ಶ್ರೀನಿವಾಸ ಜೋಕಟ್ಟೆ ನೆನಪಿನಲ್ಲಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರು

ಶ್ರೀನಿವಾಸ ಜೋಕಟ್ಟೆ

“ಇಂದು ಪತ್ರಕರ್ತರಲ್ಲಿ ಸೀರಿಯಸ್ ಇನ್ವಾಲ್ಮೆಂಟ್ ಇಲ್ಲ. ನಮ್ಮ ಕಾಲದಲ್ಲಿ ಒಂದು ನ್ಯೂಸ್ ಹಾಕುವಾಗ ಅನೇಕ ಬಾರಿ ಯೋಚಿಸಿ ಮುಂದುವರಿಯುತ್ತಿದ್ದೆವು. ಇಂದು ಪತ್ರಿಕೆಗಳ ನಡುವೆ ಸ್ಪರ್ಧೆಯೂ ಹೆಚ್ಚಾಗುತ್ತಿದೆ. ಮಾಲೀಕರ ಒತ್ತಡವೂ ಹೆಚ್ಚಾಗುತ್ತಿದೆ..” ಈ ಮಾತು ಹೇಳಿದವರು ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು.

2007ರಲ್ಲಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರನ್ನು ಮುಂಬಯಿಯ ಸಮಾಜ ಸೇವಕಿ, ಸಂಸ್ಕೃತಿಪ್ರೇಮಿ ಪ್ರಫುಲ್ಲಾ ಎಸ್ ಕೆ ಉರ್ವಲ್ ಅವರ ಮನೆಯಲ್ಲಿ ಸಂದರ್ಶನ ಮಾಡಿದ್ದೆ. ಫ್ಯಾಶನ್ ಡಿಸೈನಿಂಗ್ ಖ್ಯಾತ ಸಂಸ್ಥೆ ಐಐಟಿಸಿಯ ನಿರ್ದೇಶಕರಾದ ವಿಕ್ರಾಂತ್ ಉರ್ವಲ್ ರು ಅಂದಿನ ಸಂದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಆ ಸಂದರ್ಶನದಲ್ಲಿ ಶ್ರೀ ಗೋವಿಂದಾಚಾರ್ಯರು ಪತ್ರಿಕಾರಂಗದ ವರ್ತಮಾನದ ದೃಶ್ಯದ ಕುರಿತು ಹೇಳಿದ ಮಾತು ಇದಾಗಿತ್ತು.

ಬನ್ನಂಜೆಯವರು ಆವಾಗ ಮುಂಬಯಿಗೆ ಬಂದದ್ದಕ್ಕೂ ಒಂದು ಸಂದರ್ಭ ಇತ್ತು. 2007ರ ಫೆಬ್ರವರಿ 16ರಂದು ರಾಷ್ಟ್ರೀಯ ಹರಿದಾಸ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮುಂಬಯಿಗೆ ಆಗಮಿಸಿದ್ದರು. ಆವಾಗ ಉರ್ವಲ್ ರ ವಡಾಲಾದ ಮನೆಯಲ್ಲಿ ನಾನು ಎರಡನೇ ಬಾರಿ ಬನ್ನಂಜೆಯವರನ್ನು ಸಂದರ್ಶನ ಮಾಡಿದ್ದೆ.

ಶ್ರೀ ಬನ್ನಂಜೆ ಗೋವಿಂದಾಚಾರ್ಯರನ್ನು ಅದಕ್ಕಿಂತ ಮೊದಲು 1987ರಲ್ಲಿಯೂ ಅದಮಾರು ಮಠದಲ್ಲಿ ‘ತಾಯಿನುಡಿ’ ಮಾಸ ಪತ್ರಿಕೆಗಾಗಿ ಪ್ರಥಮ ಬಾರಿಗೆ ನಾನು ಸಂದರ್ಶನ ಮಾಡಿದ್ದೂ ಇದೆ. ಆವಾಗ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಬನ್ನಂಜೆಯವರ ಪ್ರವಚನ ಒಂದು ವಾರ ಕಾಲ ಸಂಜೆಗೆ ಇರುತ್ತಿತ್ತು ಎಂಬ ನೆನಪು. ಆಗ ಅವರು ಅದಮಾರು ಮಠದಲ್ಲಿ ಉಳಕೊಂಡಿದ್ದರು.

80-90ರ ದಶಕದಲ್ಲಿ ಮುಂಬಯಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳು ಅನೇಕ ಬಾರಿ ಜರಗಿತ್ತು. ಹೆಚ್ಚಿನ ಕಡೆ ನಾನು ತುಂಬಾ ಆಸಕ್ತಿಯಿಂದ ಅವರಲ್ಲಿ ಪ್ರಶ್ನೆ ಮಾಡುವುದಕ್ಕಾಗಿಯೇ ಪ್ರವಚನ ಕೇಳಲು ಹೋಗುತ್ತಿದ್ದೆ. ಬನ್ನಂಜೆ ಗೋವಿಂದಾಚಾರ್ಯ ಅವರನ್ನು ನಾನು ಎಂಭತ್ತರ ದಶಕದ ಕೊನೆಯಲ್ಲಿ ಮಣಿಪಾಲದಲ್ಲಿ ಉದಯವಾಣಿ ಸಾಪ್ತಾಹಿಕ ವಿಭಾಗಕ್ಕೆ ಡಾ. ಬಿ ಜನಾರ್ಧನ ಭಟ್ ಅವರ ಜೊತೆ ಭೇಟಿ ಕೊಟ್ಟಾಗ ಅವರು ಉದಯವಾಣಿ ಸಾಪ್ತಾಹಿಕ ವಿಭಾಗದ ಸಂಪಾದಕರಾಗಿದ್ದರು. ನಾವು ಹೋದಾಗ ಆ ಸಮಯ ಅಲ್ಲಿ ಅವರ ಜೊತೆ ಮತ್ತೊಬ್ಬರು ಮಾತನಾಡುತ್ತಿದ್ದರು. ಅವರು ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿ ಆಗಿದ್ದರು. ಬೊಳುವಾರರನ್ನು ಮೊದಲ ಬಾರಿ ನಾನು ಅಲ್ಲೇ  ಕಂಡದ್ದು.

ಬನ್ನಂಜೆಯವರ ಪ್ರವಚನ ಅಂದರೆ ಅದರಲ್ಲೊಂದು ಜೀವಂತಿಕೆ ಇರುತ್ತಿತ್ತು. ಪುರಾಣ ಕಾಲವನ್ನು ಅವರು ಇಂದಿನ ಕಾಲದಲ್ಲಿ ನಿಂತು ವಿಶ್ಲೇಷಿಸಿಸುತ್ತಿದ್ದರು. ಪುರಾಣದ ಲೈಂಗಿಕ ಸಂದರ್ಭಗಳನ್ನು ಸಂಕೋಚವಿಲ್ಲದೆ ಹೇಳಿಬಿಡುತ್ತಿದ್ದರು. ಉದಯವಾಣಿಯ ಆರಂಭದ ದಿನಗಳಿಂದಲೂ ಅದರ ಜೊತೆಗಿದ್ದ ಬನ್ನಂಜೆ ಶ್ರೀ ಗೋವಿಂದಾಚಾರ್ಯರು ಸಾಪ್ತಾಹಿಕ ವಿಭಾಗದ ಸಂಪಾದಕರಾಗಿ 1994ರಲ್ಲಿ ಸೇವಾ ನಿವೃತ್ತರಾದ ನಂತರ ಬಿಡುವಿಲ್ಲದ ಓಡಾಟದಲ್ಲಿದ್ದರು.

ಬನ್ನಂಜೆ ಅವರಲ್ಲಿ ನಿವೃತ್ತಿಯ ನಂತರವೂ ಸಾಪ್ತಾಹಿಕ ವಿಭಾಗದ ಜವಾಬ್ದಾರಿ ಮುಂದುವರಿಸಲು ಪೈಯವರು ಕೇಳಿದ್ದರಂತೆ. ಆದರೆ ಬನ್ನಂಜೆಯವರು ಪತ್ರಿಕಾರಂಗದ ವೃತ್ತಿಯಿಂದ ನಿವೃತ್ತರಾಗಲು ಇಚ್ಛಿಸಿದ್ದರು. ಅವರು ಪ್ರವಚನ ಮತ್ತಿತರ ಧಾರ್ಮಿಕ ಸಂಶೋಧನೆ ಓದಿನಲ್ಲಿ ಮುಂದಿನ ದಿನಗಳನ್ನು ಕಳೆಯುವುದಾಗಿ ನಿರ್ಧರಿಸಿದ್ದರು.

80-90ರ ದಶಕದಲ್ಲಿ ನಾನು ಉದಯ ವಾಣಿ ಸಾಪ್ತಾಹಿಕದಲ್ಲಿ ಪ್ರಕಟಿಸಲು ಕೆಲವು ಕಥೆಗಳನ್ನು ಅವರ ಮನೆ ವಿಳಾಸಕ್ಕೇ ಕಳುಹಿಸುತ್ತಿದ್ದೆ. ಚೆನ್ನಾಗಿದ್ರೆ ಮಾತ್ರ ಪ್ರಕಟಿಸಿ ಎನ್ನುತ್ತಿದ್ದೆ. ಪತ್ರಿಕಾ ವಿಳಾಸಕ್ಕೆ ಕತೆ ಕಳುಹಿಸಲು ಆ ದಿನಗಳಲ್ಲಿ ಸ್ವಲ್ಪ ಸಂಕೋಚವೂ ಆಗಿತ್ತು. ಅವರು ಪ್ರೀತಿಯಿಂದ ಅವುಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿದ್ದರು.

ಇತ್ತೀಚಿನ ಪತ್ರಿಕಾರಂಗದ ಕೆಲವು ಕಾರ್ಯವೈಖರಿಗಳ ಬಗ್ಗೆ ಅವರಿಗೆ ಅಷ್ಟೊಂದು ಖುಷಿ ಇರಲಿಲ್ಲ. “ಪತ್ರಿಕೆಗಳ ನಡುವೆ ಸ್ಪರ್ಧೆ ಹೆಚ್ಚಾಗುತ್ತಿದೆ. ಅದೇ ಸಮಯ ಪತ್ರಕರ್ತರ ಎದುರು ಹಲವಾರು ಸಮಸ್ಯೆಗಳು ಇವೆ. ಜರ್ನಲಿಸಂ ನಾಲೆಜ್ ಇಲ್ಲದ, ಇಂಟರೆಸ್ಟ್ ಇಲ್ಲದ ಜನ ಉದ್ಯೋಗವೆಂದು ಈ ಫೀಲ್ಡಿಗೆ ಬರುವುದು ಶೋಭೆಯಲ್ಲ. ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವವರು ಈ ಕ್ಷೇತ್ರಕ್ಕೆ ಬರಬೇಕು,” ಎಂದಿದ್ದರು.

ಬನ್ನಂಜೆಯವರು ಸಾಪ್ತಾಹಿಕ ವಿಭಾಗದ ಸಂಪಾದಕರಾಗಿದ್ದಾಗ ಅವರು ಕೆಲವೊಮ್ಮೆ ರಜೆ ಮಾಡಿದಾಗಲೂ ಆ ದಿನಗಳಲ್ಲಿ ಅವರ ಸಂಬಳ ಕಡಿತ ಮಾಡಿರಲಿಲ್ಲ. “ನಾನು ಎಲ್ಲೇ ಪ್ರವಚನಕ್ಕೆ ಹೋದರೂ ಅದನ್ನು ಡ್ಯೂಟಿ ಎಂದೇ ಪರಿಗಣಿಸಿ ನನ್ನನ್ನು ಪ್ರೋತ್ಸಾಹಿಸಿದರು” ಎಂಬುದಾಗಿ ಬನ್ನಂಜೆಯವರು ಸಂದರ್ಶನದಲ್ಲಿ ಹೇಳಿದ್ದರು. ಆ ದಿನಗಳಲ್ಲಿ ಬೊಳುವಾರರ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ್ದ ಮಾತನ್ನೂ ನೆನಪಿಸಿಕೊಂಡಿದ್ದರು.

ಬನ್ನಂಜೆ ಶ್ರೀ ಗೋವಿಂದಾಚಾರ್ಯರು ಪ್ರಚಲಿತದಲ್ಲಿರುವ ಧಾರ್ಮಿಕ ರಂಗದ ಕೆಲವು ಸುಳ್ಳುಗಳನ್ನು ಖಡಾಖಂಡಿತ ನಿರಾಕರಿಸುತ್ತಿದ್ದರು. “ಸಂಸ್ಕೃತಕ್ಕೆ ಲಿಪಿ ಇಲ್ಲ. ಮಹಾಭಾರತವನ್ನು ಗಣಪತಿ ಬರೆದಿಲ್ಲ. ಅಂತಹ ಚಿತ್ರವು ಕ್ಯಾಲೆಂಡರ್ ನಲ್ಲಿ ಇದೆ. ಆ ಕಾಲದಲ್ಲಿ ಪ್ರವಚನದ ಮೂಲಕ, ಶ್ರವಣ ಮಾಧ್ಯಮದ ಮೂಲಕ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಕೇಳುತ್ತಿದ್ದರು. ಅವರು ಅದನ್ನು ಮತ್ತೊಬ್ಬರಿಗೆ ಹೇಳುತ್ತಿದ್ದರು. ಹಾಗೆ ಅದು ಉಳಿದುಕೊಂಡು ಬಂದಿದೆ. ಸಂಸ್ಕೃತವನ್ನು ಆ ಕಾಲದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೇ ಬರೆಯುತ್ತಿದ್ದರು. ಕಾಶ್ಮೀರದಲ್ಲಿ ಶಾರದಾ ಲಿಪಿಯಲ್ಲಿ ಸಂಸ್ಕೃತವನ್ನು ಬರೆಯುತ್ತಿದ್ದರು. ನಮ್ಮಲ್ಲಿ ತುಳು ಲಿಪಿಯಲ್ಲಿ ಬರೆಯುತ್ತಿದ್ದರು. ಶಾರದಾ ಲಿಪಿಯಿಂದ ನಾಗರಿ ಲಿಪಿ ಬಂತು. ನಾಗರಿ ಲಿಪಿಯಿಂದ ದೇವನಾಗರಿ ಲಿಪಿ ಬಂತು. ಹಾಗಾಗಿ ಸಂಸ್ಕೃತಕ್ಕೆ ಪ್ರತ್ಯೇಕ ಲಿಪಿ ಎಂದೇನೂ ಇಲ್ಲ. ಅಮರಕೋಶ ಸಂಸ್ಕೃತದಲ್ಲಿ ಪದ್ಯರೂಪದಲ್ಲಿ (ಶ್ಲೋಕ ರೂಪ) ಇರುವ ಡಿಕ್ಷನರಿ ಆಗಿದೆ. ಬೇರೆ ಯಾವ ಭಾಷೆಯಲ್ಲೂ ಶ್ಲೋಕರೂಪದಲ್ಲಿ ಡಿಕ್ಷನರಿ ಸಿಗುವುದಿಲ್ಲ. ಮುಂದೆ ದೇವನಾಗರಿ ಲಿಪಿಯಲ್ಲಿ ಸಂಸ್ಕೃತವನ್ನು ಬರೆಯಲಾಯಿತು” ಎಂದು ನನ್ನ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದರು.

ಕನಕನ ಕಿಂಡಿಯ ಬಗ್ಗೆ ಅವರ ಮಾತುಗಳು ಕೆಲವೊಮ್ಮೆ ವಿವಾದವನ್ನೂ ಹುಟ್ಟಿಸಿತ್ತು. “ಕೃಷ್ಣನನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿಲ್ಲ, ಪಶ್ಚಿಮಾಭಿಮುಖವಾಗಿಯೇ ಪ್ರತಿಷ್ಠಾಪಿಸಲಾಗಿದೆ. ಕನಕನ ಕಿಂಡಿಯ ಜಾಗದಲ್ಲಿ ಬರಿ ಗೋಡೆ ಇತ್ತು. ವಾದಿರಾಜರ ಕಾಲದಲ್ಲಿ ಅಲ್ಲಿ ಬಿರುಕು ಬಿಟ್ಟಾಗ ಅದನ್ನು ಮುಚ್ಚಲು ಆನಂತರ ಕಿಟಕಿ ಇಡಲಾಗಿದೆ..”

“ಯಕ್ಷಗಾನದಲ್ಲಿ ಕೆಲವರು ಹೇಳುವುದಿದೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ವಿರಾಟರಾಜನಲ್ಲಿ ಕೆಲಸಕ್ಕೆ ಸೇರಿದಾಗ ಭೀಮ ವಲಲ ಭಟ್ಟ ಅಂತ ಹೇಳಿ ಅಡುಗೆ ಕೆಲಸಕ್ಕೆ ಸೇರಿದ್ದಾಗಿ ಹೇಳುತ್ತಾರೆ. ಇದು ಯಕ್ಷಗಾನದವರ ಕೆಲಸ. ಭೀಮ ತಾನು ಭಟ್ಟ ಅಂತ ಹೇಳಲಿಲ್ಲ. ಭೀಮ ತಾನು ಶೂದ್ರ ಎಂದು ಹೇಳಿ ಅಡುಗೆ ಕೆಲಸಕ್ಕೆ ಸೇರಿದ್ದು. ಆವಾಗ ಶೂದ್ರರು ಅಡುಗೆ ಮಾಡುತ್ತಿದ್ದು ಬ್ರಾಹ್ಮಣರು ಅದನ್ನೇ ಊಟಮಾಡುತ್ತಿದ್ದರು..” ಎಂದು ಬನ್ನಂಜೆಯವರು ನನ್ನ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದರು.

ಅವರು ಆ ದಿನಗಳಲ್ಲಿ ರತಿವಿಜ್ಞಾನ ದಂತಹ ಪತ್ರಿಕೆಗಳಿಗೂ ಬರೆಯುತ್ತಿದ್ದರು. ಒಂದು ಸಲ ಮುಂಬಯಿಯಲ್ಲಿ  ಜರಗಿದ ಒಂದು ಕಾರ್ಯಕ್ರಮದಲ್ಲಿ ಬನ್ನಂಜೆಯವರು ಸೆಕ್ಸ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದುದನ್ನು ಟೀಕಿಸಿ ಕರಪತ್ರಗಳನ್ನು ಹಂಚಿದ್ದೂ ಇದೆ. ಈ ಬಗ್ಗೆ ನಾನು ಸಂದರ್ಶನದಲ್ಲಿ ಪ್ರಶ್ನಿಸಿದ್ದೆ. ಅವಾಗ ಅವರು ಹೇಳಿದ್ದು- “ನಾನು ಆರಂಭದಲ್ಲೇ ಹೇಳುತ್ತೇನೆ. ಮಡಿವಂತರ ಫಿಲಾಸಫಿ ನನಗೆ ಇಷ್ಟವಾಗುವುದಿಲ್ಲ. ‘ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’ ಎನ್ನುವ  ಪುಸ್ತಕವನ್ನು ನಾನು ಬರೆದಿರುತ್ತೇನೆ. ಸೆಕ್ಸ್ ಮತ್ತು ಫಿಲಾಸಫಿ ಒಟ್ಟು ಸೇರಿಸಿ ನಾನು ‘ಸೆಕ್ಸಾಸಫಿ’ ಎನ್ನುತ್ತೇನೆ. ನನ್ನದೇ ಒಂದು ಕವನದ ಸಾಲು ನೆನಪಾಗುತ್ತದೆ. ‘ವೇದಾಂತದ ಪುಟ ತೆರೆದೆ ಹೆಣ್ಣು ಕಾಣಿಸಿತು. ಹೆಣ್ಣನ್ನು ಕಂಡಾಗ ವೇದಾಂತ ನೆನಪಾಯಿತು’. ಹೀಗೆ ಸೆಕ್ಸ್ ಮತ್ತು ಫಿಲಾಸಫಿ ಇವೆರಡು ಮನುಷ್ಯನ ಮುಖ್ಯ ಆಕರ್ಷಣೆಗಳು. ಪಶುಗಳ ಹಾಗೆ ಕಾಡುವ ಪಾಶವಿಕ ಸೆಕ್ಸ್ ಬೇಡ..” ಎಂದು.

ಈ ಸಂದರ್ಭದಲ್ಲಿ ನನಗೆ 1988ರಲ್ಲಿ ಮೂಡಬಿದ್ರೆಯಲ್ಲಿ ಮಹಾವೀರ ಕಾಲೇಜಿನಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಅಧ್ಯಕ್ಷ ಭಾಷಣ ನೆನಪಾಗುತ್ತದೆ. ಅಲ್ಲಿ ಅವರು ಅಧ್ಯಕ್ಷ ಭಾಷಣದ ನಂತರ ಕವಿತೆ ಓದಿದ್ದು ‘ಕತ್ತಲಾಗದೆ ಹೇಗೆ ಬತ್ತಲಾಗುವುದು.” ಈ ಕವಿತೆಯ ಬಗ್ಗೆ ಅವರು ಮೊದಲೇ ಅಧ್ಯಕ್ಷ ಭಾಷಣದಲ್ಲಿ ಹೇಳಿದ್ದು – “ವೇದಾಂತದ ಸ್ಪರ್ಶ ಇದ್ದವರಿಗೆ ಇದರಲ್ಲಿ ಆಹಾರ ಇದೆ.”

ಈ ಸಾಹಿತ್ಯ ಸಮ್ಮೇಳನಕ್ಕೆ ನಾನು ಹಾಜರಾಗಲು ಇನ್ನೊಂದು ಕಾರಣವಿತ್ತು. ಈ ಸಮ್ಮೇಳನದಲ್ಲಿ ಏರ್ಪಡಿಸಿದ ಕಥಾ ಮತ್ತು ಕವಿತಾ ಸ್ಪರ್ಧೆಗಳಲ್ಲಿ ಎರಡರಲ್ಲೂ ನಾನೇ ಪ್ರಥಮ ಬಹುಮಾನ ಪಡೆದಿರುವುದರಿಂದ ನನಗೂ ಎರಡು ದಿನಗಳ ವಿಶೇಷ ಆಮಂತ್ರಣ ವಸತಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗಾಗಿ ನಾನು ಪೂರ್ತಿ ಸಮ್ಮೇಳನದಲ್ಲಿ ಉಪಸ್ಥಿತನಿರುವ ಅವಕಾಶ ಒದಗಿ ಬಂದಿತ್ತು. ಅಲ್ಲಿ ನನಗೆ ಬನ್ನಂಜೆಯವರ ಕವಿಗೋಷ್ಠಿಯ ಅಧ್ಯಕ್ಷ ಭಾಷಣ ಬಹಳ ಖುಷಿಯಾಗಿತ್ತು.

ಕವಿಗಳ ಕವಿತೆಗಳನ್ನು ಅಶೋಕ್ ಚರಣ್ ಬಳಗದವರು ನಂತರ ವಿವಿಧ ರಾಗಗಳಲ್ಲಿ ಹಾಡಿದ್ದರು. ಈ ಬಗ್ಗೆ ಬನ್ನಂಜೆಯವರು ಸ್ವಲ್ಪ ಖಾರವಾಗಿ ಪ್ರತಿಕ್ರಿಯಿಸಿದ್ದರು- ಹಾಡುವ ಕವಿತೆಗಳನ್ನು ಬರೆಯಿರಿ ಎಂದು ಸಮ್ಮೇಳನ ಸಮಿತಿಯವರು ಸೂಚಿಸಿದ್ದಕ್ಕೆ ಬನ್ನಂಜೆಯವರು ತಮಾಷೆಯಾಗಿಯೇ ಕೆಲ ಮಾತುಗಳನ್ನು ಹೇಳಿದ್ದಿದೆ.

“ಮುಂದಿನ ಬಾರಿ ಸಮ್ಮೇಳನದಲ್ಲಿ ಕವಿಗೋಷ್ಠಿ ಮಾಡತಕ್ಕಂತಹ ದುರ್ಬರ ಪ್ರಸಂಗ ಬಂದದ್ದಾದರೆ ಹೀಗೆ ಸೂಚನೆ ಕೊಡುವುದು ಒಳ್ಳೆಯದು – ಏನೆಂದರೆ, ಒಂದು ಕವಿತೆ ಹಾಡುವುದಕ್ಕೆ ಕಳಿಸಿರಿ, ನಿಮ್ಮ ಖುಷಿಗಾಗಿ ನೀವು ಬೇರೊಂದು ಕವಿತೆಯನ್ನು ಬರೆದು ಕಳಿಸಿ. ಕವಿತೆಗಳನ್ನು ಹಾಡಿನ ಚೌಕಟ್ಟಿನೊಳಗೆ ಸೇರಿಸಲಿಕ್ಕೆ ಆಗದೆ ಚಡಪಡಿಸುತ್ತಾರೆ ಕವಿಗಳು. ಕವಿಗೋಷ್ಠಿಯಲ್ಲಿ ಇಂತಹ ಅಪಾಯ ಕಂಡು ಪರಿಹಾರವನ್ನು ಮುಂದಿನ ಕವಿಗೋಷ್ಠಿಯ ಸಮ್ಮೇಳನದಲ್ಲಿ ಯೋಜನೆ ಮಾಡಬೇಕು. ಹಾಡುವ  ಮತ್ತು ಓದುವ ಕವಿತೆಯ ಎರಡು ಪ್ರತ್ಯೇಕ ಮುಖಗಳನ್ನು ನಾವು ಗಮನಿಸಬೇಕು. ಇನ್ನು, ಒಳ್ಳೆಯ ಕಾವ್ಯ ಎಂದರೇನು? ಕೆಟ್ಟ ಕಾವ್ಯ ಎಂದರೇನು? ಇದನ್ನು ಹೇಳಿ ಉಪಯೋಗ ಇಲ್ಲ. ಯಾಕೆಂದರೆ ಯಾರು ಯಾರಿಗೆ ಯಾವುದು ಖುಷಿಯಾಗುತ್ತೋ ಅವರು ಅದನ್ನೇ ಓದುವುದು. ನಾನು ಯಾವುದು ಒಳ್ಳೆಯದು ಅಂತ ಹೇಳುತ್ತೇನೆಯೋ ಅದು ನೀವು ಎಂದೂ ಓದದೇ ಇರಬಹುದು. ಒಳ್ಳೆಯ ಕಾವ್ಯ ಅಂದರೆ ಏನು? ನನ್ನ ಕಾನ್ಸೆಪ್ಟ್ ಪ್ರಕಾರ ಖುಷಿಯಾಗಿ ಅದನ್ನು ನಾನು ಓದುವುದು. ಯಾರಿಗೆ ಚಂದಮಾಮ ಓದಿದರೆ ಖುಷಿಯಾಗುತ್ತೋ ಅವರು ಬೇರೆಯದನ್ನು ಓದಿ ಅಂತ ಹೇಳಿದರೂ ಓದುವುದಿಲ್ಲ. ಕಾವ್ಯಕ್ಕೆ ಎಂದೂ ಕರಾರುವಕ್ಕಾದ ತೀರ್ಮಾನ ಮಾಡಲಿಕ್ಕೆ ಆಗುವುದಿಲ್ಲ..”

ಬನ್ನಂಜೆಯವರು ಕಾವ್ಯದ ಬಗ್ಗೆ ಎಷ್ಟು ಸ್ಪಷ್ಟವಾಗಿ ಹೇಳಿದ್ದಾರೆ ಅಂತ ಖುಷಿ ಆಗಿತ್ತು. ಎಷ್ಟೆಷ್ಟೋ ದೊಡ್ಡ ವಿಮರ್ಶಕರು ಕಾವ್ಯದ ಬಗ್ಗೆ ಉದ್ದುದ್ದ ಕ್ಲಿಷ್ಟವಾಗಿ ಹೇಳಿದ್ದರೆ, ಬನ್ನಂಜೆಯವರು ಪ್ರಾಮಾಣಿಕವಾಗಿ ನಿಜವಾದುದನ್ನೇ ಎಲ್ಲರಿಗೂ ಅರ್ಥ ಆಗುವುದನ್ನೇ ಹೇಳಿದ್ದರು.

1996ರಲ್ಲಿ “ಶ್ರೀ ಬನ್ನಂಜೆ ಅರುವತ್ತು” ಸನ್ಮಾನ ಸಮಿತಿ ಬೆಂಗಳೂರು ಇವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. 2016ರಲ್ಲಿ ಬನ್ನಂಜೆಯವರಿಗೆ ಎಂಭತ್ತು  ತುಂಬಿದಾಗ ಬೆಂಗಳೂರಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನಂತರ ಮುಂಬಯಿಯಲ್ಲೂ ಎಚ್ ಬಿ ಎಲ್ ರಾಯರ ನೇತೃತ್ವದಲ್ಲಿ ಬಿಲ್ಲವ ಭವನದಲ್ಲಿ ಬನ್ನಂಜೆ ಎಂಭತ್ತರ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇಲ್ಲಿ ವಿಶೇಷ ಅಂದರೆ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಮತ್ತು ಅವರ ಪುತ್ರಿ ವೀಣಾ ಬನ್ನಂಜೆ ಅವರ ನಡುವಿನ ಸಂವಾದ ವಿಶೇಷ ಗಮನ ಸೆಳೆದಿತ್ತು.

ಬನ್ನಂಜೆಯವರು ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವರದು ಅಮೋಘ ಪಾಂಡಿತ್ಯ. ಮಾಧ್ವ ವಿಚಾರಗಳಲ್ಲಿ ಹೆಚ್ಚಿನ ಪಾಂಡಿತ್ಯ ಸಾಧಿಸಿದವರು. ಉದಯವಾಣಿ ದೈನಿಕದಲ್ಲಿ “ಅಂಕೆಯಲ್ಲಿ ಅಧ್ಯಾತ್ಮ” ಸಹಿತ ಹಲವು ಅಂಕಣ ಬರಹಗಳನ್ನು ಬರೆದಿದ್ದಾರೆ. ಕೆಲವು ಸಲ ಅವರ ಬರಹಗಳು ವಿವಾದಕ್ಕೆ ಗುರಿಯಾಗಿತ್ತು.

ಹೊಸ ಅಲೆಯ ಚಿತ್ರಗಳ ಪ್ರಖ್ಯಾತ ನಿರ್ದೇಶಕ ಜಿ ವಿ ಅಯ್ಯರ್ ಜೊತೆ ಶಂಕರಾಚಾರ್ಯ, ಮಧ್ವಾಚಾರ್ಯ, ಭಗವದ್ಗೀತೆ.. ಚಿತ್ರಗಳಲ್ಲಿ ಸಂಭಾಷಣೆ ಸಲಹೆಗಳನ್ನು ನೀಡಿದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬೇಂದ್ರೆ ಅವರಿಗೆ ಶ್ರೀ ಬನ್ನಂಜೆಯವರಲ್ಲಿ ಅನಾದೃಶ್ಯವಾದ ಪ್ರೀತಿ ಇತ್ತು. ಬೇಂದ್ರೆಯವರಿಗೂ ಸಂಖ್ಯಾಶಾಸ್ತ್ರದಲ್ಲಿ ವಿಶೇಷವಾದ ಆಸಕ್ತಿ ಇತ್ತು.

ಬನ್ನಂಜೆ ಶ್ರೀ ಗೋವಿಂದಾಚಾರ್ಯರು 1936 ರಲ್ಲಿ ಜನಿಸಿದವರು. ಡಿಸೆಂಬರ್ 13 (2020) ಬೆಳಗ್ಗೆ 11 ಗಂಟೆಗೆ ಉಡುಪಿ ಅಂಬಲಪಾಡಿಯಲ್ಲಿ ಇರುವ ಸ್ವಗೃಹದಲ್ಲಿ ತಮ್ಮ 84ರ ವಯಸ್ಸಿನಲ್ಲಿ ವಯೋಸಹಜ ಸ್ವಲ್ಪ ಅನಾರೋಗ್ಯದಿಂದ ನಮ್ಮನ್ನು ಅಗಲಿದ್ದಾರೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

‍ಲೇಖಕರು Avadhi

December 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: