊಟ್ಟೆ ತುಂಬಿದರೆ ತಾನೇ ಬೇರೆ ಸಮಸ್ಯೆ ತಲೆಯೆತ್ತುವುದು!

ಪ್ರತಿನಿತ್ಯದ ಶೂಟಿಂಗ್ ಧಾವಂತದ ನಡುವೆಯೇ ಹಲವಾರು ಡಾಕ್ಟರ್ ಗಳನ್ನು ಭೇಟಿಯಾದೆ. ನಮ್ಮ ನೆರೆಮನೆಯವರೇ ಆಗಿದ್ದ ಆತ್ಮೀಯ ಮಿತ್ರ ಡಾ॥ ರಘುರಾಂ ಭಟ್ ಅವರು ಅವರ ಕೆಲ ವಿಶೇಷ ತಜ್ಞರನ್ನು ಕಾಣಲು ಸೂಚಿಸಿದರು. ಆಗ ನಾನು ಅಭಿನಯಿಸುತ್ತಿದ್ದ ‘ಮುಕ್ತ’ ಧಾರಾವಾಹಿಯ ನಿರ್ದೇಶಕ, ಆತ್ಮೀಯ ಹಿರಿಯ ಮಿತ್ರ ಟಿ ಎನ್ ಸೀತಾರಾಂ ಕಣ್ವ ನರ್ಸಿಂಗ್ ಹೋಂಗೆ ಬರುತ್ತಿದ್ದ ಅವರ ಒಬ್ಬ ಡಾಕ್ಟರ್ ಮಿತ್ರರನ್ನು ಕಾಣಲು ಸೂಚಿಸಿದರು. ಎಲ್ಲರನ್ನೂ ಹೋಗಿ ಭೇಟಿ ಮಾಡಿ ನನ್ನ ಸಮಸ್ಯೆಯನ್ನು ತಿಳಿಸಿದೆ. ನೂರೆಂಟು ತಪಾಸಣೆಗಳಾದುವು.. ನಾಲ್ಕಾರು ಬಾರಿ ಸಕ್ಕರೆ ಕಾಯಿಲೆಯ ಪರೀಕ್ಷೆಯಾಯಿತು.. ಕ್ಯಾಮರಾ ಅಳವಡಿಸಿದ ಪೈಪ್ ಅನ್ನು ಗಂಟಲೊಳಗೆ ತೂರಿಸಿ ಲಿವರ್ ಶ್ವಾಸಕೋಶಗಳನ್ನೆಲ್ಲಾ ಜಾಲಾಡಿದರು..ಊಂಹೂಂ..ಏನೂ ಪ್ರಯೋಜನವಾಗಲಿಲ್ಲ. ಎಲ್ಲವೂ ಸರಿಯಾಗಿಯೇ ಇದೆ! ಒಂದಿಬ್ಬರು ವೈದ್ಯರು ಥೈರಾಯಿಡ್ ಸಮಸ್ಯೆ ಇದೆಯೇ ಎಂದು ಕೇಳಿದರು. ಸಂಜು ಹೇಳಿ ಒಂದೆರಡು ವರ್ಷಗಳ ಕೆಳಗೆ ಆ ಪರೀಕ್ಷೆಗಳನ್ನೂ ಮಾಡಿಸಿದ್ದೆನಲ್ಲಾ, ‘ಇಲ್ಲ..ನನಗೆ ಥೈರಾಯಿಡ್ ಸಮಸ್ಯೆ ಇಲ್ಲ’ವೆಂದೆ. ನನ್ನ ಈ ಕಾಯಿಲೆ ಎಲ್ಲರಿಗೂ ಒಂದು ಯಕ್ಷಪ್ರಶ್ನೆಯಾಗಿ ಹೋಯಿತು.

ಮೂರು ತಿಂಗಳಲ್ಲಿ ಬರೋಬ್ಬರಿ ಹದಿಮೂರು ಕೆ ಜಿ ತೂಕ ಕಳೆದುಕೊಂಡು ಮಡಿಕೋಲಿನ ಸ್ವರೂಪಕ್ಕೆ ಬಂದಿದ್ದೆ! ಈ ಸಂದರ್ಭದ ಒಂದು ಪ್ರಸಂಗ ನೆನಪಾಗುತ್ತಿದೆ: ಕಾದಂಬರಿ ಧಾರಾವಾಹಿಯ ಚಿತ್ರೀಕರಣ ಅದಾಗಲೇ ಆರಂಭವಾಗಿದ್ದರೂ ಇನ್ನೂ ಪ್ರಸಾರ ಶುರುವಾಗಿರಲಿಲ್ಲ. ಪ್ರಾರಂಭದ ಒಂದು ಕಂತಿನಲ್ಲಿ ನಾನು ಹಾಗೂ ನನ್ನ ಕುಟುಂಬದವರು ನಮ್ಮ ಮಗನ ಮದುವೆಯ ನಿಶ್ಚಿತಾರ್ಥಕ್ಕೆ ಹೊರಡುವ ದೃಶ್ಯದ ಚಿತ್ರೀಕರಣವಾಗಿತ್ತು. ನಿಶ್ಚಿತಾರ್ಥ ಬೇರೊಂದು ಮನೆಯಲ್ಲಿ ನಡೆಯುವುದಾದ್ದರಿಂದ ಅದರ ಚಿತ್ರೀಕರಣ ಮತ್ತೊಂದು ದಿನ ನಡೆಯುವುದಿತ್ತು. ಏತನ್ಮಧ್ಯೆ ನಾವು ಹೊರಡುವ ದೃಶ್ಯದ ಚಿತ್ರೀಕರಣವಾದ ಮರುದಿನದಿಂದಲೇ ಕಾರಣಾಂತರಗಳಿಂದ ಚಿತ್ರೀಕರಣ ನಿಂತುಹೋಯಿತು. ಮತ್ತೆ ಮೂರು—ನಾಲ್ಕು ತಿಂಗಳ ತರುವಾಯ ಚಿತ್ರೀಕರಣ ಪುನರಾರಂಭಗೊಂಡು ಮೊದಲ ದಿನವೇ ನಿಶ್ಚಿತಾರ್ಥದ ದೃಶ್ಯ ನಿಗದಿಯಾಗಿತ್ತು. ಈ ಮೂರು ತಿಂಗಳ ಅವಧಿಯಲ್ಲೇ ನಾನು ವಿಪರೀತ ತೂಕ ಕಳೆದುಕೊಂಡು ರೂಪಾಂತರಗೊಂಡಿದ್ದೆ. ನಿಶ್ಚಿತಾರ್ಥಕ್ಕೆಂದು ಹೊರಟಾಗ ಆರೋಗ್ಯಪೂರ್ಣನಾಗಿ ಮೈಕೈ ತುಂಬಿಕೊಂಡು ಕೊಂಚ ಸ್ಥೂಲವೆನ್ನುವ ಕಡೆಗೇ ಜಾರಿದ್ದ ನಾನು 10 ಕಿ ಮೀ ಪ್ರಯಾಣ ಬೆಳೆಸಿ ನಿಶ್ಚಿತಾರ್ಥದ ಮನೆ ತಲುಪಿ ಕಾರ್ ನಿಂದ ಕೆಳಗಿಳಿಯುವಷ್ಟರಲ್ಲಿ ತೆಳ್ಳಾನ ತೆಳ್ಳನೆಯ ಸ್ವರೂಪದವನಾಗಿ ಮಾರ್ಪಟ್ಟಿದ್ದೆ! ‘ವಾಹ್! ಇದೆಂಥಾ ಪಥ್ಯ ಸರ್! ಇಷ್ಟು ಬೇಗ…ಇಷ್ಟು ತೂಕ ನಷ್ಟ! ಈ crash diet ರಹಸ್ಯ ನಮಗೂ ತಿಳಿಸಿ!’ ಎಂದು ಗೆಳೆಯರು ತಮಾಷೆ ಮಾಡಿದ್ದುಂಟು!

ತೂಕನಷ್ಟದ ಜತೆಗೆ ದನಿಯಲ್ಲಿ ಸಣ್ಣಗೆ ಅಸ್ಥಿರತೆ ಅನುಭವಕ್ಕೆ ಬರುತ್ತಿತ್ತು. ತುಟಿಗಳು ಮೆಲ್ಲಗೆ ಅದುರ ತೊಡಗಿದ್ದವು. ನಿದ್ರಾಹೀನತೆಯ ಜತೆಗೆ ಭಾವತೀವ್ರತೆಯೂ ಶೃತಿ ಹಿಡಿಯತೊಡಗಿತ್ತು! ಇದಾವ ವ್ಯಾಧಿ ನನ್ನ ಬೆನ್ನು ಹತ್ತಿ ಕಾಡುತ್ತಿದೆಯೆಂಬುದು ಅರ್ಥವೇ ಆಗದೆ ಹಗಲಿರುಳೂ ಪರದಾಡುವಂತಾಗಿಹೋಯಿತು. ಇರಲಿ.

‘ಮುಕ್ತ’ ಧಾರಾವಾಹಿಯ ಟೋಪಿ ಶೇಷಪ್ಪನ ಪಾತ್ರವಂತೂ ನನಗೆ ಪರಮಪ್ರಿಯವಾದ ಪಾತ್ರ. ಅತ್ಯಂತ ಅನಿರೀಕ್ಷಿತವಾಗಿ ಈ ಪಾತ್ರ ನನ್ನ ತೆಕ್ಕೆಗೆ ಬಂದದ್ದು ಹೇಗೆಂಬುದನ್ನು ಈಗಾಗಲೇ ಹೇಳಿದ್ದೇನೆ. ಟಿ.ಎನ್.ಸೀತಾರಾಮ್ ಅವರ ಪರಿಕಲ್ಪನೆಯಲ್ಲಿ ಈ ಪಾತ್ರ ಮೂಡಿ ಬೆಳೆದ ಬಗೆಯಂತೂ ಅಚ್ಚರಿ ಹುಟ್ಟಿಸುವಂಥದ್ದು. ನಾನು ಆವರೆಗೆ ಅಭಿನಯಿಸಿದ್ದಂತಹ ಎಲ್ಲ ಪಾತ್ರಗಳಿಗಿಂತ ವಿಪರೀತ ಭಿನ್ನವಾಗಿದ್ದ ಈ ಪಾತ್ರವನ್ನು ಮೈಗೂಡಿಸಿಕೊಳ್ಳುವುದು ಪ್ರಾರಂಭದ ದಿಸೆಯಲ್ಲಿ ಸ್ವಲ್ಪ ಕಷ್ಟವೇ ಆಯಿತು! ಪಂಚೆ—ದೊಗಳೆ ಷರಟಿನ ಶೇಷಪ್ಪನ ಭಾಷೆಯನ್ನು ಅತ್ತ ತೀರಾ ಶಿಷ್ಟ—ಶುದ್ಧವೂ ಆಗದಂತೆ, ಕೊಂಚ ಗ್ರಾಮ್ಯದತ್ತ ವಾಲುವಂತೆ ರೂಢಿಸಿಕೊಂಡೆ. ‘ನಾವು ಪೂರ್ ಪೀಪಲ್ಸು ಸಾರ್’ ಎಂದು ಹಲ್ಲುಗಿಂಜುತ್ತಾ ವಿನಯ—ದೈನ್ಯತೆಗಳೇ ಮೂರ್ತಿವೆತ್ತಂತೆ ಬೆನ್ನು ಬಾಗಿಸಿ ನಡೆಯುತ್ತಾ ಊರಜನರ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಾ ಎಲ್ಲರಿಗೂ ಬೇಕಾದವನಾಗಿದ್ದ ಒಬ್ಬ ಲೋಕಲ್ ಪುಡಾರಿ ಈ ಟೋಪಿ ಶೇಷಪ್ಪ. ಪ್ರಾರಂಭದ ಕೆಲ ಕಂತುಗಳಲ್ಲಿ ಅನೇಕ ಸನ್ನಿವೇಶಗಳಲ್ಲಿ ನಗೆಯುಕ್ಕಿಸುತ್ತಾ ಒಬ್ಬ ಕಮೆಡಿಯನ್ ನಂತೆ ಸಾಗುವ ಶೇಷಪ್ಪನ ಪಾತ್ರ ಬರಬರುತ್ತಾ ಸಾಂದ್ರಗೊಳ್ಳುತ್ತಾ ಕೊನೆಗೆ ವಿಷಾದ—ನೋವುಗಳ ಮೂರ್ತರೂಪನಾಗಿ ಬದಲಾಗಿಬಿಡುತ್ತದೆ. ಈ ಪ್ರಕ್ರಿಯೆಯಲ್ಲಿಯೇ ಭಾರೀಸವಾಲಿನಂತಹ ಸನ್ನಿವೇಶಗಳನ್ನು ನಾನು ಎದುರಿಸಬೇಕಾಗಿ ಬಂದದ್ದು.
ಈ ಒಂದು ಗೊಂದಲಿತ ಸಮಯದಲ್ಲೇ ಒಂದು ದಿನ ಗೆಳೆಯ ಸೀತಾರಾಂ ಮುಕ್ತ ಧಾರಾವಾಹಿಯ ಸೆಟ್ ನಲ್ಲಿ ಪ್ರಶ್ನೆಯೊಂದನ್ನು ಮುಂದಿಟ್ಟರು: “ಪ್ರಭೂ, ಒಂದು ಮಾತು ಕೇಳ್ತೀನಿ.. ನಿಧಾನವಾಗಿ ಆಲೋಚನೆ ಮಾಡಿ ಉತ್ತರ ಕೊಡು.. ಟೋಪಿ ಶೇಷಪ್ಪನಿಗೆ ಒಬ್ಬ ಮಗಳಿರ್ತಾಳೆ.. ಶರ್ಮಿಳಾ ಅಂತ. ಪಿ ಯು ಸಿ ಓದ್ತಿರೋ ಹುಡುಗಿ. ಅವಳಿಗೆ ಡಾಕ್ಟರ್ ಆಗಬೇಕೂಂತ ತುಂಬಾ ಆಸೆ ಇರುತ್ತೆ..ಆ ಪಾತ್ರಾನ ನಿನ್ನ ಮಗಳು ರಾಧಿಕಾ ಕೈಲಿ ಮಾಡಿಸಬಹುದಾ?”

“ಅಣ್ಣಾ, ಇದರಲ್ಲಿ ಯೋಚನೆ ಮಾಡೋದೇನಿದೆ? ಇದಕ್ಕಿಂತ ಒಳ್ಳೇ ಅವಕಾಶ ಅವಳಿಗಾದರೂ ಎಲ್ಲಿ ಸಿಗುತ್ತೆ? ಅವಳೂ ನಿಮ್ಮ ಗರಡೀಲಿ ಪಳಗಲಿ ಬಿಡಿ!” ಎಂದು ನಾನು ಸಂಭ್ರಮದಿಂದ ನುಡಿದೆ. “ವಿಷಯ ಅಷ್ಟೇ ಅಲ್ಲ ಕಣೋ..ಅವಳಿಗೆ ಡಾಕ್ಟರ್ ಆಗೋ ಆಸೆ.. ನೀನೂ ಸೀಟ್ ಕೊಡಿಸೋಕೆ ತುಂಬಾ ಪ್ರಯತ್ನ ಪಡ್ತೀಯಾ.. ಇದರ ಮಧ್ಯೆ ಸಿಇಟಿ ವ್ಯವಸ್ಥೆ.. ಏನೇನೋ ಆಗಿ ಕೊನೇಗೆ ನಿನ್ನ ಮಗಳು ತನ್ನ ಸೀಟ್ ಗೋಸ್ಕರ ತನ್ನ ಅಪ್ಪ ಪಡ್ತಿರೋ ಕಷ್ಟ ನೋಡಲಾರದೆ ಆತ್ಮಹತ್ಯೆ ಮಾಡಿಕೊಂಡುಬಿಡ್ತಾಳೆ” ಎಂದು ಸೀತಾರಾಂ ಮಾತು ನಿಲ್ಲಿಸಿದರು.
ಆಮೇಲೆ ಅಲ್ಲಿ ಕೆಲ ಸಮಯ ತನ್ನ ಆಧಿಪತ್ಯ ಸ್ಥಾಪಿಸಿದ್ದು ಮೌನ!

ಸೀತಾರಾಂ ಅವರೇ ಮಾತು ಮುರಿದರು: ” ಈಗಲೇ ನೀನೇನೂ ತೀರ್ಮಾನ ಹೇಳಬೇಕಾಗಿಲ್ಲ. ಮನೇಗೆ ಹೋಗಿ ಮಗಳ ಜತೆ, ಮುಖ್ಯ ರಂಜನಿ ಜತೆ ಮಾತಾಡು.. ನೀನು ನಿನ್ನ ಉತ್ತರ ಹೇಳಿದ ಮೇಲೆ ನಾನು ಬೇರೆ ಯೋಚನೆ ಮಾಡ್ತೀನಿ” ಎಂದರು. ನಾನು ‘ಸರಿ ಅಣ್ಣಾ’ ಎಂದ ನುಡಿದು ಕಾರ್ ಡ್ರೈವ್ ಮಾಡಿಕೊಂಡು ಮನೆಯತ್ತ ಹೊರಟೆ. ಅದು ಬಹುಶಃ ನನ್ನ ಬದುಕಿನ ಅತ್ಯಂತ ಆತಂಕದ ಡ್ರೈವ್! ರಸ್ತೆಯ ಮೇಲೇ ಗಮನವಿರುವಂತೆ ನೋಡಿಕೊಂಡು ಕಾರ್ ಓಡಿಸಿಕೊಂಡು ಮನೆ ತಲುಪುವಷ್ಟರಲ್ಲಿ ಸಾಕುಸಾಕಾಗಿಹೋಗಿತ್ತು. ಯಾಕೆಂದರೆ ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ,
ಒಬ್ಬ ತಂದೆ.

ಮನೆಗೆ ಬಂದು ರಂಜನಿ—ರಾಧಿಕಾ ಇಬ್ಬರನ್ನೂ ಕೂರಿಸಿಕೊಂಡು ಸೀತಾರಾಂ ಹೇಳಿದ್ದೆಲ್ಲವನ್ನೂ ಹೇಳಿದೆ. ಪ್ರಾರಂಭದಲ್ಲಿ ಅತ್ಯುತ್ಸಾಹದಿಂದ ಪ್ರತಿಕ್ರಿಯಿಸಿದ ರಂಜನಿ ಕೊನೆಯನ್ನು ಕೇಳುತ್ತಲೇ ‘ ಖಂಡಿತ ಬೇಡ. ನನ್ನ ಕೈಲಿ ಅದೆಲ್ಲಾ ನೋಡೋಕಾಗೋಲ್ಲ’ ಎಂದುಬಿಟ್ಟಳು. ತುಂಬಾ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕೆಂದರೆ ನನ್ನ ಅಂತರಂಗದ ಮಾತೂ ಅದೇ ಆಗಿತ್ತು. ಅಂದು, ಮಗಳಾಗಿದ್ದರೂ ಅಪ್ಪ ಅಮ್ಮನಾಗಿದ್ದ ನಮಗೆ ಪಾಠ ಹೇಳಿದವಳು ರಾಧಿಕಾ! “ನಾನು ಈ ಪಾತ್ರ ಮಾಡ್ತೇನೆ..ಸೀತಾರಾಂ ಅಂಕಲ್ ಡೈರೆಕ್ಷನ್ ನಲ್ಲಿ ಇಂಥ ಒಳ್ಳೇ ಅವಕಾಶ ಸಿಕ್ಕಿರೋವಾಗ ಬಿಡೋದುಂಟಾ? ನೀವೂ ಸ್ವಲ್ಪ practical ಆಗಿ ಯೋಚನೆ ಮಾಡಿ… ಹೇಳಿಕೇಳಿ ಇದೊಂದು ಸೀರಿಯಲ್ಲು.. ನಿಜವಾದ ಜೀವನ ಅಲ್ಲ. ಈಗ ಡ್ಯಾಡೀನೇ ಎಷ್ಟೋ ನಾಟಕಗಳಲ್ಲಿ ಸಿನಿಮಾಗಳಲ್ಲಿ ಸತ್ತಿಲ್ವಾ? ಅದು ಆ character ಅಷ್ಟೇ. ನೀವು ತುಂಬಾ ಇಮೋಷನಲ್ ಆಗಿ ಯೋಚನೆ ಮಾಡೋದನ್ನ ನಿಲ್ಲಿಸಿ. ನಾನು ಈ ಪಾತ್ರ ಮಾಡ್ತೀನಿ ಅಂತ ಅಂಕಲ್ ಗೆ ಹೇಳು ಡ್ಯಾಡಿ” ಎಂದು ಬಲು ದೃಢವಾದ ಸ್ವರದಲ್ಲಿ ಹೇಳಿಬಿಟ್ಟಳು!

ನಮಗೂ ಅವಳ ಮಾತಿನಲ್ಲಿ ಹುರುಳಿದೆ ಅನ್ನಿಸಿತು. ಪಾತ್ರ ಬೇರೆ ಬದುಕು ಬೇರೆ ಎಂಬ ಪಾಠ ನನಗೇನೂ ಹೊಸತಲ್ಲ..ಅಥವಾ ರಂಜನಿಗೂ ತಿಳಿಯದ್ದೇನಲ್ಲ. ಆದರೆ ನಾವೇ ಖುದ್ದು ಇಂಥ ಸನ್ನಿವೇಶದಲ್ಲಿ ಬಂದಿಯಾದಾಗ ಅನುಭವಿಸುವ ತಲ್ಲಣಗಳೇ ಬೇರೆ! ಏನೇ ಆದರೂ ರಾಧಿಕಾ ಅಷ್ಟು ಖಚಿತವಾಗಿ ಹೇಳಿದ ಮೇಲೆ ನಾವು ಮತ್ತೆ ಮಾತು ಬೆಳೆಸಲಿಲ್ಲ. ನಾನೂ ಗೆಳೆಯ ಸೀತಾರಾಂ ಅವರಿಗೆ ನಮ್ಮ ಒಪ್ಪಿಗೆಯನ್ನು ತಿಳಿಸಿಬಿಟ್ಟೆ. “ಚಿಂತೆ ಮಾಡಬೇಡ ಕಣೋ ಪ್ರಭೂ, ಆತ್ಮಹತ್ಯೆ ದೃಶ್ಯಾನ ತುಂಬಾ ಸೂಚ್ಯವಾಗಿ ತೋರಿಸ್ತೀನಿ.. ಜನರ ಸಿಂಪಥಿಗೋಸ್ಕರ ಅದನ್ನ ವೈಭವೀಕರಿಸೋಲ್ಲ… ಅತಿರೇಕ ಮಾಡೋಲ್ಲ… ಚಿಂತೆ ಮಾಡಬೇಡ” ಎಂದು ಅಂದು ಸೀತಾರಾಂ ಹೇಳಿದ ಮಾತು ಇನ್ನೂ ನನ್ನ ಕಿವಿಗಳಲ್ಲಿ ಮೊರೆಯುತ್ತಿದೆ.

‍ಲೇಖಕರು avadhi

February 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: