ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
139
ಒಂದು ಮುಂಜಾನೆ ಬಸವೇಶ್ವರ ನಗರದ ನಮ್ಮ ಮನೆಗೆ ರಂಗ ಮಿತ್ರ ಬಿ.ವಿ.ರಾಜಾರಾಂ ನ ಆಗಮನವಾಯಿತು. ಸಮೀಪದ ರಾಜಾಜಿನಗರದಲ್ಲಿಯೇ ನೆಲೆಸಿದ್ದ ಗೆಳೆಯ ಹಾಗೆ ಆಗಾಗ್ಗೆ ಮನೆಗೆ ಬರುತ್ತಿದ್ದುದುಂಟು. ಆದರೆ ಈ ಬಾರಿಯ ಭೇಟಿಗೆ ಒಂದು ವಿಶೇಷ ಕಾರಣವಿತ್ತು. “ಒಂದು ಮುಖ್ಯ ವಿಷಯವನ್ನು ಪ್ರಸ್ತಾಪಿಸಲು ಬಂದಿದ್ದೇನೆ. ಯಾವುದೇ ಕಾರಣಕ್ಕೂ ನೀನು ಋಣಾತ್ಮಕವಾಗಿ ಸ್ಪಂದಿಸಬಾರದು. ನನ್ನ ಮಾತಿಗೆ ಅಸ್ತು ಅನ್ನಬೇಕು.” ಎಂದ ರಾಜಾರಾಮ. ನನಗೆ ಆಶ್ಚರ್ಯವಾಯಿತು. ಪ್ರಶ್ನಾರ್ಥಕವಾಗಿ ಅವನ ಮುಖವನ್ನೇ ನೋಡುತ್ತಾ “ಅದೇನು ವಿಷಯ ಹೇಳಣ್ಣಾˌ ನಿನ್ನ ಮಾತನ್ನ ನಾನು ಯಾವಾಗ ತೆಗೆದುಹಾಕಿದೀನಿ?” ಎಂದೆ ನಾನು. ನಸುನಗುತ್ತಾ ರಾಜಾರಾಂ ಹೇಳಿದ: “2008 ರ ನಾಟಕ ಅಕಾಡಮಿ ಪ್ರಶಸ್ತಿಗಳಿಗೆ ಅರ್ಹರ ಹೆಸರುಗಳನ್ನು ಪಟ್ಟಿಮಾಡಿ ಅಂತಿಮ ತೀರ್ಮಾನ ಮಾಡಿದೀವಿ. ಈ ಪಟ್ಟಿಯಲ್ಲಿ ನಿನ್ನ ಹೆಸರಿದೆ. ಎರಡನೇ ಮಾತಿಲ್ಲದೇ ಒಪ್ಪಿಕೋಬೇಕು”. ಆಗಷ್ಟೇ ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷನಾಗಿ ರಾಜಾರಾಂ ಅಧಿಕಾರ ವಹಿಸಿಕೊಂಡಿದ್ದ. ಅವನ ಅಧಿಕಾರಾವಧಿಯ ಮೊದಲ ವರ್ಷದ ಪ್ರಶಸ್ತಿ ಪ್ರದಾನದ ಪ್ರಕ್ರಿಯೆ ಆಗಷ್ಟೇ ಆರಂಭವಾಗಿತ್ತು.
ಒಂದು ಕ್ಷಣ ನನಗೆ ಏನೂ ಹೇಳಲು ತೋಚಲಿಲ್ಲ. ವಾಸ್ತವವಾಗಿ ಈ ಪ್ರಶಸ್ತಿ ಪುರಸ್ಕಾರಗಳ ಕುರಿತಾಗಿ ನಾನೆಂದೂ ಆಲೋಚಿಸಿದವನೇ ಅಲ್ಲ. ಹಾಗೆಂದು ‘ನನಗೆ ಪ್ರಶಸ್ತಿಗಳ ಹಂಗು ಗೊಡವೆಗಳೇ ಬೇಡ’ ಎಂಬಂತಹ ಕಠೋರ ನಿಲುವೇನೂ ನನ್ನದಲ್ಲ! ಆದರೆ ಅದಕ್ಕಾಗಿ ಹಪಹಪಿಸುವುದು, ವರಿಷ್ಠರ ಬೆನ್ನುಹತ್ತಿ ದುಂಬಾಲು ಬಿದ್ದು ಒತ್ತಡ ತಂದು ವಶೀಲಿ ಹಚ್ಚಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವುದು. ಇವೆಲ್ಲಾ ನನಗೆ ಒಗ್ಗದ ಸಂಗತಿಗಳು. ‘ಒಂದು ಪಾತ್ರ ನೀಡಿ’ ಎಂದೇ ಯಾರನ್ನು ಬೇಡದವನು ಪ್ರಶಸ್ತಿಗಳಿಗಾಗಿ ಯಾಚಿಸುವುದುಂಟೇ? ಬರುವುದಿದ್ದರೆ, ನನಗೆ ಅರ್ಹತೆ ಇದೆಯೆಂದು ಸಂಬಂಧ ಪಟ್ಟವರಿಗೆ ಮನವರಿಕೆಯಾಗಿದ್ದರೆ ಪ್ರಶಸ್ತಿ ತಾನಾಗಿಯೇ ಬರಬೇಕು ಸಿವಾಯಿ ಅದಕ್ಕಾಗಿ ಅಹರ್ನಿಶಿ ಕನಸಿ ಕನವರಿಸಿ ಯಾರು ಯಾರದ್ದೋ ಬೆನ್ನುಹತ್ತಿ ಹೋರಾಡುವುದು ಎಂದಿಗೂ ಆಗದ ಮಾತು. ಪ್ರಶಸ್ತಿಯ ಮಾತು ಬಂದದ್ದರಿಂದ ಪ್ರಾಸಂಗಿಕವಾಗಿ ಪ್ರಾಮಾಣಿಕವಾಗಿ ಒಂದೆರಡು ಮಾತು ಹೇಳುತ್ತೇನೆ. ಪ್ರಶಸ್ತಿಗಾಗಿ ನಾನು ಮಿಡುಕಾಡದಿದ್ದರೂ ಬಂದರೆ ಬೇಡವೆನ್ನುವ ಮನಸ್ಥಿತಿಯೇನೂ ನನಗಿರಲಿಲ್ಲ. ಒಂದೆರಡು ಸಂದರ್ಭಗಳಲ್ಲಿ ‘ನನ್ನ ಹೆಸರೇಕೆ ಗಣನೆಗೆ ಬಂದಿಲ್ಲ’ ಎಂಬ ಭಾವ ಸುಳಿದು ಹೋಗಿರುವುದೂ ಉಂಟು. ಅದರಲ್ಲಿಯೂ, ನನ್ನ ನಾಟಕ ಶಿಬಿರದಲ್ಲಿ ಭಾಗವಹಿಸಿ ಬೆಳಕಿಗೆ ಬಂದು ನನ್ನ ನಾಟಕಗಳಲ್ಲಿ ಪಾತ್ರ ಮಾಡಿದವರನ್ನೆಲ್ಲಾ ಸಾಕಷ್ಟು ಹಿಂದೆಯೇ ಪ್ರಶಸ್ತಿಗಳು ಅರಸಿಕೊಂಡು ಹೋಗಿ ಅಲಂಕರಿಸಿದಾಗಲಂತೂ ನಾನು ವಿಪರೀತ ಪೆಚ್ಚಾಗಿದ್ದು ಪರಮ ಸತ್ಯ! ಬಹುಶಃ ಪ್ರಶಸ್ತಿ ಸ್ವೀಕರಿಸಲು ಇರಲೇಬೇಕಿದ್ದ ವಿಶೇಷ ‘ಅರ್ಹತೆ’ಗಳು ನನಗಿಲ್ಲವೆಂದು ಸಂಬಂಧಪಟ್ಟವರು ಭಾವಿಸಿದ್ದಿರಬೇಕು!
ಆ ಸಮಯದಲ್ಲೇ, ಬಹುಶಃ ಪ್ರಶಸ್ತಿಗಾಗಿ ನನ್ನ ಹೆಸರನ್ನು ಯಾರೋ ಸೂಚಿಸಿದ್ದರೋ ಏನೋ, ಪ್ರಸಿದ್ಧ ರಂಗಕರ್ಮಿಯೊಬ್ಬರು, “ಅವರು ಈಗ ನಾಟಕ ಎಲ್ರೀ ಮಾಡ್ತಿದಾರೆ? ದೂರದರ್ಶನಕ್ಕೆ ಕಿರುತೆರೆಗೆ ವಲಸೆ ಹೋಗಿಬಿಟ್ಟಿದಾರಲ್ಲಾ! ನಾವ್ಯಾಕೆ ಅವರಿಗೆ ಪ್ರಶಸ್ತಿ ಕೊಡಬೇಕು? ದೂರದರ್ಶನದಲ್ಲೇ ತೊಗೊಳ್ಳಲಿ ಬಿಡಿ.” ಎಂದು ಕೇಕೆ ಹಾಕಿದ್ದರಂತೆ. ಸ್ವಾರಸ್ಯದ ಸಂಗತಿ ಎಂದರೆ ದೂರದರ್ಶನದಲ್ಲಿಯೂ ನಾನು ನಾಟಕ ವಿಭಾಗವನ್ನೇ ನೋಡುಕೊಳ್ಳುತ್ತಿದ್ದೆನಲ್ಲದೆ ವಾರಕ್ಕೊಂದು ನಾಟಕವನ್ನು ದೂರದರ್ಶನಕ್ಕಾಗಿ ಮಾಡಿಸುತ್ತಿದ್ದೆ! ಕೆಲವು ನಾನೇ ನಿರ್ದೇಶಿಸಿದ ನಾಟಕಗಳಾದರೆ ಮತ್ತೆ ಕೆಲವು, ಪ್ರಸಿದ್ಧ ನಿರ್ದೇಶಕರ ಸುಪ್ರಸಿದ್ಧ ರಂಗಪ್ರಯೋಗಗಳ ಅಳವಡಿಕೆಗಳಾಗಿದ್ದವು. ಆ ಮೂಲಕ ಕನ್ನಡದ ಅನೇಕ ಶ್ರೇಷ್ಠ ನಾಟಕಗಳನ್ನು ರಾಜ್ಯಾದ್ಯಂತ—ದೇಶಾದ್ಯಂತ ಇರುವ ಕೋಟ್ಯಾಂತರ ಕನ್ನಡಿಗರಿಗೆ ತಲುಪಿಸುವ ಸಾರ್ಥಕ ಕಾರ್ಯದಲ್ಲಿ ನಾನು ತೊಡಗಿದ್ದೆ! ಅಂದು ಕೇಕೆ ಹೊಡೆದು ನನ್ನನ್ನು ಕಿಚಾಯಿಸಿದವರ ನಾಟಕವನ್ನೂ ದೂರದರ್ಶನಕ್ಕೆ ನಾನು ಅಳವಡಿಸಿದ್ದುಂಟು. ಅದು ನನ್ನ ವೃತ್ತಿಯ ಒಂದು ಭಾಗವಾಗಿತ್ತು ಎನ್ನುವುದಕ್ಕಿಂತ ಎಲ್ಲಕ್ಕಿಂತ ಅತ್ಯಂತ ಪ್ರೀತಿಯ ಕೆಲಸವಾಗಿತ್ತು ನನಗೆ! ಹಾಗಾಗಿಯೇ ಎಲ್ಲರೂ ಹಾತೊರೆಯುವ ವಿಭಾಗಗಳು ನನ್ನ ತೆಕ್ಕೆಗೆ ಬಂದಾಗಲೂ ನಾನಾಗಿಯೇ ನಿರಾಕರಿಸಿ ನಾಟಕ ವಿಭಾಗವನ್ನು ಆರಿಸಿಕೊಂಡಿದ್ದೆ. ಇರಲಿ.
ಇಷ್ಟೆಲ್ಲಾ ಸಮಜಾಯಿಷಿ ಸಮರ್ಥನೆ ಯಾರಿಗೂ ನೀಡಬೇಕೆಂದು ಆಗ ನನಗನ್ನಿಸಿರಲಿಲ್ಲವಾದ್ದರಿಂದ ಸುಮ್ಮನಾಗಿಬಿಟ್ಟಿದ್ದೆ. ಆದರೆ ಮನಸ್ಸಿನಲ್ಲೇ ಒಂದು ತೀರ್ಮಾನ ಸಣ್ಣಗೆ ಮೊಳಕೆ ಒಡೆದದ್ದು ದಿಟ: “ಮುಂದೆಂದಾದರೂ ಈ ಪ್ರಶಸ್ತಿ ಅಕಸ್ಮಾತ್ ನನಗೆ ಬರುವ ಸಂದರ್ಭ ಬಂದರೆ ಒಪ್ಪಿಕೊಳ್ಳಬಾರದು! ನಿರಾಕರಿಸಿಬಿಡಬೇಕು!” ಗೆಳೆಯರ ಮುಂದೂ ಸಹಾ ಈ ಮಾತುಗಳನ್ನು ಹೇಳಿದ್ದುಂಟು. ಆ ಕಾರಣವಾಗಿಯೇ ರಾಜಾರಾಂ ‘ಋಣಾತ್ಮಕವಾಗಿ ಸ್ಪಂದಿಸಬಾರದು’ ಎಂದು ಷರತ್ತು ಹಾಕಿದ್ದು! “ಈಗಾಗಲೇ ಪ್ರಶಸ್ತಿ ಪುರಸ್ಕೃತರಾಗಿರುವ ಎಷ್ಟೋ ಮಂದಿಗೆ ರಂಗದ ಮೇಲೆ ನಿಲ್ಲುವುದನ್ನು ಕಲಿಸಿದವನು ನೀನು. ನೆಟ್ಟಗೆ ಮಾತಾಡುವುದನ್ನು ಕಲಿಸಿದವನು ನೀನು. ಇಷ್ಟು ದಿನ ಏನಾಯಿತು ಎಂಬ ವಿಮರ್ಶೆ ಈಗ ಬೇಡ. ನಿನ್ನ ಮನಸ್ಥಿತಿಯ ಅರಿವಿದೆ ನನಗೆ. ಹಾಗೆಯೇ ಹೊರಗಿನ ‘ಪರಿಸ್ಥಿತಿ’ಯೂ ನಿನ್ನ ಗಮನದಲ್ಲಿರಲಿ. ಇಲ್ಲ ಅನ್ನದೇ ಒಪ್ಪಿಕೋ. ಈ ಗೆಳೆಯನ ಮಾತಿಗೆ ಒಂದಿಷ್ಟು ಗೌರವ ನೀಡು.” ಎಂದು ಹೃದಯಪೂರ್ವಕವಾಗಿ ರಾಜಾರಾಂ ಹೇಳಿದಾಗ ನಿರಾಕರಿಸುವ ಮನಸ್ಸಾಗದೇ ಒಪ್ಪಿಕೊಂಡು ಬಿಟ್ಟೆ. ರಾಜಾರಾಮನೂ ಖುಷಿಯಿಂದ ಕೈಕುಲುಕಿ, ‘ಸರಿ. ನಾಳೆ ನಾಡಿದ್ದರಲ್ಲಿ ಆಫೀಸ್ ನಿಂದ ಪತ್ರ ಬರುತ್ತೆ. ಥ್ಯಾಂಕ್ಯ’ ಎಂದು ನುಡಿದು ಹೊರಟ. ಮರುದಿನ ಪತ್ರಿಕೆಗಳಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಯಿತು. ಹಿರಿಯ ರಂಗತಜ್ಞ ಬಿ.ಎಸ್.ಕೇಶವರಾವ್ ಅವರಿಗೆ ಗೌರವ ರಂಗಪ್ರಶಸ್ತಿ; ನಾನು, ಪ್ರಸಿದ್ಧ ರಂಗ ಕಲಾವಿದರಾದ ಏಣಗಿ ನಟರಾಜ್ , ಮಂಜುನಾಥ ಹೆಗಡೆ ಹಾಗೂ ರಾಮಕೃಷ್ಣ ಕನ್ನರ್ಪಾಡಿ ಸೇರಿದಂತೆ ಹದಿನೈದು ರಂಗಕರ್ಮಿಗಳನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲು ಅಕಾಡಮಿ ನಿರ್ಧರಿಸಿತ್ತು.
ಮರುದಿನ ಕಾರ್ಯನಿಮಿತ್ತ ಕಲಾಕ್ಷೇತ್ರಕ್ಕೆ ಹೋಗಿದ್ದಾಗ ಹವ್ಯಾಸಿ ರಂಗಭೂಮಿಯ ಆಧಾರ ಸ್ತಂಭವೆಂಬಂತೆ ಬಿಂಬಿತರಾಗುವ ಪ್ರಸಿದ್ಧ ಹಿರಿಯ ರಂಗಕರ್ಮಿಯೊಬ್ಬರು ಇದಿರಾದರು. “ಕಂಗ್ರಾ ಟ್ಸ್ ಪ್ರಭು! Actually ನಿಮಗೆ ಯಾವಾಗಲೋ ಈ ಪ್ರಶಸ್ತಿ ಬರಬೇಕಿತ್ತು. ಹೋಗಲಿ ಬಿಡಿ. ಈಗಲಾದರೂ ಬಂತಲ್ಲಾ..” ಎಂದು ನಕ್ಕು ಕೈಕುಲುಕಿ ಬೆನ್ನು ತಟ್ಟಿ ಅಭಿನಂದಿಸಿದರು. ಅದೇ ಆವರಣದಲ್ಲಿ ಅರೆತಾಸಿನ ಬಳಿಕ ಹವ್ಯಾಸಿ ರಂಗಭೂಮಿಯ ಶ್ರೇಷ್ಠ ನಿರ್ದೇಶಕರೊಬ್ಬರು ಭೇಟಿಯಾದರು. ಅವರೂ ಕೈಕುಲುಕಿ ಅಭಿನಂದಿಸಿ ಕಾಕತಾಳೀಯವೆಂಬಂತೆ, “Actually ನಿಮಗೆ ಯಾವತ್ತೋ ಬರಬೇಕಿತ್ತು ಈ ಪ್ರಶಸ್ತಿ. ಇರಲಿ ಬಿಡಿ. ಈಗಲಾದರೂ ಅಕಾಡಮಿ ಕಣ್ಣು ತೆರೀತಲ್ಲಾ” ಎಂದು ಸುಂದರವಾಗಿ ನಕ್ಕರು. ನಾನೂ ನಸುನಗುತ್ತಾ ಅವರ ಮುಖವನ್ನೇ ದಿಟ್ಟಿಸಿ ನೋಡಿದೆ. ಪರಮ ಕಾಕತಾಳೀಯವೆಂಬಂತೆ ನನಗೆ ಅಂದು ಅಭಿನಂದಿಸಿದ ಇಬ್ಬರೂ ಹಿರಿಯ ರಂಗಕರ್ಮಿಗಳು ಆ ಮೊದಲು ನಾಟಕ ಅಕಾಡಮಿಯ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದು ಕಾರ್ಯ ನಿರ್ವಹಿಸಿದವರೇ ಆಗಿದ್ದರು! ಮತ್ತೊಮ್ಮೆ ನನ್ನ ಮುಖದ ಮೇಲೆ ಸಣ್ಣ ನಗು ಸುಳಿದು ಹೋಯಿತು. ‘ತಾವೂ ಈ ಮೊದಲು ಅಲ್ಲಿ ಇದ್ದವರಲ್ಲವೇ’ ಎಂದು ನಾಲಗೆಯ ತುದಿಯವರೆಗೆ ಬಂದಿದ್ದ ಮಾತನ್ನು ಕಷ್ಟಪಟ್ಟು ತಡೆಹಿಡಿದೆ!
ಪ್ರಶಸ್ತಿ ಪ್ರದಾನ ಸಮಾರಂಭ ನಡೆದದ್ದು ಶಿವಮೊಗ್ಗೆಯ ಕುವೆಂಪು ರಂಗಮಂದಿರದಲ್ಲಿ. ಅಂದಿನ ಸಮಾರಂಭದ ಅಧ್ಯಕ್ಷತೆಯನ್ನು ಅಂದಿನ ಇಂಧನ ಖಾತೆ ಸಚಿವರಾಗಿದ್ದ ಶ್ರೀ ಕೆ.ಎಸ್. ಈಶ್ವರಪ್ಪನವರು ವಹಿಸಿದ್ದರು. ರಂಗಜ್ಯೋತಿ ಬೆಳಗಿಸಿದವರು ಕನ್ನಡ ರಂಗಭೂಮಿಯ ಹಿರಿಯಜ್ಜ ಏಣಗಿ ಬಾಳಪ್ಪನವರು. ಆಗ ಲೋಕಸಭಾ ಸದಸ್ಯರಾಗಿದ್ದ ಶ್ರೀ ಬಿ.ವೈ.ರಾಘವೇಂದ್ರ, ಅಭಿನಯ ಶಾರದೆ ಜಯಂತಿ, ನನ್ನ ಮಾನಸಗುರು ಕಲ್ಚರ್ಡ್ ಕಮೆಡಿಯನ್ ಮಾಸ್ಟರ್ ಹಿರಣ್ಣಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಗಳ ಕಾರ್ಯದರ್ಶಿಗಳಾಗಿದ್ದ ಶ್ರೀ ಜಯಚಾಮರಾಜೇ ಅರಸ್ ಅವರ ಘನ ಉಪಸ್ಥಿತಿ. ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಡಾ॥ ಬಿ.ವಿ. ರಾಜಾರಾಂ ಅವರ ಸಾರಥ್ಯ! ಒಟ್ಟಾರೆ ಬಹಳ ಸುಂದರವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2008 ನೇ ಸಾಲಿನ ನಾಟಕ ಅಕಾಡಮಿ ಪ್ರಶಸ್ತಿಯನ್ನು ಕಿಕ್ಕಿರಿದು ನೆರೆದಿದ್ದ ಸಹೃದಯ ರಂಗಾಸಕ್ತರ ಸಮಕ್ಷಮದಲ್ಲಿ ಗಣ್ಯರಿಂದ ಸ್ವೀಕರಿಸಿದಾಗ ಹೃದಯ ತುಂಬಿ ಬಂದಿತ್ತು. ಪ್ರಾಸ್ತಾವಿಕವಾಗಿ ನಾನೂ ನಾಲ್ಕು ಮಾತನಾಡಿ, ‘ಹೆಚ್ಚು ಹೆಚ್ಚಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪರೋಕ್ಷವಾಗಿ ಈ ಪ್ರಶಸ್ತಿ ಎಚ್ಚರಿಕೆಯ ಗಂಟೆ ಬಾರಿಸಿದೆ! ಇದನ್ನು ನಾನು ನೆನಪಿಡುತ್ತೇನೆ’ ಎಂದು ನುಡಿದು ನನ್ನ ಕೃತಜ್ಞತೆಗಳನ್ನು ಸಮರ್ಪಿಸಿದೆ. ಸಮಾರಂಭದಲ್ಲಿ ರಂಜನಿ ಹಾಗೂ ಮಕ್ಕಳು ಪಾಲ್ಗೊಂಡಿದ್ದು, ಈ ಸಲುವಾಗಿಯೇ ಮೂರ್ತಿ ಭಾವ ಹಾಗೂ ನಳಿನಿ ಅಕ್ಕ ಶಿವಮೊಗ್ಗೆಗೆ ಬಂದದ್ದು, ಶಿವಮೊಗ್ಗೆಯ ನಿವಾಸಿಗಳೇ ಆಗಿದ್ದ ಆತ್ಮೀಯ ಜ್ಞಾನೇಂದ್ರ ಪ್ರಭು ಹಾಗೂ ರೇಖಾ ದಂಪತಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು ನನ್ನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ಇತ್ತ ರಂಜನಿ ಕಾವ್ಯ ಕೃಷಿಯಲ್ಲಿ ಬಹಳ ಗಂಭೀರವಾಗಿ ತೊಡಗಿಕೊಂಡಿದ್ದಳು. ಆದಷ್ಟು ಬೇಗನೇ ಒಂದು ಕವಿತಾ ಸಂಕಲನವನ್ನು ಪ್ರಕಟಿಸಬೇಕೆಂಬುದು ಅವಳ ಮನದಾಸೆಯಾಗಿತ್ತು. ‘ಸಂಕಲನವೊಂದು ಪುಸ್ತಕ ರೂಪದಲ್ಲಿ ಹೊರಬರದೆ ಕಾವ್ಯಕ್ಷೇತ್ರವನ್ನು ಗಂಭೀರವಾಗಿ ಸ್ವೀಕರಿಸಿದ ಕವಿ ಎಂಬ ‘ಗುರುತು’ ನಿಮಗೆ ದೊರೆಯದು. ಕ್ಯಾಸೆಟ್ ಕವಿಯೆಂಬಷ್ಟಕ್ಕೇ ನಿಮ್ಮ ಕಾವ್ಯಯಾನ ಮುಗಿದುಹೋಗುತ್ತದೆ’. ಎಂದು ಪರೋಕ್ಷವಾಗಿ ಎಚ್ಚರಿಸಿದ್ದ ಪ್ರೀತಿಯ ಮೇಷ್ಟ್ರು ಎನ್ ಎಸ್ ಎಲ್ ಅವರ ಮಾತು ಅವಳ ಮನಸ್ಸನ್ನು ಸದಾ ಕೊರೆಯುತ್ತಿತ್ತು. ಇದೇ ಸಮಯದಲ್ಲಿ ಒಮ್ಮೆ ಹನುಮಂತನಗರದಲ್ಲಿದ್ದ ಗೌರಿ ಸುಂದರ್ ಅವರ ಮನೆಗೆ ಹೋಗುವ ಅವಕಾಶ ಒದಗಿ ಬಂತು. ಆಕಾಶವಾಣಿಯ ಪ್ರಸಿದ್ಧ ದನಿ ‘ಈರಣ್ಣ’ ಎ.ಎಸ್.ಮೂರ್ತಿ ಅವರ ಅಳಿಯನಾದ ಗೌರಿಸುಂದರ್ ಸಾಕಷ್ಟು ವರ್ಷಗಳಿಂದ ಪರಿಚಿತರು. ಚಲನಚಿತ್ರ ನಿರ್ದೇಶಕರೂ ಆಗಿದ್ದ ಗೌರಿಸುಂದರ್ ಅವರು ‘ಸುಂದರ ಪ್ರಕಾಶನ’ವೆಂಬ ಸಂಸ್ಥೆಯನ್ನು ಆರಂಭಿಸಿ ದೊಡ್ಡ ಪ್ರಕಾಶಕರೆಂದು ಹೆಸರಾಗಿದ್ದರು. ಹಿಂದೆ ಅವರು ತೆರೆಗೆ ತರಲು ಆಲೋಚಿಸುತ್ತಿದ್ದ ‘ಕಣ್ಣುಗಳು’ ಎಂಬ ಕಥೆಯ ಮುಖ್ಯ ಪಾತ್ರಕ್ಕೆ ನನ್ನನ್ನೇ ಗಮನದಲ್ಲಿರಿಸಿಕೊಂಡಿದ್ದರು ಕೂಡಾ! ಕಾರಣಾಂತರಗಳಿಂದ ಆ ಚಿತ್ರ ಪ್ರಾರಂಭವಾಗಲಿಲ್ಲ. ಇರಲಿ. ಇಂದಿರಾ ಅವರು ನೀಡಿದ ಸೊಗಸಾದ ಕಾಫಿಯನ್ನು ಗುಟುಕರಿಸುತ್ತಾ ಗೌರಿಸುಂದರ್ ಅವರ ಜತೆಗೆ ಹರಟೆಗೆ ಶುರುವಿಟ್ಟುಕೊಂಡೆವು.
ಆ ವೇಳೆಗಾಗಲೇ ಸುಂದರ್ ಅವರ ಆರೋಗ್ಯ ಬಹುವಾಗಿ ಕ್ಷೀಣಿಸಿತ್ತು, ದೃಷ್ಟಿಯಂತೂ ತೀರಾ ಮಂಜಾಗಿ ದುರ್ಬೀನಿನ ನೆರವಿನಿಂದ ಓದಬೇಕಾದ ಸ್ಥಿತಿ ತಲುಪಿತ್ತು. ಆದರೂ ಸುಂದರ್ ಅವರ ಛಲ ಮಾತ್ರ ಮಂಜಾಗಿರಲಿಲ್ಲ! ಅಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ತಮ್ಮ ಸುಂದರ ಪ್ರಕಾಶನದ ಕಾರ್ಯ ಚಟುವಟಿಕೆಗಳನ್ನು ಪರಮೋತ್ಸಾಹದಿಂದ ನಡೆಸಿಕೊಂಡು ಹೋಗುತ್ತಿದ್ದರು ಸುಂದರ್. ಮಾತಿನ ನಡುವೆ ಧಿಡೀರನೆ, “ಪ್ರಭೂ..ನಿಮ್ಮದು ಯಾವುದಾದರೂ ನಾಟಕ ಕೊಡ್ರೀ. ನಮ್ಮ ಪ್ರಕಾಶನದಿಂದ ಪ್ರಕಟ ಮಾಡೋಣ.” ಎಂದರು ಸುಂದರ್. “ಬರೀ ನಾಟಕ ಮಾತ್ರ ಪ್ರಕಟಿಸ್ತೀರಾ? ಕವಿತೆಗಳು ಬೇಡವೇ ನಿಮಗೂ?” ಎಂದು ಪಕ್ಕದಲ್ಲಿದ್ದ ರಂಜನಿ ನಗುತ್ತಾ ನುಡಿದಳು. ಅವಳು ಹಾಗೆ ಹೇಳಲೂ ಒಂದು ಕಾರಣವಿತ್ತು. ಕವಿತೆಗಳನ್ನು ಪ್ರಕಟಿಸಲು ನಮ್ಮ ಆಪ್ತ ವಲಯದ ಒಂದಿಬ್ಬರು ಪ್ರಕಾಶಕರೇ ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಸುಂದರ್ ಒಡನೆಯೇ, “ಕೊಡೀಮ್ಮಾ. ಖಂಡಿತ ಪ್ರಕಟಿಸ್ತೀನಿ. ನನಗೆ ಹಾಗೆ ಯಾವ ಭೇದಭಾವಾನೂ ಇಲ್ಲ. ನೀವು ಎಷ್ಟು ಬೇಗ ಕವಿತೆಗಳನ್ನ ಕೊಟ್ಟರೆ ಅಷ್ಟು ಬೇಗ ಪುಸ್ತಕ ಹೊರತರಬಹುದು.” ಎಂದರು! ಇಂಥ ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯೇ ಇಲ್ಲದಿದ್ದ ನಮಗೆ ಆಶ್ಚರ್ಯದಿಂದ ಮಾತೇ ಹೊರಡಲಿಲ್ಲ! “ನಾನು ತಮಾಷೆ ಮಾಡ್ತಿಲ್ಲ ಪ್ರಭೂ! ನೀವು ಮೆಟೀರಿಯಲ್ ಕೊಡ್ತಾ ಹೋಗಿ. ನಾನು ಪ್ರಕಟಿಸ್ತಾ ಹೋಗ್ತೀನಿ. ಅನುಮಾನಾನೇ ಬೇಡ. Now the ball is in your court!” ಎಂದು ನಕ್ಕರು ಸುಂದರ್.
ಅಷ್ಟು ಆರೋಗ್ಯದ ಸಮಸ್ಯೆಯ ನಡುವೆಯೂ ಅವರ ಬತ್ತದ ಉತ್ಸಾಹವನ್ನೂ ತಗ್ಗದ ಕ್ರಿಯಾಶೀಲತೆಯನ್ನೂ ಕಂಡು ನಿಜಕ್ಕೂ ಸೋಜಿಗವಾಯಿತು. ‘ಸಧ್ಯದಲ್ಲೇ ಬಂದು ಕಾಣುತ್ತೇವೆ’ ಎಂದು ನುಡಿದು ಅಲ್ಲಿಂದ ಹೊರಟೆವು. ಈಗಂತೂ ರಂಜನಿಗೆ ರೆಕ್ಕೆ ಮೂಡಿದಂತಾಗಿಹೋಗಿತ್ತು. ತನ್ನ ಹಳೆಯ ಕಡತಗಳನ್ನೆಲ್ಲಾ ತೆಗೆದು, ಬರೆದು ಬದಿಗೆ ಸರಿಸಿದ್ದ ಕವಿತೆಗಳನ್ನೆಲ್ಲಾ ಹೊರತೆಗೆದು ಪರಿಷ್ಕರಿಸಿದಳು. ಮತ್ತಷ್ಟು ಹೊಸ ಕವಿತೆಗಳೂ ಮೂಡಿಬಂದವು. ಎಂದಿನಂತೆ ಪ್ರೀತಿಯ ಕವಿಗಳಾದ ಹೆಚ್ ಎಸ್ ವಿ ಹಾಗೂ ಬಿ ಆರ್ ಎಲ್ ಅವರ ಮಾರ್ಗದರ್ಶನದಲ್ಲಿ ಕವಿತೆಗಳು ಪರಿಷ್ಕರಣಗೊಂಡು ಒಂದು ಸಂಕಲನಕ್ಕೆ ಅಗತ್ಯವಿದ್ದಷ್ಟು ಸಂಖ್ಯೆಯಲ್ಲಿ ಸಿದ್ಧವಾಗಿಯೇಬಿಟ್ಟವು. ಏತನ್ಮಧ್ಯೆ ಉಪಾಸನಾ ಮೋಹನ್ ಅವರು ಕೆಲವು ಭಾವಗೀತೆಗಳಿಗೆ ಸೊಗಸಾಗಿ ಸಂಗೀತ ಸಂಯೋಜನೆಯನ್ನೂ ಮಾಡಿ ಮುಗಿಸಿದ್ದರು. ಒಂದು ಕವನ ಸಂಕಲನ ಹಾಗೂ ಒಂದು ಧ್ವನಿ ಸಾಂದ್ರಿಕೆ ಎರಡನ್ನೂ ಒಟ್ಟಿಗೆ ಬಿಡುಗಡೆ ಮಾಡುವುದೆಂದು ನಿರ್ಧರಿಸಿದೆವು.
ಈಗಾಗಲೇ ಲೋಕಾರ್ಪಣೆಗೊಂಡಿದ್ದ ‘ಭಾವರಂಜನಿ’ ಹಾಗೂ ‘ಅಗೋಚರ’ ಧ್ವನಿಸಾಂದ್ರಿಕೆಗಳ ಹಾಡುಗಳನ್ನೂ ಹೊಸ ಹಾಡುಗಳೊಂದಿಗೆ ಸೇರಿಸಿಕೊಂಡು ಒಂದು mp3 ಹೊರತರೋಣ ಎಂದು ಉಪಾಸನಾ ಮೋಹನ್ ಸೂಚಿಸಿದರು. ಹಿಂದಿನ ಎರಡೂ ಧ್ವನಿ ಸಾಂದ್ರಿಕೆಗಳು ಸಿದ್ಧವಾಗಿ ಮಾರುಕಟ್ಟೆ ಪ್ರವೇಶಿಸಿದ್ದು ಪ್ರಖ್ಯಾತ ಆಡಿಯೋ ಸಂಸ್ಥೆ ‘ಲಹರಿ’ ನೆರವಿನಿಂದ. ‘ಈಗಲೂ mp3 ಹೊರತರಲು ನೆರವಾಗುತ್ತೇವೆ’ ಎಂದು ಲಹರಿ ವೇಲು ಅವರು ಆಶ್ವಾಸನೆ ನೀಡಿದರು. ಇನ್ನೇನು! ಪ್ರಸಿದ್ಧ ಗಾಯಕ ಗಾಯಕಿಯರನ್ನೂ ವಾದಕರನ್ನೂ ಸ್ಟುಡಿಯೋಗೆ ಆಹ್ವಾನಿಸಿ ಹಾಡುಗಳ ರೆಕಾರ್ಡಿಂಗ್ ಪ್ರಕ್ರಿಯೆಯನ್ನು ಆರಂಭಿಸಿಯೇ ಬಿಟ್ಟರು ಉಪಾಸನಾ ಮೋಹನ್. ಏತನ್ಮಧ್ಯೆ ಪ್ರಥಮ ಕವಿತಾ ಸಂಕಲನಕ್ಕೆ ಹಾಗೂ ಹೊಸ ಧ್ವನಿ ಸಾಂದ್ರಿಕೆಗೆ ನಾಮಕರಣ ಮಾಡುವ ನಿಟ್ಟಿನಲ್ಲಿ ಮಾತುಕತೆ ಆರಂಭವಾಯಿತು. ಸರ್ವಾನುಮತದಿಂದ ಎರಡಕ್ಕೂ ಆಯ್ಕೆಯಾದ ಹೆಸರು: “ಭರಣಿಮಳೆ”..
0 ಪ್ರತಿಕ್ರಿಯೆಗಳು